ಭಾನುವಾರ, ಜೂನ್ 6, 2021

ಕಂಪನಿಯದೇ ಕಂಪನ

ಮೊನ್ನೆ ಮೊನ್ನೆ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಕಥೆಯನ್ನೋದುತ್ತಿದ್ದೆ. ೧೯೫೮ರಲ್ಲಿ ಉಂಟಾದ ಸಂಗ್ರಾಮಕ್ಕೆ ಬ್ರಿಟೀಷ್ ಅರಸೊತ್ತಿಗೆ ತಲೆಬಾಗದಿದ್ದರೂ ಸ್ವಲ್ಪ ಬೆದರಿಕೊಂಡಿದ್ದು ನಿಜ. ಆ ಕಾರಣಕ್ಕೆ ಸಂಗ್ರಾಮವನ್ನು ತಣ್ಣಗಾಗಿಸಲು 'ಕಂಪನಿ ಸರ್ಕಾರ'ದಿಂದ 'ಬ್ರಿಟೀಷ್ ರಾಜ್' ಸರ್ಕಾರದೆಡೆಗೆ ನಮ್ಮ ಪಯಣ ಎಂದು ಬ್ರಿಟೀಷ್ ದೊರೆಗಳು ಭಾರತದಲ್ಲಿ ಸಾರಬೇಕಾಯ್ತು. ಇದರಿಂದ ಭಾರತದ ಜನಾಂಗ ತೃಪ್ತಿಯನ್ನೇನು ಹೊಂದಲಿಲ್ಲವಾದರೂ ಹೊಸ ವ್ಯವಸ್ಥೆಯೊಂದರ ಪರಿಚಯವಾಗಲು ಆ ಘಟನೆ ನಾಂದಿಯಾಯಿತು. ಕಂಪನಿಯಿಂದಲೇ ಸಕಲ ಯುದ್ಧಗಳಾಗಿ ಭಾರತದ ಸಕಲ ಸಂಸ್ಥಾನಗಳು ಕಂಪನಿಯ ಪಾಲಾದ ತರುವಾಯು ಇಂಗ್ಲೆಂಡಿನ ಬ್ರಿಟೀಷ್ ದೊರೆಗಳು ನೇರವಾಗಿಯೇ ಈಸ್ಟ್ ಇಂಡಿಯಾ ಕಂಪನಿಗೆ ಲಗಾಮು ಬಿಗಿದು ಸರ್ಕಾರದ ಚುಕ್ಕಾಣಿಯನ್ನು ತಮ್ಮ ಕೈಗೆ ತೆಗೆದುಕೊಂಡರು. ಅಂದಿನಿಂದ ಇಂದಿನವರೆಗೂ ವಿವಿಧ ಕಂಪನಿಗಳು ಭಾರತದಲ್ಲಿ ಬಂದು ಹೋಗಿವೆ, ಕೆಲವು ಈಗಲೂ ಇವೆ. 'ಕಂಪನಿ' ಎನ್ನುವ ಪದ ಇಂಗ್ಲೀಷಿನವರ ಜೊತೆ ಭಾರತಕ್ಕೆ ಬಂತೆಂಬುದು ಮೇಲ್ನೋಟಕ್ಕೆ ನಮಗೆ ಅರಿವಿದ್ದೇ ಇದೆ. ಆದರೆ ಕಂಪನಿಯ ಸಂಸ್ಕೃತಿ ನಮ್ಮ ನಮ್ಮಲ್ಲಿ ಬದಲಾವಣೆ ತಂದೊಡ್ಡಿದ್ದು ಹೇಗೆ? ಅದು ಭಾರತದ ಸಕಲ ಸೊಡರುಗಳ ತುತ್ತಿನ ಚೀಲಕ್ಕೆ ಜೀವ ಸೆಲೆಯಾಗಿದ್ದು ಹೇಗೆ? ಎನ್ನುವ ವಿಚಾರಗಳೆಲ್ಲಾ ಸಂಶೋಧನಾ ಪ್ರಬಂಧಗಳಾಗಬೇಕಾಗಬಹುದು. ತೀರಾ ಚಿಕ್ಕದೆನ್ನಿಸುವ ಈ ವಿಚಾರ ಅಷ್ಟೊಂದು ಧೀರ್ಘ ಹಾಗು ಅದರ ಪರಿಣಾಮಗಳು ದೇಶಿಯ ಹಣಕಾಸು ವ್ಯವಸ್ಥೆಯ ಮೇಲೆ ನೇರಾ ನೇರವಾಗಿಯೇ ಉಂಟಾಗುತ್ತಾ ಸಾಗುತ್ತವೆ.

ವ್ಯಾಪಾರದ ಕಂಪನಿಯಾಗಿ ಪಶ್ಚಿಮದೇಶಗಳಿಂದ ಭಾರತಕ್ಕೆ ಬಂದಿಳಿದ ಕಂಪನಿಗಳು ತಮ್ಮೊಡನೆ ಸಂಸ್ಕೃತಿಯೊಂದನ್ನು, ವ್ಯವಹಾರ ಸಿದ್ಧಾಂತವೊಂದನ್ನೂ ಹೊತ್ತುಕೊಂಡು ಬಂದವು. ಅಲ್ಲಿಯವರೆಗೂ ಭಾರತದಲ್ಲಿ ತಂಡ ತಂಡ ವಾಗಿ ಒಂದಿಲ್ಲೊಂದು ಊರಿಗೆ ಹೋಗಿ ಮಾಡುವ ಯುದ್ಧಗಳು, ಕಲಾ ಸೇವೆಗಳು, ಸಂತೆ-ಮಾರುಕಟ್ಟೆಗಳು ಇದ್ದವೇ ಹೊರತು ನಿಯಮಗಳನ್ನು ಮೈಗೂಡಿಸಿಕೊಂಡು ಶಿಸ್ತುಬದ್ಧವಾದ, ಕ್ರಮವಾದ ವ್ಯವಹಾರ ಸಿದ್ಧಾಂತಗಳನ್ನು ಹೊಂದಿ ಒಂದು ತಂಡವಾಗಿ ಕೆಲಸ ಮಾಡುವ ವ್ಯಾವಹಾರಿಕ ಸಂಸ್ಥೆಗಳು ಇಲ್ಲವೆಂದು ತೋರುತ್ತದೆ. ಬಹುಶಃ ಇದ್ದರೂ ಭಾರತ ಉಪಖಂಡದಾದ್ಯಂತ ಹಾಗೆ ಇದ್ದಿತು ಎನ್ನುವುದಕ್ಕೆ ಪ್ರಬಲ ಸಾಕ್ಷಿ ಪುರಾವೆಗಳು ಇಲ್ಲವಷ್ಟೆ. ಭಾರತೀಯ ಆಡಳಿತೆಯಲ್ಲಿ ಸಿರಿವಂತಿಕೆ ನೋಡಿ ಮಣೆ ಹಾಕುವ ಕಾಲ ದೂರಾಗಿ, ನೇಮಿತ ಅಧಿಕಾರಿಗಳ ಮೂಲಕ ರಾಜ ಪ್ರಭುತ್ವವನ್ನು ಸ್ಥಾಪಿಸುವ ಹಾಗು ರಾಜಸ್ವಕ್ಕಾಗಿ ಅಧಿಕಾರಿಗಳನ್ನೇ ಬಳಸಿಕೊಳ್ಳುವ ರಿವಾಜು ಮೊಘಲರ ಕಾಲದಲ್ಲೇ ಬೇರೂರಲು ಆರಂಭವಾಗಿದ್ದು ಭಾರತೀಯರಿಗೆ ಕಂಪನಿ ಸಂಸ್ಕೃತಿಗೆ ಒಗ್ಗಿಕೊಳ್ಳಲು ವರದಾನವಾಗಿರಬೇಕು.

ಬ್ರಿಟೀಷರು ದಕ್ಷಿಣ ಭಾರತದ ಮೂಲಕ ಒಳ ನುಗ್ಗಲು ಸಮರ್ಥರಾದರೂ ಉತ್ತರದ ಗಂಗಾ ಮುಖಜ ಭೂಮಿ ಅವರಿಗೆ ಹೆಚ್ಚು ಮಾನವ ಸಂಪನ್ಮೂಲ ಹಾಗು ಪ್ರಾಕೃತಿಕ ಸಂಪನ್ಮೂಲಗಳನ್ನು ಒದಗಿಸಿಕೊಟ್ಟಿತು. ಅದೇ ಕಾರಣಕ್ಕೆ ಬಂಗಾಳ ಬ್ರಿಟೀಷರ ಆರಂಭಿಕ ಕಾರ್ಯ ಸ್ಥಾನವಾಯಿತು. ಈಸ್ಟ್ ಇಂಡಿಯಾ ಕಂಪನಿಯ ಕಾರ್ಯ ಸುಸೂತ್ರವಾಗಿ ನಡೆಯುತ್ತಿದ್ದರೂ ಕಂಪನಿಯ ಕೆಲವು ದುರಾಲೋಚನೆ ಮಾಡುವ ವ್ಯಕ್ತಿಗಳಿಂದ ವ್ಯತಿರಿಕ್ತವಾಯಿತು. ಕಂಪನಿಯು ಸ್ಥಳೀಯ ಸರ್ಕಾರಕ್ಕೆ(ಬಂಗಾಳದ ನವಾಬನ ಸರ್ಕಾರಕ್ಕೆ) ಕೊಡುವ ಸುಂಕದಲ್ಲಿ ವಿನಾಯಿತಿ ಕೇಳಿತು, ವಿನಾಯಿತಿ ಕೊಡಲು ನೀವೇನು ನಮ್ಮ ಸೋದರ ಮಾವನ ಮಕ್ಕಳೇ?, ಬಾಯ್ಮುಚ್ಚಿಕೊಂಡು ಸುಂಕ ಕಟ್ಟಿ ಎನ್ನುವಂತಹ ಬಂಗಾಳದ ನವಾಬನ ವರ್ತನೆಗೆ ಕ್ರುದ್ಧರಾಗಿ ಇಂಗ್ಲೀಷರು ಸೇಡು ತೀರಿಸಕೊಳ್ಳಲು ನಿಲ್ಲುತ್ತಾರೆ. ಸ್ಥಳೀಯ ರಾಜಕೀಯ ಸನ್ನಿವೇಶಗಳನ್ನು ಬಳಸಿಕೊಂಡು ಬಂಗಾಳದ ನವಾಬನಿಗೂ ಆತನ ಸೇನಾಧಿಪತಿಗೂ ಕಿತಾಪತಿ ತಂದಿಟ್ಟು ಅಲ್ಲಿನ ಸರ್ಕಾರವನ್ನು ಕೆಡವಿ ತಾವೇ ಅಧಿಕಾರ ಗದ್ದುಗೆಗೇರುತ್ತಾರೆ. ವಿಧಿಯಿಲ್ಲದೇ ಅಂದಿನ ದೆಹಲಿಯ ಮೊಘಲ್ ಆಡಳಿತ ಉತ್ತರಾಧಿಕಾರಿಗಳಿಲ್ಲದ ಬಂಗಾಳಕ್ಕೆ ಕಂಪನಿಯೇ ಉತ್ತರಾಧಿಕಾರಿ ಎಂದು ಘೋಷಿಸುತ್ತದೆ. ತಮ್ಮದೇ ಅಧಿಕಾರದಲ್ಲಿ ಸುಂಕರಹಿತ ವ್ಯಾಪಾರ-ವ್ಯವಹಾರ ನಡೆಸಲು ಮೊದಲಾಗುವ ಕಂಪನಿ ಅಲ್ಲಿನ ಜನರ ಭೂ-ತೆರಿಗೆ ಸೇರಿ ಇನ್ನಿತರ ತೆರಿಗೆಯ ರುಚಿಯನ್ನು ನೋಡುತ್ತದೆ. ನಾಯಿಯೊಂದಕ್ಕೆ ಮನುಷ್ಯ ಮಾಂಸದ ರುಚಿ ಸಿಕ್ಕರೆ ಪದೇ ಪದೇ ಅದನ್ನೇ ಬಯಸುತ್ತದಂತೆ, ಅದಕ್ಕಾಗಿ ನೂರಾರು ಜನರನ್ನು ಕಡಿಯುತ್ತದಂತೆ ಆ ನಾಯಿ. ಅಂತಹುದೇ ಚಾಳಿಗೆ ಒಳಗಾದ ಈಸ್ಟ್ ಇಂಡಿಯಾ ಕಂಪನಿ ಸುತ್ತ ಮುತ್ತಲ ರಾಜ್ಯಗಳನ್ನು ನೊಣವಿಕೊಂಡಿದ್ದಲ್ಲದೆ ದೆಹಲಿಯ ಮೊಘಲ್ ಗದ್ದುಗೆಗೆ ಗುದ್ದು ಕೊಟ್ಟಿತು. ಅದಾದ ನಂತರ ಇಡೀ ಭಾರತ ಉಪಖಂಡದ ಸಂಸ್ಥಾನಗಳು ಪ್ರತ್ಯಕ್ಷವಾಗಿ, ಅಥವಾ ಪರೋಕ್ಷವಾಗಿ ಕಂಪನಿಯ ವ್ಯವಹಾರದಡಿಗೆ ಬಂದಿದ್ದು ಅನಂತರ ಮೊದಲ ಸಿಪಾಯಿ ದಂಗೆಯ ಫಲವಾಗಿ ಕಂಪನಿಯ ಲಂಡನ್ನಿನ ರಾಜ ಪ್ರಭುತ್ವ ನೇರವಾಗಿ ಭಾರತದ ಆಡಳಿತವನ್ನು ತನ್ನ ಕೈಗೆ ತೆಗೆದುಕೊಂಡಿದ್ದು ಇದೀಗ ಇತಿಹಾಸ. ಬಹುಷಃ ಭಾರತದಷ್ಟು ಸಂಪನ್ಮೂಲಗಳನ್ನು ಬ್ರಿಟೀಷರ ದೇಶಕ್ಕೆ ವರ್ಗಾಯಿಸಿದಷ್ಟು ಇನ್ಯಾವ ವಸಾಹತು ದೇಶವೂ ವರ್ಗಾಯಿಸಿಲ್ಲ.

ಬ್ರಿಟೀಷ್ ಸರ್ಕಾರ ಭಾರತದಲ್ಲಿ ಅನುಷ್ಠಾನವಾದ ೧೯೫೮ರ ನಂತರ ಕಂಪನಿ ಎನ್ನುವುದು ಭಾರತದ ಸ್ಮೃತಿ ಪಟಲದಿಂದ ದೂರವೇನು ಉಳಿಯಲಿಲ್ಲ. ಉತ್ಪನ್ನಗಳನ್ನು ಉತ್ಪಾದಿಸುವ ಕಂಪನಿಗಳು ಹುಟ್ಟಕೊಂಡವು. ಭಾರತೀಯರ ಅಧಿಪತ್ಯದಲ್ಲೇ ನಡೆಯುವ ಕೈಗಾರಿಕೆ, ಮುದ್ರಣ ಮಾಧ್ಯಮ ಕಂಪನಿಗಳು ಹುಟ್ಟಿಕೊಂಡು ಅನೇಕರ ತುತ್ತಿನ ಚೀಲಕ್ಕೆ ಕಾರಣವಾದವು. ಅದಕ್ಕಿರುವ ಅತ್ಯಂತ ಉತ್ತಮ ಉದಾಹರಣೆ ಎಂದರೆ ಅದು ನಮ್ಮ ದೇಶದ 'ಟಾಟಾ' ಸಂಸ್ಥೆ. ಸಿಪಾಯಿ ದಂಗೆ ಮುಗಿದ ಒಂದೇ ದಶಕದಲ್ಲಿ ಕಂಪನಿ ಆರಂಭವಾಗಿ ದೇಶದಾದ್ಯಂತ ಈವತ್ತಿನ ಮಟ್ಟಿಗೆ ಬೆಳೆದು ನಿಂತಿರುವುದು ನೀವು ನಾವೆಲ್ಲಾ ಸಾಕ್ಷೀಕರಿಸಿಕೊಂಡಿರುವ ಸತ್ಯ.

ಸಂಗೀತ ವಿಚಾರದಲ್ಲಿ ಘರಾಣಗಳನ್ನು ಮಾಡಿಕೊಂಡು ಊರೂರು ತಿರುಗಿ ಕಚೇರಿಗಳನ್ನು ನೀಡುತ್ತಿದ್ದ ಸಂಗೀತ ತಂಡಗಳೂ ತಮ್ಮ ಹೆಸರನ್ನು ಕಂಪನಿಯಾಗಿ ಬದಲಿಸಿಕೊಂಡವು. ಇವೆಲ್ಲಕ್ಕಿಂತ ಹತ್ತೊಂಭತ್ತನೇ ಶತಮಾನದ ಉತ್ತರಾರ್ಧದಿಂದ ಇಪ್ಪತ್ತನೇ ಶತಮಾನದ ಬಹುಪಾಲು ಸುಮಾರು ೧೦೦-೧೨೦ ವರ್ಷಗಳ ಕಾಲ ಕನ್ನಡ ಸೀಮೆಯಲ್ಲಿ ಮೆರೆದದ್ದು ನಾಟಕದ ಕಂಪನಿಗಳು. ನಾಟಕದ ಕಂಪನಿಗಳು ಕನ್ನಡ ಸೀಮೆಯಲ್ಲಿ ಸಿನೆಮಾ ಪ್ರಪಂಚಕ್ಕಿಂತ ಮೊದಲು ನೆಚ್ಚಿಕೊಂಡಿದ್ದ ಮನೋರಂಜನಾ ಮಾಧ್ಯಮ. ಅಲ್ಲಿನ ಜೀವನ ಶೈಲಿ, ಕಷ್ಟ-ನಷ್ಟಗಳನ್ನು ಇಂದು ನಾವು ಹಲವರ ಜೀವನ ಚರಿತ್ರೆಗಳಿಂದ ತಿಳಿದುಕೊಳ್ಳಬಹುದು. ಕನ್ನಡ ವರನಟ ಡಾ.ರಾಜ್ ಕುಮಾರ್, ಗುಬ್ಬಿ ವೀರಣ್ಣನವರು, ಸುಬ್ಬಯ್ಯ ನಾಯ್ಡು, ಗುಡಿಗೇರಿ ಬಸವರಾಜರ ಜೀವನ ಚರಿತ್ರೆಗಳನ್ನೊಮ್ಮೆ ನೀವು ತಿಳಿದುಕೊಂಡರೆ ನಾಟಕ ಕಂಪನಿಯ ಸಂಸ್ಕೃತಿ ಆಗ್ಗೆ ಅನೇಕ ಕಲಾವಿದರಿಗೆ ಜೀವ ಸೆಲೆಯಾಗಿದ್ದು ಹೇಗೆ ಎನ್ನುವುದು ತಿಳಿದುಬರುತ್ತದೆ. ಪುಟ್ಟಣ್ಣ ಕಣಗಾಲರ ನಿರ್ದೇಶನದ 'ರಂಗನಾಯಕಿ' ಸಿನೆಮಾ ಕೂಡ ಇದೇ ಕಥಾ ಹಂದರದ್ದು. ಅದೊಂದು ಸಿನೆಮಾ ನಿಮಗೆ ನಾಟಕ ಕಂಪನಿಯ ಹಿಂದಿನ ನೋವು-ನಲಿವುಗಳನ್ನು ಕಟ್ಟಿಕೊಡುವಷ್ಟು ಸುಲಭವಾಗಿ ನಾನು ಇಲ್ಲಿ ಕಟ್ಟಿಕೊಡಲಾರೆನೇನೋ!. ಅವಶ್ಯವಾಗಿ ಆ ಸಿನೆಮಾವನ್ನು ನೋಡಿ, ನಾನಿಲ್ಲಿ ಬರೆಯುವುದಕ್ಕಿಂತ ಹೆಚ್ಚಿನ ವಿಚಾರ ವಿಶೇಷತೆ ನಿಮ್ಮೊಳಗೆ ಹರಿಯುತ್ತದೆ.

ಇನ್ನು ಸ್ವಾತಂತ್ರ್ಯ ಕಂಡು ಸ್ವಾಯತ್ತತೆಯೆಡೆಗೆ ನುಗ್ಗಿದ ಭಾರತ ೧೯೯೧ರಲ್ಲಿ ತನ್ನ ಆರ್ಥಿಕ ನೀತಿಯಲ್ಲಿ ಸ್ವಲ್ಪ ಸಡಿಲಿಕೆ ಮಾಡಿಕೊಂಡು ಮುಕ್ತ ಮಾರುಕಟ್ಟೆಯೆಡೆಗೆ ನಡೆಯಿತು. ವಿದೇಶದ ಕಂಪನಿಗಳು ಭಾರತಕ್ಕೆ ದಾಂಗುಡಿಯಿಡಲು ಅದು ಕಾರಣವಾಯಿತಷ್ಟೆ. ಭಾರತದಲ್ಲಿ ಮಿತಿ ಮೀರಿ ಬೆಳೆಯುತ್ತಿದ್ದ ಜನಸಂಖ್ಯೆಗೆ ವಿಪರೀತ ಉದ್ಯೋಗದ ಅವಕಾಶಗಳನ್ನು ವಿದೇಶಿ ಕಂಪನಿಗಳು ಭಾರತದ ನೆಲದಲ್ಲೇ ಸೃಷ್ಟಿಸಿಕೊಟ್ಟವು. ಭಾರತೇತರ ದೇಶಗಳಲ್ಲಿ ಮಾನವ ಸಂಪನ್ಮೂಲ ಕೊರತೆ ಇಂದಿಗೂ ಇದೆ, ಒಂದಷ್ಟು ದೇಶಗಳು ಇದಕ್ಕೆ ಹೊರತಾಗಿರಬಹುದು, ಆದರೆ ಇಂದು ಭಾರತ ವಿಶ್ವದ ಅನೇಕ ರಾಷ್ಟ್ರಗಳಿಗೆ ತನ್ನ ನೆಲದಿಂದ ಮಾನವ ಸಂಪನ್ಮೂಲ ಒದಗಿಸುತ್ತಿರುವುದು ಸಾರುವುದೇನನ್ನು? ಕೆಲವೇ ದಶಕಗಳ ಹಿಂದೆ ಭಾರತಕ್ಕೆ ತಲೆ ನೋವಾಗಿದ್ದ ಜನಸಂಖ್ಯಾ ಏರಿಕೆ ಇದೀಗ ಭಾರತಕ್ಕೆ ವರದಾನವಾಗಿದ್ದು ಹೇಗೆ?

ವಿದೇಶಿ ಕಂಪನಿಗಳು ಭಾರತದ ಸರ್ಕಾರಿ ಸ್ವಾಮ್ಯವನ್ನು ಮೀರಿಸಿದಷ್ಟು ಜನರಿಗೆ ಭಾರತದ ಗಡಿಯ ಒಳಗೂ, ಹೊರಗೂ ಉದ್ಯೋಗ ಕೊಟ್ಟಿವೆ. ಆ ಮೂಲಕ ಭಾರತದ ಜನಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದ್ದರೂ ಅದು ತಲೆ ನೋವಾಗದಂತೆ, ಬದಲಾಗಿ ಅದೇ ವರದಾನವಾಗುವಂತೆ ಬದಲಿಸಲಾಗಿದೆ. ಭಾರತ ಇಂದು ಪ್ರಪಂಚಕ್ಕೆ ಮಾನವ ಸಂಪನ್ಮೂಲ ಸರಬರಾಜು ಮಾಡುವ ಪ್ರಮುಖ ದೇಶವಾಗಿದೆ. ಕೆಲವು ಪೂರ್ವ ದೇಶಗಳೂ ಈಗೀಗ ಭಾರತದ ನಡೆ ಅನುಸರಿಸಿ ತನ್ನ ನೆಲದ ಮಾನವ ಸಂಪನ್ಮೂಲವನ್ನು ಬೌದ್ಧಿಕವಾಗಿ ಅಣಿಗೊಳಿಸಿ ಪಶ್ಚಿಮ ದೇಶಗಳೆಡೆಗೆ ಹೊರಡಿಸುತ್ತಿರುವುದು ನಾವಿಲ್ಲಿ ಗಮನಿಸಬೇಕಾದ ಅಂಶ.ಅದಷ್ಟೇ ಅಲ್ಲ, ನಮ್ಮ ಹಿಂದಿನ ತಲೆಮಾರಿನವರು ಯಾರು ಕಂಡಿರದಂತಹ ವಿಪರೀತ ಉದ್ಯೋಗಗಳು ಸೃಷ್ಟಿಯಾಗಿವೆ. ಹಿಂದೆಲ್ಲಾ ದಶಕಗಳ ಗಟ್ಟಲೆ ಒಂದೇ ಕಂಪನಿಯಲ್ಲಿ ದುಡಿದು ನಿವೃತ್ತರಾಗುತ್ತಲೋ ಅಥವಾ ತಮ್ಮ ಉದ್ಯೋಗ ಜೀವನದಲ್ಲಿ ಎರಡೋ ಮೂರು ಬಾರಿಯೋ ಉದ್ಯೋಗ ಬದಲಿಸುತ್ತಿದ್ದ ಕಾಲವೀಗ ಹೋಗಿ ವರ್ಷಕ್ಕೊಂದರಂತೆ ಉದ್ಯೋಗ ಬದಲಿಸುವ ಅವಕಾಶ ನಮಗೆಲ್ಲ ದಕ್ಕಿರುವುದು ಕಂಪನಿಗಳ ಕೃಪಾಶೀರ್ವಾದದಿಂದಲೇ. ಈ ಅವಕಾಶ ಮಾನವನ ಇತಿಹಾಸದಲ್ಲಿ ಇದೇ ಮೊದಲು ಎಂಬುದು ನಮಗೆ ಇನ್ನೂ ಖುಷಿ ಉಂಟು ಮಾಡಬಹುದು.ದೇಶದ ಒಳಗೂ ಹೊರಗೂ ಈ ಪರಿ ಉದ್ಯೋಗಗಳು ಸೃಷ್ಟಿಯಾಗಿರುವುದರಿಂದ ದೇಶಿಯ ಆರ್ಥಿಕ ವ್ಯವಸ್ಥೆ ಮೊದಲಿಗಿಂತಲೂ ಸುಧಾರಿಸಿಕೊಂಡಿದೆ. ಭಾರತ ಸರ್ಕಾರವೂ ೨೦ ಲಕ್ಷ ಕೋಟಿಗಿಂತಲೂ ಹೆಚ್ಚಿನ ಬಜೆಟ್ ಮಂಡನೆ ಮಾಡುವದಕ್ಕೆ ಹಿಡಿದು ಅದಾಗಲೇ ದಶಕ ಉರುಳಿರಬೇಕು!.

ಕಂಪನಿ ಸಂಸ್ಕೃತಿ ಭಾರತಕ್ಕೆ ಕಾಲಿಟ್ಟಾಗಿನಿಂದ ಒಂದಿಲ್ಲೊಂದು ರೀತಿಯಲ್ಲಿ ಈ ದೇಶದ ಜನರ ತುತ್ತಿನ ಚೀಲಕ್ಕೆ ಆಧಾರವಾಗಿವೆ. ಅವುಗಳ ಮಧ್ಯೆ ಮಧ್ಯೆ ಕೆಲವು ಅಹಿತಕರಗಳು ನಡೆದರೂ ಈ ದೇಶದ ಅನ್ನದ ಹಸಿವನ್ನು ತೀರಿಸಲು ಕಂಪನಿಗಳ ಪಾತ್ರವಿರುವುದನ್ನು ನಾವು ಮರೆಯುವಂತಿಲ್ಲ.ವರ್ತಮಾನ ಕಾಲದಲ್ಲೂ ಕೂಡ ಅತೀ ಹೆಚ್ಚು ಪಧವೀಧರರನ್ನು ಪ್ರತೀ ವರ್ಷ ಉತ್ಪಾದಿಸುತ್ತಿರುವ ಭಾರತಕ್ಕೆ ಉದ್ಯೋಗ ವಿಚಾರದಲ್ಲಿ ನಿಟ್ಟುಸಿರು ಬಿಡುವಂತೆ ಮಾಡಿರುವುದು ಕಂಪನಿಗಳ ಅಸ್ತಿತ್ವವೇ.ಕಂಪನಿಗಳ ಈ ಕಂಪನ ಚಾಲ್ತಿಯಲ್ಲಿರುವವರೆವಿಗೂ ಮೊದಲಿನ ಹಾಗೆ ಅನ್ನಕ್ಕೇನು ಕೊರತೆಯಾಗಲಾರದು ಬಿಡಿ.

-o-

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...