ಶನಿವಾರ, ಮಾರ್ಚ್ 18, 2017

ಇರಿ ಗುರು ನೀವು ನಮ್ಮಲ್ಲೇ



ಇರುವ ಜಾತಿಗಳೆಲ್ಲವ ಮೀರಿಸಿದ
ಜಾತಿಯೊಂದು ಇಲ್ಲಿ ಜನ್ಮ ತಳೆದಿದೆ
ಅರಿವ ಧರ್ಮಗಳನೆಲ್ಲ ಮೀರಿದ
ಧರ್ಮವೊಂದು ಇಲ್ಲಿ ನೆಲೆಯ ಕಂಡಿದೆ

ಪೂಜೆ ಪುನಸ್ಕಾರ ಅರ್ಚನೆ ಅಭಿಷೇಕ
ಆರತಿ ಅರ್ಘ್ಯಗಳು ಬೆಲೆರಹಿತವಾಗಿವೆ
ಅಂತರಂಗ ಬಹಿರಂಗಗಳ ಶುದ್ಧಿಗೆ
ಕಾಯಕ ತತ್ವ ವೇದ್ಯವಾಗಿದೆ

ಅನ್ನವಿಲ್ಲದವನಿಗೆ ಅನ್ನವಿಕ್ಕುವುದು
ವಿದ್ಯೆಯಿಲ್ಲದವನಿಗೆ ಅಕ್ಷರ ಕಲಿಸುವುದು
ಜ್ಞಾನವರಸಿದವನಿಗೆ ಭಕ್ತಿಯುಣಿಸುವುದೇ
ನಡೆದು ತ್ರಿವಿಧ ದಾಸೋಹ ಮಹಾ ಮನೆಯಾಗಿದೆ

ಬಂದವರಿಗೆ ಇಲ್ಲ ಎನ್ನುವ ಬಾಯಿಲ್ಲವಿಲ್ಲಿ
ನೊಂದವರಿಗೆ ಹರಸುವ ಕಾಯಕ ಮಾತ್ರವಿಲ್ಲಿ
ಬಸವನೊಪ್ಪಿದ ಧರ್ಮ ಸಾಕಾರವಿಲ್ಲಿ
ಕತ್ತಲಲಿ ನರಳಿದವರು ಬೆಳಕಿನೆಡೆಗಿಲ್ಲಿ

ಮಹಾ ಮನೆಯನ್ನು ಪೊರೆಯುತಿದೆ
ಕಾವಿ, ವಿಭೂತಿ ಧರಿಸಿದ ಕರುಣೆ
ಕರುಣೆಯೇ ತಾನು ಮನುಜನಾದಡೆ
ಹೀಗೆಯೇ ಇರುವುದೇ !!

ಅಂತೂ, ಸದ್ದು ಗದ್ದಲವಿರದ ಸಾಧನೆ
ಗದ್ದುಗೆಯೇರಿತು, ಕಾಯಕ ನಿಷ್ಠೆ
ಮರಳಿ ಮರಳಿ ಅನುರಣಿಸಿತು
ಸಾಕಾರವಾಯಿತು ಕರ್ಮಯೋಗಿಯ ಲೋಕ

ಸಾಕಾರದೊಳಗೆ ಸುಪ್ತಾನಂದ ಪಡೆದ
ಶ್ರೀ ಗುರು ಪಾದುಕೆಗೆ ಎನಿಸುತ್ತಿದೆ
'ಶಿವಯೋಗಿಯ ದೇಹ ವೃಥಾ ಸವೆಯದಂತೆ
ಭಕ್ತರು ನಡೆಸಿದ ಪರಿ' ಎಂದು.

ಇರಿ ನೀವು ಗುರುವೇ ನಮ್ಮಲ್ಲೇ
ಎಡವುವರು ಮುಗಿದಿಲ್ಲ, ಅವರಿಗೆ
ದಾರಿಗಾರರಾಗಿ, ದಾರಿದೀಪವಾಗಿ
ಶ್ರೇಷ್ಠಿಯಾಗಿ,ಮಹಾ ಮಾನವತಾವಾದಿಯಾಗಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...