ಸೋಮವಾರ, ಡಿಸೆಂಬರ್ 21, 2020

ಪಶುಗಳೇಕೆ ನೆಮ್ಮದಿಹೀನವಾಗಿಲ್ಲ

 ಪಶುಗಳು ದಿನ ಬೆಳಗಾದರೆ 

ಮಾನವನ ಮುಖದರ್ಶನ 

ಮಾಡುತ್ತವೆ, ಆದರೆ 

ಅವೆಂದಿಗೂ ನಮ್ಮಂತೆ 

ಮಾತನಾಡಲು ಹರಸಾಹಸ

ಮಾಡಿಲ್ಲ, ಮಾತನಾಡುವ 

ಶಕ್ತಿ ಕೊಡೆಂದು ಯಾವ 

ದೇವರಿಗೂ ಅಡ್ಡಬಿದ್ದಿಲ್ಲ

ಹರಕೆಯನಂತೂ ಕಟ್ಟೇ ಇಲ್ಲ.


ಅವು ತಮ್ಮೊಳಗೆ ಒಂದನು 

ಮೀರಿಸಿ ಮತ್ತೊಂದು ಎಂಬ 

ಭಾವನೆಯನ್ನು ತಳೆದಿಲ್ಲ, 

ತನಗಿಂತ ತನ್ನ ಜೊತೆಗಾರ 

ಹೆಚ್ಚು ದುಡಿದರೆ ಅದಕ್ಕೆ 

ಹೊಟ್ಟೆ ಕಿಚ್ಚು ಪಟ್ಟುಕೊಂಡಿಲ್ಲ

ಕಾಲೆಳೆಯುವ ಪ್ರಯತ್ನವನಂತೂ 

ಮಾಡಿಲ್ಲ, ಮಾಡುವುದೂ ಇಲ್ಲ 


ಯಾವೊಂದೂ ಇನ್ನೊಂದನು

ಪೂಜ್ಯ ಭಾವನೆಯಿಂದಾಗಲಿ 

ಕೀಳು ಭಾವನೆಯಿಂದಾಗಲಿ 

ಕಂಡಿಲ್ಲ, ತಮಗಿಂತ 

ಹಿರಿಯವನೆಂದು ಇನ್ನಾವಕೂ 

ಗೌರವವನಂತು ಕೊಟ್ಟಿಲ್ಲ

ಹೊಗಳಿ-ತೆಗಳುವುದಂತೂ ಇಲ್ಲ 


ತಮ್ಮ ಸ್ಥಾನದಲ್ಲಿ ಅಸಾಧ್ಯವಾದ 

ಏನನೋ ಒಂದನು ಸಾಧಿಸಿ 

ಮತ್ತೊಂದು ಸ್ಥಾನಕ್ಕೆ ಜಿಗಿಯುವ 

ಸನ್ನಾಹ ಅವಕಿಲ್ಲ, ತಮ್ಮ 

ಜೀವಮಾನ ಪರ್ಯಂತ ತಾವು 

ಸೇರಬೇಕಿರುವ ಗಮ್ಯ ಸ್ಥಾನವನೇ 

ಅವು ಗುರುತಿಸಿಕೊಂಡಿಲ್ಲ.


ಯಾವೊಂದೂ ಇಲ್ಲ ಎನ್ನುವ 

ಕೊರತೆ ಅವಕಿಲ್ಲ,

ಎಲ್ಲವೂ ಇದೆಯೆಂಬ ತೃಪ್ತ 

ಭಾವವೂ ಅವಕಿಲ್ಲ,

ಭಾವ, ನಿರ್ಭಾವಗಳ 

ಗೊಡವೆಗೇ ಅವು ಹೋಗಿಲ್ಲ 

ಅದೇ ಕಾರಣಕೆ ಅವು 

ನೆಮ್ಮದಿಹೀನವಾಗಿಲ್ಲ.


-o-

ಭಾನುವಾರ, ನವೆಂಬರ್ 15, 2020

ಸಕ್ಕತ್ತಾಗಿ ಬರೀತಿದ್ದ ಬಡ್ಡಿಮಗ

ಭೂಗತ ಲೋಕದ ಬಗ್ಗೆ ನನಗೆ ಅಷ್ಟಾಗಿ ಗೊತ್ತಿರಲಿಲ್ಲ. ನಾವು ಬೆಂಗಳೂರಿಗೆ ಬಂದ ಎರಡು-ಮೂರು ತಿಂಗಳಿಗೆ ನಾಗರಭಾವಿಯ ರಸ್ತೆಯಲ್ಲಿರುವ ಮೂಡಲಪಾಳ್ಯದಲ್ಲಿ ವಾಸವಿದ್ದೆವು. ನಮ್ಮ ಮನೆಯ ಸಮೀಪವೇ ಇದ್ದ ಸಲೂನ್ ಒಂದರಲ್ಲಿ ಮಾತಾನಾಡುತ್ತಿದ್ದ ಕೂತಿದ್ದ ಪುಡಿ ರೌಡಿಯೊಬ್ಬನ್ನನ್ನು ಯಾವುದೋ ಒಂದು ರೌಡಿ ಪಡೆ ಲಾಂಗ್ ನಿಂದ ಕೊಚ್ಚಿ ಹತ್ಯೆ ಮಾಡಿತ್ತು. ಅದಾಗಿ ಒಂದೆರಡು ನಿಮಿಷಗಳಲ್ಲೇ ಅಲ್ಲಿಗೆ ಹೋಗಿ ಆ ಘೋರವನ್ನು ನಾನು ಕಂಡಿದ್ದೆ. ಪೊಲೀಸರು ಬಂದು ಅಲ್ಲಿನ ಸ್ಥಳ ಮಹಜರು ಮಾಡುವವರೆಗೂ ನಾನು ಅಲ್ಲೇ ನಿಂತು ಎಲ್ಲವನ್ನು ಕುತೂಹಲದ ಕಣ್ಣಿಂದ ಗಮನಿಸಿದ್ದೆ. ಅದಾದ ಮೇಲೆ ಸತ್ತವನ ಮನೆಯವರ ಗೋಳಾಟವನ್ನೂ ಕಂಡಿದ್ದೆ. ಭೂಗತ ಲೋಕ ಎನ್ನುವುದು ಮನುಷತ್ವದ ಎಳೆಯೇ ಸುಳಿಯದ ಅತ್ಯಂತ ಘೋರ ಲೋಕ, ಅಲ್ಲಿಗೆ ಕಾಲಿಟ್ಟವರಿಗೆ ಮರಣವೆನ್ನುವುದು ಎದೆಗೆ ಎದೆ ತಾಗಿಸಿಕೊಂಡೇ ನಿಂತಿರುತ್ತದೆ ಎನ್ನುವುದನ್ನು ಮೊಟ್ಟ ಮೊದಲ ಬಾರಿಗೆ ಅರಿತುಕೊಂಡಿದ್ದೆ.

ಆ ಘಟನೆ ನಡೆದ ನಾಲ್ಕೈದು ವರ್ಷಗಳ ತರುವಾಯೂ ಅದೇ ರಸ್ತೆಯಲ್ಲಿ ಹಾಡ ಹಗಲೇ ಕಾರಿನಿಂದಿಳಿದ ನಾಲ್ಕೈದು ಆಘಂತುಕರು ರಸ್ತೆ ಬದಿಯಲ್ಲಿ ನಿಂತಿದ್ದ ರಿಯಲ್ ಎಸ್ಟೇಟ್ ದಲ್ಲಾಳಿಯೊಬ್ಬನನ್ನು ಗುಂಡಿಕ್ಕಿ ಕೊಂದರು. ಕೊಂದವರು ನನಗಿಂತ ಬಹಳ ಮುಂದೆಯಿದ್ದರೂ ಗುಂಡಿನ ಶಬ್ದ ಮಾತ್ರ ನನಗೆ ಕೇಳಿಸಿತ್ತು. ಗುಂಡು ಹಾರಿಸಿ ಮಿಂಚಿನಂತೆ ಮಾಯವಾಗಿದ್ದರು, ಗುಂಡು ಬಿದ್ದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದ. ಆ ಘಟನೆಯೂ ಕೂಡ ಬೆಂಗಳೂರಿನ ವೃತ್ತ ಪತ್ರಿಕೆಗಳಿಗೆ ಒಂದೆರಡು ದಿನ ಭಾರಿ ಸುದ್ದಿಯೂಟ ನೀಡಿತು. ಆಮೇಲೆ ಒಂದೆರಡು ಆತ್ಮಹತ್ಯೆ ಕೇಸುಗಳನ್ನೂ, ಅಲ್ಲಿಗೆ ಬಂದು ಪೊಲೀಸರು ಮಹಜರು ಮಾಡುವ ಪ್ರಕ್ರಿಯೆಗಳನ್ನೆಲ್ಲಾ ಹತ್ತಿರದಿಂದ ಗಮನಿಸಿದ್ದೆ. ನನಗೂ ಈ ಘಟನೆಗಳಿಗೂ ಯಾವುದೇ ಸಂಬಂಧವಿಲ್ಲದಿದ್ದರೂ ಇವು ನನ್ನ ಮೇಲೆ ತಮ್ಮದೇ ಆದ ಪರಿಣಾಮ ಬೀರುತ್ತಾ ಹೋದವು. ಇಂತಹ ಅನೇಕ ಘಟನೆಗಳು ನನ್ನನ್ನು ಮಾನಸಿಕವಾಗಿ ಗಟ್ಟಿಗೊಳಿಸುತ್ತಾ ಹೋದವು. ಕೆಲವರು ಇಂತಹುದೇ ಘಟನೆಗಳು ಅವರ ಮುಂದೆ ನಡೆದಾಗ ಆರ್ದ್ರರಾಗುವುದೂ ಉಂಟಂತೆ, ಅದು ಅವರವರ ಹಿನ್ನೆಲೆಗೆ, ಮನಸ್ಥಿತಿಗೆ ಬಿಟ್ಟ ವಿಚಾರ. 

ಅನಂತರ ಪ್ರತೀ ಭಾನುವಾರ 'ಪ್ರಜಾವಾಣಿ' ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಅವರ 'ಪೊಲೀಸ್ ಕಂಡ ಕಥೆಗಳು' ಅಂಕಣವನ್ನು ಓದುತ್ತಿದ್ದ ನನಗೆ ನಿಧಾನವಾಗಿ ಭೂಗತ ಲೋಕದ ಒಂದೊಂದೇ ಅವ್ಯಾಹತಗಳು ಗೋಚರವಾಗುತ್ತಾ ಹೋದವು. ಭೂಗತ ಲೋಕದ ಭಯಂಕರ ರಕ್ತಸಿಕ್ತ ಅಧ್ಯಾಯವನ್ನು ತಿಳಿದುಕೊಳ್ಳುವ ಉದ್ದೇಶದಿಂದ ಪುಸ್ತಕಗಳನ್ನು ತಡಕಿದ ನನಗೆ ಕನ್ನಡದಲ್ಲಿ ಸಿಕ್ಕಿದ ಪುಸ್ತಕವೇ ರವಿ ಬೆಳಗೆರೆಯವರದು. ಆ ವಿಚಾರದಲ್ಲಿ ನನಗೊಬ್ಬನಿಗಲ್ಲ, ನಿಮಗೂ ಸಿಗುವ ಮೊದಲ ಪುಸ್ತಕ ಬೆಳಗೆರೆಯವರದ್ದೇ. ಅವರನ್ನು ಹೊರತು ಪಡಿಸಿದರೆ ಕೆಲವು ಪೊಲೀಸ್ ಇಲಾಖೆಗೆ, ಸರ್ಕಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಬರೆದಿರುವ ಕೆಲವು ಲೇಖನಗಳು, ಪುಸ್ತಕಗಳು ದೊರೆತರೂ ಅವು ಭೂಗತ ಲೋಕವನ್ನು ಒಳಗೊಳಗೇ ಪೊರೆದ ಮುಗ್ದರ ಮುಖವಾಡ ಹೊದ್ದ ನಮ್ಮದೇ ಕೆಲವು ನಾಯಕರ ಬಗ್ಗೆಯೋ, ಭೂಗತ ಲೋಕವನ್ನು ಹೆಡೆಮುರಿ ಕಟ್ಟಲು ನಿರಂತರ ಶ್ರಮಿಸಿದ ಅನೇಕರ ಬಗ್ಗೆಯೂ ಕೇಂದ್ರೀಕೃತವಾಗಿರುತ್ತದೆ. ಆ ಲೋಕದಲ್ಲಿ ಭಾರಿ ಸದ್ದು ಮಾಡಿದವರು ಅಲ್ಲಿಗೇಕೆ ಬಂದರು? ಅವರು ಆ ಮಟ್ಟಕ್ಕೆ ಹೇಗೆ ಏರಿದರು? ಅವರ ಬೆನ್ನಿಗೆ ನಿಂತವರಾರು ಎನ್ನುವ ಕೆಲವು ಪ್ರಮುಖ ವಿಚಾರಗಳನ್ನು ಕೆಲವರು ಬರೆಯುವುದಿಲ್ಲ, ಅಕಸ್ಮಾತ್ ಬರೆದರೆ ಅದು ವಿವಾದಕ್ಕೆ ಕಾರಣವಾಗುತ್ತದೆ ಎನ್ನುವ ಭಯ ಅನೇಕರಲ್ಲಿರುವುದು ಸುಳ್ಳಲ್ಲ. ಬೆಳಗೆರೆಯವರು ಅದಕ್ಕಪವಾದವಾದಂತಿದ್ದವರು, ಆದ ಕಾರಣಕ್ಕೆ ಅವರು ಅನೇಕ ಬಾರಿ ವಿವಾದಗಳಿಗೀಡಾಗಿದ್ದು.

ಯಾವುದೇ ಸಮಾಜದಲ್ಲಿ ಎಲ್ಲ ವರ್ಗದ, ಎಲ್ಲ ಮನೋಧೋರಣೆಯ ಜನರಿರುವುದು ಸಹಜ. ಕ್ರೂರ ಮನೋಧೋರಣೆಯಿರುವ ವ್ಯಕ್ತಿಗಳಿಂದ ಕ್ರೂರತನ ನಡೆಯುವುದೂ ಅತಿ ಸಹಜವೇ, ಆದರೆ ಅದಕ್ಕೆಂತಲೇ ಕಾನೂನು ಕಟ್ಟಳೆಗಳಿರುವಾಗ ನಮ್ಮಂತಹ ಸಾಮಾನ್ಯರು ಹೆದರಿಕೊಳ್ಳುವುದು ಬೇಡವೇ ಬೇಡ ಅಂತ ಸಾರ್ವಜನಿಕರಿಗೆ ಟಿವಿ ಮಾಧ್ಯಮಗಳಲ್ಲಿ ಕಾಣಿಸಿಕೊಂಡು ಧೈರ್ಯ ತುಂಬುತ್ತಿದ್ದವರು ರವಿ ಬೆಳಗೆರೆಯವರು. ಅವರ ಟಿವಿ ಕಾರ್ಯಕ್ರಮ 'ಕ್ರೈಂ ಡೈರಿ' ಹಾಗು ಅವರ ಪತ್ರಿಕೆ 'ಹಾಯ್ ಬೆಂಗಳೂರ್' ಅವರಿಗೆ ತಂದುಕೊಟ್ಟ ಜನಮನ್ನಣೆಯನ್ನು ನಾನು ವಿಶೇಷವಾಗಿ ಹೇಳುವ ಅಗತ್ಯವಿಲ್ಲವಷ್ಟೇ.

ಇತ್ತೀಚಿಗೆ ಯೂಟ್ಯೂಬ್ ಮುಖಾಂತರ ನಡೆಸಿಕೊಡುತ್ತಿದ್ದ 'ಬೆಳ್ ಬೆಳಗ್ಗೆ ಬೆಳಗೆರೆ' ಎನ್ನುವ  ಕಾರ್ಯಕ್ರಮ, ವಿಜಯವಾಣಿ ಪತ್ರಿಕೆಯಲ್ಲಿ ಪ್ರತೀ ಭಾನುವಾರ ಪ್ರಕಟವಾಗುತ್ತಿದ್ದ ಲೇಖನ ಸರಣಿ 'ನಮ್ಮ ನಮ್ಮಲ್ಲಿ' ಯನ್ನು ನಾನೆಂದೂ ಮಿಸ್ ಮಾಡಿಕೊಂಡವನಲ್ಲ. ಅವರ ಪುಸ್ತಕಗಳನ್ನೋದುವಾಗ, ಟಿವಿ ಶೋಗಳನ್ನು ನೋಡುವಾಗ, ಲೇಖನಗಳನ್ನು ಓದುವಾಗ, ಅವರ ಟೀಕೆ-ಟಿಪ್ಪಣಿ, ಚರ್ಚೆಗಳನ್ನು ನೋಡುವಾಗ ನಾವೆಲ್ಲಾ ಯೋಚನೆ ಮಾಡದ ಯಾವುದೋ ಒಂದು ದೃಷ್ಟಿ ಕೋನದಲ್ಲಿ ಅವರು ಯೋಚನೆ ಮಾಡುತ್ತಾರೆ ಎನ್ನುವ ಭಾವನೆ ನನ್ನಲ್ಲಿ ಬಲವಾಗಿ ಬೇರೂರಿದೆ, ಆದ್ದರಿಂದಲೇ ಅವರ ಕಡೆಗೆ ಸಾಹಿತ್ಯಿಕ ಸೆಳೆತ ನನ್ನಲ್ಲಿ ಉಂಟಾಗಿದೆ.

ಬೆಂಗಳೂರಿನ ಪುಡಿ ರೌಡಿಗಳಿಂದ ಹಿಡಿದು ಘಟಾನುಘಟಿ ಭೂಗತ ಲೋಕದ ದೊರೆಗಳ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ್ದ ಬೆಳಗೆರೆ ಅವರ ಕುರಿತು ತಮ್ಮ ಪತ್ರಿಕೆಯಲ್ಲಿ ಲೇಖನಗಳನ್ನು ಬರೆದು ಸಾಕಷ್ಟು ವಿವಾದಕ್ಕೀಡಾಗಿದ್ದರು ಅಷ್ಟೇ ಅಲ್ಲದೆ ಕೋರ್ಟು-ಕಟಕಟೆಯ ಮೆಟ್ಟಿಲು ಹತ್ತಿಳಿದಿದ್ದರು, ತಮ್ಮ ಅನುಯಾಯಿಗಳಷ್ಟೇ ಪ್ರಮಾಣದ ವಿರೋಧಿಗಳನ್ನೂ ಹೊಂದಿರುವುದಾಗಿ ಅನೇಕ ಕಡೆ ತಾವೇ ಹೇಳಿಕೊಂಡಿದ್ದಾರೆ.  ರಾಜಕೀಯ ಪಕ್ಷಗಳ ಕುರಿತು ಮಾತನಾಡಿ ಅನೇಕರ ವಿರೋಧ ಕಟ್ಟಿಕೊಂಡಿದ್ದರು. ಮಾಜಿ ಪ್ರಧಾನಿಯೊಬ್ಬರ ಕುರಿತ ಹೇಳಿಕೆಯಿಂದ ಮಾನ ನಷ್ಟ ಮೊಕದ್ದಮೆಯನ್ನೂ ಎದುರಿಸಿದ್ದರು ಬೆಳಗೆರೆ. ತೀರಾ ಇತ್ತೀಚಿಗೆ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಮನೆ ಮೇಲಿನ ಆದಾಯ ತೆರಿಗೆ ಇಲಾಖೆಯ ದಾಳಿಯನ್ನು ಸಮರ್ಥಿಸಿಕೊಂಡು ಅನೇಕರಿಂದ ಪ್ರಶಂಸೆಗೂ-ಟೀಕೆಗೂ ಒಳಗಾಗಿದ್ದರು. ಟೀಕೆ, ಕಂಪ್ಲೇಂಟ್-ಕೋರ್ಟು-ಕೇಸು ಎಲ್ಲವೂ ಎದುರಾದರೂ ಅವುಗಳನ್ನು ಪಕ್ಕಕ್ಕೆ ತಳ್ಳುತ್ತಾ ತಮ್ಮ ಕಾರ್ಯವನ್ನು ಎಂದಿನಂತೆ ನಿಭಾಯಿಸುತ್ತಿದ್ದವರು ಅವರು. 

ಸಾಮಾನ್ಯವಾಗಿ ಭೂಗತ ಲೋಕದ ಸಂಪರ್ಕಕ್ಕೆ ಬಂದ ಯಾರಿಗಾದರೂ ಅನುಭವಕ್ಕೆ ಬರುವ ವಿಚಾರವೆಂದರೆ ಅವರ ಭಾವುಕತೆ ಕಣ್ಮರೆಯಾಗಿಬಿಡುವುದು. ಭೂಗತ ಲೋಕದಲ್ಲಿ ಮಾತ್ರ ಅಲ್ಲ ಪೊಲೀಸ್ ಇಲಾಖೆಗೆ ನೌಕರಿಗೆ ಸೇರಿದ ಅನೇಕರಲ್ಲೂ ಈ ಬದಲಾವಣೆ ಕಂಡುಬರುವುದು ಸಹಜವೇ. ಆದರೆ ಆ ವಿಚಾರದಲ್ಲಿ ಬೆಳಗೆರೆ ಸೋತಿರಲಿಲ್ಲ. ರೌಡಿಗಳ ಬಗ್ಗೆ ಬರೆಯುತ್ತಲೂ, ದೇಶ ಭಕ್ತಿಯ ಮಾತುಗಳನ್ನಾಡುತ್ತಾ, ಬೇಂದ್ರೆಯವರ ಬಗ್ಗೆ ಅಪಾರ ಪ್ರೇಮವನ್ನಿರಿಸಿಕೊಂಡು, ಕನ್ನಡೇತರ ಕವಿಗಳ ಘಜಲ್ಲುಗಳನ್ನು ಕೇಳುತ್ತಾ ಯುವಕರಿಗೆ ಕನ್ನಡದಲ್ಲಿ ಸ್ಪೂರ್ತಿದಾಯಕ ಲೇಖನಗಳನ್ನು ಬರೆಯುವುದರಲ್ಲಿ ಎತ್ತಿದ ಕೈ ಅವರದ್ದು. ಕೊತ್ವಾಲ ರಾಮಚಂದ್ರ, ಜಯರಾಜನ ಬಗ್ಗೆ ನಿರರ್ಗಳವಾಗಿ ಮಾತನಾಡುತ್ತಿದ್ದ ಅವರು ಶಿವರಾಮ ಕಾರಂತರ ಬಗೆಗೂ, ದ.ರಾ.ಬೇಂದ್ರೆಯವರ ಬಗೆಗೂ ಅಷ್ಟೇ ನಿರರ್ಗಳವಾಗಿ ಮಾತನಾಡುವಷ್ಟು ಅರಿತುಕೊಂಡಿದ್ದರು. ಕನ್ನಡ ಚಿತ್ರರಂಗದ ಧ್ರುವತಾರೆ ಡಾ.ರಾಜ್ ಕುಮಾರ್ ನಿಧನರಾದಾಗ ಬೆಳೆಗೆರೆಯವರು ತಮ್ಮ ಕ್ರೈಂ ಡೈರಿಯಲ್ಲಿ ಮೂರ್ನಾಲ್ಕು ಎಪಿಸೋಡುಗಳನ್ನು ಮಾಡಿದ್ದರು, ಅಲ್ಲಿ ಅವರು ಅತ್ಯಂತ ಭಾವುಕರಾಗಿ ಮಾತನಾಡಿದ್ದ ರೀತಿ ಇಂದಿಗೂ ಅನೇಕರ ಸ್ಮೃತಿಪಟಲದಲ್ಲಿದೆ. ಅದರ ಜೊತೆಗೆ ಇತ್ತೀಚಿಗೆ 'ರಾಜ್ ಲೀಲಾ ವಿನೋದ' ಎಂಬ ಪುಸ್ತಕ ಬರೆದು ರಾಜ್ ಕುಮಾರ್ ಅಭಿಮಾನಿಗಳ ಕೆಂಗಣ್ಣಿಗೂ ಗುರಿಯಾಗಿದ್ದರು ಅವರು. ವಿವಾದವೆನ್ನುವುದು ಬೆಳಗೆರೆಯವರ ಜೊತೆ ಜೊತೆಗೆ ಬೆಳೆದುಕೊಂಡು ಬಂದಿದ್ದ ಅವರ ಅತ್ಯಾಪ್ತ ಮಿತ್ರ ಎನ್ನುವುದು ಹಲವರ ಅನಾಲಿಸಿಸ್.


ಉಗ್ರಪೀಡಿತ ಕಾಶ್ಮೀರದ ಕಣಿವೆಯಲ್ಲಿ ಭಾರತೀಯ ಸೇನಾಳುಗಳೊಂದಿಗೆ ರವಿಬೆಳಗೆರೆ ಸಂವಾದ

ರವಿಬೆಳಗೆರೆ ರೌಡಿಗಳ ಬಗ್ಗೆ ಬರೆಯುತ್ತಾರೆ ಅಂದರೆ ಅವರು ಬೆಂಗಳೂರು-ಮುಂಬೈಗಳಂತಹ ರೌಡಿಸಂ ಉತ್ತುಂಗದಲ್ಲಿದ್ದ ಕೆಲವೇ ಕೆಲವು ನಗರಗಳ ಬಗ್ಗೆ ತಿಳಿದುಕೊಂಡಿರಬಹುದು ಎಂದುಕೊಳ್ಳಬೇಡಿ. ಕಾಶ್ಮೀರ ಕೊಳ್ಳದಲ್ಲಿ ಒಳ ನುಸುಳುವ ಪಾಕಿಸ್ತಾನದ ಉಗ್ರರ ಮೂಲದ ಜಾಡು ಹಿಡಿದುಕೊಳ್ಳಲು ಪಾಕಿಸ್ತಾನಕ್ಕೆ ವೇಷ ಮರೆಸಿಕೊಂಡು ಹೋಗಿ ಬಂದ ಧೈರ್ಯಶಾಲಿ ಪತ್ರಕರ್ತ ಅವರು. ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ ನಲ್ಲಿ ಚೀನಾ ಸೈನಿಕರು ಒಳನುಸುಳಲು, ಗಡಿ ಒತ್ತುವರಿ ಮಾಡಿಕೊಳ್ಳಲು ಯಾವ ತಂತ್ರ ಬಳಸಿಕೊಳ್ಳುತ್ತಾರೆನ್ನುವುದು, ಕಾಶ್ಮೀರದ ಹಂದ್ವಾರ, ಬಾರಾಮುಲ್ಲಾ ಸೆಕ್ಟರ್ ಗಳಲ್ಲಿ ಕಾರ್ಗಿಲ್ ಕದನ ನಡೆಯುವಾಗ ಪಾಕಿಸ್ತಾನದ ಸೈನಿಕರು ಯಾವ ಯಾವ ಮಾರ್ಗ ಬಳಸಿಕೊಂಡರು ಎನ್ನುವೆಲ್ಲ ವಿಚಾರಗಳ ಬಗ್ಗೆ ಅಮೂಲಾಗ್ರವಾಗಿ ಅಧ್ಯಯನ ಮಾಡಿ ಪುಸ್ತಕ ಬರೆದವರು ಅವರು. ಕಾರ್ಗಿಲ್ ಯುದ್ಧ ಸಮಯದಲ್ಲಿ ಯುದ್ಧ ಭೂಮಿಯಲ್ಲಿ ನಿಂತೇ ವರದಿ ಬರೆದ ಕನ್ನಡದ ಮೊದಲ ಪತ್ರಕರ್ತ ಅವರು. ಪಾಕಿಸ್ತಾನದ ಗಡಿಯೊಳಗೆ ಅಲ್ಲಿನ ಸರ್ಕಾರ ಹೇಗೆ ವ್ಯವಸ್ಥಿತವಾಗಿ ಭಾರತೀಯ ವಿರೋಧಿ ಮನಸ್ಥಿತಿಯನ್ನು ಬಲಪಡಿಸುತ್ತಿದೆ ಎನ್ನುವುದನ್ನು ಬರೆಯುತ್ತಾ ಜಿಹಾದಿ ಜಗತ್ತಿನ ರಕ್ತಸಿಕ್ತ ಅಧ್ಯಾಯಗಳನ್ನು ಜಗಜ್ಜಾಹೀರು ಮಾಡಿದ್ದು ಕರ್ನಾಟಕದ ಪಾಲಿಗೆ ಮಾತ್ರವಲ್ಲ ಭಾರತದ ಪತ್ರಿಕಾ ರಂಗದಲ್ಲೇ ಹೇಳಿಕೊಳ್ಳಬಹುದಾದ ಸಾಧನೆ.

1962ರ ಚೀನಾ ಅತಿಕ್ರಮಣದ ಕುರಿತಾದ ಬ್ರಿಗೇಡಿಯರ್ ಜಾನ್ ಪಿ ದಳವಿಯವರ 'ದಿ ಹಿಮಾಲಯನ್ ಬ್ಲಂಡರ್' ಪುಸ್ತಕವನ್ನು ಕನ್ನಡಕ್ಕೆ ಅನುವಾದವನ್ನು ಅವರು ಮಾಡಿದ್ದರು. ಬೇರೆ ಅನುವಾದಿತ ಪುಸ್ತಕಗಳಂತೆಯೇ ಇದೂ ಒಂದು ಎಂದು ನೀವಂದುಕೊಂಡರೆ ಅದು ದೊಡ್ಡ ತಪ್ಪು. ಆ ಕೃತಿಯ ಅನುವಾದಕ್ಕೂ ಮುಂಚೆ ಬೆಳಗೆರೆಯವರ ಹೋಂ ವರ್ಕ್ ಪುಸ್ತಕ ಓದುವ ಪರ್ಯಂತ ನಮ್ಮ ಕಣ್ಣಿಗೆ ಬಡಿಯುತ್ತದೆ. ದಳವಿಯವರ ಮೂಲ ಪುಸ್ತಕದಲ್ಲಿಲ್ಲದ ಎಷ್ಟೋ ಮಾಹಿತಿಗಳು ಬೆಳಗೆರೆಯವರ ಹೋಂ ವರ್ಕ್ ಪರಿಣಾಮ ಕನ್ನಡ ಅವತರಣಿಕೆಯ 'ಹಿಮಾಲಯನ್ ಬ್ಲಂಡರ್'ನಲ್ಲಿ ವಿರಾಜಮಾನವಾಗಿವೆ. ಹೀಗೆ ತಾವಾಯ್ದುಕೊಂಡ ಪತ್ರಿಕಾ ರಂಗದಲ್ಲಿ ಹಿಂದೆ ಯಾರು ಮಾಡಲಾರದಂತಹದ್ದನ್ನು ಮಾಡಿ ಮುಂದಿನ ತಲೆಮಾರಿಗೆ ಮೇಲ್ಪಂಕ್ತಿಯೊಂದನ್ನು ಹಾಕಿಕೊಟ್ಟವರು ಅವರು. ಇದೆಲ್ಲಾ ಪತ್ರಿಕಾ ರಂಗಕ್ಕೆ ಅವರು ಕೊಟ್ಟ ಕೊಡುಗೆ ಎನ್ನುವಾಗ ಅದರಿಂದ ಅನೇಕಗಳನ್ನು ಅರಿತುಕೊಂಡ ಶ್ರೀಸಾಮಾನ್ಯನಿಗೂ ಅವರು ಅನೇಕವನ್ನು ಕೊಟ್ಟಿದ್ದಾರೆ ಅಂತಲೇ ಅರ್ಥ. 

ಅವರ ಕುರಿತು ನಾನು ಇಷ್ಟೆಲ್ಲಾ ಬರೆಯುತ್ತಿರುವಾಗಲೇ ಅವರ ಕಡು ವಿರೋಧಿಗಳು 'ಎಷ್ಟೋ ಸಂಸಾರಗಳನ್ನು ಬೀದಿಗೆ ತಂದ ಇವನು', 'ಹಲವರಿಗೆ ಬ್ಲಾಕ್ ಮೇಲ್ ಮಾಡಿ ಹಣ ಸಂಪಾದಿಸಿದ' ಎಂದೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಹಾರಾಡುತ್ತಿದ್ದಾರೆ. ಅವುಗಳಿಗೆ ಪ್ರಬಲವಾದ ಪುರಾವೆಗಳಾವುವು ನನಗಂತೂ ಇದುವರೆಗೆ ಲಭ್ಯವಾಗಿಲ್ಲ. ಪ್ರಬಲ ಪುರಾವೆ ಸಿಕ್ಕ ಅವರ ಅಪರಾಧಗಳಿಗೆ ಅವರಿಗೆ ಕೋರ್ಟಿನಲ್ಲೇ ಶಿಕ್ಷೆಯಾಗಿರುವುದನ್ನು ನಾವು ಯಾರು ಮರೆಯುವ ಹಾಗಿಲ್ಲ. ಅವರ 'ಹಾಯ್ ಬೆಂಗಳೂರು' ಪತ್ರಿಕೆಯ ಮೂಲಕ ಅವರಿಗಿದ್ದ ಆದಾಯ, ಮತ್ತು ಅದಕ್ಕೆ ಸಮರ್ಪಕವಾಗಿ ಅವರು ತೆರಿಗೆ ಸಲ್ಲಿಸುತ್ತಿದ್ದುದನ್ನು ಸುದ್ದಿ ಸಂಸ್ಥೆಯೊಂದು ಇತ್ತೀಚಿಗೆ ಬಯಲು ಮಾಡಿದೆ. ವಾರ್ಷಿಕ ಎಪ್ಪತ್ತು ಲಕ್ಷ ತೆರಿಗೆ ಕಟ್ಟುವುದಾಗಿ ಅವರೇ ಅನೇಕ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.

ಕಟ್ಟ ಕಡೆಗೆ ಅವರೇ ಇಷ್ಟ ಪಟ್ಟುಕೊಂಡಿದ್ದ, ಅವರ ಸಮಸ್ತ ಓದುಗರೂ ಅವರಿಗೆ ಆತ್ಮೀಯತೆಯಿಂದ ನೀಡಿದ್ದ ಬಿರುದು 'ಸಕ್ಕತ್ತಾಗಿ ಬರೀತಾನೆ ಬಡ್ಡಿಮಗ' ಇಂದ ಬಡ್ತಿ ಪಡೆದು 'ಸಕ್ಕತ್ತಾಗಿ ಬರೀತಿದ್ದ ಬಡ್ಡಿಮಗ' ಆಗಿ ಪರಲೋಕಕ್ಕೆ ಪ್ರಯಾಣ ಬೆಳೆಸಿದ, ನಮ್ಮಲ್ಲಿ ಹಲವರಿಗೆ ಪುಸ್ತಕ ಪ್ರೀತಿ ಎಂಬ ಚಟ ಹತ್ತಿಸಿದ ರವಿ ಬೆಳಗೆರೆಯವರಿಗೆ ಗೌರವಪೂರ್ವಕ ಶ್ರದ್ಧಾಂಜಲಿ. 

-o-


ಭಾನುವಾರ, ಅಕ್ಟೋಬರ್ 11, 2020

ಜೀವನಕ್ಕೊಂದು ಚಿಕ್ಕ ಪಾಠ

 ಇಲ್ಲಿ ಯಾರು ಒಳ್ಳೆಯವರು, ಯಾರು ಕೆಟ್ಟವರು ಅನ್ನುವುದನ್ನು ಅಳೆಯುವದಕ್ಕಾಗಿ ನಾವಿಲ್ಲಿಗೆ ಬಂದಿಲ್ಲ. ಬಂದಿರುವುದೆಲ್ಲಾ ಯಾವುದೋ ಮಹತ್ಕಾರ್ಯವೊಂದನ್ನು ಮಾಡುವುದಕ್ಕಾಗಿ, ಆ ಕಾರ್ಯಕ್ಕೆ ಸಾಕ್ಷೀಭೂತರಾಗಿ ನಿಲ್ಲುವುದಕ್ಕಾಗಿ. ಮಹತ್ಕಾರ್ಯ ನಮ್ಮಿಂದ ಸಾಗದಿದ್ದರೆ ಮಹತ್ಕಾರ್ಯ ಮಾಡುವ ಯಾವ ಮಹನೀಯನಿಗಾದರು ಹೆಗಲು ಕೊಟ್ಟಾದರೂ ನಿಂತು ನಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಳ್ಳುವದರೊಳಗೆ ವರ್ಣನಾತೀತ ಆನಂದವೊಂದಿದೆ. ಹಾಗಾಗಿ ಬೇರೆಯವರ ಬಗ್ಗೆ ತಲೆ ಕೆಡಿಸಿಕೊಳ್ಳುವುದು, ಅವರೇನೋ ಮಾಡುತ್ತಿದ್ದಾರೆ ನಾವು ಬೇಗೆ ಹೊತ್ತಿ ಉರಿಯುವುದು ಅವಶ್ಯಕವಲ್ಲ, ತರವೂ ಅಲ್ಲ. ಮಾಡಬೇಕಾಗಿರುವ ಕಾರ್ಯಗಳು ಅನೇಕ ನಮ್ಮ ಮುಂದೆ ಇವೆ.

ಅತ್ತ ಗಮನ ಹರಿಸಿ ಎಲ್ಲೆಲ್ಲಿ ತನ್ನ ಯಾವ್ಯಾವ ಶಕ್ತಿಯನ್ನು ಉಪಯೋಗಿಸಿ ನಾವು ಗೆಲ್ಲಬಹುದು ಎನ್ನುವುದನ್ನು ಅರ್ಥ ಮಾಡಿಕೊಳ್ಳುವ ಶಕ್ತಿಯಿರುವುದು ನಮಗೆ ಮಾತ್ರ. ಆದ ಕಾರಣ ಅದನ್ನನುಸರಿಸಿ ನಡೆದು ಗೆಲುವಿನ ಮಾರ್ಗ ತಲುಪುದು ಪ್ರತಿಯೊಬ್ಬ ವ್ಯಕ್ತಿಗೂ ಮುಖ್ಯವಾಗುತ್ತದೆ. 




-o-

ಶುಕ್ರವಾರ, ಅಕ್ಟೋಬರ್ 2, 2020

ತತ್ವಾದರ್ಶ ಪಾಲನಾ ದಿನ

ಇಂದು ಇಬ್ಬರು ಮಹಾತ್ಮರ ಜನ್ಮ ದಿನ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎಂದೂ ಮರೆಯಲಾಗದ ಗಾಂಧೀಜಿ, ಭಾರತದ ರಾಜಕೀಯ ರಂಗದಲ್ಲಿ ಎಂದೂ ಮರೆಯಲಾರದ ಲಾಲ್ ಬಹದ್ದೂರ್ ಶಾಸ್ತ್ರಿ  ಈರ್ವರು ಹುಟ್ಟಿದ ದಿನ. ಅಂತಾರಾಷ್ಟ್ರೀಯ ರಂಗ ಈ ದಿನವನ್ನ ಅಹಿಂಸಾ ದಿನವನ್ನಾಗಿ ಆಚರಿಸುತ್ತದೆ. ಅದು ವಿಶ್ವ ಮಹಾತ್ಮನಿಗೆ ಕೊಡ ಮಾಡಿದ ಗೌರವ, ಭಾರತೀಯರೆಲ್ಲರ ಹೆಮ್ಮೆ ಕೂಡ. ಆದರೆ ಭಾರತದ ಪಾಲಿಗೆ ಇದು ರಾಷ್ಟ್ರಪಿತನ ಜನ್ಮ ದಿನ, ಕೆಚ್ಚೆದೆಯ ಪ್ರಧಾನಿಯಾಗಿದ್ದ ಶಾಸ್ತ್ರಿಯವರ ಜನ್ಮ ದಿನ. ಈ ಇಬ್ಬರೂ ತಮ್ಮ ತಮ್ಮ ತತ್ವಾದರ್ಶಗಳನ್ನು ಕೊನೆಯವರೆಗೂ ಪಾಲಿಸಿಕೊಂಡು ಬಂದು ಪ್ರಾಣ ತೆತ್ತವರು, ತಮ್ಮ ಜೀವಮಾನದಲ್ಲಿ ಎಂತೆಂತಹ ಕಷ್ಟಗಳು ಎದುರಾದರೂ ತಮ್ಮ ತತ್ವದಂತೆ ನಮಗೆ ನಿಮಗೆಲ್ಲ ಆದರ್ಶಪ್ರಾಯರಾಗಿ ಬದುಕಿದವರು ಅವರಾದ್ದರಿಂದ ಈ ದಿನವನ್ನ ತತ್ವಾದರ್ಶ ಪಾಲನಾ ದಿನವನ್ನಾಗಿ ಆಚರಿಸುವುದು ಎಲ್ಲಕ್ಕಿಂತ ಸೂಕ್ತವೆನಿಸುತ್ತದೆ.

ಗಾಂಧಿಯ ಬಗ್ಗೆ ಬರೆದರೆ ಸಾಕು ಮೂಗು ಮುರಿಯುವವರು ಸಾಕಷ್ಟಿದ್ದಾರೆ. ನಮ್ಮ ದೇಶದಲ್ಲಿ ಪಂಥಾತೀತವಾಗಿ ಅನೇಕರಿಗೆ ಗಾಂಧೀ ಹಿಡಿಸುವುದಿಲ್ಲ. ಗಾಂಧೀ ತಮ್ಮ ಓದು, ಉದ್ಯೋಗದ ತರುವಾಯು ಭಾರತಕ್ಕೆ ಬಂದಿಳಿದ ಸೂಕ್ಷ್ಮ ಪರಿಸ್ಥಿತಿಯನ್ನು ಅವಲೋಕಿಸಿ, ಆ ಜಾಗದಲ್ಲಿ ನಮ್ಮನ್ನು ನಾವು ಕಲ್ಪಿಸಿಕೊಂಡು ಬಿಟ್ಟರೆ ಸಾಕು, ಗಾಂಧಿಯ ಮಹತ್ವ ನಮಗೆ ಮನದಟ್ಟಾಗುತ್ತದೆ. ಸ್ವಂತದ್ದೊಂದು ಆರ್ಥಿಕತೆ ಇಲ್ಲದೆ ಬಡತನದ ಬೇಗೆಗೆ ಬಿದ್ದಿದ್ದ ದೇಶ, ಸ್ವಂತ ಪತ್ರಿಕೆ ಹೊರಡಿಸಲು, ಸಭೆ-ಸಮಾರಂಭಗಳನ್ನು ಏರ್ಪಾಟು ಮಾಡಲೂ ಬ್ರಿಟೀಷು ಅಧಿಕಾರಿಗಳ ಅಪ್ಪಣೆಗಾಗಿ ಗೋಗರೆಯುವ, ಗರಿಷ್ಟ ಅಶಿಕ್ಷಿತರನ್ನು ಹೊಂದಿದ್ದ ನಮ್ಮ ದೇಶದ ಜನರನ್ನು ಬೃಹತ್ತಾದ ಆಂದೋಲನಕ್ಕೆ ಎತ್ತಿಕಟ್ಟುವುದು ಅಷ್ಟು ಸುಲಭವಾಗಿರಲಿಲ್ಲ. ಟಿವಿ, ರೇಡಿಯೋ, ಫೋನು ಯಾವುದೂ ಇಲ್ಲದ ಕಾಲದಲ್ಲಿ ಊರಿಂದೂರಿಗೆ ರೈಲಿನಲ್ಲಿ ಓಡಾಡಿ ಇಡೀ ದೇಶದ ಉದ್ದಗಲಕ್ಕೂ ಸಂಚಾರ ಮಾಡಿ ಜನಜಾಗೃತಿ ಮೂಡಿಸಿದ್ದು ಸಾಮಾನ್ಯ ಕೆಲಸವಲ್ಲ. ಇಷ್ಟೆಲ್ಲದರ ನಡುವೆಯೂ ಅವರು ತಮ್ಮದೇ ಒಂದು ತತ್ವಾದರ್ಶಗಳ ರೇಖೆಯನ್ನು ವಿಧಿಸಿಕೊಂಡು ಎಷ್ಟೇ ಕಠಿಣವಾದರೂ ಅದನ್ನು ದಾಟದೆ ಬದುಕಿ ತೋರಿಸಿದ ರೀತಿ ಅನೇಕರ ಮನಃಪರಿವರ್ತನೆಗೆ ಕಾರಣವಾಗಿದೆ.


  


ಅಷ್ಟೇ ಅಲ್ಲ ದೇಶದ ಮಹತ್ ಕ್ರಾಂತಿಯೊಂದಕ್ಕೆ ನಾಂದಿಯೂ ಆಗಿದ್ದು ಈಗ ಇತಿಹಾಸ. ಗಾಂಧೀ ಬರುವವರೆಗೂ ದೇಶದಲ್ಲಿ ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದರೂ ದೇಶದಾದ್ಯಂತ ಜನರನ್ನ ಎತ್ತಿ ಕಟ್ಟುವುದಕ್ಕೆ ಅಸಮರ್ಥವಾಗಿದ್ದು ಸಿಪಾಯಿ ದಂಗೆ ಕೂಡ ತಿಂಗಳು ಕಳೆಯುವದರೊಳಗಾಗಿ ತಣ್ಣಗಾಗಿದ್ದನ್ನು ಇತಿಹಾಸ ಇನ್ನೂ ಮರೆತಿಲ್ಲ.ಇಷ್ಟೆಲ್ಲಾ ಅಸಮತೋಲನೆಯ ನಡುವೆ ಆಂದೋಲನವನ್ನ ನೇರ ಮುನ್ನೆಲೆಯಲ್ಲಿ ನಿಂತು ಸಂಘಟಿಸಿದ್ದು, ಕೊನೆಯವರೆಗೂ ಅದಕ್ಕಾಗಿಯೇ ಸಿದ್ಧಾಂತವೊಂದನ್ನು ಮೈಗೂಡಿಸಿಕೊಂಡಿದ್ದು, ಬರಿ ಬಾಯಿ ಮಾತಿನಲ್ಲಿ ಸಿದ್ಧಾಂತವನ್ನು ಹೇಳಿ ಮುಗಿಸದೆ ಬದುಕಿ ತೋರಿಸಿದ್ದು, ಅದಕ್ಕಾಗಿಯೇ ಹುತಾತ್ಮರಾಗಿದ್ದು ಬಾಲಿಶವಲ್ಲ. ನಮ್ಮ ದೇಶದ ಪ್ರತಿಯೊಂದು ಕುಡಿ  ಕೊನರುಗಳೂ ಇದರ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ. ಅಂದಿನ ಪರಿಸ್ಥಿತಿಯನ್ನು  ಸರಿಯಾಗಿ ಅರಿಯದೆ ಗಾಂಧೀ ಹಾಗೆ ಮಾಡಬೇಕಿತ್ತು, ಹೀಗೆ ಮಾಡಬೇಕಿತ್ತು, ಗಾಂಧೀ ಮಾಡಿದ್ದು ಸರಿಯಲ್ಲ ಎನ್ನುವುದು ಮೊಂಡುವಾದವಾಗುತ್ತದೆ. ಆ ಮೊಂಡುವಾದಗಾರರು ಆವತ್ತಿನ ಪರಿಸ್ಥಿತಿಯನ್ನ ಸೂಕ್ಷ್ಮವಾಗಿ ಅವಲೋಕಿಸುವತ್ತ ಮನಸ್ಸು ಮಾಡಬೇಕು.

ಇನ್ನು ತತ್ವಾದರ್ಶ ಪಾಲನೆಯಲ್ಲಿ ಶಾಸ್ತ್ರಿಯವರನ್ನೇ ಈಗಿನ ರಾಜಕಾರಣಿಗಳು ಮಾದರಿಯಾಗಿ ಅನುಸರಿಸಬೇಕು. ಶಾಸ್ತ್ರಿಯವರ ಸ್ವಾಮಿ ನಿಷ್ಠೆಯನ್ನ ಯಾರೂ ಬೊಟ್ಟು ಮಾಡಿ ಪ್ರಶ್ನೆ ಮಾಡುವಂತೆಯೇ ಇಲ್ಲ. ಸ್ವಚ್ಛ, ಶ್ವೇತ ವ್ಯಕ್ತಿತ್ವ ಅವರದು. ಅವರ ನಿಷ್ಠೆಗೆ ಕೈಗನ್ನಡಿಯ ಹಾಗೆ ಈಗಾಗಲೇ ಅವರ ಅನೇಕ ಕಥೆಗಳು ನಮ್ಮ ನಡುವೆ ಹರಿದಾಡಿವೆ. ಆದ್ದರಿಂದ ಮತ್ತೊಮ್ಮೆ ಅದನ್ನು ಹೇಳುವ ಅವಶ್ಯಕತೆಯಿಲ್ಲವಷ್ಟೆ. ಆದರೆ ರಾಜಕೀಯ ಪಕ್ಷವೊಂದರ ನೇತಾರರಾಗಿ, ಪ್ರಧಾನಿ ಹುದ್ದೆ ಅಲಂಕರಿಸಿದ್ದ ಅವರನ್ನು ಈವತ್ತು ಪಕ್ಷಾತೀತವಾಗಿ ಎಲ್ಲರೂ ಗೌರವಿಸುತ್ತಿರುವುದು ನೋಡಿದರೆ ಅವರ ವ್ಯಕ್ತಿತ್ವ, ಕಾರ್ಯ ವಿಧಾನ ಹೇಗಿತ್ತು ಎನ್ನುವುದು ನಮ್ಮ ಅರಿವಿಗೆ ಬರುವುದಕ್ಕೆ ಸಾಕು. ನೋಡುವುದಕ್ಕೆ ನಯವಾಗಿಯೇ ತೋರುತ್ತಿದ್ದ ಶಾಸ್ತ್ರಿ ಅವಶ್ಯವಿದ್ದರೆ ವ್ಯಘ್ರರಾಗಲೂ ಮರೆಯುತ್ತಿರಲಿಲ್ಲ. ಸ್ನೇಹಕ್ಕೂ ಬದ್ಧ, ಸಮರಕ್ಕೂ ಸಿದ್ಧ ಎನ್ನುವ ವಾಕ್ಯದಂತೆ ಇದ್ದು ಬಾಳಿದವರು ಅವರು. 

ಒಮ್ಮೆ ಅಂತಾರಾಷ್ಟ್ರೀಯ ಮಾಧ್ಯಮವೊಂದು ಶಾಸ್ತ್ರಿಯವರ ಕಾಲೆಳೆಯುವ ಸಲುವಾಗಿ ಪಾಕಿಸ್ತಾನವನ್ನ ವಹಿಸಿಕೊಳ್ಳುತ್ತ ಪಾಕಿಸ್ತಾನದ ಆಗಿನ ಅಧ್ಯಕ್ಷ, 1965ರ ಭಾರತ-ಪಾಕ್ ಯುದ್ಧದಲ್ಲಿ ಪಾಕ್ ಬಣದ ಮುಂದಾಳು ಅಯೂಬ್ ಖಾನರನ್ನು ಹೊಗಳುತ್ತಾ "ಅಯೂಬ್ ಖಾನ್ ರಂತಹ ಎತ್ತರದ ವ್ಯಕ್ತಿ ಶಾಸ್ತ್ರಿಯಂತಹ ಕುಳ್ಳ ವ್ಯಕ್ತಿಜೊತೆ ಮಾತನಾಡುವುದು" ಎಂಬರ್ಥದಲ್ಲಿ ಒಂದು ವಾಕ್ಯ ಬಳಸಿದ್ದರಂತೆ. ಅದಕ್ಕೆ ಪ್ರತ್ಯುತ್ತರವಾಗಿ ಶಾಸ್ತ್ರಿ, "ಹೌದು, ಅವರು(ಅಯೂಬ್ ಖಾನ್) ನನ್ನ ಮುಂದೆ ತಲೆ ತಗ್ಗಿಸಿ ಮಾತನಾಡುತ್ತಾರೆ, ನಾನು ಅವರನ್ನು ತಲೆ ಎತ್ತಿ ಮಾತನಾಡಿಸುತ್ತೇನೆ" ಎಂದರಂತೆ. ಆ ಮಾತು ಅದೆಷ್ಟು ಪ್ರಭಾವಶಾಲಿಯಾಗಿತ್ತೆಂದರೆ ಆಗ್ಗೆ ಭಾರತ-ಪಶ್ಚಿಮ ಪಾಕಿಸ್ತಾನ-ಪೂರ್ವ ಪಾಕಿಸ್ತಾನಗಳ ಸಂಬಂಧದ ಮೇಲೆ ವಿಶೇಷ ಪರಿಣಾಮ ಬೀರಿತ್ತು. ಅಷ್ಟೇ ಅಲ್ಲ, ಸಾಮಾನ್ಯ ಜನರೂ ಕೂಡ ಯಾರನ್ನಾದರೂ ಕುಳ್ಳ ಎಂದೂ ಆಡಿಕೊಳ್ಳುತ್ತಿದ್ದರೆ ಅಂತಹದ್ದೇ ವಾಕ್ಯ ಬಳಸಿ ಆಡಿಕೊಂಡವರಿಗೆ ಟಾಂಗ್ ಕೊಡಲು ಶುರುವಿಟ್ಟುಕೊಂಡಿದ್ದರಂತೆ. ಸಾಮಾಜಿಕ ಜಾಲತಾಣಗಳು, ಟಿವಿಗಳು ಭಾರತದಲ್ಲಿ ಇಲ್ಲದಿದ್ದ ಕಾಲದಲ್ಲೇ ಭಾರತದಲ್ಲಿ ಪ್ರಧಾನಿಯವರ ಹೇಳಿಕೆಯೊಂದಕ್ಕೆ ಅಷ್ಟೊಂದು ಮಹತ್ವ ಬಂದಿತ್ತು. ಆಮೇಲೆ ನಡೆದ ಭಾರತ-ಪಾಕ್ ಯುದ್ಧ, ಅದರಲ್ಲಿ ಭಾರತದ ಗೆಲುವು ಮೂರು ವರ್ಷಗಳ ಹಿಂದೆ ಚೀನಾದಿಂದ ಪೆಟ್ಟು ತಿಂದಿದ್ದ ಭಾರತಕ್ಕೆ ಸಮಾಧಾನ ತಂದವು. 

ತಲೆ ತಗ್ಗಿಸಿ ಮಾತನಾಡಿದ ಪಾಕಿಸ್ತಾನದ ಅಧ್ಯಕ್ಷ ಅಯೂಬ್ ಖಾನ್, ತಲೆಯೆತ್ತಿ ಮಾತನಾಡಿದ ಭಾರತದ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ


ಗಾಂಧಿಯ ನಂತರ ಭಾರತದ ಜನ ಒಮ್ಮತದಿಂದ ಓಗೊಟ್ಟ ಯಾರದ್ದಾದರೂ ದನಿಯಿದ್ದರೆ ಅದು ಶಾಸ್ತ್ರಿಯವರದ್ದೇ ಅನ್ನಬಹುದು. 1965 ರ ಭಾರತ-ಪಾಕ್ ಸೆಣಸಾಟದಲ್ಲಿ ಪಾಕಿಸ್ತಾನವನ್ನು ವಹಿಸಿಕೊಳ್ಳುತ್ತಾ ಅಮೆರಿಕಾ 'ಭಾರತಕ್ಕೆ ರಫ್ತಾಗುತ್ತಿರುವ ಗೋಧಿಯನ್ನು ನಿರ್ದಾಕ್ಷಿಣ್ಯವಾಗಿ ತಡೆಯಬೇಕಾಗುತ್ತದೆ, ಅನಂತರ ಭಾರತೀಯರು ಹಸಿವಿನಿಂದ ನರಳಿ ಸಾಯಬೇಕು' ಎಂದಾಗ, ಅಷ್ಟೇ ಗಡುಸಾಗಿ 'ನಿಮ್ಮ ದೇಶದ ಗೋಧಿಯನ್ನು ನಮ್ಮ ದೇಶದ ಹಂದಿಗಳು ತಿನ್ನಬೇಕು' ಎಂದು ತಿರುಗೇಟು ಕೊಟ್ಟಿದ್ದೂ ಅಲ್ಲದೆ ಕೂಡಲೇ ದೇಶವನ್ನುದ್ದೇಶಿಸಿ ಮಾತನಾಡಿ ಸೋಮವಾರದ ಒಪ್ಪತ್ತಿನ ಉಪವಾಸಕ್ಕೆ ಕರೆ ಕೊಟ್ಟುಬಿಟ್ಟರು. ದೇಶದ ಗಣ್ಯಾತಿ ಗಣ್ಯರು ಸೋಮವಾರ ಉಪವಾಸ ಕೈಗೊಂಡರು. ತೀರಾ ಇತ್ತೇಚಿಗೂ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮಿಗಳು 1965 ರ ಸಮಯದಲ್ಲಿ ತಮ್ಮ ಮಠದಲ್ಲಿದ್ದ ವಿದ್ಯಾರ್ಥಿಯೊಬ್ಬ ಸೋಮವಾರದ ಊಟ ಬಿಟ್ಟು ತಮ್ಮ ಗಮನ ಸೆಳೆದಿದ್ದುದಾಗಿ ಸಂದರ್ಶನವೊಂದರಲ್ಲಿ ಹೇಳಿಕೊಳ್ಳುತ್ತಿದ್ದುದು ಈಗ ಜ್ಞಾಪಕ ಬಂತು.

ಪಾಕಿಸ್ತಾನಕ್ಕೆ ನಡು ಮುರಿಯಲು ಅಮೆರಿಕಾವನ್ನು ಎದುರು ಹಾಕಿಕೊಂಡ ಭಾರತ ಅಷ್ಟೊತ್ತಿಗಾಗಲೇ ಚೀನಾದೊಂದಿಗೆ ಮುನಿಸಿಕೊಂಡಿತ್ತು. ಮುಂದೇನು ಎಂದೂ ಯೋಚಿಸುತ್ತಾ ಕೈ-ಬಾಯಿ ನೋಡಲು ಸಮಯವಾಗಿರಲಿಲ್ಲ ಅದು. ಅಲ್ಲಿಂದಲೇ ಹೊಸ ಯೋಜನೆಯೊಂದನ್ನು ಗೊತ್ತು ಮಾಡಿಕೊಂಡ ಶಾಸ್ತ್ರಿ ಭಾರತದ ಹಸಿರು ಕ್ರಾಂತಿಗೆ ಶಿಲಾನ್ಯಾಸ ಮಾಡಿಯೇ ಬಿಟ್ಟರು. ನೋಡ ನೋಡುತ್ತಿದ್ದಂತೆ ಅನ್ಯ ದೇಶಗಳ ಮುಂದೆ ಭಿಕ್ಷಾ ಪಾತ್ರೆ ಹಿಡಿಯುತ್ತಿದ್ದ ಭಾರತ, ಎಷ್ಟೋ ದೇಶಗಳಿಗೆ ಆಹಾರ ಧಾನ್ಯಗಳನ್ನು ರಫ್ತು ಮಾಡುವ ಎತ್ತರಕ್ಕೆ ಬೆಳೆಯಿತು, ಯುದ್ಧದಲ್ಲಿ ಹುಮ್ಮಸ್ಸಿನಿಂದ ಪಾಲ್ಗೊಂಡಿದ್ದ ಪಾಕಿಸ್ತಾನಕ್ಕೆ ಸರಿಯಾಗಿ ಪೆಟ್ಟು ಕೊಟ್ಟಿದ್ದೂ ಅಲ್ಲದೆ ಲಾಹೋರ್ ಅನ್ನು ಆಕ್ರಮಿಸಿಕೊಂಡು ಅಲ್ಲೂ ಭಾರತದ ತಿರಂಗ ಧ್ವಜವನ್ನು ಹಾರಿಸಿಬಿಟ್ಟರು ಶಾಸ್ತ್ರಿ. ಆ ಸಂತೋಷಗಳನ್ನೆಲ್ಲ ಅನುಭವಿಸಲು ಭಾರತೀಯರನ್ನು ವಿಧಿ ಹಾಯಿಗೊಡಲಿಲ್ಲ. ಪಾಕಿಸ್ತಾನದ ಯುದ್ಧ ಮುಗಿದ ಒಪ್ಪಂದಕ್ಕೆ ಅಂಕಿತ ಬಿದ್ದ ದಿನವೇ ಶಾಸ್ತ್ರಿ ನಿಧನರಾದರು. ಅವರ ಸಾವಿನ ಬಗ್ಗೆ ಈಗಲೂ ಅನೇಕ ಊಹಾ ಪೋಹಗಳಿವೆ, ಅನೇಕ ವಿಶ್ಲೇಷಣೆಗಳು ನಡೆಯುತ್ತಿವೆ. ಅದರ ಬಗ್ಗೆ ಯಾವ ಭಾರತೀಯನಿಗೂ ಅನುಮಾನ ಶಮನವಂತೂ ಇನ್ನೂ ಆಗಿಲ್ಲ.

ತತ್ವಾದರ್ಶ ಪಾಲನೆ ಮಾಡುತ್ತಲೇ ನಮ್ಮ ತಂಟೆಗೆ ಬಂದವರನ್ನು ಹೆಡೆಮುರಿ ಕಟ್ಟಿದ್ದ ಸಜ್ಜನ ರಾಜಕಾರಣಿ ಲಾಲ್ ಬಹಾದ್ದೂರ್ ಶಾಸ್ತ್ರಿ ನಮಗೆಲ್ಲರಿಗೂ ಇಷ್ಟವಾಗುವುದು ಅದಕ್ಕೆ. ಅವರ ಜನ್ಮಜಯಂತಿಯಂದು ನಮ್ಮ ಈಗಿನ ರಾಜಕಾರಣಿಗಳಿಗೂ ಅವರಂತಹ ಬುದ್ಧಿ ಬರಲಿ ಎಂದು ನಾವು ಹಾರೈಸಬಹುದಷ್ಟೆ.

-o-



 

ಬುಧವಾರ, ಸೆಪ್ಟೆಂಬರ್ 30, 2020

ದೇವರ ಸರದಿ

 ಮಹದೇಶ್ವರ ಬೆಟ್ಟ, ಎಡೆಯೂರು ಇವೆಲ್ಲ ನನಗೆ ಹೊಸವೇನಲ್ಲ. ವರ್ಷಕ್ಕೊಂದು ಸಾರಿ ಇಲ್ಲೆಲ್ಲಾ ಎಡತಾಕಿ ಬರುವ ರೂಢಿಯೊಂದು ನಮ್ಮ ಮನೆಯಲ್ಲಿ ಹಿಂದೆಯಿಂದ ಬೆಳೆದುಬಂದಿದ್ದು ನಾನು ಕಂಡಿಲ್ಲವಾದರೂ ನಾನು ಅದನ್ನು ಅನೂಚಾನುವಾಗಿ ಪಾಲಿಸುತ್ತಾ ಬಂದಿದ್ದೇನೆ. ನಾನು ಬುದ್ಧಿ ಕಂಡು ಕೈಲಿ ಕಾಸಾಡಿಸುವ ಹಾಗೆ ಆದಮೇಲೆ  ಎಲ್ಲರಂತೆ ನಾನು ವರ್ಷಕ್ಕೊಮ್ಮೆ ಅಲ್ಲಿಗೆ ಭೇಟಿ ಕೊಡುತ್ತಲೇ ಬಂದಿದ್ದೇನೆ. ನಮ್ಮ ಹಿರೀಕರು ಇವೇ ದೇವರುಗಳಿಗೆ ಅಡ್ಡಬಿದ್ದು ತಮ್ಮ ಕಷ್ಟ, ಸುಖಗಳನ್ನೆಲ್ಲಾ ಇಲ್ಲೇ ಹಂಚಿಕೊಂಡಿದ್ದು ಅನ್ನುವ ಅಭಿಮಾನ ಆ ಸ್ಥಳಗಳಲ್ಲಿ ನಿಂತಾಗ ನನಗೆ ಅನುರಣಿಸಿದಂತಾಗುತ್ತದೆ. ನಮ್ಮ ವಂಶಾವಳಿಯವರೆಲ್ಲಾ ತಮ್ಮ ಆಗು, ಹೋಗುಗಳಿಗೆ ವಂದಿಸಿದ್ದು, ಬೈದುಕೊಂಡಿದ್ದು, ಗೊಣಗಿಕೊಂಡದ್ದು, ಹೊಣೆಗಾರಿಕೆ ಹೊರಿಸಿದ್ದು ಎಲ್ಲವೂ ಇವೇ ದೇವರುಗಳ ಸನ್ನಿಧಾನದಲ್ಲಿ ಅನ್ನುವ ಕಾರಣಕ್ಕೆ ನನಗೆ ಅಲ್ಲಿ ಭಕ್ತಿ ಜಾಗೃತ ವಾಗುತ್ತದೆ.

ದೇವರಿಲ್ಲದ ಸ್ಥಳವೇ ಪ್ರಪಂಚದಲ್ಲಿಲ್ಲ ಅನ್ನುತ್ತಾರೆ ತಿಳಿದವರು. ಆದರೂ ಮನುಷ್ಯ ದೇವಸ್ಥಾನಕ್ಕೆ ಹೋಗುತ್ತಾನೆ. ಬರಿ ನಾವು ಮಾತ್ರವಲ್ಲ, ಏಕ ದೇವೋಪಾಸನೆಯ ಸಂಸ್ಕೃತಿಯ ಮುಸಲ್ಮಾನರು ಮೆಕ್ಕಾದಲ್ಲಿರುವ ಅಲ್ಲಾಹುವಿನ ಪ್ರತಿರೂಪವಾದ ಕಬ್ಬಾಕ್ಕೆ ಭೇಟಿ ಕೊಟ್ಟು ತಾವು ಪುನೀತರಾದೆವು ಅನ್ನುವ ಭಾವ ತಳೆಯುತ್ತಾರೆ. ಕ್ರಿಶ್ಚಿಯನ್ ಸಮುದಾಯದವರೂ ಚರ್ಚುಗಳಿಗೆ ಭೇಟಿ ಕೊಟ್ಟು ತಮ್ಮ ಪ್ರಾರ್ಥನೆ ಸಲ್ಲಿಸುವುದಲ್ಲದೆ ವ್ಯಾಟಿಕನ್ ಸಿಟಿ, ಬೆಥ್ಲೆಹೆಮ್ ಸ್ಥಳಗಳ ಮೇಲೆ ಪೂಜ್ಯ ಭಾವನೆ ಇರಿಸಿಕೊಂಡಿದ್ದಾರೆ. ತಮ್ಮ ಜೀವಮಾನದಲ್ಲಿ ಒಮ್ಮೆ ಅಲ್ಲಿಗೆ ಹೋಗಿ ಬರಬೇಕು ಎನ್ನುವುದು ಅವರ ಅಭಿಲಾಷೆ ಕೂಡಾ ಆಗಿರುತ್ತದೆ. ಮನುಷ್ಯರಿಗೆ ಆದರಲ್ಲೂ ಆಸ್ತಿಕರಿಗೆ ದೇವರ ಅಸ್ತಿತ್ವದ ಮೇಲೆ ನಂಬಿಕೆ ಯಥೇಚ್ಛವಾಗಿದೆ, ಆದರೆ ಅವರಿಗೆ ಆರಾಧನೆಗೆ ಏನಾದರೊಂದು ಬೇಕು ಎನಿಸುತ್ತದೆ. ಇಂಗ್ಲೀಷ್ ಭಾಷೆಯಲ್ಲಿ ಇದನ್ನ ಆಬ್ಜೆಕ್ಟ್ ಆಫ್ ವರ್ಶಿಪ್(Object Of  Worship) ಎನ್ನುತ್ತಾರೆ. ಆ ವಸ್ತು ಇಲ್ಲದಿದ್ದರೆ ಗರಿಷ್ಟ ಜನಕ್ಕೆ ಭಕ್ತಿಯಂತಹ ಭಾವಗಳನ್ನ ಪ್ರಚೋದಿಸುವುದಕ್ಕಾಗುವದೇ ಇಲ್ಲ. 

ಇದು ಎಲ್ಲರೂ ಒಪ್ಪಿಕೊಳ್ಳುವ, ನಮ್ಮಲ್ಲಿರುವ ಸಾಮಾನ್ಯ ಬಲಹೀನತೆ. ಈ ಬಲಹೀನತೆಯನ್ನೇ ಬಂಡವಾಳ ಮಾಡಿಕೊಂಡ ದೇಗುಲಗಳು ದುಡ್ಡು ಮಾಡುವ ದಂಧೆಗಿಳಿದಿರುವುದು ಮಾತ್ರ ಖೇದಕರ. ಅನಾದಿ ಕಾಲದಿಂದಲೂ ನಮ್ಮ ದೇಗುಲಗಳು ಶಿಕ್ಷಣ ಕೇಂದ್ರಗಳಾಗಿ, ವೈದ್ಯಕೀಯ ಉಪಚಾರಕ್ಕೆ ಸಾಮಾನ್ಯ ಕೇಂದ್ರಗಳಾಗಿ, ಚರ್ಚೆ-ವಿದ್ವತ್ ಪ್ರದರ್ಶನಗಳಿಗೆ ಅಖಾಡವಾಗಿ, ದಾರಿಹೋಕರಿಗೆ ತಂಗುದಾಣವಾಗಿ, ಶಿಲ್ಪಕಲಾ ರಸಿಕರಿಗೆ ರಸದೌತಣವಾಗಿ, ಸಾಮಾಜಿಕ ಬದಲಾವಣೆಗೆ ಕೇಂದ್ರಗಳಾಗಿ, ಜ್ಞಾನಿಗಳು-ಅಜ್ಞಾನಿಗಳು, ಪಂಡಿತ ಪಾಮರರಾದಿಯಾಗಿ ಎಲ್ಲರೂ ಕೂಡುವ ಸ್ಥಳಗಳಾಗಿದ್ದವು. ದೇಗುಲಗಳ ಬಹುಪಯೋಗಿ ದೃಷ್ಟಿಕೋನವನ್ನಿರಿಸಿಕೊಂಡೆ ರಾಜ-ಮಹಾರಾಜರುಗಳು ದೇಗುಲಗಳ ನಿರ್ಮಾಣಕ್ಕೆ ಬೆಲೆಕೊಡುತ್ತಿದ್ದುದು. ನಮ್ಮ ದೇಶ ಹೊರಗಿನವರ ಆಕ್ರಮಣಕ್ಕೆ ತುತ್ತಾಗಿ ತನ್ನತನವನ್ನ ಕಳೆದುಕೊಳ್ಳ ಹೊರಡುವುದಕ್ಕೂ ಮೊದಲು ದೇಗುಲಗಳನ್ನ ಕಟ್ಟಿಸದೆ ಸತ್ತ ರಾಜನ ಒಂದೇ ಒಂದು ಉದಾಹರಣೆಯೂ ನಮ್ಮ ದೇಶದಲ್ಲಿ ಇರಲಿಲ್ಲ ಅಂದರೆ ಅದರ ತೀವ್ರತೆಯನ್ನ ನೀವು ಅರ್ಥ ಮಾಡಿಕೊಳ್ಳಬಹುದು. 

ಇಂತಿದ್ದ ದೇಗುಲಗಳನ್ನ ಇಂದು ನಮ್ಮ ಸರ್ಕಾರಗಳು, ಅದರಲ್ಲೂ ಸೆಕ್ಯುಲರ್ ಸರ್ಕಾರಗಳು ಆಕ್ರಮಿಸಿಕೊಂಡಿವೆ. ಯಾವುದೋ ಧರ್ಮದ ದೇಗುಲಕ್ಕೆ ಸರ್ಕಾರ ಬೇಕೆಂತಲೇ ಇನ್ನಾವುದೋ ಧರ್ಮದ ಅಧಿಕಾರಿಯನ್ನ ತಂದು ಕೂರಿಸಿ ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡುವಂತಹ ಘಟನೆಗಳು ನಮ್ಮ ನಡುವೆ ಹಲವಾರಿವೆ. ದೇವಸ್ಥಾನದ ಅನೇಕ ಆಚರಣೆಗಳು ನ್ಯಾಯಾಲಯದ ನಿರ್ದೇಶನದ ಮೇರೆಗೆ ನಡೆಯುವ ಮಟ್ಟ ತಲುಪಿದೆ. ಬಲವಂತವಲ್ಲದ, ಅನ್ಯರಿಗೆ ಹಿಂಸೆಯಾಗದ ಯಾವ ಆಚರಣೆಯಾದರೂ ಅದು ಅವರ ವಿವೇಚನೆಗೆ ಬಿಟ್ಟದ್ದು ಎಂಬ ಭಾರತದ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ನ್ಯಾಯಾಲಯದ ಅನೇಕ ತೀರ್ಪುಗಳು ಸವಾರಿ ಮಾಡಿವೆ, ಆ ನಿಟ್ಟಿನಲ್ಲಿ ಎಷ್ಟೋ ಆಚರಣೆಗಳು ತಡೆಯಾಗಿವೆ. 

ಧಾರ್ಮಿಕ ಸ್ಥಳಗಳಲ್ಲಿ ಸರ್ಕಾರ ಪೋಲೀಸರ ಅಥವಾ ಇನ್ನಾವುದೇ ಸರ್ಕಾರಿ ಅಧಿಕಾರಿಗಳ ಬಲ ಪ್ರಯೋಗ ಮಾಡುವಂತಿಲ್ಲ ಎನ್ನುವ ಶಿಷ್ಟಾಚಾರದ ನಡುವೆಯೇ ಸರ್ಕಾರ ನಯವಾದ್ದೊಂದು ಧೋರಣೆಯಿಂದ ಹಲವು ದೇಗುಲಗಳನ್ನ ಅವುಗಳ ದೈನಂದಿನ ಆಡಳಿತದ ಕಾರಣ ನೀಡಿ ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ದೇಗುಲದ ಅಭಿವೃದ್ಧಿಯ ಹೆಸರಲ್ಲಿ ಹಲವು ದೇಗುಲದ ಸರ್ವವನ್ನೂ ನಿಧಾನಕ್ಕೆ ತಮ್ಮ ಅಧೀನಕ್ಕೆ ತೆಗೆದುಕೊಳ್ಳುವ ಧಾವಂತದಲ್ಲಿ ಅರ್ಚಕರ ನೇಮಕಕ್ಕೆ ಅರ್ಜಿ ಹಾಕಿ ಎನ್ನುತ್ತಿದೆ ಸರ್ಕಾರ. ದೇಗುಲದ ಕಾಮಗಾರಿಗಳಿಗೆ ಗುತ್ತಿಗೆದಾರರನ್ನು ಟೆಂಡರ್ ಮೂಲಕ ಕರೆದು ಕಡಿಮೆಗೆ ಗಿಟ್ಟುವ ಖರ್ಚಿನಲ್ಲಿ ಅಭಿವೃದ್ಧಿ ಮಂತ್ರ ಜಪಿಸುತ್ತಿದೆ ಸರ್ಕಾರ. ದೇವರ ದರ್ಶನಕ್ಕೆ ಬೇರೆ ಬೇರೆ ಸರತಿ ಸಾಲುಗಳನ್ನು ಮಾಡಿ ದರ್ಶನಕ್ಕೂ ದರ ಪಟ್ಟಿ ಅಂಟಿಸಿ ದುಡ್ಡು ಮಾಡಲು ಮೊದಲಾಗಿದೆ.

ಮುಂಚೆ ತಿರುಪತಿಯಲ್ಲಿ ಮಾತ್ರ ಕಂಡುಬರುತ್ತಿದ್ದ ಈ ಹಣ ಮಾಡುವ ಖಯಾಲಿ ಈಗ ಕರ್ನಾಟಕದಲ್ಲಿ ಶುರು ಆಗಿದೆ. ಶೀಘ್ರ ದರ್ಶನ, ಧರ್ಮ ದರ್ಶನ, ವಿಐಪಿ ದರ್ಶನ, ಅಂತದ್ದು ಇಂತದ್ದು ಅಂತೆಲ್ಲಾ ಅನೇಕ ದರ್ಶನದ ಮೆನು ಕಾರ್ಡು ಸಿದ್ಧ ಮಾಡಿಕೊಂಡು ದುಡ್ಡು ಮಾಡುವತ್ತ ಗಮನ ಹರಿಸುತ್ತಿರುವ ಸರ್ಕಾರ ಏನು ಮಾಡ ಹೊರಟಿದೆಯೋ ದೇವರಿಗೇ ಗೊತ್ತು. ಸಿದ್ಧಲಿಂಗೇಶ್ವರು, ಮಹದೇಶ್ವರರು ತಾವು ಬದುಕಿದ್ದ ಅವಧಿಯಲ್ಲಿ ಸದ್ಭೋಧೆ ಮಾಡುತ್ತಾ ಅವರ ಅನುಯಾಯಿಗಳಿಗೆ ಹೇಳುತ್ತಿದ್ದುದೇ ಹಣದ, ಸಂಪತ್ತು ಗಳಿಂದ ಮನಸ್ಸನ್ನು ವಿಮುಖಗೊಳಿಸಿ ಶಿವನೆಡೆಗೆ ತಿರುಗಿಸಿ ಅಂತಾ. ಆದರೆ ಇದೀಗ ಅವರದೇ ಸನ್ನಿಧಾನದಲ್ಲಿ ಹಣವಿದ್ದವನಿಗೆ ಶೀಘ್ರ ದರ್ಶನ, ಇಲ್ಲದವನಿಗೆ ನಂತರದ ದರ್ಶನ. ಆ ಸಂತರು ಬದುಕಿದ್ದ ಕಾಲಘಟ್ಟದಲ್ಲಿ ಸಾರಿದ ಅವರದ್ದೇ ತತ್ವಗಳಿಗೆ ಸರ್ಕಾರಗಳು (ಕೆಲವೊಮ್ಮೆ ಖಾಸಗಿ ಟ್ರಸ್ಟ್ ಗಳು ಕೂಡ) ವಿರುದ್ಧ ದಿಕ್ಕಿನಲ್ಲಿ ಆ ಕ್ಷೇತ್ರಗಳಲ್ಲಿ ನೀತಿ ನಿಯಮಾವಳಿಗಳನ್ನ ಜಾರಿಗೆ ತಂದಿವೆ. ಅಲ್ಲಿಗೆ ಅಲ್ಲೊಂದು ಧಾರ್ಮಿಕ ನೈತಿಕತೆ ಸದ್ದರಿಯದೇ ಮಾಯವಾಗಿದೆ. ಇದೊಂದೇ ಅಲ್ಲ ಇನ್ನು ಹಲವಾರು ವಿಶೇಷಣಗಳು ಮಾಯವಾಗುವ ಸರದಿ ಮುಂದಿದೆ. 

ಸಂವಿಧಾನ, ನ್ಯಾಯಾಲಯ,ಕಾನೂನು-ಕಟ್ಟಳೆ, ಪೊಲೀಸ್ ಸ್ಟೇಷನ್ನು ಯಾವುದು ಇಲ್ಲದಾಗಲೂ ನಮ್ಮ ಜನ ಮಿತಿಯಲಿದ್ದದ್ದು ಧರ್ಮವೆಂಬ ಕಾನೂನಿಡಿಯಲ್ಲಿ, ದೇವರೆಂಬ ಭಯದಲ್ಲಿ. ಈಗ ಹೊಸ ಕಾನೂನಿಗೆ ಸಿಲುಕಿ ಆ ಹಳೆಯ ಕಾನೂನನ್ನು ಒದೆಯುವ ಕೆಲಸಕ್ಕೆ ಕೈ ಹಾಕುವುದು ತರವಲ್ಲ, ಯಾಕೆಂದರೆ ಧರ್ಮಕ್ಕೂ, ದೇವರಿಗೂ ಹೆದರುವ ಜನರು ಇಲ್ಲಿ ಕಡಿಮೆಯೇನಿಲ್ಲ.

-0-

ಭಾನುವಾರ, ಆಗಸ್ಟ್ 16, 2020

ಅಲ್ಲೇ ಇದೆ ನಿನ್ನ ಗೆಲುವು

 ಇಲ್ಲೆಷ್ಟೋ ಜನಗಳಿಗೆ

ಉಣ್ಣಲಿಲ್ಲ,

ಮಗದೆಷ್ಟೋ ಜನಗಳಿಗೆ 

ಉಡಲಿಲ್ಲ,

ಇಲ್ಲೆಷ್ಟೆಷ್ಟೋ ಜನಗಳಿಗೆ 

ಎಲ್ಲರ ಸಮದಾರಿಗೆ ನಿಲ್ಲುವ 

ಸ್ಥೈರ್ಯವೇ ಇಲ್ಲ.


ಅದೆಂತಾಯ್ತೋ ತಾನೇ ತಾನಾಗಿ 

ಅರಸಿ ಬಂದಿದೆ ನಿನಗೀ ಭೋಗ.

ಬಿಡು ಚಿಂತೆಯ 

ಬಾಹ್ಯದ ಜಗದ ಜಾಗರವ,

ಅರಿ ನಿನ್ನ ಬಾಳ್ಬಲವ

ಅಲ್ಲೇ ಇದೆ ನಿನ್ನ ಗೆಲುವು.

-o-

ಶುಕ್ರವಾರ, ಆಗಸ್ಟ್ 14, 2020

ಸಾಮಾಜಿಕ ಜಾಲತಾಣಗಳು - ವರ್ಚುಯಲ್ ವರ್ಲ್ಡ್

ಮೊನ್ನೆ ಮೊನ್ನೆವರೆಗೂ ಟ್ವಿಟ್ಟರ್, ಫೇಸ್ ಬುಕ್ ಗಳಲ್ಲಿ ದಿನಕ್ಕೆ ಹತ್ತು ಸಲವಾದರೂ ಕಾಣಿಸಿಕೊಳ್ಳುತ್ತಿದ್ದ ನಾನು ಈ ಎಲ್ಲದರಿಂದಲೂ ಲಾಗ್ ಔಟ್ ಆಗಿ ಅವುಗಳ ಸಹವಾಸವೇ ಬೇಡವೆಂದು ದೂರ ಉಳಿದಿದ್ದೇನೆ. ನನ್ನ ಪ್ರಕಾರ ಇದೀಗ ಈ ತಾಣಗಳು ಬಳಕೆಯಾಗುತ್ತಿರುವುದು ಮಾಹಿತಿ ವಿನಿಮಯದ ಸೋಗಿನಲ್ಲಿ ತಮ್ಮ ಐಡಿಯಾಲಜಿಗಳನ್ನ ಅವರಿವರ ಮೇಲೆ ಹೇರುವುದಕ್ಕಾಗಿ. ಅಲ್ಲಿ ಎಲ್ಲ ತರಹದ ನಿಲುವುಗಳನ್ನು ವಿರೋಧಿಸುವ ಜನರಿದ್ದಾರೆ, ಯಾವುದೋ ವಿಚಾರ ತಮಗೆ ಗೊತ್ತಿಲ್ಲದಿದ್ದರೂ ಗೊತ್ತೆಂದು ತೋರ್ಪಡಿಸಿಕೊಳ್ಳುವರು, ಗೂಗಲ್ ಯೂನಿವರ್ಸಿಟಿಯಲ್ಲಿ ಕ್ಷಣ ಮಾತ್ರದಲ್ಲಿ ಪಾಂಡಿತ್ಯ ಸಂಪಾದನೆ ಮಾಡಿದವರು, ಗಾಳಿ ಬಂದೆಡೆಗೆ ತೂರಿಕೊಳ್ಳುವ ಸಿದ್ಧಾಂತಗಳೇ ಇಲ್ಲದವರು, ವಿಚಾರದ ಪೂರ್ವಾಪರ ತಿಳಿಯದೆ ಲೈಕ್ ಬಟನ್ ಕುಕ್ಕುವರು, ಸುಳ್ಳು ಸುದ್ದಿ ಹರಡುವರು, ಇನ್ನು ಎಂತೆಂತವರು ಬೇಕು ಹೇಳಿ?ಎಲ್ಲರೂ ಅಲ್ಲಿದ್ದಾರೆ!.  

2019ರ ಫೆಬ್ರವರಿ ತಿಂಗಳಲ್ಲಿ ಪುಲ್ವಾಮಾ ದಲ್ಲಿ ಭಾರತೀಯ ಯೋಧರ ಮೇಲೆ ದಾಳಿಯಾಗಿ ದೇಶದಾದ್ಯಂತ ಸಂಚಲನ ಸೃಷ್ಟಿಯಾಗಿದ್ದ ಸಂದರ್ಭ ಅದು. 370ನೆ ವಿಧಿಯನ್ನ ಕೈ ಬಿಟ್ಟು ಬಿಡಬೇಕೆಂಬ ದೊಡ್ಡ ಕೂಗು ದೇಶದಾದ್ಯಂತ ಎದ್ದು ಬಿಟ್ಟಿತ್ತು. ನನ್ನ ಟ್ವಿಟ್ಟರ್ ಸ್ವಘೋಷಿತ ಬುದ್ಧಿಜೀವಿ ಮಿತ್ರನೊಬ್ಬ ತಾನೂ ಅಲ್ಲಿ ದನಿಗೂಡಿಸಿದ. ವಿಧಿ 370ನ್ನ ರದ್ದು ಮಾಡಲು ಇದುವರೆಗೂ ಬಂದ ಸರ್ಕಾರಗಳು ವಿಫಲವಾಗಿರುವುದರ ಬಗ್ಗೆ ಸುಮಾರು ಒಂದು ತಿಂಗಳು ಸರಣಿ ಟ್ವೀಟುಗಳನ್ನ ಕುಟ್ಟಿದ ಅವನು. ಮುಂದೆ ಅದೇ ಆಗಸ್ಟ್ ನಲ್ಲಿ 370ನೆ ವಿಧಿ ಕೈಬಿಡಲು ಸರ್ಕಾರ ತೀರ್ಮಾನ ಮಾಡಿ ಲೋಕಸಭೆ, ರಾಜ್ಯಸಭೆಗಳಲ್ಲಿ ಅಂಗೀಕಾರಕ್ಕೆ ಕಳುಹಿಸಿಕೊಟ್ಟಾಗ ಮತ್ತೆ ಅದೇ ಮಿತ್ರ ಟ್ವಿಟ್ಟರ್ ನಲ್ಲಿ ಸರ್ಕಾರದ ಆ ನಿಲುವಿನ ವಿರುದ್ಧ ರೊಚ್ಚಿಗೆದ್ದ. ಅದು ಜಮ್ಮು ಕಾಶ್ಮೀರಕ್ಕೆ ಕೊಟ್ಟಿದ್ದ ಮಾತು ತಪ್ಪಿದಂತೆ ಅಂತಲೂ, ವಿಧಿ 370 ರದ್ದು ಮಾಡಿದ ಸರ್ಕಾರ ಇತರ ರಾಜ್ಯಗಳ ಹಕ್ಕುಗಳನ್ನೂ ಕಸಿದುಕೊಳ್ಳಲು ಹಿಂದೂ ಮುಂದು ನೋಡುವುದಿಲ್ಲವೆಂದು ಲೇಖನಗಳನ್ನ ಬರೆದು ಪ್ರಕಟಿಸಿದ. ಅದೇ ಫೆಬ್ರವರಿಯಲ್ಲಿ ಮಾಡಿದ್ದ ಸರಣಿ ಟ್ವೀಟುಗಳನ್ನು ಅಳಿಸಿಹಾಕಿಬಿಟ್ಟಿದ್ದ ಮಹಾಶಯ. 

ಮೇಲ್ನೋಟಕ್ಕೆ ಯಾವುದೋ ಒಂದು ಸರ್ಕಾರವನ್ನ ಟಾರ್ಗೆಟ್ ಮಾಡಿರುವ ಇಂತಹವರ ವರಾತ ಬಯಲಾಗುತ್ತದೆ. ಇವುಗಳ ಹಿಂದೆ ಅನೇಕ ರಾಜಕೀಯ ಕಾರಣಗಳು ಇರುತ್ತವೆ ಅನ್ನುವುದು ಈಗ ಗುಟ್ಟೇನಲ್ಲ.

ಅದರ ಜೊತೆಗೆ ಇನ್ನೊಂದು ಉದಾಹರಣೆ,  ಕರ್ನಾಟಕದಲ್ಲಿ ರಾಜಕೀಯವಾಗಿ ತುಂಬಾ ಸಕ್ರಿಯವಾಗಿರುವ ಜಿಲ್ಲೆಯೊಂದರ  ಯಾವುದೋ ಒಂದು ಊರಿನಿಂದ  ಬೆಂಗಳೂರಿಗೆ ಕೆಲಸ ಮಾಡಲು ಬಂದ ಬುದ್ಧಿಜೀವಿಯೊಬ್ಬ 23ರ ಹೊಸ್ತಿಲಲ್ಲಿದ್ದ. ಒಂದು ವರ್ಷ ಪರ್ಯಂತ ಪ್ರತೀ ಹತ್ತು ಹದಿನೈದು ನಿಮಿಷಗಳಿಗೊಂದು ಟ್ವೀಟ್ ಆತನಿಂದ ಬರುತ್ತಿತ್ತು. ಆತ ಬೆಂಗಳೂರಿಗೆ ಕೆಲಸಕ್ಕೂ ಬರುವ ಮೊದಲೇ ಭರ್ಜರಿ ಫೋನ್ ಒಂದನ್ನು ತನ್ನ ತಂದೆಯಿಂದ ಪಡೆದುಕೊಂಡು ಬಂದಿದ್ದ. ಟ್ವಿಟ್ಟರ್ ನಲ್ಲಿ ಆ ಪಾಟಿ ಬ್ಯುಸಿ ಆಗಿದ್ದ ಅವನು ಒಂದು ದಿನ ಇಲ್ಲಿ ಕೆಲಸ ಕಷ್ಟ ಅಂತ ಸಬೂಬು ಹೇಳಿ ಬೆಂಗಳೂರಿನಿಂದ ಕಾಲ್ಕಿತ್ತು ತನ್ನೂರಿಗೆ ಹೊರಟು ಹೋದ. ತನ್ನ ತಂದೆಯಿಂದಲೇ ಕೆಲಸಕ್ಕೆ ಬಾರದವನೆಂದು ಬೈಸಿಕೊಂಡರೂ ತಲೆ ಕೆಡಿಸಿಕೊಳ್ಳದ ಅವನು ಅನಂತರ  24 ಘಂಟೆಯೂ ಟ್ವಿಟರ್ ನಲ್ಲಿ ಬ್ಯುಸಿ ಆದ. ಗೂಗಲ್ ಯೂನಿವರ್ಸಿಟಿಯಿಂದ ಗಂಟೆ ಮುಗಿಯುವುದರೊಳಗಾಗಿ ಸ್ವಘೋಷಿತ ಅರ್ಥಶಾಸ್ತ್ರಜ್ಞನಾದ ಆತ ದೇಶದ ಆರ್ಥಿಕತೆ ಹಳ್ಳ ಹಿಡಿದು ಹೋದ ಬಗ್ಗೆ ಪುಂಖಾನುಪುಂಖವಾಗಿ ಟ್ವೀಟುಗಳನ್ನು ಬರೆದ. ದೇಶದ ಅರ್ಥ ವ್ಯವಸ್ಥೆಯ ಬಗ್ಗೆ ಸ್ವಲ್ಪವೂ ಅರಿವಿಲ್ಲದವರು ಸರ್ಕಾರ ನಡೆಸುತ್ತಿದ್ದಾರೆಂದು ಬೊಂಬಡಾ ಬಜಾಯಿಸಿದ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಪ್ರಧಾನಿಯವರನ್ನು ಏಕವಚನದಲ್ಲಿ ಸಂಭೋದಿಸಿ ಟ್ವೀಟುಗಳನ್ನು ಬರೆದ. ವ್ಯವಸ್ಥೆಯೊಂದನ್ನು ವಿರೋಧ ಮಾಡುವ ಹಕ್ಕು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಾಮಾನ್ಯ, ಆದರೆ ದೇಶದ ಬಹು ಸಂಖ್ಯಾತರು ಆರಿಸಿದ ಪ್ರಧಾನಿಯವರನ್ನು ಏಕವಚನದಲ್ಲಿ ಸಂಭೋದಿಸುವುದು ಆತ ಬೆಳೆದುಬಂದ ಹಿನ್ನೆಲೆಯನ್ನು, ಆಚಾರವನ್ನೇ ಎತ್ತಿ ತೋರಿಸುತ್ತದೆ. ತನ್ನ ಅರ್ಥ ವ್ಯವಸ್ಥೆಯನ್ನೇ ಸರಿದೂಗಿಸಲಾರದ ಮಹಾಶಯ ದೇಶದ ಅರ್ಥ ವ್ಯವಸ್ಥೆ ಬಗ್ಗೆ ತಲೆ ಕೆಡಿಸಿಕೊಂಡಿದ್ದ. ಎಷ್ಟೋ ದಿನಗಳಾದ ಮೇಲೆ ಅವರ ಊರಿನವನೇ ಒಬ್ಬ ಹುಡುಗ ಆತನ ವರ್ತನೆಗಳನ್ನೆಲ್ಲ ಟ್ವಿಟ್ಟರಿನಲ್ಲಿ ಜಗಜ್ಜಾಹೀರು ಮಾಡಿದ್ದ.

ಇತ್ತೀಚಿಗೆ ಸ್ನೇಹಿತರೊಬ್ಬರೊಂದಿಗೆ ಹರಟುತ್ತಾ ಇಂತಹುದೇ ಒಂದು ವಿಷಯ ಬಂತು. ಕರ್ನಾಟಕದ ಬಹು ಮುಖ್ಯವಾದ ವಿಷಯವೊಂದರ ಬಗ್ಗೆ ಟ್ವೀಟ್ ಮಾಡಿದ್ದರಂತೆ ಅವರು. ಒಂದೇ ದಿನದ ಅವಧಿಯಲ್ಲಿ 400ಕ್ಕೂ ಮೀರಿ ಶೇರ್ ಗಳನ್ನೂ 2300ಕ್ಕೂ ಮೀರಿ ಲೈಕ್ ಗಳನ್ನೂ ಪಡೆದುಕೊಂಡಿತಂತೆ ಆ ಟ್ವೀಟ್. ಯಾವತ್ತೂ ಅಷ್ಟೊಂದು ಪ್ರತಿಕ್ರಿಯೆ ಕಾಣದ ಆತ ಮರು ದಿನ ಅದಕ್ಕಾಗಿ ಬೆಂಗಳೂರಿನ ಯಾವುದೋ ಒಂದು ಕಡೆ ಸೇರಿ ಸಭೆ ನಡೆಸಿ ಏನಾದರೂ ನಿಲುವು ತೆಗೆದುಕೊಳ್ಳಲು ಮತ್ತೊಂದು ಟ್ವೀಟ್ ಮಾಡಿದನಂತೆ.ಅದನ್ನು ಅನುಸರಿಸಿ ಬಂದ ಜನರನ್ನು ಬಿಡಿ,  ಅದಕ್ಕೆ ಬಂದ ಲೈಕ್ ಗಳ ಸಂಖ್ಯೆ 2 ದಿನವಾದರೂ 30 ದಾಟಿರಲಿಲ್ಲವಂತೆ. ಲೈಕು ಬೇಕಾದರೆ ಒತ್ತುವ ಆದರೆ ನಿಜವಾದ ಕಾರ್ಯಕ್ಕೆ ತಲೆ  ಕೊಡದ ಸಾಮಾಜಿಕ ಜಾಲತಾಣಗಳು ವರ್ಚುಯಲ್ ವರ್ಲ್ಡ್ ಗಳಾಗಿ  ಬದಲಾಗುತ್ತಿರುವುದಕ್ಕೆ ಹಸಿ ಹಸಿ ಸಾಕ್ಷಿ ಇದು.

ಆ ವರ್ಚುಯಲ್ ವರ್ಲ್ಡ್ ನಲ್ಲಿ ಬಾರಿ ಬ್ಯುಸಿ ಆಗಿರುವವರಿಗೆ ನಿಜವಾದ ಪ್ರಪಂಚದ ವಸ್ತು ಸ್ಥಿತಿಯೂ ಗೊತ್ತಿರುವುದಿಲ್ಲ, ಅದನ್ನು ತಿಳಿದುಕೊಳ್ಳಲು ನಿಜವಾದ ಪ್ರಪಂಚಕ್ಕಿಳಿಯುವ ಕೆಲಸವನ್ನೂ ಅವರು ಮಾಡುವುದಿಲ್ಲ. ಹಣ ಬಲದಿಂದಾಗಿ ದೇಶ ಸುತ್ತಲು ಹೊರಡುವ ಅದೇ ಮಂದಿ ದೇಶದ ಪರಿಸ್ಥಿತಿ ಅರ್ಥ ಮಾಡಿಕೊಳ್ಳುವುದಕ್ಕಿಂತ ಫೇಸ್ ಬುಕ್ಕಿಗೆ ಫೋಟೋಗಳಿಗಾಗಿ ಫೋಸು ಕೊಡುತ್ತಾ ಸೆಲ್ಫಿ ತೆಗೆಯುವದರಲ್ಲಿ ನಿರತರಾಗಿರುತ್ತಾರೆ. ಅವರಿಗೆ ರಸಾಸ್ವಾದನೆಯಾಗಲಿ, ಸಮಸ್ಯೆಯಾಗಲಿ ನೇರವಾಗಿ ಅನುಭವಿಸಲು ಸಾಧ್ಯವಿಲ್ಲ, ವರ್ಚುಯಲ್ ವರ್ಲ್ಡ್ ಮುಖಾಂತರವೇ ಅನುಭವಿಸುತ್ತಾರೆ. 

ಬೇರೆ ಸಮಸ್ಯೆ,  ರಸಾನುಭೂತಿ ಬಗ್ಗೆ ಬಿಡಿ, ತಮ್ಮ ಜೀವನವನ್ನೇ ವೈಭವೀಕರಿಸಿ ಸಾಮಾಜಿಕ ತಾಣಗಳಲ್ಲಿ ಪ್ರದರ್ಶನಕ್ಕಿಡುವುದು ಆಧುನಿಕ ಜೀವನದ ಭಾಗವೇ ಆಗಿ ಹೋಗಿದೆ. ಎಷ್ಟೋ ಜನರ ಜೀವನವೇ ಕಿತ್ತು ಲಬ್ಬಂಡೆದ್ದು ಹೋಗಿರುತ್ತದೆ, ಆದರೆ ಅವರ ಫೇಸ್ ಬುಕ್ಕಿನ ಫೋಟೋಗಳು ಮಾತ್ರ ವಿಲಾಸಿ ಜೀವನ ನಡೆಸುವ ಆಗರ್ಭ ಶ್ರೀಮಂತರಂತೆ ತೋರುವುದು ಫ್ಯಾಷನ್ ಹುಚ್ಚು, ಧನಾತ್ಮಕ ಮನಸ್ಥಿತಿ ಎಂದುಕೊಂಡರೆ ನಾವೇ ಮೂರ್ಖರು. 

ಸಾಮಾಜಿಕ ಜಾಲತಾಣದಲ್ಲಿ ಕಾಣುವ ಎಲ್ಲರ ಜೀವನ ಕೇವಲ ಅವರ ಚೆಂದದ ತಳುಕಿನ ಭಾಗ ಮಾತ್ರ, ಮತ್ತೊಂದು ಭಾಗ ಪ್ರದರ್ಶನಕ್ಕೆ ಲಭ್ಯವಾಗುವುದಿಲ್ಲ.
ಸಾಮಾಜಿಕ ಜಾಲತಾಣದಲ್ಲಿ ಕಾಣುವ ಎಲ್ಲರ ಜೀವನ ಕೇವಲ ಅವರ ಚೆಂದದ ತಳುಕಿನ ಭಾಗ ಮಾತ್ರ, ಮತ್ತೊಂದು ಭಾಗ ಪ್ರದರ್ಶನಕ್ಕೆ ಲಭ್ಯವಾಗುವುದಿಲ್ಲ.


ಕೆಲವು ವರ್ಷಗಳ ಹಿಂದೆ ಭಾನುವಾರದ ದಿನಪತ್ರಿಕೆ ಅಂಕಣಗಳಲ್ಲಿ ಪೊಲೀಸ್ ಕಥಾನಕಗಳನ್ನು ಓದುವಾಗ ಒಂದು ನಿಜವಾಗಿ  ನಡೆದ ಘಟನೆ ಸಿಕ್ಕಿತ್ತು. ಕರ್ನಾಟಕದ ಉದ್ಯಮಿಯೊಬ್ಬರ ಮಗಳು ತನ್ನ ಪ್ರಿಯತಮನೊಡನೆ ಸೇರಿ ಬಚ್ಚಲಿನಲ್ಲಿ ಸ್ನಾನ ಮಾಡುತ್ತಿದ್ದ ತನ್ನ ತಂದೆಯನ್ನೇ ಉಸಿರುಗಟ್ಟಿಸಿ ಸಾಯಿಸಿಬಿಟ್ಟಿದ್ದಳಂತೆ. ಅದೇ ಹುಡುಗಿ ಆ ಘಟನೆಗೂ ವರ್ಷ ಮುಂಚೆ ಫೇಸ್ ಬುಕ್ಕಿನಲ್ಲಿ ಫಾದರ್ಸ್ ಡೇ ಶುಭ ಸಂದೇಶಗಳನ್ನ ಬರೆದುಕೊಂಡಿದ್ದಳಂತೆ. 

ಈ  ಸಾಮಾಜಿಕ ಜಾಲತಾಣಗಳನ್ನೇ ಮನಸ್ಸಿಗೆ ಹಚ್ಚಿಕೊಂಡು ಬೇರೆಯವರೊಂದಿಗೆ ತಮ್ಮನ್ನು ಹೋಲಿಸಿ ನೋಡಿಕೊಳ್ಳುವರು, ಅದರಿಂದ ಮಾನಸಿಕ ಖಿನ್ನತೆಗೆ ಒಳಗಾಗುವರೂ ನಮ್ಮ ದೇಶದಲ್ಲಿ ಕಡಿಮೆಯೇನಿಲ್ಲ. ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು 'ಏನಕೇನ ಪ್ರಕಾರೇಣಾ.....' ಅನ್ನುವಂತೆ ರಾತ್ರೋ ರಾತ್ರಿ ಹೆಸರು ಮಾಡಿಬಿಡಲು ತುದಿಗಾಲಲ್ಲಿ ನಿಂತಿರುವವರೂ ಕಡಿಮೆಯೇನಿಲ್ಲ. ಇದಿಷ್ಟೇ ಅಲ್ಲದೆ ಆಗಾಗ ಕೋಮು ಗಲಭೆ ಸೃಷ್ಟಿಸುವ, ಶಾಂತಿ ಕದಡುವ,  ಬೆದರಿಕೆ ಹಾಕುವ, ಹೀಯಾಳಿಸುವ ಇನ್ನೂ ಮುಂತಾದ ಋಣಾತ್ಮಕ ಕಾರ್ಯಗಳಿಗೆ ನಮ್ಮ ದೇಶದಲ್ಲಿ ಈ ತಾಣಗಳು ಅನೇಕ ರೀತಿ ಸಹಕಾರಿಯಾಗಿ ಪರಿಣಮಿಸಿವೆ. ಒಳ್ಳೆಯ ಉದ್ದೇಶವೊಂದಕ್ಕೆ ಕಂಡು ಹಿಡಿದ ತಂತ್ರಜ್ಞಾನ ಬಳಕೆಯಾಗುತ್ತಿರುವುದು ಹೀಗೆ!!. ಇದು ನಮ್ಮ ದುರಾದೃಷ್ಟವಲ್ಲದೆ ಮತ್ತೇನು?.

ಅವಿದ್ಯಾವಂತರು ಈ ನಿಟ್ಟಿನಲ್ಲಿ ಎಡವಿದ್ದರೆ ತಡೆದುಕೊಳ್ಳಬಹುದಿತ್ತೇನೋ ಅಥವಾ ತಿದ್ದಿ ಹೇಳಬಹುದ್ದಿತ್ತೇನೋ, ಆದರೆ ವಿದ್ಯಾವಂತರೇ ಹೀಗೆ ಮಾಡಿಬಿಟ್ಟರೆ ಮಾಡುವುದೇನನ್ನು?. ಧರೆಯೆ ಹೊತ್ತಿ ಉರಿಯುವಾಗ ಓಡುವುದೆಲ್ಲಿಗೆ ಬದುಕಲಿಕ್ಕೆ??

-o-

ಗುರುವಾರ, ಜುಲೈ 23, 2020

ಶೂನ್ಯದಿಂದೇಳಲು ಇರುವ ಮಾರ್ಗವೊಂದೇ

2009ರ ಜನವರಿಯಲ್ಲಿ ಇದ್ದಕಿದ್ದಂತೆ ಭಾರತದ ಹೃದ್ರೋಗ ತಜ್ಞರೊಬ್ಬರು ಭಾರತದ ದಿನ ಪತ್ರಿಕೆಗಳಲ್ಲಿ ಮಿಂಚಲಾರಂಭಿಸಿದರು. ಎಲ್ಲ ಸುದ್ದಿ ವಾಹಿನಿಗಳ ಕೆಲವು ದಿನಗಳ ಕೇಂದ್ರ ಬಿಂದು ಅವರಾಗಿದ್ದರು. ಅವರು ಮತ್ತಿನ್ಯಾರು ಅಲ್ಲ ಒಡಿಶಾದ ಡಾ.ರಮಾಕಾಂತ ಪಾಂಡೆಯವರು. ಅವರು ಅಷ್ಟೊಂದು ಪ್ರಸಿದ್ಧಿಗೆ ಬರಲು ಕಾರಣ ಅವರು ಅಂದಿನ ಭಾರತದ ಪ್ರಧಾನ ಮಂತ್ರಿ ಡಾ.ಮನ್ ಮೋಹನ್ ಸಿಂಗ್ ಅವರ ಹೃದಯ ಶಸ್ತ್ರ ಚಿಕಿತ್ಸೆಯ ತಂಡವನ್ನ ಯಶಸ್ವಿಯಾಗಿ ಮುನ್ನಡೆಸಿದ್ದು. 

ಅದಾದ ತರುವಾಯು ಭಾರತದ ಹೈ ಪ್ರೊಫೈಲ್ ಮಂದಿಗೆಲ್ಲ ಹೃದ್ರೋಗ ವಿಚಾರದಲ್ಲಿ ಖಾಯಂ ವೈದ್ಯರಂತಾಗಿ ಹೋದರು ಅವರು. ಆ ಸಮಯಕ್ಕೆ ಭಾರತದ ಎಷ್ಟೋ ವೃತ್ತ ಪತ್ರಿಕೆಗಳು ಅವರ ಕುರಿತಾಗಿ ಲೇಖನಗಳನ್ನ ಬರೆದು ಪ್ರಕಟಿಸಿದ್ದವು. 

ಡಾ.ಮನ್ ಮೋಹನ್ ಸಿಂಗ್ ಅವರೊಂದಿಗೆ ಡಾ.ರಮಾಕಾಂತ್ ಪಾಂಡಾ
ಡಾ.ಮನ್ ಮೋಹನ್ ಸಿಂಗ್ ಅವರೊಂದಿಗೆ ಡಾ.ರಮಾಕಾಂತ್ ಪಾಂಡಾ

ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಲ್ಲಿ, ಮಿತವಾದ ಹಣಕಾಸು ವ್ಯವಸ್ಥೆಯ ಮಧ್ಯಮ ಕುಟುಂಬದ ಹಿಂದುಳಿದ ಗ್ರಾಮೀಣ ಪ್ರದೇಶದಲ್ಲಿ ಜನಿಸಿದ ರಮಾಕಾಂತರು ತಮ್ಮೂರಿನಲ್ಲಿ ಶಾಲೆಯಿಲ್ಲದೆ ಎರಡು ಮೈಲಿ ದೂರದ ಶಾಲೆಗೆ ನಡೆದುಕೊಂಡೇ ಹೋಗಿ ಬರುತ್ತಾ ಇಡೀ ಭಾರತವೇ ಮೆಚ್ಚುವಂತಹ, ಪ್ರಧಾನಿಗಳಿಗೆ ಹೃದಯ ಶಸ್ತ್ರ ಚಿಕಿತ್ಸೆ ಮಾಡುವಂತಹ ಎತ್ತರಕ್ಕೆ ಬೆಳೆದಿದ್ದು ಅನೇಕ ಕಷ್ಟ ಕೋಟಲೆಗಳನ್ನು ಎದುರಿಸಿದ ನಂತರವೇ.  ಅವರ ಅನೇಕ ಕಷ್ಟ ಕೋಟಲೆಗಳ ಬಗ್ಗೆ ತಿಂಗಳಾನುಗಟ್ಟಲೆ ಪತ್ರಿಕೆಯಲ್ಲಿ ಬರುತ್ತಲೇ ಇತ್ತು. ಯಾವುದೋ ಮಾಧ್ಯಮದವರು ಅವರ ಮುಂದೆ ಮೈಕು ಹಿಡಿದು ಅವರ ಕಷ್ಟದ ಹಿನ್ನೆಲೆಯ ಬಗ್ಗೆ ವಿಚಾರಿಸಿದಾಗ 'ಎಲ್ಲರೂ ಕಷ್ಟ ಪಟ್ಟೇ ಮೇಲೇರಬೇಕು, ಇಲ್ಲದಿದ್ದರೆ ಅವರು ಏರಿದ ಸ್ಥಾನಕ್ಕೆ ಬೆಲೆಯೇ ಇರುವುದಿಲ್ಲ' ಎಂದುಬಿಟ್ಟರು. ತಾವು ಪಟ್ಟ ಕಷ್ಟವನ್ನು ಧಾರಾವಾಹಿಗಳಂತೆ ಮಸಾಲೆ ಬೆರೆಸಿ ಪ್ರದರ್ಶನಕ್ಕಿಟ್ಟು ಜನರ ಅನುಕಂಪ ಗಿಟ್ಟಿಸಿಕೊಂಡು ಟೋಪಿ ಹಾಕುತ್ತಿರುವರೇ ಹೆಚ್ಚಿರುವ ಈ ಯುಗಮಾನದಲ್ಲಿ ಡಾ.ಪಾಂಡಾ ಹೇಳಿದ ಈ ಮಾತು ಅತ್ಯಂತ ಮೌಲ್ಯ ಪಡೆದುಕೊಳ್ಳುತ್ತದೆ.

ಈ ವಿಚಾರವನ್ನಿಲ್ಲಿ ಪ್ರಸ್ತಾವನೆ ಮಾಡಲು ಕಾರಣವಿಷ್ಟೇ, ಕಳೆದೊಂದು ವಾರದಿಂದ ಕರ್ನಾಟಕದಲ್ಲಿ ಕೋವಿಡ್ ಗಲಾಟೆಗಿಂತಲೂ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದದ್ದು ಡ್ರೋನ್ ಮಾಡಿದ್ದೇನೆ ಎಂದು ಹೇಳಿಕೊಂಡು ತಿರುಗುತ್ತಿದ್ದ ಸ್ವಘೋಷಿತ ಯುವ ವಿಜ್ಞಾನಿ ಪ್ರತಾಪ್ ಅಲಿಯಾಸ್ ಡ್ರೋನ್ ಪ್ರತಾಪ್.

ಜರ್ಮನಿಯ ಹ್ಯಾನೋವರ್ ನಲ್ಲಿ ಅನ್ಯರ ಡ್ರೋನ್ ಜೊತೆಗೆ ಸ್ವಘೋಷಿತ ಯುವ ವಿಜ್ಞಾನಿ ಪ್ರತಾಪ್

ಜಪಾನು, ಜರ್ಮನಿಯಂತಹ ತಾಂತ್ರಿಕವಾಗಿ ಹೆಚ್ಚಿನ ತಾಂತ್ರಿಕ ನಿಷ್ಣಾತರಿರುವ ದೇಶಗಳಲ್ಲಿ ನಡೆಯುವ ವಿಜ್ಞಾನ, ತಂತ್ರಜ್ಞಾನ ಕೂಟಗಳಲ್ಲಿ ಪಾಲ್ಗೊಂಡು ಸ್ವರ್ಣ ಪದಕ ಗೆದ್ದಿರುವುದಾಗಿ, ಹಾಗು ಫ್ರಾನ್ಸ್ ನಂತಹ ದೇಶವೇ ಪೌರತ್ವ ಕೊಡಲು ಮುಂದಾಗಿಬಿಟ್ಟಿದೆ ಎನ್ನುವಂತಹ ಹಸಿ ಸುಳ್ಳುಗಳನ್ನು ಹೇಳುತ್ತಾ, ರಾಜ್ಯ ಹಾಗು ಕೇಂದ್ರ ಸರ್ಕಾರದ ಮಂತ್ರಿಗಳಾದಿಯಾಗಿ ಎಲ್ಲರಿಗೂ ಟೋಪಿ ಹಾಕಿದ್ದ ಪ್ರತಾಪನ ನಿಜವಾದ ಬಣ್ಣ ಬಟಾ ಬಯಲಾಗಿದೆ. ಈತನ ಬಣ್ಣ ಬಯಲಾದುದಕ್ಕೆ ಸಂತೋಷ ಪಡುವ ಅಗತ್ಯವೇನಿಲ್ಲ, ಆದರೆ ಅದೆಷ್ಟೋ ನವೋದಯ ಲೇಖಕರಿಗೂ, ವಿಜ್ಞಾನಿಗಳಿಗೂ, ಉದ್ಯಮಿಗಳಿಗೂ ಈತನ ಈ ಹಗರಣದಿಂದ ಅನುಮಾನ ಮೂಡುವ ಹಾಗಾಗಿದೆ. ಯಾರೇ ಸಹಾಯ ಯಾಚಿಸಿ ಬಂದರು ಅವರು ಒಂದು ಹೆಜ್ಜೆ ಹಿಂದೆ ಇಡಬೇಕಾದದಂತಹ ಪರಿಸ್ಥಿತಿ ಬಂದೊದಗಿದೆ. ನಂಬಿಸಿ ಟೋಪಿ ಹಾಕುವ ಪ್ರತಾಪನಂತಹವರ ಉದಾಹರಣೆ ಕಣ್ಣ ಮುಂದೆಯೇ ಇರುವಾಗ ಕೊಡುಗೈ ದಾನಿಗಳೂ ಹಿಂದೇಟು ಹಾಕುವುದು ಸಹಜ.

ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ಈ ಪ್ರತಾಪನ ಮೋಡಿಗಳನ್ನು ಬಯಲಿಗೆಳೆದಾಗಲೂ ಆತ ತಪ್ಪೊಪ್ಪಿಕೊಳ್ಳಲಿಲ್ಲ. ಬದಲಾಗಿ ಸುಳ್ಳುಗಳನ್ನು ಮುಚ್ಚಿಹಾಕಲು ಮತ್ತಷ್ಟು  ಸುಳ್ಳುಗಳನ್ನು ಒಂದಕ್ಕೊಂದು ಸೇರಿಸಿ ಹೆಣೆದ. ತಪ್ಪಾಗಿದ್ದೆ ಅಲ್ಲಿ. ಈ ಡಿಜಿಟಲ್ ಯುಗಮಾನದಲ್ಲಿ ಸುಳ್ಳುಹೇಳಬೇಕಾದರೆ ಭಾರಿ ಜ್ಞಾಪಕ ಶಕ್ತಿಯಿರಬೇಕು, ಇಲ್ಲದಿದ್ದರೆ ಜಗತ್ತಿನ ಎದುರು ಮಾನ ಹರಾಜಾಗುತ್ತದೆ ಎನ್ನುವುದಕ್ಕೆ ನಕಲಿ ವಿಜ್ಞಾನಿ ಪ್ರತಾಪನೇ ಬಿಸಿ ಬಿಸಿ ಉದಾಹರಣೆ.

ನಕಲಿ ಪ್ರಶಸ್ತಿಪತ್ರಗಳನ್ನು ಹಿಡಿದುಕೊಂಡೆ ಟಿ.ವಿ ಚಾನೆಲ್ ಒಂದಕ್ಕೆ ದೌಡಾಯಿಸಿದ ಆತ ಜೆರ್ಮನಿಯ ಯಾವುದೋ ಕಂಪನಿಯ ಡ್ರೋನ್ ಒಂದನ್ನು ತೋರಿಸಿ ಅದನ್ನು ತಾನೇ ಮಾಡಿದ್ದಾಗಿ ಘಂಟಾ ಘೋಷವಾಗಿ ಸಾರಿಬಿಟ್ಟ. ತನ್ನ ಸುಳ್ಳುಗಳೆಲ್ಲವೂ ಸತ್ಯವೆಂದು ಸತ್ಯದ ತಲೆ ಮೇಲೆ ಹೊಡೆದ ಹಾಗೆ ಹೇಳಿದ. ನಡುನಡುವೆ ತಾನು ಉತ್ಪ್ರೇಕ್ಷೆಯಿಂದ ಕೆಲವು ಸಂಖ್ಯೆಗಳನ್ನು ತಪ್ಪಾಗಿ ಹೇಳಿರುವುದಾಗಿ ಒಪ್ಪಿಕೊಂಡ. 

ನಾಟಕದಲ್ಲಿ ಅಭಿನಯಮಾಡಿ ರೂಢಿಯಿರುವರಿಗೆ ಮೈಕು ಸಿಕ್ಕಿದ ತಕ್ಷಣ ಡೈಲಾಗುಗಳು ತನ್ನಿಂತಾನೇ ಜ್ಞಾಪಕ ಬಂದುಬಿಡುತ್ತವಂತೆ, ಪ್ರೇಕ್ಷಕರು ಕೇಳಲಿ ಬಿಡಲಿ ಅವರ ಡೈಲಾಗುಗಳಲ್ಲಿ ಅವರು ತಲ್ಲೀನರಾಗಿಬಿಡುತ್ತಾರೆ. ಈ ಪ್ರತಾಪನೂ ಅಂತಹುದೇ ಒಂದು ಮಿಕವಲ್ಲದೇ ಮತ್ತಿನ್ನೇನು ಅಲ್ಲ. ಮೈಕು ಸಿಕ್ಕ ತಕ್ಷಣ ತಾನು ಪಡದ ಕಷ್ಟಗಳೆನ್ನೆಲ್ಲ ಪಟ್ಟೇ ಎಂದು ಬಿಂಬಿಸಿಕೊಂಡ. ಜನರ ಚಪ್ಪಾಳೆಗಳಿಗೆ ಮಾರುಹೋದ ಅವನು ಭಾರಿ ಸುಳ್ಳುಗಳನ್ನೇ ಹೇಳಿ ಮುಗಿಸಿದ. ಪೂರ್ವಾಪರ ಯೋಚಿಸದ, ತನಿಖೆ ಮಾಡದ ನಮ್ಮ ಜನ ಅವನನ್ನ ಬಿಗಿದಪ್ಪಿಕೊಂಡರು. ಎಷ್ಟೋ ಜನ ತಮ್ಮ ಮಕ್ಕಳಿಗೆ ಅವನ ಉದಾಹರಣೆ ಕೊಟ್ಟು ಬೈದದ್ದೂ ಉಂಟು. ಅಂದು ಪ್ರತಾಪನ ಉದಾಹರಣೆ ಕೊಟ್ಟು ಬೈದಿದ್ದವರೇ ಇಂದು ಅವನಂತಹ ಮಗ ಹುಟ್ಟದಿರುವುದು ನಮ್ಮ ಪುಣ್ಯ ಎಂದು ನಿಟ್ಟುಸಿರು ಬಿಡುತ್ತಿರುವುದೂ ಸುಳ್ಳಲ್ಲ.

ಈತ ಈಗ ಸಮಾಜಕ್ಕೆ ದಾಟಿಸುವ ಒಂದು ಕೆಟ್ಟ ಪರಿಪಾಠ ಮುಂದೆ ಯಾರು ಯಾರನ್ನೂ ನಂಬಲಾರದಂತಹ ಪರಿಸ್ಥಿತಿ ಸೃಷ್ಟಿ ಮಾಡಬಲ್ಲುದು. ತಮ್ಮ ಕಷ್ಟವನ್ನು ಪ್ರದರ್ಶನಕ್ಕಿಟ್ಟರೆ ನಮ್ಮನ್ನು ನಂಬುವ ಬಹಳ ಮಂದಿ ನಮ್ಮ ಸುತ್ತ ಮುತ್ತ ಇದ್ದಾರೆ ಎನ್ನುವುದು ಹಲವರ ಗಮನಕ್ಕೆ ಬಂದಿದೆ. ಅದರ ಜೊತೆಗೆ ಕಷ್ಟವೆಂದು ಹೇಳಿಕೊಂಡು ಬಂದವರನ್ನು ಪೂರ್ವಾಪರ ವಿಚಾರಣೆಗಳಿಲ್ಲದೆ ನಂಬಬಾರದೂ ಎನ್ನುವ ಅರಿವೂ ಬಂದಾಗಿದೆ. ಇದರ ಜೊತೆಗೆ ಡಾ.ರಮಾಕಾಂತ ಪಾಂಡಾ ಅವರು ಹೇಳಿದಂತೆ ಶೂನ್ಯದಿಂದೇಳಲು ಕಷ್ಟಪಡುವುದೊಂದೇ ಇರುವ ಮಾರ್ಗ. ಅದನ್ನು ಬಿಟ್ಟು ಬೇರೆ ಯಾವ ಮಾರ್ಗವೂ ಇಲ್ಲ. ಹಾಗೇನಾದರೂ ಅನ್ಯ ಮಾರ್ಗವೊಂದು ಯಾರಿಗಾದರೂ ಸಿಕ್ಕಿದ್ದೇ ಆದರೆ ಅದು ಬಹು ಕಾಲ ನಿಲ್ಲಬಲ್ಲ ಮಾರ್ಗವಾಗಿರುವುದಿಲ್ಲ. ಅದರಲ್ಲಿ ನಮ್ಮ ನಕಲಿ ವಿಜ್ಞಾನಿ ಪ್ರತಾಪ್ ಆಯ್ದುಕೊಂಡದ್ದು ಮಾತಿನ ಮೋಡಿಯ ಮಾರ್ಗ, ಆ ಮಾರ್ಗಕ್ಕೆ ಸಿಕ್ಕ ಬಹುಮಾನವನ್ನು ನೀವೀಗಾಗಲೇ ನೋಡಿದ್ದೀರಲ್ಲ! 

-o-

ಶುಕ್ರವಾರ, ಜೂನ್ 26, 2020

ಹಿಮ ಸ್ಮಶಾನ

ಇತ್ತೀಚಿಗೆ ಬ್ರಿಗೇಡಿಯರ್ ಜಾನ್ ಪಿ. ದಳವಿಯವರು ಬರೆದಿರುವ 'ದಿ ಹಿಮಾಲಯನ್ ಬ್ಲಂಡರ್'' ಓದುತ್ತಿದ್ದೆ. ನಾನು ಮಿಲಿಟರಿ ಇತಿಹಾಸವನ್ನಾಗಲಿ, ಕ್ರೀಡಾ ಇತಿಹಾಸವನ್ನಾಗಲಿ ಓದದ ವ್ಯಕ್ತಿ. ಸಾಂಪ್ರದಾಯಿಕ ಇತಿಹಾಸವನ್ನಷ್ಟೇ ಓದುತ್ತಿದ್ದ ನನಗೆ ಹಿಮಾಲಯನ್ ಬ್ಲಂಡರ್ ಓದುವಂತೆ ಅನೇಕ ರಾಷ್ಟ್ರಾಸಕ್ತ, ಸೈನ್ಯಾಸಕ್ತ ಮಿತ್ರರು ಹೇಳಿದ್ದರು. ಅದು ಮಹಾಯೋಧನೊಬ್ಬನು ಯುದ್ಧ ಭೂಮಿಯಲ್ಲಿ ತಾನು ಅನುಭವಿಸಿದ ನೋವನ್ನು ಜನರಿಗೆ ತಲುಪಿಸುವ, ಆಡಳಿತಗಾರರ ಭಯ, ಹಂಗು ಯಾವುದೂ ಇಲ್ಲದೆ ಬರೆದ ಪುಸ್ತಿಕೆ ಅಂತ ಕೇಳಿದ್ದೆನಾದ್ದರಿಂದ ಅದನ್ನು ಓದುವ ಮನಸ್ಸಾಯಿತು, ಓದಿಕೊಂಡೆ. ಮಹಾ ಸೇನಾನಿಯೊಬ್ಬ ಮೆಲ್ಲಗೆ ಕೈ ಹಿಡಿದುಕೊಂಡು ನಮ್ಮನ್ನು ಅರುಣಾಚಲದ ಹಿಮ ಪರ್ವತಗಳ ಮೇಲೆ ಹತ್ತಿಸಿ ಇಳಿಸಿದ ಅನುಭವವಾಯ್ತು. ಅದೇ ಸಮಯಕ್ಕೆ ನನ್ನ ಕೆಲವು ಗೆಳೆಯರಿಗೆ ನಾನು ಕಾಂಗ್ರೆಸ್ ಪಕ್ಷ ವಿರೋಧಿಯಂತೆ ಗೋಚರಿಸಿದೆ. ನಾನು ಈ ಪುಸ್ತಕ ಓದುತ್ತಿದ್ದುದು ತಿಳಿದುಕೊಂಡೆ ಕೆಂಡಾಮಂಡಲರಾಗಿದ್ದರು ಕೆಲವರು. ಇರಲಿ, ಪುಸ್ತಕವೊಂದು ಮನುಷ್ಯನ ಭಾವನೆಗಳಿಗೆ ಕೈ ಹಾಕಿದರೆ ಅದಕ್ಕಿಂತ ಖುಷಿ ಪಡುವ ಮತ್ತೊಂದು ವಿಚಾರ ಇಲ್ಲ ಅಲ್ಲವೇ. ಲೇಖಕ ಖುಷಿಯಾಗಿಬಿಡುತ್ತಾನೆ, ಆದರೆ ಇಂದು ದಳವಿ ಬದುಕುಳಿದಿಲ್ಲ, ಅವರ ಧ್ಯೇಯ ಖುಷಿ ಪಡುವುದು ಆಗಿಯೂ ಇರಲಿಲ್ಲ. ಭಾರತದ ರಾಜಕೀಯಕ್ಕೂ- ಸೈನ್ಯಕ್ಕೂ ತಾಳ ಮೇಳವಿಲ್ಲದ ಸಂಬಂಧವಿತ್ತು, ಅದರಿಂದಲೇ 1962ರ ಚೀನಾ ಅತಿಕ್ರಮಣದಲ್ಲಿ ಭಾರತಕೆ ಹಿನ್ನಡೆಯಾಯ್ತು ಎನ್ನುವುದನ್ನು ಯಾರಾದರೂ ಹೇಳಬೇಕಾಗಿತ್ತು, ಸಾಕ್ಷಾತ್ ಯುದ್ಧ ಭೂಮಿಯಲ್ಲಿ ನಿಂತು ನೋಡಿದ ದಳವಿ ಅದನ್ನು ಯಾವುದೇ ಅಳುಕಿಲ್ಲದೆ ಹೇಳಿ ಮುಗಿಸಿದರು. ಅಷ್ಟೇ.

ಯಾವಾಗಲೂ ಭಾರತದ ವಿರುದ್ಧ ಕತ್ತಿ ಮಸೆಯುವ ಪ್ರಮುಖ ರಾಷ್ಟ್ರಗಳೇ ಎರಡು. ಅದರಲ್ಲಿ ಪಾಕಿಸ್ತಾನದ ಅಧ್ಯಾಯವಂತೂ ತಿಳಿದದ್ದೇ, ಆದರೆ ಚೀನಾದ ಬಗ್ಗೆ ಈಗಲೂ ಭಾರತೀಯರು ಅನೇಕರಿಗೆ ಅರಿವಿಲ್ಲ. ನಮ್ಮ ಸಾಲು ಸಾಲು ಸರ್ಕಾರಗಳು ಇದನ್ನು ಜನರಿಗೆ ಅರ್ಥ ಮಾಡಿಸುವಲ್ಲಿ ಸೋತಿವೆ. ಹಾಗೆಂದೇನು ಅನ್ಯ ದೇಶದ ಮೇಲೆ ಸರ್ಕಾರ ತನ್ನ ಪ್ರಜೆಗಳನ್ನು ಎತ್ತಿಕಟ್ಟಬೇಕಿಲ್ಲ, ಸತ್ಯವನ್ನು ಅರುಹಿದ್ದರೆ ಸಾಕಾಗಿತ್ತು, ಅದನ್ನೂ ಮಾಡಿಲ್ಲವೆನ್ನುವುದು ಖೇದಕರ. ಭಾರತ ಈವತ್ತಿಗೂ ತನ್ನ ಪ್ರಜೆಗಳಿಗೆ ಗಡಿಯ ವಿಚಾರದಲ್ಲಿ ಅನೇಕ ವಿಚಾರಗಳನನ್ನು ಮುಚ್ಚಿಟ್ಟಿದೆ. ಅದರಲ್ಲೂ ಚೀನಾದೊಂದಿಗೆ ಹಂಚಿಕೊಂಡಿರುವ ಗಡಿಯ ವಿಚಾರದಲ್ಲಿ ಇನ್ನೂ ಅನೇಕ ಗೊಂದಲಗಳಿವೆ. ಈ ಗೊಂದಲಗಳಿಂದಾಗಿಯೇ ನಮ್ಮ ಸೈನಿಕರು ಚೀನಾ ಸೈನಿಕರೊಂದಿಗೆ ಹಲವಾರು ಬಾರಿ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ವಿಸ್ತರಣಾವಾದದ ಭೂತ ಹತ್ತಿಸಿಕೊಂಡಿರುವ ಚೀನಾ ಯಾವುದಕ್ಕೂ ಯಾರಿಗೂ ಬಗ್ಗದೆ ತನ್ನ ಸುತ್ತಲಿನ ಎಲ್ಲಾ ದೇಶಗಳ ಜೊತೆಗೂ ಗಡಿ ಸಂಘರ್ಷ ಹೊಂದೇ ಇದೆ.

ನಮ್ಮ ನೆರೆಯ ದೇಶಗಳ ವಿಷಯವೇನೇ ಇದ್ದರೂ ನಮ್ಮ ದೇಶಕ್ಕೆ ಸ್ವಾತಂತ್ರ್ಯ ರಕ್ತಪಾತವಿಲ್ಲದೆ ಬಂದಿದ್ದು ಸಂತೋಷಪಡುವ ವಿಚಾರ, ಆದರೆ ಅದೇ ಗುಂಗಿನಲ್ಲಿ ನಮ್ಮ ನೇತಾರರು ಸ್ವಾತಂತ್ರ್ಯದ ಬೆಲೆಯನ್ನೇ ಅರ್ಥ ಮಾಡಿಕೊಳ್ಳದಾದರು. ರಕ್ತಪಾತಗಳಾಗುವ ಸಾಧ್ಯಾಸಾಧ್ಯತೆ ನಮ್ಮ ನಾಯಕರಿಗೆ ಅರಿವಿಗೆ ಬರಲೇ ಇಲ್ಲ. ಶಾಂತಿಮಂತ್ರ, ತಟಸ್ಥ ಧೋರಣೆ, ಅಲಿಪ್ತ ನೀತಿಗಳೊಂದಿಗೆ ಇದ್ದರೆ ನಮ್ಮ ತಂಟೆಗೆ ಯಾರು ಬರಲಾರರು ಎಂಬ ಭ್ರಮಾ ಲೋಕ ಸೃಷ್ಟಿಸಿಕೊಂಡು ಕೂತರು. ಸ್ವಾತಂತ್ರ್ಯ ಕೊಡಿಸುವಲ್ಲಿ ಸಫಲವಾದ ಶಾಂತಿಮಂತ್ರ ಸ್ವಾತಂತ್ರ್ಯಾನಂತರದಲ್ಲಿ ಹಳ್ಳ ಹಿಡಿದು ಅನೇಕ ಅನಾಹುತಗಳನ್ನು ಸೃಷ್ಟಿಸಿದ್ದು ನಮಗೆಲ್ಲಾ ಗೊತ್ತೇ ಇದೆ. ಅವುಗಳ ಪೈಕಿ ಚೀನಾದ ಅತಿಕ್ರಮಣವೂ ಒಂದು. ಮನುಷ್ಯನೊಬ್ಬ ಒಳ್ಳೆಯವನಾಗಿ ಬದುಕಬೇಕಾದರೆ ಬರಿಯ ಒಳ್ಳೆಯತನವನ್ನು ನೆಚ್ಚಿಕೊಂಡು ಮಾತ್ರ ಕುಳಿತುಕೊಳ್ಳುವುದು ಎಂದೆಂದಿಗೂ ಸಾಲದು, ಕೆಟ್ಟವರಿಂದ ಸದಾ ದೂರವುಳಿಯುವ ಗರ್ವ, ಛಾತಿ ಅವನಿಗೆ ಇರಬೇಕು. ಅಷ್ಟಿರಬೇಕಾದರೆ ಕೆಟ್ಟದ್ದೇನೂ ಎನ್ನುವುದೂ ಅವನಿಗೆ ತಿಳಿದಿರಬೇಕು. ಭಾರತದ ವಿಚಾರದಲ್ಲಿ ಇದು ಹಾಗಲಿಲ್ಲ, ವಿರುದ್ಧವಾಗಿತ್ತು.ಈ ವಿಚಾರ ಸದರಿ ಪುಸ್ತಕದಲ್ಲೂ ವಿಸ್ತಾರವಾಗಿ ಹರಿಯುತ್ತದೆ.

ರಕ್ತಪಾತವಿಲ್ಲದೆ ಸ್ವಾತಂತ್ರ್ಯ ಬಂದ ಖುಷಿಗೋ ಎಂಬಂತೆ ನಮ್ಮವರು ಸ್ವಾತಂತ್ರ್ಯ ಬರುವ ಹೊತ್ತಿಗೆ ಭಾರತದ ಉಪಖಂಡ ಎಂದೆಂದೂ ಮರೆಯದ ದೇಶ ವಿಭಜನೆಯ ರಕ್ತಪಾತ ಮಾಡಿ ಮುಗಿಸಿಯಾಗಿತ್ತು. ಭಾರತೀಯರ ಮನಸ್ಥಿತಿಯನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದ್ದ ಬ್ರಿಟೀಷ್ ದೊರೆಗಳು 'ನಿಮ್ಮ ಕರ್ಮ' ಎಂದು ಕೈ ಕೊಡವಿಕೊಂಡು ಇಲ್ಲಿಂದ ಹೊರಟು ಹೋಗಿದ್ದರು.

ನಮಗೆ ಸ್ವಾತಂತ್ರ್ಯ ಬಂದು ಎರಡು-ಮೂರು ವರ್ಷಗಳ ಅಂತರಕ್ಕೆ ಚೀನಾ ತನ್ನ ಮತ್ತು ಭಾರತದ ನಡುವೆ ಇದ್ದ ಟಿಬೆಟ್ ಅನ್ನು ನುಂಗಿ ನೊಣವಿಕೊಂಡಾಗ ಭಾರತ ಸರ್ಕಾರ ಅದಕ್ಕೆ ಪ್ರತಿಕ್ರಿಯಿಸುವುದಿರಲಿ ಒಂದು ಆತಂಕವನ್ನೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊರಹಾಕಲಿಲ್ಲ. ಇದನ್ನು ಹೇಡಿತನ ಎಂದು ಬಗೆಯಿತು ಚೀನಾ. ಖರಾರುವಕ್ಕಾದ ಪೂರ್ವ ತಯಾರಿಗಳನ್ನು ಮಾಡಿಕೊಂಡ ಚೀನಾ ಮುಂದೆ 1962ರಲ್ಲಿ ಭಾರತಕ್ಕೆ ಯಾವುದೇ ಸುಳಿವು ಕೊಡದೆ ಮೈ ಮೇಲೆ ಬಿದ್ದಿತು, ಭಾರತದ ಸಹನೆಗೆ, ಶಾಂತಿಮಂತ್ರಕ್ಕೆ ಸರಿಯಾಗೇ ಪೆಟ್ಟು ಕೊಟ್ಟಿತ್ತು. ಅವರ ತಯಾರಿಗಳನ್ನು, ಭಾರತ ಸರ್ಕಾರದ ಉಡಾಫೆಯನ್ನೂ ಒಂದೊಂದಾಗಿ ತೆರೆದಿಡುತ್ತಾ ಸಾಗುತ್ತಾರೆ ದಳವಿ.

ಅಲ್ಲಿ ವಿವರಿಸಿರುವ ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ ಗಡಿ ಹಿಮದ ಕಾಡುಗಳಲ್ಲಿ ಹೈರಾಣಾಗಿ ಪ್ರಾಣ ಬಿಡುವ ಕೆಲವು ಸನ್ನಿವೇಶಗಳು, ಎದುರಾಳಿಗಿಂತ ಹಸಿವು, ಚಳಿಗಳೇ ನಮ್ಮ ಯೋಧರನ್ನು ರೇಜಿಗೆಬ್ಬಿಸಿದ ಅನೇಕ ಸನ್ನಿವೇಶಗಳು ನಮ್ಮೊಳಗೇ ಅಸಹನೀಯತೆಯನ್ನುಂಟು ಮಾಡುತ್ತವೆ. ಯೋಧನೊಬ್ಬ ಗುಹೆಯೊಳಗೆ  ಜಾಗ ಸಿಗದೇ ರಾತ್ರಿಯಿಡೀ ಹೊರಗೆ ಧೋ ಎಂದು ಸುರಿಯುತ್ತಿದ್ದ ಮಂಜಿನಲ್ಲಿ ಕುಳಿತು ಬೆಳಗಾಗುವ ಹೊತ್ತಿಗೆ ಪ್ರಾಣವನ್ನೇ ಬಿಟ್ಟು ಬಿಡುವ ಒಂದು ಕಡೆ ಪ್ರಸ್ತಾವವಿದೆ, ಪ್ರಾಣವನ್ನೇ ತೆಗೆಯುವಷ್ಟು ತೀಕ್ಷ್ಣ ಚಳಿಯಿರುವೆಡೆಯಲ್ಲಿ ಸರಿಯಾದ ಬೂಟು, ಬಟ್ಟೆಗಳನ್ನು ಕೊಡದೆ ಯುದ್ಧಮಾಡಲು ನಮ್ಮ ಸೈನಿಕರನ್ನು ಅಟ್ಟಿದ್ದು ಸರ್ಕಾರಕ್ಕೆ ಮುಂದಾಲೋಚನೆ, ನಿಜ ಸ್ಥಿತಿಯ ಅರಿವು ಯಾವುದೂ ಇರಲಿಲ್ಲವೆನ್ನುವುದನ್ನು ಸಾಬೀತು ಮಾಡುತ್ತದೆ.

ಅನ್ನವೆಂದರೆ ಆಗದ ರೊಟ್ಟಿಯ ಬಹುಪ್ರಿಯರಾದ ಪಂಜಾಬಿಗಳು ಅರುಣಾಚಲದ ಹಿಮ ಪರ್ವತಗಳ ಟೆಂಟುಗಳಲ್ಲಿ ಅನ್ನ ಬೇಯಿಸಿಕೊಂಡು ತಿನ್ನುತ್ತಿದ್ದರಂತೆ, ಅದ್ಯಾಕೆ ಹೀಗೆ ಅನ್ನುವ  ಬ್ರಿಗೇಡಿಯರ್  ಪ್ರಶ್ನೆಗೆ 'ರೊಟ್ಟಿಯ ಕಾವಲಿಯನ್ನು ಈ ಪರ್ವತಕ್ಕೆ ಹೊತ್ತು ತರಲು 3-4 ಸೈನಿಕರ ಅಗತ್ಯವಾದರೂ ಉಂಟು ಅದರ ಬದಲು ನಾವು ಅವರ ಕೈಲೇ ಮದ್ದು ಗುಂಡುಗಳನ್ನು ಹೊರಿಸಿಕೊಂಡು ಬಂದೆವು' ಅಂದರಂತೆ. ಹೀಗೆ ತಮ್ಮ ಬೇಕು, ಬೇಡಗಳನ್ನು ಬದಿಗೊತ್ತುವ ಸೈನಿಕ ದೇಶಕ್ಕಾಗಿ ಬಡಿದಾಡಿ ಸಾಯಲು ಎಂದೆಂದಿಗೂ ಸನ್ನದ್ಧನಾಗಿರುತ್ತಾನೆ, ಆದರೆ ಆತನನ್ನು ನಡೆಸಿಕೊಳ್ಳಬೇಕಾದ ಸರ್ಕಾರವೂ ಕೂಡ ಅಷ್ಟೇ ಗಂಭೀರವಾಗಿ ಆತನ ಪ್ರಾಣವನ್ನು ಪರಿಗಣಿಸಬೇಕು.

ಧೋಲಾ ಪೋಸ್ಟ್ ಎಂಬ ಸ್ಥಳವೇ ಅರುಣಾಚಲದಲ್ಲಿ ಈ ಯುದ್ಧದ ಕೇಂದ್ರ ಬಿಂದು ಅನ್ನುವುದು ಈ ಪುಸ್ತಕದಿಂದ ನಮಗೆ ಗೊತ್ತಾಗುತ್ತದೆ, ಅದರ ಜೊತೆ ಜೊತೆಗೆ ಅಲ್ಲಿ ಆ ಪೋಸ್ಟ್ ಅನ್ನು ಸ್ಥಾಪಿಸಿದ್ದ ಮಿಲಿಟರಿ ಅಧಿಕಾರಿ ಆ ಪ್ರದೇಶದ ಬಗ್ಗೆ ಅಮೂಲಾಗ್ರವಾಗಿ ಅರ್ಥಮಾಡಿಕೊಂಡಿರಲಿಲ್ಲ ಎನ್ನುವುದು ಕೂಡ. ಆಗಿನ ಪ್ರಧಾನಿ ನೆಹರೂವನ್ನು ಒಪ್ಪಿಸಲು, ಒಲಿಸಿಕೊಳ್ಳಲು ಆಗಿನ ಅನೇಕ ಮಿಲಿಟರಿ ಅಧಿಕಾರಿಗಳು ಸೇನೆಯ ವಿಚಾರದಲ್ಲಿಯೇ ಅನೇಕ ಉಡಾಫೆಯ, ಹಾರಿಕೆಯ ಮಾತುಗಳನ್ನಾಡಿರುವುದು, ಅದರ ನಂತರ ನೆಹರೂ ಸರ್ಕಾರ ಸೈನಿಕರ ಅನೇಕ ಬೇಡಿಕೆಗಳ ಪತ್ರಗಳನ್ನು ಕಸದ ಬುಟ್ಟಿಗೆಸೆದು ಇರುವಷ್ಟರಲ್ಲಿಯೇ ಕಾದಾಡಿ ಎಂದಿದ್ದು ಎಲ್ಲವೂ ಇಲ್ಲಿ ದಾಖಲಾಗಿದೆ. ಶತ್ರು ಪಡೆಗಳ ಕಣ್ಣಿಗೆ ಬಿದ್ದೇವು ಅನ್ನುವ ಭಯದಿಂದ ಚಳಿಗೆ ಮೈ ಕಾಸಿಕೊಳ್ಳಲು ಬೆಂಕಿ ಹಾಕಿಕೊಳ್ಳಲೂ ಹಿಂದೇಟು ಹಾಕುತ್ತಿದ್ದ ನಮ್ಮ ಸೈನಿಕರ ಎದುರಿನಲ್ಲೇ ಧೈರ್ಯದಿಂದ ಚೀನೀ ಸೈನಿಕರು ಬೆಂಕಿ ಹಚ್ಚಿಕೊಂಡು ಮೈ ಕಾಯಿಸಿಕೊಳ್ಳುತ್ತಿದ್ದರಂತೆ, ಅದೂ ರಾತ್ರಿಯ ಹೊತ್ತು. ತಮ್ಮ ಇರುವಿಕೆಯನ್ನು ಧೈರ್ಯವಾಗಿ ತೋರಿಸಿಕೊಳ್ಳುತ್ತಿದ್ದ ಪ್ರಪಂಚದ ಮೊದಲ ಯುದ್ಧಭೂಮಿ ಎಂದರೆ ಇದೇ ಇರಬೇಕು!. ಇಷ್ಟೇ ಅಲ್ಲದೆ ಚೀನೀ ಬಣದ ಕೆಲವು ಸೇನಾ ಕಮ್ಯಾಂಡರ್ ಗಳು ಕೆಲವು ಬಾರಿ ಭಾರತೀಯ ಸೀಮಾ ರೇಖೆಯ ಬಳಿಗೆ ಧಾವಿಸಿ ಸ್ಪಷ್ಟ ಹಿಂದಿಯಲ್ಲಿ 'ಇದು ನಮ್ಮ ಸರಹದ್ದು, ಇಲ್ಲಿಂದ ನೀವು ಹಿಂದಕ್ಕೆ ಹೊರಡಿ' ಎಂದು ಘೋಷಣೆ ಹೊರಡಿಸುತ್ತಿದ್ದರಂತೆ. ಅದರರ್ಥ ಚೀನಾ ಭಾರತದ ಮೇಲೆ ಯುದ್ಧ ಸಾರುವುದಕ್ಕಾಗಿಯೇ ತನ್ನದೇ ಕೆಲವು ಸೇನಾಳುಗಳಿಗೆ ಹಿಂದಿ ಕಲಿಸಿತ್ತು, ಹಾಗು ಆ ಯೋಜನೆ ಕಡಿಮೆ ಅಂದರೂ ಎರಡು-ಮೂರು ವರ್ಷಗಳಿಂದಲೇ ಇತ್ತು ಎಂದು. ಯುದ್ಧಕಾಗಿಯೇ ತಯಾರಾಗಿ ಬಂದು ಯುದ್ಧದ ಮುನ್ಸೂಚನೆಯೇ ಇಲ್ಲದ ಸೇನೆಯ ಮೇಲೆ ಬಿದ್ದು ಅವರನ್ನು ಹೊಸಕಿ ಹಾಕಿದ ಭಯಾನಕ ರಕ್ತಸಿಕ್ತ ಅಧ್ಯಾಯಕ್ಕೆ ಚೀನಾ ಕಾರಣವಾಗಿತ್ತು. ಎಂದಿನಂತೆ ನಮ್ಮ ದೇಶದ ನೇತಾರರು ವಿಶ್ವ ಸಂಸ್ಥೆಯ ಮುಂದೆ ಗೋಗರೆಯುತ್ತಿದ್ದರು. ಒಟ್ಟಿನಲ್ಲಿ 'ಹೊಸ ಅಗಸ ಬಟ್ಟೆಯನ್ನ ಎತ್ತಿ ಎತ್ತಿ ಒಗೆದನಂತೆ' ಎನ್ನುವ ಗಾದೆಯಂತೆ ನೆಹರೂ ಹೊಸ ಅಧಿಕಾರ ಕೈಗೆ ಸಿಕ್ಕಾಗ ಎಲ್ಲ ತರಹದ ತಪ್ಪುಗಳನ್ನು ಮಾಡಿದ್ದಾರೆ, ಆದರೆ ಅದಕ್ಕೆ ನಿಜವಾಗಿಯೂ ಬೆಲೆ ತೆತ್ತಿದ್ದು ನಮ್ಮ ದೇಶದ ಅಸಂಖ್ಯ ಜನರು. ಅದು ಸರಿಮಾಡಲಾರದಂತಹ ತಪ್ಪುಗಳ ಪಟ್ಟಿ, ದುರಾದೃಷ್ಟವಶಾತ್ ಇಂದಿಗೂ ನಾವು ಆ ತಪ್ಪುಗಳ ಬಲೆಯೊಳಗೆ ಸಿಲುಕಿಕೊಂಡಿದ್ದೇವೆ.

ಹಾಗಂದ ತಕ್ಷಣ ಈ ಪುಸ್ತಕ 1962ರ ಚೀನಾ ಅತಿಕ್ರಮಣದ ಎಲ್ಲ ಆಯಾಮಗಳನ್ನು ವಿವರಿಸಿದೆ ಎಂದರ್ಥವಲ್ಲ, ಆ ಕೃತಿ ಯುದ್ಧ ಕಾಲದ ದೇಶದ ಸಮಗ್ರ ಕ್ಷೇತ್ರಗಳ ದೃಷ್ಟಿಕೋನದಿಂದ ಬರೆದುದ್ದಲ್ಲ, ಮಿಲಿಟರಿ ಕ್ಷೇತ್ರದೊಳಗೇ ಲಡಾಕ್ ನ ಗಡಿಯಲ್ಲಿ ನಡೆದ ಚೀನಾ ಠಳಾಯಿಸಿದ್ದನ್ನು ಎಲ್ಲೂ ನಮೂದು ಮಾಡುವುದಿಲ್ಲ. ಅರುಣಾಚಲ ಪ್ರದೇಶದ ತವಾಂಗ್, ಮೀಸಾಮಾರಿ ಪ್ರದೇಶಗಳ ಹಿಮ ಕಂದರಗಳಲ್ಲಿ ನಡೆದ ಚೀನಾ ಚಿತಾವಣೆಯನ್ನು, ನಮ್ಮ ವೀರ ಯೋಧರು ಆ ಕ್ಲಿಷ್ಟ ಪರಿಸ್ಥಿತಿಯಲ್ಲಿಯೂ ಯಾರನ್ನೂ ದೂರದೇ ಪ್ರಚಂಡ ಚಳಿಯಲ್ಲಿ ನಡುಗಿ ಶತ್ರುಗಳೆದುರಾದರೂ ಅವರಿಗೆ ಪ್ರತಿರೋಧವೊಡ್ಡಲು ಅವಶ್ಯ ಪ್ರಮಾಣದ ಗುಂಡುಗಳಿಲ್ಲದೆ ಬಂದೂಕಿನ ಮೊನೆಯಲ್ಲಿ ತಿವಿಯುತ್ತಲೇ ಹುತಾತ್ಮರಾದ  ಸೈನಿಕರ ಬಗ್ಗೆ, ಹೇಳಬೇಕೆಂದರೆ ತಮ್ಮ ಕಣ್ಣರಿವಿಗೆ ಬಂದಷ್ಟನ್ನೇ ದಳವಿಯವರು ಬರೆದು ಮುಗಿಸಿದ್ದಾರೆ. ಆದರೆ ಏನು ಹೇಳಬೇಕೋ ಅದನ್ನು ಕರಾರುವಕ್ಕಾಗಿ ಹೇಳಿ ಮುಗಿಸಿದ್ದಾರೆ. ಮೊದಲೇ ಹೇಳಿದಂತೆ ಹೊಸ ಅಧಿಕಾರ ರಾಜಕಾರಣಿಗಳ ಕೈಲಿ ಯಾವ್ಯಾವ ಆಟ ಆಡಿಸಿತು, ಕೆಲವು ಕಡೆ ಅಂದಿನ ರಾಜಕಾರಣಿಗಳು ತಮಗೆ ಕೊಟ್ಟಿದ್ದ ಸ್ಥಾನ ನಿಭಾಯಿಸಲು ಎಷ್ಟು ಅಸಮರ್ಥರಾಗಿದ್ದರು ಎನ್ನುವುದನ್ನು ಎಳ್ಳಷ್ಟೂ ಅಳುಕಿಲ್ಲದೆ ಹೇಳಿ ಮುಗಿಸಿದ್ದಾರೆ ದಳವಿ.

Tawang War Memorial, Photos, History, Reviews, Information & Guide
1962ರ ಭಾರತ-ಚೀನಾ ಯುದ್ಧ ಸ್ಮಾರಕ, ತವಾಂಗ್, ಅರುಣಾಚಲ ಪ್ರದೇಶ.
ಅಂದಹಾಗೆ ದಳವಿಯವರು ಇದನ್ನು ಬರೆದದ್ದು ಅವರು ಸೆರೆಯಾಳಾಗಿ ಸಿಕ್ಕು ಬಂಧಿಸಿ ಚೀನಾಗೆ ಕರೆದೊಯ್ದಾಗ, ಚೀನಾದ ಸರೆಮನೆಯಲ್ಲಿ. ಚೀನಿಯರದ್ದೇ ಪೆನ್ನು, ಪೇಪರುಗಳಲ್ಲಿ ಭಾರತೀಯ ರಾಜಕೀಯ ನೇತಾರರು ಮಿಲಿಟರಿ ವಿಚಾರದಲ್ಲಿ ಉಂಟು ಮಾಡಿಕೊಂಡ ಅನಗತ್ಯ ಎಡವಟ್ಟುಗಳನ್ನು ಖಂಡ ತುಂಡವಾದ ಕಟು ಪದಗಳನ್ನು ಬಳಸಿಯೇ ಬರೆದರು ದಳವಿಯವರು!. ಅದಾದ ಮೇಲೆ ಅವರನ್ನು ಸೆರೆಯಿಂದ ಬಿಡಿಸಿ ಕೋಲ್ಕತ್ತಾದ ವಿಮಾನ ನಿಲ್ದಾಣಕ್ಕೆ ಕರೆತಂದಾಗ ನಮ್ಮ ಸೇನೆಯೇ ಅವರನ್ನು ನಂಬಲಿಲ್ಲವಂತೆ. ಚೀನಾದಲ್ಲಿ ಬ್ರೈನ್ ವಾಷ್ ಆಗಿರಬಹುದು ಎಂಬ ಊಹೆಯ ಆಧಾರದ ಮೇಲೆ ಖಡ್ಡಾಯ ರಜೆಯ ಮೇಲೆ ಅವರನ್ನು ಮನೆಯಲ್ಲಿ ಕುಳ್ಳಿರಿಸಿತಂತೆ ಸರ್ಕಾರ. ನಂತರ ದಳವಿಯವರನ್ನು ತೀರಾ ಹತ್ತಿರದಿಂದ ಬಲ್ಲವರಾಗಿದ್ದ ಕೆಲವು ಸೇನಾ ವಕ್ತಾರರು ಆ ಯುದ್ಧದ ಸೋಲಿನ ಕಾರಣಗಳ ಮೇಲೆ ವರದಿಯೊಂದನ್ನು ಬರೆದು ಸರ್ಕಾರಕ್ಕೆ ಕಳಿಸಿದರಂತೆ. ಆ ವರದಿಯಲ್ಲಿನ ಎಷ್ಟು ಅಂಶಗಳು ಅನುಷ್ಠಾನವಾದವೂ, ಇಲ್ಲ ಎನ್ನುವುದು ಆಗಿನ ಸೇನೆಗೆ ಹಾಗು ದೇವರಿಗೆ ಗೊತ್ತು. ಅದಾದ ಒಂದು ವರ್ಷದೊಳಗಾಗಿ ನೆಹರೂ ತೀರಿಕೊಂಡರು.

ದುರಂತವೆಂದರೆ ಅಂದು ಚೀನಾದೊಂದಿಗಿನ ಸೆಣಸಾಟದಲ್ಲಿ ಆ ಹಿಮದಲ್ಲಿ ಸಮಾಧಿಯಾದ ನನ್ನ ವೀರ ಯೋಧರಿಗೆ ಗೌರವಾದರಗಳಿಂದ ಅಂತ್ಯ ಕ್ರಿಯೆಗಳಾಗಲು ಸಾಧ್ಯವಿರಲಿಲ್ಲ, ಮೃತ ದೇಹಗಳನ್ನ ಹೊತ್ತು ನರಕ ಸದೃಶ ಪರ್ವತಗಳಲ್ಲಿ ನಡೆಯುವುದೂ ಸುಲಭದ ಮಾತಾಗಿರಲಿಲ್ಲ, ಹಾಗು ಹಾಗೆ ಹೊತ್ತು ತರಲು ಅವಶ್ಯ ಸೈನಿಕರ ಸಂಖ್ಯೆಯೂ ಅಲ್ಲಿರಲಿಲ್ಲ. ಚೀನಾವನ್ನು ಹಣಿಯಲು ಹಿಮ ಪರ್ವತಗಳಿಗೆ ಬರಿ ಕೈಯಲ್ಲಿ ಅಟ್ಟಿದ ಸರ್ಕಾರ ಅವರ ಪ್ರಾಣದ ಜೊತೆಗೆ ಅಕ್ಷರಶಃ ಚೆಲ್ಲಾಟವಾಡಿತು. ಯಾರ ಯಾರದೋ ಮಾತುಗಳಿಗೆ ಮಣೆ ಹಾಕಿ ಸತ್ಯ ಸಂಗತಿಗಳನ್ನು ಅರಿಯಲು ಅಸಮರ್ಥವಾಗಿ ಚೀನಾದ ಗುಂಡುಗಳಿಗೆ ಆಹಾರ ಒದಗಿಸಿತು. ಆ ಕೋಪ ಇನ್ನೂ ಭಾರತೀಯರ ಹೃದಯದ ಮೂಲೆಯಲ್ಲಿಇದ್ದೇ ಇದೆ. ನನ್ನ ದೇಶವನ್ನು ರಕ್ಷಿಸಲು ಹಿಮ ಪರ್ವತಗಳನ್ನು ಏರಿ ಹೊರಟ ಅಸಂಖ್ಯ ಮಹಾಸೇನಾನಿಗಳು, ವೀರ ಯೋಧರು ಹಿಂದಿರುಗಿ ಬರಲೇ ಇಲ್ಲ. ಅಲ್ಲೇ ಕಾಡು ಹೆಣಗಳಾಗಿಹೋದರು. ಕಡೆ ಪಕ್ಷ ಅವರ ಮೃತ ದೇಹಗಳನ್ನಾದರೂ ತಂದು ಗೌರವ ಸೂಚಿಸಲಾಗಲಿಲ್ಲ. ಆ ಕಾರಣಕ್ಕೆ ಭಾರತೀಯನಾಗಿ ಇಂದಿಗೂ ನನಗೆ ಖೇದವಿದೆ.

ದಳವಿಯವರ ಆ ಕೃತಿಯಲ್ಲಿ ಇನ್ನೂ ಅನೇಕ ವಿಷಯಗಳಿವೆ, ಬಿಡುವಾದಾಗ ಓದಿಕೊಳ್ಳಿ. ಕನ್ನಡಕ್ಕೆ ರವಿಬೆಳಗೆರೆಯವರು ಅನುವಾದಿಸಿದ್ದಾರೆ. ಅಲ್ಲಿ ಅವರು ಇತರೆ ಅನೇಕ ಪೂರಕ ಅಂಶಗಳನ್ನು ನಮೂದು ಮಾಡಿದ್ದಾರೆ. ಅದೇ ನೀವು ಆ ಮಹಾಯೋಧನಿಗೆ ಅರ್ಪಿಸುವ ಶ್ರದ್ಧಾಂಜಲಿ.

-0-

ಶನಿವಾರ, ಮೇ 16, 2020

ಬೂತ್ ಲೆವೆಲ್ಲು - ಭ್ರಾತೃತ್ವ

ಕಾಲದಿಂದ ಕಾಲಕ್ಕೆ ನಮ್ಮ ದೇಶದಲ್ಲಿ ಚುನಾವಣೆಗಳು ನಡೆಯುತ್ತಿವೆ, ಜನಗಳು ಪಾಲ್ಗೊಳ್ಳುತ್ತಿದ್ದಾರೆ. ದೇಶದೊಳಗೆ ಆರ್ಥಿಕ ಪರಿಸ್ಥಿತಿ, ಚುನಾವಣೆಯ ಪರಿಕಲ್ಪನೆ ಹೆಚ್ಚಿನ ಜನರಿಗೆ ಉತ್ತಮವಾಗಿರುವುದರಿಂದ ಹಿಂದಿಗಿಂತಲೂ ಈಗ ಹೆಚ್ಚೆಚ್ಚು ಜನ ಚುನಾವಣೆಯಲ್ಲಿ ಭಾಗವಹಿಸುತ್ತಿದ್ದಾರೆ. ಅದು ಮತದಾನ ಮಾಡುವುದಾಗಿರಬಹುದು, ಚುನಾವಣೆಗೆ ನಿಲ್ಲುವುದಿರಬಹದು, ಚುನಾವಣೆಯ ಪ್ರಚಾರವಿರಬಹುದು ಇಲ್ಲೆಲ್ಲಾ ಹಿಂದೆಂದಿಗಿಂತಲೂ ಹೆಚ್ಚೆಚ್ಚು ಜನ ಭಾಗವಹಿಸುತ್ತಿದ್ದಾರೆ. ದೇಶದ ಪ್ರಜಾತಂತ್ರದ ಹಬ್ಬವೆನಿಸಿಕೊಳ್ಳುವ ಚುನಾವಣೆಯಲ್ಲಿ ಹೆಚ್ಚೆಚ್ಚು ಜನ ಪಾಲ್ಗೊಳ್ಳುವುದು ದೇಶ ತಮ್ಮ ಭವಿಷ್ಯತ್ತಿನ ಬಗ್ಗೆ ಎಷ್ಟು ಕಾಳಜಿ ವಹಿಸಿದೆ ಎಂಬುದನ್ನು ಅಳೆಯುವುದಕ್ಕೊಂದು ಮಾಪನ ನಿಜ, ಆದರೆ ಅದು ಎಲ್ಲ ಕಾಲಗಳಲ್ಲೂ ನಿಜವಲ್ಲ. ಭಾರತದ ಈಗಿನ ಮಟ್ಟಿಗಂತೂ ಆ ಅನಿಸಿಕೆ ಸತ್ಯವಾಗಿರಲಿಕ್ಕೆ ಸಾಧ್ಯವಿಲ್ಲವೇ ಇಲ್ಲ.

ದುಡ್ಡಿನಾಸೆಗೆ, ಜಾತಿ ಓಲೈಕೆಗೆ, ಧರ್ಮ ಪ್ರಚಾರಕ್ಕೂ ಚುನಾವಣೆಗಳು ವೇದಿಕೆಗಳಾಗಿ ದೇಶದೊಳಗೆ ಗುಂಪುಗಳಾಗಿರುವುದನ್ನು ಭಾರತ ಸ್ವಾತಂತ್ರ್ಯ ಕಂಡಾಗಿನಿಂದ ನಾವು ಕಂಡುಕೊಂಡೇ ಬಂದಿದ್ದೇವೆ. ರಾಜಕೀಯ ವಕ್ತಾರರು ಜಾತಿಯನ್ನೋ, ಧರ್ಮವನ್ನೋ, ಭಾಷೆಯನ್ನೋ ಹೆಕ್ಕಿಕೊಂಡು ತಮ್ಮ ಚುನಾವಣೆಯಲ್ಲಿ ಪ್ರಚಾರದ ಸರಕನ್ನಾಗಿ ಮಾಡಿಕೊಂಡು ಭಾಷಣ ಬಿಗಿದು, ಚುನಾವಣೆಯ ನಂತರ ಅತ್ತ ತಿರುಗಿಯೂ ನೋಡದೆ ತಮ್ಮ ಕೆಲಸಗಳಲ್ಲಿ ತಾವು ಮಗ್ನರಾಗಿರುವುದೂ ನಾವೇನು ಕಾಣದ್ದಲ್ಲ. ತೀರಾ ಇತ್ತೀಚಿಗೆ ಚುನಾವಣೆಯಲ್ಲಿ ವಕ್ತಾರರು ಹಾಕುವ ಬಿಗಿಯಾದ ಪಟ್ಟು ಎಂದರೆ ಬೂತ್ ಲೆವೆಲ್ಲಿನ ಪಕ್ಷ ಸಂಘಟನೆ!. ಬೂತ್ ಲೆವೆಲ್ಲಿನ ಪಕ್ಷ ಸಂಘಟನೆಯ ಮಾರ್ಗ ಸದ್ದರಿಯದೇ ನಮ್ಮ ಸಂವಿಧಾನದ ಮೂಲ ಆಶಯಕ್ಕೆ ಬಲವಾದ ಪೆಟ್ಟು ಕೊಡುತ್ತಿದೆ. ಅತಿಶಯೋಕ್ತಿ ಎನಿಸಿದರೂ ಇದು ಸುಳ್ಳಲ್ಲ. ಇದುವರೆವಿಗೂ ಅಷ್ಟಾಗಿ ಯಾರು ಗಮನಿಸದ ವಿಚಾರವೋ ಏನೋ?. ಯಾರೂ ಇದರ ಬಗ್ಗೆ ಸೊಲ್ಲೆತ್ತಲಾರರು, ಪ್ರಜಾ ಪ್ರಭುತ್ವ ಸಂಖ್ಯಾ ಬಲದ ಆಟ ಎನ್ನುವುದು ಎಲ್ಲರಿಗೂ ಗೊತ್ತಿರುವುದೂ ಈ ದಿವ್ಯ ಮೌನಕ್ಕೆ ಕಾರಣವೇನೋ? ಇರಬಹುದು!.

ರಾಜಕೀಯದ ಮತಯಾಚನೆಗೆ ಇರುವ ದಾರಿಗಳನ್ನೆಲ್ಲ ಒಟ್ಟಾಗಿ ಪಟ್ಟಿ ಮಾಡಿದರೆ ಕೊನೆಯಿಂದ ಎರಡನೇ ಸ್ಥಾನಕ್ಕೆ ನಿಲ್ಲುವುದು ಬೂತ್ ಲೆವೆಲ್ಲು. ಬೂತ್ ಲೆವೆಲ್ಲಿನ ಪಕ್ಷ ಸಂಘಟನೆಯಲ್ಲಿ ಗ್ರಾಮ ಗ್ರಾಮಗಳನ್ನೂ ಗಲ್ಲಿ ಗಲ್ಲಿಗಳನ್ನು ರಾಜಕೀಯ ಸಿದ್ಧಾಂತಗಳ ಕೇಂದ್ರವನ್ನಾಗಿಸಲಾಗುತ್ತದೆ. ಇದು ಚುನಾವಣೆಯ ಸಮಯದಲ್ಲಿ ಮಾತ್ರ ನಡೆಯುವುದಾಗಿದ್ದರೆ ಸುಮ್ಮನಿರಬಹುದಾಗಿತ್ತೇನೋ, ಆದರೆ ಈ ರೀತಿಯ ಸಂಘಟನೆ ಚುನಾವಣೆಯ ನಂತರ ಮಾಡುವ ಅನಾಹುತವೇ ಹೆಚ್ಚು. ಸೇನೆಯ ಕುರಿತು ಒಂದು ಮಾತಿದೆ 'ಸರ್ಕಾರ ಸೇನೆಗೆ ಸೇರಿಸಿಕೊಳ್ಳುವಾಗ ಮೆದುಳು ಕಿತ್ತುಕೊಂಡು ಕೈಗೆ ಬಂದೂಕು ಕೊಡುತ್ತದೆ, ಸೇವೆ ಮುಗಿದ ನಂತರ ತನ್ನ ಬಂದೂಕನ್ನು ತಾನು ಹಿಂಪಡೆಯುತ್ತದೆ. ಆದರೆ ಮೆದುಳನ್ನು ಹಿಂತಿರುಗಿಸುವುದನ್ನು ಮರೆಯುತ್ತದೆ' ಎಂದು. ಇಲ್ಲೂ ಥೇಟ್ ಹಾಗೆಯೇ. ಪಕ್ಷಗಳು ಸಿದ್ಧಾಂತಗಳನ್ನು ಪ್ರಜೆಗಳ ಮುಂದೆ ಕೊಂಡೊಯ್ಯುವುದು ಒಂದು ಕಡೆಯಾದರೆ ಆ ಸಿದ್ಧಾಂತವೇ ನಮ್ಮ ಜೀವನಾಡಿ ಎಂಬಂತೆ ಬಿಂಬಿಸುವುದು ಈ ಕಾಲದ ಪಕ್ಷ ಸಂಘಟನೆಗಳಲ್ಲಿ ಎದ್ದೆದ್ದು ಕಂಡು ಬರುತ್ತಲೇ ಇದೆ.

The Constitution of India (Preamble) that guarantees Justice ...
ಭಾರತದ ಸಂವಿಧಾನದ ಮುನ್ನುಡಿ ಪುಟ


ಚುನಾವಣೆಗೆಂತಲೇ ತಮ್ಮ ಸಿದ್ಧಾಂತಗಳನ್ನು ಧಾರೆಯೆರೆಯುವ ಪಕ್ಷಗಳು ಚುನಾವಣೆಯ ನಂತರ
ಅವುಗಳ ಸಿದ್ಧಾಂತಗಳನ್ನು ಕಿತ್ತುಕೊಂಡು ಹೋಗಲಾರವು. ಆ ಸಿದ್ಧಾಂತಗಳನ್ನು ತಲೆಯ ಮೇಲೆ ಹೊತ್ತುಕೊಂಡು ಬಿಸಿರಕ್ತದ ಪ್ರಜೆಗಳು ಅದೇ ಊರಿನ ಅದೇ ಗಲ್ಲಿಯ ಬೇರೆ ಸಿದ್ಧಾಂತಗಳ ಅನುಯಾಯಿಗಳ ಜೊತೆ ಹೊಂದಿಕೊಳ್ಳುವುದೇ ದುಸ್ತರವಾಗುತ್ತದೆ. ಈಚೀಚಿನ ವರ್ಷಗಳಲ್ಲಿ ಇದಕ್ಕಾಗಿಯೇ ಜಗಳಗಳು, ಹೊಡೆದಾಟಗಳು, ಕೊಲೆಗಳೇ ನಡೆದಿವೆ. ಒಂದೇ ಊರಿನಲ್ಲಿರುವರು ಭ್ರಾತೃತ್ವ ಭಾವನೆಯಿಂದ ಇರಬೇಕಾದ್ದು ಸಮಂಜಸ, ಆದರೆ ಇಲ್ಲಿ ಇದ್ದ ಆ ಭಾವನೆಯನ್ನು ಚುನಾವಣೆಗೆಂದು ಕದಡಿದವರು ಯಾರು?. ಇದು ಸಂವಿಧಾನದ ಮೂಲ ಭಾವನೆಗೆ ಮರ್ಮಾಘಾತ ನೀಡುತ್ತಿರುವುದು ನಿಜವಲ್ಲವೆ?. ಈ ದೃಷ್ಟಿಕೋನದಲ್ಲಿ ಜನರು ಏಕೆ ಯೋಚಿಸುತ್ತಿಲ್ಲ?. ದುರಂತವಲ್ಲವೇ. ನಮ್ಮ ಹೆಮ್ಮೆಯ ಭಾರತವೇ ಹಾಗೆ. ಮೂಲ ತೊಂದರೆಯ ತಂಟೆಗೆ ಹೋಗುವುದಿಲ್ಲ, ಮೂಲ ತೊಂದರೆಯಿಂದ ಉಂಟಾದ ಸಣ್ಣ ಪುಟ್ಟ ತೊಂದರೆಗಳನ್ನೇ ಬಗೆಹರಿಸಿಕೊಳ್ಳುತ್ತಾ ಮೂಲ ತೊಂದರೆಯನ್ನು ಮತ್ತೊಂದು ಭುಜದ ಮೇಲೆ ಹೊತ್ತು ಸಲಹುತ್ತಾ ಬರುವುದು ನಮಗೇನು ಹೊಸದಲ್ಲ. ಹಾಗೆ ಮಾಡಿಕೊಂಡೆ ತಲೆಮಾರುಗಳನ್ನು ಕಳೆದಿದ್ದೇವೆ, ಮತ್ತು ಇನ್ನೂ ಅದೇ ತೊಂದರೆಗಳ ಹೊಲೆಗೆಸರಲ್ಲಿ ಸಿಲುಕಿ ಒದ್ದಾಡುತ್ತಲೇ ಇದ್ದೇವೆ.

ಚುನಾವಣೆಯ ಪ್ರಚಾರ ಮತ್ತಾವುದೇ ರೀತಿ ನಡೆಯಲಿ, ಆದರೆ ಈ ಬೂತ್ ಲೆವೆಲ್ಲು ಎಂಬ ಭೂತ ನಮ್ಮ ನಮ್ಮ ನಡುವೆ ತಂದೊಡ್ಡುತ್ತಿರುವ ಮನಸ್ತಾಪಗಳನ್ನು ಅದೆಂದೂ ಸರಿಮಾಡಲಾಗದು. ಇದಕ್ಕೆ ಕೆಲವರು ಪ್ರತ್ಯುತ್ತರ ಕೊಡುವುದೇನೆಂದರೆ, ಪ್ರಜಾತಂತ್ರದ ಝಲಕ್ಕೇ ಅಂತಹುದು ಬೇರೆ ಬೇರೆ ಮನೋಧೋರಣೆಯ ಎಲ್ಲರು ಒಟ್ಟಾದರೆ ಮಾತ್ರ ಹೊಸದೇನನ್ನೋ ಸೃಷ್ಟಿಸುವುದು ಎಂದು. ಸರಿ ಹಾಗಿದ್ದ ಮೇಲೆ ಇಂದು ದೇಶದೊಳಗೆ ನಡೆಯುತ್ತಿರುವ ಗುಂಪುಗಾರಿಕೆಯ ಮೂಲ ಎಲ್ಲಿಯದ್ದು ಎಂದೇನಾದರೂ ಹುಡುಕಿದರೆ ನಿಮಗೆ ಸಿಗುವುದೇ ಇದು. ವಿವಿಧ ಮನೋಧೋರಣೆಯವರ ಅಂಶಗಳನ್ನು ಹೆಕ್ಕಿಕೊಳ್ಳುವುದು ಬೇರೆ, ಅವರ ನಡುವೆ ಇರುವ ಅಂತರಗಳನ್ನು ಬೃಹದಾಕಾರವಾಗಿ ತೋರಿಸಿ ಚುನಾವಣೆಯ ಲಾಭ ಗಿಟ್ಟಿಸಿಕೊಳ್ಳುವುದು ಬೇರೆ. ಅಲ್ಲಿ ಸ್ವಾರ್ಥವಿರುತ್ತದೆ. ಅವರ ಸ್ವಾರ್ಥಗಳಿಗಾಗಿ ನಾವು ಬಡಿದಾಡಿಕೊಳ್ಳುವುದು ಮೂರ್ಖತನವಲ್ಲದೆ ಮತ್ತೇನು?.

ಪ್ರಪಂಚದಲ್ಲಿ ನಡೆದಿದ್ದ ಹಲವು ಕ್ರಾಂತಿಗಳ ಪ್ರತಿಫಲಗಳೂ ನಮ್ಮ ಸಂವಿಧಾನದಲ್ಲಿ ಕಂಗೊಳಿಸುತ್ತವೆ. ಅದರಲ್ಲಿ ಬಹು ಮುಖ್ಯವಾದ ಅಂಗ ಭ್ರಾತೃತ್ವ. ಫ್ರೆಂಚ್ ಕ್ರಾಂತಿಯ ಕೂಸು ಅದು. ಭಾರತದಲ್ಲಿ ಜಾತಿ ಪದ್ಧತಿಗಳಿದ್ದಂತೆ ಅಲ್ಲಿಯೂ ಹಿಂದೊಮ್ಮೆ ಎಸ್ಟೇಟ್ ಪದ್ಧತಿ ಜಾರಿಯಲ್ಲಿದ್ದಿತು. ಫ್ರಾನ್ಸಿನಲ್ಲಿ ಹತ್ತೊಂಹತ್ತನೇ ಶತಮಾನದಲ್ಲಿ ನಡೆದ ದುಡಿಯುವ/ಶ್ರಮಿಕ ವರ್ಗ ಕೇಂದ್ರೀಕೃತ ಕ್ರಾಂತಿಗೆ ಇಡೀ ಪ್ರಪಂಚ ಉಘೇ ಎಂದುಬಿಟ್ಟಿತು. ಫ್ರಾನ್ಸಿನ ರಾಜಾಡಳಿತವೂ ಬಿಗಿ ಸಡಿಲಿಸಿ ಸಾಮಾನ್ಯರೇ ದೇವರು ಎಂದುಬಿಟ್ಟಿತು. ಭ್ರಾತೃತ್ವ ಭಾವನೆ ಎಲ್ಲರಲ್ಲೂ ಮೊಳೆಯಬೇಕು ಎಂದಿತು ಫ್ರೆಂಚ್ ಜನಾಂಗ. ಅಹುದೆಂದು ಒಪ್ಪಿದ ಅಲ್ಲಿನ ಆಡಳಿತ ಅದನ್ನೇ ಕಾನೂನು ಮಾಡಿತು ಕೂಡ. ಅಲ್ಲಿಂದಾಚೆಗೆ ಫ್ರಾನ್ಸಿನ ಈ ಭ್ರಾತೃತ್ವ ಎಂಬ ಪದ ಎಷ್ಟೋ ದೇಶಗಳ ಸಂವಿಧಾನಗಳಲ್ಲಿ ಕಂಗೊಳಿಸಿದೆ. ಆ ಕ್ರಾಂತಿಯಾನಂತರ ಫ್ರಾನ್ಸಿನಲ್ಲಿ ಇನ್ನೂ ಅನೇಕ ಕ್ರಾಂತಿಗಳು ನಡೆದು ಅವರ ಮೊದಲ ಫ್ರೆಂಚ್ ಕ್ರಾಂತಿಯು ಕಲ್ಪಿಸಿಕೊಟ್ಟಿದ್ದ ಅನುಕೂಲತೆಗಳನ್ನು ಗಾಳಿಗೆ ತೂರಿ ಎಷ್ಟೋ ಹೋರಾಟಗಳು ಫ್ರಾನ್ಸಿನ ಭೂಮಿಕೆಯಲ್ಲೇ ನಡೆದಿವೆ. ಈ ಸಿದ್ಧಾಂತಗಳೇ ಹೀಗೆ ಎಲ್ಲ ಕಾಲಕ್ಕೂ, ದೇಶಕ್ಕೂ ಒಪ್ಪಿಗೆಯಾಗುವಂತಹ ಸಿದ್ಧಾಂತಗಳು ಇನ್ನೂ ಹುಟ್ಟೇ ಇಲ್ಲ ಬಿಡಿ.

-o-



ಮಂಗಳವಾರ, ಏಪ್ರಿಲ್ 7, 2020

ಮನೆವಾರ್ತೆ - ಕಿರುಗಾದಂಬರಿ

ಈಚೀಚಿಗೆ ಕನ್ನಡ ಬರಹಗಾರರು ಹೆಚ್ಚೆಚ್ಚು ಬರುತ್ತಿದ್ದಾರೆ, ಬರೆಯುತ್ತಿದ್ದಾರೆ. ಕುವೆಂಪು, ಕಾರಂತರು, ಭೈರಪ್ಪನವರಂತಹವರು ನೆಚ್ಚಿನ ಲೇಖಕರಾದರೂ ನಮ್ಮ ಸಮಕಾಲೀನ ಸಮಸ್ಯೆಗಳಿಗೆ, ಸಂತೋಷಗಳಿಗೆ, ಹಾಸ್ಯಗಳಿಗೆ ಅವರ ಕೃತಿಗಳಲ್ಲಿ ಅಷ್ಟಾಗಿ ಆಸ್ಪದವಿಲ್ಲ. ಇದು ಅವರ ತಪ್ಪಲ್ಲ, ನಮ್ಮ ತಪ್ಪು ಅಲ್ಲ. ವ್ಯಕ್ತಿಯೊಬ್ಬ ಬರೆಯುವ ಕೃತಿ ಅವನ ಕಾಲ, ದೇಶದ ಮೇಲೆಯೂ ನಿಂತಿರುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು ಅಷ್ಟೇ.

ಸಾಮಾನ್ಯವಾಗಿ ಸಾಹಿತ್ಯದಲ್ಲಿ ನಮ್ಮ ಜೀವನದ ಯಾವುದೋ ತೊಂದರೆಗೆ ಉತ್ತರ ಸಿಗಬಹುದು, ಯಾವುದೋ ಸುಪ್ತ ಪ್ರಜ್ಞೆ ಜಾಗೃತವಾಗಬಹುದು, ಯಾವುದೋ ಹೊಸ ವಿಚಾರ ಮನದಟ್ಟಾಗಬಹುದು ಹೀಗೆ ಇನ್ನೂ ಅನೇಕ 'ಆಗುವಿಕೆ'ಗಳು ನಡೆಯಬಹುದು, ಆದರೆ ಆ ಸಾಹಿತ್ಯವನ್ನು ಓದುವಾಗ ಅದರಲ್ಲಿ ನಮ್ಮನ್ನು ನಾವು ಎಷ್ಟರ ಮಟ್ಟಿಗೆ ಸಮೀಕರಿಸಿಕೊಂಡೆವು ಎನ್ನುವ ಆಧಾರದ ಮೇಲೂ ಅದರ ಆಳಕ್ಕಿಳಿದು ಅರ್ಥ ಮಾಡಿಕೊಳ್ಳುವ ವಿಧಾನ ಚಾಲ್ತಿಯಲ್ಲಿದೆ. ಎಲ್ಲರೂ ಇದೇ ವಿಧಾನದಿಂದ ಸಾಹಿತ್ಯ ಓದಬಲ್ಲರು ಎಂದು ಹೇಳಲಾರೆ, ಆದರೆ ಬಹು ಪಾಲಿನ ಜನರು ಇದೇ ಮಾರ್ಗದಲ್ಲಿ ಸಾಹಿತ್ಯವನ್ನು ನೆಚ್ಚಿಕೊಂಡಿರುವುದು ಕಾಲ ಕಾಲಕ್ಕೆ ಸಾಧಿತವಾಗಿದೆ.

ಹಳೆ ತಲೆಮಾರಿನ ಲೇಖಕರ ಸಾಹಿತ್ಯವನ್ನೋದುವಾಗ ಈ ಸಮೀಕರಣದ ತೊಂದರೆಯಿಂದ ನಾನು ಒದ್ದಾಡುತ್ತಿದೆ. ಸಾಹಿತ್ಯದಲ್ಲಿ ಇರಬಹುದಾದ ಕಲ್ಪನಾ ಪಾತ್ರಗಳ ಕುರಿತು 'ಇದು ನಿಜ ಸ್ಥಿತಿಯಲ್ಲಿ ನಡೆದರೆ ?'  ಮುಂದೇನು ಅನ್ನುವ ಧೋರಣೆಯ ಮೇಲೂ ಆ ಪಾತ್ರಗಳನ್ನೂ ಕಂಡದ್ದುಂಟು. ಇವೆಲ್ಲವುಗಳಿಗೂ ಉತ್ತರವನ್ನು ನನ್ನ ಸಮಕಾಲೀನ ಲೇಖಕರು ಈಯಬಲ್ಲರು ಎಂಬ ಆಸೆಯೊಂದು ನನ್ನಲ್ಲಿ ಬಲವಾಯಿತು. ಸಮಕಾಲೀನ ಅದರಲ್ಲೂ ಯುವ ಲೇಖಕರ ಬರಹಗಳು ಈಗಿನ ಕಾಲಕ್ಕೆ ಒಪ್ಪುವ ವಿಚಾರಗಳನ್ನು ಹೆಕ್ಕಿ ತೆಗೆದುಕೊಂಡು ಅದರಮೇಲೆ ಸಾಹಿತ್ಯ ರಚನೆಯಲ್ಲಿ ತೊಡಗುವ ಯಾವುದಾದರೊಂದು ತಾಣವಿದ್ದರೆ ಅದು ನನಗೆ ವರವಾದಂತಾಯಿತು ಎಂದುಕೊಂಡು ಅನ್ವೇಷಣೆಯಲ್ಲಿ ತೊಡಗಿದ್ದ ನನಗೆ ದೊರಕಿದ್ದು 'ಪ್ರತಿಲಿಪಿ' ಎನ್ನುವ ತಾಣ.

ಅಲ್ಲಿ ಸಮಕಾಲೀನ ಸಾಧಕರ ಮಹಾ ಕೂಟವೇ ನೆರೆದಿದೆ, ಆಧುನಿಕ ವಿಚಾರಗಳು ಡಿಜಿಟಲ್ ಮಾಧ್ಯಮದ ಮುಖೇನ ಚರ್ಚೆಗೆ ಬರುತ್ತವೆ, ಜೀವನದ ವಿವಿಧ ರಂಗಗಳಲ್ಲಿರುವವರು ಅಲ್ಲಿ ನಡೆಯುವ ನಿತ್ಯೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ, ಅಪಾರ ವಿಚಾರ ವಿನಿಮಯ ಅಲ್ಲಿ ನಡೆಯುತ್ತದೆ. ಅದೊಂದು ಮಹಾ ಸಾಗರ,ಅದರೊಳಗೆ ಇಳಿದು ನಮಗೆ ಬೇಕಾದ್ದಷ್ಟೇ ಹೆಕ್ಕಿಕೊಳ್ಳುವುದು ನಮ್ಮ ಧ್ಯೇಯವಾಗಬೇಕು ಅಷ್ಟೇ. ಇಂತಹ ತಾಣದಲ್ಲಿ ಇಂದು ನಾನೂ ಒಂದು ಕಿರುಗಾದಂಬರಿಯನ್ನು ಬರೆದಿದ್ದೇನೆ. ಇದು ಆ ತಾಣದಲ್ಲಿ ನನ್ನ ಚೊಚ್ಚಲ ಬರಹ. ಈ ಕೆಳಗಿನ ಕೊಂಡಿಯ ಸಹಾಯದಿಂದ ಅದನ್ನು ನೀವೂ ಓದಿ.

https://kannada.pratilipi.com/series/wcl6dynn7x8m

ಶುಕ್ರವಾರ, ಮಾರ್ಚ್ 27, 2020

ಚೀನಾದ ಸುಯೋಗದೆಡೆಗೆ ಹೆಜ್ಜೆ

ಗತ್ತು ಬೆದರಿ ಹೋಗಿದೆ, ಅಭಿವೃದ್ಧಿ ಹೊಂದಿದ, ಅಭಿವೃದ್ಧಿಶೀಲ, ಬಡ ರಾಷ್ಟ್ರಗಳಾದಿಯಾಗಿ ಎಲ್ಲರೂ ಕದ ಕವುಚಿಕೊಂಡು ಮನೆಯೊಳಗೆ ಕೂತುಬಿಟ್ಟಿದ್ದಾರೆ. ಕಣ್ಣಿಗೆ ಕಾಣದ ಜೀವಿಯೊಂದು ಪ್ರಪಂಚದ ಮನುಷ್ಯರನ್ನೆಲ್ಲಾ ಇನ್ನಿಲ್ಲದಂತೆ ಭೀತಿಗೊಳಪಡಿಸಿದೆ. ಹಿಂದೆಂದೂ ಕಾಣದಂತಹ ಕರ್ಫ್ಯೂ ಪರಿಸ್ಥಿತಿಯನ್ನು ಪ್ರಪಂಚದ ಎಲ ದೇಶಗಳಲ್ಲಿಯೂ ಹೇರಲಾಗಿದೆ. ದೇಶದ ಆರ್ಥಿಕ ಪರಿಸ್ಥಿತಿಗಳು ಪಾತಾಳದತ್ತ ಸಾಗಿವೆ, ಉತ್ಪಾದನಾ ರಂಗ ಬಾಗಿಲು ಜಡಿದುಕೊಂಡ ಪರಿಣಾಮ ಉತ್ಪಾದನೆ ಶೂನ್ಯ ತಲುಪಿದೆ. ಅದು ಹಾಗೆಯೇ ಮುಂದುವರೆದರೆ ಸಾಮಗ್ರಿಗಳಿಗೆ ಹಾಹಾಕಾರ ಉಂಟಾಗುವುದು ಆಶ್ಚರ್ಯವೇನಲ್ಲ. ಆಹಾರ ಬೆಳೆಗಳಿಗೆ ಕರ್ಫ್ಯೂವಿನಿಂದ ವಿನಾಯಿತಿ ಇದ್ದರೂ ರಸಗೊಬ್ಬರ ಮತ್ತಿತರ ಕೃಷಿ ಅಗತ್ಯ ವಸ್ತುಗಳು ಉತ್ಪಾದನೆ ನಿಲ್ಲಿಸಿರುವುದರಿಂದ ಕೃಷಿಯ ಮೇಲೆ ಹೊಡೆತ ಬೀಳದಿರದು. ದೇಶದೊಳಗೆ ಆರೋಗ್ಯ ಇಲಾಖೆ ಒಂದು ಹೊರತು ಪಡಿಸಿ ಇನ್ನಾವ ಇಲಾಖೆಯೂ ಪೂರ್ಣ ಪ್ರಮಾಣದಲ್ಲಿ ಕಾರ್ಯೋನ್ಮುಖವಾಗಿರುವುದು ಕಾಣಸಿಗುತ್ತಿಲ್ಲ. ನಮ್ಮ ಭಾರತದೊಳಗೆ ಪ್ಲೇಗು, ದಡಾರ ಬಂದಿದ್ದ ಸ್ವಾತಂತ್ರ್ಯ ಪೂರ್ವ ಕಾಲದ ಸಮಯವನ್ನು ಇದು ನೆನಪಿಸುವಂತಿದೆ. ಇಲ್ಲಿಗೆ ಸುಮಾರು ೧೦೨ ವರ್ಷಗಳ ಹಿಂದೆ ಬಾಂಬೆ ಜ್ವರ ಎನ್ನುವ ಮಾರಣಾಂತಿಕ ಪಿಡುಗೊಂದು ಮುಂಬಯಿನ ಬಂದರಿನ ಮೂಲಕ ಭಾರತಕ್ಕೆ ಕಾಲಿಟ್ಟಿತ್ತಂತೆ, ರೇವು ಪಟ್ಟಣದ ಅಧಿಕಾರಿಗಳು, ಪೊಲೀಸರು ಈ ರೋಗಕ್ಕೆ ಗುರಿಯಾಗಿ ಮೊದಮೊದಲು ಸತ್ತರಂತೆ. ತದನಂತರ ಅದೇ ರೋಗಕ್ಕೆ ತುತ್ತಾಗಿ ಭಾರತದಲ್ಲೇ ಲಕ್ಷಾಂತರ ಜನ ಸತ್ತರಂತೆ.

ಸ್ಪೇನ್ ದೇಶದಲ್ಲಿ ಹುಟ್ಟಿದ ಆ ವೈರಾಣು ಇಂಗ್ಲೀಷರ ಮುಖಾಂತರ ಕಡಲು ದಾಟಿ ಭಾರತಕ್ಕೆ ದಾಂಗುಡಿಯಿಟ್ಟರೂ, ಇಲ್ಲಿ ಬಹು ಬೇಗ ಹರಡಲು ಜಾಲ ಸುಸಜ್ಜಿತವಲ್ಲದೆ ಇರುವ ಮಿತಿಯಲ್ಲೇ ಹರಡಿ ಮರೆಯಾಯ್ತು. ಆಗ್ಗೆ ಬಂದು ಹೋಗುವ, ಜನಗಳನ್ನು ವೇಗವಾಗಿ ಸಾಗಿಸುವ ವಾಹನಗಳಿಲ್ಲದ ಪರಿಣಾಮ ಭಾರತದ ಆದ್ಯಂತ್ಯಕೆ ಸುಲಭವಾಗಿ ಹರಡಲು ಸಾಧ್ಯವಾಗಲಿಲ್ಲವೇನೋ. ಅದಾದ ಮೇಲೆ ಪ್ರಪಂಚವನ್ನು ಯಾವುದು ಈಗಿನಷ್ಟು ವಿಪರೀತಕ್ಕೆ ಕಾದಿರಲಿಕ್ಕಿಲ್ಲ. ಆಗಾಗ್ಗೆ ಭೇಟಿ ಕೊಟ್ಟು ಹೋದ ಸಾರ್ಸ್, ಹೆಚ್೧ಎನ್೧, ನಿಫಾ ವೈರಸ್ಸುಗಳು, ಹಂದಿ ಜ್ವರ, ಹಕ್ಕಿ ಜ್ವರ, ಮಂಗನ ಕಾಯಿಲೆಗಳೂ ಜಾಗತೀಕ ಮಟ್ಟದಲ್ಲಿ ಈಗಿನಷ್ಟು ಭಯ ಹುಟ್ಟಿಸಲು ಅಸಮರ್ಥವಾದವು. ಇವೆಲ್ಲವುಗಳ ತರುವಾಯು ಮನುಷ್ಯನ ಮಿತಿಯನ್ನು ಮನುಷ್ಯನಿಗೆ ಮತ್ತೊಮ್ಮೆ ತಿಳಿಸಲು ಭೂತಾಯಿ ಯೋಜನೆಯೊಂದನ್ನು ಕೈಗೊಂಡಂತೆ ಕರೋನ ವೈರಸ್ ಬಂದೆರಗಿದೆ.

ಕರೋನ ವೈರಸ್ ಕಾರಣದಿಂದ ಮುಚ್ಚಿದ ದೆಹಲಿಯ ಇಂಡಿಯಾ ಗೇಟ್

ಚೀನಾ ದೇಶದ ವುಹಾನ್ ನಗರದಲ್ಲಿ ಸಮುದ್ರಾಹಾರ ಮಾರುವ ಮಾರುಕಟ್ಟೆಯಲ್ಲಿ ಮೊತ್ತ ಮೊದಲಿಗೆ ಕಾಣಿಸಿಕೊಂಡಿತು ಎಂದು ನಂಬಲಾಗಿರುವ ಈ ಮಹಾ ಮಾರಣಾಂತಿಕ ವೈರಸ್ ಬಗ್ಗೆ ಹಲವಾರು ಊಹೆಗಳು ಚಾಲ್ತಿಯಲ್ಲಿವೆ. ಅಮೇರಿಕಾವೂ ಸೇರಿ ಮೊದಲಾದ ಪ್ರಬಲ ರಾಷ್ಟ್ರಗಳು ಚೀನಾ ದೇಶವು ಕೈಗೊಂಡಿರುವ ಜೈವಿಕ ಯುದ್ಧವಿದೆಂದು ಆಪಾದನೆ ಮಾಡುತ್ತಿವೆ. ಆಪಾದನೆಯ ಮಗ್ಗುಲಲ್ಲೇ ಆ ದೇಶಗಳಲ್ಲಿ ಅಸಂಖ್ಯ ಜನಗಳು ಮಾರಣಾಂತಿಕ ವೈರಸ್ ಗೆ ತುತ್ತಾಗಿದ್ದಾರೆ, ಇನ್ನು ಹಲವರು ಇಹ ಲೋಕ ತ್ಯಜಿಸಿಯೂ ಬಿಟ್ಟಿದ್ದಾರೆ.

ಅಮೆರಿಕಾದ ಸೇನಾ ವಲಯದಲ್ಲಿ ಕೇಳಿಬರುತ್ತಿರುವ ಈ ವೈರಸ್ ಬಗೆಗಿನ ವಿಷಯವೇನೆಂದರೆ ಈಗಿನ ವರೆವಿಗೂ ಚೀನಾ ಸುಮಾರು ೧೫೦೦ ಬಗೆಯ ವೈರಸ್ ಗಳನ್ನು ವುಹಾನ್ ನ ವೈರಾಣು ಅಧ್ಯಯನ ಕೇಂದ್ರದಲ್ಲಿ ಪ್ರಯೋಗಾರ್ಥ ಸಂಗ್ರಹಿಸಿ ಇಟ್ಟಿದೆ.  ಆ ೧೫೦೦ ವೈರಸ್ ಗಳ ಪೈಕಿ ಕರೋನ ವೈರಸ್ ಕೊಡ ಒಂದಾಗಿದ್ದು, ಇತರ ರಾಷ್ಟ್ರಗಳ ಮೇಲೆ ಹಿಂಬಾಗಿಲ ಮೂಲಕ ಜೈವಿಕ ಯುದ್ಧ ಸಾರಲು ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ವುಹಾನ್ ವೈರಾಣು ಅಧ್ಯಯನ ಕೇಂದ್ರ)ದಲ್ಲಿ ಸಂಗ್ರಹಿಸಿಡಲಾಗಿತ್ತು. ಪ್ರಯೋಗ ಮಾಡುತ್ತಿರುವ ಸಂದರ್ಭದಲ್ಲಿ ಉಂಟಾಗಿರುವ ಅಚಾನಕ್ ಎಡವಟ್ಟಿನಿಂದ ವೈರಾಣು ಸೋರಿಕೆಯಾಗಿ ಹೊರಜಗತ್ತಿಗೆ ಹರಿಯಿತು. ಅನ್ಯರ ಮೇಲೆ ಯುದ್ಧ ಸಾರಲು ಚೀನಾ ಇರಿಸಿಕೊಂಡಿದ್ದ ಆ ಪ್ರಬಲ ಜೈವಿಕಾಸ್ತ್ರ ಆಕಸ್ಮಿಕವಾಗಿ ತಮ್ಮ ಮೇಲೆಯೇ ತಿರುಮಂತ್ರವಾಯಿತು, ಇದಿಷ್ಟು.

ವೈರಾಣು ತನ್ನ ಕಬಂಧ ಬಾಹುಗಳನ್ನು ವುಹಾನ್ ನಾದ್ಯಂತ ಹರಡಲು ಶುರುವಿಟ್ಟುಕೊಂಡಾಗ ಚೀನಾ ಸರ್ಕಾರ ವೈರಸ್ ಹರಡುವಿಕೆ ತಡೆಗಟ್ಟಲು ವುಹಾನ್ ಪ್ರಾಂತ್ಯವನ್ನು ಪ್ರಪಂಚದಿಂದ ಅಕ್ಷರಶಃ ಬೇರ್ಪಡಿಸಿಬಿಟ್ಟಿತಂತೆ. ಮಾಸ್ಕ್, ಸ್ಯಾನಿಟೈಸರ್ ಗಳನ್ನು ಕೊಳ್ಳಲು ಜನ ಮುಗಿಬಿದ್ದು ಕಿಲೋಮೀಟರ್ಗಟ್ಟಲೆ ಸರದಿ ಸಾಲಿನಲ್ಲಿ ನಿಂತಿದ್ದು ಮೊನ್ನೆ ಮೊನ್ನೆ ವರೆಗೂ ಚೀನಾದಿಂದ ಬಂದ ವಿಡಿಯೋಗಳಲ್ಲಿ ದಾಖಲಾಗಿತ್ತು.ಈ ದುರಂತದಲ್ಲಿ ಚೀನಾದಲ್ಲಿ ಕೋಟಿಗಟ್ಟಲೆ ಜನ ಅಸು ನೀಗಿರಬಹುದು, ಆದರೆ ಆ ದೇಶ ಹೊರಜಗತ್ತಿಗೆ ತಪ್ಪು ಲೆಕ್ಕಗಳನ್ನು ಕೊಡುತ್ತಿದೆ ಎಂದು ಅನೇಕ ದೇಶಗಳು ವಾದಿಸುತ್ತಿವೆ. ಅದಕ್ಕೆ ಪುಷ್ಟಿಯೆನ್ನುವಂತೆ ಇತ್ತೀಚಿಗೆ ತಾವು ಚೀನಾದ ಫೋನ್ ಕಾಲ್ ಗಳ ಮೇಲೆ ನಿಗಾ ಇರಿಸುವುದಾಗಿಯೂ, ೨೦೧೯ರ ಡಿಸೆಂಬರ್ ನಿಂದ ಈಚೆಗೆ ಬರೋಬ್ಬರಿ ೧ ಕೋಟಿ ಫೋನ್ ಗಳು ಚೀನಾದಲ್ಲಿ ಸ್ವಿಚ್ ಆಫ್ ಆಗಿರುವುದಾಗಿಯೂ ಅನೇಕ ದೇಶಗಳು ಹೇಳಿಕೊಳ್ಳುತ್ತಿವೆ. ಒಟ್ಟಿನಲ್ಲಿ ಚೀನಾದತ್ತ ಎಲ್ಲ ದೇಶಗಳ ದೃಷ್ಟಿ ನೆಟ್ಟಿದೆ. ಏಷ್ಯಾ ಖಂಡದಲ್ಲಿ ನಾಯಕತ್ವ ವಹಿಸಿಕೊಳ್ಳಲು ತುದಿಗಾಲಲ್ಲಿ ನಿಂತಿರುವ ಆ ದೇಶ ಹೀಗೆ ಮಾಡಿದ್ದರೂ ಮಾಡಿರಬಹುದೆಂಬ ಅನುಮಾನ ಹಲವು ದೇಶಗಳಿಗೆ ಬಲವಾಗಿ ಇದ್ದಂತಿದೆ. ಹಲವಾರು ಜನ ಅದಾಗಲೇ ವಿಶ್ವ ಸಂಸ್ಥೆ ಮಧ್ಯೆ ಪ್ರವೇಶಿಸಿ ಸಮಿತಿಯೊಂದನ್ನು ರಚಿಸಿ ತನಿಖೆ ಕೈಗೊಳ್ಳುವಂತೆ ಒತ್ತಡ ಹೇರುತ್ತಲೂ ಇದ್ದಾರೆ.

ಅಲ್ಲಿಗೆ ಚೀನಾದ ರಾಜ ತಾಂತ್ರಿಕತೆ ಸಂಪೂರ್ಣವಾಗಿ ಮುಗ್ಗರಿಸುವ ಎಲ್ಲಾ ಲಕ್ಷಣಗಳೂ ಗೋಚರವಾಗುತ್ತಿವೆ. ಇನ್ನೂ ಮುಂದುವರೆದು ಚೀನಾದ ಬಣದಲ್ಲಿ ಯಾವುದಾದರೂ ದೇಶಗಳು ಗುರುತಿಸಿಕೊಂಡವೆಂದರೆ ಅದರ ಅರ್ಥ ಆ ದೇಶಗಳಿಗೆ ಚೀನಾದಿಂದ ಯಾವುದೋ ತೆರನಾದ ಲಾಭ ಇದೆ ಎಂತಲೇ. ಲಾಭದ ಆಸೆ ತೋರಿಸಿ ಕೆಲವು ದೇಶಗಳನ್ನು ನುಂಗಿ ನೊಣವಿಕೊಂಡ ಇತಿಹಾಸ ಈಗಾಗಲೇ ಚೀನಾಕ್ಕೆ ಇದೆ. ಅದರ ಮೇಲೂ ಸಮಕಾಲೀನ ಪರಿಸ್ಥಿತಿಗಳನ್ನು ನಿಭಾಯಿಸಲು, ಜನರು ದಂಗೆ ಏಳದಂತೆ ತಡೆದು ದೇಶ ನಡೆಸಲು ಪಾಕಿಸ್ತಾನದಂತಹ ರಾಷ್ಟ್ರಗಳಿಗೆ ಚೀನಾದ ಒಡನಾಟ ಬಲವಂತವಾದರೂ ಬೇಕೇ ಬೇಕು. ಪರಿಸ್ಥಿತಿಯ ತೀಕ್ಷಣತೆಗೆ ಕಟ್ಟು ಬಿದ್ದು ದೇಶಗಳು ಚೀನಾದ ಒಡನಾಟಕ್ಕೆ ಒಗ್ಗಿಕೊಳ್ಳುತ್ತವೇ ಹೊರತು ನಿಜವಾದ ಸ್ನೇಹದಿಂದಲ್ಲ.ಎಲ್ಲ ದೇಶಗಳೂ ಈಗ ಚೀನಾವನ್ನು ಅನುಮಾನದ ಭೂತಗನ್ನಡಿ ಹಿಡಿದು ನೋಡುತ್ತಿವೆ. ಪ್ರಬಲ ಆರ್ಥಿಕ ಶಕ್ತಿಯಾಗಿ ಬೆಳೆಯಹೊರಟಿದ್ದ ಚೀನಾಕ್ಕೆ ಕರೋನ ಮರ್ಮಾಘಾತ ನೀಡಿದೆ, ಅಷ್ಟೇ ಅಲ್ಲದೆ ಇಡೀ ಪ್ರಪಂಚದ ಆರ್ಥಿಕತೆಯನ್ನು ಹಿಡಿದು ಕೆಳಕ್ಕೆ ದೂಡಿದೆ.

ಚೀನಾ ತನ್ನ ಉದ್ಧಾರಕ್ಕಾಗಿ ತನಗೆ ಸಿಗುವ ಎಲ್ಲಾ ಮಾರ್ಗಗಳನ್ನು ಬಳಸಿಕೊಳ್ಳುತ್ತಿರುವುದು ಯಾರಿಗೂ ಅರ್ಥವಾಗದ ವಿಷಯವೇನಲ್ಲ. ಆದರೆ ಅದರ ನಿರ್ಧಾರದಿಂದ ಅಮಾಯಕರಿಗೆ ತೊಂದರೆಯಾಗದಂತಿರಲಿ, ನೋವಾಗದಂತಿರಲಿ. ಚೀನಾ ಸಸ್ಟೈನಬಲ್ ಡೆವಲಪ್ಮೆಂಟ್(ಸುಸ್ಥಿರ ಅಭಿವೃದ್ಧಿ) ಮಾರ್ಗದಲ್ಲಿ ಇದೆಯೆಂದು ಆ ದೇಶದ ವಕ್ತಾರರು ಮಾತ್ರ ಹೇಳಿಕೊಳ್ಳುವಂತಾಗದೆ ಅದು ನಿಜ ಸ್ಥಿತಿಯಲ್ಲಿಯೂ ಹಾಗೆ ಇರಲಿ. ಅನ್ಯ ದೇಶಗಳ ಮೇಲೆ ಹಿಡಿತ ಸಾಧಿಸುವ ಚೀನಾದ ಮನೋಧೋರಣೆ ಇನ್ನಾದರೂ ಕಡಿಮೆಯಾಗಲಿ. ಪ್ರಕೃತಿಗೆ ಇನ್ನಿಲ್ಲದಂತೆ ಅಪಚಾರವೆಸಗಿರುವ ಚೀನಾ ತನ್ನ ತಪ್ಪನ್ನು ಅರಿತುಕೊಂಡು ಒಳಿತಿನ ಕಡೆಗೆ ಹೆಜ್ಜೆಯಿಡಲಿ, ಸುಯೋಗದೆಡೆಗೆ ಹೆಜ್ಜೆಯಿರಿಸುವ ನಾಯಕತ್ವವವನ್ನು ಅದೇ ವಹಿಸಿಕೊಳ್ಳಲಿ, ನಮ್ಮದೇನು ಅಭ್ಯಂತರವಿಲ್ಲ.

-o-

ಸೋಮವಾರ, ಮಾರ್ಚ್ 9, 2020

ನಾನಿನ್ನೂ ಮನಗಂಡಿಲ್ಲ

ಅಗೋ! ನೋಡಲ್ಲಿ.
ಹಿರಿದಾರಿಯೊಳಗೆ ಮೊರೆಯುವ
ಕಾರುಗಳ ಮಾಲೀಕ ನಾನಾಗಲಿಲ್ಲ,
ಪೂರ್ವ-ಪಶ್ಚಿಮ ಸಮುದ್ರಗಳ ದಾಟಿ
ನಾನೋಡಲಿಲ್ಲ,
ಉತ್ತರದ ಹಿಮಾಲಯವನು ದಾಟುವ
ಸುಯೋಗವದು ದೊರೆತೇ ಇಲ್ಲ.

ಇರುವ ದೇಶದೊಳಗೆ ಭಲಾರೆ
ಚಾಲಾಕಿ ನಾನಾಗಲಿಲ್ಲ.
ಅನ್ಯರಿಗೆ ಮೆತ್ತೆ ಹೂವಿನ ದಿಂಬಾಗಿ
ನಾ ಮಾಡುತ್ತಿರುವುದೇನೋ ಅರಿವಿಲ್ಲ,
ಮಾಡುವ ಕೃತಿಯೊಳಗೆ ಮನವಿಲ್ಲ,
ಮಾಡದ ಕೃತಿಗಳೆಡೆಗೆ ಬಿಡುವಿಲ್ಲ,
ನಾನೇನೋ ಇನ್ನು ಅರಿಯಲಾಗಿಲ್ಲ,
ಎಲ್ಲರ ಜೀವನವೂ ಹೀಗೆಯೇನೋ?
ನಾನಿನ್ನೂ ಮನಗಂಡಿಲ್ಲ.

-o-

ಶುಕ್ರವಾರ, ಮಾರ್ಚ್ 6, 2020

ಕನ್ನಡ ಗಂಗೆ

ಈಚೀಚೆಗೆ ಆಲೂರು ವೆಂಕಟರಾಯರ 'ಕರ್ನಾಟಕ ಗತ ವೈಭವ' ಪುಸ್ತಕವನ್ನೋದುತ್ತಿದ್ದೆ. ಈ ಮೊದಲೇ ಒಮ್ಮೆ ನಡು-ನಡುವಿನ ಪ್ರಕರಣಗಳನ್ನು ಓದಿಕೊಂಡಿದ್ದರಿಂದ್ದ ಆ ಪುಸ್ತಕವನ್ನು ಆಮೂಲಾಗ್ರವಾಗಿ ಅರ್ಥ ಮಾಡಿಕೊಂಡಿದ್ದೇನೆ ಅನ್ನುವ ಭಾವನೆ ಬಂದಿರಲಿಲ್ಲ. 'ಕಾಲಕ್ಕೆ ತಕ್ಕಂತೆ, ದೇಶಕ್ಕೆ ತಕ್ಕಂತೆ' ಅನ್ನುವಂತೆ ನನಗೆ ಬೇಕಾದಷ್ಟನ್ನೇ ಓದಿಕೊಂಡು ಅದರೊಳಗೊಂದು ಅರ್ಥ ಗ್ರಹಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲೋ, ಸಮಾನ ಮನಸ್ಕರೊಂದಿಗೆ ಹರಟುವಾಗಲೋ ಹಂಚಿಕೊಳ್ಳುತ್ತಿದ್ದೆ. ಪುಸ್ತಕವೊಂದನ್ನು ಪ್ರತೀ ಬಾರಿ ಓದಿದಾಗಲೂ ಬೇರೆ ಬೇರೆ ಭಾವನೆಗಳನ್ನು ಗ್ರಹಿಸುತ್ತೇವೆ ಎನ್ನುವ ಮಾತು ನಿಜ, ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚಿನದನ್ನು ಗ್ರಹಿಸಿಕೊಳ್ಳುತ್ತಾ ಹೋದೆ.

karnataka gatha vaibhava book ಗೆ ಚಿತ್ರಗಳ ಫಲಿತಾಂಶಗಳು
ಕನ್ನಡ ಕುಲ ಪುರೋಹಿತ ಆಲೂರು ವೆಂಕಟರಾಯರು

ಎಂದಿನಂತೆ ವೆಂಕಟರಾಯರು ಗಾಢ ನಿದ್ರೆಯಲ್ಲಿದ್ದ ಕನ್ನಡಿಗರನ್ನು ತಮ್ಮ ಲೇಖನಿಯಿಂದಲೇ ಚುಚ್ಚಿ ಚುಚ್ಚಿ ಎಬ್ಬಿಸುತ್ತಿದ್ದರು. ಕನ್ನಡಿಗರ ಅಭಿಮಾನ ಶೂನ್ಯತ್ವವನ್ನು ಎತ್ತಿ ತೋರಿಸುತ್ತಲೂ, ಕನ್ನಡಿಗರ ಐತಿಹಾಸಿಕ ಮಹತ್ತುಗಳನ್ನು ತೆರೆದಿಡುತ್ತಲೂ ಮುಂದೆ ಸಾಗುತ್ತಿದ್ದ ಬಗೆ ಸ್ವರಾಜ್ಯ ಚಳುವಳಿ ಉತ್ತುಂಗದಲ್ಲಿದ್ದ ಆ ಕಾಲಕ್ಕೂ, ಸ್ವಾಯತ್ತತೆ ಉತ್ತುಂಗದಲ್ಲಿರುವ ಈ ಕಾಲಕ್ಕೂ ಸರಿಯಾಗಿ  ಒಪ್ಪುವಂತಹುದೇ. ಆಗ್ಗೆ ನಮ್ಮ ಹಿಂದಿನ ಸಾಧನೆಗಳ ಬಗ್ಗೆ ನಮಗೆ ತಿಳಿಯಪಡಿಸಿ ನಮ್ಮ ಇತಿಹಾಸದ ಬಗ್ಗೆ ಹೆಮ್ಮೆ ಮೂಡಿಸಿ ನಮ್ಮ ತಲೆಮಾರನ್ನು ದೇಶದ ಸ್ವಾತಂತ್ರ್ಯಕ್ಕೆ ಅಣಿಗೊಳಿಸುವುದು ತುರ್ತಾದ ಕಾರ್ಯವಾದ್ದರಿಂದ ಹಾಗೂ ಆಗಿನ ಸಂಶೋಧನೆಗಳ ಮಿತಿಗಳನ್ನು ಅರಿತುಕೊಂಡು ವೆಂಕಟರಾಯರು ಅಂದು ಮಾಡಿದ ಪ್ರಯತ್ನ ಅಭಿನಂದನಾರ್ಹ, ಪುಸ್ತಕದ ಮೊದಲ ಮುದ್ರಣ ಹೊರಟು ಕೆಲವೇ ತಿಂಗಳುಗಳಲ್ಲಿ ಎರಡನೇ ಮುದ್ರಣಕ್ಕೆ ಅಣಿಗೊಂಡಿದ್ದು ಕನ್ನಡ ಓದುಗರು ಹೊಸದೇನನ್ನೋ ಗ್ರಹಿಸುತ್ತಿದ್ದಾರೆ ಅನ್ನುವುದಕ್ಕೆ ಕೈಗನ್ನಡಿ. ಇದೂ ಮುಂದುವರೆದು ಭಾಷಾವಾರು ಪ್ರಾಂತ ರಚನೆಯಲ್ಲಿ ಕರ್ನಾಟಕದ ನಾಲ್ಕೂ ದಿಕ್ಕುಗಳ ಗಡಿ ಗುರುತು ಮಾಡುವಲ್ಲಿ ಇದೇ 'ಕರ್ನಾಟಕ ಗತ ವೈಭವ' ಪುಸ್ತಕ ವಹಿಸಿದ ಪಾತ್ರ ಅಂತಿತಹುದಲ್ಲ. ಸ್ವರಾಜ್ಯ ಚಳುವಳಿಗೆ ಕನ್ನಡಿಗರನ್ನು ಅಣಿಗೊಳಿಸುವಾಗ ತಮಗೇ ಗೊತ್ತಿಲ್ಲದಂತೆ ಭವಿಷ್ಯದ ಕರ್ನಾಟಕ ರಾಜ್ಯಕ್ಕೆ ರೂಪು ರೇಷೆ ಬರೆದಿದ್ದ ಮಹತ್ಕೃತಿಯನ್ನು ಸಿದ್ಧಪಡಿಸಿದ್ದರು ವೆಂಕಟರಾಯರು.

ಆದರೂ ಹಿಂದೊಮ್ಮೆ ಗೋದಾವರೀ ನದಿಯನ್ನು ದಾಟಿ ವಿಂದ್ಯ ಪರ್ವತದಾಚೆಗೂ ಆಳ್ವಿಕೆ ನಡೆಸಿದ್ದ, ನೇಪಾಳ-ಮಯನ್ಮಾರ್ ದೇಶಗಳೊಂದಿಗೆ ಕೊಳು-ಕೊಡುಗೆ ವ್ಯವಹಾರಗಳನ್ನು ನಡೆಸಿದ್ದ, ಮಧ್ಯ ಏಷ್ಯಾ ದೇಶಗಳಿಗೆ ಶಿಲ್ಪಿಗಳನ್ನು ಕಳುಹಿಸಿದ್ದ ಧೀಮಂತ ಕನ್ನಡ ಜನಾಂಗ ಬರು ಬರುತ್ತಾ ತಮ್ಮ ಘನ ಇತಿಹಾಸ ಮರೆತು ಆಳಿಸಿಕೊಳ್ಳುವ, ಅನ್ಯರಿಂದಾಗುವ ಹಿಂಸೆಗೆ ಒಗ್ಗಿಕೊಳ್ಳುವ ಮನಸ್ಥಿತಿಗೆ ತಲುಪಿಕೊಳ್ಳಲು ಕಾರಣಗಳು ಅಸಂಖ್ಯವಿವೆ. ಆ ಕಾರಣಗಳ ಪಟ್ಟಿಯಲ್ಲಿ ಆಗಿನ ಸಮಾಜಿಕ ಕಟ್ಟು ಪಾಡುಗಳು, ಧಾರ್ಮಿಕ ಕಾರಣಗಳು ಅಗ್ರ ಸ್ಥಾನದಲ್ಲಿ ನಿಲ್ಲುತ್ತವೆ.

ಹನ್ನೆರಡನೇ ಶತಮಾನದವರೆವಿಗೂ ಜೈನರು ಕಟ್ಟಿ ಬೆಳೆಸಿದ ಭಾಷೆ ಕನ್ನಡ. ಇತ್ತೀಚಿಗೆ ಗೆಳೆಯನೊಬ್ಬ ನನ್ನ ಭಾಷಾ ಸಹಿಷ್ಣುತೆಯನ್ನು ಪರೀಕ್ಷಿಸುವ ಸಲುವಾಗಿ 'ಸಂಸ್ಕೃತಂ ದೈವ ಭಾಷಿತಂ' ಎಂದ. ನಾನು ನಸು ನಗುತ್ತಲೇ 'ಕನ್ನಡಂ ಜೈನ ಭಾಷಿತಂ' ಎಂದೆ. ಅದೇಕೆಂದು ಮತ್ತೆ ಚರ್ಚೆ ಆರಂಭವಾಯಿತು. ಹನ್ನೆರಡನೇ ಶತಮಾನದವರೆವಿಗೂ ಹಿಂದೂ ಧಾರ್ಮಿಕ, ವೈಚಾರಿಕ ವಿಚಾರಗಳು ಕನ್ನಡ ಜನರಿಗೆ ಕನ್ನಡದಲ್ಲಿ ತಲುಪುವ ವ್ಯವಸ್ಥೆ ತೀರಾ ಅಲ್ಪವಾಗಿದ್ದುದ್ದು ಇಂದಿಗೆ ಢಾಳಾಗಿ ಗೋಚರಿಸುತ್ತಿದೆ. ಕನ್ನಡದದ ಬಾಲ್ಯಾವಸ್ಥೆಯಲ್ಲಿ ಅದನ್ನು ಜೈನರು ಸಲಹಿದ ಬಗೆಯೇ ವಿಶಿಷ್ಟ.೬ - ೧೦ನೆ ಶತಮಾನದ ಸಮಯದಲ್ಲಿ ಬೌದ್ಧ, ಜೈನ ಧರ್ಮ ಭಾರತದಲ್ಲಿ ಏರುಗತಿಯಲ್ಲಿ ಸಾಗಿದ್ದ ಕಾಲ. ಹಿಂದೂವೆಂಬ ಧರ್ಮವಿಲ್ಲದೆ ಈಗಿನ ಹಿಂದೂಗಳು ಆಗ ಶೈವ, ವೈಷ್ಣವ ಮತ ವಹಿಸಿಕೊಂಡಿದ್ದು, ಬೌದ್ಧ-ಜೈನ ಧರ್ಮಗಳು ಆಗಿನ ಪ್ರಬಲ ಧರ್ಮಗಳ ಕೆಲ ಲೋಪ ದೋಷಗಳನ್ನು ಎತ್ತಿ ತೋರಿ ಅವರುಗಳನ್ನು ತನ್ನತ್ತ ಸೆಳೆದುಕೊಂಡ ಪರಿಣಾಮ ಸಾಹಿತ್ಯ, ಇತಿಹಾಸ ದಾಖಲು ಎಲ್ಲವೂ ಜೈನ-ಬೌದ್ಧ ಮತದ ಸುತ್ತ ಮುತ್ತಲೇ ನಡೆದು ಈಗ ಹಾಗೆ ಕಾಣಿಸುತ್ತಿದೆ ಎನ್ನುವುದು ಕೆಲವು ವಿದ್ವಾಂಸರ ಅಂಬೋಣ, ಇರಲಿ. ಧರ್ಮ-ವೈಚಾರಿಕತೆ-ಭಾಷೆಯ ತ್ರಿಕೋನ ಪೈಪೋಟಿಗೆ ನಾವು ದಾರಿಯಾಗುವುದು ಬೇಡವೇ ಬೇಡ.

ಹನ್ನೊಂದನೇ ಶತಮಾನದ ಅಂತ್ಯ ಸನ್ನಿಹಿತವಾಗುವ ವಚನ ಸಾಹಿತ್ಯ ಕನ್ನಡ ಸಾಹಿತ್ಯದಿಂದ ಟಿಸಿಲೊಡೆದು ನಿಂತು, ಸಾಮಾನ್ಯರನ್ನು ಸಾಮಾನ್ಯ ಭಾಷೆಯಲ್ಲಿಯೇ ತಲುಪುವ ತವಕದಿಂದ ಮೊದಲಾಯ್ತು. ಮುಂದೆ ಕನ್ನಡ ಸಾಹಿತ್ಯದಲ್ಲಿ ವಚನಗಳದ್ದೇ ಕ್ರಾಂತಿಯುಂಟಾಯಿತೆಂದರೂ ತಪ್ಪಾಗಲಾರದು. ತದನಂತರದಲ್ಲಿ ಅಷ್ಟೇ ಪ್ರಮಾಣದ ಕೆಳದೂಡುವಿಕೆಯೂ ನಡೆಯಿತೆನ್ನಿ. ಅದಾದನಂತರ ಪರಕೀಯರ ಆಕ್ರಮಣ, ನಮ್ಮವರ ಮಾರಣ ಹೋಮ ಇಂತಹ ಘಟನಾವಳಿಗಳಿಗೆ ತೆರೆದುಕೊಂಡ ನಾವು ನಮ್ಮ ಹಿನ್ನೆಲೆಯನ್ನು ಗಮನಿಸುವುದಿರಲಿ ಆಗಿನ ತುತ್ತಿನ ಚೀಲ ತುಂಬಿಸಿಕೊಂಡರೆ ಸಾಕೆನ್ನುವ ಮಟ್ಟ ತಲುಪಿದ್ದು ಅತೀ ವಿಷಾದನೀಯ. ಅದರ ನಡು ನಡುವೆ ಅನೇಕ ಆಸ್ಥಾನಗಳು ಕನ್ನಡವನ್ನು ಇನ್ನಿಲ್ಲದಂತೆ ಪೋಷಿಸಿದರೂ ಆಗಿಂದಾಗ್ಗೆ ಭಾಷೆಗಳ ಕೆಸರೆರಚಾಟ ನಡೆದೇ ಇತ್ತು.

ಕನ್ನಡದ ಅವಗಣನೆ ಅಲ್ಲಿಗೆ ನಿಲ್ಲಲಿಲ್ಲ, ಒಳಗೊಳಗೇ ತಿರುಗಿ ಸೆಟೆದು ನಿಲ್ಲುತ್ತಲೇ ಸಾಗಿದ್ದು, ಅದನ್ನು ತಡೆದೂ ಈ ಭಾಷೆ ಬಿಗಿಯಾಗಿ ನಿಂತಿದ್ದು ಅನೂಹ್ಯ. ಅಷ್ಟೇ ಏಕೆ ಈಚೆಗಿನ ಹದಿನಾರನೇ ಶತಮಾನದ ಪುರಂದರ ದಾಸರು ಕರ್ನಾಟಕ ಸಂಗೀತ ಪರಂಪರೆಯನ್ನು ಕಟ್ಟಿ ಬೆಳೆಸುತ್ತಿದ್ದಾಗ ಅದನ್ನು 'ತಿರುಪೆಯವರ ಗೀತ ಮೇಳವೆಂದು' ಆಡಿಕೊಂಡು ನಿರ್ಲಕ್ಷಿಸಿದವರ್ಯಾರು?. ಕನ್ನಡದ ಪುರಂದರರು - ತೆಲುಗಿನ ಅನ್ನಮಾಚಾರ್ಯರು ಕರ್ನಾಟಕ ಸಂಗೀತಕ್ಕೆ ಕೊಟ್ಟ ಕೊಡುಗೆ ಅಂತಿತಹುದೇ?. ಅದೇ ಮುಂದುವರಿದು ೧೭-೧೮ ನೇ ಶತಮಾನಕ್ಕೆ ತಮಿಳುನಾಡಿನ ತ್ಯಾಗರಾಜರು ನೀಡಿದ ಅಮೋಘ ಯೋಗದಾನವನ್ನು ಮರೆಯುವುದೆಂತು?. ಕನ್ನಡ-ತೆಲುಗು ಭಕ್ತಿ -ಸಾಹಿತ್ಯ ಪರಂಪರೆಯಲ್ಲಿ ಪುರಂದರರು-ಅನ್ನಮಾಚಾರ್ಯ-ತ್ಯಾಗರಾಜರನ್ನು ಮರೆಯುವುದೆಂತು?. ಈ ತ್ರಿಮೂರ್ತಿಗಳು ಸಂಗೀತ-ಸಾಹಿತ್ಯ ಲೋಕಕ್ಕೆ ಕೊಟ್ಟ ಕೊಡುಗೆ ಮುಚ್ಚಿಡುವಷ್ಟು ಸುಲಭವೂ ಕ್ಲೇಶವೂ ಆಗಿಲ್ಲದ ಕಾರಣದಿಂದಲೇ ಅಲ್ಲವೇ ಅವು ಇಂದಿಗೂ ಜನಜನಿತವಾಗಿರುವುದು, ಇಷ್ಟು ದಿನ ಸವೆಸಿದರು ಕಾಂತಿಗುಂದದೆ ಹೊಳೆಯುತ್ತಿರುವುದು.

ಒಂದು ಭಾಷೆಯ ಸಾಹಿತ್ಯ, ಇತಿಹಾಸ, ಅರ್ಥ ವ್ಯವಸ್ಥೆ ಇನ್ನಿತರ ಮಾನದಂಡಗಳು ಎಷ್ಟೇ ಇರಲಿ, ಆ ಭಾಷೆಯನ್ನಾಡುವ ಮಕ್ಕಳು ಅವರದ್ದೇ ಭಾಷೆಯನ್ನೂ ನಿರ್ಲಕ್ಷಿಸಿಬಿಟ್ಟರೆ ಅಥವಾ ಇನ್ನಿತರ ಭಾಷೆಗಳೆಡೆಗೆ ಹೊರಳಿಕೊಂಡು ಬಿಟ್ಟರೆ ಭಾಷೆ ಸತ್ತಂತೆಯೇ. ಕನ್ನಡಿಗರು ಇದೀಗ ಕಾರ್ಯೋನ್ಮುಖರಾಗಬೇಕಿರುವುದು ಈ ವಿಚಾರದ ವಿರುದ್ಧ ದಿಕ್ಕಿನಲ್ಲಿ. ಕನ್ನಡ ಭಾಷೆಯನ್ನೂ ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಘನಿಷ್ಠವಾಗಿ ಬಳಸುತ್ತಾ ಸಾಗುವುದು. ಇದಕ್ಕಿಂತ ದೊಡ್ಡ ಹೋರಾಟ, ಚಳುವಳಿಯೇ ಇಲ್ಲವೆಂಬುದು ನನ್ನ ಭಾವನೆ. ಅದೊಂದು ರೀತಿ ಮಹಾ ಯಾಗದಂತೆ. ವೆಂಕಟರಾಯರು ಕರ್ನಾಟಕ ಗತ ವೈಭವದ ಮೂಲಕ ಆ ಮಹಾಯಾಗಕ್ಕೆ ವೇದಿಕೆ ಕಟ್ಟಿದ್ದಾರೆ, ಅದರೊಳಗೆ ಜ್ವಾಲೆ ಹೊತ್ತಿಸಿ ಯಾಗ ಫಲ ಪಡೆಯಬೇಕಾದವರು ನಾವು ನೀವು ಮಾತ್ರವೇ.

ಕನ್ನಡಿಗರು ಎಡವಿದ್ದು, ಎಡವುತ್ತಿರುವುದು ಎಲ್ಲಿ?

ಅತೀ ಮುಖ್ಯವಾಗಿ ಮೂರು ಕಾರಣಗಳಿಂದ ಕನ್ನಡಿಗರು ಕಳಾ ವಿಹೀನರಾಗಿದ್ದಾರೆ.

೧. ಯಾವುದೇ ಭಾಷೆ ಗಟ್ಟಿಯಾಗಿ ನಿಲ್ಲುವುದು ತಲೆಮಾರಿನಿಂದ ತಲೆಮಾರಿಗೆ ಅದು ಸಾಗಿದಾಗ ಮಾತ್ರವೇ. ಮಹತ್ಕೃತಿಗಳು, ಹೋರಾಟಗಳಷ್ಟೇ ಭಾಷೆಯನ್ನು ಬಿಗಿಯಾಗಿ ಹಿಡಿದು ನಿಲ್ಲಿಸಲು ಅಶಕ್ತವಷ್ಟೇ. ಮಹತ್ಕೃತಿಗಳ ರಚನೆಯಲ್ಲಿ , ಐತಿಹಾಸಿಕವಾಗಿ ಮಂಚೂಣಿಯಲ್ಲಿದ್ದ, ಮಧ್ಯ ಏಷ್ಯಾದ ಅದೆಷ್ಟೋ ಭಾಷೆಗಳು ಹೇಳ ಹೆಸರಿಲ್ಲದಂತೆ ನಿರ್ನಾಮವಾಗಿವೆ. ಕನ್ನಡಿಗರು, ಅದರಲ್ಲೂ ೨೧ನೇ ಶತಮಾನದ ಆದಿಭಾಗದ ಕನ್ನಡಿಗರು ತಮ್ಮ ತಲೆಮಾರಿನ ಬಹುತೇಕ ವಿಚಾರಗಳನ್ನು ತಮ್ಮ ಮಕ್ಕಳ ತಲೆಗೆ ದಾಟಿಸೇ ಇಲ್ಲ. ದಾಟಿಸುವ ವಿಚಾರದಲ್ಲಿ ದ್ವಂದ್ವ ಅವರನ್ನಿನ್ನು ಕಾಡುತ್ತಿರುವಂತಿದೆ. ಸದ್ಯಕ್ಕೆ ಇಂಗ್ಲೀಷು ಸರ್ವಾಂತರ್ಯಾಮಿಯಾಗಿದೆ, ಕನ್ನಡ ಮನೆಯಿಂದ ಕಲಿತದ್ದು ಎಂಬ ಕಾರಣಕ್ಕೆ ಕೆಲವರು ಕನ್ನಡವಾಡುತ್ತಿರುವುದು ಕುಚೋದ್ಯವಲ್ಲ. ಈಗಿನ ಕನ್ನಡ ಹೋರಾಟಗಾರರು ಹಿಂದಿಯ ವಿರುದ್ಧ ತಳೆದಷ್ಟು ಕಠಿಣ ನಿಲುವನ್ನು ಇಂಗ್ಲೀಷಿನ ವಿರುದ್ಧ ತಳೆಯಲು ನಿಸ್ಸಂದೇಹವಾಗಿ ಅಸಮರ್ಥರೇ. ಪ್ರಾಪಂಚಿಕವಾಗಿ ವಿಚಾರ ವಿನಿಮಯ ಮಾಡಲು, ಹೊರಗಿನದನ್ನು ಅರಿತುಕೊಳ್ಳಲು, ಔದ್ಯೋಗಿಕವಾಗಿ ಇಂಗ್ಲೀಷು ಬೇಕೇ ಬೇಕೇ ಎಂದರೂ, ಇಂಗ್ಲೀಷನ್ನು ತಮ್ಮ ಘನತೆ, ಪ್ರತಿಷ್ಠೆಯ  ಒಂದು ಅಂಗವಾಗಿ ಬಳಸುತ್ತಿರುವುದು ವಿಷಾದನೀಯ.

೨. ಕನ್ನಡಿಗರು ಇತಿಹಾಸ ಪ್ರಿಯರಲ್ಲ. ತಮ್ಮ ಘನವಾದ ಇತಿಹಾಸದ ಬಗ್ಗೆ ಎಷ್ಟೋ ಕನ್ನಡಿಗರಿಗೆ ಎಳ್ಳಷ್ಟೂ ಅರಿವಿಲ್ಲ. ಅಸಂಖ್ಯ ಕನ್ನಡಿಗರಿಗೆ ಕನ್ನಡ ನಾಡನ್ನಾಳಿದ ಒಬ್ಬ ರಾಜನ ಹೆಸರೂ ಗೊತ್ತಿಲ್ಲ. ಆಗ್ಗೊಮ್ಮೆ ಈಗೊಮ್ಮೆ ಶಾಲಾ ಪಠ್ಯಪುಸ್ತಕ ಪುನರ್ ರಚನಾ ಸಮಿತಿಗಳು  ಅವರುಗಳ ಕಾರ್ಯವನ್ನು ಕಾಲ ಕಾಲಕ್ಕೆ ನಡೆಯಿಸಿಕೊಡಿತ್ತಿದ್ದು ಸಂತೋಷವಷ್ಟೇ, ಆದರೆ ಈಗೀಗ ಅದು ರಾಜಕೀಯ ಮೇಲಾಟಕ್ಕೆ ಗುರಿಯಾಗಿರುವುದು ವಿಷದೀಕರಿಸದೆ ಬಿಡುವಂತಹುದಲ್ಲ. ಕನ್ನಡಿಗರು ತಮ್ಮ ಘನ ಹಿನ್ನೆಲೆಯ ಬಗ್ಗೆ ಅರಿವುಳ್ಳವರಾಗಬೇಕು, ನಮ್ಮ ಪೂರ್ವಜರು ಹಿಂದೆ ಬದುಕಿ ಬಾಳಿದ ಬಗ್ಗೆ ಅರಿವಿದ್ದರೆ ಮಾತ್ರವಲ್ಲವೆ ಈಗ ನಮಗೆ ಹೆಮ್ಮೆಯುಂಟಾಗುವುದು ಹಾಗು ನಾವು ಮಾಡಬೇಕಿರುವ ಕಾರ್ಯಗಳತ್ತ ಅಪಾರ ಜವಾಬ್ದಾರಿಯುಂಟಾಗುವುದು. ಇಲ್ಲದಿದ್ದರೆ ನಮ್ಮ  ಜನಾಂಗ ಜವಾಬ್ದಾರಿಯುತ ಜನಾಂಗವಾಗಿ ಬಾಳಲು ಸಾಧ್ಯವೇ?.

೩. ಮೂರನೆಯದು ಅಭಿಮಾನ ಶೂನ್ಯತ್ವ, ಆಳಿಸಿಕೊಳ್ಳುವ ಮನೋಧರ್ಮ. ಉತ್ತರದವರನ್ನು ದಕ್ಷಿಣಕ್ಕೆ ಬರದಂತೆ ಎದೆಯೊಡ್ಡಿ ತಡೆದ ಇಮ್ಮಡಿ ಪುಲಿಕೇಶಿ, ವೀರ ವನಿತೆ ಒನಕೆ ಓಬವ್ವ, ಕಿತ್ತೊರಿನ ಚೆನ್ನಮ್ಮ, ಕೆಳದಿಯ ಚೆನ್ನಮ್ಮ, ಕೃಷ್ಣದೇವರಾಯ, ರಾಮರಾಯ, ಸಂಗೊಳ್ಳಿಯ ರಾಯಣ್ಣ ಇಂತಹವರು ಬದುಕಿ ಬಾಳಿದ ಕನ್ನಡ ಕುಲದವರು ನಾವೆಂದು ಹೇಳಿಕೊಳ್ಳಲು ಹೆಮ್ಮೆಯಿರಬೇಕು, ಆದರೆ ಆ ಗಾಂಭೀರ್ಯಯುಕ್ತವಾದ ಹೆಮ್ಮೆಯನ್ನು ತೊರೆದು ಆಳಿಸಿಕೊಳ್ಳುವ, ಆಳುವ ವರ್ಗದವರಿಂದಲೇ ಸಕಲ ಬದಲಾವಣೆಗಳೂ ಸಾಧ್ಯವೆಂಬ ಮನೋಸ್ಥಿತಿಗೆ ತಲುಪಿದ್ದು ನಿಜವಾಗಿಯೂ ಕನ್ನಡಿಗರ ದೌರ್ಭಾಗ್ಯ. ಈ ಕಾರಣದಿಂದಲೇ ಕನ್ನಡಿಗರು ಆಗಾಗ್ಗೆ ನಿದ್ರೆಗೆ ಜಾರಿದಂತೆ ಭಾಸವಾಗುವುದು ಹಾಗೂ ಆಗಾಗ್ಗೆ ಅವರನ್ನು ಬಡಿದೇಳಿಸಲು ಆಲೂರರು, ರಾಜ್ ಕುಮಾರರು, ಕುವೆಂಪು ರಂತಹವರು ಮತ್ತೆ ಮತ್ತೆ ಕನ್ನಡದ ಕಪ್ಪು ಮಣ್ಣಿನ ಬಸಿರಲ್ಲಿ ಆಗಿ ಹೋದದ್ದು.

ಇವಿಷ್ಟೇ ಅಲ್ಲ, ಇನ್ನು ಕಾರಣಗಳು ಹಾಗು ಅವುಗಳಿಗೆ ವಿಮುಖವಾಗಿ ನಡೆಯಬೇಕಿರುವ ಮಾರ್ಗಗಳು ಕನ್ನಡಿಗರ ಮುಂದೆ ಹೇರಳವಾಗಿವೆ. ಅವುಗಳನ್ನು ಸೂಕ್ತ ಸಮಯದಲ್ಲಿ ಆರಿಸಿಕೊಂಡು ನಡೆಯುವದೊಂದೇ ಈಗ ಎಲ್ಲ ಕನ್ನಡಿಗರು ಮಾಡಬೇಕಾಗಿರುವ ಮಹತ್ತರ ಕಾರ್ಯ. ಸದ್ಯ ಕನ್ನಡ ತಾಯಿ ಭುವನೇಶ್ವರಿ ಆಗಾಗ್ಗೆ ತನ್ನ ಘನತೆಯನ್ನು ಹಾಡಿ ಹೊಗಳುವ ಸಂತಾನವನ್ನು ಪಡೆಯುತ್ತಲೇ ಇದ್ದಾಳೆ. ಅದು ನಿಲ್ಲದೆ ಅಕ್ಷಯವಾಗಿಹೋಗಲಿ ಎನ್ನುವುದೇ ನನ್ನ ಅಭಿಲಾಷೆ.

ಕನ್ನಡ ನಿಂತ ನೀರಾಗಬಾರದು, ಸಲೀಲವಾಗಿ ಹರಿಯುವ ಗಂಗೆಯಾಗಬೇಕು. ಆ ಕನ್ನಡ ಗಂಗೆಯನು ಕನ್ನಡದ ಮುಂದಿನ ಪೀಳಿಗೆ ತೀರ್ಥದಂತೆ ಭಾವಿಸಿ ಮೀಯಬೇಕು, ಪ್ರೋಕ್ಷಿಸಿಕೊಂಡು ಪವಿತ್ರರಾಗಬೇಕು ಹಾಗು ಸೇವಿಸಿ ಧನ್ಯರಾಗಬೇಕು. ಇದೇ ಈ ಲೇಖನದ ಆಶಯ.

-o-

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...