ಇತ್ತೀಚಿಗೆ ಬ್ರಿಗೇಡಿಯರ್ ಜಾನ್ ಪಿ. ದಳವಿಯವರು ಬರೆದಿರುವ 'ದಿ ಹಿಮಾಲಯನ್ ಬ್ಲಂಡರ್'' ಓದುತ್ತಿದ್ದೆ. ನಾನು ಮಿಲಿಟರಿ ಇತಿಹಾಸವನ್ನಾಗಲಿ, ಕ್ರೀಡಾ ಇತಿಹಾಸವನ್ನಾಗಲಿ ಓದದ ವ್ಯಕ್ತಿ. ಸಾಂಪ್ರದಾಯಿಕ ಇತಿಹಾಸವನ್ನಷ್ಟೇ ಓದುತ್ತಿದ್ದ ನನಗೆ ಹಿಮಾಲಯನ್ ಬ್ಲಂಡರ್ ಓದುವಂತೆ ಅನೇಕ ರಾಷ್ಟ್ರಾಸಕ್ತ, ಸೈನ್ಯಾಸಕ್ತ ಮಿತ್ರರು ಹೇಳಿದ್ದರು. ಅದು ಮಹಾಯೋಧನೊಬ್ಬನು ಯುದ್ಧ ಭೂಮಿಯಲ್ಲಿ ತಾನು ಅನುಭವಿಸಿದ ನೋವನ್ನು ಜನರಿಗೆ ತಲುಪಿಸುವ, ಆಡಳಿತಗಾರರ ಭಯ, ಹಂಗು ಯಾವುದೂ ಇಲ್ಲದೆ ಬರೆದ ಪುಸ್ತಿಕೆ ಅಂತ ಕೇಳಿದ್ದೆನಾದ್ದರಿಂದ ಅದನ್ನು ಓದುವ ಮನಸ್ಸಾಯಿತು, ಓದಿಕೊಂಡೆ. ಮಹಾ ಸೇನಾನಿಯೊಬ್ಬ ಮೆಲ್ಲಗೆ ಕೈ ಹಿಡಿದುಕೊಂಡು ನಮ್ಮನ್ನು ಅರುಣಾಚಲದ ಹಿಮ ಪರ್ವತಗಳ ಮೇಲೆ ಹತ್ತಿಸಿ ಇಳಿಸಿದ ಅನುಭವವಾಯ್ತು. ಅದೇ ಸಮಯಕ್ಕೆ ನನ್ನ ಕೆಲವು ಗೆಳೆಯರಿಗೆ ನಾನು ಕಾಂಗ್ರೆಸ್ ಪಕ್ಷ ವಿರೋಧಿಯಂತೆ ಗೋಚರಿಸಿದೆ. ನಾನು ಈ ಪುಸ್ತಕ ಓದುತ್ತಿದ್ದುದು ತಿಳಿದುಕೊಂಡೆ ಕೆಂಡಾಮಂಡಲರಾಗಿದ್ದರು ಕೆಲವರು. ಇರಲಿ, ಪುಸ್ತಕವೊಂದು ಮನುಷ್ಯನ ಭಾವನೆಗಳಿಗೆ ಕೈ ಹಾಕಿದರೆ ಅದಕ್ಕಿಂತ ಖುಷಿ ಪಡುವ ಮತ್ತೊಂದು ವಿಚಾರ ಇಲ್ಲ ಅಲ್ಲವೇ. ಲೇಖಕ ಖುಷಿಯಾಗಿಬಿಡುತ್ತಾನೆ, ಆದರೆ ಇಂದು ದಳವಿ ಬದುಕುಳಿದಿಲ್ಲ, ಅವರ ಧ್ಯೇಯ ಖುಷಿ ಪಡುವುದು ಆಗಿಯೂ ಇರಲಿಲ್ಲ. ಭಾರತದ ರಾಜಕೀಯಕ್ಕೂ- ಸೈನ್ಯಕ್ಕೂ ತಾಳ ಮೇಳವಿಲ್ಲದ ಸಂಬಂಧವಿತ್ತು, ಅದರಿಂದಲೇ 1962ರ ಚೀನಾ ಅತಿಕ್ರಮಣದಲ್ಲಿ ಭಾರತಕೆ ಹಿನ್ನಡೆಯಾಯ್ತು ಎನ್ನುವುದನ್ನು ಯಾರಾದರೂ ಹೇಳಬೇಕಾಗಿತ್ತು, ಸಾಕ್ಷಾತ್ ಯುದ್ಧ ಭೂಮಿಯಲ್ಲಿ ನಿಂತು ನೋಡಿದ ದಳವಿ ಅದನ್ನು ಯಾವುದೇ ಅಳುಕಿಲ್ಲದೆ ಹೇಳಿ ಮುಗಿಸಿದರು. ಅಷ್ಟೇ.
ಯಾವಾಗಲೂ ಭಾರತದ ವಿರುದ್ಧ ಕತ್ತಿ ಮಸೆಯುವ ಪ್ರಮುಖ ರಾಷ್ಟ್ರಗಳೇ ಎರಡು. ಅದರಲ್ಲಿ ಪಾಕಿಸ್ತಾನದ ಅಧ್ಯಾಯವಂತೂ ತಿಳಿದದ್ದೇ, ಆದರೆ ಚೀನಾದ ಬಗ್ಗೆ ಈಗಲೂ ಭಾರತೀಯರು ಅನೇಕರಿಗೆ ಅರಿವಿಲ್ಲ. ನಮ್ಮ ಸಾಲು ಸಾಲು ಸರ್ಕಾರಗಳು ಇದನ್ನು ಜನರಿಗೆ ಅರ್ಥ ಮಾಡಿಸುವಲ್ಲಿ ಸೋತಿವೆ. ಹಾಗೆಂದೇನು ಅನ್ಯ ದೇಶದ ಮೇಲೆ ಸರ್ಕಾರ ತನ್ನ ಪ್ರಜೆಗಳನ್ನು ಎತ್ತಿಕಟ್ಟಬೇಕಿಲ್ಲ, ಸತ್ಯವನ್ನು ಅರುಹಿದ್ದರೆ ಸಾಕಾಗಿತ್ತು, ಅದನ್ನೂ ಮಾಡಿಲ್ಲವೆನ್ನುವುದು ಖೇದಕರ. ಭಾರತ ಈವತ್ತಿಗೂ ತನ್ನ ಪ್ರಜೆಗಳಿಗೆ ಗಡಿಯ ವಿಚಾರದಲ್ಲಿ ಅನೇಕ ವಿಚಾರಗಳನನ್ನು ಮುಚ್ಚಿಟ್ಟಿದೆ. ಅದರಲ್ಲೂ ಚೀನಾದೊಂದಿಗೆ ಹಂಚಿಕೊಂಡಿರುವ ಗಡಿಯ ವಿಚಾರದಲ್ಲಿ ಇನ್ನೂ ಅನೇಕ ಗೊಂದಲಗಳಿವೆ. ಈ ಗೊಂದಲಗಳಿಂದಾಗಿಯೇ ನಮ್ಮ ಸೈನಿಕರು ಚೀನಾ ಸೈನಿಕರೊಂದಿಗೆ ಹಲವಾರು ಬಾರಿ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ವಿಸ್ತರಣಾವಾದದ ಭೂತ ಹತ್ತಿಸಿಕೊಂಡಿರುವ ಚೀನಾ ಯಾವುದಕ್ಕೂ ಯಾರಿಗೂ ಬಗ್ಗದೆ ತನ್ನ ಸುತ್ತಲಿನ ಎಲ್ಲಾ ದೇಶಗಳ ಜೊತೆಗೂ ಗಡಿ ಸಂಘರ್ಷ ಹೊಂದೇ ಇದೆ.
ನಮ್ಮ ನೆರೆಯ ದೇಶಗಳ ವಿಷಯವೇನೇ ಇದ್ದರೂ ನಮ್ಮ ದೇಶಕ್ಕೆ ಸ್ವಾತಂತ್ರ್ಯ ರಕ್ತಪಾತವಿಲ್ಲದೆ ಬಂದಿದ್ದು ಸಂತೋಷಪಡುವ ವಿಚಾರ, ಆದರೆ ಅದೇ ಗುಂಗಿನಲ್ಲಿ ನಮ್ಮ ನೇತಾರರು ಸ್ವಾತಂತ್ರ್ಯದ ಬೆಲೆಯನ್ನೇ ಅರ್ಥ ಮಾಡಿಕೊಳ್ಳದಾದರು. ರಕ್ತಪಾತಗಳಾಗುವ ಸಾಧ್ಯಾಸಾಧ್ಯತೆ ನಮ್ಮ ನಾಯಕರಿಗೆ ಅರಿವಿಗೆ ಬರಲೇ ಇಲ್ಲ. ಶಾಂತಿಮಂತ್ರ, ತಟಸ್ಥ ಧೋರಣೆ, ಅಲಿಪ್ತ ನೀತಿಗಳೊಂದಿಗೆ ಇದ್ದರೆ ನಮ್ಮ ತಂಟೆಗೆ ಯಾರು ಬರಲಾರರು ಎಂಬ ಭ್ರಮಾ ಲೋಕ ಸೃಷ್ಟಿಸಿಕೊಂಡು ಕೂತರು. ಸ್ವಾತಂತ್ರ್ಯ ಕೊಡಿಸುವಲ್ಲಿ ಸಫಲವಾದ ಶಾಂತಿಮಂತ್ರ ಸ್ವಾತಂತ್ರ್ಯಾನಂತರದಲ್ಲಿ ಹಳ್ಳ ಹಿಡಿದು ಅನೇಕ ಅನಾಹುತಗಳನ್ನು ಸೃಷ್ಟಿಸಿದ್ದು ನಮಗೆಲ್ಲಾ ಗೊತ್ತೇ ಇದೆ. ಅವುಗಳ ಪೈಕಿ ಚೀನಾದ ಅತಿಕ್ರಮಣವೂ ಒಂದು. ಮನುಷ್ಯನೊಬ್ಬ ಒಳ್ಳೆಯವನಾಗಿ ಬದುಕಬೇಕಾದರೆ ಬರಿಯ ಒಳ್ಳೆಯತನವನ್ನು ನೆಚ್ಚಿಕೊಂಡು ಮಾತ್ರ ಕುಳಿತುಕೊಳ್ಳುವುದು ಎಂದೆಂದಿಗೂ ಸಾಲದು, ಕೆಟ್ಟವರಿಂದ ಸದಾ ದೂರವುಳಿಯುವ ಗರ್ವ, ಛಾತಿ ಅವನಿಗೆ ಇರಬೇಕು. ಅಷ್ಟಿರಬೇಕಾದರೆ ಕೆಟ್ಟದ್ದೇನೂ ಎನ್ನುವುದೂ ಅವನಿಗೆ ತಿಳಿದಿರಬೇಕು. ಭಾರತದ ವಿಚಾರದಲ್ಲಿ ಇದು ಹಾಗಲಿಲ್ಲ, ವಿರುದ್ಧವಾಗಿತ್ತು.ಈ ವಿಚಾರ ಸದರಿ ಪುಸ್ತಕದಲ್ಲೂ ವಿಸ್ತಾರವಾಗಿ ಹರಿಯುತ್ತದೆ.
ರಕ್ತಪಾತವಿಲ್ಲದೆ ಸ್ವಾತಂತ್ರ್ಯ ಬಂದ ಖುಷಿಗೋ ಎಂಬಂತೆ ನಮ್ಮವರು ಸ್ವಾತಂತ್ರ್ಯ ಬರುವ ಹೊತ್ತಿಗೆ ಭಾರತದ ಉಪಖಂಡ ಎಂದೆಂದೂ ಮರೆಯದ ದೇಶ ವಿಭಜನೆಯ ರಕ್ತಪಾತ ಮಾಡಿ ಮುಗಿಸಿಯಾಗಿತ್ತು. ಭಾರತೀಯರ ಮನಸ್ಥಿತಿಯನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದ್ದ ಬ್ರಿಟೀಷ್ ದೊರೆಗಳು 'ನಿಮ್ಮ ಕರ್ಮ' ಎಂದು ಕೈ ಕೊಡವಿಕೊಂಡು ಇಲ್ಲಿಂದ ಹೊರಟು ಹೋಗಿದ್ದರು.
ನಮಗೆ ಸ್ವಾತಂತ್ರ್ಯ ಬಂದು ಎರಡು-ಮೂರು ವರ್ಷಗಳ ಅಂತರಕ್ಕೆ ಚೀನಾ ತನ್ನ ಮತ್ತು ಭಾರತದ ನಡುವೆ ಇದ್ದ ಟಿಬೆಟ್ ಅನ್ನು ನುಂಗಿ ನೊಣವಿಕೊಂಡಾಗ ಭಾರತ ಸರ್ಕಾರ ಅದಕ್ಕೆ ಪ್ರತಿಕ್ರಿಯಿಸುವುದಿರಲಿ ಒಂದು ಆತಂಕವನ್ನೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊರಹಾಕಲಿಲ್ಲ. ಇದನ್ನು ಹೇಡಿತನ ಎಂದು ಬಗೆಯಿತು ಚೀನಾ. ಖರಾರುವಕ್ಕಾದ ಪೂರ್ವ ತಯಾರಿಗಳನ್ನು ಮಾಡಿಕೊಂಡ ಚೀನಾ ಮುಂದೆ 1962ರಲ್ಲಿ ಭಾರತಕ್ಕೆ ಯಾವುದೇ ಸುಳಿವು ಕೊಡದೆ ಮೈ ಮೇಲೆ ಬಿದ್ದಿತು, ಭಾರತದ ಸಹನೆಗೆ, ಶಾಂತಿಮಂತ್ರಕ್ಕೆ ಸರಿಯಾಗೇ ಪೆಟ್ಟು ಕೊಟ್ಟಿತ್ತು. ಅವರ ತಯಾರಿಗಳನ್ನು, ಭಾರತ ಸರ್ಕಾರದ ಉಡಾಫೆಯನ್ನೂ ಒಂದೊಂದಾಗಿ ತೆರೆದಿಡುತ್ತಾ ಸಾಗುತ್ತಾರೆ ದಳವಿ.
ಅಲ್ಲಿ ವಿವರಿಸಿರುವ ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ ಗಡಿ ಹಿಮದ ಕಾಡುಗಳಲ್ಲಿ ಹೈರಾಣಾಗಿ ಪ್ರಾಣ ಬಿಡುವ ಕೆಲವು ಸನ್ನಿವೇಶಗಳು, ಎದುರಾಳಿಗಿಂತ ಹಸಿವು, ಚಳಿಗಳೇ ನಮ್ಮ ಯೋಧರನ್ನು ರೇಜಿಗೆಬ್ಬಿಸಿದ ಅನೇಕ ಸನ್ನಿವೇಶಗಳು ನಮ್ಮೊಳಗೇ ಅಸಹನೀಯತೆಯನ್ನುಂಟು ಮಾಡುತ್ತವೆ. ಯೋಧನೊಬ್ಬ ಗುಹೆಯೊಳಗೆ ಜಾಗ ಸಿಗದೇ ರಾತ್ರಿಯಿಡೀ ಹೊರಗೆ ಧೋ ಎಂದು ಸುರಿಯುತ್ತಿದ್ದ ಮಂಜಿನಲ್ಲಿ ಕುಳಿತು ಬೆಳಗಾಗುವ ಹೊತ್ತಿಗೆ ಪ್ರಾಣವನ್ನೇ ಬಿಟ್ಟು ಬಿಡುವ ಒಂದು ಕಡೆ ಪ್ರಸ್ತಾವವಿದೆ, ಪ್ರಾಣವನ್ನೇ ತೆಗೆಯುವಷ್ಟು ತೀಕ್ಷ್ಣ ಚಳಿಯಿರುವೆಡೆಯಲ್ಲಿ ಸರಿಯಾದ ಬೂಟು, ಬಟ್ಟೆಗಳನ್ನು ಕೊಡದೆ ಯುದ್ಧಮಾಡಲು ನಮ್ಮ ಸೈನಿಕರನ್ನು ಅಟ್ಟಿದ್ದು ಸರ್ಕಾರಕ್ಕೆ ಮುಂದಾಲೋಚನೆ, ನಿಜ ಸ್ಥಿತಿಯ ಅರಿವು ಯಾವುದೂ ಇರಲಿಲ್ಲವೆನ್ನುವುದನ್ನು ಸಾಬೀತು ಮಾಡುತ್ತದೆ.
ಅನ್ನವೆಂದರೆ ಆಗದ ರೊಟ್ಟಿಯ ಬಹುಪ್ರಿಯರಾದ ಪಂಜಾಬಿಗಳು ಅರುಣಾಚಲದ ಹಿಮ ಪರ್ವತಗಳ ಟೆಂಟುಗಳಲ್ಲಿ ಅನ್ನ ಬೇಯಿಸಿಕೊಂಡು ತಿನ್ನುತ್ತಿದ್ದರಂತೆ, ಅದ್ಯಾಕೆ ಹೀಗೆ ಅನ್ನುವ ಬ್ರಿಗೇಡಿಯರ್ ಪ್ರಶ್ನೆಗೆ 'ರೊಟ್ಟಿಯ ಕಾವಲಿಯನ್ನು ಈ ಪರ್ವತಕ್ಕೆ ಹೊತ್ತು ತರಲು 3-4 ಸೈನಿಕರ ಅಗತ್ಯವಾದರೂ ಉಂಟು ಅದರ ಬದಲು ನಾವು ಅವರ ಕೈಲೇ ಮದ್ದು ಗುಂಡುಗಳನ್ನು ಹೊರಿಸಿಕೊಂಡು ಬಂದೆವು' ಅಂದರಂತೆ. ಹೀಗೆ ತಮ್ಮ ಬೇಕು, ಬೇಡಗಳನ್ನು ಬದಿಗೊತ್ತುವ ಸೈನಿಕ ದೇಶಕ್ಕಾಗಿ ಬಡಿದಾಡಿ ಸಾಯಲು ಎಂದೆಂದಿಗೂ ಸನ್ನದ್ಧನಾಗಿರುತ್ತಾನೆ, ಆದರೆ ಆತನನ್ನು ನಡೆಸಿಕೊಳ್ಳಬೇಕಾದ ಸರ್ಕಾರವೂ ಕೂಡ ಅಷ್ಟೇ ಗಂಭೀರವಾಗಿ ಆತನ ಪ್ರಾಣವನ್ನು ಪರಿಗಣಿಸಬೇಕು.
ಧೋಲಾ ಪೋಸ್ಟ್ ಎಂಬ ಸ್ಥಳವೇ ಅರುಣಾಚಲದಲ್ಲಿ ಈ ಯುದ್ಧದ ಕೇಂದ್ರ ಬಿಂದು ಅನ್ನುವುದು ಈ ಪುಸ್ತಕದಿಂದ ನಮಗೆ ಗೊತ್ತಾಗುತ್ತದೆ, ಅದರ ಜೊತೆ ಜೊತೆಗೆ ಅಲ್ಲಿ ಆ ಪೋಸ್ಟ್ ಅನ್ನು ಸ್ಥಾಪಿಸಿದ್ದ ಮಿಲಿಟರಿ ಅಧಿಕಾರಿ ಆ ಪ್ರದೇಶದ ಬಗ್ಗೆ ಅಮೂಲಾಗ್ರವಾಗಿ ಅರ್ಥಮಾಡಿಕೊಂಡಿರಲಿಲ್ಲ ಎನ್ನುವುದು ಕೂಡ. ಆಗಿನ ಪ್ರಧಾನಿ ನೆಹರೂವನ್ನು ಒಪ್ಪಿಸಲು, ಒಲಿಸಿಕೊಳ್ಳಲು ಆಗಿನ ಅನೇಕ ಮಿಲಿಟರಿ ಅಧಿಕಾರಿಗಳು ಸೇನೆಯ ವಿಚಾರದಲ್ಲಿಯೇ ಅನೇಕ ಉಡಾಫೆಯ, ಹಾರಿಕೆಯ ಮಾತುಗಳನ್ನಾಡಿರುವುದು, ಅದರ ನಂತರ ನೆಹರೂ ಸರ್ಕಾರ ಸೈನಿಕರ ಅನೇಕ ಬೇಡಿಕೆಗಳ ಪತ್ರಗಳನ್ನು ಕಸದ ಬುಟ್ಟಿಗೆಸೆದು ಇರುವಷ್ಟರಲ್ಲಿಯೇ ಕಾದಾಡಿ ಎಂದಿದ್ದು ಎಲ್ಲವೂ ಇಲ್ಲಿ ದಾಖಲಾಗಿದೆ. ಶತ್ರು ಪಡೆಗಳ ಕಣ್ಣಿಗೆ ಬಿದ್ದೇವು ಅನ್ನುವ ಭಯದಿಂದ ಚಳಿಗೆ ಮೈ ಕಾಸಿಕೊಳ್ಳಲು ಬೆಂಕಿ ಹಾಕಿಕೊಳ್ಳಲೂ ಹಿಂದೇಟು ಹಾಕುತ್ತಿದ್ದ ನಮ್ಮ ಸೈನಿಕರ ಎದುರಿನಲ್ಲೇ ಧೈರ್ಯದಿಂದ ಚೀನೀ ಸೈನಿಕರು ಬೆಂಕಿ ಹಚ್ಚಿಕೊಂಡು ಮೈ ಕಾಯಿಸಿಕೊಳ್ಳುತ್ತಿದ್ದರಂತೆ, ಅದೂ ರಾತ್ರಿಯ ಹೊತ್ತು. ತಮ್ಮ ಇರುವಿಕೆಯನ್ನು ಧೈರ್ಯವಾಗಿ ತೋರಿಸಿಕೊಳ್ಳುತ್ತಿದ್ದ ಪ್ರಪಂಚದ ಮೊದಲ ಯುದ್ಧಭೂಮಿ ಎಂದರೆ ಇದೇ ಇರಬೇಕು!. ಇಷ್ಟೇ ಅಲ್ಲದೆ ಚೀನೀ ಬಣದ ಕೆಲವು ಸೇನಾ ಕಮ್ಯಾಂಡರ್ ಗಳು ಕೆಲವು ಬಾರಿ ಭಾರತೀಯ ಸೀಮಾ ರೇಖೆಯ ಬಳಿಗೆ ಧಾವಿಸಿ ಸ್ಪಷ್ಟ ಹಿಂದಿಯಲ್ಲಿ 'ಇದು ನಮ್ಮ ಸರಹದ್ದು, ಇಲ್ಲಿಂದ ನೀವು ಹಿಂದಕ್ಕೆ ಹೊರಡಿ' ಎಂದು ಘೋಷಣೆ ಹೊರಡಿಸುತ್ತಿದ್ದರಂತೆ. ಅದರರ್ಥ ಚೀನಾ ಭಾರತದ ಮೇಲೆ ಯುದ್ಧ ಸಾರುವುದಕ್ಕಾಗಿಯೇ ತನ್ನದೇ ಕೆಲವು ಸೇನಾಳುಗಳಿಗೆ ಹಿಂದಿ ಕಲಿಸಿತ್ತು, ಹಾಗು ಆ ಯೋಜನೆ ಕಡಿಮೆ ಅಂದರೂ ಎರಡು-ಮೂರು ವರ್ಷಗಳಿಂದಲೇ ಇತ್ತು ಎಂದು. ಯುದ್ಧಕಾಗಿಯೇ ತಯಾರಾಗಿ ಬಂದು ಯುದ್ಧದ ಮುನ್ಸೂಚನೆಯೇ ಇಲ್ಲದ ಸೇನೆಯ ಮೇಲೆ ಬಿದ್ದು ಅವರನ್ನು ಹೊಸಕಿ ಹಾಕಿದ ಭಯಾನಕ ರಕ್ತಸಿಕ್ತ ಅಧ್ಯಾಯಕ್ಕೆ ಚೀನಾ ಕಾರಣವಾಗಿತ್ತು. ಎಂದಿನಂತೆ ನಮ್ಮ ದೇಶದ ನೇತಾರರು ವಿಶ್ವ ಸಂಸ್ಥೆಯ ಮುಂದೆ ಗೋಗರೆಯುತ್ತಿದ್ದರು. ಒಟ್ಟಿನಲ್ಲಿ 'ಹೊಸ ಅಗಸ ಬಟ್ಟೆಯನ್ನ ಎತ್ತಿ ಎತ್ತಿ ಒಗೆದನಂತೆ' ಎನ್ನುವ ಗಾದೆಯಂತೆ ನೆಹರೂ ಹೊಸ ಅಧಿಕಾರ ಕೈಗೆ ಸಿಕ್ಕಾಗ ಎಲ್ಲ ತರಹದ ತಪ್ಪುಗಳನ್ನು ಮಾಡಿದ್ದಾರೆ, ಆದರೆ ಅದಕ್ಕೆ ನಿಜವಾಗಿಯೂ ಬೆಲೆ ತೆತ್ತಿದ್ದು ನಮ್ಮ ದೇಶದ ಅಸಂಖ್ಯ ಜನರು. ಅದು ಸರಿಮಾಡಲಾರದಂತಹ ತಪ್ಪುಗಳ ಪಟ್ಟಿ, ದುರಾದೃಷ್ಟವಶಾತ್ ಇಂದಿಗೂ ನಾವು ಆ ತಪ್ಪುಗಳ ಬಲೆಯೊಳಗೆ ಸಿಲುಕಿಕೊಂಡಿದ್ದೇವೆ.
ಹಾಗಂದ ತಕ್ಷಣ ಈ ಪುಸ್ತಕ 1962ರ ಚೀನಾ ಅತಿಕ್ರಮಣದ ಎಲ್ಲ ಆಯಾಮಗಳನ್ನು ವಿವರಿಸಿದೆ ಎಂದರ್ಥವಲ್ಲ, ಆ ಕೃತಿ ಯುದ್ಧ ಕಾಲದ ದೇಶದ ಸಮಗ್ರ ಕ್ಷೇತ್ರಗಳ ದೃಷ್ಟಿಕೋನದಿಂದ ಬರೆದುದ್ದಲ್ಲ, ಮಿಲಿಟರಿ ಕ್ಷೇತ್ರದೊಳಗೇ ಲಡಾಕ್ ನ ಗಡಿಯಲ್ಲಿ ನಡೆದ ಚೀನಾ ಠಳಾಯಿಸಿದ್ದನ್ನು ಎಲ್ಲೂ ನಮೂದು ಮಾಡುವುದಿಲ್ಲ. ಅರುಣಾಚಲ ಪ್ರದೇಶದ ತವಾಂಗ್, ಮೀಸಾಮಾರಿ ಪ್ರದೇಶಗಳ ಹಿಮ ಕಂದರಗಳಲ್ಲಿ ನಡೆದ ಚೀನಾ ಚಿತಾವಣೆಯನ್ನು, ನಮ್ಮ ವೀರ ಯೋಧರು ಆ ಕ್ಲಿಷ್ಟ ಪರಿಸ್ಥಿತಿಯಲ್ಲಿಯೂ ಯಾರನ್ನೂ ದೂರದೇ ಪ್ರಚಂಡ ಚಳಿಯಲ್ಲಿ ನಡುಗಿ ಶತ್ರುಗಳೆದುರಾದರೂ ಅವರಿಗೆ ಪ್ರತಿರೋಧವೊಡ್ಡಲು ಅವಶ್ಯ ಪ್ರಮಾಣದ ಗುಂಡುಗಳಿಲ್ಲದೆ ಬಂದೂಕಿನ ಮೊನೆಯಲ್ಲಿ ತಿವಿಯುತ್ತಲೇ ಹುತಾತ್ಮರಾದ ಸೈನಿಕರ ಬಗ್ಗೆ, ಹೇಳಬೇಕೆಂದರೆ ತಮ್ಮ ಕಣ್ಣರಿವಿಗೆ ಬಂದಷ್ಟನ್ನೇ ದಳವಿಯವರು ಬರೆದು ಮುಗಿಸಿದ್ದಾರೆ. ಆದರೆ ಏನು ಹೇಳಬೇಕೋ ಅದನ್ನು ಕರಾರುವಕ್ಕಾಗಿ ಹೇಳಿ ಮುಗಿಸಿದ್ದಾರೆ. ಮೊದಲೇ ಹೇಳಿದಂತೆ ಹೊಸ ಅಧಿಕಾರ ರಾಜಕಾರಣಿಗಳ ಕೈಲಿ ಯಾವ್ಯಾವ ಆಟ ಆಡಿಸಿತು, ಕೆಲವು ಕಡೆ ಅಂದಿನ ರಾಜಕಾರಣಿಗಳು ತಮಗೆ ಕೊಟ್ಟಿದ್ದ ಸ್ಥಾನ ನಿಭಾಯಿಸಲು ಎಷ್ಟು ಅಸಮರ್ಥರಾಗಿದ್ದರು ಎನ್ನುವುದನ್ನು ಎಳ್ಳಷ್ಟೂ ಅಳುಕಿಲ್ಲದೆ ಹೇಳಿ ಮುಗಿಸಿದ್ದಾರೆ ದಳವಿ.
ಅಂದಹಾಗೆ ದಳವಿಯವರು ಇದನ್ನು ಬರೆದದ್ದು ಅವರು ಸೆರೆಯಾಳಾಗಿ ಸಿಕ್ಕು ಬಂಧಿಸಿ ಚೀನಾಗೆ ಕರೆದೊಯ್ದಾಗ, ಚೀನಾದ ಸರೆಮನೆಯಲ್ಲಿ. ಚೀನಿಯರದ್ದೇ ಪೆನ್ನು, ಪೇಪರುಗಳಲ್ಲಿ ಭಾರತೀಯ ರಾಜಕೀಯ ನೇತಾರರು ಮಿಲಿಟರಿ ವಿಚಾರದಲ್ಲಿ ಉಂಟು ಮಾಡಿಕೊಂಡ ಅನಗತ್ಯ ಎಡವಟ್ಟುಗಳನ್ನು ಖಂಡ ತುಂಡವಾದ ಕಟು ಪದಗಳನ್ನು ಬಳಸಿಯೇ ಬರೆದರು ದಳವಿಯವರು!. ಅದಾದ ಮೇಲೆ ಅವರನ್ನು ಸೆರೆಯಿಂದ ಬಿಡಿಸಿ ಕೋಲ್ಕತ್ತಾದ ವಿಮಾನ ನಿಲ್ದಾಣಕ್ಕೆ ಕರೆತಂದಾಗ ನಮ್ಮ ಸೇನೆಯೇ ಅವರನ್ನು ನಂಬಲಿಲ್ಲವಂತೆ. ಚೀನಾದಲ್ಲಿ ಬ್ರೈನ್ ವಾಷ್ ಆಗಿರಬಹುದು ಎಂಬ ಊಹೆಯ ಆಧಾರದ ಮೇಲೆ ಖಡ್ಡಾಯ ರಜೆಯ ಮೇಲೆ ಅವರನ್ನು ಮನೆಯಲ್ಲಿ ಕುಳ್ಳಿರಿಸಿತಂತೆ ಸರ್ಕಾರ. ನಂತರ ದಳವಿಯವರನ್ನು ತೀರಾ ಹತ್ತಿರದಿಂದ ಬಲ್ಲವರಾಗಿದ್ದ ಕೆಲವು ಸೇನಾ ವಕ್ತಾರರು ಆ ಯುದ್ಧದ ಸೋಲಿನ ಕಾರಣಗಳ ಮೇಲೆ ವರದಿಯೊಂದನ್ನು ಬರೆದು ಸರ್ಕಾರಕ್ಕೆ ಕಳಿಸಿದರಂತೆ. ಆ ವರದಿಯಲ್ಲಿನ ಎಷ್ಟು ಅಂಶಗಳು ಅನುಷ್ಠಾನವಾದವೂ, ಇಲ್ಲ ಎನ್ನುವುದು ಆಗಿನ ಸೇನೆಗೆ ಹಾಗು ದೇವರಿಗೆ ಗೊತ್ತು. ಅದಾದ ಒಂದು ವರ್ಷದೊಳಗಾಗಿ ನೆಹರೂ ತೀರಿಕೊಂಡರು.
ದುರಂತವೆಂದರೆ ಅಂದು ಚೀನಾದೊಂದಿಗಿನ ಸೆಣಸಾಟದಲ್ಲಿ ಆ ಹಿಮದಲ್ಲಿ ಸಮಾಧಿಯಾದ ನನ್ನ ವೀರ ಯೋಧರಿಗೆ ಗೌರವಾದರಗಳಿಂದ ಅಂತ್ಯ ಕ್ರಿಯೆಗಳಾಗಲು ಸಾಧ್ಯವಿರಲಿಲ್ಲ, ಮೃತ ದೇಹಗಳನ್ನ ಹೊತ್ತು ನರಕ ಸದೃಶ ಪರ್ವತಗಳಲ್ಲಿ ನಡೆಯುವುದೂ ಸುಲಭದ ಮಾತಾಗಿರಲಿಲ್ಲ, ಹಾಗು ಹಾಗೆ ಹೊತ್ತು ತರಲು ಅವಶ್ಯ ಸೈನಿಕರ ಸಂಖ್ಯೆಯೂ ಅಲ್ಲಿರಲಿಲ್ಲ. ಚೀನಾವನ್ನು ಹಣಿಯಲು ಹಿಮ ಪರ್ವತಗಳಿಗೆ ಬರಿ ಕೈಯಲ್ಲಿ ಅಟ್ಟಿದ ಸರ್ಕಾರ ಅವರ ಪ್ರಾಣದ ಜೊತೆಗೆ ಅಕ್ಷರಶಃ ಚೆಲ್ಲಾಟವಾಡಿತು. ಯಾರ ಯಾರದೋ ಮಾತುಗಳಿಗೆ ಮಣೆ ಹಾಕಿ ಸತ್ಯ ಸಂಗತಿಗಳನ್ನು ಅರಿಯಲು ಅಸಮರ್ಥವಾಗಿ ಚೀನಾದ ಗುಂಡುಗಳಿಗೆ ಆಹಾರ ಒದಗಿಸಿತು. ಆ ಕೋಪ ಇನ್ನೂ ಭಾರತೀಯರ ಹೃದಯದ ಮೂಲೆಯಲ್ಲಿಇದ್ದೇ ಇದೆ. ನನ್ನ ದೇಶವನ್ನು ರಕ್ಷಿಸಲು ಹಿಮ ಪರ್ವತಗಳನ್ನು ಏರಿ ಹೊರಟ ಅಸಂಖ್ಯ ಮಹಾಸೇನಾನಿಗಳು, ವೀರ ಯೋಧರು ಹಿಂದಿರುಗಿ ಬರಲೇ ಇಲ್ಲ. ಅಲ್ಲೇ ಕಾಡು ಹೆಣಗಳಾಗಿಹೋದರು. ಕಡೆ ಪಕ್ಷ ಅವರ ಮೃತ ದೇಹಗಳನ್ನಾದರೂ ತಂದು ಗೌರವ ಸೂಚಿಸಲಾಗಲಿಲ್ಲ. ಆ ಕಾರಣಕ್ಕೆ ಭಾರತೀಯನಾಗಿ ಇಂದಿಗೂ ನನಗೆ ಖೇದವಿದೆ.
ದಳವಿಯವರ ಆ ಕೃತಿಯಲ್ಲಿ ಇನ್ನೂ ಅನೇಕ ವಿಷಯಗಳಿವೆ, ಬಿಡುವಾದಾಗ ಓದಿಕೊಳ್ಳಿ. ಕನ್ನಡಕ್ಕೆ ರವಿಬೆಳಗೆರೆಯವರು ಅನುವಾದಿಸಿದ್ದಾರೆ. ಅಲ್ಲಿ ಅವರು ಇತರೆ ಅನೇಕ ಪೂರಕ ಅಂಶಗಳನ್ನು ನಮೂದು ಮಾಡಿದ್ದಾರೆ. ಅದೇ ನೀವು ಆ ಮಹಾಯೋಧನಿಗೆ ಅರ್ಪಿಸುವ ಶ್ರದ್ಧಾಂಜಲಿ.
ಯಾವಾಗಲೂ ಭಾರತದ ವಿರುದ್ಧ ಕತ್ತಿ ಮಸೆಯುವ ಪ್ರಮುಖ ರಾಷ್ಟ್ರಗಳೇ ಎರಡು. ಅದರಲ್ಲಿ ಪಾಕಿಸ್ತಾನದ ಅಧ್ಯಾಯವಂತೂ ತಿಳಿದದ್ದೇ, ಆದರೆ ಚೀನಾದ ಬಗ್ಗೆ ಈಗಲೂ ಭಾರತೀಯರು ಅನೇಕರಿಗೆ ಅರಿವಿಲ್ಲ. ನಮ್ಮ ಸಾಲು ಸಾಲು ಸರ್ಕಾರಗಳು ಇದನ್ನು ಜನರಿಗೆ ಅರ್ಥ ಮಾಡಿಸುವಲ್ಲಿ ಸೋತಿವೆ. ಹಾಗೆಂದೇನು ಅನ್ಯ ದೇಶದ ಮೇಲೆ ಸರ್ಕಾರ ತನ್ನ ಪ್ರಜೆಗಳನ್ನು ಎತ್ತಿಕಟ್ಟಬೇಕಿಲ್ಲ, ಸತ್ಯವನ್ನು ಅರುಹಿದ್ದರೆ ಸಾಕಾಗಿತ್ತು, ಅದನ್ನೂ ಮಾಡಿಲ್ಲವೆನ್ನುವುದು ಖೇದಕರ. ಭಾರತ ಈವತ್ತಿಗೂ ತನ್ನ ಪ್ರಜೆಗಳಿಗೆ ಗಡಿಯ ವಿಚಾರದಲ್ಲಿ ಅನೇಕ ವಿಚಾರಗಳನನ್ನು ಮುಚ್ಚಿಟ್ಟಿದೆ. ಅದರಲ್ಲೂ ಚೀನಾದೊಂದಿಗೆ ಹಂಚಿಕೊಂಡಿರುವ ಗಡಿಯ ವಿಚಾರದಲ್ಲಿ ಇನ್ನೂ ಅನೇಕ ಗೊಂದಲಗಳಿವೆ. ಈ ಗೊಂದಲಗಳಿಂದಾಗಿಯೇ ನಮ್ಮ ಸೈನಿಕರು ಚೀನಾ ಸೈನಿಕರೊಂದಿಗೆ ಹಲವಾರು ಬಾರಿ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ವಿಸ್ತರಣಾವಾದದ ಭೂತ ಹತ್ತಿಸಿಕೊಂಡಿರುವ ಚೀನಾ ಯಾವುದಕ್ಕೂ ಯಾರಿಗೂ ಬಗ್ಗದೆ ತನ್ನ ಸುತ್ತಲಿನ ಎಲ್ಲಾ ದೇಶಗಳ ಜೊತೆಗೂ ಗಡಿ ಸಂಘರ್ಷ ಹೊಂದೇ ಇದೆ.
ನಮ್ಮ ನೆರೆಯ ದೇಶಗಳ ವಿಷಯವೇನೇ ಇದ್ದರೂ ನಮ್ಮ ದೇಶಕ್ಕೆ ಸ್ವಾತಂತ್ರ್ಯ ರಕ್ತಪಾತವಿಲ್ಲದೆ ಬಂದಿದ್ದು ಸಂತೋಷಪಡುವ ವಿಚಾರ, ಆದರೆ ಅದೇ ಗುಂಗಿನಲ್ಲಿ ನಮ್ಮ ನೇತಾರರು ಸ್ವಾತಂತ್ರ್ಯದ ಬೆಲೆಯನ್ನೇ ಅರ್ಥ ಮಾಡಿಕೊಳ್ಳದಾದರು. ರಕ್ತಪಾತಗಳಾಗುವ ಸಾಧ್ಯಾಸಾಧ್ಯತೆ ನಮ್ಮ ನಾಯಕರಿಗೆ ಅರಿವಿಗೆ ಬರಲೇ ಇಲ್ಲ. ಶಾಂತಿಮಂತ್ರ, ತಟಸ್ಥ ಧೋರಣೆ, ಅಲಿಪ್ತ ನೀತಿಗಳೊಂದಿಗೆ ಇದ್ದರೆ ನಮ್ಮ ತಂಟೆಗೆ ಯಾರು ಬರಲಾರರು ಎಂಬ ಭ್ರಮಾ ಲೋಕ ಸೃಷ್ಟಿಸಿಕೊಂಡು ಕೂತರು. ಸ್ವಾತಂತ್ರ್ಯ ಕೊಡಿಸುವಲ್ಲಿ ಸಫಲವಾದ ಶಾಂತಿಮಂತ್ರ ಸ್ವಾತಂತ್ರ್ಯಾನಂತರದಲ್ಲಿ ಹಳ್ಳ ಹಿಡಿದು ಅನೇಕ ಅನಾಹುತಗಳನ್ನು ಸೃಷ್ಟಿಸಿದ್ದು ನಮಗೆಲ್ಲಾ ಗೊತ್ತೇ ಇದೆ. ಅವುಗಳ ಪೈಕಿ ಚೀನಾದ ಅತಿಕ್ರಮಣವೂ ಒಂದು. ಮನುಷ್ಯನೊಬ್ಬ ಒಳ್ಳೆಯವನಾಗಿ ಬದುಕಬೇಕಾದರೆ ಬರಿಯ ಒಳ್ಳೆಯತನವನ್ನು ನೆಚ್ಚಿಕೊಂಡು ಮಾತ್ರ ಕುಳಿತುಕೊಳ್ಳುವುದು ಎಂದೆಂದಿಗೂ ಸಾಲದು, ಕೆಟ್ಟವರಿಂದ ಸದಾ ದೂರವುಳಿಯುವ ಗರ್ವ, ಛಾತಿ ಅವನಿಗೆ ಇರಬೇಕು. ಅಷ್ಟಿರಬೇಕಾದರೆ ಕೆಟ್ಟದ್ದೇನೂ ಎನ್ನುವುದೂ ಅವನಿಗೆ ತಿಳಿದಿರಬೇಕು. ಭಾರತದ ವಿಚಾರದಲ್ಲಿ ಇದು ಹಾಗಲಿಲ್ಲ, ವಿರುದ್ಧವಾಗಿತ್ತು.ಈ ವಿಚಾರ ಸದರಿ ಪುಸ್ತಕದಲ್ಲೂ ವಿಸ್ತಾರವಾಗಿ ಹರಿಯುತ್ತದೆ.
ರಕ್ತಪಾತವಿಲ್ಲದೆ ಸ್ವಾತಂತ್ರ್ಯ ಬಂದ ಖುಷಿಗೋ ಎಂಬಂತೆ ನಮ್ಮವರು ಸ್ವಾತಂತ್ರ್ಯ ಬರುವ ಹೊತ್ತಿಗೆ ಭಾರತದ ಉಪಖಂಡ ಎಂದೆಂದೂ ಮರೆಯದ ದೇಶ ವಿಭಜನೆಯ ರಕ್ತಪಾತ ಮಾಡಿ ಮುಗಿಸಿಯಾಗಿತ್ತು. ಭಾರತೀಯರ ಮನಸ್ಥಿತಿಯನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದ್ದ ಬ್ರಿಟೀಷ್ ದೊರೆಗಳು 'ನಿಮ್ಮ ಕರ್ಮ' ಎಂದು ಕೈ ಕೊಡವಿಕೊಂಡು ಇಲ್ಲಿಂದ ಹೊರಟು ಹೋಗಿದ್ದರು.
ನಮಗೆ ಸ್ವಾತಂತ್ರ್ಯ ಬಂದು ಎರಡು-ಮೂರು ವರ್ಷಗಳ ಅಂತರಕ್ಕೆ ಚೀನಾ ತನ್ನ ಮತ್ತು ಭಾರತದ ನಡುವೆ ಇದ್ದ ಟಿಬೆಟ್ ಅನ್ನು ನುಂಗಿ ನೊಣವಿಕೊಂಡಾಗ ಭಾರತ ಸರ್ಕಾರ ಅದಕ್ಕೆ ಪ್ರತಿಕ್ರಿಯಿಸುವುದಿರಲಿ ಒಂದು ಆತಂಕವನ್ನೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊರಹಾಕಲಿಲ್ಲ. ಇದನ್ನು ಹೇಡಿತನ ಎಂದು ಬಗೆಯಿತು ಚೀನಾ. ಖರಾರುವಕ್ಕಾದ ಪೂರ್ವ ತಯಾರಿಗಳನ್ನು ಮಾಡಿಕೊಂಡ ಚೀನಾ ಮುಂದೆ 1962ರಲ್ಲಿ ಭಾರತಕ್ಕೆ ಯಾವುದೇ ಸುಳಿವು ಕೊಡದೆ ಮೈ ಮೇಲೆ ಬಿದ್ದಿತು, ಭಾರತದ ಸಹನೆಗೆ, ಶಾಂತಿಮಂತ್ರಕ್ಕೆ ಸರಿಯಾಗೇ ಪೆಟ್ಟು ಕೊಟ್ಟಿತ್ತು. ಅವರ ತಯಾರಿಗಳನ್ನು, ಭಾರತ ಸರ್ಕಾರದ ಉಡಾಫೆಯನ್ನೂ ಒಂದೊಂದಾಗಿ ತೆರೆದಿಡುತ್ತಾ ಸಾಗುತ್ತಾರೆ ದಳವಿ.
ಅಲ್ಲಿ ವಿವರಿಸಿರುವ ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ ಗಡಿ ಹಿಮದ ಕಾಡುಗಳಲ್ಲಿ ಹೈರಾಣಾಗಿ ಪ್ರಾಣ ಬಿಡುವ ಕೆಲವು ಸನ್ನಿವೇಶಗಳು, ಎದುರಾಳಿಗಿಂತ ಹಸಿವು, ಚಳಿಗಳೇ ನಮ್ಮ ಯೋಧರನ್ನು ರೇಜಿಗೆಬ್ಬಿಸಿದ ಅನೇಕ ಸನ್ನಿವೇಶಗಳು ನಮ್ಮೊಳಗೇ ಅಸಹನೀಯತೆಯನ್ನುಂಟು ಮಾಡುತ್ತವೆ. ಯೋಧನೊಬ್ಬ ಗುಹೆಯೊಳಗೆ ಜಾಗ ಸಿಗದೇ ರಾತ್ರಿಯಿಡೀ ಹೊರಗೆ ಧೋ ಎಂದು ಸುರಿಯುತ್ತಿದ್ದ ಮಂಜಿನಲ್ಲಿ ಕುಳಿತು ಬೆಳಗಾಗುವ ಹೊತ್ತಿಗೆ ಪ್ರಾಣವನ್ನೇ ಬಿಟ್ಟು ಬಿಡುವ ಒಂದು ಕಡೆ ಪ್ರಸ್ತಾವವಿದೆ, ಪ್ರಾಣವನ್ನೇ ತೆಗೆಯುವಷ್ಟು ತೀಕ್ಷ್ಣ ಚಳಿಯಿರುವೆಡೆಯಲ್ಲಿ ಸರಿಯಾದ ಬೂಟು, ಬಟ್ಟೆಗಳನ್ನು ಕೊಡದೆ ಯುದ್ಧಮಾಡಲು ನಮ್ಮ ಸೈನಿಕರನ್ನು ಅಟ್ಟಿದ್ದು ಸರ್ಕಾರಕ್ಕೆ ಮುಂದಾಲೋಚನೆ, ನಿಜ ಸ್ಥಿತಿಯ ಅರಿವು ಯಾವುದೂ ಇರಲಿಲ್ಲವೆನ್ನುವುದನ್ನು ಸಾಬೀತು ಮಾಡುತ್ತದೆ.
ಅನ್ನವೆಂದರೆ ಆಗದ ರೊಟ್ಟಿಯ ಬಹುಪ್ರಿಯರಾದ ಪಂಜಾಬಿಗಳು ಅರುಣಾಚಲದ ಹಿಮ ಪರ್ವತಗಳ ಟೆಂಟುಗಳಲ್ಲಿ ಅನ್ನ ಬೇಯಿಸಿಕೊಂಡು ತಿನ್ನುತ್ತಿದ್ದರಂತೆ, ಅದ್ಯಾಕೆ ಹೀಗೆ ಅನ್ನುವ ಬ್ರಿಗೇಡಿಯರ್ ಪ್ರಶ್ನೆಗೆ 'ರೊಟ್ಟಿಯ ಕಾವಲಿಯನ್ನು ಈ ಪರ್ವತಕ್ಕೆ ಹೊತ್ತು ತರಲು 3-4 ಸೈನಿಕರ ಅಗತ್ಯವಾದರೂ ಉಂಟು ಅದರ ಬದಲು ನಾವು ಅವರ ಕೈಲೇ ಮದ್ದು ಗುಂಡುಗಳನ್ನು ಹೊರಿಸಿಕೊಂಡು ಬಂದೆವು' ಅಂದರಂತೆ. ಹೀಗೆ ತಮ್ಮ ಬೇಕು, ಬೇಡಗಳನ್ನು ಬದಿಗೊತ್ತುವ ಸೈನಿಕ ದೇಶಕ್ಕಾಗಿ ಬಡಿದಾಡಿ ಸಾಯಲು ಎಂದೆಂದಿಗೂ ಸನ್ನದ್ಧನಾಗಿರುತ್ತಾನೆ, ಆದರೆ ಆತನನ್ನು ನಡೆಸಿಕೊಳ್ಳಬೇಕಾದ ಸರ್ಕಾರವೂ ಕೂಡ ಅಷ್ಟೇ ಗಂಭೀರವಾಗಿ ಆತನ ಪ್ರಾಣವನ್ನು ಪರಿಗಣಿಸಬೇಕು.
ಧೋಲಾ ಪೋಸ್ಟ್ ಎಂಬ ಸ್ಥಳವೇ ಅರುಣಾಚಲದಲ್ಲಿ ಈ ಯುದ್ಧದ ಕೇಂದ್ರ ಬಿಂದು ಅನ್ನುವುದು ಈ ಪುಸ್ತಕದಿಂದ ನಮಗೆ ಗೊತ್ತಾಗುತ್ತದೆ, ಅದರ ಜೊತೆ ಜೊತೆಗೆ ಅಲ್ಲಿ ಆ ಪೋಸ್ಟ್ ಅನ್ನು ಸ್ಥಾಪಿಸಿದ್ದ ಮಿಲಿಟರಿ ಅಧಿಕಾರಿ ಆ ಪ್ರದೇಶದ ಬಗ್ಗೆ ಅಮೂಲಾಗ್ರವಾಗಿ ಅರ್ಥಮಾಡಿಕೊಂಡಿರಲಿಲ್ಲ ಎನ್ನುವುದು ಕೂಡ. ಆಗಿನ ಪ್ರಧಾನಿ ನೆಹರೂವನ್ನು ಒಪ್ಪಿಸಲು, ಒಲಿಸಿಕೊಳ್ಳಲು ಆಗಿನ ಅನೇಕ ಮಿಲಿಟರಿ ಅಧಿಕಾರಿಗಳು ಸೇನೆಯ ವಿಚಾರದಲ್ಲಿಯೇ ಅನೇಕ ಉಡಾಫೆಯ, ಹಾರಿಕೆಯ ಮಾತುಗಳನ್ನಾಡಿರುವುದು, ಅದರ ನಂತರ ನೆಹರೂ ಸರ್ಕಾರ ಸೈನಿಕರ ಅನೇಕ ಬೇಡಿಕೆಗಳ ಪತ್ರಗಳನ್ನು ಕಸದ ಬುಟ್ಟಿಗೆಸೆದು ಇರುವಷ್ಟರಲ್ಲಿಯೇ ಕಾದಾಡಿ ಎಂದಿದ್ದು ಎಲ್ಲವೂ ಇಲ್ಲಿ ದಾಖಲಾಗಿದೆ. ಶತ್ರು ಪಡೆಗಳ ಕಣ್ಣಿಗೆ ಬಿದ್ದೇವು ಅನ್ನುವ ಭಯದಿಂದ ಚಳಿಗೆ ಮೈ ಕಾಸಿಕೊಳ್ಳಲು ಬೆಂಕಿ ಹಾಕಿಕೊಳ್ಳಲೂ ಹಿಂದೇಟು ಹಾಕುತ್ತಿದ್ದ ನಮ್ಮ ಸೈನಿಕರ ಎದುರಿನಲ್ಲೇ ಧೈರ್ಯದಿಂದ ಚೀನೀ ಸೈನಿಕರು ಬೆಂಕಿ ಹಚ್ಚಿಕೊಂಡು ಮೈ ಕಾಯಿಸಿಕೊಳ್ಳುತ್ತಿದ್ದರಂತೆ, ಅದೂ ರಾತ್ರಿಯ ಹೊತ್ತು. ತಮ್ಮ ಇರುವಿಕೆಯನ್ನು ಧೈರ್ಯವಾಗಿ ತೋರಿಸಿಕೊಳ್ಳುತ್ತಿದ್ದ ಪ್ರಪಂಚದ ಮೊದಲ ಯುದ್ಧಭೂಮಿ ಎಂದರೆ ಇದೇ ಇರಬೇಕು!. ಇಷ್ಟೇ ಅಲ್ಲದೆ ಚೀನೀ ಬಣದ ಕೆಲವು ಸೇನಾ ಕಮ್ಯಾಂಡರ್ ಗಳು ಕೆಲವು ಬಾರಿ ಭಾರತೀಯ ಸೀಮಾ ರೇಖೆಯ ಬಳಿಗೆ ಧಾವಿಸಿ ಸ್ಪಷ್ಟ ಹಿಂದಿಯಲ್ಲಿ 'ಇದು ನಮ್ಮ ಸರಹದ್ದು, ಇಲ್ಲಿಂದ ನೀವು ಹಿಂದಕ್ಕೆ ಹೊರಡಿ' ಎಂದು ಘೋಷಣೆ ಹೊರಡಿಸುತ್ತಿದ್ದರಂತೆ. ಅದರರ್ಥ ಚೀನಾ ಭಾರತದ ಮೇಲೆ ಯುದ್ಧ ಸಾರುವುದಕ್ಕಾಗಿಯೇ ತನ್ನದೇ ಕೆಲವು ಸೇನಾಳುಗಳಿಗೆ ಹಿಂದಿ ಕಲಿಸಿತ್ತು, ಹಾಗು ಆ ಯೋಜನೆ ಕಡಿಮೆ ಅಂದರೂ ಎರಡು-ಮೂರು ವರ್ಷಗಳಿಂದಲೇ ಇತ್ತು ಎಂದು. ಯುದ್ಧಕಾಗಿಯೇ ತಯಾರಾಗಿ ಬಂದು ಯುದ್ಧದ ಮುನ್ಸೂಚನೆಯೇ ಇಲ್ಲದ ಸೇನೆಯ ಮೇಲೆ ಬಿದ್ದು ಅವರನ್ನು ಹೊಸಕಿ ಹಾಕಿದ ಭಯಾನಕ ರಕ್ತಸಿಕ್ತ ಅಧ್ಯಾಯಕ್ಕೆ ಚೀನಾ ಕಾರಣವಾಗಿತ್ತು. ಎಂದಿನಂತೆ ನಮ್ಮ ದೇಶದ ನೇತಾರರು ವಿಶ್ವ ಸಂಸ್ಥೆಯ ಮುಂದೆ ಗೋಗರೆಯುತ್ತಿದ್ದರು. ಒಟ್ಟಿನಲ್ಲಿ 'ಹೊಸ ಅಗಸ ಬಟ್ಟೆಯನ್ನ ಎತ್ತಿ ಎತ್ತಿ ಒಗೆದನಂತೆ' ಎನ್ನುವ ಗಾದೆಯಂತೆ ನೆಹರೂ ಹೊಸ ಅಧಿಕಾರ ಕೈಗೆ ಸಿಕ್ಕಾಗ ಎಲ್ಲ ತರಹದ ತಪ್ಪುಗಳನ್ನು ಮಾಡಿದ್ದಾರೆ, ಆದರೆ ಅದಕ್ಕೆ ನಿಜವಾಗಿಯೂ ಬೆಲೆ ತೆತ್ತಿದ್ದು ನಮ್ಮ ದೇಶದ ಅಸಂಖ್ಯ ಜನರು. ಅದು ಸರಿಮಾಡಲಾರದಂತಹ ತಪ್ಪುಗಳ ಪಟ್ಟಿ, ದುರಾದೃಷ್ಟವಶಾತ್ ಇಂದಿಗೂ ನಾವು ಆ ತಪ್ಪುಗಳ ಬಲೆಯೊಳಗೆ ಸಿಲುಕಿಕೊಂಡಿದ್ದೇವೆ.
ಹಾಗಂದ ತಕ್ಷಣ ಈ ಪುಸ್ತಕ 1962ರ ಚೀನಾ ಅತಿಕ್ರಮಣದ ಎಲ್ಲ ಆಯಾಮಗಳನ್ನು ವಿವರಿಸಿದೆ ಎಂದರ್ಥವಲ್ಲ, ಆ ಕೃತಿ ಯುದ್ಧ ಕಾಲದ ದೇಶದ ಸಮಗ್ರ ಕ್ಷೇತ್ರಗಳ ದೃಷ್ಟಿಕೋನದಿಂದ ಬರೆದುದ್ದಲ್ಲ, ಮಿಲಿಟರಿ ಕ್ಷೇತ್ರದೊಳಗೇ ಲಡಾಕ್ ನ ಗಡಿಯಲ್ಲಿ ನಡೆದ ಚೀನಾ ಠಳಾಯಿಸಿದ್ದನ್ನು ಎಲ್ಲೂ ನಮೂದು ಮಾಡುವುದಿಲ್ಲ. ಅರುಣಾಚಲ ಪ್ರದೇಶದ ತವಾಂಗ್, ಮೀಸಾಮಾರಿ ಪ್ರದೇಶಗಳ ಹಿಮ ಕಂದರಗಳಲ್ಲಿ ನಡೆದ ಚೀನಾ ಚಿತಾವಣೆಯನ್ನು, ನಮ್ಮ ವೀರ ಯೋಧರು ಆ ಕ್ಲಿಷ್ಟ ಪರಿಸ್ಥಿತಿಯಲ್ಲಿಯೂ ಯಾರನ್ನೂ ದೂರದೇ ಪ್ರಚಂಡ ಚಳಿಯಲ್ಲಿ ನಡುಗಿ ಶತ್ರುಗಳೆದುರಾದರೂ ಅವರಿಗೆ ಪ್ರತಿರೋಧವೊಡ್ಡಲು ಅವಶ್ಯ ಪ್ರಮಾಣದ ಗುಂಡುಗಳಿಲ್ಲದೆ ಬಂದೂಕಿನ ಮೊನೆಯಲ್ಲಿ ತಿವಿಯುತ್ತಲೇ ಹುತಾತ್ಮರಾದ ಸೈನಿಕರ ಬಗ್ಗೆ, ಹೇಳಬೇಕೆಂದರೆ ತಮ್ಮ ಕಣ್ಣರಿವಿಗೆ ಬಂದಷ್ಟನ್ನೇ ದಳವಿಯವರು ಬರೆದು ಮುಗಿಸಿದ್ದಾರೆ. ಆದರೆ ಏನು ಹೇಳಬೇಕೋ ಅದನ್ನು ಕರಾರುವಕ್ಕಾಗಿ ಹೇಳಿ ಮುಗಿಸಿದ್ದಾರೆ. ಮೊದಲೇ ಹೇಳಿದಂತೆ ಹೊಸ ಅಧಿಕಾರ ರಾಜಕಾರಣಿಗಳ ಕೈಲಿ ಯಾವ್ಯಾವ ಆಟ ಆಡಿಸಿತು, ಕೆಲವು ಕಡೆ ಅಂದಿನ ರಾಜಕಾರಣಿಗಳು ತಮಗೆ ಕೊಟ್ಟಿದ್ದ ಸ್ಥಾನ ನಿಭಾಯಿಸಲು ಎಷ್ಟು ಅಸಮರ್ಥರಾಗಿದ್ದರು ಎನ್ನುವುದನ್ನು ಎಳ್ಳಷ್ಟೂ ಅಳುಕಿಲ್ಲದೆ ಹೇಳಿ ಮುಗಿಸಿದ್ದಾರೆ ದಳವಿ.
1962ರ ಭಾರತ-ಚೀನಾ ಯುದ್ಧ ಸ್ಮಾರಕ, ತವಾಂಗ್, ಅರುಣಾಚಲ ಪ್ರದೇಶ. |

-0-