ಮಹದೇಶ್ವರ ಬೆಟ್ಟ, ಎಡೆಯೂರು ಇವೆಲ್ಲ ನನಗೆ ಹೊಸವೇನಲ್ಲ. ವರ್ಷಕ್ಕೊಂದು ಸಾರಿ ಇಲ್ಲೆಲ್ಲಾ ಎಡತಾಕಿ ಬರುವ ರೂಢಿಯೊಂದು ನಮ್ಮ ಮನೆಯಲ್ಲಿ ಹಿಂದೆಯಿಂದ ಬೆಳೆದುಬಂದಿದ್ದು ನಾನು ಕಂಡಿಲ್ಲವಾದರೂ ನಾನು ಅದನ್ನು ಅನೂಚಾನುವಾಗಿ ಪಾಲಿಸುತ್ತಾ ಬಂದಿದ್ದೇನೆ. ನಾನು ಬುದ್ಧಿ ಕಂಡು ಕೈಲಿ ಕಾಸಾಡಿಸುವ ಹಾಗೆ ಆದಮೇಲೆ ಎಲ್ಲರಂತೆ ನಾನು ವರ್ಷಕ್ಕೊಮ್ಮೆ ಅಲ್ಲಿಗೆ ಭೇಟಿ ಕೊಡುತ್ತಲೇ ಬಂದಿದ್ದೇನೆ. ನಮ್ಮ ಹಿರೀಕರು ಇವೇ ದೇವರುಗಳಿಗೆ ಅಡ್ಡಬಿದ್ದು ತಮ್ಮ ಕಷ್ಟ, ಸುಖಗಳನ್ನೆಲ್ಲಾ ಇಲ್ಲೇ ಹಂಚಿಕೊಂಡಿದ್ದು ಅನ್ನುವ ಅಭಿಮಾನ ಆ ಸ್ಥಳಗಳಲ್ಲಿ ನಿಂತಾಗ ನನಗೆ ಅನುರಣಿಸಿದಂತಾಗುತ್ತದೆ. ನಮ್ಮ ವಂಶಾವಳಿಯವರೆಲ್ಲಾ ತಮ್ಮ ಆಗು, ಹೋಗುಗಳಿಗೆ ವಂದಿಸಿದ್ದು, ಬೈದುಕೊಂಡಿದ್ದು, ಗೊಣಗಿಕೊಂಡದ್ದು, ಹೊಣೆಗಾರಿಕೆ ಹೊರಿಸಿದ್ದು ಎಲ್ಲವೂ ಇವೇ ದೇವರುಗಳ ಸನ್ನಿಧಾನದಲ್ಲಿ ಅನ್ನುವ ಕಾರಣಕ್ಕೆ ನನಗೆ ಅಲ್ಲಿ ಭಕ್ತಿ ಜಾಗೃತ ವಾಗುತ್ತದೆ.
ದೇವರಿಲ್ಲದ ಸ್ಥಳವೇ ಪ್ರಪಂಚದಲ್ಲಿಲ್ಲ ಅನ್ನುತ್ತಾರೆ ತಿಳಿದವರು. ಆದರೂ ಮನುಷ್ಯ ದೇವಸ್ಥಾನಕ್ಕೆ ಹೋಗುತ್ತಾನೆ. ಬರಿ ನಾವು ಮಾತ್ರವಲ್ಲ, ಏಕ ದೇವೋಪಾಸನೆಯ ಸಂಸ್ಕೃತಿಯ ಮುಸಲ್ಮಾನರು ಮೆಕ್ಕಾದಲ್ಲಿರುವ ಅಲ್ಲಾಹುವಿನ ಪ್ರತಿರೂಪವಾದ ಕಬ್ಬಾಕ್ಕೆ ಭೇಟಿ ಕೊಟ್ಟು ತಾವು ಪುನೀತರಾದೆವು ಅನ್ನುವ ಭಾವ ತಳೆಯುತ್ತಾರೆ. ಕ್ರಿಶ್ಚಿಯನ್ ಸಮುದಾಯದವರೂ ಚರ್ಚುಗಳಿಗೆ ಭೇಟಿ ಕೊಟ್ಟು ತಮ್ಮ ಪ್ರಾರ್ಥನೆ ಸಲ್ಲಿಸುವುದಲ್ಲದೆ ವ್ಯಾಟಿಕನ್ ಸಿಟಿ, ಬೆಥ್ಲೆಹೆಮ್ ಸ್ಥಳಗಳ ಮೇಲೆ ಪೂಜ್ಯ ಭಾವನೆ ಇರಿಸಿಕೊಂಡಿದ್ದಾರೆ. ತಮ್ಮ ಜೀವಮಾನದಲ್ಲಿ ಒಮ್ಮೆ ಅಲ್ಲಿಗೆ ಹೋಗಿ ಬರಬೇಕು ಎನ್ನುವುದು ಅವರ ಅಭಿಲಾಷೆ ಕೂಡಾ ಆಗಿರುತ್ತದೆ. ಮನುಷ್ಯರಿಗೆ ಆದರಲ್ಲೂ ಆಸ್ತಿಕರಿಗೆ ದೇವರ ಅಸ್ತಿತ್ವದ ಮೇಲೆ ನಂಬಿಕೆ ಯಥೇಚ್ಛವಾಗಿದೆ, ಆದರೆ ಅವರಿಗೆ ಆರಾಧನೆಗೆ ಏನಾದರೊಂದು ಬೇಕು ಎನಿಸುತ್ತದೆ. ಇಂಗ್ಲೀಷ್ ಭಾಷೆಯಲ್ಲಿ ಇದನ್ನ ಆಬ್ಜೆಕ್ಟ್ ಆಫ್ ವರ್ಶಿಪ್(Object Of Worship) ಎನ್ನುತ್ತಾರೆ. ಆ ವಸ್ತು ಇಲ್ಲದಿದ್ದರೆ ಗರಿಷ್ಟ ಜನಕ್ಕೆ ಭಕ್ತಿಯಂತಹ ಭಾವಗಳನ್ನ ಪ್ರಚೋದಿಸುವುದಕ್ಕಾಗುವದೇ ಇಲ್ಲ.
ಇದು ಎಲ್ಲರೂ ಒಪ್ಪಿಕೊಳ್ಳುವ, ನಮ್ಮಲ್ಲಿರುವ ಸಾಮಾನ್ಯ ಬಲಹೀನತೆ. ಈ ಬಲಹೀನತೆಯನ್ನೇ ಬಂಡವಾಳ ಮಾಡಿಕೊಂಡ ದೇಗುಲಗಳು ದುಡ್ಡು ಮಾಡುವ ದಂಧೆಗಿಳಿದಿರುವುದು ಮಾತ್ರ ಖೇದಕರ. ಅನಾದಿ ಕಾಲದಿಂದಲೂ ನಮ್ಮ ದೇಗುಲಗಳು ಶಿಕ್ಷಣ ಕೇಂದ್ರಗಳಾಗಿ, ವೈದ್ಯಕೀಯ ಉಪಚಾರಕ್ಕೆ ಸಾಮಾನ್ಯ ಕೇಂದ್ರಗಳಾಗಿ, ಚರ್ಚೆ-ವಿದ್ವತ್ ಪ್ರದರ್ಶನಗಳಿಗೆ ಅಖಾಡವಾಗಿ, ದಾರಿಹೋಕರಿಗೆ ತಂಗುದಾಣವಾಗಿ, ಶಿಲ್ಪಕಲಾ ರಸಿಕರಿಗೆ ರಸದೌತಣವಾಗಿ, ಸಾಮಾಜಿಕ ಬದಲಾವಣೆಗೆ ಕೇಂದ್ರಗಳಾಗಿ, ಜ್ಞಾನಿಗಳು-ಅಜ್ಞಾನಿಗಳು, ಪಂಡಿತ ಪಾಮರರಾದಿಯಾಗಿ ಎಲ್ಲರೂ ಕೂಡುವ ಸ್ಥಳಗಳಾಗಿದ್ದವು. ದೇಗುಲಗಳ ಬಹುಪಯೋಗಿ ದೃಷ್ಟಿಕೋನವನ್ನಿರಿಸಿಕೊಂಡೆ ರಾಜ-ಮಹಾರಾಜರುಗಳು ದೇಗುಲಗಳ ನಿರ್ಮಾಣಕ್ಕೆ ಬೆಲೆಕೊಡುತ್ತಿದ್ದುದು. ನಮ್ಮ ದೇಶ ಹೊರಗಿನವರ ಆಕ್ರಮಣಕ್ಕೆ ತುತ್ತಾಗಿ ತನ್ನತನವನ್ನ ಕಳೆದುಕೊಳ್ಳ ಹೊರಡುವುದಕ್ಕೂ ಮೊದಲು ದೇಗುಲಗಳನ್ನ ಕಟ್ಟಿಸದೆ ಸತ್ತ ರಾಜನ ಒಂದೇ ಒಂದು ಉದಾಹರಣೆಯೂ ನಮ್ಮ ದೇಶದಲ್ಲಿ ಇರಲಿಲ್ಲ ಅಂದರೆ ಅದರ ತೀವ್ರತೆಯನ್ನ ನೀವು ಅರ್ಥ ಮಾಡಿಕೊಳ್ಳಬಹುದು.
ಇಂತಿದ್ದ ದೇಗುಲಗಳನ್ನ ಇಂದು ನಮ್ಮ ಸರ್ಕಾರಗಳು, ಅದರಲ್ಲೂ ಸೆಕ್ಯುಲರ್ ಸರ್ಕಾರಗಳು ಆಕ್ರಮಿಸಿಕೊಂಡಿವೆ. ಯಾವುದೋ ಧರ್ಮದ ದೇಗುಲಕ್ಕೆ ಸರ್ಕಾರ ಬೇಕೆಂತಲೇ ಇನ್ನಾವುದೋ ಧರ್ಮದ ಅಧಿಕಾರಿಯನ್ನ ತಂದು ಕೂರಿಸಿ ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡುವಂತಹ ಘಟನೆಗಳು ನಮ್ಮ ನಡುವೆ ಹಲವಾರಿವೆ. ದೇವಸ್ಥಾನದ ಅನೇಕ ಆಚರಣೆಗಳು ನ್ಯಾಯಾಲಯದ ನಿರ್ದೇಶನದ ಮೇರೆಗೆ ನಡೆಯುವ ಮಟ್ಟ ತಲುಪಿದೆ. ಬಲವಂತವಲ್ಲದ, ಅನ್ಯರಿಗೆ ಹಿಂಸೆಯಾಗದ ಯಾವ ಆಚರಣೆಯಾದರೂ ಅದು ಅವರ ವಿವೇಚನೆಗೆ ಬಿಟ್ಟದ್ದು ಎಂಬ ಭಾರತದ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ನ್ಯಾಯಾಲಯದ ಅನೇಕ ತೀರ್ಪುಗಳು ಸವಾರಿ ಮಾಡಿವೆ, ಆ ನಿಟ್ಟಿನಲ್ಲಿ ಎಷ್ಟೋ ಆಚರಣೆಗಳು ತಡೆಯಾಗಿವೆ.
ಧಾರ್ಮಿಕ ಸ್ಥಳಗಳಲ್ಲಿ ಸರ್ಕಾರ ಪೋಲೀಸರ ಅಥವಾ ಇನ್ನಾವುದೇ ಸರ್ಕಾರಿ ಅಧಿಕಾರಿಗಳ ಬಲ ಪ್ರಯೋಗ ಮಾಡುವಂತಿಲ್ಲ ಎನ್ನುವ ಶಿಷ್ಟಾಚಾರದ ನಡುವೆಯೇ ಸರ್ಕಾರ ನಯವಾದ್ದೊಂದು ಧೋರಣೆಯಿಂದ ಹಲವು ದೇಗುಲಗಳನ್ನ ಅವುಗಳ ದೈನಂದಿನ ಆಡಳಿತದ ಕಾರಣ ನೀಡಿ ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ದೇಗುಲದ ಅಭಿವೃದ್ಧಿಯ ಹೆಸರಲ್ಲಿ ಹಲವು ದೇಗುಲದ ಸರ್ವವನ್ನೂ ನಿಧಾನಕ್ಕೆ ತಮ್ಮ ಅಧೀನಕ್ಕೆ ತೆಗೆದುಕೊಳ್ಳುವ ಧಾವಂತದಲ್ಲಿ ಅರ್ಚಕರ ನೇಮಕಕ್ಕೆ ಅರ್ಜಿ ಹಾಕಿ ಎನ್ನುತ್ತಿದೆ ಸರ್ಕಾರ. ದೇಗುಲದ ಕಾಮಗಾರಿಗಳಿಗೆ ಗುತ್ತಿಗೆದಾರರನ್ನು ಟೆಂಡರ್ ಮೂಲಕ ಕರೆದು ಕಡಿಮೆಗೆ ಗಿಟ್ಟುವ ಖರ್ಚಿನಲ್ಲಿ ಅಭಿವೃದ್ಧಿ ಮಂತ್ರ ಜಪಿಸುತ್ತಿದೆ ಸರ್ಕಾರ. ದೇವರ ದರ್ಶನಕ್ಕೆ ಬೇರೆ ಬೇರೆ ಸರತಿ ಸಾಲುಗಳನ್ನು ಮಾಡಿ ದರ್ಶನಕ್ಕೂ ದರ ಪಟ್ಟಿ ಅಂಟಿಸಿ ದುಡ್ಡು ಮಾಡಲು ಮೊದಲಾಗಿದೆ.
ಮುಂಚೆ ತಿರುಪತಿಯಲ್ಲಿ ಮಾತ್ರ ಕಂಡುಬರುತ್ತಿದ್ದ ಈ ಹಣ ಮಾಡುವ ಖಯಾಲಿ ಈಗ ಕರ್ನಾಟಕದಲ್ಲಿ ಶುರು ಆಗಿದೆ. ಶೀಘ್ರ ದರ್ಶನ, ಧರ್ಮ ದರ್ಶನ, ವಿಐಪಿ ದರ್ಶನ, ಅಂತದ್ದು ಇಂತದ್ದು ಅಂತೆಲ್ಲಾ ಅನೇಕ ದರ್ಶನದ ಮೆನು ಕಾರ್ಡು ಸಿದ್ಧ ಮಾಡಿಕೊಂಡು ದುಡ್ಡು ಮಾಡುವತ್ತ ಗಮನ ಹರಿಸುತ್ತಿರುವ ಸರ್ಕಾರ ಏನು ಮಾಡ ಹೊರಟಿದೆಯೋ ದೇವರಿಗೇ ಗೊತ್ತು. ಸಿದ್ಧಲಿಂಗೇಶ್ವರು, ಮಹದೇಶ್ವರರು ತಾವು ಬದುಕಿದ್ದ ಅವಧಿಯಲ್ಲಿ ಸದ್ಭೋಧೆ ಮಾಡುತ್ತಾ ಅವರ ಅನುಯಾಯಿಗಳಿಗೆ ಹೇಳುತ್ತಿದ್ದುದೇ ಹಣದ, ಸಂಪತ್ತು ಗಳಿಂದ ಮನಸ್ಸನ್ನು ವಿಮುಖಗೊಳಿಸಿ ಶಿವನೆಡೆಗೆ ತಿರುಗಿಸಿ ಅಂತಾ. ಆದರೆ ಇದೀಗ ಅವರದೇ ಸನ್ನಿಧಾನದಲ್ಲಿ ಹಣವಿದ್ದವನಿಗೆ ಶೀಘ್ರ ದರ್ಶನ, ಇಲ್ಲದವನಿಗೆ ನಂತರದ ದರ್ಶನ. ಆ ಸಂತರು ಬದುಕಿದ್ದ ಕಾಲಘಟ್ಟದಲ್ಲಿ ಸಾರಿದ ಅವರದ್ದೇ ತತ್ವಗಳಿಗೆ ಸರ್ಕಾರಗಳು (ಕೆಲವೊಮ್ಮೆ ಖಾಸಗಿ ಟ್ರಸ್ಟ್ ಗಳು ಕೂಡ) ವಿರುದ್ಧ ದಿಕ್ಕಿನಲ್ಲಿ ಆ ಕ್ಷೇತ್ರಗಳಲ್ಲಿ ನೀತಿ ನಿಯಮಾವಳಿಗಳನ್ನ ಜಾರಿಗೆ ತಂದಿವೆ. ಅಲ್ಲಿಗೆ ಅಲ್ಲೊಂದು ಧಾರ್ಮಿಕ ನೈತಿಕತೆ ಸದ್ದರಿಯದೇ ಮಾಯವಾಗಿದೆ. ಇದೊಂದೇ ಅಲ್ಲ ಇನ್ನು ಹಲವಾರು ವಿಶೇಷಣಗಳು ಮಾಯವಾಗುವ ಸರದಿ ಮುಂದಿದೆ.
ಸಂವಿಧಾನ, ನ್ಯಾಯಾಲಯ,ಕಾನೂನು-ಕಟ್ಟಳೆ, ಪೊಲೀಸ್ ಸ್ಟೇಷನ್ನು ಯಾವುದು ಇಲ್ಲದಾಗಲೂ ನಮ್ಮ ಜನ ಮಿತಿಯಲಿದ್ದದ್ದು ಧರ್ಮವೆಂಬ ಕಾನೂನಿಡಿಯಲ್ಲಿ, ದೇವರೆಂಬ ಭಯದಲ್ಲಿ. ಈಗ ಹೊಸ ಕಾನೂನಿಗೆ ಸಿಲುಕಿ ಆ ಹಳೆಯ ಕಾನೂನನ್ನು ಒದೆಯುವ ಕೆಲಸಕ್ಕೆ ಕೈ ಹಾಕುವುದು ತರವಲ್ಲ, ಯಾಕೆಂದರೆ ಧರ್ಮಕ್ಕೂ, ದೇವರಿಗೂ ಹೆದರುವ ಜನರು ಇಲ್ಲಿ ಕಡಿಮೆಯೇನಿಲ್ಲ.
-0-