ಕಾಯಕದಿಂದಲೇ ಉಣ್ಣುವ ಶಪಥವು, ಸದಾಚಾರದಿಂದ ನಡೆಯುವ ದೇಶವು, ಹಾಲಜೇನಿನಂತಹ ನುಡಿಯು, ಎದೆಯುಬ್ಬಿಸಿ ಮೆರೆಯುವ ಹಳವು, ಭೇದವೆಣಿಸದೆ ಹೊತ್ತು ಮೆರೆಸಿದ ಸಮಾಜವು, ಪ್ರಪಂಚವನ್ನೇ ಹೊಸ್ತಿಲಿಗೆ ನಿಲ್ಲಿಸಿದ ತಂತ್ರಜ್ಞಾನವು, ಅಂದುದನ್ನು, ನೆನಹಿದನ್ನು ಕರುಣಿಸುವ ಸುಪ್ತಶಕ್ತಿಯು ಒಡನಿರುವಾಗ, ಚಿಂತೆಯೇಕೆ, ಆಕ್ರಾಂತ ನಾದವೇಕೆ?.
ಗುರುತರ ಜವಾಬ್ದಾರಿಯ ತಿರುಗಿ ನೋಡು, ಬದುಕಬಹುದಾದ ದಾರಿ ನೋಡು ನಿನ್ನ ಕೈಲಾಗಿ ಮೇಲೆತ್ತಬಹುದಾದ ಜನರನು ನೋಡು, ಕತ್ತಲಲಿ ನಿಂತವರನ್ನು ನೋಡು, ಅವರನು ಬೆಳಕಿಗೆ ಕರೆಯುವ ಕೃಪೆ ಮಾಡು, ನೀರಡಿಕೆಯಾದವರನು ನೋಡು, ನೆರಳಿಗೆ ಕರೆತಂದು ನೀರಡಿಸುವ ದಯೆ ತೋರು, ದಿಕ್ಕುಗಾಣದೆ ನಿಂತವರನ್ನು ನೋಡು, ದಿಕ್ಸೂಚಿಯಾಗಿ ಅವರ ಕರವಿಡಿದು ನಡೆಸಿಕೊಡು.
ಇಲ್ಲೇನಿಲ್ಲವೋ ಅದು ನೀನಾಗು, ಇಲ್ಲೇನು ಬೇಕೋ ಅದು ನೀನಾಗು, ಪ್ರಶ್ನೆಗಳಿಗೆ ಉತ್ತರವಾಗು, ಬಿಸಿಲೆದುರು ನೆರಳಾಗು ಬರದೆದುರು ಮಳೆಯಾಗು ಕತ್ತಲಿನೆದುರು ಬೆಳಕಾಗು ಮಂಜಿನಲಿ ಬಿಸಿಲಾಗು ಇಲ್ಲಿರುವವರೆಗೂ ಅವನ ಕೈಂಕರ್ಯಕ್ಕೆ ನೇಮಿಸಲ್ಪಟ್ಟ ಕೈಂಕರ್ಯ ಪತಿಯಾಗು, ಹೊರಡುವ ದಿನವೊಂದಿದೆ, ಎಲ್ಲಿಂದ ನೀ ಬಂದೆಯೋ ಅಲ್ಲಿಗೆ ಹೊರಟುಹೋಗುವ ದಿನ ಒಂದು ಇದ್ದೇ ಇದೆ, ನೆಮ್ಮದಿಯಾಗಿ, ನಿರುಮ್ಮಳವಾಗಿ, ಶಾಂತ ಮನಸ್ಸಿನಿಂದ ಹೊರಟುಹೋಗು. ಸಕಲ ಜ್ಞಾನಕ್ಕಿಂತಲೂ, ಶಾಸ್ತ್ರ, ವೇದ-ವೇದಾಂತಗಳಿಗಿಂತಲೂ, ಜ್ಯೋತಿಷ್ಯ-ಜಾತಕ, ಪುರಾಣ-ಉಪನಿಷತ್ತುಗಳಿಗಿಂತಲೂ ಇದೆ ಶ್ರೇಷ್ಠ. ಇದು ನನ್ನ ಧರ್ಮ, ಇದು ನನ್ನ ಜಾತಿ, ಇದೆ ನನ್ನ ಕುಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ