ಕನ್ನಡ ನಾಡಿನಲ್ಲಿ ಈವತ್ತು ಮಿನುಗು ತಾರೆ ಎಂದರೂ ನೆನಪಾಗುವುದು ನಟಿ ಕಲ್ಪನಾ ಮಾತ್ರ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾದ ಕಲ್ಪನಾ ಹೆಸರಿಗೆ ತಕ್ಕಂತೆ ಕನ್ನಡ ಚಿತ್ರ ಜಗತ್ತಿನಲ್ಲಿ ಕೆಲವೇ ಕೆಲವು ಕಾಲ ಮಿನುಗಿ ಮರೆಯಾಗಿ ಹೋದವರು. ಕಲ್ಪನಾ ನಮ್ಮಿಂದ ಮರೆಯಾಗಿ ಇನ್ನೆರಡು-ಮೂರು ವರ್ಷಗಳಲ್ಲಿ ನಾಲ್ಕು ದಶಕ ಸಂದುಬಿಡಲಿದೆ. ಚಿತ್ರಗಳಲ್ಲಿ ಜನರೆಲ್ಲರೂ ತೆರೆಯ ಮೇಲೆ ಕಾಣುವಂತೆ ನಟಿಯ ನಿಜ ಜೀವನದಲ್ಲಿಯೂ ಹಲವು ಸಿನಿಮೀಯ ಘಟನೆಗಳು ನಡೆದು ಆಕೆಯನ್ನು ಮಾನಸಿಕವಾಗಿ ಝರ್ಜರಿತಳನ್ನಾಗಿ ಮಾಡಿ ಕೊನೆಗೊಂದು ದಿನ ಸಾವಿನ ಮನೆಯ ಅತಿಥಿಯಾಗಿದ್ದು ಇದೀಗ ದುರಂತ ಇತಿಹಾಸ.
ಸಿನಿಮಾ ಹಾಗು ನಾಟಕ ರಂಗ ಎರಡನ್ನು ತೀರಾ ಹತ್ತಿರದಿಂದ ಬಲ್ಲ ಕಲ್ಪನಾರಿಗೆ ಮೇಲ್ನೋಟಕ್ಕೆ ಆರ್ಥಿಕ ತೊಂದರೆಗಳು ಭಾದಿಸಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಇನ್ನಿತರ ವಯಕ್ತಿಕ ತೊಂದರೆಗಳಿದ್ದರೂ ಅವುಗಳೆಲ್ಲವನ್ನೂ ನಿಭಾಯಿಸಿ ಅಭಿಮಾನಿಗಳೆದುರಲ್ಲಿ ಗಟ್ಟಿಗಿತ್ತಿ ಎನ್ನಿಸಿಕೊಳ್ಳಬಹುದಿತ್ತು. ಆ ಮೂಲಕ ತಮ್ಮ ಎಷ್ಟೋ ಅಭಿಮಾನಿಗಳ ಜೀವನದಲ್ಲೂ ಒಂದು ಮಾದರಿಯಾಗಿ ನಿಲ್ಲಬಹುದಿತ್ತು. ಆದರೆ ನಡೆದಿದ್ದು ಒಂದೂ ಹೀಗಿಲ್ಲವಲ್ಲ!!. ಬೆಳಗಾವಿಯ ಸಂಕೇಶ್ವರದ ಬಳಿಯ ಗೋಟೂರು ಪ್ರವಾಸಿ ಮಂದಿರದಲ್ಲಿ ನಾಟಕ ಪ್ರದರ್ಶನಗಳ ನಿಮಿತ್ತ ಉಳಿದುಕೊಂಡಿದ್ದ ಕಲ್ಪನಾ ಅಲ್ಲಿಯೇ ಆತ್ಮಹತ್ಯೆ ಮಾಡಿಕೊಂಡು ನಿಜ ಜೀವನದಲ್ಲಿಯೂ ದುರಂತ ನಾಯಕಿಯಾಗಿದ್ದರು. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಕಲ್ಪನಾ ತಮ್ಮ ಕೈಲಿದ್ದ ವಜ್ರದ ಉಂಗುರ ವನ್ನು ಸುತ್ತಿಗೆಯಿಂದ ಕುಟ್ಟಿ ಪುಡಿ ಮಾಡಿ ಸೇವಿಸಿದ್ದು ಸಾವಿಗೆ ಕಾರಣ ಎಂದು ಉಲ್ಲೇಖಿತವಾಗಿದೆ. ಮರಣೋತ್ತರ ಪರೀಕ್ಷೆಯಲ್ಲೂ ಅದೇ ದೃಢ ಪಟ್ಟಿದೆ. ಆದರೆ ಕಲ್ಪನಾ ಚಿಕ್ಕಮ್ಮ ಪ್ರಕಾರ ಕಲ್ಪನಾ ರು ಸೇವಿಸಿದ್ದರೆನ್ನಲಾದ ವಜ್ರದುಂಗುರ ಅವರದೇ ಅಲ್ಲವಂತೆ. ಮುಖದ ಮೇಲೆ ಆಗಿದ್ದ ಗಾಯವೂ ಅನುಮಾನಾಸ್ಪದವಾಗಿದ್ದು ಆ ಬಗ್ಗೆ ಇನ್ನೂ ಹೆಚ್ಚಿನ ತನಿಖೆಯಾಗಬೇಕು ಎನ್ನುವುದು ಕುಟುಂಬ ಸದಸ್ಯರ ಆಗ್ಗಿನ ಬೇಡಿಕೆಯಾಗಿತ್ತಂತೆ.
ಬೇಡಿಕೆಗಳು, ಹೇಳಿಕೆಗಳು, ಕೇಳಿಕೆಗಳು, ಮನವಿಗಳೂ ಏನೇ ಆದರೂ ಒಳ್ಳೆಯ ಹೆಂಡತಿಯಾಗಿ, ಪ್ರೀತಿಯ ಪತ್ನಿಯಾಗಿ, ಮಾನಸಿಕ ಅಸ್ವಸ್ಥೆಯಾಗಿ, ದೇವರೇ ಕೊಟ್ಟಂತಹ ತಂಗಿಯಾಗಿ, ಪೌರಾಣಿಕ ಪಾತ್ರಗಳಲ್ಲಿ ಐತಿಹಾಸಿಕ ಪಾತ್ರಗಳಲ್ಲಿ ಗತ ಕಾಲದ ಹೆಣ್ಣಾಗಿ ನಟಿಸಿ ಕನ್ನಡಿಗರ ಮನಸಿನೊಳಗೆ ಇಳಿದು ಆಯಾ ಪಾತ್ರಗಳ ಮೂಲಕವೇ ಜ್ಞಾಪಕದಲ್ಲಿದ್ದ ಕಲ್ಪನಾ ಅದಾಗಲೇ ಜೀವನ ರಂಗದಿಂದಲೂ ತೆರೆ ಮರೆಗೆ ಸರಿದು ಹೋಗಿಯಾಗಿತ್ತು. ಅಲ್ಲಿಗೆ ಕನ್ನಡಿಗರ ಕಲಾ ಪ್ರಚಾರಕಿಯೊಬ್ಬಳು ಕಲಾ ಪ್ರಪಂಚದಿಂದ ಬಹು ದೂರ ಪಯಣಿಸಿಬಿಟ್ಟಿದ್ದಳು. ಅಂದು ಕಲ್ಪನಾ ಜೀವನದಲ್ಲಿ ನಡೆದ ದುರಂತ ಬರೀ ಆಕೆಯ ಪಾಲಿಗೆ ದುರಂತವಾಗದೆ ಕನ್ನಡ ಚಿತ್ರರಂಗದ ಪಾಲಿಗೆ ದುರಂತವಾಗಿ ಹೋಗಿದ್ದು ಸುಳ್ಳಲ್ಲ.
ಇಂತಹ ಮಿನುಗು ತಾರೆ ತಮ್ಮ ಇಹಲೋಕ ಯಾತ್ರೆ ಮುಗಿಸುವ ಮೊದಲು ತಮ್ಮ ಕುಟುಂಬ ಸದಸ್ಯರಿಗೂ, ಪೊಲೀಸ್ ಅಧಿಕಾರಿಗಳಿಗೂ ಬರೆದ ಪತ್ರ ಎಲ್ಲೋ ಸಿಕ್ಕಿತು. ಅದನ್ನೇ ಯಥಾವತ್ತಾಗಿ ಸಾದರಿಸಿದ್ದೇನೆ.
***
ಅಮ್ಮ,
ನಿನ್ನೆನಿಮಗೆ
1,200 ರೂಪಾಯಿಗಳನ್ನು ಮನಿಯಾರ್ಡರ್ ಕಳುಹಿಸಿದ್ದೇನೆ.ಈವತ್ತು ಈ 300 ರೂಪಾಯಿಗಳ
ಡ್ರಾಫ್ಟ್ ಅನ್ನು ಕಳುಹಿಸುತ್ತಿದ್ದೇನೆ. ನನ್ನ ಗಂಟಲು ನೋವಿನಿಂದ ಆಗಾಗ ನಾಟಕಗಳು ನಿಲ್ಲುತ್ತಾ ಇವೆ. ದೇವರೇ ನನ್ನ ಕಾಪಾಡಬೇಕು. ಬಾಬನಿಗೂ ಈವತ್ತು 400
ರೂಪಾಯಿಗಳನ್ನು ಕಳುಹಿಸುತ್ತಿದ್ದೇನೆ. ಮಿಕ್ಕ ಹಣವನ್ನು ಅವನಿಗೆ ಇನ್ನೆರಡುದಿನಗಳಲ್ಲಿ ಕಳುಹಿಸುತ್ತೇನೆ.
ನೀವೂ
ಚಿಕ್ಕಮ್ಮ ಆರೋಗ್ಯವೆಂದು ನಂಬಿದ್ದೇನೆ. ಗಂಟಲಿನ ತೊಂದರೆ ಇಲ್ಲದಿದ್ದರೆ ಬೇರೆ ಎಲ್ಲ ವಿಚಾರಗಳಲ್ಲೂ ನಾನೂ ಆರೋಗ್ಯವಾಗಿದ್ದೇನೆ. ತಿಂಗಳ ಕೊನೆಯಲ್ಲಿ ಊರಿಗೆ ಬರುತ್ತೇನೆ. ಇಲ್ಲಿಂದ ಮುಂದೆ ಬಿಜಾಪುರ ಅಥವಾ ಜಮಖಂಡಿಗೆ ಹೋಗುತ್ತಿದ್ದೇವೆ. ಆ ಊರು ಸೇರಿದ
ಮೇಲೆ ಪತ್ರ ಬರೆಯುತ್ತೇನೆ. ನಿಮ್ಮ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ.
ಇಂತಿ ನಿಮ್ಮ ಮಗಳಾದ
ಕಲ್ಪನಾ.
ಮಾನ್ಯ
ಪೊಲೀಸ್ ಅಧಿಕಾರಿಗಳಿಗೆ,
ನಿಮಗೆ
ನನ್ನ ಕೊನೆಯ ನಮಸ್ಕಾರಗಳು. ನನಗೆ ಹೋದಲ್ಲಿ ಬಂದಲ್ಲಿ ತಕ್ಕ ಕಾವಲು ಕೊಟ್ಟು ನನ್ನ ಗೌರವಕ್ಕೆ ತುಸು ಧಕ್ಕೆ ಬಾರದಂತೆ ಕಾಪಾಡಿದ ನಿಮಗೆ ಇದೋ ನನ್ನ ಅನಂತ ಕೃತಜ್ಞತೆಗಳು.
ನನ್ನ
ಮುಖದ ಮೇಲಿರುವ ಗಾಯಗಳನ್ನು ನೋಡಿ ನೀವು ಆಶ್ಚರ್ಯ ಪಡಬಹುದು ಅಲ್ಲವೇ?. ನಿನ್ನೆ ನಾಟಕಕ್ಕೆ ಹೋಗುವಾಗ ಆಕಸ್ಮಿಕವಾಗಿ ಕಾರಿಗೆ ಅಡ್ಡ ಬಂದ ಹಸು ಕಾಪಾಡುವುದಕ್ಕಾಗಿ ಹಾಕಿದ ಸಡನ್ ಬ್ರೇಕ್ ನಿಂದಾಗಿ ನನ್ನ ಮುಖ ಎದುರಿನ ಸೀಟಿಗೆ ಬಡಿದು ಮುಖದಲ್ಲಿ ಗಾಯಗಳಾಗಿವೆ.
ಸಾವು,
ನಿಜ. ಇದು ನಾನು ಸಂತೋಷದಿಂದ ಬರಮಾಡಿಕೊಂಡ ಸಾವು. ಇದಕ್ಕೆ ಯಾರೂ ಕಾರಣರಲ್ಲ.ಬದುಕು ಸಾಕೆನಿಸಿತು. ತೀರದ ನಿದ್ರೆಯಲ್ಲಿ ಮುಳುಗಿರಬೇಕೆನಿಸಿತು. ಇದು ನನ್ನ ಮನಸ್ಸಿಗೆ ಎಷ್ಟೋ ಆನಂದ, ನೆಮ್ಮದಿ, ಸುಖ ಸಂತೋಷಗಳನ್ನು ತಂದಿದೆ. ನಾನಿಂದು ಪರಮ ಸುಖಿ.
ನನ್ನ
ಅಭಿಮಾನಿಗಳೆಲ್ಲರಿಗೂ, ಅಭಿಮಾನಿಗಳಲ್ಲದವರಿಗೂ ಇದೋ ನನ್ನ ಕೊನೆಯ ನಮಸ್ಕಾರ. ಜೀವನದಲ್ಲಿ ಏನೇನು ಮಾಡಿ ಮುಗಿಸಬೇಕೆಂದಿದ್ದೇನೋ ಅದನ್ನೆಲ್ಲ ದೇವರ ದಯದಿಂದ ಮಾಡಿ ಮುಗಿಸಿದ್ದೇನೆ. ಒಳ್ಳೆಯ ಉತ್ತಮವಾದ ಕನ್ನಡ ಚಿತ್ರವೊಂದನ್ನು ನಿರ್ಮಾಣ ಮಾಡುವ ಆಸೆ ಈವತ್ತು ನನ್ನ ಜೊತೆಯಲ್ಲಿಯೇ ಸಾಯುತ್ತಿದೆ. ದೈವೇಚ್ಛೆ !!!
ಬದುಕು
ಜಟಕಾ ಬಂಡಿ
ವಿಧಿ
ಅದರ ಸಾಹೇಬ
ಮದುವೆಗೋ
ಮಸಣಕೋ
ಹೋಗೆಂದ
ಕಡೆ ಹೋಗು
ಮಂಕುತಿಮ್ಮ.
-ಇತಿ
ಕಲ್ಪನಾ