ಐನ್ಸ್ಟೀನ್ ನಮ್ಮ ಪ್ರಪಂಚ ಕಂಡ ಅತಿ ದೊಡ್ಡ ವಿಜ್ಞಾನಿ. ಆತ ಶಕ್ತಿಯ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಿ ಕಟ್ಟ ಕಡೆಗೆ 'ಶಕ್ತಿಯನ್ನು ಸೃಷ್ಟಿಸುವುದಕ್ಕಾಗಲಿ, ನಾಶಪಡಿಸುವುದಕ್ಕಾಗಲಿ ಸಾಧ್ಯವಿಲ್ಲ' (ಎನರ್ಜಿ ಕ್ಯಾನ್ ನೈದರ್ ಬಿ ಕ್ರಿಯೇಟೆಡ್, ನಾರ್ ಡೆಸ್ಟ್ರಾಯೆಡ್ - Energy can neither be created nor destroyed) ಎಂದು ಉಧ್ಘರಿಸಿದ. ಅದು ವೈಜ್ಞಾನಿಕ ರಂಗದಲ್ಲಿ ಮಹಾ ಸತ್ಯವಾಗಿ ಗೋಚರಿಸಿತು, ಅಷ್ಟೇ ಅಲ್ಲ ಅದನ್ನು ಸುಳ್ಳೆಂದು ಸಾಬೀತುಮಾಡಲು ಯತ್ನಿಸಿದ ಇನ್ನಿತರರ ಪ್ರಯೋಗಗಳು ಫಲ ಕೊಡಲಿಲ್ಲ. ಹೇಗೆ ಶಕ್ತಿಯನ್ನು ಉತ್ಪತ್ತಿ ಮಾಡಲಾಗಲಿ, ನಾಶ ಮಾಡುವುದಕ್ಕಾಗಲಿ ಸಾಧ್ಯವಿಲ್ಲವೋ ಥೇಟ್ ಹಾಗೆಯೇ ನಿಮ್ಮಲ್ಲಿ ಅಂತರ್ಗತವಾಗಿರುವ ಪ್ರೀತಿಯನ್ನು ನಾಶ ಮಾಡುವುದಕ್ಕಾಗಲಿ ಅಥವಾ ಮತ್ತಷ್ಟು ಹೆಚ್ಚು ಮಾಡುವುದಕ್ಕಾಗಲಿ ಸಾಧ್ಯವಿಲ್ಲ. ನಿಮ್ಮಲ್ಲಿ ಈಗಾಗಲೇ ಇರುವಷ್ಟೇ ಪ್ರೀತಿಯನ್ನು ನೀವು ನಿಮ್ಮ ಜೀವನದ ವಿವಿಧ ಕಾಲ ಘಟ್ಟಗಳಲ್ಲಿ ಬೇರೆ ಬೇರೆಯವರಿಗೆ ಹಂಚುತ್ತಾ ಸಾಗುತ್ತೀರಿ ಅಷ್ಟೇ. ಅರ್ಥಾತ್ ನಿಮ್ಮಲ್ಲಿರುವ ಪ್ರೇಮ ಪಲ್ಲಟಗೊಳ್ಳುತ್ತಾ ಸಾಗುತ್ತದೆಯೇ ಹೊರತು ಹೆಚ್ಚು-ಕಡಿಮೆಗಳಾಗುತ್ತಾ ಸಾಗಲಾರದು ಎನ್ನುವುದೇ ನನ್ನ ಬಲವಾದ ನಂಬುಗೆ.
ಮಗುವೊಂದು ಜನಿಸಿದಾಗ ತನ್ನ ತಾಯಿಯ ಪ್ರೇಮದೊಳಗೆ ಸಿಲುಕಿಕೊಳ್ಳುತ್ತದೆ, ಅದು ಎಷ್ಟರ ಮಟ್ಟಿಗೆ ಎಂದರೆ ಜನಿಸಿದಂದಿನಿಂದ ಕೆಲವು ತಿಂಗಳುಗಳ ಕಾಲ ಆಕೆಯನ್ನು ಬಿಟ್ಟು ಕ್ಷಣಕಾಲವೂ ಇರಲಾರದಷ್ಟು, ಅಂದರೆ ತನ್ನ ಹೃದಯದಲ್ಲಿದ್ದ ಅಷ್ಟೂ ಪ್ರೀತಿಯನ್ನು ಅದು ತಾಯಿಯೊಡನೆ ಹಂಚಿಕೊಳ್ಳುತ್ತದೆ. ಕೆಲವು ತಿಂಗಳುಗಳುರುಳಿದ ತರುವಾಯೂ ತಂದೆಯನ್ನು, ತಾನು ದಿನ ನಿತ್ಯ ಕಾಣುವವರನ್ನು ಹಚ್ಚಿಕೊಳ್ಳುವ ಮಗು ತನ್ನಲ್ಲಿದ್ದ ಪ್ರೀತಿಯಷ್ಟರಲ್ಲೇ ಒಂದು ಪಾಲನ್ನು ಅವರಿಗೂ ಕೊಡುತ್ತಾ ಸಾಗುತ್ತದೆ, ಆಗ ತಾಯಿಯ ಮೇಲಿನ ಸೆಳೆತ ಕಡಿಮೆಯಾಗಿ ಇನ್ನಿತರೆಡೆಗೂ ಸೇರಿಕೊಳ್ಳುವುದನ್ನು ಕಲಿಯುತ್ತದೆ. ಅದೇ ಮಗು ಬೆಳೆದು ಶಾಲೆ ಸೇರಿಕೊಂಡಾಗ ಈಗಾಗಲೇ ತಾನು ಹಂಚಿದ್ದ ಪ್ರೀತಿಯಲ್ಲಿ ಒಂದೊಂದು ಪಾಲು ತೆಗೆದು ತನ್ನ ಗೆಳೆಯರ ಬಳಗಕ್ಕೂ ಹಂಚುತ್ತಾ ಸಾಗುತ್ತದೆ. ಮುಂದೆ ಪ್ರೀತಿ-ಪ್ರೇಮ, ಮದುವೆ, ಮಕ್ಕಳು ಎಲ್ಲರೊಂದಿಗೂ ಹಂಚಿಕೊಳ್ಳುವುದು ಅಷ್ಟೇ ಪ್ರೀತಿಯನ್ನೇ. ಅಂದರೆ ಒಂದು ಕಡೆ ಇರುವ ಪ್ರೀತಿಯನ್ನು ಕಿತ್ತು ಮತ್ತಿನ್ನೊಂದು ಕಡೆ ಬಂಡವಾಳವನ್ನಾಗಿ ಮಾಡಿಕೊಳ್ಳುತ್ತಾ ಸಾಗುವುದು ನಮ್ಮ ಜೀವನದ ಒಂದು ರಿವಾಜು.
ಮಕ್ಕಳಾದ ಮೇಲೆ ತಮ್ಮ ಮೇಲೆ ಪ್ರೀತಿ ಕಡಿಮೆ ಯಾಯಿತು ಎನ್ನುವ ಗಂಡ-ಹೆಂಡತಿಯರು, ಮದುವೆಯಾದ ಮೇಲೆ ಮಗನಿಗೆ ನಮ್ಮ ಮೇಲೆ ಪ್ರೀತಿ ಕಡಿಮೆಯಾಯಿತು ಎನ್ನುವ ತಂದೆ-ತಾಯಿಗಳನ್ನು ನಾವು ನೋಡುವಾಗ ನಾವು ಪರೋಕ್ಷವಾಗಿ ನೋಡುವುದು ಈ ಪ್ರೇಮ ಪಲ್ಲಟವನ್ನೇ.
ಪ್ರೇಮ ಮಧುರ ನಿಜ, ಅಮರವೂ ನಿಜ. ಆದರೆ ಒಬ್ಬ ವ್ಯಕ್ತಿಯೊಂದಿಗೆ ಅಲ್ಲ. ಮದುವೆಯಾದ ಹೊಸದರಲ್ಲಿ ಅತ್ಯಂತ ಆಪ್ತತೆಯಿಂದ ಇರುವ ಗಂಡ ಹೆಂಡತಿಯರು ದಿನ ಕಳೆದಂತೆ ಸಾಮಾನ್ಯವಾಗಿರುವುದಿಲ್ಲವೇ?. ಪ್ರೀತಿಯೇನೋ ಅಮರ ಅದು ಒಬ್ಬ ವ್ಯಕ್ತಿಯ ಜೊತೆಗೆ ಮಾತ್ರವಲ್ಲ, ಬದಲಾಗಿ ವಸ್ತುತಃ ಪ್ರೀತಿ ಅಮರ ಎನ್ನುವ ಸತ್ಯ ನಮ್ಮಲ್ಲಿ ಅನೇಕರಿಗೆ ರುಚಿಸದಾಗದೇನೋ!.
-o-
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ