ಭಾನುವಾರ, ಮಾರ್ಚ್ 26, 2017

ಅಮೃತ ಪುತ್ರ

ಭಾವದ ಕಡಲಿಗೆ ಬಲೆ ಬೀಸಿ
ಸೆಳೆದರೆ ಸಿಗುವುದೇನು ?
ಮೂರನುಭವದ ಮಾತು
ನೂರು ಭಾವ ಧಾರೆ
ಯಾರ್ಯಾರದೋ ಮಾತು
ಇನ್ಯಾರದೋ ಬೈಗುಳ
ಅವಮಾನ, ಅನುಮಾನಗಳ ಆಡಂಬರ
ಹಿಂಸೆ ನೋವುಗಳರಮನೆಯೊಳಗಣ
ದಿನಗಳ ನೆನೆಯುವುದೂ ದುರ್ಭರ

ಯಾವುದತಿಯಾದರೂ ಕಷ್ಟ
ಯಾವುದು ಮಿತಿಯಲ್ಲಿದ್ದರೂ ಕಷ್ಟ
ಏನೀ ಜೀವನ ಇಷ್ಟೊಂದು ವಿಶಿಷ್ಟ
ಒಮ್ಮೊಮ್ಮೆ ಬಡತನದ ಬೆಂಗಾಡು
ಮಗದೊಮ್ಮೆ ಕಾಂಚಾಣೆಯ ಆರಾಧನೆ
ಇನೊಮ್ಮೆ ಆರು ಮೂರುಗಳಾವು ಅಲ್ಲದ ಬೇನೆ
ಬದುಕು ಏರಿಳಿತಗಳ ತಂದೊಡ್ಡಿದರೂ
ತಡೆದು ನಿಂತವನೇ ಸಾಧಕ
ಹೆದರಿ ಓಡಿದವನ ಬಾಳಿಗದು ಮಾರಕ

ಸೋಲುವರು ಸೋಲುವುದು
ಮನದ ಹಿಂತೆಗೆತದಿ
ಗೆಲ್ಲುವರು ಗೆಲ್ಲುವುದು
ಮನದ ಇಂಗಿತದಿ
ಸೋಲು ಗೆಲುವುಗಳೆರಡರಲ್ಲೂ
ಸಮತನವ ಕಾಣುವನೇ ನಿಜವಾದ
ನಾಯಕ ಬಾಳ ದೋಣಿಯಲ್ಲೂ
ಹಿಡಿದ ಕಾರ್ಯದಲ್ಲೂ ನಿಜ
ನಾಯಕ - ನಿಜ ಅಮೃತ ಪುತ್ರ

ಭಾನುವಾರ, ಮಾರ್ಚ್ 19, 2017

ಬೆಂಗಳೂರ ಬೆಳಗಲು ನಮ್ಮೂರು ಕತ್ತಲಿಗಿಳಿಯಿತು

ಮಗ್ಗುಲ ಬೆಂಗಳೂರು ಬೆಳಗಲು
ನಮ್ಮೂರು ದಿನಕ್ಕೆ ಮೂರೇ ಘಂಟೆ
ದೀಪ ಬೆಳಗಿಸಿತು
ನಮ್ಮ ಸರ್ಕಾರಗಳಿಗೆ, ಜನ ಸಾಮಾನ್ಯರಿಗೆ
ಬೆಂಗಳೂರೆಂದರೆ ಎಲ್ಲಿಲ್ಲದ
ಹೆಮ್ಮೆಯೋ ಹೆಮ್ಮೆ

ನಮ್ಮೂರಿಗೆ ಹರಿಯುವ ಕರೆಂಟು ತಡೆದು
ಬೆಂಗಳೂರಿಗೆ ತಿರುಗಿಸಿಬಿಟ್ಟರು
ನಮ್ಮೂರು ಕತ್ತಲೆಯೇ,
ಓದುವರು ಬುಡ್ಡಿ ದೀಪಗಳ ತಡಕಿದರು
ಹರಟುವರು ತಿಂಗಳ ಬೆಳಕನ್ನೇ
ನಂಬಿಕೊಂಡರು

ಅಡುಗೆಗೆ  ಒಲೆಯ ಉರಿಯೇ ಬೆಳಕ
ಬಸಿದು ಎರಚುತ್ತಿತ್ತು
ಹಳೆತಲೆ ಗಂಡಸರು ಹರಟುವಾಗ
ತಾವು ಸೇದುವ ಬೀಡಿ ಬೆಳಕಲ್ಲೇ
ಮುಖ ಕಂಡುಕೊಂಡರು
ಇನ್ನು ಏನೇನೋ ಕತ್ತಲ ಮಾಯೆ

ನಮ್ಮೂರು ಕೇರಿ ಕತ್ತಲಿಗೆಳೆಸಿಕೊಂಡು
ಬೆಂಗಳೂರು ಸಾಧಿಸಲೆಂದು
ಕರೆಂಟು ತ್ಯಾಗ ಮಾಡಿ ಕುಂತೆವು
ಆದರೆ ಬೆಂಗಳೂರಿನಲ್ಲಿ
ಮಧ್ಯ ರಾತ್ರಿ ಮೀರಿದರು ಯುವ ಜನತೆ
ಮಂದ ಬೆಳಕಿನಲ್ಲಿ ಮತ್ತಿಗೇರಿತು

ಮನೆಗೆಲಸಗಳನ್ನು ಮಾಡಿ ತಮ್ಮನ್ನು
ಸಲಹಲು ಕರೆಂಟಿನ ಆಯುಧಗಳ
ಸಮರ್ಪಣೆ ಮಾಡಿಕೊಂಡರು
ಕ್ರಿಕೆಟ್ಟು ಹುಚ್ಚಿನವರು ನಡುರಾತ್ರಿ ಮೀರಿ
ಬೆಳ್ಳಿ ಚುಕ್ಕಿ ಏರಿದರೂ ಟಿವಿಯೊಳಗೆ
ಸೇರಿಕೊಂಡು ಲೋಕ ಮರೆತರು

ಅರ್ಧಗಂಟೆ ಕರೆಂಟು ತಾನು ಗೈರು ಆದರೂ
ಇಲ್ಲದ ಶಾಪ ತೂರಿ ಬಿಟ್ಟರು
ಅದಿಲ್ಲದೆ ನಾವಿಲ್ಲ ಎನ್ನುವ ಸ್ಥಿತಿ ತಲುಪಿದರು
ಎಲ್ಲೆಲ್ಲಿ ಎಷ್ಟೆಷ್ಟು ಸಾಧ್ಯವೋ ಅಷ್ಟೆಲ್ಲ
ಕರೆಂಟು ಬಳಸಿದರು, ಉಳಿಸುವ ಗೋಜಿಗೆ
ಹೋಗುವುದಿರಲಿ ಚಿಂತಿಸಲೂ ಇಲ್ಲ

ಇತ್ತ ನಮ್ಮೂರೊಳಗೆ ನಡು ರಾತ್ರಿ ಮೀರಿಸಿ
ಮೋಟಾರು ಓಡುವಷ್ಟು ಕರೆಂಟು ಬಂದರೆ
ಜೀವನದ ನೊಗ ಎಳೆದುಕೊಂಡವರು
ನೀರು ಕಟ್ಟಲೆಂದು ಗುದ್ದಲಿ ಹಿಡಿದು
ಹೊರಟರು,ಹೋದವರು ಬರುವರೆಂಬ
ಎಳ್ಳಷ್ಟೂ ನಂಬಿಕೆಯಿಲ್ಲದೆ

ಎಷ್ಟೋ ಜನ ನೀರು ಕಟ್ಟಲು ಹೋಗಿ
ಹಾವುಗಳಿಗೂ, ಮೃಗಗಳಿಗೂ
ಬಲಿಯಾಗಿ ಯಮಪುರಿ ಸೇರಿಕೊಂಡರು
ಇನ್ನೆಷ್ಟೋ ಜನ ನಿಸ್ತೇಜರಾಗಿ ಮನೆ ಸೇರಿಕೊಂಡು
ಇದ್ದೂ ಇಲ್ಲದವರಾದರು,ನಾವು ಕರೆಂಟು
ನಂಬಿದ್ದೇವೆ ಎಂದು ಹೇಳುವದಾರಿಗೆ ?

ನಗರಿಗರಿಗೆ ಇನ್ನಿಲ್ಲದ ಅನುಕೂಲ ಕೊಡುವ
ನೀವು ಇನ್ನಾರಿಗೆ ಅನಾನುಕೂಲವೆಂದು
ಬಲ್ಲಿರಾ?? ..ರಸಋಷಿ ನುಡಿದಂತೆ
ವೊಕ್ಕಲಿಗ ತಾನೊಕ್ಕದಿರೆ ಜಗವೆಲ್ಲ ಬಿಕ್ಕುವುದಿಲ್ಲವೇ
ಜಗಕ್ಕೆಲ್ಲ ಅನ್ನವಿಕ್ಕುವ ರೈತನ ಮನೆ
ಕತ್ತಲಿಗೆ ತಳ್ಳುವುದು ತರವೇ ?




ಜೀವನೋಕ್ತಿ

* ಜೀವನವೊಂದು ಕಷ್ಟ ಸುಖ, ನಗು ಅಳುಗಳ ಅನುಭವದ ಕಂತೆ. ಕೆಲವೊಮ್ಮೆ ಅವು ಅವಶ್ಯ  ಮತ್ತೆ ಕೆಲವೊಮ್ಮೆ ಅನಿರೀಕ್ಷಿತ. ಯಾವುದು ನಮ್ಮ ಪಾಲಿಗೆ ಬಂದರೂ ನಿರಾಕರಿಸಲಾಗದು.

* ಜೀವನವನ್ನು ಸರಿಯಾದ ದಾರಿಗೆ ತಿರುಗಿಸಲು ಅಥವಾ ನಿನಗೆ ಬೇಕಾದ ದಾರಿಗೆ ತಿರುಗಿಸಲು ಪ್ರತೀ ದಿನವೂ ಸುಸಮಯವೇ. ಆದರೆ ಆ ಸಮಯ ಬಳಕೆಯಲ್ಲಿ ಸಂಯಮವಿರಬೇಕು.

* ನಿನಗೆ ಒದಗಿ ಬಂದ ಸಮಯ ಹಾಲು ಮಾಡಿಕೊಂಡು ಒಳ್ಳೆ ಸಮಯಕ್ಕಾಗಿ ಕಾದರೆ ದೇವರಿರಲಿ  ನಿನಗೆ ನೀನೆ ಸಹಾಯ ಮಾಡಿಕೊಳ್ಳದ ಸ್ಥಿತಿಗೆ ತಲುಪುವೆ.

* ಯಾರಿಗೂ ಬರದಂತಹ ಅತೀ ಕ್ಲಿಷ್ಟ ಕಷ್ಟಗಳು ನಿನಗೆ ಬಂದರೆ ನೀನು ಹೆಮ್ಮೆ ಪಡಬೇಕು, ಕಾರಣ ಯಾರನ್ನು ಪರೀಕ್ಷಿಸದಷ್ಟು ನಿನ್ನನ್ನು ಪರೀಕ್ಷಿಸುತ್ತಿದ್ದಾನೆ. ನಿನ್ನ ಬಗ್ಗೆ ಅವನೂ ಕೆಲ ಕಾಲ ಯೋಚಿಸುತ್ತಿದ್ದಾನೆ ಎಂತಲೇ ಅರ್ಥ.

* ಕನಸು ಕಾಣುವ ಶಕ್ತಿಯೊಂದು ಮಾತ್ರ ಸಾಲದು, ಕಂಡ ಕನಸನ್ನು ನನಸು ಮಾಡಲು ಎಡೆ ಬಿಡದೆ ದುಡಿಯುವ ಛಾತಿ ಇದ್ದವನು ಮಾತ್ರ ಗೆಲ್ಲಬಲ್ಲ.

* ನೂರು ದಿನಗಳ ಪರಿಶ್ರಮ ಒಂದು ಘಳಿಗೆಯ ಗೆಲುವಿನ ಮಹಾ ಮಂತ್ರ.

* ಗೆದ್ದವರು ತಮ್ಮ ಸೋಲಿನ ದಾರಿಗಳನ್ನು ಮಾದರಿಯಾಗಿ ಕೊಡುತ್ತಾ ಅವುಗಳನ್ನು ಪಾಲಿಸದಿರುವಂತೆ ಸೂಚಿಸುತ್ತಾರೆ.

* ನಿನ್ನನ್ನು ಆಡಿಕೊಳ್ಳುವರಿಂದ, ತೆಗಳುವರಿಂದ ನಿನ್ನ ಜೀವನ ಇನ್ನು ಉನ್ನತಕ್ಕೇರುತ್ತದೆ.

* ನಿನ್ನ ಬೆನ್ನ ಹಿಂದೆ ಜನರೆಲ್ಲಾ ಆಡಿಕೊಳ್ಳುತ್ತಿದ್ದಾರೆಂದರೆ ನೀನು ಅವರೆಲ್ಲರಿಗಿಂತ ಬಹಳ ಮುಂದೆ ಇದ್ದೀಯೆಂದೇ ಅರ್ಥ.

* ನಿನ್ನ ಶಕ್ತಿಯ ಬಗ್ಗೆ ಯಾರಾದರೂ ಅನುಮಾನ ಪಟ್ಟರೆ ನೀನು ಬೇಸರಿಸುವ ಅಗತ್ಯವಿಲ್ಲ, ಬದಲಾಗ ಹೆಮ್ಮೆ ಪಡಬೇಕು. ಜನ ಸಾಮಾನ್ಯವಾಗಿ ಚಿನ್ನದ ಪರಿಶುದ್ಧತೆಯ ಬಗ್ಗೆ ಅನುಮಾನ ವ್ಯಕ್ತ ಪಡಿಸುತ್ತಾರೆ ಹೊರತು ಕಬ್ಬಿಣದ ಪರಿಶುದ್ಧತೆಯ ಬಗ್ಗೆ ಅಲ್ಲ.

* ಖಾಲಿ ಜೇಬು ನೂರು ಬುದ್ಧಿ ಕಲಿಸುತ್ತದೆ, ತುಂಬಿದ ಹೊಟ್ಟೆ ನೂರು ಬುದ್ಧಿ ಕೆಡಿಸುತ್ತದೆ.

* ಹಣೆ ಬರಹವೆನ್ನುವುದು ದೇವರು ಕೊಟ್ಟ ಖಾಲಿ ಹಾಳೆ, ಅಲ್ಲಿ ಬರೆಯಬೇಕಾದವರು ನಾವು ಮಾತ್ರ.

* ಛಲವಾದಿ ಸೋಲು ಬಂದು ಝಾಡಿಸುವ ವರೆವಿಗೂ ಕಾಯುತ್ತ ಕುಳಿತುಕೊಳ್ಳಲಾರ, ಬದಲಾಗಿ ಸಂಭವನೀಯ ಸೋಲನ್ನು ದೂರದಿಂದಲೇ ಅರ್ಥ ಮಾಡಿಕೊಂಡು ಅದನ್ನು ಸೋಲಿಸುವುದೇ ಅವನ ಧ್ಯೇಯವನ್ನಾಗಿ ಮಾಡಿಕೊಳ್ಳುತ್ತಾನೆ.

ಶನಿವಾರ, ಮಾರ್ಚ್ 18, 2017

ಇರಿ ಗುರು ನೀವು ನಮ್ಮಲ್ಲೇ



ಇರುವ ಜಾತಿಗಳೆಲ್ಲವ ಮೀರಿಸಿದ
ಜಾತಿಯೊಂದು ಇಲ್ಲಿ ಜನ್ಮ ತಳೆದಿದೆ
ಅರಿವ ಧರ್ಮಗಳನೆಲ್ಲ ಮೀರಿದ
ಧರ್ಮವೊಂದು ಇಲ್ಲಿ ನೆಲೆಯ ಕಂಡಿದೆ

ಪೂಜೆ ಪುನಸ್ಕಾರ ಅರ್ಚನೆ ಅಭಿಷೇಕ
ಆರತಿ ಅರ್ಘ್ಯಗಳು ಬೆಲೆರಹಿತವಾಗಿವೆ
ಅಂತರಂಗ ಬಹಿರಂಗಗಳ ಶುದ್ಧಿಗೆ
ಕಾಯಕ ತತ್ವ ವೇದ್ಯವಾಗಿದೆ

ಅನ್ನವಿಲ್ಲದವನಿಗೆ ಅನ್ನವಿಕ್ಕುವುದು
ವಿದ್ಯೆಯಿಲ್ಲದವನಿಗೆ ಅಕ್ಷರ ಕಲಿಸುವುದು
ಜ್ಞಾನವರಸಿದವನಿಗೆ ಭಕ್ತಿಯುಣಿಸುವುದೇ
ನಡೆದು ತ್ರಿವಿಧ ದಾಸೋಹ ಮಹಾ ಮನೆಯಾಗಿದೆ

ಬಂದವರಿಗೆ ಇಲ್ಲ ಎನ್ನುವ ಬಾಯಿಲ್ಲವಿಲ್ಲಿ
ನೊಂದವರಿಗೆ ಹರಸುವ ಕಾಯಕ ಮಾತ್ರವಿಲ್ಲಿ
ಬಸವನೊಪ್ಪಿದ ಧರ್ಮ ಸಾಕಾರವಿಲ್ಲಿ
ಕತ್ತಲಲಿ ನರಳಿದವರು ಬೆಳಕಿನೆಡೆಗಿಲ್ಲಿ

ಮಹಾ ಮನೆಯನ್ನು ಪೊರೆಯುತಿದೆ
ಕಾವಿ, ವಿಭೂತಿ ಧರಿಸಿದ ಕರುಣೆ
ಕರುಣೆಯೇ ತಾನು ಮನುಜನಾದಡೆ
ಹೀಗೆಯೇ ಇರುವುದೇ !!

ಅಂತೂ, ಸದ್ದು ಗದ್ದಲವಿರದ ಸಾಧನೆ
ಗದ್ದುಗೆಯೇರಿತು, ಕಾಯಕ ನಿಷ್ಠೆ
ಮರಳಿ ಮರಳಿ ಅನುರಣಿಸಿತು
ಸಾಕಾರವಾಯಿತು ಕರ್ಮಯೋಗಿಯ ಲೋಕ

ಸಾಕಾರದೊಳಗೆ ಸುಪ್ತಾನಂದ ಪಡೆದ
ಶ್ರೀ ಗುರು ಪಾದುಕೆಗೆ ಎನಿಸುತ್ತಿದೆ
'ಶಿವಯೋಗಿಯ ದೇಹ ವೃಥಾ ಸವೆಯದಂತೆ
ಭಕ್ತರು ನಡೆಸಿದ ಪರಿ' ಎಂದು.

ಇರಿ ನೀವು ಗುರುವೇ ನಮ್ಮಲ್ಲೇ
ಎಡವುವರು ಮುಗಿದಿಲ್ಲ, ಅವರಿಗೆ
ದಾರಿಗಾರರಾಗಿ, ದಾರಿದೀಪವಾಗಿ
ಶ್ರೇಷ್ಠಿಯಾಗಿ,ಮಹಾ ಮಾನವತಾವಾದಿಯಾಗಿ

ಬುಧವಾರ, ಮಾರ್ಚ್ 15, 2017

ಜನ್ಮದಿನ

ಹರುಷದಲ್ಲಿ ಎಲ್ಲ ತೇಲಲಿ
ಸಂಭ್ರಮ ಮೇರೇ ಮೀರಲಿ
ಹೀಗೆ ಇರಲಿ ದಿನಗಳು
ಈ ಸಂಭ್ರಮ ಸಂತೋಷದಿ

ಬಾಳು ಒಂದು ಮುಗಿಯದಿರುವ ಹಾದಿಯಂತಿರೆ
ಕೆದಕಿ ಕೆದಕಿ ನೆನಪುಗಳನು ಉಳಿಸಿ ಹೊರಟಿದೆ
ಭೂತ ವರ್ತಮಾನಗಳದೆ ಚಕಿತವಿಲ್ಲದೆ
ಬಾಳ ರಥವು ಸಾಗಿ ಸಾಗಿ ನಡೆಯಬೇಕಿದೆ
ಇದೇನೇ ಜೀವನ
ಹೀಗೇನೆ ಜೀವನ
ಇಲ್ಲೇನೇ ಆದರೂ ಗೆಲ್ಲಲಿ ಮನ.

ಬದುಕಿದವರು ಕೊಟ್ಟ ಹಾದಿ ಉಳಿಸಬೇಕಿದೆ
ನಮ್ಮ ತನವ ನಾವು ಎತ್ತಿ ಹಿಡಿಯಬೇಕಿದೆ
ಇದ್ದು ಈಸಬಲ್ಲ ಮನದ ಧೈರ್ಯ ಬೇಕಿದೆ
ಹರಿವ ನೀರಿನಂತ ಬಾಳು ಮೆರೆದು ಸಾಗಿದೆ
ಈ ಜನ್ಮ ದಿನಗಳು
ಈ ಬಾಳ ಖುಷಿಗಳು
ಇವೇನೇ ಇದ್ದರು ನಡೆಯಲಿ ಮನ.

ಬದುಕು ತವಕ ತುಂಬಿಕೊಂಡ ಕಣಜವಾಗಿದೆ
ಸ್ವಾನುಭವದ ಬಯಕೆಯಲ್ಲಿ ಎದುರು ಕಾದಿದೆ
ನೋವು ನಲಿವು ಬಾಳ ಪುಟದ ಸಾಲಿನಲ್ಲಿವೆ
ಮರೆಯದಂತೆ ಪಠಿಸೋ ಭಾರ ನಮ್ಮ ಮೇಲಿದೆ
ಇಲ್ಲಂತೂ ನೋವಿದೆ
ಇಲ್ಲಂತೂ ಸಾವಿದೆ
ಅದೇನು ಬಂದರು ಮಿಡಿಯಲಿ ಮನ. 

ಭಾನುವಾರ, ಮಾರ್ಚ್ 12, 2017

ಭಾವವೂ ತಾಯಿಯೇ

ನಾನತ್ತರೆ ಆಕೆ ನಗಳು
ನಾ ನಕ್ಕರೂ ಆಕೆ ನಗಳು
ನಾನ್ ಕೇಳುವೆ 'ಏನವ್ವ ಕೊರಗು?'
ನಾನಿಲ್ಲವೆ ನಿನ್ನ ಕುಡಿ
ಆಕೆ ಎನ್ನುವಳು  'ಉಳಿಸಿಕೊಳ್ಳೋ ನನ್ನ'

ನನ್ನ ಕಣ್ಣಲಿ ಧಾರಾಕಾರ ನೀರು
ಚಿಂತೆ ಬೇಡವ್ವ ನಿನಗೆ
ನಿನ್ನ ಕುಡಿಯಲ್ಲವೇ ನಾನು
ಹೇಳಿ ಮಾಡಿಸಬೇಕೇ ಇದನು
ಬಿಡು ಬಿಡೆಂದು ಅವ್ವನ ಸಂತೈಸಿ

ಬೀದಿಗಿಳಿದು ಅವಳಿದ್ದ
ಹಟ್ಟಿದಾರದಂಗಳೆಲ್ಲಾ ತಡಕಿದೆ,
ಸಿಕ್ಕ ಸಿಕ್ಕವರಲ್ಲಿ ಕೂಗಿ  ಕೂಗಿ
ಪ್ರಲಾಪಿಸಿದೆ, ನಿಮ್ಮನ್ನು ಎತ್ತಿ ಆಡಿಸಿದವಳಿವಳು
ಮರೆಯದಿರೆಂದು ಎಚ್ಚರಿಸಿದೆ

ಅವರಿಗೇನು ಅಡ್ಡಿಯೋ
ಕೆಲವರು ಹಣದ ಹೊಳೆಯೊಳಗೆ ತೇಲುತ್ತಿದ್ದರು
ಕೆಲವರು ಮದದ ಗೋಡೆಗೆ ಒರಗಿಕೊಂಡಿದ್ದರು
ನಾನು ಅವಲತ್ತಿದ್ದು ಅವರ ಕಿವಿಗೆ
ತಾಗಿರುವುದು ಅನುಮಾನವೇ

ಕೆಲವರು ನನ್ನ ದಾರಿಗಾರರು
ಸಿಕ್ಕಿದರು, ನಾನು ಕುಣಿದಾಡಿದೆ
ಆದರೆ ಬಡತನ ಅವರಿಗೆ ಇನ್ನಿಲ್ಲದಂತೆ
ಒಳಗೊಳಗೇ ಇರಿಯುತ್ತಿತ್ತು
ಬದುಕೇ ದುರ್ಭರವಾಗುತ್ತಿತ್ತು

ಯಾರಾದರೂ ಉಳಿಸಿರೆಂದು ಕೈ
ಕಾಲು ಕಟ್ಟಿ  ಬೇಡಲು ನೆರೆ ಮನೆಯವರು
ಆಡಿಕೊಂಡು ನಕ್ಕರೆ
ಎನ್ನುವ ಭೀತಿ ಆಂತರ್ಯವನ್ನು ಸುಡುತ್ತಿತ್ತು
ನೋಡಲಾರೆ ಈ ಪರಿಯ

ಆಕೆಯ ಸೊರಗುವಿಕೆ ಏರುತ್ತ
ಸಾಗಿತು, ನನ್ನ ಮನಸ್ಸಿಗೆ ಭಾರ
ತೀವ್ರವಾಯಿತು. ನನ್ನ ಕಣ್ಣ ಮುಂದೆಯೇ
ಕೊನೆಯಾಗುವ ಕಥೆಯೊಂದನ್ನು
ನಾನ್ ತಡೆಯಲೇಬೇಕೆಂದು

ಪಣವಾಯಿತು, ಅಂದುಕೊಂಡಿದ್ದಕ್ಕೆ
ಕಚ್ಚೆ ಕಟ್ಟಿ ನಿಂತಿದ್ದು ಆಯಿತು
ಆ ಭಾವಕ್ಕೆ ನಾ ಮೋಸ ಮಾಡಲಾರೆ
ಆ ಭಾವಕ್ಕೆ ಕೇಡೆಣಿಸಲಾರೆ
ಭಾವವೂ ತಾಯಿಯಲ್ಲವೇ!?


ಕಾಯಕ ಯೋಗಿಯ ಶ್ರೀಪಾದುಕೆ

ಅದು 2010 ಶಿವರಾತ್ರಿ ಹಬ್ಬದ ಮರುದಿನ ನಾನು ಸಿದ್ಧಗಂಗೆಗೆ ಹೋಗಿದ್ದೆ. ಬೆಂಗಳೂರಿನಿಂದ ರೈಲಿನಲ್ಲಿ ಹೋಗಿ ಬರುವುದಕ್ಕೂ ಹತ್ತಿರವೂ ಹಾಗು ಕಡಿಮೆ ಖರ್ಚು ಆದ್ದರಿಂದ ಸಿದ್ಧಗಂಗೆ ನಮಗೆಲ್ಲ ಕೂಗಳತೆ ದೂರದಲ್ಲೇ ಇದ್ದಂತೆ ಭಾಸವಾಗುತ್ತಿತ್ತು. ಕ್ರಮೇಣ ಸಮಯ ಸಿಕ್ಕಾಗಲೆಲ್ಲ ಸಿದ್ಧಗಂಗೆಗೆ ಹೋಗಿ  ಬರುವುದೇ ಒಂದು ಚಾಳಿಯಾಗಿಹೋಯಿತು. ನಾನು ಸಿದ್ಧಗಂಗೆ ಹೋಗಿ ಬಂದರೂ ಎಷ್ಟೋ ದಿನ ಮನೆಯಲ್ಲಿ ಗೊತ್ತೇ ಇರುತ್ತಿರಲಿಲ್ಲ. ಹಾಗಿರುತ್ತಿತ್ತು ನನ್ನ ಸಿದ್ಧಗಂಗೆ ಭೇಟಿ. ವಾಡಿಕೆಯಂತೆ ಶಿವರಾತ್ರಿ ಹಬ್ಬದ ಮರುದಿನವೇ ಸಿದ್ಧಗಂಗೆಯಲ್ಲಿ ಶ್ರೀ ಸಿದ್ದಲಿಂಗೇಶ್ವರ ಜಾತ್ರೆ. ಜಾತ್ರೆಗಾಗಿ ರಥ ಸಿದ್ದವಾಗಿ ನಿಂತಿತ್ತು, ಸಿದ್ಧಗಂಗೆಯ ಸುತ್ತ ಮುತ್ತಲಿನ ವ್ಯಾಪಾರಿಗಳು ತಮ್ಮ ಅಂಗಡಿ ಮುಂಗಟ್ಟುಗಳನ್ನು ಮಠದ ಆವರಣದಲ್ಲಿ ತೆರೆದು ಭರ್ಜರಿ ವ್ಯಾಪಾರಕ್ಕೆಂದು ತಯಾರಾಗಿ ಕೂತಿದ್ದರು. ನಾನು ಸಿದ್ಧಗಂಗೆಗೆ ಹೋದಾಗಲೆಲ್ಲ ಗಂಟೆಗಟ್ಟಲೆ ಸ್ವಾಮೀಜಿಯವರನ್ನೇ ತದೇಕ ಚಿತ್ತದಿಂದ ನೋಡುತ್ತಾ ನಿಂತಿರುತ್ತಿದ್ದೆ. ಅವರನ್ನು ನೋಡಲು ಶುರು ಮಾಡಿದರೆ ಅಲ್ಲಿಂದ  ಕಣ್ಣು ತೆಗೆಯುವ ಮನಸ್ಸೇ ಆಗುತ್ತಿರಲಿಲ್ಲ ನನಗೆ. ಸ್ವಾಮೀಜಿ ಕೂತ ಸ್ಥಳ ಬದಲಿಸಿ ಎಲ್ಲಾದರೂ ಹೊರಟರೆ ನಾನು ಅವರ ಹಿಂದೆಯೇ ಹೋಗುತ್ತಿದ್ದೆ.ಅವರ ಶ್ರೀ ಮಠದಲ್ಲಿ ಯಾರಿಗೂ ನಿರ್ಬಂಧವಿಲ್ಲದ ಕಾರಣ ಅಲ್ಲಿಗೂ ನಾನು ಹೋಗಿ ಅವರನ್ನೇ ನೋಡುತ್ತಾ ನಿಂತಿರುತ್ತಿದ್ದೆ. ಅಲ್ಲಿಂದ ಹಿಂತಿರುಗಿ ಬರಲು ಮನಸ್ಸು ಮಾಡುತ್ತಿದ್ದುದೇ ಸುಮಾರು ಮೂರುವರೆ ಗಂಟೆಗೆ ಬೆಂಗಳೂರಿಗೆ ಹೊರಡುವ ರೈಲಿನ ಸಮಯ ಜ್ಞಾಪಿಸಿಕೊಂಡಾಗ ಮಾತ್ರ.

ಹೇಳಿ ಕೇಳಿ ಅದು ರಥೋತ್ಸವದ ದಿನ, ಸ್ವಾಮೀಜಿ ತಮ್ಮ ದೈನಂದಿನ ಕಾರ್ಯಗಳ ಜತೆಗೆ ಇನ್ನು ಅನೇಕ ಕಾರ್ಯಕ್ರಮಗಳನ್ನು ನಿಭಾಯಿಸಬೇಕಾಗಿತ್ತು. ಮಠದ ಅಡುಗೆ ಒಪ್ಪಾರು ಗುಡಿಸುವ ಕೆಲಸದಿಂದ ಹಿಡಿದು ಮಠದ ಕಾರ್ಯಭಾರಗಳ ಬಗ್ಗೆ ರಾಜ್ಯ, ಕೇಂದ್ರ ಸರ್ಕಾರಗಳೊಡನೆ ಸಮಾಲೋಚಿಸುವ ವರೆವಿಗೂ ಇನ್ನು ಮೀರಿ ಅಗತ್ಯ ಬಿದ್ದರೆ ವಿದೇಶಿ ಸಂಘಸಂಸ್ಥೆಗಳೊಡನೆಯೂ ಮಾತುಕತೆ ನಡೆಸುವ ವರೆಗೂ ಎಲ್ಲದಕ್ಕೂ ಸ್ವಾಮೀಜಿ ತುದಿಗಾಲಲ್ಲಿ  ನಿಂತಿರುತ್ತಿದ್ದರು.ಎಲ್ಲವನ್ನು ತಮ್ಮದೇ ಕೆಲಸವೆನ್ನುವಷ್ಟು ಶ್ರದ್ಧೆಯೂ ಅವರ ಪಾಲ್ಗೊಳ್ಳುವಿಕೆಯಲ್ಲಿಯೂ ಎದ್ದು ಕಾಣುತ್ತಿತ್ತು. ಕೆಲವೊಮ್ಮೆ ಸಿದ್ಧಗಂಗೆಗೆ ಭೇಟಿಕೊಟ್ಟ ಯುವಕರು ಕೂಡ ಸ್ವಾಮೀಜಿಯವರ ಕಾರ್ಯಪ್ರವೃತ್ತತೆ ಕಂಡು ನಾಚಿಕೊಂಡ ಉದಾಹರಣೆಗಳು ಇವೆ.

ಅಂದು ಎಂದಿನಂತೆಯೇ ಆಯಿತು. ನಾನು ಸಿದ್ಧಗಂಗೆಗೆ ಹೋದಾಗ ಸ್ವಾಮೀಜಿ ಮಠದ ಮುಂದಿನ ಕಟ್ಟಿಗೆಯ ಬೆಂಚಿನ  ಮೇಲೆ ಆಸೀನರಾಗಿದ್ದರು. ಭಕ್ತರೆಲ್ಲ ಅವರ ಕಾಲು ಮುಟ್ಟಿ ನಮಸ್ಕರಿಸಿ ಧನ್ಯತಾ ಭಾವ ತಳೆಯುತ್ತಿದ್ದರು. ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯನ್ನು ನಗಿಸುವುದು, ಅಳಿಸುವುದು ಅಥವಾ ಭಾವಾವೇಶದ ಹೊಳೆಯಲ್ಲಿ ಕೊಚ್ಚಿಹೋಗುವಂತೆ ಮಾಡುವುದು ವಿರಳವೇನಲ್ಲ. ಆದರೆ ಒಬ್ಬ ವ್ಯಕ್ತಿಯ ಸಾಮಿಪ್ಯದಿಂದ ಧನ್ಯತಾ ಭಾವ ಪಡೆಯುವುದು ಅಥವಾ ಎದುರಿನ ವ್ಯಕ್ತಿಯಲ್ಲಿ ಭಕ್ತಿ ಭಾವ ಪ್ರವಹಿಸುವಂತೆ ಮಾಡುವುದು ಸುಲಭದ ಮಾತಂತೂ ಅಲ್ಲವೇ ಅಲ್ಲ.  ಆದರೆ ಸಿದ್ಧಗಂಗೆಯಲ್ಲಿ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ಅಂತದ್ದೊಂದು ಘಟನೆ ಜರುಗುತ್ತಿರುವುದನ್ನು ಕಂಡೆ. ಎಂದಿನಂತೆ ಅವರನ್ನೇ ನೋಡುತ್ತಾ ನಿಂತೆ.  ಕೆಲವು ಸಮಯವಾಯಿತು ನಂತರ ಸ್ವಾಮೀಜಿ ನಿಧಾನಕ್ಕೆ ಎದ್ದು ಕೋಲೂರಿಕೊಂಡು ಸಾದರ ಕೊಪ್ಪಲ ಬಳಿಯ ಅಡುಗೆ ಮಾಡುತ್ತಿದ್ದ ಒಪ್ಪಾರಿಗೆ ಬಂದು ಅಲ್ಲಿ ಬೇಯಿಸಿ ಕಡಾಯದೊಳಗೆ ತುಂಬಿದ್ದ ಅನ್ನವನ್ನೊಮ್ಮೆ ಮುಟ್ಟಿ ಪರೀಕ್ಷಿಸಿದರು. ಎಲ್ಲ ಅಡುಗೆ ಬೇಯುತ್ತಿದ್ದ ಕಡಾಯಗಳ ಬಳಿಗೂ ಹೋಗಿ ಆದೇನೆಂದು ಪರೀಕ್ಷಿಸಿ ಬರುತ್ತಿದ್ದರು. ಕೊನೆಯ ಕಡಾಯ ಬಂದಾಗ ಸ್ವಾಮೀಜಿ ಹಿಂದಕ್ಕೆ ತಿರುಗಿ ಅಲ್ಲಿದ್ದ ಒಬ್ಬ ಅಡುಗೆ ಭಟ್ಟರನ್ನು ಕೇಳಿದರು, "ಇವತ್ತು ಪಾಯಸ ಮಾಡ್ಬೇಕಾಗಿತ್ತು, ಮಾಡಿಲ್ಲವೋ. ನುಚ್ಚಕ್ಕಿ ಖಾಲಿಯಾಗಿದೆಯಾ" ಎಂದು ಕೇಳಿದರು. ಅಲ್ಲಿದ್ದ ಭಟ್ಟ "ಬುದ್ಧೀ, ಈ ಹಂಡೆಯೊಳಗೆ ಬೇಯುತ್ತಿರುವುದು ಪಾಯಸವೇ" ಎಂದಾಗ ಸ್ವಾಮೀಜಿ ಸ್ವಲ್ಪ ನಿರಾಳವಾಗಿ ಮುನ್ನಡೆದರು.

ಕಾಯಕಯೋಗಿ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮಿಗಳು





ದೇಶದ ಪ್ರಧಾನಿಯಿಂದ ಗೌರವ ನಮನ


                                    108ರ ಹೊಸ್ತಿಲಲ್ಲಿ ಬರಿಗಣ್ಣಿಂದಲೇ ದಿನ ಪತ್ರಿಕೆ ವಾಚನ


ಭಾನುವಾರ, ಮಾರ್ಚ್ 5, 2017

ಗ್ರೆಗೋರಿಯನ್ ಕ್ಯಾಲೆಂಡರ್ ಹಾಗು ಹಿಂದೂ ಪಂಚಾಗ ಪದ್ಧತಿ

ಹಿಂದೂ ಧರ್ಮ ಕಾಲ ಗಣನೆಯಲ್ಲಿ 'ಹೋರಾ' ಎನ್ನುವ ಪದ ಬಹಳ ಮುಖ್ಯವಾಗಿರುವುದು ಇದೀಗಾಗಲೇ ಗೊತ್ತಿರುವ ವಿಚಾರ.ಹೋರಾ ಎಂಬ ಪದವನ್ನು ಸಂಸ್ಕೃತದ 'ಅಹೋರಾತ್ರಿ' ಎಂಬ ಪದದಿಂದ ಪಡೆಯಲಾಗಿದೆ.  ದಿನದ ಒಂದು ಘಂಟೆಯ ಅವಧಿಯನ್ನು ಹೋರಾ ಎಂದು ಪರಿಗಣಿಸಲಾಗುತ್ತದೆ. ಪ್ರತೀ ಹೋರಾದ ಮೇಲೂ ಏಳು ಗ್ರಹಗಳ ಪೈಕಿ ಒಂದಿಲ್ಲೊಂದು ಗ್ರಹದ ನಿಗ್ರಹವಿರುತ್ತದೆ. ದಿನದಲ್ಲಿ ಇಪ್ಪತ್ತನಾಲ್ಕು ಗಂಟೆಯೂ ಒಂದಿಲ್ಲೊಂದು ಗ್ರಹ ನಿಗ್ರಹದಲ್ಲಿ ತೊಡಗಿರುತ್ತವೆ ಎನ್ನುವುದು ಹಿಂದೂ ಪಂಚಾಗ ಪದ್ಧತಿಯ ಅಭಿಪ್ರಾಯ. ಯಾವ ಹೋರಾದಲ್ಲಿ ಯಾವ ಕೆಲಸ ಮಾಡಿದರೆ ಶ್ರೇಯಸ್ಸು ಎಂಬುದರ ಬಗ್ಗೆಯೂ ಹಿಂದೂ ಪಂಚಾಗ ಪದ್ಧತಿಯಲ್ಲಿ ಹಲವಾರು ಮಾಹಿತಿ ದೊರೆಯುತ್ತವೆ. ಇವೆಲ್ಲವೂ ಹಿಂದೂ ಧರ್ಮದೊಳಗಿನ ವಿಚಾರಗಳು ಎಂದುಕೊಳ್ಳುವಷ್ಟರಲ್ಲಿಯೇ ಇಂಗ್ಲೀಷ್ ನಲ್ಲೂ ಒಂದು ಘಂಟೆಯ ಅವಧಿಗೆ 'ಹವರ್' ಎಂದು ಕರೆಯುವುದಕ್ಕೂ ಹಿಂದೂ ಕಾಲಗಣನೆಯ ಹೋರಾ ಉಚ್ಛಾರದಲ್ಲಷ್ಟೇ ಅಲ್ಲದೆ ಅದನ್ನು ಮೀರಿದ ಯಾವುದೋ ಒಂದು  ಸಂಬಂಧವಿರುವುದು ಖಾತ್ರಿಯಾಗುತ್ತದೆ.

ಇದುವರೆವಿಗೂ ಕಂಡಿರುವ ಪ್ರಾಗಿತಿಹಾಸಗಳಲ್ಲಿ ಹಿಂದೂ ಹಾಗು ಗ್ರೀಕ್ ಕಾಲಗಣನೆಗೆ ಸರಿಸಾಟಿಯಾಗಿ ನಿಲ್ಲುವಂತಹ ಬೇರೆ ಯಾವ ಕಾಲ ಮಾಪಕಗಳು ಚಾಲ್ತಿಯಲ್ಲಿದ್ದ ಕುರುಹೇ ಇಲ್ಲ. ಅದೇ ಕಾಲದಲ್ಲಿಯೇ ಸುಮೇರಿಯನ್ನರು ಹಾಗು ಮೆಸಪೊಟೋಮಿಯನ್ನರು ಕಾಲ ಮಾಪನಕ್ಕೆ ಗ್ರೀಕ್ ಶೈಲಿ ಅಥವಾ ಭಾರತದ ಶೈಲಿಯನ್ನು ಅನುಸರಿಸುತ್ತಿದ್ದುದು ಜ್ಞಾಪದಲ್ಲಿಟ್ಟುಕೊಳ್ಳಬೇಕಾದ ವಿಷಯ. ಭಾರತದೊಂದಿಗೆ ಪಾಶ್ಚಿಮಾತ್ಯ ಹಾಗು ಮಧ್ಯ ಪ್ರಾಚ್ಯ ರಾಷ್ಟ್ರಗಳು ಸಂಬಂಧ ಕುದುರಿಸಿಕೊಂಡಿದ್ದೆ ಕಾಲ ಗಣನೆ, ಖಭೌತ ವಿಜ್ಞಾನ ಹಾಗು ಗಣಿತ ಶಾಸ್ತ್ರಗಳ ಮುಖಾಂತರ. ಈಗಿನ ಯುರೋಪಿಯನ್ ಹಾಗು ಅಮೆರಿಕೆಯ ಸ್ಥಳಗಳಲ್ಲಿ ಮನುಷ್ಯನು ಇನ್ನು ನಾಗರೀಕತೆಯನ್ನೇ ಕಲಿಯದೇ ಇರುತ್ತಿದ್ದಾಗ ಭಾರತದಲ್ಲಿ ಖಭೌತ ಶಾಸ್ತ್ರ ಪ್ರೌಢ ಸ್ಥಿತಿಯಲ್ಲಿತ್ತು ಎನ್ನುವಾಗ ಅದಕ್ಕೆ ಮೂಲಾಧಾರವಾದ ಗಣಿತ ಶಾಸ್ತ್ರ ಯಾವ ಮಟ್ಟದಲ್ಲಿತ್ತು ಎನ್ನುವುದನ್ನು ಪ್ರತ್ಯೇಕವಾಗಿ ಬಿಡಿಸಿ ಹೇಳುವ ಅವಶ್ಯಕತೆಯಿಲ್ಲವೇ ಇಲ್ಲ.

ಇದೇ ಸಂಬಂಧ ಗಣಿತ ಶಾಸ್ತ್ರ ಹಾಗು ವಿಜ್ಞಾನಗಳಲ್ಲಿ ಭಾರತ ಉಪಖಂಡ ತನ್ನ  ಸೀಮಾ ರೇಖೆಯನ್ನು ದಾಟಿ ಬೇರೆ ರಾಷ್ಟ್ರಗಳೊಂದಿಗೆ ವ್ಯವಹರಿಸಲು ನಾಂದಿಯಾಯಿತು ಹಾಗು ಸಂಖ್ಯಾ ಶಾಸ್ತ್ರದಲ್ಲಿನ ಕೊಳು ಕೊಡುಗೆ ವ್ಯವಹಾರವನ್ನು ಶುರು ಮಾಡಲು ಅವಕಾಶವಾಯಿತು. ಇಷ್ಟಾದರೂ ಕೆಲವೊಂದು ಭಾರತದಿಂದ ರಫ್ತಾದ ಅಂಶಗಳು ಇನ್ನು ಗ್ರೆಗೋರಿಯನ್ ಕ್ಯಾಲಂಡರ್ ನಲ್ಲಿ ಉಳಿದುಕೊಂಡಿವೆ ಹಾಗು ಅದು ಗ್ರೀಕ್-ಭಾರತ ಕಾಲಮಾನ ಪದ್ಧತಿಯಲ್ಲಿದ್ದ ಹೋಲಿಕೆಯನ್ನು ತೋರ್ಪಡಿಸುತ್ತದೆ. ಉದಾಹರಣೆಗೆ ಗ್ರೀಕ್ ಭಾಷೆಯಲ್ಲಿ ಸಂಖ್ಯೆ ೭ ಕ್ಕೆ ಸೆಪ್ಟಾ, ೮ಕ್ಕೆ ಅಕ್ಟಾ, ೯ಕ್ಕೆ ಸಂಸ್ಕೃತದ ನವ, ೧೦ಕ್ಕೆ ಸಂಸ್ಕೃತದ ದಶ ಹಾಗು ಗ್ರೀಕ್ ನ ಡೆಕಾ ಹೋಲಿಕೆಯನ್ನು ಅವಗಣನೆಗೆ ತೆಗೆದುಕೊಂಡರೆ, ವರ್ಷದ ಸೆಪ್ಟೆಂಬರ್ ತಿಂಗಳು ಎಂದರೆ ಏಳನೇ ತಿಂಗಳು ಎಂದಾಗುತ್ತದೆ. ಅಕ್ಟೋಬರ್ ಎಂಟನೇ ತಿಂಗಳು, ನವೆಂಬರ್ ಒಂಬತ್ತನೇ ತಿಂಗಳು ಆಗುತ್ತದೆ. ಹೀಗಿದ್ದರೂ ಇದೀಗ ಪ್ರಚಲಿತ ಕಾಲ ಮಾಪನದಲ್ಲಿ ಡಿಸೆಂಬರ್ ಹನ್ನೆರಡನೇ ತಿಂಗಳಿಗೆ ಸರಿದು ಹೋಗಿರುವುದನ್ನು ಗಮನಿಸಬಹುದು. ನವೆಂಬರ್ ಎನ್ನುವ ಹೆಸರು ಸಂಸ್ಕೃತದಲ್ಲೂ ಹಾಗು ಗ್ರೀಕ್ ನಲ್ಲೂ ಒಂಬತ್ತನೆಯ ತಿಂಗಳು ಎಂದೇ ಗುರುತಿಸಿಕೊಳ್ಳುತ್ತದೆ. ಆದರೆ ಆಧುನಿಕ ಜಾಗತಿಕ ಕ್ಯಾಲೆಂಡರ್ ನವೆಂಬರ್ ಅನ್ನು ಹನ್ನೊಂದನೇ ತಿಂಗಳಾಗಿಸಿದೆ. ಆದರೆ ನವೆಂಬರ್ ಅನ್ನುವ ಪದ ಹುಟ್ಟಿದ್ದು ಒಂಬತ್ತನೇ ತಿಂಗಳನ್ನು ತನ್ಮೂಲಕ ತಿಳಿಯಪಡಿಸಲು ಎನ್ನುವ ಅರಿವು ಈಗಿನ ಜನಾಂಗಕ್ಕೆ ಇದ್ದಂತಿಲ್ಲ. ಬೇರೆ ಜನಾಂಗಕ್ಕೆ ಇಲ್ಲದಿದ್ದರೂ ಭಾರತೀಯರಲ್ಲೂ ಹಾಗು ಗ್ರೀಕರಲ್ಲೂ ಅಂತಹ ಭಾವ ಮೇಳೈಸಿ ಇವುಗಳನ್ನು ತಿಳಿದುಕೊಳ್ಳುವ ಮನಸ್ಸು ಮಾಡಬೇಕಿತ್ತು, ಆದರೆ ನಿಜ ಸ್ಥಿತಿಯಲ್ಲಿ ಹಾಗಾಗಿಲ್ಲ ಎನ್ನುವುದು ಖೇದಕರ ಸಂಗತಿ.

ಹಿಂದೂ ಕಾಲ ಗಣನೆಯ ಪದ್ಧತಿ ಅಥವಾ ಭಾರತ ಉಪಖಂಡದ ಪುರಾತನ ಕಾಲ ಮಾಪನದಲ್ಲಿಯೂ ಯುಗಾದಿಯನ್ನು ವರ್ಷದ ಆದಿಯೆಂದು ಪರಿಗಣಿಸಿ ಯುಗಾದಿ ವರ್ಷದ ಮೊದಲ ದಿನವಾಗಿ ಆಚರಿಸಲ್ಪಡುತ್ತದೆ. ಸರ್ವೇ ಸಾಮಾನ್ಯ ಯುಗಾದಿ ಹಬ್ಬ ಈಗಿನ ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಮಾರ್ಚ್ ತಿಂಗಳಲ್ಲಿ ಅಂದರೆ ಮೂರನೇ ತಿಂಗಳಲ್ಲಿ ಬರುತ್ತದೆ. ಯಥಾವತ್ ಯುಗಾದಿಯಿಂದ ಪರಿಗಣಿಸಿದಾಗ ಈಗಿನ ಡಿಸೆಂಬರ್ ಹತ್ತನೇ ತಿಂಗಳೇ ಆಗುತ್ತದೆ. ಆದ್ದರಿಂದ ಸೆಪ್ಟೆಂಬರ್ ನಿಂದ ಡಿಸೆಂಬರ್ ವರೆಗಿನ ತಿಂಗಳುಗಳು ಇಂಗ್ಲೀಷ್ ಉಡುಪು ಧರಿಸಿ ಜಾಗತೀಕರಣ ಹೆಸರಿನಲ್ಲಿ ಅಂತಾರಾಷ್ಟೀಯ ಕಾಲ ಮಾಪನದಲ್ಲಿ ಸೇರಿಕೊಂಡರೂ ತಮ್ಮ ಹಳೆಯ ಗ್ರೀಕ್ ಹಾಗು ಸಂಸ್ಕೃತ ಉಚ್ಚಾರಣೆಗಳನ್ನು ಬದಲಿಸಿಕೊಳ್ಳಲು ಇಲ್ಲ ಹಾಗು ಬದಲಿಸಿ ಕೊಳ್ಳುವುದು ಇಲ್ಲ. ಮದ್ಯದಲ್ಲಿ ಪಶ್ಚಿಮದಲ್ಲಿ ಆಳಿ ಅಜರಾಮರರಾದ ಜೂಲಿಯಸ್ ಸೀಸರ್ ನಂತವರ ಹೆಸರು ಜುಲೈ ಎಂಬಂತಹ ತಿಂಗಳುಗಳೊಳಗೆ ಸಮ್ಮಿಳಿತವಾಗಿ ಹೊಸ ಬಗೆಯ ತಿಂಗಳುಗಳು ಬಂದು ಅಲ್ಲೂ ವರ್ಷದಲ್ಲಿ ಹನ್ನೆರಡೇ ತಿಂಗಳು ಬರುವಂತೆ ಆಯಿತು.

ಕಂಡ ಕಂಡ ಭಾಷೆಗಳಿಂದ ಸಾಲ ಪಡೆದು  ತನ್ನ ಅಗಾಧತೆಯನ್ನು, ಪ್ರಾಬಲ್ಯವನ್ನು ವಿಸ್ತರಿಸಿಕೊಳ್ಳುತ್ತಿರುವ ಇಂಗ್ಲೀಷ್ ಭಾಷೆ ಗ್ರೀಕ್ ಹಾಗು ಸಂಸ್ಕೃತದಿಂದ ತಿಂಗಳುಗಳ ಹೆಸರುಗಳನ್ನೂ ಎರವಲಾಗಿ ಪಡೆಯಿತು ಆದರೆ ಅದರ ಅರ್ಥವನ್ನು ಜೀರ್ಣಿಸಿಕೊಳ್ಳಲು ಸಮಯವಿಲ್ಲದೆ  ಹೋಯಿತೋ ಏನು ಕಥೆಯೋ ಬಲ್ಲವರು ಯಾರು ?. ಅಂತೂ ಪಡೆದ ಪದಗಳಿಗೆ ಇನ್ನೊಂದು ರೂಪು ಕೊಡದೆ ಯಥಾವತ್ತಾಗಿ ಇಂಗ್ಲಿಷ್ ಗೆ ಭಟ್ಟಿ ಇಳಿಸಿ ಬಳಸಲು ಆರಂಭ ಮಾಡಿಯೇ ಬಿಟ್ಟಿತು. ಪ್ರಜ್ಞಾವಂತ ಪ್ರಭುಗಳು ಅದೇನೆಂದು ವಿಶ್ಲೇಷಿಸದೆ ಇರುವುದನ್ನೇ ಬಿಗಿದಪ್ಪಿಕೊಂಡರು. ನಮ್ಮದು ತಮ್ಮದು ಎನ್ನುವ ಅಭಿಮಾನವಿದ್ದವರು ಅಲ್ಲಿ ಇಲ್ಲಿ ಸ್ವಲ್ಪ ಓದಿ, ಆಲೋಚಿಸಿ ತಿಳಿದುಕೊಂಡರು. ಇನ್ನುಳಿದವರು ಜಾಣ ಮೌನ ಪ್ರದರ್ಶಿಸಿದರು.ಸದ್ಯಕ್ಕೆ ಈ ವಿಚಾರವಾಗಿ ನನ್ನ ಕಣ್ಣಿಗೆ ಬೀಳುತ್ತಿರುವ ಎಲ್ಲರೂ ಜಾಣ ಮೌನಿಗಳೇ. ನಾನು ಅದೇ ಆಗಿದ್ದೆ, ಆದರೆ ಈಗ ಹಾಗಿಲ್ಲವಷ್ಟೆ!!

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...