ಶನಿವಾರ, ಆಗಸ್ಟ್ 31, 2019

ಥೇರು

ನಾನು ಆಗಷ್ಟೇ ಕನ್ನಡ ಮಾಧ್ಯಮದಲ್ಲಿ ಹತ್ತು ತರಗತಿಗಳನ್ನು ಎಡತಾಕಿ ಹನ್ನೊಂದನೇ ಇಯತ್ತೆಗೆ ಹೋಗಿದ್ದೆ. ಎದೆಯುಬ್ಬಿಸಿ ಟೀಕು-ಟಾಕಲ್ಲಿ ಹೇಳಿಕೊಳ್ಳುವ ಪಿ.ಸಿ.ಎಂ.ಬಿ ಅಂದುಕೊಂಡು ಅದಕ್ಕೆ ಸೇರಿಕೊಂಡಿದ್ದೆ. ನಾನೇ ಸೇರಿಕೊಂಡಿದ್ದೆ ಅನ್ನುವ ಬದಲು ನನ್ನ ಸುತ್ತಲಿನ ಕೆಲವರು ಆ ಕೋರ್ಸು ಪ್ರಪಂಚದ ಸರ್ವ ಶ್ರೇಷ್ಠ ಕೋರ್ಸುಗಳಲ್ಲೊಂದು ಎಂದು ಬಿಂಬಿಸಿಬಿಟ್ಟದ್ದರು. ಅಷ್ಟರಲ್ಲಾಗಲೇ ನನ್ನ ಮನಸ್ಸಿನಲ್ಲಿಯೂ ಅದು ಬಿಟ್ಟು  ಬೇರೆ ಕೋರ್ಸಿಗೆ ಸೇರಿದರೆ ಕೀಳಾಗಿಬಿಡುತ್ತೇನೇನೋ ಎನ್ನುವ ಭಯ, ದುಗುಡ ಕಾಡುತ್ತಿತ್ತು. ಅವೆಲ್ಲ ಕಾರಣಗಳೂ ಮೊದಲಾಗಿ ಆರ್ಥಿಕ ಮುಗ್ಗಟ್ಟಿನ ಇಕ್ಕಟ್ಟಿನಲ್ಲೂ ಆ ಕೋರ್ಸಿಗೆ ಸೇರಿಕೊಂಡಿದ್ದೆ. ನಮ್ಮ ತರಗತಿಗಳು ಇನ್ನೂ ಶುರುವಾಗಿರಲಿಲ್ಲ, ಜೂನ್ ಒಂದರಿಂದ ಶುರುವಾಗುವುದರಲ್ಲಿತ್ತು. ಅಷ್ಟರಲ್ಲಿ ನಮ್ಮ ಮನೆಗೆ ಠಳಾಯಿಸಿದ ಕೆಲವರು ಕನ್ನಡ ಮೀಡಿಯಮ್ಮಿನಿಂದ ಹೋಗಿ ಪಿ.ಯು.ಸಿ ಯಲ್ಲಿ ಅದೂ ಇಂಗ್ಲೀಷಿನಲ್ಲಿ ವಿಜ್ಞಾನ ಓದುವುದು ಬಹುದೊಡ್ಡ ರಿಸ್ಕ್. ಅದರ ಬದಲು ಕಾಮರ್ಸಿಗೋ,  ಡಿಪ್ಲೋಮಾಗೋ ಸೇರಬಹುದಲ್ಲವೇ ಎಂಬ ಉಪದೇಶವನ್ನೂ ಕೊಟ್ಟರು. ಸಾಲದಕ್ಕೆ ಅದಕ್ಕೆ ಸೇರಿ ಫೇಲ್ ಆಗಿ ಮನೆ ಸೇರಿಕೊಂಡವರ ಅಥವಾ ಅದರ ನಂತರ ಡಿಪ್ಲೊಮಾ ಇನ್ನಿತರ ಕೋರ್ಸುಗಳಿಗೆ ತಗುಲಿಕೊಂಡವರ ಉದಾಹರಣೆ ಸಮೇತ ವಿವರಿಸುತ್ತಿದ್ದರು. ನನ್ನಲ್ಲಿ ಇರಬಹುದಾದ ಭಯವನ್ನು ಮತ್ತಷ್ಟು ಜಾಗೃತಗೊಳಿಸಲು ಯತ್ನಿಸುತ್ತಿದ್ದರು ಎನ್ನುವುದು ಮೇಲ್ನೋಟಕ್ಕೆ ತಿಳಿದುಬಿಡುವಷ್ಟಾದರೂ, ಅದ್ಯಾವ ಧೈರ್ಯದ ಮೇಲೆ ಹೋಗಿ ಸೇರಿಕೊಂಡೆನೋ ಈಗ್ಗೆ ಗೊತ್ತಿಲ್ಲ. ಬಹುಶಃ ಮೊಂಡು ಧೈರ್ಯ ವಿರಬಹುದೇನೋ, ಅಥವಾ ಇದೇ ಶ್ರೇಷ್ಠವೆಂಬ ಇತರರು ತುರುಕಿದ್ದ ಭಾವನೆಗಳೋ ಈಗ ಅರಿಯೆ. ಸರಿ ಅದರ ಮುಂದುವರಿದ ಭಾಗವಾಗಿ ಆಗಿದ್ದರ ಬಗ್ಗೆ ಖುಷಿಯಾಗಿ ಬರೆಯಬೇಕೆನಿಸುತ್ತದೆ. ಬರೆಯುತ್ತೇನೆ.

ಅದೊಂದು ದಿನ ಪ್ರಥಮ ಪಿ.ಯು.ಸಿ ಯಲ್ಲಿ ಬಯಾಲಜಿಯ ಬಾಟನಿ (ಸಸ್ಯಶಾಸ್ತ್ರ) ಪಾಠ ನಡೆಯುತ್ತಿತ್ತು. ಪಾಠವನ್ನು ಅಷ್ಟಾಗಿ ಯಾರೂ ಕೇಳುತ್ತಿರಲಿಲ್ಲವೆನ್ನಿ. ಇಂಗ್ಲೀಷಿನ ಮೇಲೆ ಆಗಾಧ ಹಿಡಿತವಿದ್ದುಬಿಟ್ಟಿದ್ದರೆ ನಾನು ಕೇಳುತ್ತಿರಲಿಲ್ಲವೇನೋ, ಮನೆಗೆ ಹೋಗಿ ಓದಿದರಾಯ್ತು ಎನ್ನುವ ನಿಲುವು ತಳೆಯುತ್ತಿದ್ದೆನೇನೋ. ಇಂಗ್ಲೀಷಿನ ಮೇಲಿನ ಭಯ ಅಂದಿನ ಪಾಠವನ್ನು ಅಲ್ಲೇ ಕ್ಲಾಸಿನಲ್ಲಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಪಾಠದ ನಡುವಲ್ಲಿ ಏಕದಳ - ದ್ವಿದಳ ಸಸ್ಯಗಳ ಸ್ಥೂಲ ವರ್ಗೀಕರಣವನ್ನು ವಿವರಿಸುತ್ತಿದ್ದರು. ವರ್ಗೀಕರಣಕ್ಕೆ ಕಾರಣವಾದ ಅಂಶಗಳನ್ನು ಹೇಳುತ್ತಾ ಏಕದಳ ಸಸ್ಯಗಳು ದ್ವಿದಳ ಸಸ್ಯಗಳಷ್ಟು ಗಟ್ಟಿ ಬರುವುದಿಲ್ಲ. ದ್ವಿದಳ ಸಸ್ಯಗಳು ಮೂಲತಃ ಬಹಳ ಗಟ್ಟಿ, ಹಾಗು ಕೆಲವಂತೂ ಸಾವಿರಾರು ವರ್ಷ ಆಯುಷ್ಯ ಹೊಂದಿವೆ ಎಂದೆಲ್ಲ ವಿವರಿಸುತ್ತಿದ್ದರು. ಏಕದಳ ಸಸ್ಯಗಳು ದ್ವಿದಳ ಸಸ್ಯಗಳಷ್ಟು ಗಟ್ಟಿ ಬರಲಾರವು ಎಂದ ಮೇಲೆ ಅವುಗಳ ಉಂಟಾದ ಧಾನ್ಯಗಳನ್ನಷ್ಟೇ ಬಳಸುತ್ತಾರೆ, ಅದರ ಕಾಂಡದ ಉಪಯೋಗ ಯಾವುದೇ ಕಾರಣಕ್ಕೂ ಇಲ್ಲ ಎಂದರು. ನನಗೆ ಥಟ್ಟನೆ ನಮ್ಮೂರಿನಲ್ಲಿ ಥೇರು ಕಟ್ಟುತ್ತಿದ್ದು ಜ್ಞಾಪಕ ಬಂತು, ಅಷ್ಟೇ ಅಲ್ಲದೆ ಅಡಿಕೆಯ ಮರದ ತುಂಡುಗಳನ್ನು ಮಲೆನಾಡಿನ ಕಡೆ ಬೇಲಿ ಕಟ್ಟಲು ಬಳಸುತ್ತಿದ್ದುದನ್ನು ನೋಡಿದ್ದೆ, ಬಯಲು  ಸೀಮೆಯಲ್ಲಿ ಅಡಿಕೆ ಬೆಳೆದವರು ಅಡಿಕೆಯ ಕಟ್ಟಿಗೆಗಳನ್ನು ಮನೆಯ ಹೆಂಚಿನ ಛಾವಣಿಯ ರಿಪೀಸ್ ಪಟ್ಟಿಗಳಾಗಿ ಉಪಯೋಗಿಸಿದ್ದು ಕಂಡಿದ್ದೆ. ಇಷ್ಟಾದ ಮೇಲೆ ಏಕದಳ ಸಸ್ಯಗಳ ಕಾಂಡ ಉಪಯೋಗ ಇಲ್ಲವೇ ಇಲ್ಲ ಎಂದಿದ್ದು ಪ್ರಶ್ನಿಸಬೇಕು ಎನಿಸಿತು. ಪಾಠವನ್ನು ಅಮೂಲಾಗ್ರವಾಗಿ ಅರ್ಥ ಮಾಡಿಕೊಳ್ಳುತ್ತಿದ್ದುದರ ಒಂದು ಮುಖವು ಅದಾಗಿದ್ದರಿಂದ ನಮ್ಮ ಲೆಕ್ಚರರ್ ಮಾತು ಮುಂದುವರಿಸುವ ಮುನ್ನವೇ ತಡೆದೆ.

ಏಕದಳ ಸಸ್ಯಗಳ ಕಾಂಡ ಉಪಯೋಗ ಇಲ್ಲವೇ ಇಲ್ಲ ಎನ್ನುವುದು ಮಿಥ್ಯೆ, ನಮ್ಮೂರಿನಲ್ಲಿ ಥೇರು ಕಟ್ಟಲು ತೆಂಗಿನ ಮರದ ತುಂಡುಗಳನ್ನು ಬಳಸುತ್ತಾರೆ ಎಂದು ಬಿಟ್ಟೆ. ಇಡೀ ತರಗತಿ ಗೊಳ್ಳೆಂದು ನಕ್ಕಿಬಿಟ್ಟಿತು. ನನಗೆ ಏನೋ ತಪ್ಪು ಮಾಡಿದ ಅನುಭವಾಗಿ ನಾಚಿಕೆಯಾಗಿಬಿಟ್ಟಿತು, ತಲೆ ತಗ್ಗಿಸಿಬಿಟ್ಟೆ. ಇಂಗ್ಲೀಷು ಮೀಡಿಯಮ್ಮಿನಿಂದ ಬಂದವರ ಮುಂದೆ ಹಿಂಗೆ ನಡೆದುಕೊಳ್ಳಬಾರದಿತ್ತು, ಕ್ಲಾಸು ಮುಗಿದ ಮೇಲೆ ಕೇಳಿದರೂ ಆಗಿತ್ತು ಎಂದು ಒಳಗೊಳಗೇ ನನ್ನನ್ನೇ ಹಳಿದುಕೊಳ್ಳಲು ಆರಂಭಿಸಿದ್ದೆ.ಎಲ್ಲರನ್ನೂ ತಡೆದ ನಮ್ಮ ಲೆಕ್ಚರರ್ ಹೇಳಿದರು ನೀನು ಹೇಳುವುದರಲ್ಲೂ ಅರ್ಥವಿದೆ, ಅಂತಹ ಉಪಯೋಗಗಳಲ್ಲಿ ಏಕದಳ ಸಸ್ಯಗಳನ್ನು ಬಳಸಿಕೊಳ್ಳುತ್ತಾರೆನ್ನುವುದು ನನಗೂ ತಿಳಿದಿರಲಿಲ್ಲ. ಕ್ಲಾಸು ಮುಗಿದ ಮೇಲೆ ಬಂದು ನನ್ನನು ಕಾಣು ಎಂದು ಹೇಳಿ ಅಂದಿನ ಪಾಠ ಮುಗಿಸಿ ಹೋಗಿಬಿಟ್ಟರು.

ನನ್ನ ಹಿಂದಿನ ಬೆಂಚಿನ ಹುಡುಗರು 'ಯಾರ್ ಗುರು ಇವ್ನು ಪಕ್ಕಾ ಹಳ್ಳಿ ತುಂಡು, ಬಯಾಲಾಜಿಗೆ ಥೇರು ತಂದು ನಿಲ್ಲಿಸಿದ' ಎಂದು ಆಡಿಕೊಂಡು ನಗುತ್ತಲೇ ಇದ್ದರು,  ಅಂದಿನ ಕ್ಲಾಸು ಮುಗಿಯಿತು. ಸ್ಟಾಫ್ ರೂಮಿಗೆ ನಡೆದು ಹೋದೆ. ಅಲ್ಲಿದ್ದ ನಮ್ಮ ಬಯಾಲಜಿ ಲೆಕ್ಚರರ್ ನನ್ನ ಬಗ್ಗೆ, ಹಿನ್ನೆಲೆ ಎಲ್ಲವನ್ನೂ ತಿಳಿದುಕೊಂಡು ಇತರ ಲೆಕ್ಚರರ್ ಮುಂದೆ ನನ್ನನ್ನ ತೋರಿಸಿ ಹೊಗಳಿದ್ದೇ ಹೊಗಳಿದ್ದು. ಹಳ್ಳಿಯ ಸೊಗಡಿನ ಅನುಭವವೇನಾದರೂ ಯಾರಿಗಾದರೂ ಬೇಕಿದ್ದರೆ ಇವನನ್ನು ಕಂಡು ಮಾತನಾಡಿ ಎಂದು ಎಲ್ಲರಿಗೂ ಸಂತೋಷದಿಂದಲೇ ಹೇಳುತ್ತಿದ್ದರು. ಅಲ್ಲಿಂದಾಚೆಗೆ ಅವರು ಕ್ಲಾಸಿಗೆ  ಬರುವಾಗ ನೋಟ್ಸ್ ಮಾಡಿಕೊಂಡು ಬರುವುದು ರೂಢಿ ಮಾಡಿಕೊಂಡರು. ಎಲ್ಲಿ ಯಾವಾಗ ಏನು ಅನುಮಾನ ಬಂದರೂ ನೇರವಾಗಿ ಬಂದು ತನ್ನನ್ನೇ ಕಂಡು ಮಾತನಾಡುವಂತೆ ಹೇಳಿದ್ದಾರೆ. ಕೆಲವು ಬಾರಿ ಹೋಗಿದ್ದಾಗ ಕನ್ನಡದಲ್ಲಿಯೇ ಎಲ್ಲವನ್ನೂ ವಿವರಿಸಿ ಕಳುಹಿಸುತ್ತಿದ್ದರು.

ಅಂದಹಾಗೆ ಅಂದು ಆಡಿಕೊಂಡವರ ಪೈಕಿ ಒಬ್ಬರೋ ಇಬ್ಬರು ಪಾಸಾದರು. ಇನ್ನುಳಿದವರು ಏನೇನೋ ಆಗಿ ಹೋದರು. ಈಚೀಚಿಗೆ ಬೆಂಗಳೂರಿನ ವಿಜಯನಗರದಲ್ಲಿ ಓಲಾ ಕ್ಯಾಬಿನಲ್ಲಿ ಬರುತ್ತಿದ್ದಾಗ ಆ ಗುಂಪಿನ ಹುಡುಗನೊಬ್ಬ ಸಿಕ್ಕಿದ್ದ. ಓಲಾ ಕ್ಯಾಬಿನ ಡ್ರೈವರ್ ವೃತ್ತಿ ಅವನ ಹೊಟ್ಟೆ ತುಂಬಿಸುತ್ತಿತ್ತು. ಎಷ್ಟೋ ಹೊತ್ತಾದ ಮೇಲೆ ಅವನೇ ನನ್ನ ಗುರುತಿನ ಬಗ್ಗೆ ವಿವರಿಸಿದ, ನಾನೂ ಅವನ ಗುರುತು ಹಿಡಿದೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ಆಗ ಆಡಿಕೊಂಡಿದ್ದೆ, ಅದನ್ನೇನು ಮನಸಿನಲ್ಲಿ ಇಟ್ಟುಕೊಂಡಿಲ್ಲ ಅಲ್ವಾ ಎಂದ. ಇಲ್ಲವೆಂದು ಗೋಣು ಅಲ್ಲಾಡಿಸಿ ನನ್ನ ಫೋನ್ ನಂಬರ್ ಅವನ ಕೈಗಿತ್ತು ಮನೆಗೆ ನಡೆದೆ. ಒಂದೇ ಕ್ಲಾಸಿನಲ್ಲಿ ಕುಳಿತಿದ್ದ ನಾವು ನಮ್ಮ ನಮ್ಮ ತಲೆ ಮೆರೆಸಿದಂತೆ ನಡೆದು ಹೋದ ದಾರಿಯ ನೆನೆಸಿಕೊಂಡು ನಾನೂ ಅರೆಕ್ಷಣ ಭಾವುಕನಾಗಿಹೋದೆ.

-o-





ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...