ಭೂಗತ ಲೋಕದ ಬಗ್ಗೆ ನನಗೆ ಅಷ್ಟಾಗಿ ಗೊತ್ತಿರಲಿಲ್ಲ. ನಾವು ಬೆಂಗಳೂರಿಗೆ ಬಂದ ಎರಡು-ಮೂರು ತಿಂಗಳಿಗೆ ನಾಗರಭಾವಿಯ ರಸ್ತೆಯಲ್ಲಿರುವ ಮೂಡಲಪಾಳ್ಯದಲ್ಲಿ ವಾಸವಿದ್ದೆವು. ನಮ್ಮ ಮನೆಯ ಸಮೀಪವೇ ಇದ್ದ ಸಲೂನ್ ಒಂದರಲ್ಲಿ ಮಾತಾನಾಡುತ್ತಿದ್ದ ಕೂತಿದ್ದ ಪುಡಿ ರೌಡಿಯೊಬ್ಬನ್ನನ್ನು ಯಾವುದೋ ಒಂದು ರೌಡಿ ಪಡೆ ಲಾಂಗ್ ನಿಂದ ಕೊಚ್ಚಿ ಹತ್ಯೆ ಮಾಡಿತ್ತು. ಅದಾಗಿ ಒಂದೆರಡು ನಿಮಿಷಗಳಲ್ಲೇ ಅಲ್ಲಿಗೆ ಹೋಗಿ ಆ ಘೋರವನ್ನು ನಾನು ಕಂಡಿದ್ದೆ. ಪೊಲೀಸರು ಬಂದು ಅಲ್ಲಿನ ಸ್ಥಳ ಮಹಜರು ಮಾಡುವವರೆಗೂ ನಾನು ಅಲ್ಲೇ ನಿಂತು ಎಲ್ಲವನ್ನು ಕುತೂಹಲದ ಕಣ್ಣಿಂದ ಗಮನಿಸಿದ್ದೆ. ಅದಾದ ಮೇಲೆ ಸತ್ತವನ ಮನೆಯವರ ಗೋಳಾಟವನ್ನೂ ಕಂಡಿದ್ದೆ. ಭೂಗತ ಲೋಕ ಎನ್ನುವುದು ಮನುಷತ್ವದ ಎಳೆಯೇ ಸುಳಿಯದ ಅತ್ಯಂತ ಘೋರ ಲೋಕ, ಅಲ್ಲಿಗೆ ಕಾಲಿಟ್ಟವರಿಗೆ ಮರಣವೆನ್ನುವುದು ಎದೆಗೆ ಎದೆ ತಾಗಿಸಿಕೊಂಡೇ ನಿಂತಿರುತ್ತದೆ ಎನ್ನುವುದನ್ನು ಮೊಟ್ಟ ಮೊದಲ ಬಾರಿಗೆ ಅರಿತುಕೊಂಡಿದ್ದೆ.
ಆ ಘಟನೆ ನಡೆದ ನಾಲ್ಕೈದು ವರ್ಷಗಳ ತರುವಾಯೂ ಅದೇ ರಸ್ತೆಯಲ್ಲಿ ಹಾಡ ಹಗಲೇ ಕಾರಿನಿಂದಿಳಿದ ನಾಲ್ಕೈದು ಆಘಂತುಕರು ರಸ್ತೆ ಬದಿಯಲ್ಲಿ ನಿಂತಿದ್ದ ರಿಯಲ್ ಎಸ್ಟೇಟ್ ದಲ್ಲಾಳಿಯೊಬ್ಬನನ್ನು ಗುಂಡಿಕ್ಕಿ ಕೊಂದರು. ಕೊಂದವರು ನನಗಿಂತ ಬಹಳ ಮುಂದೆಯಿದ್ದರೂ ಗುಂಡಿನ ಶಬ್ದ ಮಾತ್ರ ನನಗೆ ಕೇಳಿಸಿತ್ತು. ಗುಂಡು ಹಾರಿಸಿ ಮಿಂಚಿನಂತೆ ಮಾಯವಾಗಿದ್ದರು, ಗುಂಡು ಬಿದ್ದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದ. ಆ ಘಟನೆಯೂ ಕೂಡ ಬೆಂಗಳೂರಿನ ವೃತ್ತ ಪತ್ರಿಕೆಗಳಿಗೆ ಒಂದೆರಡು ದಿನ ಭಾರಿ ಸುದ್ದಿಯೂಟ ನೀಡಿತು. ಆಮೇಲೆ ಒಂದೆರಡು ಆತ್ಮಹತ್ಯೆ ಕೇಸುಗಳನ್ನೂ, ಅಲ್ಲಿಗೆ ಬಂದು ಪೊಲೀಸರು ಮಹಜರು ಮಾಡುವ ಪ್ರಕ್ರಿಯೆಗಳನ್ನೆಲ್ಲಾ ಹತ್ತಿರದಿಂದ ಗಮನಿಸಿದ್ದೆ. ನನಗೂ ಈ ಘಟನೆಗಳಿಗೂ ಯಾವುದೇ ಸಂಬಂಧವಿಲ್ಲದಿದ್ದರೂ ಇವು ನನ್ನ ಮೇಲೆ ತಮ್ಮದೇ ಆದ ಪರಿಣಾಮ ಬೀರುತ್ತಾ ಹೋದವು. ಇಂತಹ ಅನೇಕ ಘಟನೆಗಳು ನನ್ನನ್ನು ಮಾನಸಿಕವಾಗಿ ಗಟ್ಟಿಗೊಳಿಸುತ್ತಾ ಹೋದವು. ಕೆಲವರು ಇಂತಹುದೇ ಘಟನೆಗಳು ಅವರ ಮುಂದೆ ನಡೆದಾಗ ಆರ್ದ್ರರಾಗುವುದೂ ಉಂಟಂತೆ, ಅದು ಅವರವರ ಹಿನ್ನೆಲೆಗೆ, ಮನಸ್ಥಿತಿಗೆ ಬಿಟ್ಟ ವಿಚಾರ.
ಅನಂತರ ಪ್ರತೀ ಭಾನುವಾರ 'ಪ್ರಜಾವಾಣಿ' ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಅವರ 'ಪೊಲೀಸ್ ಕಂಡ ಕಥೆಗಳು' ಅಂಕಣವನ್ನು ಓದುತ್ತಿದ್ದ ನನಗೆ ನಿಧಾನವಾಗಿ ಭೂಗತ ಲೋಕದ ಒಂದೊಂದೇ ಅವ್ಯಾಹತಗಳು ಗೋಚರವಾಗುತ್ತಾ ಹೋದವು. ಭೂಗತ ಲೋಕದ ಭಯಂಕರ ರಕ್ತಸಿಕ್ತ ಅಧ್ಯಾಯವನ್ನು ತಿಳಿದುಕೊಳ್ಳುವ ಉದ್ದೇಶದಿಂದ ಪುಸ್ತಕಗಳನ್ನು ತಡಕಿದ ನನಗೆ ಕನ್ನಡದಲ್ಲಿ ಸಿಕ್ಕಿದ ಪುಸ್ತಕವೇ ರವಿ ಬೆಳಗೆರೆಯವರದು. ಆ ವಿಚಾರದಲ್ಲಿ ನನಗೊಬ್ಬನಿಗಲ್ಲ, ನಿಮಗೂ ಸಿಗುವ ಮೊದಲ ಪುಸ್ತಕ ಬೆಳಗೆರೆಯವರದ್ದೇ. ಅವರನ್ನು ಹೊರತು ಪಡಿಸಿದರೆ ಕೆಲವು ಪೊಲೀಸ್ ಇಲಾಖೆಗೆ, ಸರ್ಕಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಬರೆದಿರುವ ಕೆಲವು ಲೇಖನಗಳು, ಪುಸ್ತಕಗಳು ದೊರೆತರೂ ಅವು ಭೂಗತ ಲೋಕವನ್ನು ಒಳಗೊಳಗೇ ಪೊರೆದ ಮುಗ್ದರ ಮುಖವಾಡ ಹೊದ್ದ ನಮ್ಮದೇ ಕೆಲವು ನಾಯಕರ ಬಗ್ಗೆಯೋ, ಭೂಗತ ಲೋಕವನ್ನು ಹೆಡೆಮುರಿ ಕಟ್ಟಲು ನಿರಂತರ ಶ್ರಮಿಸಿದ ಅನೇಕರ ಬಗ್ಗೆಯೂ ಕೇಂದ್ರೀಕೃತವಾಗಿರುತ್ತದೆ. ಆ ಲೋಕದಲ್ಲಿ ಭಾರಿ ಸದ್ದು ಮಾಡಿದವರು ಅಲ್ಲಿಗೇಕೆ ಬಂದರು? ಅವರು ಆ ಮಟ್ಟಕ್ಕೆ ಹೇಗೆ ಏರಿದರು? ಅವರ ಬೆನ್ನಿಗೆ ನಿಂತವರಾರು ಎನ್ನುವ ಕೆಲವು ಪ್ರಮುಖ ವಿಚಾರಗಳನ್ನು ಕೆಲವರು ಬರೆಯುವುದಿಲ್ಲ, ಅಕಸ್ಮಾತ್ ಬರೆದರೆ ಅದು ವಿವಾದಕ್ಕೆ ಕಾರಣವಾಗುತ್ತದೆ ಎನ್ನುವ ಭಯ ಅನೇಕರಲ್ಲಿರುವುದು ಸುಳ್ಳಲ್ಲ. ಬೆಳಗೆರೆಯವರು ಅದಕ್ಕಪವಾದವಾದಂತಿದ್ದವರು, ಆದ ಕಾರಣಕ್ಕೆ ಅವರು ಅನೇಕ ಬಾರಿ ವಿವಾದಗಳಿಗೀಡಾಗಿದ್ದು.
ಯಾವುದೇ ಸಮಾಜದಲ್ಲಿ ಎಲ್ಲ ವರ್ಗದ, ಎಲ್ಲ ಮನೋಧೋರಣೆಯ ಜನರಿರುವುದು ಸಹಜ. ಕ್ರೂರ ಮನೋಧೋರಣೆಯಿರುವ ವ್ಯಕ್ತಿಗಳಿಂದ ಕ್ರೂರತನ ನಡೆಯುವುದೂ ಅತಿ ಸಹಜವೇ, ಆದರೆ ಅದಕ್ಕೆಂತಲೇ ಕಾನೂನು ಕಟ್ಟಳೆಗಳಿರುವಾಗ ನಮ್ಮಂತಹ ಸಾಮಾನ್ಯರು ಹೆದರಿಕೊಳ್ಳುವುದು ಬೇಡವೇ ಬೇಡ ಅಂತ ಸಾರ್ವಜನಿಕರಿಗೆ ಟಿವಿ ಮಾಧ್ಯಮಗಳಲ್ಲಿ ಕಾಣಿಸಿಕೊಂಡು ಧೈರ್ಯ ತುಂಬುತ್ತಿದ್ದವರು ರವಿ ಬೆಳಗೆರೆಯವರು. ಅವರ ಟಿವಿ ಕಾರ್ಯಕ್ರಮ 'ಕ್ರೈಂ ಡೈರಿ' ಹಾಗು ಅವರ ಪತ್ರಿಕೆ 'ಹಾಯ್ ಬೆಂಗಳೂರ್' ಅವರಿಗೆ ತಂದುಕೊಟ್ಟ ಜನಮನ್ನಣೆಯನ್ನು ನಾನು ವಿಶೇಷವಾಗಿ ಹೇಳುವ ಅಗತ್ಯವಿಲ್ಲವಷ್ಟೇ.
ಇತ್ತೀಚಿಗೆ ಯೂಟ್ಯೂಬ್ ಮುಖಾಂತರ ನಡೆಸಿಕೊಡುತ್ತಿದ್ದ 'ಬೆಳ್ ಬೆಳಗ್ಗೆ ಬೆಳಗೆರೆ' ಎನ್ನುವ ಕಾರ್ಯಕ್ರಮ, ವಿಜಯವಾಣಿ ಪತ್ರಿಕೆಯಲ್ಲಿ ಪ್ರತೀ ಭಾನುವಾರ ಪ್ರಕಟವಾಗುತ್ತಿದ್ದ ಲೇಖನ ಸರಣಿ 'ನಮ್ಮ ನಮ್ಮಲ್ಲಿ' ಯನ್ನು ನಾನೆಂದೂ ಮಿಸ್ ಮಾಡಿಕೊಂಡವನಲ್ಲ. ಅವರ ಪುಸ್ತಕಗಳನ್ನೋದುವಾಗ, ಟಿವಿ ಶೋಗಳನ್ನು ನೋಡುವಾಗ, ಲೇಖನಗಳನ್ನು ಓದುವಾಗ, ಅವರ ಟೀಕೆ-ಟಿಪ್ಪಣಿ, ಚರ್ಚೆಗಳನ್ನು ನೋಡುವಾಗ ನಾವೆಲ್ಲಾ ಯೋಚನೆ ಮಾಡದ ಯಾವುದೋ ಒಂದು ದೃಷ್ಟಿ ಕೋನದಲ್ಲಿ ಅವರು ಯೋಚನೆ ಮಾಡುತ್ತಾರೆ ಎನ್ನುವ ಭಾವನೆ ನನ್ನಲ್ಲಿ ಬಲವಾಗಿ ಬೇರೂರಿದೆ, ಆದ್ದರಿಂದಲೇ ಅವರ ಕಡೆಗೆ ಸಾಹಿತ್ಯಿಕ ಸೆಳೆತ ನನ್ನಲ್ಲಿ ಉಂಟಾಗಿದೆ.
ಬೆಂಗಳೂರಿನ ಪುಡಿ ರೌಡಿಗಳಿಂದ ಹಿಡಿದು ಘಟಾನುಘಟಿ ಭೂಗತ ಲೋಕದ ದೊರೆಗಳ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ್ದ ಬೆಳಗೆರೆ ಅವರ ಕುರಿತು ತಮ್ಮ ಪತ್ರಿಕೆಯಲ್ಲಿ ಲೇಖನಗಳನ್ನು ಬರೆದು ಸಾಕಷ್ಟು ವಿವಾದಕ್ಕೀಡಾಗಿದ್ದರು ಅಷ್ಟೇ ಅಲ್ಲದೆ ಕೋರ್ಟು-ಕಟಕಟೆಯ ಮೆಟ್ಟಿಲು ಹತ್ತಿಳಿದಿದ್ದರು, ತಮ್ಮ ಅನುಯಾಯಿಗಳಷ್ಟೇ ಪ್ರಮಾಣದ ವಿರೋಧಿಗಳನ್ನೂ ಹೊಂದಿರುವುದಾಗಿ ಅನೇಕ ಕಡೆ ತಾವೇ ಹೇಳಿಕೊಂಡಿದ್ದಾರೆ. ರಾಜಕೀಯ ಪಕ್ಷಗಳ ಕುರಿತು ಮಾತನಾಡಿ ಅನೇಕರ ವಿರೋಧ ಕಟ್ಟಿಕೊಂಡಿದ್ದರು. ಮಾಜಿ ಪ್ರಧಾನಿಯೊಬ್ಬರ ಕುರಿತ ಹೇಳಿಕೆಯಿಂದ ಮಾನ ನಷ್ಟ ಮೊಕದ್ದಮೆಯನ್ನೂ ಎದುರಿಸಿದ್ದರು ಬೆಳಗೆರೆ. ತೀರಾ ಇತ್ತೀಚಿಗೆ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಮನೆ ಮೇಲಿನ ಆದಾಯ ತೆರಿಗೆ ಇಲಾಖೆಯ ದಾಳಿಯನ್ನು ಸಮರ್ಥಿಸಿಕೊಂಡು ಅನೇಕರಿಂದ ಪ್ರಶಂಸೆಗೂ-ಟೀಕೆಗೂ ಒಳಗಾಗಿದ್ದರು. ಟೀಕೆ, ಕಂಪ್ಲೇಂಟ್-ಕೋರ್ಟು-ಕೇಸು ಎಲ್ಲವೂ ಎದುರಾದರೂ ಅವುಗಳನ್ನು ಪಕ್ಕಕ್ಕೆ ತಳ್ಳುತ್ತಾ ತಮ್ಮ ಕಾರ್ಯವನ್ನು ಎಂದಿನಂತೆ ನಿಭಾಯಿಸುತ್ತಿದ್ದವರು ಅವರು.
ಸಾಮಾನ್ಯವಾಗಿ ಭೂಗತ ಲೋಕದ ಸಂಪರ್ಕಕ್ಕೆ ಬಂದ ಯಾರಿಗಾದರೂ ಅನುಭವಕ್ಕೆ ಬರುವ ವಿಚಾರವೆಂದರೆ ಅವರ ಭಾವುಕತೆ ಕಣ್ಮರೆಯಾಗಿಬಿಡುವುದು. ಭೂಗತ ಲೋಕದಲ್ಲಿ ಮಾತ್ರ ಅಲ್ಲ ಪೊಲೀಸ್ ಇಲಾಖೆಗೆ ನೌಕರಿಗೆ ಸೇರಿದ ಅನೇಕರಲ್ಲೂ ಈ ಬದಲಾವಣೆ ಕಂಡುಬರುವುದು ಸಹಜವೇ. ಆದರೆ ಆ ವಿಚಾರದಲ್ಲಿ ಬೆಳಗೆರೆ ಸೋತಿರಲಿಲ್ಲ. ರೌಡಿಗಳ ಬಗ್ಗೆ ಬರೆಯುತ್ತಲೂ, ದೇಶ ಭಕ್ತಿಯ ಮಾತುಗಳನ್ನಾಡುತ್ತಾ, ಬೇಂದ್ರೆಯವರ ಬಗ್ಗೆ ಅಪಾರ ಪ್ರೇಮವನ್ನಿರಿಸಿಕೊಂಡು, ಕನ್ನಡೇತರ ಕವಿಗಳ ಘಜಲ್ಲುಗಳನ್ನು ಕೇಳುತ್ತಾ ಯುವಕರಿಗೆ ಕನ್ನಡದಲ್ಲಿ ಸ್ಪೂರ್ತಿದಾಯಕ ಲೇಖನಗಳನ್ನು ಬರೆಯುವುದರಲ್ಲಿ ಎತ್ತಿದ ಕೈ ಅವರದ್ದು. ಕೊತ್ವಾಲ ರಾಮಚಂದ್ರ, ಜಯರಾಜನ ಬಗ್ಗೆ ನಿರರ್ಗಳವಾಗಿ ಮಾತನಾಡುತ್ತಿದ್ದ ಅವರು ಶಿವರಾಮ ಕಾರಂತರ ಬಗೆಗೂ, ದ.ರಾ.ಬೇಂದ್ರೆಯವರ ಬಗೆಗೂ ಅಷ್ಟೇ ನಿರರ್ಗಳವಾಗಿ ಮಾತನಾಡುವಷ್ಟು ಅರಿತುಕೊಂಡಿದ್ದರು. ಕನ್ನಡ ಚಿತ್ರರಂಗದ ಧ್ರುವತಾರೆ ಡಾ.ರಾಜ್ ಕುಮಾರ್ ನಿಧನರಾದಾಗ ಬೆಳೆಗೆರೆಯವರು ತಮ್ಮ ಕ್ರೈಂ ಡೈರಿಯಲ್ಲಿ ಮೂರ್ನಾಲ್ಕು ಎಪಿಸೋಡುಗಳನ್ನು ಮಾಡಿದ್ದರು, ಅಲ್ಲಿ ಅವರು ಅತ್ಯಂತ ಭಾವುಕರಾಗಿ ಮಾತನಾಡಿದ್ದ ರೀತಿ ಇಂದಿಗೂ ಅನೇಕರ ಸ್ಮೃತಿಪಟಲದಲ್ಲಿದೆ. ಅದರ ಜೊತೆಗೆ ಇತ್ತೀಚಿಗೆ 'ರಾಜ್ ಲೀಲಾ ವಿನೋದ' ಎಂಬ ಪುಸ್ತಕ ಬರೆದು ರಾಜ್ ಕುಮಾರ್ ಅಭಿಮಾನಿಗಳ ಕೆಂಗಣ್ಣಿಗೂ ಗುರಿಯಾಗಿದ್ದರು ಅವರು. ವಿವಾದವೆನ್ನುವುದು ಬೆಳಗೆರೆಯವರ ಜೊತೆ ಜೊತೆಗೆ ಬೆಳೆದುಕೊಂಡು ಬಂದಿದ್ದ ಅವರ ಅತ್ಯಾಪ್ತ ಮಿತ್ರ ಎನ್ನುವುದು ಹಲವರ ಅನಾಲಿಸಿಸ್.
ಉಗ್ರಪೀಡಿತ ಕಾಶ್ಮೀರದ ಕಣಿವೆಯಲ್ಲಿ ಭಾರತೀಯ ಸೇನಾಳುಗಳೊಂದಿಗೆ ರವಿಬೆಳಗೆರೆ ಸಂವಾದ |
ರವಿಬೆಳಗೆರೆ ರೌಡಿಗಳ ಬಗ್ಗೆ ಬರೆಯುತ್ತಾರೆ ಅಂದರೆ ಅವರು ಬೆಂಗಳೂರು-ಮುಂಬೈಗಳಂತಹ ರೌಡಿಸಂ ಉತ್ತುಂಗದಲ್ಲಿದ್ದ ಕೆಲವೇ ಕೆಲವು ನಗರಗಳ ಬಗ್ಗೆ ತಿಳಿದುಕೊಂಡಿರಬಹುದು ಎಂದುಕೊಳ್ಳಬೇಡಿ. ಕಾಶ್ಮೀರ ಕೊಳ್ಳದಲ್ಲಿ ಒಳ ನುಸುಳುವ ಪಾಕಿಸ್ತಾನದ ಉಗ್ರರ ಮೂಲದ ಜಾಡು ಹಿಡಿದುಕೊಳ್ಳಲು ಪಾಕಿಸ್ತಾನಕ್ಕೆ ವೇಷ ಮರೆಸಿಕೊಂಡು ಹೋಗಿ ಬಂದ ಧೈರ್ಯಶಾಲಿ ಪತ್ರಕರ್ತ ಅವರು. ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ ನಲ್ಲಿ ಚೀನಾ ಸೈನಿಕರು ಒಳನುಸುಳಲು, ಗಡಿ ಒತ್ತುವರಿ ಮಾಡಿಕೊಳ್ಳಲು ಯಾವ ತಂತ್ರ ಬಳಸಿಕೊಳ್ಳುತ್ತಾರೆನ್ನುವುದು, ಕಾಶ್ಮೀರದ ಹಂದ್ವಾರ, ಬಾರಾಮುಲ್ಲಾ ಸೆಕ್ಟರ್ ಗಳಲ್ಲಿ ಕಾರ್ಗಿಲ್ ಕದನ ನಡೆಯುವಾಗ ಪಾಕಿಸ್ತಾನದ ಸೈನಿಕರು ಯಾವ ಯಾವ ಮಾರ್ಗ ಬಳಸಿಕೊಂಡರು ಎನ್ನುವೆಲ್ಲ ವಿಚಾರಗಳ ಬಗ್ಗೆ ಅಮೂಲಾಗ್ರವಾಗಿ ಅಧ್ಯಯನ ಮಾಡಿ ಪುಸ್ತಕ ಬರೆದವರು ಅವರು. ಕಾರ್ಗಿಲ್ ಯುದ್ಧ ಸಮಯದಲ್ಲಿ ಯುದ್ಧ ಭೂಮಿಯಲ್ಲಿ ನಿಂತೇ ವರದಿ ಬರೆದ ಕನ್ನಡದ ಮೊದಲ ಪತ್ರಕರ್ತ ಅವರು. ಪಾಕಿಸ್ತಾನದ ಗಡಿಯೊಳಗೆ ಅಲ್ಲಿನ ಸರ್ಕಾರ ಹೇಗೆ ವ್ಯವಸ್ಥಿತವಾಗಿ ಭಾರತೀಯ ವಿರೋಧಿ ಮನಸ್ಥಿತಿಯನ್ನು ಬಲಪಡಿಸುತ್ತಿದೆ ಎನ್ನುವುದನ್ನು ಬರೆಯುತ್ತಾ ಜಿಹಾದಿ ಜಗತ್ತಿನ ರಕ್ತಸಿಕ್ತ ಅಧ್ಯಾಯಗಳನ್ನು ಜಗಜ್ಜಾಹೀರು ಮಾಡಿದ್ದು ಕರ್ನಾಟಕದ ಪಾಲಿಗೆ ಮಾತ್ರವಲ್ಲ ಭಾರತದ ಪತ್ರಿಕಾ ರಂಗದಲ್ಲೇ ಹೇಳಿಕೊಳ್ಳಬಹುದಾದ ಸಾಧನೆ.
1962ರ ಚೀನಾ ಅತಿಕ್ರಮಣದ ಕುರಿತಾದ ಬ್ರಿಗೇಡಿಯರ್ ಜಾನ್ ಪಿ ದಳವಿಯವರ 'ದಿ ಹಿಮಾಲಯನ್ ಬ್ಲಂಡರ್' ಪುಸ್ತಕವನ್ನು ಕನ್ನಡಕ್ಕೆ ಅನುವಾದವನ್ನು ಅವರು ಮಾಡಿದ್ದರು. ಬೇರೆ ಅನುವಾದಿತ ಪುಸ್ತಕಗಳಂತೆಯೇ ಇದೂ ಒಂದು ಎಂದು ನೀವಂದುಕೊಂಡರೆ ಅದು ದೊಡ್ಡ ತಪ್ಪು. ಆ ಕೃತಿಯ ಅನುವಾದಕ್ಕೂ ಮುಂಚೆ ಬೆಳಗೆರೆಯವರ ಹೋಂ ವರ್ಕ್ ಪುಸ್ತಕ ಓದುವ ಪರ್ಯಂತ ನಮ್ಮ ಕಣ್ಣಿಗೆ ಬಡಿಯುತ್ತದೆ. ದಳವಿಯವರ ಮೂಲ ಪುಸ್ತಕದಲ್ಲಿಲ್ಲದ ಎಷ್ಟೋ ಮಾಹಿತಿಗಳು ಬೆಳಗೆರೆಯವರ ಹೋಂ ವರ್ಕ್ ಪರಿಣಾಮ ಕನ್ನಡ ಅವತರಣಿಕೆಯ 'ಹಿಮಾಲಯನ್ ಬ್ಲಂಡರ್'ನಲ್ಲಿ ವಿರಾಜಮಾನವಾಗಿವೆ. ಹೀಗೆ ತಾವಾಯ್ದುಕೊಂಡ ಪತ್ರಿಕಾ ರಂಗದಲ್ಲಿ ಹಿಂದೆ ಯಾರು ಮಾಡಲಾರದಂತಹದ್ದನ್ನು ಮಾಡಿ ಮುಂದಿನ ತಲೆಮಾರಿಗೆ ಮೇಲ್ಪಂಕ್ತಿಯೊಂದನ್ನು ಹಾಕಿಕೊಟ್ಟವರು ಅವರು. ಇದೆಲ್ಲಾ ಪತ್ರಿಕಾ ರಂಗಕ್ಕೆ ಅವರು ಕೊಟ್ಟ ಕೊಡುಗೆ ಎನ್ನುವಾಗ ಅದರಿಂದ ಅನೇಕಗಳನ್ನು ಅರಿತುಕೊಂಡ ಶ್ರೀಸಾಮಾನ್ಯನಿಗೂ ಅವರು ಅನೇಕವನ್ನು ಕೊಟ್ಟಿದ್ದಾರೆ ಅಂತಲೇ ಅರ್ಥ.
ಅವರ ಕುರಿತು ನಾನು ಇಷ್ಟೆಲ್ಲಾ ಬರೆಯುತ್ತಿರುವಾಗಲೇ ಅವರ ಕಡು ವಿರೋಧಿಗಳು 'ಎಷ್ಟೋ ಸಂಸಾರಗಳನ್ನು ಬೀದಿಗೆ ತಂದ ಇವನು', 'ಹಲವರಿಗೆ ಬ್ಲಾಕ್ ಮೇಲ್ ಮಾಡಿ ಹಣ ಸಂಪಾದಿಸಿದ' ಎಂದೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಹಾರಾಡುತ್ತಿದ್ದಾರೆ. ಅವುಗಳಿಗೆ ಪ್ರಬಲವಾದ ಪುರಾವೆಗಳಾವುವು ನನಗಂತೂ ಇದುವರೆಗೆ ಲಭ್ಯವಾಗಿಲ್ಲ. ಪ್ರಬಲ ಪುರಾವೆ ಸಿಕ್ಕ ಅವರ ಅಪರಾಧಗಳಿಗೆ ಅವರಿಗೆ ಕೋರ್ಟಿನಲ್ಲೇ ಶಿಕ್ಷೆಯಾಗಿರುವುದನ್ನು ನಾವು ಯಾರು ಮರೆಯುವ ಹಾಗಿಲ್ಲ. ಅವರ 'ಹಾಯ್ ಬೆಂಗಳೂರು' ಪತ್ರಿಕೆಯ ಮೂಲಕ ಅವರಿಗಿದ್ದ ಆದಾಯ, ಮತ್ತು ಅದಕ್ಕೆ ಸಮರ್ಪಕವಾಗಿ ಅವರು ತೆರಿಗೆ ಸಲ್ಲಿಸುತ್ತಿದ್ದುದನ್ನು ಸುದ್ದಿ ಸಂಸ್ಥೆಯೊಂದು ಇತ್ತೀಚಿಗೆ ಬಯಲು ಮಾಡಿದೆ. ವಾರ್ಷಿಕ ಎಪ್ಪತ್ತು ಲಕ್ಷ ತೆರಿಗೆ ಕಟ್ಟುವುದಾಗಿ ಅವರೇ ಅನೇಕ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.
ಕಟ್ಟ ಕಡೆಗೆ ಅವರೇ ಇಷ್ಟ ಪಟ್ಟುಕೊಂಡಿದ್ದ, ಅವರ ಸಮಸ್ತ ಓದುಗರೂ ಅವರಿಗೆ ಆತ್ಮೀಯತೆಯಿಂದ ನೀಡಿದ್ದ ಬಿರುದು 'ಸಕ್ಕತ್ತಾಗಿ ಬರೀತಾನೆ ಬಡ್ಡಿಮಗ' ಇಂದ ಬಡ್ತಿ ಪಡೆದು 'ಸಕ್ಕತ್ತಾಗಿ ಬರೀತಿದ್ದ ಬಡ್ಡಿಮಗ' ಆಗಿ ಪರಲೋಕಕ್ಕೆ ಪ್ರಯಾಣ ಬೆಳೆಸಿದ, ನಮ್ಮಲ್ಲಿ ಹಲವರಿಗೆ ಪುಸ್ತಕ ಪ್ರೀತಿ ಎಂಬ ಚಟ ಹತ್ತಿಸಿದ ರವಿ ಬೆಳಗೆರೆಯವರಿಗೆ ಗೌರವಪೂರ್ವಕ ಶ್ರದ್ಧಾಂಜಲಿ.
-o-