ಕೆಲವು
ದಿನಗಳ ಹಿಂದೆ ವಿಕಿಪೀಡಿಯದಲ್ಲಿ 'ಮಾಗಡಿ'ಯ ಕನ್ನಡ ಪುಟವನ್ನು
ಬರೆಯುತ್ತಿದ್ದೆ. ಮಾಗಡಿಯ ಸುತ್ತ ಮುತ್ತಲಿದ್ದ ಕೋಟೆ,ಕೊತ್ತಲ,ದೇಗುಲ,ಇತಿಹಾಸ ಪ್ರಸಿದ್ಧ ಸ್ಥಳಗಳನ್ನೆಲ್ಲ ಒಳಗೂಡಿಸಿ ಮಾಗಡಿ ಪುಟವನ್ನು ಚೊಕ್ಕಗೊಳಿಸುವ ಸನ್ನಾಹದಲ್ಲಿ ಗೂಗಲ್ ನಲ್ಲಿ ಮಾಗಡಿಯ ಸುತ್ತಲ ಸ್ಥಳಗಳನ್ನು ಪರಿಚಯ ಮಾಡಿಕೊಳ್ಳುತ್ತಿದ್ದೆ. ನಾನು ಮೂಲತಃ ಅಲ್ಲಿನವನೇ ಆದ್ದರಿಂದ ಅಲ್ಲಿನ ಬಹುತೇಕ ಸ್ಥಳಗಳ ಬಗ್ಗೆ ನನಗಾಗಲೇ ತಿಳಿದಿದೆ, ಆದರೆ ಕೆಲವು ತಿಳಿದಿಲ್ಲದವುಗಳ ಬಗ್ಗೆ ಕಣ್ಣಾಡಿಸುತ್ತಿದ್ದೆ. ಆಗ ಕಣ್ಣಿಗೆ ಬಿದ್ದ
ಮತ್ತೊಂದು ಐತಿಹಾಸಿಕ ಸ್ಥಳ 'ಕಲ್ಯ'. ಹಿಂದೊಂದು ದಿನ 'ಕಲಾವತಿ ನಗರ'ವೆಂದು ಕರೆಸಿಕೊಳ್ಳುತ್ತಿದ್ದ, ಗಂಗರು ಆಳುತ್ತಿದ್ದ ಕಾಲಕ್ಕೆ ಜೈನ, ಭೌದ್ಧ, ವೈಷ್ಣವ ಹಾಗು ಶೈವ ಧರ್ಮಗಳನ್ನು ಒಳಗೊಂಡು
ಸರ್ವ ಧರ್ಮ ಸಮನ್ವಯ ಮೆರೆದಿದ್ದ ಕಲ್ಯ ಗ್ರಾಮ ಇದೀಗ ಅದ್ಯಾವುದರ ಪರಿವೆಯೂ ಇಲ್ಲದಂತೆ ಎಲ್ಲವನ್ನು ಕಾಲದ ತೆಕ್ಕೆಗೆ ಸೇರಿಸಿ ಸುಮ್ಮನಾಗಿಹೋಗಿದೆ. ಅಲ್ಲಿರುವ ಎಷ್ಟೋ ಇಂದಿನ ಪೀಳಿಗೆಯವರಿಗೆ ಅಲ್ಲೇನು ಇತಿಹಾಸವಿದೆ ಎಂಬ ಅರಿವಿಲ್ಲ. ಇನ್ನುಳಿದ ಕೆಲವು ಹಳೆ ತಲೆಗಳಿಗೆ ಅಲ್ಲಿನ ಇತಿಹಾಸದ ಕೊಂಚ ಮಾಹಿತಿಯಿದ್ದರೂ ಅದು ತಮ್ಮ ಹಿರೀಕರಿಂದ ಬಾಯಿಂದ ಬಾಯಿಗೆ ಹರಿದು ಬಂದ ಜಾನಪದ ಇತಿಹಾಸದಂತಿರುವುದರಿಂದ ಸತ್ಯವೇನು ಎಂದು ಕರಾರುವಕ್ಕಾಗಿ ಹೇಳಲು ಸಾಧ್ಯವಿಲ್ಲದಂತಾಗಿದೆ. ಹೀಗಿರುವ
ಕಲ್ಯ ಗ್ರಾಮವನ್ನು ಶಾಸನಗಳಲ್ಲಿ ಕಾವ್ಯಗಳಲ್ಲಿ ಕಲ್ಯ, ಕಲ್ಲೆಹ, ಕಲಾವತಿ ನಗರ, ಕಲಾವತಿ ಪಟ್ಟಣವೆಂದು ನಾನಾ ಹೆಸರುಗಳಿಂದ ಕರೆಯಲಾಗಿದೆ.
ಇತಿಹಾಸ:
ಕರ್ನಾಟಕ
ದಕ್ಷಿಣ ಭಾಗದಲ್ಲಿ ಆಡಳಿತ ನಡೆಸುತ್ತಿದ್ದ ಗಂಗರು ಜೈನ ಧರ್ಮಕ್ಕೆ ಹೆಚ್ಚು ಒತ್ತು ಕೊಟ್ಟಿದ್ದರು. ಗಂಗರ ಕಾಲದಲ್ಲಿ ಅವರ ಆಳ್ವಿಕೆಗಳ ಪ್ರದೇಶಗಳಲ್ಲಿ ಅನೇಕ ಜೈನ ಮಂದಿರಗಳು, ಬಸದಿಗಳು
ರೂಪುಗೊಂಡವು. ಇದಾಗಿ ಕಾಲಾನಂತರದಲ್ಲಿ ಗಂಗರ ಆಡಳಿತ ಕೊನೆಯಾಗಿ ಹಿಂದೂ ಸಾಮ್ರಾಜ್ಯ ಪುನಶ್ಚೇತನಕ್ಕಾಗಿಯೇ ಎನ್ನುವಂತೆ ವಿಜಯನಗರ ಸಾಮ್ರಾಜ್ಯ ರೂಪುಗೊಂಡಿತ್ತು. ಶೃಂಗೇರಿ ಜಗದ್ಗುರುಗಳಾದ
ವಿದ್ಯಾರಣ್ಯರ ಆಜ್ಞೆಯ ಮೇರೆಗೆ ವಿಜಯನಗರ ಸಾಮ್ರಾಜ್ಯ ತಲೆಯೆತ್ತಿ ನಿಂತಿತ್ತು. ಸರ್ವ ಧರ್ಮಗಳನ್ನು ಸಮಾನ ದೃಷ್ಟಿಯಲ್ಲಿ ಕಾಣುತ್ತಿದ್ದ ವಿಜಯನಗರದ ಅರಸು ಬುಕ್ಕರಾಯರಿಗೆ ಮುಂದೆ ತಲೆನೋವಾಗಿ ಪರಿಣಮಿಸಿದ್ದು
ಆಗಾಗ್ಗೆ ಭುಗಿಲೇಳುತ್ತಿದ್ದ ಜೈನ-ವೈಷ್ಣವ ಕಲಹಗಳು.
ಮುಸ್ಲಿಂ ದೊರೆಗಳು ನಿಧಾನಕ್ಕೆ ಭಾರತದ ಒಂದೊಂದೇ
ಸಾಮ್ರಾಜ್ಯವನ್ನು ನುಂಗಿ ನೊಣವಿಕೊಂಡು ಸಾರ್ವಭೌಮರಾಗುತ್ತಿದ್ದ ಕಾಲವದು, ಇಂತಹ ಪರಿಸ್ಥಿತಿಯಲ್ಲಿ
ವಿಜಯನಗರದಲ್ಲಿ ಮತೀಯ ಆಂತರಿಕ ಕಲಹಗಳು ನಡೆದು ಆಂತರಿಕ ಭದ್ರತೆಗೆ ಧಕ್ಕೆಯಾದರೆ ವಿಜಯನಗರದ ವೈರಿಗಳಿಗೆ
ಇನ್ನೂ ಸುಲಭವಾಗುವುದೆನ್ನುವ ವಿಚಾರ ಮಕ್ಕಳಿಗೂ ತಿಳಿಯುವಂತಹುದು. ಕೂಡಲೇ ಎಚ್ಚೆತ್ತ ಬುಕ್ಕರಾಯರು ಕನ್ನಡ ದಕ್ಷಿಣ
ಪ್ರಾಂತದ ವೈಷ್ಣವ-ಜೈನ ನಾಯಕರನ್ನು ಕರೆಯಿಸಿ ಒಬ್ಬರ ಕೈ ಒಬ್ಬರು ಹಿಡಿದುಕೊಳ್ಳುವಂತೆ ಮಾಡಿ ಸಂಧಾನ
ಏರ್ಪಡಿಸಿದ್ದರು. ವಿಜಯನಗರ
ಇತಿಹಾಸದಲ್ಲಿ ಉಂಟಾದ ಈ ಮಹಾ ಸಂಧಾನ
ದಾಖಲಾಗಿರುವುದು ಎರಡೇ ಶಾಸನಗಳಲ್ಲಿ ಮೊದಲನೆಯದು ಮಾಗಡಿ ತಾಲೂಕಿನ ಕಲ್ಯ ಗ್ರಾಮದ ಶಾಸನದಲ್ಲಿ, ಎರಡನೆಯದು ಜಗತ್ಪ್ರಸಿದ್ಧ ಶ್ರವಣಬೆಳಗೊಳದ ಶಾಸನದಲ್ಲಿ. ಭಾರತದ ದೇಶದ ಧೀಮಂತ ಹಿಂದೂ ಸಾಮ್ರಾಜ್ಯ ವಿಜಯನಗರದಲ್ಲಿ ಸರ್ವಧರ್ಮ ಸಮನ್ವಯತೆಗೆ ಕೈಗೊಂಡ ಮಹತ್ಕಾರ್ಯಗಳಲ್ಲಿ ಇದೂ ಒಂದಾಗಿರುವುದರಿಂದ ವಿಜಯನಗರದ ಅಧ್ಯಯನಕಾರರಿಗೆ ಈ ಶಾಸನಗಳ ಅಧ್ಯಯನವೂ
ಬಹು ಮುಖ್ಯವಾಗುತ್ತದೆ.
ಜೈನ-
ವೈಷ್ಣವ ಮತೀಯ ಕಲಹ ಸಂಬಂಧಿ ಶಾಸನವನ್ನು ಕ್ರಿ.ಶ 1290 ರ ಶ್ರಾವಣದ ಎರಡನೇ
ಸೋಮವಾರ ಕಲ್ಯ ಗ್ರಾಮದಲ್ಲಿ ಹಾಕಿಸಲಾಗಿದೆ. ಅದಾಗಿ ಐದು ವಾರಗಳ ನಂತರ ಕಲ್ಯ ಶಾಸನದ ಸುಲಭ ರೂಪದ ಶಾಸನವೊಂದನ್ನು ಶ್ರವಣಬೆಳಗೋಳದಲ್ಲಿ ಹಾಕಿಸಲಾಗಿದೆ.
ಶಾಸನಗಳು ಒಳಗೊಂಡ ವಿಚಾರವಿಷ್ಟೇ, ವೈಷ್ಣವರು ಅಧಿಕವಾಗಿ ಪ್ರಾಬಲ್ಯ ಮೆರೆದಿದ್ದ ಕಾಲದಲ್ಲಿ ಅವರ ಉಪಟಳಕ್ಕೆ ಈಡಾದ ಜೈನರು ವಿಜಯನಗರದ ಅರಸು ಬುಕ್ಕರಾಯರ ಬಳಿ ಹೋಗಿ ವೈಷ್ಣವರಿಂದ ತಮಗಾಗುತ್ತಿದ್ದ ಅನ್ಯಾಯವನ್ನು ವಿವರಿಸುತ್ತಾರೆ. ಶ್ರವಣಬೆಳಗೊಳದ ಶಾಸನ ಬರಿ ವೈಷ್ಣವರಿಂದ ಜೈನರಿಗೆ ಅನ್ಯಾಯವಾಯಿತೆಂದು ಬಣ್ಣಿಸಿದ್ದರೆ, ಕಲ್ಯ ಶಾಸನವು ಮುಂದುವರೆದು ವೈಷ್ಣವರು ಜೈನರನ್ನು ನಿಷ್ಕಾರುಣವಾಗಿ ಕೊಂದರು ಎಂದೇ ನೇರವಾಗಿ ಹೇಳಿದೆ. ಶಾಸನವನ್ನು ಕಲ್ಯದಲ್ಲಿ ಹಾಕಿಸಲು ಕಾರಣವೂ ಇಲ್ಲದಿಲ್ಲ. ಬುಕ್ಕರಾಯನಲ್ಲಿಗೆ ದೂರು ಕೊಡಲು ಹೋದ ಜೈನ ಪ್ರಮುಖ ಮುಖಂಡರಲ್ಲಿ ಬೆಳಗೊಳ, ಆನೆಗೊಂದಿ, ಕಲ್ಯ , ಪೆನುಕೊಂಡ, ಹೊಸ ಪಟ್ಟಣ ಮುಂತಾದ ಊರುಗಳ ಜೈನ ಮುಖಂಡರಿದ್ದರು.ಆ ಜೈನ ನಿಯೋಗಕ್ಕೆಲ್ಲ
ಕಲ್ಯದ 'ಬುಸುವಿ ಸೆಟ್ಟಿ' ಎಂಬಾತನೇ ನಾಯಕನಾಗಿದ್ದನು. ಈ ಕಾರಣದಿಂದಲೇ ತನ್ನ
ಊರಿನಲ್ಲಿ ಶಾಸನ ಹಾಕಿಸಿದ್ದಾನೆ ಎಂಬ ಅನಿಸಿಕೆ ಇದೆ.
ಜೈನರ
ಅಹವಾಲನ್ನೆಲ್ಲ ಕೇಳಿಸಿಕೊಂಡ ಬುಕ್ಕರಾಯನು ಹದಿನೆಂಟು ವೈಷ್ಣವ ಮಠಾಧಿಪತಿಗಳನ್ನು ವಿಜಯನಗರಕ್ಕೆ ಕರೆಯಿಸಿ ಅವರಿಂದಲೂ ಕೆಲ ವಿಚಾರಗಳನ್ನು ಗ್ರಹಿಸಿ ಕೊನೆಗೆ ತೀರ್ಪು ಕೊಡುತ್ತಾನೆ. ಮೂಲತಃ ಜೈನ ಹಾಗು ವೈಷ್ಣವ ಧರ್ಮದ ಬುನಾದಿಗಳು ಒಂದೇ ಆಗಿದ್ದು ಇನ್ನು ಮುಂದೆ ಕಲಹ ಕೂಡದು ಎಂದು ಕಟ್ಟಾಜ್ಞೆ ಹೊರಡಿಸುತ್ತಾನೆ. ಹಾಗು ಇನ್ನು ಮುಂದೆ ಜೈನರ ಬಸದಿಗಳ ರಕ್ಷಣೆಯ ಹೊಣೆಯನ್ನು ವೈಷ್ಣವರಿಗೆ ವಹಿಸುತ್ತಾನೆ. ಜೈನ ಬಸದಿಗಳಲ್ಲಿ ಪೂರ್ವಕಾಲದಿಂದಲೂ ಚಾಲ್ತಿಯಲ್ಲಿದ್ದ ಪಂಚ ಮಹಾವಾದ್ಯಗಳಿಗೂ ಹಾಗು ಕಲಶಗಳ ಗೌರವಕ್ಕೆ ಅಡ್ಡಿಪಡಿಸಬಾರದೆಂದು ಆಜ್ಞಾಪಿಸುತ್ತಾನೆ. ಆಜ್ಞೆಗೆ ಕಟ್ಟು ಬಿದ್ದ ಉಭಯ ಬಣದವರೂ ಬುಕ್ಕರಾಯನ ಷರತ್ತುಗಳಿಗೆ ತಲೆಯಾಡಿಸಿ ಹಿಂದಿರುಗುತ್ತಾರೆ. ಅದೇ ಸಂಬಂಧ ವೈಷ್ಣವರು ಜೈನರಲ್ಲಿ 'ವರ್ಷಕ್ಕಿಷ್ಟು' ಎಂಬ ಮಾದರಿಯಲ್ಲಿ ಹಣ ಸಂಗ್ರಹ ಮಾಡಿ
ಅದರಿಂದ ಜೈನ ಬಸದಿಗಳಿಗೆ ಕಾವಲುಗಾರರನ್ನು ನೇಮಿಸುತ್ತಾರೆ. ರಕ್ಷಣೆಗೆ ನೇಮಕಾವಾದವರು ವೈಷ್ಣವರ ಕಡೆಯವರೇ
ಆದರೆ ಹಣ ಕೊಡುವುದು ಮಾತ್ರ
ಜೈನರು ಎಂಬಂತಾಯಿತು. ವಿಧಿಯಿಲ್ಲದೆ ಎಲ್ಲ ಜೈನರು ಇದನ್ನು ಒಪ್ಪಿಕೊಳ್ಳಲೇ ಬೇಕಾಯಿತು.ಮುಂದೆ ಕಲ್ಯದ ಬುಸುವಿ ಸೆಟ್ಟಿ ವಹಿಸಿದ್ದ ಪಾತ್ರದ ಕುರಿತು ಸಂತೋಷ ಭರಿತರಾದ ಉಭಯ ಮತದ ನಾಯಕರು ಬುಸುವಿ ಸೆಟ್ಟಿಗೆ 'ಸಂಘ ನಾಯಕ' ಎಂಬ ಬಿರುದು ಪ್ರಧಾನ ಮಾಡಿದರು ಎಂದು ಉಲ್ಲೇಖವಾಗಿದೆ.
ಕಲ್ಯದಲ್ಲಿ
ಸದ್ಯ ಲಭ್ಯವಿರುವ ಶಾಸನದಲ್ಲಿ ತೆಂಗಿನ ಕಾಯಿ ಮಾವಿನ ಎಲೆಗಳಿಂದ ಅಲಂಕೃತವಾದ ಕಲಶವನ್ನು ಮಾತ್ರ ಕೆತ್ತಲಾಗಿದ್ದು, ಇದೇ ಶಾಸನದ ಶ್ರವಣಬೆಳಗೊಳದ ಆವೃತ್ತಿಯಲ್ಲಿ ಶಾಸನದಲ್ಲಿ
ಕಳಶದೊಂದಿಗೆ ವೈಷ್ಣವರ ಶಂಖ ಚಕ್ರ ತಿರುನಾಮಗಳನ್ನು ಕಾಣಬಹುದಾಗಿದೆ. ಜೈನ-ವೈಷ್ಣವ ಕಲಹಗಳು ತಣ್ಣಗಾಗಲು ಬುಕ್ಕರಾಯ ನಾಂದಿ ಹಾಡಿದ್ದರೂ ಅದು ಹೆಚ್ಚು ಕಾಲ ಬಾಳಲಿಲ್ಲ. ಮತೀಯ ಕಲಹ ಮೇರೇ ಮೀರಿದಾಗ ಜೈನ ಬಸದಿಗಳ ಮೇಲೂ, ವೈಷ್ಣವರ ಮಂದಿರಗಳ ಮೇಲೂ ದಾಳಿಗಳಾದವೂ. ಹಲವಾರು ದೇವಾಲಯಗಳು, ಬಸದಿಗಳು ಭಗ್ನವಾದವು. ಅದಕ್ಕೆ ಸಾಕ್ಷಿಯಾಗಿ ಭಗ್ನಾವಶೇಷಗಳು ಇಂದಿಗೂ ಶ್ರವಣಬೆಳಗೊಳ ಹಾಗು ಕಲ್ಯ ದಲ್ಲಿ ಕಾಣ ಸಿಗುತ್ತವೆ.
ಕಲ್ಯದಲ್ಲಿ
ಹದಿಮೂರನೇ ಶತಮಾನದ ಶಾಸನವಿರುವ ಪಾರ್ಶ್ವನಾಥ ವಿಗ್ರಹವಿದೆ. ಕಲ್ಯದ ನಿಸಿದಿ ಕಲ್ಲು, ಜೈನ ವಿಗ್ರಹ, ಬಸದಿ ಗುಂಡಿ ಎಂದು ಕರೆಯುವ ಜಾಗ, ಮುಕ್ಕೊಡೆ ಶಿಲ್ಪಗಳು, ಮಾನಗಂಬ ಇವೆ ಮೊದಲಾದ ಕುರುಹುಗಳು ಕಲ್ಯ ಹಿಂದೊಮ್ಮೆ ಬಹು ದೊಡ್ಡ ಜೈನ ಕೇಂದ್ರವಾಗಿತ್ತು ಎಂಬುದನ್ನು ಎತ್ತಿ ತೋರಿಸುತ್ತಿವೆ. ಕಲ್ಯದ
ಬಸದಿಗುಂಡಿ ಎಂಬ ಜಾಗ ಇದೀಗ ಬರೀ ತಿಪ್ಪೆಗಳಿಂದ ಕೂಡಿದ ಜಾಗವಾಗಿದ್ದು ಹಿಂದೊಮ್ಮೆ ಅಲ್ಲಿ ಐದು ಜೈನರ ಬಸದಿಗಳಿದ್ದವು ಎಂದು ತಿಳಿದು ಬಂದಿದೆ. ಕಲ್ಯದ ಸಮೀಪವಿರುವ ಹೂಜಿಗಲ್ಲು ಎಂಬ ಸ್ಥಳದಲ್ಲಿ ಹದಿನೈದಕ್ಕೂ ಹೆಚ್ಚು ಜೈನ ಶಿಲ್ಪಗಳಿರುವ ಬಂಡೆಯೊಂದಿದೆ. ಈ ಎಲ್ಲ ಪುರಾವೆಗಳೂ
ಕಲ್ಯದಲ್ಲಿ ಜೈನ ಮಂದಿರಗಳ ಭಾರಿ ವಿನಾಶ ನಡೆದಿದೆ ಎಂಬುದನ್ನು ಪುಷ್ಟೀಕರಿಸುತ್ತವೆ. ತತ್ಸಮಯದಲ್ಲಿಯೇ
ಜೈನರಿಂದ ವೈಷ್ಣವರ ದೇವಾಲಯಗಳ ಮೇಲೂ ಪ್ರತೀಕಾರಾರ್ಥವಾಗಿ ದಾಳಿಗಳು ನಡೆದಿವೆ ಎಂದು ಅಂದಾಜಿಸಲಾಗಿದ್ದು ಮಾಗಡಿಯ ರಂಗನಾಥ ಸ್ವಾಮಿ ಕಲ್ಯದಲ್ಲಿತ್ತೆಂದು ಹೇಳಲಾಗುತ್ತಿದೆ. ಆದ ಕಾರಣದಿಂದಲೇ ಇಂದಿಗೂ
ಆ ದೇವರ ಜಾತ್ರೆಯಂದು ನಡೆಯುವ ರಥೋತ್ಸವದಲ್ಲಿ ಕಲ್ಯ ಗ್ರಾಮಕ್ಕೆ ಮೊದಲ ಪ್ರಸಾದ ರವಾನೆಯಾಗುತ್ತದೆ.
ಕಲ್ಯದ ಬೆಟ್ಟದ ಬಳಿ ಈಗ ಒಂದು ಗರುಡಗಂಬ
ಮಾತ್ರ ಕಾಣಸಿಗುತ್ತದೆ. ಹಿಂದೆ ಅದು ವರದರಾಜ ಸ್ವಾಮಿ ದೇವಸ್ಥಾನವಾಗಿದ್ದು ವೈಷ್ಣವರ ಆರಾಧನಾ ಕೇಂದ್ರವಾಗಿತ್ತು. ಇದು ಮತೀಯ ಕಲಹದ ವೈಷ್ಣವರ ವಿನಾಶವಾದರೆ, ಈಗಲೂ ಕಲ್ಯ ಗ್ರಾಮದಲ್ಲಿ 'ಉಷ್ಟಮರು' ಎಂಬ ವೈಷ್ಣವ ಮತದ ಶೂದ್ರ ಅನುಯಾಯಾಯಿಗಳು ವಾಸಿಸುತ್ತಿದ್ದಾರೆ. ಆದರೆ ಸದ್ಯ ಜೈನರು ಯಾರು ಅಲ್ಲಿ ವಾಸವಿಲ್ಲ. ಮತೀಯ ಕಲಹವಾಗಿ ಜೈನರು ಕಲ್ಯದಿಂದ ಕಾಲ್ಕಿತ್ತು ಸಮೀಪದ ಸಂಕಿಘಟ್ಟಕ್ಕೆ ಹೋಗಿ ನೆಲೆಸಿರಬಹುದೆಂದು ನಂಬಲಾಗಿದೆ. ಸಂಕಿಘಟ್ಟದಲ್ಲಿ ಈಗಲೂ ಜೈನರಿದ್ದಾರೆ. ಜೈನ-ವೈಷ್ಣವರ ಕಣ್ಗಾವಲಿಗೆಂದೇ ಬುಕ್ಕರಾಯ ಅಧಿಕಾರಿಯೊಬ್ಬನನ್ನು ಕಲ್ಯದಲ್ಲಿ ನೇಮಿಸಿದ್ದನೆಂದು 1386 ರ ಶಾಸನವೊಂದು ತಿಳಿಸುತ್ತದೆ.
ಹದಿಮೂರನೇ
ಶತಮಾನದ ಆಸುಪಾಸಿಗೆ ಕಲ್ಯದಲ್ಲಿ ಜೈನ-ವೈಷ್ಣವ ಕಲಹ ಭುಗಿಲೆದ್ದು ಆ ಗ್ರಾಮ ಸರ್ವನಾಶವಾಗುತಿರಲು
ಅತ್ತ ಕಲ್ಯಾಣದಲ್ಲಿ ಬಸವೇಶ್ವರರ ನಿರ್ಗಮನವಾಗಿತ್ತು. ವೀರಶೈವ ಪಂಥದವರನ್ನು ನಾನಾ ಹಿಂಸೆಗೆ ಗುರಿ ಮಾಡುತ್ತಿದ್ದ ಆ ಕ್ರಾಂತಿ ಸಮಯದಲ್ಲಿ
ಕಲ್ಯಾಣದ ಶರಣರೆಲ್ಲ ಅಲ್ಲಿಂದ ಹೊರಟು ಕನ್ನಡ ಭಾಷಾ ಪ್ರಾಂತ್ಯಗಳಲ್ಲಿ ವಿವಿಧ ಭಾಗಗಳಲ್ಲಿ ಚದುರಿಹೋದರು. ಅದೇ ಸಮಯದಲ್ಲಿ ಕಲ್ಯದ ಬೆಟ್ಟದಲ್ಲಿ 'ಸರ್ವಶೀಲೆ ಚೆನ್ನಮ್ಮ' ಎಂಬ ವೀರಶೈವ ಧರ್ಮದ ಸಾಧ್ವಿ ಶರಣೆ ಬದುಕಿದ್ದಳು ಎನ್ನುವುದು ಪಾಲ್ಕುರಿಕೆ ಸೋಮೇಶ್ವರ ಪುರಾಣದಿಂದ ತಿಳಿದು ಬರುತ್ತದೆ. ಈಗಲೂ ಕಲ್ಯದ ಬೆಟ್ಟದಲ್ಲಿ ಚೆನ್ನಮ್ಮನ ಗದ್ದುಗೆ ಎಂದು ಕರೆಸಿಕೊಳ್ಳುವ ಚೆನ್ನಮ್ಮನ ಸಮಾಧಿ ಇದೆ. ಕಲ್ಯದ ಬೆಟ್ಟ ವೀರಶೈವ ಧರ್ಮದ ಶರಣರಿಗೆ ಆಶ್ರಯ ನೀಡಿತ್ತು ಎಂಬುದು ಇಲ್ಲಿನ ಶರಣ ಸಂಕುಲದ ಬಗ್ಗೆ ಗಮನ ಹರಿಸಿದಾಗ ತಿಳಿಯುತ್ತದೆ. ಇದೀಗ ಕಲ್ಯ ಬೆಟ್ಟದಲ್ಲಿ ವೀರಶೈವ ಧರ್ಮದವರು ಯಾರು ಇಲ್ಲದಿದ್ದರೂ ಸಮೀಪದಲ್ಲಿರುವ ಕಲ್ಯ ಗ್ರಾಮ, ಉಪ್ಪಾರ್ತಿ ಹಾಗು ಹೂಜಿಗಲ್ಲುಗಳಲ್ಲಿ ವೀರಶೈವರು ನೆಲೆಸಿದ್ದಾರೆ.
ಕಲ್ಯದಲ್ಲಿ
ಆಗಿ ಹೋದ ಶರಣ ಪ್ರಮುಖರಲ್ಲಿ ಅತೀ ಮುಖ್ಯವಾದವರೆಂದರೆ ಪಾಲ್ಕುರಿಕೆ ಸೋಮನಾಥರು. ಹನ್ನೆರಡನೇ ಶತಮಾನಕ್ಕೆ ಸೇರಿದ ಪಾಲ್ಕುರಿಕೆ
ಸೋಮನಾಥರ ಮಾತೃ ಭಾಷೆ ತೆಲುಗು. ಕಲ್ಯಾಣದಲ್ಲಿ ನಡೆಯುತ್ತಿದ್ದ ಶರಣ ಕ್ರಾಂತಿಗೆ ಮನಸೋತು ಬಸವ ತತ್ವ ಪಾಲನೆಯಲ್ಲಿ ತೊಡಗಿಕೊಂಡ ಸೋಮನಾಥರು ಬಸವಣ್ಣನವರ ಕನ್ನಡದ್ಲಲಿದ್ದ ವಚನಗಳನ್ನು ತೆಲುಗು ಭಾಷೆಗೆ ಅನುವಾದಿಸಿ ಆಂಧ್ರ ಸೀಮೆಯಲ್ಲೂ ಬಸವ ತತ್ವ ಪಸರಿಸಲು ನೆರವಾಗಿದ್ದರು. ಪಾಲ್ಕುರಿಕೆ ಸೋಮನಾಥರು ಬಸವಣ್ಣನವರ ಸಮಕಾಲೀನರೇ ಎಂದು ಅಂದಾಜಿಸಲಾಗಿದೆ. ಈಗಿನ ತೆಲಂಗಾಣದ ವಾರಂಗಲ್ ಬಳಿಯ ಪಾಲ್ಕುರಿಕೆ ಎಂಬ ಊರಿನಲ್ಲಿ ಜನಿಸಿದ ಪಾಲ್ಕುರಿಕೆ ಸೋಮನಾಥ ಬಸವ ತತ್ವ ಪ್ರಚಾರ ಮಾಡುತ್ತಾ ಕಲ್ಯಕ್ಕೆ ಬಂದಿದ್ದಿರಬಹುದೆಂದು ಹಾಗು ಕಲ್ಯಾಣದಲ್ಲಿ ಶರಣರಿಗೆ ಒಲಿದ ಆಪತ್ತನ್ನು ಕಂಡು ಕಲ್ಯದಲ್ಲಿಯೇ ನೆಲೆ ನಿಂತರೆಂದು ನಂಬಲಾಗಿದೆ.
ಕನ್ನಡದ ಬಸವ ಪುರಾಣವನ್ನು ತೆಲುಗಿಗೆ ಅನುವಾದಿಸಿರುವ ಪಾಲ್ಕುರಿಕೆ ಸೋಮನಾಥರು ಕನ್ನಡ ಹಾಗು ತೆಲುಗು ಭಾಷೆಗಳಲ್ಲಿ ತಾವೂ ವಚನಗಳನ್ನು ರಚಿಸಿದ್ದಾರೆ. ಇವರು ಸಂಸ್ಕೃತ ಭಾಷೆಯ ಮೇಲೂ ಉತ್ತಮ ಹಿಡಿತ ಹೊಂದಿದ್ದರೆಂದು ಹಾಗು ಆ ಭಾಷೆಯಲ್ಲಿಯೂ ಬಸವ
ತತ್ವಕ್ಕೆ ಸಂಬಂಧಿಸಿದ ಹಲವು ಗ್ರಂಥಗಳನ್ನು ಬರೆದಿದ್ದಾರೆಂದು ತಿಳಿದುಬಂದಿದೆ. ಕಲ್ಯದ
ಬೆಟ್ಟದಲ್ಲಿ ಈಗ ವೀರಶೈವ ಮಠವೊಂದಿದ್ದು ಅದರ ಹೊರಗೆ ನಾಲ್ಕು ಗದ್ದುಗೆಗಳಿವೆ, ಅದರ ಪೈಕಿ ಒಂದು ಗದ್ದುಗೆಯ
ಮೇಲೆ ಬಸವನ ವಿಗ್ರಹವಿರಿಸಲಾಗಿದೆ. ಇದನ್ನೇ ಪಾಲ್ಕುರಿಕೆ ಸೋಮನಾಥರ ಸಮಾಧಿಯೆಂದು ನಂಬಲಾಗಿದೆ. ಚೆನ್ನ
ಬಸವ ಪುರಾಣದ ಪ್ರಕಾರವೂ ಪಾಲ್ಕುರಿಕೆ ಸೋಮನಾಥರು ಸತ್ತಿದ್ದು ಇದೆ ಕಲ್ಯದಲ್ಲಿ ಎನ್ನುವುದು ಸೋಮನಾಥರ
ಸಮಾಧಿ ಎಂದು ನಂಬಲಾದ ಸ್ಥಳಕ್ಕೆ ಮತ್ತಷ್ಟು ಬಲ ಕೊಡುತ್ತದೆ. ಈಗಲೂ ವೀರಶೈವರು ಇಲ್ಲಿ ವರ್ಷಕ್ಕೊಮ್ಮೆ ಸೋಮನಾಥ
ಆರಾಧನೆಯನ್ನು ಆಚರಿಸುತ್ತಾರೆ.
ಕಲ್ಯದಲ್ಲಿ
ಕಲ್ಲೇಶ್ವರ ಗುಡಿಯೊಂದಿದ್ದು ಆ ಊರಿಗೆ ಕಲ್ಲೆಹ/ಕಲ್ಯ ಎಂಬ ಹೆಸರು ಬರಲು ಈ ದೇವೆರೆ ಕಾರಣವಿರಬಹುದೆಂದು
ಇತಿಹಾಸ ತಜ್ಞರು ಊಹಿಸಿದ್ದಾರೆ. ಕಲ್ಲೇಶ್ವರ ಗುಡಿಯ ಒಂದು ಕಂಬದ ಮೇಲೆ 'ಕುಂಬಳಕಾಯಜ್ಜಿಯದು' ಎಂದು ಕೆತ್ತಿರುವ ಸ್ತ್ರೀ ರುಂಡದ ಶಿಲ್ಪವೊಂದು ಕಾಣಸಿಗುತ್ತದೆ. ಕಲಾವತಿ ಎಂಬ ಒಬ್ಬಳು ಆ ಊರಿಗೆ ಕುಂಬಳಕಾಯಿ
ಮಾರಲು ಬಂದಾಗ ಕುಂಬಳಕಾಯಿ ಕೊಳ್ಳುವ ವಿಚಾರದಲ್ಲಿ ಆ ಊರಿನ ಜೈನರಿಗೂ-ವೈಷ್ಣವರಿಗೂ ಜಗಳವಾಗಿ ಕೊನೆಗೆ ಆ ಊರು ಹಾಳಾಯಿತೆಂದು
ಒಂದು ಪ್ರತೀತಿ(ಕುಂಬಳಕಾಯಿ ಮಾರಲು ಬಂದ ಹೆಂಗಸು ವೈಷ್ಣವ ಮತದ ಅನುಯಾಯಿಯಾಗಿದ್ದವಳು ಎಂಬ ಕಾರಣಕ್ಕೆ ಜೈನರು ಯಾರೂ ಕುಂಬಳ ಕಾಯಿ ಕೊಳ್ಳಲಿಲ್ಲವಂತೆ, ಆಕೆ ಬೆಳಿಗ್ಗೆಯಿಂದ ಸಂಜೆವರೆಗೂ ಜೈನ ಬೀದಿಗಳಲ್ಲಿ ಅಲೆದರೂ ಕುಂಬಳಕಾಯಿ ಬಿಕರಿಯಾಗದಿದ್ದಾಗ ಬೇಸತ್ತು ಜೈನ ಬೀದಿಯ ಮುಂದೆ ಕುಂಬಳಕಾಯಿಗಳನ್ನೆಲ್ಲ ಎತ್ತಿಹಾಕಿ ಜೈನರನ್ನು ಶಪಿಸಿದಳು ಎನ್ನುವುದು ಒಂದು ಜಾನಪದ ಕಥೆ).
ಇವಿಷ್ಟೇ
ಅಲ್ಲದೆ ಕಲ್ಯದ ಸುತ್ತ ಮುತ್ತಲ ಊರುಗಳಲ್ಲಿ ಅನೇಕ ವೀರಗಲ್ಲುಗಳು, ಶಾಸನಗಳು ಪತ್ತೆಯಾಗಿವೆ. ಆದರೆ ಅವುಗಳ ಬಗ್ಗೆ ಸ್ಥಳೀಯರಿಗೆ ಅಷ್ಟಾಗಿ ಮಾಹಿತಿಯಿರುವುದಿಲ್ಲ. ಈ ಶಾಸನಗಳು ಹೊರಜಗತ್ತಿಗೂ
ತಿಳಿಯದೆ ಕಾಲ ಗರ್ಭದಲ್ಲಿ ಹುದುಗಿ ಹೋಗುತ್ತಿವೆ. ಅವುಗಳ ಅಧ್ಯಯನದಿಂದ ವಿಜಯನಗರ ಸಾಮ್ರಾಜ್ಯದಂತಹ ಎಷ್ಟೋ ವಿಚಾರಗಳ ಮೇಲೆ ಬೆಳಕು ಚೆಲ್ಲುವ ಅವಕಾಶವಾಗಲಿದೆ.
ಕಲ್ಯ ಶಾಸನದಲ್ಲಿರುವ ಕನ್ನಡ ಲಿಪಿಯ ಪಾಠ
ಸ್ವಸ್ತಿ ಸಮಸ್ತ ಪ್ರಶಸ್ತಿ ಸಹಿತಂ ಪಾಷಂಡ ಸಾಗರ ಮಹಾವಡಬಾ ಮು ಖಾಗ್ನಿ ಶ್ರೀ ರಂಗರಾಜ ಚರಣಾಂಬ ಜ ಮೂ ಲದಾಸಃ ಶ್ರೀ ವಿಷ್ಣು ಲೋಕ ಮಣಿ ಮಂಡಪ ಮಾರ್ಗದಾಯಿ ರಾಮಾನು ಜೋ ವಿಜಯತೇ ಯತಿರಾಜರಾಜ
ಶಕವರುಷ ೧೨೯೦ ನೆಯ ಕೀಲಕ ಸಂವತ್ಸರದ ಭಾದ್ರಪದ ಶು ೧೦ ಬೃಹಸ್ಪತಿವಾರ ಸ್ವಸ್ತಿ ಶ್ರೀಮನ್ಮಹಾಮಂಡಳೇಸ್ವರಂ ಅರಿರಾಯ ವಿಭಾಡ ಭಾಷೆಗೆ ತಪ್ಪುವ ರಾಯರ ಗಂಡ ಶ್ರೀ ವೀರಬು
ಕ್ಕರಾಯಂ ಪೃಥ್ವೀರಾಜ್ಯಮಂ ಮಾಡು ತ್ತಾ ಇರು ವಲ್ಲಿ ಜೈನರಿಗೂ ಭಕ್ತರಿಗೂ ಸಂವಾದಮಾದಲ್ಲಿ ಆನೆಗೊಂದಿ ಹೊಸಪಟ್ಟಣ ಪೆನುಗೊಂಡೆ ಕಲ್ಲೇಹದ ಪಟ್ಟಣದೊಳಗಾದ ಸಮಸ್ತ ಭವ್ಯಜನಂಗಳ್ ಬು ಕ್ಕರಾಯಂಗೆ ಭಕ್ತರ್ ಮಾಡುವ ಅನ್ಯಾಯಂಗಳನ್ನು ಬಿನ್ನಹಂ ಮಾಡಲಾಗಿ ಕೋವಿಲ್ ತಿರು ಮಲೆ ಪೆರು ಗೋಯಿಲ್ ತಿರುನಾರಾಯಣಪುರಂ ಮುಖ್ಯವಾದ ಸಕಳಾಚಾರ್ಯರು ಸಕಳ ಸಮಯಿಗಳ್ ಸಕಳ ಸಾತ್ವಿಕರ್ ವೇಷ್ಟಿಕರ್ ತಿರು ಮಣಿ ತಿರು ವಡಿ ತಣ್ಣಿರು ನಾಲ್ವತ್ತೆಂಟು ತಾತಯ್ಯಗಳು ಸಾವಂತ ಬೋವಕ್ಕಳು ತಿರು ಕು ಲ ಜಾಂಬವ ಕು ಲ ದೊಳಾದ ದಿನ್ನೆರಡರೊಳಾದ ಒಳೆಗಾದ ಹದಿನೆಂಟು ನಾಡ ರಾಯನು ಶ್ರೀ ವೈಷ್ಣವರ ಕೈಯೊಳು ಜೈನರ ಕೈವಿಡಿದು ಕೊಟ್ಟು ಈ ಜೈನ ದರ್ಶನಕ್ಕೆ ಪೂ ರ್ವಮರ್ಯಾದೆಯಿಟ್ಟು ಪಂಚಮಹಾವಾದ್ಯಂಗಳುಂ ಕಳಸ ಕನ್ನಡಿ ಶ್ವೇತ ಚ್ಛತ್ರ ಚಾಮರೆಂಗಳ್ ಮೊದಲಾದ ಬಿರು ದು ಗಳು ಸಲು ವವು. ಜೈನ ದರ್ಶನಕ್ಕೆ ಭಕ್ತರ ದೆಸೆಯಿಂದ ಹಾನಿವೃದ್ಧಿಯಾದೊಡಂ ವೈಷ್ಣವ ಹಾನಿವೃದ್ಧಿಯೆಂದು ಪಾಲಿಸಬೇಕು . ಈ ಮರ್ಯಾದೆಯೊಳು ಎಲ್ಲಾ ರಾಜ್ಯಂಗಳೊಳಿಹ ಬಸ್ತಿಗಳಿಗೆ ಶ್ರೀ ವೈಷ್ಣವರು ಶಾಸನಮಂ ಕೊಟ್ಟು ಪಾಲಿಸುವರು . ಚಂದ್ರಾರ್ಕಸ್ಥಾಯಿಯಾಗಿ ವೈಷ್ಣವ ಸಮಯದವರು , ಶ್ರೀಜೈನದರ್ಶನದವರನತ್ಯಾದರದಿಂ ರಕ್ಷಿಸಿಕೊಂಡು ಬಹೆವು . ವೈಷ್ಣವ ರೂ ಜೈನರು ಒಂದು ಭೆದವಾಗಿ ಕಾಣಲಾಗದು . ಶ್ರೀ ತಿರು ಮಲೆಯ ತಾತಯ್ಯಂಗಳು ಸಮಸ್ತ ರಾಜ್ಯದ ಭವ್ಯಜನಂಗಳನಮತಗಳಿಂದ ಬೆಳ್ಗುಳದ ತೀರ್ಥದಲ್ಲಿ ದೇವರ ಅಂಗರಕ್ಷಣೆಗೋಸ್ಕರ ಸಮಸ್ತ ರಾಜ್ಯಗಳೊಳಗು ಳ್ಳಂಥ ವೈಷ್ಣವರು ಜೈನರು ಬಾಗಿಲು ಗಟ್ಟಲೆಯಾಗಿ ಮನೆಗೆ ವರುಷ ಒಂದಕ್ಕೆ ಒಂದು ಹಣವಂ ಕೊಟ್ಟು ಆ ಯೆತ್ತಿ ಬಂದ ಹೊನ್ನಿಂಗೆ ದೇವರ ಅಂಗ ರಕ್ಷಣೆಗೆ ೨೦ ಆಳನ್ನು ಸಂತವಿಟ್ಟು ಮಿಕ್ಕ ಹೊನ್ನಿಂಗೆ ಜೀರ್ಣ ಜಿನ ಚೈತ್ಯಾಲಯೋದ್ಧರಣಕ್ಕೆ ಸೊದೆಯನಿಕ್ಕುವುದು .
ಈ ಮರ್ಯಾದೆಯಲ್ಲು ಚಂದ್ರಾರ್ಕರುಳ್ಳನ್ನಂ ತಪ್ಪಲೀಯದೆ ವರ್ಷ ವರ್ಷಂ ಪ್ರತಿಕೊಟ್ಟು ಕೀರ್ತಿ ಸಂಪಾದನೆಯನ್ನು ಪುಣ್ಯವನ್ನೂ ಉಪಾರ್ಜಿಸಿಕೊಂಬುದು . ಈ ಮಾಡಿದ ಕಟ್ಟಳೆಯನ್ನು ಆವನಾನೊಬ್ಬನು ಮೀರಿದವನು ರಾಜದ್ರೋಹಿ .ಸಂಘಸಮುದಾಯಕ್ಕೆ ದ್ರೋಹಿ,ತಪಸ್ವಿಯಾಗಲಿ ಗ್ರಾಮಣಿಯಾಗಲಿ ಈ ಧರ್ಮಮಂ ಕೆಡಿಸಿದರಾದೊಡೆ ಗಂಗೆಯ ತಡಿಯಲ್ಲಿ ಕಪಿಲೆಯನ್ನು ಬ್ರಾಹ್ಮಣನನ್ನೂ ಕೊಂದ ಪಾಪವನ್ನು ಪಡೆದು ಪೋಪರು . ಸ್ವದತ್ತಾಂ ಪರದತ್ತಾಂ ವಾ|| ಕಲ್ಲೇಹದ ಹೆತ್ತ ಶೆಟ್ಟಿ ಮಗ ಬಸವ ಶೆಟ್ಟಿಗೆ ಉಭಯ ಸಮಯಗೂ ಡಿ ಸಂಘನಾಯಕ ಪಟ್ಟಮಂ ಕಟ್ಟಿದರು .ಈ ಶಾಸನಂ ಬೆಳು ಗು ಳದ ಭಂಡಾರಿ ಬಸದಿಯ ಬಲಗಡೆ ದಕ್ಷಿಣದೊಳು ತ್ತರಾಭಿಮು ಖವಾಗಿ ಸ್ಥಾಪಿಸಿದೆ.