ಶನಿವಾರ, ಜುಲೈ 17, 2021

ಅಭಿಮಾನವನ್ನೂ ಜಮಾಯ್ಸಿಬಿಡೋದೆ!

ಕೆಲವರ ಮೇಲೆ ಅಭಿಮಾನ ವ್ಯಕ್ತ ಪಡಿಸಿದರೆ ಕೆಲವರಿಗೆ ಅದು ಅಂಧ ಭಕ್ತಿಯಂತೆ ಕಾಣುತ್ತದೆ, ಇನ್ನು ಕೆಲವರಿಗೆ ಜಾಣ ಕುರುಡುತನದಂತೆ ಕಾಣುತ್ತದೆ. ಈಗೀಗ ಸಾಮಾಜಿಕ ಜಾಲ ತಾಣದಲ್ಲಿ ನಡೆಯುತ್ತಿರುವ ದಿನ ಬೆಳೆಗಿನ ರಾಜಕೀಯ ಗಲಾಟೆಗಳಲ್ಲಂತೂ ಇದು ಮೇರೆ ಮೀರಿದೆ ಎನ್ನಬೇಕೇನೋ!. ದೇಶದ ಬಲಪಂಥೀಯ ರಾಜಕಾರಣ ಅನುಯಾಯಿಗಳನ್ನು ಭಕ್ತರೆಂತಲೂ, ಎಡ ಪಂಥೀಯ ರಾಜಕೀಯ ಅನುಯಾಯಿಗಳನ್ನು ಗುಲಾಮರೆಂತಲೂ ಒಬ್ಬರ ಮೇಲೆ ಒಬ್ಬರು ಕೆಸರು ಎರಚಾಡಿಕೊಳ್ಳುತ್ತಿರುವುದು ಮಾಮೂಲಿನ ಸಂಗತಿಯಾಗಿದೆ. ಸದ್ಯ ಎಡವೂ ಅಲ್ಲದ, ಬಲವೂ ಅಲ್ಲದ ಮಧ್ಯ ಪಂಥದವರಿಗೆ ಹಾಗು ಪಂಥಾತೀತ ಜನರಿಗೆ ಇನ್ನೂ ಯಾವ ಬಿರುದುಗಳೂ ಪ್ರಾಪ್ತವಾಗಿಲ್ಲವಷ್ಟೆ. ಆ ಗುಂಪಿನೊಳಗೆ ಆಗೊಮ್ಮೆ ಈಗೊಮ್ಮೆ ರಚ್ಚೆ ಹಿಡಿದು ಅನಂತರ ಮಲಗಿ ನಿದ್ರಿಸುವಂತಿರುವ ತೃತೀಯ ರಂಗವೂ ಸೇರಿಕೊಂಡಿದೆ. ಅವರನ್ನೂ ಲೇವಡಿ ಮಾಡಲು ಪದಗಳನ್ನು ಇನ್ನು ಮುಂದಷ್ಟೇ ಕಂಡು ಹಿಡಿಯಬೇಕಿದೆ.

ಕ್ಷಮಿಸಿ ಬಿಡಿ, ರಾಜಕೀಯ, ಪಂಥಗಳಿಗೆ ಅತೀತವಾಗಿ ಬದುಕಿದ ಸಾರ್ವಜನಿಕ ವ್ಯಕ್ತಿಯೊಬ್ಬರ ಕುರಿತು ನಾನು ಮಾತನಾಡಹೊರಟೆ. ಅವರ ಒಳ್ಳೆಯ ಅಭಿಮಾನಿ ಬಳಗದಲ್ಲಿ ನಾನೊಬ್ಬನು. ಅವರನ್ನು ನೋಡುತ್ತಲೇ ಅವರೊಳಗಿದ್ದ ಅನೇಕ ಒಳ್ಳೆಯ ಗುಣಗಳನ್ನು ನಾನು ಅಳವಡಿಸಿಕೊಂಡು ಬಂದೆ. ಈಗಲೂ ಎಷ್ಟೋ ವಿಚಾರಗಳಲ್ಲಿ ನನ್ನ ಮಾನಸ ಗುರು ಅವರೇ.ಇಷ್ಟೊಂದೆಲ್ಲಾ ಪ್ರವರ್ತಿಸುವಾಗ ನನ್ನ ಗೆಳೆಯರ ಬಳಗದಲ್ಲಿ ಅನೇಕರು ನನ್ನನ್ನು ಅಂಧಾಭಿಮಾನಿ ಎನ್ನಲೂ ಮರೆಯುವುದಿಲ್ಲ. ಆದರೆ ನಾನು ಅದ್ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ, ಕೆಡಿಸಿಕೊಳ್ಳುವುದೂ ಇಲ್ಲ. ಅವರನ್ನು ನೆನೆಯದ ದಿನವೇ ನನ್ನ ಜೀವನದಲ್ಲಿಲ್ಲ. ಅವರ ಜೀವನದಲ್ಲಿನ ಎಷ್ಟೋ ಘಟನೆಗಳು, ಒಂದೊಂದು ಸಲ ಅವರಿಗೇ ಗೊತ್ತಿಲ್ಲದಷ್ಟು ನನಗೆ ಅವರ ಬಗ್ಗೆ ಗೊತ್ತು ಎನಿಸುತ್ತಿರುತ್ತದೆ. ನನ್ನ ಗೆಳೆಯರ ಬಳಗವೂ ಅವರ ವಿಚಾರ ಬಂದಾಗ ಗೂಗಲ್ಲಿಸುವ ಬದಲು ನನಗೆ ಫೋನಾಯಿಸಿ ಕೇಳುತ್ತಾರೆ. ಅವರ ವಿಚಾರಕ್ಕೆ ಬಂದಾಗ ಎಷ್ಟೋ ಬಾರಿ ಗೂಗಲ್ ನನ್ನ ಮುಂದೆ ಸೋಲೊಪ್ಪಿಕೊಂಡಿರುವುದೂ ಅದಕ್ಕೆ ಕಾರಣವಿರಬೇಕು. ಇನ್ನೂ ಎಳೆಯದೇ ನೇರವಾಗಿ ವಿಚಾರಕ್ಕೆ ಬಂದುಬಿಡುತ್ತೇನೆ. ನಾನು ಇದುವರೆವಿಗೂ ಬಣ್ಣಿಸಿದ ಆ ವ್ಯಕ್ತಿ ಕನ್ನಡಿಗರೆಷ್ಟೋ ಜನರಿಗೆ ಆರಾಧ್ಯ ದೈವರಾದ ವರನಟ ಡಾ.ರಾಜ್ ಕುಮಾರ್.

ಅಂದ ಹಾಗೆ ನೀವು ಈ ಚಿತ್ರವನ್ನು ಗಮನಿಸಿದ್ದೀರಿ ತಾನೇ!. ಹಸನ್ಮುಖಿಯಾಗಿ ಹೊಳೆಯುವ ಕಣ್ಣುಗಳಿಂದ ಕ್ಯಾಮೆರಾಗೆ ಫೋಸು ಕೊಟ್ಟ ಅಣ್ಣಾವ್ರ ಈ ಫೋಟೋ ಅವರ ಜೀವಮಾನದಲ್ಲೇ ಅತ್ಯಂತ ಉತ್ತಮ ಫೋಟೋ ಎನಿಸಿಕೊಂಡಿತು. ಅವರ ಮನೆಯಲ್ಲಿ, ಅಭಿಮಾನಿಗಳು ಕೆಲವರ ಮನೆಯಲ್ಲಿ, ಅವರ ಸಮಾಧಿಯ ಮೇಲೂ ರಾರಾಜಿಸುತ್ತಿರುವುದು ಇದೇ ಚಿತ್ರ. ನಿಷ್ಕಲ್ಮಶವಾದ, ನಿರಪೇಕ್ಷವಾದ ಆ ದೃಷ್ಟಿ ನಟನೆಯ ಪಟ್ಟಲ್ಲ, ರಸಭಾವಗಳ ಸಮಾಗಮವಲ್ಲ. ಅದರ ಹಿಂದಿನದು ಅಣ್ಣಾವ್ರ ಸಾಮಾನ್ಯ ಚಹರೆ ಎನ್ನುವುದು ಅಣ್ಣಾವ್ರನ್ನು ತೀರಾ ಹತ್ತಿರದಿಂದ ನೋಡಿದವರಿಗೆ ಮಾತ್ರ ತಿಳಿಯುತ್ತದೇನೋ.

ಫೋಟೋಗ್ರಫಿಗೆಂದೇ ತಯಾರಾಗಿ ಸ್ಟುಡಿಯೋಗೆ ಹೋಗಿ ತೆಗೆಸಿದ ಚಿತ್ರವಿದು ಅನ್ನುವಂತೆ ಕಂಡರೂ ಅದರ ಹಿಂದಿರುವ ಕಥಾನಕ ಬೇರೆಯದ್ದೇ. ರಾತ್ರಿಯ ಊಟ ಮುಗಿಸಿ ಹಳೆ ಬೆಂಗಳೂರಿನ ಗಲ್ಲಿಗಳಲ್ಲಿ ವಾಕಿಂಗ್ ಮಾಡುತ್ತಿದ್ದ ಅಣ್ಣಾವ್ರನ್ನು ಕರೆದು ಯಾವ ಮೇಕಪ್ಪು ಇಲ್ಲದೆ ತೆಗೆಸಿದ ಚಿತ್ರವಿದು ಎಂದರೆ ನಿಮಗೆ ಆಶ್ಚರ್ಯವಾಗದೆ ಇರಲಾರದು. ಇದುವರೆಗೂ ಸುಮಾರು ಹತ್ತು ಲಕ್ಷಗಳಷ್ಟು ಮುದ್ರಣವನ್ನು ಈ ಚಿತ್ರಪಟ ಕಂಡಿದೆ ಎಂದರೆ ನಿಮಗೆ ಆಶ್ಚರ್ಯವಾಗದೆ ಇರಲಾರದೇನೋ. ಈ ಮಾಹಿತಿಯನ್ನು ಆ ಫೋಟೋ ತೆಗೆದ ವ್ಯಕ್ತಿಯೇ ಹಂಚಿಕೊಳ್ಳುತ್ತಾ ಸಾಗುತ್ತಾರೆ.

ಈ ಚಿತ್ರ ತೆಗೆದವರು ಎಂಪೈರ್ ರಾಮಣ್ಣ ಎಂಬ ಒಬ್ಬ ವೃತ್ತಿಪರ ಛಾಯಾಗ್ರಾಹಕ. 1972 ರ ಮಾರ್ಚಿ ತಿಂಗಳ ಯಾವುದೋ ಒಂದು ದಿನ ಬೆಂಗಳೂರಿನ ಹೈಲಾಂಡ್ಸ್ ಹೋಟೆಲ್ ನಲ್ಲಿ ಇಳಿದುಕೊಂಡಿದ್ದ ಡಾ.ರಾಜ್ ರಾತ್ರಿಯ ಊಟವಾದ ಮೇಲೆ ವಾಕಿಂಗ್ ಮಾಡುವ ಉದ್ದೇಶದಿಂದ ಅವೆನ್ಯೂ ರಸ್ತೆಯ ಕಡೆಗೆ ಧಾವಿಸುತ್ತಾರೆ. ಜನರು ಗುರುತು ಹಿಡಿಯಬಹುದೆಂದು ತಲೆಗೆ ಶಾಲು ಸುತ್ತಿಕೊಂಡು ಬರುತ್ತಾರೆ. ಅಲ್ಲಿಯೇ ಇದ್ದ ಎಂಪೈರ್ ಸ್ಟುಡಿಯೋ ಅವರಿಗೆ ಜ್ಞಾಪಕಕ್ಕೆ ಬರುತ್ತದೆ. ಎಂಪೈರ್ ಸ್ಟುಡಿಯೋ ನಡೆಸುತ್ತಿದ್ದ ಎಂಪೈರ್ ರಾಮಣ್ಣನವರ ಅಣ್ಣ ಮುನಿಯಪ್ಪ ಮೇಷ್ಟ್ರು ಡಾ.ರಾಜ್ ಅವರು ಗುಬ್ಬಿ ಕಂಪನಿಯಲ್ಲಿದ್ದಾಗ ಸಂಗೀತಾಭ್ಯಾಸ ಮಾಡಿಸಿದ್ದ ಗುರುಗಳು. ಅವರನ್ನು ಭೇಟಿ ಮಾಡುವ ಮನಸ್ಸಾಗಿ ಅಣ್ಣಾವ್ರು ಆ ಸ್ಟುಡಿಯೋದತ್ತ ತೆರಳುತ್ತಾರೆ. ಅಲ್ಲಿದ್ದ ಎಂಪೈರ್ ರಾಮಣ್ಣನವರು ಅವರ ಅಣ್ಣ ಮುನಿಯಪ್ಪ ಮಾಸ್ಟರು ಕೆಲವೇ ನಿಮಿಷಗಳ ಹಿಂದೆ ಮನೆಗೆ ಹೋಗಿದ್ದಾಗಿ ತಿಳಿಸುತ್ತಾರೆ. ಡಾ.ರಾಜ್ ರವರನ್ನು ಆ ರಾತ್ರಿ ತಮ್ಮ ಸ್ಟುಡಿಯೋದಲ್ಲಿ ನೋಡಿ ಆನಂದ ತುಂದಿಲರಾದ ಎಂಪೈರ್ ರಾಮಣ್ಣವರು ಆಗಷ್ಟೇ ಅಮೆರಿಕಾದಿಂದ ತರಿಸಿದ್ದ ಹೊಸ ಮಾದರಿಯ 'ಕೋನಿ ಒಮೇಗಾ' ಎನ್ನುವ ಕ್ಯಾಮೆರಾವನ್ನು ಅಣ್ಣಾವ್ರಿಗೆ ತೋರಿಸುತ್ತಾರೆ, ಅಷ್ಟೇ ಅಲ್ಲದೆ ಅದರಲ್ಲಿ ಅಣ್ಣಾವ್ರ ಒಂದೆರಡು ಫೋಟೋಗಳನ್ನು ತೆಗೆಯುವ ಇಚ್ಛೆ ವ್ಯಕ್ತಪಡಿಸುತ್ತಾರೆ.ಮಾಮೂಲಿನಂತೆ ಅಣ್ಣಾವ್ರು 'ಸರಿ, ಬನ್ನಿ ಜಮಾಯ್ಸಿಬಿಡೋಣ' ಎನ್ನುತ್ತಾ ಸ್ಕ್ರೀನಿನ ಹಿನ್ನೆಲೆಯಿದ್ದ ಚೇರಿನೆಡೆಗೆ ನಡೆಯುತ್ತಾರೆ.ಯಾವ ಮೇಕಪ್ಪು ಇಲ್ಲದೆ ಅಣ್ಣಾವ್ರು ತಲೆಗೆ ಸುತ್ತಿಕೊಂಡಿದ್ದ ಶಾಲನ್ನು ತೆಗೆದು ಮುಖದ ಮೇಲೆ ಮೂಡಿದ್ದ ಬೆವರ ಹನಿಗಳನ್ನು ಒರೆಸಿಕೊಂಡು, ಕೆದರಿದ್ದ ಕೂದಲನ್ನು ಬಾಚಿಕೊಂಡು, ಅದೇ ಶಾಲನ್ನು ಹೆಗಲ ಮೇಲೆ ಹೊದ್ದುಕೊಂಡು ಕ್ಯಾಮೆರಾಗೆ ತಿರುಗಿ ನಿಂತರಂತೆ.

ಮೂರ್ನಾಲ್ಕು ಭಂಗಿಗಳಲ್ಲಿ ನಿಲ್ಲಿಸಿ ಎರಡೇ ನಿಮಿಷದಲ್ಲಿ ಫೋಟೋ ಸೆಷನ್ ಮಾಡಿ ಮುಗಿಸಿದರಂತೆ ಎಂಪೈರ್ ಸ್ಟುಡಿಯೋದ ರಾಮಣ್ಣನವರು. ಆ ಚಿತ್ರ ಈವತ್ತು ಅದೆಷ್ಟು ಪ್ರಚಲಿತದಲ್ಲಿದೆ ಎನ್ನುವುದನ್ನು ನಾನು ಬಿಡಿಸಿ ಬೇರೆ ಹೇಳಬೇಕಾಗಿಲ್ಲ. ಅಣ್ಣಾವ್ರನ್ನು ಕೂರಿಸಿ ವಿವಿಧ ಧಿರಿಸುಗಳನ್ನು ಪೇರಿಸಿ ಗಂಟೆಗಟ್ಟಲೆ ಫೋಟೋಶೂಟ್ ಮಾಡಿದ ಎಷ್ಟೋ ಫೋಟೋಗಳಿವೆ. ಆದರೆ ಈ ಫೋಟೋವಷ್ಟು ಮತ್ಯಾವುದು ಜನಮನ್ನಣೆ ಪಡೆಯಲೇ ಇಲ್ಲ. ಅಲ್ಲಿ ನಡೆಯುವ ಫೋಟೋ ಶೂಟುಗಳ ಹಿಂದೆ ಇದ್ದದ್ದು ವ್ಯವಹಾರ, ಎಂಪೈರ್ ರಾಮಣ್ಣನವರ ಫೋಟೋ ಶೂಟಿನ ಹಿಂದೆ ಇದ್ದದ್ದು ಅಪ್ಪಟ ಅಭಿಮಾನ ಮಾತ್ರ. ಅದಕ್ಕೆ ಇರಬೇಕು ಆ ಮಂದಸ್ಮಿತ ವದನ ಕನ್ನಡಿಗರ ಸ್ಮೃತಿಪಟಲದಲ್ಲಿ ಅಚ್ಚಳಿಯದೆ ಉಳಿದುಕೊಂಡಿದೆ, ಉಳಿದುಕೊಳ್ಳುತ್ತದೆ ಕೂಡಾ.
-o-

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...