ಭಾನುವಾರ, ಆಗಸ್ಟ್ 15, 2021

ಭರ್ಜಿ ಬೀಸಿ ಬಂಗಾರ ಗೆದ್ದರು

2021ರ ಆಗಸ್ಟ್ ತಿಂಗಳು ಆರಂಭದಿಂದಲೂ ಭಾರತಕ್ಕೆ ಕೆಲವು ಧನಾತ್ಮಕ ಕೆಲವು ಋಣಾತ್ಮಕ ಅನುಭವಗಳಾಗುವುದಕ್ಕೆ ತೊಡಗಿತು. ತಿಂಗಳ ಮೊದ ಮೊದಲೇ ಪೆಗಾಸಿಸ್, ರೈತ ಕಾಯ್ದೆ ಕುರಿತ ಹೋರಾಟಗಳನ್ನು ಹಿಡಿದುಕೊಂಡು ವಿಪಕ್ಷಗಳು ಸಂಸತ್ ನಲ್ಲಿ ಗದ್ದಲವೆಬ್ಬಿಸಿದವು. ಅಷ್ಟಲ್ಲದೇ ಕೇರಳ, ಮಹಾರಾಷ್ಟ್ರಗಳಲ್ಲಿ ಕೋವಿಡ್ ನ ಡೆಲ್ಟಾ ಮಾದರಿಯ ವೈರಾಣು ಭಾರಿ ಸದ್ದು ಮಾಡಹತ್ತಿತು. ಅತ್ತ ಭಾರತದ ಹೊರಗೆ ಮಿತ್ರ ರಾಷ್ಟ್ರ ಆಫ್ಘಾನಿಸ್ತಾನ ತಾಲಿಬಾನಿಗಳ ವಶವಾಗುವುದಕ್ಕೆ ತೊಡಗಿತು. ಇಷ್ಟೆಲ್ಲಾ ಇರುಸು ಮುರುಸುಗಳ ನಡುವೆ ಭಾರತಕ್ಕೆ ಆಗಾಗ್ಗೆ ಜಪಾನಿನ ಟೋಕಿಯೋದಿಂದ ಪದಕ ಗೆದ್ದ ಸುದ್ದಿ ಬರುತ್ತಲೇ ಇತ್ತು. ಭಾರತ ಈ ಹಿಂದೆ ಎಂದೂ ಪಡೆದಿಲ್ಲದಷ್ಟು ಪದಕಗಳನ್ನು ಪಡೆದು ಬೀಗಿತು.

ಆಗಸ್ಟ್ 7ರಂದು ಅಂತೂ ಭಾರತ ಕುಣಿದು ಕುಪ್ಪಳಿಸಿಬಿಟ್ಟಿತು. ಭಾರತಕ್ಕೆ ಟ್ರಾಕ್ ಅಂಡ್ ಫೀಲ್ಡ್ ವಿಭಾಗದಲ್ಲಿ ಮೊಟ್ಟ ಮೊದಲ ಬಂಗಾರದ ಪದಕ ಲಭಿಸಿತು. ಈ ಹಿಂದೆ ಒಂಭತ್ತು ಬಂಗಾರದ ಪದಕಗಳು ಬಂದಿದ್ದರೂ ಅವುಗಳಲ್ಲಿ ಬರೋಬ್ಬರಿ ಎಂಟು ಬಂಗಾರದ ಪದಕಗಳು ಹಾಕಿ ಆಟದಿಂದ ಬಂದವುಗಳು ಹಾಗು ವಯ್ಯಕ್ತಿಕವಾಗಿಲ್ಲದ್ದಾಗಿದ್ದವು. 2008ರಲ್ಲಿ ಬೀಜಿಂಗ್ ನಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಶೂಟಿಂಗ್ ವಿಭಾಗದಲ್ಲಿ ಭಾರತಕ್ಕೆ ಮೊಟ್ಟ ಮೊದಲ ವಯ್ಯಕ್ತಿಕ ಮಟ್ಟದ ಬಂಗಾರದ ಪದಕ ಲಭಿಸಿತು. ಅದರ ನಂತರ ಭರ್ಜಿ ಎಸೆತದಲ್ಲಿ ಭಾರತಕ್ಕೆ ಈ ಬಾರಿಯ ಬಂಗಾರದ ಪದಕ ಲಭಿಸಿದೆ. ಭಾರತ ಖುಷಿಯಾಗಿದೆ. ಆ ಖುಷಿಯ ನಡುನಡುವೆ ಭಾರತೀಯರನೇಕರ ಕ್ರೀಡೆಯ ಬಗೆಗಿನ ಮನೋಧೋರಣೆಯೂ ಬದಲಾಗುವ ಕಾಲ ಸನ್ನಿಹಿತವಾಗಿದೆ, ಅದು ವ್ಯಕ್ತವಾಗುತ್ತಿದೆ ಕೂಡ.

ಟೋಕಿಯೋದ ಕ್ರೀಡಾ ಭೂಮಿಕೆಯಲ್ಲಿ ಭಾರತದ 23ರ ಹರಯದ ನೀರಜ್ ಚೋಪ್ರಾ ಬಂಗಾರದ ಪದಕಕ್ಕೆ ಮುತ್ತಿಕ್ಕಿದ್ದೆ ತಡ ಭಾರತದ ಮಾಧ್ಯಮಗಳು, ಜಾಲತಾಣಗಳು ನೀರಜ್ ಚೋಪ್ರಾರ ವಯ್ಯಕ್ತಿಕ ಮಾಹಿತಿಗಳನ್ನು ಕೆದಕಿ ತೆಗೆಯಲು ಮೊದಲಾದರು. ಭರ್ಜಿ ಎಸೆತ ಎಂಬ ಕ್ರೀಡೆಯೊಂದಿದೆ ಎಂಬುದು ಗೊತ್ತಿಲ್ಲದವರೂ ತಮ್ಮ ವಾಟ್ಸಾಪಿನ, ಫೇಸ್ ಬುಕ್ಕಿನ ಸ್ಟೇಟುಸ್ಸುಗಳಲ್ಲಿ ಆ ಕುರಿತು ಬರೆದುಕೊಂಡರು, ಸಂತಸ ಹಂಚಿಕೊಂಡರು. ಕ್ರಿಕೆಟ್ಟಿಗಾಗಿ ತಲೆ ಹುಯಿಸಿಕೊಂಡು ಟಿವಿ ಮುಂದೆ ಕೂರುವ, ರಾಷ್ಟ್ರೀಯ-ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳು ನಡೆಯುವಾಗ ಕೈ ಕೈ ಹಿಚುಕಿಕೊಳ್ಳುತ್ತಾ ಕಾತುರದಿಂದ ಫಲಿತಾಂಶಕ್ಕಾಗಿ ಕಾಯುವ ಭಾರತ ಮೊಟ್ಟ ಮೊದಲಿಗೆ ಕ್ರಿಕೆಟ್ಟೇತರ ಕ್ರೀಡೆಯನ್ನು ಸೂಕ್ಷ್ಮವಾಗಿ ಗಮನಿಸತೊಡಗಿತ್ತು. ಅದೂ ಒಲಿಂಪಿಕ್ಸ್ ಅಲ್ಲಿ ಆ ಕ್ರೀಡೆ ಮುಗಿದು ಭಾರತಕ್ಕೆ ಬಂಗಾರ ಎಂಬ ಫಲಿತಾಂಶ ಅಲ್ಲಿನ ಬೋರ್ಡುಗಳಲ್ಲಿ ಅನುರಣಿಸಿದಾಗಲೇ!

ಈಗ್ಗೆ ಕೆಲವು ವರ್ಷಗಳವರೆಗೂ ಭಾರತದ ಜನಗಳನ್ನು ಬಿಡಿ, ಸರ್ಕಾರವೇ ಕ್ರೀಡೆಗಳ ಕಡೆಗೆ ಗಮನ ಕೊಡಲು ತಯಾರಿರಲಿಲ್ಲ. ಅದು ಸರ್ಕಾರದ ತಪ್ಪು ಎಂದುಬಿಡಲಾಗುವುದಿಲ್ಲ, ಕ್ರೀಡೆಗೂ ಮೀರಿದ ಅನೇಕ ಆದ್ಯತೆಗಳು ಸರ್ಕಾರದ ಮುಂದಿದ್ದವು. ಆದಾಗ್ಯೂ ಕ್ರೀಡೆಗೊಂದು ಪ್ರಾಧಿಕಾರ ಮಾಡಿ, ಯುವಜನ, ಕ್ರೀಡಾ ಸಚಿವಾಲಯವನ್ನು ಸ್ಥಾಪಿಸಿ ಅದಕ್ಕೆಂತಲೇ ಮಂತ್ರಿಯೊಬ್ಬರನ್ನು ಕುಳ್ಳಿರಿಸಿದ್ದರೂ ಆ ಕುರಿತಾದ ಕರಾರುವಕ್ಕಾದ ನಿಲುವು ಯಾರಲ್ಲೂ ಇರಲಿಲ್ಲ. ಮುಂದುವರೆದ ದೇಶಗಳ ರೀತಿ ವೃತ್ತಿಪರ ಕ್ರೀಡೆ ಭಾರತದಲ್ಲಿ ಕನಸಿನ ಮಾತಾಗಿದೆ. ನಮ್ಮ ಶಾಲೆ, ಕಾಲೇಜು, ವಿಶ್ವ ವಿದ್ಯಾಲಯಗಳ ಆಟದ ಬಯಲುಗಳು ಓದುವ ವಿದ್ಯಾರ್ಥಿಗಳಿಗಷ್ಟೇ ಸೀಮಿತ ಎಂಬಂತಾಗಿವೆ. ಓದಿದ ನಂತರ ಉತ್ತಮ ಆದಾಯದ ನೌಕರಿ ಹಿಡಿಯುವುದು ಎಲ್ಲರ ಕನಸೂ ಹೌದು. ನಮ್ಮ ಸುತ್ತಲೂ ಶಾಲೆ, ಕಾಲೇಜು ಓದುತ್ತಿದ್ದಾಗ ಅನೇಕ ಕ್ರೀಡೆಗಳಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಆಡಿ ಬಂದವರು ಓದು ಮುಗಿದ ನಂತರ ದೊಡ್ಡ ಮೊತ್ತದ ಪಗಾರ ಬರುವ ನೌಕರಿ ಹಿಡಿದಿಲ್ಲವೇನು!. ಹೀಗಾದರೆ ಆ ವಿದ್ಯಾ ಸಂಸ್ಥೆಗಳು ವಿದ್ಯಾರ್ಥಿಗಳ ಅಭ್ಯುದಯಕ್ಕೆಂದು ಮೀಸಲಿಟ್ಟಿದ್ದ ಆಟದ ಬಯಲುಗಳ ನಿಜವಾದ ಉಪಯೋಗವಾದರೂ ಏನು? ಉಪಯೋಗವಿದ್ದರೂ ಅದು ದೇಶಿಯ ಮಟ್ಟದಲ್ಲಿ ಪ್ರಕಟಗೊಳ್ಳುತ್ತಿಲ್ಲವಲ್ಲ!. ಇದು ಸ್ವಲ್ಪ ಯೋಚಿಸಬೇಕಾದ ವಿಚಾರ ಅಲ್ಲವೇನು?.

ನೀರಜ್ ಚೋಪ್ರಾ ಬಂಗಾರದ ಪದಕವನ್ನು ಕೊರಳಿಗೆ ಪೇರಿಸಿಕೊಂಡಿದ್ದೆ ತಡ ಮೊದಲೇ ಹೇಳಿದಂತೆ ಭಾರತದ ಯುವಜನತೆ ಭರ್ಜಿ ಎಸೆತದ ಗುಂಗಿನಲ್ಲಿ ತೇಲಿತು. ಇನ್ನೊಂದೆರಡು ಮೂರು ವರ್ಷಗಳ ಕಾಲ ಭರ್ಜಿ ಎಸೆತಕ್ಕೆಂದು ಭರ್ಜಿಗಳನ್ನು ಕೊಳ್ಳುವವರ ಸಂಖ್ಯೆ ನೂರಿನ್ನೂರು ಪ್ರತಿಶತ ಹೆಚ್ಚಾದರೂ ಆಗಬಹುದು, ಭಾರತದಲ್ಲಿ ಭರ್ಜಿಗಳಿಗೆ ಇನ್ನಿಲ್ಲದ ಬೇಡಿಕೆ ಉಂಟಾಗಬಹುದು. ಭಾರತದ ಯುವಜನತೆಯನ್ನು ನಿಜವಾಗಲೂ ಸೆಳೆದದ್ದು ಬಂಗಾರದ ಪದಕವಲ್ಲ, ಬದಲಾಗಿ ಬಂಗಾರದ ಪದಕ ಗೆದ್ದ ತರುವಾಯೂ ಆ ವ್ಯಕ್ತಿಗೆ ಸಂದ ಗೌರವ, ಜಾಲತಾಣಗಳು, ಮಾಧ್ಯಮಗಳು ಆತನನ್ನು ಮೆರೆಸಿದ ರೀತಿ, ಸರ್ಕಾರದ ಹಾಗು ಸರ್ಕಾರೇತರ ಸಂಸ್ಥೆಗಳಿಂದ ಘೋಷಿಸಲ್ಪಟ್ಟ ಪ್ರಶಸ್ತಿಗಳು. ಸೆಳೆತ ಯಾವುದಾದರೂ ಇರಲಿ ಕ್ರಿಕೆಟ್ಟೇತರ ಕ್ರೀಡೆಯತ್ತ ಜನರ ಗಮನವನ್ನು ಆ ವ್ಯಕ್ತಿ ಸೆಳೆದದ್ದು ಮಾತ್ರ ಅನೂಹ್ಯವಾದದ್ದು. ಸದಾ ಕಾಲ ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವ ತಮ್ಮ ಮಕ್ಕಳನ್ನು ಕಂಡರೆ ಮೂಗು ಮುರಿಯುವ, ಓದಿನ ಕಡೆಗೆ ಮಾತ್ರ ಗಮನವೀಯಬೇಕೆಂದು ಬಡಬಡಿಸುವ ಪೋಷಕ ವರ್ಗವೂ ಕಣ್ತೆರೆದು ಟೋಕಿಯೋದತ್ತ ನೋಡಿದ್ದಂತೂ ಸಾಮಾಜಿಕ ಬದಲಾವಣೆಗೆ ನಾಂದಿಯಾಗುವದರಲ್ಲಿ ಯಾವುದೇ ಸಂಶಯವಿಲ್ಲದಂತಾಗಿತ್ತು.ಆಗಸ್ಟ್ 7ರ ನಂತರ ಭಾರತೀಯ ಪೋಷಕರನೇಕರಲ್ಲಿ ವಿಚಾರಿಸಿದಾಗ ಸುಮಾರು 70 ಪ್ರತಿಶತಕ್ಕೂ ಹೆಚ್ಚು ಜನ ಕ್ರಿಕೆಟ್ಟಲ್ಲದ ಕ್ರೀಡಾ ಕ್ಷೇತ್ರವನ್ನು ನಮ್ಮ ಮಗ/ಮಗಳು ಆಯ್ದುಕೊಳ್ಳುವುದಾದರೆ ನಮ್ಮದೇನು ಅಭ್ಯಂತರವಿಲ್ಲ ಎಂದಿದ್ದಾರಂತೆ. ಭಾರತದ ಸ್ವಾತಂತ್ರ್ಯಕ್ಕೆ 74 ತುಂಬಿದ ಹೊತ್ತಿನಲ್ಲಾದರೂ ಭಾರತ ಹೊಸ ಯೋಚನೆಯೊಂದರೆಡೆಗೆ ಹೊರಳಿಕೊಳ್ಳುತ್ತಿರುವುದು ಸ್ವಾಗತಾರ್ಹ ಸಂಗತಿ.

ಒಲಿಂಪಿಕ್ಸ್ ನಲ್ಲಿ ಭಾರತ ಪ್ರತೀ ಬಾರಿಯೂ ಕಳಪೆ ಸಾಧನೆ ತೋರುವುದೇಕೆ ಎಂಬುದಕ್ಕೆ ಹಲವಾರು ಕಾರಣಗಳಿವೆ. ದೇಶಿಯ ಆರ್ಥಿಕ ಪರಿಸ್ಥಿತಿ, ಕ್ರೀಡೆಯಲ್ಲಿ ತೊಡಗಿಸಿಕೊಂಡ ಮಕ್ಕಳು ವಯ್ಯಕ್ತಿಕ ಜೀವನದ ಆರ್ಥಿಕ ವಿಚಾರಗಳಲ್ಲಿ ಕುಂಟಿತರಾಗುತ್ತಾರೆ ಎಂಬ ಪೋಷಕರ ಭಾವನೆ, ಸರ್ಕಾರದಿಂದ ತೀರಾ ಅಲಕ್ಷ್ಯಕ್ಕೆ ಒಳಗಾದ ಕ್ಷೇತ್ರ ಕ್ರೀಡಾ ಕ್ಷೇತ್ರ, ನಿರುದ್ಯೋಗಿಗಳಾಗಿದ್ದರೂ ಕ್ರೀಡಾ ಕ್ಷೇತ್ರವನ್ನು ವೃತ್ತಿಪರ ಕ್ಷೇತ್ರವಾಗಿ ತೆಗೆದುಕೊಳ್ಳಲು ಹಿಂಜರಿಯುವ ಯುವಜನತೆ, ಕ್ರೀಡೆಗೆ ಬೇಕಾದ ಜ್ಞಾನ, ಸವಲತ್ತುಗಳು ಇಲ್ಲದಿರುವುದು. ಹೀಗೆ ಕಾರಣಗಳ ಪಟ್ಟಿ ಬೆಳೆಯುತ್ತಾ ಸಾಗುತ್ತದೆ. 'ದಂಡಿಗೆ ಹೆದರದ, ದಾಳಿಗೆ ಹೆದರದ' ಭಾರತಕ್ಕೆ ಈ ಕಾರಣಗಳ ಪಟ್ಟಿ ಯಾವ ಮಹಾ ತಡೆಯೂ ಅಲ್ಲ. ಭಾರತ ದೇಶ ಮೈಕೊಡವಿಕೊಂಡು ನಿಲ್ಲ ಬೇಕಿದೆ ಅಷ್ಟೇ. ದೇಶ ನಿಲ್ಲಬೇಕಿದೆ ಎಂದರೆ ಅರ್ಥ ಇಲ್ಲಿನ ಜನರಲ್ಲಿ ಆ ಕುರಿತಾದ ಸ್ಪಷ್ಟವಾದ ಅರಿವು ಉಂಟಾಗಬೇಕಿದೆ. ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಭರ್ಜಿ ಬೀಸಿ ಬಂಗಾರ ಸೆಳೆದ ನೀರಜ್ ಚೋಪ್ರಾ ಆ ಸ್ಪಷ್ಟವಾದ ಅರಿವಿಗೆ ದಾರಿ ದೀವಿಗೆಯಂತೆ ನಿಲ್ಲಲಿದ್ದಾರೆ. ಕ್ರೀಡೆಯೊಂದೇ ಅಲ್ಲ ಕುಂಟುತ್ತಿರುವ ಇನ್ನಿತರ ಕ್ಷೇತ್ರಗಳತ್ತ ಭಾರತದ ಯುವಜನತೆ ಮನಸ್ಸು ಮಾಡಬೇಕಿದೆ. ಹಣಕಾಸಿನ ವಿಚಾರದಲ್ಲಿ ಸಬಲಗೊಂಡಿರುವ ನಮ್ಮ ದೇಶದ ನಾಗರೀಕರು ತಮ್ಮ ಮಕ್ಕಳನ್ನು ಆದಾಯ ಗಳಿಸುವ ಕ್ಷೇತ್ರಗಳನ್ನು ಬಿಟ್ಟು ಕ್ರೀಡೆ, ಸೇನೆ, ವೈಜ್ಞಾನಿಕ ಸಂಶೋಧನೆಗಳಂತಹ ಸ್ವಂತ ಆದಾಯಕ್ಕೆ ಆದ್ಯತೆಯಿಲ್ಲದ, ದೇಶದ ಭವಿಷ್ಯದಲ್ಲಿ ಯತ್ಕಿಂಚಿತ್ತಾದರೂ ಸಹಾಯವಾಗುವ ಕ್ಷೇತ್ರಗಳೆಡೆಗೆ ಹೊರಡಿಸಬೇಕು. "ನಾವಂತೂ ಓದಲಿಲ್ಲ, ನಮ್ಮ ಮಕ್ಕಳಾದರೂ ಓದಲಿ ಅಂತಾ ಓದಿಸಿದ್ವಿ" ಎನ್ನುವಂತಹ ಭಾವನಾತ್ಮಕ ಮಾತುಗಳಿಂದ ದೂರ ಬಂದು ವರ್ತಮಾನದ ಸತ್ಯಗಳನ್ನು ಅರಿತುಕೊಳ್ಳುತ್ತಾ ಸಾಗುವುದು ಸೂಕ್ತವೆನಿಸುತ್ತದೆ.

-o-

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...