ಭಾನುವಾರ, ಫೆಬ್ರವರಿ 10, 2019

ಮಾತಾ ವೈಷ್ಣೋದೇವಿ ಯಾತ್ರೆ

ಭಾರತ ದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ವೈಷ್ಣೋದೇವಿ. ಭಾರತದ ಮೊದಲ ಹತ್ತು ಶ್ರೀಮಂತ ದೇಗುಲಗಳಲ್ಲಿ ಒಂದಾದ ವೈಷ್ಣೋದೇವಿಗೆ ವಿಶೇಷವಾಗಿ ದೇವಾಲಯವೇ ಇಲ್ಲ ಹಾಗು ಅದಕ್ಕೆಂತಲೇ ವಿಗ್ರಹವೂ ಇಲ್ಲ. ವೈಷ್ಣೋದೇವಿ ಇರುವುದು ಗುಹಾಲಯದಲ್ಲಿ ಹಾಗು ಪೂಜೆ ಸಲ್ಲಿಸಲಾಗುವುದು  ಒಂದು ಕಲ್ಲಿನಲ್ಲಿ ಉಂಟಾದ 3 ಉಬ್ಬುಗಳಿಗೆ. ರಾಕ್ಷಸರ ಸಂಹಾರಾನಂತರ ಮಹಾದೇವಿ ದುರ್ಗೆಯು ಈ ಕಲ್ಲುಗಳ ಮೂಲಕ ಅಂತರ್ಧಾನಳಾದಳು ಎಂಬುದು ಇಲ್ಲಿನ ಪ್ರತೀತಿ.. ಈ ಮೂರು ಉಬ್ಬುಗಳನ್ನು ಮಹಾ ಕಾಳಿ, ಮಹಾ ಲಕ್ಷ್ಮಿ, ಸರಸ್ವತಿ ಎಂದು ಭಕ್ತರು ಅಪಾರ ನಂಬಿಕೆ ಇರಿಸಿಕೊಂಡಿದ್ದಾರೆ. ಭೂಲೋಕದಲ್ಲಿ ತೀವ್ರಗೊಂಡಿದ್ದ ಅಸುರರ ಉಪಟಳಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ದೇವಾನು ದೇವತೆಗಳೆಲ್ಲ ಕೂಡಿ ತಮ್ಮ ಶಕ್ತಿಯನ್ನು ದುರ್ಗೆಗೆ ಧಾರೆಯೆರೆದು ಭುವಿಗೆ ಕಳುಹಿಸಿದರು, ಹೀಗೆ ಭುವಿಗೆ ಬಂದ ದುರ್ಗೆಯು ಕಾಶ್ಮೀರ ಪ್ರಾಂತದ ತ್ರಿಕೂಟ ಪರ್ವತದ ಗುಹೆಯಲ್ಲಿ ಅಡಗಿದ್ದ ರಾಕ್ಷಸರನ್ನು ನವರಾತ್ರಿಯ ಸಮಯದಲ್ಲಿ  ಸಂಹರಿಸಿದಳು ಎಂಬಂತಹ ಬಲವಾದ ನಂಬಿಕೆ ಇಲ್ಲಿನ ಭಕ್ತರದ್ದು.

ಈ ಕ್ಷೇತ್ರಕ್ಕೆ ದರ್ಶನ ನೀಡುವ ಭಕ್ತರಲ್ಲಿ ಉತ್ತರಪ್ರದೇಶ, ಬಿಹಾರ, ರಾಜಸ್ತಾನ, ಪಂಜಾಬ್, ಹರ್ಯಾಣ, ದೆಹಲಿ, ಮಧ್ಯಪ್ರದೇಶದ ಭಕ್ತರು ಹೆಚ್ಚಾಗಿದ್ದಾರೆ. ದಕ್ಷಿಣ ಭಾರತೀಯರು ತೀರಾ ಕಡಿಮೆ ಪ್ರಮಾಣದಲ್ಲಿರುವುದರಿಂದ ಇಲ್ಲಿಗೆ ಭೇಟಿಕೊಡುವ ದಕ್ಷಿಣ ಭಾರತೀಯರಿಗೆ ಅಲ್ಪ ಸ್ವಲ್ಪ ಹಿಂದಿ ಗೊತ್ತಿದ್ದರೆ ಉತ್ತಮ, ಇಲ್ಲದಿದ್ದರೂ ತೊಂದರೆಯಿಲ್ಲ. ಅಲ್ಪ ಸ್ವಲ್ಪ ಇಂಗ್ಲಿಷ್ ಭಾಷೆಯಲ್ಲಿಯೂ ವ್ಯವಹರಿಸಬಹುದು.

ಯಾತ್ರಿಕರಿಗೆ ಮೊದಲ್ನುಡಿ

ವೈಷ್ಣೋದೇವಿ ಆಲಯವು ಜಮ್ಮು ಕಾಶ್ಮೀರ ರಾಜ್ಯದಲ್ಲಿದ್ದು ಜಮ್ಮುವಿನಿಂದ 45 ಕಿಲೋ ಮೀಟರ್ ದೂರವಿದೆ. ಕಟರಾ ನಗರ ಒಂದರ್ಥದಲ್ಲಿ ವೈಷ್ಣೋದೇವಿ ಪರ್ವತಾರೋಹಣದ ಆರಂಭ ಬಿಂದು. ಇಲ್ಲಿಂದಲೇ ಪರ್ವತ ಏರುವರು ಆರೋಹಣಕ್ಕೆ ಸಜ್ಜಾಗಬೇಕು. ಜಮ್ಮುವಿನಿಂದ ಕಟರಾಗೆ ತಲುಪಲು ಬಸ್ ಗಳ ಸೇವೆ ಲಭ್ಯವಿದ್ದು ಗರಿಷ್ಠ ಸಂಖ್ಯೆಯ ವೈಷ್ಣೋದೇವಿ ಭಕ್ತರು ಜಮ್ಮು ಮಾರ್ಗವಾಗಿಯೇ ಕಟರಾ ತಲುಪುತ್ತಾರೆ. ಭಾರತದ ವಿವಿಧ ನಗರಗಳಿಂದ ಜಮ್ಮುವಿಗೆ ಬಸ್, ರೈಲು  ಹಾಗು ವಿಮಾನ ಸೇವೆ ಇರುವುದರಿಂದ ಈ ಮಾರ್ಗವನ್ನು ಬಹುತೇಕರು ಅನುಸರಿಸುತ್ತಾರೆ. ಅದರ ಹೊರತಾಗಿ ರೈಲಿನಲ್ಲಿ ಆಗಮಿಸುವರಿಗಾಗಿ ಕಟರಾ ನಗರದವರೆಗೂ ರೈಲು ಸೇವೆಯಿದ್ದು ಕಟರಾ ರೈಲು ನಿಲ್ದಾಣದ ಹೆಸರೂ ವೈಷ್ಣೋದೇವಿ ಎಂದೇ ಇದೆ. ವೈಷ್ಣೋದೇವಿ ರೈಲು ನಿಲ್ದಾಣದಿಂದ ಕಟರಾ 1 ಕಿಲೋಮೀಟರ್ ದೂರವಿದೆ.

ಕಟರಾ ದಲ್ಲಿ ವೈಷ್ಣೋದೇವಿ ಆಡಳಿತ ಮಂಡಳಿಯ ರೂಮುಗಳೇ ಲಭ್ಯವಿದ್ದು ಆನ್ಲೈನ್ ನಲ್ಲಿಯೂ ಬುಕ್ ಮಾಡಲು ಅವಕಾಶವಿದೆ. ಅಮಾವಾಸ್ಯೆ, ನವರಾತ್ರಿ, ವಾರಾಂತ್ಯಗಳಂತಹ ತೀವ್ರ ಜನಜಂಗುಳಿಯಿರುವ ಸಮಯಗಳಲ್ಲಿ ಆಡಳಿತ ಮಂಡಳಿಯ ರೂಮುಗಳು ಸಿಗುವುದು ಕಷ್ಟ ಸಾಧ್ಯವಾಗಬಹುದು. ಅದಕ್ಕಾಗಿ ಕಟರಾದಲ್ಲಿ ಹಲವಾರು ಖಾಸಗಿ ಲಾಡ್ಜ್ ಗಳು ಲಭ್ಯವಿವೆ. ಹೆಚ್ಚಿನ ಲಗೇಜ್ ಒಯ್ಯುವವರು ತಮ್ಮ ಲಗೇಜ್ ಅನ್ನು ಕಟರಾದಲ್ಲಿಯೇ ಇರಿಸಿ ಅತಿ  ಮುಖ್ಯವೆನಿಸುವುಗಳನ್ನು ಮಾತ್ರ ಪರ್ವತಾರೋಹಣ ಸಮಯದಲ್ಲಿ ತಮ್ಮೊಂದಿಗೆ ಇರಿಸಿಕೊಳ್ಳುವುದು ಉತ್ತಮ. ಮೊಬೈಲ್ ಫೋನುಗಳನ್ನು ಒಯ್ಯಲು ಯಾವುದೇ ಆತಂಕವಿಲ್ಲ. ಪವರ್ ಬ್ಯಾಂಕ್ ಒಯ್ಯುವುದು ಉತ್ತಮವಲ್ಲ. ಎಲ್ಲ ಕಡೆಯೂ ಮೊಬೈಲ್ ಬಳಸಲು ಅವಕಾಶವಿದ್ದು ವೈಷ್ಣೋದೇವಿ ಆಲಯದಲ್ಲಿ ಮಾತ್ರ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡುವಂತೆ ಸೂಚಿಸಲಾಗುತ್ತದೆ. ಜಮ್ಮು ಕಾಶ್ಮೀರ ರಾಜ್ಯದ್ದಲ್ಲದ ಬೇರೆ ಯಾವ ನೆಟ್ವರ್ಕ್ ಗಳು ಕಟರಾದಲ್ಲಿ ಸಿಗುವುದಿಲ್ಲ. ಹಾಗಾಗಿಯೇ ತುರ್ತಾಗಿರುವರು ಲ್ಯಾಂಡ್ಲೈನ್ ಸೇವೆಗಳನ್ನು ಬಳಸುತ್ತಾರೆ, ಇಲ್ಲವಾದರೆ ಜಮ್ಮು ಕಾಶ್ಮೀರದ್ದೇ ಸಿಮ್ ಕಾರ್ಡ್ ಖರೀದಿಸಿ ಬಳಸುತ್ತಾರೆ.

ಕಟರಾದಲ್ಲಿ ಇಳಿದುಕೊಳ್ಳುವ ಯಾತ್ರಿಕರು ಅಲ್ಲಿಯೇ ಹಿಡಿದ ರೂಮ್ ನಲ್ಲಿಯೇ ಸ್ನಾನ ಶೌಚ ಕ್ರಿಯೆಗಳನ್ನು ಮುಗಿಸಿಕೊಳ್ಳುವುದು ಉತ್ತಮ, ಯಾತ್ರೆಯ ಸಮಯದಲ್ಲಿ ಬಾಣಗಂಗಾ ಹಾಗು ವೈಷ್ಣೋದೇವಿ ಭವನದ ಬಳಿ ಸ್ನಾನಘಟ್ಟಗಳಿದ್ದರೂ ಅಲ್ಲಿ ಅತೀವ ಜನಸಂದಣಿಯಿರುತ್ತದೆ.

ವೈಷ್ಣೋದೇವಿ ದೇವಾಲಯಕ್ಕೆ ಭೇಟಿ ಕೊಡುವ ಎಲ್ಲರೂ ಕಟರಾ ದಲ್ಲಿರುವ ಪರ್ಚಿ ಕೌಂಟರ್ ನಿಂದ ಚೀಟಿ ಪಡೆದುಕೊಂಡೇ ತೆರಳಬೇಕು. ಕಟರಾದಲ್ಲಿ ಎರಡು ಪ್ರಮುಖ ಬಸ್ ನಿಲ್ದಾಣಗಳಿದ್ದು ಆ ಎರಡೂ ನಿಲ್ದಾಣಗಳಿಗೆ ಹೊಂದಿಕೊಂಡಂತೆ ಪರ್ಚಿ ಕೌಂಟರ್ ಅನ್ನು ತೆರೆಯಲಾಗಿದೆ. ಕಟರಾ ಮುಖ್ಯ ವೃತ್ತದ ಬಳಿ ಒಂದು ಪರ್ಚಿ ಕೌಂಟರ್ ಇದ್ದರೆ, ಅಲ್ಲಿಂದ ಅರ್ಧ ಕಿಲೋಮೀಟರು ದೂರವಿರುವ ಖಾಸಗಿ ಬಸ್ ನಿಲ್ದಾಣದ ಬಳಿ ಪರ್ಚಿ ಕೌಂಟರ್ - 2 ಇದೆ.ಈ ಕೌಂಟರ್ ಗಳಲ್ಲಿ  ಪಡೆಯುವ ಚೀಟಿಗಳಿಗೆ ಯಾವುದೇ ಹಣವಿಲ್ಲದೆ ಉಚಿತವಾಗಿ ಪಡೆಯಬಹುದು.

ಪರ್ಚಿ ಕೌಂಟರ್ ನಲ್ಲಿ ಪ್ರತೀ ಯಾತ್ರಿಕರಿಗೂ ವಿತರಿಸುವ ಚೀಟಿ
ಕಟರಾದ ಖಾಸಗಿ ಬಸ್ ನಿಲ್ದಾಣದಲ್ಲಿರುವ ಪರ್ಚಿ  ಕೌಂಟರ್ - 2

ಚೀಟಿ ಪಡೆಯದ ಯಾತ್ರಿಕರನ್ನು ಬಾಣಗಂಗಾ ಚೆಕ್ ಪೋಸ್ಟ್ ನ ಪೊಲೀಸ್ ಚೌಕಿಯಲ್ಲಿಯೇ ತಡೆ ಹಿಡಿಯಲಾಗುತ್ತದೆ. ಬಾಣಗಂಗಾ ಚೆಕ್ ಪೋಸ್ಟ್ ದಾಟುವ ಸಮಯದಲ್ಲಿ ಯಾತ್ರಿಕರು ಯಾವುದೇ ರೀತಿಯ ಗುಟ್ಕಾ, ಪಾನ್ ಮಸಾಲಾ, ಬೀಡಿ, ಸಿಗರೇಟುಗಳನ್ನು ಒಯ್ಯುವಂತಿಲ್ಲ. ಹಾಗೇನಾದರು ಒಯ್ದರೆ ಬಾಣಗಂಗಾ ಚೆಕ್ ಪೋಸ್ಟ್ ನ ಪೊಲೀಸ್ ಚೌಕಿಯಲ್ಲಿಯೇ ಅವುಗಳೆಲ್ಲವನ್ನೂ ಪೊಲೀಸರು ವಶಕ್ಕೆ ಪಡೆಯುತ್ತಾರೆ.

ಕೌಂಟರ್ ನಲ್ಲಿ ಚೀಟಿ ಪಡೆದವರು ಹೆಲಿಕ್ಯಾಪ್ಟರ್ ಮಾರ್ಗವಾಗಿ ತೆರಳಬಯಸುವರು(ಹೆಲಿಕ್ಯಾಪ್ಟರ್ ಗಾಗಿ  ತಿಂಗಳ ಮೊದಲೇ ಆನ್ಲೈನ್ ನಲ್ಲಿ ಬುಕ್ ಮಾಡಿರಬೇಕು) ಹೆಲಿಪ್ಯಾಡ್ ನತ್ತ ಟ್ಯಾಕ್ಸಿ ಹಿಡಿದು ಸಾಗಬಹುದು. ಕಟರಾ ಮುಖ್ಯ ವೃತ್ತದಲ್ಲಿಯೇ ಟ್ಯಾಕ್ಸಿ ಸೌಲಭ್ಯವಿದ್ದು ಅಲ್ಲಿಂದ ಯಾತ್ರಿಕರು ಹೆಲಿಪ್ಯಾಡ್ ಗೆ ಧಾವಿಸಬಹುದು. ಅದು ಅತ್ಯಂತ ಸುಲಭವಾದ ಮಾರ್ಗವಾಗಿದ್ದು ಕಟರಾ ಹೆಲಿಪ್ಯಾಡ್ ನಿಂದ ಹೊರಟ ಹೆಲಿಕ್ಯಾಪ್ಟರ್ ನೇರವಾಗಿ ಸಂಜಿಛಾತ್ ಹೆಲಿಪ್ಯಾಡ್ ತಲುಪುತ್ತದೆ. ಅಲ್ಲಿಂದ ವೈಷ್ಣೋದೇವಿ ಆಲಯ(ಸ್ಥಳೀಯರು ಇದನ್ನು ಭವನ ಎಂದು ಕರೆಯುತ್ತಾರೆ ಹಾಗು ಅಲ್ಲಿರುವ ಎಲ್ಲಾ ಮಾರ್ಗಸೂಚಿಗಳಲ್ಲಿಯೂ ದೇವಾಲಯವನ್ನು 'ಭವನ' ಎಂದೇ ನಮೂದಿಸಲಾಗಿದೆ.) ಕೇವಲ 3 ಕಿಲೋಮೀಟರು ಮಾರ್ಗವಾಗಿದ್ದು ಸಂಜಿಛಾತ್ ನಿಂದ ಭವನದ ವರೆವಿಗೂ ಎಲೆಕ್ಟ್ರಿಕ್ ವಾಹನಗಳು, ಕುದುರೆಗಳು,  ಪಲ್ಲಕ್ಕಿಗಳು ಲಭ್ಯವಿವೆ.
ಕಟರಾ ಮುಖ್ಯ ವೃತ್ತ. 
ಇಲ್ಲಿಂದಲೇ ಬಾಣಗಂಗಾ ಚೆಕ್ ಪೋಸ್ಟ್ ಗೆ ನೇರ ದಾರಿಯಿದೆ.

ಬಾಣಗಂಗಾ ಚೆಕ್ ಪೋಸ್ಟ್ ಸ್ವಾಗತ ಕಮಾನು
ಇನ್ನು ಪರ್ಚಿ ಕೌಂಟರ್ ನಲ್ಲಿ ಚೀಟಿ ಪಡೆದ ಹೆಲಿಕ್ಯಾಪ್ಟರ್ ಸೇವೆ ಬಳಸದಿರುವ ಯಾತ್ರಿಕರು ಬಾಣಗಂಗಾ ಮಾರ್ಗವಾಗಿ ಪರ್ವತಾರೋಹಣಕ್ಕೆ ಸಜ್ಜಾಗಬೇಕು. ಬಾಣಗಂಗಾ ಚೆಕ್ ಪೋಸ್ಟ್ ಕಟರಾ ಮುಖ್ಯ ವೃತ್ತದಿಂದ 1.5 ಕಿಲೋ ಮೀಟರ್ ದೂರದ ಮಾರ್ಗವಾಗಿದ್ದು ಅಲ್ಲಿಗೆ ಆಟೋಗಳ ಸೌಲಭ್ಯವು ಇದೆ.ಬಾಣಗಂಗಾ ಚೆಕ್ ಪೋಸ್ಟ್ ನಲ್ಲಿ ಭದ್ರತಾ ತಪಾಸಣೆ ಇರುತ್ತದೆ. ಇಲ್ಲಿ ಯಾತ್ರೆ ಮಾಡುವ ಎಲ್ಲರೂ 'जय माता दी' ಎಂದು ಬರೆದಿರುವ ಕೆಂಪು ವಸ್ತ್ರವನ್ನು ತಲೆಗೆ ಕಟ್ಟಿಕೊಂಡು ಸಾಗುತ್ತಾರೆ. ಇದು ದೇವಸ್ಥಾನದ ಅಧೀಕೃತ ನಿಯಮವಲ್ಲ, ಬದಲಾಗಿ ಭಕ್ತರ ಭಕ್ತಿಯ ವಿಧ ಅಷ್ಟೇ.

ಪರ್ವತಾರೋಹಣ ಸಮಯದಲ್ಲಿ ತಲೆಗೆ ಜೈ ಮಾತಾ ದಿ ಘೋಷಣೆಯ ಪಟ್ಟಿ


ಬಾಣಗಂಗಾ ಚೆಕ್ ಪೋಸ್ಟ್ ನಿಂದ ಕುದುರೆ, ಪಲ್ಲಕ್ಕಿ  ಗಳು ಲಭ್ಯವಿದ್ದು ವಿವಿಧ ರೀತಿಯ ದರ ಪಟ್ಟಿಗಳನ್ನು ಹೊಂದಿವೆ. ಕುದುರೆ, ಪಲ್ಲಕ್ಕಿಯಲ್ಲಿ ತೆರಳುವರು ಅಧಕುವಾರಿ ವರೆಗೂ ಅಷ್ಟೇ ತಲುಪಲು ಸಾಧ್ಯ.ಅಧಕುವಾರಿ ಬಾಣಗಂಗಾದಿಂದ ಭವನದ ವರೆಗಿನ ಹಾದಿಯ ಸರಿಯಾಗಿ ಅರ್ಧ ಭಾಗದಷ್ಟು. ಅಲ್ಲಿಂದ ಮುಂದೆ ಎಲೆಕ್ಟ್ರಿಕ್ ವಾಹನಗಳ ಸೌಲಭ್ಯವಿದ್ದು ಅದಕ್ಕೆಂತಲೇ ಅಧಕುವಾರಿಯಲ್ಲಿ  ಕೌಂಟರ್ ಒಂದನ್ನು ತೆರೆಯಲಾಗಿದೆ. ಆಸಕ್ತರು ಅಲ್ಲಿಂದ ಎಲೆಕ್ಟ್ರಿಕ್ ವಾಹನದಲ್ಲಿ ತೆರಳಬಹುದು. ವೈಷ್ಣೋದೇವಿ ತ್ರಿಕೂಟ ಪರ್ವತಾರೋಹಣ ಸಮಯದಲ್ಲಿ ದಕ್ಷಿಣ ಭಾರತೀಯ ಖಾದ್ಯಗಳು ಸಿಗುವುದು ವಿರಳ. ಅಲ್ಲಲ್ಲಿ ಇಡ್ಲಿ ಅಥವಾ ದೋಸೆ ಹೋಟೆಲ್ ಗಳು ಎದುರಾಗುತ್ತವೆ. ಇಲ್ಲವೇ ಅನ್ನ- ರಾಜ್ಮಾ ಕೂಟು ದೊರೆಯುತ್ತದೆ. ಮಾರ್ಗದುದ್ದಕ್ಕೂ ಸೌತೆಕಾಯಿ, ನಿಂಬೆಹಣ್ಣಿನ ಷರಬತ್ತು, ಪಾನಕಗಳ ಅಂಗಡಿಗಳು ಹೇರಳವಾಗಿವೆ. ಸುಸ್ತು ಅಥವಾ ಇನ್ನಿತರ ಆರೋಗ್ಯ ಸಂಬಂಧಿ ತೊಂದರೆಗಳಿದ್ದವರು ಕಟರಾ ದಿಂದಲೇ ಬೇಕಾದ ಔಷಧಗಳನ್ನು  ಖರೀದಿಸುವುದು ಉತ್ತಮ. ಬಾಣಗಂಗಾ ಚೆಕ್ ಪೋಸ್ಟ್ ನಿಂದ ವೈಷ್ಣೋದೇವಿ ಆಲಯದ ವರೆವಿಗೂ ಬಾಣಗಂಗಾ, ಅಧಕುವಾರಿ, ಸಂಜಿ ಛಾತ್, ಭವನ ಈ ನಾಲ್ಕು ಕಡೆ ವೈದ್ಯಕೀಯ ಸೇವೆಗಳು ಲಭ್ಯವಿದ್ದು ಅಲ್ಲಿ ನಮಗೆ ಬೇಕಾದ ಔಷಧಗಳು ದೊರೆಯುವುದು ಖಾತ್ರಿಯಿಲ್ಲದ ಕಾರಣ ಔಷಧಗಳನ್ನು ಕಟರಾದಿಂದಲೇ ಒಯ್ಯುವುದು ಉತ್ತಮ.

ಬಾಣಗಂಗಾದಿಂದ ಪರ್ವತಾರೋಹಣ ಆರಂಭವಾಗುತ್ತಿದ್ದಂತೆಯೇ ಕಡಿದಾದ ಮಾರ್ಗಗಳ ಮೂಲಕ ಹಾಯ್ದು ಅಧಕುವಾರಿ ತಲುಪಬೇಕು. ದಾರಿಯಲ್ಲಿ ಸಾಗುವಾಗ ಮಧ್ಯೆ ಮಧ್ಯೆ ಮೆಟ್ಟಿಲುಗಳ ಸೌಲಭ್ಯವೂ ಇದ್ದು ಶಕ್ತರು ಮೆಟ್ಟಿಲ  ಮೂಲಕವೂ ಏರಬಹುದು. ಇಲ್ಲದಿದ್ದರೆ ಕಡಿದಾದ ದಾರಿಯ ಮೂಲಕ ನಡೆದೇ ಸಾಗಬಹುದು. ಅಕ್ಕ ಪಕ್ಕದಲ್ಲಿ ಕುದುರೆ, ಪಲ್ಲಕ್ಕಿಗಳೂ ಸಾಗುತ್ತಿರುತ್ತವೆ.ಪರ್ವತ ಏರುವ ಮಾರ್ಗಮಧ್ಯೆ ಸುಸಜ್ಜಿತ ಶೌಚಾಲಯಗಳು, ಕುಡಿಯುವ ನೀರಿನ ವ್ಯವಸ್ಥೆಗಳಿವೆ. ಬಿಸಿಲರಿ ನೀರಿನ ಬಾಟಲಿಗಳನ್ನೂ ಮಾರುವ ಅಂಗಡಿಗಳೂ ಸಾಕಷ್ಟಿವೆ. ನಡೆದೇ ಸಾಗುವ ಯಾತ್ರಿಕರಿಗೆ ಕುಳಿತು ಸುಧಾರಿಸಿಕೊಳ್ಳಲು ಸಾಕಷ್ಟು ನೆರಳಿನ ಕುಟೀರಗಳನ್ನು ವ್ಯವಸ್ಥೆ ಮಾಡಲಾಗಿದೆ.  ವೈಷ್ಣೋದೇವಿ ಪರ್ವತದಲ್ಲಿ ಹಲವಾರು ಕಡೆಗಳಲ್ಲಿ ಭೂಮಿ, ಕಲ್ಲು ಬಂಡೆಗಳು ಕುಸಿಯುವ ಪ್ರದೇಶಗಳನ್ನು ಗುರುತು ಮಾಡಲಾಗಿದೆ. ಹಾಗು ಅದನ್ನು ಸೂಚಿಸುವ ಬೋರ್ಡುಗಳನ್ನೂ ಅಲ್ಲಿ ಹಾಕಲಾಗಿದೆ. ಯಾತ್ರಿಕರು ಇಂತಹ ಸ್ಥಳಗಳಲ್ಲಿ ಕುಳಿತುಕೊಳ್ಳುವುದು ಅಥವಾ ನಿಂತುಕೊಳ್ಳುವುದು ಅಪಾಯಕಾರಿಯಾಗಿರುತ್ತದೆ. ಅಂತಹ ಸ್ಥಳದಲ್ಲಿ ವೇಗವಾಗಿ ಸಾಗಬೇಕೆಂದು ಘೋಷಣೆಗಳನ್ನು ಹೊರಡಿಸಲಾಗುತ್ತಿರುತ್ತದೆ.

ಬಾಣಗಂಗಾದಿಂದ ಹಿಡಿದು ಭವನದವರೆವಿಗೂ ಸಾಗುವ ಮಾರ್ಗದಲ್ಲಿ ನೆರಳಿನ ಹೊದಿಕೆಯನ್ನು ಕಲ್ಪಿಸಲಾಗಿದೆ. ಮಳೆ ಅಥವಾ ಬಿಸಿಲಿನ ಸಂಧರ್ಭಗಳಲ್ಲಿ ಯಾವುದೇ ತೊಂದರೆಯಿಲ್ಲ. ಗುಂಪಿನಲ್ಲಿ ಹೊರಡುತ್ತಿರುವ ಯಾತ್ರಿಕರು ಕೊನೆಯವರವಿಗೂ ಗುಂಪಿನಲ್ಲಿಯೇ ಇರುವುದು ಉತ್ತಮ. ಪರ್ವತದ ಮೇಲೆ ನೆಟ್ವರ್ಕ್ ಸಮಸ್ಯೆಯಿರುವ ಕಾರಣ ಅಕಸ್ಮಾತ್ ಗುಂಪಿನಿಂದ ಯಾರಾದರೂ ಬೇರುಳಿದರೆ ಅವರನ್ನು ಸಂಪರ್ಕಿಸಲು ಸಾಧ್ಯವಾಗುವುದಿಲ್ಲ. ಅಂತಹ ಸಂಧರ್ಭಗಳಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅನೌನ್ಸ್ಮೆಂಟ್ ಕೌಂಟರ್ ಗೆ ಹೋಗಿ ಅಲ್ಲಿ ಮಾಹಿತಿ ನೀಡಬೇಕು. ದೇವಸ್ಥಾನದ ಮಂಡಳಿ ತಪ್ಪಿಸಿಕೊಂಡ ಸದಸ್ಯರ ಮಾಹಿತಿಯನ್ನು ಮೈಕ್ ನಲ್ಲಿ ಘೋಷಣೆಯನ್ನಾಗಿ ಹೊರಡಿಸುತ್ತದೆ. ಇಂತಹ ಅನೌನ್ಸ್ಮೆಂಟ್ ಕೌಂಟರ್ ಗಳು ಬಾಣಗಂಗಾ, ಅಧಕುವಾರಿ ಹಾಗು ಭವನ ಗಳಲ್ಲಿವೆ.

ಬಾಣಗಂಗಾದಿಂದ ಆರಂಭವಾಗುವ ಪರ್ವತದ ಆರೋಹಣ ಚರಣಪಾದುಕಾದ ಮಾರ್ಗವಾಗಿ ಅಧಕುವಾರಿಯ ಕಡೆಗೆ ಸಾಗುತ್ತದೆ. ಕುದುರೆ, ಪಲ್ಲಕ್ಕಿಗಳಲ್ಲಿ ಬರುವ ಯಾತ್ರಿಕರಿಗೆ ಅಧಕುವಾರಿಯೇ ಇಳಿಯುವ ಸ್ಥಳ. ಅಲ್ಲಿಂದ ಮುಂದೆ ಎಲೆಕ್ಟ್ರಿಕ್ ವಾಹನಗಳ ಸೌಲಭ್ಯ ಕಲ್ಪಿಸಲಾಗಿದೆ. ಹರಕೆ ಹೊತ್ತಂತಹವರು ಹಾಗೂ ಆಸಕ್ತರು ಸಂಪೂರ್ಣ ಪರ್ವತಾರೋಹಣವನ್ನು ಪಾದಯಾತ್ರೆ ಮೂಲಕವೇ ಪೂರೈಸುತ್ತಾರೆ. ಅಧಕುವಾರಿಗೆ ತಲುಪಿದ ನಂತರ ಅಲ್ಲಿನ ನಯನ ಮನೋಹರ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಎರಡೂ ಕಡೆಗಳಲ್ಲಿ ವ್ಯಾಪಿಸಿರುವ ಪರ್ವತ ಶ್ರೇಣಿಗಳು, ಕತ್ತೆತ್ತಿ ನೋಡಿದರೆ ಕಾಣುವ ವೈಷ್ಣೋದೇವಿಯೆಡೆಗಿನ ದಾರಿ, ಮುಂದೆ ಕಣ್ಣು ಹಾಯಿಸಿದರೆ ಕಾಣುವ ಕಟರಾ ನಗರ, ದೂರದಲ್ಲಿ ಗೋಚರವಾಗುವ ಸಿಂಧೂ ನದಿಯ ಉಪನದಿಗಳು ಮನಸ್ಸಿಗೆ ಹಬ್ಬವುಂಟುಮಾಡುತ್ತವೆ. ಅಧಕುವಾರಿಯಲ್ಲಿ ತಂಗುದಾಣವಿದ್ದು ಕುಳಿತುಕೊಳ್ಳಲು ವಿಶಾಲವಾದ ಸ್ಥಳ ಇದೆ. ಪರ್ವತದ ಮಧ್ಯಭಾಗವಾದ ಕಾರಣ ಅಲ್ಲಿ ಒಂದು ವ್ಯೂ ಪಾಯಿಂಟ್ ಅನ್ನು ನಿರ್ಮಾಣ ಮಾಡಲಾಗಿದೆ. ಕುಡಿಯುವ ನೀರು, ವೈದ್ಯಕೀಯ ಸೇವೆ, ಪೊಲೀಸ್ ಮಾಹಿತಿ ಕೇಂದ್ರ, ಭೋಜನಾಲಯಗಳ ವ್ಯವಸ್ಥೆ ಅಧಕುವಾರಿಯಲ್ಲಿದ್ದು ಯಾತ್ರಿಕರಿಗೆ ಹೇಳಿ ಮಾಡಿಸಿದಂತಿರುವ ತಂಗುದಾಣ.ಮುಂದೆ ಅಧಕುವಾರಿಯಿಂದ ಭವನದ ಕಡೆಗೆ ಎರಡು ಮಾರ್ಗಗಳಿವೆ. ಒಂದು ಅಧಕುವಾರಿಯಿಂದ ಎಡಬಾಗಕ್ಕೆ ಗುರುತು ಮಾಡಿರುವ ರಸ್ತೆ . ಇಲ್ಲಿನ ರಸ್ತೆ ಅತ್ಯಂತ ಸುಸಜ್ಜಿತವಾಗಿದ್ದು ಮೆಟ್ಟಿಲುಗಳಿಲ್ಲದೆ ಪ್ರಯಾಣಿಸಲು ಅನುಕೂಲಕರವಾಗಿದೆ. ಆದರೆ ಇದೇ ಮಾರ್ಗವಾಗಿ ಎಲೆಕ್ಟ್ರಿಕ್ ವಾಹನಗಳು ತೆರಳಲು ಅವಕಾಶ ಮಾಡಿಕೊಡಲಾಗಿದೆ ಹಾಗಾಗಿ ರಸ್ತೆಯ ಇಕ್ಕೆಲಗಳಲ್ಲಿ ಮಾತ್ರ ಸಾಗಬೇಕು. ಹಾಗು ಈ ಮಾರ್ಗದಲ್ಲಿ ಹೆಚ್ಚು ಭೂಕುಸಿತ ಉಂಟಾಗುವ, ಕಲ್ಲು ಬಂಡೆಗಳು ಆಯತಪ್ಪಿ ಬೀಳುವ ಪ್ರದೇಶಗಳನ್ನು ಗುರುತಿಸಲಾಗಿದೆ. ಅವಘಡಗಳು ಹೆಚ್ಚು ಇಲ್ಲಿ ಸಂಭವಿಸಿಲ್ಲವಾದರೂ ಈ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚು ಜಾಗರೂಕರಾಗಿರುವುದು ಉತ್ತಮ. ಅದು ಬಿಟ್ಟರೆ ಮತ್ತೊಂದು ದಾರಿ ಅಧಕುವಾರಿಯಿಂದ ಎಡಕ್ಕೆ ತಿರುಗದೆ ನೇರವಾಗಿ ಸಾಗುವುದು. ಈ ಮಾರ್ಗದಲ್ಲಿ ಅಲ್ಲಲ್ಲಿ ಮಾತ್ರ ನೆರಳಿನ ಹೊದಿಕೆ ಕಲ್ಪಿಸಲಾಗಿದೆ. ಇಲ್ಲಿ ಮೆಟ್ಟಿಲುಗಳನ್ನು ಏರಿಕೊಂಡು ಮಾತ್ರವೇ ಸಾಗಬಹುದಾದ ಪ್ರದೇಶಗಳಿದ್ದು ಶಕ್ತರು ಹಾಗು ಆಸಕ್ತರು ಈ ಮಾರ್ಗದಲ್ಲಿಯೂ ತೆರಳಬಹುದು. ಮೆಟ್ಟಿಲು ಹತ್ತುವ ಪ್ರದೇಶಗಳು ಎದುರಾದಾಗ ಅಲ್ಲಿ ಎಷ್ಟು ಮೆಟ್ಟಿಲುಗಳಿವೆ ಎಂಬ ಫಲಕವನ್ನು ಮೆಟ್ಟಿಲು ಹತ್ತುವರಿಗಾಗಿಯೇ ಅಳವಡಿಸಲಾಗಿದೆ. ಅವುಗಳ ಮಾಹಿತಿಯಿಂದ ಆಸಕ್ತರು ತಮ್ಮ ಶಕ್ತ್ಯಾನುಸಾರ ಮೆಟ್ಟಿಲುಗಳನ್ನು ಏರಬಹುದು, ಇಲ್ಲವಾದರೆ ಕಡಿದಾದ ರಸ್ತೆಗಳನ್ನು ಬಳಸಬಹುದು.ಅಧಕುವಾರಿಯಿಂದ ಭವನ 7 ಕಿಲೋಮೀಟರು ದೂರದ ಹಾದಿ.

ಅಧಕುವಾರಿಯಿಂದ ಭವನದ ಕಡೆಗೆ ಸಾಗುವ ಮಾರ್ಗದಲ್ಲಿ ಕೋತಿಗಳು ಅಸಂಖ್ಯವಾಗಿದ್ದು ಅಲ್ಲಿ ಎಚ್ಚರ ವಹಿಸುವುದು ಉತ್ತಮ. ಕೆಲವು ಸಮಯದಲ್ಲಿ ಕೋತಿಗಳಿಂದಲೂ ಕಲ್ಲು ಬಂಡೆಗಳು ಜಾರಿ ಯಾತ್ರಿಕರ ಪಥದ ಮೇಲೆ ಬೀಳುವ ಅಪಾಯವಿದ್ದೇ ಇರುತ್ತದೆ. ಅಧಕುವಾರಿ ದಾಟಿದ ನಂತರ ಪರ್ವತದ ಎತ್ತರದ ಭಾಗಕ್ಕೆ ಸಾಗುವುದರಿಂದ ಉಷ್ಣಾಂಶ ಕಡಿಮೆಯಾಗಿ ಶೀತಗಾಳಿಯ ಅನುಭವವಾಗುತ್ತದೆ. ಇನ್ನು ನವೆಂಬರ್-ಮಾರ್ಚ್ ನಡುವಿನ ಸಮಯದಲ್ಲಿ ಅಲ್ಲಿ ಹಿಮಪಾತವೇ ಆಗುತ್ತಿರುತ್ತದೆ. ಬೇಸಿಗೆಯ ದಿನಗಳಲ್ಲಿ ಅಷ್ಟೇನೂ ಶೀತ ವಾತಾವರಣವಿರದೆ ಅನುಕೂಲ ವಾತಾವರಣವಿರುತ್ತದೆ.

ಇಂತಹ ಹಾದಿಯನ್ನು 7 ಕಿಲೋಮೀಟರು ಕ್ರಮಿಸಿದರೆ ಅಲ್ಲಿ ಎದುರಾಗುತ್ತದೆ ವೈಷ್ಣೋದೇವಿ ಗುಹಾಲಯ. ಇದು ವಿಶೇಷವಾಗಿ ದೇವಾಲಯದಂತಹ ರಚನೆಗಳನ್ನೇನ್ನೂ ಹೊಂದಿಲ್ಲ. ಅಲ್ಲಿರುವ ಅಮೃತಶಿಲೆಯ ಗುಹೆಯೇ ವೈಷ್ಣೋದೇವಿಗೆ ಆಲಯ. ಇಲ್ಲಿ ಗೋಪುರ ರಚನೆಯಿಲ್ಲ, ಗಂಟಾನಾದವಿಲ್ಲ. ನಡೆಯುವ ವಿಶೇಷ ಪೂಜೆಗಳೆಲ್ಲ ಬೆಳಗಿನ ಜಾವದ ಸಮಯದಲ್ಲಿಯೇ ಮುಗಿದು ಹೋಗುವುದರಿಂದ ಯಾತ್ರಿಕರಿಗೆ ದರ್ಶನ ಅವಕಾಶ ಸಂಪೂರ್ಣ ಲಭ್ಯವಾಗುತ್ತದೆ. ಗುಹಾಲಯದ ಮುಂದೆ ಜನ ಸಂದಣಿ ಉಂಟಾಗುವುದರಿಂದ ಸೂಕ್ತ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿದೆ. ಇಲ್ಲಿ ಸರತಿ ಸಾಲಿನಲ್ಲಿ ಕೆಲವು ಕಾಲ ನಿಂತು ಕಾಯಬೇಕಾಗುತ್ತದೆ. ನವರಾತ್ರಿ, ಅಮಾವಾಸ್ಯೆಗಳಂತಹ ಸಂಧರ್ಭಗಳಲ್ಲಿ ಸರತಿಯ ಸಾಲು ಕಿಲೋಮೀಟರ್ ಗಟ್ಟಲೆ ಇರಲೂ ಬಹುದು. ವಾರಾಂತ್ಯಗಳೂ ಇದಕ್ಕೆ ಹೊರತಾಗಿಲ್ಲ. ಇತರೆ ದಿನಗಳಲ್ಲಿ ಸರತಿಯ ಸಾಲು  ಕಡಿಮೆಯೇ ಇರುತ್ತದೆ.

ಗುಹಾಲಯಕ್ಕೆ ಪ್ರವೇಶಿಸುವ ಮೊದಲು ಸ್ನಾನ ಮಾಡಲು ಆಸಕ್ತರಾದವರಿಗೆ ಭವನಕ್ಕೆ ಸಮೀಪದಲ್ಲಿಯೇ ಸ್ನಾನ ಘಟ್ಟವೊಂದನ್ನು ನಿರ್ಮಾಣ ಮಾಡಲಾಗಿದೆ. ಅಲ್ಲಿ ಸ್ನಾನ ಮಾಡಿಕೊಂಡು ಗುಹಾಲಯ ಪ್ರವೇಶಿಸಬಹುದು. ಅತೀ ಭಾರವಾದ ಲಗೇಜುಗಳನ್ನು ಆಲಯದ ಒಳಗೆ ತರಲು ಅವಕಾಶವಿಲ್ಲ ಹಾಗಾಗಿಯೇ ಭವನದ ಸಮೀಪದಲ್ಲಿಯೇ ಕ್ಲಾಕ್ ರೂಮುಗಳನ್ನು ನಿರ್ಮಾಣ ಮಾಡಲಾಗಿದೆ. ಅಲ್ಲಿ ಲಗೇಜುಗಳನ್ನು ಇರಿಸಿ ದರ್ಶನಕ್ಕೆ ಮುಂದಾಗಬೇಕು.

ಸುಮಾರು 10 ಮೀಟರ್ ಉದ್ದವಿರುವ ಗುಹೆಯ ಕೊನೆಯ ಭಾಗದಲ್ಲಿ ವೈಷ್ಣೋದೇವಿಯ ದರ್ಶನ ಲಭ್ಯವಾಗುತ್ತದೆ. ಇಡೀ ಪರ್ವತಾರೋಹಣದ ಪರಿಶ್ರಮ ಅಲ್ಲಿಗೆ ಸಾರ್ಥಕವಾದಂತಹ ಭಾವ ತಳೆಯುವ ಭಕ್ತರು 'ಜೈ ಮಾತಾ ದಿ' ಎಂಬ ಘೋಷಣೆಗಳನ್ನು ಕೂಗುತ್ತಾರೆ. ವೈಷ್ಣೋದೇವಿಯ ಮುಂದೆ ಆಸೀನರಾಗಿರುವ ಪುರೋಹಿತರು ತೀರ್ಥವನ್ನು ಎಲ್ಲ ಭಕ್ತರಿಗೂ ವಿತರಿಸುತ್ತಾರೆ ಹಾಗು ಎಲ್ಲರ ಹಣೆಗೂ ತಿಲಕ ಇಡುತ್ತಾರೆ. ಪ್ರತಿಯೊಬ್ಬ ಭಕ್ತನಿಗೂ ವೈಷ್ಣೋದೇವಿಯ ದರ್ಶನ ಭಾಗ್ಯ 5-10 ಸೆಕೆಂಡ್ ಗಳಷ್ಟು ಲಭ್ಯವಾಗುತ್ತದೆ. ವೈಷ್ಣೋದೇವಿ ಪಕ್ಕದಲ್ಲಿಯೇ ನದಿಯೊಂದು ಉಗಮವಾಗುತ್ತಿರುವ ಸ್ಥಳವಿದೆ.ವೈಷ್ಣೋದೇವಿಯ ಪಕ್ಕದಲ್ಲಿಯೇ 4-5 ಮೆಟ್ಟಿಲುಗಳನ್ನು ಇಳಿಯಬೇಕಾದ ಸ್ಥಳವಿದೆ, ಅಲ್ಲಿಯೇ ನದಿ ಉಗಮವಾಗಿ ಹರಿಯುತ್ತಿದೆ. ಆ ನದಿಯ ನೀರನ್ನು ತೀರ್ಥದಂತೆ ಭಾವಿಸಿ ಭಕ್ತರು ತಲೆಗೆ ಪ್ರೋಕ್ಷಿಸಿಕೊಳ್ಳುತ್ತಾರೆ. ಅಲ್ಲಿಂದ ನೇರವಾಗಿ 5 - 6 ಮೀಟರ್ ದೂರ ಸಾಗಿದರೆ ಗುಹಾಲಯದಿಂದ ಹೊರ ಬಂದುಬಿಟ್ಟಿರುತ್ತೇವೆ. ಅಲ್ಲಿಗೆ ವೈಷ್ಣೋದೇವಿ ಯಾತ್ರೆಯ ಬಹು ಮುಖ್ಯವಾದ ಘಟ್ಟ ಮುಗಿಯುತ್ತದೆ.ಭವನದ ಸುತ್ತಲೂ ಅನೇಕ ಧರ್ಮ ಛತ್ರಗಳೂ ಲಭ್ಯವಿದ್ದು ಅಲ್ಲಿ ಭಕ್ತರು ಉಳಿಯಲು ಅವಕಾಶ ಕಲ್ಪಿಸಲಾಗಿದೆ. ದೂರದೂರುಗಳಿಂದ ಬರುವ ರೈತಾಪಿ ವರ್ಗದವರು, ಖಾಸಗಿ ಲಾಡ್ಜ್ ಗಳಿಗೆ ಅವಕಾಶವಾಗದವರು ಅಲ್ಲಿಯೇ ತಂಗುತ್ತಾರೆ.

ಇಲ್ಲಿ ವೈಷ್ಣೋದೇವಿ  ಆಡಳಿತ ಮಂಡಳಿಯ ವತಿಯಿಂದ ವಿತರಿಸಲಾಗುವ ಪ್ರಸಾದದ ಪೊಟ್ಟಣಗಳನ್ನು ಖರೀದಿಸಬಹುದು. ಭವನದಿಂದ ಹೊರಬಂದ ನಂತರ 100 ಮೀಟರ್ ಬಂದ ದಾರಿಯಲ್ಲಿಯೇ ಹಿಂದಿರುಗಿದರೆ ವೈಷ್ಣೋದೇವಿ ಪ್ರಸಾದ ಕೇಂದ್ರ ಸಿಗುತ್ತದೆ. ವೈಷ್ಣೋದೇವಿ ಪ್ರಸಾದವನ್ನು 'ಭೇನ್ಟ್' ಎಂದು ಕರೆಯಲಾಗುತ್ತದೆ. ಹಣ ಪಾವತಿ ಮಾಡಿ ಪ್ರಸಾದ ಕೊಂಡುಕೊಳ್ಳಬಹುದು. ಅಲ್ಲಿಗೆ ವೈಷ್ಣೋದೇವಿ ದರ್ಶನ ಯಾತ್ರೆ ಮುಗಿದಂತೆಯೇ.

ವೈಷ್ಣೋದೇವಿಯ ಗುಹಾಲಯ ಪರ್ವತದ ತುತ್ತ ತುದಿಯಲಿಲ್ಲ. ಭವನದಿಂದ 2 ಕಿಲೋ ಮೀಟರ್ ಮೇಲಿನ ಭಾಗವೇ ತ್ರಿಕೂಟ ಪರ್ವತದ ತುತ್ತ ತುದಿ. ಇಲ್ಲಿ ಭೈರೋ ಬಾಬಾ ಎಂದು ಕರೆಯಲ್ಪಡುವ ಶಿವನ ದೇವಾಲಯವಿದೆ. ಈ ದೇವಾಲಯಕ್ಕೆ ಭೇಟಿ ಕೊಡದಿದ್ದರೆ ವೈಷ್ಣೋದೇವಿ ಯಾತ್ರೆಯೇ ಅಪೂರ್ಣವೆಂದು ಭಕ್ತರು ಭಾವಿಸುವುದು ಉಂಟು. ವೈಷ್ಣೋದೇವಿ ಪ್ರಸಾದ ಕೌಂಟರ್ ಮುಂದೆಯೇ ಮೇಲ್ಭಾಗಕ್ಕೆ ಏರಲು ಕಡಿದಾದ ದಾರಿಯಿದೆ. ಅದೇ ಭೈರೋ ದೇವಾಲಯಕ್ಕೆ ಮಾರ್ಗ. ಇಲ್ಲಿಂದ ಮತ್ತೆ ಭೈರೋ  ದೇವಾಲಯಕ್ಕೆ ಕುದುರೆಗಳ ಸೌಲಭ್ಯವಿದೆ. ಎಲೆಕ್ಟ್ರಿಕ್ ವಾಹನಗಳ ಸೌಲಭ್ಯ ಇಲ್ಲಿ ನಿಷಿದ್ಧವಾಗಿದೆ.

ಇದೇ ಹಾದಿಯಲ್ಲಿ 2 ಕಿಲೋಮೀಟರು ಸಾಗಿದರೆ ಪರ್ವತದ ತುತ್ತ ತುದಿಯು ಸಿಗುತ್ತದೆ. ಅಲ್ಲೇ ಸ್ತಿತ್ಯವಾಗಿದೆ ಭೈರೋ ದೇವನ ಆಲಯ. ಭವನದಿಂದ ಭೈರೋ ದೇವಾಲಯಕ್ಕೆ ಇರುವ ದಾರಿ ತೀವ್ರ ಕಡಿದಾಗಿದ್ದು ಯಾತ್ರಿಕರು ಭವನದ ಬಳಿ ಸಾಕಷ್ಟು ವಿಶ್ರಾಂತಿ ಪಡೆದು ಲಘು ಆಹಾರ ಸೇವಿಸಿ ಹೊರಡುವುದು ಉತ್ತಮ. ತೀವ್ರ ಚಳಿಗಾಳಿ ಬೀಸುವ ಸಮಯಗಳಲ್ಲಿ ಪರ್ವತದ ತುತ್ತ ತುದಿಯಲ್ಲಿ ಒತ್ತಡ ಕುಸಿಯುವುದರಿಂದ ಆಮ್ಲ ಜನಕದ ಕೊರತೆಯುಂಟಾಗುತ್ತದೆ. ಇನ್ನುಳಿದಂತೆ ಭೈರೋ ಆಲಯಕ್ಕೆ ಭೇಟಿ ನೀಡಲು ಯಾವುದೇ ತೊಂದರೆಗಳಿಲ್ಲ. ಈ ಭಾಗದಲ್ಲಿ ಇರುವ ವನ್ಯಜೀವಿಗಳೆಂದರೆ ಜಿಂಕೆ ಸಾರಂಗಗಳು ಮಾತ್ರ. ಹಾಗಿರುವುದರಿಂದ ಪ್ರಾಣಿಗಳಿಗೆ ಭೀತಿ ಪಡುವ ಅಗತ್ಯವಿಲ್ಲ. ಹಾಗಿದ್ದಾಗ್ಯೂ ಕೋತಿಗಳಿಂದ ಜಾಗೃತರಾಗಿರುವುದು ಉತ್ತಮ. ಪರ್ವತದ ತುತ್ತ ತುದಿಯ ಭೈರೋ ದೇವನ ಆಲಯದಲ್ಲಿ ಶಿವನ ದರ್ಶನ ಪಡೆದು ಅಲ್ಲಿರುವ ವ್ಯೂ ಪಾಯಿಂಟ್ ನಲ್ಲಿ ಕೆಲವು ಕಾಲ ವಿಶ್ರಮಿಸಬಹುದು. ಭೈರೋ ಬಾಬಾ ಭೇನ್ಟ್ ಪ್ರಸಾದವನ್ನು ಕೊಂಡುಕೊಳ್ಳಬಹುದು. ಉತ್ತರ ಭಾರತೀಯ ಖಾದ್ಯಗಳ ಹೋಟೆಲ್ ಗಳು ಕೂಡ ಅಲ್ಲಿದ್ದು ಐಸ್ ಕ್ರೀಮ್, ಚಹಾ ದಂತಹ ಚಿಕ್ಕ ಚಿಕ್ಕ ಅಂಗಡಿಗಳು ಅಲ್ಲಿವೆ. ವ್ಯೂ ಪಾಯಿಂಟ್ ನಲ್ಲಿ ಕುಳಿತು ನೋಡಲು ನೆರಳಿನ ಕುಟೀರವೂ ಇದೆ. ಭೈರೋದೇವನ ದೇವಾಲಯವೇ ತ್ರಿಕೂಟ ಪರ್ವತದ ಅಂತ್ಯ. ಅದೇ ದಾರಿಯಲ್ಲಿ ಮುಂದೆ ಸಾಗಿದರೆ ಪರ್ವತದಿಂದ ಕೆಳಗಿಳಿಯುವ ದಾರಿ ಅದಾಗುತ್ತದೆ. ಅಲ್ಲಿಂದ ಅಧಕುವಾರಿಗೆ ನೇರ ದಾರಿಯಿದ್ದು ಕಾಲ್ನಡಿಗೆಯಲ್ಲಿ ಅಥವಾ ಕುದುರೆಯ ಮೇಲೆ ತಲುಪಬಹುದು. ಬಂದ ದಾರಿಯಲ್ಲಿಯೇ ಇಳಿಯುವುದು ಕೂಡ ಸಾಧ್ಯವಿದೆ. ಆದರೆ ಭೈರೋ ದೇವಾಲಯದಿಂದ ಅಧಕುವಾರಿಗೆ ಇರುವ ನೇರ ದಾರಿ ಸುಲಭ ಮಾರ್ಗದ್ದಾಗಿದೆ. ಹಾಗಾಗಿ ಗರಿಷ್ಠ ಯಾತ್ರಿಕರು ಅದೇ ಮಾರ್ಗವನ್ನು ಅನುಸರಿಸುತ್ತಾರೆ.

ಅಧಕುವಾರಿ ತಲುಪಿದ ನಂತರ ಪರ್ವತಾರೋಹಣ ಸಮಯದಲ್ಲಿ ಕ್ರಮಿಸಿದ್ದ ದಾರಿಯನ್ನೇ ಕ್ರಮಿಸಿ ಇಳಿಯಬೇಕು. ಅಲ್ಲಿಗೆ ಯಾತ್ರಿಗಳು ಮರಳಿ ಬಾಣಗಂಗಾ ತಲುಪುತ್ತಾರೆ. ಅಲ್ಲಿಗೆ ತ್ರಿಕೂಟ ಪರ್ವತಾರೋಹಿಗಳೆಂಬ ಕೀರ್ತಿಯು ಯಾತ್ರಿಗಳಿಗೆ ಲಭ್ಯವಾಗುತ್ತದೆ. ಹೆಲಿಕ್ಯಾಪ್ಟರ್ ನಲ್ಲಿ ಆಗಮಿಸುವ ಯಾತ್ರಿಗಳು ಭೈರೋ ದೇವನ ಆಲಯದಿಂದ ಸಂಜಿಛಾತ್ ಗೆ ಇರುವ ಮಾರ್ಗದಲ್ಲಿ ನಡೆದು ಅಥವಾ ಕುದುರೆಯ ಮೇಲೆ ಸಾಗಿ ಹೆಲಿಪ್ಯಾಡ್ ತಲುಪಬಹುದು. ಅಲ್ಲಿಂದ ನೇರ ಕಟರಾಗೆ ಹೆಲಿಕ್ಯಾಪ್ಟರ್ ಬಂದಿಳಿಯುತ್ತದೆ.ಭವನ ಹಾಗು ಭೈರೋ ಬಾಬಾ ಆಲಯಗಳ ಬಳಿ ಅಥವಾ ಮಾರ್ಗ ಮಧ್ಯೆ ಎಲ್ಲಿಯೂ ವಿಶ್ರಾಂತಿ ಪಡೆಯದ ಪಾದಯಾತ್ರಿಗಳು ಬಾಣಗಂಗಾ ತಲುಪುವ ಹೊತ್ತಿಗೆ ನಿತ್ರಾಣರಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ನಡು-ನಡುವೆ ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳುವುದು ಅವಶ್ಯವಾಗಿರುತ್ತದೆ. ಕಟರಾದಲ್ಲಿ ಮೊದಲೇ ರೂಮು ಹಿಡಿದು ಅನಂತರ ಪರ್ವತಾರೋಹಣ ಮಾಡಿದ ಯಾತ್ರಿಕರು ನಿಶ್ಚಿಂತೆಯಿಂದ ರೂಮು ತಲುಪಿ ಸಾಕಷ್ಟು ವಿಶ್ರಾಂತಿಯತ್ತ ಗಮನ ಹರಿಸಬೇಕು.

ಆದಷ್ಟು ಮಾರನೆಯ ದಿನ ಹೆಚ್ಚು ದೈಹಿಕ ಶಕ್ತಿ ಖರ್ಚಾಗುವ ಯಾವ ಯೋಜನೆಗಳನ್ನು ಹಾಕಿಕೊಳ್ಳದಿರುವುದು ಉತ್ತಮ. ಪಾದಯಾತ್ರೆಯಲ್ಲಿ ಪರ್ವತ ಹತ್ತಿಳಿದ ಯಾತ್ರಿಕರಿಗೆ ಕೈ ಕಾಲು ನೋವು ಕೆಲವು ವಾರಗಳ ವರೆವಿಗೂ ಹಾಗೆ ಉಳಿದಿರುತ್ತದೆ. ಆದ ಕಾರಣ ಅದಕ್ಕೆ ಸಂಬಂಧಿಸಿದ ಔಷಧ ವ್ಯವಸ್ಥೆಗಳನ್ನು ಕಟರಾದಲ್ಲಿ ಪಡೆಯುವುದು ಉತ್ತಮ.

ಪರ್ವತ ಹತ್ತಿಳಿಯುವ ಸಮಯ ಇಷ್ಟೇ ಎಂದು ನಿಗದಿತವಾಗಿ ಹೇಳಲು ಸಾಧ್ಯವಿಲ್ಲ. ಅದು ಅವರವರ ಶಕ್ತಿಯ ಅನುಸಾರ ತೀರ್ಮಾನಿಸಲ್ಪಡುತ್ತದೆ. ಮಾರ್ಗ ಮಧ್ಯೆ ಅವರು ಪಡೆಯುವ ವಿಶ್ರಾಂತಿ ಸಮಯ, ದರ್ಶನಕ್ಕಿದ್ದ ಸರತಿಯ ಸಾಲು, ಮಳೆ ಹಿಮಪಾತ ಮತ್ತಿತರ ಸಮಯಗಳಲ್ಲಿ ಉಂಟಾಗುವ ಅಡಚಣೆಗಳು ಕೂಡ ಯಾತ್ರೆಯ ಸಮಯವನ್ನು ಹೆಚ್ಚು ಮಾಡುವಲ್ಲಿ ಪಾತ್ರ ವಹಿಸುತ್ತವೆ.

ಸೂಚನೆ: ಚಳಿಗಾಲದಲ್ಲಿ ತೀವ್ರ ಹಿಮಪಾತವಿರುವುದರಿಂದ ವೈಷ್ಣೋದೇವಿಗೆ ಆ ಸಮಯದಲ್ಲಿ ಭೇಟಿಕೊಡುವುದು ಪ್ರಾಣಾಪಾಯಕಾರಿ. ಕೆಲವು ಸಾಹಸ ಪ್ರಿಯ ಯಾತ್ರಿಕರು ಚಳಿಗಾಲದಲ್ಲಿ ಭೇಟಿ ಕೊಡುತ್ತಾರಾದರೂ ಬಹಳ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಚಿಕ್ಕ ಮಕ್ಕಳು,  ಅನಾರೋಗ್ಯ ಪೀಡಿತರು, ಅಂಗವಿಕಲರು, ಮಹಿಳೆಯರು, ವೃದ್ಧರು ಚಳಿಗಾಲದಲ್ಲಿ ಈ ಸ್ಥಳಕ್ಕೆ ಭೇಟಿ ಕೊಡಲೇಬಾರದು.ಅತಿಯಾಗಿ ಮಳೆಯಾಗುವ ಸಂಧರ್ಭದಲ್ಲಿ ಪರ್ವತದ ಕೆಲವು ಭಾಗಗಳಲ್ಲಿ ಕಲ್ಲು ಬಂಡೆಗಳು ಮೇಲೆ ಬೀಳುವ ಸಂಭವವಿರುವುದರಿಂದ ಬಹಳ ಜಾಗೃತೆ ವಹಿಸಬೇಕು.

ವೈಷ್ಣೋದೇವಿ ಯಲ್ಲಿ ನಾನು
ವೈಯ್ಯಕ್ತಿಕವಾಗಿ ನಾನು ಏಕಾಂಗಿಯಾಗಿ ಬೆಳಗಿನ 7.15 ಕ್ಕೆ ಪರ್ವತ ಆರೋಹಣ ಮಾಡಲು ಶುರು ಮಾಡಿದ್ದೆ (ನಾನು ಪರ್ಚಿ ಚೀಟಿ ಪಡೆದಿದ್ದೆ 6.55ರಲ್ಲಿ, ಅಲ್ಲಿಂದ ಬಾಣಗಂಗಾದವರೆವಿಗೂ ನಡೆಯಲು 20 ನಿಮಿಷ ಸಮಯ ಹಿಡಿಯಿತು.  ಮೇಲೆ ಕಾಣುವುದು ನನ್ನದೇ ಪರ್ಚಿ ಚೀಟಿ ಅಲ್ಲಿ ಸಮಯ ಗಮನಿಸಿ). 12.30 ಸುಮಾರಿಗೆ ಭವನ ತಲುಪಿದ್ದೆ. 1 ಗಂಟೆಯ ಸುಮಾರಿಗೆ ದರ್ಶನ ವಾಗಿತ್ತು. ನಂತರ ಅಲ್ಲಿಯೇ ಹತ್ತಿರದಲ್ಲಿದ್ದ ಹೋಟೆಲ್ ನಲ್ಲಿ ಲಘು ಆಹಾರ ಸೇವಿಸಿದ್ದೆ. ಮುಂದೆ ಭೈರೋಬಾಬಾ ದರ್ಶನಕ್ಕೆ ಮತ್ತೆ ಹತ್ತಬೇಕು ಎನ್ನುವ ಅರಿವಿದ್ದ ಕಾರಣ ಲಘು ಆಹಾರವಷ್ಟೇ ಸೇವಿಸಿದ್ದೆ. ಭವನದ ಪ್ರಸಾದ ಪೊಟ್ಟಣಗಳನ್ನು ಖರೀದಿಸಿದ ನಂತರ ಅಲ್ಲಿಯೇ 1 ಗಂಟೆಯ ಕಾಲ ವಿಶ್ರಾಂತಿ ಪಡೆದೆ. ಉತ್ತರ ಭಾರತದ ಸಾಧು ಸಂತರ, ರೈತಾಪಿ ಮಹಿಳೆಯರ ಗುಂಪುಗಳು ನನಗೆ ಎದುರಾಗಿದ್ದವು. ಅವರೊಂದಿಗೆ ಕೆಲವು ಕಾಲ ಸಂಭಾಷಣೆ ನಡೆಸಿ ಅಪಾರ ಅಂಶಗಳನ್ನು ಕಲಿಯಲು ಅವಕಾಶವಾಯಿತು. ಬಿಹಾರದ ಮಹಿಳೆಯರ ಗುಂಪೊಂದು ವೈಷ್ಣೋದೇವಿ ಆಲಯಕ್ಕೆ ಭೇಟಿ ನೀಡಿತ್ತು. ಅವರು ಪ್ರತೀ ವರ್ಷವೂ ಅಲ್ಲಿಗೆ ಭೇಟಿ ನೀಡುವುದು ವಾಡಿಕೆಯಂತೆ, ಕೃಷಿ ಕಾರ್ಯಗಳು ಹೆಚ್ಚು ಇಲ್ಲದ ಸಮಯದಲ್ಲಿ ಎಲ್ಲರು ಯೋಜನೆ ಹಾಕಿಕೊಂಡು ರೈಲುಮಾರ್ಗವಾಗಿ ವೈಷ್ಣೋದೇವಿಗೆ ಭೇಟಿಯಿತ್ತಿದ್ದರು.

ಮೂರು ದಿನ ಅಲ್ಲಿಯೇ ಉಳಿಯುವ ಅವರು ಒಂದು ದಿನ ಪೂರ್ತಿ ಪರ್ವತ ಹತ್ತುವರಂತೆ, ಒಂದು ದಿನ ಪೂರ್ತಿ ಭವನದ ಧರ್ಮಛತ್ರದಲ್ಲಿರುವರಂತೆ ಇನ್ನೊಂದು ದಿನ ಭೈರೋಬಾಬಾ ದರ್ಶನ ಮಾಡಿಕೊಂಡು ಪರ್ವತ ಇಳಿಯುವರಂತೆ. "ಹಾಗಿಲ್ಲದಿದ್ದರೆ ನಾವೆಲ್ಲಾ 50 ವರ್ಷ ದಾಟಿದವರು ಒಂದೇ ದಿನದಲ್ಲಿ ಪರ್ವತ ಹತ್ತಿಳಿಯಲು ಸಾಧ್ಯವೇ?" ಎಂದು ಅವರು ಕೇಳುತ್ತಿದ್ದುದು ಜ್ಞಾಪಕದಲ್ಲಿದೆ. ಪರ್ವತ ಇಳಿದ ಅದೇ ದಿನ ರೈಲು ಮಾರ್ಗವಾಗಿ ಊರು ಸೇರಿಕೊಳ್ಳುವರಂತೆ!!.
ಹೀಗೆ ಕೆಲವರನ್ನು ಮಾತನಾಡಿಸಿಕೊಂಡು 2 ಗಂಟೆಯ ಸುಮಾರಿಗೆ ವೈಷ್ಣೋದೇವಿ ಭವನದಿಂದ ಹೊರಟು ಭೈರೋಬಾಬಾ ಆಲಯದತ್ತ ಹೆಜ್ಜೆ ಹಾಕಲು ಶುರು ಮಾಡಿದೆ. ಒಂದು ಘಂಟೆಯ ಕಠಿಣ ಹಾದಿ ಸವೆಸಿದ ತರುವಾಯು ಭೈರೋಬಾಬಾ ದೇವಾಲಯ ತಲುಪಿ ದರ್ಶನ ಪಡೆದೆ.

ಅಲ್ಲಿ ಸುಮಾರು 20 ನಿಮಿಷಗಳಷ್ಟು ವಿಶ್ರಾಂತಿ ಪಡೆದು ಸಮೋಸ ಮೆಲ್ಲುತ್ತ ಅಲ್ಲಿರುವ ಕಾಫಿ ಡೇ ಒಂದರಿಂದ ಕಾಫೀ ಕೊಂಡುಕೊಂಡು ಕಾಫೀ ಹೀರಿದೆ. ಅಲ್ಲಿ 'ಕಾಫಿ ಗೆ ಬಾರಿ ರೇಟು' ಎಂದು ಮನಸಿನಲ್ಲಿ ಅನಿಸಿತ್ತಾದರೂ, "ಈ ಪರ್ವತದ ಮೇಲೆ ಇಲ್ಲಿಗೆ ಕಾಫೀ ತಂದು ಕಡಿಮೆ ರೇಟಿಗೆ ಕೊಡಲು ಅವರೇನು ನಮ್ಮ ಮಾವನ ಮಕ್ಕಳೇ" ಎಂದು ನನ್ನಷ್ಟಕ್ಕೆ ನಾನೇ ನಗುತ್ತಾ ಇಳಿಯುವ ದಾರಿಯತ್ತ ಗಮನ ಹರಿಸಿದೆ.  4 ಗಂಟೆಯ ಸುಮಾರಿಗೆ ಪರ್ವತ ಅವರೋಹಣ ಆರಂಭವಾಯಿತು. ದಾರಿ ಸುಲಭವೆನಿಸಿತು. ದಾರಿಯಲ್ಲಿ ಸಹ ಪಥಿಕರನ್ನು ಮಾತನಾಡಿಸಿಕೊಳ್ಳುತ್ತ ನನಗಾದ ಅನುಭವಗಳನ್ನು ಹಂಚಿಕೊಳ್ಳುತ್ತಾ ಸಾಗಿ ಸುಮಾರು 5.20ರಷ್ಟರಲ್ಲಿ ಅಧಕುವಾರಿ ತಲುಪಿದ್ದೆ. ಅಲ್ಲಿ ಸೌತೆಕಾಯಿಯೊಂದನ್ನು ಮೆಲ್ಲುತ್ತಾ ಸುಮಾರು 20 ನಿಮಿಷ ವಿಶ್ರಾಂತಿ ತೆಗೆದುಕೊಂಡೆ.

ಅಲ್ಲಿಂದ ಇಳಿಯುವಷ್ಟರಲ್ಲಿ ಕಾಲು ತೀವ್ರತರದ ನೋವಿಗೆ ಒಳಗಾಗಿತ್ತು. ಹಾಗೂ ಸಾಧನೆಯಂತೆ ಸುಮಾರು 7.30ರಷ್ಟರಲ್ಲಿ ಬಾಣಗಂಗಾ ಚೆಕ್ ಪೋಸ್ಟ್ ತಲುಪಿದ್ದೆ. ನಾನು ನನ್ನ ಚಪ್ಪಲಿಗಳನ್ನು ಬಾಣಗಂಗಾ ಚೆಕ್ ಪೋಸ್ಟ್ ನಲ್ಲಿನ ಕ್ಲಾಕ್ ರೂಮ್ ವೊಂದರಲ್ಲಿ ಬಿಟ್ಟು ಇಡೀ ಪರ್ವತವನ್ನು ಬರಿ ಕಾಲಿನಲ್ಲಿ ಹತ್ತಿ ಇಳಿದಿದ್ದೆ. ಬರಿ ಕಾಲಿನಲ್ಲಿಯೇ ಹತ್ತಬೇಕು ಎನ್ನುವ ನಿಯಮವೇನೂ ಅಲ್ಲಿಲ್ಲ. ಆ ಕಾರಣದಿಂದಲೂ ವಿಪರೀತ ಕಾಲು ನೋವಾಗಿರಲೂ ಬಹುದು.ಬಾಣಗಂಗಾದಿಂದ ಕಟರಾ ಖಾಸಗಿ ಬಸ್ ನಿಲ್ದಾಣದ ಬಳಿಯಿದ್ದ ರೂಮ್ ಗೆ ನಡೆಯುವಷ್ಟರಲ್ಲಿ ನನ್ನ ಸಂಪೂರ್ಣ ಶಕ್ತಿ ಖರ್ಚಾದಂತೆ ಭಾಸವಾಗಿತ್ತು. 8.30 ರ ಸುಮಾರಿಗೆ ರೂಮು ತಲುಪಿದ ನಾನು ಆಗ ಮಲಗಿ ಮತ್ತೆ ಎದ್ದದ್ದು ಬೆಳಗ್ಗೆ 8ಕ್ಕೆಯೇ. ಅಲ್ಲಿಂದ ಎದ್ದು ಕಟರಾ ಮುಖ್ಯ ವೃತ್ತದಲ್ಲಿರುವ ಹೋಟೆಲ್ ಒಂದರಲ್ಲಿ ಮಸಾಲೆ ದೋಸೆ ತಿಂದು ಒಂದು ಚಹಾ ಹೀರಿ ನಿಧಾನವಾಗಿ ಕಟರಾ ನಗರವೆನ್ನೆಲ್ಲ ಸುತ್ತಿ ನೋಡಿದೆ. ನಂತರ 10.30ರ ಸುಮಾರಿಗೆ ರೂಮಿಗೆ ಹಿಂದಿರುಗಿ 11 ಗಂಟೆಗೆ ಸರಿಯಾಗಿ ರೂಮ್ ಚೆಕ್ಔಟ್ ಮಾಡಿ 1 ಗಂಟೆಗೆ ನನಗೆ ಅಮೃತಸರಕ್ಕೆ ಹೊರಡಲು ಇದ್ದ ಬಸ್ಸಿನ ಕಡೆಗೆ ಹೆಜ್ಜೆ ಹಾಕಿದೆ. ಇದು ನನ್ನ ಮೊದಲನೇ ಜಮ್ಮು ಕಾಶ್ಮೀರ ಪ್ರವಾಸವಾಗಿ ಅವಿಸ್ಮರಣೀಯವಾಯಿತು.


ಕಟರಾದಿಂದ ಬಾಣಗಂಗಾಗೆ ಸಾಗುವ ೧.೫ ಕಿಲೋ ಮೀಟರ್ ಮಾರ್ಗದ ಒಂದು ಭಾಗ
ತ್ರಿಕೂಟ ಪರ್ವತ ಹತ್ತುವತ್ತ

ಬಾಣಗಂಗಾದತ್ತ ಜನ ಸಮೂಹ

ಮಾತಾ ವೈಷ್ಣೋದೇವಿ
ರಾತ್ರಿಯ ಸಮಯದಲ್ಲಿ ಕಟರಾದಿಂದ ತ್ರಿಕೂಟ ಪರ್ವತ 

25 ಸೆಪ್ಟೆಂಬರ್ 2018ರ ಬೆಳಗಿನ 7 ಗಂಟೆಗೆ ಬಾಣಗಂಗಾದಿಂದ ತ್ರಿಕೂಟ ಪರ್ವತ ಮಂಜಿನೊಡನೆ ಗೋಚರಿಸಿದ ರೀತಿ. 


-o-

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...