ಮಂಗಳವಾರ, ಜೂನ್ 5, 2018

ರಮ್ಯ ವಿಕಾಸ

ಕನ್ನಡ ಪಡುವಣದ ಕಡಲ್ತೀರ

ತೆಂಕಿನ ತುಳುವರ ತಿಟ್ಟು

ಬಡಗದ ಬೇಗೆಯ ಬುಗ್ಗೆ 

ಮೂಡಣಕ್ಕಿಳೆಯಿಕ್ಕಿರುವ ಕಾಲ್ಝರಿ

ಕಣ್ಹಾಯುವ ಸೀಮಾಂತರದ

ಧರಿತ್ರಿಯ ಸೊಬಗು

ಕಾಲ್ನಿಲುಕದ ದೇಹವಣಿಯುವ

ಬಿಂಕದೊಳಾದಂತೆ ತೋರ್ಪ

ತಿಟ್ಟು ಕಣಿವೆ ಕಮರುಗಳು

ಕಿಕ್ಕಿರುದುಕ್ಕಿರುವ ಹರಿದ್ವರ್ಣದ

ನಟ್ಟನಡುವೊಳೊಂದೂರು

ಪುತ್ತೂರು!!!!  

 

ಗತದ ಚಕಿತಗಳೊಳಗೊಮ್ಮೆ

ಬರಡಿದ ಕೆರೆಯಾಳದಲಿ

ಮನುಜರು ತೇಗಿದ ದನಿಯಾನಿಸಿ

ನೀರೊಸರಿತಂತೆ !!

ಏನಿರಬಹುದಲ್ಲಿ??

ಯಃಕಶ್ಚಿತ್ ನಮ್ಮ ಹೃದಯದ

ಮಿಡಿತವರಿಯಿತೇ ಪ್ರಕೃತಿ?

ಹಾಗಿದ್ದೊಡೆ ಇದೇ

ಮಹಾಧರ್ಮಭೂಮಿ

ಮಾನವೀಯತೆ-ಪ್ರಕೃತಿ ಬೆಸೆದು

ಮಿಡಿದ ಮನುಕುಲದ

ಮಹಾ ಯಾಗ ಭೂಮಿ.


ಇತಿ ಮುತ್ತನೆತ್ತಿದ

ಸಹೃದಯದೂರೊಳೊಂದವತಾರವಾಯ್ತು

ರಮ್ಯಮನೋಹಕ ವಾಯಿತ್ತು

ತಾಳ್ಮೆಜಾಣ್ಮೆಹಿರಿಮೆ

ಬೆರೆಸಿ ತ್ರಯವಾಯ್ತು.

 ತ್ರಯ ಆಧುನಿಕತೆಗೆ

ಒಗ್ಗಿತ್ತುಇಲ್ಲೂ

ಅದೇ ಮನಮೋಹಕತೆ

ಅದೇ ವಿಕಾಸದ ಹಾದಿ

ರಮ್ಯವಲ್ಲವೇ  ವಿಕಾಸ !

 

ಬಳಿಸಾರಿದವರೊಡಗಿನವರಿಗೆ

ಇಲ್ಲವೆಂದಿಲ್ಲ,

ಸರಿಯದವರ ಸುದ್ದಿ

ಸಹವಾಸಗಳ ಗೊಡವೆಯಿಲ್ಲ,

ತಾನಾಯಿತ್ತುತನ್ನ ಕೃತಿಯಾಯಿತ್ತು.

ಮಹಾಧರ್ಮ ಭುವಿಯ

ಮಣ್ಣಿನ ಗುಣವದು.

ಮಳೆ ಬಂದು ತಾನ್

ಮಣ್ಣ ಸುಗಂಧ  ಪಸರುವುದು,

ಮಳೆಯ ಮೀರಿದ

ಗಂಧವೊಂದ ತಂದೆಸರಿದ

ಪೆಣ್ಗೇನೆಂದು ಹೆಸರಿಡಬಹುದು

ಹೆಸರೇನಾದರೇನು

ವಿಕಾಸವದು ರಮ್ಯವೇ

ಅಲ್ಲಲ್ಲ!!!

ರಮ್ಯ ವಿಕಾಸ



ಸೋಮವಾರ, ಮೇ 28, 2018

ಸುನೀಲನಾಗು ನೀ

ಕಂಡವರಿಗೆ ಎದುರಾಗಿ

ಎದುರವರ ಮನಕೆ ಮುಳುವಾಗಿ

ಮಾತೊಳಗೆ ಯುದ್ಧ ಸನ್ನಿಧಿಗೊಯ್ವ

ಎದುರಾಳಿಗಳೆದೆಯಲಿ

ಹರಿಗತ್ತಿಯಾಗಿ ತೊಯ್ದು

ಮಾತು ಖಡ್ಗವಾಗಿ

ನೋಟ ಕಟುವಾಗಿ

ದೇಹ ಬೃಹದ್ಭಾರವಾಗಿ

ಲೋಕದ ಪರಮಾರ್ಥ

ನಿನಗೇಕೆ ಸುಮ್ಮನಿರು

ಸುನೀಲನಾಗಿ

 

ಮಾತು ಮನದಿಂದತ್ತತ್ತ

ಸುಳಿದು ಸುರಗಂಗೆಯಾಗಲೂ

ಸರಿ

ಬರದೊಳಗ ಝರಿಯಾಗಲೂ

ಸರಿ

ಮುಟ್ಟಿ ಕುಡಿಯಲೊಪ್ಪದ

ಕಡಲುಪ್ಪಾಗಲೂ ಸರಿ

ಮನ ಬಗೆದಂತದು

ತಾನು ತಿಳಿದಂತದು

ನೀನ್ ಹುಟ್ಟಿ ಬೆಳೆದ ಕೇರಿ

ದಾರಿಗಳ ಗುಣವನುಸುರುವುದೀ ಮಾತು

ಬಿಡು ಪರಮಾರ್ಥ ಚಿಂತೆ

ಸುನೀಲನಾಗು ನೀ

ಸೋಮವಾರ, ಮೇ 21, 2018

ಯುಗಾಚಾರ್ಯ

ಚಿಕ್ಕಂದಿನಿಂದ ಕಂಡಿದ್ದನವನು

ಸಾತ್ಯಕಿಯನ್ನು ಆದರೇನು

ಸಾತ್ಯಕಿಗೆ ಭೇದಿಸಲಾಗಲಿಲ್ಲ

ಕೃಷ್ಣನ ಮನದಿಂಗಿತ ಅರಿವಾಗಲಿಲ್ಲ

 

ರಣನೀತಿ, ರಾಜ ನೀತಿಯಲಿ

ನೀತ್ಯಾಚಾರ್ಯನವನು

ಸಂಧಾನ, ವಿಶ್ವಾಸಗಳಲಿ

ಯುಗಾಚಾರ್ಯನವನು

 

ಕೈಲಾಗದ ಪಾಂಚಾಲಿಗೆ 

ಕೃಪಾಚಾರ್ಯನವನು

ಕೈಲಾದ ಪಾಂಡವರಿಗೆ

ಧರ್ಮಾಚಾರ್ಯನವನು

 

ಕರೆಯದ ಹೊರತು ಬರದೆ

ನಿಂತನವನು

ವ್ಯಾಕುಲಿಸಿ ಕರೆದೊಡನೆ

ಬಿಡನವನು

 

ಪಗಡೆಯ ದಾಳ ಉರುಳುವ

ಮೊದಲು ಭಿನ್ನಹವಲ್ಲದ 

ಕರೆಬರಲೆಂದು ಬಗೆದನಿವನು  

ಹೊರನಿಂದು ಕಾದನಿವನು

 

ಕರೆಯದು ಬಂತವಗೆ

ಎಂದು? ಎಲ್ಲ ಮುಗಿದೇ

ಹೋಗಿ ಪಾಂಚಾಲಿಯ ಮುಡಿ

ವಸ್ತ್ರ ವೈಭವಗಳೆಲ್ಲ ಕದಡಿ

 

ಧಾರಾಕಾರ ಕಣ್ಣೀರು ತಂದು

ಯಾರು ಏನೂ ಮಾಡದಂದು

ಎಲ್ಲ ಬಲ್ಲವರಾಗರವಾಗಿದ್ದ

ಪಾಂಡವರೈವರ ಗೆದ್ದು ಬೀಗಿದ್ದ.

ಶನಿವಾರ, ಮೇ 19, 2018

ಸೋತವರ ಸೊಡರಲ್ಲಿ

ಸೋತವರ ಸೊಡರಲ್ಲಿ
ಗೆಲುವೆದ್ದು ಬೀಗಿತು
ಮೀಸಲು, ಶೇಷದ
ಹಮ್ಮು ಬಿಮ್ಮುಗಳಿಲ್ಲದಿದ್ದರೂ
ಸೋತವರಿಗೆ ಸಂವಿಧಾನ
ನೆರಳಾಯಿತು.

ಹಿಂದುಳಿದವರ,
ಕೈಲಾಗದವರ,
ಕೆಳ ಸ್ತರದ,
ದೇಶದ ಸರ್ವರ ಹಿತವನೂ
ಕಾಯುವೆನೆಂದೆಂಬ
ದೇಶದ ಮಹಾಗ್ರಂಥ
ಸೋಲ ಸಿಂಹಾಸನಕ್ಕೇರಿಸಿದೆ.

ನೂರು ಸೋಲು ಒಂದೇ
ಗೆಲುವಿನ ಮಹಾ ಮಂತ್ರ
ವೆಂದರೆ ಹೊರತು,
ಸೋತು ಸೋತವರ
ಕೂಟ ಹೆಣೆದರದು
ಗೆಲುವಿನ ಸಿಂಹಾಸನವೇ .

ಸೋಲುವರ ಕೂಟವಿರಲಿ
ಗೆದ್ದವರ ಹಜಾರವಿರಲಿ
ಸೋಲು ಗೆಲುವಿನ
ತಾಳೆಯನೇ ಹಾಕದ
ಮುತ್ಸದ್ದಿಗಳಿರಲಿ
ನಾವು ನಾವು ಗೇಯ್ದರಷ್ಟೇ
ಬದುಕು... ಅದು ಸುವಿಸ್ತಾರ
ಸುವಿಶಾಲ ಸುನೀಲ .


ಸೋಮವಾರ, ಏಪ್ರಿಲ್ 30, 2018

ಸ್ವಲ್ಪ ಸ್ವಾರ್ಥಿಯಾಗಲಿರುವೆ

ನಾ ನಿಂತ ಜನ ವಂದ್ಯರಾಗಬೇಕು,

ನಾ ಕುಂತ  ನೆಲ ಸಾಧಕರಿಗೆ ಧೃವ ತಾರೆಯಾಗಬೇಕು,

ನನ್ನೊಡನಾಡಿಗಳೆಲ್ಲಾ ನನ್ನ ಸಂಭ್ರಮಿಸಬೇಕು,

ನಾ ಹುಟ್ಟಿ ಬೆಳೆದು ಓಡಾಡಿದ ಸ್ಥಳಗಳೆಲ್ಲಾ

ಇತರರ ಮನೆ ಮಾತಾಗಬೇಕು,

ನಾ ನಡೆದ ದಾರಿ ಇರುವರಿಗೆ ಗುರಿಯಾಗಬೇಕು.

 

ಸದ್ದರಿಯದೇ ನಾನು ಅಸಂಖ್ಯರ

ಮನೆ ಮಾತಾಗಬೇಕು,

ಹಿಂದೆ ಮುಂದವರಿಗೆಲ್ಲ ನಾನೇ

ಗುರುತಾಗಬೇಕು,

ಎಡವುವರ ಕೈ ಹಿಡಿದು ನಡೆಸುವಂತೆ

ನಾನಾಗಬೇಕು,

ನಡೆಯುವರಿಗೆ ಎಡವದಂತೆ ತಿಳಿಹೇಳುವ

ಶ್ರೇಷ್ಠಿ ನಾನಾಗಬೇಕು.


ಸಾಧನೆಯ ಗುಲ್ಲು ಹತ್ತಿದವರು

ನನ್ನ ಎಡತಾಕಬೇಕು,

ಅಕ್ಕರೆಗೂ ಅಕ್ಕರಕೂ ದಾಹವೆನಿಸಿದವರು

ನನ್ನ ಒಡನಾಡಬೇಕು,

ನಾನು ಕೇಂದ್ರವಾಗಿರಬೇಕು,

ಆದರೂ ನಾನು ನಾನೇ ಆಗಿರಬೇಕು.

 

ನಾನೊಮ್ಮೆ ಹಿಂದಿರುಗಿ ಬರದೂರಿಗೆ

ಪಯಣಿಸಿಬಿಟ್ಟಾಗ,

ನಾನೊಮ್ಮೆ ಅರಿವಿನ ಅಂತರಾತ್ಮವಿರದ

ಊರ ಜೀವಿಯಾಗಿಹೋದಾಗ

ನನ್ನವರೆಲ್ಲಾ ಇನ್ನಿಲ್ಲದಂತೆ ಪ್ರಲಾಪಿಸಬೇಕು,

ಅವರ ಹೃದಯಗಳು ನನ್ನ ತನ್ಮಯತೆಯಲ್ಲಿ

ತೊಯ್ದು ಹೋಗಬೇಕು,

ಅವರ ಭಾವುಕತೆಯೊಳಗೆ ಬೆರೆತು

ಕಾಲದೊಡನೆ ನಾನೂ ಕಳೆದುಹೋಗಬೇಕು.

 

ಬುಧವಾರ, ಮಾರ್ಚ್ 14, 2018

ಇಂದಿನ ವಿರಾಟರು ಹಿಂದೊಮ್ಮೆ ಸೈರಾಟರೆ!!

ಅದೃಷ್ಟವಾದವನ್ನು ಒಪ್ಪದಿರಿ, ಮೈ ಮುರಿದು ದುಡಿಯಿರಿ , ನೀವಂದು ಕೊಂಡಂತೆ ನೀವಾಗಿ ಎಂದಿದ್ದಾರೆ ನವ ಕರ್ನಾಟಕ ನಿರ್ಮಾತೃ ಸರ್ ಎಂ. ವಿಶ್ವೇಶ್ವರಯ್ಯನವರು. ಆ ದೃಷ್ಟಿಯಲ್ಲಿ  ನೋಡಿದರೆ ಈಗಿನ ಮಹನೀಯರೆಲ್ಲ ಹಿಂದೊಮ್ಮೆ ಏನೊಂದು ಅರಿಯದೆ ಯಾವುದೋ ಅರಿಯದ ಕ್ಷೇತ್ರಕ್ಕೆ ಕಾಲಿಟ್ಟು ಅಲ್ಲಿನ ಕಷ್ಟ ನಷ್ಟಗಳನ್ನು ಅನುಭವಿಸಿಕೊಂಡೆ ಸಾಗಿ ಆ ಕ್ಷೇತ್ರದ ದೃವತಾರೆಗಳಾಗಿ ಮೆರೆಯುತ್ತಿರುವುದು ಸ್ಪಷ್ಟವಷ್ಟೇ. ಇದರ ನಡುವೆಯೂ ಕೆಲ ಕೆಲವರಿಗೆ ಅದೃಷ್ಟವೆನ್ನುವಂತಹ ವಿಚಾರಗಳು ಕೈಹಿಡಿಯುವುದು ಜನಗಳನ್ನು ಇನ್ನು ಅದೃಷ್ಟವಾದದೆಡೆಗೆ ಸೆಳೆಯಲು ಅನುವು ಮಾಡಿಕೊಟ್ಟಂತಿದೆ.

ಎಲ್ಲಿಗೋ ಹೋಗಲು ರೈಲಿಗಾಗಿ ಕಾಯುತ್ತ ನಂಜನಗೂಡಿನ ರೈಲು ನಿಲ್ದಾಣದಲ್ಲಿ ಕಾಯುತ್ತಿದ್ದ ಮುತ್ತುರಾಜನಿಗೆ ನಿರ್ದೇಶಕ ಎಸ್ ಎಲ್ ಎನ್ ಸಿಂಹ ಅದೃಷ್ಟ ರೂಪದಲ್ಲಿ ಬರಲಿಲ್ಲವೇ??. ಕನ್ನಡ ಪತ್ರಿಕೆಯೊಂದರಲ್ಲಿ ಸಂಪಾದಕರಾಗಿ ಕೆಲಸ ಮಾಡುತ್ತಿದ್ದ ತಂದೆಗೆ ಮಧ್ಯಾಹ್ನದ ಊಟ ಕೊಟ್ಟು ಬರಲು ಹೋದ ಸಂಪತ್ ಕುಮಾರ್ ಗೆ ಅಲ್ಲೇ ಕುಳಿತಿದ್ದ ನಿರ್ದೇಶಕರೊಬ್ಬರು ಅದೃಷ್ಟ ರೂಪಿಯಾಗಲಿಲ್ಲವೇ??. ಯಾರಿಗೆ ಗೊತ್ತು ಯಾರ್ಯಾರ ಅದೃಷ್ಟ ಹೇಗಿರುತ್ತದೆ ಎಂದು? ಎನ್ನುವ ವಾಕ್ಯವೇನಾದರೂ ನಿಮ್ಮ ತಲೆಯಲ್ಲಿ ಹೊಳೆದಿದ್ದರೆ ನೀವು ಪ್ರತ್ಯಕ್ಷವಾಗಿಯೋ ಅಥ್ವಾ ಪರೋಕ್ಷವಾಗಿಯೋ ಅದೃಹಸ್ತವಾದವನ್ನು ಒಪ್ಪಿದ್ದೀರಿ ಎಂತಲೇ ಅರ್ಥ. ಇರಲಿ ಇವೆಲ್ಲ ಒತ್ತಟ್ಟಿಗಿರಲಿ.

ಈ ಉರಿ ಬೇಸಿಗೆಯಲ್ಲಿ ಅದೃಷ್ಟದ ಪ್ರಲಾಪವನ್ನು ಇಷ್ಟೊಂದು ಮಾಡಲು ಕಾರಣ ಮರಾಠಿಯ ಅತ್ಯದ್ಭುತ ಸಿನಿಮಾ 'ಸೈರಾಟ್'. ಹಾಗು ಅದರಲ್ಲಿನ ನಾಯಕ ನಾಯಕಿಯರಾಯಾದ ಆಕಾಶ್ ಠೋಸರ್, ರಿಂಕು ರಾಜಗುರು.

ಮರಾಠಿ ಸಿನೆಮಾ 'ಸೈರಾಟ್' ನ ಒಂದು ದೃಶ್ಯ. ರಿಂಕು ರಾಜಗುರು ಹಾಗು ಆಕಾಶ್ ಠೋಸರ್  
ಆಕಾಶ್ ಠೋಸರ್ ಹುಟ್ಟಿದ್ದು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಕರ್ಮಾಳಾದಲ್ಲಿ ಫೆಬ್ರವರಿ 1993ರಲ್ಲಿ. ತಂದೆ ಕಾಮಗಾರಿ ಗುತ್ತಿಗೆದಾರ ತಾಯಿ ಗೃಹಿಣಿ. ಹುಟ್ಟಿದ್ದು ಗ್ರಾಮೀಣ ಪ್ರದೇಶವಾದರೂ ಬೆಳೆದಿದ್ದು ಪುಣೆ ನಗರದ ಔನ್ದ್ ನಲ್ಲಿ. ಔನ್ದ್ ನಗರದದ ಶಿವಾಜಿ ವಿದ್ಯಾಲಯ ಹಾಗು ಅದರ ಸಮೀಪವೇ ಇರುವ ಪುಣೆಯ ಸಾವಿತ್ರಿಬಾಯಿ ಪುಲೆ ವಿಶ್ವವಿದ್ಯಾಲಯವೇ ಆಕಾಶ್ ಕಲಿತ ವಿದ್ಯಾಕೇಂದ್ರಗಳು. ಓದುವುದರೊಂದಿಗೆ ಕುಸ್ತಿ ಕಾಳಗ ಕಲೆಯಲ್ಲೂ ಆಸಕ್ತಿ ಹೊಂದಿದ್ದನಾದ್ದರಿಂದ ಪೈಲ್ವಾನ್ ವೃತ್ತಿಯನ್ನು ಆಗೀಗ ಅಪ್ಪಿಕೊಳ್ಳುತ್ತಿದ್ದ. ಅದಕ್ಕೆ ತಕ್ಕನಾದ ಕಟ್ಟು ಮಸ್ತಾದ ದೇಹ ಹಾಗು ನಾಜೂಕಿನ ಬಗ್ಗೆ ಮತ್ತೆ ಹೆಚ್ಚೇನೂ ಹೇಳುವ ಅವಶ್ಯಕತೆಯೇ ಇಲ್ಲವೆನ್ನಿ. ಇಂತಿದ್ದ ಆಕಾಶ್ ಸಿನೆಮಾ ರಂಗದಲ್ಲಿ ಬೆಳೆಯುವ ಅಥವಾ ಅದಕ್ಕಾಗಿ ಪ್ರಯತ್ನಿಸುವ ಕನಸನ್ನು ಎಂದೂ ಕಂಡವನಲ್ಲ.

ಇಂತಿದ್ದ ಆಕಾಶ್ 2015ರ ಅದೊಂದು ದಿನ ಯಾವದೋ ಕಾರಣಕ್ಕೆ ತನ್ನೂರಾದ ಜೇವೂರ್ ನ ರೈಲು ನಿಲ್ದಾಣದಲ್ಲಿ ಪುಣೆಗೆ ಬರುವುದಕ್ಕಾಗಿ ರೈಲಿಗಾಗಿ ಕಾಯುತ್ತ ನಿಂತಿದ್ದ. ಅವನ ಅದೃಷ್ಟವೂ  ಅದೇ ರೈಲು ನಿಲ್ದಾಣದಲ್ಲಿ ಕಾಯುತ್ತ ನಿಂತಿತ್ತು ಎನ್ನುವುದು ಮತ್ತೊಂದು ಸೋಜಿಗದ ಸಂಗತಿಯೇ ಸರಿ. 'ಸೈರಾಟ್' ಸಿನೆಮಾ ನಿರ್ದೇಶಕ ನಾಗರಾಜ್ ಮಂಜುಳೆ ಯವರ ಸೋದರನೂ ಅದೇ ರೈಲು ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದ. ಅಲ್ಲಿ ಕಣ್ಣಿಗೆ ಬಿದ್ದಿದ್ದು ಆಕಾಶ್, ಅವನನ್ನು ಕಂಡು ಮಾತನಾಡಿ ಸಿನೆಮಾದಲ್ಲಿ ನಟಿಸುವ ಅವಕಾಶವಿರುವುದಾಗಿಯೂ ಹಾಗು ಅದಕ್ಕಾಗಿ ಕೆಲವು ಫೋಟೋ ಹಾಗು ವಿಳಾಸವನ್ನು ತರುವಂತೆಯೂ ಬುಲಾವ್ ಕೊಟ್ಟಾಗ ಎಲ್ಲವನ್ನು ಕೊಟ್ಟು ಆಡಿಷನ್ ಮುಗಿಸಿ ಮನೆಗೆ ಬಂದಿದ್ದ ಆಕಾಶ್. ಕೆಲವು ದಿನಗಳಾದ ಮೇಲೆ ತಾನು ಸಿನೆಮಾ ಗೆ ಆಯ್ಕೆಯಾಗಿರುವುದು ತಿಳಿದಾಗ ಯಾವುದು ಸೈಡ್ ರೋಲ್ ಇರಬೇಕು , ಐದು-ಹತ್ತು ನಿಮಿಷಗಳ ಪಾತ್ರವೊಂದಿರಬಹುದೆಂದು ಬಗೆದಿದ್ದ ಆಕಾಶ್ ಗೆ ಅದೃಷ್ಟವೆನ್ನುವುದು ಬಹುದೊಡ್ಡ ಉಡುಗೊರೆಯೊಂದನ್ನು ನೀಡಿತ್ತು. ಸೈರಾಟ್ ಸಿನೆಮಾದ ಮುಖ್ಯ ನಾಯಕನ ಪಾತ್ರದಲ್ಲಿ ಆಕಾಶ್ ಕಾಣಿಸಿಕೊಳ್ಳಬೇಕೆಂಬ ನಿಲುವಿಗೆ ಅದರ ದಿಗ್ದರ್ಶಕರು ಅದಾಗಲೇ ಬಂದೇ ಬಿಟ್ಟಿದ್ದರು.  

ಕುಸ್ತಿ ಪಟುವಾಗಿದ್ದ ಆಕಾಶ್ ಗೆ ಮೊದಲ ಕೆಲಸ ತನ್ನ ತೂಕ ಇಳಿಸಿಕೊಳ್ಳುವುದೇ ಆಗಿತ್ತು. ನಿರ್ದೇಶಕರ ಆಣತಿಯ ಮೇರೆಗೆ ಆಕಾಶ್ ಬರೋಬ್ಬರಿ 13ಕೆ.ಜಿ. ತೂಕವನ್ನು ಒಂದೂ ವರೆ ತಿಂಗಳ ಅವಧಿಯಲ್ಲಿ ಇಳಿಸಿಕೊಂಡಿದ್ದ. ಹೃದಯಸ್ಪರ್ಶಿ ಸಿನೆಮಾಗಳಿಗೆಂದೇ ಹೆಸರು ವಾಸಿಯಾದ  ಮರಾಠಿ ನಿರ್ದೇಶಕ ನಾಗರಾಜ್ ಮಂಜುಳೆಯವರ ಮನೆಯೇ ಆಕಾಶ್ ನ ತಾಲೀಮಿಗೆ ವೇದಿಕೆಯಾಯಿತು.  ಇದಿಷ್ಟೇ ಅಲ್ಲದೆ ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದ ಬಾಲೆ ರಿಂಕು ರಾಜಗುರು ಚಿತ್ರದ ನಾಯಕಿ.  ಮುಗ್ದ ಹುಡುಗರ ಜೀವನವರಿಯದ ಅಮರ ಪ್ರೇಮ ಕಥನ ಸಿನೆಮಾಗೆ ಹಂದರವಾದ್ದರಿಂದ ಮುಗ್ದ ಹುಡುಗರ ಆಯ್ಕೆ ಮತ್ತಷ್ಟು ಸುಲಲಿತವಾಯಿತು.

ನಟನೆಯ ಪಟ್ಟುಗಳು, ಮುಖ ಲಕ್ಷಣ ಬದಲುವಿಕೆಯಂತಹ ಪಟ್ಟುಗಳನ್ನು ಸ್ವತಃ ನಿರ್ದೇಶಕರೇ ಆಕಾಶ್ ಹಾಗು ರಿಂಕುವಿಗೆ ದಿನಂಪ್ರತಿ ಉಣಬಡಿಸುತ್ತಿದ್ದರು. ಶ್ರೇಷ್ಠ ಕಲಾಕೃತಿಯೊಂದನ್ನು ತಯಾರು ಮಾಡಬೇಕಾದರೆ ಅದರ ಕುಡಿ ಕೊನರುಗಳನ್ನೆಲ್ಲ ಹೇಗೆ ಸಜ್ಜುಗೊಳಿಸಬೇಕೆನ್ನುವ ಪ್ರೌಢಿಮೆ ಇರುವ ಕೆಲವೇ ನಿರ್ದೇಶಕರಲ್ಲಿ ನಾಗರಾಜ್ ಮಂಜುಳೆ ಕೂಡ ಒಬ್ಬರು ಎನ್ನುವುದು ಅರಿಯುವುದೇ ಇಂತಹ ವಿಚಾರಗಳಿಂದಲೇ. ಸಿನೆಮಾ ಚಿತ್ರೀಕರಣಕ್ಕಿಂತ ಮುಂದಾಗಿ ಹಾಗು ಚಿತ್ರೀಕರಣ ಪರ್ಯಂತ ನಟರ ತಂಡವನ್ನು ತಮ್ಮ ಮನೆಯಲ್ಲಿಯೇ ಇರಿಸಿಕೊಂಡು ಪಳಗಿಸಿದ ನಿರ್ದೇಶಕರ 'ಸೈರಾಟ್' ಸಿನೆಮಾ ಇದೀಗ ಯಾವ ಪರಿಯ ಜಯ ಗಳಿಸಿದೆ ಎನ್ನುವುದನ್ನು ಮತ್ತೂ ಎಳೆ ಎಳೆಯಾಗಿ ಹೇಳುವ ಅಗತ್ಯವಿಲ್ಲವಷ್ಟೆ. ಅಂತೂ ಹಿರಿತೆರೆಗೆ ಸುನಾಮಿಯಂತೆ ಅಪ್ಪಳಿಸಿದ 'ಸೈರಾಟ್' ಯುವಜನತೆಯನ್ನು ಮೋಡಿಗೊಳಗು ಮಾಡಿತು. ಸಂಗೀತವಂತೂ ಹಾಲಿವುಡ್ ನ ಆರ್ಕೆಸ್ಟ್ರಾ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಹಾಡುಗಳ ರೆಕಾರ್ಡಿಂಗ್ ಮಾಡಿದ ಭಾರತದ ಮೊದಲ ಸಿನೆಮಾವೆನ್ನುವ ಹೆಗ್ಗಳಿಕೆಗೆ ಪಾತ್ರವಾಯಿತು ಅಂತೆಯೇ ಯುವಜನತೆಯನ್ನು ಸಂಗೀತೋನ್ಮತ್ತರನ್ನಾಗಿಸಿತು.

ಮರಾಠಿ ಸಿನೆಮಾ ರಂಗಕ್ಕೆ ಬರೋಬ್ಬರಿ ಒಂದು ಶತಮಾನದ ಇತಿಹಾಸವುಂಟು. ಭಾರತದ ಚಿತ್ರರಂಗದ ಪಿತಾಮಹ ದಾದಾ ಸಾಹೇಬ್ ಫಾಲ್ಕೆ ಸ್ವತಃ ಮರಾಠಿಗರಾಗಿದ್ದವರು. ಒಂದು ಶತಮಾನದಾದ್ಯಂತ ಯಾವ ಮರಾಠಿ ಸಿನೆಮಾವು ಮಾಡಿರದಿದ್ದಷ್ಟು ಹಣವನ್ನು 'ಸೈರಾಟ್'  ಗಲ್ಲಾ  ಪೆಟ್ಟಿಗೆಯಲ್ಲಿ ಗಳಿಸಿಬಿಟ್ಟಿತ್ತು. ಜನರನ್ನು ಯಾವ ಪರಿಗೆ ಈ ಸಿನೆಮಾ ಸೆಳೆಯಿತೆಂದರೆ , ಕರ್ಮಾಳಾ ಪರಿಸರದಲ್ಲಿರುವ ಮೆಟ್ಟಿಲ ಬಾವಿಗೆ ಜನ ಮುಗಿಬಿದ್ದು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವುದನ್ನು ಈಗೀಗಲೂ ಕೆಲವು ಮರಾಠಿ ಚಾನೆಲ್ಲುಗಳು ವರದಿ ಮಾಡುತ್ತಿವೆ. ಜನರನ್ನು ಉನ್ಮತ್ತತೆಯ ಹೊಳೆಯಲ್ಲಿ ತೇಲಿಸಿದ ಈ ಸಿನೆಮಾದ ಹಿಂದಿನ ಮುಗ್ದ ಮಕ್ಕಳ ಅದೃಷ್ಟಗಾಥೆ ನಿಜಕ್ಕೂ ಅನೂಹ್ಯ. ಅಂದು ಏನೊಂದು ಅರಿಯದೆ ಜೇವೂರ್ ನ ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದ ಹುಡುಗನಿಂದು ಮರಾಠಿ ಸಿನೆಮಾ ರಂಗದಲ್ಲಿ ಸ್ಟಾರ್ ನಟ. 

ನಟನಾ ವೃತ್ತಿಯನ್ನೇ ನಂಬಿ ಬಂದು ಬದುಕು ಕಟ್ಟಿಕೊಂಡವರೆಷ್ಟೋ, ಕಳೆದುಕೊಂಡವರೆಷ್ಟೋ. ತಮ್ಮ ನೆಚ್ಚಿನ ನಟ ನಟಿಯರನ್ನು ಅನುಸರಿಸುತ್ತಾ ಚಿತ್ರರಂಗಕ್ಕೆ ಬಂದು ಬದುಕು ಕಳೆದುಕೊಂಡು ಮುಂಬೈ, ಚೆನ್ನೈ ನ ಬೀದಿಗಳಲ್ಲಿ ಹೆಣವಾದವರೂ ಬೇಕಾದಷ್ಟು. ಕಲಾ ರಂಗದ ಬಗ್ಗೆ ಚಾಲ್ತಿಯಲ್ಲಿರುವ ನಾಣ್ಣುಡಿಯೊಂದು ಇದೇ ಸಂಧರ್ಭದಲ್ಲಿ ಜ್ಞಾಪಕ ಬರುತ್ತಿದೆ. 'ಕಲಾ ರಂಗ ಎಲ್ಲರನ್ನು ಕೈ ಬೀಸಿ ಕರೆಯುತ್ತದೆ, ಆದರೆ ಕೆಲವರನ್ನು ಮಾತ್ರ ಅಪ್ಪಿಕೊಳ್ಳುತ್ತದೆ'. ಕೈ ಬೀಸಿ ಕರೆದವರು ನಮ್ಮ ನಿಮ್ಮ ದೃಷ್ಟಿಯಲ್ಲಿ ಅದೃಷ್ಟವಂತರೆನಿಸಿಕೊಳ್ಳುತ್ತಾರೆ. ಇಲ್ಲದವರು ಸರ್ವೇ ಸಾಮಾನ್ಯರಾಗಿ ನಮ್ಮ ನಿಮ್ಮ ನಡುವೆಯೇ ಕಾಣದೆ ಮರೆಯಾಗಿ ಹೋಗುತ್ತಾರೆ. ಅಂತೂ ಚಿತ್ರರಂಗದಲ್ಲಿ ಮಿಂಚಿ ಮಿನುಗಿದವರೆಲ್ಲ ಎಲ್ಲವನ್ನು ಬಲಾವರಾಗಿರಲಿಲ್ಲ. ಅವರೂ ಇಂದಿನ ವಿರಾಟ ಭಾವ ಪಡೆಯುವ ಮೊದಲು ಸೈರಾಟರಾಗಿದ್ದರು ಎನ್ನುವುದನ್ನು ಮರೆಯುವಂತಿಲ್ಲ. ಅವರ ಕಥೆಗಳೂ ನಮ್ಮಕಥೆಗಳಿಗಿನ್ನ ವಿಭಿನ್ನವೇನಲ್ಲ. ನಮ್ಮ ನಿಮ್ಮ ನಡುವೆಯೇ ಅರಳಿದ ಅವರ ಶೈಲಿ ಮಾತ್ರ ಭಿನ್ನವಷ್ಟೇ.

ಶುಕ್ರವಾರ, ಫೆಬ್ರವರಿ 23, 2018

ವಿಧಿಗೆ ಬಿದಿಗೆಯಿದು

ಜನರಿಲ್ಲ ನಿನಗೆ, ಬಾದ್ಯನಾಗು
ಅನುರಾಗಕೆ ಕೊರತೆಯಿಲ್ಲಿ
ಅನುರಾಗಿಯಾಗು,
ಸಾಧನಗೆ ಹಿನ್ನಡೆಯಿಲ್ಲಿ
ಸಾಧಿಸು,
ಕುಹಕ ಮನಸುಗಳ ಹಜಾರವಿದು
ಸುಮನಸ್ಕನಾಗು

ಕುಟಿಲ ಕರ್ಮಿಗಳ ಕಾರಸ್ಥಾನವಿದು
ಕುಗ್ಗದಿರು
ಉಪಮೆ ಮಹೋಪಮೆಗಳ ಮಜಲಿದು
ಉಪಾಸಿಸು
ಸುಶ್ರಾವ್ಯ ಗೀತೆಯಿದು
ಬಜಾಯಿಸು
ಗರ್ವ ಪರ್ವಗಳ ಸಡಗರವಿದು
ಪ್ರವರ್ತಿಸು

ಬಡಾಯಿಗಳ ಬಜಾರಿದು
ಸದ್ದು ಗದ್ದಲವಿರದೆ ಸುಮ್ಮನಿರು
ಶ್ರೇಷ್ಟಿಗಳ ಸಮೂಹವಿದು
ಶ್ರೇಷ್ಟನಾಗು
ಬದುಕೊಂದು ಪಯಣ
ಪಯಣಿಸು
ವಿಧಿಗೆ ತದಿಗೆಯಿದು
ಕಥೆ ಮುಗಿಸು.


ಭಾನುವಾರ, ಫೆಬ್ರವರಿ 11, 2018

ನಮ್ಮ ನಿಮ್ಮ ಜೀವನವೂ ಗುಲಾಬಿ ಟಾಕೀಸು ತಾನೇ?

ಸದಾ ಕಡಲ್ಮೊರೆತ, ಅಲ್ಲೆಲ್ಲ ಮೀನ ವಾಸನೆ, ಕಡಲೆ ಅವರಿಗೆಲ್ಲ ಹಿಟ್ಟು ಬಟ್ಟೆಯ ಮೂಲ, ಕಡಲು ಶಾಂತಿ ಧೋತ್ರ ಹೊದ್ದುಕೊಂಡು ಶಾಂತವಾಗಿದ್ದರೆ ಅವರ ಮನೆಯ ಒಲೆ ಬೆಂಕಿಯಾಡಿಸುತ್ತದೆ, ತಟ್ಟೆ ಲೋಟಗಳು ದಿನವೂ ನೀರ ಕಾಣುತ್ತವೆ. ಕಡಲೇನಾದರೂ ಅಬ್ಬರಿಸಿ ಬೊಬ್ಬಿರಿದುಬಿಟ್ಟರೆ ಅವರ ಬದುಕು ಮೂರಾ ಬಟ್ಟೆ, ಅಯ್ಯಯ್ಯಪ್ಪ ಅದನ್ನು ನೆನೆಸಿಕೊಳ್ಳುವುದು ಅತಿ ಭಾರ. ಕಡಲ ಮೀನುಗಳೇ ಅನ್ನವಾದ್ದು ನೆಪವಾಗಿ ಕಡಲೊಂದಿಗಿನ ಸಂಬಂಧದಷ್ಟೇ ಗಟ್ಟಿಯಾದ್ದೂ ಪೇಟೆಯ ಬಂಧ, ಅದು ಕಡಲ ಮೀನುಗಳ ಬಿಕರಿಗೆ ಯೋಗ್ಯ ಸ್ಥಾನ ತಾನೇ ಅದಕ್ಕೆ ಮಾತ್ರ. ಪೇಟೆಯೆಂದ ಮೇಲೆ ಪೇಟೆಯ ರಾಜ ಬೀದಿಗಳು ಮಾತ್ರವಲ್ಲ, ಪೇಟೆಯೊಳಗಿನ ಚಿತ್ರ ಮಂದಿರ ಅಲ್ಲಿನ ಡಾನ್ಸು, ಫೈಟು ಚಿತ್ರ ಮಂದಿರದ ತೆರೆ ದಾಟಿ ಬಂದು ಕಡಲ ತಡಿಯವರ ಮನಸ್ಸಿನ ಮೇಲೆ ಅಚ್ಚಾಗಿ ಹಾಗೆ ಕೂತು ತಾವು ಕಡಲ ತಡಿ ಸೇರಿಬಿಡುತ್ತಿದ್ದವು. 


 
ಇಂತಿರುವ ಕನ್ನಡ ನಾಡ ಕಡಲ್ಬದಿಯ ಕುಂದಗನ್ನಡ ಸೀಮೆಯೊಳಗಿದ್ದವಳು ನಮ್ಮ ಗುಲ್ ನಭಿ ತಾನು ಮುಸಲ್ಮಾನಳಾದರೂ ಸೂಲಗಿತ್ತಿ ವೃತ್ತಿಯಿಂದ ಜಾತಿ ಧರ್ಮವೆಂಬ ಅಭೇದ್ಯ ಕೋಟೆಯೊಂದಕ್ಕೆ ಸೆಡ್ಡು ಹೊಡೆದು ನಿಂತುಬಿಟ್ಟಿದ್ದಳು, ಅವಳೇ ಸೆಡ್ಡು ಹೊಡೆದಿದ್ದಳು ಎನ್ನುವುದಕ್ಕಿಂತ ಮಾನವೀಯತೆಯ ಅನಿವಾರ್ಯ ಸಮಯಗಳನ್ನು ಆಕೆಯನ್ನು ಹಂಗಾಗಿಸಿದ್ದವು ಎನ್ನಲೇನು ಅಡ್ಡಿಯಿಲ್ಲವೇ ಇಲ್ಲ. ಅವಳೊಡನಾಡುವ ಹೆಂಗಳೆಯರ ಗುಂಪಿನೊಳಗೆ ಗುಲ್ ನಭೀ ಗುಲಾಬಿಯಾಗಿ ಮಾರ್ಪಾಡುಗೊಂಡಿದ್ದಳು, ಎಷ್ಟರ ಮಟ್ಟಿಗೆಂದರೆ ತನ್ನ ನಿಜ ಹೆಸರನ್ನು ತಾನೇ ಮರೆವಷ್ಟು. ದೇಶದ ಮೇಲೆ ಧರ್ಮಾಧಾರಿತ ನೆರೆ ದೇಶವೊಂದು ಕಾಲ್ಕೆರೆದು ಯುದ್ಧಕ್ಕೆ ನಿಂತು ರಾಷ್ಟ್ರದೊಳಗೆ ಬಿಸಿ ವಾತಾವರಣ ಸೃಷ್ಟಿಸಿದ್ದು ನೇರವಾಗಿ ಗುಲಾಬಿಗೂ ತಟ್ಟಿ ಆ ಜಾತಿಯವರೆಲ್ಲ ಗುಳೆ ಹೊರಟು ಒಂದೂರಲ್ಲಿ ಒಟ್ಟಿಗೆ ನಿಲ್ಲಬೇಕೆಂಬ ಒತ್ತಾಯ ಬಲವಾದರೂ ಗುಲಾಬಿ ಗಟ್ಟಿ ಮನಸ್ಸು  ಮಾಡುತ್ತಾಳೆ  ತನ್ನ ತಪ್ಪಿಲ್ಲದ ಮೇಲೆ ಹುಟ್ಟಿದೂರ ಬಿಡುವುದು ಹುಂಬತನವಲ್ಲದೆ ಮತ್ತೇನು ಎಂದುಕೊಳ್ಳುತ್ತಾಳೆ.

ಎದೆಗೆರಡಕ್ಷರವಿಳಿಯದಿದ್ದರೂ ಕಡಲ ತಡಿಯ ಹೆಣ್ಮಗಳ ಧೈರ್ಯ ಮನಸೂರೆಗೊಳ್ಳುತ್ತದೆ. ಮತ್ತೂಬ್ಬ ಮಗದೊಬ್ಬರ ಕೊಳ್ಳೆಹೊಡೆದು ಬದುಕಿಬಿಡೋಣ ವೆನ್ನುವ ಸಮಾಜದೊಳಗೆ ಗುಲಾಬಿ  ತನ್ನ ಬಲದಿಂದಲೇ ತಾನು ಬದುಕುವ ಕೆಚ್ಚನ್ನು ತನ್ನ ತಲೆಯೊಳಗೆ ತುಂಬಿಕೊಂಡೆ ಹುಟ್ಟಿದ್ದಳೇನೋ?. ಆದ್ದರಿಂದಲೇ ಅವಳ ಜಾತಿಯ ಹಟ್ಟಿ ದಾರದಂಗಳೆಲ್ಲಾ ಕದ ಕವುಚಿಕೊಂಡು ಊರು ಬಿಟ್ಟರೂ ಗುಲಾಬಿ  ಮನೆಯ ಟಿ ವಿ ಸೂಜಿಗಲ್ಲಂತೆ ತನ್ನತ್ತ ಜನರನ್ನು ಸೆಳೆಯುತ್ತದೆ. ಗುಲಾಬಿ ಮನೆಯೇ ಚಿತ್ರಮಂದಿರವಾಗಿ  ಮಗ್ಗುಲು ಬಗಲಿನ ಜನಗಳಿಂದ ಟಾಕೀಸು ಎಂದು ಕರೆಸಿಕೊಳ್ಳುತ್ತದೆ. ಸಾಲದ್ದಕ್ಕೆ ಎಲ್ಲೋ ಸಿಕ್ಕ ಸಿನೆಮಾ ಪೋಸ್ಟರ್ ಒಂದನ್ನು ತಂದು ತನ್ನ ಸಿನೆಮಾ ನೋಡುವ ಹುಚ್ಚಿಗೆ ಒಂದಿಷ್ಟು  ರಸಗೊಬ್ಬರ ಸಿಂಪಡಿಸಿಬಿಟ್ಟಿರುತ್ತಾಳೆ. ಗುಲಾಬಿಯೊಳಗೊಂದು ಹಾರುವ ಹಕ್ಕಿಯಿರುತ್ತದೆ. ಸದ್ದಿಲ್ಲದೇ ಅದಕ್ಕೆ ರೆಕ್ಕೆ ಪುಕ್ಕಗಳನ್ನು ಕತ್ತರಿಸಿ  ಮೂಲೆಯಲ್ಲಿ  ಬಿದ್ದಿರುವಂತೆ ನೋಡಿಕೊಳ್ಳುತ್ತಾಳೆ ಗುಲಾಬಿ.ಊರವರ ಗೊಂದಾರಗಳಿಗೆಲ್ಲ ಹೋಗಿ ಸೂಲಗಿತ್ತಿಯಾಗಿ ಅದೆಷ್ಟೋ ಜೀವಗಳನ್ನು ಉಳಿಸಿ, ಇನ್ನೆಷ್ಟೋ ಜೀವಗಳನ್ನು ಸುಸೂತ್ರವಾಗಿಸಿ ಹಿಂತಿರುಗಿ ಬರುತ್ತಿದ್ದ ಗುಲಾಬಿಗೆ ಮಗ್ಗುಲ ಮನೆಯ ಹುಡುಗಿಯ ನಾಪತ್ತೆ ಅರಿಯದ ಲೆಕ್ಕದಂತಾಗುತ್ತದೆ. ಕಳೆದು ಹೋದ ಹುಡುಗಿ ಸಿಕ್ಕಿ ಮರವೊಂದರ ಮರೆಯಲ್ಲಿ ಗುಲಾಬಿಯೊಡನೆ ಮಾತಾಡಿದ್ದು ಊರವರಿಗೆ ವಕ್ರವಾಗಿ ಕಾಣುತ್ತದೆ. ಅನಿಷ್ಟಕೆಲ್ಲ ಶನೇಶ್ವರನೇ ಕಾರಣ ಅನ್ನುವಂತೆ  ಗುಂಪೊಂದು ಗುಲಾಬಿ  ಮನೆಗೆ ಲಗ್ಗೆಯಿಕ್ಕುತ್ತದೆ. ಗುಲಾಬಿಯ ಸಾಮಾನು ಸರಂಜಾಮು ಸಮೇತ ಆಕೆಯನ್ನೇ ಹೊತ್ತುಕೊಂಡು ಹಡಗಿನಲ್ಲಿರಿಸಿ ಮತ್ತೊಂದೂರಿಗೆ ಸಾಗಹಾಕಿಬಿಡುತ್ತದೆ. ಪರವೂರಿಗೆ ಸಾಗುತ್ತಿರುವ ಗುಲಾಬಿ ಮುಂದೊಮ್ಮೆ ಇಲ್ಲಿ  ಸೂಲಗಿತ್ತಿಯರ ಅನಿವಾರ್ಯತೆಯಾದಾಗ ಇದೆ ಊರು ತನ್ನನ್ನೇ ಹುಡುಕಿ ಹಿಂದೆ ಬರುತ್ತದೆಂದು, ಬಿಸಿರಕ್ತದ ಕೆಲವು ಹುಡುಗರಿಗೆ ಆ ಸಮಯದ ಅರಿವೆಯಿಲ್ಲದೆ ಇಂದು ಹೀಗಾಡುತ್ತಿರುವುದು ಎಂದು ವರ್ತಮಾನ, ಭವಿಷ್ಯಗಳನ್ನು ಅರ್ಥ ಮಾಡಿಕೊಂಡ ಋಷಿಯಂತೆ ದೋಣಿಯೊಂದರಲ್ಲಿ ಕುಳಿತು ಹಿಂದಿರುಗಿ ನೋಡದೆ ಹೊರಟು ಹೋಗುತ್ತಾಳೆ. ಅಲ್ಲಿಗೆ ಗುಲಾಬಿ ಕಥೆ ಮುಗಿಯುತ್ತದೆ.

ಮನುಷ್ಯನೊಬ್ಬನ ಬದುಕುವ ಛಲ, ಆ ಛಲಕ್ಕೆ ತಕ್ಕಂತೆ ಅವನ ಸುತ್ತಲಿನ ವಾತಾವರಣ ಅವನ ಮೇಲೆಸೆಯುವ ಸವಾಲುಗಳು ಹಾಗು ಆ ಸವಾಲುಗಳನ್ನು ಆ ಮನುಷ್ಯ ಮೆಟ್ಟಿ ನಿಲ್ಲುವ ರೀತಿ, ವರ್ಚಸ್ಸು ಇವುಗಳನ್ನೆಲ್ಲ ಕಂತೆ ಮಾಡಿ ಚಿತ್ರಿಸಿರುವ ಅಪೂರ್ವ ಕಲಾಕೃತಿ 'ಗುಲಾಬಿ ಟಾಕೀಸು'.ನಾವೇನೋ ಬಯಸಿದಾಗ ಸಿಗದಿರುವುದು, ಬಯಸದಿದ್ದ ಕಾಲದಲ್ಲಿ ಕಾಲಿಗೆ ತೊಡರಿಕೊಳ್ಳುವಂತೆ ಪ್ರಾಪ್ತವಾಗುತ್ತದೆ. ಬದುಕಬೇಕೆನ್ನುವ ಛಲ ಬಿಗಿಯಾದಾಗ ಬದುಕು ಎಲ್ಲರಿಗೂ ಮತ್ತೊಂದು ಹೊಸದೇನನ್ನೋ ತೋರಿಸಿರುತ್ತದೆ. ಬಯಸದಿರುವ ಹಾದಿಗಳಿಗೆ ನಮ್ಮನ್ನು ತಳ್ಳಿ ತಮಾಷೆ ನೋಡುತ್ತದೆ. ಕೆಲವೊಮ್ಮೆ ಬದುಕು ತಳ್ಳುವ ದಾರಿಗಳು ಸುಲಲಿತವಾದರೆ, ಕೆಲವೊಮ್ಮೆ ದುರ್ಭರವಾಗಿಯೂ ಇದ್ದು ವ್ಯಕ್ತಿಯನ್ನು ಸಾಣೆ ಹಿಡಿದು ಅವನ ಬಿಗಿತನ ಅಳೆಯಲು ಮುಂದಾಗಿಬಿಡುತ್ತದೆ. ಆ ದೃಷ್ಟಿಯಲ್ಲಿ ಗುಲಾಬಿ ಟಾಕೀಸು ನಮಗೊಂದು ಪಾಠವೇ ಸರಿ .... ಅಲ್ಲಲ್ಲ ನಮ್ಮ ಬದುಕೂ ಗುಲಾಬಿ ಟಾಕೀಸು ತಾನೇ?.

ಸೋಮವಾರ, ಜನವರಿ 8, 2018

ಅಶ್ವಿನಿ

ಗಂಧರ್ವೆಯಿವೆಯಲ್ಲ,

ಸೋಜಿಗವೇನಲ್ಲ

ಕೃತಿ ಸಂಸ್ಕೃತಿ ತಾನ್
ತನ್ನ ದಾರಿಯೊಳ್ ಇವಳಂ
ಬಿಡದೆ
ತಾನೇ ಕೃತಿಯೊಡತಿಯಾಗಿ
ಸಂಸ್ಕೃತಿಯಾಗಿ
ಧರ್ಮದ ಸಾಕಾರ ಮೂರುತಿಯಾಗಿ
ಧರ್ಮವದು ತಾನೇ ಪೆಣ್ ರೂಪ ತಳೆದು
ಆವಿರ್ಭವಿಸಿಹುದು ನೋಡಿಲ್ಲಿ

ಏನೀ ಮಾಯೆ
ಪೆಣ್ ಮಾಯೆ
ಕೃತಿ ಮಾಯೆ
ಸಂಸ್ಕೃತಿ ಮಾಯೆ
ಧರ್ಮ ಮಾಯೆ
ಮಾಯೆ ತಾನ್ ಜಾಲವಾಗಿ
ಇವಳಂ ಬೀಸದೆ
ಬಿಟ್ಟಿದುದೆಲ್ಲಿ
ಸಂಸ್ಕೃತಿ ತಾನ್ ಕೃತಿಯಾಗಿ
ಬದುಕಲು
ಇಳೆಯೊಳಗವತರಿಸಿಕೊಂಬಂತೆ

ಅಶ್ವಿನಿ ದೇವತೆ.

ಭಾನುವಾರ, ಡಿಸೆಂಬರ್ 24, 2017

ಮಾನವೀಯತೆ - ನಿನ್ನ ವಿಳಾಸವೆಲ್ಲಿ

ಸಿರಿಯರ ಗಲ್ಲಿಯೊಳಗೊಮ್ಮೆ
ಇಣುಕಿದ್ದೆ ಮಾನವೀಯತೆಯನೊಮ್ಮೆ
ಕಣ್ತುಂಬಿಕೊಳಲು, ಏನತಿಶಯ
ಮಾನವೀಯತೆಗೆ ಹರಕು 
ಛಾಪೆ ಆಸರೆಯಾಗಿತ್ತು
ದರ್ಪ ಸುಪ್ಪತ್ತಿಗೆಯೊಳಗಿತ್ತು

ಕೊರಗುವರ ಹಟ್ಟಿದಾರದಂಗಳೊಳಗೆ
ಒಮ್ಮೆ ಕಣ್ಣು ಹಾಯಿಸಿದೆ 
ಮಾನವೀಯತೆಯನೊಮ್ಮೆ ತಡಕಿದೆ 
ಅವರಿಗೆ ತನ್ನ ವಿಳಾಸವನೀಯದೆ 
ಮಾನವೀಯತೆ ಮರೆಯಾಯಿತ್ತು 
ಸಿರಿತನದ ದಾರಿಯೊಂದೇ ಅವರ ದೃಷ್ಟಿಗೆ ನಿಲುಕಿತ್ತು 

ಓದದವರ, ಓದಿ ಬರೆದವರ 
ಒಡನಾಟಗಳೊಳಗೆಲ್ಲ ಶೋಧಿಸಿದೆ 
ಸಿರಿತನವೊಂದೇ ಸೂಜಿಗಲ್ಲಿನಂತೆ ಸೆಳೆಯುತಿತ್ತು 
ಮಾನವೀಯತೆಯೊಂದನು ಮರೆಸಿತ್ತು 
ಅಲ್ಲೂ ಅದರ ವಿಳಾಸವಿಲ್ಲ 
ಧನದಾಹ ಅದರ ವಿಳಾಸ ಮಸುಕಾಗಿಸಿತ್ತು 

ಅಲ್ಲೆಲ್ಲೋ ಕುಸಿದು ಬಿದ್ದವರ 
ಇಲ್ಲೆಲ್ಲೋ ಅಪಘಾತಗೊಂಡವರ 
ಇನ್ನೆಲ್ಲೋ ದಾರಿದ್ರೋಪದ ಅಗ್ನಿಕುಂಡದೊಳಗೆ 
ಬಿದ್ದು ನರಳಿದವರ ಕಂಡು 
ಅವರ ವರಾತಗಳೆಲ್ಲ ಮಾನವೀಯತೆಯ 
ಗೈರನ್ನು ಎತ್ತೆತ್ತಿ ತೋರಿದಂತಿತ್ತು 

ದೇವರ ಸಾಕ್ಷಾತ್ಕಾರಕ್ಕೆ ಹಿಮಾಲಯ,
ದಿವ್ಯ ತೀರ್ಥ, ಪುಣ್ಯ ಕ್ಷೇತ್ರಗಳುಂಟು
ಆತ್ಮದ ಸಾಕ್ಷಾತ್ಕಾರಕ್ಕೆ ಜೀವನ 
ನಾವಿಕೆ ದೇಹವುಂಟು 
ಮಾನವೀಯತೆಯ ಸಾಕ್ಷಾತ್ಕಾರಕೆ 
ಏನುಂಟು?. ಸಂಪೂರ್ಣವಾಗಿ ಮರೆಯಾಯಿತ್ತು 

ಮನದೊಳಗೆ ಹುದುಗಿದ ಆಸೆ ಭಾವಗಳ 
ಮಗ್ಗುಲಿಗೆ ತಳ್ಳುವ ಧೈರ್ಯ ಮಾಡಿ 
ಕೆದಕಿ ನೋಡಿದೆ, ಬಹು ದಿನಗಳಿಂದ 
ಬಳಸದೆ ಮೂಲೆಗೆ ತುರುಕಿದ್ದ ಕಬ್ಬಿಣದ 
ಗುಂಡು ತಾನು ಸೊರಗುತ್ತಾ ಮೂಲೆಯಲ್ಲಿತ್ತು 
ಕೊನೆಗೂ ಮಾನವೀಯತೆಯ ವಿಳಾಸ ದೊರೆತಾಗಿತ್ತು.

ಭಾನುವಾರ, ಡಿಸೆಂಬರ್ 3, 2017

ನನಗಾಗಿ ಜನ್ಮ ತಳೆದ ಜೇನ ಹನಿ

ಬ್ರಹ್ಮ ಲೋಕದೊಳಗೊಮ್ಮೆ
ಜೇನ ಹನಿಯೊಂದನು ಕಂಡಿದ್ದೆ
ಬ್ರಹ್ಮ ನುಡಿದಿದ್ದ ನನಗಾಗಿಯೇ
ಜೇನ ಹನಿಯೆಂದು !

ಭೂಲೋಕದೊಳಗೆಷ್ಟೆಷ್ಟೋ ಜೇನ ಹನಿಗಳು
ಎಷ್ಟೆಷ್ಟೋ ಹೂದುಂಬಿಗಳು
ಎಡತಾಕಿದೆ ನನದ್ಯಾವುದು ಇನ್ನೂ
ದೊರೆತಿಲ್ಲ, ತಿಳಿಯುತ್ತಲೂ ಇಲ್ಲ

ಹೃದಯ ಸನ್ನದ್ಧವಾಯಿತು
ಮನಸು ತೆರೆಯಿತು
ಬಾಹುಗಳು ಬಿಗಿಯಪ್ಪುಗೆಗೆ ಕಾತರಿಸಿ
ನನ್ನದೆಂಬ ಹುಂಬತನ ಕುಡಿಯೊಡೆಯಿತು

ನನಗಾಗಿ ಜನ್ಮ ತಳೆದ ಜೇನ ಹನಿ
ಎಲ್ಲೋ ಬೆಳೆದಿರುವ ಜೇನ ಹನಿ
ತಲುಪುವದೆಂದು ನನಗೆ 
ಅದೂ ನನ್ನಂತೆ ಕಾತರಿಸುತ್ತಿರುವುದೇ?

ಭಾನುವಾರ, ನವೆಂಬರ್ 26, 2017

ಇರದಿದುಮ್ ಅವಗಾಹಿಸಿ ಇರ್ಪುದ ಸ್ಪುರಿಸು

ಧರ್ಮ ತಾನ್ ದೇವರಾಗಿ
ನಿನ್ನಿಂದ ಕೈ ಮುಗಿಸಿ
ತಾನಿರ್ಪ ಜಗದಾಗರಗಳಾವನೂ
ಎಳೆಯೊಳಗೂ ಅರುಹದೇ

ಇದೇಮ್ ಧರ್ಮ ನಿರಪೇಕ್ಷ ಪರೀಕ್ಷೆ
ಅದರೊಳಗೂ ಇಳಿ
ಬರುವುದಿರುವುದೇಮ್ ತಾನಳೆದು
ಇರದಿಹ ಗುಣವಂ ಅವಗಾಹಿಸಿ
ಇರ್ಪುದ ಸ್ಪುರಿಸು
ಅದೇ ಧರ್ಮ
ಅದೇ ಜ್ಞಾನ
ಅದೇ ವಿಜ್ಞಾನ

ನಗುತಿಹಳು ನೋಡಲ್ಲಿ ಕನ್ನಡಮ್ಮ

ಕನ್ನಡವ ಉಳಿಸೆನ್ನದಿರು
ಕನ್ನಡವ ಬೆಳೆಸೆನ್ನದಿರು
ಕನ್ನಡವನುಳಿಸಿ ಬೆಳೆಸಲು
ಅದೇನು ಕಮರುತಿರುವ ಗಿಡವೇ ?
ಬತ್ತುತ್ತಿರುವ ನದಿಯೇ?

ಕನ್ನಡವೊಂದು ಹೆಮ್ಮರ
ನೆರಳರಸಿ ಬರುವರಿಗಾಶ್ರಯ
ದಣಿದವರಿಗೊಂದು ತಂಗುದಾಣ
ಬಳಲಿದವರ ತಲೆಗೊಂದು
ಮೆತ್ತೆ ಹೂವಿನ ತಲೆದಿಂಬು

ಹಮ್ಮೇನು ಬಿಮ್ಮೇನು
ಯಾರ ಹಂಗೇನು ಕನ್ನಡಕೆ
ಯುಗ ಯುಗಾಂತರಗಳುರುಳಿ
ತಲೆ ತಲಾಂತರಗಳಳಿದರೂ
ಚೆಲುವೆಲ್ಲ ತನ್ನದೆಂದು
ನಗುತಿಹಳು ನೋಡಲ್ಲಿ ಕನ್ನಡಮ್ಮ.

ಬುಧವಾರ, ನವೆಂಬರ್ 15, 2017

ಸೌಜನ್ಯ

ಮೌನವೆಂದರೇನು?
ಮಾತೆಂದರೇನು?
ಮೌನ ಮಾತುಗಳ ಬೆಲೆ
ಎಲ್ಲೆಲ್ಲಿ ಎಷ್ಟೆಷ್ಟು
ಎಲ್ಲಕೂ ಬೆಲೆಯಿದು
ಸೌಜನ್ಯ!

ಪ್ರಕೃತಿಯೆಂದರೇನು?
ವಿಕೃತಿಯೆಂದರೇನು?
ಪ್ರಕೃತಿ ವಿಕೃತಿಗಳೆರಡಕ್ಕೂ
ಜುಗಲ್ ಬಂದಿ ಅದೇ
ಸೌಜನ್ಯ!

ಅಕ್ರಮ ತಾನ್ ಮನದೊಳಗೆ
ಮೇರೆ ಮೀರಿ
ಉಕ್ಕಿ ಹರಿಯೆ
ಸಕ್ರಮ ತಾನ್ ಮನದೊಡೆಯ
ತಂದು ತಹಬದಿಯದು
ಸೌಜನ್ಯ!

ಗುರುವಾರ, ನವೆಂಬರ್ 9, 2017

ಬಾಳಿಗೊಂದು ದೀಪಿಕೆ

ಕಾರ್ಯದಲ್ಲೊಂದು ತತ್ಪರತೆ
ಬದುಕೊಳಗೊಂದು ಘನತೆ
ಅನ್ಯರೊಡನಾಟಗಳೊಳಗೂ
ಅವರರವರ ಬಾಳ್ಗೊಂದು ದೀಪಿಕೆ

ಏನಿಲ್ಲಿ ಕಾಣುತಿಹುದು?
ತಂತ್ರ- ಜ್ಞಾನಗಳನೆಲ್ಲ ಮೀರಿದ
ಮಾನವೀಯತೆ
ಕನ್ನಡವೇ ತಾನ್ ಮನುಜನಾಗಿ
ಅವತರಿಸಿ ಕುಂತಂತೆ
ಧೀಮಂತ ಕನ್ನಡತಿ

ಮನವೇನು ಗುಣವೇನು
ಮನುಜನ ಬುದ್ಧಿಯ ಸುಪರ್ದಿ
ಯೊಳಗೇನೇನೊ ಮಾಯೆ
ಅದರೊಳಗಿಳಿದು ತನ್ನ ತಾ
ಮರೆತಂತೆ ಜೀವನರಂಗದೊಳಗೆ
ತಾ ಜಾಣೆ ಈ ಕನ್ನಡತಿ

ನುಡಿಸಿದರೆಷ್ಟೋ ಸಂತೋಷ
ನಗಿಸಿದರೆಷ್ಟೋ ಉನ್ಮಾದ
ಮನುಜರ ಮನವರಿದು
ನಡೆಯುವ ಈ ಪೆಣ್ ಗಿಲ್ಲ ಸೋಲು
ಇದು ಶತ ಸಿದ್ಧ.

ಶುಕ್ರವಾರ, ನವೆಂಬರ್ 3, 2017

ನಮ್ಮ ನರೇಶ

ಎತ್ತರದ್ದೊಂದು ನಿಲುವು
ದಿಟ್ಟವಾದ್ದೊಂದು ನೋಟ
ಅರಿವ ಜ್ಞಾನಗಳೊಳಗೆ
ಸ್ಪಷ್ಟವಾದ್ದೊಂದು ಅರಿಮೆ
ನಡೆಯೊಳಗೆ ನಿಜ
ಜೀವನವರಿತ ಚತುರ

ಹೇಳಿ-ಕೇಳುವುದರೊಳಗಿನ
ನಂಬಿಕೆಗಳನೆಲ್ಲಾ ದೂರ ನೂಕಿ
ತನ್ನಾತ್ಮ ಸಂತೋಷದೊಳಗೆ
ತಲ್ಲೀನನಿವನು
ಸಂತೋಷಿಗಳೊಳಗೂ
ದುಃಖಿಗಳೊಳಗೂ
ಅವರೇ ಆಗಿ ನಿಂತುಬಿಡುವನೀ
ಹುಡುಗ

ಆಗಾಗ ಬೆದಕಿರುವ 'ನೀನೊಬ್ಬ ದಡ್ಡ'
ಇನ್ನೊಮ್ಮೆ ಕೆಣಕಿರುವ 'ನೀನೊಬ್ಬ ಅದಮ'
ಇನ್ನಾರಲ್ಲೋ ಉಸುರಿರುವ 'ನಾನೊಬ್ಬ ಮೂರ್ಖ ಶಿಖಾಮಣಿ'ಯೆಂದು
ಇನ್ನು ಏನೇನೊ ಜನರ ಭಾವಗಳು
ಎಲ್ಲವನೂ ಕಂತೆ ಮಾಡಿ
ನನ್ನತ್ತ ತೂರಿರುವ,
ನಿಜಜೀವನ ರಂಗದ ಮಜಲೊಂದನು
ಇಲ್ಲೇ ಪರಿಚಯಿಸಿರುವ

ನನಗರಿಯದ ಜಗದ ಬಾಗಿಲನು
ತೋರಿರುವ
ತಾನೆತ್ತಲೂ ಸುಳಿಯದೇ
ಧೀಮಂತನಂತೆ ಕೂತಿರುವ
ದಾರಿಗಾರರಿಗೆ ಅಡ್ಡಲಾಗದೆ
ಸುಮ್ಮನಿದ್ದವರ ಮುಂದೆ ದೂಡದೆ
ತಾನೊಬ್ಬ ತಾಳ್ಮೆ ತಳೆದು ನಗುತಿರುವ
ಅವನೇ ನಮ್ಮ ನರೇಶ.

ಕಾಲದರಿವೇ ಗುರು!!

ಕಾಲ ತಾನ್ ಕಾಲಿಕ್ಕಿ
ಕಾಲ್ಗವುಚಿದನೆಲ್ಲ ಕಲಗಚ್ಚ
ಮಾಡಿ ಮುನ್ನಡೆಯುತಿರೆ
ಮಗುವೊ? ಮಂಗವೋ?
ನೀನೊಂದೂ ತಿಳಿಯದೆ
ಅರಳಿದ ಕಣ್
ಕೆರಳಿದ ಕಿವಿಮಾಡಿ
ಭ್ರಾಂತಿಯೊಳಗೆ ಬೆಚ್ಚುವುದೇನ್

ತರವಲ್ಲ ತಗಿ
ಕಾಲ ತಾನ್ ಥೇರನೇರಿ
ಧೂಳಿಕ್ಕಿ ತಾನ್ ಧೀಮಂತನಂತೆ
ಬರುತಿರೆ ಬೆದರಿ ಚದುರಿದ
ಅಂಬೆಗರುವಂತೆ
ಗ್ರಹಣ ಬಡಿದು ಕಲ್ಲೋಲಗೊಂಡ
ಕಡಲಂತೆ ಚಡಪಡುವಯೇನ್

ಒಡಮಾಡು ಸನ್ನದ್ಧನಾಗು
ಕಾಲದೂರಿಗೊಂದೇ ಕಾಲ್ದಾರಿ
ಗುರು ಗುರಿಗಳಿಲ್ಲದೆ
ತಾನೇ ಗುರುವಾಗಿ
ತನ್ನತ್ತ ಸೆಳೆಯುತಲಿಹುದು ನಿನ್ನ
ಅದರೊಳಗೆ ಹುದುಗಿಹೋಗುವ
ಮುನ್ನ ಸಾಧಿಸುವೆಯೇನ್!?

ಕಾಲದರಿವೇ ಗುರು!!!

ಶುಕ್ರವಾರ, ಅಕ್ಟೋಬರ್ 6, 2017

ನಾವು ಗಟ್ಟಿಗರಾಗದ ಹೊರತು ಭಾಷೆ ಉಳಿಸುವುದು ಅಸಾಧ್ಯ

ಎರಡು - ಮೂರು ವರ್ಷಗಳ ಹಿಂದೆ ಮಹಾರಾಷ್ಟ್ರದ ಪುಣೆಯಲ್ಲಿದ್ದೆ. ಮನೆಯಿಂದ ಕೆಲಸದ ಸ್ಥಳಕ್ಕೆ ೧೫-೧೬ ಕಿ ಮೀ ದೂರವಾದರೂ ಲೋಕಲ್ ರೈಲು ಇದ್ದಿದ್ದರಿಂದ ಪ್ರಯಾಣ ಅಷ್ಟು ಪ್ರಯಾಸ ಎನಿಸುತ್ತಿರಲಿಲ್ಲ. ೧೫ ಕಿ ಮೀ ದೂರವನ್ನು ಹತ್ತೇ ನಿಮಿಷಗಳಲ್ಲಿ ತಲುಪುತ್ತಿದ್ದ ಶರ ವೇಗದ ರೈಲುಗಳವು. ಬಡ-ಮಧ್ಯಮ ವರ್ಗದವರಿಗೆ ಹೇಳಿ ಮಾಡಿಸಿದಂತಿದ್ದ ಲೋಕಲ್ ರೈಲು ಪುಣೆಯ ಬಡವರ ಪಾಲಿಗೆ ಪ್ರಯಾಣ ಬಂಧುವೇ ಸರಿ. ಇಂತಿದ್ದ ಬೇಸಿಗೆಯ ಒಂದು ದಿನ ಪುಣೆಯ ಚಿಂಚ್ವಾಡ್ ರೈಲು ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತ ನಿಂತಿದ್ದೆ. ಸಾಮಾನ್ಯವಾಗಿ ಅಲ್ಲಿ ಜನರು ಮರಾಠಿ ಅಥವಾ ಹಿಂದಿ ಮಾತನಾಡುವುದರಿಂದ ಯಾರಾದರೂ ಕನ್ನಡ ಮಾತನಾಡುವುದನ್ನು ಕೇಳಿದೊಡನೆ ನನ್ನ ಕಿವಿಗಳು ನೆಟ್ಟಗಾಗಿ ಬಿಡುತ್ತಿದ್ದವು. ಅತ್ತಲೇ ಕಿವಿಕೊಟ್ಟು ನಿಂತಿರುತ್ತಿದ್ದ ನಾನು ಎಷ್ಟೋ ಬಾರಿ ಅವರ ಬಳಿ ಸಾರಿ ಅವರ ಊರು ಇನ್ನಿತರ ವಿಚಾರಗಳನ್ನು ಮಾತನಾಡಿ ಕುಶಲೋಪರಿ ವಿಚಾರಿಸಿಕೊಂಡು ಹಿಂದಿರುಗುತ್ತಿದ್ದೆ. ಅಂದು ಅದೇ ಚಿಂಚ್ವಾಡ್ ರೈಲು ನಿಲ್ದಾಣದಲ್ಲಿ ಕನ್ನಡ ಮಾತನಾಡುತ್ತಿದ್ದ ಕುಟುಂಬವೊಂದು ನನ್ನ ಕಣ್ಣಿಗೆ ಬಿತ್ತು. ಅವರೊಡನೆ ಇದ್ದ ನಾಲ್ಕೈದು ಮಕ್ಕಳು, ಐದಾರು ಹೆಂಗಸರನ್ನು ಕಂಡರೆ ಇವರು ಬೇಸಿಗೆ ರಜೆ ಕಳೆಯಲು ಬಂದಿರಬೇಕು ಎನ್ನುವುದು ತಿಳಿಯುವಂತಿತ್ತು. ಇವೆಲ್ಲಕ್ಕಿಂತಲೂ ನನ್ನನು ಹೆಚ್ಚಾಗಿ ಸೆಳೆದಿದ್ದು ಅವರ ವಿಶಿಷ್ಟ ಹಿಂದಿ ಮಿಶ್ರಿತ ಕನ್ನಡ. ಆ ಕುಟುಂಬದ ಸುಮಾರು ೩೦-೩೫ ಪ್ರಾಯದ ವ್ಯಕ್ತಿಯೊಬ್ಬ ತನ್ನ ಓರಗೆಯವನೊಂದಿಗೆ ಹೀಗೆ ಮಾತನಾಡುತ್ತಿದ್ದ.

"ನಾನ್ ಅಲ್ಲಿಂದ ಜರೂರು ಬರ್ಬೇಕಾದ್ರೆ ಚುಟ್ಟಿ ತೊಗೊಂಡು ಬಾಕಿ ಏಕ್ ಹಜಾರ್ ರುಪೈ ರೊಕ್ಕ ಐತಂತ ಹೇಳಿ ಬಂದೇನಿ".

ಈ ವಾಕ್ಯ ಕೇಳಿದೊಡನೆ ಆಶ್ಚರ್ಯವಾಯಿತು. ಸದ್ಯ ಉತ್ತರ ಕರ್ನಾಟಕದಲ್ಲಿ ಆದಿಲ್ ಶಾಹಿಗಳ ಆಡಳಿತ ಮುಗಿದು ಸರಿ ಸುಮಾರು ಇನ್ನೂರು ವರ್ಷಗಳಾದರು ಕನ್ನಡದೊಳಗೆ ಹಿಂದಿ ನುಸುಳಿರುವುದು ಬರೀ ಇಷ್ಟೆಯೇ ಎನ್ನುವ ಯೋಚನೆ ತಲೆಯೋಳಗೆ ಓಡುತ್ತಿದ್ದರು, ಇದು ಹೀಗೆ ಮುಂದುವರೆದರೆ ಅವನ ಸಂಸಾರದ ಕುಡಿ ಕೊನರುಗಳೆಲ್ಲಾ ಇನ್ನೆರಡು ತಲೆ ಮಾರು ಮುಗಿಯುವುದರೊಳಗಾಗಿ ಹಿಂದಿ ಸಾಮ್ರಾಜ್ಯದ ಕಟ್ಟಾಳುಗಳಾಗಿ ಬಿಡುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಕೊಳ್ಳುತ್ತಿದ್ದೆ. ಅವರ ಸಮೀಪಕ್ಕೆ ಹೋಗಿ ಕೇಳಿದಾಗ ತಿಳಿಯಿತು ಅವರು ಬೀದರ್ ಜಿಲ್ಲೆಯ ಭಾಲ್ಕಿ ಬಳಿಯ ಒಂದು ಗ್ರಾಮದವರೆಂದು. ಕನ್ನಡ ನಾಡಿನ ಗಡಿಯೊಳಗೆ ಪರಭಾಷೆಗಳು ಅಷ್ಟೊಂದು ಸದ್ದು ಮಾಡುತ್ತಿರುವುದು ನಿಧಾನಕ್ಕೆ ನನ್ನ ಮನಸ್ಸಿಗೆ ಅರ್ಥವಾಗುವುದಕ್ಕೆ ಶುರುವಾಯಿತು. ಅಲ್ಲಿಯವರೆಗೂ ಬೆಂಗಳೂರಿನ ಎಲ್ಲ ಭಾಷಿಗರೊಂದಿಗೂ ಮಾಮೂಲಾಗಿ ಬೆರೆತುಬಿಡುತ್ತಿದ್ದ ನನಗೆ ಅಂದು ನಾನು ನನ್ನದು ಎಂಬ ಅರಿವಾಗಲು ತೊಡಗಿತ್ತು. ಯಾಕೋ ಏನೋ ಅಂದು ಮೊದಲ ಬಾರಿಗೆ ಕನ್ನಡ ನನ್ನ ಸ್ವಂತವೆನಿಸಿತ್ತು. 

ಕೆಲವು ದಿನಗಳ ಹಿಂದೆ ತುಮಕೂರು ಜಿಲ್ಲೆಯ ಮಧುಗಿರಿಯ ಹಳ್ಳಿಯೊಂದಕ್ಕೆ ಹೋಗಿದ್ದೆ. ಯಾರೊಂದಿಗೋ ಮಾತನಾಡುತ್ತಾ ಕುಳಿತಿದ್ದಾಗ ಅವರು ಪದೇ ಪದೇ ಅವರ ಕನ್ನಡ ಪದಗಳ ಕೊನೆಯಲ್ಲಿ 'ಮ್' ಸೇರಿಸುತ್ತಿದ್ದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ.ಕಷ್ಟ ಎನ್ನಲು ಕಷ್ಟಮ್, ಸಂತೋಷ ಎನ್ನಲು ಸಂತೋಷಮ್ ಎಂದು ಹೀಗೆ ಸಾಗಿತ್ತು ಅವರ ಕನ್ನಡ ಮಾತು ಕತೆ. ಅದು ಯಾವ ಭಾಷೆಯ ನೆರಳಿನಾಟ ಎಂದೇನೂ ನಾನು ಬಿಡಿಸಿ ಹೇಳುವ ಅಗತ್ಯವಿಲ್ಲ ಅಲ್ಲವೇ?.ಇನ್ನೂ ಮುಂದುವರೆದು ಆ ವ್ಯಕ್ತಿ ತನ್ನ ಮಗನನ್ನು ಕರೆದು ಹೇಳುತ್ತಿದ್ದ "ರೇ, ನಾರಾಯಣ ವಾಡಲು ಇಂಟ್ಲಾ ಹೋಗಿ ಊಟ ಮಾಡಿಕಿ ರಾವಂಡಿ ಅಂತ ಹೇಳ್ಬಿಟ್ಟು ಬಾ". ಇದನ್ನು ಕೇಳಿದ ತಕ್ಷಣ ಮತ್ತೊಮ್ಮೆ ಪುಣೆಯಲ್ಲಾದ ಅನುಭವ, ನಮ್ಮ ಮಗ್ಗುಲ ತುಮಕೂರಿನಲ್ಲೇ ನಡೆಯುತ್ತಿರುವುದು ನೋಡಿ ನನಗೆ ಭಾಷೆ ಮೇಲಿದ್ದ ಪ್ರೀತಿ ಇನ್ನಷ್ಟು ಬಿಗಿಯಾಗತೊಡಗಿತು. ಹಿಂದಿರುಗಿ ಬರುವ ದಾರಿಯುದ್ದಕ್ಕೂ ಸುಧೀರ್ಘವಾಗಿ ಆಲೋಚಿಸುತ್ತಲೇ ಬಂದೆ . ಕರ್ನಾಟಕದಲ್ಲಿ ಭಾಷೆಯ ವಿಚಾರದಲ್ಲಿ ನಡೆದಿದ್ದೇನು? ನಡೆಯುತ್ತಿರುವುದೇನು? ನಿಧಾನಕ್ಕೆ ಅವಲೋಕಿಸುತ್ತಲೂ ಇದ್ದೆ. 

ಹೆಚ್ಚು ಕಡಿಮೆ ಎರಡೂ ಮುಕ್ಕಾಲು ಸಾವಿರ ವರ್ಷಗಳ ಇತಿಹಾಸವಿರುವ ನಮ್ಮ ಕನ್ನಡ ಭಾಷೆಯು ಅಳಿದು ಅಟ್ಟ ಸೇರಿಬಿಡುತ್ತದೆಂದು ನಾವೆಲ್ಲಾ ಭಾವಿಸಿದ್ದೇವೆ ಹಾಗು ನಮ್ಮ ನಮ್ಮ ಕೈಲಾದ ಸಹಾಯವನ್ನು ಅದಕ್ಕೆ ಮಾಡುತ್ತಿದ್ದೇವೆ. ಬಿದ್ದವನಿಗೆ ಬಿಸಿನೀರು ಕೊಟ್ಟರೆ ಎದ್ದು ಎದೆಗೆ ಒದ್ದಂತೆ ಎನ್ನುವಂತೆ ಕೈಲೊಂದಿಷ್ಟು ಕಾಸು ಮಾಡಿ ಕಾರು ಬಂಗಲೆ ಎಲ್ಲ ಮಾಡಿಕೊಂಡ ಮೇಲೆ ನಿಮ್ಮ ಮಕ್ಕಳೊಡನೆ ಕನ್ನಡ ಮರೆತು ಇಂಗ್ಲೀಷ್ ಶುರುವಿಟ್ಟುಕೊಂಡಿರಿ. ಬೀದಿಯಲ್ಲಿ ಬಾರಿಸು ಕನ್ನಡ ಡಿಂಡಿಮವ ಎನ್ನುವ ಘೋಷಣೆ ಹೊರಡಿಸಿ ಕನ್ನಡ ಬಾವುಟ ಹಿಡಿದು ಹೋರಾಟ ನಡೆಸಿದ ನೀವು ಮನೆಗೆ ಹೋಗಿ ನಿಮ್ಮ ಮಕ್ಕಳನ್ನು ಸದ್ದಿಲ್ಲದೇ ಇಂಗ್ಲೀಷ್ ಕಾನ್ವೆಂಟುಗಳಿಗೆ ಸೇರಿಸಿ ಬಂದಿರಿ. ಆ ಕಾನ್ವೆಂಟುಗಳನ್ನು ಕನ್ನಡೇತರರು ನಡೆಸುತ್ತಿರುವ ಕಾರಣ ಕನ್ನಡಕ್ಕೆ ಕೊನೆಯ ಆದ್ಯತೆ ನೀಡಲಾಯಿತಾದರೂ ನೀವು ನಮ್ಮ ಕೈಲೇನು ಇಲ್ಲವೆಂದು ಕೈ ಚೆಲ್ಲಿ ಕುಳಿತಿರಿ. 'ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ' ಎನ್ನುವ ಸಂಸ್ಕೃತಿಯೊಳಗೆ ಹುಟ್ಟಿ ಬೆಳೆದ ನೀವು ನಿಮ್ಮ ಮಕ್ಕಳನ್ನು 'ರೈನ್ ರೈನ್ ಗೋ ಅವೇ' ಎಂಬ ಪಶ್ಚಿಮದ ಸಂಸ್ಕೃತಿಗೆ ಬಲವಂತವಾಗಿ ನೂಕಿದಿರಿ. ಬೆಂಗಳೂರಿನ ಪ್ರಮುಖ ಶಾಲೆಯೊಂದರಲ್ಲಿ 'ನೋ ರೀಜನಲ್ ಲಾಂಗ್ವೇಜಸ್' ಎಂಬ ಫಲಕ ಹಾಕಿ ಕನ್ನಡ ಮಾತನಾಡಿದರೆ ದಂಡ ಕಟ್ಟುವಂತೆ ನಿಯಮ ಮಾಡಲಾಯಿತಾದರೂ ನೀವು ಅದೇ ಶಾಲೆಗೇ ಹೋಗಿ ಸರತಿ ಸಾಲಿನಲ್ಲಿ ನಿಂತು ಅರ್ಜಿ ತಂದು ಲಕ್ಷಾಂತರ ಸುರಿದು ನಿಮ್ಮ ಮಕ್ಕಳನ್ನು ಅಲ್ಲಿಗೆ ಕಳಿಸಿದಿರಿ.ಇನ್ನೂ ಏನೇನೋ ನಮ್ಮ ಕಣ್ಣ ಮುಂದೆ ದಿನ ನಿತ್ಯ ನಡೆಯುತ್ತಲೇ ಇವೆ. ನೀವೆಷ್ಟೇ ಹರ ಸಾಹಸ ಪಟ್ಟರು ಕನ್ನಡವದು ನಡುಗದು, ಕಾರಣ ಅದರ ಘನ ಹಿನ್ನೆಲೆಯೇ ಅಂತದ್ದು.

ಮೊಘಲರು ೪೦೦ ವರ್ಷ ಹಾಗು ಬ್ರಿಟೀಷರು ೧೫೦ ವರ್ಷ ಆಳಿದರೂ ಕನ್ನಡ ಭಾಷೆ ತನ್ನ ಘನತೆಯನ್ನು ಉಳಿಸಿಕೊಂಡು ಭಾರತ ದೇಶ ಸ್ವಾತಂತ್ರ್ಯ ಕಂಡು ಸ್ವಾಯತ್ತತೆಯೆಡೆಗೆ ಹೆಜ್ಜೆ ಇತ್ತ ನಂತರವೂ ತೀರಾ ಇತ್ತೀಚಿಗೆ ನಡೆದಿದೆ ಎನ್ನಲಾದ ಕನ್ನಡದ ಅತೀ ದೊಡ್ಡ ಆಂದೋಲನ ಗೋಕಾಕ್ ಚಳುವಳಿ ನಡೆದಾಗಲೂ ಕರ್ನಾಟಕದ ಒಳಗಿರುವ ಕೆಲವು ಅನ್ಯ ಭಾಷಿಕ ಸಂಘಗಳು ಗೋಕಾಕ್ ವರದಿಯನ್ನು ಜಾರಿಗೆ ತರದಂತೆ ಆಗಿನ ಸರ್ಕಾರಕ್ಕೆ ಪತ್ರವೊಂದನ್ನು ಬರೆದಿದ್ದು ಸೇರಿ ಎಲ್ಲವನ್ನೂ ಬದಿಗಿಟ್ಟು ಜ್ಞಾನಪೀಠ ಪ್ರಶಸ್ತಿ, ಸರಸ್ವತಿ ಸಮ್ಮಾನ್ ನಂತಹ ಉನ್ನತ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಳ್ಳುತ್ತಿರುವುದರಲ್ಲಿ ತೊಡಗಿಕೊಂಡಿದ್ದು ಸದ್ಯಕ್ಕಂತೂ ಕನ್ನಡ ಅಳಿಯುವ ಭಾಷೆಯಲ್ಲವೇ ಅಲ್ಲ. ಪ್ರಪಂಚದಲ್ಲಿ ಅತೀ ಹೆಚ್ಚು ಬಳಸುವ ಭಾಷೆಯ ಪಟ್ಟಿಯಲ್ಲಿ ೩೨ನೆ ಸ್ಥಾನದಲ್ಲಿರುವ ಕನ್ನಡ ಇನ್ನು ಮುಂದೇನಾದರೂ ದುರ್ಬಲವಾಗುವತ್ತ ಹೊರಳಿದರೆ ಅದಕ್ಕೆ ಕಾರಣ ಅನ್ಯಭಾಷಿಗರಲ್ಲ, ಭಾಷೆಗಳನ್ನು ಹೇರಿಕೆ ಮಾಡಿ ಮಜಾ ನೋಡುವ ಸರ್ಕಾರಗಳೂ ಅಲ್ಲ ಬದಲಾಗಿ ಅದರ ನೇರ ಹೊಣೆ ಕನ್ನಡಿಗರದ್ದೇ. ನಿಮ್ಮ ಮನೆಯ ದೀವಿಗೆ ನೀವು ಹಚ್ಚಿ ಬೆಳಗಿಸುವುದ ಬಿಟ್ಟು ಅನ್ಯರಿಗೆ ಕಾಯುವುದು ತರವೇ?. ದೇಶದ ಆಡಳಿತ ಹಿಡಿತ ಅನ್ಯರ ಕೈಲಿದ್ದು ಈಗಿನ ಗೂಗಲ್, ಫೇಸ್ ಬುಕ್, ವಾಟ್ಸಾಪ್ ಗಳ ನೆರಳೂ ಇಲ್ಲದೆ ಕನ್ನಡ ಮರೆಯಾಗದೆ ಉಳಿದಿತ್ತು ಎಂದರೆ ಅದಕ್ಕೆ ಕಾರಣ ಕನ್ನಡ ಭಾಷಿಗರ ಭಾಷಾ ಪ್ರೇಮವೇ ಹೊರತು ಸರ್ಕಾರಗಳ ಕಾನೂನು ಕಟ್ಟಳೆಗಳಲ್ಲ. ಇದೀಗ ನಾವೇ ನಿಂತು ಆರಿಸಿದ ಸರ್ಕಾರವಿದೆ, ಜನಾದೇಶಕ್ಕೆ ಈ ದೇಶದ ಕಾನೂನು ತಲೆಬಾಗುತ್ತದೆ. ಇಂತಿದ್ದು ಕನ್ನಡ ಭಾಷೆಯ ಉಳಿವು ಅಳಿವಿನ ಪ್ರಶ್ನೆ ಇರುವುದು ಸರ್ಕಾರದ ಕೈಲಲ್ಲ ಬದಲಾಗಿ ಕನ್ನಡ ಭಾಷೆಯನ್ನು ದಿನ ನಿತ್ಯವೂ ಬಳಸುವ ನಮ್ಮ ನಿಮ್ಮೆಲ್ಲರ ಕೈಲಿ.

ಕನ್ನಡಿಗರು ಗಟ್ಟಿಗರಾಗಿ ಭಾಷೆ ವಿಚಾರದಲ್ಲಿ ಸ್ವಾಭಿಮಾನಿಗಳಾಗದ ಹೊರತು ಯಾವ ಸರ್ಕಾರಗಳೂ ಏನೂ ಮಾಡಲಾರವು. ಅದೇಕೋ ಇತ್ತೀಚಿಗೆ ಕನ್ನಡವೆಂದರೆ ಕೆಲವರಿಗೆ ಕೇವಲವಾಗಿದೆ. ಬೆಳಗಾವಿಯ ವಿಚಾರದಲ್ಲಿ ಮಹಾರಾಷ್ಟ್ರ ಕನ್ನಡಿಗರ ಮೇಲೆ ಗುಟುರು ಹಾಕುತ್ತದೆ, ನ್ಯಾಯಾಲಯದಲ್ಲೂ ಆ ವಿಚಾರವಾಗಿ ದಾವೆ ಹೂಡಿ ಪಂಥಾಹ್ವಾನ ನೀಡುತ್ತದೆ. ನಮ್ಮ ಮಗ್ಗುಲ, ದೇಶದಲ್ಲೇ ಕಿರಿದಾದ ರಾಜ್ಯ ಗೋವಾ ಕೂಡ ಕನ್ನಡ ನಾಡಿನೊಡನೆ ಅಷ್ಟಕ್ಕಷ್ಟೇ ಎನ್ನುವ ಸ್ಥಿತಿ ತಲುಪಿದ್ದಷ್ಟೇ ಅಲ್ಲದೆ ನೀವೇನು ಮಾಡಬಲ್ಲಿರಿ ಎಂದು ತೊಡೆ ತಟ್ಟುವಷ್ಟು ಅನುವು ನಾವೇ ಮಾಡಿಕೊಟ್ಟುಬಿಟ್ಟಿದ್ದೇವೆ. ಆಂಧ್ರದ ಗಡಿಗೆ ಸೇರಿಕೊಂಡ ಯಾವ ಊರೊಳಗೆ ಕಾಲಿಟ್ಟರು ಆಂಧ್ರ ಪಾಂಡಿತ್ಯ ಮೆರೆಯುತ್ತದೆ. ಬೆಂಗಳೂರಿನ ಅಸಂಖ್ಯಾತ ಕನ್ನಡಿಗರಿಗೆ ಅವರ ಮೊಬೈಲ್ ನಂಬರ್ ಕನ್ನಡ ದಲ್ಲಿ ಹೇಳಿ ಎಂದರೆ ಅವರ ಮೊಬೈಲ್ ಸಂಖ್ಯೆಯೇ ಮರೆತು ಹೋಗುವಷ್ಟು ಅವರು ಇಂಗ್ಲೀಷ್ ಮೋಹದೊಳಗೆ ಸಿಲುಕಿಕೊಂಡಿದ್ದಾರೆ. ಈ ಎಲ್ಲ ಸಂಕೋಲೆಗಳಿಂದ ಹೊರ ಬಂದು ನಾನು, ನನ್ನದು ಎನ್ನುವ ಸ್ವಾಭಿಮಾನ ತಳೆದು ಎಂದು ಎಲ್ಲ ಕನ್ನಡಿಗರು ಹೆಮ್ಮೆಯಿಂದ ಕನ್ನಡವಾಡುತ್ತಾರೋ ಅಂದೇ ಕನ್ನಡದ ಭವಿಷ್ಯ ಬಂಗಾರವಾಗುತ್ತದೆ, ಕನ್ನಡ ನಾಡು ಮತ್ತೊಮ್ಮೆ ನಲ್ಮೆಯ ಬೀಡಾಗುತ್ತದೆ.

ಸೋಮವಾರ, ಅಕ್ಟೋಬರ್ 2, 2017

ಲಾಲ್ ಬಹದ್ದೂರ್ ಶಾಸ್ತ್ರಿ - ಅಪ್ರತಿಮ ನಿಷ್ಠಾವಂತ

ಲಾಲ್ ಬಹದ್ದೂರ್ ಶಾಸ್ತ್ರಿ ಭಾರತ ದೇಶ ಕಂಡ ಒಬ್ಬ ಅಪ್ರತಿಮ ನಿಷ್ಠಾವಂತ ನಾಯಕ. ಅವರಲ್ಲಿದ್ದ ನಿಷ್ಠೆಗೆ ಸಮನಾಗಿ ನಿಲ್ಲಬಲ್ಲ ನಿಷ್ಠಾವಂತರು ರಾಜಕೀಯ ರಂಗದಲ್ಲಿ ಬಹುಶಃ ಯಾರೂ ಇರಲಿಕ್ಕಿಲ್ಲ. ಅವರ ನಿಷ್ಠೆಗೆ ಕನ್ನಡಿ ಹಿಡಿಯುವಂತಹ ಘಟನೆಯೊಂದನ್ನು ನಾನಿಲ್ಲಿ ಹೇಳಬಯಸುತ್ತೇನೆ. ಇದು ಶಾಸ್ತ್ರೀಜಿ ಅವರ ಪುತ್ರ ಸುನಿಲ್ ಶಾಸ್ತ್ರಿ "ಲಾಲ್ ಬಹದ್ದೂರ್ ಶಾಸ್ತ್ರೀ : ಪಾಸ್ಟ್ ಫಾರ್ವರ್ಡ್" ಎಂಬ ಪುಸ್ತಕದಲ್ಲಿ ನಮೂದಿಸಿರುವ ಒಂದು ಸತ್ಯ ಘಟನೆ.
ಸುನಿಲ್ ಶಾಸ್ತ್ರೀ ಆಗಿನ್ನೂ ಇಪ್ಪತ್ತರ ಯುವಕ, ತಮ್ಮ ತಂದೆಯವರ ಹುದ್ದೆಯ ಘನತೆಗೆ ತಕ್ಕಂತೆ ಐಶಾರಾಮಿ ಕಾರಿನಲ್ಲಿ ಓಡಾಡುವ ಆಸೆ ಅವರಿಗೆ.ಆದರೆ ಶಾಸ್ತ್ರಿಯವರೋ ನಿಷ್ಠೆ, ಪ್ರಾಮಾಣಿಕತೆಗೆ ಇನ್ನಿಲ್ಲದ ಬೆಲೆ ಕೊಟ್ಟು ಇರುವುದರಲ್ಲಿಯೇ ಸುಖ ಕಾಣುವುದನ್ನು ತಮ್ಮ ಮಕ್ಕಳಿಗೂ ಕಲಿಸಿದ್ದರು. ಆದರೂ ಬಿಸಿ ರಕ್ತದ ತರುಣ ಸುನಿಲ್ ಶಾಸ್ತ್ರಿಗೆ ಐಶಾರಾಮಿ ಕಾರಿನಲ್ಲಿ ಒಮ್ಮೆಯಾದರೂ ಪ್ರಯಾಣ ಮಾಡಬೇಕೆಂದು ಉತ್ಕಟ ಬಯಕೆಯಾಗುತ್ತದೆ. ಕೂಡಲೇ ಸುನಿಲ್ ಶಾಸ್ತ್ರಿ ಅವರ ತಂದೆಯವರ ವಯಕ್ತಿಕ ಸಹಾಯಕನನ್ನು ಕಂಡು ತಮಗೆ ಐಶಾರಾಮಿ ಕಾರಿನಲ್ಲಿ ಒಮ್ಮೆಯಾದರೂ ಪ್ರಯಾಣ ಮಾಡಬೇಕು ಎನ್ನುವ ಹಂಬಲವಿರುವುದಾಗಿಯೂ , ಹಾಗು ಅದಕ್ಕಾಗಿ ತಮ್ಮ ತಂದೆಯವರಿಗೆ ಸರ್ಕಾರದಿಂದ ಕೊಡಲಾಗಿದ್ದ ಕಾರನ್ನು ಬಳಸಿಕೊಳ್ಳುವ ಬಗ್ಗೆಯೂ ತಿಳಿಸುತ್ತಾರೆ.
ಮೊದಲೇ ಪ್ರಧಾನಿಯವರ ಮಗ, ತಿರುಗಿ ಮಾತನಾಡಲಾದೀತೇ?. ಹೂಂಕರಿಸುತ್ತಾರೆ. ಕೂಡಲೇ ಕಾರಿನವನಿಗೆ ಫೋನಾಯಿಸಿ ಪ್ರಧಾನಿ ನಿವಾಸಕ್ಕೆ ಬರುವಂತೆ ಬುಲಾವ್ ಕೊಡುತ್ತಾರೆ. ಅದರಂತೆ ಇನ್ನರ್ಧ ಗಂಟೆಯಲ್ಲಿ ಕಾರು ಬರುತ್ತದೆ ಕೂಡ. ಕಾರು ಕಂಡೊಡನೆ ಕುಣಿದಾಡಿದ ಸುನಿಲ್ ಶಾಸ್ತ್ರಿ ಕಾರಿನ ಕೀ ತೆಗೆದುಕೊಂಡು ಜಾಲಿ ರೈಡ್ ಗೆಂದು ಹೊರಟೆ ಬಿಡುತ್ತಾರೆ.
ಇತ್ತ ಡ್ರೈವರ್ ನಿಗೆ ಶಾಸ್ತ್ರಿ ಜಿ ಎದುರಾಗುತ್ತಾರೆ. ಡ್ರೈವರ್ ಅನ್ನು ಕಂಡೊಡನೆ ಅವರು "ಏನಪ್ಪಾ, ನೀನು ಕಾರಿಗೆ ಒಂದು ಲಾಗ್ ಬುಕ್ ಇಟ್ಟುಕೊಂಡಿರುವೆಯಾ?" ಎಂದು ಪ್ರಶ್ನಿಸುತ್ತಾರೆ.ಡ್ರೈವರ್ ನಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಾಗ "ಹಾಗಾದರೆ ಈಗ ನನ್ನ ಮಗ ಎಷ್ಟು ದೂರ ಪ್ರಯಾಣಿಸಿದ್ದಾನೋ ಅದನ್ನು ಅಲ್ಲಿ ಬರೆದು ಅದರ ಮುಂದೆ ‘ಖಾಸಗಿ ಬಳಕೆಗೆ’ ಎಂದು ಷರಾ ಬರೆದಿಡು" ಎಂದು ಬರೆಸಿ, ತಮ್ಮ ಮಗನು ಹಿಂದಿರುಗಿದ ಒಡನೆಯೇ ಕಾರು ಕೀ ಗಳನ್ನೂ ಮರಳಿಸಿ ಆ ಪ್ರಯಾಣಕ್ಕೆ ತಗುಲಿದ್ದ ವೆಚ್ಚವನ್ನು ತಮ್ಮ ಹೆಂಡತಿ ಲಲಿತಾ ಶಾಸ್ತ್ರಿ ಯವರಿಂದಲೇ ಕೊಡಿಸುತ್ತಾರೆ.
ಪ್ರಾಮಾಣಿಕತೆ, ಸತ್ಯ ನಿಷ್ಠೆ, ಕಾರ್ಯ ನಿಷ್ಠೆ, ಪರೋಪಕಾರ ಮನೋಭಾವ ಇವುಗಳನ್ನೆಲ್ಲಾ ಮಾತಿನಲ್ಲಿ ಹೇಳಿ ಕಲಿಸುವ ಬದಲು ನಿಜವಾಗಿಯೂ ಆಚರಿಸಿ ಕಲಿಸಿದ ಮಹನೀಯರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲಬಲ್ಲ ವ್ಯಕ್ತಿ ನಮ್ಮ ಲಾಲ್ ಬಹದ್ದೂರ್ ಶಾಸ್ತ್ರೀ ಜಿ. ಈಗಿನ ರಾಜಕೀಯ ಸನ್ನಿವೇಶಗಳಲ್ಲಿ ಶಾಸ್ತ್ರಿ ಜಿ ನಮಗೆ ಮತ್ತೆ ಮತ್ತೆ ನೆನಪಾಗುವುದು ಕೂಡ ಇದೇ ಕಾರಣಕ್ಕೆ.


ಮಂಗಳವಾರ, ಸೆಪ್ಟೆಂಬರ್ 19, 2017

ಒಡಮಾಡು ಇನ್ನೊಂದಕೆ

ಭಕ್ತರ್ ಭಕ್ತಿಯೊಳ್
ಬೈದೊಳ್ ಭಕ್ತಿ
ಚೀರಿದೊಳ್ ಭಕ್ತಿ
ಶಪಿಸಿದೊಳೂ ಭಕ್ತಿ
ಭಕ್ತಿಯೇ ಅಲ್ಲೆಲ್ಲ ಏಕತ್ರ ಶಕ್ತಿ

ದುಃಖದೊರ್ ದುಃಖದೊಳ್
ನಕ್ಕಿದೊಳ್ ದುಃಖ
ಬಿಕ್ಕಿದೊಳ್ ದುಃಖ
ಅಳುವೊಳ್ ದುಃಖ
ಗೊಣಗಿ ಗೊಡವಿದೊಳೆಲ್ಲ
ದುಃಖವೇ ದುಃಖ

ದಾರಿಗಾರ ನೀ ದಾರಿಯೊಳ್ 
ನಡೆದೋದಷ್ಟೆ ದಾರಿಗಾರ
ಪರಂತು ನಿಶ್ಯೇಷ ಜೀವನ
ಅದರೊಳಗೆ ನಿನಗೆ
ಗುರುವಿರನು ಗುರಿಯಿರದು
ನಿರರ್ಥವದು ಮುರುಟದನು
ಮೊದಲಾಗಿ ಒಡಮಾಡು
ಇನ್ನೊಂದಕೆ ಅಲ್ಲೇನು
ಬಲವಿಹುದೋ ಬಲ್ಲವರ್ಯಾರು 

ಕೊನೆಯ ಬರಹ

ಉಟ್ಟ ಬಟ್ಟೆಯಲ್ಲಿ ಊರು ಬಿಟ್ಟವರ ಸಾಹಸಗಾಥೆ

ಬಹಳ ದಿನಗಳಿಂದ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ, ಸ್ವಾತಂತ್ರ್ಯಾನಂತರ ದೇಶದೊಳಗೆ ಭುಗಿಲೆದ್ದ ಕೋಮು ಹಿಂಸಾಚಾರದ ಬಗ್ಗೆ ಬರೆಯಬೇಕು ಎಂದುಕೊಳ್ಳುತ್ತಿದೆ. ಸ್ವಾತಂತ್...