ಭಾನುವಾರ, ಡಿಸೆಂಬರ್ 24, 2017

ಮಾನವೀಯತೆ - ನಿನ್ನ ವಿಳಾಸವೆಲ್ಲಿ

ಸಿರಿಯರ ಗಲ್ಲಿಯೊಳಗೊಮ್ಮೆ
ಇಣುಕಿದ್ದೆ ಮಾನವೀಯತೆಯನೊಮ್ಮೆ
ಕಣ್ತುಂಬಿಕೊಳಲು, ಏನತಿಶಯ
ಮಾನವೀಯತೆಗೆ ಹರಕು 
ಛಾಪೆ ಆಸರೆಯಾಗಿತ್ತು
ದರ್ಪ ಸುಪ್ಪತ್ತಿಗೆಯೊಳಗಿತ್ತು

ಕೊರಗುವರ ಹಟ್ಟಿದಾರದಂಗಳೊಳಗೆ
ಒಮ್ಮೆ ಕಣ್ಣು ಹಾಯಿಸಿದೆ 
ಮಾನವೀಯತೆಯನೊಮ್ಮೆ ತಡಕಿದೆ 
ಅವರಿಗೆ ತನ್ನ ವಿಳಾಸವನೀಯದೆ 
ಮಾನವೀಯತೆ ಮರೆಯಾಯಿತ್ತು 
ಸಿರಿತನದ ದಾರಿಯೊಂದೇ ಅವರ ದೃಷ್ಟಿಗೆ ನಿಲುಕಿತ್ತು 

ಓದದವರ, ಓದಿ ಬರೆದವರ 
ಒಡನಾಟಗಳೊಳಗೆಲ್ಲ ಶೋಧಿಸಿದೆ 
ಸಿರಿತನವೊಂದೇ ಸೂಜಿಗಲ್ಲಿನಂತೆ ಸೆಳೆಯುತಿತ್ತು 
ಮಾನವೀಯತೆಯೊಂದನು ಮರೆಸಿತ್ತು 
ಅಲ್ಲೂ ಅದರ ವಿಳಾಸವಿಲ್ಲ 
ಧನದಾಹ ಅದರ ವಿಳಾಸ ಮಸುಕಾಗಿಸಿತ್ತು 

ಅಲ್ಲೆಲ್ಲೋ ಕುಸಿದು ಬಿದ್ದವರ 
ಇಲ್ಲೆಲ್ಲೋ ಅಪಘಾತಗೊಂಡವರ 
ಇನ್ನೆಲ್ಲೋ ದಾರಿದ್ರೋಪದ ಅಗ್ನಿಕುಂಡದೊಳಗೆ 
ಬಿದ್ದು ನರಳಿದವರ ಕಂಡು 
ಅವರ ವರಾತಗಳೆಲ್ಲ ಮಾನವೀಯತೆಯ 
ಗೈರನ್ನು ಎತ್ತೆತ್ತಿ ತೋರಿದಂತಿತ್ತು 

ದೇವರ ಸಾಕ್ಷಾತ್ಕಾರಕ್ಕೆ ಹಿಮಾಲಯ,
ದಿವ್ಯ ತೀರ್ಥ, ಪುಣ್ಯ ಕ್ಷೇತ್ರಗಳುಂಟು
ಆತ್ಮದ ಸಾಕ್ಷಾತ್ಕಾರಕ್ಕೆ ಜೀವನ 
ನಾವಿಕೆ ದೇಹವುಂಟು 
ಮಾನವೀಯತೆಯ ಸಾಕ್ಷಾತ್ಕಾರಕೆ 
ಏನುಂಟು?. ಸಂಪೂರ್ಣವಾಗಿ ಮರೆಯಾಯಿತ್ತು 

ಮನದೊಳಗೆ ಹುದುಗಿದ ಆಸೆ ಭಾವಗಳ 
ಮಗ್ಗುಲಿಗೆ ತಳ್ಳುವ ಧೈರ್ಯ ಮಾಡಿ 
ಕೆದಕಿ ನೋಡಿದೆ, ಬಹು ದಿನಗಳಿಂದ 
ಬಳಸದೆ ಮೂಲೆಗೆ ತುರುಕಿದ್ದ ಕಬ್ಬಿಣದ 
ಗುಂಡು ತಾನು ಸೊರಗುತ್ತಾ ಮೂಲೆಯಲ್ಲಿತ್ತು 
ಕೊನೆಗೂ ಮಾನವೀಯತೆಯ ವಿಳಾಸ ದೊರೆತಾಗಿತ್ತು.

ಭಾನುವಾರ, ಡಿಸೆಂಬರ್ 3, 2017

ನನಗಾಗಿ ಜನ್ಮ ತಳೆದ ಜೇನ ಹನಿ

ಬ್ರಹ್ಮ ಲೋಕದೊಳಗೊಮ್ಮೆ
ಜೇನ ಹನಿಯೊಂದನು ಕಂಡಿದ್ದೆ
ಬ್ರಹ್ಮ ನುಡಿದಿದ್ದ ನನಗಾಗಿಯೇ
ಜೇನ ಹನಿಯೆಂದು !

ಭೂಲೋಕದೊಳಗೆಷ್ಟೆಷ್ಟೋ ಜೇನ ಹನಿಗಳು
ಎಷ್ಟೆಷ್ಟೋ ಹೂದುಂಬಿಗಳು
ಎಡತಾಕಿದೆ ನನದ್ಯಾವುದು ಇನ್ನೂ
ದೊರೆತಿಲ್ಲ, ತಿಳಿಯುತ್ತಲೂ ಇಲ್ಲ

ಹೃದಯ ಸನ್ನದ್ಧವಾಯಿತು
ಮನಸು ತೆರೆಯಿತು
ಬಾಹುಗಳು ಬಿಗಿಯಪ್ಪುಗೆಗೆ ಕಾತರಿಸಿ
ನನ್ನದೆಂಬ ಹುಂಬತನ ಕುಡಿಯೊಡೆಯಿತು

ನನಗಾಗಿ ಜನ್ಮ ತಳೆದ ಜೇನ ಹನಿ
ಎಲ್ಲೋ ಬೆಳೆದಿರುವ ಜೇನ ಹನಿ
ತಲುಪುವದೆಂದು ನನಗೆ 
ಅದೂ ನನ್ನಂತೆ ಕಾತರಿಸುತ್ತಿರುವುದೇ?

ಭಾನುವಾರ, ನವೆಂಬರ್ 26, 2017

ಇರದಿದುಮ್ ಅವಗಾಹಿಸಿ ಇರ್ಪುದ ಸ್ಪುರಿಸು

ಧರ್ಮ ತಾನ್ ದೇವರಾಗಿ
ನಿನ್ನಿಂದ ಕೈ ಮುಗಿಸಿ
ತಾನಿರ್ಪ ಜಗದಾಗರಗಳಾವನೂ
ಎಳೆಯೊಳಗೂ ಅರುಹದೇ

ಇದೇಮ್ ಧರ್ಮ ನಿರಪೇಕ್ಷ ಪರೀಕ್ಷೆ
ಅದರೊಳಗೂ ಇಳಿ
ಬರುವುದಿರುವುದೇಮ್ ತಾನಳೆದು
ಇರದಿಹ ಗುಣವಂ ಅವಗಾಹಿಸಿ
ಇರ್ಪುದ ಸ್ಪುರಿಸು
ಅದೇ ಧರ್ಮ
ಅದೇ ಜ್ಞಾನ
ಅದೇ ವಿಜ್ಞಾನ

ನಗುತಿಹಳು ನೋಡಲ್ಲಿ ಕನ್ನಡಮ್ಮ

ಕನ್ನಡವ ಉಳಿಸೆನ್ನದಿರು
ಕನ್ನಡವ ಬೆಳೆಸೆನ್ನದಿರು
ಕನ್ನಡವನುಳಿಸಿ ಬೆಳೆಸಲು
ಅದೇನು ಕಮರುತಿರುವ ಗಿಡವೇ ?
ಬತ್ತುತ್ತಿರುವ ನದಿಯೇ?

ಕನ್ನಡವೊಂದು ಹೆಮ್ಮರ
ನೆರಳರಸಿ ಬರುವರಿಗಾಶ್ರಯ
ದಣಿದವರಿಗೊಂದು ತಂಗುದಾಣ
ಬಳಲಿದವರ ತಲೆಗೊಂದು
ಮೆತ್ತೆ ಹೂವಿನ ತಲೆದಿಂಬು

ಹಮ್ಮೇನು ಬಿಮ್ಮೇನು
ಯಾರ ಹಂಗೇನು ಕನ್ನಡಕೆ
ಯುಗ ಯುಗಾಂತರಗಳುರುಳಿ
ತಲೆ ತಲಾಂತರಗಳಳಿದರೂ
ಚೆಲುವೆಲ್ಲ ತನ್ನದೆಂದು
ನಗುತಿಹಳು ನೋಡಲ್ಲಿ ಕನ್ನಡಮ್ಮ.

ಬುಧವಾರ, ನವೆಂಬರ್ 15, 2017

ಸೌಜನ್ಯ

ಮೌನವೆಂದರೇನು?
ಮಾತೆಂದರೇನು?
ಮೌನ ಮಾತುಗಳ ಬೆಲೆ
ಎಲ್ಲೆಲ್ಲಿ ಎಷ್ಟೆಷ್ಟು
ಎಲ್ಲಕೂ ಬೆಲೆಯಿದು
ಸೌಜನ್ಯ!

ಪ್ರಕೃತಿಯೆಂದರೇನು?
ವಿಕೃತಿಯೆಂದರೇನು?
ಪ್ರಕೃತಿ ವಿಕೃತಿಗಳೆರಡಕ್ಕೂ
ಜುಗಲ್ ಬಂದಿ ಅದೇ
ಸೌಜನ್ಯ!

ಅಕ್ರಮ ತಾನ್ ಮನದೊಳಗೆ
ಮೇರೆ ಮೀರಿ
ಉಕ್ಕಿ ಹರಿಯೆ
ಸಕ್ರಮ ತಾನ್ ಮನದೊಡೆಯ
ತಂದು ತಹಬದಿಯದು
ಸೌಜನ್ಯ!

ಗುರುವಾರ, ನವೆಂಬರ್ 9, 2017

ಬಾಳಿಗೊಂದು ದೀಪಿಕೆ

ಕಾರ್ಯದಲ್ಲೊಂದು ತತ್ಪರತೆ
ಬದುಕೊಳಗೊಂದು ಘನತೆ
ಅನ್ಯರೊಡನಾಟಗಳೊಳಗೂ
ಅವರರವರ ಬಾಳ್ಗೊಂದು ದೀಪಿಕೆ

ಏನಿಲ್ಲಿ ಕಾಣುತಿಹುದು?
ತಂತ್ರ- ಜ್ಞಾನಗಳನೆಲ್ಲ ಮೀರಿದ
ಮಾನವೀಯತೆ
ಕನ್ನಡವೇ ತಾನ್ ಮನುಜನಾಗಿ
ಅವತರಿಸಿ ಕುಂತಂತೆ
ಧೀಮಂತ ಕನ್ನಡತಿ

ಮನವೇನು ಗುಣವೇನು
ಮನುಜನ ಬುದ್ಧಿಯ ಸುಪರ್ದಿ
ಯೊಳಗೇನೇನೊ ಮಾಯೆ
ಅದರೊಳಗಿಳಿದು ತನ್ನ ತಾ
ಮರೆತಂತೆ ಜೀವನರಂಗದೊಳಗೆ
ತಾ ಜಾಣೆ ಈ ಕನ್ನಡತಿ

ನುಡಿಸಿದರೆಷ್ಟೋ ಸಂತೋಷ
ನಗಿಸಿದರೆಷ್ಟೋ ಉನ್ಮಾದ
ಮನುಜರ ಮನವರಿದು
ನಡೆಯುವ ಈ ಪೆಣ್ ಗಿಲ್ಲ ಸೋಲು
ಇದು ಶತ ಸಿದ್ಧ.

ಶುಕ್ರವಾರ, ನವೆಂಬರ್ 3, 2017

ನಮ್ಮ ನರೇಶ

ಎತ್ತರದ್ದೊಂದು ನಿಲುವು
ದಿಟ್ಟವಾದ್ದೊಂದು ನೋಟ
ಅರಿವ ಜ್ಞಾನಗಳೊಳಗೆ
ಸ್ಪಷ್ಟವಾದ್ದೊಂದು ಅರಿಮೆ
ನಡೆಯೊಳಗೆ ನಿಜ
ಜೀವನವರಿತ ಚತುರ

ಹೇಳಿ-ಕೇಳುವುದರೊಳಗಿನ
ನಂಬಿಕೆಗಳನೆಲ್ಲಾ ದೂರ ನೂಕಿ
ತನ್ನಾತ್ಮ ಸಂತೋಷದೊಳಗೆ
ತಲ್ಲೀನನಿವನು
ಸಂತೋಷಿಗಳೊಳಗೂ
ದುಃಖಿಗಳೊಳಗೂ
ಅವರೇ ಆಗಿ ನಿಂತುಬಿಡುವನೀ
ಹುಡುಗ

ಆಗಾಗ ಬೆದಕಿರುವ 'ನೀನೊಬ್ಬ ದಡ್ಡ'
ಇನ್ನೊಮ್ಮೆ ಕೆಣಕಿರುವ 'ನೀನೊಬ್ಬ ಅದಮ'
ಇನ್ನಾರಲ್ಲೋ ಉಸುರಿರುವ 'ನಾನೊಬ್ಬ ಮೂರ್ಖ ಶಿಖಾಮಣಿ'ಯೆಂದು
ಇನ್ನು ಏನೇನೊ ಜನರ ಭಾವಗಳು
ಎಲ್ಲವನೂ ಕಂತೆ ಮಾಡಿ
ನನ್ನತ್ತ ತೂರಿರುವ,
ನಿಜಜೀವನ ರಂಗದ ಮಜಲೊಂದನು
ಇಲ್ಲೇ ಪರಿಚಯಿಸಿರುವ

ನನಗರಿಯದ ಜಗದ ಬಾಗಿಲನು
ತೋರಿರುವ
ತಾನೆತ್ತಲೂ ಸುಳಿಯದೇ
ಧೀಮಂತನಂತೆ ಕೂತಿರುವ
ದಾರಿಗಾರರಿಗೆ ಅಡ್ಡಲಾಗದೆ
ಸುಮ್ಮನಿದ್ದವರ ಮುಂದೆ ದೂಡದೆ
ತಾನೊಬ್ಬ ತಾಳ್ಮೆ ತಳೆದು ನಗುತಿರುವ
ಅವನೇ ನಮ್ಮ ನರೇಶ.

ಕಾಲದರಿವೇ ಗುರು!!

ಕಾಲ ತಾನ್ ಕಾಲಿಕ್ಕಿ
ಕಾಲ್ಗವುಚಿದನೆಲ್ಲ ಕಲಗಚ್ಚ
ಮಾಡಿ ಮುನ್ನಡೆಯುತಿರೆ
ಮಗುವೊ? ಮಂಗವೋ?
ನೀನೊಂದೂ ತಿಳಿಯದೆ
ಅರಳಿದ ಕಣ್
ಕೆರಳಿದ ಕಿವಿಮಾಡಿ
ಭ್ರಾಂತಿಯೊಳಗೆ ಬೆಚ್ಚುವುದೇನ್

ತರವಲ್ಲ ತಗಿ
ಕಾಲ ತಾನ್ ಥೇರನೇರಿ
ಧೂಳಿಕ್ಕಿ ತಾನ್ ಧೀಮಂತನಂತೆ
ಬರುತಿರೆ ಬೆದರಿ ಚದುರಿದ
ಅಂಬೆಗರುವಂತೆ
ಗ್ರಹಣ ಬಡಿದು ಕಲ್ಲೋಲಗೊಂಡ
ಕಡಲಂತೆ ಚಡಪಡುವಯೇನ್

ಒಡಮಾಡು ಸನ್ನದ್ಧನಾಗು
ಕಾಲದೂರಿಗೊಂದೇ ಕಾಲ್ದಾರಿ
ಗುರು ಗುರಿಗಳಿಲ್ಲದೆ
ತಾನೇ ಗುರುವಾಗಿ
ತನ್ನತ್ತ ಸೆಳೆಯುತಲಿಹುದು ನಿನ್ನ
ಅದರೊಳಗೆ ಹುದುಗಿಹೋಗುವ
ಮುನ್ನ ಸಾಧಿಸುವೆಯೇನ್!?

ಕಾಲದರಿವೇ ಗುರು!!!

ಶುಕ್ರವಾರ, ಅಕ್ಟೋಬರ್ 6, 2017

ನಾವು ಗಟ್ಟಿಗರಾಗದ ಹೊರತು ಭಾಷೆ ಉಳಿಸುವುದು ಅಸಾಧ್ಯ

ಎರಡು - ಮೂರು ವರ್ಷಗಳ ಹಿಂದೆ ಮಹಾರಾಷ್ಟ್ರದ ಪುಣೆಯಲ್ಲಿದ್ದೆ. ಮನೆಯಿಂದ ಕೆಲಸದ ಸ್ಥಳಕ್ಕೆ ೧೫-೧೬ ಕಿ ಮೀ ದೂರವಾದರೂ ಲೋಕಲ್ ರೈಲು ಇದ್ದಿದ್ದರಿಂದ ಪ್ರಯಾಣ ಅಷ್ಟು ಪ್ರಯಾಸ ಎನಿಸುತ್ತಿರಲಿಲ್ಲ. ೧೫ ಕಿ ಮೀ ದೂರವನ್ನು ಹತ್ತೇ ನಿಮಿಷಗಳಲ್ಲಿ ತಲುಪುತ್ತಿದ್ದ ಶರ ವೇಗದ ರೈಲುಗಳವು. ಬಡ-ಮಧ್ಯಮ ವರ್ಗದವರಿಗೆ ಹೇಳಿ ಮಾಡಿಸಿದಂತಿದ್ದ ಲೋಕಲ್ ರೈಲು ಪುಣೆಯ ಬಡವರ ಪಾಲಿಗೆ ಪ್ರಯಾಣ ಬಂಧುವೇ ಸರಿ. ಇಂತಿದ್ದ ಬೇಸಿಗೆಯ ಒಂದು ದಿನ ಪುಣೆಯ ಚಿಂಚ್ವಾಡ್ ರೈಲು ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತ ನಿಂತಿದ್ದೆ. ಸಾಮಾನ್ಯವಾಗಿ ಅಲ್ಲಿ ಜನರು ಮರಾಠಿ ಅಥವಾ ಹಿಂದಿ ಮಾತನಾಡುವುದರಿಂದ ಯಾರಾದರೂ ಕನ್ನಡ ಮಾತನಾಡುವುದನ್ನು ಕೇಳಿದೊಡನೆ ನನ್ನ ಕಿವಿಗಳು ನೆಟ್ಟಗಾಗಿ ಬಿಡುತ್ತಿದ್ದವು. ಅತ್ತಲೇ ಕಿವಿಕೊಟ್ಟು ನಿಂತಿರುತ್ತಿದ್ದ ನಾನು ಎಷ್ಟೋ ಬಾರಿ ಅವರ ಬಳಿ ಸಾರಿ ಅವರ ಊರು ಇನ್ನಿತರ ವಿಚಾರಗಳನ್ನು ಮಾತನಾಡಿ ಕುಶಲೋಪರಿ ವಿಚಾರಿಸಿಕೊಂಡು ಹಿಂದಿರುಗುತ್ತಿದ್ದೆ. ಅಂದು ಅದೇ ಚಿಂಚ್ವಾಡ್ ರೈಲು ನಿಲ್ದಾಣದಲ್ಲಿ ಕನ್ನಡ ಮಾತನಾಡುತ್ತಿದ್ದ ಕುಟುಂಬವೊಂದು ನನ್ನ ಕಣ್ಣಿಗೆ ಬಿತ್ತು. ಅವರೊಡನೆ ಇದ್ದ ನಾಲ್ಕೈದು ಮಕ್ಕಳು, ಐದಾರು ಹೆಂಗಸರನ್ನು ಕಂಡರೆ ಇವರು ಬೇಸಿಗೆ ರಜೆ ಕಳೆಯಲು ಬಂದಿರಬೇಕು ಎನ್ನುವುದು ತಿಳಿಯುವಂತಿತ್ತು. ಇವೆಲ್ಲಕ್ಕಿಂತಲೂ ನನ್ನನು ಹೆಚ್ಚಾಗಿ ಸೆಳೆದಿದ್ದು ಅವರ ವಿಶಿಷ್ಟ ಹಿಂದಿ ಮಿಶ್ರಿತ ಕನ್ನಡ. ಆ ಕುಟುಂಬದ ಸುಮಾರು ೩೦-೩೫ ಪ್ರಾಯದ ವ್ಯಕ್ತಿಯೊಬ್ಬ ತನ್ನ ಓರಗೆಯವನೊಂದಿಗೆ ಹೀಗೆ ಮಾತನಾಡುತ್ತಿದ್ದ.

"ನಾನ್ ಅಲ್ಲಿಂದ ಜರೂರು ಬರ್ಬೇಕಾದ್ರೆ ಚುಟ್ಟಿ ತೊಗೊಂಡು ಬಾಕಿ ಏಕ್ ಹಜಾರ್ ರುಪೈ ರೊಕ್ಕ ಐತಂತ ಹೇಳಿ ಬಂದೇನಿ".

ಈ ವಾಕ್ಯ ಕೇಳಿದೊಡನೆ ಆಶ್ಚರ್ಯವಾಯಿತು. ಸದ್ಯ ಉತ್ತರ ಕರ್ನಾಟಕದಲ್ಲಿ ಆದಿಲ್ ಶಾಹಿಗಳ ಆಡಳಿತ ಮುಗಿದು ಸರಿ ಸುಮಾರು ಇನ್ನೂರು ವರ್ಷಗಳಾದರು ಕನ್ನಡದೊಳಗೆ ಹಿಂದಿ ನುಸುಳಿರುವುದು ಬರೀ ಇಷ್ಟೆಯೇ ಎನ್ನುವ ಯೋಚನೆ ತಲೆಯೋಳಗೆ ಓಡುತ್ತಿದ್ದರು, ಇದು ಹೀಗೆ ಮುಂದುವರೆದರೆ ಅವನ ಸಂಸಾರದ ಕುಡಿ ಕೊನರುಗಳೆಲ್ಲಾ ಇನ್ನೆರಡು ತಲೆ ಮಾರು ಮುಗಿಯುವುದರೊಳಗಾಗಿ ಹಿಂದಿ ಸಾಮ್ರಾಜ್ಯದ ಕಟ್ಟಾಳುಗಳಾಗಿ ಬಿಡುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಕೊಳ್ಳುತ್ತಿದ್ದೆ. ಅವರ ಸಮೀಪಕ್ಕೆ ಹೋಗಿ ಕೇಳಿದಾಗ ತಿಳಿಯಿತು ಅವರು ಬೀದರ್ ಜಿಲ್ಲೆಯ ಭಾಲ್ಕಿ ಬಳಿಯ ಒಂದು ಗ್ರಾಮದವರೆಂದು. ಕನ್ನಡ ನಾಡಿನ ಗಡಿಯೊಳಗೆ ಪರಭಾಷೆಗಳು ಅಷ್ಟೊಂದು ಸದ್ದು ಮಾಡುತ್ತಿರುವುದು ನಿಧಾನಕ್ಕೆ ನನ್ನ ಮನಸ್ಸಿಗೆ ಅರ್ಥವಾಗುವುದಕ್ಕೆ ಶುರುವಾಯಿತು. ಅಲ್ಲಿಯವರೆಗೂ ಬೆಂಗಳೂರಿನ ಎಲ್ಲ ಭಾಷಿಗರೊಂದಿಗೂ ಮಾಮೂಲಾಗಿ ಬೆರೆತುಬಿಡುತ್ತಿದ್ದ ನನಗೆ ಅಂದು ನಾನು ನನ್ನದು ಎಂಬ ಅರಿವಾಗಲು ತೊಡಗಿತ್ತು. ಯಾಕೋ ಏನೋ ಅಂದು ಮೊದಲ ಬಾರಿಗೆ ಕನ್ನಡ ನನ್ನ ಸ್ವಂತವೆನಿಸಿತ್ತು. 

ಕೆಲವು ದಿನಗಳ ಹಿಂದೆ ತುಮಕೂರು ಜಿಲ್ಲೆಯ ಮಧುಗಿರಿಯ ಹಳ್ಳಿಯೊಂದಕ್ಕೆ ಹೋಗಿದ್ದೆ. ಯಾರೊಂದಿಗೋ ಮಾತನಾಡುತ್ತಾ ಕುಳಿತಿದ್ದಾಗ ಅವರು ಪದೇ ಪದೇ ಅವರ ಕನ್ನಡ ಪದಗಳ ಕೊನೆಯಲ್ಲಿ 'ಮ್' ಸೇರಿಸುತ್ತಿದ್ದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ.ಕಷ್ಟ ಎನ್ನಲು ಕಷ್ಟಮ್, ಸಂತೋಷ ಎನ್ನಲು ಸಂತೋಷಮ್ ಎಂದು ಹೀಗೆ ಸಾಗಿತ್ತು ಅವರ ಕನ್ನಡ ಮಾತು ಕತೆ. ಅದು ಯಾವ ಭಾಷೆಯ ನೆರಳಿನಾಟ ಎಂದೇನೂ ನಾನು ಬಿಡಿಸಿ ಹೇಳುವ ಅಗತ್ಯವಿಲ್ಲ ಅಲ್ಲವೇ?.ಇನ್ನೂ ಮುಂದುವರೆದು ಆ ವ್ಯಕ್ತಿ ತನ್ನ ಮಗನನ್ನು ಕರೆದು ಹೇಳುತ್ತಿದ್ದ "ರೇ, ನಾರಾಯಣ ವಾಡಲು ಇಂಟ್ಲಾ ಹೋಗಿ ಊಟ ಮಾಡಿಕಿ ರಾವಂಡಿ ಅಂತ ಹೇಳ್ಬಿಟ್ಟು ಬಾ". ಇದನ್ನು ಕೇಳಿದ ತಕ್ಷಣ ಮತ್ತೊಮ್ಮೆ ಪುಣೆಯಲ್ಲಾದ ಅನುಭವ, ನಮ್ಮ ಮಗ್ಗುಲ ತುಮಕೂರಿನಲ್ಲೇ ನಡೆಯುತ್ತಿರುವುದು ನೋಡಿ ನನಗೆ ಭಾಷೆ ಮೇಲಿದ್ದ ಪ್ರೀತಿ ಇನ್ನಷ್ಟು ಬಿಗಿಯಾಗತೊಡಗಿತು. ಹಿಂದಿರುಗಿ ಬರುವ ದಾರಿಯುದ್ದಕ್ಕೂ ಸುಧೀರ್ಘವಾಗಿ ಆಲೋಚಿಸುತ್ತಲೇ ಬಂದೆ . ಕರ್ನಾಟಕದಲ್ಲಿ ಭಾಷೆಯ ವಿಚಾರದಲ್ಲಿ ನಡೆದಿದ್ದೇನು? ನಡೆಯುತ್ತಿರುವುದೇನು? ನಿಧಾನಕ್ಕೆ ಅವಲೋಕಿಸುತ್ತಲೂ ಇದ್ದೆ. 

ಹೆಚ್ಚು ಕಡಿಮೆ ಎರಡೂ ಮುಕ್ಕಾಲು ಸಾವಿರ ವರ್ಷಗಳ ಇತಿಹಾಸವಿರುವ ನಮ್ಮ ಕನ್ನಡ ಭಾಷೆಯು ಅಳಿದು ಅಟ್ಟ ಸೇರಿಬಿಡುತ್ತದೆಂದು ನಾವೆಲ್ಲಾ ಭಾವಿಸಿದ್ದೇವೆ ಹಾಗು ನಮ್ಮ ನಮ್ಮ ಕೈಲಾದ ಸಹಾಯವನ್ನು ಅದಕ್ಕೆ ಮಾಡುತ್ತಿದ್ದೇವೆ. ಬಿದ್ದವನಿಗೆ ಬಿಸಿನೀರು ಕೊಟ್ಟರೆ ಎದ್ದು ಎದೆಗೆ ಒದ್ದಂತೆ ಎನ್ನುವಂತೆ ಕೈಲೊಂದಿಷ್ಟು ಕಾಸು ಮಾಡಿ ಕಾರು ಬಂಗಲೆ ಎಲ್ಲ ಮಾಡಿಕೊಂಡ ಮೇಲೆ ನಿಮ್ಮ ಮಕ್ಕಳೊಡನೆ ಕನ್ನಡ ಮರೆತು ಇಂಗ್ಲೀಷ್ ಶುರುವಿಟ್ಟುಕೊಂಡಿರಿ. ಬೀದಿಯಲ್ಲಿ ಬಾರಿಸು ಕನ್ನಡ ಡಿಂಡಿಮವ ಎನ್ನುವ ಘೋಷಣೆ ಹೊರಡಿಸಿ ಕನ್ನಡ ಬಾವುಟ ಹಿಡಿದು ಹೋರಾಟ ನಡೆಸಿದ ನೀವು ಮನೆಗೆ ಹೋಗಿ ನಿಮ್ಮ ಮಕ್ಕಳನ್ನು ಸದ್ದಿಲ್ಲದೇ ಇಂಗ್ಲೀಷ್ ಕಾನ್ವೆಂಟುಗಳಿಗೆ ಸೇರಿಸಿ ಬಂದಿರಿ. ಆ ಕಾನ್ವೆಂಟುಗಳನ್ನು ಕನ್ನಡೇತರರು ನಡೆಸುತ್ತಿರುವ ಕಾರಣ ಕನ್ನಡಕ್ಕೆ ಕೊನೆಯ ಆದ್ಯತೆ ನೀಡಲಾಯಿತಾದರೂ ನೀವು ನಮ್ಮ ಕೈಲೇನು ಇಲ್ಲವೆಂದು ಕೈ ಚೆಲ್ಲಿ ಕುಳಿತಿರಿ. 'ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ' ಎನ್ನುವ ಸಂಸ್ಕೃತಿಯೊಳಗೆ ಹುಟ್ಟಿ ಬೆಳೆದ ನೀವು ನಿಮ್ಮ ಮಕ್ಕಳನ್ನು 'ರೈನ್ ರೈನ್ ಗೋ ಅವೇ' ಎಂಬ ಪಶ್ಚಿಮದ ಸಂಸ್ಕೃತಿಗೆ ಬಲವಂತವಾಗಿ ನೂಕಿದಿರಿ. ಬೆಂಗಳೂರಿನ ಪ್ರಮುಖ ಶಾಲೆಯೊಂದರಲ್ಲಿ 'ನೋ ರೀಜನಲ್ ಲಾಂಗ್ವೇಜಸ್' ಎಂಬ ಫಲಕ ಹಾಕಿ ಕನ್ನಡ ಮಾತನಾಡಿದರೆ ದಂಡ ಕಟ್ಟುವಂತೆ ನಿಯಮ ಮಾಡಲಾಯಿತಾದರೂ ನೀವು ಅದೇ ಶಾಲೆಗೇ ಹೋಗಿ ಸರತಿ ಸಾಲಿನಲ್ಲಿ ನಿಂತು ಅರ್ಜಿ ತಂದು ಲಕ್ಷಾಂತರ ಸುರಿದು ನಿಮ್ಮ ಮಕ್ಕಳನ್ನು ಅಲ್ಲಿಗೆ ಕಳಿಸಿದಿರಿ.ಇನ್ನೂ ಏನೇನೋ ನಮ್ಮ ಕಣ್ಣ ಮುಂದೆ ದಿನ ನಿತ್ಯ ನಡೆಯುತ್ತಲೇ ಇವೆ. ನೀವೆಷ್ಟೇ ಹರ ಸಾಹಸ ಪಟ್ಟರು ಕನ್ನಡವದು ನಡುಗದು, ಕಾರಣ ಅದರ ಘನ ಹಿನ್ನೆಲೆಯೇ ಅಂತದ್ದು.

ಮೊಘಲರು ೪೦೦ ವರ್ಷ ಹಾಗು ಬ್ರಿಟೀಷರು ೧೫೦ ವರ್ಷ ಆಳಿದರೂ ಕನ್ನಡ ಭಾಷೆ ತನ್ನ ಘನತೆಯನ್ನು ಉಳಿಸಿಕೊಂಡು ಭಾರತ ದೇಶ ಸ್ವಾತಂತ್ರ್ಯ ಕಂಡು ಸ್ವಾಯತ್ತತೆಯೆಡೆಗೆ ಹೆಜ್ಜೆ ಇತ್ತ ನಂತರವೂ ತೀರಾ ಇತ್ತೀಚಿಗೆ ನಡೆದಿದೆ ಎನ್ನಲಾದ ಕನ್ನಡದ ಅತೀ ದೊಡ್ಡ ಆಂದೋಲನ ಗೋಕಾಕ್ ಚಳುವಳಿ ನಡೆದಾಗಲೂ ಕರ್ನಾಟಕದ ಒಳಗಿರುವ ಕೆಲವು ಅನ್ಯ ಭಾಷಿಕ ಸಂಘಗಳು ಗೋಕಾಕ್ ವರದಿಯನ್ನು ಜಾರಿಗೆ ತರದಂತೆ ಆಗಿನ ಸರ್ಕಾರಕ್ಕೆ ಪತ್ರವೊಂದನ್ನು ಬರೆದಿದ್ದು ಸೇರಿ ಎಲ್ಲವನ್ನೂ ಬದಿಗಿಟ್ಟು ಜ್ಞಾನಪೀಠ ಪ್ರಶಸ್ತಿ, ಸರಸ್ವತಿ ಸಮ್ಮಾನ್ ನಂತಹ ಉನ್ನತ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಳ್ಳುತ್ತಿರುವುದರಲ್ಲಿ ತೊಡಗಿಕೊಂಡಿದ್ದು ಸದ್ಯಕ್ಕಂತೂ ಕನ್ನಡ ಅಳಿಯುವ ಭಾಷೆಯಲ್ಲವೇ ಅಲ್ಲ. ಪ್ರಪಂಚದಲ್ಲಿ ಅತೀ ಹೆಚ್ಚು ಬಳಸುವ ಭಾಷೆಯ ಪಟ್ಟಿಯಲ್ಲಿ ೩೨ನೆ ಸ್ಥಾನದಲ್ಲಿರುವ ಕನ್ನಡ ಇನ್ನು ಮುಂದೇನಾದರೂ ದುರ್ಬಲವಾಗುವತ್ತ ಹೊರಳಿದರೆ ಅದಕ್ಕೆ ಕಾರಣ ಅನ್ಯಭಾಷಿಗರಲ್ಲ, ಭಾಷೆಗಳನ್ನು ಹೇರಿಕೆ ಮಾಡಿ ಮಜಾ ನೋಡುವ ಸರ್ಕಾರಗಳೂ ಅಲ್ಲ ಬದಲಾಗಿ ಅದರ ನೇರ ಹೊಣೆ ಕನ್ನಡಿಗರದ್ದೇ. ನಿಮ್ಮ ಮನೆಯ ದೀವಿಗೆ ನೀವು ಹಚ್ಚಿ ಬೆಳಗಿಸುವುದ ಬಿಟ್ಟು ಅನ್ಯರಿಗೆ ಕಾಯುವುದು ತರವೇ?. ದೇಶದ ಆಡಳಿತ ಹಿಡಿತ ಅನ್ಯರ ಕೈಲಿದ್ದು ಈಗಿನ ಗೂಗಲ್, ಫೇಸ್ ಬುಕ್, ವಾಟ್ಸಾಪ್ ಗಳ ನೆರಳೂ ಇಲ್ಲದೆ ಕನ್ನಡ ಮರೆಯಾಗದೆ ಉಳಿದಿತ್ತು ಎಂದರೆ ಅದಕ್ಕೆ ಕಾರಣ ಕನ್ನಡ ಭಾಷಿಗರ ಭಾಷಾ ಪ್ರೇಮವೇ ಹೊರತು ಸರ್ಕಾರಗಳ ಕಾನೂನು ಕಟ್ಟಳೆಗಳಲ್ಲ. ಇದೀಗ ನಾವೇ ನಿಂತು ಆರಿಸಿದ ಸರ್ಕಾರವಿದೆ, ಜನಾದೇಶಕ್ಕೆ ಈ ದೇಶದ ಕಾನೂನು ತಲೆಬಾಗುತ್ತದೆ. ಇಂತಿದ್ದು ಕನ್ನಡ ಭಾಷೆಯ ಉಳಿವು ಅಳಿವಿನ ಪ್ರಶ್ನೆ ಇರುವುದು ಸರ್ಕಾರದ ಕೈಲಲ್ಲ ಬದಲಾಗಿ ಕನ್ನಡ ಭಾಷೆಯನ್ನು ದಿನ ನಿತ್ಯವೂ ಬಳಸುವ ನಮ್ಮ ನಿಮ್ಮೆಲ್ಲರ ಕೈಲಿ.

ಕನ್ನಡಿಗರು ಗಟ್ಟಿಗರಾಗಿ ಭಾಷೆ ವಿಚಾರದಲ್ಲಿ ಸ್ವಾಭಿಮಾನಿಗಳಾಗದ ಹೊರತು ಯಾವ ಸರ್ಕಾರಗಳೂ ಏನೂ ಮಾಡಲಾರವು. ಅದೇಕೋ ಇತ್ತೀಚಿಗೆ ಕನ್ನಡವೆಂದರೆ ಕೆಲವರಿಗೆ ಕೇವಲವಾಗಿದೆ. ಬೆಳಗಾವಿಯ ವಿಚಾರದಲ್ಲಿ ಮಹಾರಾಷ್ಟ್ರ ಕನ್ನಡಿಗರ ಮೇಲೆ ಗುಟುರು ಹಾಕುತ್ತದೆ, ನ್ಯಾಯಾಲಯದಲ್ಲೂ ಆ ವಿಚಾರವಾಗಿ ದಾವೆ ಹೂಡಿ ಪಂಥಾಹ್ವಾನ ನೀಡುತ್ತದೆ. ನಮ್ಮ ಮಗ್ಗುಲ, ದೇಶದಲ್ಲೇ ಕಿರಿದಾದ ರಾಜ್ಯ ಗೋವಾ ಕೂಡ ಕನ್ನಡ ನಾಡಿನೊಡನೆ ಅಷ್ಟಕ್ಕಷ್ಟೇ ಎನ್ನುವ ಸ್ಥಿತಿ ತಲುಪಿದ್ದಷ್ಟೇ ಅಲ್ಲದೆ ನೀವೇನು ಮಾಡಬಲ್ಲಿರಿ ಎಂದು ತೊಡೆ ತಟ್ಟುವಷ್ಟು ಅನುವು ನಾವೇ ಮಾಡಿಕೊಟ್ಟುಬಿಟ್ಟಿದ್ದೇವೆ. ಆಂಧ್ರದ ಗಡಿಗೆ ಸೇರಿಕೊಂಡ ಯಾವ ಊರೊಳಗೆ ಕಾಲಿಟ್ಟರು ಆಂಧ್ರ ಪಾಂಡಿತ್ಯ ಮೆರೆಯುತ್ತದೆ. ಬೆಂಗಳೂರಿನ ಅಸಂಖ್ಯಾತ ಕನ್ನಡಿಗರಿಗೆ ಅವರ ಮೊಬೈಲ್ ನಂಬರ್ ಕನ್ನಡ ದಲ್ಲಿ ಹೇಳಿ ಎಂದರೆ ಅವರ ಮೊಬೈಲ್ ಸಂಖ್ಯೆಯೇ ಮರೆತು ಹೋಗುವಷ್ಟು ಅವರು ಇಂಗ್ಲೀಷ್ ಮೋಹದೊಳಗೆ ಸಿಲುಕಿಕೊಂಡಿದ್ದಾರೆ. ಈ ಎಲ್ಲ ಸಂಕೋಲೆಗಳಿಂದ ಹೊರ ಬಂದು ನಾನು, ನನ್ನದು ಎನ್ನುವ ಸ್ವಾಭಿಮಾನ ತಳೆದು ಎಂದು ಎಲ್ಲ ಕನ್ನಡಿಗರು ಹೆಮ್ಮೆಯಿಂದ ಕನ್ನಡವಾಡುತ್ತಾರೋ ಅಂದೇ ಕನ್ನಡದ ಭವಿಷ್ಯ ಬಂಗಾರವಾಗುತ್ತದೆ, ಕನ್ನಡ ನಾಡು ಮತ್ತೊಮ್ಮೆ ನಲ್ಮೆಯ ಬೀಡಾಗುತ್ತದೆ.

ಸೋಮವಾರ, ಅಕ್ಟೋಬರ್ 2, 2017

ಲಾಲ್ ಬಹದ್ದೂರ್ ಶಾಸ್ತ್ರಿ - ಅಪ್ರತಿಮ ನಿಷ್ಠಾವಂತ

ಲಾಲ್ ಬಹದ್ದೂರ್ ಶಾಸ್ತ್ರಿ ಭಾರತ ದೇಶ ಕಂಡ ಒಬ್ಬ ಅಪ್ರತಿಮ ನಿಷ್ಠಾವಂತ ನಾಯಕ. ಅವರಲ್ಲಿದ್ದ ನಿಷ್ಠೆಗೆ ಸಮನಾಗಿ ನಿಲ್ಲಬಲ್ಲ ನಿಷ್ಠಾವಂತರು ರಾಜಕೀಯ ರಂಗದಲ್ಲಿ ಬಹುಶಃ ಯಾರೂ ಇರಲಿಕ್ಕಿಲ್ಲ. ಅವರ ನಿಷ್ಠೆಗೆ ಕನ್ನಡಿ ಹಿಡಿಯುವಂತಹ ಘಟನೆಯೊಂದನ್ನು ನಾನಿಲ್ಲಿ ಹೇಳಬಯಸುತ್ತೇನೆ. ಇದು ಶಾಸ್ತ್ರೀಜಿ ಅವರ ಪುತ್ರ ಸುನಿಲ್ ಶಾಸ್ತ್ರಿ "ಲಾಲ್ ಬಹದ್ದೂರ್ ಶಾಸ್ತ್ರೀ : ಪಾಸ್ಟ್ ಫಾರ್ವರ್ಡ್" ಎಂಬ ಪುಸ್ತಕದಲ್ಲಿ ನಮೂದಿಸಿರುವ ಒಂದು ಸತ್ಯ ಘಟನೆ.
ಸುನಿಲ್ ಶಾಸ್ತ್ರೀ ಆಗಿನ್ನೂ ಇಪ್ಪತ್ತರ ಯುವಕ, ತಮ್ಮ ತಂದೆಯವರ ಹುದ್ದೆಯ ಘನತೆಗೆ ತಕ್ಕಂತೆ ಐಶಾರಾಮಿ ಕಾರಿನಲ್ಲಿ ಓಡಾಡುವ ಆಸೆ ಅವರಿಗೆ.ಆದರೆ ಶಾಸ್ತ್ರಿಯವರೋ ನಿಷ್ಠೆ, ಪ್ರಾಮಾಣಿಕತೆಗೆ ಇನ್ನಿಲ್ಲದ ಬೆಲೆ ಕೊಟ್ಟು ಇರುವುದರಲ್ಲಿಯೇ ಸುಖ ಕಾಣುವುದನ್ನು ತಮ್ಮ ಮಕ್ಕಳಿಗೂ ಕಲಿಸಿದ್ದರು. ಆದರೂ ಬಿಸಿ ರಕ್ತದ ತರುಣ ಸುನಿಲ್ ಶಾಸ್ತ್ರಿಗೆ ಐಶಾರಾಮಿ ಕಾರಿನಲ್ಲಿ ಒಮ್ಮೆಯಾದರೂ ಪ್ರಯಾಣ ಮಾಡಬೇಕೆಂದು ಉತ್ಕಟ ಬಯಕೆಯಾಗುತ್ತದೆ. ಕೂಡಲೇ ಸುನಿಲ್ ಶಾಸ್ತ್ರಿ ಅವರ ತಂದೆಯವರ ವಯಕ್ತಿಕ ಸಹಾಯಕನನ್ನು ಕಂಡು ತಮಗೆ ಐಶಾರಾಮಿ ಕಾರಿನಲ್ಲಿ ಒಮ್ಮೆಯಾದರೂ ಪ್ರಯಾಣ ಮಾಡಬೇಕು ಎನ್ನುವ ಹಂಬಲವಿರುವುದಾಗಿಯೂ , ಹಾಗು ಅದಕ್ಕಾಗಿ ತಮ್ಮ ತಂದೆಯವರಿಗೆ ಸರ್ಕಾರದಿಂದ ಕೊಡಲಾಗಿದ್ದ ಕಾರನ್ನು ಬಳಸಿಕೊಳ್ಳುವ ಬಗ್ಗೆಯೂ ತಿಳಿಸುತ್ತಾರೆ.
ಮೊದಲೇ ಪ್ರಧಾನಿಯವರ ಮಗ, ತಿರುಗಿ ಮಾತನಾಡಲಾದೀತೇ?. ಹೂಂಕರಿಸುತ್ತಾರೆ. ಕೂಡಲೇ ಕಾರಿನವನಿಗೆ ಫೋನಾಯಿಸಿ ಪ್ರಧಾನಿ ನಿವಾಸಕ್ಕೆ ಬರುವಂತೆ ಬುಲಾವ್ ಕೊಡುತ್ತಾರೆ. ಅದರಂತೆ ಇನ್ನರ್ಧ ಗಂಟೆಯಲ್ಲಿ ಕಾರು ಬರುತ್ತದೆ ಕೂಡ. ಕಾರು ಕಂಡೊಡನೆ ಕುಣಿದಾಡಿದ ಸುನಿಲ್ ಶಾಸ್ತ್ರಿ ಕಾರಿನ ಕೀ ತೆಗೆದುಕೊಂಡು ಜಾಲಿ ರೈಡ್ ಗೆಂದು ಹೊರಟೆ ಬಿಡುತ್ತಾರೆ.
ಇತ್ತ ಡ್ರೈವರ್ ನಿಗೆ ಶಾಸ್ತ್ರಿ ಜಿ ಎದುರಾಗುತ್ತಾರೆ. ಡ್ರೈವರ್ ಅನ್ನು ಕಂಡೊಡನೆ ಅವರು "ಏನಪ್ಪಾ, ನೀನು ಕಾರಿಗೆ ಒಂದು ಲಾಗ್ ಬುಕ್ ಇಟ್ಟುಕೊಂಡಿರುವೆಯಾ?" ಎಂದು ಪ್ರಶ್ನಿಸುತ್ತಾರೆ.ಡ್ರೈವರ್ ನಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಾಗ "ಹಾಗಾದರೆ ಈಗ ನನ್ನ ಮಗ ಎಷ್ಟು ದೂರ ಪ್ರಯಾಣಿಸಿದ್ದಾನೋ ಅದನ್ನು ಅಲ್ಲಿ ಬರೆದು ಅದರ ಮುಂದೆ ‘ಖಾಸಗಿ ಬಳಕೆಗೆ’ ಎಂದು ಷರಾ ಬರೆದಿಡು" ಎಂದು ಬರೆಸಿ, ತಮ್ಮ ಮಗನು ಹಿಂದಿರುಗಿದ ಒಡನೆಯೇ ಕಾರು ಕೀ ಗಳನ್ನೂ ಮರಳಿಸಿ ಆ ಪ್ರಯಾಣಕ್ಕೆ ತಗುಲಿದ್ದ ವೆಚ್ಚವನ್ನು ತಮ್ಮ ಹೆಂಡತಿ ಲಲಿತಾ ಶಾಸ್ತ್ರಿ ಯವರಿಂದಲೇ ಕೊಡಿಸುತ್ತಾರೆ.
ಪ್ರಾಮಾಣಿಕತೆ, ಸತ್ಯ ನಿಷ್ಠೆ, ಕಾರ್ಯ ನಿಷ್ಠೆ, ಪರೋಪಕಾರ ಮನೋಭಾವ ಇವುಗಳನ್ನೆಲ್ಲಾ ಮಾತಿನಲ್ಲಿ ಹೇಳಿ ಕಲಿಸುವ ಬದಲು ನಿಜವಾಗಿಯೂ ಆಚರಿಸಿ ಕಲಿಸಿದ ಮಹನೀಯರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲಬಲ್ಲ ವ್ಯಕ್ತಿ ನಮ್ಮ ಲಾಲ್ ಬಹದ್ದೂರ್ ಶಾಸ್ತ್ರೀ ಜಿ. ಈಗಿನ ರಾಜಕೀಯ ಸನ್ನಿವೇಶಗಳಲ್ಲಿ ಶಾಸ್ತ್ರಿ ಜಿ ನಮಗೆ ಮತ್ತೆ ಮತ್ತೆ ನೆನಪಾಗುವುದು ಕೂಡ ಇದೇ ಕಾರಣಕ್ಕೆ.


ಮಂಗಳವಾರ, ಸೆಪ್ಟೆಂಬರ್ 19, 2017

ಒಡಮಾಡು ಇನ್ನೊಂದಕೆ

ಭಕ್ತರ್ ಭಕ್ತಿಯೊಳ್
ಬೈದೊಳ್ ಭಕ್ತಿ
ಚೀರಿದೊಳ್ ಭಕ್ತಿ
ಶಪಿಸಿದೊಳೂ ಭಕ್ತಿ
ಭಕ್ತಿಯೇ ಅಲ್ಲೆಲ್ಲ ಏಕತ್ರ ಶಕ್ತಿ

ದುಃಖದೊರ್ ದುಃಖದೊಳ್
ನಕ್ಕಿದೊಳ್ ದುಃಖ
ಬಿಕ್ಕಿದೊಳ್ ದುಃಖ
ಅಳುವೊಳ್ ದುಃಖ
ಗೊಣಗಿ ಗೊಡವಿದೊಳೆಲ್ಲ
ದುಃಖವೇ ದುಃಖ

ದಾರಿಗಾರ ನೀ ದಾರಿಯೊಳ್ 
ನಡೆದೋದಷ್ಟೆ ದಾರಿಗಾರ
ಪರಂತು ನಿಶ್ಯೇಷ ಜೀವನ
ಅದರೊಳಗೆ ನಿನಗೆ
ಗುರುವಿರನು ಗುರಿಯಿರದು
ನಿರರ್ಥವದು ಮುರುಟದನು
ಮೊದಲಾಗಿ ಒಡಮಾಡು
ಇನ್ನೊಂದಕೆ ಅಲ್ಲೇನು
ಬಲವಿಹುದೋ ಬಲ್ಲವರ್ಯಾರು 

ಶನಿವಾರ, ಆಗಸ್ಟ್ 26, 2017

ನದಿಗಳಿಗಾಗಿ ಜಾಥಾ ಭಾರತದ ಈಗಿನ ಅವಶ್ಯಕತೆ

ಒಮ್ಮೆ ನೆನಪಿಸಿಕೊಳ್ಳಿ ಪ್ರಪಂಚದ ಮೊಟ್ಟಮೊದಲ ನಾಗರೀಕತೆ ಹರಪ್ಪ ನಾಗರೀಕತೆ ಇದ್ದಿದ್ದು ಸಿಂಧೂ ನದಿ ದಂಡೆಯಲ್ಲಿ. ಭಾರತದ ಅತ್ಯಂತ ಪುರಾತನ ನಗರಗಳೆಲ್ಲವೂ ಹುಟ್ಟಿದ್ದು, ಬೆಳೆದಿದ್ದು, ಲೋಕವಿಖ್ಯಾತವಾಗಿದ್ದು ನದಿ ಆಶ್ರಯದಲ್ಲಿಯೇ. ಯಾವುದೇ ದೇಶದ ಆರ್ಥಿಕತೆಗೆ ದೇಶಗಳ ನದಿಗಳು ಅಪಾರ ಕೊಡುಗೆಯಿತ್ತಿರುತ್ತವೆಆಧುನಿಕತೆಯಲ್ಲಿ ಮುನ್ನಡೆ ಸಾಧಿಸಿರುವ ಭಾರತದ ನಗರಗಳೂ ಕೂಡ ನದಿ ದಂಡೆಯಲ್ಲಿಯೇ ಇವೆ ಎನ್ನುವುದನ್ನು ಒತ್ತಿ ಹೇಳಬೇಕಾಗಿಲ್ಲವಷ್ಟೆ. ದೆಹಲಿ ಕಟ್ಟಿಸಿದ್ದು ಯಮುನಾ ನದಿ ದಂಡೆಯ ಮೇಲೆ, ಬೆಂಗಳೂರು ವೃಷಭಾವತಿ ನದಿ ದಂಡೆಯಲ್ಲಿ, ಚೆನ್ನೈ ನಗರ ಅಡ್ಯಾರ್ ನದಿ ದಂಡೆಯಲ್ಲಿ, ಮೀಠೀ ನದಿ ದಂಡೆಯಲ್ಲಿ ಮುಂಬೈ, ಹೂಗ್ಲಿ ನದಿ ದಂಡೆಯಲ್ಲಿ ಕೋಲ್ಕತ್ತಾ, ಮೂಸಿ ನದಿ ದಂಡೆಯಲ್ಲಿ ಹೈದರಾಬಾದ್, ಗಂಗಾ ನದಿ ದಂಡೆಯಲ್ಲಿ ಪಾಟ್ನಾ, ಸಬರಮತಿ ನದಿ ದಂಡೆಯಲ್ಲಿ ಅಹಮದಾಬಾದ್, ಗೋಮತಿ ನದಿ ದಂಡೆಯಲ್ಲಿ ಲಕ್ನೋ ಹೀಗೆ ಇನ್ನು ಯಾವ ಯಾವ ಊರು ನೀವು ತೆಗೆದುಕೊಂಡರೂ ಅವೆಲ್ಲ ಹುಟ್ಟಿ ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಇವತ್ತಿನ ರೀತಿಯಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿರುವುದು ನದಿ ದಂಡೆಯಲ್ಲಿಯೇ ಅನ್ನುವುದರಲ್ಲಿ ಎರಡು ಮಾತಿಲ್ಲ.

ಭೂಮಿ ಹುಟ್ಟಿ ಇಲ್ಲಿನ ಅನಿಲಗಳೆಲ್ಲವೂ ಸೇರಿ ನೈಸರ್ಗಿಕ ರಾಸಾಯನಿಕ ಕ್ರಿಯೆಗಳು ನಡೆದು ಅದರಿಂದ ಯಥೇಚ್ಛ ಪ್ರಮಾಣದಲ್ಲಿ ಮೋಡಗಳಾಗಿ ಭೂಮಿಯ ಮೇಲೆ ಕೋಟ್ಯಾಂತರ ವರ್ಷ ಮಳೆಯಾಗಿ ಸುರಿಯಿತು. ಸುರಿದ ಮಳೆ ನೀರೆಲ್ಲ ಹಳ್ಳಗಳ ಕಡೆಗೆ ಹರಿದು ಅಲ್ಲಿ ಸಮುದ್ರ ನಿರ್ಮಾಣವಾಯಿತು. ನೀರಿನ ಹರಿದ ದಾರಿ ಮಣ್ಣು ಕೊಚ್ಚಿ ಹೋಗಿ ಹಳ್ಳವಾಯಿತು, ಭೂಮಿಯ ಮೇಲೆ ಇನ್ನೆಂದು ಮಳೆಯಾದರೂ, ಅಥವಾ ಹಿಮ ಕರಗಿ ನೀರಾದರೂ ಅದು ಹರಿದು ಸಮುದ್ರ ಸೇರಲು ಅದೇ ದಾರಿ ರಾಜ ಮಾರ್ಗವಾಯಿತು. ಇವುಗಳನ್ನೇ ನದಿಗಳೆಂದು ಕರೆಯಲಾಯಿತು.

ಬರಿದಾಗಿ ಬತ್ತಿರುವ ಕಾವೇರಿ, ಮಹದೇಶ್ವರ ಬೆಟ್ಟದ ಹತ್ತಿರವಿರುವ ಕರ್ನಾಟಕ ತಮಿಳುನಾಡು ಗಡಿಯಲ್ಲಿನ ದೃಶ್ಯ

ಮನುಷ್ಯನ ಜೀವನಕ್ಕೆ ನೀರು ಅತೀ ಅವಶ್ಯಕವಾದ ಕಾರಣ ಮನುಷ್ಯನ ಬದುಕು ನದಿ ಸಾಮಿಪ್ಯದಲ್ಲೇ ಆರಂಭವಾಯಿತು. ದಿನಗಳು ಕಳೆದಂತೆ ಹಳ್ಳಿಗಳು ನಗರಗಳಾಗಿ ಮನುಷ್ಯನ ನಾಗರೀಕತೆಯು ಹೊಸ ಹೊಸ ಸ್ವರೂಪಗಳನ್ನು ಪಡೆದುಕೊಳ್ಳುತ್ತಾ ಇವತ್ತಿನ ಮಟ್ಟಿಗೆ ಬಂದು ನಿಂತಿದೆ. ಆದರೆ ಮನುಷ್ಯ ತಾನು ಬೆಳೆಯುವ ಭರದಲ್ಲಿ ಕಡೆಗಣಿಸಿದ್ದು ಮಾತ್ರ ನದಿಗಳನ್ನು. ಭಾರತದ ಸಂಸ್ಕೃತಿಯಲ್ಲಂತೂ ನದಿಗಳಿಗೆ ವಿಶೇಷ ಸ್ಥಾನ, ಬೇರೆಲ್ಲೂ ನಡೆಯದ ನದಿಯ ಆರತಿ ನಡೆಯುವುದು ಭಾರತ ಉಪಖಂಡದಲ್ಲಿ ಮಾತ್ರ. ನದಿಗೆ ದೇವರ ಸ್ಥಾನ ಕೊಟ್ಟ ಕೆಲವೇ ಕೆಲವು ಸಂಸ್ಕೃತಿಗಳಲ್ಲಿ ಭಾರತದ ಸಂಸ್ಕೃತಿಗೆ ಅಗ್ರ ಸ್ಥಾನ. ಇಂತಿರುವ ಭಾರತದ ನದಿಗಳು ಇಂದು ಏನಾಗಿವೆ, ಏನಾಗುತ್ತಿವೆ ಎನ್ನುವ ಅರಿವು ಬರೀ ಸರ್ಕಾರಕ್ಕಿದ್ದರೆ ಸಾಲದು, ಜನ ಸಾಮಾನ್ಯರಲ್ಲೂ ವ್ಯಕ್ತವಾಗಬೇಕು ಎನ್ನುವ ಅಭಿಲಾಷೆಯಿಂದಲೇ 'ಈಶಾ' ಸಂಸ್ಥೆಯ ಸಂಸ್ಥಾಪಕ ಹಾಗು ದಾರ್ಶನಿಕ ಸದ್ಗುರು ಜಗ್ಗಿ ವಾಸುದೇವ್ 'ನದಿಗಳಿಗಾಗಿ ಜಾಥಾ(ರ್ಯಾಲಿ ಫಾರ್ ರಿವರ್ಸ್)' ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕನ್ಯಾಕುಮಾರಿಯಿಂದ ಹಿಡಿದು ಹಿಮಾಚಲದ ವರೆವಿಗೂ ರ್ಯಾಲಿ ಹೊರಡಲಿದೆ. ಮಾರ್ಗದಲ್ಲಿನ ಹದಿನಾರೂ ರಾಜ್ಯಗಳು ರ್ಯಾಲಿಗೆ ಕೈಜೋಡಿಸಿದ್ದು ಅಸಂಖ್ಯಾತ ಸ್ವಯಂ ಸೇವಕರು ಪಾಲ್ಗೊಳ್ಳಲಿದ್ದಾರೆ. ಹೊಸದೊಂದು ಯೋಜನೆ ಸಿದ್ಧಪಡಿಸಿ ಅದನ್ನು ಕೇಂದ್ರ ಸರ್ಕಾರಕ್ಕೆ ಆಗ್ರಹಿಸುವ ಸಲುವಾಗಿ  ಜಾಥಾ ನಡೆಯುತ್ತಿದ್ದು ನೀರು ಬಳಸುವ ಸರ್ವರೂ ಜಾಥಾ ದಲ್ಲಿ ಪಾಲ್ಗೊಳ್ಳುವಂತೆ ಘೋಷಣೆ ಹೊರಡಿಸಲಾಗಿದೆ.

ನದಿಯ ಇಕ್ಕೆಲಗಳಲ್ಲಿ ಒಂದು ಕಿಲೋಮೀಟರ್ ವರೆವಿಗೂ ಕಾಡು ಬೆಳೆಸುವ ಮಾದರಿ ಪ್ರಾತ್ಯಕ್ಷಿಕೆ

ದೇಶ ಸುಭೀಕ್ಷವಾಗಿರಬೇಕಾದರೆ ನದಿಗಳು ಯಥೇಚ್ಛ ನೀರಿನೊಂದಿಗೆ ಹರಿಯುತ್ತಿರಬೇಕು ಎನ್ನುವುದು ಸತ್ಯ. ಭಾರತದಲ್ಲಿ ಜನಸಂಖ್ಯೆಗೇನು ತೊಂದರೆಯಿಲ್ಲವಾದ್ದರಿಂದ ನದಿಗಳು ತುಂಬಿ ಹರಿದಷ್ಟು ಕೃಷಿ ಉಚ್ಚ ಸ್ಥಾನದಲ್ಲಿರುವ ವೃತ್ತಿಯಾಗುತ್ತದೆ ಅಷ್ಟೇ ಅಲ್ಲದೆ ದೇಶದ ಅಗ್ರ ಪಾಲಿನ ಜನಕ್ಕೆ ಪ್ರತ್ಯಕ್ಷ ಇಲ್ಲವೇ ಪರೋಕ್ಷ ಉದ್ಯೋಗವನ್ನು ಒದಗಿಸುತ್ತದೆ. ಇದಕ್ಕಾಗಿ ದೇಶದೊಳಗೆ ಹೆಚ್ಚಿನ ಮಳೆಯ ಅವಶ್ಯಕತೆ ಇದೆ, ಮಳೆಗಾಗಿ ಕಾಡು ಬೆಳೆಸುವುದೊಂದೇ ಅನಿವಾರ್ಯ. ಹೀಗಾಗಿ ನದಿಯ ಎರಡೂ ದಂಡೆಗಳಲ್ಲಿ ಕಾಡುಗಳನ್ನು ಬೆಳೆಸುವಂತೆ ಸರ್ಕಾರಕ್ಕೆ ಆಗ್ರಹಿಸುವುದು ರ್ಯಾಲಿಯ ಉದ್ದೇಶ.ಒಂದು ಅಂದಾಜಿನ ಪ್ರಕಾರ ದೇಶದ ನದಿಗಳ ಪಾತ್ರದಲ್ಲಿರುವ ಶೇ.25 ರಷ್ಟು ಭೂಮಿಯ ಒಡೆತನವನ್ನು ಸರ್ಕಾರಗಳೇ ಹೊಂದಿವೆ, ಹೀಗಿರುವಾಗ ಕಾಡು ಬೆಳೆಸಲು ಅದು ಕಷ್ಟವಾಗಲಾರದು. ಇನ್ನುಳಿದ ಶೇ.75ರಷ್ಟು ಭೂಮಿ ಖಾಸಗಿ ಭೂಮಿಯಾಗಿದ್ದು ರೈತರಿಗೆ ಸೇರಿದ್ದಾಗಿದೆ. ಈ ಭೂಮಿಯನ್ನು ಭೂ ಸ್ವಾಧೀನ ಮುಂತಾದ ಪ್ರಕ್ರಿಯೆಗಳನ್ನು ಬಳಸಿ ರೈತರಿಂದ ಕಸಿದುಕೊಳ್ಳುವುದು ಸಾಧುವಾಗಿಲ್ಲ, ಆ ಕಾರಣದಿಂದ ನದಿಯ ಒಂದು ಕಿಲೋಮೀಟರು ಸುತ್ತಲ ಭೂಮಿಯಲ್ಲಿ ಹಣ್ಣುಗಳನ್ನು ಬೆಳೆಯುವ ಮರಗಳನ್ನು ಮಾತ್ರ ನೆಡುವಂತೆ ಅಂದರೆ ನದಿ ಸುತ್ತಲೂ ಬರೀ ನೆಡುತೋಪುಗಳಿರುವಂತೆ ಕೇಂದ್ರ ಸರ್ಕಾರ ಕಾಯ್ದೆ ತರುವಂತೆ ಒತ್ತಾಯಿಸುವುದು ಜಾಥಾದ ಉದ್ದೇಶ.ಹಣ್ಣು ನೀಡುವ ಸಸಿಗಳನ್ನು ನೆಟ್ಟು ನೆಡು ತೋಪು ಬೆಳೆಸುವುದರಿಂದ ರೈತರ ಆದಾಯ ಕೂಡ 2-3 ಪಟ್ಟು  ಹೆಚ್ಚಾಗಲಿದ್ದು ರೈತರು ನಷ್ಟದಿಂದ ತೊಳಲಾಡಬೇಕಿಲ್ಲ. ನೆರಳಿನಲ್ಲಿಯೂ ಬೆಳೆಯುವ ಕೆಲವು ವಿಶೇಷ ಬೆಳೆಗಳಿದ್ದು ಅವುಗಳನ್ನು ನೆಡು ತೋಪಿನ ಒಳಗೂ ಬೆಳೆಸುವ ಮೂಲಕ ರೈತರು ಮತ್ತಷ್ಟು ಆದಾಯವನ್ನು ಪಡೆಯಬಹುದು. 

ನಮ್ಮ ರೈತರು ಬೆಳೆದ ಹಣ್ಣುಗಳಿಗೆ ಭಾರತದಲ್ಲಷ್ಟೇ ಅಲ್ಲದೆ ಅರಬ್ ದೇಶಗಳಲ್ಲೂ ಉತ್ತಮ ಬೆಲೆಯಿದೆ. ಹಣ್ಣುಗಳಲ್ಲದೆ ಮಸಾಲೆ ಪದಾರ್ಥಗಳನ್ನು ಬೆಳೆದರೆ ಅವುಗಳಿಗೆ ಅರಬ್ ದೇಶಗಳು, ಅಮೇರಿಕಾ ಹಾಗು ಯೂರೋಪ್ ದೇಶಗಳಲ್ಲಿ ಉತ್ತಮ ಬೆಲೆಯಿದ್ದು ದೇಶದ ರಫ್ತು ಉತ್ತಮವಾಗಲಿದ್ದು ದೇಶದ ಆದಾಯವೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿದೆ. ದೇಶದೊಳಗೆ ಹಣ್ಣುಗಳು ಹೆಚ್ಚಿನ ಪ್ರಮಾಣದಲ್ಲಿ ಸಿಗಲು ಅವಕಾಶವಾದರೆ ಜನರು ಹಣ್ಣನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಲು ಅನುವಾಗಿ ಜನಗಳ ಸರಾಸರಿ ಅರೋಗ್ಯ ಅಂಶ ಉತ್ತಮವಾಗುತ್ತದೆ.ನಮ್ಮ ಸುತ್ತಲಿನ ಪ್ರಕೃತಿಯನ್ನು ಮತ್ತಷ್ಟು ಉತ್ತಮವಾಗಿಸುತ್ತಾ ಆರ್ಥಿಕತೆಗೂ ಕುಂದು ಉಂಟಾಗದಂತೆ ರಚನಾತ್ಮಕವಾಗಿ ಸಿದ್ಧಪಡಿಸಿರುವ ಈ ಯೋಜನೆ ನವ ಭಾರತದ ಅವಶ್ಯಕತೆಯಾಗಿದೆ. ದೇಶದ ಆರ್ಥಿಕತೆ, ಜನ ಸಂಖ್ಯೆ ಬೆಳೆದಂತೆಲ್ಲ ದೇಶದ ಹಳೆಬೇರುಗಳು ಕಿತ್ತು ಬರುತ್ತಿದ್ದರೆ ಆ ದೇಶ ಅಭಿವೃದ್ಧಿ ಪಥದಲ್ಲಿದೆ ಎಂದು ಯಾವ ಅಂಶಗಳಿಂದಲೂ ಹೇಳಲು ಸಾಧ್ಯವಿಲ್ಲ. ಆದ ಕಾರಣ ಸಾವಿರಾರು ವರ್ಷಗಳಿಂದ ಹರಿದು ನಮ್ಮಹಿರಿಯರಿಗೆಲ್ಲ ಜೀವನಾಡಿಯಾಗಿದ್ದ ನಮ್ಮ ನದಿಗಳನ್ನು ನಾವು ಒಂದೆರಡು ದಶಕಗಳಲ್ಲೇ ಇನ್ನಿಲ್ಲವಾಗಿಸುವುದು ನಾವು ಈ ದೇಶಕ್ಕೆ ಮಾಡುವ ಅತ್ತ್ಯುನ್ನತ ಅಪಕಾರ. ದೇಶದ ಉಳಿವಿಗಾಗಿ ಆರಂಭವಾಗಿರುವ ಈ ಅಭಿಯಾನದಲ್ಲಿ ಎಲ್ಲರೂ ಕೈ ಜೋಡಿಸುವುದು ಶ್ರದ್ಧಾ ಭಕ್ತಿಯಿಂದ ತಾಯಿ ಭಾರತಿಯನ್ನು ಆರಾಧಿಸುವುದಕ್ಕೆ ಸಮಾನ ಎನ್ನಲಡ್ಡಿಯಿಲ್ಲ.

ಅಭಿಯಾನವನ್ನು ನೀವೂ ಬೆಂಬಲಿಸಲು 80009 80009 ನಂಬರ್ ಗೆ ಮಿಸ್ ಕಾಲ್ ಕೊಡಿ. ಈ ಮೂಲಕ ಹೊಸ ನೆಡುತೋಪು ಯೋಜನೆಯನ್ನು ಕೇಂದ್ರಕ್ಕೆ ಆಗ್ರಹಿಸಲು ನೀವೂ ಕೈ ಜೋಡಿಸಿ.


ಮಂಗಳವಾರ, ಆಗಸ್ಟ್ 22, 2017

ಎಡವಿದವರು - ಕೆಡವಿದವರು

ಭುವಿಯೂರಲ್ಲಿ ಎಡವದವರಿಲ್ಲ
ದಾಳಿ ದಾರ್ಷ್ಟ್ರ್ಯಗಳೊಳಗೆ ಕೆಡವದವರಿಲ್ಲ
ಎಡವಿದವರೇಳಲು ಎದ್ದವರೆಡವಲು
ಬಾಳೊಂದು ಬೀಳ್ಗಲ್ಲು ಬಿದ್ದೇಳಿ ಮಾಮೂಲು
ಬಿದ್ದವರೊಡನಾಡಿ ಪಾರುಗಾರ ಪರಮಾತ್ಮ

ಕಟ್ಟಿದುದ ಕೆಡವಲು ಕೆಡವಿದುದ ಕಟ್ಟಿ
ನಿಲುಹಲು ಇರುವ ಗೊಡವೆಯೇ ಬೇಡದೆ
ಯಾವನೋ ಕಟ್ಟಿಗಾಣಿಸಿದ ಪಂಜಿನರಮನೆಯೊಳಾಡುವನು
ಒಲೆ ಮುಂದಲ ಶೂರ ಅರಸೊತ್ತಿಗೆ ಭಿತ್ತಿಗಳ
ಮುಂದಲ ಮಹಾರಾಜಾ

ಆರಾರು ಕಟ್ಟಿ ಆರಾರು ಕೆಡವುದೀ ಬಾಳೊಂದು
ಕಟ್ಟಿ ಕಡಿದುರುಳಿಸುವ ಬೀಳ್ಗಲ್ಲು ಕಡೆಗಲ್ಲು
ಅರಿಮೆಯಿಕ್ಕಳ ಗುರಿಯಿಕ್ಕಿ ತಾ ತಗೆದಿದುದೇನು
ತಡಕದರೊಳಗೆ ಬಾಳ್ಗೇನು ಹಿರಿಮೆ
ಅರಿತರೆ ನೀ ಜ್ಞಾನಿ ತಪ್ಪಿತೋ ಜ್ಞಾನ ದಾರಿಗ ನೀ 

ಆರು ಎಂತೆಣಿಸಿದರಂತೇ ಈ ಬಾಳು
ಬಾಳ್ಕಟ್ಟಲು ವಾಡಗೆಯ ಭೋಗವೀ ದೇಹ
ಬಾಳ್ಕೆಡವಲು ವೀರನೆಂಬ ಅಂಕಿತವೇಕೆ
ಅರಿಮೆಯ ಗುರು ಹೃದಯದೊಳಿದ್ದು
ಕೆಡಲ್ಗೊಡುವುದೇ

ಆ ಅರಿಮೆಯೇ ಗುರು...ಆ ಗುರುವೇ
ಭುವಿಯೂರ ದೈವ
ಮೆಚ್ಚಿದನು ಪೆಚ್ಚದೆ ಕಡು ಸತ್ಯ
ಕೊನೆಯೊಳಗೆ ಪೆಚ್ಚುಗಾರ ನೀನಲ್ಲ
ಬೆಳಗಿಸೊಮ್ಮೆ ಅರಿಮೆಯ ಅಂತರಾತ್ಮವ
ಬಟಾ ಬಯಲು ನಿನ್ನೀ ಹೃದಯದಲಿ  

ಮಂಗಳವಾರ, ಆಗಸ್ಟ್ 15, 2017

ಸ್ವತಂತ್ರ ಭಾರತಕ್ಕೆ ತುಂಬಿತು ಎಪ್ಪತ್ತು




ಅದು ಇಪ್ಪತ್ತನೇ ಶತಮಾನದ ಆದಿಭಾಗ. ದಕ್ಷಿಣ ಏಷ್ಯಾ ಬ್ರಿಟಿಷರ ಆಡಳಿತಕ್ಕೆ ಸಿಕ್ಕು ಅಕ್ಷರಶಃ ನಲುಗಿತ್ತು. ಈ ನೆಲದ್ದಲ್ಲದ ಸಂಸ್ಕೃತಿ, ಭಾಷೆ, ಆಚಾರ, ಆಡಳಿತಗಳನ್ನು ಯುರೋಪ್ ಖಂಡದಿಂದ ಈ ನೆಲಕ್ಕೆ ಸರಬರಾಜು ಮಾಡಿದ್ದೂ ಅಲ್ಲದೆ ಇಲ್ಲಿನ ಜನಗಳ ತಲೆಗೆ ಬಲವಂತವಾಗಿ ತುಂಬಿದ್ದರು ಬ್ರಿಟೀಷರು. ಇಲ್ಲಿನ ಮೂಲ ತತ್ವಗಳನ್ನು, ಮೂಲಭೂತ ಅಂಶಗಳನ್ನೆಲ್ಲ ದಿಕ್ಕರಿಸಿ ಪರಕೀಯರ ಆಡಳಿತೆಯೊಳಗೆ ಬಲವಂತವಾಗಿ ದೂಡಿದರೆ ಯಾರಿಗೆ ತಾನೇ ಸ್ವಾಭಿಮಾನ ಕುಂದುವುದಿಲ್ಲ. ಭಾರತದೊಳಗೂ ಅದೇ ಆಯಿತು, ಪರಕೀಯರ ಆಡಳಿತದ ವಿರುದ್ಧ ದನಿಗಳು ಒಂದೊಂದೇ ಬಲಗೊಳ್ಳತೊಡಗಿದಾಗ ಅವುಗಳನ್ನು ದಮನ ಮಾಡಲು ಅಷ್ಟೇ ಲಘುಬಗೆಯಿಂದ ಆಡಳಿತ ಪಾಳಯದಲ್ಲಿ ತಯಾರಿಗಳು ಸದ್ದಿಲ್ಲದೇ ನಡೆಯುತ್ತಲೇ ಇದ್ದವು. ವಿರುದ್ಧ ದನಿಯೆತ್ತಿದವರನ್ನು ನಿರ್ದಾಕ್ಷಿಣ್ಯವಾಗಿ ಜೈಲಿಗೆ ತಳ್ಳುವುದು ಇಲ್ಲವೇ ಗುಂಡಿಟ್ಟು ಕೊಲ್ಲುವುದು ಅವ್ಯಾಹತವಾಗಿ ಮುಂದುವರೆದಿರುತ್ತಿದ್ದಾಗ ದೇಶದ ಎಷ್ಟೋ ಜನ ತಬ್ಬಲಿಗಳಾಗಿಹೋದರು.ಅಸಂಖ್ಯಾತ ತಾಯಿಯರು ತಮ್ಮ ಮಕ್ಕಳನ್ನು ಕಳೆದುಕೊಂಡರು, ಎಷ್ಟೋ ವೃದ್ಧರು ಆಸರೆಯಿಲ್ಲದೆ ಬೀದಿ ಹೆಣಗಳಾದರು, ಎಷ್ಟೋ ಮಕ್ಕಳು ದಿಕ್ಕಿಲ್ಲದೆ ಬೀದಿಯಲ್ಲಿ, ಬಸ್ಸುಗಳಲ್ಲಿ, ರೈಲುಗಳಲ್ಲಿ ಭಿಕ್ಷೆ ಬೇಡುತ್ತಾ ತಮ್ಮ ಭವಿಷ್ಯವನ್ನೇ ಬ್ರಿಟಿಷ್ ಸಾಮ್ರಾಜ್ಯಕ್ಕೆ ಆಹುತಿಯಾಗಿಸಿಬಿಟ್ಟರು. ಇವೆಲ್ಲಾ ಈ ದೇಶದ ಜನಗಳು ಸವೆಸಿದ ಅಹಿತಕರ ದಿನಗಳು, ಅದಕ್ಕೆ ಕಾರಣ "ನಾವು ಚೆನ್ನಾಗಿದ್ದರೆ ಸಾಕು"ಎಂಬ ಸ್ವಾರ್ಥವಲ್ಲ ಬದಲಾಗಿ ನಮ್ಮ ಮುಂದಿನ ಪೀಳಿಗೆಗೆ ಸ್ವತಂತ್ರ್ಯ ಲೋಕದಲ್ಲಿ ವಿಹರಿಸುವ ಭಾಗ್ಯವನ್ನು ಕರುಣಿಸುವ ಸಲುವಾಗಿಯೇ ಎಂಬುದನ್ನು ಈ ಕಾಲದ ಯುವ ಜನಾಂಗ ಅರ್ಥ ಮಾಡಿಕೊಳ್ಳಬೇಕಾಗಿದೆ.

ಭಾರತ ಸೀಮೆಯೊಳಗೆ ಆಡಳಿತದಲ್ಲಿ ಸ್ವತಂತ್ರ ಕೋರಿ ಎದ್ದ ದಂಗೆ ಬ್ರಿಟಿಷ್ ಸಾಮ್ರಾಜ್ಯದ ಬುಡವನ್ನು ಅಲ್ಲಾಡಿಸಿದ ಪರಿ ಎಂತಹುದೆಂದರೆ ಎರಡನೇ ಮಹಾಯುದ್ಧದಲ್ಲಿ ಕೈ ಸುಟ್ಟುಕೊಂಡ ಸಂಧರ್ಭದಲ್ಲಿಯೇ ಭಾರತವನ್ನು ಬಿಟ್ಟು ಹೊರಡಬೇಕಾದ ಸಂದಿಗ್ದತೆಗೆ ಸಿಲುಕಿಕೊಂಡ ಸೂರ್ಯ ಮುಳುಗದ ದೇಶದ ದೊರೆಗಳು ಅದನ್ನೊಂದು ನುಂಗಲಾರದ ತುತ್ತಾಗಿಯೇ ಪರಿಗಣಿಸಿದರು. ಇದಾದ ನಂತರದಲ್ಲಿ ಆ ದೇಶ ಸೋಲುಗಳ ಸರಮಾಲೆಯನ್ನು ತನ್ನ ಕೊರಳಿಗೆ ಸುತ್ತಿಕೊಳ್ಳುತ್ತಲೇ ಹೋಯಿತು ಅಥವಾ ಅಲ್ಲಿ ಹೇಳಿಕೊಳ್ಳುವಂತಹ ಯಾವ ಬೆಳವಣಿಗೆಗಳು ಕಾಣಲಿಲ್ಲ.

ನಮ್ಮ ನಿಜವಾದ ಆಧುನಿಕ ತಾಪತ್ರಯಗಳು ಶುರುವಾಗಿದ್ದೇ ಅಲ್ಲಿಂದ, ಸ್ವತಂತ್ರ್ಯ ಭಾರತದಲ್ಲೇ ನಾವು ನಿಂತು ಕಟ್ಟಿದ ಸರ್ಕಾರವೇ ಇರುತ್ತದೆ ಹಾಗಾಗಿ ಬದುಕು ಮತ್ತಷ್ಟು ಸುಲಾಭವಾಗಲಿಕ್ಕೆ ಸಾಕು ಎನ್ನುವ ಆಗಿನ ಹಿರಿಯರ ಯೋಚನೆ/ಯೋಜನೆಗಳಿಗೆ ಮೂಲಾಧಾರವಾಗಿದ್ದ ಗತ ವೈಭವದ ಭಾರತ ಇನ್ನಿಲ್ಲವಾಗಿತ್ತು. ಕಣ್ಮುಂದೆ ತೊಂದರೆಗಳ ಪರ್ವತವೊಂದು ಧುತ್ತನೆ ಎದುರಾಗಿ 'ಏರು ನನ್ನನ್ನು' ಎಂದು ಸವಾಲೆಸೆದು ನಿಂತಂತೆಯೇ ಇತ್ತು. ಪುರಾತನ ಭಾರತ ಮಧ್ಯ ಪ್ರಾಚ್ಯ ರಾಷ್ಟ್ರಗಳೊಂದಿಗೆ ಕಾಯ್ದುಕೊಂಡಿದ್ದ ವ್ಯಾಪಾರ, ಶಿಕ್ಷಣ, ವಿಜ್ಞಾನದ ಗಾಢವಾದ ಸಂಬಂಧಗಳನ್ನು ಕಡಿದುಕೊಂಡು ನಡುಮಧ್ಯದಲ್ಲಿ ಕಡುವೈರಿ ಪಾಕಿಸ್ತಾನವೆಂಬ ದೇಶವೊಂದನ್ನು ಕಟ್ಟಿದ್ದು ನಮ್ಮ ದೇಶದ ಸಾಂಪ್ರದಾಯಿಕ ವ್ಯಾಪಾರ ಶೈಲಿಗೆ ಧಕ್ಕೆಯಾಗಿ ಈ ದೇಶದ ಪೂರ್ವಕಾಲದ ಆರ್ಥಿಕ ಶೈಲಿಗೆ ಆಘಾತವಾಗಿತ್ತು. ಆಧುನಿಕ ವ್ಯಾಪಾರ ಮಾರ್ಗಗಳನ್ನು ಹುಡುಕಲೇ ಬೇಕಾದ ಅನಿವಾರ್ಯತೆಗೆ ಒಗ್ಗಿಕೊಂಡ ಭಾರತ ಅದನ್ನು ಸುಲಲಿತವಾಗಿ  ನಿಭಾಯಿಸುವಲ್ಲೂ ಯಶಸ್ವಿಯಾಯಿತು. ಭೂಮಾರ್ಗವಲ್ಲದೆ ಜಲಮಾರ್ಗವನ್ನು ಅವಲಂಬಿಸಿ ಆ ಮೂಲಕ ಯಥೇಚ್ಛ ವ್ಯಾಪಾರಗಳಿಗೆ ಒಗ್ಗುವುದು ಅದರ ಜೊತೆ ಜೊತೆಗೆ ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಆಧುನಿಕವಾಗಿ ಶೋಧಿಸಿದ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ಮೂಲಕವೂ ಆಗಷ್ಟೇ ಶುರುವಾಗಿದ್ದ ಕೈಗಾರಿಕಾ ಕ್ರಾಂತಿಯಲ್ಲೂ ತನ್ನ ಪಾಲು ದಾಖಲಿಸುವ ಉತ್ಕಟ ಬಯಕೆಯಿಂದ ಭಾರತ ಸರ್ವ ರಂಗಗಳಲ್ಲೂ ಪುಟ್ಟ ಪುಟ್ಟ ಹೆಜ್ಜೆಯಿಡುತ್ತಾ ಹೋಯಿತು.

Image result for partition of india
ಕೋಟಿ ಕೋಟಿ ಭಾರತೀಯರ ಕನಸು ನನಸಾದ ದಿನದ ಪತ್ರಿಕೆಯಿದು, ವಿಷಾದವೆಂದರೆ ಈ ಸುದ್ದಿ ಇಲ್ಲಿ ಅಚ್ಚಾಗಲು ಲಕ್ಷಾಂತರ ಭಾರತೀಯರ ನೆತ್ತರು ಹರಿದಿದೆ

Image result for britishers before independence
ಬ್ರಿಟಿಷ್ ರಾಣಿಯನ್ನು ಎಳೆಯಬೇಕಾಗಿದ್ದು ಕುದುರೆಗಳು, ಆದರೂ ಇದನ್ನೊಮ್ಮೆ ನೋಡಿ

ಭರತ ಖಂಡದಿಂದ ತುಂಡರಿಸಿಕೊಂಡು ಬೇರೆ ದೇಶಗಳೆಂಬ ಪಟ್ಟ ಕಟ್ಟಿಕೊಂಡ ಹಲವು ದೇಶಗಳು ಭಯೋತ್ಪಾದನೆ, ಬಡತನ ಮತ್ತಿತರ ಬಿರುದುಗಳನ್ನು ತನ್ನೊಳಗೆ ಸೇರಿಸಿಕೊಂಡು ಜಾಗತಿಕ ಮಟ್ಟದಲ್ಲಿ ಮಸುಕಾಗುತ್ತಿವೆ. ಆದರೆ ಭಾರತ ಮಾತ್ರ ತನ್ನನ್ನು ತೊರೆದು ಹೋದ ಬ್ರಿಟಿಷ್ ಸಾಮ್ರಾಜ್ಯವೇ ಬಾಯಿಯ ಮೇಲೆ ಬೆರಳಿಟ್ಟು ನೋಡುವಂತೆ ಬೆಳೆದು ನಿಲ್ಲುತ್ತಿದೆ. ೧೯೪೭ರ ಆಗಸ್ಟ್ ೧೫ರೆಂದು ಭಾರತದಿಂದ ಹೊರಡುವ ಮೊದಲು ದೆಹಲಿಯ ಬ್ರಿಟಿಷ್ ಅಧಿಕಾರಿಯೊಬ್ಬ ಹೇಳಿದನಂತೆ "ಇದಾಗಿ ಮುಂದೆ ಅಸ್ತಿತ್ವಕ್ಕೆ ಬರಲಿರುವ ಪಾಕಿಸ್ತಾನ ಹಾಗು ಹಿಂದುಸ್ತಾನ ಗಳೆರಡರಲ್ಲಿಯೂ ಪಾಕಿಸ್ತಾನವೇ ಬಹುಬೇಗ ಅಭಿವೃದ್ಧಿ ದಾಖಲಿಸಲಿದೆ, ಕಾರಣ ಪಾಕಿಸ್ತಾನದಲ್ಲಿರುವುದು ಒಂದೇ ಧರ್ಮ ಅದನ್ನು ಬಿಟ್ಟು ಅವರಿಗೆ ಬೇರೆ ಜಾತಿ ಪಂಥಗಳಿಲ್ಲ. ಹೀಗಿರುವ ದೇಶ ಐಕ್ಯತೆ ಸಾಧಿಸುವುದು ಬಹಳ ಸುಲಭ ಆದ ಕಾರಣ ಆ ದೇಶ ಬಹು ಬೇಗ ಪ್ರಗತಿ ಸಾಧಿಸಲಿದೆ". ಒಂದು ದೃಷ್ಟಿ ಕೋನದಲ್ಲಿ ಬ್ರಿಟಿಷ್ ಅಧಿಕಾರಿ ಹೇಳಿದ್ದು ಸರಿಯಿರಬಹುದು. ಆದರೂ ಪ್ರಪಂಚದಲ್ಲೆಲ್ಲೂ ಇರದಷ್ಟು ವಿವಿಧತೆಯನ್ನು ತನ್ನೊಡಲೊಳಗೆ ತುಂಬಿಕೊಂಡು ಜಗತ್ತಿಗೆ ಗುರುವಾಗಿ ಬೆಳೆದು ನಿಂತಿರುವ ಭಾರತ ಇಂದು ನಿಜಕ್ಕೂ ಆ ಬ್ರಿಟಿಷ್ ಅಧಿಕಾರಿಯ ಮಾತು ಸುಳ್ಳು ಮಾಡಿಬಿಟ್ಟಿದೆ. ಭಾರತ ಧೃಡವಾಗಿ ಬೆಳೆದು ನಿಂತ ಶೈಲಿ ನೋಡಿ ಬ್ರಿಟಿಷರೇ ಇಂದು ನಾಚಿಕೆ ಪಟ್ಟುಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದೆ. ಸ್ವಾತಂತ್ರ್ಯ ಭಾರತದ ಮುಂದಿನ ಹಾದಿಯೂ ಹೂವಿನ ಹಾಸಿಗೆಯಾಗಿರಲಿಲ್ಲ. ಕಬ್ಬಿನ ರಸವನ್ನೆಲ್ಲ ತೆಗೆದು ಬರಿಯ ಸಿಪ್ಪೆಯನ್ನು ಬಿಸಾಡಿದಂತೆ  ಬ್ರಿಟಿಷರು ಇಲ್ಲಿನ ಸಂಪತ್ತು, ಸಿರಿವಂತಿಕೆಗಳನ್ನೆಲ್ಲ ದೋಚಿ ಪಶ್ಚಿಮದ ಖಜಾನೆಯೊಳಗೆ ಪೇರಿಸಿಕೊಂಡು ಬಿಟ್ಟರು.

ಶನಿವಾರ, ಆಗಸ್ಟ್ 5, 2017

ಜಗ - ಹುಡುಕು ತಾಣ

ಹುಡುಗಾಟದೊಳಗೆ ಹುಡುಕುಗಾರರೆಲ್ಲ
ಹುಡುಕಿ ತಡಕಿ
ಹುಡುಕುತ್ತಿರುವುದೇನು
ಎನುವುದನೆ ಮರೆತು
ನಡುವೆ ಕಂಡ ಅಡ್ಡ ದಾರಿಯೊಳಗೆ ಸುಳಿದು
ಅಲ್ಲೆಲ್ಲೋ ಹರಿವ ಝರಿ
ಇಲ್ಲೆಲ್ಲೋ ಧುಮುಕುವ ಜಲಾದಿ
ಅಲ್ಲೆಲ್ಲೋ ಸುಯ್ಯುವ ತಂಗಾಳಿ
ನಡು ನಡುವೆ ಬಾಯ್ಬಿಚ್ಚಿಸುವ
ದಿಬ್ಬ ಪರ್ವತ ಸಾಲು
ಇವೆಲ್ಲದರೊಳಗೆ ಸುಳಿವ ಮನಸ್ಸು
ಎಲ್ಲವನು ಅಳೆದು ತೂಗಿ
ಅದಕೆ ಗುರುವೊಬ್ಬನನು
ಬಯಸಿ, ಮನದೊಳಗೆ ತಿದ್ದಿ
ಅವನ ದೇವರೆಂದು ಕರೆದು
ಭಕ್ತಿ ಭಾವಗಳನುಕ್ಕಿಸಿ
ಅಲ್ಲೊಮ್ಮೆ ಅಭಿಷೇಕ ಗೈದು 
ಇನ್ನೊಮ್ಮೆ ಮಂತ್ರಪುಷ್ಪಗಳನರ್ಪಿಸಿ
ಮನದೊಳಗೆ ಏನೇನೋ ಎಣಿಸಿ
ಹೊರಗೆ ಇನ್ನೊಂದನ್ನು ತೋರಿಸಿ 
ಒಳಗೇನು ?
ಹೊರಗೇನು? 
ಎಲ್ಲವ ಬೆರೆಸಿ 
ಅವನೇನೆಂದು ದೇವರಿಗೂ ಕಸಿವಿಸಿಯಾಗಿ 
ಏನು ಕೊಡಬೇಕು ಏನು ಬಿಡಬೇಕು 
ಎನ್ನುವ ಚಿಂತೆಯ  ಕೂಪಕೆ ಬಿದ್ದ ಕೊಡುಗೈ ದಾನಿಯೂ 
ಚಿಂತಿಸಿ, ಅನುಮಾನಿಸಿ 
ತಿರುಗಿ ಅಲೆಯುವುದೇ ಅವನಿಗೆ ತರವೆಂದು
ಬಗೆದು ಅಲೆಸುತ್ತಿರುವನೇ?

ನಂಬು ನಿನ್ನ ಶಕ್ತಿಯನ್ನು ನೀನು
ನಂಬು  ನಿನ್ನ ಯುಕ್ತಿಯನು ನೀನು 
ನಿನಗೆ ನೀನೆ ನೆರವಾಗದವನು
ಪರರ ನೆರವಿಗೆ ಕಾಯಲರ್ಹನೇ?
ದೇವರ ನೆರವಿಗೆ ಕಾಯುವ ನಿನಗೂ ಅವನಿಗೂ 
ಸಂಬಂಧವೇನು? ಅದನುಳಿಸುವ ಯುಕ್ತಿಯುಂಟೆ
ನಿನಗೆ ?
ಯುಕ್ತಿಯೇನು? ಶಕ್ತಿಯೇನು? ಈ ಬಾಳಿನ ತರವೇನು 
ಗುರಿಯೇನು ? ಎಲ್ಲಕ್ಕೂ ಮೂಲ ಮನಸ್ಸು
ಅದನೆ ಗುರುವಾಗಿಸು 
ಅದಕೆ ಗುರಿ ತಿಳಿಸು 
ಅದನೆ ಮೂಲವಾಗಿಸು 
ಅದಕೆ ಗೆಲುವರ್ಪಿಸು
ಜೀವಮಾನದ ಒಡನಾಡಿ ನಿನ್ನೀ ಮನಸು.

ಶನಿವಾರ, ಜುಲೈ 8, 2017

ನಾವು ನಾವು ಅರಿತರೆ ಮಾತ್ರ ತಾಯಿ ಭಾರತಿ

ಕವಿ ಶೈಲಕೆ ಒಲಿದ
ವೀಣಾಪಾಣಿ
ಇಣುಕೊಮ್ಮೆ ನಮ್ಮ
ಹಟ್ಟಿ, ಓಣಿ  ದಾರದಂಗಳಿಗೆ
ಕೊರಗುತಿಹರು, ಸೊರಗುತಿಹರು
ತಾಯಿ ಭಾರತೀಯ
ನಲ್ಮೆಯ ಕುಡಿಗಳು.

ವಿಲಾಸಕ್ಕೊಲಿದ ಧನಲಕ್ಷ್ಮೀ
ಒಲಿಯಿಲ್ಲಿ ನಮ್ಮ ತನು
ಮನಗಳಿಗೊಂದಿಷ್ಟು
ಉಲ್ಲಾಸ ತಂದೆರಚು
ನಾವು ಕುಂತು
ಉಣ್ಣುವೆವು ಕೆಲವು ದಿನ.

ಭೋಗ ಭಾಗ್ಯಕೊಲಿದ
ದೇವೇಂದ್ರ ಕಳಿಸು
ನಿನ್ನ ಗುಮಾಸ್ತರ
ಉಣ್ಣಲು ಉಡಲು
ಇಲ್ಲದ ನಮ್ಮ ಕೇರಿ
ಜನಗಳೊಡನೊಮ್ಮೆ
ಮಾತನಾಡಿಸು

ತೀರಿಗೆರಡು ಮಾರಿಗೊಂದು
ದೇವರುಗಳ ಕಡೆದು
ಕೂರಿಸಿದ್ದೇವೆ
ನಮಗಿಲ್ಲವಾದರೂ
ದೇವರನ್ನು ಸಲುಹಿಬಿಟ್ಟಿದ್ದೇವೆ
ಈಗಿದೇನು ಏನು
ನಿಮ್ಮ ಹಠ

ಬನ್ನಿ ಎಲ್ಲರೂ ಇಳಿದು
ಇಲ್ಲೊಮ್ಮೆ ನೋಡಿ
ಧರ್ಮಗಳು ಕತ್ತಿ
ಕೊಡಲಿಗಳ ಹಿಡಿದು
ನಿಂತಿವೆ. ಜಾತಿಗಳು
ಜುಟ್ಟು, ಜನಿವಾರಗಳಲ್ಲಿ
ಅಡಗಿ ಹೋಗಿವೆ

ಆಳುಗರು ಜಾತಿಗಳ
ಹೊಸ ಸೂತ್ರಧಾರರು,
ಹೆಸರೊಳಗೆ ಮಾತ್ರ
ಪ್ರಜೆಗಳು ಪ್ರಭುಗಳು
ದಿಟದಲಿ ಅವರೆಲ್ಲ
ಆಳಿಸಿಕೊಳ್ಳುವ
ಹಂಬಲದವರು

ಒಗ್ಗಟ್ಟಿನೊಳಗೆ ನಾವು ನಾವು
ಸಲಹಿಕೊಂಡರೆ ಮಾತ್ರ ದೇಶ
ನಾವು ನಾವು ಅರಿತರೆ
ಮಾತ್ರ ತಾಯಿ ಭಾರತಿ
ಆಳುಗರ ಕೈಗೆ ಜುಟ್ಟು
ಕೊಟ್ಟರೆ ನಮಗೆ ದೇವರೇ ಗತಿ!.
















ನಮೋ ಇಸ್ರೇಲ್ ಭೇಟಿ - ಭಾರತದಲ್ಲಿ ಕುಡಿಯುವ ನೀರಿನ ಬವಣೆ ಹಿಂಗಬಹುದೇ?

ಮೊನ್ನೆ ಮೊನ್ನೆ ಭಾರತದ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಗೆ ಭೇಟಿ ಕೊಟ್ಟಿದ್ದು ನಿಮಗೆಲ್ಲ ನೆನಪಿರಬೇಕಲ್ಲ?....ಹಾಗೆಯೇ ಕಳೆದ ವರ್ಷ ಕರ್ನಾಟಕ ಹಾಗು ತಮಿಳುನಾಡಿನಲ್ಲಿ ವಿಷಮ ಸ್ಥಿತಿಗೆ ಕಾರಣವಾಗಿದ್ದ ಕಾವೇರಿ ವಿವಾದವೂ ನಿಮಗೆಲ್ಲ ನೆನಪಿರಬೇಕಲ್ಲ. ಇರಲಿ. ಕಾವೇರಿ ವಿವಾದ ಭುಗಿಲೆದ್ದಾಗ ಕೆಲವರು ಕರ್ನಾಟಕದ ಪರ ಮಾತನಾಡಿದರೆ ಇನ್ನು ಕೆಲವರು ತಮಿಳುನಾಡಿನ ಪರ ಮಾತನಾಡಿದರು.ಯಾರ್ಯಾರಿಗೆ ಎಲ್ಲೆಲ್ಲಿ ಅನುಕೂಲವಾಗುತ್ತದೋ ಅವರವರು ಆ ರಾಜ್ಯದ ಪರ ಮಾತಾಡಿದರು, ಅದೆಲ್ಲ ಹಿಂದಿನಿಂದಲೂ ಹಾಗೆ ನಡೆದುಕೊಂಡು ಬಂದುಬಿಟ್ಟಿದೆ ಬಿಡಿ. ಆದರೆ ಎರಡೂ ರಾಜ್ಯಗಳಿಗೆ ಅನ್ಯಾಯವಾಗದಂತೆ ನೀರಿನ ತೊಂದರೆ ನೀಗಿಸುವಂತಹ ಮಾತನಾಡಿದ್ದು ಹಾಲಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ. ತಮಿಳುನಾಡಿನ ರೈತರಿಗೆ ನಿಜವಾಗಿಯೂ ಬೇಕಾಗಿರುವುದು ನೀರೋ ? ಅಥವಾ ಕಾವೇರಿ ನೀರೋ? ಎನ್ನುವ ಮೂಲಕ ನೀರಿನ ಮೂಲವಾಗಿ ಕಾವೇರಿ ನದಿಯೊಂದನ್ನೇ ನಂಬಿಕೊಂಡು ಕೂರುವ ಓಬೀರಾಯನ ಕಾಲವಿದಲ್ಲ , ಬದಲಾಗಿ ತಂತ್ರಜ್ಞಾನ ಬೆಳೆದಿದೆ ಹಾಗು ಕರ್ನಾಟಕ-ತಮಿಳುನಾಡುಗಳಿಗೆ ಯಥೇಚ್ಛ ಸಮುದ್ರ ನೀರು ಬಳಸಿಕೊಳ್ಳುವ ಅವಕಾಶವೂ ಇದೆ ಹೀಗಿರುವಾಗ ಸಮುದ್ರ ನೀರಿನ ಉಪ್ಪಿನಂಶ ತೆಗೆಯುವ ತಂತ್ರಜ್ಞಾನ ಬಳಸಿಕೊಂಡು ಕಡಿಮೆ ಖರ್ಚಿನಲ್ಲಿ ಕೃಷಿ ನೀರಿನ ಮೂಲಗಳನ್ನು ಕಂಡುಕೊಳ್ಳಬಾರದೇಕೆ ಎನ್ನುವ ವೈಜ್ಞಾನಿಕ ಪ್ರಶ್ನೆಯೆತ್ತಿದ್ದು ಸುಬ್ರಮಣಿಯನ್ ಸ್ವಾಮಿ ಮಾತ್ರ.

ಅಲ್ಲಿಯವರೆಗೂ ಕಾವೇರಿ ಸಮಸ್ಯೆಗೆ ಶಾಶ್ವವಾತ ಪರಿಹಾರವೆಂದರೆ ನದಿ ಜೋಡಣೆ ಮಾತ್ರ ಹಾಗು ಅದು ಅಧಿಕ ಖರ್ಚಿನ ವ್ಯವಹಾರವಾದ್ದರಿಂದ ಅದರ ಅನುಷ್ಠಾನ ಕಷ್ಟ ಸಾಧ್ಯವೆಂದೇ ನಂಬಿಕೊಂಡಿದ್ದ ಕಾವೇರಿ ಕೊಳ್ಳದ ಜನಗಳಿಗೆ ಹೊಸ ವಿಚಾರ ಹೊಳೆದಿದ್ದು ಆಗಲೇ. ಅಂದು ಆ ಸಭೆಯಲ್ಲಿ ಮಾತನಾಡುತ್ತ ಸುಬ್ರಮಣಿಯನ್ ಸ್ವಾಮಿ ಇಸ್ರೇಲ್ ನ ವಿಚಾರವನ್ನು ಪ್ರಸ್ತಾಪಿಸಿದ್ದರು. ದೇಶದೊಳಗೆ ಅತೀ ಕಡಿಮೆ ನದಿಗಳನ್ನು ಹೊಂದಿ ಹಾಗು ಅತೀ ಕಡಿಮೆ ಮಳೆಯಾಗುವ ಪ್ರದೇಶಗಳನ್ನು ಹೊಂದಿರುವ ಇಸ್ರೇಲ್ ನೀರಿಗಾಗಿ ಹಾಹಾಕಾರವೆಬ್ಬಿಸದೇ ಸಮುದ್ರದ ನೀರನ್ನೇ ಶುದ್ಧೀಕರಿಸಿ ಕೃಷಿ ಕಾರಣಕ್ಕೂ ಹಾಗು ಕುಡಿಯುವ ಅನುಕೂಲಕ್ಕಾಗಿಯೂ ಬಳಸಿಕೊಳ್ಳುತ್ತಿದೆ ಎಂದು ಹೇಳಿದ್ದರು. ಅಂದು ನಾವೆಲ್ಲಾ ಅದನ್ನು ಕೇಳಿದ್ದೆವು ಆದರೆ ಮೊನ್ನೆ ಮೋದಿ- ಬೆಂಝಮೀನ್ ನೆತನ್ಯಾಹು ಭೇಟಿಯಲ್ಲಿ ಸಮುದ್ರ ತೀರವೊಂದಕ್ಕೆ ಭೇಟಿ ಕೊಟ್ಟ ಉಭಯ ನಾಯಕರು ಅಲ್ಲಿಯೇ ಇದ್ದ ನೀರು ಶುದ್ಧೀಕರಣ ಯಂತ್ರವೊಂದರ ಮೂಲಕ ಸಮುದ್ರ ನೀರನ್ನು ಶುದ್ಧೀಕರಿಸಿ ಅಲ್ಲಿಯೇ 'ಚೀರ್ಸ್' ಎಂದು ಕುಡಿಯುತ್ತಿದ್ದುದನ್ನು ಸರಿಸುಮಾರು ಭಾರತದ ಎಲ್ಲಾ ಮಾಧ್ಯಮಗಳು ವರದಿ ಮಾಡಿವೆ. ಇದಾದ ನಂತರ ಭಾರತ-ಇಸ್ರೇಲ್ ಒಡಗೂಡಿ ಭಾರತೀಯ ಸೇನೆ, ಕೃಷಿ, ನೀರಾವರಿ ಮುಂತಾದ ವಿಚಾರಗಳ ಬಗ್ಗೆ ಒಪ್ಪಂದ ಮಾಡಿಕೊಂಡವು. ಇದನ್ನು ಕಂಡು ನೀರಿನ ಸಮಸ್ಯೆಯೆದುರಿಸುತ್ತಿರುವ ಮಂದಿಗೆ ಬಹಳ ಖುಷಿಯಾಗಿರಲಿಕ್ಕೆ ಸಾಕು, ಅದರಲ್ಲೂ ದಕ್ಷಿಣ ಭಾರತದ ಹೈದ್ರಾಬಾದ್ ಕರ್ನಾಟಕ ಪ್ರಾಂತ, ಮುಂಬೈ ಕರ್ನಾಟಕ ಪ್ರಾಂತ, ಕಾವೇರಿ ಕೊಳ್ಳವಾದ ಕರ್ನಾಟಕ-ತಮಿಳುನಾಡಿನ ಹಲವಾರು ಜಿಲ್ಲೆಗಳು ಇಂತಹ ವ್ಯವಸ್ಥೆಯನ್ನು ತಮ್ಮಲ್ಲೂ ಅನುಷ್ಠಾನಗೊಳಿಸಿದರೆ ಹೇಗಿರುತ್ತದೆ ಎನ್ನುವ ಯೋಚನೆಗೆ ಹಾರಿರುವುದಕ್ಕೆ ಸಾಕು.



7000 ಕಿಲೋಮೀಟರ್ ಗೂ ಮೀರಿ ಸಮುದ್ರ ತೀರ ಹೊಂದಿರುವ ಹಾಗು 130 ಕೋಟಿಗೂ ಅಧಿಕ ಜನ ಸಂಖ್ಯೆಯುಳ್ಳ ಭಾರತ ಸಮುದ್ರ ನೀರಿನ ಶುದ್ಧೀಕರಣದ  ಕಡೆ ಇದುವರೆಗೂ ಗಮನ ಕೊಡದಿರುವುದೇ ವಿಪರ್ಯಾಸ. ಭಾರತದ ಕೃಷಿ ಮಾನ್ಸೂನ್ ನೊಂದಿಗಿನ ಜೂಜಾಟ ಎನ್ನುವುದು ನಮಗೂ ನಿಮಗೂ ಗೊತ್ತಿರುವ ಸಮಾಚಾರವೇ. ಹಾಗೆಯೇ ಹಿಮಾಲಯದ ತಪ್ಪಲಿನ ನದಿಗಳನ್ನು ಹೊರತು ಪಡಿಸಿದರೆ ಭಾರತದ ಇನ್ನೆಲ್ಲ ನದಿಗಳೂ ಮಳೆಯಾಧಾರಿತ ಎನ್ನವುದು ತಿಳಿದಿರುವ ಸಂಗತಿಯೇ. ಜಾಗತಿಕ ಹಾಗು ವೈಜ್ಞಾನಿಕ ಕಾರಣಗಳಿಗಾಗಿ ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕುಸಿಯುತ್ತಿರುವುದು ಇದೀಗ ಗೌಪ್ಯ ವಿಚಾರವಲ್ಲ. ಹೀಗಿರುವಾಗ ಇಸ್ರೇಲ್ ನೀರಿನ ಶುದ್ಧೀಕರಣದಂತಹ ಹೊಸ ತಂತ್ರಜ್ಞಾನ ಬಳಸಿಕೊಂಡು ಭಾರತ ಹೊಸ ಭಾಷ್ಯ ಬರೆಯುವುದು ಅನಿವಾರ್ಯವಾಗಿದೆ. ಬರ ಪರಿಸ್ಥಿತಿ ನಿರ್ವಹಣೆಗೆಂದು ಪ್ರತೀ ಬರಗಾಲದಲ್ಲೂ ದೆಹಲಿ ಕದ ತಟ್ಟುವ ಕರ್ನಾಟಕ-ತಮಿಳುನಾಡಿನ ರಾಜಕಾರಣಿಗಳಿಗೆ ಈಗಲಾದರೂ ದೇವರು ಇಂತಹ ತಂತ್ರಜ್ಞಾನಗಳತ್ತ ಮನಸ್ಸು ಹರಿಸುವ ಶಕ್ತಿ ಕೊಡಲಿ. 

ಭಾನುವಾರ, ಜೂನ್ 25, 2017

ಭುವಿಗೂ ಮುಗಿಲಿಗೂ ಮಾತು - ಮಳೆ

ಭುವಿ ತಾನು ಮನದ
ಬಯಕೆಗಳ ಮುಗಿಲಿಗೆ
ಒಯ್ಯುವ ಪಣವಾಗಿ
ನೀರ ನೆಪ ಮಾಡಿ
ಇಬ್ಬನಿ, ಆವಿ, ಮಂಜು,
ಮಂಗಾಳಗಳ ಕಡೆದು
ಗುಟ್ಟಾಗಿ ಕಳಿಸುತಿದೆ.

ಭುವಿಯ ಭಾವವರಿತ
ಮುಗಿಲು ತಾನೆಲ್ಲರಿಗೂ
ಮುಂದಾಳು, ಮಿಗಿಲಾಳು,
ದೊಡ್ದಾಳು, ಕಟ್ಟಾಳು,
ಭಯವೇಕೆಂದು ಬಗೆದು
ತನ್ನ ಭಾವ ಬದುಕುಗಳನ್ನೆಲ್ಲ
ಬೆಸೆದು ಮಳೆಯಾಗಿ ಸುರಿಸುತಿದೆ.

ತನ್ನ ಭಾವಕೆ ಸ್ಪಂದನೆ
ತನ್ನ ನೋವಿಗೆ ಸಾಂತ್ವನ
ತನ್ನ ಜೀವಕೆ ಜೊತೆಗಾರನ
ಬೆಂಬಲ ಕಂಡು ಭುವಿ
ಮನಸು ಉಲ್ಲಾಸಿತವಾಗಿ
ಸುಕೋಮಲ ಸುವಾಸನೆ ಸುಯ್ಯುತಿದೆ
ನಿರಾಳತೆ ಎದ್ದೆದ್ದು ಕಾಣುತಿದೆ.

ಆ ನಿರಾಳತೆ ಇಲ್ಲಿರುವ
ಜೀವಗಳ ಪೊರೆಯುತಿದೆ
ಅಲ್ಲಿ ನಡೆಯುವ ಸಂವಹನ
ಇಲ್ಲಿನ ಬದುಕಿಗೆ ಆಧಾರವಾಗಿದೆ
ಅಲ್ಲಿಂದ ಘಟಿಸುವ ಸರ್ವವೂ
ನಮ್ಮ ಒಳಿತಿಗಾಗಿಯೇ
ಭುವಿಯ ಮಕ್ಕಳಲ್ಲವೇ ನಾವು.

ಭಾನುವಾರ, ಮೇ 28, 2017

ಜ್ಞಾನ ಗಂಗೆ

ಜ್ಞಾನವೆಂಬುದು ಹರಿವ ಗಂಗೆ
ಉದಿಸಿದ್ದೆಲ್ಲಿ
ಪರ್ಯಾವಸಾನವೆಲ್ಲಿ ಯಾವೊಂದು
ತಿಳಿಯದ, ತಿಳಿಸದ
ಆದ್ಯಂತ್ಯವಿಲ್ಲದ ಹರಿವದು

ಆದ್ಯಂತ್ಯ ಕಂಡಿರುವುದು
ಹರಿವ ಗಂಗೆಯಲ್ಲ
ಮೊಗೆವ ಕೈ
ಹಿಗ್ಗುವ ಬಾಯ್
ಮೀಯುವ ಮೈ

ಗೆಲುವೇ ಗೆಲುವೇ

ಗೆಲುವೇ ಗೆಲುವೇ ಬಾ ಗೆಲುವೇ
ನಿನಗಾಗಿ ನಾಲ್ಕುಗೋಡೆಗಳ ಮಧ್ಯೆ
ದುಡಿಯುವೆ ನಾನು
ನಿನಗಾಗಿ ಶ್ರದ್ಧೆ ಭಕ್ತಿಗಳನ್ನು
ಪಣವಾಗಿಡುವೆ ನಾನು
ಜಗಮಗಿಸುವ ಬೆಳಕಿನ ಚಿತ್ತಾರದ
ವೇದಿಕೆಯೊಳಗೆ ಅಪ್ಪು ಬಾ ನನ್ನ
ಸಾವಿರಾರು ಜನರ ಹಾರೈಕೆ
ಅದಕೆ ಆಧಾರವಾಗಲಿ
ಅವರ ಚಪ್ಪಾಳೆ ಅದಕೆ ಸಾಕ್ಷಿಯಾಗಲಿ
ಅದರೊಳಗೆ ನಾನೆಂಬುದು
ಬರಿ ನೆಪವಾಗಲಿ.

ಏನು ಬೇಕು ನಿನಗೆ
ಏನ ಬಯಸುವೆ ನೀನು
ಯಾರನಪ್ಪುವೆ ನೀನು
ಯಾರನು ಇಡಾಡುವೆ ನೀನು
ಬಿಡು ಇದೊಂದು ಗುಟ್ಟನು
ನನ್ನೊಡನೆ
ನೀನೆಳೆದ ಪರಿಧಿಯೊಳಗೆ
ನೀನೆಣಿಸುವ ರೀತಿಯಲೆ ಸುತ್ತುವೆ
ನನ್ನೊಮ್ಮೆ ಅಪ್ಪು ಬಾ
ನಿನ್ನಪ್ಪುಗೆಯಲ್ಲಿ ಸಿಹಿ ಸುಖ ಕಂಡವರೆಷ್ಟು?
ಕೆಲವರಷ್ಟೇ


ಶನಿವಾರ, ಮೇ 20, 2017

ಸೋಲಿಗೆ ಸೋಲುಣಿಸುವುದೇ ನಿಜವಾದ ಯಶೋಮಾರ್ಗ

ದೇಹವನ್ನು ದಂಡಿಸದೆ
ಕಾಯವನು ಖಂಡಿಸದೆ
ಉಂಡುಂಡು ತೇಗುವರೆಲ್ಲಾ ಕೈಲಾಸಕೆ
ಪೋದೊಡೆ ಅದನೇನು ರಂಡೆಯಾಳುವಳೆ ಸರ್ವಜ್ಞ.

ಮೇಲಿನ ಸರ್ವಜ್ಞ ಮೂರ್ತಿಯ ವಚನ ಬೊಟ್ಟು ಮಾಡುತ್ತಿರುವುದು ಯಾವ ಕೈಲಾಸ ? ಎಂಬ ಯೋಚನೆ ನಿಮಗೇನಾದರೂ ಹೊಳೆದಿದ್ದರೆ ಅದು 'ಶಿವನಿದ್ದಾನೆ' ಎಂಬಂತಹ ಕೈಲಾಸವೆಂಬ ಸ್ಥಳದ ಬಗ್ಗೆಯಲ್ಲ. ಬದಲಾಗಿ ಜೀವನದ ಔನ್ನತ್ಯವೇ ಕೈಲಾಸ, ಅದು ನಿನ್ನಿಂದ ಸಾಧಿತವಾಗಬೇಕಾದರೆ ಸಾಧನೆ ಹಾದಿ ಕಠಿಣ ಮಾತ್ರವಲ್ಲದೆ ನಿನ್ನ ದೇಹವನ್ನು ನೀನು ಎಡೆ ಬಿಡದೆ ದುಡಿಸಿಕೊಂಡು ತೀರಬೇಕು. ಆಗ ಮಾತ್ರ ಔನ್ನತ್ಯ ದೊರಕಿ ನೀನು ಮನುಷ್ಯನಾಗಿ ಹುಟ್ಟಿದ್ದಕ್ಕೂ  ಸಾರ್ಥಕವಾಗುತ್ತದೆ ಎನ್ನುವ ಅರ್ಥ ಸರ್ವಜ್ಞನದು.ಜೀವನದಲ್ಲಿ ಗೆಲುವೆನ್ನುವುದು ಸಿಗಬೇಕಾದರೆ ಅದರ ದಾರಿಯಲ್ಲಿ ಎದುರಾಗುವ ಕಷ್ಟಗಳು ಸಾವಿರ. ಅದನ್ನೆಲ್ಲ ಈಜಿದರೆ ಮಾತ್ರ ಕೈಲಾಸ(ಗೆಲುವು) ಎನ್ನುವುದನ್ನು ತನ್ನ ನಿಜಜೀವನದಲ್ಲಿ ಸಾಧಿಸಿ ತೋರಿಸಿ ಭಾರತದ ಯುವಜನತೆಗೆ ಮಾದರಿಯಾಗಿ ನಿಂತಿರುವ ಮಾದರಿ ವ್ಯಕ್ತಿ ರಮೇಶ್ ಘೋಲಪ್.

ಅದು ಮಹಾರಾಷ್ಟ್ರ ರಾಜ್ಯದ ಸೋಲಾಪುರ ಜಿಲ್ಲೆಯ ಬಾರ್ಶಿ ತಾಲೂಕಿನ ಒಂದು ಹಳ್ಳಿ. ಬೇಸಿಗೆಯ ಸುಡು ಬಿಸಿಲಲ್ಲಿ ಹೆಂಗಸೊಬ್ಬಳು ಬಳೆಯ ಮಲ್ಲಾರ  ಹೊತ್ತುಕೊಂಡು ಸುಮಾರು 7-8 ವರ್ಷದ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು 'ಬಾಂಗ್ಡ್ಯಾ ಬಾಂಗ್ಡ್ಯಾ'(ಕನ್ನಡದಲ್ಲಿ ಬಳೆಗಳು ಎಂದರ್ಥ) ಎಂದು ತನ್ನ ಮಕ್ಕಳ ಬಾಯಿಂದ ಕೂಗಿಸುತ್ತ ನಡೆಯುತ್ತಿದ್ದಳು. ಆ ಮೂವರ ದೇಹಗಳು ಬಡಕಲಾಗಿದ್ದಿದ್ದು ಹಾಗು ಅವರ ಬಳೆ ಮಾಡುವ ಪರಿ ನೋಡಿದರೆ ಬಡತನವೆನ್ನುವುದು ಅವರ ಮನೆಯ ಖಜಾನೆಯೊಳಗೆ ಸುಭದ್ರವಾಗಿಈ ಕೂತುಬಿಟ್ಟಿದೆ ಎನ್ನುವುದು ಯಾರಿಗೂ ಅರ್ಥವಾಗದ ಸಂಗತಿಯೇನೂ ಆಗಿರಲಿಲ್ಲ. ಬಳೆಗಳು ಎಂದು ಸಾರುತ್ತಿದ್ದ ಆ ಇಬ್ಬರು ಹುಡುಗರಲ್ಲಿ ಒಬ್ಬ ರಾಮು, ಹುಟ್ಟಿದ ಕೆಲವೇ ತಿಂಗಳುಗಳಿಗೆ ಪೋಲಿಯೊ ಬಂದು ಎಡಗಾಲು ಸ್ವಲ್ಪ ಊನವಾಯಿತು. ಕಾಲಿಗೆ ತೊಂದರೆಯಾಯಿತಾದರೂ ಕಾಲು ಎಳೆಕೊಂಡು ನಡೆಯಲು ಯಾವ ತೊಂದರೆಯೂ ಕಾಣಿಸಿಕೊಳ್ಳದ ಕಾರಣ ತಟ್ಟಾಡಿಕೊಂಡು, ಕಾಲು ಎಳೆಕೊಂಡು ತನ್ನ ತಮ್ಮನೊಂದಿಗೆ ಸ್ಕೂಲಿಗೆ ಹೋಗಿ ಬಂದು ಮಾಡುತ್ತಿದ್ದ ಹುಡುಗ ಅವನು. ಬೇಸಿಗೆ ಕಾಲದ ರಜೆಯಲ್ಲಿ ತಾಯಿಯೊಂದಿಗೆ ಬಳೆ ಮಾರಲು ಇಬ್ಬರು ಮಕ್ಕಳು ಹೊರಟುಬಿಡುತ್ತಿದ್ದರು. ರಾಮುವಿನ ತಂದೆ ಅದೇ ಊರಿನಲ್ಲಿ ಸಣ್ಣ ಸೈಕಲ್ ರಿಪೇರಿ ಪೆಟ್ಟಿ ಅಂಗಡಿ ಇಟ್ಟುಕೊಂಡಿದ್ದರಾದರೂ ಕುಡಿತದ ಚಟಕ್ಕೆ ಸಿಕ್ಕು ಹಣ, ಆರೋಗ್ಯಗಳನ್ನು ಅದಾಗಲೇ ಕಳೆದುಕೊಂಡಿದ್ದಾಗಿತ್ತು. ಆವತ್ತಿನ ಹೊಟ್ಟೆಗೆ ಮೂಲವಾಗುವಷ್ಟು ಕಾಸಲ್ಲಿ ಕೈಯಾಡುತ್ತಿದ್ದರೂ ನಾಳೆಗೇನು ಎನ್ನುವಂತಹ ಪರಿಸ್ಥಿತಿ ಅವರದ್ದಾಗಿತ್ತು.

ಗಂಡನ ಕುಡಿತದ ಚಟವನ್ನು ಬಿಡಿಸಲಾಗದೆ ಸಂಸಾರ ನೊಗ ಹೇಗಾದರೂ ಎಳೆಯಲು ಆ ಮಹಾತಾಯಿ ಬಳೆಯ ಮಲ್ಲಾರವನ್ನು ಹೊತ್ತುಕೊಂಡು ಊರೂರು ಅಲೆದು ಬಳೆ ಮಾರಿ ತನ್ನ ಮಕ್ಕಳಿಗೆ ಹೊಟ್ಟೆಗೂ ಬಟ್ಟೆಗೂ ಸರಿಯಾದ ದಾರಿಯಾಗುವಂತೆ ನೋಡಿಕೊಂಡಿದ್ದಳು.  ರಾಮುವಿನ ಊರಿನಲ್ಲಿ ಇದ್ದಿದ್ದೇ ಒಂದು ಸರ್ಕಾರಿ ಪ್ರಾಥಮಿಕ ಶಾಲೆ. ಮಾಧ್ಯಮಿಕ ಶಾಲೆಗೆ ಬೇರೆ ಊರಿಗೆ ನಡೆದುಕೊಂಡು ಅಥವಾ ಸೈಕಲ್ ನಲ್ಲಿ ಹುಡುಗರು ಹೋಗಬೇಕಾಗಿದ್ದರಿಂದ ರಾಮು ಮಾಧ್ಯಮಿಕ ಶಾಲೆಗೆ ತನ್ನೂರಿನ ತಾಲೂಕೇ ಆಗಿದ್ದ ಬಾರ್ಶಿಯಲ್ಲಿನ ಚಿಕ್ಕಪ್ಪನ ಮನೆಯಲ್ಲಿ ಓದುವ ಸಲುವಾಗಿ ತಂಗಿದ. ಅಂತೂ ಇಂತೂ ಏಗುತ್ತಾ ನೀಗುತ್ತಾ ಅವನ ವಿದ್ಯಾಭ್ಯಾಸ ಚಿಕ್ಕಪ್ಪನ ಆಶ್ರಯದಲ್ಲಿ ಚೆನ್ನಾಗಿ ನಡೆಯುತ್ತಿತ್ತು. ಅದು 2005 ನೇ ಇಸವಿ. ರಾಮು ದ್ವಿತೀಯ ಪಿ ಯು ಸಿ ಯಲ್ಲಿ ಓದುತ್ತಿದ್ದ. ಆಗಷ್ಟೇ ಆತನಿಗೆ ಪ್ರಿಪರೇಟರಿ ಪರೀಕ್ಷೆಗಳು ನಡೆಯುತ್ತಿದ್ದವು. ಮುಖ್ಯ ಪರೀಕ್ಷೆಗೆ ದಿನಗಳನ್ನೆಣಿಸುತ್ತ ಹುಡುಗರು ಕೂತಿದ್ದರು. ಇದೆ ಸಮಯದಲ್ಲಿ ಕುಡಿದು ಕುಡಿದು ಅನಾರೋಗ್ಯಕ್ಕೆ ತುತ್ತಾದ ರಾಮುವಿನ ತಂದೆ ತೀರಿಕೊಂಡರು.

ಸಾವಿನ ಸುದ್ದಿ ಕೇಳಿದ ತಕ್ಷಣವೇ ಹೊರಟು ನಿಂತ. ಆದರೇನು ಬಾರ್ಶಿಯಿಂದ ತನ್ನೂರಿಗೆ ಬಸ್ ಚಾರ್ಜು ಬರಿ ಏಳು ರೂಪಾಯಿ, ಅದರಲ್ಲೂ ರಾಮುವಿಗೆ ಅಂಗವಿಕಲರ ಐ ಡಿ ಕಾರ್ಡ್ ಇದ್ದಿದ್ದಿರಿಂದ ಚಾರ್ಜು ಬರೀ 2 ರೂಪಾಯಿ. ಸಂಕಷ್ಟಗಳ ಕೂಪದೊಳಗೆ ಬಿದ್ದುಹೋದ ರಾಮುವಿಗೆ ಆ ಎರಡು ರೂಪಾಯಿ ಕೂಡ ಸಿಗಲಿಲ್ಲ. ತನ್ನ ಸ್ನೇಹಿತರು ಇತರರನ್ನು ಕಾಡಿಬೇಡಿ ಹೇಗೋ ಎರಡು ರೂಪಾಯಿಗಳನ್ನು ಹೊಂದಿಸಿಕೊಂಡ ಹುಡುಗ ಊರಿಗೆ ಹೋಗಿ ತನ್ನ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ. ಇತ್ತ ಕಾಲೇಜಿನಲ್ಲಿ ಆತ ಬರೆದಿದ್ದ ಪ್ರಿಪರೇಟರಿ ಪರೀಕ್ಷೆಗಳಲ್ಲೆಲ್ಲ ಆತನೇ ಮಂಚೂಣಿಯಲ್ಲಿದ್ದ. ರಸಾಯನ ಶಾಸ್ತ್ರದ ಪರೀಕ್ಷೆಯಲ್ಲಿ 40 ಅಂಕಗಳಿಗೆ 35 ಗಳಿಸುವ ಮೂಲಕ ತನ್ನ ತರಗತಿಯಲ್ಲಿಯೇ ಮೊದಲ ಸ್ಥಾನದಲ್ಲಿ ನಿಂತಿದ್ದ. ತನ್ನ ತಂದೆಯ ಅಂತ್ಯ ಕ್ರಿಯೆ ಮುಗಿದ ಮೇಲೆ ನಾಲ್ಕಾರು ದಿನ ಊರಿನಲ್ಲಿಯೇ ಉಳಿದು ತಾಯಿಗೂ, ತನ್ನ ತಮ್ಮನಿಗೂ ಸಮಾಧಾನದ ಮಾತುಗಳನ್ನಾಡಿದರೂ ಈತನ ದ್ವಿತೀಯ ಪಿ ಯು ಸಿ ಮುಖ್ಯ ಪರೀಕ್ಷೆ ಒಂದು ತಿಂಗಳಿಗೂ ಕಡಿಮೆಯಿರುವುದು ಅರಿಕೆಯಾಗಿ ಆತನ ತಾಯಿ ಹಾಗು ತಮ್ಮನೇ ಮುಂದೆ ನಿಂತು ಬಾರ್ಶಿಗೆ ಹಿಂದಿರುಗಿ ಪರೀಕ್ಷೆಗೆ ಸಿದ್ಧವಾಗುವಂತೆ  ನೋಡಿಕೊಂಡರು. ತನ್ನ ತಂದೆಯ ಸಾವಿನ ಸೂತಕದ ಛಾಯೆಯೊಳಗೆ ಪರೀಕ್ಷೆ ಬರೆದು ಮುಗಿಸಿದ ರಾಮು ಇಡೀ ತನ್ನ ಗ್ರಾಮ ಹೆಮ್ಮೆ ಪಡುವಂತೆ ಪಿ ಯು ಸಿ ಯಲ್ಲಿ 88.5 ಶೇಕಡಾ ಅಂಕಗಳೊಂದಿಗೆ ಉನ್ನತ ಶ್ರೇಣಿಯಲ್ಲಿ ಪಾಸಾಗಿಬಿಟ್ಟ.

ರಾಮು ವಿಜ್ಞಾನ ವಿಭಾಗದಲ್ಲಿ ಪಾಸಾದರೂ ವೈದ್ಯಕೀಯ/ಇಂಜಿನಿಯರಿಂಗ್ ಕೋರ್ಸ್ ಗಳಿಗೆ ಸೇರಲು ಅವಶ್ಯವಾದ ಹಣವಿಲ್ಲದಿರುವ ಕಾರಣವನ್ನು ಚಿಂತಿಸಿ ಸುಲಭವಾಗಿ ಕೈಗೆಟುಕುವ ಕೋರ್ಸ್ ಡಿ.ಎಡ್ (ಡಿಪ್ಲೋಮ ಇನ್ ಎಜುಕೇಷನ್) ಸೇರಿಕೊಂಡು ಮೊದಲು ದುಡಿಯುವ ಕೆಲಸ ಗಿಟ್ಟಿಸಿ ತನ್ನ ತಾಯಿ ತಮ್ಮನಿಗೆ ಆರ್ಥಿಕವಾಗಿ ಬೆಂಗಾವಲಾಗಬೇಕೆಂದು ತೀರ್ಮಾನಿಸಿದ.ಡಿ.ಎಡ್ ಮಾಡುತ್ತಿರುವಾಗಲೇ ಮುಕ್ತ ವಿಶ್ವ ವಿದ್ಯಾಲಯವೊಂದರಲ್ಲಿ ಕಲಾ ವಿಭಾಗದ ಪದವಿಯನ್ನು ಪಡೆದುಕೊಂಡ. ಪದವಿ ಹಾಗು ಡಿ.ಎಡ್ ಎರಡೂ ಕೈ ಸೇರುವಷ್ಟರಲ್ಲಿ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕೆಲಸ ಮಾಡುವ ಅವಕಾಶವೂ ಕೂಡಿಬಂದು ಕಾಸು ಕಾಸಿಗೂ ಪರದಾಡುವ ಪರಿಸ್ಥಿತಿಯಿಂದ ದೂರಾದರೆ ಸಾಕು ಎನ್ನುವಂತಾಗಿದ್ದ ರಾಮು ಶಿಕ್ಷನಾಗಿ ಮಕ್ಕಳಿಗೆ ಪಾಠ ಹೇಳಲು ಪ್ರಾರಂಭಿಸಿದ್ದ. ಆದರೆ ಅವನ ಅಂತರಂಗದಾಸೆಯೇ ಬೇರೆಯಾಗಿತ್ತು, ಆಗಾಗ ಅದು ಅವನ ನೆನಪಿಗೆ ಬಂದು ಒಳಗೊಳಗೇ ಇರಿಯುತ್ತಿತ್ತಾದರೂ ಮನೆಯ ಪರಿಸ್ಥಿತಿ ಅವನ ಕೈಗಳನ್ನು ಕಟ್ಟಿಹಾಕಿಬಿಟ್ಟಿತ್ತು. ಮುಂದೆ ತಾನೇ ದುಡಿಯುವಂತಾದ ಮೇಲೆ ತನ್ನ ತಮ್ಮ ಹಾಗು ತಾಯಿಯನ್ನು ಬಾರ್ಶಿಯಲ್ಲಿನ ಆತನ ಚಿಕ್ಕಮ್ಮ ಇಂದಿರಾ ಆವಾಸ್ ಯೋಜನೆಯಡಿಯಲ್ಲಿ ಕಟ್ಟಿಕೊಂಡಿದ್ದ ಎರಡು ಕೋಣೆಗಳಿರುವ ಮನೆಯ ಪೈಕಿ ಒಂದು ಕೋಣೆಗೆ ಸ್ಥಳಾಂತರಿಸಿದ್ದ. ಹೊಟ್ಟೆಗೂ ಬಟ್ಟೆಗೂ ನೇರ ಮಾಡಿಕೊಂಡು, ನಡೆಯುವಾಗ  ಎಡವಿಕೊಂಡು ಬಿದ್ದಾಗ ಕೊಡವಿಕೊಂಡು ಅಂತೂ ಜೀವನವನ್ನು ಸಾಗಿಸುತ್ತಿದ್ದ.

ರಾಮು ತನ್ನ ಸುತ್ತಲಿನ ಸಾಮಾಜಿಕ ಪರಿಸ್ಥಿತಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಇದ್ದ. ತನ್ನ ಚಿಕ್ಕಮ್ಮನಂತೆ ತನ್ನತಾಯಿಗೂ ಇಂದಿರಾ ಆವಾಸ್ ಯೋಜನೆಯಡಿಯಲ್ಲಿ ಮನೆ ದೊರಕುವಂತಾಗಲು ಅರ್ಜಿ ಹಾಕಿಸಿದ್ದ. ಆತನ ತಾಯಿ ಸರ್ಕಾರಿ ಕಛೇರಿಗಳನ್ನೆಲ್ಲಾ ಎಡತಾಕಿ ಕೊನೆಗೆ ತನ್ನ ಬಿ ಪಿ ಎಲ್ ರೇಷನ್ ಕಾರ್ಡ್ ಈ ಯೋಜನೆಗೆ ಅರ್ಹವಲ್ಲವಂತೆ ಎನ್ನುವ ಕಾರಣವನ್ನು ಮೇಲಧಿಕಾರಿಗಳಿಂದ ಪಡೆದುಕೊಂಡು ನಿರಾಸೆಯಿಂದ ಮನೆಗೆ ಮರಳಿದ್ದು ಕಂಡು ರಾಮು ಕೆಂಡಾಮಂಡಲವಾಗಿದ್ದ. ನ್ಯಾಯಬೆಲೆ ಅಂಗಡಿಯವನು ಕೂಡಾ ತಮ್ಮ ಕಾರ್ಡ್ ಗೆ ದೊರೆಯಬೇಕಿದ್ದ ಸೀಮೆ ಎಣ್ಣೆಯನ್ನು ಬ್ಲಾಕ್ ಮಾರ್ಕೆಟ್ನಲ್ಲಿ ಹೆಚ್ಚು ಹಣಕ್ಕೆ ಬೇರೆಯವರಿಗೆ ಮಾರುತ್ತಿದ್ದು ಬಿ ಪಿ ಎಲ್ ಕಾರ್ಡ್ ಗಳಿಗೆ ಸೀಮೆ ಎಣ್ಣೆ ಕೊಡುವಾಗ ಇಲ್ಲದ ಸಬೂಬುಗಳನ್ನು ಹೇಳಿ ಸಾಗ ಹಾಕುತ್ತಿದ್ದ. ಇದನ್ನೆಲ್ಲಾ ಅನುಭವಿಸುತ್ತಿದ್ದ ಇನ್ನು ಕೆಲವರು ಯಾರಿಗೆ ದೂರು ಕೊಡುವುದು ಎಂದೂ ತಿಳಿಯದ ಮುಗ್ದರು ಹಾಗು ಅವಿದ್ಯಾವಂತರಾಗಿದ್ದ ಕಾರಣ ನ್ಯಾಯಬೆಲೆ ಅಂಗಡಿಯವನ ದರ್ಪಕ್ಕೆ ಕೊನೆಯೆಂಬುದೇ ಇಲ್ಲವಾಗಿ ಹೋಗಿತ್ತು.

ಇಷ್ಟು ಸಾಲದೇ ಧನದಾಹಿ ಸರ್ಕಾರಿ ಅಧಿಕಾರಿಯೊಬ್ಬ ಸುಮಾರು ಜನ ವಿಧವೆಯರನ್ನು ಒಟ್ಟುಗೂಡಿಸಿ ಅವರಿಗೆ ವಿಧವಾ ವೇತನವನ್ನು ಸುಲಭವಾಗಿ ದಕ್ಕಿಸಿಕೊಡುವ ಮಾತು ಕೊಟ್ಟು ಅವರಿಂದ ಹಣ ಪಡೆದುಕೊಂಡು ಪರಾರಿಯಾಗಿದ್ದ. ರಾಮುವಿನ ಮನೆಯಲ್ಲಿ ರೂಪಾಯಿ ರೂಪಾಯಿಗೂ ಹೆಣಗುವ ಪರಿಸ್ಥಿತಿಯಲ್ಲಿ ಅಧಿಕಾರಿ ಹಣ ಪೀಕಿದ್ದು ಇನ್ನೂ ಸಂಕಷ್ಟಕ್ಕೀಡುಮಾಡಿಬಿಟ್ಟಿತು. ಇವಕ್ಕೆಲ್ಲ ರಾಮುವಿನ ಮನಸ್ಸು ಜರ್ಜರಿತವಾಗಿಹೋಯಿತು. ನಮ್ಮ ಸರ್ಕಾರದ ವ್ಯವಸ್ಥೆಯೊಳಗಿನ ಲೋಪಗಳು ಢಾಳಾಗಿ ಕಂಡು ರಾಕ್ಷಸೀಯ ರೂಪ ಪಡೆದು ಬಡವರ, ಅಸಹಾಯಕರ ಮೇಲೆ ಅಧಿಕಾರಿಗಳ ರೂಪದಲ್ಲಿ ದಾಳಿಯೆಸಗುತ್ತಿದ್ದು ಕಂಡು ರಾಮು ಮಮ್ಮಲ ಮರುಗಿ ಹೋದ.ರಾಮು ತನ್ನ ವಿದ್ಯಾರ್ಥಿ ದೆಸೆಯಲ್ಲಿಯೇ ಕಾಲೇಜು ವಿದ್ಯಾರ್ಥಿ ಸಂಘದ ಪ್ರಮುಖ ಸದಸ್ಯನಾಗಿದ್ದನು. ಕಾರ್ಯಕ್ರಮಗಳ ಅಥವಾ ಇತರ ಕಾಲೇಜಿಗೆ ಸಂಬಂಧಪಟ್ಟ ವಿಚಾರಗಳ ಸಂಬಂಧ ಆಗಾಗ ಬಾರ್ಶಿಯಲ್ಲಿರುವ ತಾಲೂಕು ಕಚೇರಿಗೆ ಹೋಗಿ ಅಲ್ಲಿ ತಹಶೀಲ್ದಾರ್ ರನ್ನು ಭೇಟಿಯಾಗಿವುದು ಸಾಮಾನ್ಯವಾಗಿತ್ತು.  ರಾಮು ತಹಶೀಲ್ದಾರರ ಕಾರ್ಯ ವೈಖರಿ ಕಂಡು ಅವರಿಗೆ ಸಮಾಜದಲ್ಲಿ ಇರುವ ಗೌರವ, ಸ್ಥಾನ ಮಾನಗಳನ್ನು ಕಂಡು ಅಚ್ಚರಿಯ ನೋಟ ಬೀರಿದ್ದ. ತಾನು ಹೀಗೆಯೇ ಆದರೆ ಸದ್ಯ ಈಗಿನ ಪರಿಸ್ಥಿಗಳು ಸುಧಾರಿಸಬಹುದು ಎನ್ನುವ ಕನಸು ರಾಮುವಿನ ಕಣ್ಣಲ್ಲಿ ಆಗ ಮೂಡಿರಲಿಕ್ಕೆ ಸಾಕು.

                                   Image result for ramesh gholap

ಇಷ್ಟೆಲ್ಲಾ ಕಷ್ಟಗಳು ರಾಮುವಿನ ಹೆಗಲಿಗೆ ಏರಿಕೊಂಡಿದ್ದೆ ತಡ ರಾಮು ಜಾಗೃತನಾಗಿಬಿಟ್ಟ. ತಹಸೀಲದಾರರನ್ನು ಕಂಡು ತಾನು ಹಾಗೆಯೇ ಆಗಬೇಕು ಎಂದು ಆಸೆ ಪಡುತ್ತಿದ್ದ ರಾಮು ತಾನೇಕೆ ಹಾಗಾಗಲು ಸಾಧ್ಯವಿಲ್ಲವೆಂದು ತನಗೆ ತಾನೇ ಪ್ರಶ್ನೆ ಹಾಕಿಕೊಂಡ. ವಿದ್ಯಾರ್ಥಿಗಳಿಗೆ ಪಾಠ ಹೇಳುವ ವೃತ್ತಿ ಪವಿತ್ರವಾದರೂ ತನ್ನ ಸುತ್ತಲಿನ ಸಮಾಜದಲ್ಲಿನ ಢಾಳು ವ್ಯವಸ್ಥೆಗಳನ್ನು ಹೆಡೆ ಮುರಿಕಟ್ಟಲು ತಾನೇ ಟೊಂಕ ಕಟ್ಟಿ ನಿಲ್ಲಬೇಕೆಂದು ತೀರ್ಮಾನ ಮಾಡಿಕೊಂಡ. 2009ರ ಸೆಪ್ಟೆಂಬರ್ ನ ಒಂದು ದಿನ ಎಲ್ಲ ಪೂರ್ವಾಪರ ಗಳನ್ನೂ ಯೋಚಿಸಿ ತನ್ನ ತಾಯಿಯ ಮೂಲಕ ಸ್ವ-ಸಹಾಯ ಸಂಘವೊಂದರಿಂದ ಸ್ವಲ್ಪ ಹಣವನ್ನು ಸಾಲವನ್ನಾಗಿ ಪಡೆದು ಭಾರತದ ಅಗ್ರ ಪರೀಕ್ಷೆ ಯು ಪಿ ಎಸ್ ಸಿ ಗೆ ಸಿದ್ಧತೆ ಮಾಡಿಕೊಳ್ಳಲು ಪುಣೆಗೆ ಹೊರಟುಬಿಟ್ಟ.ಆರು ತಿಂಗಳ ಮಟ್ಟಿಗೆ ತನ್ನ ಶಿಕ್ಷಕ ವೃತ್ತಿಗೆ ವಿದಾಯ ಹೇಳಿ ತನ್ನ ಕಣ್ಣರಿವಿಗೆ ಕಂಡಿದ್ದ ಸ್ನೇಹಿತರ ಮೂಲಕ ಮಾಹಿತಿ ಸಂಗ್ರಹಿಸಿ ಗಟ್ಟಿ ಮನಸ್ಸು ಮಾಡಿ ರಾಮು ಈ ನಿರ್ಧಾರ ಕೈಗೊಂಡಿದ್ದ.

ರಾಮು ಸಣ್ಣಹಳ್ಳಿಯಲ್ಲಿ ಹುಟ್ಟಿ ಬೆಳೆದ ಕಾರಣ ಆತನಿಗೆ ಯು ಪಿ ಎಸ್ ಸಿ(ಕೇಂದ್ರ ಲೋಕ ಸೇವಾ ಆಯೋಗ) ಹಾಗು ಎಂ ಪಿ ಎಸ್ ಪಿ (ಮಹಾರಾಷ್ಟ್ರ ಸಾರ್ವಜನಿಕ ಸೇವಾ ಆಯೋಗ) ಬಗ್ಗೆ ಏನೊಂದು ಗೊತ್ತಿರಲಿಲ್ಲ. ಪುಣೆಗೆ ಬಂದು ಅಲ್ಲಿನ ಕೋಚಿಂಗ್ ಸೆಂಟರ್ ಒಂದರಲ್ಲಿ ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಗೆ ತಯಾರಾಗಲು ನಿಂತು 2010ರಲ್ಲಿ ಆ ಪರೀಕ್ಷೆಗೆ ಹಾಜರಾದ. ಆದರೆ ಆ ಪ್ರಯತ್ನದಲ್ಲಿ ಅದೇಕೋ ಅವನಿಗೆ ಯಶಸ್ಸು ಸಿಗಲಿಲ್ಲ. ಪ್ರಿಲಿಮಿನರಿ ಪರೀಕ್ಷೆಯಲ್ಲೇ ನಿಗದಿತ ಅಂಕಗಳನ್ನು ಗಳಿಸದ ಕಾರಣ ಅವನ ಪ್ರಯತ್ನ ವಿಫಲವಾಗಿತ್ತು. ಆದರೂ ಸಾಧನೆಯ ಕಿಡಿಯನ್ನು ತಲೆಯಲ್ಲಿ ಅದಾಗಲೇ ಹೊತ್ತಿಸಿಕೊಂಡಿದ್ದ ರಾಮು ಅಷ್ಟಕ್ಕೇ ಸುಮ್ಮನಾಗಲಿಲ್ಲ, ಧೃತಿಗೆಡಲೂ ಇಲ್ಲ.

ಈ ಮಧ್ಯದಲ್ಲಿ ರಾಮು ತನ್ನೂರಿನ ಜನರೊಂದಿಗೆ ಚೆನ್ನಾಗಿ ಒಡನಾಡುತ್ತಾ ಇದ್ದ ಕಾರಣ ತನ್ನ ತಾಯಿಯನ್ನು 2010ರಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಗೆ ನಿಲ್ಲಿಸಿದ್ದ. ಅವರ ಚುನಾವಣಾ ಅಜೆಂಡಾ ಸರವಾಳವಾಗಿತ್ತಾದರೂ ಹಿಂದುಳಿದವರಿಗೆ, ಅಸಹಾಯಕರಿಗೆ ಸಹಾಯಕ್ಕೊದಗುವ ಅಂಶಗಳನ್ನು ಒಳಗೊಂಡಿದ್ದಾಗಿತ್ತು. ಏನಾದರೂ ಈಗಿನ ಚುನಾವಣೆಗಳು ಹೇಗೆ ನಡೆಯುತ್ತವೆ, ಅಲ್ಲಿ ಯಾವುದಕ್ಕೆ ಹೆಚ್ಚು ಬೆಲೆ ಕೊಡಲಾಗುತ್ತದೆ ಎನ್ನುವುದನ್ನು ವಿಶೇಷವಾಗಿ ಬಿಡಿಸಿ ಹೇಳುವ ಅಗತ್ಯವಿಲ್ಲ ಅಲ್ಲವೇ. ಇಲ್ಲೂ ಅದೇ ನಡೆದು ರಾಮುವಿನ ತಾಯಿಗೆ ಸೋಲಾಯಿತು. ಈ ಘಟನೆ ರಾಮುವಿಗೆ ಉರಿಯುವ ಗಾಯದ ಮೇಲೆ ಉಪ್ಪು ಸುರಿದಂತಾಯಿತು. ನನ್ನ ಸಾಹಸ ಇಲ್ಲಿಗೆ ನಿಲ್ಲಲಿಲ್ಲ ಎಂದು ತನ್ನೂರಿನ ಜನರ ಮುಂದೆಯೇ ಘೋಷಿಸಿದ ರಾಮು ಮತ್ತೆ ತಾನು ಈ ಊರಿಗೆ ಬರುವುದು ಒಬ್ಬ ಅಧಿಕಾರಿಯಾಗಿಯೇ ಎಂದು ಹೇಳಿ ಊರು ತೊರೆದು ಪುಣೆಗೆ ಬಂದು ಮುಂದಿನ ಯು ಪಿ ಎಸ್ ಸಿ ಪರೀಕ್ಷೆಗೆ ತಯಾರಿಗೆ ನಿಂತ.

ಇದಾದ ಮೇಲೆ ರಾಮು ತನ್ನ ಶಿಕ್ಷಕ ವೃತ್ತಿಗೆ ವಿದಾಯ ಹೇಳಿ ರಾಜ್ಯ ಆಡಳಿತಾತ್ಮಕ ಸೇವೆಗಳ ಸಂಸ್ಥೆಯ ಪರೀಕ್ಷೆ ತೆಗೆದುಕೊಂಡು ಪಾಸು ಮಾಡಿದ. ಇದರಿಂದಾಗಿ ರಾಮುವಿಗೆ ಪುಣೆಯಲ್ಲಿ ಉಳಿಯಲು ಸರ್ಕಾರಿ ಹಾಸ್ಟೆಲ್ ಹಾಗು ತಿಂಗಳ ಖರ್ಚಿಗೆ ಸ್ಕಾಲರ್ಷಿಪ್ ಬರಲು ಅವಕಾಶವಾಗಿ ಚಿಂತೆಯ ಹೊರೆ ಸ್ವಲ್ಪ ಕರಗಿತು ಆದರೂ ಅವನ ಮನಸ್ಸು ಮಾತ್ರ ಗುರಿ ಸೇರಲು ತವಕಿಸುತ್ತಾ ಎಡೆಬಿಡದೆ ದುಡಿಯುತ್ತಲೇ ಇತ್ತು. ಬರುತ್ತಿದ್ದ ಸ್ಕಾಲರ್ಷಿಪ್ ಸಾಲದಿದ್ದ ಕಾರಣ ರಾಮು ಆಗಾಗ ಪೋಸ್ಟರ್ ಗಳನ್ನೂ ಹಚ್ಚುವ ಕೆಲಸ ಮಾಡುತ್ತಾ ತನ್ನ ಖರ್ಚನ್ನು ತಾನೇ ಸರಿದೂಗಿಸುತ್ತಿದ್ದ. ದಿನಗಳು ಕಳೆದು ವರ್ಷಗಳಾಗುವಷ್ಟರಲ್ಲಿ ರಾಮು 2011 ಸಾಲಿನ ಯು ಪಿ ಎಸ್ ಸಿ ಪರೀಕ್ಷೆ ಬರೆದಿದ್ದ. 2012 ರಲ್ಲಿ ಫಲಿತಾಂಶ ಪ್ರಕಟವಾಯಿತು. ಅದು ರಾಮುವಿನ ಜೀವನದ ಅತ್ಯಂತ ಮಹತ್ವದ ದಿನ. ತನ್ನೆಲ್ಲ ಕಷ್ಟಗಳಿಗೆ ರಾಮು ತರ್ಪಣ ಕೊಟ್ಟ ಮಹಾ ಸುದಿನ. ಅಂದು ರಾಮು ಇಡೀ ಭಾರತದಲ್ಲಿ 287 ನೇ ರ್ಯಾಂಕ್ ಪಡೆದು ಐ ಎ ಎಸ್ ಪರೀಕ್ಷೆಯಲ್ಲಿ ಪಾಸಾಗಿದ್ದ.

ಊರೂರಿಗೆ ಬಳೆಗಳನ್ನು ಹೊತ್ತು ತಿರುಗಿ ಮಾರಿ, ಜಿಲ್ಲಾ ಪರಿಷತ್ ಸ್ಕೂಲುಗಳಲ್ಲಿ ಓದುತ್ತ ಕಷ್ಟದ ದಿನ ದೂಡಿದ್ದ ಬಾರ್ಶಿಯ ಮಹಾಗಾವ್ ನ ಹುಡುಗ ತನ್ನ ಹೆಸರಿನ ಮುಂದೆ ಐ ಎ ಎಸ್ ಎಂದು ಪೇರಿಸಿಕೊಂಡಿದ್ದು ಆ ಊರಿಗೆ ಮಾತ್ರವಲ್ಲದೆ ಇಡೀ ಭಾರತದ ಯುವ ಜನತೆಗೆ ಮಾದರಿಯಾದ ಜೀವಂತ ದಂತ ಕಥೆಯಾಯಿತು. ಅಂತೂ ಮೇ 12, 2012 ರಂದು ತನ್ನ ಕಷ್ಟದ ಸುಧೀರ್ಘ ಪಯಣ ಮುಗಿಸಿದ್ದ ರಾಮು ತನ್ನೂರಿಗೆ ಹಿಂತಿರುಗಿ ಬಂದಿದ್ದ, ನೆನಪಿರಲಿ ಬಂದಿದ್ದು ರಾಮುವಾಗಿ ಅಲ್ಲ. ರಮೇಶ್ ಘೋರಕ್ ಘೋಲಪ್ (ಐ ಎ ಎಸ್) ಆಗಿ.

ಇದಾಗಿ ಎರಡೇ ತಿಂಗಳುಗಳಲ್ಲಿ ಮಹಾರಾಷ್ಟ್ರ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿ ಇನ್ನೊಂದು ದಾಖಲೆಯನ್ನು ರಾಮು ಬರೆದಿದ್ದ. 1800 ಅಂಕಗಳ ಪೈಕಿ 1244 ಅಂಕಗಳನ್ನು ಪಡೆದು ರಾಮು ಮಹರಾಷ್ಟ್ರದ ಇತಿಹಾಸದಲ್ಲಿಯೇ ಯಾರು ಮಾಡಿರದಿದ್ದ ಸಾಧನೆಗೆ ಸಾಕ್ಷಿಯಾಗಿದ್ದ.

ರಮೇಶ್ ಘೋಲಪ್ ರನ್ನು ಇಂದು ಮಾತಿಗೆಳಸಿದರೆ ಹೇಳುತ್ತಾರೆ "ಇಂದು ನಾನು ಯಾವುದೇ ನ್ಯಾಯಬೆಲೆ ಅಂಗಡಿಯ ಬಗ್ಗೆ ಕಾಳ ಸಂತೆಯಲ್ಲಿ ಸರ್ಕಾರದ ದಿನಸಿ ಪದಾರ್ಥಗಳನ್ನು ಮಾರಿಕೊಳ್ಳುವ ಬಗ್ಗೆ ದೂರುಗಳು ಬಂದರೆ ಅಂದು ನನ್ನ ಕುಟುಂಬ ಸೀಮೆ ಎಣ್ಣೆಗಾಗಿ ಪರದಾಡುತ್ತಿದ್ದುದೇ ಕಣ್ಣ ಮುಂದೆ ಸುಳಿಯುತ್ತದೆ, ಇಂದು ನಾನು ಯಾವೊಬ್ಬ ವಿಧವೆಗೆ ಸಹಾಯ ಮಾಡಿದರೂ, ಅಂದು ನನ್ನ ತಾಯಿ ಸರ್ಕಾರಿ ಅಧಿಕಾರಿಗಳ ಬಳಿ ಇಂದಿರಾ ಆವಾಸ್ ಯೋಜನೆಯಡಿಯಲ್ಲಿ ಮನೆಗಾಗಿ ಗೋಗರೆಯುತ್ತಿದ್ದು ಜ್ಞಾಪಕಕ್ಕೆ ಬರುತ್ತದೆ, ಇಂದು ನಾನು ಯಾವುದೇ ಸರ್ಕಾರಿ ಆಸ್ಪತ್ರೆಗೆ ಭೇಟಿಕೊಟ್ಟಾಗ, ಒಂದಿಲ್ಲೊಂದು ದಿನ ತನ್ನ ತಂದೆ ತೀವ್ರ ಅನಾರೋಗ್ಯದಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಒದ್ದಾಡುತ್ತಿದ್ದ ದೃಶ್ಯ ಕಣ್ಣ ಮುಂದೆ ಸುಳಿಯುತ್ತದೆ" ಎಂದು ಭಾವುಕರಾಗುತ್ತಾರೆ. ಆ ಭಾವುಕತೆಯ ಹಿಂದಿನ ನಿರ್ಭಾವುಕ ಮನಸ್ಸುಗಳು ಸೃಷ್ಟಿ ಮಾಡಿದ ಸನ್ನಿವೇಶಗಳು ಖೇದಕರ, ಅದರೊಳಗೆ ರಾಮುವಿನ ಕುಟುಂಬ ಬಿದ್ದು ನರಳಿದ ಹಾಗು ಅದನ್ನು ರಾಮು ಎದುರಿಸಿದ ರೀತಿ ನಿಜಕ್ಕೂ ಶ್ಲಾಘನೀಯ. ಭಾರತದ ಯುವ ಜನತೆಗೆ ಮಾದರಿಯಾಗಿ ನಿಂತ ರಾಮುವಿಗೆ ಅವರೇ ಸಾಟಿ.ಇದೊಂದು ಬರಿಯ ಕಥಾನಕವಲ್ಲ, ಬದಲಾಗಿ ನಮ್ಮ ನಡುವೆಯೇ ಇದ್ದು ಬೆಳೆದ ಮುಗ್ದ ಹುಡುಗನೊಬ್ಬನ ಸಾಹಸಗಾಥೆ.

ಕೃಪೆ : Source (ರಮೇಶ್ ಘೋಲಪ್ ಕುರಿತ ಮೂಲ ಲೇಖನ ಐ ಎ ಎಸ್ ಸಾಧಕರ ಅತೀ ಸ್ಪೂರ್ತಿದಾಯಕವಾದ ಸಾಧನೆಯ ಕಥಾನಕಗಳೇನು? ಎನ್ನುವ 'ಕೋರಾ(quora.com)' ದಲ್ಲಿನ ಪ್ರಶ್ನೆಯೊಂದಕ್ಕೆ ಉತ್ತರವಾಗಿ ಬಂದಿದ್ದು. )

ರಮೇಶ್ ಘೋಲಪ್ ಗೆ ಸಂಬಂಧಿಸಿದ ಇತರ ಮೂಲಗಳು 
* ರಮೇಶ್ ಘೋಲಪ್ ಮರಾಠಿ ಭಾಷಣ ವಿಡಿಯೋ ತುಣುಕು.
ಬಳೆ ಮಾರಾಟದಿಂದ ಹಿಡಿದು ಝಾರ್ಖಂಡ್ ನ ಜಂಟಿ ಕಾರ್ಯದರ್ಶಿವರೆಗೆ, ದಿ ಬೆಟರ್ ಇಂಡಿಯಾ ಲೇಖನ
ಹಿಂದಿ ದೈನಿಕ 'ಪತ್ರಿಕಾ' ದಲ್ಲಿ ಪ್ರಕಟವಾದ ರಮೇಶ್ ಘೋಲಪ್ ನ ಸಾಹಸಗಾಥೆ.


ಶನಿವಾರ, ಮೇ 13, 2017

ಧರ್ಮ ದುರಸ್ತಿ

ಹೆಸರೇನು ನಿನಗೆ
ಕುಲವೇನು ನಿನಗೆ
ಕಾರ್ಯವಾವುದು ನಿನಗೆ
ಕಪಟ ಭಟ್ಟಂಗಿಗಳ ಆಸರೆಯ
ತೆರೆ ಮರೆಯೊಳಗೆ ಮಲಗಿರುವೆಯಾ!?
ಬಾ ಇಲ್ಲಿ ಒಮ್ಮೆ ನೋಡು
ನಿನ್ನಹೆಸರೊಳಗೆ ನೆತ್ತರ ನದಿಯಿಹುದಿಲ್ಲಿ
ನಿನ್ನಕೃಪೆಯ ರುಂಡ ರಾಶಿಯಿಹುದಿಲ್ಲಿ
ನಿನಗಾಗಿ ನೆತ್ತರಬಸಿವ ಮಕ್ಕಳ ನೋವು ನಿನಗೆ ಆಹಾರವೇ ?
ಅವರ ಚೀತ್ಕಾರ ನರಳಾಟಗಳು ನಿನಗೆ ವೇದ ಘೋಷವೇ ?
ಅವರ ಶಾಪ  ನಿನ್ನ ಪಾಲಿಗೆ ವರವೇ?

ಜಗದೊಳಗುದಿಸಿದ ನರ  ಮಾತ್ರರು
ತಮ್ಮ ವಿನಯವಂತಿಕೆ ಸಂಸ್ಕಾರ ಸಂಸ್ಕೃತಿಗಳನ್ನೆಲ್ಲ
ಪೇರಿಸಿ ಕಟ್ಟು ಬಿಗಿದು
ಅದಕೆ ನಿನ್ನಹೆಸರಿನ್ನಿಟ್ಟು
ಗುಡಿ ಗುಂಡಾರಗಳೊಳಗೆ ಕೊಳೆ ಹಾಕಿ
ನಿರಂಕುಶ ಜಗದೊಳಗೆ
ಬೀದಿಗಿಳಿವ ಬಿಡಾಡಿಗಳಾಗಿ
ನಿನ್ನಹೆಸರೊಳಗೆ ನಿತ್ಯ ಸುಲಿಗೆಯುತ್ಸವ
ನಡೆಯುತಿಹುದಿಲ್ಲಿ,
ಮುರಿ ನಿನ್ನ ನಿದ್ರಾ ವ್ರತವ, ಬಾ ಇಲ್ಲಿ ಬೆರೆ ಇಲ್ಲಿ.
ನಿನ್ನಿಂದ ನಡೆದಿಹುದೇನು ನೀನೂ ಅವಗಾಹಿಸು


ನ್ಯಾಯದ ಕಣ್ಣಿಗೆ ಕಪ್ಪನೆಯ ಅರಿವೆ ಸುತ್ತಿದೆ
ದೇವರು ದಿಂಡರುಗಳನೆಲ್ಲ ಗುಡಿಯೊಳಗೆ ಕೂಡಿಸಿ
ದುಡಿವ ಸರಕು ಮಾಡಿದೆ
ಪ್ರಕೃತಿ ತಾನು ನಿಂತು ಕೊಡದ ಭಿನ್ನತೆ ಕೊಟ್ಟೆ
ನೀನು ಹುಟ್ಟಿದ್ದೇ ಸತ್ಯ ಸಂಧತೆಯನ್ನು ಮಾನವನ
ಹೃದಯದೊಳಗೆ ಬೆಳಗಲು
ಆದರೂ ಒಮ್ಮೊಮ್ಮೆ ನನ್ನ ಉಳಿಸಲು ಸುಳ್ಳು
ಹೇಳಿರೆಂದು ನೀನೆ ನುಡಿಸಿದೆ


ಭಾನುವಾರ, ಮೇ 7, 2017

ಯಾರು ನಾವು?


ನಂಬಿಕೆಗೆ ಹತ್ತು ಹಲವು 
ಹೆಸರ ಹೊಸೆದ ಕೀರ್ತಿ ನಮ್ಮದು, 
ಆ ನಂಬಿಕೆಗೆ ಅಪನಂಬಿಕಸ್ಥರಾಗಿ 
ದಿನ ದೂಡುತ್ತಿರುವರು ನಾವು. 

ಜ್ಞಾನ ವಿಜ್ಞಾನಕೆ 
ತಿರುವು ಕೊಟ್ಟ ಛಾತಿ ನಮ್ಮದು,
ಜ್ಞಾನ ವಿಜ್ಞಾನ ಪುಟಿದ 
ಮೂಲಕ್ಕೆ ಕತ್ತರಿಯಿತ್ತು ಬೀಗಿದವರು ನಾವು.  

ಸತ್ಯ ಮಗ್ಗುಲಾಗಿಸಿ 
ಅಹಂಕಾರದಿಂದ ಮೆರೆದ ಭ್ರಾಂತಿ ನಮ್ಮದು,
ಅಂತ್ಯದಲ್ಲಿ  ಸತ್ಯಕ್ಕೆ ಹೋರಾಡಿ 
ಮಡಿಯುವರು ನಾವು. 

ಇಹದ ಪರದ ದಾರಿ 
ಹುಡುಕ ಹೊರಟವರು ನಾವು, 
ಎದುರುಬಂದ ನೋವುಂಡ ಮನದ 
ದಾರಿಯಾರಿಯದೇಹೋದವರು ನಾವು. 

ಮುಕ್ತಿ ಮೋಕ್ಷಕೆಂದು 
ಬಲಿಯ ಕೊಟ್ಟು ಧರ್ಮ ಕಡೆದವರು ನಾವು, 
ಧರ್ಮ ಧರ್ಮಾಂತರದ ಸುಳಿಯೊಳಗೆ ಸಿಕ್ಕು
ಹಲುಬುವರು ನಾವು. 

ಇರುವ ಪ್ರಕೃತಿಯ 
ನುಂಗಿ ನೀರ್ಕುಡಿದವರು ನಾವು, 
ಪ್ರಕೃತಿಯ ಸಾವಿಗೆ ಹಗಲಿರುಳು 
ಮರುಗುವರು ನಾವು.

ಇರುವುದೆಲ್ಲವ ಕೆಡಿಸಿ 
ಖಜಾನೆಯೊಳಗೆ ಪೇರಿಸಿದವರು ನಾವು,
ಕೆಡುಕಿಗೆ ಕಾರಣಹುಡುಕಿ ಪೇರಿಸಿದ 
ಧನ ವ್ಯವಯಿಸುವರು ನಾವು. 

ಹರಿವ ನೀರಿಗೆ ಒಡ್ಡು
ಕಟ್ಟಿದವರು ನಾವು,
ಕುಡಿವ ನೀರ ಹಣ ಸುರಿದು
ಕೊಳ್ಳುವರು ನಾವು.

ಇಲ್ಲದ ಬೆಂಕಿಯನ್ನು ಬೇಕೆಂದು
ನಿಂತು ಹೊತ್ತಿಸಿದವರು ನಾವು,
ಭೂಮಿ ತನ್ನಿಚ್ಛೆಗೆ ಬೆಂಕಿಯುಗುಳಿದರೆ
ದೂರಗಾಮಿಗಳು ನಾವು.

ಪ್ರಕೃತಿ ವ್ಯವಸ್ಥೆಯನ್ನೆಲ್ಲ
ಕೆಡಿಸಿದವರು ನಾವು,
ಅದನ್ನು ಸರಿಪಡಿಸಲು ಟೊಂಕ ಕಟ್ಟಿ
ನಿಂತವರು ನಾವೇ ನಾವು!!
ಈ ಭುವಿಯ ಮಕ್ಕಳು.

ಸೋಮವಾರ, ಮೇ 1, 2017

ಕಾರ್ಗಿಲ್ ಯುದ್ಧಕ್ಕೆ ದೇಣಿಗೆ

ಮೊನ್ನೆ ದೇಶಕ್ಕೆ ಬಲಿದಾನಗೈದ ಸೈನಿಕರ ಕುರಿತು ಚಕ್ರವರ್ತಿ ಸೂಲಿಬೆಲೆ ಮಾಡುತ್ತಿದ್ದ ಭಾಷಣದ ವಿಡಿಯೋ ಒಂದನ್ನು ಯೂಟ್ಯೂಬ್ ನಲ್ಲಿ ನೋಡುತ್ತಿದ್ದೆ. ಅದು ಬರೀ ಮಾತಲ್ಲ, ಭಾಷಣವಂತೂ ಅಲ್ಲವೇ ಅಲ್ಲ. ದೇಶ ಭಕ್ತಿಯ ಸುಧಾಮೃತ, ಅವರ ಮಾತು ಮುಂದುವರಿದಂತೆಲ್ಲ ನಾನು ಅಮೃತ ಸುಧೆಯಲ್ಲಿ ಮಿಂದೇಳುತ್ತಿದ್ದೆ. ದೇಶವೊಂದು ತಾನು ಸಧೃಡವಾಗಿ ನಿಂತು ಬೀಗಬೇಕಾದರೆ ನೂರಾರು ಜನರ ನೆತ್ತರ ಹನಿ ಬಸಿಯಬೇಕು, ಲಕ್ಷಾಂತರ ಜನರ ಬೆವರ ಹನಿ ಭುವಿ ಮುಟ್ಟಬೇಕು, ಕೋಟ್ಯಂತರ ಜನರ ಹಾರೈಕೆ ಫಲಿಸಬೇಕು ನಿಟ್ಟಿನಲ್ಲಿ ದೇಶದ ಸರ್ವ ಕ್ಷೇತ್ರಗಳೂ ಕಾರ್ಯ ಪ್ರವೃತ್ತವೇ ಆದರೂ ಅದರಲ್ಲಿ ಎಲ್ಲರಿಗಿಂತ ಯೋಧರ ಪಾತ್ರ ಬಹು ಮುಖ್ಯವಾದುದು. ದೇಶದೊಳಗಿನ ಪರಿಸ್ಥಿತಿಗಳನ್ನು ನಿಭಾಯಿಸಲು ಸಂವಿಧಾನವೆಂಬ ಚೌಕಟ್ಟು ಇದ್ದು ಅದರೊಳಗೆ   ದೈನಂದಿನ ಕಾರ್ಯ ಕಲಾಪಗಳಾದರೆ ಆಗಿ  ಹೋಯಿತು. ಆದರೆ ಗಡಿಯಲ್ಲಿ ನೆರೆದೇಶಗಳು ತೆಗೆಯುವ ತಗಾದೆಗೆ ಯಾವ ಚೌಕಟ್ಟು?, ಎಲ್ಲಿಯ ಮಿತಿ?,  ಯಾರು ದಿಕ್ಕು?.ಅವುಗಳೆಲ್ಲದರ ಪರಿಣಾಮಗಳ ಗುಂಡುಗಳಿಗೆ ಎದೆಯೊಡ್ಡುವರು ಮಾತ್ರ ನಮ್ಮ ಸೈನಿಕರು.

1999
ಭಾರತದ ಇತಿಹಾಸದಲ್ಲಿ ಎಂದೂ ಮರೆಯದ ಘಟನೆ ಘಟಿಸಿದ ವರ್ಷ. ದೇಶದ ಪ್ರಧಾನಿಯಾಗಿದ್ದ ವಾಜಪೇಯಿ ಶಾಂತಿ ಸೌಹಾರ್ದತೆಯನ್ನೇ ಮುಂದು ಮಾಡಿಕೊಂಡು ಭಾರತ-ಪಾಕಿಸ್ತಾನ ಬಸ್ ಸೇವೆಯನ್ನು 1999 ಫೆಬ್ರವರಿಯಲ್ಲಿ ಆರಂಭಿಸಿದ್ದರು. ಇದು ಉಭಯ ದೇಶಗಳಿಗೂ ಆನಂದದಾಯಕವಾಗಿರುವುದೇ ಆಗಿದ್ದು ಇದನ್ನು ಕಂಡು ಇನ್ನೆಷ್ಟು ದೇಶಗಳು ಹೊಟ್ಟೆ ಉರಿದುಕೊಂಡಿದ್ದವೋ ಗೊತ್ತಿಲ್ಲ. ಆದರೆ ಪಾಕಿಸ್ತಾನ-ಭಾರತಗಳು ಒಟ್ಟುಗೂಡಿದರೆ ದಕ್ಷಿಣ ಏಷ್ಯಾದ ದೇಶಗಳು ನಮ್ಮ ಬಳಿ ಯಾವುದಕ್ಕೂ ಕೈ ಒಡ್ಡುವ ಪ್ರಸಂಗ ಬರುವುದಿಲ್ಲವೆನ್ನುವುದು ಕೆಲವು ದೇಶಗಳಿಗೆ ಒಳಗೊಳಗೇ ಚುಚ್ಚಲಾರಂಭಿಸಿತ್ತು. ಯಾರ ಹೇಳಿಕೆಯ ಮಾತೋ?  ಇಲ್ಲ ಪಾಕಿಸ್ತಾನ ತನ್ನ ಭವಿಷ್ಯದ ಬಗ್ಗೆ ತಪ್ಪುಗ್ರಹಿಕೆ ಮಾಡಿಕೊಂಡು ಯುದ್ಧಕ್ಕೆ  ಸನ್ನದ್ಧವಾಯಿತೋ? ದೇವರೇ ಬಲ್ಲ.  

ಸ್ವಾತಂತ್ರ್ಯ ದಕ್ಕಿದಂದಿನಿಂದ ಕಾಶ್ಮೀರ ಕಣಿವೆಗಳತ್ತಲೇ ಚಿತ್ತ ನೆಟ್ಟಿರುವ ಪಾಕಿಸ್ತಾನಕ್ಕೆ ಯುದ್ಧ ಮಾಡಲು ಅದ್ಯಾವ ಸುಸಮಯ ಅನ್ನುವ ಭಾವನೆ ಬಂದಿತೋ ಅಥವಾ ಸರಿಯಾಗಿ ಅಲ್ಲಿಗೆ ಒಂದು ವರ್ಷದ ಹಿಂದೆ ತಾನೇ ಸಿದ್ಧಪಡಿಸಿದೆ ಎಂದು ಹೇಳಿಕೊಂಡಿದ್ದ ಅಣು ಬಾಂಬ್ ಅನ್ನು  ಪರೀಕ್ಷಾರ್ಥ ಪ್ರಯೋಗ ನಡೆಸಿ ಯಶಸ್ವಿಯಾಗಿದ್ದ ಹೆಮ್ಮೆಯಲ್ಲಿ ಬೀಗುತ್ತಿದ್ದ ಕಾರಣವಿದ್ದರೂ ಇರಬಹುದು. ಭಾರತದೊಳಗೆ ಬಿರು ಬೇಸಿಗೆಯಿತ್ತು, ಅತ್ತ ಪಾಕಿಸ್ತಾನ ಅದೇ ವರ್ಷದ ಮೇ ಆರಂಭದಲ್ಲಿ ತನ್ನ ಸೈನಿಕರನ್ನು ಭಾರತದ ಗಡಿ ನಿಯಂತ್ರಣ ರೇಖೆಯೊಳಗೆ ನುಗ್ಗಿಸಿತ್ತು. ಕುತಂತ್ರಕ್ಕೆ ಪ್ರಖ್ಯಾತವಾಗಿರುವ ಪಾಕಿಸ್ತಾನ ಭಾರತ ದೇಶದೊಳಗೆ ವಾಮ ಮಾರ್ಗದ ಮೂಲಕ ಪ್ರಾಂತವೊಂದರ ಮೇಲೆ ಹಿಡಿತ ಸಾಧಿಸಲು ಶತಾಯ ಗತಾಯ ಪ್ರಯತ್ನ ನಡೆಸಿತ್ತು. ಯಥಾ ಪ್ರಕಾರ ತನ್ನ ಕಳ್ಳ ಮಾರ್ಗದ ಮೂಲಕವೇ ತನ್ನ ಸೈನಿಕರನ್ನು ನುಗ್ಗಿಸುತ್ತಿತ್ತು. ಅಪ್ಪಿ ತಪ್ಪಿ ಪಾಕ್ ಸೈನಿಕರು ಭಾರತದ ಗಡಿಯೊಳಗೆ ಗುಂಡಿಗೆ ಬಲಿಯಾದರೆ ಅವರು ನಮ್ಮ ಸೈನಿಕರಲ್ಲ, ನಮ್ಮ ಸೈನಿಕರಂತೆ ವೇಷ ಮರೆಸಿಕೊಂಡಿದ್ದ ಭಯೋತ್ಪಾದಕರು ಎನ್ನುವುದು ಇಂತಹವೆಲ್ಲ ಸ್ವಾತಂತ್ರ್ಯಾನಂತರ ರಾಷ್ಟ್ರಕ್ಕೆ ಮಾಮೂಲಿ ದಿನ ನಿತ್ಯದ ಕಾರ್ಯವಾಗಿದ್ದು ಇದೀಗ ಯಾರಿಗೂ ತಿಳಿಯದ ವಿಚಾರವಲ್ಲ.   

ಅದು ಸರಿಯಾಗಿ 1999 ಮೇ 2ನೆ ತಾರೀಖು ಕಾಶ್ಮೀರ ಪ್ರಾಂತದ ಕಾರ್ಗಿಲ್ ಜಿಲ್ಲೆಯ ಗಾರ್ಕೌನ್ ಗ್ರಾಮದ ದನ ಕಾಯುವ ಹುಡುಗರು ಪಾಕಿಸ್ತಾನದ ಸೈನ್ಯ ಮೆಲ್ಲಗೆ ಕದನ ವಿರಾಮ ಉಲ್ಲಂಘಿಸಿ ಗಡಿಯೊಳಗೆ ವಿಪರೀತ ಚಟುವಟಿಕೆಗಳನ್ನು ಮಾಡುತ್ತಿದ್ದನ್ನು ಸದ್ದಿಲ್ಲದೇ ಸರ್ಕಾರದ ಕಿವಿಗೆ ತಲುಪಿಸಿದ್ದರು. ಕೂಡಲೇ ಕಾರ್ಯ ಪ್ರವೃತ್ತವಾದ ಕೇಂದ್ರ ಸರ್ಕಾರ ಇದರ ಮೇಲ್ವಿಚಾರಣೆಗೆ ಐದು ಜನ ಕಮಾಂಡೋ ಗಳನ್ನು ಕಾರ್ಗಿಲ್ ಗಡಿಗೆ ಕಳುಹಿಸಿಕೊಟ್ಟಿತು. ಪಾಕಿಸ್ತಾನ ತನ್ನನ್ನು ತಾನು ಪಾಪಿಸ್ತಾನವೆಂದು ತೋರ್ಪಡಿಸಿಕೊಳ್ಳಲೋ ಎಂಬಂತೆ ಐವರನ್ನು ಚಿತ್ರ ಹಿಂಸೆ ನೀಡಿ ಕೊಂದಿತು. ಅದೇ ಸಮಯಕ್ಕೆ ಸರಿಯಾಗಿ ಪಾಕಿಸ್ತಾನ ಸೈನ್ಯದ ಮುಖ್ಯಸ್ಥರ ಹೇಳಿಕೆಗಳು, ಪಾಕಿಸ್ತಾನದ ಅಧ್ಯಕ್ಷರ ಹೇಳಿಕೆಗಳು ತಾವು ಯುದ್ಧ ಬಯಸಿದ್ದೇವೆ ಎನ್ನುವುದನ್ನು ಪರೋಕ್ಷವಾಗಿ ಭಾರತಕ್ಕೆ ರವಾನೆ ಮಾಡಿದ್ದರಿಂದ ಯುದ್ಧ ಆರಂಭವಾಗುವ ಎಲ್ಲ ಲಕ್ಷಣಗಳೂ ಗೋಚರವಾದವು.  


ದ್ವೀತೀಯ ಮಹಾಯುದ್ಧದ ನಂತರ ಭೀಕರವೆನಿಸುವ ಯುದ್ಧಗಳು ಪ್ರಪಂಚದಲ್ಲಿ ನಡೆದವಾದರೂ ಅಣು ಶಕ್ತಿಪೂರಿತವಾದ ಎರಡು ರಾಷ್ಟ್ರಗಳು ಎದುರಾಗಿ ಯುದ್ಧ ಮಾಡಿದ್ದು ಕಾರ್ಗಿಲ್ ಯುದ್ಧದಲ್ಲಿಯೇ. ಬೆಚ್ಚಿದ ಜಗತ್ತಿನ ಇತರ ರಾಷ್ಟ್ರಗಳು ಭಾರತ /ಪಾಕ್ ನಲ್ಲಿರುವ ತಮ್ಮ ನಾಗರೀಕರಿಗೆ ತುರ್ತಾಗಿ ದೇಶಗಳನ್ನು ಬಿಟ್ಟು ಹೊರಟುಬಿಡಬೇಕೆಂದು ಸುಗ್ರೀವಾಜ್ಞೆ ಹೊರಡಿಸಿಬಿಟ್ಟವು. ನಾಗರೀಕರು ಹಾಗೆ ನಡೆದುಕೊಂಡರೂ ಕೂಡ. ಇರಲಿ ಅವೆಲ್ಲ ಒತ್ತಟ್ಟಿಗಿದ್ದರೂ ದೇಶದೊಳಗಿನ ಹಲವಾರು ವಿಷಯಗಳು ದಿಕ್ಕು ತಪ್ಪಿದ್ದಂತೂ ನಿಜ. ಕೇಂದ್ರದಲ್ಲಿ ವಾಜಪೇಯಿಯವರ ಮೇಲೆ ತುರ್ತು ಪರಿಸ್ಥಿತಿ ಹೇರಲು ಇನ್ನಿಲ್ಲದ ಒತ್ತಡ ತರಲು ಪ್ರಯತ್ನ ಮಾಡಿ ಸೋತ ಕೆಲವರು ದೇಶದ ಮೇಲೆ ಯುದ್ಧವಾಗುತ್ತಿದ್ದರು ತಮ್ಮದೊಂದಿಷ್ಟು ರಾಜಕೀಯ ಬೆಳೆಯನ್ನು ಅದೇ ಉರಿಯಲ್ಲಿ ಬೇಯಿಸಿಕೊಂಡು ಬಿಡಲು ತವಕಿಸುತ್ತಾ ಕೂತಿದ್ದರು.

1974-75 ಸಮಯದಲ್ಲಿ ಆಗಿನ ಪ್ರಧಾನಿ ಇಂದಿರಾಗಾಂಧಿ ವಿಧಿಸಿದ್ದ ತುರ್ತು ಪರಿಸ್ಥಿತಿಗೆ ವಿರೋಧವೊಡ್ಡಿದವರಲ್ಲಿ ಪ್ರಮುಖರು ವಾಜಪೇಯಿ ಆದ ಕಾರಣ 99 ಕಾರ್ಗಿಲ್ ಯುದ್ಧ ಘೋಷಣೆಯಾದಾಗ ಯುದ್ಧ ಘೋಷಣೆಯೊಂದಿಗೆ ತುರ್ತು ಪರಿಸ್ಥಿತಿ ಘೋಷಿಸದೆ ಪಾಕಿಸ್ತಾನದ ಪೊಳ್ಳು ಬೆದರಿಕೆಗೆ ದೇಶದ ಕಾನೂನು ಸುವ್ಯವಸ್ಥೆಗೆ ಕೊಂಚವೂ ಕುಂದು ಉಂಟಾಗದಂತೆ ದೇಶ ಕಾಯುವುದರಲ್ಲಿ ಚಾಣಾಕ್ಷತನ ಮೆರೆದರು. ಸಾರ್ವಜನಿಕ ರಂಗದಲ್ಲಿಯೂ ಇದಕ್ಕೆ ಪೂರಕ ವಾತಾವರಣ ನಿರ್ಮಾಣವಾಯಿತು. ಜನ ತಾವೇ ಮುಂದೆ ನಿಂತು ಕಾರ್ಗಿಲ್ ಯುದ್ಧಕ್ಕೆ ದೇಣಿಗೆ ಸಂಗ್ರಹ ಮಾಡಿ ಕೊಟ್ಟರು. ಅದರಲ್ಲೂ ಹೇಳಬೇಕೆನಿಸುವ ಪ್ರಮುಖ ಸಂಸ್ಥೆ ಆರ್ ಎಸ್ ಎಸ್

ನಾವೆಲ್ಲಾ ಆಗ ಸುಮಾರು ಮೂರನೇ ಕ್ಲಾಸು ಓದುತ್ತಿದ್ದ ಹುಡುಗರು. ಆಗಷ್ಟೇ ಶಾಲೆ ಶುರುವಾಗಿತ್ತು. ನಾನು ಅಧೀಕೃತವಾಗಿ ಆರ್ ಎಸ್ ಎಸ್ ಸೇರಿಲ್ಲವಾದರೂ ಪ್ರತೀ ದಿನ ಸಾಯಂಕಾಲ ನಡೆಯುತ್ತಿದ್ದ ಶಾಖೆಯಲ್ಲಿ ಹೇಳುವ ಕಥೆಗೆ ಆಸೆ ಪಟ್ಟು ಅಲ್ಲಿಗೆ ಹೋಗಿಬಿಡುತ್ತಿದ್ದೆ.ದೇಶಕ್ಕೆ ಬಲಿದಾನಗೈದವರ ಕಥೆ, ಸ್ವಾತಂತ್ರ್ಯ ಹೋರಾಟಗಾರರ ಕಥೆ, ಸ್ವಾತಂತ್ರ್ಯಕ್ಕಾಗಿ ದೇಶದಲ್ಲಿ ನಡೆದ ಆಂದೋಲನಗಳ ಸಂಕ್ಷಿಪ್ತ ನೋಟವೇ ಮೊದಲಾಗಿ ಮತ್ತಿತರ ರಾಷ್ಟ್ರೀಯ ಐತಿಹಾಸಿಕ ವಿಚಾರಗಳನ್ನು ಸವಿಸ್ತಾರವಾಗಿ ಅಲ್ಲಿ ಬಿಚ್ಚಿಡುತ್ತಿದ್ದ ಕಾರಣ ಅಲ್ಲಿಗೆ ಹೋಗುವುದು ಒಂದು ಚಟವಾಯಿತು. ಇಂತಿಪ್ಪ 1999 ಒಂದು ದಿನ ಅಂದಿನ ಶಾಖೆಯಾನಂತರ ಅಲ್ಲಿನ ಸಂಘಟಕರು ಸೇರಿದ್ದ ಹುಡುಗರನ್ನೆಲ್ಲ ಕರೆದು ಕಥೆ ಹೇಳಲು ನಿಂತರು. ಇಂದಿನ ಕಥೆ ಏನಿರಬಹುದು ಅನ್ನುವ ಧಾವಂತದಲ್ಲಿ ನಮ್ಮ ಕಿವಿಯಾಳಿಗಳು ಅತ್ತಲೇ ಹೊರಳಿದಾಗ ಅಲ್ಲಿ ಕೇಳಿಸಿದ್ದು 'ಭಾರತದ ಮೇಲೆ ಯುದ್ಧ ಘೋಷಣೆಯಾಗಿದೆ' ಎನ್ನುವ ವಾಕ್ಯ!!. ಸರಿ ಮುಂದೇನು? ಅನ್ನುವ ಪ್ರಶ್ನೆ ನಮ್ಮೊಳಗೇ ಹುಟ್ಟುವ ಮೊದಲೇ ಪ್ರಧಾನಿ ವಾಜಪೇಯಿ ತುರ್ತುಪರಿಸ್ಥಿತಿ ಘೋಷಿಸಿಲ್ಲ, ಯುದ್ಧಕ್ಕೆ ಬೇಕಾದ ನಿಧಿಗೆ ದೇಶದ ಸಮಸ್ತರೂ ತಮ್ಮ ಕೈಲಾದ ಸಹಾಯ ಮಾಡಬೇಕು ಎನ್ನುವುದನ್ನು ಕೇಳಿ ಮುಂದಿನ ನಡೆ ನನ್ನ ಗ್ರಹಿಕೆ ಅಳತೆಯಿದ್ದಷ್ಟು ಗೋಚರವಾಯಿತಾದರೂ ನಾವೇ ನಮ್ಮ ಮನೆಗಳಿಗೆ ಬಂದು ಮನೆಯ ಮೂಲೆಯಲ್ಲಿದ್ದ ಹಳೆ ಡಬ್ಬಗಳನ್ನು ಮತ್ತಿತರ ಬಳಕೆಯಾಗದ ವಸ್ತುಗಳನ್ನು ಸೇರಿಸಿ ಹುಂಡಿಯಂತಹ ಡಬ್ಬಗಳನ್ನು ತಯಾರು ಮಾಡಿಕೊಂಡು ಮೂರು ಮೂರು ಜನ ಗುಂಪಿನಂತೆ ಆರ್ ಎಸ್ ಎಸ್ ವತಿಯಿಂದ ಯುದ್ಧಕ್ಕಾಗಿ ದೇಣಿಗೆ ಸಂಗ್ರಹ ಮಾಡಲು ನಿಂತೆವು.

ಅಂದಿನ ನಮ್ಮ ಶಾಖೆಯ ಸಂಘಟಕರು ಹೇಳಿದ ಮಾತುಗಳು ನಾನು ಚಕ್ರವರ್ತಿ ಸೂಲಿಬೆಲೆಯವರ ಮಾತುಗಳನ್ನು ಕೇಳಿದಾಗಲೂ ನನ್ನಲ್ಲಿ ಮತ್ತೆ ಮತ್ತೆ ಅನುರಣಿಸುತ್ತಲೇ ಇರುತ್ತವೆ. ಮಹಾನ ದೇಶ ಭಕ್ತರಾಗಿದ್ದ ನಮ್ಮ ಶಾಖಾ ಸಂಘಟಕ ಮಂಜುನಾಥ್(ಅವರ ಬಿಡುವಿನ ಸಮಯದಲ್ಲಿ ನಮ್ಮ ತರಗತಿಗಳಿಗೆ ಬಂದು ಸಂಸ್ಕೃತವನ್ನು ಹೇಳಿಕೊಡುತ್ತಿದ್ದವರು ಅವರೇ) ಅವರು ದೇಣಿಗೆ ಸಂಗ್ರಹಕ್ಕೆ ಹೊರಡುತ್ತಿರುವ ಹುಡುಗರಿಗೆ ನಿರ್ದೇಶನ ನೀಡುವಾಗ  ಹೇಳಿದರು 'ಮತ್ತೊಬ್ಬರಿಂದ ದೇಣಿಗೆ ಸಂಗ್ರಹ ಮಾಡುವ ಮೊದಲು ನಿಮ್ಮ ಕೈಲಾದಷ್ಟು ಹಣ ನೀವು ನಿಮ್ಮ ಕೈಲೇ ಹಿಡಿರುವ ಹುಂಡಿಯೊಳಗೆ ಹಾಕಿಬಿಡಿ, ಅದು ನೇರವಾಗಿ ಯುದ್ಧದ ನಿಧಿಗೆ ತಲುಪುತ್ತದೆ' ಎಂದು. ಅಂದಿಗೆ ಏನೂ ಯೋಚನೆ ಮಾಡದೆ ನನ್ನಲ್ಲಿದ್ದ 3-4 ರೂಪಾಯಿಗಳನ್ನು ಹುಂಡಿಯೊಳಗೆ ಹಾಕಿ ಮಾಗಡಿ ಪೇಟೆಯ ಗಲ್ಲಿ ಬೀದಿಗಳಲ್ಲಿ ದೇಣಿಗೆ ಸಂಗ್ರಹ ಮಾಡಿ ಹಿಂತಿರುಗಿದ್ದೆ. ಅಂದಿಗೆ ನಾನೇನು ಮಾಡಿದೆ ಎನ್ನುವ ಅರಿವು ನನಗಿರಲಿಲ್ಲ, ತಿಳಿದುಕೊಳ್ಳುವ ವಯಸ್ಸು ಅದಲ್ಲವೇನೋ ನಾನರಿಯೆ.

ಮೊನ್ನೆ ಚಕ್ರವರ್ತಿಯವರ ಭಾಷಣದ ವಿಡಿಯೋ ತುಣಿಕಿನಲ್ಲಿ ಕಾರ್ಗಿಲ್ ಯುದ್ಧದ ಸಮಯದಲ್ಲಿ ದೇಶದ ನಾಗರೀಕರ ಸಮಯ ಪ್ರಜ್ಞೆಯನ್ನು ಕೊಂಡಾಡುತ್ತಿದ್ದುದನ್ನು ಗಮನಿಸಿದೆ. ಮುಂಬೈ ನಗರದ ವೇಶ್ಯೆಯರ ಸಂಘಟನೆಯೊಂದು ನಿರ್ದಿಷ್ಟ ದಿನವೊಂದರ ವೇಶ್ಯಾವಾಟಿಕೆಯಿಂದ ಗಳಿಸಿದ ಹಣವನ್ನು ಕಾರ್ಗಿಲ್ ಯುದ್ಧಕ್ಕೆ ನೀಡಿದ್ದು, ಅದೇ ನಗರದಲ್ಲಿ ಸರ್ಕಾರಿ ಶಾಲೆಯ ಬಾಲಕಿಯೊಬ್ಬಳು ಲೋಕಲ್ ರೈಲುಗಳಲ್ಲಿ ಭಿಕ್ಷೆ ಬೇಡಿ ಸುಮಾರು ನೂರು ರೂಪಾಯಿಗಳನ್ನು ಸಂಪಾದಿಸಿ ಅವರ ತಂದೆಗೆ ಕೊಟ್ಟು ಯುದ್ಧ ನಿಧಿಗೆ ಹಣ ತಲುಪಿಸುವಂತೆ ಬೇಡಿಕೊಂಡಿದ್ದು ಇನ್ನು ಎಷ್ಟೆಷ್ಟೋ ಇಂತಹ ಉದಾಹರಣೆಗಳನ್ನು ಅವರು ತೆರೆದಿಡುತ್ತಾ ಹೋದಂತೆ ನನ್ನ ಮನಸ್ಸು ನಾನೇನು ಮಾಡಿದೆ? ಎನ್ನುವತ್ತ ಹೊರಳಿತು.ವಯಸ್ಸು ಚಿಕ್ಕದು, ಕೊಡುವ ಕೈಯಂತೂ ಇನ್ನು ಚಿಕ್ಕದು ಆದರೂ ನಾನು 3-4  ರೂಪಾಯಿ ಕೊಟ್ಟಿದ್ದೆ. ಅದರೊಳಗೆ ಸಾರ್ಥಕತೆ ಎದ್ದು ಕಾಣಿಸುತ್ತಿದೆ. ಇಂದು ಸಾವಿರಾರು ರೂಪಾಯಿಗಳನ್ನು ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಖರ್ಚು ಮಾಡಿ ಉಡಾಯಿಸಬಹುದು. ಆದರೆ ಅಂದು ನಾನು ಕೊಟ್ಟ ಮೂರು ರೂಪಾಯಿಗಳು ಇಂದು ಸಾಸಿರದಷ್ಟಾಗಿ ನನ್ನ ಕಣ್ಣಿಗೆ ಗೋಚರಿಸುತ್ತಿವೆ. ನಾನು ಎಷ್ಟು ಬಾರಿ ಎಲ್ಲೆಲ್ಲಿ ದುಡ್ಡು ಕೊಟ್ಟಿದ್ದೇನೋ ಅದೆಲ್ಲಕ್ಕಿಂತ ಹೆಚ್ಚು ಸಾರ್ಥಕತೆ ಹಾಗು ಅಪ್ಯಾಯಮಾನವಾಗಿರುವುದು ಕಾರ್ಗಿಲ್ ಯುದ್ಧಕ್ಕೆ ನಾ ಕೊಟ್ಟ ಸೂಕ್ಷಮಾತಿ ಸೂಕ್ಷ್ಮ ದೇಣಿಗೆಯಲ್ಲಿ.ನನ್ನಿಂದ ಸೂಕ್ಷ್ಮ ಸೇವೆಯಾಗಲು ಕಾರಣೀಭೂತವಾದ ಆರ್ ಎಸ್ ಎಸ್ ಗೆ ನಾನು ಎಂದೆಂದಿಗೂ ಅಭಾರಿ.



ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...