ಭಾನುವಾರ, ಮಾರ್ಚ್ 5, 2017

ಗ್ರೆಗೋರಿಯನ್ ಕ್ಯಾಲೆಂಡರ್ ಹಾಗು ಹಿಂದೂ ಪಂಚಾಗ ಪದ್ಧತಿ

ಹಿಂದೂ ಧರ್ಮ ಕಾಲ ಗಣನೆಯಲ್ಲಿ 'ಹೋರಾ' ಎನ್ನುವ ಪದ ಬಹಳ ಮುಖ್ಯವಾಗಿರುವುದು ಇದೀಗಾಗಲೇ ಗೊತ್ತಿರುವ ವಿಚಾರ.ಹೋರಾ ಎಂಬ ಪದವನ್ನು ಸಂಸ್ಕೃತದ 'ಅಹೋರಾತ್ರಿ' ಎಂಬ ಪದದಿಂದ ಪಡೆಯಲಾಗಿದೆ.  ದಿನದ ಒಂದು ಘಂಟೆಯ ಅವಧಿಯನ್ನು ಹೋರಾ ಎಂದು ಪರಿಗಣಿಸಲಾಗುತ್ತದೆ. ಪ್ರತೀ ಹೋರಾದ ಮೇಲೂ ಏಳು ಗ್ರಹಗಳ ಪೈಕಿ ಒಂದಿಲ್ಲೊಂದು ಗ್ರಹದ ನಿಗ್ರಹವಿರುತ್ತದೆ. ದಿನದಲ್ಲಿ ಇಪ್ಪತ್ತನಾಲ್ಕು ಗಂಟೆಯೂ ಒಂದಿಲ್ಲೊಂದು ಗ್ರಹ ನಿಗ್ರಹದಲ್ಲಿ ತೊಡಗಿರುತ್ತವೆ ಎನ್ನುವುದು ಹಿಂದೂ ಪಂಚಾಗ ಪದ್ಧತಿಯ ಅಭಿಪ್ರಾಯ. ಯಾವ ಹೋರಾದಲ್ಲಿ ಯಾವ ಕೆಲಸ ಮಾಡಿದರೆ ಶ್ರೇಯಸ್ಸು ಎಂಬುದರ ಬಗ್ಗೆಯೂ ಹಿಂದೂ ಪಂಚಾಗ ಪದ್ಧತಿಯಲ್ಲಿ ಹಲವಾರು ಮಾಹಿತಿ ದೊರೆಯುತ್ತವೆ. ಇವೆಲ್ಲವೂ ಹಿಂದೂ ಧರ್ಮದೊಳಗಿನ ವಿಚಾರಗಳು ಎಂದುಕೊಳ್ಳುವಷ್ಟರಲ್ಲಿಯೇ ಇಂಗ್ಲೀಷ್ ನಲ್ಲೂ ಒಂದು ಘಂಟೆಯ ಅವಧಿಗೆ 'ಹವರ್' ಎಂದು ಕರೆಯುವುದಕ್ಕೂ ಹಿಂದೂ ಕಾಲಗಣನೆಯ ಹೋರಾ ಉಚ್ಛಾರದಲ್ಲಷ್ಟೇ ಅಲ್ಲದೆ ಅದನ್ನು ಮೀರಿದ ಯಾವುದೋ ಒಂದು  ಸಂಬಂಧವಿರುವುದು ಖಾತ್ರಿಯಾಗುತ್ತದೆ.

ಇದುವರೆವಿಗೂ ಕಂಡಿರುವ ಪ್ರಾಗಿತಿಹಾಸಗಳಲ್ಲಿ ಹಿಂದೂ ಹಾಗು ಗ್ರೀಕ್ ಕಾಲಗಣನೆಗೆ ಸರಿಸಾಟಿಯಾಗಿ ನಿಲ್ಲುವಂತಹ ಬೇರೆ ಯಾವ ಕಾಲ ಮಾಪಕಗಳು ಚಾಲ್ತಿಯಲ್ಲಿದ್ದ ಕುರುಹೇ ಇಲ್ಲ. ಅದೇ ಕಾಲದಲ್ಲಿಯೇ ಸುಮೇರಿಯನ್ನರು ಹಾಗು ಮೆಸಪೊಟೋಮಿಯನ್ನರು ಕಾಲ ಮಾಪನಕ್ಕೆ ಗ್ರೀಕ್ ಶೈಲಿ ಅಥವಾ ಭಾರತದ ಶೈಲಿಯನ್ನು ಅನುಸರಿಸುತ್ತಿದ್ದುದು ಜ್ಞಾಪದಲ್ಲಿಟ್ಟುಕೊಳ್ಳಬೇಕಾದ ವಿಷಯ. ಭಾರತದೊಂದಿಗೆ ಪಾಶ್ಚಿಮಾತ್ಯ ಹಾಗು ಮಧ್ಯ ಪ್ರಾಚ್ಯ ರಾಷ್ಟ್ರಗಳು ಸಂಬಂಧ ಕುದುರಿಸಿಕೊಂಡಿದ್ದೆ ಕಾಲ ಗಣನೆ, ಖಭೌತ ವಿಜ್ಞಾನ ಹಾಗು ಗಣಿತ ಶಾಸ್ತ್ರಗಳ ಮುಖಾಂತರ. ಈಗಿನ ಯುರೋಪಿಯನ್ ಹಾಗು ಅಮೆರಿಕೆಯ ಸ್ಥಳಗಳಲ್ಲಿ ಮನುಷ್ಯನು ಇನ್ನು ನಾಗರೀಕತೆಯನ್ನೇ ಕಲಿಯದೇ ಇರುತ್ತಿದ್ದಾಗ ಭಾರತದಲ್ಲಿ ಖಭೌತ ಶಾಸ್ತ್ರ ಪ್ರೌಢ ಸ್ಥಿತಿಯಲ್ಲಿತ್ತು ಎನ್ನುವಾಗ ಅದಕ್ಕೆ ಮೂಲಾಧಾರವಾದ ಗಣಿತ ಶಾಸ್ತ್ರ ಯಾವ ಮಟ್ಟದಲ್ಲಿತ್ತು ಎನ್ನುವುದನ್ನು ಪ್ರತ್ಯೇಕವಾಗಿ ಬಿಡಿಸಿ ಹೇಳುವ ಅವಶ್ಯಕತೆಯಿಲ್ಲವೇ ಇಲ್ಲ.

ಇದೇ ಸಂಬಂಧ ಗಣಿತ ಶಾಸ್ತ್ರ ಹಾಗು ವಿಜ್ಞಾನಗಳಲ್ಲಿ ಭಾರತ ಉಪಖಂಡ ತನ್ನ  ಸೀಮಾ ರೇಖೆಯನ್ನು ದಾಟಿ ಬೇರೆ ರಾಷ್ಟ್ರಗಳೊಂದಿಗೆ ವ್ಯವಹರಿಸಲು ನಾಂದಿಯಾಯಿತು ಹಾಗು ಸಂಖ್ಯಾ ಶಾಸ್ತ್ರದಲ್ಲಿನ ಕೊಳು ಕೊಡುಗೆ ವ್ಯವಹಾರವನ್ನು ಶುರು ಮಾಡಲು ಅವಕಾಶವಾಯಿತು. ಇಷ್ಟಾದರೂ ಕೆಲವೊಂದು ಭಾರತದಿಂದ ರಫ್ತಾದ ಅಂಶಗಳು ಇನ್ನು ಗ್ರೆಗೋರಿಯನ್ ಕ್ಯಾಲಂಡರ್ ನಲ್ಲಿ ಉಳಿದುಕೊಂಡಿವೆ ಹಾಗು ಅದು ಗ್ರೀಕ್-ಭಾರತ ಕಾಲಮಾನ ಪದ್ಧತಿಯಲ್ಲಿದ್ದ ಹೋಲಿಕೆಯನ್ನು ತೋರ್ಪಡಿಸುತ್ತದೆ. ಉದಾಹರಣೆಗೆ ಗ್ರೀಕ್ ಭಾಷೆಯಲ್ಲಿ ಸಂಖ್ಯೆ ೭ ಕ್ಕೆ ಸೆಪ್ಟಾ, ೮ಕ್ಕೆ ಅಕ್ಟಾ, ೯ಕ್ಕೆ ಸಂಸ್ಕೃತದ ನವ, ೧೦ಕ್ಕೆ ಸಂಸ್ಕೃತದ ದಶ ಹಾಗು ಗ್ರೀಕ್ ನ ಡೆಕಾ ಹೋಲಿಕೆಯನ್ನು ಅವಗಣನೆಗೆ ತೆಗೆದುಕೊಂಡರೆ, ವರ್ಷದ ಸೆಪ್ಟೆಂಬರ್ ತಿಂಗಳು ಎಂದರೆ ಏಳನೇ ತಿಂಗಳು ಎಂದಾಗುತ್ತದೆ. ಅಕ್ಟೋಬರ್ ಎಂಟನೇ ತಿಂಗಳು, ನವೆಂಬರ್ ಒಂಬತ್ತನೇ ತಿಂಗಳು ಆಗುತ್ತದೆ. ಹೀಗಿದ್ದರೂ ಇದೀಗ ಪ್ರಚಲಿತ ಕಾಲ ಮಾಪನದಲ್ಲಿ ಡಿಸೆಂಬರ್ ಹನ್ನೆರಡನೇ ತಿಂಗಳಿಗೆ ಸರಿದು ಹೋಗಿರುವುದನ್ನು ಗಮನಿಸಬಹುದು. ನವೆಂಬರ್ ಎನ್ನುವ ಹೆಸರು ಸಂಸ್ಕೃತದಲ್ಲೂ ಹಾಗು ಗ್ರೀಕ್ ನಲ್ಲೂ ಒಂಬತ್ತನೆಯ ತಿಂಗಳು ಎಂದೇ ಗುರುತಿಸಿಕೊಳ್ಳುತ್ತದೆ. ಆದರೆ ಆಧುನಿಕ ಜಾಗತಿಕ ಕ್ಯಾಲೆಂಡರ್ ನವೆಂಬರ್ ಅನ್ನು ಹನ್ನೊಂದನೇ ತಿಂಗಳಾಗಿಸಿದೆ. ಆದರೆ ನವೆಂಬರ್ ಅನ್ನುವ ಪದ ಹುಟ್ಟಿದ್ದು ಒಂಬತ್ತನೇ ತಿಂಗಳನ್ನು ತನ್ಮೂಲಕ ತಿಳಿಯಪಡಿಸಲು ಎನ್ನುವ ಅರಿವು ಈಗಿನ ಜನಾಂಗಕ್ಕೆ ಇದ್ದಂತಿಲ್ಲ. ಬೇರೆ ಜನಾಂಗಕ್ಕೆ ಇಲ್ಲದಿದ್ದರೂ ಭಾರತೀಯರಲ್ಲೂ ಹಾಗು ಗ್ರೀಕರಲ್ಲೂ ಅಂತಹ ಭಾವ ಮೇಳೈಸಿ ಇವುಗಳನ್ನು ತಿಳಿದುಕೊಳ್ಳುವ ಮನಸ್ಸು ಮಾಡಬೇಕಿತ್ತು, ಆದರೆ ನಿಜ ಸ್ಥಿತಿಯಲ್ಲಿ ಹಾಗಾಗಿಲ್ಲ ಎನ್ನುವುದು ಖೇದಕರ ಸಂಗತಿ.

ಹಿಂದೂ ಕಾಲ ಗಣನೆಯ ಪದ್ಧತಿ ಅಥವಾ ಭಾರತ ಉಪಖಂಡದ ಪುರಾತನ ಕಾಲ ಮಾಪನದಲ್ಲಿಯೂ ಯುಗಾದಿಯನ್ನು ವರ್ಷದ ಆದಿಯೆಂದು ಪರಿಗಣಿಸಿ ಯುಗಾದಿ ವರ್ಷದ ಮೊದಲ ದಿನವಾಗಿ ಆಚರಿಸಲ್ಪಡುತ್ತದೆ. ಸರ್ವೇ ಸಾಮಾನ್ಯ ಯುಗಾದಿ ಹಬ್ಬ ಈಗಿನ ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಮಾರ್ಚ್ ತಿಂಗಳಲ್ಲಿ ಅಂದರೆ ಮೂರನೇ ತಿಂಗಳಲ್ಲಿ ಬರುತ್ತದೆ. ಯಥಾವತ್ ಯುಗಾದಿಯಿಂದ ಪರಿಗಣಿಸಿದಾಗ ಈಗಿನ ಡಿಸೆಂಬರ್ ಹತ್ತನೇ ತಿಂಗಳೇ ಆಗುತ್ತದೆ. ಆದ್ದರಿಂದ ಸೆಪ್ಟೆಂಬರ್ ನಿಂದ ಡಿಸೆಂಬರ್ ವರೆಗಿನ ತಿಂಗಳುಗಳು ಇಂಗ್ಲೀಷ್ ಉಡುಪು ಧರಿಸಿ ಜಾಗತೀಕರಣ ಹೆಸರಿನಲ್ಲಿ ಅಂತಾರಾಷ್ಟೀಯ ಕಾಲ ಮಾಪನದಲ್ಲಿ ಸೇರಿಕೊಂಡರೂ ತಮ್ಮ ಹಳೆಯ ಗ್ರೀಕ್ ಹಾಗು ಸಂಸ್ಕೃತ ಉಚ್ಚಾರಣೆಗಳನ್ನು ಬದಲಿಸಿಕೊಳ್ಳಲು ಇಲ್ಲ ಹಾಗು ಬದಲಿಸಿ ಕೊಳ್ಳುವುದು ಇಲ್ಲ. ಮದ್ಯದಲ್ಲಿ ಪಶ್ಚಿಮದಲ್ಲಿ ಆಳಿ ಅಜರಾಮರರಾದ ಜೂಲಿಯಸ್ ಸೀಸರ್ ನಂತವರ ಹೆಸರು ಜುಲೈ ಎಂಬಂತಹ ತಿಂಗಳುಗಳೊಳಗೆ ಸಮ್ಮಿಳಿತವಾಗಿ ಹೊಸ ಬಗೆಯ ತಿಂಗಳುಗಳು ಬಂದು ಅಲ್ಲೂ ವರ್ಷದಲ್ಲಿ ಹನ್ನೆರಡೇ ತಿಂಗಳು ಬರುವಂತೆ ಆಯಿತು.

ಕಂಡ ಕಂಡ ಭಾಷೆಗಳಿಂದ ಸಾಲ ಪಡೆದು  ತನ್ನ ಅಗಾಧತೆಯನ್ನು, ಪ್ರಾಬಲ್ಯವನ್ನು ವಿಸ್ತರಿಸಿಕೊಳ್ಳುತ್ತಿರುವ ಇಂಗ್ಲೀಷ್ ಭಾಷೆ ಗ್ರೀಕ್ ಹಾಗು ಸಂಸ್ಕೃತದಿಂದ ತಿಂಗಳುಗಳ ಹೆಸರುಗಳನ್ನೂ ಎರವಲಾಗಿ ಪಡೆಯಿತು ಆದರೆ ಅದರ ಅರ್ಥವನ್ನು ಜೀರ್ಣಿಸಿಕೊಳ್ಳಲು ಸಮಯವಿಲ್ಲದೆ  ಹೋಯಿತೋ ಏನು ಕಥೆಯೋ ಬಲ್ಲವರು ಯಾರು ?. ಅಂತೂ ಪಡೆದ ಪದಗಳಿಗೆ ಇನ್ನೊಂದು ರೂಪು ಕೊಡದೆ ಯಥಾವತ್ತಾಗಿ ಇಂಗ್ಲಿಷ್ ಗೆ ಭಟ್ಟಿ ಇಳಿಸಿ ಬಳಸಲು ಆರಂಭ ಮಾಡಿಯೇ ಬಿಟ್ಟಿತು. ಪ್ರಜ್ಞಾವಂತ ಪ್ರಭುಗಳು ಅದೇನೆಂದು ವಿಶ್ಲೇಷಿಸದೆ ಇರುವುದನ್ನೇ ಬಿಗಿದಪ್ಪಿಕೊಂಡರು. ನಮ್ಮದು ತಮ್ಮದು ಎನ್ನುವ ಅಭಿಮಾನವಿದ್ದವರು ಅಲ್ಲಿ ಇಲ್ಲಿ ಸ್ವಲ್ಪ ಓದಿ, ಆಲೋಚಿಸಿ ತಿಳಿದುಕೊಂಡರು. ಇನ್ನುಳಿದವರು ಜಾಣ ಮೌನ ಪ್ರದರ್ಶಿಸಿದರು.ಸದ್ಯಕ್ಕೆ ಈ ವಿಚಾರವಾಗಿ ನನ್ನ ಕಣ್ಣಿಗೆ ಬೀಳುತ್ತಿರುವ ಎಲ್ಲರೂ ಜಾಣ ಮೌನಿಗಳೇ. ನಾನು ಅದೇ ಆಗಿದ್ದೆ, ಆದರೆ ಈಗ ಹಾಗಿಲ್ಲವಷ್ಟೆ!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...