ಭಾನುವಾರ, ಏಪ್ರಿಲ್ 23, 2017

ಬಂದು ಹೋಗುವ ನಡುವೆ

ಜಗದಂಗಳಕ್ಕೆ ಬರಲು ಆಹ್ವಾನವಿಲ್ಲ
ಅಲ್ಲಿಂದ ನಿರ್ಗಮಿಸಲು ಆಹ್ವಾನವಿಲ್ಲ
ಬಂದು ಹೋಗುವ ನಡುವೆ ಆಹ್ವಾನವಿಲ್ಲದ
ಕೌತುಕಗಳಿಗೆ ನಾವು ಹೋಗುವುದೇ ಇಲ್ಲ

ಇಲ್ಲಿಗೆ ಬರುವಾಗ ಗುರುವಿರಲಿಲ್ಲ
ಇಲ್ಲಿಂದ ಹೋಗುವಾಗ ಗುರಿಯಿರುವುದಿಲ್ಲ
ಬಂದು ಹೋಗುವ ನಡುವೆ ಗುರು, ಗುರಿಗಳಿಗೆ
ನಮ್ಮ ನಾವು ಸಮರ್ಪಿಸಿಕೊಂಡುಬಿಟ್ಟೆವಲ್ಲ!!

ಅಲ್ಲಿಂದ ಬರುವಾಗ ಆಸೆ ಮೋಹಗಳಿರಲಿಲ್ಲ
ಇಲ್ಲಿಂದ ಹೋಗುವಾಗ ಅವುಗಳ ತೊರೆಯಲು ಆಸ್ಪದವೇ ಇಲ್ಲ
ಭುವಿಯ ಮಕ್ಕಳು ನಾವು, ಅದರ ಎರವಲು  ಈ ದೇಹ,
ಹಿಂದಿರುಗಿ ಋಣಮುಕ್ತರಾಗಲು ಭಾದ್ಯರಲ್ಲವೇ ನಾವು

ಹುಟ್ಟು ಅರಿಯದ ಜೀವಿ ಜಗದೊಳಗಿಲ್ಲ
ಮಸಣಕೆ ಬಂಧುಗಳಾಗದ ಜನರು ಇಲ್ಲಿಲ್ಲ
ಹುಟ್ಟು-ಸಾವು ಗಳೊಳಗೆ ಬಡಿದಾಡಿ ಬಸವಳಿದರೂ
ನಿಜ ಸ್ಥಿತಿ ಮನುಜನಿಗರ್ಥವಾಗಲೇ ಇಲ್ಲ!!


ಭಾನುವಾರ, ಏಪ್ರಿಲ್ 16, 2017

ಸ್ವಾಮಿಗಳಿಗೆ ಅಧಿಕಾರ ಗದ್ದುಗೆ

ಇತ್ತೀಚಿಗೆ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆ ನಡೆದು ಫಲಿತಾಂಶ ಪ್ರಕಟವಾದಾಗ ದೇಶದ ಇತಿಹಾಸದಲ್ಲಿ ಅಪರೂಪ ವೆನಿಸುವಂತಹ ಘಟನೆಯೊಂದು ಘಟಿಸಿಬಿಟ್ಟಿತು. ಅದು ವಿರಕ್ತ ಸ್ವಾಮೀಜಿಯೊಬ್ಬರು ಉತ್ತರ ಪ್ರದೇಶದ ಮುಖ್ಯಮಂತ್ರಿ ಗಾದಿಗೆ ಏರಿದ್ದು. ಹೇಳಿ ಕೇಳಿ ಉತ್ತರ ಪ್ರದೇಶ ಭಾರತದೊಳಗೆ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯ, ಅದರ ಜನಸಂಖ್ಯೆ ಬರೋಬ್ಬರಿ ೨೨ ಕೋಟಿ. ಜಗತ್ತಿನ ದೊಡ್ಡದೇಶಗಳೇ ಅಷ್ಟು ಜನಸಂಖ್ಯೆ ಹೊಂದಿಲ್ಲ.  ರಷ್ಯಾ, ಕೆನಡಾ ದೇಶಗಳೇ ಜನಸಂಖ್ಯೆಯಲ್ಲಿ ಉತ್ತರ ಪ್ರದೇಶಕ್ಕೂ ಸ್ವಲ್ಪ ಹಿಂದೆ ನಿಲ್ಲುತ್ತವೆ ಎಂದರೆ ಉತ್ತರ ಪ್ರದೇಶ ಭಾರತ ದೇಶದ ರಾಜಕೀಯದಲ್ಲೂ ತನ್ನದೇ  ಛಾಪು ಮೂಡಿಸಿಕೊಂಡಿರುವುದು ಅಷ್ಟೇ ಸ್ಪಷ್ಟ. ಭಾರತದ ವೈದಿಕ ಕಾಲದಿಂದಲೂ ವರ್ಣಾಶ್ರಮದ ಪ್ರಕಾರ ಕ್ಷತ್ರೀಯರು ಆಳ್ವಿಕೆ ಮಾಡುವಲ್ಲಿ ನಿಸ್ಸೀಮರಾಗಿದ್ದರೂ ಕಾನೂನು ಕಟ್ಟಳೆಗಳ ನಿರ್ಮಾಣ ಕಾರ್ಯದಲ್ಲಿ ಬ್ರಾಹ್ಮಣರ, ಸಾಧು ಸನ್ಯಾಸಿಗಳ , ಜ್ಞಾನಿಗಳ ಸಲಹೆ ಪಡೆಯುತ್ತಿದ್ದು ನಿಜ. ಆದರೆ ಆಡಳಿತ ವಿಚಾರದಲ್ಲಿ ಹಸ್ತಕ್ಷೇಪ ಮಾಡುವ ಆಧಿಕಾರ ಅಲ್ಲಿಯೂ ಮೇಲ್ವರ್ಗಕ್ಕೆ ಇರಲಿಲ್ಲವೆನ್ನುವುದು ಅಷ್ಟೇ ನಿಜವಾದ ಸಂಗತಿ.

ಭಾರತ ತನ್ನ ಗತ ವೈಭವ ಕಾಲದಿಂದ ಕಂಡಂತೆಯೂ ಎಲ್ಲಿಯೂ ಸಾಧುಗಳಿಗೆ, ಸ್ವಾಮೀಜಿಗಳಿಗೆ ಅಧಿಕಾರ ಗದ್ದುಗೆ ದೊರಕಿರಲಿಲ್ಲ. ಆದ ಕಾರಣ ಈಗ ಉತ್ತರ ಪ್ರದೇಶದಲ್ಲಿ ನಡೆದಿರುವ ವಿದ್ಯಮಾನ ಸತ್ಯ ಯುಗದಲ್ಲಿ ವಿಶ್ವಾಮಿತ್ರ ಮಹರ್ಷಿಗಳ ನಂತರ ಇದೆ ಮೊದಲ ಬಾರಿಗೆ ಕಲಿಯುಗದಲ್ಲಿ ನಡೆಯಿತೇನೋ ಎನಿಸುತ್ತಿದೆ. ಆಗ ಹರಿಶ್ಚಂದ್ರನಿಂದ ಪರೀಕ್ಷಾರ್ಥವಾಗಿ ವಿಶ್ವಾಮಿತ್ರರು ಸಿಂಹಾಸನ ಪಡೆದುಕೊಂಡು ರಾಜ್ಯ ಭಾರ ನಡೆಸಿದ್ದರು. ಇದೀಗ ಜನರೇ ಆರಿಸಿ ಗೆಲ್ಲಿಸಿದ ಪಕ್ಷವೊಂದು ಸ್ವಾಮೀಜಿಯೊಬ್ಬರನ್ನು ಮುಖ್ಯಮಂತ್ರಿ ಪಟ್ಟಕ್ಕೆ ಕೂರಿಸಿದೆ. ಸಮಾಜದ ಆಗು ಹೋಗುಗಳೇನು, ಸಮಾಜಕ್ಕೆ ಬೇಕಿರುವುದೇನು? ಎನ್ನುವುದು ಮಠ ಮಾನ್ಯಗಳಿಗೆ ಸಾಧು ಸನ್ಯಾಸಿಗಳಿಗೆ ಚೆನ್ನಾಗಿ ಅರ್ಥವಾಗಿರುತ್ತದೆ. ಅದಕ್ಕೆ ಜ್ವಲಂತ ಉದಾಹರಣೆಯೆಂದರೆ ಸ್ವಾಮಿ ವಿವೇಕಾನಂದರು. ಅವರು ಹೇಳುತ್ತಿದ್ದರು ಅಭಿವೃದ್ಧಿ ಹೊಂದಿದ ರಾಷ್ಟ್ರವೆಂದರೆ ಅರ್ಥವೇನು?  ದೇಶವು ಅತ್ಯುನ್ನತ ಕಟ್ಟಡಗಳನ್ನು ಹೊಂದಿರುವುದೇ? ಅಥವಾ ದೇಶದ ಜನರ ಬದುಕಿನ ಶೈಲಿ ಐಷಾರಾಮಿಯಾಗಿರುವುದೇ? ದೇಶದೊಳಗೆ ಆರ್ಥಿಕ ಸ್ಥಿತಿ ಉನ್ನತ ಮಟ್ಟದಲ್ಲಿದ್ದು ಮನೆ ಮನೆಗಳಲ್ಲೂ ಹಣದ ಹೊಳೆ ಹರಿಯುವುದೇ?...ಇಲ್ಲ ಇಲ್ಲ ಇದ್ಯಾವುದು ಅಲ್ಲ. ದೇಶದ ಪ್ರತೀ ವ್ಯಕ್ತಿಯು ಸದೃಢ ಮನುಷ್ಯನಾಗಬೇಕು. ಅದರಲ್ಲೂ ಬಹು ಮುಖ್ಯವಾಗಿ ನಾಳಿನ ಪ್ರಜೆಗಳೆನಿಸಿಕೊಳ್ಳುವ ಯುವ ಜನತೆ ಸದೃಢವಾಗಿ ನಿಲ್ಲಬೇಕು. ಹಾಗಾದರೆ ಸದೃಢತೆಗೆ ಅರ್ಥವೇನು? ....ಮೇಲಿನ ಸಾಲುಗಳನ್ನು ಓದಿ ನಿಮ್ಮಲ್ಲಿ ಸದೃಢತೆ ಎಂದರೇನು ಎನ್ನುವ ಪ್ರಶ್ನೆ ಮೂಡಿದೆ ಎಂದಾದರೆ ನೀವು ವಿವೇಕಾನಂದರನ್ನು ಓದಿಲ್ಲವೆಂದೇ ಅರ್ಥ. ಒಮ್ಮೆ ಓದಿ ನೋಡಿ. ಅವರೊಬ್ಬ ಬರಿಯ ಹಿಂದೂ ಧರ್ಮ ಬೋಧಕರಲ್ಲ. ಅವರು ಭಾರತ ಧರ್ಮ ಭೋದಕ. ದೇಶದ ಗತ, ಇತಿಹಾಸಗಳ ಭದ್ರ ಬುನಾದಿಯೊಂದಿಗೆ ದೇಶದ ಪ್ರಚಲಿತ ಸಂಕಷ್ಟಗಳೇನು ಹಾಗು ಭವಿಷ್ಯದಲ್ಲಿ ಅವಕ್ಕೆ ಉತ್ತರಗಳೇನು, ಆ ಉತ್ತರಗಳಿಗಾಗಿ ಭಾರತದ ಜನಮಾನಸ ತಯಾರಾಗಿ ನಿಲ್ಲುವುದು ಹೇಗೆ?ಎನ್ನುವಂತಹ ಸ್ಪಷ್ಟ ಕಲ್ಪನೆಗಳನ್ನು ಮನಸ್ಸಿನಲ್ಲಿ ತುಂಬಿಕೊಂಡಿದ್ದ ವ್ಯಕ್ತಿ ಅವರು.

ಬಹಳಷ್ಟು ಜನ ಅವರನ್ನು ಹಿಂದೂ ಧರ್ಮಕ್ಕೆ ಕಟ್ಟಿ ನೋಡುವುದುಂಟು. ಅದು ಸರಿಯಾದ ನಡೆಯೋ ಅಲ್ಲವೋ ಎನ್ನುವು ಜಿಜ್ಞಾಸೆಗಿಳಿಯುವ ಮೊದಲು ಗಮನಿಸಬೇಕಾದ ಅಂಶ ವೆಂದರೆ ನೀವು ವಿವೇಕಾನಂದರ ಉತ್ಕೃಷ್ಟ ಉಕ್ತಿಗಳನ್ನೋ ಅಥವಾ ಅವರ ಭಾಷಣದ ಲಿಖಿತ ಸಂಗ್ರಹ ರೂಪಗಳನ್ನೋ ಅಥವಾ ಅವರೇ ಬರೆದ ಪುಸ್ತಕಗಳನ್ನೋ ಅಥವಾ ವಿವಿಧ ದೇಶಗಳ ವಸ್ತು ಸಂಗ್ರಹಾಲಯಗಳಲ್ಲಿ ಅವರೇ ಅವರ ಒಡನಾಡಿಗಳಿಗೆ ಬರೆದ ಪತ್ರಗಳನ್ನೋ ಪರಾಮರ್ಶಿಸಿ ನೋಡಿ. ಎಲ್ಲಿಯೂ ಯಾರನ್ನು ಹಿಂದೂ ಧರ್ಮಕ್ಕೆ ಬನ್ನಿ ಎಂದು ಆಹ್ವಾನಿಸಿಯೂ ಇಲ್ಲ, ಅಥವಾ ಹಿಂದೂ ಧರ್ಮಕ್ಕೆ ಬರಲೇಬೇಕೆಂಬ ಒತ್ತಾಯಪೂರ್ವಕ ಸ್ಥಿತಿಯನ್ನಂತೂ ಸೃಷ್ಟಿ ಮಾಡಿಲ್ಲವೇ ಇಲ್ಲ. ತಮ್ಮ ಅನುಯಾಯಿಗಳಿಗೂ ಅವರು ಯಾವಾಗಲೂ ಕೊಡುತ್ತಿದ್ದ ಕರೆಯೂ ಅಷ್ಟೇ 'ನೀವು ಸದೃಢರಾಗಿ......ದೇಶ ಬಲಿದಾನ ಬಯಸಿದರೆ ಅದಕ್ಕೂ ತಯಾರಾಗಿ, ದೀನರಿಗೆ ಸಹಾಯ ಮಾಡಿ, ಮೊದಲು ಮನುಷ್ಯರಾಗಿ ನಡೆದುಕೊಳ್ಳಿ.....'  ಮುಂತಾದವೆ ಹೊರತು ಧಾರ್ಮಿಕ ಭಾವನೆಯನ್ನು ಕೆರಳಿಸುವಂತಹ ಹೇಳಿಕೆಗಳನ್ನು, ಅಥವಾ ಇನ್ನಾವುದೋ ಒಂದು ಧರ್ಮದ ವಿರೋಧವಾದ ಹೇಳಿಕೆಯನ್ನು ನಾನಂತೂ ಎಲ್ಲಿಯೂ ಕಂಡಿಲ್ಲ.

ಯೋಗಿ ಆದಿತ್ಯನಾಥರು ಮುಖ್ಯಮಂತ್ರಿಯಾದಾಗಲೂ ಇದೆ ಚರ್ಚೆ ವಿವಿಧ ರಂಗಗಳಲ್ಲಿ ನಡೆಯಿತು. ಸ್ವಾಮೀಜಿಯೊಬ್ಬರು ಮುಖ್ಯಮಂತ್ರಿಯಾಗಿರುವುದರಿಂದ ಹಿಂದುತ್ವವನ್ನು ಎಲ್ಲರ ಮೇಲು ಬಲವಂತವಾಗಿ ಹೇರುವ ಘಟನೆಗಳು ಇನ್ನು ಮುಂದೆ ಉತ್ತರ ಪ್ರದೇಶದಲ್ಲಿ ನೆಡೆಯಬಹುದು ಎಂದು ಕೆಲವರು ಊಹಿಸಿಕೊಂಡು ಕೂತಿದ್ದಾರೆ. ಅವರ ಊಹೆಗೆ ಅರ್ಥವಿದೆಯೋ ಇಲ್ಲವೋ ಅವರೇ ಕಾದು ನೋಡಬೇಕು. ಆದರೆ ಇಷ್ಟಂತೂ ಕರಾರುವಕ್ಕಾಗಿ ಹೇಳಬಲ್ಲೆ ಹಿಂದೂ ಮಠಗಳು ಧರ್ಮಕ್ಕಿಂತ ಹೆಚ್ಚಾಗಿ ದೇಶ ಸೇವೆ ಮಾಡುವಲ್ಲಿ ಹೆಸರು ವಾಸಿಯಾಗಿವೆ. ನಾನು ಕಣ್ಣಾರೆ ಕಂಡು ಒಡನಾಡಿದ ಮಠಗಳ ಬಗ್ಗೆ ಹೇಳುವುದಾದರೆ ಕರ್ನಾಟಕದ ತುಮಕೂರಿನ ಸಿದ್ಧಗಂಗೆ ಧರ್ಮ ಜಾತಿಗಳನ್ನು ನೋಡದೆ ದೇಶದ ಎಲ್ಲ ಸೊಡರುಗಳಿಗೂ ಶಿಕ್ಷಣ ಪ್ರಸಾರ ಮಾಡಲು ತನ್ನ ಕೈಲಾದಷ್ಟು ಶ್ರಮಿಸಿದೆ. ಅದರ ಶ್ರಮ ಆರಂಭವಾದಾಗ ನಮ್ಮ ದೇಶಕ್ಕೆ ಸ್ವತಂತ್ರವೇ ಬಂದಿರಲಿಲ್ಲ ವೆಂದ ಮೇಲೆ ಸಂವಿಧಾನದ್ದಂತೂ ದೂರದ ಮಾತು. ದೇಶ ಚೀನಾ ಯುದ್ಧ, ಪಾಕಿಸ್ತಾನ ಯುದ್ಧ, ಭೀಕರ ಬರಗಾಲ ಕಂಡು ನಲುಗುತ್ತಿದ್ದ ೬೦ರ ದಶಕದಲ್ಲಿಯೂ ಯಾವ ಸರ್ಕಾರಗಳ ಸಹಾಯವಿಲ್ಲದೆ ಶಿಕ್ಷಣ ಪ್ರಸರಣಾ ಕಾರ್ಯವನ್ನು ಮುಂದುವರಿಸಿಯೇ ಇತ್ತು. ಆದಿಚುಂಚನಗಿರಿಯ ಮಠವೂ ಗ್ರಾಮೀಣ ಭಾಗದ ಜನರನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ಪ್ರತೀ ಗ್ರಾಮಗಳಲ್ಲೂ ಶಾಲೆ ಕಾಲೇಜುಗಳನ್ನು ತೆರೆದು ಗ್ರಾಮೀಣ ಜನತೆಯನ್ನು ಸಬಲರನ್ನಾಗಿ ಮಾಡಿ ಇಂದು ಆ ಗ್ರಾಮೀಣ ಪ್ರತಿಭೆಗಳು ದೇಶ ವಿದೇಶಗಳಲ್ಲಿ ತಮ್ಮ ಸೇವೆ ಸಲ್ಲಿಸುತ್ತಾ ಉತ್ತಮ ಬದುಕು ಕಟ್ಟಿಕೊಳ್ಳಲು ನೆರವಾಗಿರುವುದು ಅತ್ಯಾಶ್ಚರ್ಯವಲ್ಲದೆ ಮತ್ತೇನು ಅಲ್ಲ. ಚಿತ್ರದುರ್ಗದ ಮುರುಘಾ ಮಠ, ಮೈಸೂರಿನ ಸುತ್ತೂರು ಮಠ, ಶೃಂಗೇರಿ ಮಠ ಎಲ್ಲವೂ ತಮ್ಮ ತಮ್ಮ ಕೈಲಾದಷ್ಟು ಸಮಾಜ ಸೇವೆಯನ್ನು ದೇಶಕ್ಕೆ ನೀಡುತ್ತಾ ದೇಶವನ್ನು ಬುಡ ಮಟ್ಟದಿಂದಲೇ ಸಬಲಗೊಳಿಸುತ್ತಾ ಸಾಗಿವೆ ಎನ್ನುವಾಗ ಅದರ ಮಗ್ಗುಲಲ್ಲೇ ಜಾತಿ, ಧರ್ಮಗಳ  ಅವಾಂತರಕ್ಕೆ ನಾಂದಿಯಾಗಲಿಲ್ಲ ಎನ್ನುವುದು ಹೆಮ್ಮೆಯ ಸಂಗತಿ. ಇದೆ ಕಾರಣಕ್ಕೆ ಕರ್ನಾಟಕದಲ್ಲಿ ಒಂದು ವರ್ಷದ ಬಜೆಟ್ ನಲ್ಲಿ ಮಠ ಮಾನ್ಯಗಳಿಗೆಂದೇ ಹಣವನ್ನು ಸರ್ಕಾರದಿಂದ ದೇಣಿಗೆಯಾಗಿ ನೀಡಲಾಯಿತು. ಆ ಸಂಧರ್ಭದಲ್ಲಿ ಆದಿಚುಂಚನಗಿರಿ ಮಠಾಧ್ಯಕ್ಷರಾಗಿದ್ದ ಶ್ರೀ ಬಾಲಗಂಗಾಧರ ನಾಥ ಶ್ರೀಗಳು ಹೇಳಿದರು "ಮಠ ಮಾನ್ಯಗಳು ಪಡೆದುಕೊಂಡ ಹಣವನ್ನು ಏನು ಮಾಡುತ್ತವೆ ಎಂಬುದರ ಅರಿವಿದ್ದವರು ಮಾತ್ರ ತುಂಬು ಹೃದಯದಿಂದ ಮಠ ಮಾನ್ಯಗಳಿಗೆ ಸಹಾಯ ಮಾಡಬಲ್ಲರು" ಎಂದು. ಆ ಮಾತುಗಳಲ್ಲಿ ಮಠಗಳ ಸೇವೆ ಸಮಾಜಕ್ಕೆ ಯಾವ ರೀತಿ ದಕ್ಕುತ್ತದೆ ಎನ್ನುವುದನ್ನು ಸಮಾಜಕ್ಕೆ ಅರ್ಥ ಮಾಡಿಸುವ ಕಾಳಜಿ ತುಂಬಿಕೊಂಡಿದೆ.

ಪ್ರತಿಯೊಂದು ನಡೆ ನುಡಿಯನ್ನು ಧರ್ಮವೊಂದಕ್ಕೆ ಹೋಲಿಸಿ ನೋಡುವರೇ ಹೆಚ್ಚಾಗಿ ತುಂಬಿರುವ ಈಗಿನ ಕಾಲದಲ್ಲಿ ಸ್ವಾಮೀಜಿಯೊಬ್ಬರಿಗೂ ಅಧಿಕಾರ ಕೊಟ್ಟು ನೋಡೋಣ. ನಮ್ಮ ಇತಿಹಾಸದಲ್ಲೆಂದೂ ಘಟಿಸದ ಈವಿದ್ಯಮಾನಕ್ಕೆ ನಾಂದಿ ಹಾಡಿದ ಪ್ರಮುಖರೆಲ್ಲರಿಗೂ ಇತಿಹಾಸವೇ ಅಭಾರಿ.

ಶುಕ್ರವಾರ, ಏಪ್ರಿಲ್ 7, 2017

ನೀವು ನೀವು ಕಂಡಂತೆ

ಆರ್ತರ ಗುಂಪಿಗೆ ದೇವರು
ನಾಯಕನಾದರೆ
ಬಲಗೊಳ್ಳುವರ್ಯಾರು?
ಆರ್ತತೆ ಅರ್ಥ ಹೀನವಾಗಿ
ಬಲಗಾರರ ಬಣವಿರದ
ಜಗ ನಡೆಯುವುದೆಂತು?

ಬಲಗಾರನೊಬ್ಬನ ದೃಷ್ಟಿ
ಹೊಸದನ್ನೇನೋ ಸೃಷ್ಟಿಸುವುದು
ಅವನ ಕಟಾಕ್ಷದಲಿ
ಕಲ್ಲು ಶಿಲೆಯಾಗುವುದು
ಮಾತು ಕಾವ್ಯವಾಗುವುದು
ಅನುಭವಗಳೇ ಉಕ್ತಿಗಳಾಗುವವು.

ಬದುಕಿದವರು ಕಂಡಂತೆ
ಬಾಳೊಂದು ಸುಖ ದುಃಖಗಳ ಕಂತೆ
ಬಲದಿಂದ ಕಂಡವರಿಗದು ರಣೋತ್ಸಾಹ
ಗುಣದಿಂದ ಕಂಡವರಿಗದು ಭಾವ ಸಾಗರ
ನೊಂದು ನೋಡಿದವರಿಗೆ ಮುಗಿಯದ ಕಥೆ
ಸದಾ ಕೊರಗುವರಿಗೆ ಇನ್ನಿಲ್ಲದ ವ್ಯಥೆ

ನೀವು ನೀವು ಕಂಡಂತೆ ಬಾಳು
ನೀವು ನೀವು ಬದುಕಿದಂತೆ ಬದುಕು
ನಾವು ಬಯಸಿದ ಮಟ್ಟಿಗೆ ಬಾಳಿಗೆ
ಅರ್ಥವೇನು, ಸಾರವೇನು, ಗುರಿಯೇನು
ಯೋಚಿಸುವ ಕಾಲವಿದಲ್ಲ
ಅದಕ್ಕೆ ಕಾಲ ಮೀಸಲಿಲ್ಲವೂ ಇಲ್ಲ.

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...