ಬುಧವಾರ, ನವೆಂಬರ್ 2, 2016

ನಾನು ನನ್ನ ಸುತ್ತ

(ಅದು 2014ರ ಭಾರತದ ಲೋಕಸಭಾ ಚುನಾವಣೆ ಸಮಯ. ದೇಶದ ಸರ್ವ ಪಕ್ಷಗಳೂ ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ ಬಿಡಾರ ಹೂಡಿ ತಮ್ಮ ತಮ್ಮ ಪಕ್ಷಗಳ ಪರ ಪ್ರಚಾರ ಮಾಡಿಕೊಂಡು ತಿರುಗುತ್ತಿದ್ದ ಬಿರು ಬೇಸಿಗೆಯ ನಡು ಮಧ್ಯ ಕಾಲ. ಬಿಸಿಲೆಂದರೆ ಸಾಮಾನ್ಯವಲ್ಲ, ಹೊರಗಡಿಯಿಟ್ಟರೆ ಮೈಯೆಲ್ಲಾ ಗಂಧೆ ಏಳುವಷ್ಟು. ಪುಣೆಯ ಶಿವಾಜಿನಗರದ ಎಲ್ ಅಂಡ್ ಟಿ ಕಛೇರಿಯೇ ಆಗ್ಗೆ ನನ್ನ ಕಾರ್ಯಸ್ಥಾನ. ಅದೊಂದು ಶುಕ್ರವಾರ ಮಧ್ಯಾಹ್ನದ ಊಟವಾಗಿಹೋಗಿತ್ತು. ಅದೇಕೋ ಏನೋ ಇದ್ದಕಿದ್ದಂತೆ ಇಡೀ ಆಫೀಸ್ ಖಾಲಿಯಾಗಿಹೋದಂತೆ ಕಂಡಿತು. ಸುತ್ತಲೂ ಒಮ್ಮೆ ನೋಡಿದೆ ಆಗ ನನ್ನ ಕಣ್ಣಿಗೇನೇನೂ ಕಂಡಿತೋ ಅದನ್ನೆಲ್ಲ ಹಾಗೆ ಗೀಚಿದ್ದೇನೆ).

ದೇಶವೆಲ್ಲ ಬಿಸಿಲಿನಲ್ಲಿ ಬೇಯುತ್ತಿದೆ..........ದೇಶದ ರಾಜಕಾರಣದಲ್ಲಿ ಮಹಾಯಜ್ಞ ಕುಂಡವೇ ತಯಾರಾಗುತ್ತಿದೆ…… ರಾಜಕಾರಣಿಗಳು ಎದುರಾಳಿಗಳ ಪಕ್ಷದ ತಪ್ಪು ಕಂಡು ಹಿಡಿಯುವುದರಲ್ಲಿ ನಿರತರಾಗಿದ್ದಾರೆ ….. ಸುತ್ತಲೂ "ಬಿಸಿಲು ಮಳೆಗೆ ಬಿರುಗಾಳಿ ಚಳಿಗೆ ನಾವು ಅಳುಕಾಲಾರೆವು" ಅಂತ ಪಣ ತೊಟ್ಟು ಬೇಯುವ ಬಿಸಿಲಿನಲ್ಲೂ ಮರಗಳು ಹಾಗೆ ನಿಂತಿವೆ.........ಇವನ್ನೆಲ್ಲ ನೋಡುತ್ತಿರುವ ಸೂರ್ಯದೇವನು ತನ್ನ ಪ್ರಖರತೆಯನ್ನು ದಿನೇ ದಿನೇ ಹೆಚ್ಚಿಸಿಕೊಳ್ಳುವ ಉತ್ಸಾಹದಲ್ಲಿದ್ದಾನೆ.......ಭೂಮಿಯೆಲ್ಲ ಕಾದೂ ಕಾದು ಆಮ್ಲೆಟ್ಟು, ದೋಸೆ, ಚಪಾತಿಗಳಿಗೆ ಬೇರೆ ಹೆಂಚುಗಳ ಅವಶ್ಯಕತೆಯನ್ನು ಕಡಿಮೆ ಮಾಡಲು ಉತ್ಸುಕವಾದಂತಿದೆ...........… ಎಲ್ ಅಂಡ್ ಟಿ ಯ ಅರ್ಧದಷ್ಟು ಜನಗಳು ಡಾರ್ಮಿಟರಿ ಯಲ್ಲಿ ಈ ಲೋಕ ಮರೆತಿದ್ದಾರೆ, ರೈಲ್ವೆ ಸ್ಟೇಷನ್ ಮುಂದಿನ ರಸ್ತೆಯಲ್ಲಿ ಆಡುತ್ತಿರುವ ಮಕ್ಕಳು ಕ್ರಿಕೆಟ್ ಬ್ಯಾಟನ್ನಿಡಿದು ಅಬ್ಬರಿಸುತ್ತಿದ್ದಾರೆ, ಶಿವಾಜಿನಗರದ ರೈಲುಗಳು ಇವಕ್ಕೆಲ್ಲ ಸಂಬಂಧವೇ ಇಲ್ಲದಂತೆ ತಮ್ಮಷ್ಟಕ್ಕೆ ತಾವು ಹೊರಟು ಹೋಗುತ್ತಿವೆ, ಇನ್ನು ನನ್ನ ಸುತ್ತಲು ಲಾಲ್ ಬಾಗ್, ಕಬ್ಬನ್ ಪಾರ್ಕುಗಳೇ ತಯಾರಾಗಿವೆ..........ಅಲ್ಲಿ ನೋಡಬೇಕಾದ ದೃಶ್ಯಾವಳಿಗಳು ಇಲ್ಲಿಯೇ ಸಿಗುತ್ತಿವೆ ಆದರೂ ನಾನತ್ತ ಗಮನ ಕೊಡುತ್ತಿಲ್ಲ..... ಇಲ್ಲಿನ ಹುಡುಗಿಯರು ತಮ್ಮಷ್ಟಕ್ಕೆ ತಾವು ಗುಂಪು ಕಟ್ಟಿಕೊಂಡು ಹರಟುತ್ತಿದ್ದಾರೆ, ಹೊರಗಿನ ಹುಡುಗಿಯರು ಮುಖಕ್ಕೆ ಬಟ್ಟೆ ಸುತ್ತಿಕೊಂಡು ಈ ಲೋಕದಿಂದ ತಮ್ಮ ಅಮೋಘ ಸೌಂದರ್ಯವನ್ನು ಮರೆ ಮಾಚುವ ಪ್ರಯತ್ನದಲ್ಲಿದ್ದಾರೆ, ವಾಹನ ಸವಾರರು ದರಿದ್ರ ಟ್ರಾಫಿಕ್ ಜಾಮ್ ಗೆ ರೋಸಿ ಹೋಗಿ ರಸ್ತೆ ಮಗ್ಗುಲಲ್ಲೇ ಇರುವ ರಸವಂತಿ ಗೃಹಗಳಿಗೆ ಲಗ್ಗೆ ಇಟ್ಟಿದ್ದಾರೆ.......ಸಿ ಓ ಇ ಪಿ ಮುಂದೆ ನಿಂತ ಹುಡುಗರು ಕೆಲವರು ತಮ್ಮ ಇಂಟರ್ನಲ್ ಗಳ ಅಂಕಗಳನ್ನು ಲೆಕ್ಕ ಹಾಕುತ್ತಿದ್ದರೆ ಮತ್ತೆ ಕೆಲವರು ಸೊಗಸಾದ ಯಾವುದಾದರು ಸಿಕ್ಕ ಸೌಂದರ್ಯ ರಾಶಿಯನ್ನು ಸೆರೆ ಹಿಡಿಯುವ ಧಾವಂತದಲ್ಲಿದ್ದಾರೆ....... ರಸ್ತೆಗೆ ಕಣ್ಣಾಡಿಸಿದರೆ ಕೆಲವರು ಬಸ್ ಸ್ಟಾಪಿನಲ್ಲಿ ನಿಂತು ಬಸ್ ಹಿಡಿಯುವ ಆತುರದಲ್ಲಿದ್ದಾರೆ............ಅತ್ತ ರೈಲಿಗಾಗಿ ಕಾದ ಜನಗಳು ನಿಲ್ದಾಣದಲ್ಲಿ ಸಣ್ಣಗೆ ತೂಕಡಿಸುತ್ತಿದ್ದಾರೆ.............ಇತ್ತ ಕೆಲವು ಹುಡುಗರು ಕಬ್ಬು ಅರೆಯುವುದರಲ್ಲಿಯೂ, ಹಣ್ಣುಗಳ ರುಬ್ಬುವುದರಲ್ಲಿಯೂ ತೊಡಗಿಕೊಂಡು ತಮ್ಮನ್ನು ತಾವು ಮರೆತಿದ್ದಾರೆ...... ಶಾಪರ್ ಸ್ಟಾಪ್ ನಲ್ಲಿ ಕೆಲಸ ಮಾಡುವ ಹುಡುಗರು ಗಿರಾಕಿಗಳಿಲ್ಲದೆ ಬಾಗಿಲಲ್ಲಿ ಕುಂತು ಕಾಡು ಹರಟೆಯಲ್ಲಿ ನಿರತರಾಗಿದ್ದಾರೆ.............ಇನ್ನು ಕೆಲವರು ಭಾರಿ ಸುಸ್ತಾದವರಂತೆ ಹೋಗಿ ಬಿರು ಬಿಸಿಲಿನಲ್ಲಿಯೂ ಸಿಗರೇಟು ಸೇದುತ್ತಿದ್ದಾರೆ ಸಾಲದ್ದಕ್ಕೆ ಉಳಿದ ಇನ್ನೊಂದು ಕೈಯಲ್ಲಿ ಚಹಾ ಲೋಟ ಹಿಡಿದು ಅದನ್ನು ಆಗಿಂದಾಗ್ಗೆ ಹೀರುತ್ತಿದ್ದಾರೆ, ಇತ್ತ ಕಂಪನಿಯ ಒಳಗೆ  ಸೆಕ್ಯೂರಿಟಿ ಗಾರ್ಡ್ ಗಳು ತಮ್ಮ ಬದಲಾದ ಶಿಫ್ಟ್ ನ ಲೆಕ್ಕಾಚಾರದಲ್ಲಿದ್ದಾರೆ........ಕ್ಯಾಂಟೀನ್ ಜನಗಳು ಈಗಾಗಲೇ ಮುಗಿದ ಊಟದ ಪದಾರ್ಥಗಳನೆಲ್ಲ ಖಾಲಿ ಮಾಡಿ ಸಾಯಂಕಾಲದ ಸ್ನಾಕ್ಕ್ಸ್ ಟೈಮಿಗೆ ಸನ್ನದ್ಧರಾಗುತ್ತಿದ್ದಾರೆ........... ಈತ್ತ ಕೆಲವರು ಕಂಪ್ಯೂಟರ್ ಮುಂದೆ ಕೂತು ಕೂತು ಸಾಕಾಗಿ ತಲೆ ಓಡದೆ ಬ್ರೇಕ್ ಔಟ್ ಏರಿಯ ದಲ್ಲಿ ಕಾಫಿ ಹೀರಲು ಸಜ್ಜಾಗಿ ನಿಂತಿದ್ದಾರೆ....ಇನ್ನು ಕೆಲವರು ಹೊರಗಿನ ಜಗತ್ತನ್ನು ಮರೆತು ತಮ್ಮ ಕೆಲಸದಲ್ಲಿ ತಲ್ಲೀನರಾಗಿಬಿಟ್ಟಿದ್ದಾರೆ......ಬೆಂಚಿನಲ್ಲಿರುವ ಹುಡುಗರು ಈಗ ಹೇಗೆ ಸಮಯ ಕಳೆಯುವುದು ಅನ್ನುವ ಲೆಕ್ಕಾಚಾರದಲ್ಲಿದ್ದಾರೆ.....ಮತ್ತೆ ಕೆಲವರು ಜ್ಞಾನ ಸಂಪಾದನೆಗಾಗಿ ಓದುತ್ತಿದ್ದಾರೆ ....ಅಲ್ಲೆಲ್ಲೋ ದೂರದಲ್ಲಿರುವ ಕ್ಯಾಬಿನ್ ಒಳಗಿನ ಮ್ಯಾನೇಜರ್ ಸಾಹೇಬರು ಯಾರಿಗೆ ಏನು ಕೆಲಸ ಕೊಡಲಿ......ಯಾರ ರಜೆ ಗಳನ್ನೂ ಅಪ್ರೂವ್  ಮಾಡಲಿ ಅಂತ ತಲೆ ಕೆಡಿಸಿ ಕೊಂಡಿದ್ದಾರೆ.....ಈ ಕಡೆ 7ನೆ ಫ್ಲೋರ್ ಇಂದ ಈ ಫ್ಲೋರ್ ಗೆ ಲಗ್ಗೆಯಿಟ್ಟ ಹುಡುಗರು ಇಲ್ಲಿ ಇರೋವ್ರನ್ನೆಲ್ಲ ಮಾತಾಡಿಸ ಹತ್ತಿದ್ದಾರೆ.......ಕೆಲವರು ಮೌನವಾಗಿಯು, ಕೆಲವರು ವಿಷಣ್ಣ ವದನದವರಾಗಿಯು, ಕೆಲವರು ಮಾತನಾಡುತ್ತಾಲೂ, ಕೆಲವರು ಗಲಾಟೆ ಮಾಡುತ್ತಲೂ ಮತ್ತೆ ಕೆಲವರು ಜೋರಾಗಿ ನಗುತ್ತಲೂ  ಇರುವ ಈ ಪರಿಸರದಲ್ಲಿ ನನ್ನ ಕಿವಿಯಲ್ಲಿ ಮಾತ್ರ ಡಾ||ರಾಜ್ ಕುಮಾರರು ಇಂಪಾಗಿ ಹಾಡುತ್ತಿದ್ದಾರೆ.....ಅದನ್ನು ಕೇಳುತ್ತಾ ನನ್ನನ್ನು ನಾನು ಮರೆಯುತ್ತೇನೆಯೋ ಅನಿಸುತ್ತಿದೆ .............ನಾನೋಬ್ಬನೀಗ ಅದರಲ್ಲೇ ಲೀನ......

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...