ಇಂದು ಇಬ್ಬರು ಮಹಾತ್ಮರ ಜನ್ಮ ದಿನ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎಂದೂ ಮರೆಯಲಾಗದ ಗಾಂಧೀಜಿ, ಭಾರತದ ರಾಜಕೀಯ ರಂಗದಲ್ಲಿ ಎಂದೂ ಮರೆಯಲಾರದ ಲಾಲ್ ಬಹದ್ದೂರ್ ಶಾಸ್ತ್ರಿ ಈರ್ವರು ಹುಟ್ಟಿದ ದಿನ. ಅಂತಾರಾಷ್ಟ್ರೀಯ ರಂಗ ಈ ದಿನವನ್ನ ಅಹಿಂಸಾ ದಿನವನ್ನಾಗಿ ಆಚರಿಸುತ್ತದೆ. ಅದು ವಿಶ್ವ ಮಹಾತ್ಮನಿಗೆ ಕೊಡ ಮಾಡಿದ ಗೌರವ, ಭಾರತೀಯರೆಲ್ಲರ ಹೆಮ್ಮೆ ಕೂಡ. ಆದರೆ ಭಾರತದ ಪಾಲಿಗೆ ಇದು ರಾಷ್ಟ್ರಪಿತನ ಜನ್ಮ ದಿನ, ಕೆಚ್ಚೆದೆಯ ಪ್ರಧಾನಿಯಾಗಿದ್ದ ಶಾಸ್ತ್ರಿಯವರ ಜನ್ಮ ದಿನ. ಈ ಇಬ್ಬರೂ ತಮ್ಮ ತಮ್ಮ ತತ್ವಾದರ್ಶಗಳನ್ನು ಕೊನೆಯವರೆಗೂ ಪಾಲಿಸಿಕೊಂಡು ಬಂದು ಪ್ರಾಣ ತೆತ್ತವರು, ತಮ್ಮ ಜೀವಮಾನದಲ್ಲಿ ಎಂತೆಂತಹ ಕಷ್ಟಗಳು ಎದುರಾದರೂ ತಮ್ಮ ತತ್ವದಂತೆ ನಮಗೆ ನಿಮಗೆಲ್ಲ ಆದರ್ಶಪ್ರಾಯರಾಗಿ ಬದುಕಿದವರು ಅವರಾದ್ದರಿಂದ ಈ ದಿನವನ್ನ ತತ್ವಾದರ್ಶ ಪಾಲನಾ ದಿನವನ್ನಾಗಿ ಆಚರಿಸುವುದು ಎಲ್ಲಕ್ಕಿಂತ ಸೂಕ್ತವೆನಿಸುತ್ತದೆ.
ಗಾಂಧಿಯ ಬಗ್ಗೆ ಬರೆದರೆ ಸಾಕು ಮೂಗು ಮುರಿಯುವವರು ಸಾಕಷ್ಟಿದ್ದಾರೆ. ನಮ್ಮ ದೇಶದಲ್ಲಿ ಪಂಥಾತೀತವಾಗಿ ಅನೇಕರಿಗೆ ಗಾಂಧೀ ಹಿಡಿಸುವುದಿಲ್ಲ. ಗಾಂಧೀ ತಮ್ಮ ಓದು, ಉದ್ಯೋಗದ ತರುವಾಯು ಭಾರತಕ್ಕೆ ಬಂದಿಳಿದ ಸೂಕ್ಷ್ಮ ಪರಿಸ್ಥಿತಿಯನ್ನು ಅವಲೋಕಿಸಿ, ಆ ಜಾಗದಲ್ಲಿ ನಮ್ಮನ್ನು ನಾವು ಕಲ್ಪಿಸಿಕೊಂಡು ಬಿಟ್ಟರೆ ಸಾಕು, ಗಾಂಧಿಯ ಮಹತ್ವ ನಮಗೆ ಮನದಟ್ಟಾಗುತ್ತದೆ. ಸ್ವಂತದ್ದೊಂದು ಆರ್ಥಿಕತೆ ಇಲ್ಲದೆ ಬಡತನದ ಬೇಗೆಗೆ ಬಿದ್ದಿದ್ದ ದೇಶ, ಸ್ವಂತ ಪತ್ರಿಕೆ ಹೊರಡಿಸಲು, ಸಭೆ-ಸಮಾರಂಭಗಳನ್ನು ಏರ್ಪಾಟು ಮಾಡಲೂ ಬ್ರಿಟೀಷು ಅಧಿಕಾರಿಗಳ ಅಪ್ಪಣೆಗಾಗಿ ಗೋಗರೆಯುವ, ಗರಿಷ್ಟ ಅಶಿಕ್ಷಿತರನ್ನು ಹೊಂದಿದ್ದ ನಮ್ಮ ದೇಶದ ಜನರನ್ನು ಬೃಹತ್ತಾದ ಆಂದೋಲನಕ್ಕೆ ಎತ್ತಿಕಟ್ಟುವುದು ಅಷ್ಟು ಸುಲಭವಾಗಿರಲಿಲ್ಲ. ಟಿವಿ, ರೇಡಿಯೋ, ಫೋನು ಯಾವುದೂ ಇಲ್ಲದ ಕಾಲದಲ್ಲಿ ಊರಿಂದೂರಿಗೆ ರೈಲಿನಲ್ಲಿ ಓಡಾಡಿ ಇಡೀ ದೇಶದ ಉದ್ದಗಲಕ್ಕೂ ಸಂಚಾರ ಮಾಡಿ ಜನಜಾಗೃತಿ ಮೂಡಿಸಿದ್ದು ಸಾಮಾನ್ಯ ಕೆಲಸವಲ್ಲ. ಇಷ್ಟೆಲ್ಲದರ ನಡುವೆಯೂ ಅವರು ತಮ್ಮದೇ ಒಂದು ತತ್ವಾದರ್ಶಗಳ ರೇಖೆಯನ್ನು ವಿಧಿಸಿಕೊಂಡು ಎಷ್ಟೇ ಕಠಿಣವಾದರೂ ಅದನ್ನು ದಾಟದೆ ಬದುಕಿ ತೋರಿಸಿದ ರೀತಿ ಅನೇಕರ ಮನಃಪರಿವರ್ತನೆಗೆ ಕಾರಣವಾಗಿದೆ.
ಅಷ್ಟೇ ಅಲ್ಲ ದೇಶದ ಮಹತ್ ಕ್ರಾಂತಿಯೊಂದಕ್ಕೆ ನಾಂದಿಯೂ ಆಗಿದ್ದು ಈಗ ಇತಿಹಾಸ. ಗಾಂಧೀ ಬರುವವರೆಗೂ ದೇಶದಲ್ಲಿ ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದರೂ ದೇಶದಾದ್ಯಂತ ಜನರನ್ನ ಎತ್ತಿ ಕಟ್ಟುವುದಕ್ಕೆ ಅಸಮರ್ಥವಾಗಿದ್ದು ಸಿಪಾಯಿ ದಂಗೆ ಕೂಡ ತಿಂಗಳು ಕಳೆಯುವದರೊಳಗಾಗಿ ತಣ್ಣಗಾಗಿದ್ದನ್ನು ಇತಿಹಾಸ ಇನ್ನೂ ಮರೆತಿಲ್ಲ.ಇಷ್ಟೆಲ್ಲಾ ಅಸಮತೋಲನೆಯ ನಡುವೆ ಆಂದೋಲನವನ್ನ ನೇರ ಮುನ್ನೆಲೆಯಲ್ಲಿ ನಿಂತು ಸಂಘಟಿಸಿದ್ದು, ಕೊನೆಯವರೆಗೂ ಅದಕ್ಕಾಗಿಯೇ ಸಿದ್ಧಾಂತವೊಂದನ್ನು ಮೈಗೂಡಿಸಿಕೊಂಡಿದ್ದು, ಬರಿ ಬಾಯಿ ಮಾತಿನಲ್ಲಿ ಸಿದ್ಧಾಂತವನ್ನು ಹೇಳಿ ಮುಗಿಸದೆ ಬದುಕಿ ತೋರಿಸಿದ್ದು, ಅದಕ್ಕಾಗಿಯೇ ಹುತಾತ್ಮರಾಗಿದ್ದು ಬಾಲಿಶವಲ್ಲ. ನಮ್ಮ ದೇಶದ ಪ್ರತಿಯೊಂದು ಕುಡಿ ಕೊನರುಗಳೂ ಇದರ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ. ಅಂದಿನ ಪರಿಸ್ಥಿತಿಯನ್ನು ಸರಿಯಾಗಿ ಅರಿಯದೆ ಗಾಂಧೀ ಹಾಗೆ ಮಾಡಬೇಕಿತ್ತು, ಹೀಗೆ ಮಾಡಬೇಕಿತ್ತು, ಗಾಂಧೀ ಮಾಡಿದ್ದು ಸರಿಯಲ್ಲ ಎನ್ನುವುದು ಮೊಂಡುವಾದವಾಗುತ್ತದೆ. ಆ ಮೊಂಡುವಾದಗಾರರು ಆವತ್ತಿನ ಪರಿಸ್ಥಿತಿಯನ್ನ ಸೂಕ್ಷ್ಮವಾಗಿ ಅವಲೋಕಿಸುವತ್ತ ಮನಸ್ಸು ಮಾಡಬೇಕು.
ಇನ್ನು ತತ್ವಾದರ್ಶ ಪಾಲನೆಯಲ್ಲಿ ಶಾಸ್ತ್ರಿಯವರನ್ನೇ ಈಗಿನ ರಾಜಕಾರಣಿಗಳು ಮಾದರಿಯಾಗಿ ಅನುಸರಿಸಬೇಕು. ಶಾಸ್ತ್ರಿಯವರ ಸ್ವಾಮಿ ನಿಷ್ಠೆಯನ್ನ ಯಾರೂ ಬೊಟ್ಟು ಮಾಡಿ ಪ್ರಶ್ನೆ ಮಾಡುವಂತೆಯೇ ಇಲ್ಲ. ಸ್ವಚ್ಛ, ಶ್ವೇತ ವ್ಯಕ್ತಿತ್ವ ಅವರದು. ಅವರ ನಿಷ್ಠೆಗೆ ಕೈಗನ್ನಡಿಯ ಹಾಗೆ ಈಗಾಗಲೇ ಅವರ ಅನೇಕ ಕಥೆಗಳು ನಮ್ಮ ನಡುವೆ ಹರಿದಾಡಿವೆ. ಆದ್ದರಿಂದ ಮತ್ತೊಮ್ಮೆ ಅದನ್ನು ಹೇಳುವ ಅವಶ್ಯಕತೆಯಿಲ್ಲವಷ್ಟೆ. ಆದರೆ ರಾಜಕೀಯ ಪಕ್ಷವೊಂದರ ನೇತಾರರಾಗಿ, ಪ್ರಧಾನಿ ಹುದ್ದೆ ಅಲಂಕರಿಸಿದ್ದ ಅವರನ್ನು ಈವತ್ತು ಪಕ್ಷಾತೀತವಾಗಿ ಎಲ್ಲರೂ ಗೌರವಿಸುತ್ತಿರುವುದು ನೋಡಿದರೆ ಅವರ ವ್ಯಕ್ತಿತ್ವ, ಕಾರ್ಯ ವಿಧಾನ ಹೇಗಿತ್ತು ಎನ್ನುವುದು ನಮ್ಮ ಅರಿವಿಗೆ ಬರುವುದಕ್ಕೆ ಸಾಕು. ನೋಡುವುದಕ್ಕೆ ನಯವಾಗಿಯೇ ತೋರುತ್ತಿದ್ದ ಶಾಸ್ತ್ರಿ ಅವಶ್ಯವಿದ್ದರೆ ವ್ಯಘ್ರರಾಗಲೂ ಮರೆಯುತ್ತಿರಲಿಲ್ಲ. ಸ್ನೇಹಕ್ಕೂ ಬದ್ಧ, ಸಮರಕ್ಕೂ ಸಿದ್ಧ ಎನ್ನುವ ವಾಕ್ಯದಂತೆ ಇದ್ದು ಬಾಳಿದವರು ಅವರು.
ಒಮ್ಮೆ ಅಂತಾರಾಷ್ಟ್ರೀಯ ಮಾಧ್ಯಮವೊಂದು ಶಾಸ್ತ್ರಿಯವರ ಕಾಲೆಳೆಯುವ ಸಲುವಾಗಿ ಪಾಕಿಸ್ತಾನವನ್ನ ವಹಿಸಿಕೊಳ್ಳುತ್ತ ಪಾಕಿಸ್ತಾನದ ಆಗಿನ ಅಧ್ಯಕ್ಷ, 1965ರ ಭಾರತ-ಪಾಕ್ ಯುದ್ಧದಲ್ಲಿ ಪಾಕ್ ಬಣದ ಮುಂದಾಳು ಅಯೂಬ್ ಖಾನರನ್ನು ಹೊಗಳುತ್ತಾ "ಅಯೂಬ್ ಖಾನ್ ರಂತಹ ಎತ್ತರದ ವ್ಯಕ್ತಿ ಶಾಸ್ತ್ರಿಯಂತಹ ಕುಳ್ಳ ವ್ಯಕ್ತಿಜೊತೆ ಮಾತನಾಡುವುದು" ಎಂಬರ್ಥದಲ್ಲಿ ಒಂದು ವಾಕ್ಯ ಬಳಸಿದ್ದರಂತೆ. ಅದಕ್ಕೆ ಪ್ರತ್ಯುತ್ತರವಾಗಿ ಶಾಸ್ತ್ರಿ, "ಹೌದು, ಅವರು(ಅಯೂಬ್ ಖಾನ್) ನನ್ನ ಮುಂದೆ ತಲೆ ತಗ್ಗಿಸಿ ಮಾತನಾಡುತ್ತಾರೆ, ನಾನು ಅವರನ್ನು ತಲೆ ಎತ್ತಿ ಮಾತನಾಡಿಸುತ್ತೇನೆ" ಎಂದರಂತೆ. ಆ ಮಾತು ಅದೆಷ್ಟು ಪ್ರಭಾವಶಾಲಿಯಾಗಿತ್ತೆಂದರೆ ಆಗ್ಗೆ ಭಾರತ-ಪಶ್ಚಿಮ ಪಾಕಿಸ್ತಾನ-ಪೂರ್ವ ಪಾಕಿಸ್ತಾನಗಳ ಸಂಬಂಧದ ಮೇಲೆ ವಿಶೇಷ ಪರಿಣಾಮ ಬೀರಿತ್ತು. ಅಷ್ಟೇ ಅಲ್ಲ, ಸಾಮಾನ್ಯ ಜನರೂ ಕೂಡ ಯಾರನ್ನಾದರೂ ಕುಳ್ಳ ಎಂದೂ ಆಡಿಕೊಳ್ಳುತ್ತಿದ್ದರೆ ಅಂತಹದ್ದೇ ವಾಕ್ಯ ಬಳಸಿ ಆಡಿಕೊಂಡವರಿಗೆ ಟಾಂಗ್ ಕೊಡಲು ಶುರುವಿಟ್ಟುಕೊಂಡಿದ್ದರಂತೆ. ಸಾಮಾಜಿಕ ಜಾಲತಾಣಗಳು, ಟಿವಿಗಳು ಭಾರತದಲ್ಲಿ ಇಲ್ಲದಿದ್ದ ಕಾಲದಲ್ಲೇ ಭಾರತದಲ್ಲಿ ಪ್ರಧಾನಿಯವರ ಹೇಳಿಕೆಯೊಂದಕ್ಕೆ ಅಷ್ಟೊಂದು ಮಹತ್ವ ಬಂದಿತ್ತು. ಆಮೇಲೆ ನಡೆದ ಭಾರತ-ಪಾಕ್ ಯುದ್ಧ, ಅದರಲ್ಲಿ ಭಾರತದ ಗೆಲುವು ಮೂರು ವರ್ಷಗಳ ಹಿಂದೆ ಚೀನಾದಿಂದ ಪೆಟ್ಟು ತಿಂದಿದ್ದ ಭಾರತಕ್ಕೆ ಸಮಾಧಾನ ತಂದವು.
|
ತಲೆ ತಗ್ಗಿಸಿ ಮಾತನಾಡಿದ ಪಾಕಿಸ್ತಾನದ ಅಧ್ಯಕ್ಷ ಅಯೂಬ್ ಖಾನ್, ತಲೆಯೆತ್ತಿ ಮಾತನಾಡಿದ ಭಾರತದ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ |
ಗಾಂಧಿಯ ನಂತರ ಭಾರತದ ಜನ ಒಮ್ಮತದಿಂದ ಓಗೊಟ್ಟ ಯಾರದ್ದಾದರೂ ದನಿಯಿದ್ದರೆ ಅದು ಶಾಸ್ತ್ರಿಯವರದ್ದೇ ಅನ್ನಬಹುದು. 1965 ರ ಭಾರತ-ಪಾಕ್ ಸೆಣಸಾಟದಲ್ಲಿ ಪಾಕಿಸ್ತಾನವನ್ನು ವಹಿಸಿಕೊಳ್ಳುತ್ತಾ ಅಮೆರಿಕಾ 'ಭಾರತಕ್ಕೆ ರಫ್ತಾಗುತ್ತಿರುವ ಗೋಧಿಯನ್ನು ನಿರ್ದಾಕ್ಷಿಣ್ಯವಾಗಿ ತಡೆಯಬೇಕಾಗುತ್ತದೆ, ಅನಂತರ ಭಾರತೀಯರು ಹಸಿವಿನಿಂದ ನರಳಿ ಸಾಯಬೇಕು' ಎಂದಾಗ, ಅಷ್ಟೇ ಗಡುಸಾಗಿ 'ನಿಮ್ಮ ದೇಶದ ಗೋಧಿಯನ್ನು ನಮ್ಮ ದೇಶದ ಹಂದಿಗಳು ತಿನ್ನಬೇಕು' ಎಂದು ತಿರುಗೇಟು ಕೊಟ್ಟಿದ್ದೂ ಅಲ್ಲದೆ ಕೂಡಲೇ ದೇಶವನ್ನುದ್ದೇಶಿಸಿ ಮಾತನಾಡಿ ಸೋಮವಾರದ ಒಪ್ಪತ್ತಿನ ಉಪವಾಸಕ್ಕೆ ಕರೆ ಕೊಟ್ಟುಬಿಟ್ಟರು. ದೇಶದ ಗಣ್ಯಾತಿ ಗಣ್ಯರು ಸೋಮವಾರ ಉಪವಾಸ ಕೈಗೊಂಡರು. ತೀರಾ ಇತ್ತೇಚಿಗೂ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮಿಗಳು 1965 ರ ಸಮಯದಲ್ಲಿ ತಮ್ಮ ಮಠದಲ್ಲಿದ್ದ ವಿದ್ಯಾರ್ಥಿಯೊಬ್ಬ ಸೋಮವಾರದ ಊಟ ಬಿಟ್ಟು ತಮ್ಮ ಗಮನ ಸೆಳೆದಿದ್ದುದಾಗಿ ಸಂದರ್ಶನವೊಂದರಲ್ಲಿ ಹೇಳಿಕೊಳ್ಳುತ್ತಿದ್ದುದು ಈಗ ಜ್ಞಾಪಕ ಬಂತು.
ಪಾಕಿಸ್ತಾನಕ್ಕೆ ನಡು ಮುರಿಯಲು ಅಮೆರಿಕಾವನ್ನು ಎದುರು ಹಾಕಿಕೊಂಡ ಭಾರತ ಅಷ್ಟೊತ್ತಿಗಾಗಲೇ ಚೀನಾದೊಂದಿಗೆ ಮುನಿಸಿಕೊಂಡಿತ್ತು. ಮುಂದೇನು ಎಂದೂ ಯೋಚಿಸುತ್ತಾ ಕೈ-ಬಾಯಿ ನೋಡಲು ಸಮಯವಾಗಿರಲಿಲ್ಲ ಅದು. ಅಲ್ಲಿಂದಲೇ ಹೊಸ ಯೋಜನೆಯೊಂದನ್ನು ಗೊತ್ತು ಮಾಡಿಕೊಂಡ ಶಾಸ್ತ್ರಿ ಭಾರತದ ಹಸಿರು ಕ್ರಾಂತಿಗೆ ಶಿಲಾನ್ಯಾಸ ಮಾಡಿಯೇ ಬಿಟ್ಟರು. ನೋಡ ನೋಡುತ್ತಿದ್ದಂತೆ ಅನ್ಯ ದೇಶಗಳ ಮುಂದೆ ಭಿಕ್ಷಾ ಪಾತ್ರೆ ಹಿಡಿಯುತ್ತಿದ್ದ ಭಾರತ, ಎಷ್ಟೋ ದೇಶಗಳಿಗೆ ಆಹಾರ ಧಾನ್ಯಗಳನ್ನು ರಫ್ತು ಮಾಡುವ ಎತ್ತರಕ್ಕೆ ಬೆಳೆಯಿತು, ಯುದ್ಧದಲ್ಲಿ ಹುಮ್ಮಸ್ಸಿನಿಂದ ಪಾಲ್ಗೊಂಡಿದ್ದ ಪಾಕಿಸ್ತಾನಕ್ಕೆ ಸರಿಯಾಗಿ ಪೆಟ್ಟು ಕೊಟ್ಟಿದ್ದೂ ಅಲ್ಲದೆ ಲಾಹೋರ್ ಅನ್ನು ಆಕ್ರಮಿಸಿಕೊಂಡು ಅಲ್ಲೂ ಭಾರತದ ತಿರಂಗ ಧ್ವಜವನ್ನು ಹಾರಿಸಿಬಿಟ್ಟರು ಶಾಸ್ತ್ರಿ. ಆ ಸಂತೋಷಗಳನ್ನೆಲ್ಲ ಅನುಭವಿಸಲು ಭಾರತೀಯರನ್ನು ವಿಧಿ ಹಾಯಿಗೊಡಲಿಲ್ಲ. ಪಾಕಿಸ್ತಾನದ ಯುದ್ಧ ಮುಗಿದ ಒಪ್ಪಂದಕ್ಕೆ ಅಂಕಿತ ಬಿದ್ದ ದಿನವೇ ಶಾಸ್ತ್ರಿ ನಿಧನರಾದರು. ಅವರ ಸಾವಿನ ಬಗ್ಗೆ ಈಗಲೂ ಅನೇಕ ಊಹಾ ಪೋಹಗಳಿವೆ, ಅನೇಕ ವಿಶ್ಲೇಷಣೆಗಳು ನಡೆಯುತ್ತಿವೆ. ಅದರ ಬಗ್ಗೆ ಯಾವ ಭಾರತೀಯನಿಗೂ ಅನುಮಾನ ಶಮನವಂತೂ ಇನ್ನೂ ಆಗಿಲ್ಲ.
ತತ್ವಾದರ್ಶ ಪಾಲನೆ ಮಾಡುತ್ತಲೇ ನಮ್ಮ ತಂಟೆಗೆ ಬಂದವರನ್ನು ಹೆಡೆಮುರಿ ಕಟ್ಟಿದ್ದ ಸಜ್ಜನ ರಾಜಕಾರಣಿ ಲಾಲ್ ಬಹಾದ್ದೂರ್ ಶಾಸ್ತ್ರಿ ನಮಗೆಲ್ಲರಿಗೂ ಇಷ್ಟವಾಗುವುದು ಅದಕ್ಕೆ. ಅವರ ಜನ್ಮಜಯಂತಿಯಂದು ನಮ್ಮ ಈಗಿನ ರಾಜಕಾರಣಿಗಳಿಗೂ ಅವರಂತಹ ಬುದ್ಧಿ ಬರಲಿ ಎಂದು ನಾವು ಹಾರೈಸಬಹುದಷ್ಟೆ.
-o-