ಮಂಗಳವಾರ, ಡಿಸೆಂಬರ್ 30, 2025

ಉಟ್ಟ ಬಟ್ಟೆಯಲ್ಲಿ ಊರು ಬಿಟ್ಟವರ ಸಾಹಸಗಾಥೆ

ಬಹಳ ದಿನಗಳಿಂದ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ, ಸ್ವಾತಂತ್ರ್ಯಾನಂತರ ದೇಶದೊಳಗೆ ಭುಗಿಲೆದ್ದ ಕೋಮು ಹಿಂಸಾಚಾರದ ಬಗ್ಗೆ ಬರೆಯಬೇಕು ಎಂದುಕೊಳ್ಳುತ್ತಿದೆ. ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ನಮ್ಮ ಪಠ್ಯ ಪುಸ್ತಕಗಳಲ್ಲಿ, ಸ್ವಾತಂತ್ರ್ಯೋತ್ಸವದ ಸಂಬಂಧಿ ಲೇಖನ ಮಾಲಿಕೆಗಳಲ್ಲಿ, ದಿನ ಪತ್ರಿಕೆಗಳಲ್ಲಿ ನಿಮಗೆ ಭರಪೂರ ಮಾಹಿತಿ ದೊರೆಯುತ್ತದೆ. ಆದರೆ ಸ್ವಾತಂತ್ರ್ಯ ದೊರೆಯುವ ಒಂದು ವರ್ಷ ಮೊದಲು ಅಂದರೆ 1946 ರಲ್ಲಿ 'ಡೈರೆಕ್ಟ್ ಆಕ್ಷನ್ ಡೇ' ನೆಪದಲ್ಲಿ ಶುರುವಾದ ಕೋಮು ದಳ್ಳುರಿ ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲೂ ಉರಿಯುತ್ತಲೇ ಇತ್ತು. ಇದಕ್ಕೆ ಸಂಬಂಧಿಸಿದ ಮಾಹಿತಿಗಳು ನಿಮಗೆ ಪಠ್ಯ ಪುಸ್ತಕಗಳಲ್ಲಿ ಸಿಗಲಾರವು, ನೀವಾಗಿ ನೀವೇ ತಡಕಿ ಹುಡುಕಿಕೊಂಡರೆ ಕೆಲವು ಪುಸ್ತಕಗಳಲ್ಲಿ ದೊರೆಯಬಹುದು, ಈಗಂತೂ ನಿಮ್ಮ ಆಪ್ತ ಮಿತ್ರರಾದ ಚಾಟ್ ಜಿಪಿಟಿ, ಡೀಪ್ ಸೀಕುಗಳಲ್ಲಿ ಹೇರಳವಾದ ಮಾಹಿತಿ ಲಭ್ಯವಾಗಬಹುದು. ಆದರೆ ಸ್ವಾತಂತ್ರ್ಯದ ಜೊತೆ ಜೊತೆಗೆ ದೇಶ ವಿಭಜನೆ ಎಂಬ ಅಚಾತುರ್ಯ ನಡೆಯಿತಲ್ಲ ಅದರ ತೀವ್ರತೆ ನಮಗೆ ಮಾತುಗಳಲ್ಲೋ, ಲೇಖನಗಳಲ್ಲೋ, ಪುಸ್ತಕಗಳಲ್ಲೋ ಓದಿಕೊಂಡರೆ ಸರಿಯಾಗಿ ಅರ್ಥವಾಗುವುದಿಲ್ಲ ಎನ್ನುವುದು ನನ್ನ ಭಾವನೆ. ದೇಶ ವಿಭಜನೆಯ ಕುರಿತಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ಹೊತ್ತಿನಲ್ಲಿ ನಾನು ಆ ಕುರಿತಾಗಿ ಆಮೂಲಾಗ್ರವಾಗಿ ಓದಿಕೊಂಡಿದ್ದೆ, ತಾಂತ್ರಿಕವಾಗಿ ಅದರ ಹಿಂದಿನ ಕಾರಣ-ಕರ್ತೃಗಳನ್ನೆಲ್ಲ ತಿಳಿದುಕೊಂಡಿದ್ದೆ, ಆದರೇನು ಅದರ ಹಿಂದಿದ್ದ ನೋವು-ಭಾವನೆಗಳು ನನಗೆ ಅಷ್ಟಾಗಿ ಅರ್ಥವಾಗಿರಲಿಲ್ಲ. ನನಗೊಬ್ಬನಿಗೇ ಅಲ್ಲ, ನನ್ನಂತೆಯೇ ಪುಸ್ತಕವನ್ನೋದಿಕೊಂಡು ದೇಶ ವಿಭಜನೆಯ ಬಗ್ಗೆ ತಿಳಿದುಕೊಂಡವರ ಎಲ್ಲರ ವಿಚಾರದಲ್ಲೂ ಇದು ಹೀಗೆ ಆಗಿರಬಹುದು ಎನಿಸುತ್ತದೆ. ಇರಲಿ, ನನಗೆ ಈ ದೇಶ ವಿಭಜನೆಯ ಹಿಂದಿನ ಮಾನವೀಯ ಭಾವನೆಗಳು ಅರ್ಥವಾಗಿದ್ದು ಎರಡು ಸಂಧರ್ಭಗಳಲ್ಲಿ, ಒಂದನೆಯದು ಖ್ಯಾತ ಒಲಂಪಿಕ್ ಕ್ರೀಡಾ ಪಟು, ಪಂಜಾಬಿನ ಮಿಲ್ಕಾ ಸಿಂಗ್ ಕುರಿತಾದ ಹಿಂದಿ ಚಲನಚಿತ್ರ 'ಭಾಗ್ ಮಿಲ್ಕಾ ಭಾಗ್' ಸಿನೆಮಾದಲ್ಲಿ ಮತ್ತೊಂದು ನಾನೇ ಖುದ್ದಾಗಿ ಪಂಜಾಬಿನ ಅಮೃತಸರದ ದೇಶ ವಿಭಜನಾ ಮ್ಯೂಸಿಯಂಗೆ(Partition meuseum) ಭೇಟಿ ಇತ್ತಾಗ.

ಇವೆರಡನ್ನೂ ಹೊರತು ಪಡಿಸಿದರೆ ಇತ್ತೀಚಿಗೆ ನಾನು ಯೂಟ್ಯೂಬ್ ವೀಕ್ಷಿಸುತ್ತಿರುವಾಗ ಕಣ್ಣಿಗೆ ಬಿದ್ದ ಸಿಂಧಿಗಳ ಕುರಿತಾದ ಸಾಹಸಗಾಥೆಯ ಶಾರ್ಟ್ ವಿಡಿಯೋ ಒಂದು ನನ್ನನ್ನು ಮತ್ತೆ ದೇಶ ವಿಭಜನೆಯ ದುರಂತದತ್ತ ಹೊರಳಿಕೊಂಡು ಯೋಚಿಸುವಂತೆ ಮಾಡಿತು. ಆ ಘಟನೆ ಅವೈಜ್ಞಾನಿಕ, ಅಪ್ರಬುದ್ಧವಾಗಿತ್ತು ಎನ್ನುವುದು ದಿಟವಾದರೂ ಈಗ ಅದೊಂದು ಇತಿಹಾಸ, ಮತ್ತು ಅದರೊಡನೆ ನಾವು ಬದುಕಲೇ ಬೇಕಾದ ಅನಿವಾರ್ಯತೆಯೂ ಅಷ್ಟೇ ದಿಟವಾಗಿರುವುದರಿಂದ ಅದನ್ನೇನು ನಾವು ಬದಲಿಸಲು ಸಾಧ್ಯವಿಲ್ಲ. ಆದಾಗ್ಯೂ ವಿಭಜನೆಯಿಂದ ದಿಕ್ಕುಗೆಟ್ಟು ಉಟ್ಟಬಟ್ಟೆಯಲ್ಲಿ ಪಾಕಿಸ್ತಾನವನ್ನು ತೊರೆದು ತಮ್ಮ ಹೊಲ, ಮನೆಗಳನ್ನೆಲ್ಲ ಹೇಗಿದ್ದವೋ ಹಾಗೆ ಬಿಟ್ಟು ಭಾರತದತ್ತ, ಇನ್ನಿತರ ದೇಶಗಳತ್ತ ಓಡಿ ಬಂದ ಜನರ ಬದುಕೇನಾಯ್ತು? ಅವರ ಬವಣೆ ಏನು? ಇವನ್ನೆಲ್ಲ ಈಗ ಬೇಕಾದಷ್ಟು ಗ್ರಂಥಗಳಲ್ಲಿ ಬರೆದಿಡಲಾಗಿದೆ. ಆದರೆ ತಮ್ಮ ಹಣೆಬರಹವನ್ನು ಹಳಿಯುತ್ತಾ, ದೇಶ ವಿಭಜನೆಯನ್ನು ಬೈದುಕೊಳ್ಳುತ್ತಾ ಸುಮ್ಮನೆ ಕೂರದೆ, ಶಿಕ್ಷಣ, ವ್ಯವಹಾರ, ವ್ಯಾಪಾರ, ಆಮದು-ರಫ್ತು ಹೀಗೆ ಮುಂತಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಭರದಿಂದೆದ್ದು ಬೆಳೆದ ಸಿಂಧಿ ಜನಾಂಗ ನಮಗೆ ಅಮಾವಾಸ್ಯೆಯ ಕತ್ತಲಲ್ಲಿ ಧ್ರುವತಾರೆಯಂತೆ ಗೋಚರಿಸುತ್ತದೆ.

ಪಾಕಿಸ್ತಾನದಲ್ಲಿ ಪಂಜಾಬಿ ಮತ್ತು ಫಶ್ತೂನಿ ಜನಾಂಗಗಳನ್ನು ಹೊರತು ಪಡಿಸಿದರೆ ಅತ್ಯಂತ ಹೆಚ್ಚಿನ ಜನಸಂಖ್ಯೆಯು ಸಿಂಧಿಯರದ್ದೇ. ಆದರೆ ಇಲ್ಲಿ ನಾನು ಈಗ ಮಾತನಾಡುತ್ತಿರುವುದು ಸಿಂಧ್ ಪ್ರಾಂತದಲ್ಲಿ ಹುಟ್ಟಿದ ಒಂದೇ ಕಾರಣದಿಂದ ಸಿಂಧಿಗಳು ಎಂದುಕೊಂಡು ಓಡಾಡುತ್ತಿರುವ ಇಂದಿನ ಪಾಕಿಸ್ತಾನದ ಮುಸ್ಲಿಮರ ಕುರಿತಾಗಿ ಅಲ್ಲ. ಸಿಂಧ್ ಪ್ರಾಂತದಲ್ಲಿ ಸಹಸ್ತ್ರಮಾನಗಳಿಂದ ಇದ್ದು ಬಾಳಿ ವ್ಯವಹರಿಸಿ ದೇಶ ವಿಭಜನೆಯಾದಾಗ ಕೋಮು ದ್ವೇಷಕ್ಕೆ ಹೆದರಿ ಒಕ್ಕಲೆದ್ದು ಊರು ಬಿಟ್ಟ ಹಿಂದೂ ಸಿಂಧಿಗಳ ಬಗ್ಗೆ. ಈ 'ಹಿಂದೂ' ಎಂಬ ಪದದ ಹುಟ್ಟಿನ ಜಾಡನ್ನು ಹಿಡಿದುಕೊಂಡು ಕೊಂಚ ದೂರ ಹೋಗಿ ನೋಡಿದರು ಅಲ್ಲಿ ಸಿಂಧ್-ಸಿಂಧೂ ಎಂಬ ಪದ ಮೂಲವಾಗಿ ಗೋಚರಿಸುತ್ತದೆ. ಸಿಂಧೂ ನದಿಯ ದಂಡೆಯಲ್ಲಿ ಹುಟ್ಟಿದ ನಾಗರೀಕತೆಯ ಕಾರಣದಿಂದ ಸಿಂಧೂ ಆಗಿ ಅನಂತರ ಹಿಂದೂ ಜನಾಂಗ ಎಂದು ಗುರುತಿಸಿಕೊಂಡಿತು ಎಂದು ವಿದ್ವಾಂಸರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಭಾರತ ವಿಭಜನೆಗೂ ಮೊದಲು 1948ರಲ್ಲಿ ನಡೆದಿದ್ದ ಜನಗಣತಿಯ ಅಂಕಿ-ಸಂಖ್ಯೆಗಳನ್ನು ನೋಡಿದರೆ ಈಗಿನ ಪಾಕಿಸ್ತಾನದ ಸಿಂಧ್ ಪ್ರಾಂತದಲ್ಲಿ 27% ಹಿಂದೂ ಜನಾಂಗವಿದ್ದುದಾಗಿ ತಿಳಿದುಬರುತ್ತದೆ. ವಿಭಜನೆಯ ಕಾಲದಲ್ಲಿ ಬಹುತೇಕ ಸಿಂಧಿ ಹಿಂದೂಗಳು ಗಡಿದಾಟಿ ಭಾರತದೊಳಕ್ಕೆ ಬಂದರು. ಈಗ ಸಿಂಧ್ ಪ್ರಾಂತದ ಹಿಂದೂಗಳು ಕೇವಲ 9%.

ಹೀಗೆ ಒಕ್ಕಲೆದ್ದ ಸಿಂಧಿಗಳ ಬಗ್ಗೆ ನಿಮಗೆ ಹೀಗೆ ಹೇಳಿದರೆ ಅಷ್ಟೇನೂ ಅರ್ಥವಾಗುವುದಿಲ್ಲವೇನೋ, ಅವರು ಮಾಡಿದ ಸಾಹಸಗಾಥೆಗಳನ್ನೋ, ಅಥವಾ ಲೋಕ ವಿಖ್ಯಾತವಾಗಿರುವ ಅವರ ಹೆಸರುಗಳನ್ನೂ, ಅಥವಾ ಅವರು ಹುಟ್ಟು ಹಾಕಿದ ಸಂಸ್ಥೆಗಳನ್ನೂ ಹೆಸರಿಸಿದರೆ ನಿಮಗೆ ಈ ಜನಾಂಗದ ಬಗ್ಗೆ ಸರಿಯಾಗಿ ಅರ್ಥವಾಗಬಹುದು. ರಾಜಕೀಯ ವಲಯದಲ್ಲಿ ಸುಮ್ಮನೆ ಒಂದು ಹೆಸರೆತ್ತಿಕೊಳ್ಳುವುದಾದರೆ ನಮ್ಮ ಮಾಜಿ ಉಪಪ್ರಧಾನಿ, ಮಾಜಿ ಗೃಹಮಂತ್ರಿ, ಬಿಜೆಪಿಯ ಭೀಷ್ಮ ಲಾಲ್ ಕೃಷ್ಣ ಅಡ್ವಾಣಿ ಒಬ್ಬ ಸಿಂಧಿ ಹಿಂದೂ.

ಲಾಲ್ ಕೃಷ್ಣ ಅಡ್ವಾಣಿ : ದೇಶ ವಿಭಜನಾ ನಂತರ ಭಾರತಕ್ಕೆ ಬಂದ ಅವರ ಕುಟುಂಬದವರು ಮುಂಬೈ ನಗರದಲ್ಲಿ ನೆಲೆಸಿದರು. ದೆಹಲಿಯಿಂದ ರಾಜ್ಯಸಭೆಗೆ ಸದಸ್ಯರಾಗಿ ಆಯ್ಕೆಯಾಗಿ ಸಂಸತ್ ಪ್ರವೇಶಿಸಿದ ನಂತರ ಮುಂದಿನ ಸರದಿಯಲ್ಲಿ ಗುಜರಾತ್ ನಿಂದ ರಾಜ್ಯಸಭೆಗೆ ಆಯ್ಕೆಯಾದರು. 1977ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಗೆ ತೀವ್ರ ಮುಖಭಂಗವಾಗಿ ಜನತಾ ಪಕ್ಷವು ಅಧಿಕಾರ ಹಿಡಿದಾಗ ಮೊರಾರ್ಜಿ ದೇಸಾಯಿ ಪ್ರಧಾನಮಂತ್ರಿಯಾದರು, ಅಡ್ವಾಣಿ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರಾದರು. 1990ರ ದಶಕದ ಆರಂಭದಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೆಂದು ಪಟ್ಟು ಹಿಡಿದು ರಾಮ ರಥಯಾತ್ರೆಗೆ ಚಾಲನೆ ನೀಡಿದರು. ಇದು ಒಂದು ದಶಕದಷ್ಟು ವಯಸ್ಸಾಗಿದ್ದ ಎಳೆಯ ಪಕ್ಷ ಬಿಜೆಪಿಗೆ ಅಪಾರ ಜನಬೆಂಬಲ ದೊರಕಿಸಿಕೊಟ್ಟಿತು. ಮುಖ್ಯವಾಗಿ ಹಿಂದೂ ಜನಾಂಗದ ಮತಗಳು ಬಿಜೆಪಿಯ ಕಡೆಗೆ ವಾಲಿಕೊಂಡವು. ಅದಾದ ಮೇಲೆ ದೇಶದಾದ್ಯಂತ ಬಿಜೆಪಿಗೆ ಜನಬೆಂಬಲ ಹೆಚ್ಚುತ್ತಾ ಹೋಯಿತು. ಮುಂದೆ ರಾಜ್ಯಸಭೆಯ ಪ್ರತಿಪಕ್ಷದ ನಾಯಕ, ಉಪಪ್ರಧಾನಿ, ಗೃಹ ಮಂತ್ರಿ ಪದವಿಗಳನ್ನು ಅಲಂಕರಿಸಿದ ಅವರ ಮುಂದಾಳತ್ವದಲ್ಲೇ 2004 ಮತ್ತು 2009 ರ ಲೋಕಸಭಾ ಚುನಾವಣೆಗಳನ್ನು ಬಿಜೆಪಿ ಎದುರಿಸಿತು. ಜಾಗತೀಕರಣಕ್ಕೆ ಜಗತ್ತು ತೆರೆದುಕೊಂಡು, ತಂತ್ರಜ್ಞಾನದ ಓಘದಲ್ಲಿ ಓಡುತ್ತಿದ್ದ ಭಾರತಕ್ಕೆ ಇನ್ನು ಡೈನಾಮಿಕ್ ವ್ಯಕ್ತಿಯೊಬ್ಬ ಪ್ರಧಾನಿ ಪಟ್ಟವನ್ನು ಅಲಂಕರಿಸಿದರೆ ಸೂಕ್ತ ಎನಿಸಿತ್ತು, ಆದ ಕಾರಣ ಬಿಜೆಪಿಗೆ ಗೆಲುವಾಗಲಿಲ್ಲ. ಅಡ್ವಾಣಿ ತಮ್ಮ ಜೀವನದ ಇಳಿಸಂಜೆಯಲ್ಲಿ ನಿಧಾನಕ್ಕೆ ರಾಜಕೀಯದಿಂದ ಮರೆಯಾದರು.

ಗೋಪಿಚಂದ್ ಹಿಂದೂಜಾ : ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ಕ್ರಾಂತಿ ಉಂಟು ಮಾಡಿರುವ ಅಶೋಕ್ ಲೇಲ್ಯಾಂಡ್ ನ ಹಿಂದಿದ್ದ ದೂರದರ್ಶಿತ್ವ ಇವರದ್ದೇ. ಯುನೈಟೆಡ್ ಕಿಂಗ್ಡಮ್ ನ ಅತಿ ಶ್ರೀಮಂತರ ಪಟ್ಟಿಯಲ್ಲಿ ಸದಾ ಮುಂಚೂಣಿಯಲ್ಲಿರುವ ಹೆಸರು ಇವರದ್ದೇ. ಸ್ವಾತಂತ್ರ್ಯ ಪೂರ್ವದಲ್ಲಿ ಈವತ್ತಿನ ಇರಾನಿನಲ್ಲಿ ಹುಟ್ಟಿದ ಇವರು ಓದಿದ್ದು ಮಾತ್ರ ಮುಂಬೈನಲ್ಲಿ. ಮುಂಬೈ ಮತ್ತು ಇರಾನಿನ ಟೆಹ್ರಾನ್ ನಲ್ಲಿ ಅಷ್ಟರಲ್ಲಾಗಲೇ ಟೆಕ್ಸ್ಟೈಲ್ ಮತ್ತು ಇನ್ನಿತರ ಉದ್ಯಮಗಳನ್ನು ಹೊಂದಿದ್ದ ಇವರು ಅನ್ಯದೇಶದ ಕೆಲವು ಕಂಪನಿಗಳನ್ನು ಖರೀದಿ ಮಾಡಿ ಭಾರತಕ್ಕೆ ದೇಸಿ ಎನಿಸುವಂತೆ ಮಾಡಿ ಇಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಿದ್ದು ವಿಶೇಷ. ಅಶೋಕ್ ಲೇಲ್ಯಾಂಡ್, ಗಲ್ಫ್ ಆಯಿಲ್ ಮತ್ತಿತರ ಕಂಪನಿಗಳು ಇವರದ್ದೇ ಮಾಲೀಕತ್ವದವು.

ಸುಚೇತಾ ಕೃಪಲಾನಿ : ಇಡೀ ಭಾರತದಲ್ಲಿಯೇ ಮೊತ್ತ ಮೊದಲ ಮಹಿಳಾ ಮುಖ್ಯಮಂತ್ರಿ ಈ ಸುಚೇತಾ ಕೃಪಲಾನಿ. ಇವರ ನಿಜವಾದ ಹೆಸರು ಸುಚೇತಾ ಮಜುಂದಾರ್. ಪ್ರಸಿದ್ಧ ಗಾಂಧಿವಾದಿ, ಸ್ವಾತಂತ್ರ್ಯ ಹೋರಾಟಗಾರ ಆಚಾರ್ಯ ಕೃಪಲಾನಿಯವರನ್ನು ವರಿಸಿದ ಮೇಲೆ ಇವರ ಹೆಸರಿನಲ್ಲಿ ಕೃಪಲಾನಿ ಸೇರಿಕೊಂಡಿತು.

ಹೆಸರಿಗೆ ಈ ಮೂವರ ಬಗ್ಗೆ ವಿವರವಾಗಿ ಬರೆದಿದ್ದೇನೆ, ಆದರೆ ಇನ್ನು ಎಷ್ಟೋ ಖ್ಯಾತ ಸಿಂಧಿ ಹಿಂದುಗಳನ್ನು ನಾನು ಈ ಚುಟುಕು ಲೇಖನದಲ್ಲಿ ಸವಿಸ್ತಾರವಾಗಿ ತಿಳಿಸುವುದಕ್ಕೆ ಸಾಧ್ಯವಾಗದಿದ್ದರೂ ಚುಟುಕಾಗಿ ಅಂತೂ ಹೇಳಿ ಮುಗಿಸಿಬಿಡುವುದಕ್ಕೆ ಪ್ರಯತ್ನ ಪಡುತ್ತೇನೆ.

ಬಾಲಿವುಡ್ ಚಿತ್ರರಂಗದಲ್ಲಿ ಹೆಸರು ಮಾಡಿರುವ ರಣವೀರ್ ಸಿಂಗ್, ಕರೀನಾ ಕಪೂರ್, ರಾಜ್ ಕುಮಾರ್ ಹಿರಾನಿ, ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಭಾರತದಾದ್ಯಂತ ವಿಖ್ಯಾತರಾಗಿರುವ ರಹೇಜಾ ಕುಟುಂಬ, ಖ್ಯಾತ ಲಾಯರ್ ರಾಮ್ ಜೇತ್ಮಲಾನಿ ಹೀಗೆ ಸಿಂಧಿ ಜನಾಂಗ ಕಾಲಿಡದಿರುವ ಕ್ಷೇತ್ರಗಳನ್ನು ಹುಡುಕುವುದು ಕಷ್ಟವೇ. ಮಾರವಾಡಿ ಸಮುದಾಯದಂತೆ ವ್ಯಾಪಾರ, ವ್ಯವಹಾರಗಳಲ್ಲಿ ಸದಾ ಮುಂದಿರುವ ಈ ಜನಾಂಗ ಅವರಂತೆಯೇ ಒಗ್ಗಟ್ಟಿನಲ್ಲಿಯೂ ಹೆಸರು ವಾಸಿ.

ಕಠಿಣ ಪರಿಶ್ರಮ, ಅತ್ಯುತ್ತಮ ಎನಿಸುವಷ್ಟು ಆ ಸಮುದಾಯದ ಒಬ್ಬರಿಗೊಬ್ಬರು ಸಹಾಯ ಮಾಡಿಕೊಳ್ಳುವ ಗುಣ, ತಮ್ಮ ತಮ್ಮಲ್ಲೇ ಹಿಂದುಳಿದವರನ್ನು ಮುಂದೆ ತರುವ ಗುಣ, ಹಣ ಹೂಡಿಕೆ, ಲಾಭಂಶವನ್ನು ಶೋಕಿಗೆ ಬಳಸದೆ ಮತ್ತೆ ಹೂಡಿ ತಮ್ಮ ವ್ಯವಹಾರನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಚಾಣಾಕ್ಷತನ, ಹೆಚ್ಚಿನ ಜನ ಸಂಪರ್ಕ, ತಮ್ಮ ವಂಶದ ಕುಡಿ ಕೊನರುಗಳಿಗೆಲ್ಲ ಹಣಕಾಸಿನ ವಿಚಾರದಲ್ಲಿ, ವ್ಯವಹಾರದ ವಿಚಾರದಲ್ಲಿ ಶಿಸ್ತು ಬೆಳೆಸುವುದು, ಸಂಯಮದ ಆಹಾರ ಕ್ರಮ, ಹೊಸದು ಯಾವುದಾದರೂ ಅದಕ್ಕೆ ಅತ್ಯಂತ ಬೇಗ ಹೊಂದಿಕೊಳ್ಳುವುದು, ಇವೆಲ್ಲ ಗುಣಗಳು ಆ ಸಮುದಾಯದಲ್ಲಿ ಇರುವುದರಿಂದಲೇ ಆ ಸಮುದಾಯ ಎಲ್ಲಿ ಕಾಲಿಟ್ಟರೂ ಅಲ್ಲೆಲ್ಲ ಪ್ರಗತಿಯೇ ಕಂಡುಬರುತ್ತದೆ.

ಇದು ಜಾತಿಯ ಪ್ರಶ್ನೆಯಲ್ಲ, ಸಮುದಾಯದ ಹೊಗಳುವಿಕೆಯೂ ಅಲ್ಲ. ಭಾರತದೊಳಗಿನ ಪ್ರತೀ ಸಮುದಾಯವು ಒಂದೊಂದು ಸ್ವಾಮೀಜಿಗಳನ್ನು, ರಾಜಕೀಯ ಪುಢಾರಿಗಳನ್ನು ನಾಯಕರನ್ನಾಗಿ ಮಾಡಿಕೊಂಡು ಮೀಸಲಾತಿಗೂ, ರಾಜಕೀಯ ಬೆಂಬಲಕ್ಕೂ ಹೋರಾಟ ನಡೆಸುತ್ತಾ ದೊಂಬಿ ಸೃಷ್ಟಿಸುತ್ತಿರುವ ಈ ಹೊತ್ತಿನಲ್ಲಿ ಸಿಂಧಿ ಜನಾಂಗ ನಮಗೆ ಮಾದರಿಯಾಗಿ ನಿಲ್ಲುತ್ತದೆ. ತನ್ನ ಸಮುದಾಯವನ್ನು ಸರ್ವ ರೀತಿಯಿಂದಲೂ ಸಬಲಗೊಳಿಸುತ್ತಾ, ದೇಶವಿಭಜನೆಯ ಕಾವಿಗೆ ನೇರವಾಗಿ ಸಿಲುಕಿ ದೇಶವೊಂದರಿಂದ ಹೊರಬಿದ್ದರೂ ಛಲ ಬಿಡದೆ ಮೇಲೆದ್ದು ನಿಂತ ಈ ಸಿಂಧಿ ಜನಾಂಗ ಅಧ್ಯಯನ ಯೋಗ್ಯವಾದದ್ದು. ಬರೀ ಅಧ್ಯಯನವಷ್ಟೇ ಅಲ್ಲೇ ಪಾಲಿಸುವುದಕ್ಕೂ ಯೋಗ್ಯವಾದದ್ದು. ಹಾಗಂತ ಅಲ್ಲಿ ಲೋಪಗಳು ಇಲ್ಲವೇ ಇಲ್ಲವೆಂದು ಅರ್ಥವಲ್ಲ, ಲೋಪಗಳು ಇದ್ದಾಗ್ಯೂ, ಹೊರ ಜಗತ್ತಿನ ದಾಳಿಗಳನ್ನು ತಡವಿಕೊಂಡು ತಮ್ಮತನವನ್ನು ಬಿಡದೆ ಸರ್ವ ಕ್ಷೇತ್ರಗಳಲ್ಲಿಯೂ ಮುನ್ನುಗ್ಗಿದ ಅವರ ಕಥೆ ಈ ದೇಶದ ಸರ್ವ ಸಮುದಾಯಕ್ಕೂ ತಲುಪಬೇಕು. ಆ ಮೂಲಕ ಪ್ರತೀ ಸಮುದಾಯ ಜಾಗೃತಗೊಂಡು ತಮ್ಮ ತಮ್ಮ ಸಮುದಾಯದ ಏಳ್ಗೆಯನ್ನು ಕಾಣುತ್ತಾ ಮುನ್ನಡೆದರೂ ಸಾಕು ಈ ದೇಶ ಇನ್ನಷ್ಟು ಅಭಿವೃದ್ಧಿಯೆಡೆಗೆ ತೆರೆದುಕೊಂಡು ನಿಲ್ಲುತ್ತದೆ.

ಸಿಂಧಿಗಳ ಕುರಿತಾದ ನಾಸ್ ಡೈಲಿ ಯೂಟ್ಯೂಬ್ ಚಾನೆಲ್ಲಿನ ಶಾರ್ಟ್ ವಿಡಿಯೋ

-o-

ಶುಕ್ರವಾರ, ಡಿಸೆಂಬರ್ 26, 2025

ಯುದ್ಧ ಫಲ

ಸಿನೆಮಾ, ಧಾರಾವಾಹಿ, ಶಾರ್ಟ್ ಮೂವಿಗಳನ್ನೆಲ್ಲ ನಾನು ನೋಡುವುದನ್ನು ಬಿಟ್ಟು ಯಾವ ಕಾಲವಾಯಿತೋ ಗೊತ್ತಿಲ್ಲ. ಯೂಟ್ಯೂಬ್ ನಲ್ಲಿನ ದೈನಂದಿನ ವಾರ್ತೆ, ವಿಜ್ಞಾನ ರಂಗದಲ್ಲಿ ಇತ್ತೀಚಿನ ಬೆಳವಣಿಗೆ, ಟೆಕ್ ಕ್ಷೇತ್ರದಲ್ಲಿನ ಪ್ರಗತಿ, ಜಾಗತೀಕ ರಾಜಕೀಯ, ಕೇವಲ ಈ ವಿಚಾರಗಳಿಗೆ ಸಂಬಂಧಪಟ್ಟ ವಿಡಿಯೋಗಳನ್ನು ಹೆಕ್ಕಿಕೊಂಡು ನೋಡಿ ಅಲ್ಲಿಂದ ಹೊರಬೀಳುವುದು ನನಗೆ ಈಗೀಗ ಅನೂಚಾನುವಾಗಿದೆ. ಯೂಟ್ಯೂಬ್ ನಲ್ಲಾಗಲಿ, ಇನ್ಸ್ಟಾಗ್ರಾಮ್ ನಲ್ಲಾಗಲಿ ಅದು ಸೆಳೆಯುವ ರೀಲ್ಸ್ ಜಾಲಕ್ಕೆ ನಾನು ಬೀಳುವುದಿಲ್ಲ ಎನ್ನುವುದು ನನಗೆ ಕೊಂಚ ಹೆಮ್ಮೆ, ಇರಲಿ. ಇಂತಹ ನಾನು ಆಗಾಗ ಒಮ್ಮೆ ಗೀಳಿಗೆ ಬಿದ್ದು ಕೆಲವುಗಳನ್ನು ಬಹಳಷ್ಟು ಬಾರಿ ನೋಡಿದ್ದೇನೆಂದರೆ ನೀವು ನಂಬಲೇಬೇಕು. ಚಾರ್ಲಿ ಚಾಪ್ಲಿನ್ನನ್ನ ಎಲ್ಲ ಸಿನೆಮಾಗಳು, ಮಿಸ್ಟರ್ ಬೀನ್ ನ ಎಲ್ಲ ಧಾರಾವಾಹಿಗಳು, ಸಿನೆಮಾಗಳು, ನೆಟ್ ಫ್ಲಿಕ್ಸ್ ನಲ್ಲಿ ಇದೀಗ ಭಾರಿ ವೀಕ್ಷಣೆಗೊಳಪಡುತ್ತಿರುವ ಸಸ್ಪೆನ್ಸ್ ಥ್ರಿಲ್ಲರ್ 'ಸ್ಟ್ರೇಂಜರ್ ಥಿಂಗ್ಸ್' ನ ಎಲ್ಲ ಕಂತುಗಳನ್ನು ನಾನು ನೋಡಿರುವುದಲ್ಲದೆ ಕೆಲವೊಂದು ಸಿನೆಮಾಗಳನ್ನು ವಿಚಿತ್ರವೆನಿಸುವಷ್ಟು ಬಾರಿ ನೋಡಿದ್ದೇನೆ. ಮರಾಠಿ ಚಿತ್ರರಂಗದ ಹಿಟ್ ಸಿನೆಮಾ 'ಸೈರಾಟ್' ಅನ್ನು ನಾನು ಬಹುಷಃ ಒಂದು ಸಾವಿರ ಬಾರಿಯಾದರೂ ನೋಡಿರಬೇಕು. ಹೀಗೆ ಪದೇ ಪದೇ ನೋಡಿದ ಸಿನೆಮಾಗಳ ಪೈಕಿ ಹಿಂದಿಯ 'ಇಂಗ್ಲಿಷ್ ವಿಂಗ್ಲೀಷ್', ತೆಲುಗಿನ 'ಮಿಥುನಂ', 'ಮಾಯಾ ಬಜಾರ್', ತಮಿಳಿನ 'ಕಾಂಚನ', ಕನ್ನಡದ 'ಕವಿರತ್ನ ಕಾಳಿದಾಸ', 'ಬಬ್ರುವಾಹನ', 'ಮಯೂರ' ಇವೆಲ್ಲ ಲೆಕ್ಕವಿಲ್ಲದಷ್ಟು ಬಾರಿ ಮತ್ತೆ ಮತ್ತೆ ನೋಡಿದ್ದೇನೆ. ಅಲ್ಲಿಂದಾಚೆಗೆ ಅಷ್ಟೇನೂ ಹೊಸ ಸಿನೆಮಾಗಳ ಬಗ್ಗೆಯಾಗಲಿ, ಧಾರಾವಾಹಿಗಳ ಬಗ್ಗೆಯಾಗಲಿ ನಾನು ತಲೆಕೆಡಿಸಿಕೊಂಡವನಲ್ಲ. ಇದರ ಮೇಲೂ ನನ್ನನ್ನು ಇತ್ತೀಚಿಗೆ ಸೆಳೆದದ್ದು ಬ್ರಿಟಿಷ್ ಜನಾಂಗದಲ್ಲಿ ಸಿಚುಯೇಶನಲ್ ಕಾಮಿಡಿ ಎಂದು ಪ್ರಸಿದ್ಧವಾಗಿರುವ 'ಮೈಂಡ್ ಯುವರ್ ಲ್ಯಾಂಗ್ವೇಜ್'.

ಎಪ್ಪತ್ತರ ದಶಕದಲ್ಲಿ ಬ್ರಿಟೀಷ್ ನೆಲದಲ್ಲಿ ಅರಳಿದ, ಹಿರಿತೆರೆಗಿಂತಲೂ ಕಿರಿತೆರೆಯನ್ನೇ ಗಮನದಲ್ಲಿಟ್ಟುಕೊಂಡು ಮಾಡಿದ ಧಾರಾವಾಹಿ ಈ 'ಮೈಂಡ್ ಯುವರ್ ಲ್ಯಾಂಗ್ವೇಜ್'. ಎಪ್ಪತ್ತರ ದಶಕದ ಉತ್ತರಾರ್ಧದಲ್ಲಿ ಆಗಿನ ಖ್ಯಾತ ITV ಯಲ್ಲಿ ಮೂಡಿಬಂದ ಈ ಧಾರಾವಾಹಿಯನ್ನು ಬರೋಬ್ಬರಿ 48ವರ್ಷಗಳ ನಂತರ ಭಾರತದಲ್ಲಿ ಕುಳಿತು ನಾನು ನೋಡಿದೆ. ಭಾರತದಲ್ಲಿ ಟಿವಿ ಸಂಸ್ಕೃತಿ ಆಗ ತಾನೇ ಕಾಲೂರಿ ನಡೆಯಲು ಕಲಿಯುತ್ತಿರುವಾಗ ಇಂಗ್ಲೀಷರು ಧಾರಾವಾಹಿಗಳನ್ನು ನಿರ್ಮಿಸಿ ಜಗಜ್ಜಾಹೀರು ಗೊಳಿಸಿದ್ದರು. ಹಾಗಂತ ಬ್ರಿಟೀಷರ ಪಾಲಿಗೆ ಇದೆ ಮೊದಲಿನ ಧಾರಾವಾಹಿಯೇನು ಅಲ್ಲ, ಈ ಧಾರವಾಹಿ ಬರುವ ಹೊತ್ತಿಗೆ ಧಾರಾವಾಹಿಗಳ ನಿರ್ಮಾಣ, ಪ್ರಸಾರ, ವೀಕ್ಷಣೆಯಲ್ಲಿ ಅವರು ಬಹು ಪರಿಣತರಾಗಿದ್ದರು.

ಅನ್ಯ ದೇಶಗಳಿಂದ ಬ್ರಿಟನ್ ಗೆ ಹೋಗಿ ನೆಲೆಸುವ ಕಾರ್ಮಿಕ ವರ್ಗದವರು ಇಂಗ್ಲಿಷ್ ಭಾಷೆಯನ್ನ ಕಲಿಯುವ ಆರಂಭದಲ್ಲಿ ಮಾಡುವ ಅತಿ ಮುಖ್ಯ ಲೋಪಗಳನ್ನು ಹೆಕ್ಕಿಕೊಂಡು ಅದರ ಸುತ್ತಲೇ ಕಥೆ ಹೆಣೆದು, ಅದಕ್ಕೊಂದಿಷ್ಟು ಹಾಸ್ಯವನ್ನು, ಇತರೆ ಸಂಸ್ಕೃತಿಗಳ ಸೊಗಡನ್ನು ಸೇರಿಸಿ ಮಾಡಿರುವ ಈ ಧಾರಾವಾಹಿ ಸರಿ ಸುಮಾರು ಅರ್ಧ ಶತಮಾನಗಳನ್ನು ಕಳೆದರೂ ಯುವಜನರನ್ನು ಆಕರ್ಷಿಸುವಷ್ಟು ಕಸುವನ್ನು ತನ್ನೊಡಲಲ್ಲಿ ಉಳಿಸಿಕೊಂಡಿದೆ. ಅದಾಗಲೇ ಚಿತ್ರರಂಗದಲ್ಲಿ ಖ್ಯಾತರಾಗಿರದಿದ್ದ ನಟ-ನಟಿಯರನ್ನು ಕರೆತಂದು ನಿರ್ಮಿಸಿದ ಈ ಧಾರಾವಾಹಿ ಬ್ರಿಟಿಷ್ ಚಿತ್ರರಂಗದ ಅದ್ಭುತ ಕಲಾಕೃತಿ. ಆದರೆ ವಿಷಯ ಅದಲ್ಲ, ಈ ಲೇಖನದ ಬಹುಮುಖ್ಯ ವಿಷಯ ಆ ಧಾರಾವಾಹಿಯ ಜೆರೆಮಿ ಬ್ರೌನ್ ಪಾತ್ರ ನಿರ್ವಹಿಸುವ, ಆ ಧಾರಾವಾಹಿಯ ಮುಖ್ಯ ಪಾತ್ರಧಾರಿಯೂ ಆಗಿರುವ ಬ್ಯಾರಿ ಎವಾನ್ಸ್ ಜೀವನ.

ಎವಾನ್ಸ್ ಹುಟ್ಟಿದ್ದು ಲಂಡನ್ ನಗರದ ನೈಋತ್ಯ ದಿಕ್ಕಿಗೆ, ಲಂಡನ್ ನಗರದ ಹೊರವಲಯದ ರೀತಿ ಇದ್ದ ಗಿಲ್ಡ್ ಫೋರ್ಡ್ ಎಂಬ ನಗರದಲ್ಲಿ 1943ರಲ್ಲಿ. ಎರಡನೇ ಮಹಾ ಯುದ್ಧ ನಿರ್ಣಾಯಕ ಹಂತಕ್ಕೆ ಬಂದು ನಿಂತಿದ್ದ ದಿನಗಳವು, ಯುರೋಪ್ ಖಂಡದ ಆದ್ಯಂತ ಸೇನಾ ಜಮಾವಣೆ, ಫಿರಂಗಿಗಳ ಓಡಾಟ, ಮದ್ದು-ಗುಂಡುಗಳ ಕಾಳಗ ದಿನನಿತ್ಯ ನಡೆಯುತ್ತಲೇ ಇದ್ದ ಮಾಮೂಲಿನ ವಿಚಾರಗಳಾಗಿ ಹೋಗಿದ್ದವು. ಭಾರತವೂ ಸೇರಿದಂತೆ ಎಷ್ಟೋ ದೇಶಗಳಿಂದ ಸೈನಿಕರು ಹೋಗಿ ಯೂರೋಪಿನ ತುಂಬಾ ಬೀಡು ಬಿಟ್ಟಿದ್ದರು. ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಕೆನಡಾ ದೇಶದ ಸೇನೆಯಲ್ಲಿದ್ದ ಸೈನಿಕನೊಬ್ಬ ಲಂಡನ್ನಿನ ಯುವತಿಯಾದ ರೂಬಿ ಎವಾನ್ಸ್ ಳ ಜೊತೆಗೆ ಸ್ನೇಹ ಬೆಳೆಸುತ್ತಾನೆ, ಸ್ನೇಹ ಪ್ರೀತಿಗೆ ತಿರುಗುತ್ತದೆ. ಅದು ಮದುವೆಗೆ ತಿರುಗುವ ಮೊದಲೇ ಅವರ ಪ್ರೇಮದ ಕುರುಹಾಗಿ ಬ್ಯಾರಿ ಎವಾನ್ಸ್ ಜನಿಸುತ್ತಾನೆ. ಆತನ ತಂದೆಯಾಗಿದ್ದ ಕೆನಡಾ ದೇಶದ ಆ ಸೇನಾ ವ್ಯಕ್ತಿ ಬದುಕುಳಿದನೋ, ಇಲ್ಲ ಯುದ್ಧದಲ್ಲಿ ಮಡಿದನೋ ಯಾವ ಮಾಹಿತಿಯೂ ಇಲ್ಲ. ಮದುವೆಯಾಗದೆ ಮಗುವನ್ನು ಹಡೆದ ರೂಬಿ ಎವಾನ್ಸ್ ತನ್ನ ಮಗನಿಗೆ ನಾಲ್ಕು ವರ್ಷಗಳಾಗುವ ವರೆಗೆ ತನ್ನ ಬಳಿಯಲ್ಲೇ ಇಟ್ಟುಕೊಂಡು ಸಲಹುತ್ತಾಳೆ, ತದನಂತರ ಆತನನ್ನು ರೆಸಿಡೆನ್ಷಿಯಲ್ ಶಾಲೆಗೆ ಸೇರಿಸುತ್ತಾಳೆ. ಈ ಮಧ್ಯೆ ರೂಬಿಗೆ ಇನ್ನೊಬ್ಬ ವರನ ಜೊತೆ ನಿಶ್ಚಿತಾರ್ಥವಾಗುತ್ತದೆ. ಆದರೆ ಮದುವೆಗೆ ಮೊದಲೇ ರೂಬಿ ತನ್ನ ಮಗನ ಬಗ್ಗೆ ಆತನಿಗೆ ತಿಳಿಸುತ್ತಾಳೆ. ಆದರೆ ಆತ ಬೇರೊಬ್ಬನಿಂದ ಜನಸಿದ ಮಗುವಿಗೆ ತಾನು ತಂದೆಯಾಗಲಾರೆ ಎಂದು ನಿರಾಕರಿಸಿಬಿಡುತ್ತಾನೆ. ಆತ ನಿರಾಕರಿಸಿದ ಮೇಲೆ ರೂಬಿ ತನ್ನ ತಾಯಿಯ ಮೊರೆ ಹೋಗುತ್ತಾಳೆ, ಆದರೆ ವಯಸ್ಸಾಗಿದ್ದ ಆಕೆಯ ತಾಯಿ ರೂಬಿ ಇಲ್ಲದೆ ತಾನೊಬ್ಬಳೇ ಆ ಮಗುವಿನ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಕ್ಕೆ ನಿರಾಕರಿಸುತ್ತಾಳೆ. ಇದಾದ ತರುವಾಯೂ ಬ್ಯಾರಿ ಎವಾನ್ಸ್ ಬದುಕಿರುವವರೆಗೂ ತನ್ನ ತಾಯಿಯನ್ನು ನೋಡಲೇ ಇಲ್ಲವಂತೆ. ಬಹುಷಃ ವಯಸ್ಸಾಗಿದ್ದ ಬ್ಯಾರಿಯ ಅಜ್ಜಿಯೂ ಅಷ್ಟೊತ್ತಿಗೆ ತೀರಿಕೊಂಡಿರಬೇಕು. ರೆಸಿಡೆನ್ಷಿಯಲ್ ಶಾಲೆಯಿಂದ ಹೊರಬಿದ್ದ ಆತ ಮುಂದೆ ಸೇರಿಕೊಂಡಿದ್ದು ಅನಾಥಾಲಯಕ್ಕೆ.

ಅಲ್ಲಿ ಬ್ರಿಟನ್ನಿನ ಖ್ಯಾತ ಶಾಫ್ಟ್ಸ್ ಬರಿ ಹೋಮ್ಸ್ ಸಂಸ್ಥೆಯವರು ನಡೆಸುತ್ತಿದ್ದ ಅನಾಥ ಮಕ್ಕಳ ಶಾಲೆಯಲ್ಲಿ ತನ್ನ ಶಿಕ್ಷಣವನ್ನು ಮುಂದುವರಿಸಿದ ಬ್ಯಾರಿಯಲ್ಲಿ ಇರುವ ನಟನಾ ಕಲೆಯನ್ನು ಎಳೆಯ ವಯಸ್ಸಿನಲ್ಲಿಯೇ ಆತನ ಶಿಕ್ಷಕರು ಪತ್ತೆ ಹಚ್ಚಿದರು. ಶಾಲೆಯಲ್ಲಿ ನಡೆಯುತ್ತಿದ್ದ ನಾಟಕಗಳಲ್ಲಿ ಲಘುಬಗೆಯಿಂದಲೇ ಪಾಲ್ಗೊಳ್ಳುತ್ತಿದ್ದ ಬ್ಯಾರಿ ಎವಾನ್ಸ್ ಇತರೆ ಮಕ್ಕಳಿಗಿಂತ ಮನೋಜ್ಞವಾಗಿ ಅಭಿನಯಿಸಿಬಿಡುತ್ತಿದ್ದನಂತೆ. ತನ್ನ ನಾಟಕದ ಪಾತ್ರಗಳಿಂದಲೇ ಶಾಲೆಯಲ್ಲಿ ಖ್ಯಾತನಾದ ಬ್ಯಾರಿಗೆ ಮುಂದೆ ನಾಟಕ ರಂಗದಲ್ಲಿಯೇ ಜೀವನ ಕಂಡುಕೊಳ್ಳುವ ಹಂಬಲ ಹೇಗೆ ಮೊಳಕೆಯೊಡೆಯಿತೋ ಗೊತ್ತಿಲ್ಲ. ಅಂತೂ ಬ್ರಿಟನ್ನಿನ ಸೆಂಟ್ರಲ್ ಸ್ಕೂಲ್ ಆಫ್ ಸ್ಪೀಚ್ ಅಂಡ್ ಡ್ರಾಮಾ ದಲ್ಲಿ ನಾಟಕದ ಬಗ್ಗೆ ಕಲಿಯಲು ಸೀಟು ಸಿಕ್ಕಿತು, ಅದರ ಖರ್ಚಿಗಾಗಿ ಬ್ರಿಟನ್ನಿನ ಖ್ಯಾತ ನಾಟಕಕಾರ 'ಜಾನ್ ಜೀಲ್ ಗುಡ್' ಹೆಸರಿನಲ್ಲಿ ಕೊಡಮಾಡುವ ಸ್ಕಾಲರ್ಷಿಪ್ ಪಡೆದುಕೊಳ್ಳುವಲ್ಲೂ ಬ್ಯಾರಿ ಸಫಲನಾದ. ತನ್ನ ಜೀವನದಲ್ಲಿ ಹೆತ್ತ ತಾಯಿ, ತನ್ನ ಅಜ್ಜಿಯೇ ತನ್ನನ್ನು ತೊರೆದರೂ ಅವನೊಳಗಿದ್ದ ಕಲೆ ಅವನ ಬೆನ್ನಿಗೆ ನಿಂತುಕೊಂಡಿತು, ಜೀವನದೊಳಗೆ ಹೊಸ ದಾರಿಯೊಂದನ್ನು ತೆರೆದಿಟ್ಟಿತು.

ನಾಟಕ ಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದಂತೆಯೇ ನ್ಯಾಷನಲ್ ಥೇಟರ್ ನವರು ನಿರ್ಮಿಸಿದ ಕೆಲವು ಚಿತ್ರಗಳಲ್ಲಿ ಚಿಕ್ಕ ಅವಕಾಶಗಳು ದೊರೆತವು. 1968ರ ಹೊತ್ತಿಗೆ 'ಹಿಯರ್ ವೀ ಗೋ ರೌಂಡ್ ದಿ ಮಲ್ಬೆರಿ ಬುಷ್' ಎಂಬ ಸಿನೆಮಾದಲ್ಲಿ ನಾಯಕನ ಸ್ಥಾನ ಪಡೆದುಕೊಳ್ಳುವಲ್ಲಿ ಸಫಲನಾದ. ಅಲ್ಲಿಯವರೆಗೂ ಇತರೆ ಸಿನೆಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಿಗೆ ಬಣ್ಣ ಹಚ್ಚುತ್ತಾ, ನಾಟಕ ರಂಗದಲ್ಲಿ ಸಕ್ರಿಯವಾಗಿದ್ದುಕೊಂಡು ಜೀವನದ ನೊಗ ಎಳೆದ ಬ್ಯಾರಿಗೆ ತನ್ನ ಮೊದಲ ಪೂರ್ಣ ಪ್ರಮಾಣದ ನಾಯಕನಾಗಿ ಅಭಿನಯಿಸಿದ ಚಿತ್ರ ಒಳ್ಳೆಯ ತಿರುವನ್ನೇ ಕೊಟ್ಟಿತು. ಅದರ ಮುಂದಿನ ವರ್ಷವೇ 'ದಿ ಜರ್ನಿ ಟು ದಿ ಅನ್ನೋನ್' ಎಂಬ ಧಾರಾವಾಹಿಯಲ್ಲಿ ಮುಖ್ಯಭೂಮಿಕೆಯಲ್ಲಿ ತನ್ನ ನಟನಾ ಚಾತುರ್ಯವನ್ನು ಪ್ರದರ್ಶಿಸಿದ ಬ್ಯಾರಿ ಇಂಗ್ಲಿಷ್ ಚಿತ್ರ ರಸಿಕರ ಮನಸ್ಸಿನಲ್ಲಿ ತನ್ನ ಮುದ್ರೆಯೊಂದನ್ನು ಒತ್ತಿ ಆಗಿತ್ತು. ಮುಂದೆ ಬ್ಯಾರಿ ಮುಖ್ಯಭೂಮಿಕೆಯಲ್ಲಿ ನಟಿಸಿದ 'ಡಾಕ್ಟರ್ ಇನ್ ದಿ ಹೌಸ್' ಎನ್ನುವ ಸಿಚುಯೇಶನಲ್ ಕಾಮಿಡಿ ಧಾರಾವಾಹಿಗೆ ಬ್ರಿಟಿಷ್ ಚಿತ್ರ ರಸಿಕರು ಎಷ್ಟು ಮನಸೋತರೆಂದರೆ, ಆ ಧಾರಾವಾಹಿಯ ಸರಣಿಯನ್ನು ಈಗಲೂ ಡೌನ್ಲೋಡ್ ಮಾಡಿಕೊಂಡು ಲಕ್ಷಾಂತರ ಜನರು ವೀಕ್ಷಿಸುತ್ತಿದ್ದಾರೆ. ಅದೇ ಸಾಲಿಗೆ 'ಮೈಂಡ್ ಯುವರ್ ಲ್ಯಾಂಗ್ವೇಜ್' ಕೂಡ ಸೇರಿಕೊಂಡಿದ್ದು ಬ್ಯಾರಿಯ ಜೀವನದ ಅತ್ಯಂತ ದೊಡ್ಡ ಸಾಧನೆ ಇರಬೇಕು.

ಬೆರಳೆಣಿಕೆಯಷ್ಟು ಸಿನೆಮಾಗಳಲ್ಲಿ, ಅಚ್ಚಳಿಯದೆ ಉಳಿಯುವಂತಹ ಟಿವಿಯ ಧಾರಾವಾಹಿಗಳಲ್ಲಿ ನಟಿಸಿ ಚಿತ್ರರಸಿಕರ ಮನಸ್ಸಿನಲ್ಲಿ ನಿಂತ ಈ ಮುದ್ದು ಮುಖದ ನಟ ತನ್ನ ಜೀವಮಾನ ಪರ್ಯಂತ ಒಬ್ಬಂಟಿಯಾಗಿಯೇ ಕಳೆದದ್ದು ವಿಪರ್ಯಾಸ. ಮದುವೆ ಆಗದೇ ಹಾಗೆಯೇ ಉಳಿದಿದ್ದ ಬ್ಯಾರಿ ಪೋರ್ಚುಗಲ್ ದೇಶದಲ್ಲಿ ಭೇಟಿಯಾದ ಒಬ್ಬ ಮಹಿಳೆಯ ಜೊತೆ ಅತ್ಯಂತ ಸಲುಗೆಯಿಂದ ಇದ್ದನಂತೆ. ಆ ಮಹಿಳೆಗೆ ಮದುವೆಯಾಗಿ ನಾಲ್ಕು ಮಕ್ಕಳಿದ್ದು ಆಕೆಯ ಗಂಡ ಯಾವುದೋ ಕ್ರಿಮಿನಲ್ ಅಪರಾಧದ ಮೇಲೆ ಜೈಲು ಸೇರಿದ್ದನಂತೆ. ಈ ಕಾರಣದಿಂದ ಆಕೆಗೆ ಸಹಾಯ ಮಾಡುವ ಉದ್ದೇಶದಿಂದ ಹಿಂಕ್ಲೆ ಪಟ್ಟಣಕ್ಕೆ ಸ್ಥಳಾಂತರಗೊಂಡಿದ್ದ. 90ರ ದಶಕದ ನಡುಮಧ್ಯ ಭಾಗದಲ್ಲಿ ನಟನಾರಂಗದಲ್ಲಿ ಕೆಲಸವಿಲ್ಲದೇ ಬ್ಯಾರಿ ಕ್ಯಾಬ್ ಓಡಿಸಿ ಜೀವನ ಸಾಗಿಸಿದ್ದು ಉಂಟಂತೆ!. ಮುಂದೆ 1997ರ ಫೆಬ್ರವರಿಯ ಒಂದು ದಿನ ಲಂಡನ್ನಿನ ತನ್ನ ಮನೆಯಲ್ಲಿ ಬ್ಯಾರಿ ನಿಗೂಢವಾಗಿ ಸಾವಿಗೀಡಾದ. ಮರಣೋತ್ತರ ಪರೀಕ್ಷೆಯಲ್ಲಿ ತಲೆಗೆ ಬಲವಾಗಿ ಪೆಟ್ಟುಬಿದ್ದಿರುವುದು ಹಾಗು ದೇಹದಲ್ಲಿ ಮಿತಿಮೀರಿದ ಮಧ್ಯ ಪತ್ತೆಯಾಯ್ತಂತೆ. ಅದೊಂದು ಕೊಲೆಯೋ, ಆತ್ಮಹತ್ಯೆಯೋ ಇಲ್ಲ ಆಕಸ್ಮಿಕ ಸಾವೋ ಇಂದಿಗೂ ತಿಳಿದುಬಂದಿಲ್ಲ. ಯಾವೊಂದಕ್ಕೂ ಪ್ರಬಲ ಪುರಾವೆಗಳು ಸಿಗಲಿಲ್ಲ. ತೆರೆಯ ಮೇಲೆ ನಗು ನಗುತ್ತಾ, ತಮಾಷೆಯ ನೋಟದಲ್ಲಿ ಕಾಣಿಸಿಕೊಳ್ಳುತ್ತಿದ್ದ ಬ್ಯಾರಿ ಎವಾನ್ಸ್ ಸದ್ದಿಲ್ಲದೇ ತನ್ನ ಪಯಣ ಮುಗಿಸಿದ್ದ.

ಈ ಬ್ಯಾರಿ ಎವಾನ್ಸ್ ನ ಕಥೆಯನ್ನ ಇಲ್ಲಿ ಸವಿಸ್ತಾರವಾಗಿ ಹೇಳುವುದಕ್ಕೆ ಕಾರಣವಿಷ್ಟೇ, ನಮ್ಮಲ್ಲೂ ದೇವದಾಸಿ ತರಹದ ಅನಿಷ್ಟ ಪದ್ಧತಿಗಳು ಚಾಲ್ತಿಯಲ್ಲಿದ್ದವು, ಆ ಅನಿಷ್ಟ ಆಚರಣೆಗಳ ಫಲವಾಗಿ ಅನೇಕ ಮಕ್ಕಳು ಹುಟ್ಟಿವೆ, ಆದರೆ ತಂದೆ ಯಾರೆಂಬುದೇ ಗೊತ್ತಿಲ್ಲದ ಆ ಮಕ್ಕಳು ನಮ್ಮ ಸಮಾಜದಲ್ಲಿ ತುಳಿತಕ್ಕೊಳಪಟ್ಟಿವೆ. ದೇವದಾಸಿ ಪದ್ಧತಿಯೊಂದೇ ಅಲ್ಲ, ಯಾವ ಯಾವುದೋ ಕಾರಣಕ್ಕೆ ತನ್ನ ಹುಟ್ಟಿನ ಬಗ್ಗೆ ಅರಿವಿಲ್ಲದವರನ್ನು ಈ ಯುಗಮಾನದಲ್ಲಿ ಕೂಡ ನಮ್ಮ ಸಮಾಜದಲ್ಲಿ ಅತ್ಯಂತ ಹೀನಾಯವಾಗಿ ಕಾಣಲಾಗುತ್ತಿದೆ. ಸಮಾಜದಿಂದ ಅನಧಿಕೃತ ಬಹಿಷ್ಕಾರಕ್ಕೊಳಪಟ್ಟ ಆ ಜೀವಗಳು ಪಡುವ ಪಡಿಪಾಟಲುಗಳು ಹೃದಯ ವಿದ್ರಾವಕವಾದವು. ಇನ್ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿಯವರ ಅನೇಕ ಕಥಾನಕಗಳಲ್ಲೂ, ಅವರ ದೇವದಾಸಿ ಪದ್ಧತಿ ನಿರ್ಮೂಲನದ ಕಾರ್ಯಕ್ರಮಗಳಲ್ಲಿಯೂ ಇಂತಹ ಅನೇಕ ಖೇದಕರ ಘಟನೆಗಳನ್ನು ಕಥಾನಕಗಳನ್ನು ನಾವು ಕಂಡಿದ್ದೇವೆ. ಯಾರೋ ಮಾಡಿದ ತಪ್ಪಿನಿಂದ ಹುಟ್ಟಿದ ಮಕ್ಕಳನ್ನು ಶಿಕ್ಷಿಸುವುದಾಗಲಿ, ಮಡಿವಂತಿಕೆ ಪ್ರದರ್ಶಿಸುವುದಾಗಲಿ ನಾಗರೀಕ ಮಾನವ ಸಮಾಜಕ್ಕೆ ತರವಲ್ಲವೆಂದು ನನ್ನ ಭಾವನೆ. ಅಂತಹ ಸಮುದಾಯದ ಮಕ್ಕಳಿಗೆ ಬ್ಯಾರಿ ಎವಾನ್ಸ್ ನ ಜೀವನ ಒಂದು ಮಾದರಿಯಾಗಬಹುದು. ತಂದೆ ಯಾರೆಂದೇ ಗೊತ್ತಿಲ್ಲದೇ, ನಾಲ್ಕೈದು ವರ್ಷಕ್ಕೆ ತಾಯಿಯಿಂದಲೂ ತಿರಸ್ಕಾರಕ್ಕೊಳಪಟ್ಟು ಬೀದಿಗೆ ಬಿದ್ದ ಬ್ಯಾರಿ ಎವಾನ್ಸ್ ಸಾಹಸಗಾಥೆಗೆ ಕೊಟ್ಟಷ್ಟೇ ಬೆಲೆಯನ್ನು ನಾವು ಆ ಅನಾಥ ಮಗುವನ್ನೆತ್ತಿ ಮುದ್ದಾಡಿ ಬೆಳೆಸಿದ ಆ ಸಮಾಜಕ್ಕೂ ಕೊಡಬೇಕು. ಇಷ್ಟೆಲ್ಲಾ ಹೇಳುವಾಗ ಕನ್ನಡದ ತ್ರಿಪದಿ ಚಕ್ರವರ್ತಿ ಸರ್ವಜ್ಞನ ಜೀವನ ಕೂಡ ಒಮ್ಮೆ ನನ್ನ ಕಣ್ಣ ಮುಂದೆ ಬರುತ್ತದೆ. ಕಾಶಿಗೆ ಹೋಗುತ್ತಿದ್ದ ಯಾತ್ರಿಕನೊಬ್ಬನಿಗೆ ಕುಂಬಾರ ಮನೆತನದ ಹೆಣ್ಣು ಮಗಳಿಗೆ ಜನಿಸಿದ ಕೂಸು ನಮ್ಮ ಸರ್ವಜ್ಞ ಕವಿ. ಆತನೂ ತನ್ನ ತಂದೆಯನ್ನು ಕಂಡಿಲ್ಲದವನು, ಆದರೆ ಆಗಿನ ನಮ್ಮ ಸಮಾಜ ಆತನ ಕೌಟುಂಬಿಕ ಹಿನ್ನೆಲೆಗಲ್ಲದೆ ಆತನ ಕಾರ್ಯಕ್ಕೆ ಬೆಲೆಕೊಟ್ಟದ್ದು, ಆತನನ್ನು ಕನ್ನಡ ಸಾಹಿತ್ಯ ಕ್ಷೇತ್ರ ಎತ್ತಿ ಮುದ್ದಾಡಿ ಬೆಳೆಸಿದ್ದು ಈಗ ಇತಿಹಾಸ. ಈಗಿನ ನಾಗರೀಕ ಸಮಾಜವೂ ಈ ರೀತಿಯ ಮನೋಧೋರಣೆಯನ್ನು ಬೆಳೆಸಿಕೊಂಡರೆ ಬ್ಯಾರಿ ಎವಾನ್ಸ್ ನಂತಹ ಯುಧ್ಧಫಲಗಳೂ ಕೂಡ ಈ ಜಗತ್ತಿಗೆ ಏನಾದರೂ ಈಯಬಲ್ಲವು, ತಮ್ಮಂತಹ ಇತರರಿಗೆ ಮಾರ್ಗದರ್ಶಿಯಾಗಬಲ್ಲರು.

-o-

ಕೊನೆಯ ಬರಹ

ಉಟ್ಟ ಬಟ್ಟೆಯಲ್ಲಿ ಊರು ಬಿಟ್ಟವರ ಸಾಹಸಗಾಥೆ

ಬಹಳ ದಿನಗಳಿಂದ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ, ಸ್ವಾತಂತ್ರ್ಯಾನಂತರ ದೇಶದೊಳಗೆ ಭುಗಿಲೆದ್ದ ಕೋಮು ಹಿಂಸಾಚಾರದ ಬಗ್ಗೆ ಬರೆಯಬೇಕು ಎಂದುಕೊಳ್ಳುತ್ತಿದೆ. ಸ್ವಾತಂತ್...