Saturday, 5 January 2019

ನಿನ್ನ ಗೌರವಕೆ ಭಾಜನರಲ್ಲವೋ ಅಣ್ಣ


ಕಳಬೇಡವೆಂದೆ, ಕಳವಿಗಿಳಿದೆವು.
ಕೊಲಬೇಡವೆಂದೆ, ಅನ್ಯಕೆ ಮನಸೋತು
ಬದುಕಿದ್ದು ಸತ್ತಂತಿರುವದು ನಮ್ಮ ಕೊಲೆಯಾಗಿದೆ.
ಹುಸಿಯನಾಡದಿರೆಂದೆ,
ಹುಸಿಯೆ ಬದುಕ ಸಾರ ಸರ್ವಸ್ವವಾಗಿಸಿದ್ದೇವೆ.
ಮುನಿಯಬೇಡಿರೆಂದೆ,
ಅದೇಕೋ ಅಪಥ್ಯವಾಗಿಹೋಯ್ತು
ಮುನಿಸು ನವರಸಗಳಿಗೊಂದಧಿಕವಾಗಿ ಆಧುನಿಕ
ರಸವತ್ತತೆಯಲ್ಲಿ ಮೇಳೈಸಿದ್ದೇವೆ.
ಅನ್ಯರ ಕೂಡ ಅಸಹ್ಯವಂತೂ ಅನೂಚಾನವಾಗಿ
ನೀನಿದ್ದ ಕಾಲದಿಂದಲೂ ಬಿಡದೆ ಬಂದಿದೆ.
ತನ್ನ ಬಣ್ಣಿಸುವುದು, ಇದಿರ ಹಳಿಯುವುದು
ಈ ದಿನಮಾನದ ದೈನಿಕ ವ್ಯವಹಾರ ಚತುರತೆಗಳಲ್ಲೊಂದಾಗಿದೆ.
ಇನ್ನುಳಿದಂತೆ ಚರಿತ್ರೆ ಶುದ್ಧಿಗಾಗಿ
ಅಂತರಂಗ ಬಹಿರಂಗಗಳೇ ಇಲ್ಲವೆಂದು ಪ್ರವರ್ತಿಸುವ ಕೆಲವು ಪ್ರವರ್ತಕರು
ಗುಟ್ಟಾಗಿ ಅಂತರಂಗಗಳ ಮೇಲಾಟದ ಗುಲಾಮರಾಗಿದ್ದಾರೆ.

ನೀನಿತ್ತ ಧರ್ಮರಾಜ್ಯವಿಂದು
ತಪ್ಪಿನ ಗ್ರಹಿಕೆಗಳೊಳಗೆ ನಲುಗಿದೆ.
ಜ್ಞಾನಿಗಳ ಚಾವಡಿಯೆಂದೆಂಬ ಹರಟುಗಾರರ
ಕೂಟಗಳು ನಿನ್ನ ಬರಸೆಳೆದು ಸಿದ್ಧಾಂತವೊಂದಕೆ
ಬಿಗಿಯುವ ಸನ್ನಾಹದಲ್ಲಿದ್ದರೆ,
ಅಂದು ನಿನ್ನ ನಿಲುವೇನು
ನಿನ್ನ ಬಿಗುವೇನು? ಎಲ್ಲವನು
ಇಂದಿಲ್ಲಿ ಕೆದಕಲು ಹೊರಟಿದ್ದಾರೆ.

ಹಾಗೆಂದೇನು ನಿನ್ನ ಮರೆತಿಲ್ಲ.
ಜಾತಿ ಗೊಡವೆಯನೆರೆಯುವ ಮನಸ್ಸಿದ್ದವರು
ನಿನ್ನ ಭಾವಿಸಿಕೊಂಬಿದ್ದಾರೆ.
ಆಡಳಿತೆಯ ಮೇಲಾಟಕ್ಕೆ ನೀನಾಹಾರವಾಗಿದ್ದೀಯೆ,
ಧರ್ಮ ಕ್ರಾಂತಿಯನೆಬ್ಬಿಸ
ಹೊರಟವರಿಗೆ ನೀನಾಯುಧವಾಗಿದ್ದೀಯೆ.
ಮಡಿ ಮೈಲಿಗೆಗಳಿಗೆ ನೀ ನಾಂದಿಗಾರನಾಗಿದ್ದೀಯೆ
ನಿನ್ನ ನಿಲುವೇನೇನಲ್ಲವೋ ಅವೆಲ್ಲವೂ ನೀನಾಗಿದ್ದೀಯೆ.

ನಿನ್ನವರು ನಿನ್ನ ಮೆರೆಸಿದ ರೀತಿಯಿದು
ನಿನ್ನವರು ಬಾಳುತ್ತಿರುವ ನೀತಿಯಿದು
ಆ ರೀತಿ ನೀತಿಯ ಕಂಡರೆ
ಶಾಂತಿ ಮೂರ್ತಿ ನೀನು ಕ್ರುದ್ಧನಾಗುವಿಯೇನೋ
ನೀನು ಅರೆಕ್ಷಣ ಅರೆಗಾವಿಲನಾಗುವಿಯೇನೋ
ಜನರೊಳಗೆ ಬೆರೆತು ಅಲ್ಲೇ ಅವರ ಅಜ್ಞಾನ
ಅರುಹಿದವನು ನೀನು, ಅವರಿಗಾಗಿ ಗಡಿಪಾರು,
ನಿಂದೆ, ಧರ್ಮ ದ್ರೋಹಿ ಎಂಬೆಲ್ಲ ಪಟ್ಟಗಳನ್ನು
ಹೊತ್ತುಕೊಂಡವನು ನೀನು.
ಅಣ್ಣ, ನಿನ್ನನ್ನು ದೇವರಾಗಿಸಿದ್ದಾರೆ ಇಲ್ಲಿ
ಆದರೂ ಅವರ ಮನದೊಳಗೆ ನಿನ್ನನೊಂದು
ಜಾತಿಗೆಸೆದು ವಿಂಗಡಿಸಿದ್ದಾರೆ, ಅದೇನೇ ಆಗಲಿ
ನಿನ್ನ ಗೌರವಕೆ ನಾವು ಭಾಜನರಲ್ಲವೋ ಅಣ್ಣ.
ಕ್ಷಮಿಸಿ ಬಿಡು ಅಣ್ಣ ಬಸವಣ್ಣ.

Monday, 31 December 2018

ಹೊಸ ಮನ್ವಂತರವದಕೆ ನಾಂದಿ ಹಾಡು

ವರ್ಷವೊಂದು ಹರ್ಷದಿಂದ
ಸುಳಿದು ಮೆರೆದು ಕಳೆದು
ಸಾಗಿದೆ.

ನೋವು ನಲಿವು ಎಲ್ಲ
ಬೆರೆಸಿ ಹಳವ ಮರೆಸಿ
ಸುಳಿದಿದೆ.

ಇರುವುದಿಲ್ಲದಿರುವುದೆಲ್ಲವ
ಮರೆಸಿ ಅರಿವ ಮನದ ಇಚ್ಛೆಯಂತೆ
ಸಂದಿದೆ.

ಅಂತ್ಯವೆಮಗೆ ಸನಿಹವಾಗಿ
ಅನುಭವಗಳೊಳಗೆ ಹಿರಿಯರಾಗಿ
ಮುನ್ನಡೆಸಿದೆ.

ಮುಂದಿನದೆಲ್ಲ ಅರಿತುಕೊಂಡು
ಸ್ವಾನುಭವವ ಬಳಸಿಕೊಂಡು
ವೈರತನವ ಎಡೆಗೆ ಸರಿಸಿ
ಹೆಗಲಿಗೆಳೆದ ಭಾರ ಭರಿಸಿ
ನಡೆಯುವಷ್ಟು ಶಕ್ತಿಯರಿಸುವ
ಮನವ ಮಾಡು
ಅದೋ! ಹೊಸ ಮನ್ವಂತರವದಕೆ
ನಾಂದಿ ಹಾಡು.

Sunday, 16 December 2018

ಅವನದೇ ಬ್ರಾಂಡ್ ಫ್ಯಾಕ್ಟರಿ

ಜಗದಂಗಳ ಜಾಗತೀಕರಣಕ್ಕೆ
ತೆರೆದು ನಿಂತಿದೆ
ಹಳೆಯ ಬುಡಗಳು ಹೊಸಚಿಗುರಿಗೆ
ಕಾಯದೆ ಕಣ್ಮರೆಯಾಗುತ್ತಿವೆ.

ಸೂರು ಬಾಡಿಗೆಯದ್ದಾದರೂ
ಕಾರು ಸ್ವಂತದ್ದಾಗಿದೆ.
ಮೈಗಿಲ್ಲದ ಗ್ಯಾರಂಟಿಯ ಘಮಲು
ಮೈಯಲಂಕಾರಗಳಿಗೆ ತಗುಲಿಕೊಂಡಿದೆ.

ದೇವನಿತ್ತ ದೇಹ ಯಾವ ಬ್ರಾಂಡೆಂದು
ತಿಳಿಯುವ ಮನಸ್ಸಿಲ್ಲದೆ,
ನಮ್ಮೆಲ್ಲ ಕೊಳು ಕೊಡುಗೆಯೊಳಗೆ ಬ್ರಾಂಡು
ತಂದು ಕೂರಿಸಿದ್ದೇವೆ.

ಬ್ರಾಂಡೇ ಇಲ್ಲದ ದೇಹಕ್ಕೆ
ಬ್ರಾಂಡುಗಳ ಸುರಿಮಳೆಗರೆದಿದ್ದೇವೆ.
ದೇವರನ್ನು ಬ್ರಾಂಡಿಗೆ ತಳ್ಳಿದ್ದೇವೆ.
ಅವನದೇ ಬ್ರಾಂಡ್ ಫ್ಯಾಕ್ಟರಿಯಿದೆಂಬ ಅರಿವಿಲ್ಲದೆ.

Sunday, 11 November 2018

ಸಮಕಾಲೀನ ಸಾಧಕರು

ಸದ್ಗುರುಗಳ 'ಯೂಥ್ ಅಂಡ್ ಟ್ರುಥ್' ಕಾರ್ಯಕ್ರಮ ಸರಣಿಯ ವಿಡಿಯೋವೊಂದನ್ನು ನೋಡುತ್ತಿದ್ದೆ. ಭಾರತದ ಪ್ರತಿಷ್ಠಿತ ವಿದ್ಯಾಸಂಸ್ಥೆಯೊಂದರಲ್ಲಿ ಮಾತನಾಡುತ್ತಿದ್ದ ಸದ್ಗುರುಗಳು ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಉತ್ತರಿಸುತ್ತಾ 'ಅವರಿವರೊಡನೆ ನಿಮ್ಮ ಸಂಪತ್ತು ನಿಮಗಿರುವ ಐಹಿಕ ಭೋಗವಿಲಾಸಗಳನ್ನು ಹೋಲಿಸಿ ನೋಡಿಕೊಳ್ಳದಿರಿ. ನೀವು ಎಷ್ಟೆಷ್ಟು ಜೋರಾಗಿ ಬದುಕಿದರೂ ನಿಮಗಿಂತ ಚೆನ್ನಾಗಿ ಉಡುವರು, ನಿಮಗಿಂತ ಚೆನ್ನಾಗಿ ಉಣ್ಣುವರು, ನಿಮಗಿಂತ ಚೆನ್ನಾಗಿ ಬದುಕಿ ಬಾಳಿದವರು ಯಾರಾದರೂ ಒಬ್ಬರು ಇದ್ದೇ ಇರುತ್ತಾರೆ. ಆದ್ದರಿಂದ ಮುಗಿಯದ ಕಥನದಂತಿರುವ ಹೋಲಿಕೆಯ ಚಾಳಿಯನ್ನು ತೊರೆದು ಬದುಕಿನಲ್ಲಿ ಏನಾದರೂ ಹೊಸದೊಂದನ್ನು ಸೃಷ್ಟಿಸುವ ಕಡೆ ಮನಸ್ಸು ಮಾಡಿ' ಎನ್ನುತ್ತಿದ್ದರು ಆ ಸಭಾ ಭವನದಲ್ಲಿ ಕರತಾಡನದ ಸುರಿಮಳೆಯಾಗುತ್ತಿತ್ತು. ಸಾವಿರಾರು ವರ್ಷಗಳಿಂದ ಪ್ರಪಂಚಕ್ಕೆ ಈ ದೇಶ ಭೋದಿಸಿದ ತತ್ತ್ವವನ್ನೇ ಗುರುಗಳೊಬ್ಬರ ಬಾಯಿಂದ ಕೇಳಿ ಕರತಾಡನದ ಸುರಿಮಳೆಗೈದ ಆಧುನಿಕ ಪ್ರಜೆಗಳ ಬುದ್ಧಿಮತ್ತೆ ಇನ್ನೂ ಗ್ರೀನ್ ವಿಚ್ ಸಮಯ ರೇಖೆಯಲ್ಲಿಯೇ ಉಳಿದುಹೋಗಿರುವುದನ್ನು ಸದ್ಗುರುಗಳೇ ಆಗಾಗ ಬೆದಕುತ್ತಿರುತ್ತಾರೆ.  ಈಗದೆಲ್ಲ ಒತ್ತಟ್ಟಿಗಿಟ್ಟು ಇರುವ ಬದುಕಿನಲ್ಲಿ ಹೊಸದೊಂದು ಸೃಷ್ಟಿಸಹೊರಟ ಸಾಹಸಗಾರರೇ ಇಂದಿನ ಲೇಖನದ ಮೂಲವಸ್ತು.

'ಸರ್ಕಾರಿ ಕೆಲಸ' ಈ ಪದ ಕೇಳಿಸಿದ ತಕ್ಷಣ ನಿಮ್ಮ ತಲೆಗೆ ಹೊಳೆಯುವುದೇನು?. ಜಾಬ್ ಸೆಕ್ಯೂರಿಟಿ, ಹೆಚ್ಚು ಸರ್ಕಾರಿ ರಜೆಗಳು, ತಿಂಗಳಾಗುತ್ತಿದ್ದಂತೆ ತಪ್ಪದೆ ಬಂದು ಬೀಳುವ ಪಗಾರ, ಸಾಮಾಜಿಕ ಜೀವನದಲ್ಲಿ ವಿಶೇಷ ಗೌರವ, ನಿವೃತ್ತಿ ಯೋಜನೆಗಳು ಮುಂತಾದವು ಅಲ್ಲವೇ?. ಈ ಕಾರಣಗಳಿಗಾಗಾಗಿಯೇ ಸರ್ಕಾರಿ ಕೆಲಸಗಳಿಗೆ ಇನ್ನಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ಐಟಿ - ಬಿಟಿ ಕ್ಷೇತ್ರ ಇದೀಗ ಬೃಹದಾಕಾರವಾಗಿ ಬೆಳೆದು ಆಧುನಿಕ ಕಾಲಘಟ್ಟದಲ್ಲಿ ಭಾರತದ ಸೀಮಾರೇಖೆಯೊಳಗೂ ಹೊರಗೂ ಭಾರಿ ಉದ್ಯೋಗಾವಕಾಶಗಳು ಸೃಷ್ಟಿಯಾಗುವಂತೆ ನೋಡಿಕೊಳ್ಳುತ್ತಿದೆ. ಆದಾಗ್ಯೂ ಮುಂದೊಂದು ದಿನ ಜಾಗತೀಕ ಹಣಕಾಸು ಬಿಕ್ಕಟ್ಟು ಉಂಟಾದರೆ ಕಂಪನಿಗಳಿಂದ ನೌಕರರನ್ನು ನಿರ್ದಾಕ್ಷಿಣ್ಯವಾಗಿ ಕಿತ್ತೊಗೆಯುವರೆಂಬ ಸೂಕ್ಷ್ಮ ಜಾಗೃತಿ ಆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸರ್ವರಲ್ಲೂ ಇದೆ. ಇಂತಿರುವ ಕಾಲಘಟ್ಟದಲ್ಲಿ ಸರ್ಕಾರಿ ಕೆಲಸಗಳಿಗೆ ಬೇಡಿಕೆ ಸೃಷ್ಟಿಯಾಗುವುದು ಅತಿಶಯೋಕ್ತಿಯೇನಲ್ಲ ಬಿಡಿ. ಇಂತಿದ್ದ ದಿನಮಾನದಲ್ಲಿ ವ್ಯಕ್ತಿಯೊಬ್ಬ ತನಗೆ ದೊರಕಿದ್ದ ಅತ್ಯುನ್ನತ ಸ್ತರದ ಸರ್ಕಾರಿ ಹುದ್ದೆ ತೊರೆದು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಎಂದರೇನು?. ಅದಷ್ಟನ್ನು ಮಾಡಲು ಅವನಲ್ಲಿದ್ದ ಇಚ್ಛಾಶಕ್ತಿ ಇನ್ನೆಷ್ಟರ ಮಟ್ಟಿಗೆ ಅವನ್ನನು ಪ್ರೇರೇಪಿಸರಬೇಕು?. ತಮಾಷೆಯಲ್ಲವೇ ಅಲ್ಲ.  ಇಲ್ಲೊಮ್ಮೆ ಓದಿ.

ರೋಮನ್ ಸೈನಿ

                                      Roman saini ಗೆ ಚಿತ್ರದ ಫಲಿತಾಂಶ

ಹುಟ್ಟಿದ್ದು ರಾಜಸ್ಥಾನದ ಜೈಪುರದ ಬಳಿಯ ಚಿಕ್ಕ ಪಟ್ಟಣವೊಂದರಲ್ಲಿ. ಹದಿನಾರನೇ ವಯಸ್ಸಿಗೆ ದೆಹಲಿಯ ಪ್ರತಿಷ್ಠಿತ ವೈದ್ಯಕೀಯ ಶಿಕ್ಷಣ ಸಂಸ್ಥೆಯಾದ ಏಮ್ಸ್ ನಡೆಸುವ ಪ್ರವೇಶ ಪರೀಕ್ಷೆಗಳನ್ನು ಪಾಸು ಮಾಡಿ ವೈದ್ಯಕೀಯ ಶಿಕ್ಷಣಕ್ಕೆ ಸೇರುತ್ತಾರೆ. ಮುಂದೆ ನಾಗರೀಕ ಸೇವೆಯ ಗೀಳಿಗೆ ಬಿದ್ದ ಇದೇ ಸೈನಿ ಭಾರೀ ಮುಂಜಾಗರೂಕ ಹೆಜ್ಜೆಗಳನ್ನಿಡುವುದರ ಜೊತೆಗೆ ಮೊದಲನೇ ಬಾರಿ ನಾಗರೀಕ ಸೇವಾ ಪರೀಕ್ಷೆಗಳನ್ನು ಬರೆದು ಇಡೀ ದೇಶಕ್ಕೆ ಹದಿನೆಂಟನೇ ರ್ಯಾಂಕ್ ಪಡೆಯುತ್ತಾರೆ. ಮುಂದೆ ಹಿಮಾಚಲ ಪ್ರದೇಶದ ಮಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತಾತ್ಮಕ ಅಕಾಡೆಮಿಯಲ್ಲಿ ತರಬೇತಿ ಪಡೆದು ಐ ಏ ಎಸ್ ಅಧಿಕಾರಿಯಾಗಿ ಮಧ್ಯಪ್ರದೇಶಕ್ಕೆ ನೇಮಕಗೊಳ್ಳುತ್ತಾರೆ. ಅಧೀಕೃತ ನೇಮಕಾತಿಯಾಗುವಷ್ಟರಲ್ಲಿಯೇ ತಮ್ಮ ಕೆಲಸಕ್ಕೆ ರಾಜೀನಾಮೆ ಕೊಡುವ ಯೋಚನೆ ಮಾಡುವ ರೋಮನ್ ಸೈನಿ ಮುಂದೆ ಯುಪಿಎಸ್ ಸಿ ಪರೀಕ್ಷೆಗಳಿಗೆ ಹಾಗು ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲಿಚ್ಛಿಸುವ ಅಭ್ಯರ್ಥಿಗಳಿಗೆ ಮಾರ್ಗದರ್ಶನ ಮಾಡುವ ಮಹತ್ತರ ಕಾರ್ಯವೊಂದಕ್ಕೆ ನಾಂದಿ ಹಾಡುತ್ತಾರೆ.  ದೇಶದ ಎಷ್ಟೋ ಪದವೀಧರರು ಐಏಎಸ್ ಕನಸು ಕಂಡು ಹಗಲು ರಾತ್ರಿ ಕಷ್ಟ ಪಟ್ಟು ಕೊನೆಗೆ ಕೆಲಸ ಹಿಡಿದವರನ್ನು ಕಂಡಿದ್ದೇವೆ. ಇಲ್ಲವೇ ಅದೇ ಕನಸಿನಲ್ಲಿ ತಮ್ಮ ಜೀವನದ ಭವಿಷ್ಯತ್ತನ್ನು ಲೀಲಾಜಾಲವಾಗಿ ಕಮರಿಸಿಕೊಂಡ ಉದಾಹರಣೆಗಳನ್ನೂ ಕಂಡಿದ್ದೇವೆ. ಆದರೆ ಇದೇನಿದು? ಸಿಕ್ಕಿರುವ ಐಏಎಸ್ ಅಧಿಕಾರವನ್ನು ತ್ಯಜಿಸುವುದು ಎಂದರೇನು. ಅದರರ್ಥ ಆ ಅಧಿಕಾರವನ್ನೂ ಮೀರಿಸುವ ಬಹು ಛಾಪಿನ ಕನಸು ಅಲ್ಲಿ ಮೊಳೆತಿತ್ತು ಎಂಬುದೇ?. ಅದೇ ನಿಜವೆನ್ನಿ.


ನಾಗರೀಕ ಸೇವೆಯ ಅಥವಾ ಇನ್ನಾವುದೇ ಸರ್ಕಾರಿ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಅಭ್ಯರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ಸಿಗುತ್ತಿಲ್ಲದಿರುವುದು ಹಾಗು ಸಮರ್ಥ ಮಾರ್ಗದರ್ಶಕರಿದ್ದರೂ ಅವರು ತಮ್ಮ ಮಾರ್ಗದರ್ಶನ ಸೌಲಭ್ಯವನ್ನು ಕೋಚಿಂಗ್ ಇನ್ಸ್ಟಿಟ್ಯೂಟ್ಗಳ ಮುಖಾಂತರ ಹೆಚ್ಚಿನ ಹಣಕ್ಕೆ ಮಾರಿಕೊಳ್ಳುತ್ತಿದ್ದು ಉಳ್ಳವರ ಪಾಲಿಗೆ ಮಾಮೂಲಿ ಸಂಗತಿಯಾಗಿದ್ದರೆ ಇಲ್ಲದವರ ಪಾಲಿಗೆ ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತಾಗಿತ್ತು. ಸೈನಿಯವರ ಪಾಲಿಗೂ ಅದು ಕಸಿವಿಸಿಗೊಳ್ಳುವ ವಿಚಾರವೇ ಆಗಿದ್ದರೂ ಉಳ್ಳವರು ಕೋಚಿಂಗ್ ಪಡೆದು ದೇಶದ ಆಡಳಿತಾತ್ಮಕ ಅಧಿಕಾರದ ಚುಕ್ಕಾಣಿ ಹಿಡಿದರೆ ಇಲ್ಲದಿರುವರು ಇಲ್ಲದಿರುವರಾಗಿಯೇ ಉಳಿಯುವ ವಿಚಾರ ಅವರನ್ನು ಇನ್ನಷ್ಟು ಜಾಗೃತ ಸ್ಥಿತಿಗೆ ತಲುಪಿಸಿತ್ತು. ಆ ಜಾಗೃತಿ ಎಷ್ಟರ ಮಟ್ಟಿಗೆ ಎಂದರೆ ಸ್ವತಃ ತಮಗೆ ಸಿಕ್ಕ ಐಏಎಸ್ ಉದ್ಯೋಗವನ್ನು ತ್ಯಜಿಸಿ ಬೆಂಗಳೂರಿಗೆ ಬಂದು ಅನ್ ಅಕಾಡೆಮಿ ಎಂಬ ಸಂಸ್ಥೆಯನ್ನು ತೆರೆದು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿರುವ ಅಭ್ಯರ್ಥಿಗಳಿಗೆ ಉಚಿತವಾಗಿಯೇ ಮಾರ್ಗದರ್ಶನ ನೀಡುವ ಕಾಯಕಕ್ಕೆ ಟೊಂಕ ಕಟ್ಟಿ ನಿಂತರು. ಅಭ್ಯರ್ಥಿಗಳಿಗೆ ಆನ್ಲೈನ್ ನಲ್ಲಿ ಉಚಿತವಾಗಿ ಮಾರ್ಗದರ್ಶನ ಕೊಡಲು ನಿಂತರು. ಅಷ್ಟೇ ಅಲ್ಲ ಮನಸ್ಸಿದ್ದವರು ದಾನ ಮಾಡಿ ಎಂಬ ಘೋಷಣೆ ಹೊರಡಿಸಿ ಸಂಸ್ಥೆಯ ಜೋಳಿಗೆ ಗಟ್ಟಿಯಾಗಿರುವತೆ ನೋಡಿಕೊಂಡರು. ತಮ್ಮ ಕಣ್ಣಿಗೆ ಕಂಡ ಸಮಕಾಲೀನ ಜ್ಞಾನಿಗಳೆಲ್ಲರನ್ನೂ ಕರೆತಂದರು. ಅವರ ಶೆಕ್ಷಣಿಕ ಮೂಲ, ಆರ್ಥಿಕ ಹಿನ್ನೆಲೆ, ಭಾಷೆಯ ಹಂಗು ಎಲ್ಲವನ್ನೂ ಮಗ್ಗುಲಿಗೆ ಸರಿಸಿ ಕಲಿಯಲು ಹಾಗು ಕಲಿಸಲು ಹಂಬಲವಿದ್ದವರಿಗೆ ಅನ್ಅಕಾಡೆಮಿಯ ಬಾಗಿಲನ್ನು ಸದಾ ತೆರೆದಿಟ್ಟರು ರೋಮನ್ ಸೈನಿ.

ಅವರೊಬ್ಬರೇ ಅಲ್ಲ, ಅವರೊಂದಿಗಿನ ಇತರ ಅನ್ ಅಕಾಡೆಮಿಯ ಮಾರ್ಗದರ್ಶಕರನ್ನು ಸರಿಸುಮಾರು ಕರೆತಂದಿರುವರು ಇವರೇ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಸಿಕ್ಕ ಶಿವಪ್ರಸಾದ್, ತನ್ನದೇ ಮಾರ್ಗದರ್ಶನದಲ್ಲಿ ಯುಪಿಎಸ್ಸಿ ಪರೀಕ್ಷೆ ಎದುರಿಸಿದ್ದ ಅರ್ಪಿತಾ ಶರ್ಮಾ ಇನ್ನು ಹೀಗೆ ಮುಂತಾಗಿ ಯಾರು ಎಲ್ಲೆಲ್ಲಿ ಸಿಕ್ಕರೂ ಅವರನ್ನೆಲ್ಲ ಕೇಳಿ ಕರೆತಂದು ಅನ್ ಅಕಾಡೆಮಿಯಲ್ಲಿ ಮಾರ್ಗದರ್ಶಕರನ್ನಾಗಿಸಿ ತಾನು ಸಹಭಾಗಿಯಾಗಿ ಕಟ್ಟಿದ ಸಂಸ್ಥೆಗೆ ಬೆನ್ನೆಲುಬಾಗಿ ನಿಂತು ತನ್ಮೂಲಕ ಅನ್ಅಕಾಡೆಮಿ ಯನ್ನು ದೇಶದ ಅತೀ ದೊಡ್ಡ 'ಕಲಿಯುವರ ಚಾವಡಿ' ಯಾಗಿಸಬೇಕೆನ್ನುವ ಕನಸನ್ನು ನನಸು ಮಾಡಿಕೊಂಡಿದ್ದಾರೆ.

                                     Unacademy images ಗೆ ಚಿತ್ರದ ಫಲಿತಾಂಶ
ಸೈನಿಯವರ ಈ ಹೊಸ ಚಾವಡಿಯ ಜಾಹಿರಾತಿಗೆ ಕಷ್ಟವೇನು ಆಗಲಿಲ್ಲ. ಮಾರ್ಗದರ್ಶಕರು ಅಪಾರ ಹಿಂಬಾಲಕರನ್ನು ಹೊಂದಿದ್ದರಿಂದ ವೈಯಕ್ತಿಕವಾಗಿಯೂ ವಿಷಯ ಪಸರಿಸಿರಬಹುದು. ಅದನ್ನು ಮೀರಿ ಈ ಚಾವಡಿಗೆಂತಲೇ ಕೋರಾ, ಫೇಸ್ಬುಕ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳಲ್ಲಿ ಸೈನಿಯವರು ಲೇಖನ ಬರೆದು ಪ್ರಕಟಗೊಳಿಸಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳ ದೃಷ್ಟಿಯಿಂದ ಅದರಲ್ಲೂ ಮುಖ್ಯವಾಗಿ ಯುಪಿಎಸ್ಸಿ ಪರೀಕ್ಷೆಯ ದೃಷ್ಟಿಯಿಂದ ಅನ್ಅಕಾಡೆಮಿ ಇಂದು ಎಲ್ಲವನ್ನೂ ಒಳಗೊಂಡಿದೆ. ದಿನ ನಿತ್ಯದ ಪತ್ರಿಕೆ ವಾಚನ, ಪ್ರಿಲಿಮಿನರಿ ಪರೀಕ್ಷೆಗಳಿಗೆ ತಯಾರಿಯಾಗುವ ಬಗೆ, ಮುಖ್ಯ ಪರೀಕ್ಷೆಗಳಿಗೆ ಉತ್ತರಿಸುವ ಬಗೆ, ಉತ್ತರಿಸಲು ಅವಶ್ಯವಾದ ಜ್ಞಾನ, ಕೊನೆಯಲ್ಲಿ ಸಂದರ್ಶನದ ಸಮಯದಲ್ಲಿ ನಡೆದುಕೊಳ್ಳಬೇಕಿರುವ ರೀತಿ, ಇವೆಲ್ಲ ಮಜಲುಗಳಲ್ಲಿಯೂ ಇರಬೇಕಾದ ಆತ್ಮ ಶ್ರದ್ಧೆ, ಪರಿಶ್ರಮ ಹೀಗೆ ಮುಂತಾಗಿ ಎಲ್ಲದರ ಬಗೆಗೂ ಅನ್ ಅಕಾಡೆಮಿಯಲ್ಲಿ ಕೋರ್ಸುಗಳಿವೆ. ಸಾವಿರಾರು ಅಭ್ಯರ್ಥಿಗಳು ಈ ಚಾವಡಿಯ ಪ್ರಯೋಜನ ಪಡೆಯುತ್ತಿದ್ದಾರೆ.ಜಾಲ ತಾಣದ ಸೌಲಭ್ಯವಿದ್ದರೆ ಸಾಕು ಆ ಅಭ್ಯರ್ಥಿಗಳು ನಿಸ್ಸಂಕೋಚವಾಗಿ, ನಿರ್ಭಯವಾಗಿ ಅನ್ಅಕಾಡೆಮಿಯನ್ನು ಬಳಸಿ ತಯಾರಿ ಆರಂಭಿಸಬಹುದು. ಮೊಬೈಲ್ ಬಳಕೆದಾರಿಗೆ ಅನುಕೊಲವಾಗುವಂತೆ ಮೊಬೈಲ್ ಅಪ್ಲಿಕೇಶನ್ ಕೂಡ ಲಭ್ಯವಿದ್ದು ಅದರಲ್ಲಿ ವಿಡಿಯೊಗಳನ್ನು ಡೌನ್ಲೋಡ್ ಮಾಡಿಕೊಳ್ಳುವ ಅವಕಾಶವನ್ನು ಒದಗಿಸಲಾಗಿದೆ. ಅನ್ಅಕಾಡೆಮಿಯ ಹಲವಾರು ವಿಡಿಯೋಗಳು ಯೌಟ್ಯೂಬ್ ನಲ್ಲೂ ಲಭ್ಯವಿದ್ದು ಅಲ್ಲಿಯೂ ಆಸಕ್ತರೂ ಕಲಿಯಬಹುದು.

ಇಂದು ಅನ್ಅಕಾಡೆಮಿ ದೇಶದ ಪ್ರತಿಷ್ಠಿತ ಕಲಿಕಾ ಕೇಂದ್ರವಾಗಿ, ಅತೀ ಹೆಚ್ಚು ಅಭ್ಯರ್ಥಿಗಳು ಕಲಿಯುತ್ತಿರುವ ತಾಣವಾಗಿ ಮಾರ್ಪಟ್ಟಿದೆ. ರೋಮನ್ ಸೈನಿಯವರ ಈ ಸಾಧನೆಯನ್ನು ಮನಗಂಡ ಅಂತಾರಾಷ್ಟ್ರೀಯ ವೇದಿಕೆಗಳು ಕೂಡ ರೋಮನ್ ಸೈನಿಯವರನ್ನು ಗುರುತಿಸಿವೆ. ಇತ್ತೀಚಿಗಿನ ಫೋರ್ಬ್ಸ್ ನಿಯತಕಾಲಿಕೆಯಲ್ಲಿ ರೋಮನ್ ಸೈನಿಯವರ ಹೆಸರು ಪಟ್ಟಿಯಲ್ಲಿರುವುದು ಸಂತೋಷದಾಯಕ ವಿಚಾರವಷ್ಟೇ ಅಲ್ಲ ಅವರ ಪರಿಶ್ರಮಕ್ಕೆ ಸಂದ ಗೌರವ. ಇದು ಯಾವುದೋ ಸಿನಿಮೀಯ ಕಥಾನಕವಲ್ಲ ಬದಲಾಗಿ ಆಯಕಟ್ಟಿನ ಸರ್ಕಾರಿ ಅಧಿಕಾರದಲ್ಲಿದ್ದಾಗ್ಯೂ ಅವುಗಳನ್ನು ತೊರೆದು ತನ್ನ ಸೇವೆಯ ಸೀಮಾ ರೇಖೆಗಳನ್ನು ಮುರಿದು ಮುನ್ನುಗ್ಗುತ್ತಿರುವ ಅಪಾರ ಕನಸುಗಳನ್ನು ಹೊತ್ತ ನಮ್ಮ 'ಸಮಕಾಲೀನ ಸಾಧಕನ' ನಿಜ ಜೀವನದ ಹೂರಣ.

ಆಕರಗಳು

Saturday, 3 November 2018

ಸತ್ಯದ ಸರದಿ

ಆಳುಗ ದೊರೆಯೋರ್ವನಿಗೆ
ಕಳಿಂಗದ ರಣಭೂಮಿಯೊಳಗೆ
ಸತ್ಯದ ಸದ್ದರ್ಶನವಾಯ್ತು.
ಕಳಿಂಗದ ನೆತ್ತರ ನದಿ
ಅದಕೆ ಕಾರಣವಾಗಿತ್ತು. (ಸಾಮ್ರಾಟ ಅಶೋಕ)

ಭೋಗದೊಳಡಗಿಸಿದ್ದ ಯುವರಾಜನೋರ್ವನಿಗೆ
ನಟ್ಟ ನಡುರಾತ್ರಿ ಸತ್ಯದ
ದಿಗ್ದರ್ಶನವಾಯ್ತು.
ವಿಧಿಯ ದಿನಮಾನದ
ಚಕ್ರವೇ ಅದಕೆ ಕಾರಣವಾಗಿತ್ತು. (ಭಗವಾನ್ ಬುದ್ಧ)

ಕುರುಕ್ಷೇತ್ರದ ಮಹಾಜಿರಂಗದೊಳ್
ಛಲದಂಕ ಮಲ್ಲನೋರ್ವನಿಗೆ
ಸತ್ಯದ ಸುಳಿವಾಯ್ತು.
ಸತ್ಯದರಿವಿಗೆಂತಲೇ ನರವೇಷದಾರಿ
ಪೂಜ್ಯಾತ್ಮ ಅದಕೆ ಕಾರಣವಾಗಿತ್ತು.(ಅರ್ಜುನ).

ಸೋದರರೀರ್ವರ ರಾಜ್ಯಾದಿಗಳ
ಕಲಹವೇ ಭಿನ್ನಹವಾಗಿ
ದೊರೆಯ ಕುವರನಿಗೆ ವೈರಾಗ್ಯ ಮೂಡಿತ್ತು.
ಲೌಕಿಕದಲಿ ಗೆದ್ದೂ ಸೋತ
ಭಾವವದಕೆ ಕಾರಣವಾಗಿತ್ತು. (ಬಾಹುಬಲಿ)

ಅದಮ್ಯ ಸತ್ಯಸಂಧನೊಬ್ಬನನು
ಮಿಥ್ಯೆಯಾಡಿಸುವ ಸಲುವಾಗಿ
ಮಾಯೆಯ ಜಾಲಕೆ ಕೆಡವಲಾಯ್ತು.
ದೇವನೇ ನರನಿಂದ ಕಲಿಯುವ
ವಿಧಿಯದಕೆ ಕಾರಣವಾಗಿತ್ತು. (ಹರಿಶ್ಚಂದ್ರ)

ಭುವಿಯಂತರಂಗದಲಿ ಸತ್ಯ ಪ್ರವರ್ತನೆಗೆ
ಅದಾವಾವ ಮಾರ್ಗವಿರಬಹುದು?.
ತಿಳಿದಿಲ್ಲ!.
ಅಂತೂ ನಮ್ಮದೂ ಸರದಿ ಬರುವವರೆಗೂ
ಕಾಯುವುದೇ ನಮಗೀಗ ವೇದ್ಯ.

Wednesday, 17 October 2018

ಕರ್ತಾರನ ಕಮ್ಮಟವಿದು

ಪ್ರಪಂಚವಿದು ಕರ್ತಾರನ ಕಮ್ಮಟವಾದೊಡೆ ನಿನದೇನು ಬಿಮ್ಮು?. ಕುಟ್ಟಿ ತಟ್ಟಿ ಕಾಯಿಸಿ ಬಡಿದು ಬೆಂಡಾಗಿಸಿ ಅವನೊಪ್ಪುವಂತೆ ಮಾಡುವವರೆಗೂ ನೀನೆ ನಿನಗೆ ಸ್ವರ್ಗ ನೀನೆ ನಿನಗೆ ನರಕ.

Saturday, 13 October 2018

ಸೈಕಲ್ ರಿಪೇರಿಯಿಂದ ಐ.ಎ.ಎಸ್ ಅಧಿಕಾರದವರೆಗೆ


"ನೀವು ನಿಮ್ಮ ಬಗ್ಗೆ ಏನು ಅಂದುಕೊಳ್ಳುತ್ತೀರೋ ಅದರಂತೆ ನೀವಾಗುತ್ತೀರಿ, ನಿಮ್ಮನ್ನು ನೀವು ಋಷಿಗಳೆಂದುಕೊಂಡರೆ ನಾಳೆ ನೀವು ನಿಜವಾಗಿಯೂ ಋಷಿಗಳೇ ಆಗುತ್ತೀರಿ" ಎಂದಿದ್ದಾರೆ ಭವ್ಯ ಭಾರತದ ಕನಸುಗಾರ ಸ್ವಾಮೀ ವಿವೇಕಾನಂದರು. ಅದರಂತೆ ಉಪ್ಪರಿಗೆಯಲ್ಲಿದ್ದವರು ಬೀದಿಗೂ, ಬೀದಿಯಲ್ಲಿದ್ದವರು ಉಪ್ಪರಿಗೆಗೂ ತಂತಮ್ಮ ಮನಸ್ಸಿನಂತೆ ಪಲ್ಲಟಗೊಂಡ ಅಸಂಖ್ಯ ಉದಾಹರಣೆಗಳು ನಮ್ಮ ನಿಮ್ಮ ನಡುವೆ ದಿನ ಬೆಳಗಾದರೆ ದೊರೆಯುತ್ತಲೇ ಇವೆ. ಅಂತಹ ಉದಾಹರಣೆಗಳ ಗೊಂಚಲಿನಿಂದ ಹೆಕ್ಕಿ ತೆಗೆದ ಸ್ಫುಟವಾದ ಉದಾಹರಣೆಯೇ ವರುಣ್ ಭರಣ್ವಾಲ್.

ವರುಣ್ ಭರಣ್ವಾಲ್ ಹುಟ್ಟಿದ್ದು ಮಹಾರಾಷ್ಟ್ರ ರಾಜ್ಯದ ಪಾಲಘರ್ ಜಿಲ್ಲೆಯ ಬೊಯ್ಸರ್ ಎಂಬ ಚಿಕ್ಕ ಪಟ್ಟಣದಲ್ಲಿತಂದೆ ಅದೇ ಪಟ್ಟಣದಲ್ಲಿ ಚಿಕ್ಕ ಸೈಕಲ್ ರಿಪೇರಿ ಅಂಗಡಿ ಇಟ್ಟುಕೊಂಡಿದ್ದು  ಸಂಸಾರದ ಜೀವನ ನೌಕೆ ದಿನಂಪ್ರತಿ ನಡೆಯುತ್ತಿದ್ದುದೇ ಅದರಿಂದಇನ್ನು ತಾಯಿ ಗೃಹಿಣಿವರುಣ್ ಭರಣ್ವಾಲ್ ನಿಗೆ ಒಬ್ಬಳು ಅಕ್ಕತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ನಗರದೊಳಗೆ ನೌಕರಿಗೆ ಸೇರಿಸಿಬಿಡಬೇಕೆಂಬ ಅಪಾರ ಹಂಬಲ  ದಂಪತಿಗಳಿಗಿದ್ದರೂ ಅವರ ಹಣಕಾಸಿನ ಪರಿಸ್ಥಿತಿ ಅದಕ್ಕೆ ದಾರಿಯಾಗುವಷ್ಟಿರಲಿಲ್ಲ. ಇನ್ನು ವರುಣ್ ಗೆ
ಚಿಕ್ಕಂದಿನಲ್ಲೇ ಡಾಕ್ಟರ್ ಆಗಬೇಕೆಂಬ ಹೆಬ್ಬಯಕೆ ಆದರೆ ಅದಕ್ಕೆ ತಕ್ಕುದಾದ ಆರ್ಥಿಕ ಪರಿಸ್ಥಿತಿ ಮನೆಯಲ್ಲಿಲ್ಲದಿದ್ದು ಕೈ ಕಟ್ಟಿ ಹಾಕಿದ ಪರಿಸ್ಥಿತಿ ನಿರ್ಮಾಣವಾಗಲು ಕಾರಣವಾಯಿತುಅಂದಿಗೆ ಹೊಟ್ಟೆ ತುಂಬಿದರೆ ಸಾಕೆನ್ನುವಂತಿದ್ದ ಕುಟುಂಬಕ್ಕೆ ದುಬಾರಿ ಬಾಬತ್ತಿನ ಡಾಕ್ಟರ್ ಓದಿಸುವುದು ಕನಸಿನ ಮಾತಾಗಿತ್ತು.

ಅವನ ಹತ್ತನೇ ತರಗತಿ ಪರೀಕ್ಷೆಗಳು ಮುಗಿದ ನಾಲ್ಕು ದಿನದ ಅಂತರದಲ್ಲಿಯೇ ಅವನ ತಂದೆಗೆ ಹೃದಯಾಘಾತವಾಗಿ ಮರಣ ಹೊಂದುತ್ತಾರೆಉರಿಯುವ ಗಾಯಕ್ಕೆ ಉಪ್ಪು ಸುರಿಯುವಂತೆ ಮೊದಲೇ ಬಡತನದ ಅಗ್ನಿಕುಂಡದಲ್ಲಿ ಬಿದ್ದು ಬೇಯುತ್ತಿದ್ದ ಕುಟುಂಬವನ್ನು ಬಾಣಲೆಯಿಂದ ಬೆಂಕಿಗೆ ತಳ್ಳಿದಂತೆ ಕಷ್ಟಗಳ ಮೇಲೆ ಕಷ್ಟ ಬಂದು ಒದ್ದಾಡುವಷ್ಟಾಗುತ್ತದೆ.

ಸೈಕಲ್ ರಿಪೇರಿ ಅಂಗಡಿ ಹೇಳಿಕೊಳ್ಳುವಷ್ಟಲ್ಲದಿದ್ದರೂ ಅಂದಿನ ಹಿಟ್ಟು ಬಟ್ಟೆಗೆ ನೆರವಾಗುವಷ್ಟಾಗಿ ಬರುತ್ತಿದ್ದರೂಆತನ ತಂದೆಗೆ ಆಸ್ಪತ್ರೆಗೆ ಕಟ್ಟಿದ್ದ ಹಣಕ್ಕಾಗಿ ಮಾಡಿದ ಸಾಲ ಹೊರಲಾಗದ ಹೊರೆಯಾಗುತ್ತದೆಆತನ ಅಕ್ಕ ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದರೂ ಆಕೆಗೆ ಬರುವ ಸಂಬಳದಲ್ಲಿ ಮನೆಯನ್ನೂ ಸಲಹಿ ಸಾಲವನ್ನು ತೀರಿಸುವುದು ದುಸ್ಸಾಹಸದ ಮಾತಾಗಿತ್ತು.  ಅಲ್ಲಿಗೆ ವರುಣ್ ತನ್ನ ವಿದ್ಯಾಭ್ಯಾಸಕ್ಕೆ ತಿಲ ತರ್ಪಣ ಕೊಟ್ಟುಬಿಡುವುದೆಂದು ತೀರ್ಮಾನ ಮಾಡಿಕೊಂಡಮನುಷ್ಯನೆಂದು ಹುಟ್ಟಿದ ಮೇಲೆ ನೂರಾರುಸಾವಿರಾರು ಆಸೆಗಳಿರುವುದು ನಿಜ ಆದರೆ ಎಲ್ಲರಿಗೂ ಎಲ್ಲ ಆಸೆಗಳೂ ಈಡೇರಲೇಬೇಕೆಂಬ ವಿಧಿತ ಕಟ್ಟುಪಾಡುಗಳೇನು ಇಲ್ಲವಲ್ಲ!ಇರುವ ಸಿರಿವಂತರಿಗೆ ಅಂದುಕೊಂಡಿದ್ದೆಲ್ಲವನ್ನು ಮಾಡುವ ಧೈರ್ಯವಾದರೂ ಇದ್ದಿರಬಹುದೇನೋ,  ಆದರೆ ಇಲ್ಲದವರು ಇಂದು ನಾಳೆಯ ಹಿಟ್ಟಿನಬಟ್ಟೆಯ ನೆಲೆಯ ಮಾತ್ರ ನೋಡಕೊಳ್ಳಲಷ್ಟೇ ಶಕ್ತವಾದವರು ಅಂದುಕೊಳ್ಳುವುದೇನು?.. ಅಂದುಕೊಂಡಿದ್ದನ್ನು ಸಾಧಿಸಲು ಬೇಡುವುದೆಲ್ಲಿ?.

ಮುಂದಣ ದಾರಿ ಅರಿಯದೆ ಕಂಗಾಲಾದ ವರುಣ್ ಓದುವುದನ್ನು ಅಲ್ಲಿಗೆ ನಿಲ್ಲಿಸಿ ತಂದೆಯು ಬಿಟ್ಟು ಹೋಗಿದ್ದ ಸೈಕಲ್ ಅಂಗಡಿಯ ಉತ್ತರಾಧಿಕಾರಿಯಾಗಿ ಗಲ್ಲಾ ಪೆಟ್ಟಿಗೆಯ ಮೇಲೆ ಕೂರುತ್ತಾನೆ. ಸೈಕಲ್ ರಿಪೇರಿ ಅಂಗಡಿಯ ಮಾಲೀಕತ್ವ ವಹಿಸಿಕೊಂಡ ಕೆಲವೇ ದಿನಗಳಲ್ಲಿ ವರುಣ್ ನ ಹತ್ತನೇ ತರಗತಿ ಫಲಿತಾಂಶಗಳು ಪ್ರಕಟವಾಗಿ ವರುಣ್ ತನ್ನ ಇಡೀ ತಾಲೂಕಿಗೆ ಎರಡನೇ ಸ್ಥಾನದಲ್ಲಿ ನಿಲ್ಲುತ್ತಾನೆ. ಹುಡುಗನಲ್ಲಿದ್ದ ಚುರುಕುತನ, ಬುದ್ಧಿಮತ್ತತೆಯನ್ನು ಮೊದಲೇ ಅರಿತಿದ್ದ ತಾಯಿ ತನ್ನ ಮಗನನ್ನು ಸೈಕಲ್ ರಿಪೇರಿಗೆ ತಳ್ಳಿ ಭವಿಷ್ಯಕ್ಕೆ ತಣ್ಣೀರೆರಚುವುದನ್ನು ತಪ್ಪಿಸಲೆಂದೇ ಸೈಕಲ್ ರಿಪೇರಿ ಅಂಗಡಿಯನ್ನು ತಾನೇ ವಹಿಸಿಕೊಳ್ಳುವುದಾಗಿ ಹಾಗೂ ವರುಣ್ ತನ್ನ ವಿದ್ಯಾಭ್ಯಾಸ ಮುಂದುವರೆಸುವಂತೆಯೂ ಆಕಾಂಕ್ಷೆ ವ್ಯಕ್ತಪಡಿಸುತ್ತಾಳೆ. ಆಕಾಂಕ್ಷೆಯಿದ್ದರೇನು? ಅದಕ್ಕಾಗುವಷ್ಟು ಹಣ ಅವರಲ್ಲಿರಲಿಲ್ಲ. ಅವರ ಸಮೀಪದಲ್ಲಿದ್ದ ಕಾಲೇಜಿನಲ್ಲಿ ವಿಚಾರಿಸಿದ್ದಾಗ ಹನ್ನೊಂದನೇ ತರಗತಿಯ ಶುಲ್ಕವೇ ಹತ್ತು ಸಾವಿರ ರೂಪಾಯಿಗಳು ಎಂದಾಗ  'ಇದು ನಮ್ಮ ಕೈಲಾಗುವ ಮಾತಲ್ಲ' ಎಂದುಕೊಳ್ಳುತ್ತಾ, ತಮ್ಮ ಅದೃಷ್ಟವನ್ನು ಅದಲ್ಲಿಗೆ ಹಳಿಯುತ್ತಾ ಮನೆಯ ದಾರಿ ಹಿಡಿಯುತ್ತಾರೆ. ಜೀವನದ ವಿಧಿಯ ವಿಚಿತ್ರ ಆಟಕ್ಕೆ ಸಿಲುಕಿ ವರುಣ್ ಮತ್ತೊಮ್ಮೆ ಸೈಕಲ್ ರಿಪೇರಿ ಅಂಗಡಿಯ ಗಲ್ಲಾ ಪೆಟ್ಟಿಗೆ ಹತ್ತುತ್ತಾನೆ. ವರುಣ್ ನ ಜೀವನದ ಪ್ರಮುಖ ಘಟ್ಟವೊಂದು ಅಲ್ಲಿಗೆ ಮುಗಿಯಿತೂ ಎಂದರೂ ತಪ್ಪಿಲ್ಲ. 

ಹೀಗಿರುವಾಗ ಒಂದು ದಿನ ಅಚಾನಕ್ ಆದ ಘಟನೆಯೊಂದು ನಡೆಯುತ್ತದೆ. ವರುಣ್ ತಂದೆ ಸಾಯುವ ಮೊದಲು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯ ಡಾ.ಕಂಪ್ಲಿ ಆಕಸ್ಮಿಕವಾಗಿ ವರುಣ್ ನನ್ನು ಭೇಟಿಯಾಗಿ ಅವನ ಗುರುತು ಹಿಡಿಯುತ್ತಾರೆ. ವರುಣ್ ನ ವರುಣ್ ನೊಂದಿಗೆ ಮಾತು ಕಥೆಯಾಡುತ್ತಿದ್ದಾಗಲೇ ಅವನು ವಿದ್ಯಾಭ್ಯಾಸವನ್ನು ಅಲ್ಲಿಗೆ ಮೊಟಕುಗೊಳಿಸಿರುವುದು ಅವರಿಗೆ ತಿಳಿಯುತ್ತದೆ. ಕೂಡಲೇ ಹತ್ತು ಸಾವಿರ ರುಪಾಯಿಯ ಕಂತೆಯೊಂದನ್ನು ತಮ್ಮ ಜೇಬಿನಿಂದ ಹೊರತೆಗೆದ ಡಾ.ಕಂಪ್ಲಿ ಅದನ್ನು ವರುಣ್ ಗೆ ಕೊಡುತ್ತಾ ಯಾವುದೇ ಕಾರಣಕ್ಕೂ ವಿದ್ಯಾಭ್ಯಾಸ ಮೊಟಕುಗೊಳಿಸದಂತೆ ತಾಕೀತು ಮಾಡುತ್ತಾರೆ. ಮಗ್ಗುಲ ಬದಲಿಸಿದ ತನ್ನ ಅದೃಷ್ಟದ ಆಟ ವರುಣ್ ಗೂ ಅರ್ಥವಾಗುವುದಿಲ್ಲ. ಹಣ ಪಡೆದು ಕಾಲೇಜಿಗೆ ದಾಖಲಾದ ವರುಣ್ ತನ್ನ ಕನಸು ಈಡೇರಿರುವ ಕಾರಣಕ್ಕೆ ಬಹಳವೇ ಖುಷಿಯಾಗಿದ್ದ. ಆದರೂ ಹಿಟ್ಟಿನ, ಬಟ್ಟೆಯ ಗುಲಾಮಗಿರಿಗೆ ಬಿದ್ದಿರುವ ದೇಹ ಬಿಡಬೇಕಲ್ಲ. ಕುಟುಂಬದ ನೊಗ ಹೆಗಲಿಗೆಳೆದುಕೊಂಡ ವರುಣ್ ನ ತಾಯಿ ಹಗಲೆಲ್ಲ ಸೈಕಲ್ ರೆಪೇರಿಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರೆ ಅತ್ತ ವರುಣ್ ಕಾಲೇಜಿಗೆ ಹಾಜರಾಗಿ ಕಾಲೇಜು ಮುಗಿದೊಡನೆ ನಾಲ್ಕಾರು ಮಕ್ಕಳಿಗೆ ಮನೆ ಪಾಠ ಹೇಳಿ ತನ್ನ ಕಾಲೇಜಿನ ತಿಂಗಳ ಫೀಸಿಗೆ ದಾರಿ ಮಾಡಿಕೊಂಡು ಸಾಯಂಕಾಲವಾದೊಡನೆ ತಾಯಿಯೊಡನೆ ಸೇರಿ ತಾನು ಸೈಕಲ್ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಬೆಳಗ್ಗಿನಿಂದ ದುಡಿಸಿದ ಮೈ ಹಾಸಿಗೆಗೆ ತಾಗುತ್ತಲೇ ನಿದ್ರೆ ಸುಲಭವಾಗಿ ಆವರಿಸಿಬಿಡುತ್ತಿತ್ತು. ಪ್ರತಿ ತಿಂಗಳೂ ಕಾಲೇಜಿಗೆ ಕಟ್ಟಬೇಕಾಗಿದ್ದ 650 ರೂಪಾಯಿಗಳನ್ನು ಕಟ್ಟಲು ಹೆಣಗುತ್ತಿದ್ದ ವರುಣ್ ನ ಸ್ಥಿತಿ ನೋಡಿ ಎಷ್ಟೋ ಬಾರಿ ಕಾಲೇಜಿನ ಶಿಕ್ಷಕರುಗಳೇ ಶುಲ್ಕ ಕಟ್ಟಿರುವುದೂ ಉಂಟಂತೆ!!.

ವರುಣ್ ನ ಹನ್ನೆರಡನೇ ತರಗತಿ ಫಲಿತಾಂಶಗಳು ಪ್ರಕಟವಾಗಿ ಮುಂದಣ ಕನಸಿನಂತೆ ವರುಣ್ ಮೆಡಿಕಲ್ ಮಾಡುವ ಇರಾದೆ ವ್ಯಕ್ತಪಡಿಸುತ್ತಾನೆ. ಆಗ್ಗೆ ಅವರ ಹಣಕಾಸಿನ ಪರಿಸ್ಥಿತಿ ಅದಕ್ಕೆ ಅವಕಾಶ ಕೊಟ್ಟಿಲ್ಲವಾದ ಕಾರಣ ಇರುವ ಸ್ವಲ್ಪವೇ ಪಿತ್ರಾರ್ಜಿತ ಆಸ್ತಿಯನ್ನು ಮಾರಿ ಪುಣೆಯ ಪ್ರಸಿದ್ಧ ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ಎಂಜಿನೀರಿಂಗ್ ಪದವಿಗಾಗಿ ದಾಖಲಾಗುತ್ತಾನೆ. ಬುದ್ಧಿಯಲ್ಲಿ ತೀಕ್ಷಮತಿಯಾಗಿದ್ದ ವರುಣ್ ಪ್ರತೀ ಬಾರಿ ತನ್ನ ಕಾಲೇಜಿಗೆ ಮೊದಲನೇ ಸ್ಥಾನ ಗಳಿಸುವ ಮೂಲಕ ಪ್ರತೀ ವರ್ಷವೂ ಸ್ಕಾಲರ್ ಶಿಪ್ ಗೆ ಅರ್ಹನಾಗುತ್ತಿದ್ದ. ಸ್ಕಾಲರ್ಶಿಪ್ ಹಣ ಕಾಲೇಜಿನ ಫೀಸಿಗೆ ದಾರಿಯಾಗಿದ್ದು ವರುಣ್ ಗೆ ವರದಾನವಾಯಿತು. ಇಂದೇನು? ನಾಳೆಯೇನು? ಎಂದು ಹಣಕ್ಕಾಗಿಯೇ ಹೆಣಗುತ್ತಿದ್ದ ವರುಣ್ ಗೆ ಹಣದ ಕೊರತೆಯೊಂದು ಕಡಿಮೆಯಾಯಿತು. ಅದೇ ಸಮಯದಲ್ಲಿ ಜನ ಲೋಕಪಾಲ್ ಮಸೂದೆ ಜಾರಿ ಮಾಡುವಂತೆ ಸಾಮಜಿಕ ಹೋರಾಟಗಾರ ಅಣ್ಣ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಹೋರಾಟ ತೀವ್ರವಾಗಿತ್ತು. ಪುಣೆಯಲ್ಲಿ ನಡೆಯುತ್ತಿದ್ದ ಭಾರಿ ರ್ಯಾಲಿಯಲ್ಲಿ ಪಾಲ್ಗೊಂಡ ವರುಣ್ ಗೆ ಸಮಾಜದಲ್ಲಿನ ಘನ ಘೋರ ಭ್ರಷ್ಟಾಚಾರಗಳ ಮುಖಗಳ ಅರಿವಾಗತೊಡಗಿತು. ತಾಯಿ ಭಾರತಿ ಭ್ರಷ್ಟರ ಕುಣಿಕೆಯೊಳಗೆ ಸಿಕ್ಕಿ ನಲುಗುತ್ತಿರುವ ಚಿತ್ರಪಟವೊಂದು ವರುಣ್ ನ ಮನಸ್ಸಿನಲ್ಲಿ ಮೂಡಿತ್ತು. ಅಂದೇ ವರುಣ್ ತೀರ್ಮಾನ ಮಾಡಿಕೊಂಡ ನನಗಾಗಿ ನನ್ನ ಕುಟುಂಬಕ್ಕಾಗಿ ಬದುಕುವುದು ಏನೇನು ಪ್ರಯೋಜನವಿಲ್ಲ, ಬದುಕಿದರೆ ದೇಶಕ್ಕಾಗಿ ಬದುಕಬೇಕು ಅಲ್ಲಿರುವ ಭ್ರಷ್ಟಾಚಾರದಂತಹ ಕಳೆ ಕಿತ್ತು ನಿರ್ಮೂಲ ಮಾಡಬೇಕೆಂದು. ಅಲ್ಲೇ ಅವನ ತಲೆಯಲ್ಲಿ ಹೊಳೆದಿದ್ದು ನಾಗರೀಕ ಸೇವಾ ವಲಯ.


ಸಾಮಾಜಿಕ ಕಾರ್ಯಕರ್ತ, ಗಾಂಧಿವಾದಿ ಅಣ್ಣಾ ಹಜಾರೆಯವರೊಂದಿಗೆ ವರುಣ್.

ಜೂನ್ 2012 ರಲ್ಲಿ ವರುಣ್ ನ ಇಂಜಿನಿಯರಿಂಗ್ ಪದವಿ ಮುಗಿದು ಮುಂದೆ ಐ.ಟಿ ಕಂಪನಿ ಡೆಲ್ಲಾಯ್ಟ್ ನಲ್ಲಿ ಉದ್ಯೋಗ ದೊರೆಯುತ್ತದೆ. ಕಾಲೇಜು ಮುಗಿದಂದಿನಿಂದ ಆರು ತಿಂಗಳು ಸಮಯಾವಕಾಶ ವರುಣ್ ಗೆ ಇರುತ್ತದೆ. ಅದನ್ನೇ ಸದ್ಬಳಕೆ ಮಾಡಿಕೊಳ್ಳುವ ಯೋಚನೆ ಮಾಡಿದ ವರುಣ್ ಯು.ಪಿ.ಎಸ್.ಸಿ ಪರೀಕ್ಷೆಗೆ ತಯಾರಾಗಲು ನಿಲ್ಲುತ್ತಾನೆ. ಪುಣೆಯಲ್ಲಿನ ತನ್ನ ರೂಮ್ ಮೆಟ್ ವರುಣ್ ನನ್ನು ಒಂದು ತರಬೇತಿ ಕೇಂದ್ರಕ್ಕೆ ಪರಿಚಯಿಸುತ್ತಾನೆ. 

ಮತ್ತೊಮ್ಮೆ ವರುಣ್ ಗೆ ಹಣದ ಸಮಸ್ಯೆ ತಲೆದೋರುತ್ತದೆ. ಯು.ಪಿ.ಎಸ್.ಸಿ ಪರೀಕ್ಷೆಗೆ ಬೇಕಾದ ಪುಸ್ತಕಗಳನ್ನು ಕೊಳ್ಳಲು ಹಣವಿಲ್ಲದ ವರುಣ್ ಕೈಚೆಲ್ಲುತ್ತಾನೆ. ಆದರೆ ವಿಧಿಯಾಗಲೇ ತೀರ್ಮಾನ ಮಾಡಿದ್ದಿತು ಭವಿಷ್ಯದ ಐ.ಎ.ಎಸ್ ಅಧಿಕಾರಿ ಇವನೆಂದು. ತಪ್ಪಿಸಲು ಯಾರಿಂದ ಸಾಧ್ಯ?. ವರುಣ್  ಹಿಂದೆ ಎಂದೋ ಭೇಟಿ ಮಾಡಿದ್ದ ಹಿರಿಯರೊಬ್ಬರು ಎನ್.ಜಿ.ಓ ಒಂದರ ಸಂಪರ್ಕದಲ್ಲಿದ್ದರು. ಅವರಿಗೆ ಈ ವಿಚಾರ ತಿಳಿದಿದ್ದೆ ತಡ ಎನ್.ಜಿ.ಓ ವತಿಯಿಂದ ವರುಣ್ ನ ಪುಸ್ತಕಗಳಿಗೆ ಸಹಾಯ ಧನ ಕೊಡಿಸಿಕೊಟ್ಟರು.  ಆ ಹಣದಲ್ಲೇ ವರುಣ್ ಪುಸ್ತಕ ಕೊಂಡುಕೊಂಡನು.

ಎಡೆ ಬಿಡದೆ ಕಠಿಣ ಪರಿಶ್ರಮ ಹೂಡಿದ ವರುಣ್ 2014 ರ ಸಾಲಿನ ಯು.ಪಿ.ಎಸ್.ಸಿ ಪರೀಕ್ಷೆಗಳಲ್ಲಿ 32ನೆ ರ್ಯಾಂಕ್ ಪಡೆದು ಪಾಸಾಗಿದ್ದ. ಎಂಟು ವರ್ಷದ ಧೀರ್ಘ ಕಷ್ಟ ಕೋಟಲೆಗಳ ನಂತರ ಗೆಲುವೊಂದು ವರುಣ್ ನ ಮೊಗದಲ್ಲಿ ಮಂದಹಾಸ ಮೂಡಿಸಿತ್ತು. ಹಿಂದೊಮ್ಮೆ ಇಂದು ನಾಳೆಯ ತುತ್ತಿನ ಚೀಲಕ್ಕೂ, ಕಾಸಿಗೂ ಪರದಾಡುತ್ತಿದ್ದ ಹುಡುಗನೊಬ್ಬ ಐ.ಎ.ಎಸ್ ಕೀರೀಟವನ್ನು ಮುಡಿಗೇರಿಸಿಕೊಂಡಿದ್ದ. ಇದು ಪವಾಡವಲ್ಲ, ಸಿನಿಮೀಯ ಕಥಾನಕವಲ್ಲ ಬದಲಾಗಿ ನಮ್ಮ ನಿಮ್ಮ ನಡುವಿನ ಅಚಲ ಮನಸ್ಸೊಂದು ಸಾಧಿಸಿದ ಬಗೆ!. 


Thursday, 30 August 2018

ನಾನು ಮತ್ತು ವಿಶ್ವಮಾನವ ಸಂದೇಶ ಭಾಗ ೧

"ಹುಟ್ಟಿದ ಮಕ್ಕಳೆಲ್ಲ ವಿಶ್ವ ಮಾನವರಾಗಿಯೇ ಹುಟ್ಟುತ್ತಾರೆ ಆದರೆ ಬೆಳೆ ಬೆಳೆಯುತ್ತಾ ಅವರನ್ನು ಅಲ್ಪ ಮಾನವರನ್ನಾಗಿಸಲಾಗುತ್ತದೆ. ಅಲ್ಪ ಮಾನವನಾದವನನ್ನು ಮತ್ತೆ ವಿಶ್ವ ಮಾನವನನ್ನಾಗಿಸುವ ಕಾಯಕ ವಿದ್ಯೆಯದಾಗಬೇಕು" - ಕುವೆಂಪು.

ಮತ್ತೆ ಮತ್ತೆ ಓದಬೇಕೆನಿಸುವ ಸಾಲುಗಳಿವು, ಕುವೆಂಪುರ ಕೊನೆಯ ಹೊತ್ತಗೆ "ಕೊನೆಯ ತೆನೆ ಹಾಗು ವಿಶ್ವ ಮಾನವ ಸಂದೇಶ"ದಿಂದ ಹೆಕ್ಕಿ ತೆಗೆದದ್ದು. ಮೇಲು ಕೀಳುಗಳೆಂಬ, ಧರ್ಮ ಅಧರ್ಮಗಳೆಂಬ, ವರ್ಣ ಭೇಧಗಳೆಂಬ ಯಾವ ಒಡಕಿನ ನೀತಿಯೂ ಹುಟ್ಟುವ ಮಗುವಿನ ಮನಸೊಳಗೆ ದೈವದತ್ತದಂತೆ ಅವತರಿಸಲೇ ಇಲ್ಲ. ನೂರಾರು ಧರ್ಮ ಜಾತಿಗಳನ್ನು ಕಟ್ಟಿ ಆಯಾ ಸಿದ್ಧಾಂತಗಳಿಗಾಗಿ ಬಡಿದಾಡಿಕೊಂಡು  ಸಾಯುವದಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದನಾ ಕೂಟಗಳನ್ನು ಹೆಣೆದು ಅಮಾಯಕರ ಬಲಿಗೆ ಕಾರಣವಾಗುತ್ತಿರುವುದು ಇಂದಿನ ಅತಿ ಖೇದ ವಿಚಾರಗಳಲ್ಲೊಂದು ಎಂದರೆ ತಪ್ಪಾಗುವುದಿಲ್ಲವೇನೋ. ಹುಟ್ಟಿದ ಮಗುವಿಗೆ ಜಾತಿ ಭೇದಗಳೆನ್ನುವ ನೀರೆರೆದಿದ್ದು ನಾವೇ, ಧರ್ಮ ಅಧರ್ಮ, ಪಾಪ ಪುಣ್ಯ ಹೀಗೆ ನಮ್ಮ ಕೆಣ್ಣೆದುರಿಗಿನ ಕೆಲವೊಮ್ಮೊಮ್ಮೆ ನಾವೇ ಸರಿಯಾಗಿ ಪಾಲಿಸದಂತಹ ನಿಯಮಾವಳಿಗಳನ್ನು ಮುಗುವಿಗೆ ಉಣಿಸಿ ದೇಶದೊಳಗಿನ ಭೇದಕ್ಕೆ ಇನ್ನಷ್ಟು ನೀರೆರೆದು ನಾವೇ ಬೆಳೆಸುತ್ತಿರುವುದು ಸುಳ್ಳಲ್ಲ.

ಸಮುದಾಯ, ಪಂಥ, ಮತ ಧರ್ಮಗಳ ನಡುವಿನ ಬಿಗುವು ಎಲ್ಲರಿಗೂ ಗೊತ್ತಿರುವಂತದ್ದೇ. ಅಂತಹ ಬಿಗುವಿನ ಪರಿಸರ ತೆಗೆದು ಸಾಮರಸ್ಯದ ಕಹಳೆ ಮೊಳಗಲೆಂದೇ ನಮ್ಮೀ ದೇಶ ತನ್ನ ಮಕ್ಕಳಿಗೆ ಶಿಕ್ಷಣ ಕೊಡುತ್ತಿದೆಯೇ ಹೊರತು ಡಾಕ್ಟರು ಇಂಜಿನೀಯರುಗಳಾಗಿ ದೊಡ್ಡ ಪಗಾರದ ನೌಕರಿ ಹಿಡಿದು ಜಾತಿ ಧರ್ಮಗಳ ಜಾಡು ಹಿಡಿದು ಅಳೆದು ತೂಗಿ ಮಾಡಿರೆಂದಲ್ಲ. ಇತ್ತೀಚಿಗೆ ಫೇಸ್ಬುಕ್, ಟ್ವಿಟ್ಟರ್,ಕೋರಾ ಸೇರಿದಂತೆ ಸಾಮಾಜಿಕ ಜಾಲತಾಣಗಳನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಬುದ್ಧಿವಂತರ ಸೋಗಿನಲ್ಲಿ ಒಡೆಯುವ ನೀತಿ ಇಂತಹ ಸಾಮಾಜಿಕ ತಾಣಗಳ ಮುಖಾಂತರ ನಿಧಾನವಾಗಿ ನಮ್ಮ ಯುವ ಜನತೆಯ ಮನಸ್ಸಿಗಿಳಿಯುತ್ತಿದೆ. ದೇಶದಲ್ಲಿ ಯಾವುದೋ ಕಾರಣಕ್ಕಾದ ಕೊಲೆಯನ್ನು ಧರ್ಮವೋ ಅಥವಾ ರಾಜಕೀಯ ಪಕ್ಷವೊಂದಕ್ಕೋ ಕಟ್ಟಿ ತಾಳೆ ಹಾಕಿ ಆದಷ್ಟೂ ಸಮುದಾಯವನ್ನು ಆರೋಪಿ ಸ್ಥಾನದಲ್ಲಿಟ್ಟು ನೋಡಿಬಿಡುವುದು ಸರ್ವೇ ಸಾಮಾನ್ಯವಾಗುತ್ತಿದೆ. ಅದೂ ಸಾಲದೇ ಇದೆಲ್ಲವನ್ನು ಮಾಡುತ್ತಿರುವರು ಅವಿದ್ಯಾವಂತರಲ್ಲ, ಅಶಿಕ್ಷಿತರಲ್ಲ, ಬದಲಾಗಿ ಒಳ್ಳೆ ಶಿಕ್ಷಣ ಪಡೆದ ಸೊ ಕಾಲ್ಡ್ ಶಿಕ್ಷಿತರು, ಬುದ್ಧಿಜೀವಿಗಳು.

ನಮ್ಮ ದೇಶ ಸ್ವಾತಂತ್ರ್ಯ ಕಂಡು ಸ್ವಾಯತ್ತತೆಡೆಗೆ ಕಾಲಿಟ್ಟಾಗ ನಮ್ಮ ನಿಮ್ಮ ಹಿರೀಕರು ಯೋಚಿಸಿ ಕಾರ್ಯರೂಪಕ್ಕೆ ತಂದಿದ್ದು ದೇಶದ ಶಿಕ್ಷಣ ವ್ಯವಸ್ಥೆ ಬಲ ಪಡಿಸುವುದು ಹಾಗು ಹೆಚ್ಚು ಹೆಚ್ಚು ಜನರನ್ನು ಸುಶಿಕ್ಷಿತರನ್ನಾಗಿ ಮಾಡುವುದು. ಎಂದೋ ಪ್ರತಿಫಲ ಕೊಡುವ ಆ ಯೋಜನೆ ಅಂದಿನ ಕಾಲಮಾನಕ್ಕೆ ಭರಿಸಲಾಗದ ಬಾಬತ್ತಿನ ಯೋಜನೆಯಾದರೂ ಅಲ್ಲಿ ಎದುರಾಗುವ ಕಷ್ಟಗಳನ್ನು ನುಂಗಿಕೊಂಡು, ಏಗಿಕೊಂಡು ಶಿಕ್ಷಣ ಯೋಜನೆಗಳನ್ನು ಜಾರಿಮಾಡಿದ್ದರು. ನಮ್ಮ ಜನ ಶಿಕ್ಷಣ ಪಡೆದಷ್ಟು ದೇಶ ಸುಭೀಕ್ಷತೆಯೆಡೆಗೆ ನಡೆಯುತ್ತದೆ, ಜನ ಬುದ್ಧಿವಂತರಾದಷ್ಟು ದೇಶ ಸಬಲವಾಗಿ ಭವಿಷ್ಯದಲ್ಲಿ ನಡೆಯಬಹುದಾದ ಬ್ರಿಟಿಷ್ ರಾಜ ನೀತಿಯಂತಹ ವಸಾಹತು ವಾದವನ್ನು ತಮ್ಮ ಬುದ್ಧಿಮತ್ತೆಯಿಂದಲೇ ಇಲ್ಲಿನ ಜನರು ನಿರಾಕರಿಸಿಬಿಡುತ್ತಾರೆ ಎನ್ನುವ ಕನಸನ್ನು ಅವರು ಆಗ ಕಟ್ಟಿರಲಿಕ್ಕೆ ಸಾಕು.ಆದರೆ ಶಿಕ್ಷಿತರಾದ ಜನಾಂಗ ಮಾಡಿದ್ದು, ಮಾಡುತ್ತಿರುವುದು ಎಲ್ಲವೂ ಬೇರೆಯೇ. ಶಿಕ್ಷಿತರಾದ ತಕ್ಷಣ ತಂಡೋಪ ತಂಡವಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗಿದ್ದು ಒಂದಾದರೆ, ಈ ವಲಸೆಯಿಂದ ಕೃಷಿ ಕಾರ್ಮಿಕರ ಅಭಾವ ಮಿತಿ ಮೀರಿದ್ದು ಭಾರತದ ಕೃಷಿಗೆ ಎಳೆದ ಬರೆಯಲ್ಲದೆ ಮತ್ತಿನ್ನೇನೂ ಅಲ್ಲ. ಇನ್ನೂ ಮೀರಿ ವೃತ್ತಿಪರ ಶಿಕ್ಷಣಗಳನ್ನು ಪಡೆಯುವ ಈಗಿನ ಮಂದಿ ವಿದೇಶಕ್ಕೆ ಹಾರಿ ಯಥೇಚ್ಛವಾಗಿ ಸಂಪಾದಿಸಲು ಮಾಡಿಕೊಳ್ಳುತ್ತಿರುವ ಯೋಜನೆಗಳು ಪಶ್ಚಿಮ ದೇಶದ ರಾಯಭಾರಿ ಕಚೇರಿಗಳ ಮುಂದಿನ ಭಾರತೀಯರು ವೀಸಾ ಪಡೆಯಲು ಸಾಲುಗಟ್ಟಿರುವುದನ್ನು ಕಂಡಾಗಲೇ ಅರ್ಥವಾಗುತ್ತದೆ. ಒಟ್ಟಿನಲ್ಲಿ ಈ ದೇಶದಲ್ಲಿ ಯಾವುದಕ್ಕೋ ಹೆಣೆದ ಯೋಜನೆಯೊಂದು ಇನ್ಹೇಗೋ ತಿರುಗಿ ಅದಲು ಬದಲಾಗಿ ಬೆರೆತುಹೋಗಿದ್ದು ಇದೀಗ ಮೆಲ್ಲಗೆ ಇತಿಹಾಸವಾಗುತ್ತಿದೆ.

ಜನ ಹೆಚ್ಚೆಚ್ಚು ದುಡ್ಡು ಸಂಪಾದಿಸಲು ಶುರುವಿಟ್ಟುಕೊಳ್ಳುತ್ತಿದ್ದಂತೆಯೇ ದೇಶೀಯ ಮಟ್ಟದಲ್ಲಿ ಅರ್ಥವ್ಯವಸ್ಥೆಯ ಮಾಪನಗಳಾದ ಜಿಡಿಪಿ, ಎನ್ಡಿಪಿ, ಎನ್ ಎನ್ ಪಿ ಗಳೆಲ್ಲ ಸುಧಾರಿತ ಮಟ್ಟಕ್ಕೆ ಬಂದು ತಗುಲಿ ಪ್ರಪಂಚದೆದುರು ಭಾರತವೂ ಬೆಳೆದು ನಿಂತ ರಾಷ್ಟ್ರ ಎಂದು ಸಾಬೀತು ಪಡಿಸುತ್ತಿವೆ, ಆದರೆ ದೇಶದೊಳಗಿನ ಮಾನವೀಯ ಮೌಲ್ಯಗಳು ಅಷ್ಟೇ ವೇಗವಾಗಿ ಕುಸಿದು ಈ ಮಣ್ಣಿನ ಜನ ಮನಸ್ಥಿತಿಗಳನ್ನು ಅಲುಗಾಡಿಸುತ್ತಿರುವುದು ಸುಳ್ಳಲ್ಲ.ಹಾಗಾದರೆ ಆಗಿದ್ದೇನು?. ವಿದ್ಯೆ ಕಲಿತವರೆಲ್ಲ ವಿಶ್ವ ಮಾನವೀಯತೆಗೆ ಆಕರ್ಷಿತರಾಗಲಿಲ್ಲವೇ? ಜನಾಂಗವೊಂದು ಶಿಕ್ಷಿತವಾದರೆ ಆ ರಾಷ್ಟ್ರ ಸುಭೀಕ್ಷಗೊಳ್ಳುತ್ತದೆ ಎಂಬ ನಮ್ಮ ಹೀರೀಕರ ನಿಲುವು ತಪ್ಪಾಯಿತೇ? ಜಾತಿ, ಧರ್ಮಗಳನ್ನು ವೋಟಿಗೋಸ್ಕರ ವಿಕೇಂದ್ರೀಕರಿಸಿ ಗುಂಪು ಗುಂಪುಗಳ ನಡುವೆ ಕಿಚ್ಚು ಹಚ್ಚುವರ ಸಂಖ್ಯೆ ಮೇರೆ ಮೀರಿತೆ? ಇಂದಿನ ಕಾಲಮಾನದ ಹಣ ಬಲ ಜನಗಳನ್ನು ಹೀಗಾಗಲು ಪುಸಲಾಯಿಸಿತೆ? ....... ಪಟ್ಟಿ ಮುಂದುವರಿಯುತ್ತಲೇ ಇರುತ್ತದೆ, ಆದರೆ ಅದಕ್ಕೆ ಉತ್ತರವೀಯಬಲ್ಲವನು ಮಾತ್ರ ಕಾಲನೊಬ್ಬನೇ.

ಸಮುದಾಯಗಳ ನಡುವಿನ ಬಿಗುವು ಹೆಚ್ಚುತ್ತಿರುವ ಈ ಸಮಯದಲ್ಲಿ ಕುವೆಂಪುರ ವಿಶ್ವ ಮಾನವ ಸಂದೇಶ ವಿಶ್ವಕ್ಕೆ ಅತಿ ಪ್ರಸ್ತುತವೆನಿಸುತ್ತದೆ.

Sunday, 26 August 2018

ಸಾವರಿಸಿ ಸುಧಾರಿಸಿದ್ದತಿಯಾಯ್ತು

ಸಾವರಿಸಿ ಸುಧಾರಿಸಿದ್ದತಿಯಾಯ್ತು,
ಕ್ರಿಯೆಯನೊಮ್ಮೆ ಮಾತಾಡಿಸು.
ತಡವರಿಸಿ ಸಾಧಿಸಿದ್ದತಿಯಾಯ್ತು
ಕನಸುಗಳನೊಮ್ಮೆ ಬಡಿದೇಳಿಸು.

ಬರೆದೋದಿದ್ದು ಬಹುವಾಯ್ತು
ಅರಿಯುವ ಕಾಲವಿದು, ಚಿತ್ತೈಸು.
ಇತಿಹಾಸಗಳ ಬೆದಕಿದ್ದಾಯ್ತು
ಭೂತ, ಭವಿಷ್ಯಗಳನೂ ಬದುಕಿಸು.

Sunday, 8 July 2018

ನಾನವನಲ್ಲ

ಹೊಸಕಾಲದ ಅಲೆಯದು
ಭುಗಿಲೆದ್ದು
ಜಗತ್ತನ್ನು ಜಾಗತೀಕರಿಸುವ
ಹೊಸ್ತಿಲಿಗೆ ಸರಿಗಟ್ಟಿದೆ,
ಅಲೆಯೊಳಗೆ ಸಿಕ್ಕು ಕೊಚ್ಚಿ
ಹಾಯುವ ಭರದಲ್ಲಿ
ನಮ್ಮ ಹಳೆ ಬುಡಗಳನ್ನು
ನಮಗರಿವಿಲ್ಲದೆ ಕಳಚಿ
ದೂರ ಸರಿದಿದ್ದೇವೆ
ಅದರೊಳಗೊಬ್ಬ ನಾನು
ಸುತ್ತಲ ಪರಿಸರದಲ್ಲಿ
ಅದೇನೇನೋ ನಡೆಯುತ್ತಿದೆ
ಅವಾವು ನಾನಾಗಿಲ್ಲ

ಅವರಿವರ ವಾಟ್ಸಾಪಿನ
ಸ್ಟೇಟಸುಗಳಲ್ಲಿ
ಬರ್ತ್ ಡೇ ಗೆ ಭಾಜನನಾಗಲಿಲ್ಲ
ನಡುರಾತ್ರಿ ಮೀರಿ
ಬೆಳ್ಳಿ ಚುಕ್ಕಿಗೆ ಬೆಳಗಾದರೂ
ಮಂದ ಮಂದ ಬೆಳಕೊಳಗೆ
ಮೈ ಮರೆಯಲಿಲ್ಲ
ಮತ್ತಿಗಂತೂ ಏರಲೇ ಇಲ್ಲ
ಟ್ರೆಕ್ಕಿನ ನೆಪವೊಡ್ಡಿ ಇಳಿಜಾರಿನ
ಗುಡ್ಡಬೆಟ್ಟಗಳನೊಮ್ಮೆಯೂ ತಡಕಲಿಲ್ಲ
ವೀಕೆಂಡು ಕರೆತರುವ
ಯಾವ ಅಮಲಿನ ವಿದ್ಯಮಾನಕ್ಕೂ
ಸಾಕ್ಷಿಯಾಗಲಿಲ್ಲ
ಜೀವನದ ಹಳೆ ರಗಳೆಗಳನ್ನು
ಡೈರಿಯೊಳಗೆ ತುರುಕಿಡಲಿಲ್ಲ
ಹೊಸ ವರಸೆಗಳನ್ನು
ಸೆಲ್ಫಿಗಷ್ಟೇ ಸೀಮಿತಗೊಳಿಸಲಿಲ್ಲ

ಇದಿರ ಹಳಿಯುವ ಮನಸ್ಸಿಲ್ಲ
ತನ್ನ ಬಣ್ಣಿಸುವ ನಾನತ್ವ
ಇಲ್ಲವೇ ಇಲ್ಲ
ಈ ಯುಗಮಾನದವನು
ನಾನಲ್ಲ
ಅಮೋಘ ಮಾನವೀಯತೆಯ
ದೀವಿಗೆಯದು
ಹೃದಯದಲಿ ಪ್ರಜ್ವಲಿಸುತಿದೆ
ಅದಕೆ ಈ ಯುಗ ನನಗಲ್ಲವೂ ಅಲ್ಲ
ನಿಮ್ಮೀ ಹೊರಗಣ್ಣಿಗೆ ನಾನೇನೋ
ನಾನವನಲ್ಲ.

ಕೊನೆಯ ಬರಹ

ನಿನ್ನ ಗೌರವಕೆ ಭಾಜನರಲ್ಲವೋ ಅಣ್ಣ

ಕಳಬೇಡವೆಂದೆ, ಕಳವಿಗಿಳಿದೆವು. ಕೊಲಬೇಡವೆಂದೆ, ಅನ್ಯಕೆ ಮನಸೋತು ಬದುಕಿದ್ದು ಸತ್ತಂತಿರುವದು ನಮ್ಮ ಕೊಲೆಯಾಗಿದೆ. ಹುಸಿಯನಾಡದಿರೆಂದೆ, ಹುಸಿಯೆ ಬದುಕ ಸಾರ ಸರ್ವಸ...