ಶುಕ್ರವಾರ, ಸೆಪ್ಟೆಂಬರ್ 9, 2016

ಕನ್ನಡ ನಾಡಿನ ಜೀವನದಿ

ಏಳು ಜೀವನದಿಗಳಲ್ಲಿ ಒಂದಾದ ಕಾವೇರಿ ತನ್ನ ಹರಿವಿನೊಂದಿಗೆ ಹಲವಾರು ಕಾಲಘಟ್ಟಗಳಲ್ಲಿ ಹತ್ತು ಹಲವು ಸಂಸ್ಕೃತಿಗಳನ್ನೂ, ಜೀವನ ಶೈಲಿಗಳನ್ನು, ಆಡಳಿತಗಳನ್ನು, ಆಕ್ರಮಣಗಳನ್ನು, ವಿವಾದಗಳನ್ನು ಕಂಡಿದ್ದಾಳೆ ಹಾಗು ಇನ್ನು ಕಾಣುತ್ತಿದ್ದಾಳೆ. ವಸಾಹತೋತ್ತರದಲ್ಲಿ ಆಕೆಯ ಹೆಸರು ಹೆಚ್ಚಿನ ಪ್ರಮಾಣದಲ್ಲಿ ಕೇಳಿಬರುವುದು ಹಾಗು ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗುವುದು ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಮಾತ್ರ. ಇನ್ನುಳಿದಂತೆ ಜನ ಸಾಮಾನ್ಯರೊಂದಿಗೆ ಬೆರೆತು ಸಾಮಾನ್ಯಳೇ ಆಗಿಹೋಗಿದ್ದಾಳೆ ಆ ಮಹಾ ತಾಯಿ.

ಕಾವೇರಿ ಸೀಮೆಯ ಮಳೆ, ನೀರು ಸಂಗ್ರಹ ವಿಚಾರಗಳನ್ನು ಗಮನಿಸುವಾಗ ನೋಡಬೇಕಾದ ಮುಖ್ಯವಾದ ಸಂಗತಿಯೆಂದರೆ ಬೆಂಗಳೂರು, ತುಮಕೂರು, ಅರ್ಧ ಮೈಸೂರು, ಅರ್ಧ ಮಂಡ್ಯ ಜಿಲ್ಲೆಯಲ್ಲಿ ಸುರಿದ ಮಳೆ ನೀರು ಕೆ ಆರ್ ಎಸ್ ಜಲಾಶಯಕ್ಕೆ ಸೇರದು. ಬದಲಾಗಿ ಜಲಾಶಯದ ನಂತರ ಬರುವ ನದಿ ಭಾಗಕ್ಕೆ ಸೇರುವುದರಿಂದ ಕರ್ನಾಟಕದಿಂದ ಆ ನೀರು ನೈಸರ್ಗಿಕವಾಗಿಯೇ ಹರಿದು ತಮಿಳುನಾಡಿನ ಮೆಟ್ಟೂರು ಜಲಾಶಯ ಸೇರುತ್ತಿದೆ. ಕರ್ನಾಟಕದ 34,273 ಚದರ ಕಿಲೋಮೀಟರು ಪ್ರದೇಶವಷ್ಟೇ ಕಾವೇರಿ ನದಿಗೆ ಮಳೆ ನೀರು ಸಂಗ್ರಹಿಸಿ ಸೇರಿಸುತ್ತಿದೆ. ಅದರಲ್ಲೂ ಕೆ ಆರ್ ಎಸ್ ಗೆ ಸೇರುವ ನೀರು ಬರೀ ಕರ್ನಾಟಕ ಹಾಗು ಕೇರಳದ ಕೆಲವು ಜಿಲ್ಲೆಗಳ ನೀರು ಮಾತ್ರ.ಕಾವೇರಿ ಕೊಳ್ಳದ ಬಹುಪಾಲು ಜಿಲ್ಲೆಗಳ ಮಳೆ ನೀರು ತಮಿಳುನಾಡಿಗೆ ಸೇರುತ್ತಿದ್ದು ಇದೀಗ ಕೆ ಆರ್ ಎಸ್ ನಲ್ಲಿ ಸಂಗ್ರಹವಿರುವ ಕೆಲವೇ ಕೆಲವು ಜಿಲ್ಲೆಗಳ ಮೂಲಕ ಸಂಗ್ರಹವಾದ ನೀರಿಗೆ ತಮಿಳುನಾಡು ಸರ್ಕಾರ ಕೊಕ್ಕೆ ಹಾಕಿರುವುದು ಕರ್ನಾಟಕದಲ್ಲಿ ವಿಷಮ ಸ್ಥಿತಿಗೆ ಕಾರಣವಾಗಿದೆ. ನದಿ ನೀರು ಹಂಚಿಕೆ ವಿಚಾರವಾಗಿ ಜಗಳ ಆರಂಭವಾಗಿ ಎಷ್ಟೋ ಬಾರಿ ಭಾಷೆ ಭಾಷೆಗಳ ವಿಚಾರಕ್ಕೆ ತಿರುಗಿ ಪರ್ಯಾವಸಾನಗೊಂಡಿರುವ ಉದಾಹರಣೆಗಳು ನಮ್ಮ ಮುಂದೆ ಸಾಕಷ್ಟಿವೆ.

ಇಂತಹ ಸಂಧರ್ಭದಲ್ಲಿ ಅನ್ಯಾಯವಾದ ರಾಜ್ಯಗಳ ರಕ್ಷಣಾ ವೇದಿಕೆಗಳು ಬೀದಿಗಿಳಿದು ಹೋರಾಡುವುದು, ಅವುಗಳ ಫಲವಾಗಿ ಒಂದಿಷ್ಟು ಜನ ಸಾಯುವುದು ಅಥವಾ ಗಾಯಾಳುಗಳಾಗಿ ಚಿಕಿತ್ಸೆ ಪಡೆಯುವುದು ಮಾಮೂಲಾಗಿ ಹೋಗಿದೆ. ಇನ್ನುಳಿದಂತೆ ಬರಗಾಲ ಎದುರಾದ ಸಂಧರ್ಭದಲ್ಲಿ ಉಭಯ ರಾಜ್ಯಗಳ ಆಡಳಿತ ವರ್ಗ ದೆಹಲಿಗೆ ದೌಡು ಕಿತ್ತು,  ಅಲ್ಲಿ ಬರ ಪರಿಸ್ಥಿತಿ ನಿರ್ವಹಣೆಗೆ ಅನುದಾನ ಬಿಡುಗಡೆ ಮಾಡಿಸಿಕೊಳ್ಳುವಲ್ಲಿ ಬ್ಯುಸಿ ಆಗಿಬಿಡುತ್ತಾರೆ. ಅದರಲ್ಲೂ ತಮಿಳುನಾಡಿಗೆ ಹೆಚ್ಚು ಅನುದಾನವೋ ಕರ್ನಾಟಕಕ್ಕೇ ಹೆಚ್ಚು ಅನುದಾನವೋ ಎಂದು ಹೋಲಿಸಿ ನೋಡುವರಿಗೂ ಕಡಿಮೆಯಿಲ್ಲ.

ಆದರೆ ದಕ್ಷಿಣ ಭಾರತದ ಈ ಮೇರು ಸಮಸ್ಯೆಗೆ ಶಾಶ್ವತ ಪರಿಹಾರವೇನು ಎಂದು ಯೋಚನೆ ಮಾಡುವರು ಬೆರಳೆಣಿಕೆಯಷ್ಟು ಮಾತ್ರ ಅಥವಾ ಇಲ್ಲವೇ ಇಲ್ಲವೇನೋ. ನಾವು ಕನ್ನಡಿಗರೊ ರಾಷ್ಟ್ರೀಯ ಪಕ್ಷಗಳನ್ನು ನಂಬಿ ವೋಟಿನ ಬಟನ್ನುಗಳನ್ನೊತ್ತಿ ಆಗಿಹೋಗಿದೆ, ಇದೀಗ ಆ ಪಕ್ಷಗಳ ನಾಯಕರ ಹೈಕಮಾಂಡುಗಳು ಎಸೆಯುವ ಬಿಸ್ಕೇಟುಗಳಿಗೆ ಬಾಯೊಡ್ಡಿಕೊಂಡು ನಿಂತಿದ್ದಾರೆ. ಅವರಿಗೆ ಎದುರಾಡಿದರೆ ಇವರಿಗೆ ಬರುವ ಸ್ಥಾನಗಳು ಮುಂದಿನ ಬಾರಿ ಕೈ ತಪ್ಪಬಾರದಲ್ಲ ಆ ಉದ್ದೇಶದಿಂದಲೋ ಏನೋ. ಮೋಸಹೋದವರು ಮಾತ್ರ ನಾವು.

ಸುಪ್ರೀಂ ಕೋರ್ಟ್ ತಾನು ಬಂದು ಮುಂದೆ ನಿಂತು ಕಾವೇರಿ ಕೊಳ್ಳದ ಜನಗಳ ಸಮಸ್ಯೆಯೇನು ಎಂದು ಆಲಿಸಿಲ್ಲ. ಬದಲಾಗಿ ಅಧ್ಯಯನ ತಂಡಗಳನ್ನು ರಚಿಸಿ ಆ ಮೂಲಕ ಸಲ್ಲಿಕೆಯಾದ ವರದಿಗಳನ್ನೇ ನಂಬಿ ನೀರಿನ ಹಂಚಿಕೆಯ ತೀರ್ಪು ಪ್ರಕಟಿಸಿದೆ. ಅಧ್ಯಯನ ತಂಡದ ಯಾವುದೋ ಒಂದು ಸಮಯದ ಭೇಟಿ ಸೂಕ್ತವೆನಿಸುವುದಿಲ್ಲ. ಕಾರಣ ಪ್ರತೀ ವರ್ಷವೂ ಮಳೆ ಪ್ರಮಾಣ ಹಾಗು ನೀರಿನ ಲಭ್ಯತೆಯ ಪ್ರಮಾಣ ಒಂದೇ ಆಗಿರುವುದಿಲ್ಲ.ವರದಿಗಳೇನೇನೇ ಇದ್ದರೂ ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರವೇನು ಎಂಬುದನ್ನು ಎದುರು ನೋಡುವುದೇ ಸೂಕ್ತ. ಒಂದೇ ನದಿಯನ್ನು ಎರಡೂ  ರಾಜ್ಯಗಳು ಹಂಚಿಕೊಳ್ಳುತ್ತಿರುವುದರಿಂದ  ಇಂದಲ್ಲ ನಾಳೆ ಮತ್ತೆ ಕಾವೇರಿ ವಿವಾದ ಭುಗಿಲೇಳುವ ಸಾಧ್ಯತೆ ಇದ್ದೆ ಇದೆ.

ಕೇಂದ್ರದಲ್ಲಿ ವಾಜಪೇಯಿ ಸರ್ಕಾರ ಅಧಿಕಾರದಲ್ಲಿದ್ದಾಗ ಭಾರತದಲ್ಲಿ ಕೆಲವು ಮುಖ್ಯ ನದಿಗಳ ಜೋಡಣೆ ಕಾರ್ಯದ ಬಗ್ಗೆ ಅಧ್ಯಯನಗಳು ನಡೆದಿದ್ದವು. ಅದರಲ್ಲಿ ಗಂಗಾ-ಕಾವೇರಿ ನದಿ ಜೋಡಣೆ ಪ್ರಮುಖವಾದದ್ದು.  ಗಂಗಾ-ಕಾವೇರಿ ನದಿ ಜೋಡಣೆಯಿಂದ ಬರೀ ಕಾವೇರಿ ಕೊಳ್ಳದ ಜನಗಳಿಗೆ ಮಾತ್ರವಲ್ಲದೆ ಗೋದಾವರಿ, ಕೃಷ್ಣಾ, ಮಹಾನದಿ ಪಾತ್ರದ ಜನಗಳಿಗೂ ಬಾರೀ ಅನುಕೂಲವಾಗಲಿದ್ದು  ಆ ಭಾಗದಲ್ಲಿ ಶೇ 40 ರಷ್ಟು ಹೆಚ್ಚು ಕೃಷಿಭೂಮಿ ನೀರಾವರಿ ವ್ಯವಸ್ಥೆ ಪಡೆಯಲಿದೆ. ಇದಿಷ್ಟೇ ಅಲ್ಲದೆ ಆ ಭಾಗದ ಪ್ರಮುಖ ಪಟ್ಟಣಗಳಿಗೂ ಕುಡಿಯುವ  ನೀರು ಪೂರೈಕೆಯಾಗಲಿದೆ. ಇಷ್ಟೆಲ್ಲ ಅನುಕೂಲಗಳಿರುವ ನದಿ ಜೋಡಣೆಗೆ ಪರಿಸರ ಸಂರಕ್ಷಣಾ ದೃಷ್ಟಿಕೋನದಲ್ಲಿ ಮಾತ್ರ ಕೆಲವು ಅಡಚಣೆಗಳಿವೆ. ಸೃಜನಾತ್ಮಕ ಯೋಚನೆಗಳಿಂದ, ನವೀನ ತಂತ್ರಜ್ಞಾನಗಳಿಂದ ಆ ಅಡಚಣೆಗಳನ್ನು ದೂರ ಮಾಡಿಕೊಳ್ಳುವುದು ಕಷ್ಟವೇನಿಲ್ಲ. ಇಷ್ಟಾದರೆ ಕಾವೇರಿಯ ಮಕ್ಕಳ ಹೊಡೆದಾಟ ಬಡಿದಾಟಗಳು ಮೂಲೆಪಾಲಾಗಿ ಸಹಬಾಳ್ವೆಗೆ ದಾರಿಯಾಗಲಿದೆ, ಹಾಗು ನಮ್ಮ ಕಾವೇರಿ ತಾಯಿ ಸುಪ್ರೀಂ ಕೋರ್ಟ್ ನ ಕಟಕಟೆ ಯಿಂದ ಕೆಳಗಿಳಿದು ಆಗಲಾದರೂ ನೆಮ್ಮದಿಯಿಂದ ಗಂಗೆಯೊಡಗೂಡಿ ಹರಿಯುತ್ತಾಳೆ. ಹಾಗೆಂದು ನಾವೆಲ್ಲರೂ ಬಯಸೋಣವೇ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...