ಈಚೀಚಿಗೆ ಕನ್ನಡದ ಹೆಸರಾಂತ ನಾಟಕಕಾರರೊಬ್ಬರು ತೀರಿಕೊಂಡರು. ರಂಗದ ಮೇಲೆ ಅವರು ಮಾಡಿದ ಪ್ರಯೋಗಗಳು ಸಾಮಾಜಿಕ ಬದಲಾವಣೆಗಳನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದವು. ಅದರಲ್ಲೂ ಭಾರತದ ಅತಿ ದೊಡ್ಡ ಸಾಮಾಜಿಕ ಪಿಡುಗುಗಳ ಕುರಿತು ಅವರ ಕಠೋರ ನಿಲುವು, ಅವು ಅವರ ನಾಟಕಗಳಲ್ಲೂ ಅಭಿವ್ಯಕತವಾಗುತ್ತಿದ್ದ ರೀತಿ ಅನೇಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಆ ಕಾರಣದಿಂದಲೇ ನಾಟಕವಲ್ಲದ ಇತರ ಚರ್ಚಾ ವೇದಿಕೆಗಳಲ್ಲಿ ಅವರು ಭಾಗವಹಿಸಿ ಮಾತನಾಡುತ್ತಿದ್ದರೆ ಜನ ಓಗೊಟ್ಟು ಕೇಳುತ್ತಿದ್ದರು. ಜನ ತಮ್ಮ ಮಾತುಗಳನ್ನು ತದೇಕಚಿತ್ತದಿಂದ ಆಲಿಸುತ್ತಿದ್ದಾರೆ ಎಂಬ ಅರಿವು ಉಂಟಾದ ತಕ್ಷಣ ಅನೇಕರು ಉಬ್ಬಿಹೋಗಿ ವಿವಾದಿತ ಹೇಳಿಕೆಗಳನ್ನು ಕೊಟ್ಟು ಅವಮಾನಕ್ಕೀಡಾಗಿರುವುದನ್ನು ನಾವೆಲ್ಲಾ ನೋಡುತ್ತಲೇ ಇದ್ದೇವೆ. ಇವರ ವಿಚಾರದಲ್ಲೂ ಹಾಗೆಯೇ ನಡೆಯಿತೆನ್ನಿ. ಆರಂಭದಲ್ಲಿ ರಾಜಕಾರಣಿಗಳನ್ನು, ಸಿನೆಮಾ ನಟರನ್ನು ಏಕವಚನದಲ್ಲಿ ಸಂಭೋದಿಸುತ್ತಾ ಹರಟುತ್ತಿದ್ದ ಇವರು ಮಧ್ಯೆ ಮಧ್ಯೆ ..ಳೆ ಮಗ, ಮುಂ.. ಮಗ ಎನ್ನುವುದಕ್ಕೆ ಎಂದೂ ಮರೆಯುತ್ತಿರಲಿಲ್ಲ. ಹೀಗೆ ವಿಚಾರ ವೇದಿಕೆಯೊಂದರಲ್ಲಿ ಅವರು ಮಾತನಾಡುತ್ತಿದ್ದ ಭರದಲ್ಲಿ ಜಾತಿಯ ಬಗ್ಗೆ ಮಾತೊಂದು ಬಂತು, ಜಾತಿಯನ್ನು ದೂಷಿಸುವ ಭರದಲ್ಲಿ 'ನಮ್ಮ ಕರ್ನಾಟಕದಲ್ಲೊಂದು ಜಾತಿಯಿದೆ ಅದರಲ್ಲಿ ದನ ಕಾಯುತ್ತಿದ್ದವರೆಲ್ಲ ಪಾಠ ಮಾಡಲು ಬರುತ್ತಾರೆ' ಎಂದು ಲೇವಡಿ ಮಾಡಿಬಿಟ್ಟರು. ನೇರಾ ನೇರವಾಗಿ ಅಲ್ಲದಿದ್ದರೂ ವಚನಕಾರರಿಗೆ ಅದನ್ನು ಹೇಳಿದ್ದು ಎನ್ನುವುದು ಅತ್ಯಂತ ಗೌಪ್ಯವಾಗಿ ಏನಿರಲಿಲ್ಲ. ಅಲ್ಲಿದ್ದವರಿಗೆ ಆಗ್ಗೆ ಇದು ಅರ್ಥವಾಯಿತೋ, ಇಲ್ಲವೋ ಗೊತ್ತಿಲ್ಲ. ಆದರೆ ಆ ವಿಡಿಯೋ ತುಣುಕು ಕರ್ನಾಟಕದಾದ್ಯಂತ ಹರಿದಾಡಿತು, ಯಾರೇನು ಅದರ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳಲಿಲ್ಲ, ಕ್ರಮೇಣ ಅದು ಜನರ ಸ್ಮೃತಿಪಟಲದಿಂದ ಮಾಯವಾಯ್ತು.
ಸನಾತನ ಧರ್ಮ ತತ್ವ, ಧಾರ್ಮಿಕ ಆಚಾರ ವಿಚಾರಗಳು ಸಂಸ್ಕೃತದಲ್ಲಿ ಮಾತ್ರ ದೊರಕುತ್ತಿದ್ದ ಕಾಲದಲ್ಲಿ ಸ್ಥಳೀಯ ಜನರ ಭಾಷೆಯಾದ ಕನ್ನಡದಲ್ಲೇ ಜೀವನ ಸಾರವನ್ನು, ಜೀವನದಲ್ಲಿ ಕಾಣಬೇಕಾದ ಶಿವಪಥವನ್ನು ಪ್ರಪಂಚದ ಇನ್ಯಾವ ಸಾಹಿತ್ಯವೂ ಹಿಂದೆ ಸಾರಿರದಿದ್ದ ರೀತಿಯಲ್ಲಿ ಸಾರಿ ಹೇಳಿದವರು ಕರ್ನಾಟಕದ ಶರಣರು. ವಚನ ಸಾಹಿತ್ಯ, ದಾಸ ಸಾಹಿತ್ಯ ಕನ್ನಡ ಭಾಷೆಗೆ ಇಂದಿಗೂ ವಿಶೇಷ ಮೆರುಗು ನೀಡುತ್ತಿರುವುದು ನಾವೆಲ್ಲಾ ಕಾಣುತ್ತಿರುವ ವಿದ್ಯಮಾನವೇ. ಆದರೂ ನಮ್ಮ ಆ ನಾಟಕಕಾರರಿಗೆ ಬುದ್ಧಿ ಜೀವಿ ಎಂದು ಕರೆಸಿಕೊಳ್ಳುವ ಹಂಬಲದಿಂದಲೋ, ಇಲ್ಲ ಅವರಿಗೆ ಒಂದು ಜಾತಿಯ ಕುರಿತಾಗಿ ಇರುವ ಪೂರ್ವಾಗ್ರಹಪೀಡಿತ ವಿಚಾರಧಾರೆಗಳಿಂದಲೋ ಅವರನ್ನು ದನ ಕಾಯುವವರೆಂದೂ, ಆ ಇಡೀ ಜಾತಿಯೇ ಅಂತಹ ಬುದ್ಧಿಯುಳ್ಳದೆಂದೂ ಸಾರಾಸಗಟಾಗಿ ಹೇಳಿ ಮುಗಿಸಿದ್ದರು.
ನನ್ನ ನಿಲುವಿಷ್ಟೇ, ಜಾತಿ,ಧರ್ಮ, ಪಂಥ, ವರ್ಣಗಳು ನಮ್ಮಲ್ಲಿರುವುದು ನಿಜವಷ್ಟೇ. ಆದರೆ ಒಂದು ಅತ್ಯಂತ ಉತ್ಕೃಷ್ಠವೆಂತಲೂ, ಮತ್ತೊಂದು ಹಿಂದುಳಿದದ್ದು ಎಂತಲೂ ಬಿಂಬಿಸುವುದೇಕೆ? ಅದರಿಂದಾಗಿ ಸಮಾಜದೊಳಗೆ ಕಂದಕಗಳನ್ನು ಸೃಷ್ಟಿಸುವುದೇಕೆ?. ಜಾತಿ, ಪಂಗಡಗಳ ಕುರಿತು ಹೀಯಾಳಿಕೆಗಿಳಿಯುವವರು ಬರೀ ಆರ್ಥಿಕತೆಯನ್ನು ಮಾತ್ರ ಗುರಿಯಾಗಿಸಿಕೊಳ್ಳದೆ ಅವರ ಕಾಯಕವನ್ನು ಗುರಿಯಾಗಿಸಿಕೊಂಡು ಹಳಿಯುವುದು ತರವೇ?. ಸಂವಿಧಾನದ ಉಳಿವಿಗಾಗಿ ಹೋರಾಟ ಮಾಡುವ, ಗಂಟೆಗಟ್ಟಲೆ ಭಾಷಣ ಕುಟ್ಟುವ ಈ ಬುದ್ಧಿ ಜೀವಿಗಳು ಯಾವ ಕೋಮಿನವರಿಗೂ ನೋವಾಗದಂತೆ ಬದುಕಬೇಕು ಎನ್ನುವ ನಮ್ಮ ಸಂವಿಧಾನದ ಮೂಲ ಆಶಯದಂತೇಕೆ ಬದುಕುವುದಿಲ್ಲ?, ಅದು ಅವರಿಗೆ ಮರೆತು ಹೋಗಿರಬಹುದೇ? ಹಾಗಾದರೆ ನಾವಿದನ್ನು ಸಾಂವಿಧಾನಿಕ ಮರೆವೆನ್ನಬಹುದೇ?. ಗೊತ್ತಿಲ್ಲ!
ಈ ಜಾತಿಯ ಆಧಾರದ ಮೇಲೆ ಹಳಿಯುವವರನ್ನು ನೀವು ಗಮನಿಸಿ ನೋಡಿ ಅವರ ಕಣ್ಣಲ್ಲಿ ಬ್ರಾಹ್ಮಣ ತಟ್ಟೆ ಕಾಸಿಗಾಗಿ ಬಾಯಿ ಬಿಟ್ಟು ಕಾದು ಕುಳಿತುಕೊಳ್ಳುವನು, ಒಕ್ಕಲಿಗ ಹಳ್ಳಿಯಲ್ಲಿ ಬದುಕಲು ಮಾತ್ರವೇ ಲಾಯಕ್ಕಾದವನು, ಲಿಂಗಾಯಿತ ಕಲ್ಲು ಕಟ್ಟಿದವನು, ಕುರುಬ ಕುರಿ ಕಾಯಲು ಮಾತ್ರವೇ ಯೋಗ್ಯನಾದವನಾಗಿ ಕಾಣ ಹತ್ತುತ್ತಾನೆ. ಸಾಂವಿಧಾನಿಕ ನೆಲೆಗಟ್ಟಿನಲ್ಲಿ, ನೈತಿಕ ನೆಲೆಗಟ್ಟಿನಲ್ಲಿ ಹೇಗೆ ಹೇಗೆ ನೋಡಿಕೊಂಡರು ಹೀಗೆ ಯೋಚಿಸುವುದು, ಅದನ್ನು ಜನ ಸಭೆಗಳಲ್ಲಿ ಒದರುವುದು ಅತ್ಯಂತ ತಪ್ಪಲ್ಲವೇ?. ಬರೀ ಪ್ರಶ್ನಾರ್ಥಕ ಚಿಹ್ನೆಗಳೇ ಹೆಚ್ಚಾದವು!. ಈಚೀಚಿಗೆ ನನ್ನ ಬುದ್ಧಿವಂತ ಮಿತ್ರನೊಬ್ಬ 'ಇದು ಒಡೆದಾಳುವ ನೀತಿಯಲ್ಲೊಂದು, ಇಲ್ಲದಿದ್ದರೆ ಇಷ್ಟು ದೊಡ್ಡ ದೇಶವನ್ನು ನಿಭಾಯಿಸುವುದು ಬಲು ಕಷ್ಟವೇ' ಎಂದಿದ್ದ, ಇಲ್ಲಿ ಅದು ಜ್ಞಾಪಕವಾಯ್ತಷ್ಟೆ.
ಎಲ್ಲ ಕಡೆಯೂ ಇದು ಹೀಗೆಯೇ ಎಂದುಕೊಂಡಾಗ ಮಹಾರಾಷ್ಟ್ರದ ಭಕ್ತಿ ಪರಂಪರೆಯಲ್ಲಿ ಮಹೋನ್ನತ ಸ್ಥಾನ ಅಲಂಕರಿಸಿರುವ ಕುಂಬಾರ ಗೋರ, ಸಕ್ಕು ಬಾಯಿ, ನಾಮದೇವ, ತುಕಾರಾಮ, ಜ್ಞಾನದೇವ ಇವರುಗಳ ಬೋಧನೆಗಳನ್ನು ತೀವ್ರವಾಗಿ ಸ್ವೀಕರಿಸುತ್ತಾರೆಯೇ ಹೊರತು ಅವರ ಜಾತಿಗಳನ್ನು, ಪಂಥಗಳನ್ನು ಅಳೆಯಲು ಯಾರೂ ಮುಂದಾಗುವುದಿಲ್ಲ. ಆದರೆ ಕರ್ನಾಟಕದಲ್ಲಿ ಬಸವಣ್ಣ ಲಿಂಗಾಯಿತನಾಗಿಯೂ, ಕನಕದಾಸ ಕುರುಬನಾಗಿಯೂ, ರಾಘವೇಂದ್ರ ಸ್ವಾಮಿಗಳು ಬ್ರಾಹ್ಮಣರಾಗಿಯೂ ಮಾತ್ರ ಕಾಣಿಸುತ್ತಾರೆ. ಜಾತಿ ಪಂಥದ ಸೀಮಾ ರೇಖೆಗಳನ್ನು ಮೀರಿ ಅವರು ಬದುಕಿದ ರೀತಿಯೇ ಅವರನ್ನು ಸ್ವೀಕರಿಸಲು ಜನ ಇನ್ನೂ ತಯಾರಿಲ್ಲ. ಈಗೀಗ ಅವರೆಲ್ಲಾ ರಾಜಕೀಯ ಸರಕಾಗಿದ್ದು ಇನ್ನೂ ದುರಂತದ ವಿಚಾರ.
ಇರಲಿ ಮೇಲೆ ತಿಳಿಸಿದ ಬುದ್ಧಿಜೀವಿ ನಾಟಕಕಾರರು ಯಾವ ದೃಷ್ಟಿ ಕೋನದಿಂದ ದಾನ ಕಾಯುವವರು ಬೋಧನೆಗಿಳಿಯುತ್ತಾರೆ ಎಂದರೋ ತಿಳಿಯದು, ಆದರೆ ಅವರು ಬೊಟ್ಟು ಮಾಡಿ ತೋರಿಸಿದ ಶರಣರು ತಮ್ಮ ತತ್ವಗಳನ್ನು ಯಾರಲ್ಲಿಯೂ ಹೋಗಿ ನೀವು ಪಾಲಿಸಲೇಬೇಕು ಎಂದು ಶಿರದ ಮೇಲೆ ಕತ್ತಿಯಿಟ್ಟು ಝಳಪಿಸಲಿಲ್ಲ, ಎಲ್ಲರೂ ಪಾಲನೆ ಮಾಡುವಂತಾಗಲು ಆಳುವ ಅರಸನಿಂದ ಸುಗ್ರೀವಾಜ್ಞೆಯನ್ನೂ ಅವರು ಹೊರಡಿಸಿರಲಿಲ್ಲ. ಆದರೂ ಅವರ ಮೇಲೆ ಈ ಮಹಾಶಯರಿಗೆ ಅಸಹನೀಯತೆ ಏಕೆ ಉಂಟಾಯಿತೋ ಅರ್ಥವಾಗಲಿಲ್ಲ.
ಅಂದಹಾಗೆ ಇವರು ಬಳಸಿದ ದನಕಾಯುವವರು ಎಂಬ ಪದ ಇತ್ತೀಚಿಗೆ ಜ್ಞಾಪಕಕ್ಕೆ ಬರಲು ಕಾರಣವಿಷ್ಟೇ, ವಚನ ಕ್ರಾಂತಿಯ ಸಂದರ್ಭದಲ್ಲಿ ರಾಮಣ್ಣ ಎಂಬ ಶರಣನೊಬ್ಬ ಬದುಕಿದ್ದನಂತೆ. ಆತನ ಕಾಯಕ ದನಕಾಯುವುದು, ತಮ್ಮ ಕಾಯಕವನ್ನು ಹೆಸರಿನ ಮುಂದೆ ಸೇರಿಸಿಕೊಳ್ಳುತ್ತಿದ್ದ ಶರಣರ ರಿವಾಜಿನಂತೆಯೇ ಆತನು ತನ್ನ ಹೆಸರಿನ ಮುಂದೆ 'ತುರುಗಾಯಿ' ಎಂದು ಸೇರಿಸಿಕೊಂಡಿದ್ದ. 'ತುರುಗಾಯಿ ರಾಮಣ್ಣ' ನೆಂಬ ಶರಣನೊಬ್ಬನಿದ್ದ ಎನ್ನುವ ವಿಚಾರ ನನಗೂ ಇತ್ತೀಚಿಗೆ ಚಿತ್ರದುರ್ಗದ ಮುರುಘಾಮಠದ ಶಿವಶರಣರ ಥೀಮ್ ಪಾರ್ಕ್ ಗೆ ಭೇಟಿ ಕೊಟ್ಟಾಗಲೇ ತಿಳಿಯಿತು. 'ತುರುಗಾಯಿ' ಎನ್ನುವ ಅಪ್ಪಟ ಕನ್ನಡ ಪದ ಸಂಸ್ಕೃತದಲ್ಲಿ 'ಗೋಪಾಲ' ಆಗುತ್ತದೆ. ಅದು ಸಂಸ್ಕೃತದಲ್ಲಿದ್ದರೆ ಕೆಲವರು ಭಕ್ತಿ ಪರವಶರಾಗುತ್ತಿದ್ದರು, ಅಷ್ಟೇ ಏಕೆ ಆ ಹೆಸರಿಗೆ ಅವಮಾನವುಂಟಾದರೆ ಅದು ಹಿಂದೂ ಧರ್ಮಕ್ಕೆ ಮಾಡಿದ ಅಪಚಾರವೆಂಬಂತೆ ಹಾರಾಡುತ್ತಿದ್ದರು. ಆದರೆ ಬುದ್ಧಿ ಜೀವಿ ನಾಟಕಕಾರರು ಕನ್ನಡಲ್ಲಿ ದನಕಾಯುವವರು ಎಂದು ಮೂದಲಿಸಿದ್ದರಿಂದ ಯಾರೂ ಅದನ್ನು ಅಷ್ಟಾಗಿ ತಲೆಗೆ ಹಚ್ಚಿಕೊಳ್ಳಲಿಲ್ಲ.
ಅಂದ ಹಾಗೆ ಅದೇ ದನ ಕಾಯುತ್ತಿದ್ದ ಹುಡುಗನನ್ನೇ ಕುರುಕ್ಷೇತ್ರದ ಮಹಾಜಿರಂಗದಲ್ಲಿ ಅರ್ಜುನನನಿಗೆ ಸಾರಥಿಯನ್ನಾಗಿಸಿ, ಅವನುಸುರಿದ ಗೀತೆಯನ್ನು ಭಗವದ್ಗೀತೆಯೆಂದು ಕಣ್ಗೊತ್ತಿಕೊಂಡು ಪಾಲಿಸುತ್ತೇವಲ್ಲ! ಕೃಷ್ಣನ ಕಾಯಕವನ್ನಾಗಲಿ, ಜಾತಿಯನ್ನಾಗಲಿ ನೋಡದೆ ಐತಿಹಾಸಿಕ ಭಾರತದಿಂದ ಹಿಡಿದು ಇಂದಿನ ಡಿಜಿಟಲ್ ಭಾರತವೂ ಆತನನ್ನು ಬಿಗಿದಪ್ಪಿಕೊಳ್ಳುತ್ತದಲ್ಲಾ ಏಕೆ?. ಅದರರ್ಥ ನಮ್ಮೀ ದೇಶದಲ್ಲಿ ವೃತ್ತಿ ಯಾವುದಾಗಿದ್ದರು ಅವರ ನುಡಿಗಳಲ್ಲಿ ಮೌಲ್ಯವಿದೆಯೆಂದರೆ ಅದನ್ನು ಸರ್ವಥಾ ಅನುಸರಿಸಬಹುದು ಎನ್ನುವುದೇ ಆಗಿದೆ. ಇದು ಬುದ್ಧಿ ಜೀವಿ ನಾಟಕಕಾರರಿಗೆ ಅರ್ಥವಾಗದೆ ಹೋದದ್ದು ಖೇದಕರ.
-o-
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ