ನನ್ನದೇ!
ಇಂದು ನೆನ್ನೆಯಲ್ಲ, ಅದಾಗಿ ಆಗಲೇ ವರ್ಷ ಕಳೆದು ಅದರ ಮೇಲೆ ಒಂದು ತಿಂಗಳೂ ಕಳೆಯಿತು. ಮದುವೆ ಅನಂತರದ ಓಡಾಟ-ತಿರುಗಾಟ, ಪ್ರವಾಸಗಳು, ಜೊತೆ ಜೊತೆಗೆ ಮಾಮೂಲಿನ ಕೆಲಸ ಕಾರ್ಯ, ಕನ್ನಡ ಪರ ತಂಡವೊಂದಕ್ಕೆ ಧ್ವನಿ ಮುದ್ರಿಕೆ, ಅದೇ ತಂಡಕ್ಕೆ ಮಾಹಿತಿಭರಿತ ಲೇಖನಗಳನ್ನೊದಗಿಸುವುದು, ವರ್ಕ್ ಫ್ರಮ್ ಹೋಂ ಸಂಸ್ಕೃತಿಯಿಂದ ಹೊರಳಿ ವರ್ಕ್ ಫ್ರಮ್ ಆಫೀಸ್ ಸಂಸ್ಕೃತಿಗೆ ಒಗ್ಗಿಕೊಳ್ಳುವುದು ಸೇರಿ ಭರಪೂರ ಕೆಲಸಗಳೊಳಗೆ ಕಳೆದುಹೋಗಿ ಈಗ ಮರಳಿ ನನ್ನ ಬ್ಲಾಗಿಗೆ ಎಡತಾಕಿದ್ದೇನೆ. ಇಲ್ಲಿಗೆ ಮರಳಿ ಬಂದಿದ್ದೇನೆ, ನಾ-ಕಂಡಿದ್ದನ್ನು ಬಯಲುಗೊಳಿಸಲು.
ಮೊದಲೆಲ್ಲ ಕೆಲವಾರು ಕಾದಂಬರಿಗಳನ್ನು ಓದಿಕೊಳ್ಳುತ್ತಿದ್ದ ನನಗೆ ಕನ್ನಡ ಪರ ತಂಡವೊಂದು ಕರ್ನಾಟಕ ಇತಿಹಾಸದ ವಿಡಿಯೋಗಳನ್ನು ಮಾಡಿ ಯೂಟ್ಯೂಬ್ ನಲ್ಲಿ ಹರಿಯಬಿಟ್ಟು ಕನ್ನಡಿಗರನ್ನು ಇತಿಹಾಸ ಪ್ರಜ್ಞೆಯ ದೃಷ್ಟಿಯಿಂದ ಜಾಗೃತಗೊಳಿಸಲು ಪ್ರಯತ್ನಿಸುತ್ತಿದ್ದುದು ಕೋವಿಡ್ ಕಾಲಘಟ್ಟಕ್ಕಿಂತ ಮೊದಲೇ ತಿಳಿದುಬಂದಿತ್ತು. ನಾನು ಅಂತಹ ಸಮಾನ ಮನಸ್ಕನೇ ಆಗಿದ್ದರಿಂದ ಆ ತಂಡದಲ್ಲಿ ನನಗು ಜಾಗ ದೊರೆಯಿತೆನ್ನಿ. ಆ ಕನ್ನಡ ಸಂಘಟನೆಯಲ್ಲಿ ಕರ್ನಾಟಕ-ಕನ್ನಡದ ಇತಿಹಾಸವನ್ನು ವಿವಿಧ ಆಕರಗಳಿಂದ ಹೆಕ್ಕಿ ತೆಗೆದು ಕ್ರೋಢೀಕರಿಸುವುದು ಸೇರಿ ಎಲ್ಲ ವಿಡಿಯೋಗಳಿಗೆ ಧ್ವನಿಯಾಗುವ ಸುಯೋಗವೂ ಒದಗಿಬಂತು. ಕನ್ನಡ ಸಾಹಿತ್ಯವನ್ನಾಗಲಿ, ಇತಿಹಾಸವನ್ನಾಗಲಿ ಕನ್ನಡ ಕೇಂದ್ರೀಕೃತ ಮನೋಭಾವನೆಯಿಂದ ನಾನು ಈ ಹಿಂದೆ ಓದಿಲ್ಲವಾದ್ದರಿಂದ ಗತ ಕಾಲದಲ್ಲಿ ನಮ್ಮ ಕನ್ನಡ ಸೀಮೆಯಲ್ಲಿ ನಡೆದ ಮಹಾನ್ ಮಹಾ ಘಟನಾವಳಿಗಳು ನನಗೆ ಸಾಧಾರಣ ಘಟನೆಗಳಂತೆ ಗೋಚರಿಸಿಬಿಟ್ಟಿದ್ದವು. ಕನ್ನಡ-ಕನ್ನಡಿಗ ಮನೋಧೋರಣೆಯಿಂದ ಅದದೇ ಕೃತಿಗಳನ್ನು ಮತ್ತೊಮ್ಮೆ ಕೆದಕಿದಾಗ ಹೆಮ್ಮೆ ಪಡುವ ಸರದಿ ನನ್ನದಾಗಿತ್ತು. ಮೊದ ಮೊದಲಿಗೆ ಓದಿಕೊಂಡ ಕನ್ನಡ ಕುಲ ಪುರೋಹಿತರೆಂದೇ ಬಿರುದಾಂಕಿತರಾದ ಆಲೂರು ವೆಂಕಟರಾಯರ 'ಕರ್ನಾಟಕ ಗತ ವೈಭವ' ಕೃತಿ ನನ್ನ ಮನಸ್ಸಿನ ಮತ್ತೊಂದು ಕಣ್ಣನ್ನು ತೆರೆಯಿಸಿತೆನ್ನಬಹುದು. ನಮ್ಮ ಕನ್ನಡ ನೆಲದಲ್ಲಿ ಬದುಕಿ ಬಾಳಿದ ವೀರ ಪುರುಷರಾದ ಇಮ್ಮಡಿ ಪುಲಿಕೇಶೀ, ಮೊದಲನೇ ಪುಲಿಕೇಶೀ, ಮಂಗಳೇಶ, ಅಮೋಘವರ್ಷ ನೃಪತುಂಗ, ಧ್ರುವಧಾರ ವರ್ಷ, ವಿಕ್ರಮಾದಿತ್ಯ, ತೈಲಪ, ಸೋಮೇಶ್ವರ, ಹಕ್ಕ-ಬುಕ್ಕ, ಕೃಷ್ಣದೇವರಾಯ, ವಿಷ್ಣುವರ್ಧನನಾದ ಬಿಟ್ಟಿದೇವ ಇನ್ನು ಮುಂತಾದ ಅರಸರ ಬಗ್ಗೆ, ಅವರು ದಾಖಲಿಸಿದ ಸಾಧನೆಯ ಮೈಲುಗಲ್ಲುಗಳ ಬಗ್ಗೆ ತಿಳಿಯುತ್ತಾ ಹೋದಂತೆ ಕರ್ನಾಟ ದೇಶದ ಮೇಲೆ ನನಗಿದ್ದ ಅಭಿಮಾನ ನೂರ್ಮಡಿಯಾಯಿತು. ಕನ್ನಡ ಸೀಮೆಯ ಯಾವ ಊರಿಗೆ ಹೋದರೂ ಅಲ್ಲಿನ ಕೋಟೆ ಕೊತ್ತಲಗಳನ್ನು ಯಾರ ಕಾಲದ್ದೆಂದು ಅಂದಾಜಿಸುವುದು, ಅಲ್ಲಿನ ದೇಗುಲಗಳ ಶೈಲಿಯನ್ನು ನೋಡೇ ಇದನ್ನು ಯಾರು ಕಟ್ಟಿದರೆಂದು ಹೇಳುವುದು ನನಗೆ ಖಯಾಲಿಯಾಗುತ್ತಾ ಹೋಯಿತು. ಕರ್ನಾಟಕ ಸೀಮೆಯ ದೇಗುಲಗಳಲ್ಲಿ ಜನಗಳು ಅನಾಸಕ್ತಿ ತೋರುವ, ಆದರೆ ನಾನು ಅಪಾರ ಶ್ರದ್ಧೆಯಿಂದ ಗಮನಿಸುವ ಮತ್ತೊಂದು ವಿಶೇಷವೆಂದರೆ ಆ ದೇಗುಲಗಳ ಕಂಬಗಳ ರಚನೆ. ರಾಷ್ಟ್ರಕೂಟರ ತೀರಾ ಸಾದಾ ಕಂಬಗಳಿಂದ ಹಿಡಿದು ಕಲ್ಯಾಣದ ಚಾಲುಕ್ಯರ, ಹೊಯ್ಸಳರ ಅತ್ಯಂತ ಕಲಾತ್ಮಕವಾಗಿರುವ ಕಂಬಗಳವರೆಗೂ ನಾನಾ ರೀತಿಯ ಕಂಬಗಳ ಮಾದರಿಗಳನ್ನು, ಅಲ್ಲಿ ಬಳಸಿಕೊಳ್ಳುತ್ತಿದ್ದ ಕಲಾತ್ಮಕತೆಯನ್ನು, ವಿಜ್ಞಾನದ ಸವಾಲನ್ನು ಎದುರಿಸಿ ಕಲ್ಲಿನ ಕಂಬಗಳಲ್ಲಿ ಬಹು ವಿಶೇಷವಾದ ಕಲೆಯನ್ನು ಅರಳಿಸಿರುವುದನ್ನು ನೋಡುತ್ತಾ ಕನ್ನಡ ಸೀಮೆಯ ಶಿಲ್ಪ ಕಲಾವಿದರ ಕುರಿತಾಗಿ ವಿಶೇಷವಾದ ಅಭಿಮಾನವೊಂದು ನನ್ನಲ್ಲಿ ಜಾಗೃತವಾಯಿತು.
ಪೂರ್ವದ ಹಳೆಗನ್ನಡ ಸಾಹಿತ್ಯದಿಂದ ಹಿಡಿದು ನಡುಗನ್ನಡ ಸಾಹಿತ್ಯದ ವರೆಗೂ ಅಧ್ಯಯನ ಮಾಡಿ ನಮ್ಮ ಕನ್ನಡ ಸಂಘಟನೆಗೆ ಲೇಖನಗಳನ್ನು ಬರೆಯ ತೊಡಗಿದ ಮೇಲಂತೂ ಕಲ್ಲಿನ ಮೇಲೆ ಮಾತ್ರವಲ್ಲ ತಾಳಪತ್ರದ ಮೇಲೂ ಅಕ್ಷರ ರೂಪದಲ್ಲಿ ಕಲೆ ಅರಳಬಹುದು ಎನ್ನುವುದು ಗೊತ್ತಾಯಿತು. ನಮ್ಮ ಕನ್ನಡದ ಆದಿ ಕವಿ ಪಂಪನಿಗಿಂತ ಹಿಂದೆಯೇ ಅನೇಕ ಮಹಾ ಮಹಾ ಕನ್ನಡದ ಕವಿಗಳು ಬದುಕಿ ಬಾಳಿದ್ದರೆಂದೂ, ಆದರೆ ಅವರು ಬರೆದ ಯಾವ ಕೃತಿಯೂ ಇಂದಿಗೆ ಲಭ್ಯವಿರದ ಕಾರಣದಿಂದ ಅವರುಗಳನ್ನೆಲ್ಲ ಕನ್ನಡ ಮೊದಲ ಕವಿಗಳೆಂದು ಒಪ್ಪಲಾಗದೆಂಬ ವಿಚಾರವನ್ನು ತಿಳಿದುಕೊಂಡಾಗ ಪಂಪನಿಗಾಗಿ ಸಂತೋಷ ಪಡುವುದೋ, ಇಲ್ಲ ಅವನಿಗಿಂತಲೂ ಮೊದಲಿದ್ದ ಕವಿಗಳು ಮರೆತು ಹೋದುದಕ್ಕೆ ದುಃಖ ಪಡುವುದೋ ಈವತ್ತಿಗೂ ತಿಳಿಯುತ್ತಿಲ್ಲ. ಇವೆಲ್ಲವುಗಳ ಜೊತೆ ಜೊತೆಗೆ ಸಾಮಾನ್ಯ ಜನಗಳಿಗೆ ತಿಳಿಯದ ಕೆಲವು ಅಚ್ಚರಿಯ ವಿಚಾರಗಳು ಆಗೊಮ್ಮೆ ಈಗೊಮ್ಮೆ ನನ್ನನ್ನು ನಿಬ್ಬೆರಗಾಗಿಸಿದವು. ಒಂದೆರಡು ಉದಾಹರಣೆಯನ್ನು ಹೆಕ್ಕಿಕೊಳ್ಳುವುದಾದರೆ ನಮ್ಮ ಆದಿಕವಿ ಪಂಪ ಬರೀ ಕವಿಯಾಗಿದ್ದಷ್ಟೇ ಅಲ್ಲದೆ ರಾಜ ತಂತ್ರ ನಿಪುಣನೂ, ಸೇನೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಾಯಿದ್ದ ಸೈನ್ಯಾಧಿಕಾರಿಯೂ ಆಗಿದ್ದ ಎನ್ನುವುದು, ನಮ್ಮ ಕನ್ನಡ ಸೀಮೆ ಚಿನ್ನದ ಗಣಿಗಾರಿಕೆಯನ್ನ ಕ್ರಿಸ್ತ ಪೂರ್ವದಲ್ಲೇ ಆರಂಭಿಸಿತ್ತು ಎನ್ನುವುದು. ನಾಗರೀಕತೆಯ ಅತ್ಯಂತ ಹಳೆಯ ಕುರುಹುಗಳು ಪತ್ತೆಯಾದ ಹರಪ್ಪ, ಮೆಹಂಜೋದಾರೊ ಉತ್ಖನನಗಳಲ್ಲಿ ಸಿಕ್ಕ ಚಿನ್ನವನ್ನ ನಾನಾ ಪರೀಕ್ಷೆಗೊಳಪಡಿಸಿ ನೋಡಿದಾಗ ಆ ಚಿನ್ನ ದಕ್ಷಿಣ ಭಾರತದ ಯಾವುದೋ ಭೂಭಾಗದಿಂದ ಬಂದಿದ್ದಿರಬಹುದು ಎನ್ನುವುದು ಪತ್ತೆಯಾಯ್ತಂತೆ. ನಮ್ಮ ಕೋಲಾರದ ಚಿನ್ನದ ಗಣಿಯನ್ನು ಹೊರತುಪಡಿಸಿದರೆ ಹೇಳಿಕೊಳ್ಳುವ ಮತ್ಯಾವ ಚಿನ್ನದ ಗಣಿ ದಕ್ಷಿಣ ಭಾರತದಲ್ಲಿದೆ?. ಅಲ್ಲವೇ. ಆ ಚಿನ್ನ ಬಹುಷಃ ನಮ್ಮ ಕರ್ನಾಟಕದ್ದೇ ಇರಬೇಕು. ಇಲ್ಲಿ ಆವತ್ತಿಗೆ ಬದುಕಿದ್ದವರಿಗೆ ಚಿನ್ನವನ್ನ ಅದಿರಿನಿಂದ ಬೇರ್ಪಡಿಸಿ ಸಂಸ್ಕರಿಸುವಷ್ಟು ಜ್ಞಾನವಿತ್ತು. ಪಾದರಸ, ತಾಮ್ರ, ಬೆಳ್ಳಿಗಳನ್ನು ಚಿನ್ನ ಸಂಸ್ಕರಣೆಯ ಪ್ರಮುಖ ಘಟ್ಟಗಳಲ್ಲಿ ಬಳಸಿಕೊಳ್ಳುವಷ್ಟು ಲೋಹ ಜ್ಞಾನ ಆವತ್ತು ಇಲ್ಲಿದ್ದವರಿಗಿತ್ತು ಎನ್ನೋದು ನನ್ನನ್ನೂ ಸಖೇದಾಶ್ಚರ್ಯಕ್ಕೆ ಈಡು ಮಾಡಿದ್ದು ನಿಜ.
ನಾನು ಮೇಲೆ ಹೇಳಿದ ಕನ್ನಡ ಸಂಘಟನೆಗೆ ಸೇರಿಕೊಂಡ ಮೇಲೆ ಈ ಪರಿ ಕನ್ನಡ ಭಾಷೆ-ಸಂಸ್ಕೃತಿಯ ಮೇಲೆ ಗಮನ ಹರಿಸಲು ನನಗೆ ಸುಯೋಗವೊದಗಿ ಬಂತು ಅಂತ ಹೇಳುವುದಕ್ಕೋಸ್ಕರವಷ್ಟೇ ಇಷ್ಟು ಹೇಳಬೇಕಾಯ್ತು. ಅಲ್ಲಿ ನನಗೆ ಸಿಕ್ಕ ಅಮೋಘ, ಅದ್ವಿತೀಯ, ಅನೂಹ್ಯ ವಿಶೇಷಗಳನ್ನೆಲ್ಲ ಹೆಕ್ಕಿ ಅದಕ್ಕೊಂದು ಲೇಖನದ ಚೌಕಟ್ಟು ಕೊಟ್ಟು ನಾನೇ ಖುದ್ದಾಗಿ ಧ್ವನಿ ಮುದ್ರಿಸಿದ್ದೇನೆ, ನಮ್ಮ ತಂಡದವರು ತಮ್ಮ ಯೂ-ಟ್ಯೂಬ್ ವಾಹಿನಿಯಲ್ಲಿ ಅವುಗಳನ್ನು ಕಾಲಕ್ಕನುಗುಣವಾಗಿ ಪ್ರಸಾರ ಮಾಡುತ್ತಿದ್ದಾರೆ ಕೂಡ. ನಿಮ್ಮೊಳಗೆ ಯಾರಿಗಾದರೂ ಆ ಕುರಿತಾಗಿ ಕುತೂಹಲವುಕ್ಕಿದರೆ ನಮ್ಮ ಯೂ-ಟ್ಯೂಬ್ ವಾಹಿನಿಯನ್ನು ನಿಸ್ಸಂಕೋಚವಾಗಿ ಎಡತಾಕಬಹುದು.
ಇವುಗಳ ನಡುವೆ ಬಹು ನಮ್ಮ ಬಹು ನಿರೀಕ್ಷಿತ ಮಾತಾ ವೈಷ್ಣೋದೇವಿ ಯಾತ್ರೆಯನ್ನು ಕಾರ್ಯಗತಗೊಳಿಸಿದ್ದು ಮನಸ್ಸಿಗೆ ಹೊಸ ಉಲ್ಲಾಸವನ್ನು ತಂದುಕೊಟ್ಟಿತು. ಬೆಂಗಳೂರಿನಿಂದ ವೈಷ್ಣೋದೇವಿಗೆ ಹೊರಟು ಮಾರ್ಗ ಮಧ್ಯೆ ದೆಹಲಿ, ಅಮೃತಸರಗಳನ್ನು ನೋಡ್ದಿದ್ದು, ಅಲ್ಲಿನ ಐತಿಹಾಸಿಕ ಸ್ಥಳಗಳನ್ನು ಸಂದರ್ಶಿಸಿದ್ದು ಒಂದು ಹಿತಾನುಭವವಾಯಿತು. ಎಲ್ಲಕಿಂತ ಹೆಚ್ಚಿಗೆ ಮನಸ್ಸಿಗೆ ಹತ್ತಿರವಾದದ್ದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಲಾಲ್ ಬಹಾದ್ದೂರ್ ಶಾಸ್ತ್ರಿ ಹಾಗು ಇಂದಿರಾ ಗಾಂಧೀ ಸ್ಮಾರಕಗಳು. ಇವರಿಬ್ಬರು ಪ್ರಧಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾಗಲೇ ನಿಧನರಾಗಿದ್ದು ಇವರಿಬ್ಬರ ನಡುವಿನ ಸಾಮ್ಯತೆಯಾದರೆ ಆಡಳಿತೆಯಲ್ಲಿ ಬಹುದೊಡ್ಡ ಕ್ರಾಂತಿಕಾರಕ ಬದಲಾವಣೆಗಳನ್ನು ತಂದಿದ್ದು ನನ್ನ ಇವರಿಬ್ಬರ ಅಭಿಮಾನಿಯಾಗುವಂತೆಯೂ ಬಹಳ ಹಿಂದೆಯೇ ಮಾಡಿದೆ. ಅಭಿಮಾನಿಯಾಗಿ ಇವರಿಬ್ಬರ ಸ್ಮೃತಿ ಸ್ಥಳಗಳಿಗೆ ಭೇಟಿಕೊಟ್ಟಿದ್ದು ನನ್ನ ಖುಷಿಗೆ ಕಾರಣವಾಯಿತು. ಇಬ್ಬರು ಪ್ರಧಾನಿಗಳು ಬದುಕಿ ಬಾಳಿದ ಮನೆ, ಬಳಸಿದ ವಸ್ತುಗಳು, ಅವರು ಕೊನೆಯ ಘಳಿಗೆಗಳನ್ನು ಕಳೆದ ಸ್ಥಳಗಳು ಎಲ್ಲವೂ ಅಚ್ಚಳಿಯದೆ ಉಳಿದುಕೊಂಡಂತಹವುಗಳು. ಆಗಿನ ಸೋವಿಯತ್ ರಷ್ಯಾದಲ್ಲಿದ್ದ ಪ್ರಮುಖ ಪಟ್ಟಣವಾಗಿದ್ದ, ಈವತ್ತಿಗೆ ಉಜ್ಬೇಕಿಸ್ತಾನದ ರಾಜಧಾನಿಯು ಆಗಿರುವ ತಾಷ್ಕೆಂಟ್ ಪಟ್ಟಣದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ನಿಧನರಾದರು ಅವರು ಭಾರತದಲ್ಲಿ ಕಡೆಯದಾಗಿ ಹೊರಟ ಮನೆಯಂತೂ ಇದೇ ಅನ್ನುವುದೊಂದು ಕುತೂಹಲದಿಂದ ದೆಹಲಿಯ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ನಿವಾಸವನ್ನು ಕಣ್ತುಂಬಿಕೊಂಡೆ.
ಮಹಾತ್ಮ ಗಾಂಧೀ ಹತ್ಯೆಯಾದ ಗಾಂಧೀ ಸ್ಮೃತಿ, ರಾಷ್ಟ್ರ ಪತಿ ಭವನ, ಹೆಳೆಯ ಸಂಸತ್ ಭವನ (ಇದೀಗ ಉದ್ಘಾಟನೆಯಾಗಿರುವ ಹೊಸ ಸಂಸತ್ ಭವನ 'ಸೆಂಟ್ರಲ್ ವಿಸ್ತಾ' ಇನ್ನೂ ನಿರ್ಮಾಣ ಹಂತದಲ್ಲೇ ಇತ್ತು), ಸ್ವಾಮಿ ನಾರಾಯಣ ಖ್ಯಾತಿಯ ಅಕ್ಷರಧಾಮ ದೇಗುಲ, ಕುತುಬ್ ಮಿನಾರುಗಳು ನನ್ನ ದೆಹಲಿ ಪ್ರವಾಸಕ್ಕೆ ಮತ್ತಷ್ಟು ಮೆರುಗು ತುಂಬಿದವು. ಪ್ರಧಾನಿಯವರ ನಿವಾಸವೂ ಸೇರಿ ಈಗಿನ ಕೇಂದ್ರ ಸರ್ಕಾದ ಹಲವು ಪ್ರಮುಖರ ಮನೆಗಳ ಮುಂದೆ ಕಾರಿನಲ್ಲಿ ಹೋಗಿದ್ದೆ ಖುಷಿಯ ವಿಚಾರವಾಯ್ತು, ಮೊದಲೇ ಇದು ನನ್ನ ಮೊದಲನೇ ದೆಹಲಿ ಪ್ರವಾಸ ಹಾಗಾಗಿ ಅಷ್ಟು ಕುತೂಹಲಗಣ್ಣಿನಿಂದ ಇವೆಲ್ಲವನ್ನೂ ನಾನು ಕಂಡೆನೆನೋ!. ಇವೆಲ್ಲವನ್ನೂ ಒಂದೆರಡು ಬಾರಿ ನೋಡಿದವರು ಅಥವಾ ಇತಿಹಾಸ, ರಾಜಕೀಯ ಪ್ರಜ್ಞೆ ಇಲ್ಲದವರು ಈ ರಾಜಧಾನಿಯ ದರ್ಶನವನ್ನು ಅಷ್ಟೊಂದು ಸಂಭ್ರಮಿಸಲಾಗದೇನೋ.
ನಮ್ಮ ದೇಶದ ಶಕ್ತಿ ಕೇಂದ್ರವನ್ನು ನೋಡಿ ಹೊರಟದ್ದು ದೇಶ ವಿಭಜನೆಯ ಸಮಯದಲ್ಲಿ ನೆತ್ತರ ಹೊಳೆಯೇ ಹರಿದ ಪಟ್ಟಣಗಳ ಪೈಕಿ ಅತಿ ಪ್ರಮುಖ ಪಟ್ಟಣವಾದ ಅಮೃತಸರಕ್ಕೆ. ಭಾರತದಲ್ಲಿನ ಸಿಖ್ಖರ ಪವಿತ್ರ ನಗರಿ, ಗುರುದ್ವಾರಗಳ ನಗರಿ ಅಂತ ಗುರುತಿಸಿಕೊಳ್ಳುವ ಅಮೃತಸರ ಸ್ವಾತಂತ್ರ್ಯ ಹೋರಾಟದಲ್ಲಿಯೂ, ಸ್ವಾತಂತ್ರ್ಯಾನಂತರ ಉಂಟಾದ ಕೋಮು ಘರ್ಷಣೆಗಳ ಸಂದರ್ಭದಲ್ಲಿಯೂ ಭಾರೀ ಸುದ್ದಿಯಲ್ಲಿರುತ್ತಿದ್ದ ಪಟ್ಟಣ. ಸದ್ಯಕ್ಕೆ ನೆತ್ತರ ತೃಷೆ ತೀರಿದಂತೆ ಕಾಣುವ ಅಮೃತಸರ ಭಾರತ ಜನ ಮಾನಸದಲ್ಲಿ ಸ್ಥಾನ ಪಡೆದುಕೊಂಡಿರುವುದು ಅಲ್ಲಿನ ಸಿಖ್ಖರ ಪ್ರಮುಖ ಆರಾಧಾನಾ ಕೇಂದ್ರವಾದ ಗುರುದ್ವಾರ 'ಶ್ರೀ ಹರ್ ಮಂದಿರ್ ಸಾಹಿಬ್' ನಿಂದ. ನಾನು ಈ ಹೆಸರನ್ನು ಬಳಸಿ ಹೇಳಿದರೆ ಕನ್ನಡಿಗರಿಗೆ ಸುಲಭ ಸಾಧ್ಯದಲ್ಲಿ ಅರ್ಥವಾಗುದಿಲ್ಲವೆಂದು ತಿಳಿದಿದೆ. ಪ್ರಪಂಚದ ಎಲ್ಲರ ಬಾಯಲ್ಲಿ ಗೋಲ್ಡನ್ ಟೆಂಪಲ್ ಎಂದು ಕರೆಸಿಕೊಳ್ಳುವ ಅಮೃತಸರದ ಸ್ವರ್ಣ ಮಂದಿರದ ನಿಜವಾದ ಹೆಸರೇ ಈ 'ಹರ್ ಮಂದಿರ್ ಸಾಹಿಬ್'. ಮೊಘಲರ ಕಾಲಘಟ್ಟದಿಂದಲೂ ಒಂದಲ್ಲ ಒಂದು ವಿಚಾರದಿಂದ ಮುನ್ನೆಲೆಯಲ್ಲೇ ಇರುವ ಈ ನಗರದ ಹೆಸರು ಈವತ್ತಿಗೂ ಹಾಗೇ ಮುನ್ನೆಲೆಯಲ್ಲೇ ಇದೆ. ಖಾಲಿಸ್ತಾನಿ ಹೋರಾಟಗಾರರಿಗೆ ಆಶ್ರಯ ಕೊಟ್ಟು, ಶಸ್ತಾಸ್ತ್ರಗಳನ್ನು ದಾಸ್ತಾನು ಮಾಡಿಕೊಂಡಿದೆ ಎನ್ನುವ ಕಾರಣದಿಂದ ಶ್ರೀಮತಿ ಇಂದಿರಾ ಗಾಂಧೀ ಪ್ರಧಾನಿಯಾಗಿದ್ದ ಕಾಲದಲ್ಲಿ ಈ ಸ್ವರ್ಣ ಮಂದಿರದ ಮೇಲೆ ಸರ್ಕಾರ ಸೇನೆಯನ್ನು ನುಗ್ಗಿಸಿ, ಅಲ್ಲಿದ್ದ ಅಕ್ರಮ ಶಸ್ತ್ರಾಸ್ತ್ರಗಳನ್ನೂ, ಬಂಡುಕೋರರನ್ನು ಬಯಲಿಗೆಳೆಯಿತು. ಇದೇ ಸೇಡು ಸಾಧಿಸಿದ ಸಿಖ್ ಸಮುದಾಯದ ಕೆಲವರು ಇಂದಿರಾಗಾಂಧಿಯವರ ಹತ್ಯೆಯನ್ನೇ ಮಾಡಿಬಿಟ್ಟರು. ಅನಂತರ ದೆಹಲಿ ಮತ್ತು ಇತರ ಪ್ರದೇಶಗಳಲ್ಲಿ ನಡೆದ ಸಿಖ್ಖರ ಹತ್ಯಾಕಾಂಡ ಇದೀಗ ಇತಿಹಾಸದ ಪುಟಗಳಲ್ಲಿ ಕರಾಳ ಅಧ್ಯಾಯವಾಗಿ ಸೇರಿಹೋಗಿದೆ. ಈಗಲೂ ಆಗೊಮ್ಮೆ ಈಗೊಮ್ಮೆ ಇಲ್ಲಿ ಖಾಲಿಸ್ತಾನಿ ಘೋಷಣೆಗಳು ಮೊಳಗುತ್ತವೆ, ಖಾಲಿಸ್ತಾನಿಗಳಿಗೆ ಬೆಂಬಲ ಕೊಡುವ ಕೆಲವರು ಶಸ್ತ್ರಾಸ್ತ್ರ ಸಂಗ್ರಹಕ್ಕೆ, ಹಣ ಸಂಗ್ರಹಕ್ಕೆ ವಾಮ ಮಾರ್ಗವನ್ನಿಡಿದು ಇಲ್ಲಿ ಬಹು ಕ್ರಿಯಾಶೀಲರಾಗಿದ್ದಾರೆ. ಸರ್ಕಾರಕ್ಕೂ, ಜನ ಸಾಮಾನ್ಯರಿಗೂ ಈ ವಿಚಾರ ತಿಳಿದೇ ಇದೆ. ಸರ್ಕಾರ ಈ ವಿಚಾರವನ್ನು ತನ್ನದೇ ಆದ ಮಾರ್ಗದಲ್ಲಿ ಹತ್ತಿಕ್ಕುತ್ತಲೂ ಇದೆ. ನಾನಿಷ್ಟನ್ನೂ ಹೇಳಿದ್ದು ಆ ಸ್ವರ್ಣ ಮಂದಿರದ ಪ್ರಾಮುಖ್ಯತೆಯನ್ನ ನಿಮಗೆ ಮನದಟ್ಟು ಮಾಡಿಸಲು.
ಇನ್ನು ಸ್ವರ್ಣ ಮಂದಿರದ ನಂತರ ಅಲ್ಲಿಂದ ಕೂಗಳತೆಯ ದೂರದಲ್ಲೇ ಇರುವ, ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಬಹು ಚರ್ಚಿತವಾಗಿದ್ದ 'ಜಲಿಯನ್ ವಾಲಾ ಭಾಗ್' ಮತ್ತೊಂದು ರೀತಿಯ ಅನುಭವವನ್ನು ನೀಡಿತು. ಇದೀಗ ನೂರು ವರ್ಷವನ್ನು ಪೂರೈಸಿ ಮುಂದೆ ಬಂದಿರುವ 'ಜಲಿಯನ್ ವಾಲಾ ಭಾಗ್ ಹತ್ಯಾಕಾಂಡ'ದ ನೆನಪು ಅಲ್ಲಿರುವ ಗುಂಡು ಬಿದ್ದ ಗೋಡೆಗಳನ್ನು ನೋಡುವಾಗ ಮತ್ತೆ ಕೋಪ, ರೋಷಾವೇಶ ಹುಟ್ಟುವಂತೆ ಮಾಡುತ್ತದೆ. ಇಂಗ್ಲೀಷರ ಆಕ್ರಮಣಕಾರಿ ದೋರಣೆ ಯಾವ ರೀತಿಯಿತ್ತು ಎನ್ನುವುದನ್ನು ಭಾರತ ಜನಮಾನಸಕ್ಕೆ ಈಗಲೂ ತಿಳಿಯಪಡಿಸುತ್ತಿರುವ ಪ್ರಮುಖ ಸ್ಥಳಗಳ ಪೈಕಿ ಈ 'ಜಲಿಯನ್ ಭಾಗ್' ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ರೌಲತ್ ಕಾಯ್ದೆಯನ್ನು ವಿರೋಧಿಸಿ ಶಾಂತ ರೀತಿಯಲ್ಲಿ ಪ್ರತಿಭಟನೆಗಳಿಗೆ ತಯಾರು ಮಾಡಿಕೊಳ್ಳುತ್ತಿದ್ದ ತಯಾರಿ ಸಭೆ ಅದು, ಪ್ರತಿಭಟನಾ ಸಭೆಯೂ ಆಗಿರಲಿಲ್ಲ. ಅಲ್ಲಿ ಸೇರಿದ್ದ ಬಹುತೇಕರು ಸಿಖ್ಖರ ಪವಿತ್ರ ಹಬ್ಬವಾದ ಬೈಸಾಕಿ ಹಬ್ಬವನ್ನು ಸ್ವರ್ಣ ಮಂದಿರದ ಸಮೀಪ ಆಚರಿಸಲು ನೆರೆದಿದ್ದ ಜನ ಸಾಮಾನ್ಯರು, ಅವರ ಮೇಲೆ ಒಂದೇ ಒಂದು ಎಚ್ಚರಿಕೆಯನ್ನೂ ಕೊಡದೆ ನಿರ್ದಾಕ್ಷಿಣ್ಯವಾಗಿ ಗುಂಡು ಹಾರಿಸಲು ಹೇಳಿ ಅಲ್ಲಿ ಸಾವಿರಾರು ಜನ ಹುತಾತ್ಮರಾದದ್ದು,ಅನಂತರ ಅದು ನಾನಾ ರಾಜಕೀಯ ವಿದ್ಯಮಾನಗಳಿಗೆ, ಬ್ರಿಟೀಷರ ವಿರುದ್ಧ ಅಸಹಿಷ್ಣುತೆಗೆ ಕಾರಣವಾಗಿದ್ದು ನಿಮಗೆಲ್ಲ ಗೊತ್ತಿರುವ ವಿಚಾರವೇ. ಐತಿಹಾಸಿಕವಾಗಿ ಇಷ್ಟು ಪ್ರಾಮುಖ್ಯತೆ ಪಡೆದ ಜಲಿಯನ್ ವಾಲಾಭಾಗ್ ಗೆ ಭೇಟಿ ಕೊಟ್ಟಿದ್ದಾಯ್ತು.
ಮುಂದೆ ಭಾರತ-ಪಾಕಿಸ್ತಾನ ಗಡಿ ವಾಘಾ-ಅಟ್ಟಾರಿ ಗಡಿಯಲ್ಲಿ ನಡೆಯುವ ಸಾಯಂಕಾಲದ ಉಭಯ ದೇಶಗಳ ಪರೇಡ್ ಮತ್ತು ತಂತಮ್ಮ ದೇಶಗಳ ಧ್ವಜಾವರೋಹಣ ಕಾರ್ಯಕ್ರಮ, ಅದಕ್ಕೇನು ಅಷ್ಟೊಂದು ಇತಿಹಾಸವಿಲ್ಲದಿದ್ದರೂ ಭಾರತದಲ್ಲಿ ಹುಟ್ಟಿದವರು ಎಲ್ಲರೂ ಒಮ್ಮೆ ನೋಡಿಕೊಂಡು ಬರಬೇಕಾದ ಕಾರ್ಯಕ್ರಮವದು. ಅಭಯ ದೇಶಗಳ ಸೈನಿಕರು ತಂತಮ್ಮ ದೇಶದ ಗಡಿಯೊಳಗೆ ನಿಂತುಕೊಂಡು ಗಡಿಯಾಚೆಗೆ ಕೈಚಾಚಿ ಕೈ-ಕುಲುಕುವುದು ಅನುಚಾನುವಾಗಿ ಕೆಲವು ವರ್ಷಗಳಿಂದ ಬಂದಿರುವ ಸಂಗತಿಯಾಗಿದೆ. ದೀಪಾವಳಿಯ, ರಂಜಾನ್ ಸಂಧರ್ಭಗಳಲ್ಲಿ ಉಭಯ ದೇಶಗಳ ಸೈನಿಕರು ವೈರತ್ವವನ್ನು ಮರೆತು ಸಿಹಿ ಹಂಚಿಕೊಂಡು ಸಂಭ್ರಮಿಸುವರಂತೆ. ಇದನ್ನು ನಾನು ಕಣ್ಣಾರೆ ಕಂಡಿಲ್ಲವಾದರೂ ಕೆಲವಾರು ಯು-ಟ್ಯೂಬ್ ವಿಡಿಯೋಗಳಲ್ಲಿ ನೋಡಿದ್ದೇನೆ. ಒಂದೊಮ್ಮೆ ನಮ್ಮವರೇ ಆಗಿದ್ದ, ಇದೀಗ ಗಡಿಯಾಚೆಗಿದ್ದು ನಮ್ಮ ಮೇಲೆ ಸದಾ ಕತ್ತಿ ಮಸೆಯುವ, ಅವರ ದೇಶದೊಳಗಿನ ಅನಿಷ್ಟಗಳಿಗೆಲ್ಲ ನಮ್ಮನ್ನೇ ಹೊಣೆಯನ್ನಾಗಿಸುವ ದೇಶದೊಂದಿಗೂ ಸಿಹಿ ಹಂಚಿಕೊಂಡು ಯೋಧರು ಗಡಿಯಲ್ಲಿ ಸಂಭ್ರಮಿಸುತ್ತಾರೆ. ಇದಕ್ಕೆಲ್ಲ ಸಾಕ್ಷಿಯಾಗಿ ನಿಂತಿರುವ ಸ್ಥಳ ಈ ವಾಘಾ-ಅಟ್ಟಾರಿ ಗಡಿ. ಪ್ರತಿ ದಿನವೂ ಬೆಳಗ್ಗೆ ಮತ್ತು ಸಾಯಂಕಾಲ ಇಲ್ಲಿ ನಡೆಯುವ ಧ್ವಜಾರೋಹಣ-ಅವರೋಹಣ ಕಾರ್ಯಕ್ರಮಕ್ಕೆ ಇದುವರೆಗೂ ಕೋಟ್ಯಂತರ ಜನ ಸಾಕ್ಷಿಯಾಗಿದ್ದಾರೆ. ಈಗಾಗಲೇ ಒಮ್ಮೆ ಇಲ್ಲಿಗೆ ಭೇಟಿ ಕೊಟ್ಟಿದ್ದೆ, ಇದು ಎರಡನೇ ಭೇಟಿ ಆದ್ದರಿಂದ ಮೊದಲ ಬಾರಿಯಷ್ಟು ಕುತೂಹಲ ಈ ಬಾರಿ ಇಲ್ಲದೆ ಹೋಗಿದ್ದು ನನ್ನ ಅರಿವಿಗೆ ಬಂದಿತ್ತು.
ಮುಂದೆ ಅಮೃತಸರವನ್ನೂ ಬಿಟ್ಟು ಜಮ್ಮು ಕಾಶ್ಮೀರದ ಪ್ರಮುಖ ಶ್ರದ್ಧಾ ಕೇಂದ್ರ, ನಮ್ಮ ಪ್ರವಾಸದ ಪ್ರಮಖ ಅಜೇಂಡಾ ಶ್ರೀ ಮಾತಾ ವೈಷ್ಣೋದೇವಿ ಕಡೆಗೆ ಹೊರಟು ಮುಂದಿನ ಎರಡು ದಿನಗಳನ್ನು ಅಲ್ಲೇ ಕಳೆದದ್ದಾಯ್ತು. ವೈಷ್ಣೋದೇವಿ ಪ್ರವಾಸದ ಕುರಿತು ನಾನು ಈಗಾಗಲೇ ಬರೆದಿರುವುದರಿಂದ ಅಲ್ಲಿನ ವಿಸ್ಮೃತ ಮಾಹಿತಿಯನ್ನು ಇಲ್ಲಿ ಮತ್ತೊಮ್ಮೆ ಪ್ರಸ್ತಾಪಿಸುವುದಿಲ್ಲ. ಕಳೆದ ಬಾರಿ ಅಲ್ಲಿಗೆ ಭೇಟಿ ಕೊಟ್ಟಾಗಿನ ಒಳ್ಳೆಯ ಅನುಭವಗಳೇ ಮತ್ತೆಯೂ ಮರುಕಳಿಸಿರುವುದರಿಂದ ಅದರ ಕುರಿತು ಮತ್ತೇನು ಹೆಚ್ಚು ಹೇಳುವುದವಶ್ಯವಲ್ಲ ಎನಿಸುತ್ತದೆ. ನನ್ನ ಹಳೆಯ ವೈಷ್ಣೋದೇವಿ ಪ್ರವಾಸ ಕಥನವನ್ನ ನೀವಿಲ್ಲಿ ಓದಬಹುದು.
ನನ್ನ ಕನ್ನಡ ಸಂಘಟನೆಯ ಕಥಾನಕವನ್ನು, ಉತ್ತರ ಭಾರತದ ಪ್ರವಾಸ ಕಥಾನಕವನ್ನು ಇಲ್ಲಿ ಬರೆದಿದ್ದಕ್ಕೆ ಕಾರಣವಿಷ್ಟೇ, 'ಜೀವನ ಎಲ್ಲರಿಗೂ ಕೊಟ್ಟಂತೆ ನನಗೂ ಸುವಿಸ್ತಾರವಾದ, ಸುನೀಲವಾದ ಸಮಯವನ್ನು ಕೊಟ್ಟಿದೆ. ಅದರ ಸದುಪಯೋಗದ ಭಾಗವಾಗಿ ಅನೇಕ ಕ್ಷೇತ್ರ ದರ್ಶನಗಳಿಗೆ ಅವಕಾಶವೂ ಒದಗಿ ಬಂದಿದೆ. ರಾಜ್ಯದೊಳಗೂ, ದೇಶದೊಳಗೂ ತಿರುಗಿ, ಹಲವಾರು ತಾಣಗಳನ್ನು ದರ್ಶಿಸುವಾಗ ಆಗುತ್ತಿರುವದೇನೆಂದರೆ ಅನುಭವದ ಬುತ್ತಿ ಹಿಗ್ಗುತ್ತಿದೆ, ಅದರೊಳಗೆ ಅನೇಕ ವಿಶೇಷ ಜ್ಞಾನಗಳು ಕ್ಷಣ ಕ್ಷಣಕ್ಕೂ ಜನ್ಮ ತಾಳುತ್ತಿವೆ. ಅವುಗಳು ಜೀವನದ ದಿಕ್ಕನ್ನು ಒಂದೇ ಸಮನೆ ಬದಲಿಸಲು ಹವಣಿಸುತ್ತಿವೆ. ಈಗಾಗಲೇ ಕೆಲವು ಬದಲಿಸಿವೆ ಕೂಡ. ಆ ಅನುಭವ ಬುತ್ತಿಯೊಳಗೆ ಭಾಷೆ, ರಾಜ್ಯ, ಧರ್ಮದ ಯಾವ ಕಟ್ಟು ಇಲ್ಲ, ಅಲ್ಲಿರುವುದೆಲ್ಲವೂ ಗ್ರಾಹ್ಯವೇ. ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ ಸಾರ್ವಭೌಮತೆ ದಕ್ಕಬೇಕೆನ್ನುವ ನಾನು ಹೊರಗೆಲ್ಲೋ ಯಾವುದನ್ನೂ ಬೆದಕದೇ ಅನುಭವದ ಬುತ್ತಿಯನ್ನು ಬಿಚ್ಚಿಕೊಂಡು ಅದರೊಳಕ್ಕೆ ಕೆಲವನ್ನು ಸೇರಿಸ್ಕೊಳ್ಳುತ್ತಲೂ, ಕೆಲವನ್ನು ಹಂಚಿಕೊಳ್ಳುತ್ತಲೂ ಇರುತ್ತೇನೆ. '. ಈ ಪ್ರಕ್ರಿಯೆ ಕೇವಲ ನನ್ನಲ್ಲುಂಟಾಗುತ್ತಿದೆ ಎಂದರೆ ನಾನು ಶತ ಮೂರ್ಖನಾಗಬಹುದು, ಇದು ಎಲ್ಲ ಜೀವಿಗಳಿಗೂ ನಿಸರ್ಗ ದತ್ತವಾಗಿ ಬಂದಿದೆ. ಕೆಲವರು ಅದರಾಳಕ್ಕಿಳಿದು ಕೆದಕಿ, ಬೆದಕಿ ಅದನ್ನು ಬರೆದಿಡುತ್ತಾರೆ, ಇನ್ನು ಕೆಲವರು ಅಲ್ಲೇ ಸೆಲ್ಫಿ ಕ್ಲಿಕ್ಕಿಸಿಕೊಂಡು ಅಲ್ಲಿಂದ ಮರಳಿ ಬರುವುದರೊಳಗೆ ಮರೆತು ಹೋಗುತ್ತಾರೆ. ಅಷ್ಟೇನೂ ದೊಡ್ಡದಲ್ಲದ ನನ್ನ ಜೀವನಾನುಭವ ಸದ್ಯಕ್ಕೆ ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿದೆ
ಪ್ರವಾಸ ಪಟ
-o-
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ