ನಾ ನಿಂತ ಜನ ವಂದ್ಯರಾಗಬೇಕು,
ನಾ ಕುಂತ ನೆಲ ಸಾಧಕರಿಗೆ ಧೃವ ತಾರೆಯಾಗಬೇಕು,
ನನ್ನೊಡನಾಡಿಗಳೆಲ್ಲಾ ನನ್ನ ಸಂಭ್ರಮಿಸಬೇಕು,
ನಾ ಹುಟ್ಟಿ ಬೆಳೆದು ಓಡಾಡಿದ ಸ್ಥಳಗಳೆಲ್ಲಾ
ಇತರರ ಮನೆ ಮಾತಾಗಬೇಕು,
ನಾ ನಡೆದ ದಾರಿ ಇರುವರಿಗೆ ಗುರಿಯಾಗಬೇಕು.
ಸದ್ದರಿಯದೇ ನಾನು ಅಸಂಖ್ಯರ
ಮನೆ ಮಾತಾಗಬೇಕು,
ಹಿಂದೆ ಮುಂದವರಿಗೆಲ್ಲ ನಾನೇ
ಗುರುತಾಗಬೇಕು,
ಎಡವುವರ ಕೈ ಹಿಡಿದು ನಡೆಸುವಂತೆ
ನಾನಾಗಬೇಕು,
ನಡೆಯುವರಿಗೆ ಎಡವದಂತೆ ತಿಳಿಹೇಳುವ
ಶ್ರೇಷ್ಠಿ ನಾನಾಗಬೇಕು.
ಸಾಧನೆಯ ಗುಲ್ಲು ಹತ್ತಿದವರು
ನನ್ನ ಎಡತಾಕಬೇಕು,
ಅಕ್ಕರೆಗೂ ಅಕ್ಕರಕೂ ದಾಹವೆನಿಸಿದವರು
ನನ್ನ ಒಡನಾಡಬೇಕು,
ನಾನು ಕೇಂದ್ರವಾಗಿರಬೇಕು,
ಆದರೂ ನಾನು ನಾನೇ ಆಗಿರಬೇಕು.
ನಾನೊಮ್ಮೆ ಹಿಂದಿರುಗಿ ಬರದೂರಿಗೆ
ಪಯಣಿಸಿಬಿಟ್ಟಾಗ,
ನಾನೊಮ್ಮೆ ಅರಿವಿನ ಅಂತರಾತ್ಮವಿರದ
ಊರ ಜೀವಿಯಾಗಿಹೋದಾಗ
ನನ್ನವರೆಲ್ಲಾ ಇನ್ನಿಲ್ಲದಂತೆ ಪ್ರಲಾಪಿಸಬೇಕು,
ಅವರ ಹೃದಯಗಳು ನನ್ನ ತನ್ಮಯತೆಯಲ್ಲಿ
ತೊಯ್ದು ಹೋಗಬೇಕು,
ಅವರ ಭಾವುಕತೆಯೊಳಗೆ ಬೆರೆತು
ಕಾಲದೊಡನೆ ನಾನೂ ಕಳೆದುಹೋಗಬೇಕು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ