ಎರಡು - ಮೂರು ವರ್ಷಗಳ ಹಿಂದೆ ಮಹಾರಾಷ್ಟ್ರದ ಪುಣೆಯಲ್ಲಿದ್ದೆ. ಮನೆಯಿಂದ ಕೆಲಸದ ಸ್ಥಳಕ್ಕೆ ೧೫-೧೬ ಕಿ ಮೀ ದೂರವಾದರೂ ಲೋಕಲ್ ರೈಲು ಇದ್ದಿದ್ದರಿಂದ ಪ್ರಯಾಣ ಅಷ್ಟು ಪ್ರಯಾಸ ಎನಿಸುತ್ತಿರಲಿಲ್ಲ. ೧೫ ಕಿ ಮೀ ದೂರವನ್ನು ಹತ್ತೇ ನಿಮಿಷಗಳಲ್ಲಿ ತಲುಪುತ್ತಿದ್ದ ಶರ ವೇಗದ ರೈಲುಗಳವು. ಬಡ-ಮಧ್ಯಮ ವರ್ಗದವರಿಗೆ ಹೇಳಿ ಮಾಡಿಸಿದಂತಿದ್ದ ಲೋಕಲ್ ರೈಲು ಪುಣೆಯ ಬಡವರ ಪಾಲಿಗೆ ಪ್ರಯಾಣ ಬಂಧುವೇ ಸರಿ. ಇಂತಿದ್ದ ಬೇಸಿಗೆಯ ಒಂದು ದಿನ ಪುಣೆಯ ಚಿಂಚ್ವಾಡ್ ರೈಲು ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತ ನಿಂತಿದ್ದೆ. ಸಾಮಾನ್ಯವಾಗಿ ಅಲ್ಲಿ ಜನರು ಮರಾಠಿ ಅಥವಾ ಹಿಂದಿ ಮಾತನಾಡುವುದರಿಂದ ಯಾರಾದರೂ ಕನ್ನಡ ಮಾತನಾಡುವುದನ್ನು ಕೇಳಿದೊಡನೆ ನನ್ನ ಕಿವಿಗಳು ನೆಟ್ಟಗಾಗಿ ಬಿಡುತ್ತಿದ್ದವು. ಅತ್ತಲೇ ಕಿವಿಕೊಟ್ಟು ನಿಂತಿರುತ್ತಿದ್ದ ನಾನು ಎಷ್ಟೋ ಬಾರಿ ಅವರ ಬಳಿ ಸಾರಿ ಅವರ ಊರು ಇನ್ನಿತರ ವಿಚಾರಗಳನ್ನು ಮಾತನಾಡಿ ಕುಶಲೋಪರಿ ವಿಚಾರಿಸಿಕೊಂಡು ಹಿಂದಿರುಗುತ್ತಿದ್ದೆ. ಅಂದು ಅದೇ ಚಿಂಚ್ವಾಡ್ ರೈಲು ನಿಲ್ದಾಣದಲ್ಲಿ ಕನ್ನಡ ಮಾತನಾಡುತ್ತಿದ್ದ ಕುಟುಂಬವೊಂದು ನನ್ನ ಕಣ್ಣಿಗೆ ಬಿತ್ತು. ಅವರೊಡನೆ ಇದ್ದ ನಾಲ್ಕೈದು ಮಕ್ಕಳು, ಐದಾರು ಹೆಂಗಸರನ್ನು ಕಂಡರೆ ಇವರು ಬೇಸಿಗೆ ರಜೆ ಕಳೆಯಲು ಬಂದಿರಬೇಕು ಎನ್ನುವುದು ತಿಳಿಯುವಂತಿತ್ತು. ಇವೆಲ್ಲಕ್ಕಿಂತಲೂ ನನ್ನನು ಹೆಚ್ಚಾಗಿ ಸೆಳೆದಿದ್ದು ಅವರ ವಿಶಿಷ್ಟ ಹಿಂದಿ ಮಿಶ್ರಿತ ಕನ್ನಡ. ಆ ಕುಟುಂಬದ ಸುಮಾರು ೩೦-೩೫ ಪ್ರಾಯದ ವ್ಯಕ್ತಿಯೊಬ್ಬ ತನ್ನ ಓರಗೆಯವನೊಂದಿಗೆ ಹೀಗೆ ಮಾತನಾಡುತ್ತಿದ್ದ.
"ನಾನ್ ಅಲ್ಲಿಂದ ಜರೂರು ಬರ್ಬೇಕಾದ್ರೆ ಚುಟ್ಟಿ ತೊಗೊಂಡು ಬಾಕಿ ಏಕ್ ಹಜಾರ್ ರುಪೈ ರೊಕ್ಕ ಐತಂತ ಹೇಳಿ ಬಂದೇನಿ".
ಈ ವಾಕ್ಯ ಕೇಳಿದೊಡನೆ ಆಶ್ಚರ್ಯವಾಯಿತು. ಸದ್ಯ ಉತ್ತರ ಕರ್ನಾಟಕದಲ್ಲಿ ಆದಿಲ್ ಶಾಹಿಗಳ ಆಡಳಿತ ಮುಗಿದು ಸರಿ ಸುಮಾರು ಇನ್ನೂರು ವರ್ಷಗಳಾದರು ಕನ್ನಡದೊಳಗೆ ಹಿಂದಿ ನುಸುಳಿರುವುದು ಬರೀ ಇಷ್ಟೆಯೇ ಎನ್ನುವ ಯೋಚನೆ ತಲೆಯೋಳಗೆ ಓಡುತ್ತಿದ್ದರು, ಇದು ಹೀಗೆ ಮುಂದುವರೆದರೆ ಅವನ ಸಂಸಾರದ ಕುಡಿ ಕೊನರುಗಳೆಲ್ಲಾ ಇನ್ನೆರಡು ತಲೆ ಮಾರು ಮುಗಿಯುವುದರೊಳಗಾಗಿ ಹಿಂದಿ ಸಾಮ್ರಾಜ್ಯದ ಕಟ್ಟಾಳುಗಳಾಗಿ ಬಿಡುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಕೊಳ್ಳುತ್ತಿದ್ದೆ. ಅವರ ಸಮೀಪಕ್ಕೆ ಹೋಗಿ ಕೇಳಿದಾಗ ತಿಳಿಯಿತು ಅವರು ಬೀದರ್ ಜಿಲ್ಲೆಯ ಭಾಲ್ಕಿ ಬಳಿಯ ಒಂದು ಗ್ರಾಮದವರೆಂದು. ಕನ್ನಡ ನಾಡಿನ ಗಡಿಯೊಳಗೆ ಪರಭಾಷೆಗಳು ಅಷ್ಟೊಂದು ಸದ್ದು ಮಾಡುತ್ತಿರುವುದು ನಿಧಾನಕ್ಕೆ ನನ್ನ ಮನಸ್ಸಿಗೆ ಅರ್ಥವಾಗುವುದಕ್ಕೆ ಶುರುವಾಯಿತು. ಅಲ್ಲಿಯವರೆಗೂ ಬೆಂಗಳೂರಿನ ಎಲ್ಲ ಭಾಷಿಗರೊಂದಿಗೂ ಮಾಮೂಲಾಗಿ ಬೆರೆತುಬಿಡುತ್ತಿದ್ದ ನನಗೆ ಅಂದು ನಾನು ನನ್ನದು ಎಂಬ ಅರಿವಾಗಲು ತೊಡಗಿತ್ತು. ಯಾಕೋ ಏನೋ ಅಂದು ಮೊದಲ ಬಾರಿಗೆ ಕನ್ನಡ ನನ್ನ ಸ್ವಂತವೆನಿಸಿತ್ತು.
ಕೆಲವು ದಿನಗಳ ಹಿಂದೆ ತುಮಕೂರು ಜಿಲ್ಲೆಯ ಮಧುಗಿರಿಯ ಹಳ್ಳಿಯೊಂದಕ್ಕೆ ಹೋಗಿದ್ದೆ. ಯಾರೊಂದಿಗೋ ಮಾತನಾಡುತ್ತಾ ಕುಳಿತಿದ್ದಾಗ ಅವರು ಪದೇ ಪದೇ ಅವರ ಕನ್ನಡ ಪದಗಳ ಕೊನೆಯಲ್ಲಿ 'ಮ್' ಸೇರಿಸುತ್ತಿದ್ದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ.ಕಷ್ಟ ಎನ್ನಲು ಕಷ್ಟಮ್, ಸಂತೋಷ ಎನ್ನಲು ಸಂತೋಷಮ್ ಎಂದು ಹೀಗೆ ಸಾಗಿತ್ತು ಅವರ ಕನ್ನಡ ಮಾತು ಕತೆ. ಅದು ಯಾವ ಭಾಷೆಯ ನೆರಳಿನಾಟ ಎಂದೇನೂ ನಾನು ಬಿಡಿಸಿ ಹೇಳುವ ಅಗತ್ಯವಿಲ್ಲ ಅಲ್ಲವೇ?.ಇನ್ನೂ ಮುಂದುವರೆದು ಆ ವ್ಯಕ್ತಿ ತನ್ನ ಮಗನನ್ನು ಕರೆದು ಹೇಳುತ್ತಿದ್ದ "ರೇ, ನಾರಾಯಣ ವಾಡಲು ಇಂಟ್ಲಾ ಹೋಗಿ ಊಟ ಮಾಡಿಕಿ ರಾವಂಡಿ ಅಂತ ಹೇಳ್ಬಿಟ್ಟು ಬಾ". ಇದನ್ನು ಕೇಳಿದ ತಕ್ಷಣ ಮತ್ತೊಮ್ಮೆ ಪುಣೆಯಲ್ಲಾದ ಅನುಭವ, ನಮ್ಮ ಮಗ್ಗುಲ ತುಮಕೂರಿನಲ್ಲೇ ನಡೆಯುತ್ತಿರುವುದು ನೋಡಿ ನನಗೆ ಭಾಷೆ ಮೇಲಿದ್ದ ಪ್ರೀತಿ ಇನ್ನಷ್ಟು ಬಿಗಿಯಾಗತೊಡಗಿತು. ಹಿಂದಿರುಗಿ ಬರುವ ದಾರಿಯುದ್ದಕ್ಕೂ ಸುಧೀರ್ಘವಾಗಿ ಆಲೋಚಿಸುತ್ತಲೇ ಬಂದೆ . ಕರ್ನಾಟಕದಲ್ಲಿ ಭಾಷೆಯ ವಿಚಾರದಲ್ಲಿ ನಡೆದಿದ್ದೇನು? ನಡೆಯುತ್ತಿರುವುದೇನು? ನಿಧಾನಕ್ಕೆ ಅವಲೋಕಿಸುತ್ತಲೂ ಇದ್ದೆ.
ಹೆಚ್ಚು ಕಡಿಮೆ ಎರಡೂ ಮುಕ್ಕಾಲು ಸಾವಿರ ವರ್ಷಗಳ ಇತಿಹಾಸವಿರುವ ನಮ್ಮ ಕನ್ನಡ ಭಾಷೆಯು ಅಳಿದು ಅಟ್ಟ ಸೇರಿಬಿಡುತ್ತದೆಂದು ನಾವೆಲ್ಲಾ ಭಾವಿಸಿದ್ದೇವೆ ಹಾಗು ನಮ್ಮ ನಮ್ಮ ಕೈಲಾದ ಸಹಾಯವನ್ನು ಅದಕ್ಕೆ ಮಾಡುತ್ತಿದ್ದೇವೆ. ಬಿದ್ದವನಿಗೆ ಬಿಸಿನೀರು ಕೊಟ್ಟರೆ ಎದ್ದು ಎದೆಗೆ ಒದ್ದಂತೆ ಎನ್ನುವಂತೆ ಕೈಲೊಂದಿಷ್ಟು ಕಾಸು ಮಾಡಿ ಕಾರು ಬಂಗಲೆ ಎಲ್ಲ ಮಾಡಿಕೊಂಡ ಮೇಲೆ ನಿಮ್ಮ ಮಕ್ಕಳೊಡನೆ ಕನ್ನಡ ಮರೆತು ಇಂಗ್ಲೀಷ್ ಶುರುವಿಟ್ಟುಕೊಂಡಿರಿ. ಬೀದಿಯಲ್ಲಿ ಬಾರಿಸು ಕನ್ನಡ ಡಿಂಡಿಮವ ಎನ್ನುವ ಘೋಷಣೆ ಹೊರಡಿಸಿ ಕನ್ನಡ ಬಾವುಟ ಹಿಡಿದು ಹೋರಾಟ ನಡೆಸಿದ ನೀವು ಮನೆಗೆ ಹೋಗಿ ನಿಮ್ಮ ಮಕ್ಕಳನ್ನು ಸದ್ದಿಲ್ಲದೇ ಇಂಗ್ಲೀಷ್ ಕಾನ್ವೆಂಟುಗಳಿಗೆ ಸೇರಿಸಿ ಬಂದಿರಿ. ಆ ಕಾನ್ವೆಂಟುಗಳನ್ನು ಕನ್ನಡೇತರರು ನಡೆಸುತ್ತಿರುವ ಕಾರಣ ಕನ್ನಡಕ್ಕೆ ಕೊನೆಯ ಆದ್ಯತೆ ನೀಡಲಾಯಿತಾದರೂ ನೀವು ನಮ್ಮ ಕೈಲೇನು ಇಲ್ಲವೆಂದು ಕೈ ಚೆಲ್ಲಿ ಕುಳಿತಿರಿ. 'ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ' ಎನ್ನುವ ಸಂಸ್ಕೃತಿಯೊಳಗೆ ಹುಟ್ಟಿ ಬೆಳೆದ ನೀವು ನಿಮ್ಮ ಮಕ್ಕಳನ್ನು 'ರೈನ್ ರೈನ್ ಗೋ ಅವೇ' ಎಂಬ ಪಶ್ಚಿಮದ ಸಂಸ್ಕೃತಿಗೆ ಬಲವಂತವಾಗಿ ನೂಕಿದಿರಿ. ಬೆಂಗಳೂರಿನ ಪ್ರಮುಖ ಶಾಲೆಯೊಂದರಲ್ಲಿ 'ನೋ ರೀಜನಲ್ ಲಾಂಗ್ವೇಜಸ್' ಎಂಬ ಫಲಕ ಹಾಕಿ ಕನ್ನಡ ಮಾತನಾಡಿದರೆ ದಂಡ ಕಟ್ಟುವಂತೆ ನಿಯಮ ಮಾಡಲಾಯಿತಾದರೂ ನೀವು ಅದೇ ಶಾಲೆಗೇ ಹೋಗಿ ಸರತಿ ಸಾಲಿನಲ್ಲಿ ನಿಂತು ಅರ್ಜಿ ತಂದು ಲಕ್ಷಾಂತರ ಸುರಿದು ನಿಮ್ಮ ಮಕ್ಕಳನ್ನು ಅಲ್ಲಿಗೆ ಕಳಿಸಿದಿರಿ.ಇನ್ನೂ ಏನೇನೋ ನಮ್ಮ ಕಣ್ಣ ಮುಂದೆ ದಿನ ನಿತ್ಯ ನಡೆಯುತ್ತಲೇ ಇವೆ. ನೀವೆಷ್ಟೇ ಹರ ಸಾಹಸ ಪಟ್ಟರು ಕನ್ನಡವದು ನಡುಗದು, ಕಾರಣ ಅದರ ಘನ ಹಿನ್ನೆಲೆಯೇ ಅಂತದ್ದು.
ಮೊಘಲರು ೪೦೦ ವರ್ಷ ಹಾಗು ಬ್ರಿಟೀಷರು ೧೫೦ ವರ್ಷ ಆಳಿದರೂ ಕನ್ನಡ ಭಾಷೆ ತನ್ನ ಘನತೆಯನ್ನು ಉಳಿಸಿಕೊಂಡು ಭಾರತ ದೇಶ ಸ್ವಾತಂತ್ರ್ಯ ಕಂಡು ಸ್ವಾಯತ್ತತೆಯೆಡೆಗೆ ಹೆಜ್ಜೆ ಇತ್ತ ನಂತರವೂ ತೀರಾ ಇತ್ತೀಚಿಗೆ ನಡೆದಿದೆ ಎನ್ನಲಾದ ಕನ್ನಡದ ಅತೀ ದೊಡ್ಡ ಆಂದೋಲನ ಗೋಕಾಕ್ ಚಳುವಳಿ ನಡೆದಾಗಲೂ ಕರ್ನಾಟಕದ ಒಳಗಿರುವ ಕೆಲವು ಅನ್ಯ ಭಾಷಿಕ ಸಂಘಗಳು ಗೋಕಾಕ್ ವರದಿಯನ್ನು ಜಾರಿಗೆ ತರದಂತೆ ಆಗಿನ ಸರ್ಕಾರಕ್ಕೆ ಪತ್ರವೊಂದನ್ನು ಬರೆದಿದ್ದು ಸೇರಿ ಎಲ್ಲವನ್ನೂ ಬದಿಗಿಟ್ಟು ಜ್ಞಾನಪೀಠ ಪ್ರಶಸ್ತಿ, ಸರಸ್ವತಿ ಸಮ್ಮಾನ್ ನಂತಹ ಉನ್ನತ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಳ್ಳುತ್ತಿರುವುದರಲ್ಲಿ ತೊಡಗಿಕೊಂಡಿದ್ದು ಸದ್ಯಕ್ಕಂತೂ ಕನ್ನಡ ಅಳಿಯುವ ಭಾಷೆಯಲ್ಲವೇ ಅಲ್ಲ. ಪ್ರಪಂಚದಲ್ಲಿ ಅತೀ ಹೆಚ್ಚು ಬಳಸುವ ಭಾಷೆಯ ಪಟ್ಟಿಯಲ್ಲಿ ೩೨ನೆ ಸ್ಥಾನದಲ್ಲಿರುವ ಕನ್ನಡ ಇನ್ನು ಮುಂದೇನಾದರೂ ದುರ್ಬಲವಾಗುವತ್ತ ಹೊರಳಿದರೆ ಅದಕ್ಕೆ ಕಾರಣ ಅನ್ಯಭಾಷಿಗರಲ್ಲ, ಭಾಷೆಗಳನ್ನು ಹೇರಿಕೆ ಮಾಡಿ ಮಜಾ ನೋಡುವ ಸರ್ಕಾರಗಳೂ ಅಲ್ಲ ಬದಲಾಗಿ ಅದರ ನೇರ ಹೊಣೆ ಕನ್ನಡಿಗರದ್ದೇ. ನಿಮ್ಮ ಮನೆಯ ದೀವಿಗೆ ನೀವು ಹಚ್ಚಿ ಬೆಳಗಿಸುವುದ ಬಿಟ್ಟು ಅನ್ಯರಿಗೆ ಕಾಯುವುದು ತರವೇ?. ದೇಶದ ಆಡಳಿತ ಹಿಡಿತ ಅನ್ಯರ ಕೈಲಿದ್ದು ಈಗಿನ ಗೂಗಲ್, ಫೇಸ್ ಬುಕ್, ವಾಟ್ಸಾಪ್ ಗಳ ನೆರಳೂ ಇಲ್ಲದೆ ಕನ್ನಡ ಮರೆಯಾಗದೆ ಉಳಿದಿತ್ತು ಎಂದರೆ ಅದಕ್ಕೆ ಕಾರಣ ಕನ್ನಡ ಭಾಷಿಗರ ಭಾಷಾ ಪ್ರೇಮವೇ ಹೊರತು ಸರ್ಕಾರಗಳ ಕಾನೂನು ಕಟ್ಟಳೆಗಳಲ್ಲ. ಇದೀಗ ನಾವೇ ನಿಂತು ಆರಿಸಿದ ಸರ್ಕಾರವಿದೆ, ಜನಾದೇಶಕ್ಕೆ ಈ ದೇಶದ ಕಾನೂನು ತಲೆಬಾಗುತ್ತದೆ. ಇಂತಿದ್ದು ಕನ್ನಡ ಭಾಷೆಯ ಉಳಿವು ಅಳಿವಿನ ಪ್ರಶ್ನೆ ಇರುವುದು ಸರ್ಕಾರದ ಕೈಲಲ್ಲ ಬದಲಾಗಿ ಕನ್ನಡ ಭಾಷೆಯನ್ನು ದಿನ ನಿತ್ಯವೂ ಬಳಸುವ ನಮ್ಮ ನಿಮ್ಮೆಲ್ಲರ ಕೈಲಿ.
ಕನ್ನಡಿಗರು ಗಟ್ಟಿಗರಾಗಿ ಭಾಷೆ ವಿಚಾರದಲ್ಲಿ ಸ್ವಾಭಿಮಾನಿಗಳಾಗದ ಹೊರತು ಯಾವ ಸರ್ಕಾರಗಳೂ ಏನೂ ಮಾಡಲಾರವು. ಅದೇಕೋ ಇತ್ತೀಚಿಗೆ ಕನ್ನಡವೆಂದರೆ ಕೆಲವರಿಗೆ ಕೇವಲವಾಗಿದೆ. ಬೆಳಗಾವಿಯ ವಿಚಾರದಲ್ಲಿ ಮಹಾರಾಷ್ಟ್ರ ಕನ್ನಡಿಗರ ಮೇಲೆ ಗುಟುರು ಹಾಕುತ್ತದೆ, ನ್ಯಾಯಾಲಯದಲ್ಲೂ ಆ ವಿಚಾರವಾಗಿ ದಾವೆ ಹೂಡಿ ಪಂಥಾಹ್ವಾನ ನೀಡುತ್ತದೆ. ನಮ್ಮ ಮಗ್ಗುಲ, ದೇಶದಲ್ಲೇ ಕಿರಿದಾದ ರಾಜ್ಯ ಗೋವಾ ಕೂಡ ಕನ್ನಡ ನಾಡಿನೊಡನೆ ಅಷ್ಟಕ್ಕಷ್ಟೇ ಎನ್ನುವ ಸ್ಥಿತಿ ತಲುಪಿದ್ದಷ್ಟೇ ಅಲ್ಲದೆ ನೀವೇನು ಮಾಡಬಲ್ಲಿರಿ ಎಂದು ತೊಡೆ ತಟ್ಟುವಷ್ಟು ಅನುವು ನಾವೇ ಮಾಡಿಕೊಟ್ಟುಬಿಟ್ಟಿದ್ದೇವೆ. ಆಂಧ್ರದ ಗಡಿಗೆ ಸೇರಿಕೊಂಡ ಯಾವ ಊರೊಳಗೆ ಕಾಲಿಟ್ಟರು ಆಂಧ್ರ ಪಾಂಡಿತ್ಯ ಮೆರೆಯುತ್ತದೆ. ಬೆಂಗಳೂರಿನ ಅಸಂಖ್ಯಾತ ಕನ್ನಡಿಗರಿಗೆ ಅವರ ಮೊಬೈಲ್ ನಂಬರ್ ಕನ್ನಡ ದಲ್ಲಿ ಹೇಳಿ ಎಂದರೆ ಅವರ ಮೊಬೈಲ್ ಸಂಖ್ಯೆಯೇ ಮರೆತು ಹೋಗುವಷ್ಟು ಅವರು ಇಂಗ್ಲೀಷ್ ಮೋಹದೊಳಗೆ ಸಿಲುಕಿಕೊಂಡಿದ್ದಾರೆ. ಈ ಎಲ್ಲ ಸಂಕೋಲೆಗಳಿಂದ ಹೊರ ಬಂದು ನಾನು, ನನ್ನದು ಎನ್ನುವ ಸ್ವಾಭಿಮಾನ ತಳೆದು ಎಂದು ಎಲ್ಲ ಕನ್ನಡಿಗರು ಹೆಮ್ಮೆಯಿಂದ ಕನ್ನಡವಾಡುತ್ತಾರೋ ಅಂದೇ ಕನ್ನಡದ ಭವಿಷ್ಯ ಬಂಗಾರವಾಗುತ್ತದೆ, ಕನ್ನಡ ನಾಡು ಮತ್ತೊಮ್ಮೆ ನಲ್ಮೆಯ ಬೀಡಾಗುತ್ತದೆ.