ಮೊನ್ನೆ ದೇಶಕ್ಕೆ ಬಲಿದಾನಗೈದ ಸೈನಿಕರ ಕುರಿತು ಚಕ್ರವರ್ತಿ ಸೂಲಿಬೆಲೆ ಮಾಡುತ್ತಿದ್ದ ಭಾಷಣದ ವಿಡಿಯೋ ಒಂದನ್ನು ಯೂಟ್ಯೂಬ್ ನಲ್ಲಿ ನೋಡುತ್ತಿದ್ದೆ. ಅದು ಬರೀ ಮಾತಲ್ಲ, ಭಾಷಣವಂತೂ ಅಲ್ಲವೇ ಅಲ್ಲ. ದೇಶ ಭಕ್ತಿಯ ಸುಧಾಮೃತ, ಅವರ ಮಾತು ಮುಂದುವರಿದಂತೆಲ್ಲ ನಾನು ಆ ಅಮೃತ ಸುಧೆಯಲ್ಲಿ ಮಿಂದೇಳುತ್ತಿದ್ದೆ. ದೇಶವೊಂದು ತಾನು ಸಧೃಡವಾಗಿ ನಿಂತು ಬೀಗಬೇಕಾದರೆ ನೂರಾರು ಜನರ ನೆತ್ತರ ಹನಿ ಬಸಿಯಬೇಕು, ಲಕ್ಷಾಂತರ ಜನರ ಬೆವರ ಹನಿ ಭುವಿ ಮುಟ್ಟಬೇಕು, ಕೋಟ್ಯಂತರ ಜನರ ಹಾರೈಕೆ ಫಲಿಸಬೇಕು ಆ ನಿಟ್ಟಿನಲ್ಲಿ ದೇಶದ ಸರ್ವ ಕ್ಷೇತ್ರಗಳೂ ಕಾರ್ಯ ಪ್ರವೃತ್ತವೇ ಆದರೂ ಅದರಲ್ಲಿ ಎಲ್ಲರಿಗಿಂತ ಯೋಧರ ಪಾತ್ರ ಬಹು ಮುಖ್ಯವಾದುದು. ದೇಶದೊಳಗಿನ ಪರಿಸ್ಥಿತಿಗಳನ್ನು ನಿಭಾಯಿಸಲು ಸಂವಿಧಾನವೆಂಬ ಚೌಕಟ್ಟು ಇದ್ದು ಅದರೊಳಗೆ ದೈನಂದಿನ ಕಾರ್ಯ ಕಲಾಪಗಳಾದರೆ ಆಗಿ ಹೋಯಿತು. ಆದರೆ ಗಡಿಯಲ್ಲಿ ನೆರೆದೇಶಗಳು ತೆಗೆಯುವ ತಗಾದೆಗೆ ಯಾವ ಚೌಕಟ್ಟು?, ಎಲ್ಲಿಯ ಮಿತಿ?, ಯಾರು ದಿಕ್ಕು?.ಅವುಗಳೆಲ್ಲದರ ಪರಿಣಾಮಗಳ ಗುಂಡುಗಳಿಗೆ ಎದೆಯೊಡ್ಡುವರು ಮಾತ್ರ ನಮ್ಮ ಸೈನಿಕರು.
1999 ಭಾರತದ ಇತಿಹಾಸದಲ್ಲಿ ಎಂದೂ ಮರೆಯದ ಘಟನೆ ಘಟಿಸಿದ ವರ್ಷ. ಈ ದೇಶದ ಪ್ರಧಾನಿಯಾಗಿದ್ದ ವಾಜಪೇಯಿ ಶಾಂತಿ ಸೌಹಾರ್ದತೆಯನ್ನೇ ಮುಂದು ಮಾಡಿಕೊಂಡು ಭಾರತ-ಪಾಕಿಸ್ತಾನ ಬಸ್ ಸೇವೆಯನ್ನು 1999ರ ಫೆಬ್ರವರಿಯಲ್ಲಿ ಆರಂಭಿಸಿದ್ದರು. ಇದು ಉಭಯ ದೇಶಗಳಿಗೂ ಆನಂದದಾಯಕವಾಗಿರುವುದೇ ಆಗಿದ್ದು ಇದನ್ನು ಕಂಡು ಇನ್ನೆಷ್ಟು ದೇಶಗಳು ಹೊಟ್ಟೆ ಉರಿದುಕೊಂಡಿದ್ದವೋ ಗೊತ್ತಿಲ್ಲ. ಆದರೆ ಪಾಕಿಸ್ತಾನ-ಭಾರತಗಳು ಒಟ್ಟುಗೂಡಿದರೆ ದಕ್ಷಿಣ ಏಷ್ಯಾದ ದೇಶಗಳು ನಮ್ಮ ಬಳಿ ಯಾವುದಕ್ಕೂ ಕೈ ಒಡ್ಡುವ ಪ್ರಸಂಗ ಬರುವುದಿಲ್ಲವೆನ್ನುವುದು ಕೆಲವು ದೇಶಗಳಿಗೆ ಒಳಗೊಳಗೇ ಚುಚ್ಚಲಾರಂಭಿಸಿತ್ತು. ಯಾರ ಹೇಳಿಕೆಯ ಮಾತೋ? ಇಲ್ಲ ಪಾಕಿಸ್ತಾನ ತನ್ನ ಭವಿಷ್ಯದ ಬಗ್ಗೆ ತಪ್ಪುಗ್ರಹಿಕೆ ಮಾಡಿಕೊಂಡು ಯುದ್ಧಕ್ಕೆ ಸನ್ನದ್ಧವಾಯಿತೋ? ದೇವರೇ ಬಲ್ಲ.
ಸ್ವಾತಂತ್ರ್ಯ ದಕ್ಕಿದಂದಿನಿಂದ ಕಾಶ್ಮೀರ ಕಣಿವೆಗಳತ್ತಲೇ ಚಿತ್ತ ನೆಟ್ಟಿರುವ ಪಾಕಿಸ್ತಾನಕ್ಕೆ ಯುದ್ಧ ಮಾಡಲು ಅದ್ಯಾವ ಸುಸಮಯ ಅನ್ನುವ ಭಾವನೆ ಬಂದಿತೋ ಅಥವಾ ಸರಿಯಾಗಿ ಅಲ್ಲಿಗೆ ಒಂದು ವರ್ಷದ ಹಿಂದೆ ತಾನೇ ಸಿದ್ಧಪಡಿಸಿದೆ ಎಂದು ಹೇಳಿಕೊಂಡಿದ್ದ ಅಣು ಬಾಂಬ್ ಅನ್ನು ಪರೀಕ್ಷಾರ್ಥ ಪ್ರಯೋಗ ನಡೆಸಿ ಯಶಸ್ವಿಯಾಗಿದ್ದ ಹೆಮ್ಮೆಯಲ್ಲಿ ಬೀಗುತ್ತಿದ್ದ ಕಾರಣವಿದ್ದರೂ ಇರಬಹುದು. ಭಾರತದೊಳಗೆ ಬಿರು ಬೇಸಿಗೆಯಿತ್ತು, ಅತ್ತ ಪಾಕಿಸ್ತಾನ ಅದೇ ವರ್ಷದ ಮೇ ಆರಂಭದಲ್ಲಿ ತನ್ನ ಸೈನಿಕರನ್ನು ಭಾರತದ ಗಡಿ ನಿಯಂತ್ರಣ ರೇಖೆಯೊಳಗೆ ನುಗ್ಗಿಸಿತ್ತು. ಕುತಂತ್ರಕ್ಕೆ ಪ್ರಖ್ಯಾತವಾಗಿರುವ ಪಾಕಿಸ್ತಾನ ಭಾರತ ದೇಶದೊಳಗೆ ವಾಮ ಮಾರ್ಗದ ಮೂಲಕ ಪ್ರಾಂತವೊಂದರ ಮೇಲೆ ಹಿಡಿತ ಸಾಧಿಸಲು ಶತಾಯ ಗತಾಯ ಪ್ರಯತ್ನ ನಡೆಸಿತ್ತು. ಯಥಾ ಪ್ರಕಾರ ತನ್ನ ಕಳ್ಳ ಮಾರ್ಗದ ಮೂಲಕವೇ ತನ್ನ ಸೈನಿಕರನ್ನು ನುಗ್ಗಿಸುತ್ತಿತ್ತು. ಅಪ್ಪಿ ತಪ್ಪಿ ಪಾಕ್ ಸೈನಿಕರು ಭಾರತದ ಗಡಿಯೊಳಗೆ ಗುಂಡಿಗೆ ಬಲಿಯಾದರೆ ಅವರು ನಮ್ಮ ಸೈನಿಕರಲ್ಲ, ನಮ್ಮ ಸೈನಿಕರಂತೆ ವೇಷ ಮರೆಸಿಕೊಂಡಿದ್ದ ಭಯೋತ್ಪಾದಕರು ಎನ್ನುವುದು ಇಂತಹವೆಲ್ಲ ಸ್ವಾತಂತ್ರ್ಯಾನಂತರ ಆ ರಾಷ್ಟ್ರಕ್ಕೆ ಮಾಮೂಲಿ ದಿನ ನಿತ್ಯದ ಕಾರ್ಯವಾಗಿದ್ದು ಇದೀಗ ಯಾರಿಗೂ ತಿಳಿಯದ ವಿಚಾರವಲ್ಲ.
ಅದು ಸರಿಯಾಗಿ 1999ರ ಮೇ 2ನೆ ತಾರೀಖು ಕಾಶ್ಮೀರ ಪ್ರಾಂತದ ಕಾರ್ಗಿಲ್ ಜಿಲ್ಲೆಯ ಗಾರ್ಕೌನ್ ಗ್ರಾಮದ ದನ ಕಾಯುವ ಹುಡುಗರು ಪಾಕಿಸ್ತಾನದ ಸೈನ್ಯ ಮೆಲ್ಲಗೆ ಕದನ ವಿರಾಮ ಉಲ್ಲಂಘಿಸಿ ಗಡಿಯೊಳಗೆ ವಿಪರೀತ ಚಟುವಟಿಕೆಗಳನ್ನು ಮಾಡುತ್ತಿದ್ದನ್ನು ಸದ್ದಿಲ್ಲದೇ ಸರ್ಕಾರದ ಕಿವಿಗೆ ತಲುಪಿಸಿದ್ದರು. ಕೂಡಲೇ ಕಾರ್ಯ ಪ್ರವೃತ್ತವಾದ ಕೇಂದ್ರ ಸರ್ಕಾರ ಇದರ ಮೇಲ್ವಿಚಾರಣೆಗೆ ಐದು ಜನ ಕಮಾಂಡೋ ಗಳನ್ನು ಕಾರ್ಗಿಲ್ ಗಡಿಗೆ ಕಳುಹಿಸಿಕೊಟ್ಟಿತು. ಪಾಕಿಸ್ತಾನ ತನ್ನನ್ನು ತಾನು ಪಾಪಿಸ್ತಾನವೆಂದು ತೋರ್ಪಡಿಸಿಕೊಳ್ಳಲೋ ಎಂಬಂತೆ ಆ ಐವರನ್ನು ಚಿತ್ರ ಹಿಂಸೆ ನೀಡಿ ಕೊಂದಿತು. ಅದೇ ಸಮಯಕ್ಕೆ ಸರಿಯಾಗಿ ಪಾಕಿಸ್ತಾನ ಸೈನ್ಯದ ಮುಖ್ಯಸ್ಥರ ಹೇಳಿಕೆಗಳು, ಪಾಕಿಸ್ತಾನದ ಅಧ್ಯಕ್ಷರ ಹೇಳಿಕೆಗಳು ತಾವು ಯುದ್ಧ ಬಯಸಿದ್ದೇವೆ ಎನ್ನುವುದನ್ನು ಪರೋಕ್ಷವಾಗಿ ಭಾರತಕ್ಕೆ ರವಾನೆ ಮಾಡಿದ್ದರಿಂದ ಯುದ್ಧ ಆರಂಭವಾಗುವ ಎಲ್ಲ ಲಕ್ಷಣಗಳೂ ಗೋಚರವಾದವು.
ದ್ವೀತೀಯ ಮಹಾಯುದ್ಧದ ನಂತರ ಭೀಕರವೆನಿಸುವ ಯುದ್ಧಗಳು ಪ್ರಪಂಚದಲ್ಲಿ ನಡೆದವಾದರೂ ಅಣು ಶಕ್ತಿಪೂರಿತವಾದ ಎರಡು ರಾಷ್ಟ್ರಗಳು ಎದುರಾಗಿ ಯುದ್ಧ ಮಾಡಿದ್ದು ಕಾರ್ಗಿಲ್ ಯುದ್ಧದಲ್ಲಿಯೇ. ಬೆಚ್ಚಿದ ಜಗತ್ತಿನ ಇತರ ರಾಷ್ಟ್ರಗಳು ಭಾರತ /ಪಾಕ್ ನಲ್ಲಿರುವ ತಮ್ಮ ನಾಗರೀಕರಿಗೆ ತುರ್ತಾಗಿ ಆ ದೇಶಗಳನ್ನು ಬಿಟ್ಟು ಹೊರಟುಬಿಡಬೇಕೆಂದು ಸುಗ್ರೀವಾಜ್ಞೆ ಹೊರಡಿಸಿಬಿಟ್ಟವು. ಆ ನಾಗರೀಕರು ಹಾಗೆ ನಡೆದುಕೊಂಡರೂ ಕೂಡ. ಇರಲಿ ಅವೆಲ್ಲ ಒತ್ತಟ್ಟಿಗಿದ್ದರೂ ದೇಶದೊಳಗಿನ ಹಲವಾರು ವಿಷಯಗಳು ದಿಕ್ಕು ತಪ್ಪಿದ್ದಂತೂ ನಿಜ. ಕೇಂದ್ರದಲ್ಲಿ ವಾಜಪೇಯಿಯವರ ಮೇಲೆ ತುರ್ತು ಪರಿಸ್ಥಿತಿ ಹೇರಲು ಇನ್ನಿಲ್ಲದ ಒತ್ತಡ ತರಲು ಪ್ರಯತ್ನ ಮಾಡಿ ಸೋತ ಕೆಲವರು ದೇಶದ ಮೇಲೆ ಯುದ್ಧವಾಗುತ್ತಿದ್ದರು ತಮ್ಮದೊಂದಿಷ್ಟು ರಾಜಕೀಯ ಬೆಳೆಯನ್ನು ಅದೇ ಉರಿಯಲ್ಲಿ ಬೇಯಿಸಿಕೊಂಡು ಬಿಡಲು ತವಕಿಸುತ್ತಾ ಕೂತಿದ್ದರು.
1974-75ರ ಸಮಯದಲ್ಲಿ ಆಗಿನ ಪ್ರಧಾನಿ ಇಂದಿರಾಗಾಂಧಿ ವಿಧಿಸಿದ್ದ ತುರ್ತು ಪರಿಸ್ಥಿತಿಗೆ ವಿರೋಧವೊಡ್ಡಿದವರಲ್ಲಿ ಪ್ರಮುಖರು ವಾಜಪೇಯಿ ಆದ ಕಾರಣ 99ರ ಕಾರ್ಗಿಲ್ ಯುದ್ಧ ಘೋಷಣೆಯಾದಾಗ ಯುದ್ಧ ಘೋಷಣೆಯೊಂದಿಗೆ ತುರ್ತು ಪರಿಸ್ಥಿತಿ ಘೋಷಿಸದೆ ಪಾಕಿಸ್ತಾನದ ಪೊಳ್ಳು ಬೆದರಿಕೆಗೆ ದೇಶದ ಕಾನೂನು ಸುವ್ಯವಸ್ಥೆಗೆ ಕೊಂಚವೂ ಕುಂದು ಉಂಟಾಗದಂತೆ ದೇಶ ಕಾಯುವುದರಲ್ಲಿ ಚಾಣಾಕ್ಷತನ ಮೆರೆದರು. ಸಾರ್ವಜನಿಕ ರಂಗದಲ್ಲಿಯೂ ಇದಕ್ಕೆ ಪೂರಕ ವಾತಾವರಣ ನಿರ್ಮಾಣವಾಯಿತು. ಜನ ತಾವೇ ಮುಂದೆ ನಿಂತು ಕಾರ್ಗಿಲ್ ಯುದ್ಧಕ್ಕೆ ದೇಣಿಗೆ ಸಂಗ್ರಹ ಮಾಡಿ ಕೊಟ್ಟರು. ಅದರಲ್ಲೂ ಹೇಳಬೇಕೆನಿಸುವ ಪ್ರಮುಖ ಸಂಸ್ಥೆ ಆರ್ ಎಸ್ ಎಸ್.
ನಾವೆಲ್ಲಾ ಆಗ ಸುಮಾರು ಮೂರನೇ ಕ್ಲಾಸು ಓದುತ್ತಿದ್ದ ಹುಡುಗರು. ಆಗಷ್ಟೇ ಶಾಲೆ ಶುರುವಾಗಿತ್ತು. ನಾನು ಅಧೀಕೃತವಾಗಿ ಆರ್ ಎಸ್ ಎಸ್ ಸೇರಿಲ್ಲವಾದರೂ ಪ್ರತೀ ದಿನ ಸಾಯಂಕಾಲ ನಡೆಯುತ್ತಿದ್ದ ಶಾಖೆಯಲ್ಲಿ ಹೇಳುವ ಕಥೆಗೆ ಆಸೆ ಪಟ್ಟು ಅಲ್ಲಿಗೆ ಹೋಗಿಬಿಡುತ್ತಿದ್ದೆ.ದೇಶಕ್ಕೆ ಬಲಿದಾನಗೈದವರ ಕಥೆ, ಸ್ವಾತಂತ್ರ್ಯ ಹೋರಾಟಗಾರರ ಕಥೆ, ಸ್ವಾತಂತ್ರ್ಯಕ್ಕಾಗಿ ದೇಶದಲ್ಲಿ ನಡೆದ ಆಂದೋಲನಗಳ ಸಂಕ್ಷಿಪ್ತ ನೋಟವೇ ಮೊದಲಾಗಿ ಮತ್ತಿತರ ರಾಷ್ಟ್ರೀಯ ಐತಿಹಾಸಿಕ ವಿಚಾರಗಳನ್ನು ಸವಿಸ್ತಾರವಾಗಿ ಅಲ್ಲಿ ಬಿಚ್ಚಿಡುತ್ತಿದ್ದ ಕಾರಣ ಅಲ್ಲಿಗೆ ಹೋಗುವುದು ಒಂದು ಚಟವಾಯಿತು. ಇಂತಿಪ್ಪ 1999ರ ಒಂದು ದಿನ ಅಂದಿನ ಶಾಖೆಯಾನಂತರ ಅಲ್ಲಿನ ಸಂಘಟಕರು ಸೇರಿದ್ದ ಹುಡುಗರನ್ನೆಲ್ಲ ಕರೆದು ಕಥೆ ಹೇಳಲು ನಿಂತರು. ಇಂದಿನ ಕಥೆ ಏನಿರಬಹುದು ಅನ್ನುವ ಧಾವಂತದಲ್ಲಿ ನಮ್ಮ ಕಿವಿಯಾಳಿಗಳು ಅತ್ತಲೇ ಹೊರಳಿದಾಗ ಅಲ್ಲಿ ಕೇಳಿಸಿದ್ದು 'ಭಾರತದ ಮೇಲೆ ಯುದ್ಧ ಘೋಷಣೆಯಾಗಿದೆ' ಎನ್ನುವ ವಾಕ್ಯ!!. ಸರಿ ಮುಂದೇನು? ಅನ್ನುವ ಪ್ರಶ್ನೆ ನಮ್ಮೊಳಗೇ ಹುಟ್ಟುವ ಮೊದಲೇ ಪ್ರಧಾನಿ ವಾಜಪೇಯಿ ತುರ್ತುಪರಿಸ್ಥಿತಿ ಘೋಷಿಸಿಲ್ಲ, ಯುದ್ಧಕ್ಕೆ ಬೇಕಾದ ನಿಧಿಗೆ ದೇಶದ ಸಮಸ್ತರೂ ತಮ್ಮ ಕೈಲಾದ ಸಹಾಯ ಮಾಡಬೇಕು ಎನ್ನುವುದನ್ನು ಕೇಳಿ ಮುಂದಿನ ನಡೆ ನನ್ನ ಗ್ರಹಿಕೆ ಅಳತೆಯಿದ್ದಷ್ಟು ಗೋಚರವಾಯಿತಾದರೂ ನಾವೇ ನಮ್ಮ ಮನೆಗಳಿಗೆ ಬಂದು ಮನೆಯ ಮೂಲೆಯಲ್ಲಿದ್ದ ಹಳೆ ಡಬ್ಬಗಳನ್ನು ಮತ್ತಿತರ ಬಳಕೆಯಾಗದ ವಸ್ತುಗಳನ್ನು ಸೇರಿಸಿ ಹುಂಡಿಯಂತಹ ಡಬ್ಬಗಳನ್ನು ತಯಾರು ಮಾಡಿಕೊಂಡು ಮೂರು ಮೂರು ಜನ ಗುಂಪಿನಂತೆ ಆರ್ ಎಸ್ ಎಸ್ ವತಿಯಿಂದ ಯುದ್ಧಕ್ಕಾಗಿ ದೇಣಿಗೆ ಸಂಗ್ರಹ ಮಾಡಲು ನಿಂತೆವು.
ಅಂದಿನ ನಮ್ಮ ಶಾಖೆಯ ಸಂಘಟಕರು ಹೇಳಿದ ಮಾತುಗಳು ನಾನು ಚಕ್ರವರ್ತಿ ಸೂಲಿಬೆಲೆಯವರ ಮಾತುಗಳನ್ನು ಕೇಳಿದಾಗಲೂ ನನ್ನಲ್ಲಿ ಮತ್ತೆ ಮತ್ತೆ ಅನುರಣಿಸುತ್ತಲೇ ಇರುತ್ತವೆ. ಮಹಾನ ದೇಶ ಭಕ್ತರಾಗಿದ್ದ ನಮ್ಮ ಶಾಖಾ ಸಂಘಟಕ ಮಂಜುನಾಥ್(ಅವರ ಬಿಡುವಿನ ಸಮಯದಲ್ಲಿ ನಮ್ಮ ತರಗತಿಗಳಿಗೆ ಬಂದು ಸಂಸ್ಕೃತವನ್ನು ಹೇಳಿಕೊಡುತ್ತಿದ್ದವರು ಅವರೇ) ಅವರು ದೇಣಿಗೆ ಸಂಗ್ರಹಕ್ಕೆ ಹೊರಡುತ್ತಿರುವ ಹುಡುಗರಿಗೆ ನಿರ್ದೇಶನ ನೀಡುವಾಗ ಹೇಳಿದರು 'ಮತ್ತೊಬ್ಬರಿಂದ ದೇಣಿಗೆ ಸಂಗ್ರಹ ಮಾಡುವ ಮೊದಲು ನಿಮ್ಮ ಕೈಲಾದಷ್ಟು ಹಣ ನೀವು ನಿಮ್ಮ ಕೈಲೇ ಹಿಡಿರುವ ಹುಂಡಿಯೊಳಗೆ ಹಾಕಿಬಿಡಿ, ಅದು ನೇರವಾಗಿ ಯುದ್ಧದ ನಿಧಿಗೆ ತಲುಪುತ್ತದೆ' ಎಂದು. ಅಂದಿಗೆ ಏನೂ ಯೋಚನೆ ಮಾಡದೆ ನನ್ನಲ್ಲಿದ್ದ 3-4 ರೂಪಾಯಿಗಳನ್ನು ಹುಂಡಿಯೊಳಗೆ ಹಾಕಿ ಮಾಗಡಿ ಪೇಟೆಯ ಗಲ್ಲಿ ಬೀದಿಗಳಲ್ಲಿ ದೇಣಿಗೆ ಸಂಗ್ರಹ ಮಾಡಿ ಹಿಂತಿರುಗಿದ್ದೆ. ಅಂದಿಗೆ ನಾನೇನು ಮಾಡಿದೆ ಎನ್ನುವ ಅರಿವು ನನಗಿರಲಿಲ್ಲ, ತಿಳಿದುಕೊಳ್ಳುವ ವಯಸ್ಸು ಅದಲ್ಲವೇನೋ ನಾನರಿಯೆ.
ಮೊನ್ನೆ ಚಕ್ರವರ್ತಿಯವರ ಭಾಷಣದ ವಿಡಿಯೋ ತುಣಿಕಿನಲ್ಲಿ ಕಾರ್ಗಿಲ್ ಯುದ್ಧದ ಸಮಯದಲ್ಲಿ ದೇಶದ ನಾಗರೀಕರ ಸಮಯ ಪ್ರಜ್ಞೆಯನ್ನು ಕೊಂಡಾಡುತ್ತಿದ್ದುದನ್ನು ಗಮನಿಸಿದೆ. ಮುಂಬೈ ನಗರದ ವೇಶ್ಯೆಯರ ಸಂಘಟನೆಯೊಂದು ನಿರ್ದಿಷ್ಟ ದಿನವೊಂದರ ವೇಶ್ಯಾವಾಟಿಕೆಯಿಂದ ಗಳಿಸಿದ ಹಣವನ್ನು ಕಾರ್ಗಿಲ್ ಯುದ್ಧಕ್ಕೆ ನೀಡಿದ್ದು, ಅದೇ ನಗರದಲ್ಲಿ ಸರ್ಕಾರಿ ಶಾಲೆಯ ಬಾಲಕಿಯೊಬ್ಬಳು ಲೋಕಲ್ ರೈಲುಗಳಲ್ಲಿ ಭಿಕ್ಷೆ ಬೇಡಿ ಸುಮಾರು ನೂರು ರೂಪಾಯಿಗಳನ್ನು ಸಂಪಾದಿಸಿ ಅವರ ತಂದೆಗೆ ಕೊಟ್ಟು ಯುದ್ಧ ನಿಧಿಗೆ ಹಣ ತಲುಪಿಸುವಂತೆ ಬೇಡಿಕೊಂಡಿದ್ದು ಇನ್ನು ಎಷ್ಟೆಷ್ಟೋ ಇಂತಹ ಉದಾಹರಣೆಗಳನ್ನು ಅವರು ತೆರೆದಿಡುತ್ತಾ ಹೋದಂತೆ ನನ್ನ ಮನಸ್ಸು ನಾನೇನು ಮಾಡಿದೆ? ಎನ್ನುವತ್ತ ಹೊರಳಿತು.ವಯಸ್ಸು ಚಿಕ್ಕದು, ಕೊಡುವ ಕೈಯಂತೂ ಇನ್ನು ಚಿಕ್ಕದು ಆದರೂ ನಾನು 3-4 ರೂಪಾಯಿ ಕೊಟ್ಟಿದ್ದೆ. ಅದರೊಳಗೆ ಸಾರ್ಥಕತೆ ಎದ್ದು ಕಾಣಿಸುತ್ತಿದೆ. ಇಂದು ಸಾವಿರಾರು ರೂಪಾಯಿಗಳನ್ನು ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಖರ್ಚು ಮಾಡಿ ಉಡಾಯಿಸಬಹುದು. ಆದರೆ ಅಂದು ನಾನು ಕೊಟ್ಟ ಮೂರು ರೂಪಾಯಿಗಳು ಇಂದು ಸಾಸಿರದಷ್ಟಾಗಿ ನನ್ನ ಕಣ್ಣಿಗೆ ಗೋಚರಿಸುತ್ತಿವೆ. ನಾನು ಎಷ್ಟು ಬಾರಿ ಎಲ್ಲೆಲ್ಲಿ ದುಡ್ಡು ಕೊಟ್ಟಿದ್ದೇನೋ ಅದೆಲ್ಲಕ್ಕಿಂತ ಹೆಚ್ಚು ಸಾರ್ಥಕತೆ ಹಾಗು ಅಪ್ಯಾಯಮಾನವಾಗಿರುವುದು ಕಾರ್ಗಿಲ್ ಯುದ್ಧಕ್ಕೆ ನಾ ಕೊಟ್ಟ ಸೂಕ್ಷಮಾತಿ ಸೂಕ್ಷ್ಮ ದೇಣಿಗೆಯಲ್ಲಿ.ನನ್ನಿಂದ ಈ ಸೂಕ್ಷ್ಮ ಸೇವೆಯಾಗಲು ಕಾರಣೀಭೂತವಾದ ಆರ್ ಎಸ್ ಎಸ್ ಗೆ ನಾನು ಎಂದೆಂದಿಗೂ ಅಭಾರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ