ಜಾರಿಗೊಂಡ ಕಾನೂನಿನಡಿ ರಕ್ಷಣೆ ಪಡೆದುಕೊಳ್ಳುವ ಜೊತೆ ಜೊತೆಗೆ ನಾಗರೀಕ ಸಮಾಜ ತಲೆ ತಗ್ಗಿಸುವಂತಹ ರೀತಿಯಲ್ಲಿ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುವವರ ಸಂಖ್ಯೆ ಕೂಡ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಾ ಹೋದದ್ದು ಮಾನವ ಸಮಾಜದ ಕುಟಿಲ ನೀತಿಗಳ ಇನ್ನೊಂದು ಮುಖವೆನ್ನಬೇಕಾಗಬಹುದೇನೋ!. ಸುಳ್ಳು ವರದಕ್ಷಿಣೆ ಕೇಸು, ಸುಳ್ಳು ಅತ್ಯಾಚಾರ ಕೇಸುಗಳು ದಾಖಲಾಗಿ ಅವಮಾನ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ವರ ಅಥವಾ ವರನ ಕಡೆಯ ಕುಟುಂಬಗಳ ಕಥಾನಕಗಳು ಪುಷ್ಟಿ ಕೊಡುತ್ತಿರುವುದೂ ಇದಕ್ಕೆಯೇ. ಸ್ತ್ರೀಯರ ಕುರಿತು ಮೃದು ಧೋರಣೆ ತಳೆದು ಕಾನೂನುಗಳು ರಚಿತಗೊಂಡಿದ್ದರೂ ಕೆಲ ಸ್ತ್ರೀಯರು ಅದಕ್ಕೆ ಹೊರತಾಗಿ ಪುರುಷರನ್ನು ಇಕ್ಕಟ್ಟಿಗೆ ಸಿಲುಕಿಸುವ, ಪುರುಷರ ಆಸ್ತಿ ಪಾಸ್ತಿಗಳನ್ನು ಕಬಳಿಸಿ ಅವರನ್ನು ಬೀದಿಪಾಲು ಮಾಡುವ ಹಗರಣಗಳು ಆಗಿಂದಾಗಲೇ ನಮ್ಮ ನಡುವೆ ನಡೆಯುತ್ತಲೇ ಇವೆ. ಕೆಲವು ವರ್ಷಗಳ ಹಿಂದೆ ಕರ್ನಾಟಕದ ಪೊಲೀಸ್ ಇಲಾಖೆಯ ಅಧಿಕಾರಿಯೊಬ್ಬನ ವಿರುದ್ಧ ಆತನ ಹೆಂಡತಿಯೇ ಸುಳ್ಳು ವರದಕ್ಷಿಣೆ ಕೇಸು ದಾಖಲು ಮಾಡಿ ಆತನ ಇಡೀ ಕುಟುಂಬ ಜೈಲು ಪಾಲಾಗಿ ಅಲ್ಲಿಂದ ಮರಳಿ ಬಂದ ನಂತರ ಆ ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡ ಹಗರಣ ಇನ್ನೂ ನನ್ನ ಸ್ಮೃತಿ ಪಟಲದಲ್ಲಿದೆ. ಕಾನೂನಿನ ದುರ್ಬಳಕೆ ಮಾಡಿಕೊಳ್ಳುವ ಸ್ತ್ರೀಯರ ವಿರುದ್ಧವೂ ಕಠಿಣ ಕಾನೂನು ರೂಪಿಸುವಂತೆ ಒತ್ತಾಯಗಳೂ ಈಗಾಗಲೇ ಕೇಳಿಬರುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ನನ್ನ ಕೈ ಸೇರಿಕೊಂಡಿದ್ದೆ ಎಸ್.ಎಲ್.ಭೈರಪ್ಪನವರ 'ಕವಲು' ಕಾದಂಬರಿ.
ಇಮೇಲ್, ಐಟಿ ರಂಗದ ಆಧುನಿಕ ಕಾಲಘಟ್ಟದ ಕಥಾ ಹಂದರವಿರುವ ಈ 'ಕವಲು' ಸ್ತ್ರೀ-ವಿಮೋಚನೆ, ಸ್ತ್ರೀ-ಹೋರಾಟಗಳು ಉಂಟುಮಾಡುತ್ತಿರುವ ಬದಲಾವಣೆಗಳಿಂದ ಆಗುತ್ತಿರುವ ತೊಂದರೆಗಳ ಮೇಲೆ ಹರಿಯುವ, ನಡುವೆ ನಡುವೆ ಗಂಡು-ಹೆಣ್ಣು ಎಂಬ ಭೇದಕ್ಕಿಂತ ಮಾನವೀಯ ಗುಣಗಳಿಗೆ ಹೆಚ್ಚು ಬೆಲೆ ಕೊಟ್ಟು ಅಲ್ಲಿನ ವ್ಯಾಜ್ಯಗಳಿಗೆ ಪರಿಹಾರ ಸೂಚಿಸಬಹುದೇನೋ ಎನಿಸುವಂತೆ ಮಾಡುವುದು ಸುಳ್ಳಲ್ಲ. ಸ್ತ್ರೀ-ಪರ ಹೋರಾಟಗಾರ್ತಿಯರು ಗಂಡಸೊಬ್ಬನನ್ನು ಮನುಷ್ಯನ ರೀತಿಯೇ ನೋಡದೆ ದುಡಿಯುವ ಯಂತ್ರದಂತೆ, ಆಸ್ತಿ ಸಂಪಾದಿಸುವ ಜೂಜು ಕುದುರೆಯಂತೆ ಕಾಣುವುದು ಕಳೆದ ಕೆಲವು ಶತಮಾನಗಳ ಹಿಂದೆ ಸ್ತ್ರೀಯರ ಮೇಲಾಗುತ್ತಿದ್ದ ಶೋಷಣೆಗಳೇ ಥೇಟ್ ಉಲ್ಟಾ ಹೊಡೆದಿವೆ ಎನಿಸದೆ ಇರಲಾರವು. ಗಂಡೊಬ್ಬನ ಜೀವನದಲ್ಲಿ ಹೆಣ್ಣು ಇರದೇ ಹೋದರೆ ಅವನು ಅನುಭವಿಸುವ ತುಮುಲಗಳು, ಹೆಣ್ಣೊಬ್ಬಳ ಜೀವನದಲ್ಲಿ ಗಂಡೊಬ್ಬನು ಇರದೇ ಹೋದರೆ ಆಕೆ ಅನುಭವಿಸುವ ಯಾತನೆಗಳು ಕಾದಂಬರಿಯಾದಂತ್ಯ ಹರಿಯುತ್ತವೆ. ಹೆಣ್ಣೊಬ್ಬಳ ಜೀವನದಲ್ಲಿ ಅಕ್ರಮವಾಗಿ ಗಂಡೊಬ್ಬ ಪ್ರವೇಶಿಸಿದಾಗ ಆಕೆ ತನ್ನ ಅನುಕೂಲಕ್ಕೋಸ್ಕರ ಕಾನೂನಿನ ಲೋಪದೋಷಗಳನ್ನು ಬಳಸಿಕೊಂಡು ಆತನನ್ನು ಇಕ್ಕಟ್ಟಿಗೆ ಸಿಲುಕಿಸಿ ತಾನು ಸುಖ ಜೀವನ ನಡೆಸುವ ರೀತಿ. ಕೊನೆಗೆ ಸತ್ಯದೆದುರು ಆಕೆ ನಿಲ್ಲಲಾಗದೆ ಕಾಲ್ಕಿತ್ತ ಬಗೆ ಅಮೂಲ್ಯವಾದ ಪಾಠವೊಂದನ್ನು ಜನಮಾನಸಕ್ಕೆ ತಲುಪಿಸುತ್ತವೆ.
ಸುಮಾರು ಮೂರ್ನಾಲ್ಕು ಕುಟುಂಬಗಳ ನಡುವೆ ನಡೆಯುವ ಕೌಟುಂಬಿಕ ಕಥಾನಕವಿರುವ ಈ ಕೃತಿಯಲ್ಲಿ ಔದ್ಯೋಗಿಕ ವಿಚಾರಗಳನ್ನು ಹದವಾಗಿ ಬೆರೆಸಿ ಕೌಟುಂಬಿಕ ಜೀವನದಲ್ಲಿ ಮನಸ್ಸು ಮಾಡಿದಷ್ಟೇ ಸ್ತ್ರೀ ಔದ್ಯೋಗಿಕ ರಂಗದಲ್ಲಿ ಮನಸ್ಸು ಮಾಡಿ ಅಲ್ಲಿ ಕೂಡ ಯಶಸ್ಸನ್ನೂ ತಂದುಕೊಡಬಲ್ಲಳು ಹಾಗೆ ಸರ್ವನಾಶಕ್ಕೂ ಕಾರಣಳಾಗಬಲ್ಲಳು ಎಂಬುದನ್ನು ಭೈರಪ್ಪನವರು ಬಹು ವಿವೇಚನೆಯಿಂದ ವಿವರಿಸಿದ್ದಾರೆ. ಧನಾತ್ಮಕ ದೃಷ್ಟಿಕೋನವಿರುವ ವೈಜಯಂತಿಯ ಪಾತ್ರ, ಋಣಾತ್ಮಕ ದೃಷ್ಟಿಕೋನವಿರುವ ಇಳಾ, ಮಂಗಳೆಯರ ಪಾತ್ರ, ಇವುಗಳ ಮಧ್ಯದಲ್ಲಿ ಸಿಲುಕಿಕೊಂಡ ದೈಹಿಕ, ಮಾನಸಿಕ ಅಸ್ವಸ್ಥೆ ಹುಡುಗಿಯ ಪಾತ್ರ, ಕಾದಂಬರಿಗೆ ತಳಹದಿಯಂತೆ ಕಾಣುತ್ತವೆ. ಕಾದಂಬರಿಯಾದ್ಯಂತ ಕೇಂದ್ರ ಬಿಂದುವಾಗಿರುವ ಜಯಕುಮಾರನ ಪಾತ್ರ, ಜೀವನದ ದಾರಿಯೊಳಗೆ ಎಡವುವ ಆತ ಅನುಭವಿಸುವ ಧೀರ್ಘ ಕಾಲೀನ ಯಾತನೆಗಳು ಮನುಷ್ಯ ಕ್ಷಣಿಕ ಸುಖಕ್ಕೆ ಮಾರುಹೋದರೆ ಪಡಬೇಕಾದ ಕಷ್ಟಗಳ ಕುರಿತಾಗಿ ಎಚ್ಚರಿಸುವಂತೆ ಕಂಡರೂ ಕಾದಂಬರಿಯ ಉದ್ದೇಶ ಅದನ್ನು ಓದುಗರಿಗೆ ತಲುಪಿಸುವುದಲ್ಲ ಎನಿಸುತ್ತದೆ.
ವಿದೇಶದಲ್ಲಿ ವಿದ್ಯೆ ಕಲಿತ ಹೆಣ್ಣು ಮಗಳೊಬ್ಬಳು ಆ ದೇಶದಲ್ಲಿ ತನ್ನ ಸುತ್ತಲಿನ ದಿನ ಮಾನದ ಬದುಕನ್ನು, ಅಲ್ಲಿನ ಯುವಕ-ಯುವತಿಯರ ತೆರೆದ ಮನಸ್ಸಿನ ಒಡನಾಟವನ್ನು ಗಮನಿಸುತ್ತಾಳೆ. ಯಾರ ಒತ್ತಾಸೆಯೂ ಇಲ್ಲದೆ ತನಗೊಪ್ಪಿದ ಸಂಗಾತಿಯನ್ನು ಆಯ್ದುಕೊಳ್ಳುವ, ತನಗೊಪ್ಪದಿದ್ದಾಗ ಸಂಗಾತಿಯನ್ನು ವರ್ಜಿಸುವ ಸ್ವಾತಂತ್ರ್ಯ ಆಕೆಗೆ ಪರಿಪೂರ್ಣ ಸ್ವಾತಂತ್ರ್ಯದಂತೆ ಕಾಣುತ್ತದೆ. ತತ್ಸಮಯಕ್ಕೆ ಭಾರತೀಯ ಸಾಂಸಾರಿಕ ಮೌಲ್ಯಗಳು ಆಕೆಗೆ ಸಂಸ್ಕಾರ, ಸಂಸ್ಕೃತಿಯ ಒರಳುಗಳಿಗೆ ಕಟ್ಟಿದ ಬಂಧನದ ಸಂಸಾರದಂತೆ ಕಾಣುತ್ತವೆ. ಸ್ತ್ರೀ ಸ್ವಾತಂತ್ರ್ಯವೆಂದರೆ ಒಂದರ್ಥದಲ್ಲಿ ಈ ನೆಲದ ಯಾವುದಕ್ಕೂ ಸೊಪ್ಪು ಹಾಕದೆ ಪರದೇಶದಿಂದ ಎರವಲು ತಂದ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಎಂಬ ಭ್ರಮೆಗೆ ಆಕೆ ಬೀಳುತ್ತಾಳೆ. ಆದರೆ ಆ ಪರದೇಶದಲ್ಲಿ ಮದುವೆಯಾದ ನಂತರ ಕುಂಟು ನೆಪಗಳ ಮೂಲಕವೇ ಸಾಂಸಾರಿಕ ಬಂಧಗಳನ್ನು ಕಡಿದುಕೊಂಡು ಬೀದಿಪಾಲಾದ, ತಾವು ಹೆತ್ತ ಮಕ್ಕಳನ್ನು ಅನಾಥರನ್ನಾಗಿಸಿದ ಅಸಂಖ್ಯ ಉದಾಹರಣೆಗಳು ಆಕೆಯ ಕಣ್ಣಿಗೆ ಬಡಿಯುವುದೇ ಇಲ್ಲ. ಅಲ್ಲಿನ ಪದವಿಯನ್ನು ಗಿಟ್ಟಿಸಿಕೊಂಡು ಭಾರತಕ್ಕೆ ಬಂದಿಳಿಯುವ ಆಕೆ ಅಧ್ಯಾಪಕಿ ವೃತ್ತಿಯನ್ನು ಹಿಡಿಯುತ್ತಾಳೆ. ಕಾಲೇಜಿನ ತರಗತಿಗಳ ಒಳಗೆ ಇಂಗ್ಲೀಷ್ ಭಾಷೆಯ ಪಾಠಗಳೊಂದಿಗೆ ಆಕೆ ಪರದೇಶದಲ್ಲಿ ಕಂಡಿದ್ದ ಸತ್ಯಾಂಶಗಳನ್ನು ತನ್ನ ಧೋರಣೆಗಳೊಂದಿಗೆ ಬೆರೆಸಿ ವಿದ್ಯಾರ್ಥಿಗಳಿಗೆ ತಿಳಿಸುತ್ತಾಳೆ. ಸ್ತ್ರೀ ಸಮಾನತೆಗಿಂತಲೂ ಸ್ತ್ರೀ ಸ್ವಾತಂತ್ರ್ಯ ಮತ್ತಷ್ಟು ಪ್ರಮಾಣ ಹೆಚ್ಚಬೇಕೆನ್ನುವುದೇ ಆಕೆಯ ಅಂಬೋಣದಂತೆ ತೋರುತ್ತದೆ.
ವಿರುದ್ಧ ಲಿಂಗಿಗಳ ಕುರಿತಾಗಿ ಸಹಜ ಕುತೂಹಲವಿರುವ ವಯೋಮಾನದ ವಿದ್ಯಾರ್ಥಿಗಳ ಮುಂದೆ ವಿದೇಶದಲ್ಲಿ ವಿದ್ಯೆ ಕಲಿತು ಬಂದು ಹೊಸ ತತ್ವವನ್ನು ವದರಿದ ಅಧ್ಯಾಪಕಿಯ ನಡೆ ಅಲ್ಲಿನ ವಿದ್ಯಾರ್ಥಿಗಳಲ್ಲಿ ವಿಮರ್ಶೆಗೊಳಪಡುತ್ತದೆ. ಜೀವನದಲ್ಲಿ ಇದು ಸಹಜ ಸಾಧು ಎಂದು ಪರಿಭಾವಿಸುವ ಒಬ್ಬಳು ಹುಡುಗಿ ಈ ತತ್ವಗಳನ್ನು ತನ್ನ ಜೀವನದೊಳಗೆ ಅಳವಡಿಸಿಕೊಳ್ಳುವ ಧೈರ್ಯ ಮಾಡಿ ಮುನ್ನುಗ್ಗುತ್ತಾಳೆ. ಇದಾದ ತರುವಾಯು ಆ ಅಧ್ಯಾಪಕಿಯ ನಿಜ ಜೀವನವೇ ಆಕೆಯ ತತ್ವಗಳಿಗೆ ತದ್ವಿರುದ್ಧವಾಗಿರುವುದು ತಿಳಿದು ವಿವಾಹಬಂಧನದಿಂದ ಅಧ್ಯಾಪಕಿ ಹೊರನಡೆಯುತ್ತಾಳೆ. ಹಾಗಿದ್ದರೂ ಕಾನೂನಿನ ಲೋಪ ದೋಷಗಳ ಬಲೆಯೊಳಗೆ ತನ್ನ ಮಾಜಿ ಪತಿಯನ್ನು ಕೆಡವಲು ನಾನಾ ಸಂಚು ರೂಪಿಸುತ್ತಾಳೆ. 'ತಾನೊಂದು ಬಗೆದರೆ ದೈವವೊಂದು ಬಗೆಯುತ್ತದೆ' ಎನ್ನುವಂತೆ ಆಕೆಯೇ ವಿವಾದದ ಕುಣಿಕೆಯೊಳಗೆ ಸಿಕ್ಕಿ ಬೀಳುತ್ತಾಳೆ. ನಿಸರ್ಗ ಸಹಜವಾದ ಬಯಕೆಗಳನ್ನು ಹತ್ತಿಕ್ಕಿ ತತ್ವಗಳ ಬಾಲ ಹಿಡಿಯುತ್ತಾ ದಾಂಪತ್ಯ ಜೀವನದಲ್ಲಿ ಬೇಕೆಂತಲೇ ವಿರಸವುಂಟು ಮಾಡಿಕೊಂಡಿದ್ದ ಆಕೆಯ ಜೀವನಕ್ಕೆ ಮನೋಕಾಮನೆಗಳನ್ನು ಪೂರ್ಣಗೊಳಿಸುವ ಇನಿಯನೊಬ್ಬ ಸಿಗುತ್ತಾನೆ. ಈ ಅಕ್ರಮ ನಂಟೇ ಆಕೆಯ ಮಾಜಿ ಪತಿಗೆ ಬಲವಾದ ಸಾಕ್ಷಿಯಾಗಿ ದೊರೆತು ಆತ ಆ ಕೇಸಿನಿಂದ ನಿರಾಯಾಸವಾಗಿ ಮುಕ್ತನಾಗುತ್ತಾನೆ.
ಇತ್ತ ಅಧ್ಯಾಪಕಿಯ ತತ್ವದಿಂದ ಪ್ರಭಾವಿತಳಾದ ಆಕೆಯ ವಿದ್ಯಾರ್ಥಿನಿಯೂ ಕೂಡ ವಿವಾಹವಲ್ಲದ ಅಕ್ರಮ ನಂಟಿನ ಮೂಲಕವೇ ಗಂಡೊಬ್ಬನ ಮನೆ ಸೇರಿ ಕಾನೂನಿನ ನೆಪವನ್ನು ಅಡ್ಡಹಿಡಿದು ಆತನ ಹೆಂಡತಿ ಎನಿಸಿಕೊಳ್ಳುತ್ತಾಳೆ. ಅಲ್ಲಿ ಆ ಗಂಡಸು ಮತ್ತು ಆತನ ತೀರಿಹೋದ ಮೊದಲ ಹೆಂಡತಿಯ ಮಗಳು ಪಡುವ ಪಡಿಪಾಟಲು 'ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ'ದಂತೆ ಕಂಡರೂ ಅಡಿಕೆಗೆ ಹೋದ ಮಾನಕ್ಕೆ ಆನೆಯನ್ನು ದಂಡವಾಗಿ ಕಟ್ಟುವ ಇರಾದೆಯಂತೆ ತೋರ ಹತ್ತುತ್ತದೆ. ಅಂತೂ ಆ ಕಷ್ಟ ಕೋಟಲೆಗಳಲ್ಲಿ ಬಹು ಧೀರ್ಘ ಕಾಲ ಸವೆದ ಆತನೂ ಮನೆಗೆಲಸದವಳು ನೀಡುವ ಸಣ್ಣ ಸಾಕ್ಷಿಯೊಂದರಿಂದ ನಿರಾಯಾಸವಾಗಿ ಪಾರಾಗುತ್ತಾನೆ. ಆಸ್ತಿಗಾಗಿ, ಸುಖಭೋಗಕ್ಕಾಗಿ ಆತನನ್ನು ಕಾಡಿದ ಆಕೆಯ ನಿಜ ಬಣ್ಣ ಪ್ರಪಂಚದೆದುರು ಬಿತ್ತರವಾದಾಗ ಆಕೆ ಮರು ಮಾತಾಡದೆ ನಡೆದುಬಿಡುತ್ತಾಳೆ!. ಕಾದಂಬರಿ ಸುಖಾಂತ್ಯವಾಗುತ್ತದೆ.
ಪ್ರಕೃತಿಯನ್ನು ದಿಕ್ಕರಿಸಿ ತತ್ವಗಳಿಗೆ ಮಾರುಹೋಗಿ ಬದುಕಬೇಕಾದರೆ ಪ್ರಬಲ ಮನೋಶಕ್ತಿ ಅವಶ್ಯವಾಗುತ್ತದೆ, ಇಲ್ಲಿನ ಕಾದಂಬರಿಯಲ್ಲೂ ಇಳೆ, ಮಂಗಳೆಯರು ಅನುಸರಿಸಿದ ತತ್ವ ಪಾಲನೆಗೆ ಭಯಂಕರವೆನಿಸುವಂತಹ ಮನೋ ನಿಗ್ರಹವಿರಬೇಕಾಗಿತ್ತು. ಆದರೆ ಅದು ಹಾಗಿರದೆ ಹೋದುದಕ್ಕೆ ಅವರ ತತ್ತ್ವ ಪಾಲನೆ ವಿಫಲವಾಯಿತೆನ್ನಬಹುದು. ತಮ್ಮ ತತ್ವಗಳು ವಿಫಲ ದಾರಿಯನ್ನಿಡಿದಾಗ ಮತ್ತೊಬ್ಬರನ್ನು ಕಾಡಿದ ಅವರೀರ್ವರ ಬಗೆಯಂತೂ ಅನುಕರಣಾರ್ಹವಲ್ಲ. ಅಲ್ಲಿ ಬಿದ್ದು ನರಳಿದ ಜೀವಗಳು ಓದುಗರಿಗೆ ದಾಟಿಸುವ ಪಾಠಗಳಂತೂ ಅನೇಕ.
-o-