ಗುರುವಾರ, ಜೂನ್ 14, 2018

ಅಮಿತ ಸವಾಲು - 'ಕಾ'ರಂಭ ಪದ್ಯ

ಕನಸದು ಕತ್ತಲಲಿ ಕಾಡುವುದು,
ಕಡೆದೆದ್ದು ಕಂಡರೆ ಕೇವಲ
ಕನವರಿಕೆಯಂತಿಹುದದು,
ಕಣ್ಗೆ ಕಂಡಿದ್ದೆಲ್ಲವ
ಕೊನೆಮೊದಲರಿಯದೇ
ಕೈಗೊಳ್ಳುವ ಕಸರತ್ತು,
ಕೇವಲನಾಗಿ, ಕನಸುಗಾರನಾದ
ಕಷ್ಟ ಕಾರ್ಪಣ್ಯಗಳ ಕಂಡ
ಕರ್ಮಜೀವಿಗಿದು ಕೊಡುಗೆಯೇನು?
ಕೊಡುಗೆಯೋ? ಕರ್ತಾರನ ಕುಯುಕ್ತಿಯೋ?
ಕಂಡವರ್ಯಾರು?.
ಕಾಣದಿದ್ದರೂ ಕುಶಲ ಕರ್ಮಿ ಕರ್ತಾರನವನು.
ಕಂಡಿರೇನು?!!
                  - - * - -
ಕುಚೇಲನಿಗೆ ಕಷ್ಟವಿತ್ತು,,
ಕೃಷ್ಣನಿಗದು ಕಣ್ಸನ್ನೆಯಲ್ಲಿ
ಕಂಡಿತ್ತು,
ಕಷ್ಟದೊಳರಗಿದ ಕಡುಗಷ್ಟವನ್ನರಿತಿದ್ದ
ಕೃಷ್ಣ ಕೇಳದೆಯೇ
ಕೈವಲ್ಯ ಕರುಣಿಸಿದ್ದ. 
ಕಷ್ಟದವರ ಕುಟೀರದೊಳಗುದಿಸಿದ
ಕುವರ ಕುಚೇಲನೆಂಬುವನು
ಕೃಷ್ಣನ ಕುಟೀರದೊಳಗಧಿಪತಿಯಾಗಿದ್ದ
ಕುಚೇಷ್ಟೆಕುಖ್ಯಾತಿಗಳೊಳಗೆ
ಕುಣಿದುಕುಣಿಸಿದವರೆಲ್ಲ 
ಕಾಣದಂತೆ ಕರಗಿ
ಕಣ್ಣರಿವಿನಿಂದ ಕಣ್ಮರೆಯಾದಾಗ್ಯೂ
ಕೃಷ್ಣ ಕೇಳುಗನಾಗಿದ್ದ
ಕುಚೇಲ ಕುದುರಿದ್ದ,
ಕಮರದಂತೆ ಕಡೆದುನಿಂದಿದ್ದ.

ವಿ. ಸೂ: 'ಕ' ಕಾರದಿಂದಲೇ ಪದಗಳು ಪ್ರಾರಂಭವಾಗುವಂತೆ ಪದ್ಯ ಬರೆಯಲು ಸೂಚಿಸಿದ್ದು ಕನ್ನಡ ಸಾಹಿತ್ಯಾಸಕ್ತರಲ್ಲಿ ಓರ್ವರಾದ ಅಮಿತ್ ಜೋಷಿಯವರು. ಆದ್ದರಿಂದಲೇ ತಲೆಬರಹ 'ಅಮಿತ ಸವಾಲು' ಆಗಿದೆ. 

'ಅ'ಕಾರ ಹಾಗೂ ಅಹಂಕಾರ

ಅರಿವಿನದೊಂದು ಅಂತರಾತ್ಮ ಅಹಮಿಕೆಯನು
ಅರುಹಿತ್ತು,
ಅದನೇನೂ ಅವಗಾಹಿಸದೆ ಅಲಕ್ಷಿಸಿ ಅತ್ತಲಾಗಿಸಿ
ಅಪ್ರಚೋದಿತ ಅವಿವೇಕವನ್ನೇ ಅಂತರಾಳದ
ಅರಸಾಗಿಸಿಬಿಟ್ಟಿದ್ದೆ.

ಅಂತೂ ಅದೆಂದೋ ಅರಿವಾಯಿತು,
ಅಜ್ಞಾನ ಅಳಿದು ಅರಾಜಕತೆ, ಅಲ್ಪತನ,
ಅವಿಧೇಯತೆಗಳರ್ಥ ಅರಿತು
ಅಲ್ಪಗಳಿಂದ ಅನತಿಯಾಗಿ
ಅಭ್ಯಾಗತನಾಗುವ ಅವಕಾಶಕ್ಕೆ
ಅಭಾರಿಯಾಗಲಿದ್ದೇನೆ. ಅವಗಾಹಿಸಿರಿಲ್ಲಿ!!!

ಮಂಗಳವಾರ, ಜೂನ್ 5, 2018

ಅಲ್ಪದ ಅಮಲು

ಪುಟ್ಟಿದುದಲ್ಲಿ ವಿಶ್ವಮಾನವತೆಯ ಸೊಡರಲ್ಲಿ
ಜೋಲಾಡಿದ್ದು ಜಾತಿಯೆಂದೆಂಬ ಜೋಲಿಯಲಿ
ಪಾಲ್ಕುಡಿದಿದ್ದು ಪಾಮರರ ನೋಡಲ್ಲಿ ಎನುತಲಿ
ಓಲಾಡಿದ್ದು ಒಪ್ಪ ಓರಣಗಳೆನಿಸೊ ಮಡಿಮೈಲಿಗೆಗಳಲಿ
ಬಚ್ಚ ಬಾಯದನು ಅಚ್ಚುಮಾಡಿ ರಚ್ಚೆ ಹಿಡಿಯುತಲಿ
ಎನ್ನೆಡಬಲ ತಿರುಗಿ ನನ್ನಾಡಿಸುವರ ನಿರೀಕ್ಷಿಸುತಲಿ
ಮೋಟು ಗೋಡೆಯೊಂದನಿಡಿದು ಸೆಟೆಸೆಟೆದು
ಹೆಜ್ಜೆಯನಿಟ್ಟು ಅದು ಜಾರಿಸೆ ನಾನುರುಳಿ
ನಾನರಿವವರೆಗೂ ಜಗವೆಲ್ಲ ನನ್ನಂತೆಯೆಂದು ಬಗೆಯುತಲಿ

ಪುಟ್ಟಿದ್ದೇನಾದೊಡೇನ್ ಬೆಳೆಬೆಳೆಯುತಾ ಅಲ್ಪಿಯಾಗುತಲಿ
ಮೇಲ್ಮೇಲೆ ಪ್ರಚಲಿತ-ವಿಚಲಿತನಾಗುತಲಿ
ಅಲ್ಪದ ಅಮಲುಗಳೆಲ್ಲವ ಗುಂಡಿಗೆಗೆ ಪೇರಿಸುತಲಿ
ಕಲ್ಗುಂಡಿನಂತಿರ್ದ ಮನಃಬ್ರಹ್ಮನನು ಅಲ್ಪಿಯಾಗಿಸುತಲಿ
ಅದಾಗಿ ನಾನು ಅಲ್ಪತನದ ಅಲೆಗಿಳಿದು
ಅಲ್ಪಾವಧಿಯನೇ ಪರಮಾವಧಿಯಾಗಿಸಿ
ಅಲ್ಪದವೆಲ್ಲ ಮಹತ್ತಾಗಿ ತೋರಿ
ಮಹತ್ತಿನ ಮರ್ಯಾದೆ ಮೂರ್ಕಾಸಿಗಿಲ್ಲವಾದೊಡೂ
ಅಲ್ಪಿಯೊಳಗಭಿಮಾನ ತಳೆಯಲು ಸನ್ನಾಹವದು
ತರವೇ??

ರಮ್ಯ ವಿಕಾಸ

ಕನ್ನಡ ಪಡುವಣದ ಕಡಲ್ತೀರ

ತೆಂಕಿನ ತುಳುವರ ತಿಟ್ಟು

ಬಡಗದ ಬೇಗೆಯ ಬುಗ್ಗೆ 

ಮೂಡಣಕ್ಕಿಳೆಯಿಕ್ಕಿರುವ ಕಾಲ್ಝರಿ

ಕಣ್ಹಾಯುವ ಸೀಮಾಂತರದ

ಧರಿತ್ರಿಯ ಸೊಬಗು

ಕಾಲ್ನಿಲುಕದ ದೇಹವಣಿಯುವ

ಬಿಂಕದೊಳಾದಂತೆ ತೋರ್ಪ

ತಿಟ್ಟು ಕಣಿವೆ ಕಮರುಗಳು

ಕಿಕ್ಕಿರುದುಕ್ಕಿರುವ ಹರಿದ್ವರ್ಣದ

ನಟ್ಟನಡುವೊಳೊಂದೂರು

ಪುತ್ತೂರು!!!!  

 

ಗತದ ಚಕಿತಗಳೊಳಗೊಮ್ಮೆ

ಬರಡಿದ ಕೆರೆಯಾಳದಲಿ

ಮನುಜರು ತೇಗಿದ ದನಿಯಾನಿಸಿ

ನೀರೊಸರಿತಂತೆ !!

ಏನಿರಬಹುದಲ್ಲಿ??

ಯಃಕಶ್ಚಿತ್ ನಮ್ಮ ಹೃದಯದ

ಮಿಡಿತವರಿಯಿತೇ ಪ್ರಕೃತಿ?

ಹಾಗಿದ್ದೊಡೆ ಇದೇ

ಮಹಾಧರ್ಮಭೂಮಿ

ಮಾನವೀಯತೆ-ಪ್ರಕೃತಿ ಬೆಸೆದು

ಮಿಡಿದ ಮನುಕುಲದ

ಮಹಾ ಯಾಗ ಭೂಮಿ.


ಇತಿ ಮುತ್ತನೆತ್ತಿದ

ಸಹೃದಯದೂರೊಳೊಂದವತಾರವಾಯ್ತು

ರಮ್ಯಮನೋಹಕ ವಾಯಿತ್ತು

ತಾಳ್ಮೆಜಾಣ್ಮೆಹಿರಿಮೆ

ಬೆರೆಸಿ ತ್ರಯವಾಯ್ತು.

 ತ್ರಯ ಆಧುನಿಕತೆಗೆ

ಒಗ್ಗಿತ್ತುಇಲ್ಲೂ

ಅದೇ ಮನಮೋಹಕತೆ

ಅದೇ ವಿಕಾಸದ ಹಾದಿ

ರಮ್ಯವಲ್ಲವೇ  ವಿಕಾಸ !

 

ಬಳಿಸಾರಿದವರೊಡಗಿನವರಿಗೆ

ಇಲ್ಲವೆಂದಿಲ್ಲ,

ಸರಿಯದವರ ಸುದ್ದಿ

ಸಹವಾಸಗಳ ಗೊಡವೆಯಿಲ್ಲ,

ತಾನಾಯಿತ್ತುತನ್ನ ಕೃತಿಯಾಯಿತ್ತು.

ಮಹಾಧರ್ಮ ಭುವಿಯ

ಮಣ್ಣಿನ ಗುಣವದು.

ಮಳೆ ಬಂದು ತಾನ್

ಮಣ್ಣ ಸುಗಂಧ  ಪಸರುವುದು,

ಮಳೆಯ ಮೀರಿದ

ಗಂಧವೊಂದ ತಂದೆಸರಿದ

ಪೆಣ್ಗೇನೆಂದು ಹೆಸರಿಡಬಹುದು

ಹೆಸರೇನಾದರೇನು

ವಿಕಾಸವದು ರಮ್ಯವೇ

ಅಲ್ಲಲ್ಲ!!!

ರಮ್ಯ ವಿಕಾಸ



ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...