ಶನಿವಾರ, ಡಿಸೆಂಬರ್ 28, 2019

ಬ್ರಹ್ಮನಿಗೂ ಬಿದಿರಿಗೂ ಮುಖಾ-ಮುಖಿ

ಬಿದಿರು ಒಮ್ಮೆ ಬ್ರಹ್ಮನಿಗೆ ಎದುರಾಯ್ತಂತೆ, ಬ್ರಹ್ಮನ ಕುರಿತು ಮಾತಾಡಿತಂತೆ.

ಬಿದಿರು : ಅಯ್ಯಾ, ಬೇಕಾಗಿತ್ತೇ ನಿನ್ನ ಸೃಷ್ಟಿಯೊಳಗೆ ನನ್ನದೊಂದು ಪಾತ್ರ. ಎಲ್ಲ ಮರಗಳಂತೆ ನಾನು ಹಣ್ಣುಗಳಿಂದ ತುಂಬಿ ತೊನೆಯಲಿಲ್ಲ, ಋತುಮಾನಕ್ಕನುಗುಣವಾಗಿ ಹೂ ಬಿಟ್ಟು ಇತರರ ಕಣ್ಣಿಗೆ ಹಬ್ಬವುಂಟು ಮಾಡಲಿಲ್ಲ. ಅದೆಲ್ಲಾ ಹೋಗಲಿ ಕಡೇ ಪಕ್ಷ ಬಿಸಿಲು, ಮಳೆಯೆಂದು ಬಂದವರಿಗೆ ನೆರಳನ್ನೂ ಕೊಡಲಾಗಲಿಲ್ಲ. ಏಕೆ ಬೇಕಾಗಿತ್ತು ನನ್ನ ಈ ಪಾತ್ರ ನಿನ್ನ ಸೃಷ್ಟಿಯೊಳಗೆ.

ಬ್ರಹ್ಮ : ನಸು ನಗುತ್ತಾ, ಕಾಯಿ. ನಿನ್ನಷ್ಟಕ್ಕೆ ನೀನು ಬೆಳೆದು ನಿಂತಿರು. ನಿನ್ನ ಬೆಲೆ ನಿನಗೆ ತಿಳಿಯಲು ಸ್ವಲ್ಪ ಕಾಲವಾಗಬೇಕು.

ಬಿದಿರು : ಆಯಿತು.

ಬಿದಿರು ತಾಳ್ಮೆ ತಳೆಯಿತಂತೆ. ಸೊಂಪಾಗಿ ಬೆಳೆದು ನಿಂತಿತಂತೆ. ಮುಂದೆ ಬಿದಿರು ಏನಾಯಿತು ಗೊತ್ತೇ?

ತಾನು ತುಂಬಿ ತೊನೆಯದ ಹಣ್ಣುಗಳ ತುಂಬಿಡುವ ಬುಟ್ಟಿಯಾಯ್ತಂತೆ, ಬಟ್ಟೆಯ ಒಣಗಿಸುವ ಕೋಲಾಯ್ತಂತೆ, ಸುಮಂಗಲೆಯರು ಬಾಗಿನ ಕೊಡುವ ಮೊರವಾಯ್ತಂತೆ, ಶ್ರೀಕೃಷ್ಣನ ಕೈಲಿ ಕೊಳಲಾಯ್ತಂತೆ, ಹುಟ್ಟಿದ ಮಕ್ಕಳಿಗೆ ತೊಟ್ಟಿಲಾಯ್ತಂತೆ, ಹೊರಟು ನಿಂತ ಪುಣ್ಯಾತ್ಮರಿಗೆ ಚಟ್ಟವಾಯ್ತಂತೆ, ಬಡವರ ಗುಡಿಸಲಿಗೆ ಆಧಾರವಾಯ್ತಂತೆ, ನೇಗಿಲ ಯೋಗಿಯ ಕೈಯ ಬಾರುಕೋಲಾಯ್ತಂತೆ ಇನ್ನು ಏನೇನೊ ಆಗಿ ಎಲ್ಲ ಮರಗಳನ್ನು ಮೀರಿಸುವಂತೆ ಮನುಷ್ಯನ ಸೇವೆಯಲ್ಲಿ ತಲ್ಲೀನವಾಯ್ತಂತೆ.

ಬಿದಿರು ಅನಂತರ ಮನುಷ್ಯನಿಗೆ ಹೇಳಿತಂತೆ, ನೀನು ಯಾವ ಕಾರಣಕ್ಕೆ ಇಲ್ಲಿದ್ದೀಯೋ ಅದರ ಬಗ್ಗೆ ಚಿಂತಿಸದಿರು. ಸದ್ದರಿಯದೇ ಬೆಳೆದು ನಿಲ್ಲು, ನಂತರ ನಿನ್ನ ಬೆಲೆ ಎಷ್ಟೆಂದು ನಿನಗೆ ಅರ್ಥವಾಗುತ್ತದೆ ಎಂದು.

ಮೇಲಿನ ಬ್ರಹ್ಮ ಬಿದಿರಿನ ಸಂಭಾಷಣೆ, ಹಾಗು ಅದರ ನಂತರದಲ್ಲಿ ಬಿದಿರು ತಳೆದ ನಿಲುವು, ನಂತರ ಅದು ಜನಸೇವಕನಾದ ಬಗೆ ಎಲ್ಲವೂ ಕಾಲ್ಪನಿಕವೇ ಸತ್ಯ. ಆದರೆ ಈ ಕಾಲ್ಪನಿಕ ಸನ್ನಿವೇಶ ಮಾನವ ಕುಲಕ್ಕೆ ದಾಟಿಸುತ್ತಿರುವ ಪಾಠ ಅತಿ ದೊಡ್ಡದು. ಆತ್ಮವಿಶ್ವಾಸ ಬಡಿದೇಳಿಸುವ ಈ ಕಾಲ್ಪನಿಕ ಸನ್ನಿವೇಶ ಎಷ್ಟೋ ಕಮರುತ್ತಿರುವ, ಮರುಗುತ್ತಿರುವ ಮನಸ್ಸುಗಳಿಗೆ ದಾರಿ ದೀವಿಗೆಯಾದರೂ ಆಗಬಹುದು.

-o-

ಭಾನುವಾರ, ನವೆಂಬರ್ 17, 2019

ನಾನೇ ಇನ್ನು ಮಾನವ ಮಾಡಿಲ್ಲ

ಅವರು ಬದುಕಿದರು
ಬರೆಯಲಿಲ್ಲ,
ನಾ ಬರೆದೆ
ಬದುಕಲಿಲ್ಲ.

ಅವರಾಡಿದರು
ಸೋಲೋ ಗೆಲುವೋ
ಚಿಂತಿಸಲಿಲ್ಲ,
ನಾನಾಡಲಿಲ್ಲ
ಆದರೂ ಸೋಲಿನ ಬಗೆಗೆ
ಧೈರ್ಯ ತಳೆಯಲೇ ಇಲ್ಲ.

ಅವರೊಡನಾಡಿದರು
ನಾನಾಡಲಿಲ್ಲ,
ನಾನು, ನನ್ನ ಸಿದ್ಧಾಂತಗಳಿಗೆ
ಹಪ ಹಪಿಸಿ
ಯಾರೊಡಗೂ ಕೂಡಿ ಬಾಳಲಿಲ್ಲ.

ಯಾವೊಂದಕೂ ಕೈ ಚಾಚಲಿಲ್ಲ,
ಯಾರಿಗಾಗಿಯೂ ಹಾತೊರೆಯಲಿಲ್ಲ,
ಪ್ರೀತಿ ಪ್ರೇಮದ ಬಂಧನದೊಳಗೆ ಸಿಲುಕಲಿಲ್ಲ,
ಗೆಳೆಯರ ಬಳಗದೊಳಗೆ ಕೇಂದ್ರ ಬಿಂದು ನಾನಾಗಲಿಲ್ಲ,
ಬರೆದವರ ನಡುವೆ ಮೆರೆಯಲಿಲ್ಲ,
ಬದುಕಿದವರ ನಡುವೆ ಬಾಳಲಿಲ್ಲ,
ಏನೇನೂ ಇಲ್ಲಿ ಘಟಿಸಿಲ್ಲ ,
ಘಟಿಸುವ ಸುಸಮಯವೊಂದಕೆ
ನಾನೇ ಇನ್ನು ಮಾನವ ಮಾಡಿಲ್ಲ.

-0-


ಅಮೆರಿಕೆಯ ಧೂತಾವಾಸ

ಉತ್ತರೋತ್ತರದ ಕರ್ಕಾಟಕ ಸಂಕ್ರಾಂತಿ ವೃತ್ತಮಮ್ ದಾಟಿ ದಾಟಿ
ಕಡಲದಾಟಿ ಅರಬೀಯರ ಸೀಮಾ ರೇಖೆಯಂ ಸೀಳಿ
ಯಹೂದಿಗಳ್ ತಾವ್ ಬಾಹುಗಳ್ ಬಿಗಿಯರಿಸಿ ನಿಂತ ಯುದ್ಧ ಭೂಮಿಯಮ್
ಮೇಲ್ಜಾರಿ ಶ್ವೇತ ವರ್ಣೀಯರ್ ಕಟ್ಟಾಳಿದ ಯೂರೋಪಿನಾಂತ
ಸಂತಸವನಾಂತು ಮುನ್ನಡೆದು ಶೀತ ವಲಯದೊಳಿರ್ಪ ಕಡು ಚಳಿಗೆ ಮೈ ತೆತ್ತು
ಭೀಭತ್ಸ ಸಾಗರವ ಲಂಘಿಸಿ ಮುನ್ನಡೆರ್ದು ಗತ ಕಾಲದೊಳ್ ನೆತ್ತರ ವರ್ಣ ಜನಾಂಗಮ್
ಸಾಂಗವಾಗಿ ನೆಲೆಸಿರ್ದ ಅಮೆರಿಕೆಯ ಮೂಡಣ ಪಟ್ಟಣದೊಳಿಳಿಯುವ ಎನ್ನಾಸೆಗೆ
ಉದಕದಭಿಷೇಕ ಮಾಡಿ ಹಿನ್ನಡೆಗೆ ದೂಡಿ ಸಂತೋಷಿಸಿರ್ದ
ಅಮೆರಿಕೆಯ ಧೂತಾವಾಸಕೆ ಶಿರಸಾಷ್ಟಾಂಗ ಪ್ರಣಾಮ. 

ಶನಿವಾರ, ಆಗಸ್ಟ್ 31, 2019

ಥೇರು

ನಾನು ಆಗಷ್ಟೇ ಕನ್ನಡ ಮಾಧ್ಯಮದಲ್ಲಿ ಹತ್ತು ತರಗತಿಗಳನ್ನು ಎಡತಾಕಿ ಹನ್ನೊಂದನೇ ಇಯತ್ತೆಗೆ ಹೋಗಿದ್ದೆ. ಎದೆಯುಬ್ಬಿಸಿ ಟೀಕು-ಟಾಕಲ್ಲಿ ಹೇಳಿಕೊಳ್ಳುವ ಪಿ.ಸಿ.ಎಂ.ಬಿ ಅಂದುಕೊಂಡು ಅದಕ್ಕೆ ಸೇರಿಕೊಂಡಿದ್ದೆ. ನಾನೇ ಸೇರಿಕೊಂಡಿದ್ದೆ ಅನ್ನುವ ಬದಲು ನನ್ನ ಸುತ್ತಲಿನ ಕೆಲವರು ಆ ಕೋರ್ಸು ಪ್ರಪಂಚದ ಸರ್ವ ಶ್ರೇಷ್ಠ ಕೋರ್ಸುಗಳಲ್ಲೊಂದು ಎಂದು ಬಿಂಬಿಸಿಬಿಟ್ಟದ್ದರು. ಅಷ್ಟರಲ್ಲಾಗಲೇ ನನ್ನ ಮನಸ್ಸಿನಲ್ಲಿಯೂ ಅದು ಬಿಟ್ಟು  ಬೇರೆ ಕೋರ್ಸಿಗೆ ಸೇರಿದರೆ ಕೀಳಾಗಿಬಿಡುತ್ತೇನೇನೋ ಎನ್ನುವ ಭಯ, ದುಗುಡ ಕಾಡುತ್ತಿತ್ತು. ಅವೆಲ್ಲ ಕಾರಣಗಳೂ ಮೊದಲಾಗಿ ಆರ್ಥಿಕ ಮುಗ್ಗಟ್ಟಿನ ಇಕ್ಕಟ್ಟಿನಲ್ಲೂ ಆ ಕೋರ್ಸಿಗೆ ಸೇರಿಕೊಂಡಿದ್ದೆ. ನಮ್ಮ ತರಗತಿಗಳು ಇನ್ನೂ ಶುರುವಾಗಿರಲಿಲ್ಲ, ಜೂನ್ ಒಂದರಿಂದ ಶುರುವಾಗುವುದರಲ್ಲಿತ್ತು. ಅಷ್ಟರಲ್ಲಿ ನಮ್ಮ ಮನೆಗೆ ಠಳಾಯಿಸಿದ ಕೆಲವರು ಕನ್ನಡ ಮೀಡಿಯಮ್ಮಿನಿಂದ ಹೋಗಿ ಪಿ.ಯು.ಸಿ ಯಲ್ಲಿ ಅದೂ ಇಂಗ್ಲೀಷಿನಲ್ಲಿ ವಿಜ್ಞಾನ ಓದುವುದು ಬಹುದೊಡ್ಡ ರಿಸ್ಕ್. ಅದರ ಬದಲು ಕಾಮರ್ಸಿಗೋ,  ಡಿಪ್ಲೋಮಾಗೋ ಸೇರಬಹುದಲ್ಲವೇ ಎಂಬ ಉಪದೇಶವನ್ನೂ ಕೊಟ್ಟರು. ಸಾಲದಕ್ಕೆ ಅದಕ್ಕೆ ಸೇರಿ ಫೇಲ್ ಆಗಿ ಮನೆ ಸೇರಿಕೊಂಡವರ ಅಥವಾ ಅದರ ನಂತರ ಡಿಪ್ಲೊಮಾ ಇನ್ನಿತರ ಕೋರ್ಸುಗಳಿಗೆ ತಗುಲಿಕೊಂಡವರ ಉದಾಹರಣೆ ಸಮೇತ ವಿವರಿಸುತ್ತಿದ್ದರು. ನನ್ನಲ್ಲಿ ಇರಬಹುದಾದ ಭಯವನ್ನು ಮತ್ತಷ್ಟು ಜಾಗೃತಗೊಳಿಸಲು ಯತ್ನಿಸುತ್ತಿದ್ದರು ಎನ್ನುವುದು ಮೇಲ್ನೋಟಕ್ಕೆ ತಿಳಿದುಬಿಡುವಷ್ಟಾದರೂ, ಅದ್ಯಾವ ಧೈರ್ಯದ ಮೇಲೆ ಹೋಗಿ ಸೇರಿಕೊಂಡೆನೋ ಈಗ್ಗೆ ಗೊತ್ತಿಲ್ಲ. ಬಹುಶಃ ಮೊಂಡು ಧೈರ್ಯ ವಿರಬಹುದೇನೋ, ಅಥವಾ ಇದೇ ಶ್ರೇಷ್ಠವೆಂಬ ಇತರರು ತುರುಕಿದ್ದ ಭಾವನೆಗಳೋ ಈಗ ಅರಿಯೆ. ಸರಿ ಅದರ ಮುಂದುವರಿದ ಭಾಗವಾಗಿ ಆಗಿದ್ದರ ಬಗ್ಗೆ ಖುಷಿಯಾಗಿ ಬರೆಯಬೇಕೆನಿಸುತ್ತದೆ. ಬರೆಯುತ್ತೇನೆ.

ಅದೊಂದು ದಿನ ಪ್ರಥಮ ಪಿ.ಯು.ಸಿ ಯಲ್ಲಿ ಬಯಾಲಜಿಯ ಬಾಟನಿ (ಸಸ್ಯಶಾಸ್ತ್ರ) ಪಾಠ ನಡೆಯುತ್ತಿತ್ತು. ಪಾಠವನ್ನು ಅಷ್ಟಾಗಿ ಯಾರೂ ಕೇಳುತ್ತಿರಲಿಲ್ಲವೆನ್ನಿ. ಇಂಗ್ಲೀಷಿನ ಮೇಲೆ ಆಗಾಧ ಹಿಡಿತವಿದ್ದುಬಿಟ್ಟಿದ್ದರೆ ನಾನು ಕೇಳುತ್ತಿರಲಿಲ್ಲವೇನೋ, ಮನೆಗೆ ಹೋಗಿ ಓದಿದರಾಯ್ತು ಎನ್ನುವ ನಿಲುವು ತಳೆಯುತ್ತಿದ್ದೆನೇನೋ. ಇಂಗ್ಲೀಷಿನ ಮೇಲಿನ ಭಯ ಅಂದಿನ ಪಾಠವನ್ನು ಅಲ್ಲೇ ಕ್ಲಾಸಿನಲ್ಲಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಪಾಠದ ನಡುವಲ್ಲಿ ಏಕದಳ - ದ್ವಿದಳ ಸಸ್ಯಗಳ ಸ್ಥೂಲ ವರ್ಗೀಕರಣವನ್ನು ವಿವರಿಸುತ್ತಿದ್ದರು. ವರ್ಗೀಕರಣಕ್ಕೆ ಕಾರಣವಾದ ಅಂಶಗಳನ್ನು ಹೇಳುತ್ತಾ ಏಕದಳ ಸಸ್ಯಗಳು ದ್ವಿದಳ ಸಸ್ಯಗಳಷ್ಟು ಗಟ್ಟಿ ಬರುವುದಿಲ್ಲ. ದ್ವಿದಳ ಸಸ್ಯಗಳು ಮೂಲತಃ ಬಹಳ ಗಟ್ಟಿ, ಹಾಗು ಕೆಲವಂತೂ ಸಾವಿರಾರು ವರ್ಷ ಆಯುಷ್ಯ ಹೊಂದಿವೆ ಎಂದೆಲ್ಲ ವಿವರಿಸುತ್ತಿದ್ದರು. ಏಕದಳ ಸಸ್ಯಗಳು ದ್ವಿದಳ ಸಸ್ಯಗಳಷ್ಟು ಗಟ್ಟಿ ಬರಲಾರವು ಎಂದ ಮೇಲೆ ಅವುಗಳ ಉಂಟಾದ ಧಾನ್ಯಗಳನ್ನಷ್ಟೇ ಬಳಸುತ್ತಾರೆ, ಅದರ ಕಾಂಡದ ಉಪಯೋಗ ಯಾವುದೇ ಕಾರಣಕ್ಕೂ ಇಲ್ಲ ಎಂದರು. ನನಗೆ ಥಟ್ಟನೆ ನಮ್ಮೂರಿನಲ್ಲಿ ಥೇರು ಕಟ್ಟುತ್ತಿದ್ದು ಜ್ಞಾಪಕ ಬಂತು, ಅಷ್ಟೇ ಅಲ್ಲದೆ ಅಡಿಕೆಯ ಮರದ ತುಂಡುಗಳನ್ನು ಮಲೆನಾಡಿನ ಕಡೆ ಬೇಲಿ ಕಟ್ಟಲು ಬಳಸುತ್ತಿದ್ದುದನ್ನು ನೋಡಿದ್ದೆ, ಬಯಲು  ಸೀಮೆಯಲ್ಲಿ ಅಡಿಕೆ ಬೆಳೆದವರು ಅಡಿಕೆಯ ಕಟ್ಟಿಗೆಗಳನ್ನು ಮನೆಯ ಹೆಂಚಿನ ಛಾವಣಿಯ ರಿಪೀಸ್ ಪಟ್ಟಿಗಳಾಗಿ ಉಪಯೋಗಿಸಿದ್ದು ಕಂಡಿದ್ದೆ. ಇಷ್ಟಾದ ಮೇಲೆ ಏಕದಳ ಸಸ್ಯಗಳ ಕಾಂಡ ಉಪಯೋಗ ಇಲ್ಲವೇ ಇಲ್ಲ ಎಂದಿದ್ದು ಪ್ರಶ್ನಿಸಬೇಕು ಎನಿಸಿತು. ಪಾಠವನ್ನು ಅಮೂಲಾಗ್ರವಾಗಿ ಅರ್ಥ ಮಾಡಿಕೊಳ್ಳುತ್ತಿದ್ದುದರ ಒಂದು ಮುಖವು ಅದಾಗಿದ್ದರಿಂದ ನಮ್ಮ ಲೆಕ್ಚರರ್ ಮಾತು ಮುಂದುವರಿಸುವ ಮುನ್ನವೇ ತಡೆದೆ.

ಏಕದಳ ಸಸ್ಯಗಳ ಕಾಂಡ ಉಪಯೋಗ ಇಲ್ಲವೇ ಇಲ್ಲ ಎನ್ನುವುದು ಮಿಥ್ಯೆ, ನಮ್ಮೂರಿನಲ್ಲಿ ಥೇರು ಕಟ್ಟಲು ತೆಂಗಿನ ಮರದ ತುಂಡುಗಳನ್ನು ಬಳಸುತ್ತಾರೆ ಎಂದು ಬಿಟ್ಟೆ. ಇಡೀ ತರಗತಿ ಗೊಳ್ಳೆಂದು ನಕ್ಕಿಬಿಟ್ಟಿತು. ನನಗೆ ಏನೋ ತಪ್ಪು ಮಾಡಿದ ಅನುಭವಾಗಿ ನಾಚಿಕೆಯಾಗಿಬಿಟ್ಟಿತು, ತಲೆ ತಗ್ಗಿಸಿಬಿಟ್ಟೆ. ಇಂಗ್ಲೀಷು ಮೀಡಿಯಮ್ಮಿನಿಂದ ಬಂದವರ ಮುಂದೆ ಹಿಂಗೆ ನಡೆದುಕೊಳ್ಳಬಾರದಿತ್ತು, ಕ್ಲಾಸು ಮುಗಿದ ಮೇಲೆ ಕೇಳಿದರೂ ಆಗಿತ್ತು ಎಂದು ಒಳಗೊಳಗೇ ನನ್ನನ್ನೇ ಹಳಿದುಕೊಳ್ಳಲು ಆರಂಭಿಸಿದ್ದೆ.ಎಲ್ಲರನ್ನೂ ತಡೆದ ನಮ್ಮ ಲೆಕ್ಚರರ್ ಹೇಳಿದರು ನೀನು ಹೇಳುವುದರಲ್ಲೂ ಅರ್ಥವಿದೆ, ಅಂತಹ ಉಪಯೋಗಗಳಲ್ಲಿ ಏಕದಳ ಸಸ್ಯಗಳನ್ನು ಬಳಸಿಕೊಳ್ಳುತ್ತಾರೆನ್ನುವುದು ನನಗೂ ತಿಳಿದಿರಲಿಲ್ಲ. ಕ್ಲಾಸು ಮುಗಿದ ಮೇಲೆ ಬಂದು ನನ್ನನು ಕಾಣು ಎಂದು ಹೇಳಿ ಅಂದಿನ ಪಾಠ ಮುಗಿಸಿ ಹೋಗಿಬಿಟ್ಟರು.

ನನ್ನ ಹಿಂದಿನ ಬೆಂಚಿನ ಹುಡುಗರು 'ಯಾರ್ ಗುರು ಇವ್ನು ಪಕ್ಕಾ ಹಳ್ಳಿ ತುಂಡು, ಬಯಾಲಾಜಿಗೆ ಥೇರು ತಂದು ನಿಲ್ಲಿಸಿದ' ಎಂದು ಆಡಿಕೊಂಡು ನಗುತ್ತಲೇ ಇದ್ದರು,  ಅಂದಿನ ಕ್ಲಾಸು ಮುಗಿಯಿತು. ಸ್ಟಾಫ್ ರೂಮಿಗೆ ನಡೆದು ಹೋದೆ. ಅಲ್ಲಿದ್ದ ನಮ್ಮ ಬಯಾಲಜಿ ಲೆಕ್ಚರರ್ ನನ್ನ ಬಗ್ಗೆ, ಹಿನ್ನೆಲೆ ಎಲ್ಲವನ್ನೂ ತಿಳಿದುಕೊಂಡು ಇತರ ಲೆಕ್ಚರರ್ ಮುಂದೆ ನನ್ನನ್ನ ತೋರಿಸಿ ಹೊಗಳಿದ್ದೇ ಹೊಗಳಿದ್ದು. ಹಳ್ಳಿಯ ಸೊಗಡಿನ ಅನುಭವವೇನಾದರೂ ಯಾರಿಗಾದರೂ ಬೇಕಿದ್ದರೆ ಇವನನ್ನು ಕಂಡು ಮಾತನಾಡಿ ಎಂದು ಎಲ್ಲರಿಗೂ ಸಂತೋಷದಿಂದಲೇ ಹೇಳುತ್ತಿದ್ದರು. ಅಲ್ಲಿಂದಾಚೆಗೆ ಅವರು ಕ್ಲಾಸಿಗೆ  ಬರುವಾಗ ನೋಟ್ಸ್ ಮಾಡಿಕೊಂಡು ಬರುವುದು ರೂಢಿ ಮಾಡಿಕೊಂಡರು. ಎಲ್ಲಿ ಯಾವಾಗ ಏನು ಅನುಮಾನ ಬಂದರೂ ನೇರವಾಗಿ ಬಂದು ತನ್ನನ್ನೇ ಕಂಡು ಮಾತನಾಡುವಂತೆ ಹೇಳಿದ್ದಾರೆ. ಕೆಲವು ಬಾರಿ ಹೋಗಿದ್ದಾಗ ಕನ್ನಡದಲ್ಲಿಯೇ ಎಲ್ಲವನ್ನೂ ವಿವರಿಸಿ ಕಳುಹಿಸುತ್ತಿದ್ದರು.

ಅಂದಹಾಗೆ ಅಂದು ಆಡಿಕೊಂಡವರ ಪೈಕಿ ಒಬ್ಬರೋ ಇಬ್ಬರು ಪಾಸಾದರು. ಇನ್ನುಳಿದವರು ಏನೇನೋ ಆಗಿ ಹೋದರು. ಈಚೀಚಿಗೆ ಬೆಂಗಳೂರಿನ ವಿಜಯನಗರದಲ್ಲಿ ಓಲಾ ಕ್ಯಾಬಿನಲ್ಲಿ ಬರುತ್ತಿದ್ದಾಗ ಆ ಗುಂಪಿನ ಹುಡುಗನೊಬ್ಬ ಸಿಕ್ಕಿದ್ದ. ಓಲಾ ಕ್ಯಾಬಿನ ಡ್ರೈವರ್ ವೃತ್ತಿ ಅವನ ಹೊಟ್ಟೆ ತುಂಬಿಸುತ್ತಿತ್ತು. ಎಷ್ಟೋ ಹೊತ್ತಾದ ಮೇಲೆ ಅವನೇ ನನ್ನ ಗುರುತಿನ ಬಗ್ಗೆ ವಿವರಿಸಿದ, ನಾನೂ ಅವನ ಗುರುತು ಹಿಡಿದೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ಆಗ ಆಡಿಕೊಂಡಿದ್ದೆ, ಅದನ್ನೇನು ಮನಸಿನಲ್ಲಿ ಇಟ್ಟುಕೊಂಡಿಲ್ಲ ಅಲ್ವಾ ಎಂದ. ಇಲ್ಲವೆಂದು ಗೋಣು ಅಲ್ಲಾಡಿಸಿ ನನ್ನ ಫೋನ್ ನಂಬರ್ ಅವನ ಕೈಗಿತ್ತು ಮನೆಗೆ ನಡೆದೆ. ಒಂದೇ ಕ್ಲಾಸಿನಲ್ಲಿ ಕುಳಿತಿದ್ದ ನಾವು ನಮ್ಮ ನಮ್ಮ ತಲೆ ಮೆರೆಸಿದಂತೆ ನಡೆದು ಹೋದ ದಾರಿಯ ನೆನೆಸಿಕೊಂಡು ನಾನೂ ಅರೆಕ್ಷಣ ಭಾವುಕನಾಗಿಹೋದೆ.

-o-





ಸೋಮವಾರ, ಜುಲೈ 29, 2019

ದೇವೋತ್ತಮ

ವೈರಾಗ್ಯವಂತ ಪಾರ್ಥನಿಗೆ 

ರಣಭೂಮಿಯೊಳಗೆ 

ಧೈರ್ಯದ ಬಿರುಗಾಳಿಯೆಬ್ಬಿಸಿದನು,

ತನ್ನವರೇ ಬಂಧು ಬಾಂಧವ ಗುರು 

ಹಿರಿಯರನು ತುಂಡರಿಸಿ ಚೆಂಡಾಡೆಂದನು,

ಅಧರ್ಮಕ್ಕೆಲುಬಾಗುವರ 

ನಡುವ ಮುರಿಯೆಂದನು ಧರ್ಮದಾತ.


ಭಿಕ್ಷಾರ್ಥಿಯಾದ ಕುಚೇಲನಿಗೆ

ಅರಮನೆಯಲ್ಲಿ ಪಲ್ಲಂಗವೇರಿಸಿ 

ಅವನ ಪಾದೋದಕ ತಲೆಗೆ 

ಪ್ರೋಕ್ಷಿಸಿ, ನಡಿಯೆಂದನು.

ಮನದ ತುಮುಲಗಳ ಅರ್ಥೈಸಿಕೊಂಡು 

ಕೇಳದೆಯೂ ಕರುಣಿಸಿದನು ಭಾಗ್ಯದಾತ.

ಪಂಚ ಪಾಂಡವರ ಮಡದಿಗೆ 


ಅಯೋಗ್ಯನೊಬ್ಬ ಮುಡಿಹಿಡಿದೆಳೆದಾಗ

ಧುತ್ತೆಂದು ಎದುರ್ಗೊಂಡನು,

ಅಸಂಸ್ಕೃತರನೇನು ಸುಸಂಸ್ಕೃತರ 

ಪಟ್ಟಕ್ಕೆಳೆಯಲಿಲ್ಲ.

ಅಲ್ಲಾಗಲಿದ್ದ ಅಸಂಸ್ಕೃತಿಗೆ ತೆರೆಯೆಳೆದು

ನಿಂತನಾಗ ನೀತಿದಾತ.


ಭಯಗೊಂಡವನ ವಂದಿಗಿದ್ದನು,

ನೊಂದು ಬೆಂದವನ ಜೊತೆಗಿದ್ದನು,

ಆರ್ತಳ ಕೂಗಿಗೆ ಓಡಿ ಬಂದನು,

ರಣಾಂಗಣದಲ್ಲಿ ಟೊಂಕ ಕಟ್ಟಿ ನಿಂತನು,

ಚತುರನಾದನು, ಮುಂದಣ ಪರ್ವಗಳ 

ಅರಿವಿದ್ದರೂ ಹುಸಿ ನಗೆಯೊಂದನು 

ಬೀರಿದ್ದನು.


ತಾನಿರುವ ಪರ್ಯಂತ ನಿಮ್ಮ 

ನಿಮ್ಮ ಕಾರ್ಯಕ್ಕೆ ತಕ್ಕಂತೆ 

ಬದುಕೊದಗುವುದು ಎಂಬುದನ್ನು 

ಸೂಚ್ಯವಾಗಿ ತನ್ಮೂಲಕ ಬಿತ್ತರಿಸುತ್ತಲೇ 

ಇದ್ದನವನು 

ಅರಿಯುವರ ಸಂಖ್ಯೆ ದೊಡ್ಡದಿರಲಿಲ್ಲವೇನೋ 

ಕೊನೆಗೆ 

ಅರಿತವರ ಪಾಲಿಗಾದನವನು 'ದೇವೋತ್ತಮ'.


ಭಾನುವಾರ, ಜುಲೈ 28, 2019

ನಾನು ಮತ್ತು ವಿಶ್ವ ಮಾನವ ಸಂದೇಶ ಭಾಗ ೨

ಅಕ್ಕಿಯೊಳಗನ್ನವನು ಮೊದಲಾರು ಕಂಡವರು
ಅಕ್ಕರದ ಬರಹಕ್ಕೆ ಮೊದಲಿಗನದಾರು
ಲೆಕ್ಕವಿರಿಸಿಲ್ಲ ಜಾಗ ತನ್ನಾದಿಬಂಧುಗಳ
ದಕ್ಕುವುದೇ ನಿನಗೆ ಜಸ - ಮಂಕುತಿಮ್ಮ

ಭಾವ ಋಷಿ ಡಿವಿಜಿಯವರ ಸಾಲುಗಳಿವು. ಪ್ರಪಂಚದಲ್ಲಿ ಎಂತೆತದೋ ಮಹಾನ್ ಘಟನೆಗಳು ಘಟಿಸಿ ಮುಗಿದಿವೆ, ಆದರೆ ಅವುಗಳಿಗೆ ಕಾರಣೀಕರ್ತನಾಗಿ/ಮೂಲ ಪುರುಷನಾಗಿ ಈ ಪ್ರಪಂಚ ಯಾವೊಬ್ಬ ವ್ಯಕ್ತಿಯನ್ನು ತನ್ನ ಜ್ಞಾಪಕದಲ್ಲಿರಿಸಿಲ್ಲ. ವಸ್ತು ಸ್ಥಿತಿ ಹೀಗಿರುವಾಗ ಹೆಸರಿಗಾಗಿ, ಕೀರ್ತಿಗಾಗಲಿ, ಹಣಕ್ಕಾಗಿ ಬದುಕಿರುವವರೆಗೂ ಬಡಿದಾಡಿ ಸಾಯುತ್ತೇವಲ್ಲ ಇದು ಯಾವ ಪುರುಷಾರ್ಥಕ್ಕಾಗಿ?. ಅದರಲ್ಲಿ ನಾವು ಪ್ರಕೃತಿಯನ್ನು ಎದುರಿಸಿ ಜಯಿಸಲು ಸಾಧ್ಯವೇ? ಎನ್ನುವ ನಿಲುವು ಡಿ.ವಿ.ಜಿಯವರದು.ವಯ್ಯಕ್ತಿಕ ಬೇಕುಗಳಿಗಷ್ಟೇ ಬಡಿದಾಡದೆ, ಸಮೂಹವೊಂದರಲ್ಲಿ ಗುರುತಿಸಿಕೊಂಡ ಮನುಷ್ಯ ತನ್ನ ಸಮೂಹಕ್ಕಾಗಿ ಬಡಿದಾಡುತ್ತಿರುವುದು, ಅಂತಹ ಸಮೂಹ ಬಡಿದಾಟ ಕೂಟಕ್ಕೆ ಸೊ ಕಾಲ್ಡ್ ಸರ್ಕಾರ, ಇನ್ನಿತರ ಸಂಸ್ಥೆಗಳಿಂದ ಒಪ್ಪಿಗೆಯ ಮುದ್ರೆಯಿರುವುದು ಮನುಷ್ಯ ಇನ್ನೂ ಹೊಂದಿಕೊಂಡು ಬಾಳಲಾರ ಎಂಬುದನ್ನು ಎತ್ತಿ ತೋರಿಸುವಂತಿದೆ. ಬೇರೆ ದೂರವೆಲ್ಲೋ ಬೇಡ, ನಮ್ಮ ಭಾರತದ ಗಡಿಗಳನ್ನು ಒಂದು ದಿನದ ಮಟ್ಟಿಗೆ ಸೇನೆ ಜಮಾವಣೆಯಿಂದ ಹಿಂತೆಗೆದರೆ ಬೆಳಗು ಹರಿಯುವುದರೊಳಗೆ ಎಷ್ಟೆಷ್ಟು ಅನಾಹುತಗಳಿಗೆ ದಾರಿಯಾಗುತ್ತದೆ ಎಂದು ಊಹೆ ಮಾಡಿಕೊಂಡರೆ ಸಾಕು, ಎದೆ ಝಲ್ಲೆನ್ನುತ್ತದೆ. ಸರ್ಕಾರವೇ ಮುಂದೆ ನಿಂತು ನಿಲ್ಲಿಸಿರುವ ಸೇನೆ ಎತ್ತಿ ತೋರಿಸುತ್ತಿರುವುದು ಅದನ್ನೇ ನಾವು ಕೂಡಿ ಬಾಳಲಾರೆವೆಂದು. ಗಡಿಯಿಂದ ಅತ್ತಲಿರುವ ಜನರು ಹಿಂದೊಮ್ಮೆ ನಮ್ಮವರೇ ಆಗಿದ್ದರು ಎಂಬ ಅರಿವು ನಮಗಷ್ಟೇ ಅಲ್ಲ ಅವರಿಗೂ ಇದ್ದುಬಿಟ್ಟರೆ ಭಾರತ-ಪಾಕಿಸ್ತಾನಗಳು ರಾಮ ರಾಜ್ಯಗಳಾಗಿಬಿಡುತ್ತಿದ್ದವು. ಸದ್ಯಕ್ಕೆ ಅದು ಕನಸಿನ ಮಾತು ಅಷ್ಟೇ.

ವಿಶ್ವ ಮಾನವ ಸಂದೇಶದಲ್ಲಿ ರಸಋಷಿ ಹಂಬಲಿಸುತ್ತಾರೆ ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಯೂ ಎಲ್ಲ ಧರ್ಮಗ್ರಂಥಗಳನ್ನು ಓದಿ ತನ್ನ ಧರ್ಮವನ್ನು ತಾನೇ ದರ್ಶಿಸಿಕೊಳ್ಳಬೇಕು, ಯಾವುದೋ ಒಂದು ಗ್ರಂಥಕ್ಕೆ ಕಟ್ಟು ಬೀಳದೆ ಮನುಕುಲಕ್ಕೆ ಉಪಕಾರಿಯಾಗಿ ನಿಲ್ಲುವ ಅಂಶಗಳನ್ನು ತೆಗೆದುಕೊಂಡು ತನಗಾಗಿಯೇ ವೈಯಕ್ತಿಕವಾದ ಗ್ರಂಥವೊಂದನ್ನು ತೀರ್ಮಾನ ಮಾಡಿಕೊಂಡು ಅದರಂತೆ ನಡೆಯಬೇಕು. ಹೀಗಾದಾಗ ಪ್ರಪಂಚದಲ್ಲಿ ಎಷ್ಟು ಜನರು ಇರುತ್ತಾರೆಯೋ ಅಷ್ಟೇ ಸಂಖ್ಯೆಯ ಧರ್ಮಗಳು ಇರುತ್ತವೆ.  ಒಂದೇ ಸಿದ್ಧಾಂತಕ್ಕೆ ಹಲವಾರು ಜನರು ಒಟ್ಟಾದಾಗ ಮಾತ್ರ ಅದರೊಳಗೆ ನಾವು, ನಮದೆಂಬ ಹೊಮ್ಮು ಕಾಣಿಸಿಕೊಳ್ಳುವುದು. ಅದೇ ಬದಲಾಗಿ ಒಂದು ಸಿದ್ಧಾಂತಕ್ಕೆ ಒಬ್ಬೊಬ್ಬರು ಮಾತ್ರವಿದ್ದಾಗ ನಾವು ನಮದೆಂಬ ಹೊಮ್ಮು ಅಲ್ಲಿ ಸುಳಿಯಲಾರದು, ಅದನ್ನು ಇನ್ನೊಬ್ಬರ ಮುಂದೆ ಪ್ರದರ್ಶಿಸಿ ಶಹಬಾಸ್ ಗಿರಿ ಪಡೆದುಕೊಳ್ಳುವ ಚಾಳಿ ಸಂಪೂರ್ಣವಾಗಿ ನಿಂತುಹೋಗಬೇಕು. ಅಂತಹ ವೈಯಕ್ತಿಕ ಸಿದ್ಧಾಂತಗಳನ್ನು ಪ್ರಶಂಸಿಸುವ ವೇದಿಕೆಗಳು ಕೂಡ ಕ್ರಮೇಣ ನಿಸ್ತೇಜವಾಗುತ್ತ ಬಂದರೆ ಪ್ರತಿಯೊಬ್ಬನು ಅವನದೇ ಧರ್ಮವೊಂದನ್ನು ಕಡೆದು ನಿಲ್ಲಿಸಿಕೊಳ್ಳಲು ಸಾಧ್ಯವಿದೆ.ಮತ್ತೊಬ್ಬರಿಗೆ ತೊಂದರೆಯಾಗದಂತೆ ಬದುಕಿ ತೋರಿಸುವುದೇ ಮಾನವನ ಜೀವನದ ಪರಮ ಧ್ಯೇಯವಾಗಬೇಕು.ಪ್ರಪಂಚದಲ್ಲಿ ಮತ್ತೊಬ್ಬರನ್ನು ತಾವು ನಂಬಿದ ಸಿದ್ಧಾಂತಕ್ಕೆ/ತತ್ವಕ್ಕೆ ಒಗ್ಗಿಕೊಂಡು ಬಾಳಬೇಕೆಂಬುವ ಹಂಬಲವನ್ನು ಬಿಟ್ಟುಬಿಡುವುದೇ ಉತ್ತಮವೆನಿಸುತ್ತದೆ.

ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಪುಸ್ತಕವೊಂದಕ್ಕೆ ಕಟ್ಟು ಬಿದ್ದ ಕೆಲವರು ಅಮಾಯಕರನ್ನು ನಿಷ್ಕಾರುಣವಾಗಿ ಕೊಂದರು, ಪಶ್ಚಿಮ ದೇಶಗಳಿಂದ ಪೂರ್ವ ದೇಶಗಳಿಗೆ ಸಿದ್ಧಾಂತಗಳ ಕಂತೆಯ ಹೊತ್ತುಕೊಂಡ ಬುದ್ಧಿವಂತರೆನಿಸಿಕೊಂಡವರ ಗುಂಪೊಂದು ಬಂದು ಇಲ್ಲಿನವರಿಗೆ ಅಲ್ಲಿಯ ಸಿದ್ಧಾಂತಗಳನ್ನು ಹೇರಲು ತುದಿಗಾಲಲ್ಲಿ ನಿಂತಿರುವುದು ಎನ್ನುವ ವಿಚಾರಗಳನ್ನು ಕೇಳಿದಾಗ ಎತ್ತ ಸಾಗುತ್ತಿದೆ ಆಧುನಿಕ ಜಗತ್ತು ಎನ್ನುವ ಅನುಮಾನ ಮೂಡುತ್ತಿದೆ. ಜನ ಹೆಚ್ಚು ಹೆಚ್ಚು ಓದಿಕೊಂಡಷ್ಟು ಬುದ್ಧಿವಂತರಾಗಿ ಒಳಿತು ಕೆಡಕುಗಳ ದೂರಾಲೋಚನೆ ಮಾಡುತ್ತಾರೆ ಎಂಬ ಹಳೆಯ ತಲೆಮಾರಿನವರ ನಿಲುವು ತಪ್ಪಾಗಿಬಿಡುವುದಕ್ಕೆ ಆಸ್ಪದವನಂತೂ ಕೊಡಲೇ ಬಾರದು. ಎಲ್ಲಕಿಂತ ಮಿಗಿಲಾಗಿ ನಾವು ನಾವೇ ಕಟ್ಟಿಕೊಂಡ ತತ್ವ ಸಿದ್ಧಾಂತಗಳನ್ನು ಮಗ್ಗುಲಿಗೆ ಸರಿಸಿ ಮನುಷ್ಯರಾಗಿ ಬದುಕುವುದು ಮೊದಲಾಗಬೇಕು.

ಅಂದಹಾಗೆ, ವೈಯಕ್ತಿಕ ಸಿದ್ಧಾಂತಗಳು ಈಗ್ಗೆ ಹೊಸವೇನಲ್ಲ. ಹಿಂದಿನಿಂದಲೂ ಅವು ಸರ್ವೇ ಸಾಮಾನ್ಯವಾಗಿ ಇದ್ದಂತಹವು. ವ್ಯತ್ಯಾಸವಿಷ್ಟೇ, ಆಗ ಮತ್ತೊಬ್ಬರ ಮೇಲೆ ಅವುಗಳನ್ನು ಹೇರಲು ಇದ್ದ ಮಾಧ್ಯಮಗಳ ಸಂಖ್ಯೆ ತೀರಾ ವಿರಳ ಇದೀಗ ವಿಪರೀತ ಹೆಚ್ಚು. ಅದೇ ಕಾರಣಕ್ಕೆ ಸಮಾಜದಲ್ಲಿನ ಕಂದಕಗಳು ಹೆಚ್ಚಾಗುತ್ತಿರುವುದು.

ಶನಿವಾರ, ಮೇ 25, 2019

ದಕ್ಷಿಣ-ಉತ್ತರಗಳ ಶೀತಲ ಸಮರ

ಪ್ರಪಂಚದಲ್ಲಿ ಮಾನವ ತನ್ನ ಹೆಜ್ಜೆಯೂರಿ ತನ್ನದೇ ಒಂದು ನಾಗರೀಕತೆ ಕಡೆದು ನಿಲ್ಲಿಸಿಕೊಳ್ಳುವಾಗ ಪ್ರಕೃತಿ ತಾನು ಸುಮ್ಮನೆ ಕುಳಿತಿರಲಿಲ್ಲ. ಸರ್ವವನ್ನು ಮಾನವನ ಕೈಗಿತ್ತು ತಾನು ಕೈಚೆಲ್ಲಿಯೂ ಇರಲಿಲ್ಲ. ಮಂಗನ ರೂಪದಲ್ಲಿದ್ದ ಸಸ್ತನಿ ಪ್ರಾಣಿಗಳ ವರ್ಗವೊಂದು ಅಪಾರ ಬುದ್ಧಿಮತ್ತತೆ ಮೆರೆದು ಉನ್ನತ ಸ್ಥರದತ್ತ ದಾಪುಗಾಲಿಡುತ್ತಿರುವಾಗಲೂ ಪ್ರಕೃತಿಯಲ್ಲಿ ವಿನಾಶಗಳು, ವಿಕೋಪಗಳು ಜರುಗುತ್ತಲೇ ಸಾಗಿದ್ದವು. ತನ್ನ ಜಾಗೃತಗೊಂಡ ಬುದ್ಧಿಯಿಂದ ನೋಡಿದ ಮಾನವನಿಗೆ ಪ್ರಕೃತಿಯನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳುವುದರ ಜೊತೆಗೆ ಪ್ರಕೃತಿ ರುದ್ರಾವತಾರ ತಾಳಿದಾಗ ತಪ್ಪಿಸಿಕೊಂಡು ಬದುಕುವುದೂ ಅಂದಿನ ಕಾಲಮಾನದ ಬಹುಮುಖ್ಯ ಅವಶ್ಯಕತೆಯೂ ಆಗಿಹೋಯಿತು. ವಿಕೋಪ, ವಿನಾಶಗಳಲ್ಲದ ಸಮಯದಲ್ಲಿಯೂ ತನ್ನ ಜೀವದ ಹಂಗಿಗಾಗಿ ಹೋರಾಡಿ ಉಳಿದುಕೊಳ್ಳುವ ವರಸೆಯೊಂದನ್ನು ಮನುಷ್ಯ ಹೊಸದಾಗಿ ಕಲಿತ ಎನ್ನುವುದಕ್ಕಿಂತ, ಪ್ರಕೃತಿಯೇ ಅದನ್ನು ಕಲಿಸಿರುವುದನ್ನು ಲಾಗಾಯ್ತಿನಿಂದಲೂ ಕಾಣುತ್ತಲೇ ಬರಬಹುದು.

ಅಂತಹವುಗಳಲ್ಲಿ ಮುಖ್ಯವಾದದ್ದು ವಲಸೆ ಹೋಗುವುದು ಮಾನವ ಕುಲ ಉಗಮವಾದಾಗಿನಿಂದ ನಡೆದಿರುವ ನಡೆಯುತ್ತಿರುವ ವಿದ್ಯಮಾನ. ನೀರಿದ್ದ ಕಡೆಗೆ ಅಥವಾ ವನ್ಯ ಜೀವಿಗಳಿಂದ ಸುರಕ್ಷಿತವಾಗಿರಬಹುದಾದ ಪ್ರದೇಶಗಳಿಗೆ ವಲಸೆಹೋಗುವುದು ಹಿಂದಿನಿಂದಲೂ ಬಂದಿರುವ ಪ್ರಕ್ರಿಯೆಯೇ. ತಂತ್ರಜ್ಞಾನ ಬೆಳೆದು ಮಾನವನ ದೇಹಕ್ಕೆ ಬಹಳಷ್ಟು ಕಷ್ಟವಿಲ್ಲದಂತಹ  ದಿನಗಳು ಈಗಾಗಲೇ ಅನುಭವಕ್ಕೆ ಬಂದಿವೆ. ನೀರು-ನಿಡಿ, ವನ್ಯಜೀವಿಗಳಿಗೆ ಬೆದರಿ ಕಾಲ್ಕೀಳುವ ಬದಲು ಅವಕ್ಕೆಲ್ಲ ಸೆಡ್ಡು ಹೊಡೆದು ಅಲ್ಲೇ ನೆಲೆ ನಿಲ್ಲುವ ಛಾತಿಯನ್ನು ಮನುಷ್ಯ ರೂಢಿಸಿಕೊಂಡಿದ್ದಾನೆ. ನೀರಿಲ್ಲದಿದ್ದರೆ ನೂರಾರು ಮೈಲುಗಳಿಂದ ಪಂಪು ಮಾಡಿ ನೀರನ್ನು ತರಬಲ್ಲ, ವನ್ಯಜೀವಿಗಳ ಭಯವಂತೂ ಕೇಳುವ ಗೋಜೇ ಬೇಡ, ಪಾಪ ಅವು ನಮ್ಮಿಂದ ಸುರಕ್ಷಿತವಾಗಿದ್ದರೆ ಸಾಕು ಅನ್ನುವ ಮಟ್ಟಕ್ಕೆ ತಲುಪಿ ಸರ್ಕಾರ ನಡೆಸುವ ಅಭಯಾರಣ್ಯಗಳಲ್ಲಿ, ಸಂರಕ್ಷಿತ ಕಾಡುಗಳಲ್ಲಿ ಗಪ್-ಚಿಪ್ ಆಗಿ ಹೋಗಿವೆ.

ಇಷ್ಟೆಲ್ಲಾ ಸಾಧಿಸಿ ಬೀಗುವ ಮನುಷ್ಯ ತಾನೇ ಹೆಣೆದುಕೊಂಡ ಬಲೆಗೆ ಬೀಳುವುದರಲ್ಲಿ ಎತ್ತಿದ ಕೈ ಅಲ್ಲವೇ. ಮನುಷ್ಯನ ಆಧುನಿಕ ಅವಶ್ಯಕತೆಗಳನ್ನು ಪೂರೈಸಲು, ಅಷ್ಟೇಕೆ ಸರ್ವೇ ಸಾಧಾರಾಣವಾಗಿ ಬದುಕು ಸಾಗಿಸಲು ಹಣವನ್ನು ಹುಟ್ಟುಹಾಕಿದ. ಅದೇ ಹಣವನ್ನು ಸಂಪಾದಿಸಲು ಆದಿಕಾಲದಂತೆ ಮತ್ತೆ ವಲಸೆಗೆ ಹಚ್ಚಿಕೊಳ್ಳುತ್ತಿರುವನೂ ಅವನೇ. ಹೊಸದನ್ನೇನೋ ಮಾಡಲುಹೋಗಿ ಮಗದೊಂದು ತೊಂದರೆಗೆ ಸಿಲುಕಿಕೊಳ್ಳುವ ಮನುಷ್ಯ ಸಾಬೀತುಪಡಿಸುತ್ತಿರುವುದೇನೆಂದರೆ ಪ್ರಕೃತಿಯ ಮುಂದೆ 'ನಾನಿನ್ನೂ ಕಲಿಯುತ್ತಿರುವ ಎಳೆಗರುವಷ್ಟೇ' ಎನ್ನುವುದರ ಹೊರತಾಗಿ ಮತ್ತೇನೂ ಅಲ್ಲ. ಇರಲಿ, ಹಣದ ಹಂಬಲಕ್ಕೆ ಬಿದ್ದ ಮನುಷ್ಯ ಮತ್ತೆ ಅದೇ ದಾರಿ ಹಿಡಿದ. ವಲಸೆ. ಆದರೆ ಜ್ಞಾಪಕವಿರಲಿ. ಈ ವಲಸೆಯ ಕಾಲಘಟ್ಟಕ್ಕೆ ಬರುವಷ್ಟರಲ್ಲಾಗಲೇ ಅವನು ತನ್ನನು ತಾನು ಸಂಸ್ಕೃತಿಯೊಂದಕ್ಕೆ, ಭಾಷೆಯೊಂದಕ್ಕೆ, ಸಂಪ್ರದಾಯವೊಂದಕ್ಕೆ ಬಿಗಿಯಾಗಿ ಕಟ್ಟಿಕೊಂಡಿದ್ದ. ಆತ ಆದಿಕಾಲದ ವಲಸೆಗಾರನಾಗಿ ಉಳಿದಿಲ್ಲ. ತನ್ನದೇ ಚೌಕಟ್ಟು ಇರುವ ಒಬ್ಬ ನಾಗರೀಕನಾಗಿ ಬೆಳೆದು ನಿಂತು ಹಣಕ್ಕಾಗಿ ಮತ್ತೆಲ್ಲಿಗೋ ವಲಸೆ ಹೊರಟಿದ್ದಾನೆ.

ವಲಸೆ ಹೋದವ, ಬರಿಗೈಯಲ್ಲಿ ವಲಸೆ ಹೋದರೂ ಬರಿ ತಲೆಯಲ್ಲಿ ಹೋಗಲಿಲ್ಲ. ತನ್ನ ಸುತ್ತಲ ಪರಿಸರ, ವಾತಾವರಣ ತನಗೆ ಧಾರೆಯೆರೆದಿದ್ದ ಎಲ್ಲವನ್ನು ಹೊತ್ತುಕೊಂಡು ಹೊರಟುಬಿಟ್ಟ.ತಾನು ಕಲಿತಿದ್ದ ಕೆಲವನ್ನು ಅಲ್ಲಿಯೂ ಪ್ರಯೋಗಿಸಲು ನೋಡಿದ. ಕೆಲವು ಕಡೆ ನಯವಾದ ಜನಾಂಗ ಹೊಸದೇನೇ ಬಂದರು ಬಿಗಿದಪ್ಪಿಕೊಂಡು ಕಲಿತುಬಿಟ್ಟರು. ಇನ್ನು ಹಲವೆಡೆ 'ಪರಕೀಯ' ಭಾವನೆಯಿಂದ ಕಂಡುಬಿಟ್ಟರು. ಮತ್ತೊಬ್ಬರದನ್ನು ಪರಮ ಶ್ರೇಷ್ಠವೆಂದು ಒಪ್ಪಿಕೊಂಡರೆ ಸ್ಥಳೀಯ ವಿಚಾರಗಳು ಮೌಲ್ಯಹೀನವಾಗಿಬಿಡುವುದಿಲ್ಲವೇ ಎಂಬ ವಾದ ಹಿಡಿದ ಕೆಲವರು ಹೋರಾಟದ ಹಾದಿ ಹಿಡಿದರು. ಜಾಗತೀಕರಣದ ಹೊಸ್ತಿಲಲ್ಲಿ ನಿಂತು ಬೀಗುತ್ತಿರುವ ಆಧುನಿಕ ವಿಶ್ವದ ಆಧುನಿಕ ತೊಳಲಾಟವಿದೇ. ಇತ್ತೀಚಿಗೆ ಇದು ತೀರಾ ಪ್ರಸ್ತುತವೆನಿಸದ್ದು ಭಾರತದಲ್ಲಿ ಉತ್ತರ - ದಕ್ಷಿಣವೆಂಬ ಕಲ್ಪನೆಗೆ ಉಗ್ರ ಅವತಾರ ಕೊಟ್ಟು ಒಬ್ಬರ ಮೇಲೊಬ್ಬರು ಕೆಸರು ಎರಚಾಡಿಕೊಂಡಾಗ.

ಅತೀವ ಜನರು ಒಂದು ಕಡೆಗೆ ವಲಸೆ ಹೋಗಿ ದೊಡ್ಡ ನಗರ ನಿರ್ಮಾಣವಾಗಿ ಅಲ್ಲಿನ ಪ್ರಾಂತೀಯ ಸಂಸ್ಕೃತಿ ದಮನವಾಗುತ್ತಿರುವುದು ಸುಳ್ಳಲ್ಲ. ಒಂದು ಬೇಕಾದರೆ ಮತ್ತೊಂದನ್ನು ಕಳೆದುಕೊಳ್ಳುವುದು ಪ್ರಕೃತಿ ನಿಯಮ. ಅಂತೆಯೇ ಅಗಾಧ ಅಭಿವೃದ್ಧಿ ಬಯಸಿ ಐ ಟಿ ಕ್ಷೇತ್ರ ಬರ ಮಾಡಿಕೊಂಡ ನಾವು ಕಾಲದ ಹೊಡೆತಕ್ಕೆ ಸಿಕ್ಕು ಪಶ್ಚಿಮ ಸಂಸ್ಕೃತಿ ಅಪ್ಪಿಕೊಂಡಿದ್ದಷ್ಟೇ ಅಲ್ಲದೆ ನಮ್ಮ ಭಾಷೆ ಸಂಸ್ಕೃತಿಗಳ ವಿನಾಶಕ್ಕೆ ಆಗಾಗ ಮರುಗುತ್ತಲೇ ಇದ್ದೇವೆ. ಐ ಟಿ ಕ್ಷೇತ್ರ ಬಹುವಾಗಿ ಬೆಳೆದಿದ್ದು ಭಾರತದ ದಕ್ಷಿಣದಲ್ಲಿ. ಅಭಿವೃದ್ಧಿ, ಆಧುನಿಕತೆ ಹೆಸರಲ್ಲಿ ಐ ಟಿ ಕ್ಷೇತ್ರ ಬೆಳೆಸಿ ಇಂದಿಗೆ ದುಬಾರಿ ಆದಾಯ ದೇಶಕ್ಕೆ ತರುವ ವ್ಯವಹಾರವನ್ನಾಗಿಸಿದ್ದೇವೆ. ಆದಾಯವಿದ್ದ ಮೇಲೆ ಜನ ವಲಸೆ ಬರುವುದು ಸರ್ವೇ ಸಾಮಾನ್ಯ, ಅವರೊಂದಿಗೆ ಸಂಸ್ಕೃತಿ ಭಾಷೆ ವಿನಿಮಯ ಅವಶ್ಯಕ. ಅದರ ಮಗ್ಗುಲಲ್ಲೇ ಸ್ಥಳೀಯ ಸಂಸ್ಕೃತಿ ದಮನವಾಗದಂತೆ ಕಾಯುವುದು ಮೂಲ ಜನಾಂಗದ ಅತಿ ಮುಖ್ಯ ಧ್ಯೇಯವಾಗುತ್ತದೆ. ಒಂದೊಂದು ಪ್ರಾಂತಗಳಲ್ಲಿ ಈ ಧ್ಯೇಯಗಳಿಗೆ ಸರ್ಕಾರವೇ ರೂಪು ರೇಷೆ ಬರೆದಿರುವುದು ಸಂತೋಷದಾಯಕವಷ್ಟೇ.

ಇಡೀ ದಕ್ಷಿಣ ಭಾರತದ ರಾಜ್ಯಗಳೆಲ್ಲ ಸೇರಿದರು 25ಕೋಟಿ ಸಂಖ್ಯೆಯ ಗಡಿ ದಾಟುವುದು ಅಸಾಧ್ಯವೆನ್ನುವ ಸ್ಥಿತಿಯಲ್ಲಿ ಹತ್ತಿರ ಹತ್ತಿರ 60ಕೋಟಿಯಷ್ಟಿರುವ ಭಾರತೀಯ ಹಿಂದಿ ಭಾಷಿಗರು ಉದ್ಯೋಗದ ಕಾರಣಕ್ಕಾಗಿ ದಕ್ಷಿಣಕ್ಕೆ ಕಾಲ್ಕಿತ್ತಿದ್ದು ತೀರಾ ಗೊತ್ತಿಲ್ಲದ ವಿಚಾರವೇನಲ್ಲ.ಸರ್ವಕಾಲೀನ ನದಿಗಳು ಭಾರತದ ಉತ್ತರದಲ್ಲಿದ್ದು ಸಮತಟ್ಟಾದ ಭೂಮಿಯನ್ನು ಹೊಂದಿರುವ ಕಾರಣವೂ ಮುಂದಾಗಿ ಉತ್ತರದಲ್ಲಿ ಅದರಲ್ಲೂ ಜನ ದಟ್ಟಣೆಯಿರುವ ರಾಜ್ಯಗಳಾದ ಬಿಹಾರ, ಉತ್ತರಪ್ರದೇಶಗಳಲ್ಲಿ ಆಧುನಿಕ ಕಾಲಘಟ್ಟದಲ್ಲಿ ಅತಿ ಹೆಚ್ಚಿನ ಉದ್ಯೋಗ ಒದಗಿಸಬಹುದಾದ ಐಟಿ ಕ್ಷೇತ್ರ ಅಷ್ಟಾಗಿ ತಲೆಯೆತ್ತಲಿಲ್ಲ. ಈಗೀಗ ನೋಯ್ಡಾ,  ದೆಹಲಿಗಳಲ್ಲಿ ತಲೆಯೆತ್ತುತ್ತಿವೆಯಾದರೂ ಬೆಂಗಳೂರು-ಹೈದೆರಾಬಾದ್ ಗಳಲ್ಲಿ ಬೆಳೆದ ಐಟಿ ಮುಂದೆ ಅದು ಅಲ್ಪವಷ್ಟೇ.ದ್ರಾವಿಡ ಭಾಷಾವರ್ಗ ಪ್ರಬಲವಾಗಿರುವ ದಕ್ಷಿಣದಲ್ಲಿ ಹಿಂದಿ ಭಾಷಿಗರ ಜನಸಂಖ್ಯೆ ಬೆಳೆಯಲು ಇದೊಂದು ಅತ್ಯಂತ ಪ್ರಮುಖ ಕಾರಣ.

ದಕ್ಷಿಣಕ್ಕೆ ಭಾಷೆಯ ತೊಂದರೆಯೇಕೆ?.

ಬ್ರಿಟೀಷರ ಕಪಿ ಮುಷ್ಟಿಯಲ್ಲಿದ್ದ ಭರತ ಖಂಡಕ್ಕೆ ಸ್ವಾತಂತ್ರ್ಯ ಬರಲು ಎರಡು ಶತಮಾನಗಳೇ ಬೇಕಾದವು. ಅದರಲ್ಲೂ ಹೇಳಿಕೊಳ್ಳುವ ಹೋರಾಟಗಳು ಆರಂಭವಾಗಿದ್ದು 1857ರ ಸಿಪಾಯಿ ದಂಗೆಯ ನಂತರವೇ. ಸ್ವಾತಂತ್ರ್ಯ ಸಿಕ್ಕಿದರೆ ಸಾಕು ಎನ್ನುವಂತಹ ಪರಿಸ್ಥಿತಿಗೆ ತಲುಪಿದ್ದ ಅಂದಿನ ತಲೆಮಾರು ಸ್ವಾತಂತ್ರ್ಯಾನಂತರ ನಡೆಯಬಹುದಾದ ಆಡಳಿತೆಯ ಬಗ್ಗೆ ಅಷ್ಟೇನೂ ತಲೆ ಕೆಡಿಸಿಕೊಂಡಿರಲಿಲ್ಲ ಎನ್ನುವುದೂ ಅಷ್ಟೇ ಸ್ಪಷ್ಟ. ಭಾರತದಲ್ಲಿ ಆಗಿದ್ದ ಅತ್ಯಲ್ಪ ವಿದ್ಯಾವಂತರಿಗೆ ಆ ಬಗ್ಗೆ ಕೆಲವು ಸೂಕ್ಷ್ಮತೆಗಳು ಅರಿವಿದ್ದರೂ ಅವಿದ್ಯಾವಂತರಿಗೆ ತಲುಪಲು ಸಾಧ್ಯವೂ ಆಗಿರಲಿಲ್ಲ. ಆ ಕಾರಣಕ್ಕಾಗಿಯೇ ಭಾರತದ ಪ್ರಜಾತಂತ್ರ ವ್ಯವಸ್ಥೆ ಪಶ್ಚಿಮದ ಎರವಲು ಹಾಗು ಇಲ್ಲಿನ ಆಗಿನ ವಿದ್ಯಾವಂತರ ದೂರಾಲೋಚನೆ.ಭಾರತದ ಸರ್ವ ಜನರ ಅಭಿಪ್ರಾಯವೂ ಅದೇ ಆಗಿತ್ತು ಎನ್ನಲು ಸಾಧ್ಯವಿಲ್ಲ. ಅದು ಹಾಗಿರಲು ಸಾಧ್ಯವಿಲ್ಲವೆಂಬ ವಾದಕ್ಕೆ ಪುಷ್ಟಿ ನೀಡುವ ದಾಖಲೆಗಳೂ ಯಾವುವು ಇಲ್ಲ. ಅದಾಗಿ ಬ್ರಿಟಿಷರ ಹಿಡಿತದಿಂದ ಸಡಿಲಗೊಂಡು ಸ್ವಾತಂತ್ರ್ಯ ಪಡೆಯುವುದು ಖಾತ್ರಿಯಾದಾಗಲೇ ದೇಶದಲ್ಲಿ ಸ್ವಾತಂತ್ರ್ಯಾನಂತರ ವ್ಯವಸ್ಥೆಯೇನು? ಎನ್ನುವಂತಹ ಪ್ರಶ್ನೆಗಳು ಎದ್ದಿದ್ದು ಮತ್ತು ಅನೇಕರು ಅದಕ್ಕೆ ಉತ್ತರ ಕಂಡು ಹಿಡಿಯಲು ಟೊಂಕ ಕಟ್ಟಿ ನಿಂತಿದ್ದು. ಆಗ್ಗೆ ಪಶ್ಚಿಮದಲ್ಲಿ ನಡೆದಿದ್ದ ಫ್ರೆಂಚ್ ಕ್ರಾಂತಿ, ರಷ್ಯಾ ಕ್ರಾಂತಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದ ಹಾಗು ಕ್ರಾಂತಿಯ ಅನಂತರ ಆ ದೇಶಗಳಲ್ಲಿ ಆಡಳಿತ ವ್ಯವಸ್ಥೆ ಸುಲಭಗೊಂಡ ವಿಧಾನಗಳನ್ನು ಅರಿತಿದ್ದ ಆಗಿನ ಭಾರತೀಯ ವಿದ್ಯಾವಂತರು ಪ್ರಜಾತಂತ್ರ ವ್ಯವಸ್ಥೆಯನ್ನೇ ಅನುಮೋದಿಸಲು ಹೆಚ್ಚು ಸಮಯವೇನು ಹಿಡಿಯಲಿಲ್ಲ.ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಡಳಿತ ವಿಕೇಂದ್ರೀಕರಣದ ಪ್ರಶ್ನೆಗಳು ಹುಟ್ಟಿಕೊಂಡಾಗ ಅದಕ್ಕೆ ಉತ್ತರವಾಗಿ ಹೊಮ್ಮಿದ್ದೇ ರಾಜ್ಯವಾರು ಪ್ರಾಂತ ವಿಂಗಡಣೆ.

ಹಿಂದಿದ್ದ ಸಂಸ್ಥಾನಗಳಂತೆ ರಾಜ್ಯ ರಚನೆಯಾಗುವುದಾದರೆ ಹಿಂದಿನ ಅರಸರು ತಮ್ಮ ಶಕ್ತ್ಯಾನುಸಾರ ಯುದ್ಧಮಾಡಿ ಸಂಪಾದಿಸಿದ ಗೆದ್ದ ಭೌಗೋಳಿಕ ಪ್ರಾಂತಕ್ಕೆ ಬೆಲೆ ಕೊಟ್ಟಂತಾಗುತ್ತಿತ್ತು ಹಾಗು ಅಲ್ಲಿನ ಬಹು ಸಂಸ್ಕೃತಿ, ವೇಷ-ಭಾಷೆಗಳಲ್ಲಿ ಯಾವುದನ್ನು ಎತ್ತಿ ಹಿಡಿಯಬೇಕೆನ್ನುವ ಗೊಂದಲಗಳು ಉಂಟಾಗುತ್ತಿದ್ದುದು ವೇದ್ಯವಾಗುತ್ತಿತ್ತು. ಈ ವಿಚಾರಗಳ ಮೇಲೆ ಗಮನ ಹರಿಸಿದ್ದ ಆಗಿನ ಪ್ರಸಿದ್ಧ ಗಾಂಧೀವಾದಿ ಶ್ರೀ.ಪೊಟ್ಟಿ ಶ್ರೀರಾಮುಲು ತೆಲುಗು ಭಾಷಿಗರಿಗಾಗಿಯೇ ರಾಜ್ಯವೊಂದನ್ನು ವಿಂಗಡಿಸಬೇಕೆಂದು ಧರಣಿ ಕೂತರು. ತೆಲುಗು ಭಾಷಿಗರು ಗರಿಷ್ಟ ಪ್ರಮಾಣದಲ್ಲಿರುವ ಪ್ರದೇಶಗಳನ್ನೆಲ್ಲಾ ಸೇರಿಸಿ ಅಂದ್ರ ಪ್ರದೇಶ ನಿರ್ಮಾಣವಾಗಬೇಕು ಎನ್ನುವುದು ಅವರ ಧ್ಯೇಯ. ಅಲ್ಲಿಗೆ ಭಾಷಾವಾರು ಪ್ರಾಂತ್ಯ ರಚನೆಗೆ ಶಿಲಾನ್ಯಾಸವಾದಂತಾಯಿತು. ತಮಿಳುನಾಡಿನ ದ್ರಾವಿಡ ಚಳುವಳಿಗಳು ಭಾಷಾ ವಿವಿಧತೆಗೆ ಒತ್ತು ಕೊಟ್ಟು ದ್ರಾವಿಡ ಭಾಷೆಗೂ ಇನ್ನಿತರ ಭಾಷೆಗಳಿಗೂ ಇರುವ ದೂರವನ್ನು ಭೂತಗನ್ನಡಿ ಹಿಡಿದು ತೋರಿಸಿದ್ದೂ ಅದಕ್ಕೆ ಸೇರಿಕೊಂಡು ತಮಿಳುನಾಡಿನಲ್ಲಿ ತಮಿಳು ಭಾಷೆಯೇ ಸಾರ್ವಭೌಮ ಭಾಷೆ ಎಂಬ ಅಲಿಖಿತ, ಅನಧೀಕೃತ ನಿಯಮವೊಂದು ತಮಿಳುನಾಡಿನಲ್ಲಿ ಚಾಲ್ತಿಗೆ ಬಂತು. ಅದಕ್ಕೆ ರಾಜಕೀಯ ಬಲವೂ ಸೇರಿ ತಮಿಳು ಭಾಷೆಯ ರಕ್ಷಕರಂತೆ ಹಲವು ಮುಖಂಡರು ತಮಿಳು ಸಂಸ್ಕೃತಿ ಹಾಗು ಭಾಷೆಯ ಆಧಾರದ ಮೇಲೆ ಪಕ್ಷಗಳನ್ನು ಕಟ್ಟಿ ಬೆಳೆಸಿದರು.

ಅಲ್ಲಿಂದಾಚೆಗೆ ತಮಿಳುನಾಡಿನ ರಾಜಕೀಯ ತಮಿಳು ಪರ ಎಂದು ತೋರಿಸಿಕೊಳ್ಳಲಾದರೂ ಮತ್ತೊಂದು ಭಾಷೆಯನ್ನು ಹೇರಿಕೆಯಂತೆ ಬಿಂಬಿಸಬೇಕಾದ ಜರೂರತ್ತು ಇತ್ತು. ಅದಕ್ಕೆ ಆಗಷ್ಟೇ ಕೇಂದ್ರ ಹಿಂದಿಯ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರಗಳು ದಿಕ್ಕು ದೆಸೆ ತೋರಿಬಿಟ್ಟಿತು. ಕೇಂದ್ರದ ವ್ಯವಹಾರಗಳಲ್ಲಿ ಹಿಂದಿ ನಮಗೆ ಒಪ್ಪದ್ದೆಂದು ಹಾಗು ಬರೀ ಇಂಗ್ಲಿಷ್ನಲ್ಲಿ ಇದ್ದರೆ ಸಾಕೆಂದು ತನ್ನ ವಾದ ಮುಂದಿಟ್ಟಿದ್ದ ತಮಿಳುನಾಡು, ಈಚೀಚಿಗೆ ಎರಡು ಸಾವಿರ ಹೊಸ ನೋಟುಗಳು ಬಂದಾಗಲೂ ಅದರಲ್ಲಿ ಮುದ್ರಿತವಾಗಿದ್ದ ದೇವನಾಗರಿ ಲಿಪಿಯ ಸಂಖ್ಯೆಗಳನ್ನು ಕಂಡು ಕೆಂಡಾಮಂಡಲವಾಗಿ ಹೈ ಕೋರ್ಟ್ ನಲ್ಲಿ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದನ್ನು ಮರೆಯುವಂತಿಲ್ಲ.

ತಮಿಳುನಾಡಿನ ಭಾಷೆಯ ಮೇಲಿನ ಬದ್ಧತೆಯನ್ನು ಗಮನಿಸಿದ ಇನ್ನಿತರ ರಾಜ್ಯಗಳು ತಾವು ಮಾತೃಭಾಷೆಯ ಸಂರಕ್ಷಣೆಯ ನಿಟ್ಟಿನಲ್ಲಿ ಕಾರ್ಯೋನ್ಮುಖವಾದವು. ಒಮ್ಮೊಮ್ಮೆ ಭಾಷೆಯ ವಿಚಾರದಲ್ಲಿ ತಮಿಳುನಾಡು ಇಡುವ ಬಲಪ್ರಯೋಗಾತ್ಮಕ ಹೆಜ್ಜೆಯನ್ನು ಇಡುವುದನ್ನೂ ಮರೆಯಲಿಲ್ಲ. ಭಾಷೆಯ ವಿಚಾರದಲ್ಲಿ ಅತೀವ ಸ್ವಾಭಿಮಾನ ತಳೆದು ರುದ್ರಾವತಾರ ತಳೆದ ಎಷ್ಟೋ ಉದಾಹರಣೆಗಳು ಅಲ್ಲಲ್ಲಿ ಸಿಗುತ್ತಲೇ ಇರುತ್ತವೆ. ಕರ್ನಾಟಕ, ತಮಿಳುನಾಡು ಹಾಗು ಮಹಾರಾಷ್ಟ್ರಗಳಲ್ಲಿ ನಡೆದ ಇಂತಹ ಘಟನೆಗಳು ಬಹುಪಾಲು ಹಿಂದಿ ಭಾಷೆಯ ವಿರುದ್ಧವೇ ನಡೆದ ಪ್ರಸಂಗಗಳಾಗಿದ್ದು ಇನ್ನೊಂದು ಮುಖ್ಯವಾದ ವಿಚಾರ.

ಇತ್ತೀಚಿಗೆ ಐಟಿ ಕ್ಷೇತ್ರ ಬೆಳೆದ ಪರಿಣಾಮ ಉತ್ತರ ಭಾರತೀಯರ ಸಂಖ್ಯೆ ಬೆಂಗಳೂರು, ಚೆನ್ನೈಗಳಲ್ಲಿ ಸಾಕಷ್ಟಾಗಿದೆ. ಆ ಮೂಲಕ ಇಲ್ಲಿ ತೆರೆ ಕಾಣುವ ಹಿಂದಿ ಸಿನೆಮಾಗಳು ಭರ್ಜರಿ ಹಣ ಮಾಡುತ್ತಿವೆ. ಹಿಂದಿ ಸಂಗೀತ ರಸಸಂಜೆ, ಕಾಮಿಡಿ ಶೋಗಳಂತಹ ಕಾರ್ಯಕ್ರಮಗಳು ಹೆಚ್ಚು ಜನರನ್ನು ಸೆಳೆದು ದುಡ್ಡು ಮಾಡಿ ದೊಡ್ಡ ದೊಡ್ಡ ಸಂಖ್ಯೆಗಳನ್ನು ವೃತ್ತ ಪತ್ರಿಕೆಗಳಲ್ಲಿ ಪ್ರಕಟ ಮಾಡಿ ದಕ್ಷಿಣದಲ್ಲಿ ಹಿಂದಿ ಪ್ರಾಬಲ್ಯ ಅಮೋಘವಾಗುತ್ತಿದೆಯೆಂದು ಸಾಬೀತು ಪಡಿಸಲು ನೋಡುತ್ತಿರುವುದು ದಕ್ಷಿಣ ಭಾರತೀಯರಲ್ಲಿ ಭಾಷೆಯ ವಿಚಾರದಲ್ಲಿ ಅನುಮಾನ ಮೂಡಿಸುತ್ತಿದೆ. ಹಿಂದಿಯವರು ದಕ್ಷಿಣದ ಭಾಷೆಗಳನ್ನೇ ಕಲಿಯದೇ ಅಲ್ಲಿ ಆರಾಮವಾಗಿ ಬದುಕಬಹುದೆಂದು ಪ್ರಚಾರ ಪಡಿಸಲು ಕೆಲವು ಹಿಂದಿ ಶಕ್ತಿಗಳು ಶತಾಯ ಗತಾಯ ಪ್ರಯತ್ನ ಮಾಡುತ್ತಿರುವುದು ದಕ್ಷಿಣದವರಿಗೆ ಇರಿಸು ಮುರಿಸು ತಂದಿರುವುದು ಸುಳ್ಳಲ್ಲ. ಯಾವುದೇ ಪ್ರದೇಶದ ಸಂಸ್ಕೃತಿ, ಭಾಷೆಗೆ ಧಕ್ಕೆಯಾಗುವಂತೆ ನಡೆದುಕೊಳ್ಳಬಾರದು ಎಂಬ ಅರಿವು ಅವರಲ್ಲೂ ಬಂದು ಇಲ್ಲಿನ ಜನರ ನಾಡಿ ಮಿಡಿತಕ್ಕೆ ತಕ್ಕಂತೆ ಬದುಕಿಬಿಟ್ಟರೆ ಅವರ ಜೀವನವೂ ನಮ್ಮ ಜೀವನವೂ ಸುಗಮವಾಗುವುದರಲ್ಲಿ ಸಂದೇಹವಿಲ್ಲ.


ಭಾಷೆಯನ್ನು ಹೇರಬಹುದೇ?.

ತಾವು ಹೇಳಿರುವುದು ನಡೆಯದಿದ್ದರೆ ಶಿರದ ಮೇಲೆ ಕತ್ತಿಯಿತ್ತು ಝಳಪಿಸುತ್ತಿದ್ದ ಅರಸರಿರುವ ಕಾಲದಲ್ಲೇ ಭಾಷೆಗಳು ನಿಂತಿವೆ, ಬೆಳೆದಿವೆ. ಇಂತಿರುವಾಗ ಸರ್ಕಾರವೊಂದು ಯಾವುದೋ ಭಾಷೆಯಲ್ಲಿ ಮಾರ್ಗಸೂಚಕ ಫಲಕಗಳನ್ನು, ಬ್ಯಾಂಕಿನ ಚಲನ್ನುಗಳನ್ನು ಮುದ್ರಿಸಿದರೆ ಅದು ಭಾಷೆಯ ಹೇರಿಕೆ ಹೇಗಾಗುತ್ತದೆ? ಭಾಷೆಯ ವಿಚಾರದಲ್ಲಿ ಆ ಭಾಷೆಯಾಡುವರ ಮನಸ್ಥಿಸ್ತಿ ಬದ್ಧವಾಗಿದ್ದರೆ ಹೇರಿಕೆಯೆನ್ನುವುದು ಮಿಥ್ಯವಷ್ಟೇ ಎನ್ನುವ ವಾದ ಕೆಲವರದಾದರೆ ದಕ್ಷಿಣದವರಿಗೆ ಅಗತ್ಯವೇ ಅಲ್ಲದ ಹಿಂದಿಯನ್ನು ಸರ್ಕಾರಿ ವ್ಯವಹಾರಗಳಲ್ಲಿ ತುರುಕಿರುವುದೇಕೆ? ಎಂದು ಪ್ರಶ್ನಿಸುವ ಮಂದಿಯೂ ಇದ್ದಾರೆ.

ಒಂದು ಭಾಷೆಯನ್ನಾಡುವ ಜನರು ತಾವು ಘನಿಷ್ಠವಾಗಿ ಅವರದೇ ಮಾತೃ ಭಾಷೆ ಬಳಸುತ್ತಾ ಇತರ ಭಾಷೆಗಳನ್ನು ಎಲ್ಲ ರಂಗಗಳಲ್ಲಿಯೂ ಮಗ್ಗುಲಾಗಿಸಿಬಿಟ್ಟರೆ ಮುಗಿಯಿತು ಯಾರಿಗೂ ಯಾವ ಭಾಷೆಯೂ ಹೇರಿಕೆಯಾಗಲಾರದು.ಒಂದು ಭಾಷೆಯನ್ನು ಪ್ರಮುಖವಾಗಿಸುವ ಯಾವುದೇ ಸರ್ಕಾರದ ಅಥವಾ ಸರ್ಕಾರೇತರ ಶಕ್ತಿ ಅಲ್ಲಿಗೆ ಕುಗ್ಗಿ ಹೋಗಿ ಕ್ರಮೇಣ ಆ ಭಾಷೆ ಆ ಪ್ರಾಂತದಲ್ಲಿ ನಿಶ್ಯೇಷವಾಗಿಬಿಡುತ್ತದೆ.  ದಕ್ಷಿಣ ಭಾರತೀಯರು ಇದೀಗ ಪ್ರಬಲವಾಗಿ ಬೆಳೆದು ನಿಲ್ಲಬೇಕಿರುವುದು ಇದೇ ಮಾರ್ಗದಲ್ಲಿ. ಗರಿಷ್ಟ ಪ್ರಮಾಣದಲ್ಲಿ ತಮ್ಮ ಮಾತೃಭಾಷೆಯನ್ನು ಬಳಸುವುದು ಹಾಗು ತನ್ಮೂಲಕ ಆ ಭಾಷೆಯ ಬೆಳವಣಿಗೆಗೆ ಒತ್ತು ಕೊಡುವುದು. ದುರಂತವೆಂದರೆ ಇಂಗ್ಲೀಷ್ ಬಳಸಲು ಯಾವುದೇ ಸಂಕೋಚವಿಲ್ಲದೆ ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ಸೇರಿಸುತ್ತಿರುವ ದಕ್ಷಿಣ ಭಾರತೀಯರು ಹಿಂದಿಯನ್ನು ಹೇರಿಕೆಯ ವಸ್ತುವಾಗಿ ನೋಡುತ್ತಿರುವುದು. ಇಂಗ್ಲೀಷ್ ಭಾಷೆ ಔದ್ಯೋಗಿಕವಾಗಿ ಹಾಗು ಪ್ರಾಪಂಚಿಕ  ಜ್ಞಾನಕ್ಕಾಗಿ ಅತ್ಯವಶ್ಯಕ ಅದಕ್ಕಾಗಿ ಅದರ ವಿಚಾರದಲ್ಲಿ ತಗಾದೆ ಇಲ್ಲವೆಂದು ಕೆಲವರು ಹೇಳುವುದು ಕಂಡಾಗ ಅವರ ಚಳುವಳಿಗೆ ಅಥವಾ ವಿಚಾರ ಧಾರೆಗೆ ಬಲವಾದ ಅಡಿಪಾಯ ಇಲ್ಲದೆ ಗಾಳಿ ಬಂದ ಕಡೆ ತೂರಿಕೊಳ್ಳುವಂತೆ ಇರುವುದು ನಗು ತರಿಸುತ್ತದೆ.

ಹೀಗೆ ದಕ್ಷಿಣಕ್ಕೂ-ಉತ್ತರಕ್ಕೂ ಅಂಟಿದ ಶೀತಲ ಸಮರ ಭಾಷೆಯ ವಿಚಾರದ್ದಾಗಿದ್ದು ಇದೀಗಲೇ ಎಲ್ಲರು ಈ ವಿಚಾರದಲ್ಲಿ ಜಾಗೃತವಾಗಿ ಹೆಜ್ಜೆಯಿಡುವುದು ಅತ್ಯುತ್ತಮ. ಇಲ್ಲವಾದಲ್ಲಿ ಮುಂದೊಂದು ದಿನ ಈ ವಿಚಾರ ಭುಗಿಲೆದ್ದು ಮತ್ತಷ್ಟು ಅನಾಹುತಗಳಿಗೆ, ಅಂತರಗಳಿಗೆ ಕಾರಣವಾಗಿಬಿಡಬಹುದು!. ಹಾಗಾಗದಿರಲಿ ಎಂದು ಆಶಿಸುತ್ತಾ , ಎಲ್ಲಾ ಭಾಷೆಗಳನ್ನು ಗೌರವಿಸಿ ಹಾಗು ಮಾತೃ ಭಾಷೆಯನ್ನು ಪ್ರೀತಿಸಿ ಬೆಳೆಸಿ ಎಂದು ಹೇಳುತ್ತಾ. ಜೈ ಭಾರತ

-o-

ಬುಧವಾರ, ಮಾರ್ಚ್ 27, 2019

ಬೀಚಿಯವರ ನಗೆ-ತತ್ವ ಚಟಾಕಿಗಳು


  • ಚಿಕ್ಕ ಮಗು ಮಾತು ಮಾತಿಗೆ ಕೇಳುವ ಈ 'ಏಕೆ' ಯಲ್ಲಿಯೇ ತತ್ವಜ್ಞಾನದ ಎಲ್ಲ ತಥ್ಯವೂ ಅಡಕವಾಗಿದೆ.
  • ಒಂದೇ ಹಗ್ಗದಿಂದ ಇಬ್ಬರೂ ನೇಣುಬಿಗಿದುಕೊಳ್ಳುವದಕ್ಕೆ ಮದುವೆ ಎಂದು ಹೆಸರು.
  • ಒಬ್ಬನಿಗೆ ಹದಿನಾಲ್ಕು ಮಕ್ಕಳಿದ್ದರೆ ಮೊತ್ತ ಮೊದಲನೆಯವನಿಗೆ ಕಟ್ಟ ಕಡೆಯವನು ದೂರದ ಸಂಬಂಧಿ.. ಹೌದೋ? ಅಲ್ಲವೋ ?
  • ಮನೆ ನಿಂತಿರುವುದು ಮಡದಿಯ ಮೇಲೆ, ಅಕಸ್ಮಾತ್ ಅದು ಬಿದ್ದರೆ ಗಂಡನ ತಲೆಯ ಮೇಲೆ!!.
  • ಮೂರ್ಖರ ಜಗತ್ತಿನಲ್ಲಿ ಜಾಣನೇ ಹುಚ್ಚ.
  • ವಾರದಲ್ಲಿ ಮೂರು ದಿನಾವಾದರೂ ನಗುತ್ತಾ ಇರಿ. ಇವತ್ತು, ನೆನ್ನೆ ಹಾಗು ನಾಳೆ.
  • ಆ ಭಗವಂತ ಮೋಸ ಮಾಡುವ ಹೆಂಗಸರನ್ನು ಸೃಷ್ಟಿಸಿಯೇ ಇಲ್ಲ. ಆದರೆ ಮೋಸ ಹೋಗುವ ಗಂಡಸರನ್ನು ಮಾತ್ರ ಸೃಷ್ಟಿಸಿದ್ದಾನೆ.
  • ಬಾಳಿನಲ್ಲಿ ಏನಿಲ್ಲ? .. ಕೊಲ್ಲಲು ವಿಷವಿದೆ, ಬದುಕಿಸಲು ಔಷಧವೂ ಇದೆ. ಔಷಧದಲೂ ವಿಷವಿದೆ. ಇದುವೇ ಜೀವನ.
  • ಗೆಳೆಯನನ್ನು ಉಪ್ಪಿನಂತೆ ಬಳಸಬೇಕೇ ವಿನಾ ಸಕ್ಕರೆಯಂತೆ ಸುರುವಿಕೊಳ್ಳಬಾರದು.
  • ಜೀವನೋಪಾಯಕ್ಕಾಗಿ ಅಲ್ಲದೆ ಆತ್ಮ ಸಂತೋಷಕ್ಕಾಗಿ ಮಾಡುವ ಕೆಲಸಗಳೇ 'ಹವ್ಯಾಸ'ಗಳು.
  • ಕೆಲಸವಿಲ್ಲದೇ ಸುಮ್ಮನೆ ಕುಳಿತವನ ಭುಜದ ಮೇಲೆ ಶನಿಯು ಬಂದು ಕೂರುತ್ತಾನೆ.
  • ಉತ್ತಮ ಸಾಹಿತಿಗೆ ಅತಿ ಮುಖ್ಯವಾಗಿ ಬೇಕಾಗಿರುವುದು ಕಸದ ಬುಟ್ಟಿ.
  • ಬದುಕಿದ್ದಾಗ ತಂದೆ ತಾಯಿಗೆ ನೀರು ಕೊಡದವನು, ಸತ್ತ ಮೇಲೆ ಧಾರಾಳವಾಗಿ ಬೆಂಕಿ  ಇಡುತ್ತಾನೆ.
  • ಎಮ್ಮೆ ತಿರುಗಾಡಿ ಮೇಯುತ್ತದೆ, MLA ಕುಳಿತಲ್ಲೇ ಮೇಯುತ್ತಾನೆ.
  • ಮಾತುಗಳನ್ನು ಎಣಿಸಿ ನೋಡಬಾರದು, ತೂಕ ಮಾಡಿ ನೋಡಬೇಕು.
  • ಡಾಕ್ಟರರ ಸುತ್ತಲೂ ರೋಗಿಗಳೇ ಇರುವಂತೆ, ಒಳ್ಳೆಯವರ ಸುತ್ತಲೂ ಕೆಟ್ಟವರೇ ಇರುತ್ತಾರೆ.
  • ಬಾಳಿನ ವ್ಯಾಕರಣ - ಹೆಣ್ಣು : ಪದ್ಯ, ಗಂಡು : ಗದ್ಯ, ಮಕ್ಕಳು : ರಗಳೆ.
  • ಸುಳ್ಳನ್ನಾಡುವ ನೂರಾರು ಗೆಳೆಯರಿರುತ್ತಾರೆ, ಸತ್ಯವನ್ನಾಡುವ ಸಾವಿರಾರು ಶತ್ರುಗಳಿರುತ್ತಾರೆ.
  • ಹಸಿವು ಚೆನ್ನಾಗಿದ್ದರೆ ಊಟ ಚೆನ್ನಾಗಿಯೇ ಇರುತ್ತದೆ.
  • ಸಾವಿನ ಬಗ್ಗೆ ಎಚ್ಚರಿಸಲು ವರ್ಷಕ್ಕೊಮ್ಮೆ ಕಾಲರಾಯನು ಗಂಟೆ ಬಾರಿಸುವ ದಿನವೇ ಜನ್ಮ ದಿನ.
  • ಬಳಸಿದಂತೆಲ್ಲ ಬೆಳೆಯುವ ಅಕ್ಷಯ ಪಾತ್ರೆ ನಗು.
  • ಹೆಂಡತಿಯ ಸೌಂದರ್ಯ ಗಂಡನಿಗೆ ಕಾಣುವುದಿಲ್ಲ, ಗಂಡನ ಒಳ್ಳೆ ಗುಣ ಹೆಂಡತಿಗೆ ಕಾಣುವುದಿಲ್ಲ.
  • ಮಾವನ ಮನೆ ಸೇರುವ ಗಂಡು, ಗಂಡನ ಮನೆಗೆ ಬಾರದ ಹೆಣ್ಣು ಇಬ್ಬರೂ ಭೂಮಿಗೆ ಭಾರ.
  • ಹಲವಾರು ಹೆಚ್ಚು ಕಷ್ಟ ಪಟ್ಟು ಉಣ್ಣುತ್ತಾರೆ, ಕೆಲವರು ಹೆಚ್ಚು  ಉಂಡು ಕಷ್ಟ ಪಡುತ್ತಾರೆ.
  • ಸತ್ಯವನು ಅರಿತವನು ಸತ್ತಂತೆ ಇರಬೇಕು.
  • ನಗು ದೇವ ಭಾಷೆ, ಅಳು ಪಿಶಾಚಿ ಭಾಷೆ.
  • ಮಗುವಿಗೆ ಅಳು, ಹೆಣ್ಣಿಗೆ ನಗು, ಅವಿವೇಕಿಗೆ ಧೈರ್ಯ, ಅಪ್ರಾಮಾಣಿಕನಿಗೆ ರಾಜಕಾರಣ ಅತ್ಯುತ್ತಮ ಆಯುಧಗಳು.
  • ಹೆಂಡವಿದು ಜಗವು, ಮಿತವಾಗಿ ಕುಡಿಯಿದನು.



-0-

ಭಾನುವಾರ, ಮಾರ್ಚ್ 3, 2019

ಹಾಡಿರಿಂದು ಇತಿ ಶ್ರೀ

ಅನ್ನವಿಕ್ಕಲು, ನೀರ ಕುಡಿಸಲು
ಜಾತಿ ಧರ್ಮ ಜಾಡು ಹಿಡಿದ
ಮನುವ ಮನಸ್ಥಿತಿಗೆ
ಹಾಡಿರಿಂದು ಇತಿ ಶ್ರೀ.

ಯೋಗ್ಯವಾಗಿ ಬದುಕಿ ಬಾಳಿ
ಸಾಂಗವಾಗಿ ಪರರ ಸಿರಿತನಕೆ
ತೆರೆದ ಬಾಯ್ಗೆ
ಹಾಡಿರಿಂದು ಇತಿ ಶ್ರೀ.

ತನ್ನದೇನು ನೋಡದಂದು
ಅನ್ಯದವರ ಗುಣ ಮರ್ಯಾದೆಗಳ
ಅಳೆದು ತೂಗೋ ರಾಗಕಿನ್ನು
ಹಾಡಿರಿಂದು ಇತಿ ಶ್ರೀ.

ಪರರ ಹೆಣ್ಣು , ಹೊನ್ನು ಕಂಡು
ಬಾಯಿ ತೆರೆದು ಶ್ವಾನದಂತೆ
ಅಲೆವ ಧೋರಣೆಗಿನ್ನು
ಹಾಡಿರಿಂದು ಇತಿಶ್ರೀ.

ದೇವರನ್ನು ನೆಚ್ಚಿಕೊಂಡು
ಡಂಭ, ಪುಂಡರ ಪೊರೆವ
ಮೂಢತನದ ಭಕ್ತಿಗಿನ್ನು
ಹಾಡಿರಿಂದು ಇತಿ ಶ್ರೀ.

ನಾನು, ನನ್ನದೆಲ್ಲವೆಂದು
ಮೆಚ್ಚಿನಿಂದ ಗಚ್ಚಿ ಹಿಡಿದು
ಬಿಡದ ಮನೆವಾರ್ತೆಗಿನ್ನು
ಹಾಡಿರಿಂದು ಇತಿ ಶ್ರೀ.

ಅನ್ಯರೊಳಗೆ ಕೂಡಿಕೊಂಡು
ತನ್ನದೆಲ್ಲ ಹಿಂದು  ಮಾಡಿ
ತನ್ನವರನು ಮುಂದು ಮಾಡೋ
ಗುಣದ ಪಥಕೆ
ಒಗ್ಗುವಂತ ಕೀರ್ತಿ ಬೆಳೆಸಿ
ಯೋಗಿಯಂತೆ ಬಾಳ್ಮೆ ನಡೆಸಿ
ತೂಕದಿಂದ ಕೂಡಿಕೊಂಡ ಬಾಳ್ಮೆಯದಕೆ
ಹಾಡಿರೊಮ್ಮೆ ಇತಿ ಶ್ರೀ.

ಭಾನುವಾರ, ಫೆಬ್ರವರಿ 10, 2019

ಮಾತಾ ವೈಷ್ಣೋದೇವಿ ಯಾತ್ರೆ

ಭಾರತ ದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ವೈಷ್ಣೋದೇವಿ. ಭಾರತದ ಮೊದಲ ಹತ್ತು ಶ್ರೀಮಂತ ದೇಗುಲಗಳಲ್ಲಿ ಒಂದಾದ ವೈಷ್ಣೋದೇವಿಗೆ ವಿಶೇಷವಾಗಿ ದೇವಾಲಯವೇ ಇಲ್ಲ ಹಾಗು ಅದಕ್ಕೆಂತಲೇ ವಿಗ್ರಹವೂ ಇಲ್ಲ. ವೈಷ್ಣೋದೇವಿ ಇರುವುದು ಗುಹಾಲಯದಲ್ಲಿ ಹಾಗು ಪೂಜೆ ಸಲ್ಲಿಸಲಾಗುವುದು  ಒಂದು ಕಲ್ಲಿನಲ್ಲಿ ಉಂಟಾದ 3 ಉಬ್ಬುಗಳಿಗೆ. ರಾಕ್ಷಸರ ಸಂಹಾರಾನಂತರ ಮಹಾದೇವಿ ದುರ್ಗೆಯು ಈ ಕಲ್ಲುಗಳ ಮೂಲಕ ಅಂತರ್ಧಾನಳಾದಳು ಎಂಬುದು ಇಲ್ಲಿನ ಪ್ರತೀತಿ.. ಈ ಮೂರು ಉಬ್ಬುಗಳನ್ನು ಮಹಾ ಕಾಳಿ, ಮಹಾ ಲಕ್ಷ್ಮಿ, ಸರಸ್ವತಿ ಎಂದು ಭಕ್ತರು ಅಪಾರ ನಂಬಿಕೆ ಇರಿಸಿಕೊಂಡಿದ್ದಾರೆ. ಭೂಲೋಕದಲ್ಲಿ ತೀವ್ರಗೊಂಡಿದ್ದ ಅಸುರರ ಉಪಟಳಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ದೇವಾನು ದೇವತೆಗಳೆಲ್ಲ ಕೂಡಿ ತಮ್ಮ ಶಕ್ತಿಯನ್ನು ದುರ್ಗೆಗೆ ಧಾರೆಯೆರೆದು ಭುವಿಗೆ ಕಳುಹಿಸಿದರು, ಹೀಗೆ ಭುವಿಗೆ ಬಂದ ದುರ್ಗೆಯು ಕಾಶ್ಮೀರ ಪ್ರಾಂತದ ತ್ರಿಕೂಟ ಪರ್ವತದ ಗುಹೆಯಲ್ಲಿ ಅಡಗಿದ್ದ ರಾಕ್ಷಸರನ್ನು ನವರಾತ್ರಿಯ ಸಮಯದಲ್ಲಿ  ಸಂಹರಿಸಿದಳು ಎಂಬಂತಹ ಬಲವಾದ ನಂಬಿಕೆ ಇಲ್ಲಿನ ಭಕ್ತರದ್ದು.

ಈ ಕ್ಷೇತ್ರಕ್ಕೆ ದರ್ಶನ ನೀಡುವ ಭಕ್ತರಲ್ಲಿ ಉತ್ತರಪ್ರದೇಶ, ಬಿಹಾರ, ರಾಜಸ್ತಾನ, ಪಂಜಾಬ್, ಹರ್ಯಾಣ, ದೆಹಲಿ, ಮಧ್ಯಪ್ರದೇಶದ ಭಕ್ತರು ಹೆಚ್ಚಾಗಿದ್ದಾರೆ. ದಕ್ಷಿಣ ಭಾರತೀಯರು ತೀರಾ ಕಡಿಮೆ ಪ್ರಮಾಣದಲ್ಲಿರುವುದರಿಂದ ಇಲ್ಲಿಗೆ ಭೇಟಿಕೊಡುವ ದಕ್ಷಿಣ ಭಾರತೀಯರಿಗೆ ಅಲ್ಪ ಸ್ವಲ್ಪ ಹಿಂದಿ ಗೊತ್ತಿದ್ದರೆ ಉತ್ತಮ, ಇಲ್ಲದಿದ್ದರೂ ತೊಂದರೆಯಿಲ್ಲ. ಅಲ್ಪ ಸ್ವಲ್ಪ ಇಂಗ್ಲಿಷ್ ಭಾಷೆಯಲ್ಲಿಯೂ ವ್ಯವಹರಿಸಬಹುದು.

ಯಾತ್ರಿಕರಿಗೆ ಮೊದಲ್ನುಡಿ

ವೈಷ್ಣೋದೇವಿ ಆಲಯವು ಜಮ್ಮು ಕಾಶ್ಮೀರ ರಾಜ್ಯದಲ್ಲಿದ್ದು ಜಮ್ಮುವಿನಿಂದ 45 ಕಿಲೋ ಮೀಟರ್ ದೂರವಿದೆ. ಕಟರಾ ನಗರ ಒಂದರ್ಥದಲ್ಲಿ ವೈಷ್ಣೋದೇವಿ ಪರ್ವತಾರೋಹಣದ ಆರಂಭ ಬಿಂದು. ಇಲ್ಲಿಂದಲೇ ಪರ್ವತ ಏರುವರು ಆರೋಹಣಕ್ಕೆ ಸಜ್ಜಾಗಬೇಕು. ಜಮ್ಮುವಿನಿಂದ ಕಟರಾಗೆ ತಲುಪಲು ಬಸ್ ಗಳ ಸೇವೆ ಲಭ್ಯವಿದ್ದು ಗರಿಷ್ಠ ಸಂಖ್ಯೆಯ ವೈಷ್ಣೋದೇವಿ ಭಕ್ತರು ಜಮ್ಮು ಮಾರ್ಗವಾಗಿಯೇ ಕಟರಾ ತಲುಪುತ್ತಾರೆ. ಭಾರತದ ವಿವಿಧ ನಗರಗಳಿಂದ ಜಮ್ಮುವಿಗೆ ಬಸ್, ರೈಲು  ಹಾಗು ವಿಮಾನ ಸೇವೆ ಇರುವುದರಿಂದ ಈ ಮಾರ್ಗವನ್ನು ಬಹುತೇಕರು ಅನುಸರಿಸುತ್ತಾರೆ. ಅದರ ಹೊರತಾಗಿ ರೈಲಿನಲ್ಲಿ ಆಗಮಿಸುವರಿಗಾಗಿ ಕಟರಾ ನಗರದವರೆಗೂ ರೈಲು ಸೇವೆಯಿದ್ದು ಕಟರಾ ರೈಲು ನಿಲ್ದಾಣದ ಹೆಸರೂ ವೈಷ್ಣೋದೇವಿ ಎಂದೇ ಇದೆ. ವೈಷ್ಣೋದೇವಿ ರೈಲು ನಿಲ್ದಾಣದಿಂದ ಕಟರಾ 1 ಕಿಲೋಮೀಟರ್ ದೂರವಿದೆ.

ಕಟರಾ ದಲ್ಲಿ ವೈಷ್ಣೋದೇವಿ ಆಡಳಿತ ಮಂಡಳಿಯ ರೂಮುಗಳೇ ಲಭ್ಯವಿದ್ದು ಆನ್ಲೈನ್ ನಲ್ಲಿಯೂ ಬುಕ್ ಮಾಡಲು ಅವಕಾಶವಿದೆ. ಅಮಾವಾಸ್ಯೆ, ನವರಾತ್ರಿ, ವಾರಾಂತ್ಯಗಳಂತಹ ತೀವ್ರ ಜನಜಂಗುಳಿಯಿರುವ ಸಮಯಗಳಲ್ಲಿ ಆಡಳಿತ ಮಂಡಳಿಯ ರೂಮುಗಳು ಸಿಗುವುದು ಕಷ್ಟ ಸಾಧ್ಯವಾಗಬಹುದು. ಅದಕ್ಕಾಗಿ ಕಟರಾದಲ್ಲಿ ಹಲವಾರು ಖಾಸಗಿ ಲಾಡ್ಜ್ ಗಳು ಲಭ್ಯವಿವೆ. ಹೆಚ್ಚಿನ ಲಗೇಜ್ ಒಯ್ಯುವವರು ತಮ್ಮ ಲಗೇಜ್ ಅನ್ನು ಕಟರಾದಲ್ಲಿಯೇ ಇರಿಸಿ ಅತಿ  ಮುಖ್ಯವೆನಿಸುವುಗಳನ್ನು ಮಾತ್ರ ಪರ್ವತಾರೋಹಣ ಸಮಯದಲ್ಲಿ ತಮ್ಮೊಂದಿಗೆ ಇರಿಸಿಕೊಳ್ಳುವುದು ಉತ್ತಮ. ಮೊಬೈಲ್ ಫೋನುಗಳನ್ನು ಒಯ್ಯಲು ಯಾವುದೇ ಆತಂಕವಿಲ್ಲ. ಪವರ್ ಬ್ಯಾಂಕ್ ಒಯ್ಯುವುದು ಉತ್ತಮವಲ್ಲ. ಎಲ್ಲ ಕಡೆಯೂ ಮೊಬೈಲ್ ಬಳಸಲು ಅವಕಾಶವಿದ್ದು ವೈಷ್ಣೋದೇವಿ ಆಲಯದಲ್ಲಿ ಮಾತ್ರ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡುವಂತೆ ಸೂಚಿಸಲಾಗುತ್ತದೆ. ಜಮ್ಮು ಕಾಶ್ಮೀರ ರಾಜ್ಯದ್ದಲ್ಲದ ಬೇರೆ ಯಾವ ನೆಟ್ವರ್ಕ್ ಗಳು ಕಟರಾದಲ್ಲಿ ಸಿಗುವುದಿಲ್ಲ. ಹಾಗಾಗಿಯೇ ತುರ್ತಾಗಿರುವರು ಲ್ಯಾಂಡ್ಲೈನ್ ಸೇವೆಗಳನ್ನು ಬಳಸುತ್ತಾರೆ, ಇಲ್ಲವಾದರೆ ಜಮ್ಮು ಕಾಶ್ಮೀರದ್ದೇ ಸಿಮ್ ಕಾರ್ಡ್ ಖರೀದಿಸಿ ಬಳಸುತ್ತಾರೆ.

ಕಟರಾದಲ್ಲಿ ಇಳಿದುಕೊಳ್ಳುವ ಯಾತ್ರಿಕರು ಅಲ್ಲಿಯೇ ಹಿಡಿದ ರೂಮ್ ನಲ್ಲಿಯೇ ಸ್ನಾನ ಶೌಚ ಕ್ರಿಯೆಗಳನ್ನು ಮುಗಿಸಿಕೊಳ್ಳುವುದು ಉತ್ತಮ, ಯಾತ್ರೆಯ ಸಮಯದಲ್ಲಿ ಬಾಣಗಂಗಾ ಹಾಗು ವೈಷ್ಣೋದೇವಿ ಭವನದ ಬಳಿ ಸ್ನಾನಘಟ್ಟಗಳಿದ್ದರೂ ಅಲ್ಲಿ ಅತೀವ ಜನಸಂದಣಿಯಿರುತ್ತದೆ.

ವೈಷ್ಣೋದೇವಿ ದೇವಾಲಯಕ್ಕೆ ಭೇಟಿ ಕೊಡುವ ಎಲ್ಲರೂ ಕಟರಾ ದಲ್ಲಿರುವ ಪರ್ಚಿ ಕೌಂಟರ್ ನಿಂದ ಚೀಟಿ ಪಡೆದುಕೊಂಡೇ ತೆರಳಬೇಕು. ಕಟರಾದಲ್ಲಿ ಎರಡು ಪ್ರಮುಖ ಬಸ್ ನಿಲ್ದಾಣಗಳಿದ್ದು ಆ ಎರಡೂ ನಿಲ್ದಾಣಗಳಿಗೆ ಹೊಂದಿಕೊಂಡಂತೆ ಪರ್ಚಿ ಕೌಂಟರ್ ಅನ್ನು ತೆರೆಯಲಾಗಿದೆ. ಕಟರಾ ಮುಖ್ಯ ವೃತ್ತದ ಬಳಿ ಒಂದು ಪರ್ಚಿ ಕೌಂಟರ್ ಇದ್ದರೆ, ಅಲ್ಲಿಂದ ಅರ್ಧ ಕಿಲೋಮೀಟರು ದೂರವಿರುವ ಖಾಸಗಿ ಬಸ್ ನಿಲ್ದಾಣದ ಬಳಿ ಪರ್ಚಿ ಕೌಂಟರ್ - 2 ಇದೆ.ಈ ಕೌಂಟರ್ ಗಳಲ್ಲಿ  ಪಡೆಯುವ ಚೀಟಿಗಳಿಗೆ ಯಾವುದೇ ಹಣವಿಲ್ಲದೆ ಉಚಿತವಾಗಿ ಪಡೆಯಬಹುದು.

ಪರ್ಚಿ ಕೌಂಟರ್ ನಲ್ಲಿ ಪ್ರತೀ ಯಾತ್ರಿಕರಿಗೂ ವಿತರಿಸುವ ಚೀಟಿ
ಕಟರಾದ ಖಾಸಗಿ ಬಸ್ ನಿಲ್ದಾಣದಲ್ಲಿರುವ ಪರ್ಚಿ  ಕೌಂಟರ್ - 2

ಚೀಟಿ ಪಡೆಯದ ಯಾತ್ರಿಕರನ್ನು ಬಾಣಗಂಗಾ ಚೆಕ್ ಪೋಸ್ಟ್ ನ ಪೊಲೀಸ್ ಚೌಕಿಯಲ್ಲಿಯೇ ತಡೆ ಹಿಡಿಯಲಾಗುತ್ತದೆ. ಬಾಣಗಂಗಾ ಚೆಕ್ ಪೋಸ್ಟ್ ದಾಟುವ ಸಮಯದಲ್ಲಿ ಯಾತ್ರಿಕರು ಯಾವುದೇ ರೀತಿಯ ಗುಟ್ಕಾ, ಪಾನ್ ಮಸಾಲಾ, ಬೀಡಿ, ಸಿಗರೇಟುಗಳನ್ನು ಒಯ್ಯುವಂತಿಲ್ಲ. ಹಾಗೇನಾದರು ಒಯ್ದರೆ ಬಾಣಗಂಗಾ ಚೆಕ್ ಪೋಸ್ಟ್ ನ ಪೊಲೀಸ್ ಚೌಕಿಯಲ್ಲಿಯೇ ಅವುಗಳೆಲ್ಲವನ್ನೂ ಪೊಲೀಸರು ವಶಕ್ಕೆ ಪಡೆಯುತ್ತಾರೆ.

ಕೌಂಟರ್ ನಲ್ಲಿ ಚೀಟಿ ಪಡೆದವರು ಹೆಲಿಕ್ಯಾಪ್ಟರ್ ಮಾರ್ಗವಾಗಿ ತೆರಳಬಯಸುವರು(ಹೆಲಿಕ್ಯಾಪ್ಟರ್ ಗಾಗಿ  ತಿಂಗಳ ಮೊದಲೇ ಆನ್ಲೈನ್ ನಲ್ಲಿ ಬುಕ್ ಮಾಡಿರಬೇಕು) ಹೆಲಿಪ್ಯಾಡ್ ನತ್ತ ಟ್ಯಾಕ್ಸಿ ಹಿಡಿದು ಸಾಗಬಹುದು. ಕಟರಾ ಮುಖ್ಯ ವೃತ್ತದಲ್ಲಿಯೇ ಟ್ಯಾಕ್ಸಿ ಸೌಲಭ್ಯವಿದ್ದು ಅಲ್ಲಿಂದ ಯಾತ್ರಿಕರು ಹೆಲಿಪ್ಯಾಡ್ ಗೆ ಧಾವಿಸಬಹುದು. ಅದು ಅತ್ಯಂತ ಸುಲಭವಾದ ಮಾರ್ಗವಾಗಿದ್ದು ಕಟರಾ ಹೆಲಿಪ್ಯಾಡ್ ನಿಂದ ಹೊರಟ ಹೆಲಿಕ್ಯಾಪ್ಟರ್ ನೇರವಾಗಿ ಸಂಜಿಛಾತ್ ಹೆಲಿಪ್ಯಾಡ್ ತಲುಪುತ್ತದೆ. ಅಲ್ಲಿಂದ ವೈಷ್ಣೋದೇವಿ ಆಲಯ(ಸ್ಥಳೀಯರು ಇದನ್ನು ಭವನ ಎಂದು ಕರೆಯುತ್ತಾರೆ ಹಾಗು ಅಲ್ಲಿರುವ ಎಲ್ಲಾ ಮಾರ್ಗಸೂಚಿಗಳಲ್ಲಿಯೂ ದೇವಾಲಯವನ್ನು 'ಭವನ' ಎಂದೇ ನಮೂದಿಸಲಾಗಿದೆ.) ಕೇವಲ 3 ಕಿಲೋಮೀಟರು ಮಾರ್ಗವಾಗಿದ್ದು ಸಂಜಿಛಾತ್ ನಿಂದ ಭವನದ ವರೆವಿಗೂ ಎಲೆಕ್ಟ್ರಿಕ್ ವಾಹನಗಳು, ಕುದುರೆಗಳು,  ಪಲ್ಲಕ್ಕಿಗಳು ಲಭ್ಯವಿವೆ.
ಕಟರಾ ಮುಖ್ಯ ವೃತ್ತ. 
ಇಲ್ಲಿಂದಲೇ ಬಾಣಗಂಗಾ ಚೆಕ್ ಪೋಸ್ಟ್ ಗೆ ನೇರ ದಾರಿಯಿದೆ.

ಬಾಣಗಂಗಾ ಚೆಕ್ ಪೋಸ್ಟ್ ಸ್ವಾಗತ ಕಮಾನು
ಇನ್ನು ಪರ್ಚಿ ಕೌಂಟರ್ ನಲ್ಲಿ ಚೀಟಿ ಪಡೆದ ಹೆಲಿಕ್ಯಾಪ್ಟರ್ ಸೇವೆ ಬಳಸದಿರುವ ಯಾತ್ರಿಕರು ಬಾಣಗಂಗಾ ಮಾರ್ಗವಾಗಿ ಪರ್ವತಾರೋಹಣಕ್ಕೆ ಸಜ್ಜಾಗಬೇಕು. ಬಾಣಗಂಗಾ ಚೆಕ್ ಪೋಸ್ಟ್ ಕಟರಾ ಮುಖ್ಯ ವೃತ್ತದಿಂದ 1.5 ಕಿಲೋ ಮೀಟರ್ ದೂರದ ಮಾರ್ಗವಾಗಿದ್ದು ಅಲ್ಲಿಗೆ ಆಟೋಗಳ ಸೌಲಭ್ಯವು ಇದೆ.ಬಾಣಗಂಗಾ ಚೆಕ್ ಪೋಸ್ಟ್ ನಲ್ಲಿ ಭದ್ರತಾ ತಪಾಸಣೆ ಇರುತ್ತದೆ. ಇಲ್ಲಿ ಯಾತ್ರೆ ಮಾಡುವ ಎಲ್ಲರೂ 'जय माता दी' ಎಂದು ಬರೆದಿರುವ ಕೆಂಪು ವಸ್ತ್ರವನ್ನು ತಲೆಗೆ ಕಟ್ಟಿಕೊಂಡು ಸಾಗುತ್ತಾರೆ. ಇದು ದೇವಸ್ಥಾನದ ಅಧೀಕೃತ ನಿಯಮವಲ್ಲ, ಬದಲಾಗಿ ಭಕ್ತರ ಭಕ್ತಿಯ ವಿಧ ಅಷ್ಟೇ.

ಪರ್ವತಾರೋಹಣ ಸಮಯದಲ್ಲಿ ತಲೆಗೆ ಜೈ ಮಾತಾ ದಿ ಘೋಷಣೆಯ ಪಟ್ಟಿ


ಬಾಣಗಂಗಾ ಚೆಕ್ ಪೋಸ್ಟ್ ನಿಂದ ಕುದುರೆ, ಪಲ್ಲಕ್ಕಿ  ಗಳು ಲಭ್ಯವಿದ್ದು ವಿವಿಧ ರೀತಿಯ ದರ ಪಟ್ಟಿಗಳನ್ನು ಹೊಂದಿವೆ. ಕುದುರೆ, ಪಲ್ಲಕ್ಕಿಯಲ್ಲಿ ತೆರಳುವರು ಅಧಕುವಾರಿ ವರೆಗೂ ಅಷ್ಟೇ ತಲುಪಲು ಸಾಧ್ಯ.ಅಧಕುವಾರಿ ಬಾಣಗಂಗಾದಿಂದ ಭವನದ ವರೆಗಿನ ಹಾದಿಯ ಸರಿಯಾಗಿ ಅರ್ಧ ಭಾಗದಷ್ಟು. ಅಲ್ಲಿಂದ ಮುಂದೆ ಎಲೆಕ್ಟ್ರಿಕ್ ವಾಹನಗಳ ಸೌಲಭ್ಯವಿದ್ದು ಅದಕ್ಕೆಂತಲೇ ಅಧಕುವಾರಿಯಲ್ಲಿ  ಕೌಂಟರ್ ಒಂದನ್ನು ತೆರೆಯಲಾಗಿದೆ. ಆಸಕ್ತರು ಅಲ್ಲಿಂದ ಎಲೆಕ್ಟ್ರಿಕ್ ವಾಹನದಲ್ಲಿ ತೆರಳಬಹುದು. ವೈಷ್ಣೋದೇವಿ ತ್ರಿಕೂಟ ಪರ್ವತಾರೋಹಣ ಸಮಯದಲ್ಲಿ ದಕ್ಷಿಣ ಭಾರತೀಯ ಖಾದ್ಯಗಳು ಸಿಗುವುದು ವಿರಳ. ಅಲ್ಲಲ್ಲಿ ಇಡ್ಲಿ ಅಥವಾ ದೋಸೆ ಹೋಟೆಲ್ ಗಳು ಎದುರಾಗುತ್ತವೆ. ಇಲ್ಲವೇ ಅನ್ನ- ರಾಜ್ಮಾ ಕೂಟು ದೊರೆಯುತ್ತದೆ. ಮಾರ್ಗದುದ್ದಕ್ಕೂ ಸೌತೆಕಾಯಿ, ನಿಂಬೆಹಣ್ಣಿನ ಷರಬತ್ತು, ಪಾನಕಗಳ ಅಂಗಡಿಗಳು ಹೇರಳವಾಗಿವೆ. ಸುಸ್ತು ಅಥವಾ ಇನ್ನಿತರ ಆರೋಗ್ಯ ಸಂಬಂಧಿ ತೊಂದರೆಗಳಿದ್ದವರು ಕಟರಾ ದಿಂದಲೇ ಬೇಕಾದ ಔಷಧಗಳನ್ನು  ಖರೀದಿಸುವುದು ಉತ್ತಮ. ಬಾಣಗಂಗಾ ಚೆಕ್ ಪೋಸ್ಟ್ ನಿಂದ ವೈಷ್ಣೋದೇವಿ ಆಲಯದ ವರೆವಿಗೂ ಬಾಣಗಂಗಾ, ಅಧಕುವಾರಿ, ಸಂಜಿ ಛಾತ್, ಭವನ ಈ ನಾಲ್ಕು ಕಡೆ ವೈದ್ಯಕೀಯ ಸೇವೆಗಳು ಲಭ್ಯವಿದ್ದು ಅಲ್ಲಿ ನಮಗೆ ಬೇಕಾದ ಔಷಧಗಳು ದೊರೆಯುವುದು ಖಾತ್ರಿಯಿಲ್ಲದ ಕಾರಣ ಔಷಧಗಳನ್ನು ಕಟರಾದಿಂದಲೇ ಒಯ್ಯುವುದು ಉತ್ತಮ.

ಬಾಣಗಂಗಾದಿಂದ ಪರ್ವತಾರೋಹಣ ಆರಂಭವಾಗುತ್ತಿದ್ದಂತೆಯೇ ಕಡಿದಾದ ಮಾರ್ಗಗಳ ಮೂಲಕ ಹಾಯ್ದು ಅಧಕುವಾರಿ ತಲುಪಬೇಕು. ದಾರಿಯಲ್ಲಿ ಸಾಗುವಾಗ ಮಧ್ಯೆ ಮಧ್ಯೆ ಮೆಟ್ಟಿಲುಗಳ ಸೌಲಭ್ಯವೂ ಇದ್ದು ಶಕ್ತರು ಮೆಟ್ಟಿಲ  ಮೂಲಕವೂ ಏರಬಹುದು. ಇಲ್ಲದಿದ್ದರೆ ಕಡಿದಾದ ದಾರಿಯ ಮೂಲಕ ನಡೆದೇ ಸಾಗಬಹುದು. ಅಕ್ಕ ಪಕ್ಕದಲ್ಲಿ ಕುದುರೆ, ಪಲ್ಲಕ್ಕಿಗಳೂ ಸಾಗುತ್ತಿರುತ್ತವೆ.ಪರ್ವತ ಏರುವ ಮಾರ್ಗಮಧ್ಯೆ ಸುಸಜ್ಜಿತ ಶೌಚಾಲಯಗಳು, ಕುಡಿಯುವ ನೀರಿನ ವ್ಯವಸ್ಥೆಗಳಿವೆ. ಬಿಸಿಲರಿ ನೀರಿನ ಬಾಟಲಿಗಳನ್ನೂ ಮಾರುವ ಅಂಗಡಿಗಳೂ ಸಾಕಷ್ಟಿವೆ. ನಡೆದೇ ಸಾಗುವ ಯಾತ್ರಿಕರಿಗೆ ಕುಳಿತು ಸುಧಾರಿಸಿಕೊಳ್ಳಲು ಸಾಕಷ್ಟು ನೆರಳಿನ ಕುಟೀರಗಳನ್ನು ವ್ಯವಸ್ಥೆ ಮಾಡಲಾಗಿದೆ.  ವೈಷ್ಣೋದೇವಿ ಪರ್ವತದಲ್ಲಿ ಹಲವಾರು ಕಡೆಗಳಲ್ಲಿ ಭೂಮಿ, ಕಲ್ಲು ಬಂಡೆಗಳು ಕುಸಿಯುವ ಪ್ರದೇಶಗಳನ್ನು ಗುರುತು ಮಾಡಲಾಗಿದೆ. ಹಾಗು ಅದನ್ನು ಸೂಚಿಸುವ ಬೋರ್ಡುಗಳನ್ನೂ ಅಲ್ಲಿ ಹಾಕಲಾಗಿದೆ. ಯಾತ್ರಿಕರು ಇಂತಹ ಸ್ಥಳಗಳಲ್ಲಿ ಕುಳಿತುಕೊಳ್ಳುವುದು ಅಥವಾ ನಿಂತುಕೊಳ್ಳುವುದು ಅಪಾಯಕಾರಿಯಾಗಿರುತ್ತದೆ. ಅಂತಹ ಸ್ಥಳದಲ್ಲಿ ವೇಗವಾಗಿ ಸಾಗಬೇಕೆಂದು ಘೋಷಣೆಗಳನ್ನು ಹೊರಡಿಸಲಾಗುತ್ತಿರುತ್ತದೆ.

ಬಾಣಗಂಗಾದಿಂದ ಹಿಡಿದು ಭವನದವರೆವಿಗೂ ಸಾಗುವ ಮಾರ್ಗದಲ್ಲಿ ನೆರಳಿನ ಹೊದಿಕೆಯನ್ನು ಕಲ್ಪಿಸಲಾಗಿದೆ. ಮಳೆ ಅಥವಾ ಬಿಸಿಲಿನ ಸಂಧರ್ಭಗಳಲ್ಲಿ ಯಾವುದೇ ತೊಂದರೆಯಿಲ್ಲ. ಗುಂಪಿನಲ್ಲಿ ಹೊರಡುತ್ತಿರುವ ಯಾತ್ರಿಕರು ಕೊನೆಯವರವಿಗೂ ಗುಂಪಿನಲ್ಲಿಯೇ ಇರುವುದು ಉತ್ತಮ. ಪರ್ವತದ ಮೇಲೆ ನೆಟ್ವರ್ಕ್ ಸಮಸ್ಯೆಯಿರುವ ಕಾರಣ ಅಕಸ್ಮಾತ್ ಗುಂಪಿನಿಂದ ಯಾರಾದರೂ ಬೇರುಳಿದರೆ ಅವರನ್ನು ಸಂಪರ್ಕಿಸಲು ಸಾಧ್ಯವಾಗುವುದಿಲ್ಲ. ಅಂತಹ ಸಂಧರ್ಭಗಳಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅನೌನ್ಸ್ಮೆಂಟ್ ಕೌಂಟರ್ ಗೆ ಹೋಗಿ ಅಲ್ಲಿ ಮಾಹಿತಿ ನೀಡಬೇಕು. ದೇವಸ್ಥಾನದ ಮಂಡಳಿ ತಪ್ಪಿಸಿಕೊಂಡ ಸದಸ್ಯರ ಮಾಹಿತಿಯನ್ನು ಮೈಕ್ ನಲ್ಲಿ ಘೋಷಣೆಯನ್ನಾಗಿ ಹೊರಡಿಸುತ್ತದೆ. ಇಂತಹ ಅನೌನ್ಸ್ಮೆಂಟ್ ಕೌಂಟರ್ ಗಳು ಬಾಣಗಂಗಾ, ಅಧಕುವಾರಿ ಹಾಗು ಭವನ ಗಳಲ್ಲಿವೆ.

ಬಾಣಗಂಗಾದಿಂದ ಆರಂಭವಾಗುವ ಪರ್ವತದ ಆರೋಹಣ ಚರಣಪಾದುಕಾದ ಮಾರ್ಗವಾಗಿ ಅಧಕುವಾರಿಯ ಕಡೆಗೆ ಸಾಗುತ್ತದೆ. ಕುದುರೆ, ಪಲ್ಲಕ್ಕಿಗಳಲ್ಲಿ ಬರುವ ಯಾತ್ರಿಕರಿಗೆ ಅಧಕುವಾರಿಯೇ ಇಳಿಯುವ ಸ್ಥಳ. ಅಲ್ಲಿಂದ ಮುಂದೆ ಎಲೆಕ್ಟ್ರಿಕ್ ವಾಹನಗಳ ಸೌಲಭ್ಯ ಕಲ್ಪಿಸಲಾಗಿದೆ. ಹರಕೆ ಹೊತ್ತಂತಹವರು ಹಾಗೂ ಆಸಕ್ತರು ಸಂಪೂರ್ಣ ಪರ್ವತಾರೋಹಣವನ್ನು ಪಾದಯಾತ್ರೆ ಮೂಲಕವೇ ಪೂರೈಸುತ್ತಾರೆ. ಅಧಕುವಾರಿಗೆ ತಲುಪಿದ ನಂತರ ಅಲ್ಲಿನ ನಯನ ಮನೋಹರ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಎರಡೂ ಕಡೆಗಳಲ್ಲಿ ವ್ಯಾಪಿಸಿರುವ ಪರ್ವತ ಶ್ರೇಣಿಗಳು, ಕತ್ತೆತ್ತಿ ನೋಡಿದರೆ ಕಾಣುವ ವೈಷ್ಣೋದೇವಿಯೆಡೆಗಿನ ದಾರಿ, ಮುಂದೆ ಕಣ್ಣು ಹಾಯಿಸಿದರೆ ಕಾಣುವ ಕಟರಾ ನಗರ, ದೂರದಲ್ಲಿ ಗೋಚರವಾಗುವ ಸಿಂಧೂ ನದಿಯ ಉಪನದಿಗಳು ಮನಸ್ಸಿಗೆ ಹಬ್ಬವುಂಟುಮಾಡುತ್ತವೆ. ಅಧಕುವಾರಿಯಲ್ಲಿ ತಂಗುದಾಣವಿದ್ದು ಕುಳಿತುಕೊಳ್ಳಲು ವಿಶಾಲವಾದ ಸ್ಥಳ ಇದೆ. ಪರ್ವತದ ಮಧ್ಯಭಾಗವಾದ ಕಾರಣ ಅಲ್ಲಿ ಒಂದು ವ್ಯೂ ಪಾಯಿಂಟ್ ಅನ್ನು ನಿರ್ಮಾಣ ಮಾಡಲಾಗಿದೆ. ಕುಡಿಯುವ ನೀರು, ವೈದ್ಯಕೀಯ ಸೇವೆ, ಪೊಲೀಸ್ ಮಾಹಿತಿ ಕೇಂದ್ರ, ಭೋಜನಾಲಯಗಳ ವ್ಯವಸ್ಥೆ ಅಧಕುವಾರಿಯಲ್ಲಿದ್ದು ಯಾತ್ರಿಕರಿಗೆ ಹೇಳಿ ಮಾಡಿಸಿದಂತಿರುವ ತಂಗುದಾಣ.ಮುಂದೆ ಅಧಕುವಾರಿಯಿಂದ ಭವನದ ಕಡೆಗೆ ಎರಡು ಮಾರ್ಗಗಳಿವೆ. ಒಂದು ಅಧಕುವಾರಿಯಿಂದ ಎಡಬಾಗಕ್ಕೆ ಗುರುತು ಮಾಡಿರುವ ರಸ್ತೆ . ಇಲ್ಲಿನ ರಸ್ತೆ ಅತ್ಯಂತ ಸುಸಜ್ಜಿತವಾಗಿದ್ದು ಮೆಟ್ಟಿಲುಗಳಿಲ್ಲದೆ ಪ್ರಯಾಣಿಸಲು ಅನುಕೂಲಕರವಾಗಿದೆ. ಆದರೆ ಇದೇ ಮಾರ್ಗವಾಗಿ ಎಲೆಕ್ಟ್ರಿಕ್ ವಾಹನಗಳು ತೆರಳಲು ಅವಕಾಶ ಮಾಡಿಕೊಡಲಾಗಿದೆ ಹಾಗಾಗಿ ರಸ್ತೆಯ ಇಕ್ಕೆಲಗಳಲ್ಲಿ ಮಾತ್ರ ಸಾಗಬೇಕು. ಹಾಗು ಈ ಮಾರ್ಗದಲ್ಲಿ ಹೆಚ್ಚು ಭೂಕುಸಿತ ಉಂಟಾಗುವ, ಕಲ್ಲು ಬಂಡೆಗಳು ಆಯತಪ್ಪಿ ಬೀಳುವ ಪ್ರದೇಶಗಳನ್ನು ಗುರುತಿಸಲಾಗಿದೆ. ಅವಘಡಗಳು ಹೆಚ್ಚು ಇಲ್ಲಿ ಸಂಭವಿಸಿಲ್ಲವಾದರೂ ಈ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚು ಜಾಗರೂಕರಾಗಿರುವುದು ಉತ್ತಮ. ಅದು ಬಿಟ್ಟರೆ ಮತ್ತೊಂದು ದಾರಿ ಅಧಕುವಾರಿಯಿಂದ ಎಡಕ್ಕೆ ತಿರುಗದೆ ನೇರವಾಗಿ ಸಾಗುವುದು. ಈ ಮಾರ್ಗದಲ್ಲಿ ಅಲ್ಲಲ್ಲಿ ಮಾತ್ರ ನೆರಳಿನ ಹೊದಿಕೆ ಕಲ್ಪಿಸಲಾಗಿದೆ. ಇಲ್ಲಿ ಮೆಟ್ಟಿಲುಗಳನ್ನು ಏರಿಕೊಂಡು ಮಾತ್ರವೇ ಸಾಗಬಹುದಾದ ಪ್ರದೇಶಗಳಿದ್ದು ಶಕ್ತರು ಹಾಗು ಆಸಕ್ತರು ಈ ಮಾರ್ಗದಲ್ಲಿಯೂ ತೆರಳಬಹುದು. ಮೆಟ್ಟಿಲು ಹತ್ತುವ ಪ್ರದೇಶಗಳು ಎದುರಾದಾಗ ಅಲ್ಲಿ ಎಷ್ಟು ಮೆಟ್ಟಿಲುಗಳಿವೆ ಎಂಬ ಫಲಕವನ್ನು ಮೆಟ್ಟಿಲು ಹತ್ತುವರಿಗಾಗಿಯೇ ಅಳವಡಿಸಲಾಗಿದೆ. ಅವುಗಳ ಮಾಹಿತಿಯಿಂದ ಆಸಕ್ತರು ತಮ್ಮ ಶಕ್ತ್ಯಾನುಸಾರ ಮೆಟ್ಟಿಲುಗಳನ್ನು ಏರಬಹುದು, ಇಲ್ಲವಾದರೆ ಕಡಿದಾದ ರಸ್ತೆಗಳನ್ನು ಬಳಸಬಹುದು.ಅಧಕುವಾರಿಯಿಂದ ಭವನ 7 ಕಿಲೋಮೀಟರು ದೂರದ ಹಾದಿ.

ಅಧಕುವಾರಿಯಿಂದ ಭವನದ ಕಡೆಗೆ ಸಾಗುವ ಮಾರ್ಗದಲ್ಲಿ ಕೋತಿಗಳು ಅಸಂಖ್ಯವಾಗಿದ್ದು ಅಲ್ಲಿ ಎಚ್ಚರ ವಹಿಸುವುದು ಉತ್ತಮ. ಕೆಲವು ಸಮಯದಲ್ಲಿ ಕೋತಿಗಳಿಂದಲೂ ಕಲ್ಲು ಬಂಡೆಗಳು ಜಾರಿ ಯಾತ್ರಿಕರ ಪಥದ ಮೇಲೆ ಬೀಳುವ ಅಪಾಯವಿದ್ದೇ ಇರುತ್ತದೆ. ಅಧಕುವಾರಿ ದಾಟಿದ ನಂತರ ಪರ್ವತದ ಎತ್ತರದ ಭಾಗಕ್ಕೆ ಸಾಗುವುದರಿಂದ ಉಷ್ಣಾಂಶ ಕಡಿಮೆಯಾಗಿ ಶೀತಗಾಳಿಯ ಅನುಭವವಾಗುತ್ತದೆ. ಇನ್ನು ನವೆಂಬರ್-ಮಾರ್ಚ್ ನಡುವಿನ ಸಮಯದಲ್ಲಿ ಅಲ್ಲಿ ಹಿಮಪಾತವೇ ಆಗುತ್ತಿರುತ್ತದೆ. ಬೇಸಿಗೆಯ ದಿನಗಳಲ್ಲಿ ಅಷ್ಟೇನೂ ಶೀತ ವಾತಾವರಣವಿರದೆ ಅನುಕೂಲ ವಾತಾವರಣವಿರುತ್ತದೆ.

ಇಂತಹ ಹಾದಿಯನ್ನು 7 ಕಿಲೋಮೀಟರು ಕ್ರಮಿಸಿದರೆ ಅಲ್ಲಿ ಎದುರಾಗುತ್ತದೆ ವೈಷ್ಣೋದೇವಿ ಗುಹಾಲಯ. ಇದು ವಿಶೇಷವಾಗಿ ದೇವಾಲಯದಂತಹ ರಚನೆಗಳನ್ನೇನ್ನೂ ಹೊಂದಿಲ್ಲ. ಅಲ್ಲಿರುವ ಅಮೃತಶಿಲೆಯ ಗುಹೆಯೇ ವೈಷ್ಣೋದೇವಿಗೆ ಆಲಯ. ಇಲ್ಲಿ ಗೋಪುರ ರಚನೆಯಿಲ್ಲ, ಗಂಟಾನಾದವಿಲ್ಲ. ನಡೆಯುವ ವಿಶೇಷ ಪೂಜೆಗಳೆಲ್ಲ ಬೆಳಗಿನ ಜಾವದ ಸಮಯದಲ್ಲಿಯೇ ಮುಗಿದು ಹೋಗುವುದರಿಂದ ಯಾತ್ರಿಕರಿಗೆ ದರ್ಶನ ಅವಕಾಶ ಸಂಪೂರ್ಣ ಲಭ್ಯವಾಗುತ್ತದೆ. ಗುಹಾಲಯದ ಮುಂದೆ ಜನ ಸಂದಣಿ ಉಂಟಾಗುವುದರಿಂದ ಸೂಕ್ತ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿದೆ. ಇಲ್ಲಿ ಸರತಿ ಸಾಲಿನಲ್ಲಿ ಕೆಲವು ಕಾಲ ನಿಂತು ಕಾಯಬೇಕಾಗುತ್ತದೆ. ನವರಾತ್ರಿ, ಅಮಾವಾಸ್ಯೆಗಳಂತಹ ಸಂಧರ್ಭಗಳಲ್ಲಿ ಸರತಿಯ ಸಾಲು ಕಿಲೋಮೀಟರ್ ಗಟ್ಟಲೆ ಇರಲೂ ಬಹುದು. ವಾರಾಂತ್ಯಗಳೂ ಇದಕ್ಕೆ ಹೊರತಾಗಿಲ್ಲ. ಇತರೆ ದಿನಗಳಲ್ಲಿ ಸರತಿಯ ಸಾಲು  ಕಡಿಮೆಯೇ ಇರುತ್ತದೆ.

ಗುಹಾಲಯಕ್ಕೆ ಪ್ರವೇಶಿಸುವ ಮೊದಲು ಸ್ನಾನ ಮಾಡಲು ಆಸಕ್ತರಾದವರಿಗೆ ಭವನಕ್ಕೆ ಸಮೀಪದಲ್ಲಿಯೇ ಸ್ನಾನ ಘಟ್ಟವೊಂದನ್ನು ನಿರ್ಮಾಣ ಮಾಡಲಾಗಿದೆ. ಅಲ್ಲಿ ಸ್ನಾನ ಮಾಡಿಕೊಂಡು ಗುಹಾಲಯ ಪ್ರವೇಶಿಸಬಹುದು. ಅತೀ ಭಾರವಾದ ಲಗೇಜುಗಳನ್ನು ಆಲಯದ ಒಳಗೆ ತರಲು ಅವಕಾಶವಿಲ್ಲ ಹಾಗಾಗಿಯೇ ಭವನದ ಸಮೀಪದಲ್ಲಿಯೇ ಕ್ಲಾಕ್ ರೂಮುಗಳನ್ನು ನಿರ್ಮಾಣ ಮಾಡಲಾಗಿದೆ. ಅಲ್ಲಿ ಲಗೇಜುಗಳನ್ನು ಇರಿಸಿ ದರ್ಶನಕ್ಕೆ ಮುಂದಾಗಬೇಕು.

ಸುಮಾರು 10 ಮೀಟರ್ ಉದ್ದವಿರುವ ಗುಹೆಯ ಕೊನೆಯ ಭಾಗದಲ್ಲಿ ವೈಷ್ಣೋದೇವಿಯ ದರ್ಶನ ಲಭ್ಯವಾಗುತ್ತದೆ. ಇಡೀ ಪರ್ವತಾರೋಹಣದ ಪರಿಶ್ರಮ ಅಲ್ಲಿಗೆ ಸಾರ್ಥಕವಾದಂತಹ ಭಾವ ತಳೆಯುವ ಭಕ್ತರು 'ಜೈ ಮಾತಾ ದಿ' ಎಂಬ ಘೋಷಣೆಗಳನ್ನು ಕೂಗುತ್ತಾರೆ. ವೈಷ್ಣೋದೇವಿಯ ಮುಂದೆ ಆಸೀನರಾಗಿರುವ ಪುರೋಹಿತರು ತೀರ್ಥವನ್ನು ಎಲ್ಲ ಭಕ್ತರಿಗೂ ವಿತರಿಸುತ್ತಾರೆ ಹಾಗು ಎಲ್ಲರ ಹಣೆಗೂ ತಿಲಕ ಇಡುತ್ತಾರೆ. ಪ್ರತಿಯೊಬ್ಬ ಭಕ್ತನಿಗೂ ವೈಷ್ಣೋದೇವಿಯ ದರ್ಶನ ಭಾಗ್ಯ 5-10 ಸೆಕೆಂಡ್ ಗಳಷ್ಟು ಲಭ್ಯವಾಗುತ್ತದೆ. ವೈಷ್ಣೋದೇವಿ ಪಕ್ಕದಲ್ಲಿಯೇ ನದಿಯೊಂದು ಉಗಮವಾಗುತ್ತಿರುವ ಸ್ಥಳವಿದೆ.ವೈಷ್ಣೋದೇವಿಯ ಪಕ್ಕದಲ್ಲಿಯೇ 4-5 ಮೆಟ್ಟಿಲುಗಳನ್ನು ಇಳಿಯಬೇಕಾದ ಸ್ಥಳವಿದೆ, ಅಲ್ಲಿಯೇ ನದಿ ಉಗಮವಾಗಿ ಹರಿಯುತ್ತಿದೆ. ಆ ನದಿಯ ನೀರನ್ನು ತೀರ್ಥದಂತೆ ಭಾವಿಸಿ ಭಕ್ತರು ತಲೆಗೆ ಪ್ರೋಕ್ಷಿಸಿಕೊಳ್ಳುತ್ತಾರೆ. ಅಲ್ಲಿಂದ ನೇರವಾಗಿ 5 - 6 ಮೀಟರ್ ದೂರ ಸಾಗಿದರೆ ಗುಹಾಲಯದಿಂದ ಹೊರ ಬಂದುಬಿಟ್ಟಿರುತ್ತೇವೆ. ಅಲ್ಲಿಗೆ ವೈಷ್ಣೋದೇವಿ ಯಾತ್ರೆಯ ಬಹು ಮುಖ್ಯವಾದ ಘಟ್ಟ ಮುಗಿಯುತ್ತದೆ.ಭವನದ ಸುತ್ತಲೂ ಅನೇಕ ಧರ್ಮ ಛತ್ರಗಳೂ ಲಭ್ಯವಿದ್ದು ಅಲ್ಲಿ ಭಕ್ತರು ಉಳಿಯಲು ಅವಕಾಶ ಕಲ್ಪಿಸಲಾಗಿದೆ. ದೂರದೂರುಗಳಿಂದ ಬರುವ ರೈತಾಪಿ ವರ್ಗದವರು, ಖಾಸಗಿ ಲಾಡ್ಜ್ ಗಳಿಗೆ ಅವಕಾಶವಾಗದವರು ಅಲ್ಲಿಯೇ ತಂಗುತ್ತಾರೆ.

ಇಲ್ಲಿ ವೈಷ್ಣೋದೇವಿ  ಆಡಳಿತ ಮಂಡಳಿಯ ವತಿಯಿಂದ ವಿತರಿಸಲಾಗುವ ಪ್ರಸಾದದ ಪೊಟ್ಟಣಗಳನ್ನು ಖರೀದಿಸಬಹುದು. ಭವನದಿಂದ ಹೊರಬಂದ ನಂತರ 100 ಮೀಟರ್ ಬಂದ ದಾರಿಯಲ್ಲಿಯೇ ಹಿಂದಿರುಗಿದರೆ ವೈಷ್ಣೋದೇವಿ ಪ್ರಸಾದ ಕೇಂದ್ರ ಸಿಗುತ್ತದೆ. ವೈಷ್ಣೋದೇವಿ ಪ್ರಸಾದವನ್ನು 'ಭೇನ್ಟ್' ಎಂದು ಕರೆಯಲಾಗುತ್ತದೆ. ಹಣ ಪಾವತಿ ಮಾಡಿ ಪ್ರಸಾದ ಕೊಂಡುಕೊಳ್ಳಬಹುದು. ಅಲ್ಲಿಗೆ ವೈಷ್ಣೋದೇವಿ ದರ್ಶನ ಯಾತ್ರೆ ಮುಗಿದಂತೆಯೇ.

ವೈಷ್ಣೋದೇವಿಯ ಗುಹಾಲಯ ಪರ್ವತದ ತುತ್ತ ತುದಿಯಲಿಲ್ಲ. ಭವನದಿಂದ 2 ಕಿಲೋ ಮೀಟರ್ ಮೇಲಿನ ಭಾಗವೇ ತ್ರಿಕೂಟ ಪರ್ವತದ ತುತ್ತ ತುದಿ. ಇಲ್ಲಿ ಭೈರೋ ಬಾಬಾ ಎಂದು ಕರೆಯಲ್ಪಡುವ ಶಿವನ ದೇವಾಲಯವಿದೆ. ಈ ದೇವಾಲಯಕ್ಕೆ ಭೇಟಿ ಕೊಡದಿದ್ದರೆ ವೈಷ್ಣೋದೇವಿ ಯಾತ್ರೆಯೇ ಅಪೂರ್ಣವೆಂದು ಭಕ್ತರು ಭಾವಿಸುವುದು ಉಂಟು. ವೈಷ್ಣೋದೇವಿ ಪ್ರಸಾದ ಕೌಂಟರ್ ಮುಂದೆಯೇ ಮೇಲ್ಭಾಗಕ್ಕೆ ಏರಲು ಕಡಿದಾದ ದಾರಿಯಿದೆ. ಅದೇ ಭೈರೋ ದೇವಾಲಯಕ್ಕೆ ಮಾರ್ಗ. ಇಲ್ಲಿಂದ ಮತ್ತೆ ಭೈರೋ  ದೇವಾಲಯಕ್ಕೆ ಕುದುರೆಗಳ ಸೌಲಭ್ಯವಿದೆ. ಎಲೆಕ್ಟ್ರಿಕ್ ವಾಹನಗಳ ಸೌಲಭ್ಯ ಇಲ್ಲಿ ನಿಷಿದ್ಧವಾಗಿದೆ.

ಇದೇ ಹಾದಿಯಲ್ಲಿ 2 ಕಿಲೋಮೀಟರು ಸಾಗಿದರೆ ಪರ್ವತದ ತುತ್ತ ತುದಿಯು ಸಿಗುತ್ತದೆ. ಅಲ್ಲೇ ಸ್ತಿತ್ಯವಾಗಿದೆ ಭೈರೋ ದೇವನ ಆಲಯ. ಭವನದಿಂದ ಭೈರೋ ದೇವಾಲಯಕ್ಕೆ ಇರುವ ದಾರಿ ತೀವ್ರ ಕಡಿದಾಗಿದ್ದು ಯಾತ್ರಿಕರು ಭವನದ ಬಳಿ ಸಾಕಷ್ಟು ವಿಶ್ರಾಂತಿ ಪಡೆದು ಲಘು ಆಹಾರ ಸೇವಿಸಿ ಹೊರಡುವುದು ಉತ್ತಮ. ತೀವ್ರ ಚಳಿಗಾಳಿ ಬೀಸುವ ಸಮಯಗಳಲ್ಲಿ ಪರ್ವತದ ತುತ್ತ ತುದಿಯಲ್ಲಿ ಒತ್ತಡ ಕುಸಿಯುವುದರಿಂದ ಆಮ್ಲ ಜನಕದ ಕೊರತೆಯುಂಟಾಗುತ್ತದೆ. ಇನ್ನುಳಿದಂತೆ ಭೈರೋ ಆಲಯಕ್ಕೆ ಭೇಟಿ ನೀಡಲು ಯಾವುದೇ ತೊಂದರೆಗಳಿಲ್ಲ. ಈ ಭಾಗದಲ್ಲಿ ಇರುವ ವನ್ಯಜೀವಿಗಳೆಂದರೆ ಜಿಂಕೆ ಸಾರಂಗಗಳು ಮಾತ್ರ. ಹಾಗಿರುವುದರಿಂದ ಪ್ರಾಣಿಗಳಿಗೆ ಭೀತಿ ಪಡುವ ಅಗತ್ಯವಿಲ್ಲ. ಹಾಗಿದ್ದಾಗ್ಯೂ ಕೋತಿಗಳಿಂದ ಜಾಗೃತರಾಗಿರುವುದು ಉತ್ತಮ. ಪರ್ವತದ ತುತ್ತ ತುದಿಯ ಭೈರೋ ದೇವನ ಆಲಯದಲ್ಲಿ ಶಿವನ ದರ್ಶನ ಪಡೆದು ಅಲ್ಲಿರುವ ವ್ಯೂ ಪಾಯಿಂಟ್ ನಲ್ಲಿ ಕೆಲವು ಕಾಲ ವಿಶ್ರಮಿಸಬಹುದು. ಭೈರೋ ಬಾಬಾ ಭೇನ್ಟ್ ಪ್ರಸಾದವನ್ನು ಕೊಂಡುಕೊಳ್ಳಬಹುದು. ಉತ್ತರ ಭಾರತೀಯ ಖಾದ್ಯಗಳ ಹೋಟೆಲ್ ಗಳು ಕೂಡ ಅಲ್ಲಿದ್ದು ಐಸ್ ಕ್ರೀಮ್, ಚಹಾ ದಂತಹ ಚಿಕ್ಕ ಚಿಕ್ಕ ಅಂಗಡಿಗಳು ಅಲ್ಲಿವೆ. ವ್ಯೂ ಪಾಯಿಂಟ್ ನಲ್ಲಿ ಕುಳಿತು ನೋಡಲು ನೆರಳಿನ ಕುಟೀರವೂ ಇದೆ. ಭೈರೋದೇವನ ದೇವಾಲಯವೇ ತ್ರಿಕೂಟ ಪರ್ವತದ ಅಂತ್ಯ. ಅದೇ ದಾರಿಯಲ್ಲಿ ಮುಂದೆ ಸಾಗಿದರೆ ಪರ್ವತದಿಂದ ಕೆಳಗಿಳಿಯುವ ದಾರಿ ಅದಾಗುತ್ತದೆ. ಅಲ್ಲಿಂದ ಅಧಕುವಾರಿಗೆ ನೇರ ದಾರಿಯಿದ್ದು ಕಾಲ್ನಡಿಗೆಯಲ್ಲಿ ಅಥವಾ ಕುದುರೆಯ ಮೇಲೆ ತಲುಪಬಹುದು. ಬಂದ ದಾರಿಯಲ್ಲಿಯೇ ಇಳಿಯುವುದು ಕೂಡ ಸಾಧ್ಯವಿದೆ. ಆದರೆ ಭೈರೋ ದೇವಾಲಯದಿಂದ ಅಧಕುವಾರಿಗೆ ಇರುವ ನೇರ ದಾರಿ ಸುಲಭ ಮಾರ್ಗದ್ದಾಗಿದೆ. ಹಾಗಾಗಿ ಗರಿಷ್ಠ ಯಾತ್ರಿಕರು ಅದೇ ಮಾರ್ಗವನ್ನು ಅನುಸರಿಸುತ್ತಾರೆ.

ಅಧಕುವಾರಿ ತಲುಪಿದ ನಂತರ ಪರ್ವತಾರೋಹಣ ಸಮಯದಲ್ಲಿ ಕ್ರಮಿಸಿದ್ದ ದಾರಿಯನ್ನೇ ಕ್ರಮಿಸಿ ಇಳಿಯಬೇಕು. ಅಲ್ಲಿಗೆ ಯಾತ್ರಿಗಳು ಮರಳಿ ಬಾಣಗಂಗಾ ತಲುಪುತ್ತಾರೆ. ಅಲ್ಲಿಗೆ ತ್ರಿಕೂಟ ಪರ್ವತಾರೋಹಿಗಳೆಂಬ ಕೀರ್ತಿಯು ಯಾತ್ರಿಗಳಿಗೆ ಲಭ್ಯವಾಗುತ್ತದೆ. ಹೆಲಿಕ್ಯಾಪ್ಟರ್ ನಲ್ಲಿ ಆಗಮಿಸುವ ಯಾತ್ರಿಗಳು ಭೈರೋ ದೇವನ ಆಲಯದಿಂದ ಸಂಜಿಛಾತ್ ಗೆ ಇರುವ ಮಾರ್ಗದಲ್ಲಿ ನಡೆದು ಅಥವಾ ಕುದುರೆಯ ಮೇಲೆ ಸಾಗಿ ಹೆಲಿಪ್ಯಾಡ್ ತಲುಪಬಹುದು. ಅಲ್ಲಿಂದ ನೇರ ಕಟರಾಗೆ ಹೆಲಿಕ್ಯಾಪ್ಟರ್ ಬಂದಿಳಿಯುತ್ತದೆ.ಭವನ ಹಾಗು ಭೈರೋ ಬಾಬಾ ಆಲಯಗಳ ಬಳಿ ಅಥವಾ ಮಾರ್ಗ ಮಧ್ಯೆ ಎಲ್ಲಿಯೂ ವಿಶ್ರಾಂತಿ ಪಡೆಯದ ಪಾದಯಾತ್ರಿಗಳು ಬಾಣಗಂಗಾ ತಲುಪುವ ಹೊತ್ತಿಗೆ ನಿತ್ರಾಣರಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ನಡು-ನಡುವೆ ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳುವುದು ಅವಶ್ಯವಾಗಿರುತ್ತದೆ. ಕಟರಾದಲ್ಲಿ ಮೊದಲೇ ರೂಮು ಹಿಡಿದು ಅನಂತರ ಪರ್ವತಾರೋಹಣ ಮಾಡಿದ ಯಾತ್ರಿಕರು ನಿಶ್ಚಿಂತೆಯಿಂದ ರೂಮು ತಲುಪಿ ಸಾಕಷ್ಟು ವಿಶ್ರಾಂತಿಯತ್ತ ಗಮನ ಹರಿಸಬೇಕು.

ಆದಷ್ಟು ಮಾರನೆಯ ದಿನ ಹೆಚ್ಚು ದೈಹಿಕ ಶಕ್ತಿ ಖರ್ಚಾಗುವ ಯಾವ ಯೋಜನೆಗಳನ್ನು ಹಾಕಿಕೊಳ್ಳದಿರುವುದು ಉತ್ತಮ. ಪಾದಯಾತ್ರೆಯಲ್ಲಿ ಪರ್ವತ ಹತ್ತಿಳಿದ ಯಾತ್ರಿಕರಿಗೆ ಕೈ ಕಾಲು ನೋವು ಕೆಲವು ವಾರಗಳ ವರೆವಿಗೂ ಹಾಗೆ ಉಳಿದಿರುತ್ತದೆ. ಆದ ಕಾರಣ ಅದಕ್ಕೆ ಸಂಬಂಧಿಸಿದ ಔಷಧ ವ್ಯವಸ್ಥೆಗಳನ್ನು ಕಟರಾದಲ್ಲಿ ಪಡೆಯುವುದು ಉತ್ತಮ.

ಪರ್ವತ ಹತ್ತಿಳಿಯುವ ಸಮಯ ಇಷ್ಟೇ ಎಂದು ನಿಗದಿತವಾಗಿ ಹೇಳಲು ಸಾಧ್ಯವಿಲ್ಲ. ಅದು ಅವರವರ ಶಕ್ತಿಯ ಅನುಸಾರ ತೀರ್ಮಾನಿಸಲ್ಪಡುತ್ತದೆ. ಮಾರ್ಗ ಮಧ್ಯೆ ಅವರು ಪಡೆಯುವ ವಿಶ್ರಾಂತಿ ಸಮಯ, ದರ್ಶನಕ್ಕಿದ್ದ ಸರತಿಯ ಸಾಲು, ಮಳೆ ಹಿಮಪಾತ ಮತ್ತಿತರ ಸಮಯಗಳಲ್ಲಿ ಉಂಟಾಗುವ ಅಡಚಣೆಗಳು ಕೂಡ ಯಾತ್ರೆಯ ಸಮಯವನ್ನು ಹೆಚ್ಚು ಮಾಡುವಲ್ಲಿ ಪಾತ್ರ ವಹಿಸುತ್ತವೆ.

ಸೂಚನೆ: ಚಳಿಗಾಲದಲ್ಲಿ ತೀವ್ರ ಹಿಮಪಾತವಿರುವುದರಿಂದ ವೈಷ್ಣೋದೇವಿಗೆ ಆ ಸಮಯದಲ್ಲಿ ಭೇಟಿಕೊಡುವುದು ಪ್ರಾಣಾಪಾಯಕಾರಿ. ಕೆಲವು ಸಾಹಸ ಪ್ರಿಯ ಯಾತ್ರಿಕರು ಚಳಿಗಾಲದಲ್ಲಿ ಭೇಟಿ ಕೊಡುತ್ತಾರಾದರೂ ಬಹಳ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಚಿಕ್ಕ ಮಕ್ಕಳು,  ಅನಾರೋಗ್ಯ ಪೀಡಿತರು, ಅಂಗವಿಕಲರು, ಮಹಿಳೆಯರು, ವೃದ್ಧರು ಚಳಿಗಾಲದಲ್ಲಿ ಈ ಸ್ಥಳಕ್ಕೆ ಭೇಟಿ ಕೊಡಲೇಬಾರದು.ಅತಿಯಾಗಿ ಮಳೆಯಾಗುವ ಸಂಧರ್ಭದಲ್ಲಿ ಪರ್ವತದ ಕೆಲವು ಭಾಗಗಳಲ್ಲಿ ಕಲ್ಲು ಬಂಡೆಗಳು ಮೇಲೆ ಬೀಳುವ ಸಂಭವವಿರುವುದರಿಂದ ಬಹಳ ಜಾಗೃತೆ ವಹಿಸಬೇಕು.

ವೈಷ್ಣೋದೇವಿ ಯಲ್ಲಿ ನಾನು
ವೈಯ್ಯಕ್ತಿಕವಾಗಿ ನಾನು ಏಕಾಂಗಿಯಾಗಿ ಬೆಳಗಿನ 7.15 ಕ್ಕೆ ಪರ್ವತ ಆರೋಹಣ ಮಾಡಲು ಶುರು ಮಾಡಿದ್ದೆ (ನಾನು ಪರ್ಚಿ ಚೀಟಿ ಪಡೆದಿದ್ದೆ 6.55ರಲ್ಲಿ, ಅಲ್ಲಿಂದ ಬಾಣಗಂಗಾದವರೆವಿಗೂ ನಡೆಯಲು 20 ನಿಮಿಷ ಸಮಯ ಹಿಡಿಯಿತು.  ಮೇಲೆ ಕಾಣುವುದು ನನ್ನದೇ ಪರ್ಚಿ ಚೀಟಿ ಅಲ್ಲಿ ಸಮಯ ಗಮನಿಸಿ). 12.30 ಸುಮಾರಿಗೆ ಭವನ ತಲುಪಿದ್ದೆ. 1 ಗಂಟೆಯ ಸುಮಾರಿಗೆ ದರ್ಶನ ವಾಗಿತ್ತು. ನಂತರ ಅಲ್ಲಿಯೇ ಹತ್ತಿರದಲ್ಲಿದ್ದ ಹೋಟೆಲ್ ನಲ್ಲಿ ಲಘು ಆಹಾರ ಸೇವಿಸಿದ್ದೆ. ಮುಂದೆ ಭೈರೋಬಾಬಾ ದರ್ಶನಕ್ಕೆ ಮತ್ತೆ ಹತ್ತಬೇಕು ಎನ್ನುವ ಅರಿವಿದ್ದ ಕಾರಣ ಲಘು ಆಹಾರವಷ್ಟೇ ಸೇವಿಸಿದ್ದೆ. ಭವನದ ಪ್ರಸಾದ ಪೊಟ್ಟಣಗಳನ್ನು ಖರೀದಿಸಿದ ನಂತರ ಅಲ್ಲಿಯೇ 1 ಗಂಟೆಯ ಕಾಲ ವಿಶ್ರಾಂತಿ ಪಡೆದೆ. ಉತ್ತರ ಭಾರತದ ಸಾಧು ಸಂತರ, ರೈತಾಪಿ ಮಹಿಳೆಯರ ಗುಂಪುಗಳು ನನಗೆ ಎದುರಾಗಿದ್ದವು. ಅವರೊಂದಿಗೆ ಕೆಲವು ಕಾಲ ಸಂಭಾಷಣೆ ನಡೆಸಿ ಅಪಾರ ಅಂಶಗಳನ್ನು ಕಲಿಯಲು ಅವಕಾಶವಾಯಿತು. ಬಿಹಾರದ ಮಹಿಳೆಯರ ಗುಂಪೊಂದು ವೈಷ್ಣೋದೇವಿ ಆಲಯಕ್ಕೆ ಭೇಟಿ ನೀಡಿತ್ತು. ಅವರು ಪ್ರತೀ ವರ್ಷವೂ ಅಲ್ಲಿಗೆ ಭೇಟಿ ನೀಡುವುದು ವಾಡಿಕೆಯಂತೆ, ಕೃಷಿ ಕಾರ್ಯಗಳು ಹೆಚ್ಚು ಇಲ್ಲದ ಸಮಯದಲ್ಲಿ ಎಲ್ಲರು ಯೋಜನೆ ಹಾಕಿಕೊಂಡು ರೈಲುಮಾರ್ಗವಾಗಿ ವೈಷ್ಣೋದೇವಿಗೆ ಭೇಟಿಯಿತ್ತಿದ್ದರು.

ಮೂರು ದಿನ ಅಲ್ಲಿಯೇ ಉಳಿಯುವ ಅವರು ಒಂದು ದಿನ ಪೂರ್ತಿ ಪರ್ವತ ಹತ್ತುವರಂತೆ, ಒಂದು ದಿನ ಪೂರ್ತಿ ಭವನದ ಧರ್ಮಛತ್ರದಲ್ಲಿರುವರಂತೆ ಇನ್ನೊಂದು ದಿನ ಭೈರೋಬಾಬಾ ದರ್ಶನ ಮಾಡಿಕೊಂಡು ಪರ್ವತ ಇಳಿಯುವರಂತೆ. "ಹಾಗಿಲ್ಲದಿದ್ದರೆ ನಾವೆಲ್ಲಾ 50 ವರ್ಷ ದಾಟಿದವರು ಒಂದೇ ದಿನದಲ್ಲಿ ಪರ್ವತ ಹತ್ತಿಳಿಯಲು ಸಾಧ್ಯವೇ?" ಎಂದು ಅವರು ಕೇಳುತ್ತಿದ್ದುದು ಜ್ಞಾಪಕದಲ್ಲಿದೆ. ಪರ್ವತ ಇಳಿದ ಅದೇ ದಿನ ರೈಲು ಮಾರ್ಗವಾಗಿ ಊರು ಸೇರಿಕೊಳ್ಳುವರಂತೆ!!.
ಹೀಗೆ ಕೆಲವರನ್ನು ಮಾತನಾಡಿಸಿಕೊಂಡು 2 ಗಂಟೆಯ ಸುಮಾರಿಗೆ ವೈಷ್ಣೋದೇವಿ ಭವನದಿಂದ ಹೊರಟು ಭೈರೋಬಾಬಾ ಆಲಯದತ್ತ ಹೆಜ್ಜೆ ಹಾಕಲು ಶುರು ಮಾಡಿದೆ. ಒಂದು ಘಂಟೆಯ ಕಠಿಣ ಹಾದಿ ಸವೆಸಿದ ತರುವಾಯು ಭೈರೋಬಾಬಾ ದೇವಾಲಯ ತಲುಪಿ ದರ್ಶನ ಪಡೆದೆ.

ಅಲ್ಲಿ ಸುಮಾರು 20 ನಿಮಿಷಗಳಷ್ಟು ವಿಶ್ರಾಂತಿ ಪಡೆದು ಸಮೋಸ ಮೆಲ್ಲುತ್ತ ಅಲ್ಲಿರುವ ಕಾಫಿ ಡೇ ಒಂದರಿಂದ ಕಾಫೀ ಕೊಂಡುಕೊಂಡು ಕಾಫೀ ಹೀರಿದೆ. ಅಲ್ಲಿ 'ಕಾಫಿ ಗೆ ಬಾರಿ ರೇಟು' ಎಂದು ಮನಸಿನಲ್ಲಿ ಅನಿಸಿತ್ತಾದರೂ, "ಈ ಪರ್ವತದ ಮೇಲೆ ಇಲ್ಲಿಗೆ ಕಾಫೀ ತಂದು ಕಡಿಮೆ ರೇಟಿಗೆ ಕೊಡಲು ಅವರೇನು ನಮ್ಮ ಮಾವನ ಮಕ್ಕಳೇ" ಎಂದು ನನ್ನಷ್ಟಕ್ಕೆ ನಾನೇ ನಗುತ್ತಾ ಇಳಿಯುವ ದಾರಿಯತ್ತ ಗಮನ ಹರಿಸಿದೆ.  4 ಗಂಟೆಯ ಸುಮಾರಿಗೆ ಪರ್ವತ ಅವರೋಹಣ ಆರಂಭವಾಯಿತು. ದಾರಿ ಸುಲಭವೆನಿಸಿತು. ದಾರಿಯಲ್ಲಿ ಸಹ ಪಥಿಕರನ್ನು ಮಾತನಾಡಿಸಿಕೊಳ್ಳುತ್ತ ನನಗಾದ ಅನುಭವಗಳನ್ನು ಹಂಚಿಕೊಳ್ಳುತ್ತಾ ಸಾಗಿ ಸುಮಾರು 5.20ರಷ್ಟರಲ್ಲಿ ಅಧಕುವಾರಿ ತಲುಪಿದ್ದೆ. ಅಲ್ಲಿ ಸೌತೆಕಾಯಿಯೊಂದನ್ನು ಮೆಲ್ಲುತ್ತಾ ಸುಮಾರು 20 ನಿಮಿಷ ವಿಶ್ರಾಂತಿ ತೆಗೆದುಕೊಂಡೆ.

ಅಲ್ಲಿಂದ ಇಳಿಯುವಷ್ಟರಲ್ಲಿ ಕಾಲು ತೀವ್ರತರದ ನೋವಿಗೆ ಒಳಗಾಗಿತ್ತು. ಹಾಗೂ ಸಾಧನೆಯಂತೆ ಸುಮಾರು 7.30ರಷ್ಟರಲ್ಲಿ ಬಾಣಗಂಗಾ ಚೆಕ್ ಪೋಸ್ಟ್ ತಲುಪಿದ್ದೆ. ನಾನು ನನ್ನ ಚಪ್ಪಲಿಗಳನ್ನು ಬಾಣಗಂಗಾ ಚೆಕ್ ಪೋಸ್ಟ್ ನಲ್ಲಿನ ಕ್ಲಾಕ್ ರೂಮ್ ವೊಂದರಲ್ಲಿ ಬಿಟ್ಟು ಇಡೀ ಪರ್ವತವನ್ನು ಬರಿ ಕಾಲಿನಲ್ಲಿ ಹತ್ತಿ ಇಳಿದಿದ್ದೆ. ಬರಿ ಕಾಲಿನಲ್ಲಿಯೇ ಹತ್ತಬೇಕು ಎನ್ನುವ ನಿಯಮವೇನೂ ಅಲ್ಲಿಲ್ಲ. ಆ ಕಾರಣದಿಂದಲೂ ವಿಪರೀತ ಕಾಲು ನೋವಾಗಿರಲೂ ಬಹುದು.ಬಾಣಗಂಗಾದಿಂದ ಕಟರಾ ಖಾಸಗಿ ಬಸ್ ನಿಲ್ದಾಣದ ಬಳಿಯಿದ್ದ ರೂಮ್ ಗೆ ನಡೆಯುವಷ್ಟರಲ್ಲಿ ನನ್ನ ಸಂಪೂರ್ಣ ಶಕ್ತಿ ಖರ್ಚಾದಂತೆ ಭಾಸವಾಗಿತ್ತು. 8.30 ರ ಸುಮಾರಿಗೆ ರೂಮು ತಲುಪಿದ ನಾನು ಆಗ ಮಲಗಿ ಮತ್ತೆ ಎದ್ದದ್ದು ಬೆಳಗ್ಗೆ 8ಕ್ಕೆಯೇ. ಅಲ್ಲಿಂದ ಎದ್ದು ಕಟರಾ ಮುಖ್ಯ ವೃತ್ತದಲ್ಲಿರುವ ಹೋಟೆಲ್ ಒಂದರಲ್ಲಿ ಮಸಾಲೆ ದೋಸೆ ತಿಂದು ಒಂದು ಚಹಾ ಹೀರಿ ನಿಧಾನವಾಗಿ ಕಟರಾ ನಗರವೆನ್ನೆಲ್ಲ ಸುತ್ತಿ ನೋಡಿದೆ. ನಂತರ 10.30ರ ಸುಮಾರಿಗೆ ರೂಮಿಗೆ ಹಿಂದಿರುಗಿ 11 ಗಂಟೆಗೆ ಸರಿಯಾಗಿ ರೂಮ್ ಚೆಕ್ಔಟ್ ಮಾಡಿ 1 ಗಂಟೆಗೆ ನನಗೆ ಅಮೃತಸರಕ್ಕೆ ಹೊರಡಲು ಇದ್ದ ಬಸ್ಸಿನ ಕಡೆಗೆ ಹೆಜ್ಜೆ ಹಾಕಿದೆ. ಇದು ನನ್ನ ಮೊದಲನೇ ಜಮ್ಮು ಕಾಶ್ಮೀರ ಪ್ರವಾಸವಾಗಿ ಅವಿಸ್ಮರಣೀಯವಾಯಿತು.


ಕಟರಾದಿಂದ ಬಾಣಗಂಗಾಗೆ ಸಾಗುವ ೧.೫ ಕಿಲೋ ಮೀಟರ್ ಮಾರ್ಗದ ಒಂದು ಭಾಗ
ತ್ರಿಕೂಟ ಪರ್ವತ ಹತ್ತುವತ್ತ

ಬಾಣಗಂಗಾದತ್ತ ಜನ ಸಮೂಹ

ಮಾತಾ ವೈಷ್ಣೋದೇವಿ
ರಾತ್ರಿಯ ಸಮಯದಲ್ಲಿ ಕಟರಾದಿಂದ ತ್ರಿಕೂಟ ಪರ್ವತ 

25 ಸೆಪ್ಟೆಂಬರ್ 2018ರ ಬೆಳಗಿನ 7 ಗಂಟೆಗೆ ಬಾಣಗಂಗಾದಿಂದ ತ್ರಿಕೂಟ ಪರ್ವತ ಮಂಜಿನೊಡನೆ ಗೋಚರಿಸಿದ ರೀತಿ. 


-o-

ಮಂಗಳವಾರ, ಜನವರಿ 22, 2019

ನಮ್ಮನೂ ನಿಮ್ಮತ್ತ ಹರಸಿ



ನಡೆದಾಡಿದ ದೇವರೇ
ನಾವು ನಿಮ್ಮಂತೆ ದೈವವಾಗಲು
ಸಾಧ್ಯವಿಲ್ಲವೇನೋ,
ನಿಮ್ಮಾ ಮಹೋನ್ನತ
ಮನುಕುಲದ ಸೇವೆ
ನಮಗೊಲಿಯದೇನೋ!

ನಾವು ನಿಮ್ಮಂತೆ ಯೋಗಿಯಾಗಲು
ಆಗದೇನೋ,
ಭಾವ ಯೋಗಗಗಳ ಮೀರಿ
ಬದುಕುವ ಒಳ ಬೆಂಬಲ
ನಮಗಿರಲಾರದೇನೋ!

ನಾವು ನಿಮ್ಮಂತೆ ಸನ್ಯಾಸವನಪ್ಪಲು
ವಿಧಿ ಹಾಯಿಗೊಡದೇನೋ,
ನಮ್ಮ ಪಾಲಿನ
ವಿಧಿ ಬರಹ
ಬೇರೆಯದೇನೋ ಇರಬಹುದೇನೋ!

ನಾವು ನಿಮ್ಮಂತೆ ಜನಾನುರಾಗಿಯಾಗಲು
ಮನ ಬಿಡದೇನೋ,
ನಾನು ನನ್ನದೆಂಬ ಅಹಮಿಕೆ
ಉಕ್ಕಿ ಹರಿದು ಇಲ್ಲೊಂದು
ಸ್ವಾರ್ಥ ಸಮ್ಮಿಳಿಸಬಹುದೇನೋ!

ಇಲ್ಲಿ ನಿಮ್ಮ ದಾರಿಯಲರಿದು
ನೀವೇರಿದ ಕಡಲನೇರಿ
ಹೋಗಿಬಿಡಬಹುದೇನೋ,
ಆದರೆ ನಾವು ನೀವಾಗಲು
ಇಹವೊಪ್ಪದೇನೋ !

ನಮ್ಮ ಬೇಡುವ ಕೈಯದು
ಭಿಕ್ಷಾಪಾತ್ರೆಯಾಗಬಹುದೇನೋ,
ಆದರೆ ನಿಮ್ಮಂತೆ
ಲಕ್ಷ ಜನಗಳ ಪೊರೆವ
ಅಕ್ಷಯ ಜೋಳಿಗೆಯಾಗದೇನೋ!

ನೀವಾಗಿದ್ದು ನಾವಾಗೇವೇನೋ,
ನಿಮ್ಮ ಗೌರವ, ನಿಮ್ಮ
ಭಾವ, ನಿಮ್ಮ ಭಕ್ತಿಯರಿವು
ನಮ್ಮ ಹೃದಯವರಿತು
ನಿಮ್ಮ ಪಾದಕೆ ಅಡ್ಡಬೀಳಬಹುದೇನೋ!

ನೀವಣಿದ ದಾರಿಯಲಿ
ಕೆಲ ದೂರವನಾಯ್ವ
ಬಲವ ಕರುಣಿಸಿ
ನಮ್ಮನೂ ಶ್ರೀ ಶ್ರೀಯಾಗಿಸಿ
ಪೂಜ್ಯ ಶ್ರೀ ಗುರುದೇವ.

ಅಂದು ನೀವಿರಿಸಿದ ಹೆಜ್ಜೆ
ಇಂದು ಭೋದಿಯ
ವೃಕ್ಷವಾಗಿದೆ.
ನಿಮ್ಮ ಕರುಣೆಯ ದೃಷ್ಟಿಯಿತ್ತ
ಬೀರಿ ನಮ್ಮನೂ
ನಿಮ್ಮತ್ತ ಹರಸಿ.

ಶನಿವಾರ, ಜನವರಿ 5, 2019

ನಿನ್ನ ಗೌರವಕೆ ಭಾಜನರಲ್ಲವೋ ಅಣ್ಣ


ಕಳಬೇಡವೆಂದೆ, ಕಳವಿಗಿಳಿದೆವು.
ಕೊಲಬೇಡವೆಂದೆ, ಅನ್ಯಕೆ ಮನಸೋತು
ಬದುಕಿದ್ದು ಸತ್ತಂತಿರುವದು ನಮ್ಮ ಕೊಲೆಯಾಗಿದೆ.
ಹುಸಿಯನಾಡದಿರೆಂದೆ,
ಹುಸಿಯೆ ಬದುಕ ಸಾರ ಸರ್ವಸ್ವವಾಗಿಸಿದ್ದೇವೆ.
ಮುನಿಯಬೇಡಿರೆಂದೆ,
ಅದೇಕೋ ಅಪಥ್ಯವಾಗಿಹೋಯ್ತು
ಮುನಿಸು ನವರಸಗಳಿಗೊಂದಧಿಕವಾಗಿ ಆಧುನಿಕ
ರಸವತ್ತತೆಯಲ್ಲಿ ಮೇಳೈಸಿದ್ದೇವೆ.
ಅನ್ಯರ ಕೂಡ ಅಸಹ್ಯವಂತೂ ಅನೂಚಾನವಾಗಿ
ನೀನಿದ್ದ ಕಾಲದಿಂದಲೂ ಬಿಡದೆ ಬಂದಿದೆ.
ತನ್ನ ಬಣ್ಣಿಸುವುದು, ಇದಿರ ಹಳಿಯುವುದು
ಈ ದಿನಮಾನದ ದೈನಿಕ ವ್ಯವಹಾರ ಚತುರತೆಗಳಲ್ಲೊಂದಾಗಿದೆ.
ಇನ್ನುಳಿದಂತೆ ಚರಿತ್ರೆ ಶುದ್ಧಿಗಾಗಿ
ಅಂತರಂಗ ಬಹಿರಂಗಗಳೇ ಇಲ್ಲವೆಂದು ಪ್ರವರ್ತಿಸುವ ಕೆಲವು ಪ್ರವರ್ತಕರು
ಗುಟ್ಟಾಗಿ ಅಂತರಂಗಗಳ ಮೇಲಾಟದ ಗುಲಾಮರಾಗಿದ್ದಾರೆ.

ನೀನಿತ್ತ ಧರ್ಮರಾಜ್ಯವಿಂದು
ತಪ್ಪಿನ ಗ್ರಹಿಕೆಗಳೊಳಗೆ ನಲುಗಿದೆ.
ಜ್ಞಾನಿಗಳ ಚಾವಡಿಯೆಂದೆಂಬ ಹರಟುಗಾರರ
ಕೂಟಗಳು ನಿನ್ನ ಬರಸೆಳೆದು ಸಿದ್ಧಾಂತವೊಂದಕೆ
ಬಿಗಿಯುವ ಸನ್ನಾಹದಲ್ಲಿದ್ದರೆ,
ಅಂದು ನಿನ್ನ ನಿಲುವೇನು
ನಿನ್ನ ಬಿಗುವೇನು? ಎಲ್ಲವನು
ಇಂದಿಲ್ಲಿ ಕೆದಕಲು ಹೊರಟಿದ್ದಾರೆ.

ಹಾಗೆಂದೇನು ನಿನ್ನ ಮರೆತಿಲ್ಲ.
ಜಾತಿ ಗೊಡವೆಯನೆರೆಯುವ ಮನಸ್ಸಿದ್ದವರು
ನಿನ್ನ ಭಾವಿಸಿಕೊಂಬಿದ್ದಾರೆ.
ಆಡಳಿತೆಯ ಮೇಲಾಟಕ್ಕೆ ನೀನಾಹಾರವಾಗಿದ್ದೀಯೆ,
ಧರ್ಮ ಕ್ರಾಂತಿಯನೆಬ್ಬಿಸ
ಹೊರಟವರಿಗೆ ನೀನಾಯುಧವಾಗಿದ್ದೀಯೆ.
ಮಡಿ ಮೈಲಿಗೆಗಳಿಗೆ ನೀ ನಾಂದಿಗಾರನಾಗಿದ್ದೀಯೆ
ನಿನ್ನ ನಿಲುವೇನೇನಲ್ಲವೋ ಅವೆಲ್ಲವೂ ನೀನಾಗಿದ್ದೀಯೆ.

ನಿನ್ನವರು ನಿನ್ನ ಮೆರೆಸಿದ ರೀತಿಯಿದು
ನಿನ್ನವರು ಬಾಳುತ್ತಿರುವ ನೀತಿಯಿದು
ಆ ರೀತಿ ನೀತಿಯ ಕಂಡರೆ
ಶಾಂತಿ ಮೂರ್ತಿ ನೀನು ಕ್ರುದ್ಧನಾಗುವಿಯೇನೋ
ನೀನು ಅರೆಕ್ಷಣ ಅರೆಗಾವಿಲನಾಗುವಿಯೇನೋ
ಜನರೊಳಗೆ ಬೆರೆತು ಅಲ್ಲೇ ಅವರ ಅಜ್ಞಾನ
ಅರುಹಿದವನು ನೀನು, ಅವರಿಗಾಗಿ ಗಡಿಪಾರು,
ನಿಂದೆ, ಧರ್ಮ ದ್ರೋಹಿ ಎಂಬೆಲ್ಲ ಪಟ್ಟಗಳನ್ನು
ಹೊತ್ತುಕೊಂಡವನು ನೀನು.
ಅಣ್ಣ, ನಿನ್ನನ್ನು ದೇವರಾಗಿಸಿದ್ದಾರೆ ಇಲ್ಲಿ
ಆದರೂ ಅವರ ಮನದೊಳಗೆ ನಿನ್ನನೊಂದು
ಜಾತಿಗೆಸೆದು ವಿಂಗಡಿಸಿದ್ದಾರೆ, ಅದೇನೇ ಆಗಲಿ
ನಿನ್ನ ಗೌರವಕೆ ನಾವು ಭಾಜನರಲ್ಲವೋ ಅಣ್ಣ.
ಕ್ಷಮಿಸಿ ಬಿಡು ಅಣ್ಣ ಬಸವಣ್ಣ.

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...