ಷಟ್ಸ್ಥಲ ಜ್ಞಾನ

ಷಟ್ಸ್ಥಲ ಜ್ಞಾನದ ಮೂಲ ಹಿಂದೂ ಆಗಮ ಶಾಸ್ತ್ರಗಳು. ಅದರಲ್ಲೂ ಪ್ರಮುಖವಾಗಿ 'ಪರಮೇಶ್ವರ ತಂತ್ರ'ದ ಮೂಲಕ ಶೈವಧರ್ಮ ಕಾಲಕ್ಕೆ ತಕ್ಕಂತೆ ಸಾಣೆಯಾಗುತ್ತಾ ಬಂದಿದೆ. ಶೈವಧರ್ಮದಲ್ಲಿ ಷಟ್ಸ್ಥಲ ಜ್ಞಾನಕ್ಕೆ ಹೆಚ್ಚು ಒಟ್ಟು ಕೊಟ್ಟು ಅಭಿವೃದ್ಧಿ ಪಡಿಸಲಾಗಿದೆ. ಪ್ರಮುಖವಾಗಿ ಕರ್ನಾಟಕದಲ್ಲಿ ಕನ್ನಡ ಸೀಮೆಯ ವಚನಕಾರರು, ಶರಣ ಸಂಕುಲ ಪ್ರವರ್ಧಮಾನಕ್ಕೆ ಬಂದ ಕಾಲದಲ್ಲಿ ಶೈವಧರ್ಮದಲ್ಲಿ ಅನೇಕ ಬದಲಾವಣೆಗಳು ಕಂಡವು. ಅವುಗಳ ಪೈಕಿ ಷಟ್ಸ್ಥಲ ಜ್ಞಾನವನ್ನು ಅರಿಯುವುದು ಮತ್ತು ಪಾಲಿಸುವುದು ಬಹು ಮುಖ್ಯವಾದ ಹಾಗು ಅಗ್ರಮಾನ್ಯವಾದ ಧಾರ್ಮಿಕ ಕಾರ್ಯವಾಯಿತು. ವೀರಶೈವ -ಲಿಂಗಾಯಿತ ಧರ್ಮದಲ್ಲಿ ಷಟ್ಸ್ಥಲ ಜ್ಞಾನವೇ ಜೀವನ ಪದ್ಧತಿಯೂ ಆಗಿ ಅದೇ ಆ ಧರ್ಮದ ತಳಹದಿಯಾಯಿತು. ಅಷ್ಟಾವರಣ, ಪಂಚಾಚಾರಗಳು ಸೇರಿ ವೀರಶೈವ -ಲಿಂಗಾಯಿತ ಕಟ್ಟು ನಿಟ್ಟಿನ ಜೀವನ ನಡೆಸುವ ಧರ್ಮ ಪ್ರಭೇದಗಳಿಗೆ ಸೇರಿತು.



ಕ್ರಾಂತಿಕಾರಿ ನಾಯಕ ಬಸವಣ್ಣನವರು ಕೂಡ ಷಟ್ಸ್ಥಲ ಜ್ಞಾನ ಪದ್ದತಿಯಲ್ಲಿ ಅಪಾರ ನಂಬುಗೆ ಉಳ್ಳವರಾಗಿದ್ದರೆಂದು ಈ ಕೆಳಗಿನ ವಚನವನ್ನು ಗಮನಿಸಿದಾಗ ತಿಳಿದು ಬರುತ್ತದೆ. ಮನುಷ್ಯ ತನ್ನ ಜನ್ಮದಾರಭ್ಯ ಸಭ್ಯನಾಗಿರುವುದು, ಒಳಿತನ್ನೇ ಬಯಸುವುದೇ, ಒಳಿತನ್ನೇ ಮಾಡುವುದು, ಭಕ್ತಿಯ ಭಾವನೆ ಬೆಳೆಸಿಕೊಳ್ಳುವುದು ಮಾಡಿ ಜೀವನವನ್ನು ಯೋಗಸಾಧನೆಯಂತೆ ಬದುಕಿ ಪೂರ್ಣಗೊಳಿಸುವುದರಲ್ಲಷ್ಟೇ ಸಾರ್ಥಕತೆ ಇದೆಯೆಂದು ಪ್ರತಿಪಾದಿಸಿದ್ದಾರೆ ಬಸವಣ್ಣನವರು.

ಭಕ್ತಿಯೆಂಬ ಪೃಥ್ವಿಯ ಮೆಲೆ ಗುರುವೆಂಬ ಬೀಜವಂಕುರಿಸಿ,
ಲಿಂಗವೆಂಬ ಎಲೆಯಾಯಿತ್ತು,
ಲಿಂಗವೆಂಬ ಎಲೆಯ ಮೆಲೆ
ವಿಚಾರವೆಂಬ ಹೂವಾಯಿತ್ತು,
ಆಚಾರವೆಂಬ ಕಾಯಾಯಿತ್ತು
ನಿಷ್ಪತ್ತಿಯೆಂಬ ಹಣ್ಣಾಯಿತ್ತು,
ನಿಷ್ಪತ್ತಿ ಎಂಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲಸಂಗಮದೇವ ತನಗೆ ಬೇಕೆಂದು ಎತ್ತಿಕೊಂಡ. 

ಮುಂದೆ ಇದೆ ಪರಂಪರೆಯಲ್ಲಿ ಜನಿಸಿದ ತೋಂಟದ ಸಿದ್ಧಲಿಂಗ ಯತಿಗಳು 'ಷಟ್ಸ್ಥಲ ಜ್ಞಾನ ಸಾರಾಮೃತ' ಎಂಬ ಗ್ರಂಥ ರಚನೆ ಮಾಡಿರುವುದೇ ಶರಣ ಸಂಕುಲದಲ್ಲಿ ಷಟ್ಸ್ಥಲ ಜ್ಞಾನ ಬೇರೂರಿದ್ದಕ್ಕೆ ಸಾಕ್ಷಿ ಎಂಬಂತಿದೆ. ತೋಂಟದ ಸಿದ್ಧಲಿಂಗ ಯತಿಗಳ ಪ್ರಮುಖ ಷಟ್ಸ್ಥಲ ವಚನಗಳಲ್ಲೊಂದು ಇದಕ್ಕೆ ಕೈಗನ್ನಡಿಯಾಗಿಯೂ ನಿಲ್ಲಬಹುದು.

ಭಕ್ತಸ್ಥಲ ಮಹೇಶ್ವರಸ್ಥಲದಲ್ಲಡಗಿ 
ಮಹೇಶ್ವರಸ್ಥಲ ಪ್ರಸಾದಸ್ಥಲದಲ್ಲಡಗಿ 
ಪ್ರಸಾದಸ್ಥಲ ಪ್ರಾಣಲಿಂಗಸ್ಥಲದಲ್ಲಡಗಿ 
ಪ್ರಾಣಲಿಂಗಸ್ಥಲ ಶರಣಲಿಂಗಸ್ಥಲದಲ್ಲಡಗಿ 
ಶರಣ ಸ್ಥಲ ಐಕ್ಯದಲ್ಲಡಗಿ 
ಇಂತಿ ಷಡಾಂಗ ಯೋಗ ಸಮರಸವಾಗಿ
ಷಡ್ ಸ್ಥಲವ ಮೀರಿ ನಿರವಯಸ್ಥಲವ ನೇಯ್ದು 
ಆ ನಿರವಯ ಸ್ಥಲವ ನಿರಾಳದಲ್ಲಡಗಿ 
ಆ ನಿರಾಳ ನಿತ್ಯ ನಿರಂಜನ ಪರವಸ್ತು ತಾನಾಯತ್ತಾಗಿ
ಕ್ರಿಯಾ ನಿಷ್ಪತ್ತಿ, ಜ್ಞಾನ ನಿಷ್ಪತ್ತಿ, ಭಾವ ನಿಷ್ಪತ್ತಿ,
ಮಾಡುವ ಕ್ರಿಯೆಗಳೆಲ್ಲ ನಿಷ್ಪತ್ತಿಯಾಗಿ ಅರಿವ 
ಅರುಹೆಲ್ಲ ಅಡಗಿ ಭಾವಿಸುವ ಭಾವವೆಲ್ಲ 
ನಿರ್ಭಾವವಾಗಿ ನಿರ್ಲೇಪ ನಿರಂಜನ ವಸ್ತು 
ತಾನು ತಾನಾದಲ್ಲದೇ ಧ್ಯಾನಿಸಲಿಕ್ಕೇನು ಇಲ್ಲ 
ಮಹಾಲಿಂಗ ಗುರು ಶಿವ ಸಿದ್ಧೇಶ್ವರ ಪ್ರಭುವೇ.

ಇಂತಿದ್ದ ಮಾತ್ರದಲ್ಲಿಯೇ ಇಡೀ ಶರಣ ಸಂಕುಲ ಷಟ್ಸ್ಥಲ ಸಿದ್ಧಾಂತಗಳನ್ನು ಒಪ್ಪಿಕೊಂಡಿತ್ತು ಎನ್ನಲಾಗದು, ಶೂನ್ಯ ಪರಂಪರೆಯ ಅತಿ ಪ್ರಮುಖ ಶರಣರುಗಳಲ್ಲೊಬ್ಬರಾದ ಚೆನ್ನಬಸವಣ್ಣನವರು ಷಟ್ಸ್ಥಲ ಜ್ಞಾನವನ್ನು ಸಾರಾಸಗಾಟಾಗಿ ತಿರಸ್ಕರಿಸಿದ್ದರು. ಪರಮಾತ್ಮನ ಆತ್ಮದಲ್ಲಿ ಅಂಶಗಳಾಗಿರುವ ಎಲ್ಲಾ ಆತ್ಮಗಳು ಯಾವ ಕ್ಷಣದಲ್ಲಿ ಬೇಕಾದರೂ ಸಾಧನೆಯ ಹಾಡಿ ಹಿಡಿದು ಔನ್ನತ್ಯ ತಲುಪಬಹುದು ಎಂದು ತಮ್ಮ ವಾದವಿರಿಸಿದ್ದರು. ಆ ಮುಖೇನ ಅನುಭವ ಮಂಟಪದಲ್ಲಿ ಎಲ್ಲರ ವಿಚಾರ ಧಾರೆಯೂ ಭಿನ್ನವಾಗಿದ್ದಾಗ್ಯೂ ಶರಣ ಸಂಕುಲ ಒಂದೆಡೆ ಸೇರಿ ಅಮೋಘವಾದುದ್ದೇನನ್ನೋ ಸೃಷ್ಠಿಸಬಹುದು ಎಂಬುದನ್ನು ಜಗತ್ತಿಗೆ ಸಾರಿದ್ದರು ಎಂದರೂ ತಪ್ಪಾಗದು. 

ಷಟ್ಸ್ಥಲ ಜ್ಞಾನ 

ವೀರಶೈವ-ಲಿಂಗಾಯಿತ ಧರ್ಮದಲ್ಲಿ ಷಟ್ಸ್ಥಲ ತತ್ವ ಎಂದರೆ ಆತ್ಮನು ಪರಮಾತ್ಮನಲ್ಲಿಗೆ ನಡೆಯುವ ನಡುವಿನ ಆರು ವಿವಿಧ ಮಜಲುಗಳು. ಪ್ರತಿಯೊಂದು ಮಜಲಿನಲ್ಲಿಯೂ ವಿಶೇಷ ಜ್ಞಾನ, ಮನಸ್ಥಿತಿಯನ್ನು ಸಂಪಾದಿಸುವ ಷಟ್ಸ್ಥಲ ತತ್ವ ಪರಿಪಾಲಕರು ತಮ್ಮ ಜೀವನವನ್ನು ವಿಶೇಷ ವ್ರತದಂತೆ ಪರಿಭಾವಿಸಿ ಶುದ್ಧತೆಯಲ್ಲಿ ಜೀವನ ನಡೆಸಬೇಕಾಗುತ್ತದೆ. ಈ ಷಟ್ಸ್ಥಲಗಳಲ್ಲಿ ಪ್ರಮುಖವಾದ ಹಾಗು ಕೊನೆಯ ತತ್ವ 'ಐಕ್ಯ'. ಮೊದಲನೇ ಮಜಲಿನಿಂದಲೂ ಮಾನಸಿಕವಾಗಿ ಪರಮಾತ್ಮನಲ್ಲಿ ತನ್ನ ಆತ್ಮವಿರಿಸಿದ ಪ್ರತಿಯೊಬ್ಬ ಸಾಧಕನಿಗೂ 'ಐಕ್ಯ'ದಲ್ಲಿ ತಮ್ಮ ಆತ್ಮವನ್ನು ಭೌತಿಕವಾಗಿಯೂ ಪರಮಾತ್ಮನ ಆತ್ಮದಲ್ಲಿ ಲೀನವಾಗಿಸುವ ಬಾಗಿಲು ತೆರೆಯುತ್ತದೆ. ಸಾಧಕ 
 ಜೀವಾತ್ಮನೊಬ್ಬನ ಲೌಕಿಕ ಅಂತ್ಯವಾಗುತ್ತಲೇ ಆತ ಪರಮಾತ್ಮನಲ್ಲಿ ಲೀನವಾಗುವನೆಂಬ ನಂಬುಗೆ ಷಟ್ಸ್ಥಲ ಜ್ಞಾನದಲ್ಲಿ ಬಲವಾಗಿದೆ. 

ಷಟ್ಸ್ಥಲ ತತ್ವದ ಆರೂ ಮಜಲುಗಳನ್ನು ಇಲ್ಲಿ ವಿವರಿಸಲಾಗಿದೆ,

1. ಭಕ್ತ ಸ್ಥಲ
ಗುರು, ಲಿಂಗ, ಜಂಗಮರ ಆರಾಧನೆಯನ್ನು ಭಕ್ತ ಸ್ಥಲ ಹೊಂದಿರುತ್ತದೆ. ಗುರು-ಲಿಂಗ-ಜಂಗಮರ ನಿಜವಾದ ಅರ್ಥದ ಅರಿವಾಗುವ ಮಜಲು ಇದಾಗಿದ್ದು, ಈ ಸ್ಥಲದ ಮೂಲಕ ಹಾಯುವವನಿಗೆ ದೇಹದ ಭೌತಿಕ ವಾಂಛೆಗಳೆಲ್ಲವೂ ದೂರಾಗಿ ಪರಮಾತ್ಮನ ಭಕ್ತನಾಗುವ ಪರಾಕಾಷ್ಠೆ ಲಭ್ಯವಾಗುತ್ತದೆ.

2. ಮಹೇಶ ಸ್ಥಲ 
ಭಕ್ತ ಸ್ಥಲದ ನಿಜವಾದ ಆಚರಣೆ ಹಾಗು ಅಧಾರ್ಮಿಕ ಕೃತ್ಯಗಳಿಂದ, ಆಚರಣೆಯಿಂದ ದೂರವಾಗುವುದು ಈ ಮಜಲಿನ ಪ್ರಾಮುಖ್ಯತೆ.

3. ಪ್ರಸಾದಿ ಸ್ಥಲ 
ಪ್ರಪಂಚದ ಸಕಲವೂ ಪರಮಾತ್ಮನ (ಶಿವನ) ಕೊಡುಗೆ ಎಂಬ ಭಾವ ತಳೆಯುವುದು ಹಾಗು ಶಿವನಿಂದ ಕೊಡಲ್ಪಟ್ಟ ಸಕಲವನ್ನೂ ಜಂಗಮರ ಮುಖಾಂತರ ಶಿವನಿಗೆ ಹಿಂದಿರುಗಿಸುವ ಭಾವ.

4. ಪ್ರಾಣಲಿಂಗಿ ಸ್ಥಲ 
ತನ್ನದೇ ಅಂತರಾಳ ಹಾಗು ಅಂತರಾತ್ಮಗಳ ಸಂಪೂರ್ಣವಾಗಿ ಅರಿಯುವ ಮಜಲು.ಇಲ್ಲಿ ಲಿಂಗವೇ ಜಂಗಮವಾಗುವುದು ಹಾಗು ಇಲ್ಲಿ ನಡೆಸುವ ಪ್ರತಿಯೊಂದು ಕ್ರಿಯೆಯೂ ಪ್ರಾರ್ಥನೆಯಾಗುವುದು.

5. ಶರಣ ಸ್ಥಲ 
ತನ್ನದೇ ಆತ್ಮದಲ್ಲಿ ಸಕಲ ಜ್ಞಾನಗಳು ಹಾಗು ಪರಮಾತ್ಮ ಅಡಗಿರುವುದು ಅರಿವಾಗುವ ಮಜಲಿದು. ಆತ್ಮ-ಪರಮಾತ್ಮರೊಂದಿಗಿನ ನೇರವಾದ ಸಂವಾದ ಆರಂಭವಾಗುವ ಮಜಲು ಇದಾಗಿದೆ.

6. ಐಕ್ಯ 
ಜೀವನದ ಪರಮೋಚ್ಚ ಹಾಗು ಅಂತಿಮ ವಿಭಾಗ.  ಜೀವಾತ್ಮವು ಭೌತಿಕ ದೇಹ ತೊರೆದು ಪರಮಾತ್ಮನಲ್ಲಿ ವಿಲೀನವಾಗುವ ಉಚ್ಚ ಸಾಧನಾ ಮಜಲು ಇದಾಗಿದೆ.

ಪಂಚಾಚಾರಗಳು

ವೀರಶೈವ-ಲಿಂಗಾಯಿತರಿಗೆ ಮೇಲ್ಕಾಣಿಸಿದ ಷಟ್ಸ್ಥಲಗಳನ್ನು ಒಳಗೊಂಡು ಪಂಚಾಚಾರಗಳನ್ನು ಪಾಲಿಸುವ ಮೂಲಕ ಆಚಾರಿಗಳಾಗಿ ಬದುಕಿನ ಪಯಣ ಸವೆಸಬೇಕಾಗಿರುತ್ತದೆ. ಪಂಚಾಚಾರಗಳು ಆ ಧರ್ಮ ಪಾಲಕರ ನೀತಿ ಸಂಹಿತೆಗಳಾಗಿವೆ. ಅವುಗಳೆಂದರೆ,

1. ಶಿವಾಚಾರ
ಜಾತಿ ಭೇದ ಮಾಡದೆ ಎಲ್ಲರೂ ಸಮನಾಗಿ ಬಾಳಬೇಕು ಹಾಗು ಎಲ್ಲರನ್ನು ಸಮನಾಗಿ ಕಾಣಬೇಕು. ಲಿಂಗ ದೇಹಿಗಳಲ್ಲಿ ಕುಲ, ಜಾತಿ, ಗೋತ್ರ, ವರ್ಣ ಹುಡುಕಬಾರದು. ಪ್ರತಿದಿನ ವಚನಗಳಂತೆ ಆಚರಿಸುವುದೇ ಶಿವಾಚಾರ.

2. ಲಿಂಗಾಚಾರ
ಶ್ರೀ ಗುರುವಿನಿಂದ ಇಷ್ಟ ಲಿಂಗ ಪಡೆದು ಯಾವಾಗಲೂ ಎದೆಯ ಮೇಲೆ ಧರಿಸಿ, ಲಿಂಗವೇ ಪ್ರಾಣ - ಪ್ರಾಣವೇ ಲಿಂಗ ಎಂಬ ಭಾವ ತಳೆಯುವುದು.
ದೇವನೊಬ್ಬನೇ ಎಂಬ ಪ್ರಬಲ ಬಾವ ತಳೆಯುವುದು ಹಾಗು ಪ್ರತೀ ದಿನ ಇಷ್ಟ ಲಿಂಗ ಪೂಜೆಯ ನಂತರವೇ ಪ್ರಸಾದ ಸ್ವೀಕರಿಸತಕ್ಕದ್ದು. ನುಡಿ-ನಡೆಯಲ್ಲಿ ಸತ್ಯ ಶುದ್ಧತೆ ಅನುಸರಿಸುವುದು. ಪೂಜಾರಿಗಳ ಮಧ್ಯಸ್ಥಿಕೆಯಿಲ್ಲದೆ ನಾವೇ ನೇರವಾಗಿ ದೇವರನ್ನು ಪೂಜಿಸುವುದು ಹಾಗು ನಮಗೆ ಬೇಕಿರುವುದನ್ನು ನಾವೇ ಬೇಡುವುದು.

3. ಸದಾಚಾರ
ಸದ್ಗುಣಗಳಿಂದ ಬಾಳ್ಮೆ ಮಾಡುವುದೇ ಸದಾಚಾರ
  •  ಸತ್ಯ ಶುದ್ಧ ಕಾಯಕದಿಂದ ದಾಸೋಹ ಮಾಡುವುದು.
  •  ಕೋಪ, ದ್ವೇಷ, ಮತ್ಸರ, ಅಸೂಯೆ ಭಾವಗಳನ್ನು ತಾಳದಿರುವುದು.
  •  ಸದಾ ಕಾಲ ಗುರು-ಲಿಂಗ-ಜಂಗಮ ಸೇವೆಯಲ್ಲಿರುವುದು.
 ಇದರ ಆಚರಣೆಯ ಅನುಕೂಲಗಳು :  ಧನಾತ್ಮಕ ಯೋಚನಾ ಲಹರಿ ಬೆಳೆಯುತ್ತದೆ. ಮಾಡುವ ಕ್ರಿಯೆಗಳಲ್ಲೆಲ್ಲ ದೇವರನ್ನು ಕಾಣುವ ಭಾವ ಉಂಟಾಗುತ್ತದೆ. ಆಧ್ಯಾತ್ಮಿಕ ಹಾಗು ವಯಕ್ತಿಕ ಬೆಳೆವಣಿಗೆಗೆ ಸಹಕಾರಿಯಾಗಿದೆ.

4. ಭ್ರತ್ಯಾಚಾರ
ಭಕ್ತನಾದವನು ಗುರು-ಲಿಂಗ-ಜಂಗಮ ತ್ರಯಗಳಿಗೆ ಗೌರವ ಮತ್ತು ಭಕ್ತಿ ತೋರ್ಪಡಿಸುವುದು. ಮೃದು ನಡೆಯಿಂದ ನಡೆದು ಮತ್ತೊಬ್ಬ ಭಕ್ತನನ್ನು ಕಂಡಾಗ ಕೈ ಮುಗಿದು ಶರಣಾರ್ಥಿ ಎಂದು ಹೇಳುವುದು.  ನನಗಿಂತ ಕಿರಿಯರಿಲ್ಲ, ಶಿವ ಭಕ್ತರಿಗಿಂತ ಹಿರಿಯರಿಲ್ಲ ಎಂಬ ಭಾವನೆ ತಳೆಯುವುದು.
ಅನುಕೂಲ: ಸೇವಾ ಭಾವ ಜಾಗೃತವಾಗುತ್ತದೆ. ಅಹಂ ಭಾವ ಅಳಿದು ತ್ಯಾಗ ಗುಣ ಬೆಳೆಯುತ್ತದೆ.

5. ಗಣಾಚಾರ
ಸಮುದಾಯದ ಏಳ್ಗೆಗೆ ಶ್ರಮಿಸುವುದು
ವೀರಶೈವ-ಲಿಂಗಾಯತ ತತ್ವಗಳ ರಕ್ಷಣೆ ಹಾಗು ಶರಣರಿಗೆ ತೊಂದರೆಯಾಗದಂತೆ ಕಾಯುವುದು. ಶಿವಾಚಾರದ ನಿಂದೆಯನ್ನು ಸಹಿಸದಿರುವುದೇ ಗಣಾಚಾರ.
ಅನುಕೂಲ: ಧೈರ್ಯಶಾಲಿಯಾಗಿರಬಹುದು. ಸತ್ಯಕ್ಕೆ ಸಮಾಜದಲ್ಲಿ ಅವಕಾಶ ಕೊಟ್ಟ ಭಾವ ಪ್ರಾಪ್ತಿಯಾಗಿ ಆತ್ಮಬಲ ವೃದ್ಧಿಯಾಗುವದು.

ಅಷ್ಟಾವರಣಗಳು

ವೀರಶೈವ-ಲಿಂಗಾಯಿತ ಅನುಯಾಯಿಗಳಿಗೆ ಅಷ್ಟಾವರಣಗಳು ಅಷ್ಟ ಆಭರಣಗಳೆಂದೇ ಪ್ರಸಿದ್ಧಿ ಪಡೆದುಕೊಂಡಿವೆ. ಈ ಎಂಟು ವಿಚಾರಗಳನ್ನು ಎಂದಿಗೂ ತೊರೆಯದಂತೆ ಪಾಲನೆ ಮಾಡುವುದು ಆ ಧರ್ಮದ ಒಂದು ಪ್ರಮುಖ ಕಾರ್ಯವಾಗಿದೆ. ಆ ಎಂಟು ಆವರಣಗಳು,
  1. ಗುರು 
  2. ಲಿಂಗ 
  3. ಜಂಗಮ 
  4. ಪಾದೋದಕ 
  5. ಪ್ರಸಾದ 
  6. ವಿಭೂತಿ 
  7. ರುದ್ರಾಕ್ಷ 
  8. ಮಂತ್ರ - ಶಿವ ಪಂಚಾಕ್ಷರಿ  ಮಂತ್ರ 
ಪಂಚಾಚಾರ್ಯರು

ವೀರಶೈವ-ಲಿಂಗಾಯತ ಪಂಥದಲ್ಲಿ ಐವರು ಪ್ರಮುಖ ಧರ್ಮಸ್ಥಾಪಕ ಆಚಾರ್ಯರಿದ್ದಾರೆ. ಅವರುಗಳು,
  1. ರೇಣುಕಾಚಾರ್ಯ 
  2. ದಾರುಕಾಚಾರ್ಯ 
  3. ಏಕೋರಾಮ 
  4. ಪಂಡಿತಾರಾಧ್ಯ 
  5. ವಿಶ್ವೇಶ್ವರ 
-o-

3 ಕಾಮೆಂಟ್‌ಗಳು:

  1. ತುಂಬಾ ಉಪಯುಕ್ತವಾದ ಮಾಹಿತಿಗಳನ್ನು ಒದಗಿಸಿದ್ದೀರಿ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  2. !!ಗುರಬಸವಲಿಂಗಶರಣ!!
    【ಅ.ಸ.ಷ.】
    💐💐💐💐💐💐💐💐
    ಆತ್ಮೀಯರೇ,
    ಚತುರಾಚಾರ್ಯರನ್ನು ಪಂಚಾಚಾರನ್ನಾಗಿಸಿ ಜನಿವಾರಧಾರಿಗಳ ಜೊತೆಗೆ ಪವಿತ್ರ ಬಸವಾದಿ ಶರಣರ ವಚನ ಸಿದ್ಧಾಂತ ಆಧಾರಿತ ಲಿಂಗLINGAM) ಧರ್ಮವನ್ನು ಸಮೀಕರಿಸುತ್ತಿರುವುದು ಸರಿಯಲ್ಲ. ಇನ್ನಾದರು ತನ್ನ ತಾನರಿದು ತಾನೆ ದೇವನಾಗುವ ವಚನ ಸಿದ್ಧಾಂತವನ್ನು ಓದಿ ಆಚರಿಸಿ ಲಿಂಗೈಕ್ಯ ಹೊಂದಿರಿ. ಸ್ವಾಭಿಮಾನದಿಂದ ಸ್ವತಂತ್ರವಾದ ಸ್ವಾನುಭಾವ ಬೆಳೆಸಿಕೊಳ್ಳಿ,ಶರಣಾರ್ಥಿ.
    ಪೀಠಾಧಿಪತಿಗಳು,
    ಅಲ್ಲಮಪ್ರಭು ಅನುಭಾವ ಪೀಠ,
    ತಿರುವನಂತಪುರ, ಕೇರಳ ರಾಜ್ಯ,
    ಪಶ್ಚಿಮ ಕರಾವಳಿ, ಭಾರತ ದೇಶ.
    ದೂ!! ೮೪೩೧೯೩೯೩೮೦
    😊😊😊

    ಪ್ರತ್ಯುತ್ತರಅಳಿಸಿ

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...