ವಾಟ್ಸಾಪ್ ಕಥೆ : ನೀವು ಬೇರೆಯವರಿಗೆ ಬಯಸುವುದೇ ನಿಮಗೂ ಬರುತ್ತದೆ ಎಂಬುದಕ್ಕೆ ಸಾಕ್ಷಿಯಂತಿರುವ ಕಥೆ.
ಒಂದು ಹಳ್ಳಿಯಲ್ಲಿ ರೈತನೊಬ್ಬ ವಾಸವಾಗಿದ್ದ. ಕೃಷಿಗಿಂತ ಹೈನುಗಾರಿಕೆಯೇ ಅವನಿಗೆ ಆದಾಯದ ಮೂಲ. ಆತ ಹಸುಗಳಿಂದ ಹಾಲು ಕರೆದು ಅದರಿಂದ ಬೆಣ್ಣೆ ತೆಗೆದು ಅದನ್ನು ಪಟ್ಟಣಕ್ಕೆ ಕೊಂಡೊಯ್ದು ಮಾರಿ ಬರುವ ಹಣದಲ್ಲಿ ಜೀವನ ಸಾಗಿಸುತ್ತಿದ್ದ. ಅದೇ ಪಟ್ಟಣದಲ್ಲಿ ಒಬ್ಬ ಶ್ರೀಮಂತ ದೊಡ್ಡ ಅಂಗಡಿ ಇಟ್ಟುಕೊಂಡಿದ್ದ. ಆತ ಬೆಣ್ಣೆ ಮಾರುವನ ಖಾಯಂ ಗಿರಾಕಿಯಾಗಿದ್ದ. ಬೆಣ್ಣೆ ಮಾರುವನು ಶ್ರೀಮಂತನ ಅಂಗಡಿಗೆ ಬಂದು ತಾನು ತಂದಿರುವ ಬೆಣ್ಣೆ ಕೊಟ್ಟು ಹಣದ ಬದಲು ತನ್ನ ಮನೆಗೆ ಬೇಕಾದ ದಿನಸಿ ಪದಾರ್ಥಗಳನ್ನು ಪಡೆದುಕೊಂಡು ಹೋಗುತ್ತಿದ್ದ. ಇದೇ ವಾಡಿಕೆಯಾಗಿತ್ತು. ರೈತ ತಂದ ಬೆಣ್ಣೆಯನ್ನು ಶ್ರೀಮಂತ ತೂಕ ಹಾಕುತ್ತಿರಲಿಲ್ಲ, ಹಾಗೆಯೇ ಬಾಯಿ ಮಾತಿನಲ್ಲಿ ಒಂದು ಕೆ ಜಿ ಎಂದು ಖಾತ್ರಿ ಮಾಡಿಕೊಳ್ಳುತ್ತಿದ್ದ. ಆದರೆ ಒಮ್ಮೆ ರೈತ ಬೆಣ್ಣೆ ಕೊಟ್ಟು ಹಿಂದಿರುಗಿದಾಗ ಶ್ರೀಮಂತನಿಗೆ ಆ ಬೆಣ್ಣೆಯನ್ನು ತೂಕ ಮಾಡಿ ಪರಿಶೀಲಿಸಬೇಕು ಎಂಬ ಆಸೆಯಾಯಿತು. ತಕ್ಕಡಿಯ ಮೇಲೆ ಬೆಣ್ಣೆ ಇಟ್ಟಾಗ ಅದು ತೂಗಿದ್ದು ಬರೀ 900 ಗ್ರಾಂ ಮಾತ್ರ. ಶ್ರೀಮಂತನಿಗೆ ಈಗ ಮೈಯೆಲ್ಲಾ ಉರಿದು ಹೋಯಿತು. ಹಿಂದೆ ಇದೆ ರೀತಿಯಾಗಿ ಹಲವು ಬಾರಿ ಮೋಸ ಹೋಗಿದ್ದೇನೆ ಎಂದು ತಲೆ ಕೆಡಿಸಿಕೊಂಡನು. ಮತ್ತೊಮ್ಮೆ ಆ ರೈತ ಬಂದಾಗ ಸರಿಯಾಗಿ ದಬಾಯಿಸಬೇಕು ಎಂದುಕೊಂಡನು. ಮತ್ತೆ ಮುಂದಿನ ತಿಂಗಳು ರೈತ ಹಿಂದಿರುಗಿ ಬೆಣ್ಣೆ ಕೊಡಲು ಬಂದನು. ರೈತನ ಮೇಲೆ ಕೋಪದಿಂದ ಕುದಿಯುತ್ತಿದ್ದ ಶ್ರೀಮಂತ ರೈತನ ಮೇಲೆ ಕಿರುಚಾಡಲು ಶುರು ಮಾಡುತ್ತಾನೆ. ತಾನು ಆತನಿಂದ ಬಹಳ ಬಾರಿ ಮೋಸ ಹೋಗಿರುವುದಾಗಿ ತಪರಾಕಿ ಹಾಕುತ್ತಾನೆ. ರೈತನಿಗೆ ಅಂಗಡಿಯನ್ನು ಬಿಟ್ಟು ತೊಲಗುವಂತೆ ಹಾಗು ಇನ್ನೆಂದು ಆ ಕಡೆ ತಲೆ ಹಾಕದಂತೆ ಎಚ್ಚರಿಸುತ್ತಾನೆ. ಇದೆಲ್ಲವನ್ನು ಮೌನದಿಂದಲೇ ನೋಡುತ್ತಿದ್ದ ಬಡಪಾಯಿ, ಮುಗ್ದ ರೈತ ಮೌನ ಮುರಿದು ಮಾತಾಡುತ್ತಾನೆ "ಸ್ವಾಮೀ, ನಾನು ಮನೆಯಲ್ಲಿ ಖಂಡಿತಾ ಬೆಣ್ಣೆಯನ್ನು ತೂಕ ಮಾಡಿಕೊಂಡೆ ತರುತಿದ್ದೆ. ಆದರೆ ನಾನಾದರೋ ಬಡವನು, ತೂಕ ಹಾಕಲು ನನ್ನ ಮನೆಯಲ್ಲಿ ತೂಕದ ಬಟ್ಟುಗಳಿಲ್ಲ. ತಾವು ಒಂದು ಕೆ ಜಿ ಎಂದು ತೂಗಿ ಕೊಟ್ಟಿದ್ದ ಸಕ್ಕರೆ ಪೊಟ್ಟಣದಿಂದಲೇ ಬೆಣ್ಣೆಯನ್ನು ತೂಗಿ ತರುತ್ತಿದ್ದೆ ಹಾಗಾಗಿ ಪ್ರಮಾದವಾಗಿದೆ. ಕ್ಷಮಿಸಿ " ಎಂದುಬಿಟ್ಟ.
ಈ ಕಥೆ ಸರಳ ಸುಂದರವಾಗಿದ್ದರೂ ಅದು ನಮಗೆ ತಲುಪಿಸುತ್ತಿರುವ ಪಾಠ ಬಹಳ ದೊಡ್ಡದು. ಬರೀ ವ್ಯಾವಹಾರಿಕ ಬದುಕಿಗಷ್ಟೇ ಈ ಕಥೆ ತನ್ನ ವ್ಯಾಪ್ತಿಯನ್ನು ಸೀಮಿತಗೊಳಿಸಿಕೊಳ್ಳದೆ ಜೀವನದ ಎಲ್ಲ ಮಜಲುಗಳಲ್ಲಿಯೂ ಮನುಷ್ಯ ಮನುಷ್ಯನೊಂದಿಗೆ ಬೆರೆಯುವಾಗ, ಅವನೊಬ್ಬ ಸಂಘ ಜೀವಿಯಾಗಿ ಬದುಕುವಾಗ, ಬೇರೆಯವರಿಗೇನು ಬಯಸಬೇಕು ಏನು ಬಗೆಯಬಾರದು ಎಂಬುದೊಂದು ಅರಿವು ಈ ಕಥೆಯಿಂದ ಮನುಷ್ಯನ ಮನಸ್ಸಿಗಿಳಿದು ಬದಲಾವಣೆ ತರುವಲ್ಲಿ ಮೊದಲಾಗಬಲ್ಲುದು.