"ಹುಟ್ಟಿದ ಮಕ್ಕಳೆಲ್ಲ ವಿಶ್ವ ಮಾನವರಾಗಿಯೇ ಹುಟ್ಟುತ್ತಾರೆ ಆದರೆ ಬೆಳೆ ಬೆಳೆಯುತ್ತಾ ಅವರನ್ನು ಅಲ್ಪ ಮಾನವರನ್ನಾಗಿಸಲಾಗುತ್ತದೆ. ಅಲ್ಪ ಮಾನವನಾದವನನ್ನು ಮತ್ತೆ ವಿಶ್ವ ಮಾನವನನ್ನಾಗಿಸುವ ಕಾಯಕ ವಿದ್ಯೆಯದಾಗಬೇಕು" - ಕುವೆಂಪು.
ಮತ್ತೆ ಮತ್ತೆ ಓದಬೇಕೆನಿಸುವ ಸಾಲುಗಳಿವು, ಕುವೆಂಪುರ ಕೊನೆಯ ಹೊತ್ತಗೆ "ಕೊನೆಯ ತೆನೆ ಹಾಗು ವಿಶ್ವ ಮಾನವ ಸಂದೇಶ"ದಿಂದ ಹೆಕ್ಕಿ ತೆಗೆದದ್ದು. ಮೇಲು ಕೀಳುಗಳೆಂಬ, ಧರ್ಮ ಅಧರ್ಮಗಳೆಂಬ, ವರ್ಣ ಭೇಧಗಳೆಂಬ ಯಾವ ಒಡಕಿನ ನೀತಿಯೂ ಹುಟ್ಟುವ ಮಗುವಿನ ಮನಸೊಳಗೆ ದೈವದತ್ತದಂತೆ ಅವತರಿಸಲೇ ಇಲ್ಲ. ನೂರಾರು ಧರ್ಮ ಜಾತಿಗಳನ್ನು ಕಟ್ಟಿ ಆಯಾ ಸಿದ್ಧಾಂತಗಳಿಗಾಗಿ ಬಡಿದಾಡಿಕೊಂಡು ಸಾಯುವದಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದನಾ ಕೂಟಗಳನ್ನು ಹೆಣೆದು ಅಮಾಯಕರ ಬಲಿಗೆ ಕಾರಣವಾಗುತ್ತಿರುವುದು ಇಂದಿನ ಅತಿ ಖೇದ ವಿಚಾರಗಳಲ್ಲೊಂದು ಎಂದರೆ ತಪ್ಪಾಗುವುದಿಲ್ಲವೇನೋ. ಹುಟ್ಟಿದ ಮಗುವಿಗೆ ಜಾತಿ ಭೇದಗಳೆನ್ನುವ ನೀರೆರೆದಿದ್ದು ನಾವೇ, ಧರ್ಮ ಅಧರ್ಮ, ಪಾಪ ಪುಣ್ಯ ಹೀಗೆ ನಮ್ಮ ಕೆಣ್ಣೆದುರಿಗಿನ ಕೆಲವೊಮ್ಮೊಮ್ಮೆ ನಾವೇ ಸರಿಯಾಗಿ ಪಾಲಿಸದಂತಹ ನಿಯಮಾವಳಿಗಳನ್ನು ಮುಗುವಿಗೆ ಉಣಿಸಿ ದೇಶದೊಳಗಿನ ಭೇದಕ್ಕೆ ಇನ್ನಷ್ಟು ನೀರೆರೆದು ನಾವೇ ಬೆಳೆಸುತ್ತಿರುವುದು ಸುಳ್ಳಲ್ಲ.
ಸಮುದಾಯ, ಪಂಥ, ಮತ ಧರ್ಮಗಳ ನಡುವಿನ ಬಿಗುವು ಎಲ್ಲರಿಗೂ ಗೊತ್ತಿರುವಂತದ್ದೇ. ಅಂತಹ ಬಿಗುವಿನ ಪರಿಸರ ತೆಗೆದು ಸಾಮರಸ್ಯದ ಕಹಳೆ ಮೊಳಗಲೆಂದೇ ನಮ್ಮೀ ದೇಶ ತನ್ನ ಮಕ್ಕಳಿಗೆ ಶಿಕ್ಷಣ ಕೊಡುತ್ತಿದೆಯೇ ಹೊರತು ಡಾಕ್ಟರು ಇಂಜಿನೀಯರುಗಳಾಗಿ ದೊಡ್ಡ ಪಗಾರದ ನೌಕರಿ ಹಿಡಿದು ಜಾತಿ ಧರ್ಮಗಳ ಜಾಡು ಹಿಡಿದು ಅಳೆದು ತೂಗಿ ಮಾಡಿರೆಂದಲ್ಲ. ಇತ್ತೀಚಿಗೆ ಫೇಸ್ಬುಕ್, ಟ್ವಿಟ್ಟರ್,ಕೋರಾ ಸೇರಿದಂತೆ ಸಾಮಾಜಿಕ ಜಾಲತಾಣಗಳನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಬುದ್ಧಿವಂತರ ಸೋಗಿನಲ್ಲಿ ಒಡೆಯುವ ನೀತಿ ಇಂತಹ ಸಾಮಾಜಿಕ ತಾಣಗಳ ಮುಖಾಂತರ ನಿಧಾನವಾಗಿ ನಮ್ಮ ಯುವ ಜನತೆಯ ಮನಸ್ಸಿಗಿಳಿಯುತ್ತಿದೆ. ದೇಶದಲ್ಲಿ ಯಾವುದೋ ಕಾರಣಕ್ಕಾದ ಕೊಲೆಯನ್ನು ಧರ್ಮವೋ ಅಥವಾ ರಾಜಕೀಯ ಪಕ್ಷವೊಂದಕ್ಕೋ ಕಟ್ಟಿ ತಾಳೆ ಹಾಕಿ ಆದಷ್ಟೂ ಸಮುದಾಯವನ್ನು ಆರೋಪಿ ಸ್ಥಾನದಲ್ಲಿಟ್ಟು ನೋಡಿಬಿಡುವುದು ಸರ್ವೇ ಸಾಮಾನ್ಯವಾಗುತ್ತಿದೆ. ಅದೂ ಸಾಲದೇ ಇದೆಲ್ಲವನ್ನು ಮಾಡುತ್ತಿರುವರು ಅವಿದ್ಯಾವಂತರಲ್ಲ, ಅಶಿಕ್ಷಿತರಲ್ಲ, ಬದಲಾಗಿ ಒಳ್ಳೆ ಶಿಕ್ಷಣ ಪಡೆದ ಸೊ ಕಾಲ್ಡ್ ಶಿಕ್ಷಿತರು, ಬುದ್ಧಿಜೀವಿಗಳು.
ನಮ್ಮ ದೇಶ ಸ್ವಾತಂತ್ರ್ಯ ಕಂಡು ಸ್ವಾಯತ್ತತೆಡೆಗೆ ಕಾಲಿಟ್ಟಾಗ ನಮ್ಮ ನಿಮ್ಮ ಹಿರೀಕರು ಯೋಚಿಸಿ ಕಾರ್ಯರೂಪಕ್ಕೆ ತಂದಿದ್ದು ದೇಶದ ಶಿಕ್ಷಣ ವ್ಯವಸ್ಥೆ ಬಲ ಪಡಿಸುವುದು ಹಾಗು ಹೆಚ್ಚು ಹೆಚ್ಚು ಜನರನ್ನು ಸುಶಿಕ್ಷಿತರನ್ನಾಗಿ ಮಾಡುವುದು. ಎಂದೋ ಪ್ರತಿಫಲ ಕೊಡುವ ಆ ಯೋಜನೆ ಅಂದಿನ ಕಾಲಮಾನಕ್ಕೆ ಭರಿಸಲಾಗದ ಬಾಬತ್ತಿನ ಯೋಜನೆಯಾದರೂ ಅಲ್ಲಿ ಎದುರಾಗುವ ಕಷ್ಟಗಳನ್ನು ನುಂಗಿಕೊಂಡು, ಏಗಿಕೊಂಡು ಶಿಕ್ಷಣ ಯೋಜನೆಗಳನ್ನು ಜಾರಿಮಾಡಿದ್ದರು. ನಮ್ಮ ಜನ ಶಿಕ್ಷಣ ಪಡೆದಷ್ಟು ದೇಶ ಸುಭೀಕ್ಷತೆಯೆಡೆಗೆ ನಡೆಯುತ್ತದೆ, ಜನ ಬುದ್ಧಿವಂತರಾದಷ್ಟು ದೇಶ ಸಬಲವಾಗಿ ಭವಿಷ್ಯದಲ್ಲಿ ನಡೆಯಬಹುದಾದ ಬ್ರಿಟಿಷ್ ರಾಜ ನೀತಿಯಂತಹ ವಸಾಹತು ವಾದವನ್ನು ತಮ್ಮ ಬುದ್ಧಿಮತ್ತೆಯಿಂದಲೇ ಇಲ್ಲಿನ ಜನರು ನಿರಾಕರಿಸಿಬಿಡುತ್ತಾರೆ ಎನ್ನುವ ಕನಸನ್ನು ಅವರು ಆಗ ಕಟ್ಟಿರಲಿಕ್ಕೆ ಸಾಕು.ಆದರೆ ಶಿಕ್ಷಿತರಾದ ಜನಾಂಗ ಮಾಡಿದ್ದು, ಮಾಡುತ್ತಿರುವುದು ಎಲ್ಲವೂ ಬೇರೆಯೇ. ಶಿಕ್ಷಿತರಾದ ತಕ್ಷಣ ತಂಡೋಪ ತಂಡವಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗಿದ್ದು ಒಂದಾದರೆ, ಈ ವಲಸೆಯಿಂದ ಕೃಷಿ ಕಾರ್ಮಿಕರ ಅಭಾವ ಮಿತಿ ಮೀರಿದ್ದು ಭಾರತದ ಕೃಷಿಗೆ ಎಳೆದ ಬರೆಯಲ್ಲದೆ ಮತ್ತಿನ್ನೇನೂ ಅಲ್ಲ. ಇನ್ನೂ ಮೀರಿ ವೃತ್ತಿಪರ ಶಿಕ್ಷಣಗಳನ್ನು ಪಡೆಯುವ ಈಗಿನ ಮಂದಿ ವಿದೇಶಕ್ಕೆ ಹಾರಿ ಯಥೇಚ್ಛವಾಗಿ ಸಂಪಾದಿಸಲು ಮಾಡಿಕೊಳ್ಳುತ್ತಿರುವ ಯೋಜನೆಗಳು ಪಶ್ಚಿಮ ದೇಶದ ರಾಯಭಾರಿ ಕಚೇರಿಗಳ ಮುಂದಿನ ಭಾರತೀಯರು ವೀಸಾ ಪಡೆಯಲು ಸಾಲುಗಟ್ಟಿರುವುದನ್ನು ಕಂಡಾಗಲೇ ಅರ್ಥವಾಗುತ್ತದೆ. ಒಟ್ಟಿನಲ್ಲಿ ಈ ದೇಶದಲ್ಲಿ ಯಾವುದಕ್ಕೋ ಹೆಣೆದ ಯೋಜನೆಯೊಂದು ಇನ್ಹೇಗೋ ತಿರುಗಿ ಅದಲು ಬದಲಾಗಿ ಬೆರೆತುಹೋಗಿದ್ದು ಇದೀಗ ಮೆಲ್ಲಗೆ ಇತಿಹಾಸವಾಗುತ್ತಿದೆ.
ಜನ ಹೆಚ್ಚೆಚ್ಚು ದುಡ್ಡು ಸಂಪಾದಿಸಲು ಶುರುವಿಟ್ಟುಕೊಳ್ಳುತ್ತಿದ್ದಂತೆಯೇ ದೇಶೀಯ ಮಟ್ಟದಲ್ಲಿ ಅರ್ಥವ್ಯವಸ್ಥೆಯ ಮಾಪನಗಳಾದ ಜಿಡಿಪಿ, ಎನ್ಡಿಪಿ, ಎನ್ ಎನ್ ಪಿ ಗಳೆಲ್ಲ ಸುಧಾರಿತ ಮಟ್ಟಕ್ಕೆ ಬಂದು ತಗುಲಿ ಪ್ರಪಂಚದೆದುರು ಭಾರತವೂ ಬೆಳೆದು ನಿಂತ ರಾಷ್ಟ್ರ ಎಂದು ಸಾಬೀತು ಪಡಿಸುತ್ತಿವೆ, ಆದರೆ ದೇಶದೊಳಗಿನ ಮಾನವೀಯ ಮೌಲ್ಯಗಳು ಅಷ್ಟೇ ವೇಗವಾಗಿ ಕುಸಿದು ಈ ಮಣ್ಣಿನ ಜನ ಮನಸ್ಥಿತಿಗಳನ್ನು ಅಲುಗಾಡಿಸುತ್ತಿರುವುದು ಸುಳ್ಳಲ್ಲ.ಹಾಗಾದರೆ ಆಗಿದ್ದೇನು?. ವಿದ್ಯೆ ಕಲಿತವರೆಲ್ಲ ವಿಶ್ವ ಮಾನವೀಯತೆಗೆ ಆಕರ್ಷಿತರಾಗಲಿಲ್ಲವೇ? ಜನಾಂಗವೊಂದು ಶಿಕ್ಷಿತವಾದರೆ ಆ ರಾಷ್ಟ್ರ ಸುಭೀಕ್ಷಗೊಳ್ಳುತ್ತದೆ ಎಂಬ ನಮ್ಮ ಹೀರೀಕರ ನಿಲುವು ತಪ್ಪಾಯಿತೇ? ಜಾತಿ, ಧರ್ಮಗಳನ್ನು ವೋಟಿಗೋಸ್ಕರ ವಿಕೇಂದ್ರೀಕರಿಸಿ ಗುಂಪು ಗುಂಪುಗಳ ನಡುವೆ ಕಿಚ್ಚು ಹಚ್ಚುವರ ಸಂಖ್ಯೆ ಮೇರೆ ಮೀರಿತೆ? ಇಂದಿನ ಕಾಲಮಾನದ ಹಣ ಬಲ ಜನಗಳನ್ನು ಹೀಗಾಗಲು ಪುಸಲಾಯಿಸಿತೆ? ....... ಪಟ್ಟಿ ಮುಂದುವರಿಯುತ್ತಲೇ ಇರುತ್ತದೆ, ಆದರೆ ಅದಕ್ಕೆ ಉತ್ತರವೀಯಬಲ್ಲವನು ಮಾತ್ರ ಕಾಲನೊಬ್ಬನೇ.
ಸಮುದಾಯಗಳ ನಡುವಿನ ಬಿಗುವು ಹೆಚ್ಚುತ್ತಿರುವ ಈ ಸಮಯದಲ್ಲಿ ಕುವೆಂಪುರ ವಿಶ್ವ ಮಾನವ ಸಂದೇಶ ವಿಶ್ವಕ್ಕೆ ಅತಿ ಪ್ರಸ್ತುತವೆನಿಸುತ್ತದೆ.