ಪುಟ್ಟಿದುದಲ್ಲಿ ವಿಶ್ವಮಾನವತೆಯ ಸೊಡರಲ್ಲಿ
ಜೋಲಾಡಿದ್ದು ಜಾತಿಯೆಂದೆಂಬ ಜೋಲಿಯಲಿ
ಪಾಲ್ಕುಡಿದಿದ್ದು ಪಾಮರರ ನೋಡಲ್ಲಿ ಎನುತಲಿ
ಓಲಾಡಿದ್ದು ಒಪ್ಪ ಓರಣಗಳೆನಿಸೊ ಮಡಿಮೈಲಿಗೆಗಳಲಿ
ಬಚ್ಚ ಬಾಯದನು ಅಚ್ಚುಮಾಡಿ ರಚ್ಚೆ ಹಿಡಿಯುತಲಿ
ಎನ್ನೆಡಬಲ ತಿರುಗಿ ನನ್ನಾಡಿಸುವರ ನಿರೀಕ್ಷಿಸುತಲಿ
ಮೋಟು ಗೋಡೆಯೊಂದನಿಡಿದು ಸೆಟೆಸೆಟೆದು
ಹೆಜ್ಜೆಯನಿಟ್ಟು ಅದು ಜಾರಿಸೆ ನಾನುರುಳಿ
ನಾನರಿವವರೆಗೂ ಜಗವೆಲ್ಲ ನನ್ನಂತೆಯೆಂದು ಬಗೆಯುತಲಿ
ಪುಟ್ಟಿದ್ದೇನಾದೊಡೇನ್ ಬೆಳೆಬೆಳೆಯುತಾ ಅಲ್ಪಿಯಾಗುತಲಿ
ಮೇಲ್ಮೇಲೆ ಪ್ರಚಲಿತ-ವಿಚಲಿತನಾಗುತಲಿ
ಅಲ್ಪದ ಅಮಲುಗಳೆಲ್ಲವ ಗುಂಡಿಗೆಗೆ ಪೇರಿಸುತಲಿ
ಕಲ್ಗುಂಡಿನಂತಿರ್ದ ಮನಃಬ್ರಹ್ಮನನು ಅಲ್ಪಿಯಾಗಿಸುತಲಿ
ಅದಾಗಿ ನಾನು ಅಲ್ಪತನದ ಅಲೆಗಿಳಿದು
ಅಲ್ಪಾವಧಿಯನೇ ಪರಮಾವಧಿಯಾಗಿಸಿ
ಅಲ್ಪದವೆಲ್ಲ ಮಹತ್ತಾಗಿ ತೋರಿ
ಮಹತ್ತಿನ ಮರ್ಯಾದೆ ಮೂರ್ಕಾಸಿಗಿಲ್ಲವಾದೊಡೂ
ಅಲ್ಪಿಯೊಳಗಭಿಮಾನ ತಳೆಯಲು ಸನ್ನಾಹವದು
ತರವೇ??
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ