ಸೋಮವಾರ, ಮೇ 1, 2017

ಕಾರ್ಗಿಲ್ ಯುದ್ಧಕ್ಕೆ ದೇಣಿಗೆ

ಮೊನ್ನೆ ದೇಶಕ್ಕೆ ಬಲಿದಾನಗೈದ ಸೈನಿಕರ ಕುರಿತು ಚಕ್ರವರ್ತಿ ಸೂಲಿಬೆಲೆ ಮಾಡುತ್ತಿದ್ದ ಭಾಷಣದ ವಿಡಿಯೋ ಒಂದನ್ನು ಯೂಟ್ಯೂಬ್ ನಲ್ಲಿ ನೋಡುತ್ತಿದ್ದೆ. ಅದು ಬರೀ ಮಾತಲ್ಲ, ಭಾಷಣವಂತೂ ಅಲ್ಲವೇ ಅಲ್ಲ. ದೇಶ ಭಕ್ತಿಯ ಸುಧಾಮೃತ, ಅವರ ಮಾತು ಮುಂದುವರಿದಂತೆಲ್ಲ ನಾನು ಆ ಅಮೃತ ಸುಧೆಯಲ್ಲಿ ಮಿಂದೇಳುತ್ತಿದ್ದೆ. ದೇಶವೊಂದು ತಾನು ಸಧೃಡವಾಗಿ ನಿಂತು ಬೀಗಬೇಕಾದರೆ ನೂರಾರು ಜನರ ನೆತ್ತರ ಹನಿ ಬಸಿಯಬೇಕು, ಲಕ್ಷಾಂತರ ಜನರ ಬೆವರ ಹನಿ ಭುವಿ ಮುಟ್ಟಬೇಕು, ಕೋಟ್ಯಂತರ ಜನರ ಹಾರೈಕೆ ಫಲಿಸಬೇಕು ಆ ನಿಟ್ಟಿನಲ್ಲಿ ದೇಶದ ಸರ್ವ ಕ್ಷೇತ್ರಗಳೂ ಕಾರ್ಯ ಪ್ರವೃತ್ತವೇ ಆದರೂ ಅದರಲ್ಲಿ ಎಲ್ಲರಿಗಿಂತ ಯೋಧರ ಪಾತ್ರ ಬಹು ಮುಖ್ಯವಾದುದು. ದೇಶದೊಳಗಿನ ಪರಿಸ್ಥಿತಿಗಳನ್ನು ನಿಭಾಯಿಸಲು ಸಂವಿಧಾನವೆಂಬ ಚೌಕಟ್ಟು ಇದ್ದು ಅದರೊಳಗೆ   ದೈನಂದಿನ ಕಾರ್ಯ ಕಲಾಪಗಳಾದರೆ ಆಗಿ  ಹೋಯಿತು. ಆದರೆ ಗಡಿಯಲ್ಲಿ ನೆರೆದೇಶಗಳು ತೆಗೆಯುವ ತಗಾದೆಗೆ ಯಾವ ಚೌಕಟ್ಟು?, ಎಲ್ಲಿಯ ಮಿತಿ?,  ಯಾರು ದಿಕ್ಕು?.ಅವುಗಳೆಲ್ಲದರ ಪರಿಣಾಮಗಳ ಗುಂಡುಗಳಿಗೆ ಎದೆಯೊಡ್ಡುವರು ಮಾತ್ರ ನಮ್ಮ ಸೈನಿಕರು.

1999
ಭಾರತದ ಇತಿಹಾಸದಲ್ಲಿ ಎಂದೂ ಮರೆಯದ ಘಟನೆ ಘಟಿಸಿದ ವರ್ಷ. ಈ ದೇಶದ ಪ್ರಧಾನಿಯಾಗಿದ್ದ ವಾಜಪೇಯಿ ಶಾಂತಿ ಸೌಹಾರ್ದತೆಯನ್ನೇ ಮುಂದು ಮಾಡಿಕೊಂಡು ಭಾರತ-ಪಾಕಿಸ್ತಾನ ಬಸ್ ಸೇವೆಯನ್ನು 1999ರ ಫೆಬ್ರವರಿಯಲ್ಲಿ ಆರಂಭಿಸಿದ್ದರು. ಇದು ಉಭಯ ದೇಶಗಳಿಗೂ ಆನಂದದಾಯಕವಾಗಿರುವುದೇ ಆಗಿದ್ದು ಇದನ್ನು ಕಂಡು ಇನ್ನೆಷ್ಟು ದೇಶಗಳು ಹೊಟ್ಟೆ ಉರಿದುಕೊಂಡಿದ್ದವೋ ಗೊತ್ತಿಲ್ಲ. ಆದರೆ ಪಾಕಿಸ್ತಾನ-ಭಾರತಗಳು ಒಟ್ಟುಗೂಡಿದರೆ ದಕ್ಷಿಣ ಏಷ್ಯಾದ ದೇಶಗಳು ನಮ್ಮ ಬಳಿ ಯಾವುದಕ್ಕೂ ಕೈ ಒಡ್ಡುವ ಪ್ರಸಂಗ ಬರುವುದಿಲ್ಲವೆನ್ನುವುದು ಕೆಲವು ದೇಶಗಳಿಗೆ ಒಳಗೊಳಗೇ ಚುಚ್ಚಲಾರಂಭಿಸಿತ್ತು. ಯಾರ ಹೇಳಿಕೆಯ ಮಾತೋ?  ಇಲ್ಲ ಪಾಕಿಸ್ತಾನ ತನ್ನ ಭವಿಷ್ಯದ ಬಗ್ಗೆ ತಪ್ಪುಗ್ರಹಿಕೆ ಮಾಡಿಕೊಂಡು ಯುದ್ಧಕ್ಕೆ  ಸನ್ನದ್ಧವಾಯಿತೋ? ದೇವರೇ ಬಲ್ಲ.  

ಸ್ವಾತಂತ್ರ್ಯ ದಕ್ಕಿದಂದಿನಿಂದ ಕಾಶ್ಮೀರ ಕಣಿವೆಗಳತ್ತಲೇ ಚಿತ್ತ ನೆಟ್ಟಿರುವ ಪಾಕಿಸ್ತಾನಕ್ಕೆ ಯುದ್ಧ ಮಾಡಲು ಅದ್ಯಾವ ಸುಸಮಯ ಅನ್ನುವ ಭಾವನೆ ಬಂದಿತೋ ಅಥವಾ ಸರಿಯಾಗಿ ಅಲ್ಲಿಗೆ ಒಂದು ವರ್ಷದ ಹಿಂದೆ ತಾನೇ ಸಿದ್ಧಪಡಿಸಿದೆ ಎಂದು ಹೇಳಿಕೊಂಡಿದ್ದ ಅಣು ಬಾಂಬ್ ಅನ್ನು  ಪರೀಕ್ಷಾರ್ಥ ಪ್ರಯೋಗ ನಡೆಸಿ ಯಶಸ್ವಿಯಾಗಿದ್ದ ಹೆಮ್ಮೆಯಲ್ಲಿ ಬೀಗುತ್ತಿದ್ದ ಕಾರಣವಿದ್ದರೂ ಇರಬಹುದು. ಭಾರತದೊಳಗೆ ಬಿರು ಬೇಸಿಗೆಯಿತ್ತು, ಅತ್ತ ಪಾಕಿಸ್ತಾನ ಅದೇ ವರ್ಷದ ಮೇ ಆರಂಭದಲ್ಲಿ ತನ್ನ ಸೈನಿಕರನ್ನು ಭಾರತದ ಗಡಿ ನಿಯಂತ್ರಣ ರೇಖೆಯೊಳಗೆ ನುಗ್ಗಿಸಿತ್ತು. ಕುತಂತ್ರಕ್ಕೆ ಪ್ರಖ್ಯಾತವಾಗಿರುವ ಪಾಕಿಸ್ತಾನ ಭಾರತ ದೇಶದೊಳಗೆ ವಾಮ ಮಾರ್ಗದ ಮೂಲಕ ಪ್ರಾಂತವೊಂದರ ಮೇಲೆ ಹಿಡಿತ ಸಾಧಿಸಲು ಶತಾಯ ಗತಾಯ ಪ್ರಯತ್ನ ನಡೆಸಿತ್ತು. ಯಥಾ ಪ್ರಕಾರ ತನ್ನ ಕಳ್ಳ ಮಾರ್ಗದ ಮೂಲಕವೇ ತನ್ನ ಸೈನಿಕರನ್ನು ನುಗ್ಗಿಸುತ್ತಿತ್ತು. ಅಪ್ಪಿ ತಪ್ಪಿ ಪಾಕ್ ಸೈನಿಕರು ಭಾರತದ ಗಡಿಯೊಳಗೆ ಗುಂಡಿಗೆ ಬಲಿಯಾದರೆ ಅವರು ನಮ್ಮ ಸೈನಿಕರಲ್ಲ, ನಮ್ಮ ಸೈನಿಕರಂತೆ ವೇಷ ಮರೆಸಿಕೊಂಡಿದ್ದ ಭಯೋತ್ಪಾದಕರು ಎನ್ನುವುದು ಇಂತಹವೆಲ್ಲ ಸ್ವಾತಂತ್ರ್ಯಾನಂತರ ಆ ರಾಷ್ಟ್ರಕ್ಕೆ ಮಾಮೂಲಿ ದಿನ ನಿತ್ಯದ ಕಾರ್ಯವಾಗಿದ್ದು ಇದೀಗ ಯಾರಿಗೂ ತಿಳಿಯದ ವಿಚಾರವಲ್ಲ.   

ಅದು ಸರಿಯಾಗಿ 1999ರ ಮೇ 2ನೆ ತಾರೀಖು ಕಾಶ್ಮೀರ ಪ್ರಾಂತದ ಕಾರ್ಗಿಲ್ ಜಿಲ್ಲೆಯ ಗಾರ್ಕೌನ್ ಗ್ರಾಮದ ದನ ಕಾಯುವ ಹುಡುಗರು ಪಾಕಿಸ್ತಾನದ ಸೈನ್ಯ ಮೆಲ್ಲಗೆ ಕದನ ವಿರಾಮ ಉಲ್ಲಂಘಿಸಿ ಗಡಿಯೊಳಗೆ ವಿಪರೀತ ಚಟುವಟಿಕೆಗಳನ್ನು ಮಾಡುತ್ತಿದ್ದನ್ನು ಸದ್ದಿಲ್ಲದೇ ಸರ್ಕಾರದ ಕಿವಿಗೆ ತಲುಪಿಸಿದ್ದರು. ಕೂಡಲೇ ಕಾರ್ಯ ಪ್ರವೃತ್ತವಾದ ಕೇಂದ್ರ ಸರ್ಕಾರ ಇದರ ಮೇಲ್ವಿಚಾರಣೆಗೆ ಐದು ಜನ ಕಮಾಂಡೋ ಗಳನ್ನು ಕಾರ್ಗಿಲ್ ಗಡಿಗೆ ಕಳುಹಿಸಿಕೊಟ್ಟಿತು. ಪಾಕಿಸ್ತಾನ ತನ್ನನ್ನು ತಾನು ಪಾಪಿಸ್ತಾನವೆಂದು ತೋರ್ಪಡಿಸಿಕೊಳ್ಳಲೋ ಎಂಬಂತೆ ಆ ಐವರನ್ನು ಚಿತ್ರ ಹಿಂಸೆ ನೀಡಿ ಕೊಂದಿತು. ಅದೇ ಸಮಯಕ್ಕೆ ಸರಿಯಾಗಿ ಪಾಕಿಸ್ತಾನ ಸೈನ್ಯದ ಮುಖ್ಯಸ್ಥರ ಹೇಳಿಕೆಗಳು, ಪಾಕಿಸ್ತಾನದ ಅಧ್ಯಕ್ಷರ ಹೇಳಿಕೆಗಳು ತಾವು ಯುದ್ಧ ಬಯಸಿದ್ದೇವೆ ಎನ್ನುವುದನ್ನು ಪರೋಕ್ಷವಾಗಿ ಭಾರತಕ್ಕೆ ರವಾನೆ ಮಾಡಿದ್ದರಿಂದ ಯುದ್ಧ ಆರಂಭವಾಗುವ ಎಲ್ಲ ಲಕ್ಷಣಗಳೂ ಗೋಚರವಾದವು.  


ದ್ವೀತೀಯ ಮಹಾಯುದ್ಧದ ನಂತರ ಭೀಕರವೆನಿಸುವ ಯುದ್ಧಗಳು ಪ್ರಪಂಚದಲ್ಲಿ ನಡೆದವಾದರೂ ಅಣು ಶಕ್ತಿಪೂರಿತವಾದ ಎರಡು ರಾಷ್ಟ್ರಗಳು ಎದುರಾಗಿ ಯುದ್ಧ ಮಾಡಿದ್ದು ಕಾರ್ಗಿಲ್ ಯುದ್ಧದಲ್ಲಿಯೇ. ಬೆಚ್ಚಿದ ಜಗತ್ತಿನ ಇತರ ರಾಷ್ಟ್ರಗಳು ಭಾರತ /ಪಾಕ್ ನಲ್ಲಿರುವ ತಮ್ಮ ನಾಗರೀಕರಿಗೆ ತುರ್ತಾಗಿ ಆ ದೇಶಗಳನ್ನು ಬಿಟ್ಟು ಹೊರಟುಬಿಡಬೇಕೆಂದು ಸುಗ್ರೀವಾಜ್ಞೆ ಹೊರಡಿಸಿಬಿಟ್ಟವು. ಆ ನಾಗರೀಕರು ಹಾಗೆ ನಡೆದುಕೊಂಡರೂ ಕೂಡ. ಇರಲಿ ಅವೆಲ್ಲ ಒತ್ತಟ್ಟಿಗಿದ್ದರೂ ದೇಶದೊಳಗಿನ ಹಲವಾರು ವಿಷಯಗಳು ದಿಕ್ಕು ತಪ್ಪಿದ್ದಂತೂ ನಿಜ. ಕೇಂದ್ರದಲ್ಲಿ ವಾಜಪೇಯಿಯವರ ಮೇಲೆ ತುರ್ತು ಪರಿಸ್ಥಿತಿ ಹೇರಲು ಇನ್ನಿಲ್ಲದ ಒತ್ತಡ ತರಲು ಪ್ರಯತ್ನ ಮಾಡಿ ಸೋತ ಕೆಲವರು ದೇಶದ ಮೇಲೆ ಯುದ್ಧವಾಗುತ್ತಿದ್ದರು ತಮ್ಮದೊಂದಿಷ್ಟು ರಾಜಕೀಯ ಬೆಳೆಯನ್ನು ಅದೇ ಉರಿಯಲ್ಲಿ ಬೇಯಿಸಿಕೊಂಡು ಬಿಡಲು ತವಕಿಸುತ್ತಾ ಕೂತಿದ್ದರು.

1974-75ರ ಸಮಯದಲ್ಲಿ ಆಗಿನ ಪ್ರಧಾನಿ ಇಂದಿರಾಗಾಂಧಿ ವಿಧಿಸಿದ್ದ ತುರ್ತು ಪರಿಸ್ಥಿತಿಗೆ ವಿರೋಧವೊಡ್ಡಿದವರಲ್ಲಿ ಪ್ರಮುಖರು ವಾಜಪೇಯಿ ಆದ ಕಾರಣ 99ರ ಕಾರ್ಗಿಲ್ ಯುದ್ಧ ಘೋಷಣೆಯಾದಾಗ ಯುದ್ಧ ಘೋಷಣೆಯೊಂದಿಗೆ ತುರ್ತು ಪರಿಸ್ಥಿತಿ ಘೋಷಿಸದೆ ಪಾಕಿಸ್ತಾನದ ಪೊಳ್ಳು ಬೆದರಿಕೆಗೆ ದೇಶದ ಕಾನೂನು ಸುವ್ಯವಸ್ಥೆಗೆ ಕೊಂಚವೂ ಕುಂದು ಉಂಟಾಗದಂತೆ ದೇಶ ಕಾಯುವುದರಲ್ಲಿ ಚಾಣಾಕ್ಷತನ ಮೆರೆದರು. ಸಾರ್ವಜನಿಕ ರಂಗದಲ್ಲಿಯೂ ಇದಕ್ಕೆ ಪೂರಕ ವಾತಾವರಣ ನಿರ್ಮಾಣವಾಯಿತು. ಜನ ತಾವೇ ಮುಂದೆ ನಿಂತು ಕಾರ್ಗಿಲ್ ಯುದ್ಧಕ್ಕೆ ದೇಣಿಗೆ ಸಂಗ್ರಹ ಮಾಡಿ ಕೊಟ್ಟರು. ಅದರಲ್ಲೂ ಹೇಳಬೇಕೆನಿಸುವ ಪ್ರಮುಖ ಸಂಸ್ಥೆ ಆರ್ ಎಸ್ ಎಸ್. 

ನಾವೆಲ್ಲಾ ಆಗ ಸುಮಾರು ಮೂರನೇ ಕ್ಲಾಸು ಓದುತ್ತಿದ್ದ ಹುಡುಗರು. ಆಗಷ್ಟೇ ಶಾಲೆ ಶುರುವಾಗಿತ್ತು. ನಾನು ಅಧೀಕೃತವಾಗಿ ಆರ್ ಎಸ್ ಎಸ್ ಸೇರಿಲ್ಲವಾದರೂ ಪ್ರತೀ ದಿನ ಸಾಯಂಕಾಲ ನಡೆಯುತ್ತಿದ್ದ ಶಾಖೆಯಲ್ಲಿ ಹೇಳುವ ಕಥೆಗೆ ಆಸೆ ಪಟ್ಟು ಅಲ್ಲಿಗೆ ಹೋಗಿಬಿಡುತ್ತಿದ್ದೆ.ದೇಶಕ್ಕೆ ಬಲಿದಾನಗೈದವರ ಕಥೆ, ಸ್ವಾತಂತ್ರ್ಯ ಹೋರಾಟಗಾರರ ಕಥೆ, ಸ್ವಾತಂತ್ರ್ಯಕ್ಕಾಗಿ ದೇಶದಲ್ಲಿ ನಡೆದ ಆಂದೋಲನಗಳ ಸಂಕ್ಷಿಪ್ತ ನೋಟವೇ ಮೊದಲಾಗಿ ಮತ್ತಿತರ ರಾಷ್ಟ್ರೀಯ ಐತಿಹಾಸಿಕ ವಿಚಾರಗಳನ್ನು ಸವಿಸ್ತಾರವಾಗಿ ಅಲ್ಲಿ ಬಿಚ್ಚಿಡುತ್ತಿದ್ದ ಕಾರಣ ಅಲ್ಲಿಗೆ ಹೋಗುವುದು ಒಂದು ಚಟವಾಯಿತು. ಇಂತಿಪ್ಪ 1999ರ ಒಂದು ದಿನ ಅಂದಿನ ಶಾಖೆಯಾನಂತರ ಅಲ್ಲಿನ ಸಂಘಟಕರು ಸೇರಿದ್ದ ಹುಡುಗರನ್ನೆಲ್ಲ ಕರೆದು ಕಥೆ ಹೇಳಲು ನಿಂತರು. ಇಂದಿನ ಕಥೆ ಏನಿರಬಹುದು ಅನ್ನುವ ಧಾವಂತದಲ್ಲಿ ನಮ್ಮ ಕಿವಿಯಾಳಿಗಳು ಅತ್ತಲೇ ಹೊರಳಿದಾಗ ಅಲ್ಲಿ ಕೇಳಿಸಿದ್ದು 'ಭಾರತದ ಮೇಲೆ ಯುದ್ಧ ಘೋಷಣೆಯಾಗಿದೆ' ಎನ್ನುವ ವಾಕ್ಯ!!. ಸರಿ ಮುಂದೇನು? ಅನ್ನುವ ಪ್ರಶ್ನೆ ನಮ್ಮೊಳಗೇ ಹುಟ್ಟುವ ಮೊದಲೇ ಪ್ರಧಾನಿ ವಾಜಪೇಯಿ ತುರ್ತುಪರಿಸ್ಥಿತಿ ಘೋಷಿಸಿಲ್ಲ, ಯುದ್ಧಕ್ಕೆ ಬೇಕಾದ ನಿಧಿಗೆ ದೇಶದ ಸಮಸ್ತರೂ ತಮ್ಮ ಕೈಲಾದ ಸಹಾಯ ಮಾಡಬೇಕು ಎನ್ನುವುದನ್ನು ಕೇಳಿ ಮುಂದಿನ ನಡೆ ನನ್ನ ಗ್ರಹಿಕೆ ಅಳತೆಯಿದ್ದಷ್ಟು ಗೋಚರವಾಯಿತಾದರೂ ನಾವೇ ನಮ್ಮ ಮನೆಗಳಿಗೆ ಬಂದು ಮನೆಯ ಮೂಲೆಯಲ್ಲಿದ್ದ ಹಳೆ ಡಬ್ಬಗಳನ್ನು ಮತ್ತಿತರ ಬಳಕೆಯಾಗದ ವಸ್ತುಗಳನ್ನು ಸೇರಿಸಿ ಹುಂಡಿಯಂತಹ ಡಬ್ಬಗಳನ್ನು ತಯಾರು ಮಾಡಿಕೊಂಡು ಮೂರು ಮೂರು ಜನ ಗುಂಪಿನಂತೆ ಆರ್ ಎಸ್ ಎಸ್ ವತಿಯಿಂದ ಯುದ್ಧಕ್ಕಾಗಿ ದೇಣಿಗೆ ಸಂಗ್ರಹ ಮಾಡಲು ನಿಂತೆವು.

ಅಂದಿನ ನಮ್ಮ ಶಾಖೆಯ ಸಂಘಟಕರು ಹೇಳಿದ ಮಾತುಗಳು ನಾನು ಚಕ್ರವರ್ತಿ ಸೂಲಿಬೆಲೆಯವರ ಮಾತುಗಳನ್ನು ಕೇಳಿದಾಗಲೂ ನನ್ನಲ್ಲಿ ಮತ್ತೆ ಮತ್ತೆ ಅನುರಣಿಸುತ್ತಲೇ ಇರುತ್ತವೆ. ಮಹಾನ ದೇಶ ಭಕ್ತರಾಗಿದ್ದ ನಮ್ಮ ಶಾಖಾ ಸಂಘಟಕ ಮಂಜುನಾಥ್(ಅವರ ಬಿಡುವಿನ ಸಮಯದಲ್ಲಿ ನಮ್ಮ ತರಗತಿಗಳಿಗೆ ಬಂದು ಸಂಸ್ಕೃತವನ್ನು ಹೇಳಿಕೊಡುತ್ತಿದ್ದವರು ಅವರೇ) ಅವರು ದೇಣಿಗೆ ಸಂಗ್ರಹಕ್ಕೆ ಹೊರಡುತ್ತಿರುವ ಹುಡುಗರಿಗೆ ನಿರ್ದೇಶನ ನೀಡುವಾಗ  ಹೇಳಿದರು 'ಮತ್ತೊಬ್ಬರಿಂದ ದೇಣಿಗೆ ಸಂಗ್ರಹ ಮಾಡುವ ಮೊದಲು ನಿಮ್ಮ ಕೈಲಾದಷ್ಟು ಹಣ ನೀವು ನಿಮ್ಮ ಕೈಲೇ ಹಿಡಿರುವ ಹುಂಡಿಯೊಳಗೆ ಹಾಕಿಬಿಡಿ, ಅದು ನೇರವಾಗಿ ಯುದ್ಧದ ನಿಧಿಗೆ ತಲುಪುತ್ತದೆ' ಎಂದು. ಅಂದಿಗೆ ಏನೂ ಯೋಚನೆ ಮಾಡದೆ ನನ್ನಲ್ಲಿದ್ದ 3-4 ರೂಪಾಯಿಗಳನ್ನು ಹುಂಡಿಯೊಳಗೆ ಹಾಕಿ ಮಾಗಡಿ ಪೇಟೆಯ ಗಲ್ಲಿ ಬೀದಿಗಳಲ್ಲಿ ದೇಣಿಗೆ ಸಂಗ್ರಹ ಮಾಡಿ ಹಿಂತಿರುಗಿದ್ದೆ. ಅಂದಿಗೆ ನಾನೇನು ಮಾಡಿದೆ ಎನ್ನುವ ಅರಿವು ನನಗಿರಲಿಲ್ಲ, ತಿಳಿದುಕೊಳ್ಳುವ ವಯಸ್ಸು ಅದಲ್ಲವೇನೋ ನಾನರಿಯೆ.

ಮೊನ್ನೆ ಚಕ್ರವರ್ತಿಯವರ ಭಾಷಣದ ವಿಡಿಯೋ ತುಣಿಕಿನಲ್ಲಿ ಕಾರ್ಗಿಲ್ ಯುದ್ಧದ ಸಮಯದಲ್ಲಿ ದೇಶದ ನಾಗರೀಕರ ಸಮಯ ಪ್ರಜ್ಞೆಯನ್ನು ಕೊಂಡಾಡುತ್ತಿದ್ದುದನ್ನು ಗಮನಿಸಿದೆ. ಮುಂಬೈ ನಗರದ ವೇಶ್ಯೆಯರ ಸಂಘಟನೆಯೊಂದು ನಿರ್ದಿಷ್ಟ ದಿನವೊಂದರ ವೇಶ್ಯಾವಾಟಿಕೆಯಿಂದ ಗಳಿಸಿದ ಹಣವನ್ನು ಕಾರ್ಗಿಲ್ ಯುದ್ಧಕ್ಕೆ ನೀಡಿದ್ದು, ಅದೇ ನಗರದಲ್ಲಿ ಸರ್ಕಾರಿ ಶಾಲೆಯ ಬಾಲಕಿಯೊಬ್ಬಳು ಲೋಕಲ್ ರೈಲುಗಳಲ್ಲಿ ಭಿಕ್ಷೆ ಬೇಡಿ ಸುಮಾರು ನೂರು ರೂಪಾಯಿಗಳನ್ನು ಸಂಪಾದಿಸಿ ಅವರ ತಂದೆಗೆ ಕೊಟ್ಟು ಯುದ್ಧ ನಿಧಿಗೆ ಹಣ ತಲುಪಿಸುವಂತೆ ಬೇಡಿಕೊಂಡಿದ್ದು ಇನ್ನು ಎಷ್ಟೆಷ್ಟೋ ಇಂತಹ ಉದಾಹರಣೆಗಳನ್ನು ಅವರು ತೆರೆದಿಡುತ್ತಾ ಹೋದಂತೆ ನನ್ನ ಮನಸ್ಸು ನಾನೇನು ಮಾಡಿದೆ? ಎನ್ನುವತ್ತ ಹೊರಳಿತು.ವಯಸ್ಸು ಚಿಕ್ಕದು, ಕೊಡುವ ಕೈಯಂತೂ ಇನ್ನು ಚಿಕ್ಕದು ಆದರೂ ನಾನು 3-4  ರೂಪಾಯಿ ಕೊಟ್ಟಿದ್ದೆ. ಅದರೊಳಗೆ ಸಾರ್ಥಕತೆ ಎದ್ದು ಕಾಣಿಸುತ್ತಿದೆ. ಇಂದು ಸಾವಿರಾರು ರೂಪಾಯಿಗಳನ್ನು ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಖರ್ಚು ಮಾಡಿ ಉಡಾಯಿಸಬಹುದು. ಆದರೆ ಅಂದು ನಾನು ಕೊಟ್ಟ ಮೂರು ರೂಪಾಯಿಗಳು ಇಂದು ಸಾಸಿರದಷ್ಟಾಗಿ ನನ್ನ ಕಣ್ಣಿಗೆ ಗೋಚರಿಸುತ್ತಿವೆ. ನಾನು ಎಷ್ಟು ಬಾರಿ ಎಲ್ಲೆಲ್ಲಿ ದುಡ್ಡು ಕೊಟ್ಟಿದ್ದೇನೋ ಅದೆಲ್ಲಕ್ಕಿಂತ ಹೆಚ್ಚು ಸಾರ್ಥಕತೆ ಹಾಗು ಅಪ್ಯಾಯಮಾನವಾಗಿರುವುದು ಕಾರ್ಗಿಲ್ ಯುದ್ಧಕ್ಕೆ ನಾ ಕೊಟ್ಟ ಸೂಕ್ಷಮಾತಿ ಸೂಕ್ಷ್ಮ ದೇಣಿಗೆಯಲ್ಲಿ.ನನ್ನಿಂದ ಈ ಸೂಕ್ಷ್ಮ ಸೇವೆಯಾಗಲು ಕಾರಣೀಭೂತವಾದ ಆರ್ ಎಸ್ ಎಸ್ ಗೆ ನಾನು ಎಂದೆಂದಿಗೂ ಅಭಾರಿ.



ಭಾನುವಾರ, ಏಪ್ರಿಲ್ 23, 2017

ಬಂದು ಹೋಗುವ ನಡುವೆ

ಜಗದಂಗಳಕ್ಕೆ ಬರಲು ಆಹ್ವಾನವಿಲ್ಲ
ಅಲ್ಲಿಂದ ನಿರ್ಗಮಿಸಲು ಆಹ್ವಾನವಿಲ್ಲ
ಬಂದು ಹೋಗುವ ನಡುವೆ ಆಹ್ವಾನವಿಲ್ಲದ
ಕೌತುಕಗಳಿಗೆ ನಾವು ಹೋಗುವುದೇ ಇಲ್ಲ

ಇಲ್ಲಿಗೆ ಬರುವಾಗ ಗುರುವಿರಲಿಲ್ಲ
ಇಲ್ಲಿಂದ ಹೋಗುವಾಗ ಗುರಿಯಿರುವುದಿಲ್ಲ
ಬಂದು ಹೋಗುವ ನಡುವೆ ಗುರು, ಗುರಿಗಳಿಗೆ
ನಮ್ಮ ನಾವು ಸಮರ್ಪಿಸಿಕೊಂಡುಬಿಟ್ಟೆವಲ್ಲ!!

ಅಲ್ಲಿಂದ ಬರುವಾಗ ಆಸೆ ಮೋಹಗಳಿರಲಿಲ್ಲ
ಇಲ್ಲಿಂದ ಹೋಗುವಾಗ ಅವುಗಳ ತೊರೆಯಲು ಆಸ್ಪದವೇ ಇಲ್ಲ
ಭುವಿಯ ಮಕ್ಕಳು ನಾವು, ಅದರ ಎರವಲು  ಈ ದೇಹ,
ಹಿಂದಿರುಗಿ ಋಣಮುಕ್ತರಾಗಲು ಭಾದ್ಯರಲ್ಲವೇ ನಾವು

ಹುಟ್ಟು ಅರಿಯದ ಜೀವಿ ಜಗದೊಳಗಿಲ್ಲ
ಮಸಣಕೆ ಬಂಧುಗಳಾಗದ ಜನರು ಇಲ್ಲಿಲ್ಲ
ಹುಟ್ಟು-ಸಾವು ಗಳೊಳಗೆ ಬಡಿದಾಡಿ ಬಸವಳಿದರೂ
ನಿಜ ಸ್ಥಿತಿ ಮನುಜನಿಗರ್ಥವಾಗಲೇ ಇಲ್ಲ!!


ಭಾನುವಾರ, ಏಪ್ರಿಲ್ 16, 2017

ಸ್ವಾಮಿಗಳಿಗೆ ಅಧಿಕಾರ ಗದ್ದುಗೆ

ಇತ್ತೀಚಿಗೆ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆ ನಡೆದು ಫಲಿತಾಂಶ ಪ್ರಕಟವಾದಾಗ ದೇಶದ ಇತಿಹಾಸದಲ್ಲಿ ಅಪರೂಪ ವೆನಿಸುವಂತಹ ಘಟನೆಯೊಂದು ಘಟಿಸಿಬಿಟ್ಟಿತು. ಅದು ವಿರಕ್ತ ಸ್ವಾಮೀಜಿಯೊಬ್ಬರು ಉತ್ತರ ಪ್ರದೇಶದ ಮುಖ್ಯಮಂತ್ರಿ ಗಾದಿಗೆ ಏರಿದ್ದು. ಹೇಳಿ ಕೇಳಿ ಉತ್ತರ ಪ್ರದೇಶ ಭಾರತದೊಳಗೆ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯ, ಅದರ ಜನಸಂಖ್ಯೆ ಬರೋಬ್ಬರಿ ೨೨ ಕೋಟಿ. ಜಗತ್ತಿನ ದೊಡ್ಡದೇಶಗಳೇ ಅಷ್ಟು ಜನಸಂಖ್ಯೆ ಹೊಂದಿಲ್ಲ.  ರಷ್ಯಾ, ಕೆನಡಾ ದೇಶಗಳೇ ಜನಸಂಖ್ಯೆಯಲ್ಲಿ ಉತ್ತರ ಪ್ರದೇಶಕ್ಕೂ ಸ್ವಲ್ಪ ಹಿಂದೆ ನಿಲ್ಲುತ್ತವೆ ಎಂದರೆ ಉತ್ತರ ಪ್ರದೇಶ ಭಾರತ ದೇಶದ ರಾಜಕೀಯದಲ್ಲೂ ತನ್ನದೇ  ಛಾಪು ಮೂಡಿಸಿಕೊಂಡಿರುವುದು ಅಷ್ಟೇ ಸ್ಪಷ್ಟ. ಭಾರತದ ವೈದಿಕ ಕಾಲದಿಂದಲೂ ವರ್ಣಾಶ್ರಮದ ಪ್ರಕಾರ ಕ್ಷತ್ರೀಯರು ಆಳ್ವಿಕೆ ಮಾಡುವಲ್ಲಿ ನಿಸ್ಸೀಮರಾಗಿದ್ದರೂ ಕಾನೂನು ಕಟ್ಟಳೆಗಳ ನಿರ್ಮಾಣ ಕಾರ್ಯದಲ್ಲಿ ಬ್ರಾಹ್ಮಣರ, ಸಾಧು ಸನ್ಯಾಸಿಗಳ , ಜ್ಞಾನಿಗಳ ಸಲಹೆ ಪಡೆಯುತ್ತಿದ್ದು ನಿಜ. ಆದರೆ ಆಡಳಿತ ವಿಚಾರದಲ್ಲಿ ಹಸ್ತಕ್ಷೇಪ ಮಾಡುವ ಆಧಿಕಾರ ಅಲ್ಲಿಯೂ ಮೇಲ್ವರ್ಗಕ್ಕೆ ಇರಲಿಲ್ಲವೆನ್ನುವುದು ಅಷ್ಟೇ ನಿಜವಾದ ಸಂಗತಿ.

ಭಾರತ ತನ್ನ ಗತ ವೈಭವ ಕಾಲದಿಂದ ಕಂಡಂತೆಯೂ ಎಲ್ಲಿಯೂ ಸಾಧುಗಳಿಗೆ, ಸ್ವಾಮೀಜಿಗಳಿಗೆ ಅಧಿಕಾರ ಗದ್ದುಗೆ ದೊರಕಿರಲಿಲ್ಲ. ಆದ ಕಾರಣ ಈಗ ಉತ್ತರ ಪ್ರದೇಶದಲ್ಲಿ ನಡೆದಿರುವ ವಿದ್ಯಮಾನ ಸತ್ಯ ಯುಗದಲ್ಲಿ ವಿಶ್ವಾಮಿತ್ರ ಮಹರ್ಷಿಗಳ ನಂತರ ಇದೆ ಮೊದಲ ಬಾರಿಗೆ ಕಲಿಯುಗದಲ್ಲಿ ನಡೆಯಿತೇನೋ ಎನಿಸುತ್ತಿದೆ. ಆಗ ಹರಿಶ್ಚಂದ್ರನಿಂದ ಪರೀಕ್ಷಾರ್ಥವಾಗಿ ವಿಶ್ವಾಮಿತ್ರರು ಸಿಂಹಾಸನ ಪಡೆದುಕೊಂಡು ರಾಜ್ಯ ಭಾರ ನಡೆಸಿದ್ದರು. ಇದೀಗ ಜನರೇ ಆರಿಸಿ ಗೆಲ್ಲಿಸಿದ ಪಕ್ಷವೊಂದು ಸ್ವಾಮೀಜಿಯೊಬ್ಬರನ್ನು ಮುಖ್ಯಮಂತ್ರಿ ಪಟ್ಟಕ್ಕೆ ಕೂರಿಸಿದೆ. ಸಮಾಜದ ಆಗು ಹೋಗುಗಳೇನು, ಸಮಾಜಕ್ಕೆ ಬೇಕಿರುವುದೇನು? ಎನ್ನುವುದು ಮಠ ಮಾನ್ಯಗಳಿಗೆ ಸಾಧು ಸನ್ಯಾಸಿಗಳಿಗೆ ಚೆನ್ನಾಗಿ ಅರ್ಥವಾಗಿರುತ್ತದೆ. ಅದಕ್ಕೆ ಜ್ವಲಂತ ಉದಾಹರಣೆಯೆಂದರೆ ಸ್ವಾಮಿ ವಿವೇಕಾನಂದರು. ಅವರು ಹೇಳುತ್ತಿದ್ದರು ಅಭಿವೃದ್ಧಿ ಹೊಂದಿದ ರಾಷ್ಟ್ರವೆಂದರೆ ಅರ್ಥವೇನು?  ದೇಶವು ಅತ್ಯುನ್ನತ ಕಟ್ಟಡಗಳನ್ನು ಹೊಂದಿರುವುದೇ? ಅಥವಾ ದೇಶದ ಜನರ ಬದುಕಿನ ಶೈಲಿ ಐಷಾರಾಮಿಯಾಗಿರುವುದೇ? ದೇಶದೊಳಗೆ ಆರ್ಥಿಕ ಸ್ಥಿತಿ ಉನ್ನತ ಮಟ್ಟದಲ್ಲಿದ್ದು ಮನೆ ಮನೆಗಳಲ್ಲೂ ಹಣದ ಹೊಳೆ ಹರಿಯುವುದೇ?...ಇಲ್ಲ ಇಲ್ಲ ಇದ್ಯಾವುದು ಅಲ್ಲ. ದೇಶದ ಪ್ರತೀ ವ್ಯಕ್ತಿಯು ಸದೃಢ ಮನುಷ್ಯನಾಗಬೇಕು. ಅದರಲ್ಲೂ ಬಹು ಮುಖ್ಯವಾಗಿ ನಾಳಿನ ಪ್ರಜೆಗಳೆನಿಸಿಕೊಳ್ಳುವ ಯುವ ಜನತೆ ಸದೃಢವಾಗಿ ನಿಲ್ಲಬೇಕು. ಹಾಗಾದರೆ ಸದೃಢತೆಗೆ ಅರ್ಥವೇನು? ....ಮೇಲಿನ ಸಾಲುಗಳನ್ನು ಓದಿ ನಿಮ್ಮಲ್ಲಿ ಸದೃಢತೆ ಎಂದರೇನು ಎನ್ನುವ ಪ್ರಶ್ನೆ ಮೂಡಿದೆ ಎಂದಾದರೆ ನೀವು ವಿವೇಕಾನಂದರನ್ನು ಓದಿಲ್ಲವೆಂದೇ ಅರ್ಥ. ಒಮ್ಮೆ ಓದಿ ನೋಡಿ. ಅವರೊಬ್ಬ ಬರಿಯ ಹಿಂದೂ ಧರ್ಮ ಬೋಧಕರಲ್ಲ. ಅವರು ಭಾರತ ಧರ್ಮ ಭೋದಕ. ದೇಶದ ಗತ, ಇತಿಹಾಸಗಳ ಭದ್ರ ಬುನಾದಿಯೊಂದಿಗೆ ದೇಶದ ಪ್ರಚಲಿತ ಸಂಕಷ್ಟಗಳೇನು ಹಾಗು ಭವಿಷ್ಯದಲ್ಲಿ ಅವಕ್ಕೆ ಉತ್ತರಗಳೇನು, ಆ ಉತ್ತರಗಳಿಗಾಗಿ ಭಾರತದ ಜನಮಾನಸ ತಯಾರಾಗಿ ನಿಲ್ಲುವುದು ಹೇಗೆ?ಎನ್ನುವಂತಹ ಸ್ಪಷ್ಟ ಕಲ್ಪನೆಗಳನ್ನು ಮನಸ್ಸಿನಲ್ಲಿ ತುಂಬಿಕೊಂಡಿದ್ದ ವ್ಯಕ್ತಿ ಅವರು.

ಬಹಳಷ್ಟು ಜನ ಅವರನ್ನು ಹಿಂದೂ ಧರ್ಮಕ್ಕೆ ಕಟ್ಟಿ ನೋಡುವುದುಂಟು. ಅದು ಸರಿಯಾದ ನಡೆಯೋ ಅಲ್ಲವೋ ಎನ್ನುವು ಜಿಜ್ಞಾಸೆಗಿಳಿಯುವ ಮೊದಲು ಗಮನಿಸಬೇಕಾದ ಅಂಶ ವೆಂದರೆ ನೀವು ವಿವೇಕಾನಂದರ ಉತ್ಕೃಷ್ಟ ಉಕ್ತಿಗಳನ್ನೋ ಅಥವಾ ಅವರ ಭಾಷಣದ ಲಿಖಿತ ಸಂಗ್ರಹ ರೂಪಗಳನ್ನೋ ಅಥವಾ ಅವರೇ ಬರೆದ ಪುಸ್ತಕಗಳನ್ನೋ ಅಥವಾ ವಿವಿಧ ದೇಶಗಳ ವಸ್ತು ಸಂಗ್ರಹಾಲಯಗಳಲ್ಲಿ ಅವರೇ ಅವರ ಒಡನಾಡಿಗಳಿಗೆ ಬರೆದ ಪತ್ರಗಳನ್ನೋ ಪರಾಮರ್ಶಿಸಿ ನೋಡಿ. ಎಲ್ಲಿಯೂ ಯಾರನ್ನು ಹಿಂದೂ ಧರ್ಮಕ್ಕೆ ಬನ್ನಿ ಎಂದು ಆಹ್ವಾನಿಸಿಯೂ ಇಲ್ಲ, ಅಥವಾ ಹಿಂದೂ ಧರ್ಮಕ್ಕೆ ಬರಲೇಬೇಕೆಂಬ ಒತ್ತಾಯಪೂರ್ವಕ ಸ್ಥಿತಿಯನ್ನಂತೂ ಸೃಷ್ಟಿ ಮಾಡಿಲ್ಲವೇ ಇಲ್ಲ. ತಮ್ಮ ಅನುಯಾಯಿಗಳಿಗೂ ಅವರು ಯಾವಾಗಲೂ ಕೊಡುತ್ತಿದ್ದ ಕರೆಯೂ ಅಷ್ಟೇ 'ನೀವು ಸದೃಢರಾಗಿ......ದೇಶ ಬಲಿದಾನ ಬಯಸಿದರೆ ಅದಕ್ಕೂ ತಯಾರಾಗಿ, ದೀನರಿಗೆ ಸಹಾಯ ಮಾಡಿ, ಮೊದಲು ಮನುಷ್ಯರಾಗಿ ನಡೆದುಕೊಳ್ಳಿ.....'  ಮುಂತಾದವೆ ಹೊರತು ಧಾರ್ಮಿಕ ಭಾವನೆಯನ್ನು ಕೆರಳಿಸುವಂತಹ ಹೇಳಿಕೆಗಳನ್ನು, ಅಥವಾ ಇನ್ನಾವುದೋ ಒಂದು ಧರ್ಮದ ವಿರೋಧವಾದ ಹೇಳಿಕೆಯನ್ನು ನಾನಂತೂ ಎಲ್ಲಿಯೂ ಕಂಡಿಲ್ಲ.

ಯೋಗಿ ಆದಿತ್ಯನಾಥರು ಮುಖ್ಯಮಂತ್ರಿಯಾದಾಗಲೂ ಇದೆ ಚರ್ಚೆ ವಿವಿಧ ರಂಗಗಳಲ್ಲಿ ನಡೆಯಿತು. ಸ್ವಾಮೀಜಿಯೊಬ್ಬರು ಮುಖ್ಯಮಂತ್ರಿಯಾಗಿರುವುದರಿಂದ ಹಿಂದುತ್ವವನ್ನು ಎಲ್ಲರ ಮೇಲು ಬಲವಂತವಾಗಿ ಹೇರುವ ಘಟನೆಗಳು ಇನ್ನು ಮುಂದೆ ಉತ್ತರ ಪ್ರದೇಶದಲ್ಲಿ ನೆಡೆಯಬಹುದು ಎಂದು ಕೆಲವರು ಊಹಿಸಿಕೊಂಡು ಕೂತಿದ್ದಾರೆ. ಅವರ ಊಹೆಗೆ ಅರ್ಥವಿದೆಯೋ ಇಲ್ಲವೋ ಅವರೇ ಕಾದು ನೋಡಬೇಕು. ಆದರೆ ಇಷ್ಟಂತೂ ಕರಾರುವಕ್ಕಾಗಿ ಹೇಳಬಲ್ಲೆ ಹಿಂದೂ ಮಠಗಳು ಧರ್ಮಕ್ಕಿಂತ ಹೆಚ್ಚಾಗಿ ದೇಶ ಸೇವೆ ಮಾಡುವಲ್ಲಿ ಹೆಸರು ವಾಸಿಯಾಗಿವೆ. ನಾನು ಕಣ್ಣಾರೆ ಕಂಡು ಒಡನಾಡಿದ ಮಠಗಳ ಬಗ್ಗೆ ಹೇಳುವುದಾದರೆ ಕರ್ನಾಟಕದ ತುಮಕೂರಿನ ಸಿದ್ಧಗಂಗೆ ಧರ್ಮ ಜಾತಿಗಳನ್ನು ನೋಡದೆ ದೇಶದ ಎಲ್ಲ ಸೊಡರುಗಳಿಗೂ ಶಿಕ್ಷಣ ಪ್ರಸಾರ ಮಾಡಲು ತನ್ನ ಕೈಲಾದಷ್ಟು ಶ್ರಮಿಸಿದೆ. ಅದರ ಶ್ರಮ ಆರಂಭವಾದಾಗ ನಮ್ಮ ದೇಶಕ್ಕೆ ಸ್ವತಂತ್ರವೇ ಬಂದಿರಲಿಲ್ಲ ವೆಂದ ಮೇಲೆ ಸಂವಿಧಾನದ್ದಂತೂ ದೂರದ ಮಾತು. ದೇಶ ಚೀನಾ ಯುದ್ಧ, ಪಾಕಿಸ್ತಾನ ಯುದ್ಧ, ಭೀಕರ ಬರಗಾಲ ಕಂಡು ನಲುಗುತ್ತಿದ್ದ ೬೦ರ ದಶಕದಲ್ಲಿಯೂ ಯಾವ ಸರ್ಕಾರಗಳ ಸಹಾಯವಿಲ್ಲದೆ ಶಿಕ್ಷಣ ಪ್ರಸರಣಾ ಕಾರ್ಯವನ್ನು ಮುಂದುವರಿಸಿಯೇ ಇತ್ತು. ಆದಿಚುಂಚನಗಿರಿಯ ಮಠವೂ ಗ್ರಾಮೀಣ ಭಾಗದ ಜನರನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ಪ್ರತೀ ಗ್ರಾಮಗಳಲ್ಲೂ ಶಾಲೆ ಕಾಲೇಜುಗಳನ್ನು ತೆರೆದು ಗ್ರಾಮೀಣ ಜನತೆಯನ್ನು ಸಬಲರನ್ನಾಗಿ ಮಾಡಿ ಇಂದು ಆ ಗ್ರಾಮೀಣ ಪ್ರತಿಭೆಗಳು ದೇಶ ವಿದೇಶಗಳಲ್ಲಿ ತಮ್ಮ ಸೇವೆ ಸಲ್ಲಿಸುತ್ತಾ ಉತ್ತಮ ಬದುಕು ಕಟ್ಟಿಕೊಳ್ಳಲು ನೆರವಾಗಿರುವುದು ಅತ್ಯಾಶ್ಚರ್ಯವಲ್ಲದೆ ಮತ್ತೇನು ಅಲ್ಲ. ಚಿತ್ರದುರ್ಗದ ಮುರುಘಾ ಮಠ, ಮೈಸೂರಿನ ಸುತ್ತೂರು ಮಠ, ಶೃಂಗೇರಿ ಮಠ ಎಲ್ಲವೂ ತಮ್ಮ ತಮ್ಮ ಕೈಲಾದಷ್ಟು ಸಮಾಜ ಸೇವೆಯನ್ನು ದೇಶಕ್ಕೆ ನೀಡುತ್ತಾ ದೇಶವನ್ನು ಬುಡ ಮಟ್ಟದಿಂದಲೇ ಸಬಲಗೊಳಿಸುತ್ತಾ ಸಾಗಿವೆ ಎನ್ನುವಾಗ ಅದರ ಮಗ್ಗುಲಲ್ಲೇ ಜಾತಿ, ಧರ್ಮಗಳ  ಅವಾಂತರಕ್ಕೆ ನಾಂದಿಯಾಗಲಿಲ್ಲ ಎನ್ನುವುದು ಹೆಮ್ಮೆಯ ಸಂಗತಿ. ಇದೆ ಕಾರಣಕ್ಕೆ ಕರ್ನಾಟಕದಲ್ಲಿ ಒಂದು ವರ್ಷದ ಬಜೆಟ್ ನಲ್ಲಿ ಮಠ ಮಾನ್ಯಗಳಿಗೆಂದೇ ಹಣವನ್ನು ಸರ್ಕಾರದಿಂದ ದೇಣಿಗೆಯಾಗಿ ನೀಡಲಾಯಿತು. ಆ ಸಂಧರ್ಭದಲ್ಲಿ ಆದಿಚುಂಚನಗಿರಿ ಮಠಾಧ್ಯಕ್ಷರಾಗಿದ್ದ ಶ್ರೀ ಬಾಲಗಂಗಾಧರ ನಾಥ ಶ್ರೀಗಳು ಹೇಳಿದರು "ಮಠ ಮಾನ್ಯಗಳು ಪಡೆದುಕೊಂಡ ಹಣವನ್ನು ಏನು ಮಾಡುತ್ತವೆ ಎಂಬುದರ ಅರಿವಿದ್ದವರು ಮಾತ್ರ ತುಂಬು ಹೃದಯದಿಂದ ಮಠ ಮಾನ್ಯಗಳಿಗೆ ಸಹಾಯ ಮಾಡಬಲ್ಲರು" ಎಂದು. ಆ ಮಾತುಗಳಲ್ಲಿ ಮಠಗಳ ಸೇವೆ ಸಮಾಜಕ್ಕೆ ಯಾವ ರೀತಿ ದಕ್ಕುತ್ತದೆ ಎನ್ನುವುದನ್ನು ಸಮಾಜಕ್ಕೆ ಅರ್ಥ ಮಾಡಿಸುವ ಕಾಳಜಿ ತುಂಬಿಕೊಂಡಿದೆ.

ಪ್ರತಿಯೊಂದು ನಡೆ ನುಡಿಯನ್ನು ಧರ್ಮವೊಂದಕ್ಕೆ ಹೋಲಿಸಿ ನೋಡುವರೇ ಹೆಚ್ಚಾಗಿ ತುಂಬಿರುವ ಈಗಿನ ಕಾಲದಲ್ಲಿ ಸ್ವಾಮೀಜಿಯೊಬ್ಬರಿಗೂ ಅಧಿಕಾರ ಕೊಟ್ಟು ನೋಡೋಣ. ನಮ್ಮ ಇತಿಹಾಸದಲ್ಲೆಂದೂ ಘಟಿಸದ ಈವಿದ್ಯಮಾನಕ್ಕೆ ನಾಂದಿ ಹಾಡಿದ ಪ್ರಮುಖರೆಲ್ಲರಿಗೂ ಇತಿಹಾಸವೇ ಅಭಾರಿ.

ಶುಕ್ರವಾರ, ಏಪ್ರಿಲ್ 7, 2017

ನೀವು ನೀವು ಕಂಡಂತೆ

ಆರ್ತರ ಗುಂಪಿಗೆ ದೇವರು
ನಾಯಕನಾದರೆ
ಬಲಗೊಳ್ಳುವರ್ಯಾರು?
ಆರ್ತತೆ ಅರ್ಥ ಹೀನವಾಗಿ
ಬಲಗಾರರ ಬಣವಿರದ
ಜಗ ನಡೆಯುವುದೆಂತು?

ಬಲಗಾರನೊಬ್ಬನ ದೃಷ್ಟಿ
ಹೊಸದನ್ನೇನೋ ಸೃಷ್ಟಿಸುವುದು
ಅವನ ಕಟಾಕ್ಷದಲಿ
ಕಲ್ಲು ಶಿಲೆಯಾಗುವುದು
ಮಾತು ಕಾವ್ಯವಾಗುವುದು
ಅನುಭವಗಳೇ ಉಕ್ತಿಗಳಾಗುವವು.

ಬದುಕಿದವರು ಕಂಡಂತೆ
ಬಾಳೊಂದು ಸುಖ ದುಃಖಗಳ ಕಂತೆ
ಬಲದಿಂದ ಕಂಡವರಿಗದು ರಣೋತ್ಸಾಹ
ಗುಣದಿಂದ ಕಂಡವರಿಗದು ಭಾವ ಸಾಗರ
ನೊಂದು ನೋಡಿದವರಿಗೆ ಮುಗಿಯದ ಕಥೆ
ಸದಾ ಕೊರಗುವರಿಗೆ ಇನ್ನಿಲ್ಲದ ವ್ಯಥೆ

ನೀವು ನೀವು ಕಂಡಂತೆ ಬಾಳು
ನೀವು ನೀವು ಬದುಕಿದಂತೆ ಬದುಕು
ನಾವು ಬಯಸಿದ ಮಟ್ಟಿಗೆ ಬಾಳಿಗೆ
ಅರ್ಥವೇನು, ಸಾರವೇನು, ಗುರಿಯೇನು
ಯೋಚಿಸುವ ಕಾಲವಿದಲ್ಲ
ಅದಕ್ಕೆ ಕಾಲ ಮೀಸಲಿಲ್ಲವೂ ಇಲ್ಲ.

ಕೊನೆಯ ಬರಹ

ದಶಕವೊಂದು - ಅರಿವು ನೂರೊಂದು

ಬರೋಬ್ಬರಿ ಒಂದು ದಶಕ ಮುಗಿದುಹೋಯಿತು, ನಾನು ಈ ಬ್ಲಾಗಿನ ಬರಹಕ್ಕೆ ಮೊದಲುಗೊಂಡು. ಈ ಬರವಣಿಗೆಯ ಹುಚ್ಚು ನನಗೆ ಎಲ್ಲಿ ಯಾವಾಗ ಆರಂಭವಾಯಿತೋ? ಕರಾರುವಕ್ಕಾಗಿ ನನಗೂ ಗೊತ್ತಿಲ್...