ಶನಿವಾರ, ಆಗಸ್ಟ್ 27, 2016

ಮಾಯಾ ಬಜಾರ್

'ಮಹಾ ಭಾರತ ಗ್ರಂಥವು ಭಾರತದ ಮನೆ ಮನೆಯ ಕಥೆ' ಎಂಬ ನಾಣ್ಣುಡಿಯೊಂದಿದೆ.ಭಾರತದಲ್ಲಿ  ಕೂಡು ಕುಟುಂಬಗಳೇ ತುಂಬಿದ್ದ ಕಾಲದಲ್ಲಿ ಪ್ರತೀ ಮನೆಯಲ್ಲೂ ಒಬ್ಬ ಶ್ರೀಕೃಷ್ಣ, ಅರ್ಜುನ, ಭೀಮ, ದುರ್ಯೋಧನ, ಶಕುನಿ ಯರ ನಡತೆಗಳನ್ನು ಹೋಲುವ ವ್ಯಕ್ತಿಗಳು ಕಂಡುಬರುತ್ತಿದ್ದರು. ಅಂತಹ ಪ್ರತೀ ಮನೆಗಳ್ಲಲೂ ನಡೆಯುವ ಕೆಲವು ಘಟನೆಗಳು ಥೇಟ್ ಮಹಾಭಾರತದ ಕಥಾನಕಗಳಿಗೆ ಹೋಲಿಕೆಯಾಗಿಬಿಡುತ್ತಿದ್ದು ಆಕಸ್ಮಿಕವಲ್ಲ ಎನ್ನುವಾಗ ಮಹಾಭಾರತ ಕೇವಲ ಒಂದು ಗ್ರಂಥವಾಗಿ ಉಳಿಯದೆ ಜನಮಾನಸದ ಒಳಗೆ ಇಳಿದು, ಜನಜೀವನದಲ್ಲಿ ಹಾಸುಹೊಕ್ಕಾಗಿ ಹೋಗಿದ್ದು ನಮ್ಮ ದೇಶದ ಸಾಂಸ್ಕೃತಿಕ ಹಾಗು ಸಾಹಿತ್ಯಿಕ ಹೆಮ್ಮೆ ಎನ್ನಲು ಅಡ್ಡಿಯಿಲ್ಲ. ಅಂತಹ ಮಹಾಭಾರತದ ಕಥಾನಕಗಳಲ್ಲಿ 'ಮಾಯಾಬಜಾರ್' ಒಂದು ಹಾಸ್ಯ ಮಿಶ್ರಿತ, ಸುಖಾಂತ್ಯ ಭಾಗ.

ಬಲರಾಮನ ಮಗಳು ಶಶಿರೇಖಾ ಹಾಗು  ಬಲರಾಮನ ತಂಗಿಯ ಮಗ ಅಂದರೆ ಸುಭದ್ರೆಯ ಮಗ ಅಭಿಮನ್ಯುವಿಗು ಮದುವೆಯಾಗುವುದೆಂದು ಅವರ ಚಿಕ್ಕಂದಿನಲ್ಲೇ ನಿರ್ಧಾರವಾಗಿತ್ತು. ಇತ್ತ ಕಾಲದ ಹೊಡೆತಕ್ಕೆ ಸಿಕ್ಕಿ ರಾಜ್ಯ ಕೋಶಗಳನ್ನೆಲ್ಲಾಕಳೆದುಕೊಂಡು,ವನವಾಸ ಅಜ್ಞಾತವಾಸಕ್ಕೆ ಈಡಾಗುವ ಪಾಂಡವರು ಅನೇಕ ಕಷ್ಟ ನಷ್ಟಗಳನ್ನು ಎದುರಿಸುತ್ತಾ ಸುಧೀರ್ಘ ಸಂಕಷ್ಟಗಳನ್ನೂ ಕಳೆಯುತ್ತಿರುತ್ತಾರೆ. ಈ ಮಧ್ಯದಲ್ಲೇ ಸುಭದ್ರೆ ತನ್ನ ಮಗನೊಂದಿಗೆ ಬಂದು ಅಣ್ಣಂದಿರಾದ ಕೃಷ್ಣ ಬಲರಾಮರ ಜೊತೆಯಲ್ಲಿ ನೆಲೆಸುತ್ತಾಳೆ. ದಿನಗಳು ಕಳೆದಂತೆ ಬಲರಾಮನ ಹೆಂಡತಿಗೆ ಸುಭದ್ರೆಯ ಮೇಲೆ ಅಷ್ಟಕ್ಕಷ್ಟೇ ಎಂಬಂತಾಗಿರುತ್ತದೆ. ಮುಂದೆ ಸಕಾಲದಲ್ಲಿ ಶಶಿರೇಖೆಯ ಮದುವೆಯ ವಿಚಾರ ಪ್ರಸ್ತಾಪವಾದಾಗ ಬಲರಾಮನ ಹೆಂಡಂತಿ ತನ್ನ ಮಗಳನ್ನು ಪಾಂಡವರಿಗೆ ಮಾತ್ರ ಕೊಡಕೂಡದು ಎಂದು ಹಠ ಹಿಡಿಯುತ್ತಾಳೆ. ರಾಜ್ಯಕೋಶಗಳನ್ನು ಕಳೆದುಕೊಂಡು ಭಿಕಾರಿಗಳಂತೆ ಕಾಡು ಮೇಡು ಅಲೆಯುತ್ತಿರುವ ಪಾಂಡವರು ತನ್ನ ಮಗಳಿಗೆ ಯೋಗ್ಯರೇ ಅಲ್ಲ ಎಂಬ ತೀರ್ಮಾನಕ್ಕೆ ಬಂದು ಬಿಡುತ್ತಾರೆ ಬಲರಾಮ ದಂಪತಿಗಳು. ಆಗ ಸುಭದ್ರೆಯ ಬದಲಿಗೆ ಕಂಡದ್ದು ಧುರ್ಯೋಧನ. ಧುರ್ಯೋಧನನ ಮಗ ಲಕ್ಷಣ ಕೂಡ ಶಶಿರೇಖೆಯ ಓರಗೆಯವನೇ  ಆದ ಕಾರಣ ಮದುವೆಗೆ ಈ ಜೋಡಿ ಹೇಳಿ ಮಾಡಿಸಿದಂತಿರುತ್ತದೆ ಎಂದು ಭಾವಿಸಿರುತ್ತಾರೆ, ಹಾಗು ಅದನ್ನೇ ಮುಂದೆ ಹಿಡಿದುಕೊಂಡು ಮಾಡುವೆ ಮಾತುಕತೆಗಳನ್ನು ಮುಗಿಸಿಬಿಡುತ್ತಾರೆ.ಆದರೆ ವಾಸ್ತವದಲ್ಲಿ ಲಕ್ಷಣ ತನ್ನ ತಂದೆಯಂತೆ ಧೈರ್ಯಶಾಲಿಯಾಗಿರದೆ ಅಳುಕಿನ ಸ್ವಭಾವದವನಾಗಿರುತ್ತಾನೆ. ಇವೆಲ್ಲ ಪೂರ್ವಾಪರಗಳನ್ನು ತಿಳಿದುಕೊಂಡ ಭೀಮಸೇನನ ಮಗ ಘಟೋದ್ಗಜ , ತನ್ನ ತಮ್ಮನಾದ ಅಭಿಮನ್ಯುವನ್ನು ಶಶಿರೇಖೆಗೆ ಮದುವೆ ಮಾಡಿಸಿಯೇ ತೀರುತ್ತೇನೆಂದು ಶಪಥ ಮಾಡುತ್ತಾನೆ. ಅಭಿಮನ್ಯು ಶಶಿರೇಖೆಯರ ಮದುವೆ ನಡೆಯಬೇಕಾದರೆ ಅದಾಗಲೇ ಸರ್ವ ಸನ್ನದ್ಧಗೊಂಡಿರುವ ಲಕ್ಷಣ-ಶಶಿರೇಖೆಯರ ಮದುವೆ ಮುರಿಯಬೇಕಾಗಿರುತ್ತದೆ. ಈ ಕಾರ್ಯಕ್ಕೆ ಸ್ವಪ್ರೇರಣೆಯಿಂದಲೇ ಹೊರಡುವ ಘಟೋದ್ಗಜ 'ಮಾಯಾಬಜಾರ್' ಎಂಬ ಮಾಯಾ ಮಾರುಕಟ್ಟೆ ನಿರ್ಮಾಣ ಮಾಡಿ ಅಲ್ಲಿ ಬರೀ ಮಾಯಾ ವಸ್ತುಗಳನ್ನು ದೊರೆಯುವಂತೆ ಮಾಡಿ, ಅವುಗಳೆಲ್ಲ ಧುರ್ಯೋಧನನ ಮಗನಾದ ಲಕ್ಷಣನ ಮದುವೆ ದಿಬ್ಬಣದ ಜನಗಳಿಗೆ ಸಿಗುವಂತೆ ಮಾಡುತ್ತಾನೆ. ಮುಂದೆ ಆ ಮಾಯಾವಸ್ತುಗಳೆಲ್ಲ ಬದಲಾಗಿ ಮದುವೆಗೆ ಹಾಜರರಿದ್ದ ಜನಗಳಿಗೆಲ್ಲ ಅನೇಕ ರೀತಿಯ ಉಪಟಳಗಳನ್ನು ಕೊಟ್ಟು ನಡೆಯುತ್ತಿದ್ದ ಮದುವೆಯನ್ನು ಮುರಿದು ಅಭಿಮನ್ಯು-ಶಶಿರೇಖೆಯರ ಮದುವೆಗೆ ನಾಂದಿಯಾಗುತ್ತದೆ. ಘಟೋದ್ಗಜನು ತನ್ನ ಮಾಯಾ ಶಕ್ತಿ ಬಳಸಿ ಶಶಿರೇಖೆಯಂತೆ ಮಾರುವೇಷದಲ್ಲಿ ಆಕೆ ಅಂತಃಪುರದಲ್ಲಿ ಸೇರಿಕೊಂಡುಬಿಟ್ಟು ಅಲ್ಲಿದ್ದ ಎಲ್ಲರನ್ನು ಅಯೋಮಯವಾಗಿಸುವ ಈ ಮಾಯಾ ಬಜಾರ್ ಕಥೆಯನ್ನು ಹರಿಕಥಾ ವಿದ್ವಾನ್ ದಿ.ಗುರುರಾಜುಲು ನಾಯ್ಡು ಸ್ವಚ್ಛಂದವಾಗಿ ವರ್ಣಿಸಿದ್ದಾರೆ. ಮಾಯಾಬಜಾರ್ ಎಂಬುದೇ ಹೆಸರಲ್ಲಿ ಹರಿಕಥಾ ಕ್ಯಾಸೆಟ್ ಗಳು ಲಭ್ಯವಿದ್ದು ಇದೀಗ ಆನ್ಲೈನ್ ತಾಣದಲ್ಲೂ ಹರಿಕಥೆ ದೊರೆಯುತ್ತಿದೆ(ಮಾಯಾಬಜಾರ್ ಆನ್ಲೈನ್ ಹರಿಕಥೆ). ಮಹಾಭಾರತವನ್ನು ಇಡಿಯಾಗಿ ಕುಳಿತು ಓದುವುದು ಒಮ್ಮೆಲೆಗೆ ಸಾಧ್ಯವಾಗದವರು ಇಂತಹ ಹತ್ತು ಹಲವು ಹರಿಕಥೆಗಳ ಮೂಲಕ ನಮ್ಮ ಧರ್ಮ ಗ್ರಂಥಗಳ ಅಧ್ಯಯನ ಮಾಡಬಹುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...