ಶನಿವಾರ, ಡಿಸೆಂಬರ್ 3, 2016

ಬುದ್ಧನೆದ್ದ

ಭಗವಾನ್ ಬುದ್ಧ ಒಮ್ಮೆ ತನ್ನ ಶಿಷ್ಯರ ಒಡಗೂಡಿ ಲೋಕ ಸಂಚಾರ ಮಾಡುತ್ತಾ ಹಳ್ಳಿಯೊಂದಕ್ಕೆ ಬಂದ. ಆ ಹಳ್ಳಿಯಲ್ಲಿ ಇದ್ದ ಶ್ರೀಮಂತನೊಬ್ಬನಿಗೆ ಬುದ್ಧನ ಯಾವ ಭೋಧನೆಗಳಲ್ಲೂ ನಂಬಿಕೆಯಿರಲಿಲ್ಲ. ಹೀಗಾಗಿ ಬುದ್ಧನಿಗೆ ಸರಿಯಾಗಿ ಬುದ್ಧಿ ಕಲಿಸಬೇಕೆಂದು ತೀರ್ಮಾನ ಮಾಡಿಕೊಂಡು ರೋಷಾವೇಶದಿಂದ ಕುದಿಯುತ್ತಾ ಬುದ್ಧನ ಬಳಿಗೆ ಬಂದು ಕಿರುಚಾಡಲು ಶುರು ಮಾಡಿದ. "ನೀನೇನು ಮಹಾ ದೇವ ಮಾನವನೋ?.....ನೀನು ಹೇಳುವ ಮಾತುಗಳೆಲ್ಲಾ ತಲೆ ಬುಡವಿಲ್ಲದೆ ನಿರಾಧಾರ ವಾಗಿರುವಂತಹವು, ಇಷ್ಟಕ್ಕೂ ಇನ್ನೊಬ್ಬರಿಗೆ ಭೋಧನೆ  ಮಾಡಲು ನಿನಗೆ ಅಧಿಕಾರ ಕೊಟ್ಟವರ್ಯಾರು" ಎಂದೆಲ್ಲಾ ಆವೇಶದ ಮಾತುಗಳನ್ನಾಡುತ್ತಾನೆ.

ಎಲ್ಲವನ್ನೂ ಸಮಾಧಾನದಿಂದಲೇ ಕೇಳಿಸಿಕೊಂಡ ಬುದ್ಧ  ಶ್ರೀಮಂತನಿಗೆ ಪ್ರಶ್ನೆಯೊಂದನ್ನು ಕೇಳುತ್ತಾನೆ "ಮಗೂ ನಾನು ಯಾರಿಗೋ ಕೊಡಲೆಂದು ಉಡುಗೊರೆಯೊಂದನ್ನು ತಂದಿದ್ದೇನೆ, ಆದರೆ ನಾನು ಕೊಟ್ಟ ಉಡುಗೊರೆಯನ್ನು ಯಾರು ಸ್ವೀಕರಿಸಲಿಲ್ಲವೆಂದಾಗ ಆ ಉಡುಗೊರೆ ಯಾರ ಪಾಲಾಗುತ್ತದೆ?".

ಅನಿರೀಕ್ಷಿತ ಪ್ರಶ್ನೆಯಿಂದ ಶ್ರೀಮಂತ ಅಚ್ಚರಿಗೊಳಗಾದರೂ ಉತ್ತರಿಸುತ್ತಾನೆ. "ಆ ಉಡುಗೊರೆ ಕೊಂಡು ತಂದವರದ್ದೇ ಆಗುತ್ತದೆ".

ಬುದ್ಧ ಅದಕ್ಕೆ ಪ್ರತಿಕ್ರಿಯಿಸುತ್ತಾನೆ , "ಅಂತೆಯೇ ನೀನು ನನ್ನ ಮೇಲೆ ವಿನಾ ಕಾರಣ ಕೋಪಗೊಂಡರೆ ನಾನು ಅದನ್ನು ಸ್ವೀಕರಿಸುವುದಿಲ್ಲ, ಹಾಗೆಂದ ಮೇಲೆ ನಿನ್ನ ಕೋಪ ನಿನಗೆ ಹಿಂದಿರುಗಿ ಬಂತು ಎಂದಲ್ಲವೇ".ಶ್ರೀಮಂತನು ಹೌದು ಎನ್ನುತ್ತಾನೆ.

ನೀನು ಪರರನ್ನು ದ್ವೇಷಿಸಿದರೆ ಆ ದ್ವೇಷವನ್ನು ಯಾರು ಸ್ವೀಕರಿಸುವುದಿಲ್ಲ, ಅಂದ ಮೇಲೆ ಆ ದ್ವೇಷ ನಿನಗೆ ಹಿಂತಿರುಗಿ ಬರುತ್ತದೆ. ದ್ವೇಷವೇ ಹಿಂದಿರುಗಿ ಬಂದಾಗ ಸಂತೋಷ, ನೆಮ್ಮದಿಗಳು ಕನಸಾಗಿಯೇ ಉಳಿಯುತ್ತವೆ. ಹಾಗಾಗಿ ದ್ವೇಷ, ಅಸೂಯೆಗಳನ್ನು ಶಮನ ಮಾಡಿ ಪ್ರೀತಿಯನ್ನು ಕೊಟ್ಟಾಗ ಮಾತ್ರ ಜೀವನ ಸುಖಮಯವಾಗುತ್ತದೆಂದು ಬುದ್ಧ ತನ್ನ ಮಾತು ಮುಗಿಸುತ್ತಾನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...