ಶನಿವಾರ, ಜನವರಿ 21, 2017

ಕರ್ನಾಟಕ ರಾಜ್ಯ ಬಿ ಜೆ ಪಿ ಅವಸಾನದ ಹಾದಿಯಲ್ಲಿ

ಕರ್ನಾಟಕದಲ್ಲಿ ಹಿಂದಿನ ಸರ್ಕಾರ ಬಿ ಜೆ ಪಿ ಕೈಯಲ್ಲಿದ್ದಾಗ ರೆಸಾರ್ಟ್ ರಾಜಕೀಯ ದಿಂದ ಆರಂಭವಾಗಿ ಸಾಲು ಸಾಲು ಮಂತ್ರಿಗಳು ಜೈಲು ಕಂಡು ಹಿಂದಿರುಗಿ ಬರುವಾಗ ಕರ್ನಾಟಕ ರಾಜ್ಯ ಕಾಂಗ್ರೆಸ್ ಮೌನ ತಳೆದಿತ್ತು. ಕಾರಣ ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಅದಕ್ಕೆಲ್ಲ ತಕ್ಕ ಪಾಠ ಎನ್ನುವಂತೆ ೨೦೧೩ ರ ವಿಧಾನಸಭಾ ಚುನಾವಣೆಯಲ್ಲಿ ಬಿ ಜೆ ಪಿ ಯಿಂದ ಸರ್ಕಾರ ಕಾಂಗ್ರೆಸ್ ಪಾಲಾಯಿತು. ಇದೀಗ ರಾಜ್ಯ ಕಾಂಗ್ರೆಸ್  ಸರ್ಕಾರದಲ್ಲಿ ಹಲವಾರು ಋಣಾತ್ಮಕ ವಿದ್ಯಮಾನಗಳು ಜರುಗುತ್ತಿದ್ದರೂ(ವಯಕ್ತಿಕವಾಗಿ ನನಗೆ ಆಘಾತ ಉಂಟು ಮಾಡಿದ್ದು ಲೋಕಾಯುಕ್ತವನ್ನು ಇಲ್ಲದಂತೆ ಮಾಡಿದ್ದು) ಬಿ ಜೆ ಪಿ ಮೌನ ತಳೆದಿದೆ. ಕಳೆದ ಚುನಾವಣೆಯಂತೆ ಕರ್ನಾಟಕದ ಜನ ಮೌನವಾಗಿರುವ ಪಕ್ಷದ ಜನರಿಗೆ ವೋಟಿನ ಬಟ್ಟನ್ನೊತ್ತಿ ತಮ್ಮನ್ನೇ ಚುನಾಯಿಸಿ ಬಿಡುತ್ತಾರೆ ಎಂಬ ಭ್ರಮಾ ಲೋಕ ಸೃಷ್ಟಿಸಿಕೊಂಡು ಕೂತಿದ್ದಾರೆ ಕರ್ನಾಟಕ ರಾಜ್ಯ ಬಿ ಜೆ ಪಿ ವರಿಷ್ಠರು. ಅತ್ತ ಕೇಂದ್ರದಲ್ಲಿ ನರೇಂದ್ರ ಮೋದಿ ಕಾಲಿಗೆ ಚಕ್ರ ಕಟ್ಟಿಕೊಂಡು ದೇಶದ ಒಳಗೂ ಹೊರಗೂ ಸುತ್ತಿ ದೇಶಕ್ಕಾಗಿ ದಿನಕ್ಕೆ ೧೮ ಗಂಟೆ ದುಡಿಯುತ್ತಿದ್ದಾರೆ, ಇತ್ತ ರಾಜ್ಯದಲ್ಲಿ ಕಾವೇರಿ ವಿವಾದ ಭುಗಿಲೆದ್ದಾಗ ಮುಖ್ಯಮಂತ್ರಿಗಳು ಕರೆದ ಸರ್ವ ಪಕ್ಷ ಸಭೆಯನ್ನು ಬಹಿಷ್ಕರಿಸಿ ಬಿ ಜೆ ಪಿ ಜಾಣ ಮೌನ ಪ್ರದರ್ಶಿಸಿತು. ಅಂತಹ ಸಮಯದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ನಡೆದುಕೊಂಡ ರೀತಿ ಸ್ತುತ್ಯಾರ್ಹ. ಅದು ಬರೀ ನಡೆಯಲ್ಲಿ ಮುತ್ಸದ್ದಿತನ, ನಿಜವಾದ ರೈತ ಕಾಳಜಿ. ಅದಕ್ಕೆ ಧನಾತ್ಮಕವಾಗಿ ಪತಿಕ್ರಿಯಿಸಿದ ನರೇಂದ್ರ ಮೋದಿಯವರ ನಡೆಯು ಕನ್ನಡ ನಾಡಿನ ಪಾಲಿಗೆ ಆಶಾದಾಯಕ. ಕರ್ನಾಟಕದ ರೈತರ ದೃಷ್ಟಿಯಿಂದ ದೇವೇಗೌಡರಿಗೆ ಇನ್ನಿಲ್ಲದ ಗೌರವ ಸಲ್ಲಬೇಕು, ಅಂತೆಯೇ ದೇಶದ ಸರ್ವಾಂಗೀಣ ಬೆಳವಣಿಗೆಗೆ ಪಣ ತೊಟ್ಟಿರುವ ನರೇಂದ್ರ ಮೋದಿಯವರಿಗೂ ಕನ್ನಡಿಗರ ಬಲ ಗೌರವ ಸಂದಬೇಕು. ಆದರೆ ತಮ್ಮ ತಮ್ಮಲ್ಲೇ ಕಚ್ಚಾಡಿಕೊಂಡು ಈಗಲೂ ಬಡಿದಾಡುತ್ತಿರುವ ರಾಜ್ಯ ಬಿ ಜೆ ಪಿ ಯನ್ನು ದಾರಿಗೆ ತರುವರ್ಯಾರು?......ಇಂತಹ ಸನ್ನಿವೇಶದಲ್ಲಿ ಕನ್ನಡ ನಾಡಿಗೆ   ವರವಾಗಿ ನಿಲ್ಲಬಲ್ಲ ರಾಜಕೀಯ ಪಕ್ಷವಾವುದು?....ಎಲ್ಲ ನಿಮ್ಮಿಚ್ಛೆಗೆ ಬಿಟ್ಟಿದ್ದು. ಈಗ ಮುಂದಿನ ಚುನಾವಣೆಯಲ್ಲಿ ಬುದ್ಧಿವಂತರಾಗುವ ಸರದಿ ನಿಮ್ಮದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...