ಅದು ಇಪ್ಪತ್ತನೇ ಶತಮಾನದ ಆದಿಭಾಗ. ದಕ್ಷಿಣ ಏಷ್ಯಾ ಬ್ರಿಟಿಷರ ಆಡಳಿತಕ್ಕೆ ಸಿಕ್ಕು ಅಕ್ಷರಶಃ ನಲುಗಿತ್ತು. ಈ ನೆಲದ್ದಲ್ಲದ ಸಂಸ್ಕೃತಿ, ಭಾಷೆ, ಆಚಾರ, ಆಡಳಿತಗಳನ್ನು ಯುರೋಪ್ ಖಂಡದಿಂದ ಈ ನೆಲಕ್ಕೆ ಸರಬರಾಜು ಮಾಡಿದ್ದೂ ಅಲ್ಲದೆ ಇಲ್ಲಿನ ಜನಗಳ ತಲೆಗೆ ಬಲವಂತವಾಗಿ ತುಂಬಿದ್ದರು ಬ್ರಿಟೀಷರು. ಇಲ್ಲಿನ ಮೂಲ ತತ್ವಗಳನ್ನು, ಮೂಲಭೂತ ಅಂಶಗಳನ್ನೆಲ್ಲ ದಿಕ್ಕರಿಸಿ ಪರಕೀಯರ ಆಡಳಿತೆಯೊಳಗೆ ಬಲವಂತವಾಗಿ ದೂಡಿದರೆ ಯಾರಿಗೆ ತಾನೇ ಸ್ವಾಭಿಮಾನ ಕುಂದುವುದಿಲ್ಲ. ಭಾರತದೊಳಗೂ ಅದೇ ಆಯಿತು, ಪರಕೀಯರ ಆಡಳಿತದ ವಿರುದ್ಧ ದನಿಗಳು ಒಂದೊಂದೇ ಬಲಗೊಳ್ಳತೊಡಗಿದಾಗ ಅವುಗಳನ್ನು ದಮನ ಮಾಡಲು ಅಷ್ಟೇ ಲಘುಬಗೆಯಿಂದ ಆಡಳಿತ ಪಾಳಯದಲ್ಲಿ ತಯಾರಿಗಳು ಸದ್ದಿಲ್ಲದೇ ನಡೆಯುತ್ತಲೇ ಇದ್ದವು. ವಿರುದ್ಧ ದನಿಯೆತ್ತಿದವರನ್ನು ನಿರ್ದಾಕ್ಷಿಣ್ಯವಾಗಿ ಜೈಲಿಗೆ ತಳ್ಳುವುದು ಇಲ್ಲವೇ ಗುಂಡಿಟ್ಟು ಕೊಲ್ಲುವುದು ಅವ್ಯಾಹತವಾಗಿ ಮುಂದುವರೆದಿರುತ್ತಿದ್ದಾಗ ದೇಶದ ಎಷ್ಟೋ ಜನ ತಬ್ಬಲಿಗಳಾಗಿಹೋದರು.ಅಸಂಖ್ಯಾತ ತಾಯಿಯರು ತಮ್ಮ ಮಕ್ಕಳನ್ನು ಕಳೆದುಕೊಂಡರು, ಎಷ್ಟೋ ವೃದ್ಧರು ಆಸರೆಯಿಲ್ಲದೆ ಬೀದಿ ಹೆಣಗಳಾದರು, ಎಷ್ಟೋ ಮಕ್ಕಳು ದಿಕ್ಕಿಲ್ಲದೆ ಬೀದಿಯಲ್ಲಿ, ಬಸ್ಸುಗಳಲ್ಲಿ, ರೈಲುಗಳಲ್ಲಿ ಭಿಕ್ಷೆ ಬೇಡುತ್ತಾ ತಮ್ಮ ಭವಿಷ್ಯವನ್ನೇ ಬ್ರಿಟಿಷ್ ಸಾಮ್ರಾಜ್ಯಕ್ಕೆ ಆಹುತಿಯಾಗಿಸಿಬಿಟ್ಟರು. ಇವೆಲ್ಲಾ ಈ ದೇಶದ ಜನಗಳು ಸವೆಸಿದ ಅಹಿತಕರ ದಿನಗಳು, ಅದಕ್ಕೆ ಕಾರಣ "ನಾವು ಚೆನ್ನಾಗಿದ್ದರೆ ಸಾಕು"ಎಂಬ ಸ್ವಾರ್ಥವಲ್ಲ ಬದಲಾಗಿ ನಮ್ಮ ಮುಂದಿನ ಪೀಳಿಗೆಗೆ ಸ್ವತಂತ್ರ್ಯ ಲೋಕದಲ್ಲಿ ವಿಹರಿಸುವ ಭಾಗ್ಯವನ್ನು ಕರುಣಿಸುವ ಸಲುವಾಗಿಯೇ ಎಂಬುದನ್ನು ಈ ಕಾಲದ ಯುವ ಜನಾಂಗ ಅರ್ಥ ಮಾಡಿಕೊಳ್ಳಬೇಕಾಗಿದೆ.
ಭಾರತ ಸೀಮೆಯೊಳಗೆ ಆಡಳಿತದಲ್ಲಿ ಸ್ವತಂತ್ರ ಕೋರಿ ಎದ್ದ ದಂಗೆ ಬ್ರಿಟಿಷ್ ಸಾಮ್ರಾಜ್ಯದ ಬುಡವನ್ನು ಅಲ್ಲಾಡಿಸಿದ ಪರಿ ಎಂತಹುದೆಂದರೆ ಎರಡನೇ ಮಹಾಯುದ್ಧದಲ್ಲಿ ಕೈ ಸುಟ್ಟುಕೊಂಡ ಸಂಧರ್ಭದಲ್ಲಿಯೇ ಭಾರತವನ್ನು ಬಿಟ್ಟು ಹೊರಡಬೇಕಾದ ಸಂದಿಗ್ದತೆಗೆ ಸಿಲುಕಿಕೊಂಡ ಸೂರ್ಯ ಮುಳುಗದ ದೇಶದ ದೊರೆಗಳು ಅದನ್ನೊಂದು ನುಂಗಲಾರದ ತುತ್ತಾಗಿಯೇ ಪರಿಗಣಿಸಿದರು. ಇದಾದ ನಂತರದಲ್ಲಿ ಆ ದೇಶ ಸೋಲುಗಳ ಸರಮಾಲೆಯನ್ನು ತನ್ನ ಕೊರಳಿಗೆ ಸುತ್ತಿಕೊಳ್ಳುತ್ತಲೇ ಹೋಯಿತು ಅಥವಾ ಅಲ್ಲಿ ಹೇಳಿಕೊಳ್ಳುವಂತಹ ಯಾವ ಬೆಳವಣಿಗೆಗಳು ಕಾಣಲಿಲ್ಲ.
ನಮ್ಮ ನಿಜವಾದ ಆಧುನಿಕ ತಾಪತ್ರಯಗಳು ಶುರುವಾಗಿದ್ದೇ ಅಲ್ಲಿಂದ, ಸ್ವತಂತ್ರ್ಯ ಭಾರತದಲ್ಲೇ ನಾವು ನಿಂತು ಕಟ್ಟಿದ ಸರ್ಕಾರವೇ ಇರುತ್ತದೆ ಹಾಗಾಗಿ ಬದುಕು ಮತ್ತಷ್ಟು ಸುಲಾಭವಾಗಲಿಕ್ಕೆ ಸಾಕು ಎನ್ನುವ ಆಗಿನ ಹಿರಿಯರ ಯೋಚನೆ/ಯೋಜನೆಗಳಿಗೆ ಮೂಲಾಧಾರವಾಗಿದ್ದ ಗತ ವೈಭವದ ಭಾರತ ಇನ್ನಿಲ್ಲವಾಗಿತ್ತು. ಕಣ್ಮುಂದೆ ತೊಂದರೆಗಳ ಪರ್ವತವೊಂದು ಧುತ್ತನೆ ಎದುರಾಗಿ 'ಏರು ನನ್ನನ್ನು' ಎಂದು ಸವಾಲೆಸೆದು ನಿಂತಂತೆಯೇ ಇತ್ತು. ಪುರಾತನ ಭಾರತ ಮಧ್ಯ ಪ್ರಾಚ್ಯ ರಾಷ್ಟ್ರಗಳೊಂದಿಗೆ ಕಾಯ್ದುಕೊಂಡಿದ್ದ ವ್ಯಾಪಾರ, ಶಿಕ್ಷಣ, ವಿಜ್ಞಾನದ ಗಾಢವಾದ ಸಂಬಂಧಗಳನ್ನು ಕಡಿದುಕೊಂಡು ನಡುಮಧ್ಯದಲ್ಲಿ ಕಡುವೈರಿ ಪಾಕಿಸ್ತಾನವೆಂಬ ದೇಶವೊಂದನ್ನು ಕಟ್ಟಿದ್ದು ನಮ್ಮ ದೇಶದ ಸಾಂಪ್ರದಾಯಿಕ ವ್ಯಾಪಾರ ಶೈಲಿಗೆ ಧಕ್ಕೆಯಾಗಿ ಈ ದೇಶದ ಪೂರ್ವಕಾಲದ ಆರ್ಥಿಕ ಶೈಲಿಗೆ ಆಘಾತವಾಗಿತ್ತು. ಆಧುನಿಕ ವ್ಯಾಪಾರ ಮಾರ್ಗಗಳನ್ನು ಹುಡುಕಲೇ ಬೇಕಾದ ಅನಿವಾರ್ಯತೆಗೆ ಒಗ್ಗಿಕೊಂಡ ಭಾರತ ಅದನ್ನು ಸುಲಲಿತವಾಗಿ ನಿಭಾಯಿಸುವಲ್ಲೂ ಯಶಸ್ವಿಯಾಯಿತು. ಭೂಮಾರ್ಗವಲ್ಲದೆ ಜಲಮಾರ್ಗವನ್ನು ಅವಲಂಬಿಸಿ ಆ ಮೂಲಕ ಯಥೇಚ್ಛ ವ್ಯಾಪಾರಗಳಿಗೆ ಒಗ್ಗುವುದು ಅದರ ಜೊತೆ ಜೊತೆಗೆ ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಆಧುನಿಕವಾಗಿ ಶೋಧಿಸಿದ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ಮೂಲಕವೂ ಆಗಷ್ಟೇ ಶುರುವಾಗಿದ್ದ ಕೈಗಾರಿಕಾ ಕ್ರಾಂತಿಯಲ್ಲೂ ತನ್ನ ಪಾಲು ದಾಖಲಿಸುವ ಉತ್ಕಟ ಬಯಕೆಯಿಂದ ಭಾರತ ಸರ್ವ ರಂಗಗಳಲ್ಲೂ ಪುಟ್ಟ ಪುಟ್ಟ ಹೆಜ್ಜೆಯಿಡುತ್ತಾ ಹೋಯಿತು.
ಕೋಟಿ ಕೋಟಿ ಭಾರತೀಯರ ಕನಸು ನನಸಾದ ದಿನದ ಪತ್ರಿಕೆಯಿದು, ವಿಷಾದವೆಂದರೆ ಈ ಸುದ್ದಿ ಇಲ್ಲಿ ಅಚ್ಚಾಗಲು ಲಕ್ಷಾಂತರ ಭಾರತೀಯರ ನೆತ್ತರು ಹರಿದಿದೆ |
ಬ್ರಿಟಿಷ್ ರಾಣಿಯನ್ನು ಎಳೆಯಬೇಕಾಗಿದ್ದು ಕುದುರೆಗಳು, ಆದರೂ ಇದನ್ನೊಮ್ಮೆ ನೋಡಿ |
ಭರತ ಖಂಡದಿಂದ ತುಂಡರಿಸಿಕೊಂಡು ಬೇರೆ ದೇಶಗಳೆಂಬ ಪಟ್ಟ ಕಟ್ಟಿಕೊಂಡ ಹಲವು ದೇಶಗಳು ಭಯೋತ್ಪಾದನೆ, ಬಡತನ ಮತ್ತಿತರ ಬಿರುದುಗಳನ್ನು ತನ್ನೊಳಗೆ ಸೇರಿಸಿಕೊಂಡು ಜಾಗತಿಕ ಮಟ್ಟದಲ್ಲಿ ಮಸುಕಾಗುತ್ತಿವೆ. ಆದರೆ ಭಾರತ ಮಾತ್ರ ತನ್ನನ್ನು ತೊರೆದು ಹೋದ ಬ್ರಿಟಿಷ್ ಸಾಮ್ರಾಜ್ಯವೇ ಬಾಯಿಯ ಮೇಲೆ ಬೆರಳಿಟ್ಟು ನೋಡುವಂತೆ ಬೆಳೆದು ನಿಲ್ಲುತ್ತಿದೆ. ೧೯೪೭ರ ಆಗಸ್ಟ್ ೧೫ರೆಂದು ಭಾರತದಿಂದ ಹೊರಡುವ ಮೊದಲು ದೆಹಲಿಯ ಬ್ರಿಟಿಷ್ ಅಧಿಕಾರಿಯೊಬ್ಬ ಹೇಳಿದನಂತೆ "ಇದಾಗಿ ಮುಂದೆ ಅಸ್ತಿತ್ವಕ್ಕೆ ಬರಲಿರುವ ಪಾಕಿಸ್ತಾನ ಹಾಗು ಹಿಂದುಸ್ತಾನ ಗಳೆರಡರಲ್ಲಿಯೂ ಪಾಕಿಸ್ತಾನವೇ ಬಹುಬೇಗ ಅಭಿವೃದ್ಧಿ ದಾಖಲಿಸಲಿದೆ, ಕಾರಣ ಪಾಕಿಸ್ತಾನದಲ್ಲಿರುವುದು ಒಂದೇ ಧರ್ಮ ಅದನ್ನು ಬಿಟ್ಟು ಅವರಿಗೆ ಬೇರೆ ಜಾತಿ ಪಂಥಗಳಿಲ್ಲ. ಹೀಗಿರುವ ದೇಶ ಐಕ್ಯತೆ ಸಾಧಿಸುವುದು ಬಹಳ ಸುಲಭ ಆದ ಕಾರಣ ಆ ದೇಶ ಬಹು ಬೇಗ ಪ್ರಗತಿ ಸಾಧಿಸಲಿದೆ". ಒಂದು ದೃಷ್ಟಿ ಕೋನದಲ್ಲಿ ಬ್ರಿಟಿಷ್ ಅಧಿಕಾರಿ ಹೇಳಿದ್ದು ಸರಿಯಿರಬಹುದು. ಆದರೂ ಪ್ರಪಂಚದಲ್ಲೆಲ್ಲೂ ಇರದಷ್ಟು ವಿವಿಧತೆಯನ್ನು ತನ್ನೊಡಲೊಳಗೆ ತುಂಬಿಕೊಂಡು ಜಗತ್ತಿಗೆ ಗುರುವಾಗಿ ಬೆಳೆದು ನಿಂತಿರುವ ಭಾರತ ಇಂದು ನಿಜಕ್ಕೂ ಆ ಬ್ರಿಟಿಷ್ ಅಧಿಕಾರಿಯ ಮಾತು ಸುಳ್ಳು ಮಾಡಿಬಿಟ್ಟಿದೆ. ಭಾರತ ಧೃಡವಾಗಿ ಬೆಳೆದು ನಿಂತ ಶೈಲಿ ನೋಡಿ ಬ್ರಿಟಿಷರೇ ಇಂದು ನಾಚಿಕೆ ಪಟ್ಟುಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದೆ. ಸ್ವಾತಂತ್ರ್ಯ ಭಾರತದ ಮುಂದಿನ ಹಾದಿಯೂ ಹೂವಿನ ಹಾಸಿಗೆಯಾಗಿರಲಿಲ್ಲ. ಕಬ್ಬಿನ ರಸವನ್ನೆಲ್ಲ ತೆಗೆದು ಬರಿಯ ಸಿಪ್ಪೆಯನ್ನು ಬಿಸಾಡಿದಂತೆ ಬ್ರಿಟಿಷರು ಇಲ್ಲಿನ ಸಂಪತ್ತು, ಸಿರಿವಂತಿಕೆಗಳನ್ನೆಲ್ಲ ದೋಚಿ ಪಶ್ಚಿಮದ ಖಜಾನೆಯೊಳಗೆ ಪೇರಿಸಿಕೊಂಡು ಬಿಟ್ಟರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ