ಕುಂತರೊಂದು-ನಿಂತರೊಂದು ವದರುವ ಸೋದರ ಮಾವನ ಹೆಂಡತಿಯ ಅವತಾರವೂ ಸತ್ಯನಿಗೆ ಕ್ರಮೇಣ ಇರಿಸು ಮುರಿಸು ತರಿಸುತ್ತದೆ. ಅನಿಷ್ಟಕ್ಕೆಲ್ಲಾ ಶನೇಶ್ವರನೇ ಹೊಣೆ ಎನ್ನುವ ಆಕೆಯ ಧೋರಣೆ ಸತ್ಯನಿಗೆ ಸ್ವಲ್ಪವೂ ಹಿಡಿಸುವುದಿಲ್ಲ. ದಿನ ಗಳೆಯುತ್ತಿದಂತೆಯೇ ಸತ್ಯ ತನ್ನ ಸೋದರ ಮಾವನ ಏಟಿಗೆ ಮಾಮೂಲಿನ ವ್ಯಕ್ತಿಯಾಗಿ ಹೋಗಿದ್ದ. ಆತನ ಮೈ ಮೇಲೆ ಸೋದರಮಾವನಿಂದ ಮೂಡುತ್ತಿದ್ದ ಏಟಿನ ಬಾಸುಂಡೆಗಳು ಅವನನ್ನು ಬಾಧಿಸುವುದಕ್ಕಿಂತಲೂ ಅವನ ಮೇಷ್ಟರೊಬ್ಬರನ್ನು ಬಾಧಿಸಿಬಿಟ್ಟವು. ಹುಡುಗ ಆ ಕೂಪದಿಂದ ಪಾರಾದರೆ ಸಾಕೆಂಬ ಧೋರಣೆಯಿಂದ ಆ ಮೇಷ್ಟರು ಹುಡುಗನನ್ನು ತನ್ನ ಪರಿಚಯದ ಬೇರೆ ಊರಿನ ಮತ್ತೊಬ್ಬ ಮೇಷ್ಟರ ಮನೆಗೆ ಸಾಗಹಾಕಿ ಬಿಟ್ಟರು. ಹುಡುಗ ಸೋದರ ಮಾವನ ವ್ಯಗ್ರತೆಯಿಂದ ನುಣುಚಿಕೊಂಡಿದ್ದ. ಆ ನಡುವೆ ತನ್ನ ಹುಟ್ಟೂರಿನ ಬಗೆಗಿನ ಯೋಚನೆಗಳು ಬಂದರೂ ಅತ್ತ ತಲೆ ಹಾಕಲಿಲ್ಲ. ಕೆಲಸವಿಲ್ಲದೇ, ತನ್ನ ಹೆಂಡತಿ ಮಕ್ಕಳನ್ನು ನೋಡಿಕೊಳ್ಳದೆ ವಿರಾಗಿಯಂತೆ ಊರೂರು ಅಲೆಯುತ್ತಿದ್ದ ತಂದೆಯ ಬಗೆಗೆ ಜ್ಞಾಪಕವಾದಾಗೆಲ್ಲ ಇರಿಸು ಮುರಿಸು ಉಂಟಾಗುತ್ತಿದ್ದ ಆತನ ತಂಗಿ ಹಾಗು ಅಜ್ಜಿ ಊರಿನಲ್ಲಿ ಇರುವ ಚಿಕ್ಕ ಹೊಲದ ಆದಾಯ ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದರು. ತಾಯಿ ಸತ್ತ ನಂತರ ಕೆಲವು ಒಡವೆಗಳ ಸಮೇತ ಕಣ್ಮರೆಯಾದ ತಂದೆ ಎತ್ತ ಹೋದರೆಂದೂ ತಿಳಿಯದೆ ಸತ್ಯ ತನ್ನ ಓದಿನ ಕಡೆಗೆ ಗಮನ ಕೊಡುತ್ತಾನೆ. ಓದು-ಆಟೋಟಗಳು ಅವನ ವಯ್ಯಕ್ತಿಕ ಜೀವನದ ನೋವುಗಳನ್ನು ಅಷ್ಟು ಮರೆಸುತ್ತವೆ.
ಸೋದರಮಾವನ ಊರು ತೊರೆದು ಪರವೂರಿಗೆ ಹೋಗಿ ನೆಲೆ ನಿಂತ ಸತ್ಯನಿಗೆ ಅಲ್ಲಿನ ಅನ್ಯ ಜಾತಿಯ ಮೇಷ್ಟರ ಸಂಪೂರ್ಣ ಸಹಕಾರವಿರುತ್ತದೆ. ನೆಲೆ ನಿಲ್ಲಲು ಬಾಡಿಗೆಯ ರೂಮು, ಊಟಕ್ಕೆ ವಾರಾನ್ನ ಸಹಕಾರಿಯಾಗುತ್ತವೆ. ಉಪನಯನವೇ ಆಗದೆ ವಾರಾನ್ನ ಮಾಡುವುದು ಬ್ರಾಹ್ಮಣರಲ್ಲಿ ಕೂಡದೆಂತಲೂ, ಅದು ಅಧಾರ್ಮಿಕವೆಂತಲೂ ಆತನಿಗೆ ಆಹಾರವನ್ನು ನಿರಾಕರಿಸಲಾಗುತ್ತದೆ. ಸದಾ ಕಾಲ ತನ್ನ ಒಳಿತನ್ನೇ ಬಯಸುತ್ತಿದ್ದ ಅನ್ಯ ಜಾತಿಯ ಮೇಷ್ಟರ ಮನೆಯಲ್ಲಿ ಊಟ ಮಾಡುವ ಪ್ರಸಂಗ ಎದುರಾದಾಗ ಸತ್ಯನ ಮನಸ್ಸು ಮೊಟ್ಟ ಮೊದಲಿಗೆ ತಾಕಲಾಟಕ್ಕಿಳಿಯುತ್ತದೆ. ಅಂದು ಆರಂಭಗೊಂಡ ತಾಕಲಾಟ, ತುಮುಲಗಳು ಕಾದಂಬರಿಯ ಅಂತ್ಯದವರೆಗೂ ಒಂದಿಲ್ಲೊಂದು ವಿಚಾರಗಳಿಗೆ ಸತ್ಯನಿಗೆ ಬಂದು ತಾಗಿಕೊಳ್ಳುತ್ತವೆ. ಸಾಂಸ್ಕೃತಿಕ, ಮಾನಸಿಕ, ಧಾರ್ಮಿಕ ಘರ್ಷಣೆಯ ಆರಂಭವದು ಸತ್ಯನಿಗೆ. ಅಲ್ಲಿಯೇ ಅವನಿಗೆ ಕ್ರೈಸ್ತ ಹುಡುಗಿ ರಾಚಮ್ಮ ಪರಿಚಿತಳಾಗುತ್ತಾಳೆ ಆದರೆ ಜೊತೆಗೆ ಆ ಸುತ್ತಮುತ್ತಲ ಊರಿನಲ್ಲಿ ನಡೆಯುತ್ತಿದ್ದ ಕ್ರೈಸ್ತ ಮಿಷಿನರಿಗಳ ಕಾರ್ಯಗಳು ಸತ್ಯನ ಅರಿವಿಗೆ ಬರುವುದಕ್ಕೆ ತೊಡಗುತ್ತವೆ. ತನ್ನ ಮನದಲ್ಲೇ ಸತ್ಯನ ಅಭಿಮಾನಿಯಾಗಿದ್ದ ರಾಚಮ್ಮ ಆತನ ಮೈಕಟ್ಟು, ಬುದ್ಧಿವಂತಿಕೆ, ತರ್ಕ ಶೈಲಿ, ಹವ್ಯಾಸಗಳಿಂದ ಪ್ರಭಾವಿತಳಾಗಿರುತ್ತಾಳೆ. ದುರಾದೃಷ್ಟ, ಆ ಊರಿನಲ್ಲಿಯೂ ಸತ್ಯನಿಗೆ ಅನ್ನಕ್ಕೆ ತಾತ್ವಾರವಾಗುತ್ತದೆ. ಆತ ಮುಂದಿನ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಬಂದಿಳಿಯುತ್ತಾನೆ.
ಮೈಸೂರಿಗೆ ಬಂದಿಳಿದು ಅನಾಥಾಲಯದಲ್ಲಿ ಊಟದ ವ್ಯವಸ್ಥೆಯಾಗಿ ಅನ್ನದ ಬರ ಸತ್ಯನಿಗೆ ತೀರುತ್ತದೆ, ಆದರೆ ಅನಾಥಾಲಯದಲ್ಲಿ ಪರಿಚಿತರಾದ ಕೆಲವು ರಾಷ್ಟ್ರ, ಧರ್ಮ ಪ್ರೇಮಿ ವ್ಯಕ್ತಿಗಳಿಂದ ವಿಚಾರವಂತಿಕೆಯ ಹಸಿವು ಶುರುವಾಗುತ್ತದೆ. ತನ್ನ ಶಿಕ್ಷಣದ ನಡುವೆಯೇ ಗ್ರಂಥ ಭಂಡಾರದಿಂದ ಅನೇಕ ಪುಸ್ತಿಕೆಗಳನ್ನು ತಂದು ಓದಿ ಹಿಂದೂ ಧರ್ಮದ ಬಗೆಗಿನ ತನ್ನ ದೃಷ್ಟಿಕೋನವನ್ನು ಇನ್ನಷ್ಟು ತೀಕ್ಷ್ಣಗೊಳಿಸಿಕೊಳ್ಳಲು ನಿಷ್ಕಲ್ಮಶ ಪ್ರಯತ್ನವನ್ನು ಸತ್ಯ ಮಾಡುತ್ತಾನೆ. ಸತ್ಯನಿಗೆ ಅನಾಥಾಲಯದಲ್ಲಿ ಪರಿಚಿತರಾದ ಆರ್.ಎಸ್.ಎಸ್. ವಿಚಾರ ಧಾರೆಗಳಿಂದ ಪ್ರಭಾವಿತರಾದ ಶಂಕರ ಒಂದು ರೀತಿಯಲ್ಲಿ ಸತ್ಯನ ಮಾನಸ ಗುರುವಾಗಿ ನಿಲ್ಲುತ್ತಾನೆ. ಆರ್.ಎಸ್.ಎಸ್ ನ ಪ್ರತಿಯೊಂದು ನೀತಿ ನಿಲುವುಗಳನ್ನು ಪ್ರಶ್ನೆ ಮಾಡುತ್ತಾ ಸತ್ಯ ಅದರ ವಿಚಾರಧಾರೆಗಳು ಶಂಕರನಲ್ಲಿ ಅತ್ಯಂತ ಬಲವಾಗಿ ಬೇರೂರಿರುವುದನ್ನು ಅರಿತುಕೊಳ್ಳುವ ಜೊತೆಗೆ ಆತನನ್ನು ಮಹಾ ಯಜ್ಞಕ್ಕೆ ತಯಾರಾದ ಒಬ್ಬ ಋಷಿಯಂತೆ ಕಾಣುತ್ತಾನೆ. ಶಂಕರನ ಹಾಗು ಆತನ ಅಣ್ಣ ರಾಮಣ್ಣನ ಸಹವಾಸ ಸತ್ಯನ ಹಿಂದೂ ಧರ್ಮ, ಸಂಸ್ಕೃತಿ ಅಧ್ಯಯನಕ್ಕೆ ಮತ್ತಷ್ಟು ಹುರುಪು ತುಂಬುತ್ತವೆ. ಅದು ಎಲ್ಲಿಯವರೆಗೂ ಎಂದರೆ ಮೈಸೂರಿನ ಪ್ರಮುಖ ಗಲ್ಲಿಯ ಕ್ರೈಸ್ತ ಮಿಷಿನರಿಯ ಸಭೆಗೆ ಹೋಗಿ ಅಲ್ಲಿನ ಸಭೆಯನ್ನು ಹತ್ತಿಕ್ಕುವವರೆಗೂ. ಮುಂದೆ ಅದೇ ಹಳ್ಳಿಯ ರಾಚಮ್ಮನ ಭೇಟಿ ಅನಿರೀಕ್ಷಿತವಾಗುತ್ತದೆ, ಆಕೆಯ ಗಂಡ ಸತ್ಯನಿಗೆ ಕಾಲೇಜಿನಲ್ಲಿ ಪಾಠ ಹೇಳುವ ಉಪಾಧ್ಯಾಯರಾಗಿರುತ್ತಾರೆ.ಬಾಲ್ಯದ ಗೆಳೆಯನೆಂಬ ಕಾರಣಕ್ಕೆ ರಾಚಮ್ಮನ ಮನೆಗೆ ಹೋಗಿ ಬರುತ್ತಲಿದ್ದ ಸತ್ಯನ ಕಡೆಗೆ ಅವರ ಮನೆಯಲ್ಲಿಯೇ ಆಗೊಮ್ಮೆ ಈಗೊಮ್ಮೆ ಸುಳಿದಾಡುತ್ತಿದ್ದ ಲಿಲ್ಲಿಯ ಕಣ್ಣು ಬೀಳುತ್ತದೆ. ಆರಂಭದಲ್ಲಿ ಹಿಂದೂ-ಕ್ರೈಸ್ತ ವಿಚಾರಧಾರೆಯ ವಾದಗಳಿಂದ ಅವರ ಮಾತು ಕಥೆಗಳು ಮುಗಿಯುತ್ತಿದ್ದರೂ ಬರ-ಬರುತ್ತಾ ಕ್ರೈಸ್ತಳಾದ ಲಿಲ್ಲಿಯ ಮನಃಪರಿವರ್ತನೆ ಶುರುವಾಗುತ್ತದೆ. ಹಿಂದೂ ಧರ್ಮವೆನ್ನುವುದು ಈ ನೆಲದ ಸಂಸ್ಕೃತಿಯೆನ್ನುವುದನ್ನು ಆಕೆ ಅರ್ಥ ಮಾಡಿಕೊಳ್ಳುವ ಮೊದಲೇ ಅವರ ಸ್ನೇಹ ಸಲುಗೆಗೆ ತಿರುಗಿ ಅದು ಪ್ರೀತಿಯೂ ಆಗಿ ಮೊಳೆತಿರುತ್ತದೆ.
ಒಬ್ಬರನ್ನು ಬಿಟ್ಟು ಒಬ್ಬರಿರಲಾರದ ಪ್ರೇಮ ಪಾಶಕ್ಕೆ ಸಿಲುಕುವ ಅವರಿಬ್ಬರೂ ಮದುವೆಯಾಗುವ ನಿರ್ವಾಹಕ್ಕೆ ಬರುತ್ತಾರೆ. ಹುಡುಗಿಯ ತಂದೆ ಶ್ರೀಮಂತ ವರ್ಗದವನಾದ್ದರಿಂದ ಹುಡುಗನೇ ಕ್ರಿಸ್ತಮತಕ್ಕೆ ಸೇರಿ ಹುಡುಗಿಯನ್ನು ಚರ್ಚಿನಲ್ಲಿ ಮದುವೆಯಾಗುತ್ತಾನೆ. ಆದರೆ ಹುಡುಗಿಯಾದ ಲಿಲ್ಲಿ ತನ್ನ ಸೌಭಾಗ್ಯದ ಖಣಿಯನ್ನೆಲ್ಲಾ ಸತ್ಯನಲ್ಲೇ ಕಾಣುತ್ತಾಳೆ. ಆತನಿಗಾಗಿ ಯಾವ್ಯಾವ ಮಹಾ ತ್ಯಾಗಕ್ಕೂ ಆಕೆ ಸಿದ್ದ.ಹಿಂದೂ ಯುವಕನಾಗಿದ್ದವನು ಕ್ರಿಸ್ತ ಮತಕ್ಕೆ ಬಂದು ಕ್ರೈಸ್ತ ಹುಡುಗಿಯನ್ನು ಮದುವೆಯಾದನೆಂದು ಕ್ರೈಸ್ತ ಮತದ ಶಾಲೆಯೊಂದರಲ್ಲಿ ಹೆಡ್ ಮೇಷ್ಟರ ವೃತ್ತಿ ಆ ಮತದ ಬಳುವಳಿಯಾಗಿ ಬರುತ್ತದೆ. ಒಲ್ಲದ ಮನಸ್ಸಿನಿಂದ ಕ್ರೈಸ್ತ ಧರ್ಮಕ್ಕೆ ಸೇರಿಕೊಂಡಿದ್ದ, ಹೃದಯದಲ್ಲೇ ಹಿಂದೂ ಸಂಸ್ಕೃತಿಯ ಜ್ವಲಂತವನ್ನು ಹೊತ್ತಿಸಿಕೊಂಡ ಸತ್ಯ ವಿಪರೀತ ಮಾನಸಿಕ ತೊಳಲಾಟಕ್ಕೆ ಬೀಳುತ್ತಾನೆ. ಚರ್ಚಿನ ಬಿಷಪ್ಪರು ಹೊರಡಿಸುವ ಕಟ್ಟಪ್ಪಣೆಗಳಿಗೂ, ಸಮಾಜ ಆತನನ್ನು ನೋಡುವ ರೀತಿಯೂ ಬದಲಾದ ಮೇಲೆ ಪದೇ ಪದೇ ಖಿನ್ನತೆಗೊಳಗಾಗಿ ಅನಾರೋಗ್ಯದ ಪಶುವಾಗುತ್ತಾನೆ ಸತ್ಯ.ಸತ್ಯನ ಒಳ ಮನಸ್ಸಿನ ತುಮುಲಗಳನ್ನು ವಿಕ್ರಾಂತವಾಗಿ ಪತ್ತೆ ಮಾಡಿಬಿಡುತ್ತಿದ್ದ ಲಿಲ್ಲಿ ಸದಾ ಕಾಲ ಸತ್ಯನ ಮಾನಸ ಗುರುವಾದ ಶಂಕರನಿಗೆ ಪತ್ರ ಬರೆಯುತ್ತಾಳೆ. ಕ್ರೈಸ್ತ ಮತದಲ್ಲಿದ್ದುಕೊಂಡು ಸಾಂಸ್ಕೃತಿಕ ಘರ್ಷಣೆಗೆ ತನ್ನ ಮನಸ್ಸನ್ನು ಈಡು ಮಾಡಿಕೊಂಡು ದಿನೇ ದಿನೇ ಕೃಶವಾಗುತ್ತಿರುವ ಸತ್ಯ ಉಳಿಯಬೇಕಾದರೆ ಏನು ಮಾಡಬೇಕೆನ್ನುವುದನ್ನು ಅವಳೇ ಸೂಚ್ಯವಾಗಿ ಶಂಕರನಿಗೆ ಬರೆಯುತ್ತಾಳೆ. ಶಂಕರನ ಸಲಹೆಯ ಹಾಗು ತನ್ನ ಮನೋ ಇಚ್ಛೆಯ ಮೇರೆಗೆ ತನ್ನ ಸೌಭಾಗ್ಯದ ನಿಧಿಯನ್ನು ಉಳಿಸಿಕೊಳ್ಳಲು ಲಿಲ್ಲಿ ಸತ್ಯನ ಸಮೇತ ಆರ್ಯ ಸಮಾಜದ ಹೊಸ ಪದ್ಧತಿಯಂತೆ ಹಿಂದೂ ಧರ್ಮಕ್ಕೆ ಮರಳುತ್ತಾರೆ. ಕ್ಸೆವಿಯರ್ ಸತ್ಯದಾಸ ಆಗಿದ್ದ ಸತ್ಯ ಮೊದಲಿನ ಹಾಗೆ ಸತ್ಯನಾರಾಯಣನಾಗಿಯೂ, ಲಿಲ್ಲಿಯಾಗಿದ್ದ ಕ್ರೈಸ್ತ ಹುಡುಗಿ 'ಧರ್ಮಶ್ರೀ' ಯಾಗಿಯೂ ಹಿಂದೂ ಧರ್ಮಕ್ಕೆ ಮರಳಿ ಬರುತ್ತಾರೆ. ಅಲ್ಲಿಗೆ ಸತ್ಯನ ಮತಾಂತರ ಹಾಗು ಅದರ ನಂತರದ ಉಂಟಾದ ಸಾಂಸ್ಕೃತಿಕ ಸಂಘರ್ಷಗಳಿಗೆ ಪೂರ್ಣ ವಿರಾಮ ಬೀಳುತ್ತದೆ. ಕ್ರೈಸ್ತ ಶಾಲೆಯ ಹೆಡ್ ಮಾಸ್ಟರ್ ವೃತ್ತಿಗೆ ರಾಜಿನಾಮೆಯನ್ನು ಧರ್ಮಶ್ರೀಯೇ ಬರೆದು ಸಹಿಗಾಗಿ ಸತ್ಯನ ಮುಂದಿಟ್ಟಾಗ ಸತ್ಯನ ಹೊಸ ಬಾಳಿನ ಬಾಗಿಲು ತೆರೆಯುತ್ತದೆ. ಮುಂದಣ ಜೀವನದ ಸ್ಪಷ್ಟ ಪರಿಕಲ್ಪನೆ ಉಂಟಾಗಿ ಬಾಳನ್ನು ಬಾನೆತ್ತರಕ್ಕೆ ಕೊಂಡೊಯ್ಯಲು ಅಣಿಯಾಗುತ್ತಾನೆ.
ನಮ್ಮ ದೇಶದ ಸಕಲ ಸಂಪತ್ತನ್ನು ಲೂಟಿ ಹೊಡೆದು ನಮ್ಮನ್ನು ಕೃಶರನ್ನಾಗಿಸಿದ ವರ್ಗವೇ ಮನುಕುಲದ ಸೇವೆಯೆಂದು, ದೇವರ ರಾಜ್ಯ ದರ್ಶನ ಮಾಡಿಸುತ್ತೇವೆಂದು ಹೇಳುತ್ತಾ ನಮ್ಮ ಸಣ್ಣ ಸಣ್ಣ ಅಸಹಾಯಕತೆಗಳನ್ನೂ ಬಳಸಿಕೊಂಡು ಮತಾಂತರ ಮಾಡಿದ್ದು ಈ ದೇಶದ ದುರ್ವಿಧಿ.ಅದರೊಳಗೆ ಅವರದು ಮಾತ್ರವೇ ಪಾತ್ರವಿದೆ, ನಮ್ಮದೇನು ಇಲ್ಲ ಎನ್ನುವ ಹಾಗೂ ಇಲ್ಲ. ನಮ್ಮಲ್ಲಿಯೂ ಅನೇಕ ಹುಳುಕುಗಳಿದ್ದವು/ಇವೆ ಕೂಡ. ಅವುಗಳನ್ನು ಅವರು ಅನುಕೂಲ ಸಿಂಧು ಎನ್ನುವಂತೆ ಬಳಸಿಕೊಂಡು ಈ ನೆಲದ್ದಲ್ಲದ್ದ ಸಂಸ್ಕೃತಿಯನ್ನು, ನಡೆ ನುಡಿಯನ್ನು ಇತ್ತ ತಂದೆಸೆದರು ಅಷ್ಟೇ. ಆ ಮತಾತಂತರ ಸುಳಿಯೊಳಗೆ ಯಾವುದೋ ಕಾರಣಕ್ಕೆ ಸಿಲುಕಿಕೊಂಡ ಜೀವಗಳು ಪಡುವ ಪಡಿಪಾಟಲುಗಳು ಈ ಕಾದಂಬರಿಯ ಆದ್ಯಂತ ಹರಿಯುತ್ತವೆ. ಜೊತೆ ಜೊತೆಗೆ ಹಿಂದೂ ಧರ್ಮದಲ್ಲಿನ ಹುಳುಕುಗಳು, ಹಿಂದೂ ಜನರು ಜಾಗೃತರಾಗಬೇಕಾದ ಅಂಶ ಯಾವುದು ಎನ್ನುವತ್ತಲೂ ಕೆಲವೊಮ್ಮೆ ಪ್ರತ್ಯಕ್ಷವಾಗಿ, ಕೆಲವೊಮ್ಮೆ ಪರೋಕ್ಷವಾಗಿ ಬೆಳಕು ಹರಿಯುತ್ತದೆ. ಮನುಷ್ಯನಲ್ಲಿ ಯಾವುದಕ್ಕೂ ಕೊರತೆ ಇರದಿದ್ದರೂ ಸಾಂಸ್ಕೃತಿಕ ಸಂಘರ್ಷವೊಂದು ಆತನನ್ನು ಕೃಶನನ್ನಾಗಿಸುತ್ತದೆ ಎನ್ನುವುದು ಮನುಷ್ಯ ತಾನು ಬೆಳೆದು ಬಂದ ದಾರಿಯಲ್ಲಿ ಸಂಸ್ಕೃತಿಯನ್ನು ಅದೆಷ್ಟರ ಮಟ್ಟಿಗೆ ಬಿಗಿಯಾಗಿ ತಬ್ಬಿ ಹಿಡಿದಿದ್ದನೆನ್ನುವುದನ್ನು ಸೂಚಿಸುತ್ತದೆ.ಆ ಹಿಡಿತ ಸ್ವಲ್ಪ ತಾಳ-ಮೇಳ ತಪ್ಪಿದರೂ ಮರಣ ಸದೃಶ ಜೀವನವೊಂದಕ್ಕೆ ತಾನು ಸಾಕ್ಷಿಯಾಗುತ್ತಾನೆ ಎನ್ನುವುದು 'ಧರ್ಮಶ್ರೀ' ನಮಗೆ ಪ್ರವಹಿಸುವ ಸಂದೇಶ.
-o-
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ