ಸದ್ಗುರುಗಳ 'ಯೂಥ್ ಅಂಡ್ ಟ್ರುಥ್' ಕಾರ್ಯಕ್ರಮ ಸರಣಿಯ ವಿಡಿಯೋವೊಂದನ್ನು ನೋಡುತ್ತಿದ್ದೆ. ಭಾರತದ ಪ್ರತಿಷ್ಠಿತ ವಿದ್ಯಾಸಂಸ್ಥೆಯೊಂದರಲ್ಲಿ ಮಾತನಾಡುತ್ತಿದ್ದ ಸದ್ಗುರುಗಳು ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಉತ್ತರಿಸುತ್ತಾ 'ಅವರಿವರೊಡನೆ ನಿಮ್ಮ ಸಂಪತ್ತು ನಿಮಗಿರುವ ಐಹಿಕ ಭೋಗವಿಲಾಸಗಳನ್ನು ಹೋಲಿಸಿ ನೋಡಿಕೊಳ್ಳದಿರಿ. ನೀವು ಎಷ್ಟೆಷ್ಟು ಜೋರಾಗಿ ಬದುಕಿದರೂ ನಿಮಗಿಂತ ಚೆನ್ನಾಗಿ ಉಡುವರು, ನಿಮಗಿಂತ ಚೆನ್ನಾಗಿ ಉಣ್ಣುವರು, ನಿಮಗಿಂತ ಚೆನ್ನಾಗಿ ಬದುಕಿ ಬಾಳಿದವರು ಯಾರಾದರೂ ಒಬ್ಬರು ಇದ್ದೇ ಇರುತ್ತಾರೆ. ಆದ್ದರಿಂದ ಮುಗಿಯದ ಕಥನದಂತಿರುವ ಹೋಲಿಕೆಯ ಚಾಳಿಯನ್ನು ತೊರೆದು ಬದುಕಿನಲ್ಲಿ ಏನಾದರೂ ಹೊಸದೊಂದನ್ನು ಸೃಷ್ಟಿಸುವ ಕಡೆ ಮನಸ್ಸು ಮಾಡಿ' ಎನ್ನುತ್ತಿದ್ದರು ಆ ಸಭಾ ಭವನದಲ್ಲಿ ಕರತಾಡನದ ಸುರಿಮಳೆಯಾಗುತ್ತಿತ್ತು. ಸಾವಿರಾರು ವರ್ಷಗಳಿಂದ ಪ್ರಪಂಚಕ್ಕೆ ಈ ದೇಶ ಭೋದಿಸಿದ ತತ್ತ್ವವನ್ನೇ ಗುರುಗಳೊಬ್ಬರ ಬಾಯಿಂದ ಕೇಳಿ ಕರತಾಡನದ ಸುರಿಮಳೆಗೈದ ಆಧುನಿಕ ಪ್ರಜೆಗಳ ಬುದ್ಧಿಮತ್ತೆ ಇನ್ನೂ ಗ್ರೀನ್ ವಿಚ್ ಸಮಯ ರೇಖೆಯಲ್ಲಿಯೇ ಉಳಿದುಹೋಗಿರುವುದನ್ನು ಸದ್ಗುರುಗಳೇ ಆಗಾಗ ಬೆದಕುತ್ತಿರುತ್ತಾರೆ. ಈಗದೆಲ್ಲ ಒತ್ತಟ್ಟಿಗಿಟ್ಟು ಇರುವ ಬದುಕಿನಲ್ಲಿ ಹೊಸದೊಂದು ಸೃಷ್ಟಿಸಹೊರಟ ಸಾಹಸಗಾರರೇ ಇಂದಿನ ಲೇಖನದ ಮೂಲವಸ್ತು.
'ಸರ್ಕಾರಿ ಕೆಲಸ' ಈ ಪದ ಕೇಳಿಸಿದ ತಕ್ಷಣ ನಿಮ್ಮ ತಲೆಗೆ ಹೊಳೆಯುವುದೇನು?. ಜಾಬ್ ಸೆಕ್ಯೂರಿಟಿ, ಹೆಚ್ಚು ಸರ್ಕಾರಿ ರಜೆಗಳು, ತಿಂಗಳಾಗುತ್ತಿದ್ದಂತೆ ತಪ್ಪದೆ ಬಂದು ಬೀಳುವ ಪಗಾರ, ಸಾಮಾಜಿಕ ಜೀವನದಲ್ಲಿ ವಿಶೇಷ ಗೌರವ, ನಿವೃತ್ತಿ ಯೋಜನೆಗಳು ಮುಂತಾದವು ಅಲ್ಲವೇ?. ಈ ಕಾರಣಗಳಿಗಾಗಾಗಿಯೇ ಸರ್ಕಾರಿ ಕೆಲಸಗಳಿಗೆ ಇನ್ನಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ಐಟಿ - ಬಿಟಿ ಕ್ಷೇತ್ರ ಇದೀಗ ಬೃಹದಾಕಾರವಾಗಿ ಬೆಳೆದು ಆಧುನಿಕ ಕಾಲಘಟ್ಟದಲ್ಲಿ ಭಾರತದ ಸೀಮಾರೇಖೆಯೊಳಗೂ ಹೊರಗೂ ಭಾರಿ ಉದ್ಯೋಗಾವಕಾಶಗಳು ಸೃಷ್ಟಿಯಾಗುವಂತೆ ನೋಡಿಕೊಳ್ಳುತ್ತಿದೆ. ಆದಾಗ್ಯೂ ಮುಂದೊಂದು ದಿನ ಜಾಗತೀಕ ಹಣಕಾಸು ಬಿಕ್ಕಟ್ಟು ಉಂಟಾದರೆ ಕಂಪನಿಗಳಿಂದ ನೌಕರರನ್ನು ನಿರ್ದಾಕ್ಷಿಣ್ಯವಾಗಿ ಕಿತ್ತೊಗೆಯುವರೆಂಬ ಸೂಕ್ಷ್ಮ ಜಾಗೃತಿ ಆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸರ್ವರಲ್ಲೂ ಇದೆ. ಇಂತಿರುವ ಕಾಲಘಟ್ಟದಲ್ಲಿ ಸರ್ಕಾರಿ ಕೆಲಸಗಳಿಗೆ ಬೇಡಿಕೆ ಸೃಷ್ಟಿಯಾಗುವುದು ಅತಿಶಯೋಕ್ತಿಯೇನಲ್ಲ ಬಿಡಿ. ಇಂತಿದ್ದ ದಿನಮಾನದಲ್ಲಿ ವ್ಯಕ್ತಿಯೊಬ್ಬ ತನಗೆ ದೊರಕಿದ್ದ ಅತ್ಯುನ್ನತ ಸ್ತರದ ಸರ್ಕಾರಿ ಹುದ್ದೆ ತೊರೆದು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಎಂದರೇನು?. ಅದಷ್ಟನ್ನು ಮಾಡಲು ಅವನಲ್ಲಿದ್ದ ಇಚ್ಛಾಶಕ್ತಿ ಇನ್ನೆಷ್ಟರ ಮಟ್ಟಿಗೆ ಅವನ್ನನು ಪ್ರೇರೇಪಿಸರಬೇಕು?. ತಮಾಷೆಯಲ್ಲವೇ ಅಲ್ಲ. ಇಲ್ಲೊಮ್ಮೆ ಓದಿ.
ರೋಮನ್ ಸೈನಿ
ಹುಟ್ಟಿದ್ದು ರಾಜಸ್ಥಾನದ ಜೈಪುರದ ಬಳಿಯ ಚಿಕ್ಕ ಪಟ್ಟಣವೊಂದರಲ್ಲಿ. ಹದಿನಾರನೇ ವಯಸ್ಸಿಗೆ ದೆಹಲಿಯ ಪ್ರತಿಷ್ಠಿತ ವೈದ್ಯಕೀಯ ಶಿಕ್ಷಣ ಸಂಸ್ಥೆಯಾದ ಏಮ್ಸ್ ನಡೆಸುವ ಪ್ರವೇಶ ಪರೀಕ್ಷೆಗಳನ್ನು ಪಾಸು ಮಾಡಿ ವೈದ್ಯಕೀಯ ಶಿಕ್ಷಣಕ್ಕೆ ಸೇರುತ್ತಾರೆ. ಮುಂದೆ ನಾಗರೀಕ ಸೇವೆಯ ಗೀಳಿಗೆ ಬಿದ್ದ ಇದೇ ಸೈನಿ ಭಾರೀ ಮುಂಜಾಗರೂಕ ಹೆಜ್ಜೆಗಳನ್ನಿಡುವುದರ ಜೊತೆಗೆ ಮೊದಲನೇ ಬಾರಿ ನಾಗರೀಕ ಸೇವಾ ಪರೀಕ್ಷೆಗಳನ್ನು ಬರೆದು ಇಡೀ ದೇಶಕ್ಕೆ ಹದಿನೆಂಟನೇ ರ್ಯಾಂಕ್ ಪಡೆಯುತ್ತಾರೆ. ಮುಂದೆ ಹಿಮಾಚಲ ಪ್ರದೇಶದ ಮಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತಾತ್ಮಕ ಅಕಾಡೆಮಿಯಲ್ಲಿ ತರಬೇತಿ ಪಡೆದು ಐ ಏ ಎಸ್ ಅಧಿಕಾರಿಯಾಗಿ ಮಧ್ಯಪ್ರದೇಶಕ್ಕೆ ನೇಮಕಗೊಳ್ಳುತ್ತಾರೆ. ಅಧೀಕೃತ ನೇಮಕಾತಿಯಾಗುವಷ್ಟರಲ್ಲಿಯೇ ತಮ್ಮ ಕೆಲಸಕ್ಕೆ ರಾಜೀನಾಮೆ ಕೊಡುವ ಯೋಚನೆ ಮಾಡುವ ರೋಮನ್ ಸೈನಿ ಮುಂದೆ ಯುಪಿಎಸ್ ಸಿ ಪರೀಕ್ಷೆಗಳಿಗೆ ಹಾಗು ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲಿಚ್ಛಿಸುವ ಅಭ್ಯರ್ಥಿಗಳಿಗೆ ಮಾರ್ಗದರ್ಶನ ಮಾಡುವ ಮಹತ್ತರ ಕಾರ್ಯವೊಂದಕ್ಕೆ ನಾಂದಿ ಹಾಡುತ್ತಾರೆ. ದೇಶದ ಎಷ್ಟೋ ಪದವೀಧರರು ಐಏಎಸ್ ಕನಸು ಕಂಡು ಹಗಲು ರಾತ್ರಿ ಕಷ್ಟ ಪಟ್ಟು ಕೊನೆಗೆ ಕೆಲಸ ಹಿಡಿದವರನ್ನು ಕಂಡಿದ್ದೇವೆ. ಇಲ್ಲವೇ ಅದೇ ಕನಸಿನಲ್ಲಿ ತಮ್ಮ ಜೀವನದ ಭವಿಷ್ಯತ್ತನ್ನು ಲೀಲಾಜಾಲವಾಗಿ ಕಮರಿಸಿಕೊಂಡ ಉದಾಹರಣೆಗಳನ್ನೂ ಕಂಡಿದ್ದೇವೆ. ಆದರೆ ಇದೇನಿದು? ಸಿಕ್ಕಿರುವ ಐಏಎಸ್ ಅಧಿಕಾರವನ್ನು ತ್ಯಜಿಸುವುದು ಎಂದರೇನು. ಅದರರ್ಥ ಆ ಅಧಿಕಾರವನ್ನೂ ಮೀರಿಸುವ ಬಹು ಛಾಪಿನ ಕನಸು ಅಲ್ಲಿ ಮೊಳೆತಿತ್ತು ಎಂಬುದೇ?. ಅದೇ ನಿಜವೆನ್ನಿ.
ನಾಗರೀಕ ಸೇವೆಯ ಅಥವಾ ಇನ್ನಾವುದೇ ಸರ್ಕಾರಿ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಅಭ್ಯರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ಸಿಗುತ್ತಿಲ್ಲದಿರುವುದು ಹಾಗು ಸಮರ್ಥ ಮಾರ್ಗದರ್ಶಕರಿದ್ದರೂ ಅವರು ತಮ್ಮ ಮಾರ್ಗದರ್ಶನ ಸೌಲಭ್ಯವನ್ನು ಕೋಚಿಂಗ್ ಇನ್ಸ್ಟಿಟ್ಯೂಟ್ಗಳ ಮುಖಾಂತರ ಹೆಚ್ಚಿನ ಹಣಕ್ಕೆ ಮಾರಿಕೊಳ್ಳುತ್ತಿದ್ದು ಉಳ್ಳವರ ಪಾಲಿಗೆ ಮಾಮೂಲಿ ಸಂಗತಿಯಾಗಿದ್ದರೆ ಇಲ್ಲದವರ ಪಾಲಿಗೆ ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತಾಗಿತ್ತು. ಸೈನಿಯವರ ಪಾಲಿಗೂ ಅದು ಕಸಿವಿಸಿಗೊಳ್ಳುವ ವಿಚಾರವೇ ಆಗಿದ್ದರೂ ಉಳ್ಳವರು ಕೋಚಿಂಗ್ ಪಡೆದು ದೇಶದ ಆಡಳಿತಾತ್ಮಕ ಅಧಿಕಾರದ ಚುಕ್ಕಾಣಿ ಹಿಡಿದರೆ ಇಲ್ಲದಿರುವರು ಇಲ್ಲದಿರುವರಾಗಿಯೇ ಉಳಿಯುವ ವಿಚಾರ ಅವರನ್ನು ಇನ್ನಷ್ಟು ಜಾಗೃತ ಸ್ಥಿತಿಗೆ ತಲುಪಿಸಿತ್ತು. ಆ ಜಾಗೃತಿ ಎಷ್ಟರ ಮಟ್ಟಿಗೆ ಎಂದರೆ ಸ್ವತಃ ತಮಗೆ ಸಿಕ್ಕ ಐಏಎಸ್ ಉದ್ಯೋಗವನ್ನು ತ್ಯಜಿಸಿ ಬೆಂಗಳೂರಿಗೆ ಬಂದು ಅನ್ ಅಕಾಡೆಮಿ ಎಂಬ ಸಂಸ್ಥೆಯನ್ನು ತೆರೆದು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿರುವ ಅಭ್ಯರ್ಥಿಗಳಿಗೆ ಉಚಿತವಾಗಿಯೇ ಮಾರ್ಗದರ್ಶನ ನೀಡುವ ಕಾಯಕಕ್ಕೆ ಟೊಂಕ ಕಟ್ಟಿ ನಿಂತರು. ಅಭ್ಯರ್ಥಿಗಳಿಗೆ ಆನ್ಲೈನ್ ನಲ್ಲಿ ಉಚಿತವಾಗಿ ಮಾರ್ಗದರ್ಶನ ಕೊಡಲು ನಿಂತರು. ಅಷ್ಟೇ ಅಲ್ಲ ಮನಸ್ಸಿದ್ದವರು ದಾನ ಮಾಡಿ ಎಂಬ ಘೋಷಣೆ ಹೊರಡಿಸಿ ಸಂಸ್ಥೆಯ ಜೋಳಿಗೆ ಗಟ್ಟಿಯಾಗಿರುವತೆ ನೋಡಿಕೊಂಡರು. ತಮ್ಮ ಕಣ್ಣಿಗೆ ಕಂಡ ಸಮಕಾಲೀನ ಜ್ಞಾನಿಗಳೆಲ್ಲರನ್ನೂ ಕರೆತಂದರು. ಅವರ ಶೆಕ್ಷಣಿಕ ಮೂಲ, ಆರ್ಥಿಕ ಹಿನ್ನೆಲೆ, ಭಾಷೆಯ ಹಂಗು ಎಲ್ಲವನ್ನೂ ಮಗ್ಗುಲಿಗೆ ಸರಿಸಿ ಕಲಿಯಲು ಹಾಗು ಕಲಿಸಲು ಹಂಬಲವಿದ್ದವರಿಗೆ ಅನ್ಅಕಾಡೆಮಿಯ ಬಾಗಿಲನ್ನು ಸದಾ ತೆರೆದಿಟ್ಟರು ರೋಮನ್ ಸೈನಿ.
ಅವರೊಬ್ಬರೇ ಅಲ್ಲ, ಅವರೊಂದಿಗಿನ ಇತರ ಅನ್ ಅಕಾಡೆಮಿಯ ಮಾರ್ಗದರ್ಶಕರನ್ನು ಸರಿಸುಮಾರು ಕರೆತಂದಿರುವರು ಇವರೇ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಸಿಕ್ಕ ಶಿವಪ್ರಸಾದ್, ತನ್ನದೇ ಮಾರ್ಗದರ್ಶನದಲ್ಲಿ ಯುಪಿಎಸ್ಸಿ ಪರೀಕ್ಷೆ ಎದುರಿಸಿದ್ದ ಅರ್ಪಿತಾ ಶರ್ಮಾ ಇನ್ನು ಹೀಗೆ ಮುಂತಾಗಿ ಯಾರು ಎಲ್ಲೆಲ್ಲಿ ಸಿಕ್ಕರೂ ಅವರನ್ನೆಲ್ಲ ಕೇಳಿ ಕರೆತಂದು ಅನ್ ಅಕಾಡೆಮಿಯಲ್ಲಿ ಮಾರ್ಗದರ್ಶಕರನ್ನಾಗಿಸಿ ತಾನು ಸಹಭಾಗಿಯಾಗಿ ಕಟ್ಟಿದ ಸಂಸ್ಥೆಗೆ ಬೆನ್ನೆಲುಬಾಗಿ ನಿಂತು ತನ್ಮೂಲಕ ಅನ್ಅಕಾಡೆಮಿ ಯನ್ನು ದೇಶದ ಅತೀ ದೊಡ್ಡ 'ಕಲಿಯುವರ ಚಾವಡಿ' ಯಾಗಿಸಬೇಕೆನ್ನುವ ಕನಸನ್ನು ನನಸು ಮಾಡಿಕೊಂಡಿದ್ದಾರೆ.
ಸೈನಿಯವರ ಈ ಹೊಸ ಚಾವಡಿಯ ಜಾಹಿರಾತಿಗೆ ಕಷ್ಟವೇನು ಆಗಲಿಲ್ಲ. ಮಾರ್ಗದರ್ಶಕರು ಅಪಾರ ಹಿಂಬಾಲಕರನ್ನು ಹೊಂದಿದ್ದರಿಂದ ವೈಯಕ್ತಿಕವಾಗಿಯೂ ವಿಷಯ ಪಸರಿಸಿರಬಹುದು. ಅದನ್ನು ಮೀರಿ ಈ ಚಾವಡಿಗೆಂತಲೇ ಕೋರಾ, ಫೇಸ್ಬುಕ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳಲ್ಲಿ ಸೈನಿಯವರು ಲೇಖನ ಬರೆದು ಪ್ರಕಟಗೊಳಿಸಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳ ದೃಷ್ಟಿಯಿಂದ ಅದರಲ್ಲೂ ಮುಖ್ಯವಾಗಿ ಯುಪಿಎಸ್ಸಿ ಪರೀಕ್ಷೆಯ ದೃಷ್ಟಿಯಿಂದ ಅನ್ಅಕಾಡೆಮಿ ಇಂದು ಎಲ್ಲವನ್ನೂ ಒಳಗೊಂಡಿದೆ. ದಿನ ನಿತ್ಯದ ಪತ್ರಿಕೆ ವಾಚನ, ಪ್ರಿಲಿಮಿನರಿ ಪರೀಕ್ಷೆಗಳಿಗೆ ತಯಾರಿಯಾಗುವ ಬಗೆ, ಮುಖ್ಯ ಪರೀಕ್ಷೆಗಳಿಗೆ ಉತ್ತರಿಸುವ ಬಗೆ, ಉತ್ತರಿಸಲು ಅವಶ್ಯವಾದ ಜ್ಞಾನ, ಕೊನೆಯಲ್ಲಿ ಸಂದರ್ಶನದ ಸಮಯದಲ್ಲಿ ನಡೆದುಕೊಳ್ಳಬೇಕಿರುವ ರೀತಿ, ಇವೆಲ್ಲ ಮಜಲುಗಳಲ್ಲಿಯೂ ಇರಬೇಕಾದ ಆತ್ಮ ಶ್ರದ್ಧೆ, ಪರಿಶ್ರಮ ಹೀಗೆ ಮುಂತಾಗಿ ಎಲ್ಲದರ ಬಗೆಗೂ ಅನ್ ಅಕಾಡೆಮಿಯಲ್ಲಿ ಕೋರ್ಸುಗಳಿವೆ. ಸಾವಿರಾರು ಅಭ್ಯರ್ಥಿಗಳು ಈ ಚಾವಡಿಯ ಪ್ರಯೋಜನ ಪಡೆಯುತ್ತಿದ್ದಾರೆ.ಜಾಲ ತಾಣದ ಸೌಲಭ್ಯವಿದ್ದರೆ ಸಾಕು ಆ ಅಭ್ಯರ್ಥಿಗಳು ನಿಸ್ಸಂಕೋಚವಾಗಿ, ನಿರ್ಭಯವಾಗಿ ಅನ್ಅಕಾಡೆಮಿಯನ್ನು ಬಳಸಿ ತಯಾರಿ ಆರಂಭಿಸಬಹುದು. ಮೊಬೈಲ್ ಬಳಕೆದಾರಿಗೆ ಅನುಕೊಲವಾಗುವಂತೆ ಮೊಬೈಲ್ ಅಪ್ಲಿಕೇಶನ್ ಕೂಡ ಲಭ್ಯವಿದ್ದು ಅದರಲ್ಲಿ ವಿಡಿಯೊಗಳನ್ನು ಡೌನ್ಲೋಡ್ ಮಾಡಿಕೊಳ್ಳುವ ಅವಕಾಶವನ್ನು ಒದಗಿಸಲಾಗಿದೆ. ಅನ್ಅಕಾಡೆಮಿಯ ಹಲವಾರು ವಿಡಿಯೋಗಳು ಯೌಟ್ಯೂಬ್ ನಲ್ಲೂ ಲಭ್ಯವಿದ್ದು ಅಲ್ಲಿಯೂ ಆಸಕ್ತರೂ ಕಲಿಯಬಹುದು.
ಇಂದು ಅನ್ಅಕಾಡೆಮಿ ದೇಶದ ಪ್ರತಿಷ್ಠಿತ ಕಲಿಕಾ ಕೇಂದ್ರವಾಗಿ, ಅತೀ ಹೆಚ್ಚು ಅಭ್ಯರ್ಥಿಗಳು ಕಲಿಯುತ್ತಿರುವ ತಾಣವಾಗಿ ಮಾರ್ಪಟ್ಟಿದೆ. ರೋಮನ್ ಸೈನಿಯವರ ಈ ಸಾಧನೆಯನ್ನು ಮನಗಂಡ ಅಂತಾರಾಷ್ಟ್ರೀಯ ವೇದಿಕೆಗಳು ಕೂಡ ರೋಮನ್ ಸೈನಿಯವರನ್ನು ಗುರುತಿಸಿವೆ. ಇತ್ತೀಚಿಗಿನ ಫೋರ್ಬ್ಸ್ ನಿಯತಕಾಲಿಕೆಯಲ್ಲಿ ರೋಮನ್ ಸೈನಿಯವರ ಹೆಸರು ಪಟ್ಟಿಯಲ್ಲಿರುವುದು ಸಂತೋಷದಾಯಕ ವಿಚಾರವಷ್ಟೇ ಅಲ್ಲ ಅವರ ಪರಿಶ್ರಮಕ್ಕೆ ಸಂದ ಗೌರವ. ಇದು ಯಾವುದೋ ಸಿನಿಮೀಯ ಕಥಾನಕವಲ್ಲ ಬದಲಾಗಿ ಆಯಕಟ್ಟಿನ ಸರ್ಕಾರಿ ಅಧಿಕಾರದಲ್ಲಿದ್ದಾಗ್ಯೂ ಅವುಗಳನ್ನು ತೊರೆದು ತನ್ನ ಸೇವೆಯ ಸೀಮಾ ರೇಖೆಗಳನ್ನು ಮುರಿದು ಮುನ್ನುಗ್ಗುತ್ತಿರುವ ಅಪಾರ ಕನಸುಗಳನ್ನು ಹೊತ್ತ ನಮ್ಮ 'ಸಮಕಾಲೀನ ಸಾಧಕನ' ನಿಜ ಜೀವನದ ಹೂರಣ.
ಆಕರಗಳು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ