ಬುಧವಾರ, ಮಾರ್ಚ್ 14, 2018

ಇಂದಿನ ವಿರಾಟರು ಹಿಂದೊಮ್ಮೆ ಸೈರಾಟರೆ!!

ಅದೃಷ್ಟವಾದವನ್ನು ಒಪ್ಪದಿರಿ, ಮೈ ಮುರಿದು ದುಡಿಯಿರಿ , ನೀವಂದು ಕೊಂಡಂತೆ ನೀವಾಗಿ ಎಂದಿದ್ದಾರೆ ನವ ಕರ್ನಾಟಕ ನಿರ್ಮಾತೃ ಸರ್ ಎಂ. ವಿಶ್ವೇಶ್ವರಯ್ಯನವರು. ಆ ದೃಷ್ಟಿಯಲ್ಲಿ  ನೋಡಿದರೆ ಈಗಿನ ಮಹನೀಯರೆಲ್ಲ ಹಿಂದೊಮ್ಮೆ ಏನೊಂದು ಅರಿಯದೆ ಯಾವುದೋ ಅರಿಯದ ಕ್ಷೇತ್ರಕ್ಕೆ ಕಾಲಿಟ್ಟು ಅಲ್ಲಿನ ಕಷ್ಟ ನಷ್ಟಗಳನ್ನು ಅನುಭವಿಸಿಕೊಂಡೆ ಸಾಗಿ ಆ ಕ್ಷೇತ್ರದ ದೃವತಾರೆಗಳಾಗಿ ಮೆರೆಯುತ್ತಿರುವುದು ಸ್ಪಷ್ಟವಷ್ಟೇ. ಇದರ ನಡುವೆಯೂ ಕೆಲ ಕೆಲವರಿಗೆ ಅದೃಷ್ಟವೆನ್ನುವಂತಹ ವಿಚಾರಗಳು ಕೈಹಿಡಿಯುವುದು ಜನಗಳನ್ನು ಇನ್ನು ಅದೃಷ್ಟವಾದದೆಡೆಗೆ ಸೆಳೆಯಲು ಅನುವು ಮಾಡಿಕೊಟ್ಟಂತಿದೆ.

ಎಲ್ಲಿಗೋ ಹೋಗಲು ರೈಲಿಗಾಗಿ ಕಾಯುತ್ತ ನಂಜನಗೂಡಿನ ರೈಲು ನಿಲ್ದಾಣದಲ್ಲಿ ಕಾಯುತ್ತಿದ್ದ ಮುತ್ತುರಾಜನಿಗೆ ನಿರ್ದೇಶಕ ಎಸ್ ಎಲ್ ಎನ್ ಸಿಂಹ ಅದೃಷ್ಟ ರೂಪದಲ್ಲಿ ಬರಲಿಲ್ಲವೇ??. ಕನ್ನಡ ಪತ್ರಿಕೆಯೊಂದರಲ್ಲಿ ಸಂಪಾದಕರಾಗಿ ಕೆಲಸ ಮಾಡುತ್ತಿದ್ದ ತಂದೆಗೆ ಮಧ್ಯಾಹ್ನದ ಊಟ ಕೊಟ್ಟು ಬರಲು ಹೋದ ಸಂಪತ್ ಕುಮಾರ್ ಗೆ ಅಲ್ಲೇ ಕುಳಿತಿದ್ದ ನಿರ್ದೇಶಕರೊಬ್ಬರು ಅದೃಷ್ಟ ರೂಪಿಯಾಗಲಿಲ್ಲವೇ??. ಯಾರಿಗೆ ಗೊತ್ತು ಯಾರ್ಯಾರ ಅದೃಷ್ಟ ಹೇಗಿರುತ್ತದೆ ಎಂದು? ಎನ್ನುವ ವಾಕ್ಯವೇನಾದರೂ ನಿಮ್ಮ ತಲೆಯಲ್ಲಿ ಹೊಳೆದಿದ್ದರೆ ನೀವು ಪ್ರತ್ಯಕ್ಷವಾಗಿಯೋ ಅಥ್ವಾ ಪರೋಕ್ಷವಾಗಿಯೋ ಅದೃಹಸ್ತವಾದವನ್ನು ಒಪ್ಪಿದ್ದೀರಿ ಎಂತಲೇ ಅರ್ಥ. ಇರಲಿ ಇವೆಲ್ಲ ಒತ್ತಟ್ಟಿಗಿರಲಿ.

ಈ ಉರಿ ಬೇಸಿಗೆಯಲ್ಲಿ ಅದೃಷ್ಟದ ಪ್ರಲಾಪವನ್ನು ಇಷ್ಟೊಂದು ಮಾಡಲು ಕಾರಣ ಮರಾಠಿಯ ಅತ್ಯದ್ಭುತ ಸಿನಿಮಾ 'ಸೈರಾಟ್'. ಹಾಗು ಅದರಲ್ಲಿನ ನಾಯಕ ನಾಯಕಿಯರಾಯಾದ ಆಕಾಶ್ ಠೋಸರ್, ರಿಂಕು ರಾಜಗುರು.

ಮರಾಠಿ ಸಿನೆಮಾ 'ಸೈರಾಟ್' ನ ಒಂದು ದೃಶ್ಯ. ರಿಂಕು ರಾಜಗುರು ಹಾಗು ಆಕಾಶ್ ಠೋಸರ್  
ಆಕಾಶ್ ಠೋಸರ್ ಹುಟ್ಟಿದ್ದು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಕರ್ಮಾಳಾದಲ್ಲಿ ಫೆಬ್ರವರಿ 1993ರಲ್ಲಿ. ತಂದೆ ಕಾಮಗಾರಿ ಗುತ್ತಿಗೆದಾರ ತಾಯಿ ಗೃಹಿಣಿ. ಹುಟ್ಟಿದ್ದು ಗ್ರಾಮೀಣ ಪ್ರದೇಶವಾದರೂ ಬೆಳೆದಿದ್ದು ಪುಣೆ ನಗರದ ಔನ್ದ್ ನಲ್ಲಿ. ಔನ್ದ್ ನಗರದದ ಶಿವಾಜಿ ವಿದ್ಯಾಲಯ ಹಾಗು ಅದರ ಸಮೀಪವೇ ಇರುವ ಪುಣೆಯ ಸಾವಿತ್ರಿಬಾಯಿ ಪುಲೆ ವಿಶ್ವವಿದ್ಯಾಲಯವೇ ಆಕಾಶ್ ಕಲಿತ ವಿದ್ಯಾಕೇಂದ್ರಗಳು. ಓದುವುದರೊಂದಿಗೆ ಕುಸ್ತಿ ಕಾಳಗ ಕಲೆಯಲ್ಲೂ ಆಸಕ್ತಿ ಹೊಂದಿದ್ದನಾದ್ದರಿಂದ ಪೈಲ್ವಾನ್ ವೃತ್ತಿಯನ್ನು ಆಗೀಗ ಅಪ್ಪಿಕೊಳ್ಳುತ್ತಿದ್ದ. ಅದಕ್ಕೆ ತಕ್ಕನಾದ ಕಟ್ಟು ಮಸ್ತಾದ ದೇಹ ಹಾಗು ನಾಜೂಕಿನ ಬಗ್ಗೆ ಮತ್ತೆ ಹೆಚ್ಚೇನೂ ಹೇಳುವ ಅವಶ್ಯಕತೆಯೇ ಇಲ್ಲವೆನ್ನಿ. ಇಂತಿದ್ದ ಆಕಾಶ್ ಸಿನೆಮಾ ರಂಗದಲ್ಲಿ ಬೆಳೆಯುವ ಅಥವಾ ಅದಕ್ಕಾಗಿ ಪ್ರಯತ್ನಿಸುವ ಕನಸನ್ನು ಎಂದೂ ಕಂಡವನಲ್ಲ.

ಇಂತಿದ್ದ ಆಕಾಶ್ 2015ರ ಅದೊಂದು ದಿನ ಯಾವದೋ ಕಾರಣಕ್ಕೆ ತನ್ನೂರಾದ ಜೇವೂರ್ ನ ರೈಲು ನಿಲ್ದಾಣದಲ್ಲಿ ಪುಣೆಗೆ ಬರುವುದಕ್ಕಾಗಿ ರೈಲಿಗಾಗಿ ಕಾಯುತ್ತ ನಿಂತಿದ್ದ. ಅವನ ಅದೃಷ್ಟವೂ  ಅದೇ ರೈಲು ನಿಲ್ದಾಣದಲ್ಲಿ ಕಾಯುತ್ತ ನಿಂತಿತ್ತು ಎನ್ನುವುದು ಮತ್ತೊಂದು ಸೋಜಿಗದ ಸಂಗತಿಯೇ ಸರಿ. 'ಸೈರಾಟ್' ಸಿನೆಮಾ ನಿರ್ದೇಶಕ ನಾಗರಾಜ್ ಮಂಜುಳೆ ಯವರ ಸೋದರನೂ ಅದೇ ರೈಲು ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದ. ಅಲ್ಲಿ ಕಣ್ಣಿಗೆ ಬಿದ್ದಿದ್ದು ಆಕಾಶ್, ಅವನನ್ನು ಕಂಡು ಮಾತನಾಡಿ ಸಿನೆಮಾದಲ್ಲಿ ನಟಿಸುವ ಅವಕಾಶವಿರುವುದಾಗಿಯೂ ಹಾಗು ಅದಕ್ಕಾಗಿ ಕೆಲವು ಫೋಟೋ ಹಾಗು ವಿಳಾಸವನ್ನು ತರುವಂತೆಯೂ ಬುಲಾವ್ ಕೊಟ್ಟಾಗ ಎಲ್ಲವನ್ನು ಕೊಟ್ಟು ಆಡಿಷನ್ ಮುಗಿಸಿ ಮನೆಗೆ ಬಂದಿದ್ದ ಆಕಾಶ್. ಕೆಲವು ದಿನಗಳಾದ ಮೇಲೆ ತಾನು ಸಿನೆಮಾ ಗೆ ಆಯ್ಕೆಯಾಗಿರುವುದು ತಿಳಿದಾಗ ಯಾವುದು ಸೈಡ್ ರೋಲ್ ಇರಬೇಕು , ಐದು-ಹತ್ತು ನಿಮಿಷಗಳ ಪಾತ್ರವೊಂದಿರಬಹುದೆಂದು ಬಗೆದಿದ್ದ ಆಕಾಶ್ ಗೆ ಅದೃಷ್ಟವೆನ್ನುವುದು ಬಹುದೊಡ್ಡ ಉಡುಗೊರೆಯೊಂದನ್ನು ನೀಡಿತ್ತು. ಸೈರಾಟ್ ಸಿನೆಮಾದ ಮುಖ್ಯ ನಾಯಕನ ಪಾತ್ರದಲ್ಲಿ ಆಕಾಶ್ ಕಾಣಿಸಿಕೊಳ್ಳಬೇಕೆಂಬ ನಿಲುವಿಗೆ ಅದರ ದಿಗ್ದರ್ಶಕರು ಅದಾಗಲೇ ಬಂದೇ ಬಿಟ್ಟಿದ್ದರು.  

ಕುಸ್ತಿ ಪಟುವಾಗಿದ್ದ ಆಕಾಶ್ ಗೆ ಮೊದಲ ಕೆಲಸ ತನ್ನ ತೂಕ ಇಳಿಸಿಕೊಳ್ಳುವುದೇ ಆಗಿತ್ತು. ನಿರ್ದೇಶಕರ ಆಣತಿಯ ಮೇರೆಗೆ ಆಕಾಶ್ ಬರೋಬ್ಬರಿ 13ಕೆ.ಜಿ. ತೂಕವನ್ನು ಒಂದೂ ವರೆ ತಿಂಗಳ ಅವಧಿಯಲ್ಲಿ ಇಳಿಸಿಕೊಂಡಿದ್ದ. ಹೃದಯಸ್ಪರ್ಶಿ ಸಿನೆಮಾಗಳಿಗೆಂದೇ ಹೆಸರು ವಾಸಿಯಾದ  ಮರಾಠಿ ನಿರ್ದೇಶಕ ನಾಗರಾಜ್ ಮಂಜುಳೆಯವರ ಮನೆಯೇ ಆಕಾಶ್ ನ ತಾಲೀಮಿಗೆ ವೇದಿಕೆಯಾಯಿತು.  ಇದಿಷ್ಟೇ ಅಲ್ಲದೆ ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದ ಬಾಲೆ ರಿಂಕು ರಾಜಗುರು ಚಿತ್ರದ ನಾಯಕಿ.  ಮುಗ್ದ ಹುಡುಗರ ಜೀವನವರಿಯದ ಅಮರ ಪ್ರೇಮ ಕಥನ ಸಿನೆಮಾಗೆ ಹಂದರವಾದ್ದರಿಂದ ಮುಗ್ದ ಹುಡುಗರ ಆಯ್ಕೆ ಮತ್ತಷ್ಟು ಸುಲಲಿತವಾಯಿತು.

ನಟನೆಯ ಪಟ್ಟುಗಳು, ಮುಖ ಲಕ್ಷಣ ಬದಲುವಿಕೆಯಂತಹ ಪಟ್ಟುಗಳನ್ನು ಸ್ವತಃ ನಿರ್ದೇಶಕರೇ ಆಕಾಶ್ ಹಾಗು ರಿಂಕುವಿಗೆ ದಿನಂಪ್ರತಿ ಉಣಬಡಿಸುತ್ತಿದ್ದರು. ಶ್ರೇಷ್ಠ ಕಲಾಕೃತಿಯೊಂದನ್ನು ತಯಾರು ಮಾಡಬೇಕಾದರೆ ಅದರ ಕುಡಿ ಕೊನರುಗಳನ್ನೆಲ್ಲ ಹೇಗೆ ಸಜ್ಜುಗೊಳಿಸಬೇಕೆನ್ನುವ ಪ್ರೌಢಿಮೆ ಇರುವ ಕೆಲವೇ ನಿರ್ದೇಶಕರಲ್ಲಿ ನಾಗರಾಜ್ ಮಂಜುಳೆ ಕೂಡ ಒಬ್ಬರು ಎನ್ನುವುದು ಅರಿಯುವುದೇ ಇಂತಹ ವಿಚಾರಗಳಿಂದಲೇ. ಸಿನೆಮಾ ಚಿತ್ರೀಕರಣಕ್ಕಿಂತ ಮುಂದಾಗಿ ಹಾಗು ಚಿತ್ರೀಕರಣ ಪರ್ಯಂತ ನಟರ ತಂಡವನ್ನು ತಮ್ಮ ಮನೆಯಲ್ಲಿಯೇ ಇರಿಸಿಕೊಂಡು ಪಳಗಿಸಿದ ನಿರ್ದೇಶಕರ 'ಸೈರಾಟ್' ಸಿನೆಮಾ ಇದೀಗ ಯಾವ ಪರಿಯ ಜಯ ಗಳಿಸಿದೆ ಎನ್ನುವುದನ್ನು ಮತ್ತೂ ಎಳೆ ಎಳೆಯಾಗಿ ಹೇಳುವ ಅಗತ್ಯವಿಲ್ಲವಷ್ಟೆ. ಅಂತೂ ಹಿರಿತೆರೆಗೆ ಸುನಾಮಿಯಂತೆ ಅಪ್ಪಳಿಸಿದ 'ಸೈರಾಟ್' ಯುವಜನತೆಯನ್ನು ಮೋಡಿಗೊಳಗು ಮಾಡಿತು. ಸಂಗೀತವಂತೂ ಹಾಲಿವುಡ್ ನ ಆರ್ಕೆಸ್ಟ್ರಾ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಹಾಡುಗಳ ರೆಕಾರ್ಡಿಂಗ್ ಮಾಡಿದ ಭಾರತದ ಮೊದಲ ಸಿನೆಮಾವೆನ್ನುವ ಹೆಗ್ಗಳಿಕೆಗೆ ಪಾತ್ರವಾಯಿತು ಅಂತೆಯೇ ಯುವಜನತೆಯನ್ನು ಸಂಗೀತೋನ್ಮತ್ತರನ್ನಾಗಿಸಿತು.

ಮರಾಠಿ ಸಿನೆಮಾ ರಂಗಕ್ಕೆ ಬರೋಬ್ಬರಿ ಒಂದು ಶತಮಾನದ ಇತಿಹಾಸವುಂಟು. ಭಾರತದ ಚಿತ್ರರಂಗದ ಪಿತಾಮಹ ದಾದಾ ಸಾಹೇಬ್ ಫಾಲ್ಕೆ ಸ್ವತಃ ಮರಾಠಿಗರಾಗಿದ್ದವರು. ಒಂದು ಶತಮಾನದಾದ್ಯಂತ ಯಾವ ಮರಾಠಿ ಸಿನೆಮಾವು ಮಾಡಿರದಿದ್ದಷ್ಟು ಹಣವನ್ನು 'ಸೈರಾಟ್'  ಗಲ್ಲಾ  ಪೆಟ್ಟಿಗೆಯಲ್ಲಿ ಗಳಿಸಿಬಿಟ್ಟಿತ್ತು. ಜನರನ್ನು ಯಾವ ಪರಿಗೆ ಈ ಸಿನೆಮಾ ಸೆಳೆಯಿತೆಂದರೆ , ಕರ್ಮಾಳಾ ಪರಿಸರದಲ್ಲಿರುವ ಮೆಟ್ಟಿಲ ಬಾವಿಗೆ ಜನ ಮುಗಿಬಿದ್ದು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವುದನ್ನು ಈಗೀಗಲೂ ಕೆಲವು ಮರಾಠಿ ಚಾನೆಲ್ಲುಗಳು ವರದಿ ಮಾಡುತ್ತಿವೆ. ಜನರನ್ನು ಉನ್ಮತ್ತತೆಯ ಹೊಳೆಯಲ್ಲಿ ತೇಲಿಸಿದ ಈ ಸಿನೆಮಾದ ಹಿಂದಿನ ಮುಗ್ದ ಮಕ್ಕಳ ಅದೃಷ್ಟಗಾಥೆ ನಿಜಕ್ಕೂ ಅನೂಹ್ಯ. ಅಂದು ಏನೊಂದು ಅರಿಯದೆ ಜೇವೂರ್ ನ ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದ ಹುಡುಗನಿಂದು ಮರಾಠಿ ಸಿನೆಮಾ ರಂಗದಲ್ಲಿ ಸ್ಟಾರ್ ನಟ. 

ನಟನಾ ವೃತ್ತಿಯನ್ನೇ ನಂಬಿ ಬಂದು ಬದುಕು ಕಟ್ಟಿಕೊಂಡವರೆಷ್ಟೋ, ಕಳೆದುಕೊಂಡವರೆಷ್ಟೋ. ತಮ್ಮ ನೆಚ್ಚಿನ ನಟ ನಟಿಯರನ್ನು ಅನುಸರಿಸುತ್ತಾ ಚಿತ್ರರಂಗಕ್ಕೆ ಬಂದು ಬದುಕು ಕಳೆದುಕೊಂಡು ಮುಂಬೈ, ಚೆನ್ನೈ ನ ಬೀದಿಗಳಲ್ಲಿ ಹೆಣವಾದವರೂ ಬೇಕಾದಷ್ಟು. ಕಲಾ ರಂಗದ ಬಗ್ಗೆ ಚಾಲ್ತಿಯಲ್ಲಿರುವ ನಾಣ್ಣುಡಿಯೊಂದು ಇದೇ ಸಂಧರ್ಭದಲ್ಲಿ ಜ್ಞಾಪಕ ಬರುತ್ತಿದೆ. 'ಕಲಾ ರಂಗ ಎಲ್ಲರನ್ನು ಕೈ ಬೀಸಿ ಕರೆಯುತ್ತದೆ, ಆದರೆ ಕೆಲವರನ್ನು ಮಾತ್ರ ಅಪ್ಪಿಕೊಳ್ಳುತ್ತದೆ'. ಕೈ ಬೀಸಿ ಕರೆದವರು ನಮ್ಮ ನಿಮ್ಮ ದೃಷ್ಟಿಯಲ್ಲಿ ಅದೃಷ್ಟವಂತರೆನಿಸಿಕೊಳ್ಳುತ್ತಾರೆ. ಇಲ್ಲದವರು ಸರ್ವೇ ಸಾಮಾನ್ಯರಾಗಿ ನಮ್ಮ ನಿಮ್ಮ ನಡುವೆಯೇ ಕಾಣದೆ ಮರೆಯಾಗಿ ಹೋಗುತ್ತಾರೆ. ಅಂತೂ ಚಿತ್ರರಂಗದಲ್ಲಿ ಮಿಂಚಿ ಮಿನುಗಿದವರೆಲ್ಲ ಎಲ್ಲವನ್ನು ಬಲಾವರಾಗಿರಲಿಲ್ಲ. ಅವರೂ ಇಂದಿನ ವಿರಾಟ ಭಾವ ಪಡೆಯುವ ಮೊದಲು ಸೈರಾಟರಾಗಿದ್ದರು ಎನ್ನುವುದನ್ನು ಮರೆಯುವಂತಿಲ್ಲ. ಅವರ ಕಥೆಗಳೂ ನಮ್ಮಕಥೆಗಳಿಗಿನ್ನ ವಿಭಿನ್ನವೇನಲ್ಲ. ನಮ್ಮ ನಿಮ್ಮ ನಡುವೆಯೇ ಅರಳಿದ ಅವರ ಶೈಲಿ ಮಾತ್ರ ಭಿನ್ನವಷ್ಟೇ.

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...