ಬರೋಬ್ಬರಿ ಒಂದು ದಶಕ ಮುಗಿದುಹೋಯಿತು, ನಾನು ಈ ಬ್ಲಾಗಿನ ಬರಹಕ್ಕೆ ಮೊದಲುಗೊಂಡು. ಈ ಬರವಣಿಗೆಯ ಹುಚ್ಚು ನನಗೆ ಎಲ್ಲಿ ಯಾವಾಗ ಆರಂಭವಾಯಿತೋ? ಕರಾರುವಕ್ಕಾಗಿ ನನಗೂ ಗೊತ್ತಿಲ್ಲ. ಸ್ವಲ್ಪ ಸ್ವಲ್ಪ ಜ್ಞಾಪಿಸಿಕೊಳ್ಳುವುದಕ್ಕೆ ಪ್ರಯತ್ನ ಪಟ್ಟರೆ ಬಹುಷಃ ಕನ್ನಡ ಭಾಷೆ-ಸಂಸ್ಕೃತಿ, ದೇಶಾಭಿಮಾನ, ರಾಷ್ಟ್ರೀಯ ವಿಚಾರಗಳು, ಅಂತಾರಾಷ್ಟ್ರೀಯ ವಿದ್ಯಮಾನಗಳ ಕುರಿತು ಫೇಸ್ ಬುಕ್ ನಲ್ಲಿ ಬರುತ್ತಿದ್ದ ಪೋಸ್ಟ್ ಗಳಿಗೆ ಪ್ರತಿಕ್ರಿಯಿಸಿ ಬರೆಯುತ್ತಿದ್ದ ಲೇಖನಗಳಿಂದ ಈ ಸಣ್ಣ ಬರವಣಿಗೆಯ ಹವ್ಯಾಸ ಆರಂಭವಾಯಿತೆನ್ನಿ. ನಂತರದ ದಿನಮಾನಗಳಲ್ಲಿ ಆ ಹಿಂದೆ ನಾನು ಲೇಖನಗಳನ್ನು ಬರೆಯುತ್ತಿದ್ದನಲ್ಲ ಅವುಗಳನ್ನ ಫೇಸ್ ಬುಕ್ಕಿನಲ್ಲಿ ನನಗೆ ಬೇಕೆಂದಾಗ ತಡಕುವುದು ಬಹು ಪ್ರಯಾಸದ ಕೆಲಸವಾಯಿತು. ನಾನು ಬರೆದ ಲೇಖನಗಳನ್ನು ನಾನೇ ಏಕೆ ಮತ್ತೆ ಮತ್ತೆ ತಡಕಲು ಪ್ರಯತ್ನಿಸುತ್ತಿದ್ದೆನೋ ಅದು ಇಂದಿಗೂ ನನಗೆ ತಿಳಿಯದೆ ಇರೋ ವಿಷಯ. ಒಮ್ಮೊಮ್ಮೆ ಫೇಸ್ ಬುಕ್ಕಿನ ಮುಖ್ಯ ಲೇಖನಕ್ಕೆ ಬಾರದಷ್ಟು ಲೈಕುಗಳು ನನ್ನ ಪೋಸ್ಟಿಗೆ ಬರುತ್ತಿದ್ದುದು ಒಂದು ರೀತಿಯಲ್ಲಿ ನನ್ನ ಬರವಣಿಗೆಯ ಮೇಲೆ ನನಗೆ ಹೆಮ್ಮೆ ಉಂಟು ಮಾಡಿದ ಹಾಗೆ ತೋರುತ್ತಿತ್ತು, ಬಹುಷಃ ಅದು ಅಹಂಕಾರವಾದರೂ ಆಗಿತ್ತೇನೋ ಗೊತ್ತಿಲ್ಲ. ಇದಾದ ತರುವಾಯೂ ನಾನು ಬರೆದ ಲೇಖನಗಳನ್ನು ಓದುತ್ತಾರೋ ಬಿಡುತ್ತಾರೋ ನನ್ನ ಗೆಳೆಯರ ಬಳಗದೊಂದಿಗೆ ಹಂಚಿಕೊಳ್ಳುತ್ತಿದ್ದೆ.
ವಿಕಿಪೀಡಿಯಾ ಮಾಹಿತಿ ಕಣಜಕ್ಕೆ ನಾನು ಕನ್ನಡ ಲೇಖನಗಳನ್ನು ಬರೆಯುವುದಕ್ಕೆ ತೊಡಗಿದಾಗ ವಿಕಿಪೀಡಿಯಾ ಕನ್ನಡ ಸಮುದಾಯ ಇನ್ನೂ ಎಳೆಯ ಹಂತದಲ್ಲಿತ್ತು. ಕನ್ನಡಕ್ಕೆ ಬೇಕಿರುವ ಲೇಖನಗಳನ್ನು ಪಟ್ಟಿಮಾಡಿ ಇಟ್ಟಿರುತ್ತಿದ್ದ ಸ್ಥಳಕ್ಕೆ ಹೋಗಿ ಆ ಪಟ್ಟಿಗಳಲ್ಲಿ ಇದ್ದ ಕೆಲವನ್ನು ಹೆಕ್ಕಿಕೊಂಡು ಅದಕ್ಕೆ ಲೇಖನ ಬರೆಯುತ್ತಿದ್ದ ಕಾಲವೂ ಒಂದಿತ್ತು. ನಾನು ಲೇಕಸೇವಾ ಆಯೋಗದ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳುತ್ತಿದ್ದ ಕಾಲದಲ್ಲೂ ಪರೀಕ್ಷೆಗೆಂದು ತಯಾರಿಮಾಡಿಕೊಂಡ ವಿಷಯಗಳ ಮೇಲೆ ವಿಕಿಪೀಡಿಯಾದಲ್ಲಿ ಲೇಖನ ಬರೆದದ್ದು ಉಂಟು. ನಮ್ಮೀ ಭಾರತ ದೇಶದಲ್ಲಿ ಸರ್ಕಾರಿ ಕೆಲಸಗಳನ್ನು ಹಿಡಿಯ ಹೊರಟ ಎಷ್ಟು ಜನ ತಾವು ಕಲಿತದ್ದನ್ನು ಡಿಜಿಟಲ್ ಮಾಧ್ಯಮ ಮುಖಾಂತರ ಬರೆದಿಟ್ಟರೋ ಗೊತ್ತಿಲ್ಲ. ನಾನು ಏಕೆ ಬರೆದೆನೋ ಅದೂ ಗೊತ್ತಿಲ್ಲ, ಒಟ್ಟಿನಲ್ಲಿ ನನ್ನ ಅಳತೆಗೆ ನಿಲುಕುವಷ್ಟು ಬರೆದಿಟ್ಟಿದಂತೂ ಸತ್ಯ.
ಇವುಗಳ ನಡು-ನಡುವೆ ಭಾವಪೂರ್ಣವಾದ ಕೆಲವು ಸನ್ನಿವೇಶಗಳಲ್ಲಿ ನನ್ನ ಮನಸ್ಸಿನಲ್ಲಿ ಮೂಡುತ್ತಿದ್ದ ಕವಿತೆಗಳನ್ನು ಎಂದಿಗೂ ನಾನು ಕಾಗದ ಮೇಲೆ ಇಳಿಸುತ್ತಿರಲಿಲ್ಲ. ಅನೇಕ ಕವಿಗಳ ಕಾದಂಬರಿಗಳು-ಕವಿತೆಗಳನ್ನು ನಾನು ಓದಿಕೊಂಡಿದ್ದರೂ ನನ್ನ ಅಂತರಾಳದಲ್ಲಿ ಮೂಡಿಬರುತ್ತಿದ್ದ ಕವಿತೆಗಳನ್ನು ದಾಖಲು ಮಾಡಬೇಕೆಂದು ಅದ್ಯಾಕೆ ಆ ಹಿಂದೆ ಅನಿಸಿರಲಿಲ್ಲವೋ ಗೊತ್ತಿಲ್ಲ. ಸಮಯ ಪಕ್ವವಾದಾಗ ಆ ಕೆಲಸವನ್ನು ಮಾಡುವುದಕ್ಕೆ ಮೊದಲಾದೆ. ಮೊದ-ಮೊದಲು ಸಣ್ಣ ಪುಟ್ಟ ಹಾಳೆಗಳಲ್ಲಿ ಬರೆದಿಟ್ಟುಕೊಂಡ ಕವಿತೆಗಳನ್ನು ಆಮೇಲೆ ಈ ಬ್ಲಾಗಿಗೆ ಇಳಿಸಿದ್ದೇನೆ.
ಕವಿತೆಯೆಂಬ ಕಲ್ಪನೆಯ ಲೋಕಕ್ಕೂ, ಈಗ ಖುದ್ದು ಇಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಗೂ ಅಜಗಜಾಂತರವಲ್ಲವೇ. ಕವಿತೆಯನ್ನೂ, ಇಂದಿನ ವಿದ್ಯಮಾನವನ್ನೂ, ಎಂದೋ ಕಂಡು-ಕೇಳಿದ ನೈತಿಕ ಮೌಲ್ಯ ಹೊತ್ತ ಕಥೆಗಳನ್ನೂ, ಘಟನೆಗಳನ್ನೂ ನನ್ನ ದೃಷ್ಟಿಕೋನದಲ್ಲಿ ದಾಖಲಿಸಬೇಕು ಎನ್ನುವ ಹಂಬಲ ಉಂಟಾಯ್ತು. ದಿನ ಪತ್ರಿಕೆಗಳನ್ನು ಓದುವಾಗ ಸಂಪಾದಕೀಯಗಳಿಗೆ ಹೋಗಿ ತಪ್ಪದೆ ಓದಿಕೊಳ್ಳುತ್ತಿದ್ದ ನನಗೆ ಇನ್ನೊಬ್ಬರ ದೃಷ್ಟಿಕೋನದಲ್ಲಿ ಅಭಿವ್ಯಕ್ತವಾಗಿರುವ ವಿಚಾರಗಳನ್ನು ಸುಲಭವಾಗಿ ಗ್ರಹಿಸುತ್ತಾ ಗ್ರಹಿಸುತ್ತಾ ನನ್ನದೂ ಒಂದು ದೃಷ್ಟಿಕೋನವನ್ನು ಬೆಳೆಸಿಕೊಳ್ಳಲು ಅನುಕೂಲವಾಯಿತು. ಇವೆಲ್ಲವನ್ನೂ 'ನಾ-ಕಂಡಂತೆ' ದಾಖಲಿಸುವುದಕ್ಕೋಸ್ಕರವೇ 2016ರಲ್ಲಿ ಶುರುವಾದದ್ದು ಈ ಬ್ಲಾಗ್. ಎಷ್ಟೇ ಆದರೂ ನಮ್ಮ ಕಾಲಾನಂತರವೂ ನಮ್ಮ ಬಗ್ಗೆ ತಿಳಿಯುವರಿಗೆ, ಅಥವಾ ನಮ್ಮ ಸಮಯದ ತರುವಾಯೂ ಇಂತಹದ್ದು ಒಂದು ದೃಷ್ಟಿಕೋನವಿತ್ತೆಂಬುದನ್ನು ಇತರರಿಗೆ ತಿಳಿಸುವುದಕ್ಕೆ ಈ ಡಿಜಿಟಲ್ ಮಾಧ್ಯಮ ಪ್ರಬಲ ಎಂದೆನಿಸಿತು. ನಮಗೂ ಒಮ್ಮೊಮ್ಮೆ ನಮ್ಮ ನಾಲ್ಕೋ-ಐದೋ ತಲೆಮಾರುಗಳ ಹಿಂದಿನವರು ಹೇಗಿದ್ದರೂ? ಅವರ ಮನಸ್ಥಿತಿ ಹೇಗಿತ್ತು ? ಎಂಬುದೆಲ್ಲವನ್ನೂ ತಿಳಿದುಕೊಳ್ಳುವುದಕ್ಕೆ ಕೌತುಕವುಂಟಾಗುವುದಿಲ್ಲವೇ?. ಹಾಗೆಯೇ ನಮ್ಮೀ ಜೀವನದ ವಿವಿಧ ಕಾಲಘಟ್ಟಗಳಲ್ಲಿ ನಾವು ಕಂಡು-ಉಂಡ ಸುಖ-ದುಃಖಗಳನ್ನು ಇಲ್ಲಿ ದಾಖಲಿಸಲಾಗಿ ಈ ಮೂಲಕ ಮುಂದಿನ ಪೀಳಿಗೆಗೆ ಈ ದಿನಮಾನದ ಮನಸ್ಥಿತಿಗಳನ್ನು-ಪರಿಸ್ಥಿತಿಗಳನ್ನು ತಿಳಿಸುವ ಸಣ್ಣದೊಂದು ಪ್ರಯತ್ನ ಇದಾದರೂ ಆಗಬಹುದು ಎನ್ನುವ ಬಲವಾದ ಆಶಯ ನನ್ನಲ್ಲಿತ್ತು.
ಇವುಗಳನ್ನೆಲ್ಲ ಬರೆದಿಡುವುದಕ್ಕೆ ನಾನ್ಯಾವ ಮಹಾತ್ಮ ಎಂದು ಅನಿಸಬಹುದು. ನಾವು ಇತಿಹಾಸದಲ್ಲಿ ಎಡವಿರುವುದೂ ಇಲ್ಲಿಯೇ. ನಮ್ಮ ರಾಮಾಯಣ, ಮಹಾಭಾರತ ಇತರೆ ಕಾವ್ಯಗಳಲ್ಲಿ ರಾಜರ-ಅರಮನೆಯ-ಅಂತಃಪುರದ ಕಥಾನಕಗಳು ಕಂಡುಬರುತ್ತವೆ ಹೊರತು ಅಲ್ಲಿನ ಸಾಮಾನ್ಯ ನಾಗರೀಕನ ಜೀವನದ ನೋವು-ನಲಿವುಗಳೇನು ಎನ್ನುವುದು ಎಲ್ಲಿಯೂ ದಾಖಲಾಗಿಲ್ಲ. ಆ ಕಾರಣದಿಂದಲೇ ಆ ದಿನಮಾನದ ಸಾಮಾನ್ಯ ಜನರ ಬಗ್ಗೆ ಏನೊಂದು ನಮಗೆ ತಿಳಿಯುವುದಿಲ್ಲ. ರಾಮಾಯಣ-ಮಹಾಭಾರತ ಬಿಡಿ, ಬೀದಿ ಬೀದಿಯಲ್ಲಿ ಚಿನ್ನ-ಬೆಳ್ಳಿ-ಮುತ್ತು-ರತ್ನ-ವಜ್ರ-ವೈಡೂರ್ಯಗಳನ್ನೂ ರಸ್ತೆಯಲ್ಲಿ ಸುರುವಿಕೊಂಡು ಸೇರು-ಪಾವುಗಳಲ್ಲಿ ಮಾರಾಟ ಮಾಡುತ್ತಿದ್ದ ಪ್ರಪಂಚದಲ್ಲೇ ಅತಿ ಶ್ರೀಮಂತ ಸಾಮ್ರಾಜ್ಯವಾಗಿದ್ದ ಕರ್ನಾಟಕ ಸಾಮ್ರಾಜ್ಯದ ಅರಸರು, ಸೇನಾದಂಡನಾಯಕರು, ವ್ಯಾಪಾರಿಗಳ ಬಗೆಗೆ ನಮಗೆ ಮಾಹಿತಿ ಸಿಗುತ್ತದೆಯೇ ಹೊರತು ಅಲ್ಲಿನ ಸಾಮಾನ್ಯ ರೈತನ ಬಗೆಗಾಗಲಿ, ಸಾಧಾರಣ ವ್ಯಕ್ತಿಯ ಜೀವಮಾನದ ಬಗೆಗಾಗಲಿ ಯಾವ ಮಾಹಿತಿಯೂ ದೊರೆಯುವುದಿಲ್ಲ. ಹೀಗೆಯೇ ಇತ್ತೀಚಿಗೆ ಸ್ನೇಹಿತನೊಬ್ಬನ ಬಳಿ ಹೇಳಿದಾಗ ಅವನು 'ಪ್ರಪಂಚ ಚೆನ್ನಾಗಿ ಬದುಕಿದವರನ್ನು ಮಾತ್ರ ನೆನೆಯುತ್ತದೆ. ಇನ್ನುಳಿದವರನ್ನು ಮರೆತುಹೋಗುತ್ತದೆ' ಎಂಬುದನ್ನವು ಚುಟುಕಾಗಿ ಹೇಳಿಬಿಟ್ಟ. ಇರಲಿ ಅವನ ದೃಷ್ಟಿಕೋನವೂ ಸರಿ ಎಂದಿಟ್ಟುಕೊಳ್ಳೋಣ. ಮುಂದಣ ಪೀಳಿಗೆಯ ಇತಿಹಾಸದ ದಾಖಲೆಗಾಗಿ ಅಲ್ಲದಿದ್ದರೂ ನನ್ನ ಜೀವನದ ಕಿಟಕಿಯಲ್ಲಿ ನಾನು ಕಂಡದ್ದೇನು ಎಂಬುದನ್ನು ಅಕ್ಕರದ ರೂಪದಲ್ಲಿ ಬಿತ್ತರಿಸಲು ಯಾವುದೇ ಅಡ್ಡಿಯಿರುವುದಿಲ್ಲ ಅಲ್ಲವೇ. ಅಲ್ಲಿಂದ ಶುರುವಾದ ನನ್ನ ಈ ಬರಹದ ಪಯಣ ಒಂದು ದಶಕವನ್ನು ಪೂರೈಸಿದೆ, ಇನ್ನೂ ಮುಂದುವರಿಯುತ್ತಿದೆ.
ಈ ದಶಕ ಪರ್ಯಂತ ನಾನು ಬರೆಯುತ್ತ ಬರೆಯುತ್ತಾ ಅನುಭವ ಮಾಯುತ್ತಿರುವುದು ಕಣ್ಣಿಗೆ ಕಾಣಿಸುತ್ತಿದೆ. ಆರಂಭಿಕ ಕಾಲಘಟ್ಟದಲ್ಲಿ ನಾನು ಬರೆದ ಲೇಖನಗಳು ಕೆಲವು ನನಗೆ ಈಗೀಗ ಬಾಲಿಶವಾಗಿ ತೋರುತ್ತವೆ. ಇನ್ನು ಕೆಲವು ಲೇಖನಗಳು ಅಭಿಮಾನ ತರಿಸುತ್ತವೆ. ಈಗೀಗ ಕೆಲವು ನನ್ನ ಮಿತ್ರರು ನನ್ನೀ ಕನ್ನಡ ಇಷ್ಟು ಸಾಣೆಯಾಗಿರುವುದರ ಬಗ್ಗೆ ಆಗಾಗ ಆಶ್ಚರ್ಯ ವ್ಯಕ್ತಪಡಿಸುವುದೂ ಉಂಟು. ಬರೆಯುತ್ತಾ ಬರೆಯುತ್ತಾ ನಾನು ಕಲಿತದ್ದೂ ಬಹಳವಿದೆ. ಅವುಗಳ ಬಗ್ಗೆ ಆಗಾಗ ಇಲ್ಲೇ ತಿಳಿಸಿಬಿಡುತ್ತೇನೆ.
ಬಹುಷಃ ಇದು ದೈವಾನುಗ್ರಹವೇ ಇರಬೇಕು. ಮಾತೆ ಸರಸ್ವತಿ ತನ್ನ ಅಕ್ಷರ ಸಂಸ್ಥಾನದಲ್ಲಿ ನನಗೇಕೆ ಜಾಗ ಕೊಟ್ಟಳೋ ಅದೂ ತಿಳಿಯದು. ಮತೊಮ್ಮೆ ಈ ಲೇಖನ ಓದಿಕೊಂಡರೆ 'ಗೊತ್ತಿಲ್ಲ' ಎಂಬ ಪದವು ನಿಮ್ಮ ಕಣ್ಣಿಗೆ ಅನೇಕ ಬಾರಿ ಬಡಿಯುವುದನ್ನು ನೀವು ಗಮನಿಸಿ. ಅದರ ಅರ್ಥವಿಷ್ಟೆ, ನನ್ನ ಸ್ಮೃತಿ-ಮಿತಿಗಳಿಗೂ ಮೀರಿದ ಧೀ ಶಕ್ತಿಯೊಂದನ್ನು ನನ್ನಿಂದ ಎಲ್ಲವನ್ನು ಮಾಡಿಸುತ್ತಿದೆ. ಇದು ನನ್ನೊಬ್ಬನ ಜೊತೆ ಮಾತ್ರ ನಡೆಯುತ್ತಿರುವ ಬಹು ಅಪರೂಪದ ವಿದ್ಯಮಾನವೆಂದರೆ ಅದು ಖಂಡಿತಾ ಉತ್ಪ್ರೇಕ್ಷೆಯಾಗುತ್ತದೆ. ಇದು ನಿಮ್ಮಲ್ಲೂ ಪ್ರತಿ ಕ್ಷಣವೂ ನಡೆಯುತ್ತಿರುವ ಸೋಜಿಗ. ನಾನು ಬರೆದಿಡುತ್ತಿರಬಹುದು, ನೀವು ಮೂಕ ವಿಸ್ಮಿತರಾಗಿ ಅನುಭವಿಸುತ್ತಲಿರಬಹುದು.
-o-

















