ಲಾಲ್ ಬಹದ್ದೂರ್ ಶಾಸ್ತ್ರಿ ಭಾರತ ದೇಶ ಕಂಡ ಒಬ್ಬ ಅಪ್ರತಿಮ ನಿಷ್ಠಾವಂತ ನಾಯಕ. ಅವರಲ್ಲಿದ್ದ ನಿಷ್ಠೆಗೆ ಸಮನಾಗಿ ನಿಲ್ಲಬಲ್ಲ ನಿಷ್ಠಾವಂತರು ರಾಜಕೀಯ ರಂಗದಲ್ಲಿ ಬಹುಶಃ ಯಾರೂ ಇರಲಿಕ್ಕಿಲ್ಲ. ಅವರ ನಿಷ್ಠೆಗೆ ಕನ್ನಡಿ ಹಿಡಿಯುವಂತಹ ಘಟನೆಯೊಂದನ್ನು ನಾನಿಲ್ಲಿ ಹೇಳಬಯಸುತ್ತೇನೆ. ಇದು ಶಾಸ್ತ್ರೀಜಿ ಅವರ ಪುತ್ರ ಸುನಿಲ್ ಶಾಸ್ತ್ರಿ "ಲಾಲ್ ಬಹದ್ದೂರ್ ಶಾಸ್ತ್ರೀ : ಪಾಸ್ಟ್ ಫಾರ್ವರ್ಡ್" ಎಂಬ ಪುಸ್ತಕದಲ್ಲಿ ನಮೂದಿಸಿರುವ ಒಂದು ಸತ್ಯ ಘಟನೆ.
ಸುನಿಲ್ ಶಾಸ್ತ್ರೀ ಆಗಿನ್ನೂ ಇಪ್ಪತ್ತರ ಯುವಕ, ತಮ್ಮ ತಂದೆಯವರ ಹುದ್ದೆಯ ಘನತೆಗೆ ತಕ್ಕಂತೆ ಐಶಾರಾಮಿ ಕಾರಿನಲ್ಲಿ ಓಡಾಡುವ ಆಸೆ ಅವರಿಗೆ.ಆದರೆ ಶಾಸ್ತ್ರಿಯವರೋ ನಿಷ್ಠೆ, ಪ್ರಾಮಾಣಿಕತೆಗೆ ಇನ್ನಿಲ್ಲದ ಬೆಲೆ ಕೊಟ್ಟು ಇರುವುದರಲ್ಲಿಯೇ ಸುಖ ಕಾಣುವುದನ್ನು ತಮ್ಮ ಮಕ್ಕಳಿಗೂ ಕಲಿಸಿದ್ದರು. ಆದರೂ ಬಿಸಿ ರಕ್ತದ ತರುಣ ಸುನಿಲ್ ಶಾಸ್ತ್ರಿಗೆ ಐಶಾರಾಮಿ ಕಾರಿನಲ್ಲಿ ಒಮ್ಮೆಯಾದರೂ ಪ್ರಯಾಣ ಮಾಡಬೇಕೆಂದು ಉತ್ಕಟ ಬಯಕೆಯಾಗುತ್ತದೆ. ಕೂಡಲೇ ಸುನಿಲ್ ಶಾಸ್ತ್ರಿ ಅವರ ತಂದೆಯವರ ವಯಕ್ತಿಕ ಸಹಾಯಕನನ್ನು ಕಂಡು ತಮಗೆ ಐಶಾರಾಮಿ ಕಾರಿನಲ್ಲಿ ಒಮ್ಮೆಯಾದರೂ ಪ್ರಯಾಣ ಮಾಡಬೇಕು ಎನ್ನುವ ಹಂಬಲವಿರುವುದಾಗಿಯೂ , ಹಾಗು ಅದಕ್ಕಾಗಿ ತಮ್ಮ ತಂದೆಯವರಿಗೆ ಸರ್ಕಾರದಿಂದ ಕೊಡಲಾಗಿದ್ದ ಕಾರನ್ನು ಬಳಸಿಕೊಳ್ಳುವ ಬಗ್ಗೆಯೂ ತಿಳಿಸುತ್ತಾರೆ.
ಮೊದಲೇ ಪ್ರಧಾನಿಯವರ ಮಗ, ತಿರುಗಿ ಮಾತನಾಡಲಾದೀತೇ?. ಹೂಂಕರಿಸುತ್ತಾರೆ. ಕೂಡಲೇ ಕಾರಿನವನಿಗೆ ಫೋನಾಯಿಸಿ ಪ್ರಧಾನಿ ನಿವಾಸಕ್ಕೆ ಬರುವಂತೆ ಬುಲಾವ್ ಕೊಡುತ್ತಾರೆ. ಅದರಂತೆ ಇನ್ನರ್ಧ ಗಂಟೆಯಲ್ಲಿ ಕಾರು ಬರುತ್ತದೆ ಕೂಡ. ಕಾರು ಕಂಡೊಡನೆ ಕುಣಿದಾಡಿದ ಸುನಿಲ್ ಶಾಸ್ತ್ರಿ ಕಾರಿನ ಕೀ ತೆಗೆದುಕೊಂಡು ಜಾಲಿ ರೈಡ್ ಗೆಂದು ಹೊರಟೆ ಬಿಡುತ್ತಾರೆ.
ಇತ್ತ ಡ್ರೈವರ್ ನಿಗೆ ಶಾಸ್ತ್ರಿ ಜಿ ಎದುರಾಗುತ್ತಾರೆ. ಡ್ರೈವರ್ ಅನ್ನು ಕಂಡೊಡನೆ ಅವರು "ಏನಪ್ಪಾ, ನೀನು ಕಾರಿಗೆ ಒಂದು ಲಾಗ್ ಬುಕ್ ಇಟ್ಟುಕೊಂಡಿರುವೆಯಾ?" ಎಂದು ಪ್ರಶ್ನಿಸುತ್ತಾರೆ.ಡ್ರೈವರ್ ನಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಾಗ "ಹಾಗಾದರೆ ಈಗ ನನ್ನ ಮಗ ಎಷ್ಟು ದೂರ ಪ್ರಯಾಣಿಸಿದ್ದಾನೋ ಅದನ್ನು ಅಲ್ಲಿ ಬರೆದು ಅದರ ಮುಂದೆ ‘ಖಾಸಗಿ ಬಳಕೆಗೆ’ ಎಂದು ಷರಾ ಬರೆದಿಡು" ಎಂದು ಬರೆಸಿ, ತಮ್ಮ ಮಗನು ಹಿಂದಿರುಗಿದ ಒಡನೆಯೇ ಕಾರು ಕೀ ಗಳನ್ನೂ ಮರಳಿಸಿ ಆ ಪ್ರಯಾಣಕ್ಕೆ ತಗುಲಿದ್ದ ವೆಚ್ಚವನ್ನು ತಮ್ಮ ಹೆಂಡತಿ ಲಲಿತಾ ಶಾಸ್ತ್ರಿ ಯವರಿಂದಲೇ ಕೊಡಿಸುತ್ತಾರೆ.
ಪ್ರಾಮಾಣಿಕತೆ, ಸತ್ಯ ನಿಷ್ಠೆ, ಕಾರ್ಯ ನಿಷ್ಠೆ, ಪರೋಪಕಾರ ಮನೋಭಾವ ಇವುಗಳನ್ನೆಲ್ಲಾ ಮಾತಿನಲ್ಲಿ ಹೇಳಿ ಕಲಿಸುವ ಬದಲು ನಿಜವಾಗಿಯೂ ಆಚರಿಸಿ ಕಲಿಸಿದ ಮಹನೀಯರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲಬಲ್ಲ ವ್ಯಕ್ತಿ ನಮ್ಮ ಲಾಲ್ ಬಹದ್ದೂರ್ ಶಾಸ್ತ್ರೀ ಜಿ. ಈಗಿನ ರಾಜಕೀಯ ಸನ್ನಿವೇಶಗಳಲ್ಲಿ ಶಾಸ್ತ್ರಿ ಜಿ ನಮಗೆ ಮತ್ತೆ ಮತ್ತೆ ನೆನಪಾಗುವುದು ಕೂಡ ಇದೇ ಕಾರಣಕ್ಕೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ