ಶುಕ್ರವಾರ, ಅಕ್ಟೋಬರ್ 6, 2023

ಯುಗರ್ಷಿ


ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ,
ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ,
ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ,
ಅಲ್ಲೇನು ಸುಖವಿತ್ತೇ?, ಹೆಜ್ಜೆ ಹೆಜ್ಜೆಗೂ ಕಡು ಕಷ್ಟ,
ಕಂಸನ ಗೂಢಚಾರರನ್ನು, ವಿಷಕನ್ನಿಕೆಯರನ್ನು ನೀನೆ ಕೊಂದು
ಅವರಿಗೆ ಸ್ವರ್ಗದ ದಾರಿ ತೋರಿಸಿದೆ

ನೀನು ಎಲ್ಲೆಲ್ಲಿ ಕಾಲಿಟ್ಟರು ಅಲ್ಲೆಲ್ಲ ಹತ್ತು-ಹಲವು
ತಾಪತ್ರಯಗಳನ್ನ ನಿನ್ನ ಸೋದರಮಾವನೇ ಛೂ ಬಿಟ್ಟನು,
ಕಾಡಿಗೆ ಹೋದರೆ ಅಲ್ಲೇ, ನೀರಿಗೆ ಹೋದರೆ ಅಲ್ಲೇ,
ಹೋಗಲಿ ದನ ಕಾಯ್ದುಕೊಂಡಿರೋಣವೆಂದರೆ ಅಲ್ಲೂ
ನಿನಗೆ ತಾಪತ್ರಯಗಳು ತಪ್ಪಿದ್ದೇ ಇಲ್ಲ.
ಎಲ್ಲವನ್ನು ಅವುಡುಗಚ್ಚಿ ಸಹಿಸಿಕೊಂಡವನು ನೀನು.

ಇಷ್ಟೆಲ್ಲಾ ಕಡು ಕಷ್ಟದಲ್ಲಿ ಹಾಯ್ದು ನೀ ಬಂದುದಕ್ಕೋ
ಏನೋ, ನಿನ್ನ ಬಾಯಲ್ಲಿ ಹೊರಟ ಪದಗಳು ಗೀತೆಯಾಗಿ,
ಭಗವದ್ ವಾಣಿಯಾಗಿ ಈವತ್ತೂ ನಮ್ಮಲ್ಲಿ ಪಠಿಸಲ್ಪಡುತ್ತಿವೆ.
ನಿನ್ನ ವಾಣಿಯಿಂದ ಪಾರ್ಥನೂ ಸೇರಿ ಕೋಟ್ಯಾನುಕೋಟಿ ಜನ
ಪರಿವರ್ತನೆಗೊಂಡಿದ್ದಾರೆ, ಕೆಲವರು ಅದರಿಂದ ದನ
ಸಂಪಾದನೆಯ ಹಾದಿಯನ್ನೂ ಹಿಡಿದಿದ್ದಾರೆ!

ಸರಿ, ಮುಂದೇನು. ಗೊಲ್ಲರೊಳಗೊಂದಾಗಿ ಎಲ್ಲರಿಗೂ ಬೇಕಾದವನಾದೆ,
ಮಥುರೆಯ ಮನೆ-ಮನಗಳಲ್ಲಿ ನೀ ತುಂಬಿಹೋದೆ,
ಅಲ್ಲಿಗಾದರೂ ಕಷ್ಟಗಳು ನಿಲ್ಲಲಿಲ್ಲ, ಅರೆ ಕ್ಷಣ ಬಸವಳಿಯಲಿಲ್ಲ.
ಅಷ್ಟದಿಕ್ಪಾಲಕರೂ ನಿನ್ನ ಪರೀಕ್ಷಿಸಬಂದರು,
ಪರೀಕ್ಷಿಸಬಂದವರಿಗೆ ಪರೀಕ್ಷಾರ್ಥಿಯಾಗಿಯೂ, ನಿನ್ನ
ನಂಬಿದವರಿಗೆ ನಾಯಕನಾಗಿಯೂ ನೀ ನಿಂದೆ.

ಗೋವರ್ಧನ ಗಿರಿಯನ್ನು ಎತ್ತಿ ಅಷ್ಟದಿಕ್ಪಾಲಕರೇ
ಎದುರಾದರು ನನ್ನ ನಂಬಿ ಬಂದವರ ನಾ ಪರಿತ್ಯಜಿಸಲಾರೆ
ಎನ್ನುವುದನ್ನ ಜಗತ್ತಿಗೆ ಸೂಕ್ಷ್ಮವಾಗಿ ತೋರಿಸಿಕೊಟ್ಟೆ.
ಗೋಪಬಾಲರ ಸ್ನೇಹ, ನಂದ-ಯಶೋಧೆಯರ ಅಕ್ಕರೆ
ಇವೆಲ್ಲವನ್ನೂ ಮೀರಿಸಿದ ರಾಧೆಯ ನಿಷ್ಕಲ್ಮಶ ಪ್ರೇಮ
ಎಲ್ಲವೂ ನಿನ್ನ-ಮಥುರೆಯ ಬಿಗಿಯಾದ ಬಂಧಗಳಾದವು.

ಆದರೇನು, ಮಹಾ ವೈರಾಗ್ಯ ಮೂರ್ತಿಯಂತೆ ಕರ್ತವ್ಯವು
ಕಣ್ಣೆದುರಿಗೆ ಬಂದಾಗ ರಾಧೆಯ ಪ್ರೇಮವನ್ನು ಶಾಶ್ವತವಾಗಿ
ತೊರೆದುಬಿಟ್ಟೆ, ಆಡಿ ಬೆಳೆದ ಗೆಳೆಯರು, ನರ್ಮದೆಯ ಒಡಲು,
ಗೋ ಹಿಂಡು, ಮಥುರೆಯ ಪ್ರಕೃತಿ ಸಿರಿ ಎಲ್ಲವೂ ನಿನ್ನ ಕರ್ತವ್ಯಪ್ರೇಮಕ್ಕೆ
ಅಡ್ಡಿ ಬರಲೇ ಇಲ್ಲ, ಬಂದಿದ್ದರೂ ನೀನು ಅದೆಷ್ಟು ನೋವುಂಡು
ಬಿಸಿಯುಸಿರು ಹಿಡಿದು ಮಥುರೆಯ ತೊರೆದಿರಬೇಕು?!

ಮಥುರೆಯನ್ನು ತೊರೆದ ಮೇಲಾದರೂ ನೆಮ್ಮದಿ ಉಂಟಾಯ್ತೆ?
ಇಲ್ಲವೇ ಇಲ್ಲ. ಕಂಸ ಮರ್ಧನವೇ ದುಬಾರಿಯಾಯ್ತು
ಅದಕ್ಕೆ ನೀ ತೆತ್ತ ಬೆಲೆ ಹೇಳಲು ಸಾಧ್ಯವೇ?.
ನೀಚ ಕಂಸನ ಗೆಳೆಯರ ಬಳಗ ನಿನ್ನ ಮೇಲೆ ಅಮರಿಕೊಂಡಾಗ
ಯಾವೊಂದಕ್ಕೂ ಹಿಂದೇಟು ಹಾಕದೆ ಅದೆಷ್ಟು ಚಾಕಚಕ್ಯತೆಯಿಂದ
ಅವರನ್ನೆಲ್ಲ ಹಣಿದೆ, ಛಲಗಾರ ನೀನು.

ಸರಿಯಪ್ಪ, ಇವೆಲ್ಲಾ ಸರಿಯಷ್ಟೆ. ತದನಂತರವಾದರೂ
ನೆಮ್ಮದಿ ಸಿಕ್ಕಿತೇ. ಇಲ್ಲ ಇಲ್ಲ, ಆ ಪದವೊಂದನ್ನ ನಿನ್ನ ಜೀವನದೊಳಕ್ಕೆ
ನೀನು ಬಿಟ್ಟುಕೊಂಡೂ ಇರುವಂತೆ ತೋರುವುದಿಲ್ಲ
ಕಂಸ ಪ್ರೇಮಿ ರಕ್ಕಸರ ಮಹಾರ್ಭಟವನ್ನು ಉದಾಸೀನದಿಂದ ಮಣಿಸುವ
ನಿನ್ನದೇ ಪ್ರಯತ್ನಕ್ಕೆ ಸಮುದ್ರದಂಗಳದಲಿ ಕೋಟೆ ಕಟ್ಟಿಕೊಂಡೆ,
ಅದರಿಂದ ಕೆಲವರ ದೃಷ್ಟಿಯಲ್ಲಿ ಪುಕ್ಕಲನೂ, ಹೇಡಿಯೂ ಆದೆ.

ಶ್ಯಮಂತಕ ಮಣಿಯ ಹಗರಣ ಈ ವಾದಕ್ಕೆ ಕೆಲವು
ದಿನವಾದರೂ ನೀರೆರೆದು ಪುಷ್ಟಿ ನೀಡಿದ್ದಿರಬೇಕು
ಅದನ್ನೂ ಭಯಂಕರ ಹೋರಾಟದಿಂದಲೇ ಗೆದ್ದು ಬಂದೆ.
ಸಮುದ್ರದ ಮಧ್ಯೆ ಕೋಟೆ ಕಟ್ಟಿಕೊಂಡು ಮುಖ್ಯಭೂಮಿಕೆಯಿಂದ
ಮರೆಯಾದ ಮೇಲಾದರೂ ನೆಮ್ಮದಿಯಿಂದಲಿದ್ದೆಯಾ?
ಹದಿನಾರು ಸಾವಿರ ಹೆಂಡತಿಯರಾದರು ನಿನಗೆ!

ಅಲ್ಲಿಂದಾಚೆಗೆ, ಮಹಾಭಾರತದ ಮಹತ್ಕಾಲ
ಅಲ್ಲಿ ಪಕ್ಷಪಾತಿ ಎನಿಸಿಕೊಂಡೆ, ಸರಿ. ಸಜ್ಜನರ ಪಕ್ಷಪಾತಿಯಾಗುವುದು
ಧರ್ಮ ಎನ್ನುವುದನ್ನು ಆಡಿ ತೋರಿಸುವ ಬದಲು ಮಾಡೇ
ತೋರಿಸಿದೆ. ಘನತೆವೆತ್ತ ಉಗ್ರ ಸೇನ ಮಹಾರಾಜನ ಮೊಮ್ಮಗ
ನೀನು, ಯಾವ ಅಹಮಿಕೆಯೂ ಇಲ್ಲದೆ ರಾಜ್ಯ ಭ್ರಷ್ಟರಾಗಿದ್ದ
ಪಾಂಡವರಿಗೆ ಸಾರಥಿಯಾಗುವೆನೆಂದು ಒಪ್ಪಿಕೊಂಡುಬಿಟ್ಟೆ

ಕುರುಕ್ಷೇತ್ರದ ಆ ಯುದ್ಧ ಭೂಮಿಯಲ್ಲಿ ನಿನ್ನ ಪಾಂಚಜನ್ಯವೇ
ಯುದ್ಧಕ್ಕೆ ನಾಂದಿ ಗುರುತಾಗಿ, ಅಲ್ಲೆಲ್ಲ ಲಕ್ಷಾಂತರ ನರಮಾನವರು,
ಆನೆ, ಕುದುರೆ, ಒಂಟೆಗಳು ನೆತ್ತರು ಕಾರಿಕೊಂಡು
ಉಸಿರು ಚೆಲ್ಲಿಕೊಂಡಿದ್ದಾಯ್ತು, ಅಷ್ಟಷ್ಟೇ ಅಲ್ಲವಲ್ಲ,
ಉಭಯ ಬಣಗಳಲ್ಲೂ ವೀರಾಗ್ರಣಿಗಳು, ಛಲದಂಕರು,
ಅತಿರಥ-ಮಹಾರಥರೆಲ್ಲರೂ ನಿನ್ನ ವಿಧಿಗೆ ವಶರಾದರು

ರಾಜ ವ್ಯವಹಾರ ಚತುರನಾದ ನಿನ್ನ ಸಹಾಯವನ್ನ
ನಿನ್ನ ಸೋದರತ್ತೆಯ ಕುಟುಂಬದವರು ಮೊದಲೇ ಪಡೆದುಕೊಂಡಿದ್ದರೆ
ಈ ತಾಕಲಾಟವನ್ನೇ ತಪ್ಪಿಸಿಕೊಳ್ಳಬಹುದಿತ್ತು,
ಜೂಜಿಗೆ ಕೂರುವ ಮೊದಲು, ಕುಂತ ಮೇಲಾದರೂ
ನಿನ್ನೊಡನೆ ಒಂದಾವರ್ತಿ ಚಿಂತನೆ ನಡೆಸಬೇಕಾಗಿತ್ತು.
ಕೈ ಮೀರಿಹೋದ ಮೇಲೆ ನೀನು ತಾನೇ ಏನು ಮಾಡಿಯೇ?

ಪರಿಸ್ಥಿತಿಯೆಲ್ಲವೂ ಮೀರಿ ಹೋದ ಮೇಲೆ ಅವರೆಲ್ಲರೂ
ಒಂದೇ ಉಸುರಿಗೆ ನಿನ್ನ ಕರೆದರು, ಆಗಲಾದರೂ
ಕೊಂಕು-ಬಿಂಕ ತೋರದೇ, ಹಿಂದೆ ಕರೆಯದೆ ಇದ್ದುದಕ್ಕೆ
ಪ್ರತಿಭಟಿಸದೇ ನೀ ಬಂದುಬಿಟ್ಟೆ, ಅವರ ಕೈ ಹಿಡಿದುಬಿಟ್ಟೆ
ಆದರೂ ಅವರ ಒಂದು ಎಡವಟ್ಟಿನಿಂದಾದ ಯಾವುದನ್ನೂ
ನೀ ತಿದ್ದಲಾಗಲೇ ಇಲ್ಲ, ಅವರಿಗೆ ವನವಾಸ ತಪ್ಪಲಿಲ್ಲ

ಯುದ್ಧದ ಶರತ್ಕಾಲದಲ್ಲಿ ಗಾಂಡೀವಿಗೆ ಸಂಚಾಲಕನಾಗಿ
ರಥವೇನೇರಿ ನೀ ಮಾಡಿದ್ದೇನು ಕಡಿಮೆಯೇ ?
ಯುದ್ಧಕ್ಕೂ ಮೊದಲೇ ಪಾರ್ಥ ಅನ್ಯಮನಸ್ಕನಾದಾಗ
ಮೆಲ್ಲಗೆ ರಥವನಿಳಿದು, ಪಾರ್ಥನ ಕೈಹಿಡಿದು ಅವನನ್ನು ತಿದ್ದಿದೆ
ನಿನ್ನಾ ತಿಳುವಳಿಕೆಯ ಮಾತುಗಳು ಇಂದಿಗೂ ನಮ್ಮವರ
ಕೈ ಹಿಡಿಯುತಿವೆ, ಬಹುಷಃ ಈ ಭೂಮಿ ಇರುವವರೆಗೂ.

ಅಲ್ಲಿ ನೀನು ಬಿಟ್ಟಿದ್ದು ಯಾವುದನ್ನು? ಮಾನವ ಜೀವಿಯು
ಈ ಜಗತ್ತಿನಲ್ಲಿ ಸಭ್ಯನಾಗಿ, ಸುಸಂಸ್ಕೃತನಾಗಿ ಬದುಕುವುದಕ್ಕೆ
ಏನೇನು ಬೇಕೋ ಅದೆಲ್ಲವನ್ನು ಅರುಹಿದೆ, ಈ ನಿನ್ನ
ಜ್ಞಾನಬೋಧೆಗೆ ಕುರುಕ್ಷೇತ್ರದ ರಣಾಂಗಣ ಸಾಕ್ಷಿಯಾಯಿತಷ್ಟೆ
ಯುದ್ಧಸನ್ನದ್ಧರಾಗಿ ನಿಂತಿದ್ದ ಕೋಟ್ಯಾನು ಕೋಟಿ ಸೇನಾನಿಗಳ
ಸಮ್ಮುಖದಲ್ಲಿ ನೀ ಕೊಟ್ಟ ಭೋಧೆ ಅಮೃತ ಭೋದೆಯಾಯ್ತು

ಇವೆಲ್ಲ ಮುಗಿದು, ಯುದ್ಧದ ಸಂಧಿಕಾಲದ ಮೋಡ
ಸರಿದ ಮೇಲಾದರೂ ರಾಜ್ಯಾಧಿಕಾರ ಪಾಂಡವರಿಗಾದರೆ
ನಿನಗೆ ಸಿಕ್ಕಿದ್ದೇನು? ಕುರುವಂಶದವರ ಶಾಪ,
ಬೈಗುಳ, ದ್ವೇಷ, ಅಸಹನೆ, ಆವೇಶಗಳಷ್ಟೇ,
ನಿನ್ನತ್ತೆಯ ಮಕ್ಕಳಿಗೆ ರಾಜ್ಯಾಧಿಕಾರದ ಶ್ರೇಯ ದೊರೆತ
ನಂತರವೂ ನಿನಗೆ ಎದುರಾಗುವ ಕಷ್ಟಗಳು ದಿಕ್ಕೆಡಲೇ ಇಲ್ಲ.

ನಿನ್ನೀ ಸುಧೀರ್ಘ ಜೀವನದಲ್ಲಿ ನಿನಗೇನು ಬೇಕೆಂದು ಯಾರು ಕೇಳಲಿಲ್ಲ,
ನಿನ್ನ ಆಸೆ ಆಕಾಂಕ್ಷೆಗಳೇನಿದ್ದವು ಎಂದು ಯಾರು ಬೆದಕಲಿಲ್ಲ
ಎಲ್ಲರು ತಮ್ಮ ತಮ್ಮ ಒಳಿತು ನೋಡಿಕೊಂಡರು.
ಕಡೆಗೆ ಕುರುಕ್ಷೇತ್ರದ ಮಹಾಜಿರಂಗದಲ್ಲಿ ಕೂಡ ಪಾರ್ಥನಿಗೆ ಬಂದದ್ದು
ಅವನಿಗೆಲ್ಲಿ ಪಾಪ ಪ್ರಾಪ್ತವಾಗುವುದೋ ಎನ್ನುವ
ಸ್ವಾರ್ಥವೇ ಹೊರತು ಮತ್ತಿನ್ನೇನು ಅಲ್ಲವಲ್ಲ ?!

ಜೀವಮಾನ ಪರ್ಯಂತ ಕಷ್ಟ, ತಾಪತ್ರಯಗಳನ್ನೇ
ಉಂಡು, ತಿಂದು, ತೇಗಿ, ಯಾರೆಡೆಗೂ ಬೊಟ್ಟು
ಮಾಡಿ ತೋರಿಸದೆ ಹಸನ್ಮುಖಿಯಾಗಿ ಹೊರಟುಹೋದ
ಈ ಜಗದ ಋಷಿ ನೀನು, ಈ ಯುಗದ ಋಷಿ ನೀನು
ಇಷ್ಟು ತಾಳ್ಮೆ, ಯುಕ್ತಿ ನಮ್ಮೊಳಗೆ ಯಾರಿಗೆ ಬರಬೇಕು ಹೇಳು?
ಇಲ್ಲ, ಸಾಧ್ಯವೇ ಇಲ್ಲ. ಅದಿಲ್ಲಿ ಅಸಂಭವ.

ಇಂತಿದ್ದ ನಿನಗೆ ದೇವರ ಪಟ್ಟ ಕಟ್ಟಿದ್ದಾರೆ,
ನೀನಾಗಿದ್ದೇಯೋ ಅದನ್ನೆಲ್ಲ ಆಗುವುದಕ್ಕೆ ಹಿಂದೇಟು ಹಾಕುತಿಹರಿಲ್ಲಿ ,
ನಿನ್ನ ಹೆಸರಲ್ಲಿ ಹೋಮ-ಹವನ ಗಳು ಸಾಂಗೋಪಾಂಗವಾಗಿ ನಡೆಯುತಿವೆ
ಆರಾಧನೆ ಅಹರ್ನಿಶಿ ನಡೆಯುತ್ತಲೇ ಇದೆ,
ನೀನೆ ಹೇಳಿದಂತೆ ನೋಡು ಮತ್ತೊಮ್ಮೆ ಬಂದಿಲ್ಲಿ
ನಿನ್ನ ಹೆಸರನೇಳಿ ಒಕ್ಕಲೆಬ್ಬಿಸಿರುವ ನಿನ್ನದೇ ಜನರನು

ನೀನು ದೇವನೋ? ಮಾನವನೋ? ಶತ್ರುಗಳ ಪಾಲಿಗೆ ದಾನವನೋ?
ರಾಜ ನೀತಿಜ್ಞನೋ? ರಾಜ ತಂತ್ರ ಪರಿಣತನೋ? ಆಚಾರ್ಯ ಪುರುಷನೋ?
ಯುಗ ಪುರುಷನೋ? ಸಂಸಾರಿಯೋ? ವಿರಾಗಿಯೋ? ಎಲ್ಲರೊಳಗೆ
ನೀನೋ? ನಿನ್ನೊಳಗೆ ಎಲ್ಲರೋ? ಜಗತ್ಪ್ರೇಮಿಯೊ? ನೀನೇನೋ?
ಪದಗಳಲಿ ಕಟ್ಟಿಡಲು ಸಾಧ್ಯವಾಗೇ ಇಲ್ಲ, ನನ್ನೀ ಕಣ್ಣಲಿ
ನೀನು ಈ ಯುಗದ ಋಷಿ - ಯುಗರ್ಷಿ

-o-

ಭಾನುವಾರ, ಜೂನ್ 11, 2023

ಹೊಸದೊಂದು ಹರದಾರಿಯಲಿ

ಬ್ಬಬ್ಬಾ..... ಮದುವೆಯಾಯ್ತು.

ನನ್ನದೇ!

ಇಂದು ನೆನ್ನೆಯಲ್ಲ, ಅದಾಗಿ ಆಗಲೇ ವರ್ಷ ಕಳೆದು ಅದರ ಮೇಲೆ ಒಂದು ತಿಂಗಳೂ ಕಳೆಯಿತು. ಮದುವೆ ಅನಂತರದ ಓಡಾಟ-ತಿರುಗಾಟ, ಪ್ರವಾಸಗಳು, ಜೊತೆ ಜೊತೆಗೆ ಮಾಮೂಲಿನ ಕೆಲಸ ಕಾರ್ಯ, ಕನ್ನಡ ಪರ ತಂಡವೊಂದಕ್ಕೆ ಧ್ವನಿ ಮುದ್ರಿಕೆ, ಅದೇ ತಂಡಕ್ಕೆ ಮಾಹಿತಿಭರಿತ ಲೇಖನಗಳನ್ನೊದಗಿಸುವುದು, ವರ್ಕ್ ಫ್ರಮ್ ಹೋಂ ಸಂಸ್ಕೃತಿಯಿಂದ ಹೊರಳಿ ವರ್ಕ್ ಫ್ರಮ್ ಆಫೀಸ್ ಸಂಸ್ಕೃತಿಗೆ ಒಗ್ಗಿಕೊಳ್ಳುವುದು ಸೇರಿ ಭರಪೂರ ಕೆಲಸಗಳೊಳಗೆ ಕಳೆದುಹೋಗಿ ಈಗ ಮರಳಿ ನನ್ನ ಬ್ಲಾಗಿಗೆ ಎಡತಾಕಿದ್ದೇನೆ. ಇಲ್ಲಿಗೆ ಮರಳಿ ಬಂದಿದ್ದೇನೆ, ನಾ-ಕಂಡಿದ್ದನ್ನು ಬಯಲುಗೊಳಿಸಲು.

ಮೊದಲೆಲ್ಲ ಕೆಲವಾರು ಕಾದಂಬರಿಗಳನ್ನು ಓದಿಕೊಳ್ಳುತ್ತಿದ್ದ ನನಗೆ ಕನ್ನಡ ಪರ ತಂಡವೊಂದು ಕರ್ನಾಟಕ ಇತಿಹಾಸದ ವಿಡಿಯೋಗಳನ್ನು ಮಾಡಿ ಯೂಟ್ಯೂಬ್ ನಲ್ಲಿ ಹರಿಯಬಿಟ್ಟು ಕನ್ನಡಿಗರನ್ನು ಇತಿಹಾಸ ಪ್ರಜ್ಞೆಯ ದೃಷ್ಟಿಯಿಂದ ಜಾಗೃತಗೊಳಿಸಲು ಪ್ರಯತ್ನಿಸುತ್ತಿದ್ದುದು ಕೋವಿಡ್ ಕಾಲಘಟ್ಟಕ್ಕಿಂತ ಮೊದಲೇ ತಿಳಿದುಬಂದಿತ್ತು. ನಾನು ಅಂತಹ ಸಮಾನ ಮನಸ್ಕನೇ ಆಗಿದ್ದರಿಂದ ಆ ತಂಡದಲ್ಲಿ ನನಗು ಜಾಗ ದೊರೆಯಿತೆನ್ನಿ. ಆ ಕನ್ನಡ ಸಂಘಟನೆಯಲ್ಲಿ ಕರ್ನಾಟಕ-ಕನ್ನಡದ ಇತಿಹಾಸವನ್ನು ವಿವಿಧ ಆಕರಗಳಿಂದ ಹೆಕ್ಕಿ ತೆಗೆದು ಕ್ರೋಢೀಕರಿಸುವುದು ಸೇರಿ ಎಲ್ಲ ವಿಡಿಯೋಗಳಿಗೆ ಧ್ವನಿಯಾಗುವ ಸುಯೋಗವೂ ಒದಗಿಬಂತು. ಕನ್ನಡ ಸಾಹಿತ್ಯವನ್ನಾಗಲಿ, ಇತಿಹಾಸವನ್ನಾಗಲಿ ಕನ್ನಡ ಕೇಂದ್ರೀಕೃತ ಮನೋಭಾವನೆಯಿಂದ ನಾನು ಈ ಹಿಂದೆ ಓದಿಲ್ಲವಾದ್ದರಿಂದ ಗತ ಕಾಲದಲ್ಲಿ ನಮ್ಮ ಕನ್ನಡ ಸೀಮೆಯಲ್ಲಿ ನಡೆದ ಮಹಾನ್ ಮಹಾ ಘಟನಾವಳಿಗಳು ನನಗೆ ಸಾಧಾರಣ ಘಟನೆಗಳಂತೆ ಗೋಚರಿಸಿಬಿಟ್ಟಿದ್ದವು. ಕನ್ನಡ-ಕನ್ನಡಿಗ ಮನೋಧೋರಣೆಯಿಂದ ಅದದೇ ಕೃತಿಗಳನ್ನು ಮತ್ತೊಮ್ಮೆ ಕೆದಕಿದಾಗ ಹೆಮ್ಮೆ ಪಡುವ ಸರದಿ ನನ್ನದಾಗಿತ್ತು. ಮೊದ ಮೊದಲಿಗೆ ಓದಿಕೊಂಡ ಕನ್ನಡ ಕುಲ ಪುರೋಹಿತರೆಂದೇ ಬಿರುದಾಂಕಿತರಾದ ಆಲೂರು ವೆಂಕಟರಾಯರ 'ಕರ್ನಾಟಕ ಗತ ವೈಭವ' ಕೃತಿ ನನ್ನ ಮನಸ್ಸಿನ ಮತ್ತೊಂದು ಕಣ್ಣನ್ನು ತೆರೆಯಿಸಿತೆನ್ನಬಹುದು. ನಮ್ಮ ಕನ್ನಡ ನೆಲದಲ್ಲಿ ಬದುಕಿ ಬಾಳಿದ ವೀರ ಪುರುಷರಾದ ಇಮ್ಮಡಿ ಪುಲಿಕೇಶೀ, ಮೊದಲನೇ ಪುಲಿಕೇಶೀ, ಮಂಗಳೇಶ, ಅಮೋಘವರ್ಷ ನೃಪತುಂಗ, ಧ್ರುವಧಾರ ವರ್ಷ, ವಿಕ್ರಮಾದಿತ್ಯ, ತೈಲಪ, ಸೋಮೇಶ್ವರ, ಹಕ್ಕ-ಬುಕ್ಕ, ಕೃಷ್ಣದೇವರಾಯ, ವಿಷ್ಣುವರ್ಧನನಾದ ಬಿಟ್ಟಿದೇವ ಇನ್ನು ಮುಂತಾದ ಅರಸರ ಬಗ್ಗೆ, ಅವರು ದಾಖಲಿಸಿದ ಸಾಧನೆಯ ಮೈಲುಗಲ್ಲುಗಳ ಬಗ್ಗೆ ತಿಳಿಯುತ್ತಾ ಹೋದಂತೆ ಕರ್ನಾಟ ದೇಶದ ಮೇಲೆ ನನಗಿದ್ದ ಅಭಿಮಾನ ನೂರ್ಮಡಿಯಾಯಿತು. ಕನ್ನಡ ಸೀಮೆಯ ಯಾವ ಊರಿಗೆ ಹೋದರೂ ಅಲ್ಲಿನ ಕೋಟೆ ಕೊತ್ತಲಗಳನ್ನು ಯಾರ ಕಾಲದ್ದೆಂದು ಅಂದಾಜಿಸುವುದು, ಅಲ್ಲಿನ ದೇಗುಲಗಳ ಶೈಲಿಯನ್ನು ನೋಡೇ ಇದನ್ನು ಯಾರು ಕಟ್ಟಿದರೆಂದು ಹೇಳುವುದು ನನಗೆ ಖಯಾಲಿಯಾಗುತ್ತಾ ಹೋಯಿತು. ಕರ್ನಾಟಕ ಸೀಮೆಯ ದೇಗುಲಗಳಲ್ಲಿ ಜನಗಳು ಅನಾಸಕ್ತಿ ತೋರುವ, ಆದರೆ ನಾನು ಅಪಾರ ಶ್ರದ್ಧೆಯಿಂದ ಗಮನಿಸುವ ಮತ್ತೊಂದು ವಿಶೇಷವೆಂದರೆ ಆ ದೇಗುಲಗಳ ಕಂಬಗಳ ರಚನೆ. ರಾಷ್ಟ್ರಕೂಟರ ತೀರಾ ಸಾದಾ ಕಂಬಗಳಿಂದ ಹಿಡಿದು ಕಲ್ಯಾಣದ ಚಾಲುಕ್ಯರ, ಹೊಯ್ಸಳರ ಅತ್ಯಂತ ಕಲಾತ್ಮಕವಾಗಿರುವ ಕಂಬಗಳವರೆಗೂ ನಾನಾ ರೀತಿಯ ಕಂಬಗಳ ಮಾದರಿಗಳನ್ನು, ಅಲ್ಲಿ ಬಳಸಿಕೊಳ್ಳುತ್ತಿದ್ದ ಕಲಾತ್ಮಕತೆಯನ್ನು, ವಿಜ್ಞಾನದ ಸವಾಲನ್ನು ಎದುರಿಸಿ ಕಲ್ಲಿನ ಕಂಬಗಳಲ್ಲಿ ಬಹು ವಿಶೇಷವಾದ ಕಲೆಯನ್ನು ಅರಳಿಸಿರುವುದನ್ನು ನೋಡುತ್ತಾ ಕನ್ನಡ ಸೀಮೆಯ ಶಿಲ್ಪ ಕಲಾವಿದರ ಕುರಿತಾಗಿ ವಿಶೇಷವಾದ ಅಭಿಮಾನವೊಂದು ನನ್ನಲ್ಲಿ ಜಾಗೃತವಾಯಿತು.

ಪೂರ್ವದ ಹಳೆಗನ್ನಡ ಸಾಹಿತ್ಯದಿಂದ ಹಿಡಿದು ನಡುಗನ್ನಡ ಸಾಹಿತ್ಯದ ವರೆಗೂ ಅಧ್ಯಯನ ಮಾಡಿ ನಮ್ಮ ಕನ್ನಡ ಸಂಘಟನೆಗೆ ಲೇಖನಗಳನ್ನು ಬರೆಯ ತೊಡಗಿದ ಮೇಲಂತೂ ಕಲ್ಲಿನ ಮೇಲೆ ಮಾತ್ರವಲ್ಲ ತಾಳಪತ್ರದ ಮೇಲೂ ಅಕ್ಷರ ರೂಪದಲ್ಲಿ ಕಲೆ ಅರಳಬಹುದು ಎನ್ನುವುದು ಗೊತ್ತಾಯಿತು. ನಮ್ಮ ಕನ್ನಡದ ಆದಿ ಕವಿ ಪಂಪನಿಗಿಂತ ಹಿಂದೆಯೇ ಅನೇಕ ಮಹಾ ಮಹಾ ಕನ್ನಡದ ಕವಿಗಳು ಬದುಕಿ ಬಾಳಿದ್ದರೆಂದೂ, ಆದರೆ ಅವರು ಬರೆದ ಯಾವ ಕೃತಿಯೂ ಇಂದಿಗೆ ಲಭ್ಯವಿರದ ಕಾರಣದಿಂದ ಅವರುಗಳನ್ನೆಲ್ಲ ಕನ್ನಡ ಮೊದಲ ಕವಿಗಳೆಂದು ಒಪ್ಪಲಾಗದೆಂಬ ವಿಚಾರವನ್ನು ತಿಳಿದುಕೊಂಡಾಗ ಪಂಪನಿಗಾಗಿ ಸಂತೋಷ ಪಡುವುದೋ, ಇಲ್ಲ ಅವನಿಗಿಂತಲೂ ಮೊದಲಿದ್ದ ಕವಿಗಳು ಮರೆತು ಹೋದುದಕ್ಕೆ ದುಃಖ ಪಡುವುದೋ ಈವತ್ತಿಗೂ ತಿಳಿಯುತ್ತಿಲ್ಲ. ಇವೆಲ್ಲವುಗಳ ಜೊತೆ ಜೊತೆಗೆ ಸಾಮಾನ್ಯ ಜನಗಳಿಗೆ ತಿಳಿಯದ ಕೆಲವು ಅಚ್ಚರಿಯ ವಿಚಾರಗಳು ಆಗೊಮ್ಮೆ ಈಗೊಮ್ಮೆ ನನ್ನನ್ನು ನಿಬ್ಬೆರಗಾಗಿಸಿದವು. ಒಂದೆರಡು ಉದಾಹರಣೆಯನ್ನು ಹೆಕ್ಕಿಕೊಳ್ಳುವುದಾದರೆ ನಮ್ಮ ಆದಿಕವಿ ಪಂಪ ಬರೀ ಕವಿಯಾಗಿದ್ದಷ್ಟೇ ಅಲ್ಲದೆ ರಾಜ ತಂತ್ರ ನಿಪುಣನೂ, ಸೇನೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಾಯಿದ್ದ ಸೈನ್ಯಾಧಿಕಾರಿಯೂ ಆಗಿದ್ದ ಎನ್ನುವುದು, ನಮ್ಮ ಕನ್ನಡ ಸೀಮೆ ಚಿನ್ನದ ಗಣಿಗಾರಿಕೆಯನ್ನ ಕ್ರಿಸ್ತ ಪೂರ್ವದಲ್ಲೇ ಆರಂಭಿಸಿತ್ತು ಎನ್ನುವುದು. ನಾಗರೀಕತೆಯ ಅತ್ಯಂತ ಹಳೆಯ ಕುರುಹುಗಳು ಪತ್ತೆಯಾದ ಹರಪ್ಪ, ಮೆಹಂಜೋದಾರೊ ಉತ್ಖನನಗಳಲ್ಲಿ ಸಿಕ್ಕ ಚಿನ್ನವನ್ನ ನಾನಾ ಪರೀಕ್ಷೆಗೊಳಪಡಿಸಿ ನೋಡಿದಾಗ ಆ ಚಿನ್ನ ದಕ್ಷಿಣ ಭಾರತದ ಯಾವುದೋ ಭೂಭಾಗದಿಂದ ಬಂದಿದ್ದಿರಬಹುದು ಎನ್ನುವುದು ಪತ್ತೆಯಾಯ್ತಂತೆ. ನಮ್ಮ ಕೋಲಾರದ ಚಿನ್ನದ ಗಣಿಯನ್ನು ಹೊರತುಪಡಿಸಿದರೆ ಹೇಳಿಕೊಳ್ಳುವ ಮತ್ಯಾವ ಚಿನ್ನದ ಗಣಿ ದಕ್ಷಿಣ ಭಾರತದಲ್ಲಿದೆ?. ಅಲ್ಲವೇ. ಆ ಚಿನ್ನ ಬಹುಷಃ ನಮ್ಮ ಕರ್ನಾಟಕದ್ದೇ ಇರಬೇಕು. ಇಲ್ಲಿ ಆವತ್ತಿಗೆ ಬದುಕಿದ್ದವರಿಗೆ ಚಿನ್ನವನ್ನ ಅದಿರಿನಿಂದ ಬೇರ್ಪಡಿಸಿ ಸಂಸ್ಕರಿಸುವಷ್ಟು ಜ್ಞಾನವಿತ್ತು. ಪಾದರಸ, ತಾಮ್ರ, ಬೆಳ್ಳಿಗಳನ್ನು ಚಿನ್ನ ಸಂಸ್ಕರಣೆಯ ಪ್ರಮುಖ ಘಟ್ಟಗಳಲ್ಲಿ ಬಳಸಿಕೊಳ್ಳುವಷ್ಟು ಲೋಹ ಜ್ಞಾನ ಆವತ್ತು ಇಲ್ಲಿದ್ದವರಿಗಿತ್ತು ಎನ್ನೋದು ನನ್ನನ್ನೂ ಸಖೇದಾಶ್ಚರ್ಯಕ್ಕೆ ಈಡು ಮಾಡಿದ್ದು ನಿಜ.

ನಾನು ಮೇಲೆ ಹೇಳಿದ ಕನ್ನಡ ಸಂಘಟನೆಗೆ ಸೇರಿಕೊಂಡ ಮೇಲೆ ಈ ಪರಿ ಕನ್ನಡ ಭಾಷೆ-ಸಂಸ್ಕೃತಿಯ ಮೇಲೆ ಗಮನ ಹರಿಸಲು ನನಗೆ ಸುಯೋಗವೊದಗಿ ಬಂತು ಅಂತ ಹೇಳುವುದಕ್ಕೋಸ್ಕರವಷ್ಟೇ ಇಷ್ಟು ಹೇಳಬೇಕಾಯ್ತು. ಅಲ್ಲಿ ನನಗೆ ಸಿಕ್ಕ ಅಮೋಘ, ಅದ್ವಿತೀಯ, ಅನೂಹ್ಯ ವಿಶೇಷಗಳನ್ನೆಲ್ಲ ಹೆಕ್ಕಿ ಅದಕ್ಕೊಂದು ಲೇಖನದ ಚೌಕಟ್ಟು ಕೊಟ್ಟು ನಾನೇ ಖುದ್ದಾಗಿ ಧ್ವನಿ ಮುದ್ರಿಸಿದ್ದೇನೆ, ನಮ್ಮ ತಂಡದವರು ತಮ್ಮ ಯೂ-ಟ್ಯೂಬ್ ವಾಹಿನಿಯಲ್ಲಿ ಅವುಗಳನ್ನು ಕಾಲಕ್ಕನುಗುಣವಾಗಿ ಪ್ರಸಾರ ಮಾಡುತ್ತಿದ್ದಾರೆ ಕೂಡ. ನಿಮ್ಮೊಳಗೆ ಯಾರಿಗಾದರೂ ಆ ಕುರಿತಾಗಿ ಕುತೂಹಲವುಕ್ಕಿದರೆ ನಮ್ಮ ಯೂ-ಟ್ಯೂಬ್ ವಾಹಿನಿಯನ್ನು ನಿಸ್ಸಂಕೋಚವಾಗಿ ಎಡತಾಕಬಹುದು.

ಇವುಗಳ ನಡುವೆ ಬಹು ನಮ್ಮ ಬಹು ನಿರೀಕ್ಷಿತ ಮಾತಾ ವೈಷ್ಣೋದೇವಿ ಯಾತ್ರೆಯನ್ನು ಕಾರ್ಯಗತಗೊಳಿಸಿದ್ದು ಮನಸ್ಸಿಗೆ ಹೊಸ ಉಲ್ಲಾಸವನ್ನು ತಂದುಕೊಟ್ಟಿತು. ಬೆಂಗಳೂರಿನಿಂದ ವೈಷ್ಣೋದೇವಿಗೆ ಹೊರಟು ಮಾರ್ಗ ಮಧ್ಯೆ ದೆಹಲಿ, ಅಮೃತಸರಗಳನ್ನು ನೋಡ್ದಿದ್ದು, ಅಲ್ಲಿನ ಐತಿಹಾಸಿಕ ಸ್ಥಳಗಳನ್ನು ಸಂದರ್ಶಿಸಿದ್ದು ಒಂದು ಹಿತಾನುಭವವಾಯಿತು. ಎಲ್ಲಕಿಂತ ಹೆಚ್ಚಿಗೆ ಮನಸ್ಸಿಗೆ ಹತ್ತಿರವಾದದ್ದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಲಾಲ್ ಬಹಾದ್ದೂರ್ ಶಾಸ್ತ್ರಿ ಹಾಗು ಇಂದಿರಾ ಗಾಂಧೀ ಸ್ಮಾರಕಗಳು. ಇವರಿಬ್ಬರು ಪ್ರಧಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾಗಲೇ ನಿಧನರಾಗಿದ್ದು ಇವರಿಬ್ಬರ ನಡುವಿನ ಸಾಮ್ಯತೆಯಾದರೆ ಆಡಳಿತೆಯಲ್ಲಿ ಬಹುದೊಡ್ಡ ಕ್ರಾಂತಿಕಾರಕ ಬದಲಾವಣೆಗಳನ್ನು ತಂದಿದ್ದು ನನ್ನ ಇವರಿಬ್ಬರ ಅಭಿಮಾನಿಯಾಗುವಂತೆಯೂ ಬಹಳ ಹಿಂದೆಯೇ ಮಾಡಿದೆ. ಅಭಿಮಾನಿಯಾಗಿ ಇವರಿಬ್ಬರ ಸ್ಮೃತಿ ಸ್ಥಳಗಳಿಗೆ ಭೇಟಿಕೊಟ್ಟಿದ್ದು ನನ್ನ ಖುಷಿಗೆ ಕಾರಣವಾಯಿತು. ಇಬ್ಬರು ಪ್ರಧಾನಿಗಳು ಬದುಕಿ ಬಾಳಿದ ಮನೆ, ಬಳಸಿದ ವಸ್ತುಗಳು, ಅವರು ಕೊನೆಯ ಘಳಿಗೆಗಳನ್ನು ಕಳೆದ ಸ್ಥಳಗಳು ಎಲ್ಲವೂ ಅಚ್ಚಳಿಯದೆ ಉಳಿದುಕೊಂಡಂತಹವುಗಳು. ಆಗಿನ ಸೋವಿಯತ್ ರಷ್ಯಾದಲ್ಲಿದ್ದ ಪ್ರಮುಖ ಪಟ್ಟಣವಾಗಿದ್ದ, ಈವತ್ತಿಗೆ ಉಜ್ಬೇಕಿಸ್ತಾನದ ರಾಜಧಾನಿಯು ಆಗಿರುವ ತಾಷ್ಕೆಂಟ್ ಪಟ್ಟಣದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ನಿಧನರಾದರು ಅವರು ಭಾರತದಲ್ಲಿ ಕಡೆಯದಾಗಿ ಹೊರಟ ಮನೆಯಂತೂ ಇದೇ ಅನ್ನುವುದೊಂದು ಕುತೂಹಲದಿಂದ ದೆಹಲಿಯ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ನಿವಾಸವನ್ನು ಕಣ್ತುಂಬಿಕೊಂಡೆ.

ಮಹಾತ್ಮ ಗಾಂಧೀ ಹತ್ಯೆಯಾದ ಗಾಂಧೀ ಸ್ಮೃತಿ, ರಾಷ್ಟ್ರ ಪತಿ ಭವನ, ಹೆಳೆಯ ಸಂಸತ್ ಭವನ (ಇದೀಗ ಉದ್ಘಾಟನೆಯಾಗಿರುವ ಹೊಸ ಸಂಸತ್ ಭವನ 'ಸೆಂಟ್ರಲ್ ವಿಸ್ತಾ' ಇನ್ನೂ ನಿರ್ಮಾಣ ಹಂತದಲ್ಲೇ ಇತ್ತು), ಸ್ವಾಮಿ ನಾರಾಯಣ ಖ್ಯಾತಿಯ ಅಕ್ಷರಧಾಮ ದೇಗುಲ, ಕುತುಬ್ ಮಿನಾರುಗಳು ನನ್ನ ದೆಹಲಿ ಪ್ರವಾಸಕ್ಕೆ ಮತ್ತಷ್ಟು ಮೆರುಗು ತುಂಬಿದವು. ಪ್ರಧಾನಿಯವರ ನಿವಾಸವೂ ಸೇರಿ ಈಗಿನ ಕೇಂದ್ರ ಸರ್ಕಾದ ಹಲವು ಪ್ರಮುಖರ ಮನೆಗಳ ಮುಂದೆ ಕಾರಿನಲ್ಲಿ ಹೋಗಿದ್ದೆ ಖುಷಿಯ ವಿಚಾರವಾಯ್ತು, ಮೊದಲೇ ಇದು ನನ್ನ ಮೊದಲನೇ ದೆಹಲಿ ಪ್ರವಾಸ ಹಾಗಾಗಿ ಅಷ್ಟು ಕುತೂಹಲಗಣ್ಣಿನಿಂದ ಇವೆಲ್ಲವನ್ನೂ ನಾನು ಕಂಡೆನೆನೋ!. ಇವೆಲ್ಲವನ್ನೂ ಒಂದೆರಡು ಬಾರಿ ನೋಡಿದವರು ಅಥವಾ ಇತಿಹಾಸ, ರಾಜಕೀಯ ಪ್ರಜ್ಞೆ ಇಲ್ಲದವರು ಈ ರಾಜಧಾನಿಯ ದರ್ಶನವನ್ನು ಅಷ್ಟೊಂದು ಸಂಭ್ರಮಿಸಲಾಗದೇನೋ.

ನಮ್ಮ ದೇಶದ ಶಕ್ತಿ ಕೇಂದ್ರವನ್ನು ನೋಡಿ ಹೊರಟದ್ದು ದೇಶ ವಿಭಜನೆಯ ಸಮಯದಲ್ಲಿ ನೆತ್ತರ ಹೊಳೆಯೇ ಹರಿದ ಪಟ್ಟಣಗಳ ಪೈಕಿ ಅತಿ ಪ್ರಮುಖ ಪಟ್ಟಣವಾದ ಅಮೃತಸರಕ್ಕೆ. ಭಾರತದಲ್ಲಿನ ಸಿಖ್ಖರ ಪವಿತ್ರ ನಗರಿ, ಗುರುದ್ವಾರಗಳ ನಗರಿ ಅಂತ ಗುರುತಿಸಿಕೊಳ್ಳುವ ಅಮೃತಸರ ಸ್ವಾತಂತ್ರ್ಯ ಹೋರಾಟದಲ್ಲಿಯೂ, ಸ್ವಾತಂತ್ರ್ಯಾನಂತರ ಉಂಟಾದ ಕೋಮು ಘರ್ಷಣೆಗಳ ಸಂದರ್ಭದಲ್ಲಿಯೂ ಭಾರೀ ಸುದ್ದಿಯಲ್ಲಿರುತ್ತಿದ್ದ ಪಟ್ಟಣ. ಸದ್ಯಕ್ಕೆ ನೆತ್ತರ ತೃಷೆ ತೀರಿದಂತೆ ಕಾಣುವ ಅಮೃತಸರ ಭಾರತ ಜನ ಮಾನಸದಲ್ಲಿ ಸ್ಥಾನ ಪಡೆದುಕೊಂಡಿರುವುದು ಅಲ್ಲಿನ ಸಿಖ್ಖರ ಪ್ರಮುಖ ಆರಾಧಾನಾ ಕೇಂದ್ರವಾದ ಗುರುದ್ವಾರ 'ಶ್ರೀ ಹರ್ ಮಂದಿರ್ ಸಾಹಿಬ್' ನಿಂದ. ನಾನು ಈ ಹೆಸರನ್ನು ಬಳಸಿ ಹೇಳಿದರೆ ಕನ್ನಡಿಗರಿಗೆ ಸುಲಭ ಸಾಧ್ಯದಲ್ಲಿ ಅರ್ಥವಾಗುದಿಲ್ಲವೆಂದು ತಿಳಿದಿದೆ. ಪ್ರಪಂಚದ ಎಲ್ಲರ ಬಾಯಲ್ಲಿ ಗೋಲ್ಡನ್ ಟೆಂಪಲ್ ಎಂದು ಕರೆಸಿಕೊಳ್ಳುವ ಅಮೃತಸರದ ಸ್ವರ್ಣ ಮಂದಿರದ ನಿಜವಾದ ಹೆಸರೇ ಈ 'ಹರ್ ಮಂದಿರ್ ಸಾಹಿಬ್'. ಮೊಘಲರ ಕಾಲಘಟ್ಟದಿಂದಲೂ ಒಂದಲ್ಲ ಒಂದು ವಿಚಾರದಿಂದ ಮುನ್ನೆಲೆಯಲ್ಲೇ ಇರುವ ಈ ನಗರದ ಹೆಸರು ಈವತ್ತಿಗೂ ಹಾಗೇ ಮುನ್ನೆಲೆಯಲ್ಲೇ ಇದೆ. ಖಾಲಿಸ್ತಾನಿ ಹೋರಾಟಗಾರರಿಗೆ ಆಶ್ರಯ ಕೊಟ್ಟು, ಶಸ್ತಾಸ್ತ್ರಗಳನ್ನು ದಾಸ್ತಾನು ಮಾಡಿಕೊಂಡಿದೆ ಎನ್ನುವ ಕಾರಣದಿಂದ ಶ್ರೀಮತಿ ಇಂದಿರಾ ಗಾಂಧೀ ಪ್ರಧಾನಿಯಾಗಿದ್ದ ಕಾಲದಲ್ಲಿ ಈ ಸ್ವರ್ಣ ಮಂದಿರದ ಮೇಲೆ ಸರ್ಕಾರ ಸೇನೆಯನ್ನು ನುಗ್ಗಿಸಿ, ಅಲ್ಲಿದ್ದ ಅಕ್ರಮ ಶಸ್ತ್ರಾಸ್ತ್ರಗಳನ್ನೂ, ಬಂಡುಕೋರರನ್ನು ಬಯಲಿಗೆಳೆಯಿತು. ಇದೇ ಸೇಡು ಸಾಧಿಸಿದ ಸಿಖ್ ಸಮುದಾಯದ ಕೆಲವರು ಇಂದಿರಾಗಾಂಧಿಯವರ ಹತ್ಯೆಯನ್ನೇ ಮಾಡಿಬಿಟ್ಟರು. ಅನಂತರ ದೆಹಲಿ ಮತ್ತು ಇತರ ಪ್ರದೇಶಗಳಲ್ಲಿ ನಡೆದ ಸಿಖ್ಖರ ಹತ್ಯಾಕಾಂಡ ಇದೀಗ ಇತಿಹಾಸದ ಪುಟಗಳಲ್ಲಿ ಕರಾಳ ಅಧ್ಯಾಯವಾಗಿ ಸೇರಿಹೋಗಿದೆ. ಈಗಲೂ ಆಗೊಮ್ಮೆ ಈಗೊಮ್ಮೆ ಇಲ್ಲಿ ಖಾಲಿಸ್ತಾನಿ ಘೋಷಣೆಗಳು ಮೊಳಗುತ್ತವೆ, ಖಾಲಿಸ್ತಾನಿಗಳಿಗೆ ಬೆಂಬಲ ಕೊಡುವ ಕೆಲವರು ಶಸ್ತ್ರಾಸ್ತ್ರ ಸಂಗ್ರಹಕ್ಕೆ, ಹಣ ಸಂಗ್ರಹಕ್ಕೆ ವಾಮ ಮಾರ್ಗವನ್ನಿಡಿದು ಇಲ್ಲಿ ಬಹು ಕ್ರಿಯಾಶೀಲರಾಗಿದ್ದಾರೆ. ಸರ್ಕಾರಕ್ಕೂ, ಜನ ಸಾಮಾನ್ಯರಿಗೂ ಈ ವಿಚಾರ ತಿಳಿದೇ ಇದೆ. ಸರ್ಕಾರ ಈ ವಿಚಾರವನ್ನು ತನ್ನದೇ ಆದ ಮಾರ್ಗದಲ್ಲಿ ಹತ್ತಿಕ್ಕುತ್ತಲೂ ಇದೆ. ನಾನಿಷ್ಟನ್ನೂ ಹೇಳಿದ್ದು ಆ ಸ್ವರ್ಣ ಮಂದಿರದ ಪ್ರಾಮುಖ್ಯತೆಯನ್ನ ನಿಮಗೆ ಮನದಟ್ಟು ಮಾಡಿಸಲು.

ಇನ್ನು ಸ್ವರ್ಣ ಮಂದಿರದ ನಂತರ ಅಲ್ಲಿಂದ ಕೂಗಳತೆಯ ದೂರದಲ್ಲೇ ಇರುವ, ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಬಹು ಚರ್ಚಿತವಾಗಿದ್ದ 'ಜಲಿಯನ್ ವಾಲಾ ಭಾಗ್' ಮತ್ತೊಂದು ರೀತಿಯ ಅನುಭವವನ್ನು ನೀಡಿತು. ಇದೀಗ ನೂರು ವರ್ಷವನ್ನು ಪೂರೈಸಿ ಮುಂದೆ ಬಂದಿರುವ 'ಜಲಿಯನ್ ವಾಲಾ ಭಾಗ್ ಹತ್ಯಾಕಾಂಡ'ದ ನೆನಪು ಅಲ್ಲಿರುವ ಗುಂಡು ಬಿದ್ದ ಗೋಡೆಗಳನ್ನು ನೋಡುವಾಗ ಮತ್ತೆ ಕೋಪ, ರೋಷಾವೇಶ ಹುಟ್ಟುವಂತೆ ಮಾಡುತ್ತದೆ. ಇಂಗ್ಲೀಷರ ಆಕ್ರಮಣಕಾರಿ ದೋರಣೆ ಯಾವ ರೀತಿಯಿತ್ತು ಎನ್ನುವುದನ್ನು ಭಾರತ ಜನಮಾನಸಕ್ಕೆ ಈಗಲೂ ತಿಳಿಯಪಡಿಸುತ್ತಿರುವ ಪ್ರಮುಖ ಸ್ಥಳಗಳ ಪೈಕಿ ಈ 'ಜಲಿಯನ್ ಭಾಗ್' ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ರೌಲತ್ ಕಾಯ್ದೆಯನ್ನು ವಿರೋಧಿಸಿ ಶಾಂತ ರೀತಿಯಲ್ಲಿ ಪ್ರತಿಭಟನೆಗಳಿಗೆ ತಯಾರು ಮಾಡಿಕೊಳ್ಳುತ್ತಿದ್ದ ತಯಾರಿ ಸಭೆ ಅದು, ಪ್ರತಿಭಟನಾ ಸಭೆಯೂ ಆಗಿರಲಿಲ್ಲ. ಅಲ್ಲಿ ಸೇರಿದ್ದ ಬಹುತೇಕರು ಸಿಖ್ಖರ ಪವಿತ್ರ ಹಬ್ಬವಾದ ಬೈಸಾಕಿ ಹಬ್ಬವನ್ನು ಸ್ವರ್ಣ ಮಂದಿರದ ಸಮೀಪ ಆಚರಿಸಲು ನೆರೆದಿದ್ದ ಜನ ಸಾಮಾನ್ಯರು, ಅವರ ಮೇಲೆ ಒಂದೇ ಒಂದು ಎಚ್ಚರಿಕೆಯನ್ನೂ ಕೊಡದೆ ನಿರ್ದಾಕ್ಷಿಣ್ಯವಾಗಿ ಗುಂಡು ಹಾರಿಸಲು ಹೇಳಿ ಅಲ್ಲಿ ಸಾವಿರಾರು ಜನ ಹುತಾತ್ಮರಾದದ್ದು,ಅನಂತರ ಅದು ನಾನಾ ರಾಜಕೀಯ ವಿದ್ಯಮಾನಗಳಿಗೆ, ಬ್ರಿಟೀಷರ ವಿರುದ್ಧ ಅಸಹಿಷ್ಣುತೆಗೆ ಕಾರಣವಾಗಿದ್ದು ನಿಮಗೆಲ್ಲ ಗೊತ್ತಿರುವ ವಿಚಾರವೇ. ಐತಿಹಾಸಿಕವಾಗಿ ಇಷ್ಟು ಪ್ರಾಮುಖ್ಯತೆ ಪಡೆದ ಜಲಿಯನ್ ವಾಲಾಭಾಗ್ ಗೆ ಭೇಟಿ ಕೊಟ್ಟಿದ್ದಾಯ್ತು.

ಮುಂದೆ ಭಾರತ-ಪಾಕಿಸ್ತಾನ ಗಡಿ ವಾಘಾ-ಅಟ್ಟಾರಿ ಗಡಿಯಲ್ಲಿ ನಡೆಯುವ ಸಾಯಂಕಾಲದ ಉಭಯ ದೇಶಗಳ ಪರೇಡ್ ಮತ್ತು ತಂತಮ್ಮ ದೇಶಗಳ ಧ್ವಜಾವರೋಹಣ ಕಾರ್ಯಕ್ರಮ, ಅದಕ್ಕೇನು ಅಷ್ಟೊಂದು ಇತಿಹಾಸವಿಲ್ಲದಿದ್ದರೂ ಭಾರತದಲ್ಲಿ ಹುಟ್ಟಿದವರು ಎಲ್ಲರೂ ಒಮ್ಮೆ ನೋಡಿಕೊಂಡು ಬರಬೇಕಾದ ಕಾರ್ಯಕ್ರಮವದು. ಅಭಯ ದೇಶಗಳ ಸೈನಿಕರು ತಂತಮ್ಮ ದೇಶದ ಗಡಿಯೊಳಗೆ ನಿಂತುಕೊಂಡು ಗಡಿಯಾಚೆಗೆ ಕೈಚಾಚಿ ಕೈ-ಕುಲುಕುವುದು ಅನುಚಾನುವಾಗಿ ಕೆಲವು ವರ್ಷಗಳಿಂದ ಬಂದಿರುವ ಸಂಗತಿಯಾಗಿದೆ. ದೀಪಾವಳಿಯ, ರಂಜಾನ್ ಸಂಧರ್ಭಗಳಲ್ಲಿ ಉಭಯ ದೇಶಗಳ ಸೈನಿಕರು ವೈರತ್ವವನ್ನು ಮರೆತು ಸಿಹಿ ಹಂಚಿಕೊಂಡು ಸಂಭ್ರಮಿಸುವರಂತೆ. ಇದನ್ನು ನಾನು ಕಣ್ಣಾರೆ ಕಂಡಿಲ್ಲವಾದರೂ ಕೆಲವಾರು ಯು-ಟ್ಯೂಬ್ ವಿಡಿಯೋಗಳಲ್ಲಿ ನೋಡಿದ್ದೇನೆ. ಒಂದೊಮ್ಮೆ ನಮ್ಮವರೇ ಆಗಿದ್ದ, ಇದೀಗ ಗಡಿಯಾಚೆಗಿದ್ದು ನಮ್ಮ ಮೇಲೆ ಸದಾ ಕತ್ತಿ ಮಸೆಯುವ, ಅವರ ದೇಶದೊಳಗಿನ ಅನಿಷ್ಟಗಳಿಗೆಲ್ಲ ನಮ್ಮನ್ನೇ ಹೊಣೆಯನ್ನಾಗಿಸುವ ದೇಶದೊಂದಿಗೂ ಸಿಹಿ ಹಂಚಿಕೊಂಡು ಯೋಧರು ಗಡಿಯಲ್ಲಿ ಸಂಭ್ರಮಿಸುತ್ತಾರೆ. ಇದಕ್ಕೆಲ್ಲ ಸಾಕ್ಷಿಯಾಗಿ ನಿಂತಿರುವ ಸ್ಥಳ ಈ ವಾಘಾ-ಅಟ್ಟಾರಿ ಗಡಿ. ಪ್ರತಿ ದಿನವೂ ಬೆಳಗ್ಗೆ ಮತ್ತು ಸಾಯಂಕಾಲ ಇಲ್ಲಿ ನಡೆಯುವ ಧ್ವಜಾರೋಹಣ-ಅವರೋಹಣ ಕಾರ್ಯಕ್ರಮಕ್ಕೆ ಇದುವರೆಗೂ ಕೋಟ್ಯಂತರ ಜನ ಸಾಕ್ಷಿಯಾಗಿದ್ದಾರೆ. ಈಗಾಗಲೇ ಒಮ್ಮೆ ಇಲ್ಲಿಗೆ ಭೇಟಿ ಕೊಟ್ಟಿದ್ದೆ, ಇದು ಎರಡನೇ ಭೇಟಿ ಆದ್ದರಿಂದ ಮೊದಲ ಬಾರಿಯಷ್ಟು ಕುತೂಹಲ ಈ ಬಾರಿ ಇಲ್ಲದೆ ಹೋಗಿದ್ದು ನನ್ನ ಅರಿವಿಗೆ ಬಂದಿತ್ತು.

ಮುಂದೆ ಅಮೃತಸರವನ್ನೂ ಬಿಟ್ಟು ಜಮ್ಮು ಕಾಶ್ಮೀರದ ಪ್ರಮುಖ ಶ್ರದ್ಧಾ ಕೇಂದ್ರ, ನಮ್ಮ ಪ್ರವಾಸದ ಪ್ರಮಖ ಅಜೇಂಡಾ ಶ್ರೀ ಮಾತಾ ವೈಷ್ಣೋದೇವಿ ಕಡೆಗೆ ಹೊರಟು ಮುಂದಿನ ಎರಡು ದಿನಗಳನ್ನು ಅಲ್ಲೇ ಕಳೆದದ್ದಾಯ್ತು. ವೈಷ್ಣೋದೇವಿ ಪ್ರವಾಸದ ಕುರಿತು ನಾನು ಈಗಾಗಲೇ ಬರೆದಿರುವುದರಿಂದ ಅಲ್ಲಿನ ವಿಸ್ಮೃತ ಮಾಹಿತಿಯನ್ನು ಇಲ್ಲಿ ಮತ್ತೊಮ್ಮೆ ಪ್ರಸ್ತಾಪಿಸುವುದಿಲ್ಲ. ಕಳೆದ ಬಾರಿ ಅಲ್ಲಿಗೆ ಭೇಟಿ ಕೊಟ್ಟಾಗಿನ ಒಳ್ಳೆಯ ಅನುಭವಗಳೇ ಮತ್ತೆಯೂ ಮರುಕಳಿಸಿರುವುದರಿಂದ ಅದರ ಕುರಿತು ಮತ್ತೇನು ಹೆಚ್ಚು ಹೇಳುವುದವಶ್ಯವಲ್ಲ ಎನಿಸುತ್ತದೆ. ನನ್ನ ಹಳೆಯ ವೈಷ್ಣೋದೇವಿ ಪ್ರವಾಸ ಕಥನವನ್ನ ನೀವಿಲ್ಲಿ ಓದಬಹುದು.

ನನ್ನ ಕನ್ನಡ ಸಂಘಟನೆಯ ಕಥಾನಕವನ್ನು, ಉತ್ತರ ಭಾರತದ ಪ್ರವಾಸ ಕಥಾನಕವನ್ನು ಇಲ್ಲಿ ಬರೆದಿದ್ದಕ್ಕೆ ಕಾರಣವಿಷ್ಟೇ, 'ಜೀವನ ಎಲ್ಲರಿಗೂ ಕೊಟ್ಟಂತೆ ನನಗೂ ಸುವಿಸ್ತಾರವಾದ, ಸುನೀಲವಾದ ಸಮಯವನ್ನು ಕೊಟ್ಟಿದೆ. ಅದರ ಸದುಪಯೋಗದ ಭಾಗವಾಗಿ ಅನೇಕ ಕ್ಷೇತ್ರ ದರ್ಶನಗಳಿಗೆ ಅವಕಾಶವೂ ಒದಗಿ ಬಂದಿದೆ. ರಾಜ್ಯದೊಳಗೂ, ದೇಶದೊಳಗೂ ತಿರುಗಿ, ಹಲವಾರು ತಾಣಗಳನ್ನು ದರ್ಶಿಸುವಾಗ ಆಗುತ್ತಿರುವದೇನೆಂದರೆ ಅನುಭವದ ಬುತ್ತಿ ಹಿಗ್ಗುತ್ತಿದೆ, ಅದರೊಳಗೆ ಅನೇಕ ವಿಶೇಷ ಜ್ಞಾನಗಳು ಕ್ಷಣ ಕ್ಷಣಕ್ಕೂ ಜನ್ಮ ತಾಳುತ್ತಿವೆ. ಅವುಗಳು ಜೀವನದ ದಿಕ್ಕನ್ನು ಒಂದೇ ಸಮನೆ ಬದಲಿಸಲು ಹವಣಿಸುತ್ತಿವೆ. ಈಗಾಗಲೇ ಕೆಲವು ಬದಲಿಸಿವೆ ಕೂಡ. ಆ ಅನುಭವ ಬುತ್ತಿಯೊಳಗೆ ಭಾಷೆ, ರಾಜ್ಯ, ಧರ್ಮದ ಯಾವ ಕಟ್ಟು ಇಲ್ಲ, ಅಲ್ಲಿರುವುದೆಲ್ಲವೂ ಗ್ರಾಹ್ಯವೇ. ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ ಸಾರ್ವಭೌಮತೆ ದಕ್ಕಬೇಕೆನ್ನುವ ನಾನು ಹೊರಗೆಲ್ಲೋ ಯಾವುದನ್ನೂ ಬೆದಕದೇ ಅನುಭವದ ಬುತ್ತಿಯನ್ನು ಬಿಚ್ಚಿಕೊಂಡು ಅದರೊಳಕ್ಕೆ ಕೆಲವನ್ನು ಸೇರಿಸ್ಕೊಳ್ಳುತ್ತಲೂ, ಕೆಲವನ್ನು ಹಂಚಿಕೊಳ್ಳುತ್ತಲೂ ಇರುತ್ತೇನೆ. '. ಈ ಪ್ರಕ್ರಿಯೆ ಕೇವಲ ನನ್ನಲ್ಲುಂಟಾಗುತ್ತಿದೆ ಎಂದರೆ ನಾನು ಶತ ಮೂರ್ಖನಾಗಬಹುದು, ಇದು ಎಲ್ಲ ಜೀವಿಗಳಿಗೂ ನಿಸರ್ಗ ದತ್ತವಾಗಿ ಬಂದಿದೆ. ಕೆಲವರು ಅದರಾಳಕ್ಕಿಳಿದು ಕೆದಕಿ, ಬೆದಕಿ ಅದನ್ನು ಬರೆದಿಡುತ್ತಾರೆ, ಇನ್ನು ಕೆಲವರು ಅಲ್ಲೇ ಸೆಲ್ಫಿ ಕ್ಲಿಕ್ಕಿಸಿಕೊಂಡು ಅಲ್ಲಿಂದ ಮರಳಿ ಬರುವುದರೊಳಗೆ ಮರೆತು ಹೋಗುತ್ತಾರೆ. ಅಷ್ಟೇನೂ ದೊಡ್ಡದಲ್ಲದ ನನ್ನ ಜೀವನಾನುಭವ ಸದ್ಯಕ್ಕೆ ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿದೆ

ಪ್ರವಾಸ ಪಟ
-o-

ಬುಧವಾರ, ಫೆಬ್ರವರಿ 9, 2022

ವಿಮೋಚನೆಯ ಕವಲುಗಳು

ನಮ್ಮ ದೇಶದಲ್ಲಿ ಇತ್ತೀಚಿಗೆ #MeToo ಎಂಬ ಹ್ಯಾಷ್ ಟ್ಯಾಗ್ ಮುನ್ನೆಲೆಗೆ ಬಂದಿತ್ತು. ಹಿಂದೊಮ್ಮೆ ತಮ್ಮ ಮೇಲೆ ನಡೆದಿದ್ದ ಶೋಷಣೆಗಳನ್ನು ಅದರಲ್ಲೂ ಲೈಂಗಿಕ ಶೋಷಣೆ ಅಥವಾ ಅದಕ್ಕೆ ಸಮೀಪವಾದಂತಿರುವ ಯಾವುದೇ ಶೋಷಣೆಗಳನ್ನು ಹಿಡಿದುಕೊಂಡು ಅನೇಕ ಸ್ತ್ರೀಯರು ಸಾಮಾಜಿಕ ಜಾಲತಾಣಕ್ಕಿಳಿದು ಎಲ್ಲರೊಂದಿಗೂ ಅವುಗಳನ್ನು ಹಂಚಿಕೊಂಡರು. ನಾಚಿಕೆಯಿಂದಲೋ, ಮರ್ಯಾದೆಗಂಜಿಯೋ ಬಲಾತ್ಕಾರಗಳನ್ನು, ಶೋಷಣೆಗಳನ್ನು ಮುಚ್ಚಿಟ್ಟುಕೊಂಡು ನರಳುತ್ತಿದ್ದ ಸ್ತ್ರೀ-ವಲಯ ಭಾರತದಲ್ಲಿ ಮೊಟ್ಟ ಮೊದಲಿಗೆ ಸಾರ್ವಜನಿಕವಾಗಿ ತೆರೆದ ಹೃದಯ, ಮನಸ್ಸುಗಳಿಂದ ಮಾತನಾಡಿತು. ಅಲ್ಲಿಯವರೆಗೂ ಅಲ್ಲಲ್ಲಿ ಭಾಂವ್ರಿ ದೇವಿಯಂತಹ ಶೋಷಿತ ಮಹಿಳೆಯರು ದನಿಯೆತ್ತಿದ್ದರೂ ಅದು ರಾಷ್ಟ್ರೀಯ ಆಂದೋಲನದ ರೀತಿಯಲ್ಲಿ ಬೃಹತ್ತಾಗಿ ಅರಳಿ ನಿಂತುಕೊಳ್ಳಲು ಸಾಧ್ಯವಾಗಿರಲಿಲ್ಲ. ಹಲವಾರು ಸರ್ಕಾರಗಳು ಭಾಂವ್ರಿ ದೇವಿಯಂತಹ ಗಟ್ಟಿಗಿತ್ತಿಯರನ್ನು ಕರೆದು ಸನ್ಮಾನ ಮಾಡಿದ್ದವೇ ಹೊರತು ಆ ನಿಟ್ಟಿನಲ್ಲಿ ಸಂಪೂರ್ಣವಾಗಿ ಕಾರ್ಯೋನ್ಮುಖವಾಗಿರಲಿಲ್ಲ. ವರದಕ್ಷಿಣೆ, ಬಾಲ್ಯ ವಿವಾಹ, ಅತ್ಯಾಚಾರಗಳಂತಹ ಸಾಮಾಜಿಕ ಪಿಡುಗುಗಳ ವಿರುದ್ಧ ಸರ್ಕಾರಗಳು ಕಾಲಕ್ಕೆ ತಕ್ಕ ಕಾನೂನುಗಳನ್ನು ತಿದ್ದುಪಡಿ ಮಾಡಿದವು, ಆ ಮೂಲಕ ಸಮಾಜದೊಳಗೆ ನಡೆಯುವ ಲಿಂಗಾಧಾರಿತ ಶೋಷಣೆಗಳನ್ನು ತಡೆಯಬಹುದು ಎಂಬ ಕಾನೂನು ವಲಯದ ನಿಲುವನ್ನು ದಿಟವಾಗಿಸಲು ಆ ಕಾನೂನುಗಳು ಜಾರಿಗೊಂಡವೂ ಕೂಡ.

ಜಾರಿಗೊಂಡ ಕಾನೂನಿನಡಿ ರಕ್ಷಣೆ ಪಡೆದುಕೊಳ್ಳುವ ಜೊತೆ ಜೊತೆಗೆ ನಾಗರೀಕ ಸಮಾಜ ತಲೆ ತಗ್ಗಿಸುವಂತಹ ರೀತಿಯಲ್ಲಿ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುವವರ ಸಂಖ್ಯೆ ಕೂಡ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಾ ಹೋದದ್ದು ಮಾನವ ಸಮಾಜದ ಕುಟಿಲ ನೀತಿಗಳ ಇನ್ನೊಂದು ಮುಖವೆನ್ನಬೇಕಾಗಬಹುದೇನೋ!. ಸುಳ್ಳು ವರದಕ್ಷಿಣೆ ಕೇಸು, ಸುಳ್ಳು ಅತ್ಯಾಚಾರ ಕೇಸುಗಳು ದಾಖಲಾಗಿ ಅವಮಾನ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ವರ ಅಥವಾ ವರನ ಕಡೆಯ ಕುಟುಂಬಗಳ ಕಥಾನಕಗಳು ಪುಷ್ಟಿ ಕೊಡುತ್ತಿರುವುದೂ ಇದಕ್ಕೆಯೇ. ಸ್ತ್ರೀಯರ ಕುರಿತು ಮೃದು ಧೋರಣೆ ತಳೆದು ಕಾನೂನುಗಳು ರಚಿತಗೊಂಡಿದ್ದರೂ ಕೆಲ ಸ್ತ್ರೀಯರು ಅದಕ್ಕೆ ಹೊರತಾಗಿ ಪುರುಷರನ್ನು ಇಕ್ಕಟ್ಟಿಗೆ ಸಿಲುಕಿಸುವ, ಪುರುಷರ ಆಸ್ತಿ ಪಾಸ್ತಿಗಳನ್ನು ಕಬಳಿಸಿ ಅವರನ್ನು ಬೀದಿಪಾಲು ಮಾಡುವ ಹಗರಣಗಳು ಆಗಿಂದಾಗಲೇ ನಮ್ಮ ನಡುವೆ ನಡೆಯುತ್ತಲೇ ಇವೆ. ಕೆಲವು ವರ್ಷಗಳ ಹಿಂದೆ ಕರ್ನಾಟಕದ ಪೊಲೀಸ್ ಇಲಾಖೆಯ ಅಧಿಕಾರಿಯೊಬ್ಬನ ವಿರುದ್ಧ ಆತನ ಹೆಂಡತಿಯೇ ಸುಳ್ಳು ವರದಕ್ಷಿಣೆ ಕೇಸು ದಾಖಲು ಮಾಡಿ ಆತನ ಇಡೀ ಕುಟುಂಬ ಜೈಲು ಪಾಲಾಗಿ ಅಲ್ಲಿಂದ ಮರಳಿ ಬಂದ ನಂತರ ಆ ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡ ಹಗರಣ ಇನ್ನೂ ನನ್ನ ಸ್ಮೃತಿ ಪಟಲದಲ್ಲಿದೆ. ಕಾನೂನಿನ ದುರ್ಬಳಕೆ ಮಾಡಿಕೊಳ್ಳುವ ಸ್ತ್ರೀಯರ ವಿರುದ್ಧವೂ ಕಠಿಣ ಕಾನೂನು ರೂಪಿಸುವಂತೆ ಒತ್ತಾಯಗಳೂ ಈಗಾಗಲೇ ಕೇಳಿಬರುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ನನ್ನ ಕೈ ಸೇರಿಕೊಂಡಿದ್ದೆ ಎಸ್.ಎಲ್.ಭೈರಪ್ಪನವರ 'ಕವಲು' ಕಾದಂಬರಿ.

ಇಮೇಲ್, ಐಟಿ ರಂಗದ ಆಧುನಿಕ ಕಾಲಘಟ್ಟದ ಕಥಾ ಹಂದರವಿರುವ ಈ 'ಕವಲು' ಸ್ತ್ರೀ-ವಿಮೋಚನೆ, ಸ್ತ್ರೀ-ಹೋರಾಟಗಳು ಉಂಟುಮಾಡುತ್ತಿರುವ ಬದಲಾವಣೆಗಳಿಂದ ಆಗುತ್ತಿರುವ ತೊಂದರೆಗಳ ಮೇಲೆ ಹರಿಯುವ, ನಡುವೆ ನಡುವೆ ಗಂಡು-ಹೆಣ್ಣು ಎಂಬ ಭೇದಕ್ಕಿಂತ ಮಾನವೀಯ ಗುಣಗಳಿಗೆ ಹೆಚ್ಚು ಬೆಲೆ ಕೊಟ್ಟು ಅಲ್ಲಿನ ವ್ಯಾಜ್ಯಗಳಿಗೆ ಪರಿಹಾರ ಸೂಚಿಸಬಹುದೇನೋ ಎನಿಸುವಂತೆ ಮಾಡುವುದು ಸುಳ್ಳಲ್ಲ. ಸ್ತ್ರೀ-ಪರ ಹೋರಾಟಗಾರ್ತಿಯರು ಗಂಡಸೊಬ್ಬನನ್ನು ಮನುಷ್ಯನ ರೀತಿಯೇ ನೋಡದೆ ದುಡಿಯುವ ಯಂತ್ರದಂತೆ, ಆಸ್ತಿ ಸಂಪಾದಿಸುವ ಜೂಜು ಕುದುರೆಯಂತೆ ಕಾಣುವುದು ಕಳೆದ ಕೆಲವು ಶತಮಾನಗಳ ಹಿಂದೆ ಸ್ತ್ರೀಯರ ಮೇಲಾಗುತ್ತಿದ್ದ ಶೋಷಣೆಗಳೇ ಥೇಟ್ ಉಲ್ಟಾ ಹೊಡೆದಿವೆ ಎನಿಸದೆ ಇರಲಾರವು. ಗಂಡೊಬ್ಬನ ಜೀವನದಲ್ಲಿ ಹೆಣ್ಣು ಇರದೇ ಹೋದರೆ ಅವನು ಅನುಭವಿಸುವ ತುಮುಲಗಳು, ಹೆಣ್ಣೊಬ್ಬಳ ಜೀವನದಲ್ಲಿ ಗಂಡೊಬ್ಬನು ಇರದೇ ಹೋದರೆ ಆಕೆ ಅನುಭವಿಸುವ ಯಾತನೆಗಳು ಕಾದಂಬರಿಯಾದಂತ್ಯ ಹರಿಯುತ್ತವೆ. ಹೆಣ್ಣೊಬ್ಬಳ ಜೀವನದಲ್ಲಿ ಅಕ್ರಮವಾಗಿ ಗಂಡೊಬ್ಬ ಪ್ರವೇಶಿಸಿದಾಗ ಆಕೆ ತನ್ನ ಅನುಕೂಲಕ್ಕೋಸ್ಕರ ಕಾನೂನಿನ ಲೋಪದೋಷಗಳನ್ನು ಬಳಸಿಕೊಂಡು ಆತನನ್ನು ಇಕ್ಕಟ್ಟಿಗೆ ಸಿಲುಕಿಸಿ ತಾನು ಸುಖ ಜೀವನ ನಡೆಸುವ ರೀತಿ. ಕೊನೆಗೆ ಸತ್ಯದೆದುರು ಆಕೆ ನಿಲ್ಲಲಾಗದೆ ಕಾಲ್ಕಿತ್ತ ಬಗೆ ಅಮೂಲ್ಯವಾದ ಪಾಠವೊಂದನ್ನು ಜನಮಾನಸಕ್ಕೆ ತಲುಪಿಸುತ್ತವೆ.

ಸುಮಾರು ಮೂರ್ನಾಲ್ಕು ಕುಟುಂಬಗಳ ನಡುವೆ ನಡೆಯುವ ಕೌಟುಂಬಿಕ ಕಥಾನಕವಿರುವ ಈ ಕೃತಿಯಲ್ಲಿ ಔದ್ಯೋಗಿಕ ವಿಚಾರಗಳನ್ನು ಹದವಾಗಿ ಬೆರೆಸಿ ಕೌಟುಂಬಿಕ ಜೀವನದಲ್ಲಿ ಮನಸ್ಸು ಮಾಡಿದಷ್ಟೇ ಸ್ತ್ರೀ ಔದ್ಯೋಗಿಕ ರಂಗದಲ್ಲಿ ಮನಸ್ಸು ಮಾಡಿ ಅಲ್ಲಿ ಕೂಡ ಯಶಸ್ಸನ್ನೂ ತಂದುಕೊಡಬಲ್ಲಳು ಹಾಗೆ ಸರ್ವನಾಶಕ್ಕೂ ಕಾರಣಳಾಗಬಲ್ಲಳು ಎಂಬುದನ್ನು ಭೈರಪ್ಪನವರು ಬಹು ವಿವೇಚನೆಯಿಂದ ವಿವರಿಸಿದ್ದಾರೆ. ಧನಾತ್ಮಕ ದೃಷ್ಟಿಕೋನವಿರುವ ವೈಜಯಂತಿಯ ಪಾತ್ರ, ಋಣಾತ್ಮಕ ದೃಷ್ಟಿಕೋನವಿರುವ ಇಳಾ, ಮಂಗಳೆಯರ ಪಾತ್ರ, ಇವುಗಳ ಮಧ್ಯದಲ್ಲಿ ಸಿಲುಕಿಕೊಂಡ ದೈಹಿಕ, ಮಾನಸಿಕ ಅಸ್ವಸ್ಥೆ ಹುಡುಗಿಯ ಪಾತ್ರ, ಕಾದಂಬರಿಗೆ ತಳಹದಿಯಂತೆ ಕಾಣುತ್ತವೆ. ಕಾದಂಬರಿಯಾದ್ಯಂತ ಕೇಂದ್ರ ಬಿಂದುವಾಗಿರುವ ಜಯಕುಮಾರನ ಪಾತ್ರ, ಜೀವನದ ದಾರಿಯೊಳಗೆ ಎಡವುವ ಆತ ಅನುಭವಿಸುವ ಧೀರ್ಘ ಕಾಲೀನ ಯಾತನೆಗಳು ಮನುಷ್ಯ ಕ್ಷಣಿಕ ಸುಖಕ್ಕೆ ಮಾರುಹೋದರೆ ಪಡಬೇಕಾದ ಕಷ್ಟಗಳ ಕುರಿತಾಗಿ ಎಚ್ಚರಿಸುವಂತೆ ಕಂಡರೂ ಕಾದಂಬರಿಯ ಉದ್ದೇಶ ಅದನ್ನು ಓದುಗರಿಗೆ ತಲುಪಿಸುವುದಲ್ಲ ಎನಿಸುತ್ತದೆ.

ವಿದೇಶದಲ್ಲಿ ವಿದ್ಯೆ ಕಲಿತ ಹೆಣ್ಣು ಮಗಳೊಬ್ಬಳು ಆ ದೇಶದಲ್ಲಿ ತನ್ನ ಸುತ್ತಲಿನ ದಿನ ಮಾನದ ಬದುಕನ್ನು, ಅಲ್ಲಿನ ಯುವಕ-ಯುವತಿಯರ ತೆರೆದ ಮನಸ್ಸಿನ ಒಡನಾಟವನ್ನು ಗಮನಿಸುತ್ತಾಳೆ. ಯಾರ ಒತ್ತಾಸೆಯೂ ಇಲ್ಲದೆ ತನಗೊಪ್ಪಿದ ಸಂಗಾತಿಯನ್ನು ಆಯ್ದುಕೊಳ್ಳುವ, ತನಗೊಪ್ಪದಿದ್ದಾಗ ಸಂಗಾತಿಯನ್ನು ವರ್ಜಿಸುವ ಸ್ವಾತಂತ್ರ್ಯ ಆಕೆಗೆ ಪರಿಪೂರ್ಣ ಸ್ವಾತಂತ್ರ್ಯದಂತೆ ಕಾಣುತ್ತದೆ. ತತ್ಸಮಯಕ್ಕೆ ಭಾರತೀಯ ಸಾಂಸಾರಿಕ ಮೌಲ್ಯಗಳು ಆಕೆಗೆ ಸಂಸ್ಕಾರ, ಸಂಸ್ಕೃತಿಯ ಒರಳುಗಳಿಗೆ ಕಟ್ಟಿದ ಬಂಧನದ ಸಂಸಾರದಂತೆ ಕಾಣುತ್ತವೆ. ಸ್ತ್ರೀ ಸ್ವಾತಂತ್ರ್ಯವೆಂದರೆ ಒಂದರ್ಥದಲ್ಲಿ ಈ ನೆಲದ ಯಾವುದಕ್ಕೂ ಸೊಪ್ಪು ಹಾಕದೆ ಪರದೇಶದಿಂದ ಎರವಲು ತಂದ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಎಂಬ ಭ್ರಮೆಗೆ ಆಕೆ ಬೀಳುತ್ತಾಳೆ. ಆದರೆ ಆ ಪರದೇಶದಲ್ಲಿ ಮದುವೆಯಾದ ನಂತರ ಕುಂಟು ನೆಪಗಳ ಮೂಲಕವೇ ಸಾಂಸಾರಿಕ ಬಂಧಗಳನ್ನು ಕಡಿದುಕೊಂಡು ಬೀದಿಪಾಲಾದ, ತಾವು ಹೆತ್ತ ಮಕ್ಕಳನ್ನು ಅನಾಥರನ್ನಾಗಿಸಿದ ಅಸಂಖ್ಯ ಉದಾಹರಣೆಗಳು ಆಕೆಯ ಕಣ್ಣಿಗೆ ಬಡಿಯುವುದೇ ಇಲ್ಲ. ಅಲ್ಲಿನ ಪದವಿಯನ್ನು ಗಿಟ್ಟಿಸಿಕೊಂಡು ಭಾರತಕ್ಕೆ ಬಂದಿಳಿಯುವ ಆಕೆ ಅಧ್ಯಾಪಕಿ ವೃತ್ತಿಯನ್ನು ಹಿಡಿಯುತ್ತಾಳೆ. ಕಾಲೇಜಿನ ತರಗತಿಗಳ ಒಳಗೆ ಇಂಗ್ಲೀಷ್ ಭಾಷೆಯ ಪಾಠಗಳೊಂದಿಗೆ ಆಕೆ ಪರದೇಶದಲ್ಲಿ ಕಂಡಿದ್ದ ಸತ್ಯಾಂಶಗಳನ್ನು ತನ್ನ ಧೋರಣೆಗಳೊಂದಿಗೆ ಬೆರೆಸಿ ವಿದ್ಯಾರ್ಥಿಗಳಿಗೆ ತಿಳಿಸುತ್ತಾಳೆ. ಸ್ತ್ರೀ ಸಮಾನತೆಗಿಂತಲೂ ಸ್ತ್ರೀ ಸ್ವಾತಂತ್ರ್ಯ ಮತ್ತಷ್ಟು ಪ್ರಮಾಣ ಹೆಚ್ಚಬೇಕೆನ್ನುವುದೇ ಆಕೆಯ ಅಂಬೋಣದಂತೆ ತೋರುತ್ತದೆ.

ವಿರುದ್ಧ ಲಿಂಗಿಗಳ ಕುರಿತಾಗಿ ಸಹಜ ಕುತೂಹಲವಿರುವ ವಯೋಮಾನದ ವಿದ್ಯಾರ್ಥಿಗಳ ಮುಂದೆ ವಿದೇಶದಲ್ಲಿ ವಿದ್ಯೆ ಕಲಿತು ಬಂದು ಹೊಸ ತತ್ವವನ್ನು ವದರಿದ ಅಧ್ಯಾಪಕಿಯ ನಡೆ ಅಲ್ಲಿನ ವಿದ್ಯಾರ್ಥಿಗಳಲ್ಲಿ ವಿಮರ್ಶೆಗೊಳಪಡುತ್ತದೆ. ಜೀವನದಲ್ಲಿ ಇದು ಸಹಜ ಸಾಧು ಎಂದು ಪರಿಭಾವಿಸುವ ಒಬ್ಬಳು ಹುಡುಗಿ ಈ ತತ್ವಗಳನ್ನು ತನ್ನ ಜೀವನದೊಳಗೆ ಅಳವಡಿಸಿಕೊಳ್ಳುವ ಧೈರ್ಯ ಮಾಡಿ ಮುನ್ನುಗ್ಗುತ್ತಾಳೆ. ಇದಾದ ತರುವಾಯು ಆ ಅಧ್ಯಾಪಕಿಯ ನಿಜ ಜೀವನವೇ ಆಕೆಯ ತತ್ವಗಳಿಗೆ ತದ್ವಿರುದ್ಧವಾಗಿರುವುದು ತಿಳಿದು ವಿವಾಹಬಂಧನದಿಂದ ಅಧ್ಯಾಪಕಿ ಹೊರನಡೆಯುತ್ತಾಳೆ. ಹಾಗಿದ್ದರೂ ಕಾನೂನಿನ ಲೋಪ ದೋಷಗಳ ಬಲೆಯೊಳಗೆ ತನ್ನ ಮಾಜಿ ಪತಿಯನ್ನು ಕೆಡವಲು ನಾನಾ ಸಂಚು ರೂಪಿಸುತ್ತಾಳೆ. 'ತಾನೊಂದು ಬಗೆದರೆ ದೈವವೊಂದು ಬಗೆಯುತ್ತದೆ' ಎನ್ನುವಂತೆ ಆಕೆಯೇ ವಿವಾದದ ಕುಣಿಕೆಯೊಳಗೆ ಸಿಕ್ಕಿ ಬೀಳುತ್ತಾಳೆ. ನಿಸರ್ಗ ಸಹಜವಾದ ಬಯಕೆಗಳನ್ನು ಹತ್ತಿಕ್ಕಿ ತತ್ವಗಳ ಬಾಲ ಹಿಡಿಯುತ್ತಾ ದಾಂಪತ್ಯ ಜೀವನದಲ್ಲಿ ಬೇಕೆಂತಲೇ ವಿರಸವುಂಟು ಮಾಡಿಕೊಂಡಿದ್ದ ಆಕೆಯ ಜೀವನಕ್ಕೆ ಮನೋಕಾಮನೆಗಳನ್ನು ಪೂರ್ಣಗೊಳಿಸುವ ಇನಿಯನೊಬ್ಬ ಸಿಗುತ್ತಾನೆ. ಈ ಅಕ್ರಮ ನಂಟೇ ಆಕೆಯ ಮಾಜಿ ಪತಿಗೆ ಬಲವಾದ ಸಾಕ್ಷಿಯಾಗಿ ದೊರೆತು ಆತ ಆ ಕೇಸಿನಿಂದ ನಿರಾಯಾಸವಾಗಿ ಮುಕ್ತನಾಗುತ್ತಾನೆ.

ಇತ್ತ ಅಧ್ಯಾಪಕಿಯ ತತ್ವದಿಂದ ಪ್ರಭಾವಿತಳಾದ ಆಕೆಯ ವಿದ್ಯಾರ್ಥಿನಿಯೂ ಕೂಡ ವಿವಾಹವಲ್ಲದ ಅಕ್ರಮ ನಂಟಿನ ಮೂಲಕವೇ ಗಂಡೊಬ್ಬನ ಮನೆ ಸೇರಿ ಕಾನೂನಿನ ನೆಪವನ್ನು ಅಡ್ಡಹಿಡಿದು ಆತನ ಹೆಂಡತಿ ಎನಿಸಿಕೊಳ್ಳುತ್ತಾಳೆ. ಅಲ್ಲಿ ಆ ಗಂಡಸು ಮತ್ತು ಆತನ ತೀರಿಹೋದ ಮೊದಲ ಹೆಂಡತಿಯ ಮಗಳು ಪಡುವ ಪಡಿಪಾಟಲು 'ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ'ದಂತೆ ಕಂಡರೂ ಅಡಿಕೆಗೆ ಹೋದ ಮಾನಕ್ಕೆ ಆನೆಯನ್ನು ದಂಡವಾಗಿ ಕಟ್ಟುವ ಇರಾದೆಯಂತೆ ತೋರ ಹತ್ತುತ್ತದೆ. ಅಂತೂ ಆ ಕಷ್ಟ ಕೋಟಲೆಗಳಲ್ಲಿ ಬಹು ಧೀರ್ಘ ಕಾಲ ಸವೆದ ಆತನೂ ಮನೆಗೆಲಸದವಳು ನೀಡುವ ಸಣ್ಣ ಸಾಕ್ಷಿಯೊಂದರಿಂದ ನಿರಾಯಾಸವಾಗಿ ಪಾರಾಗುತ್ತಾನೆ. ಆಸ್ತಿಗಾಗಿ, ಸುಖಭೋಗಕ್ಕಾಗಿ ಆತನನ್ನು ಕಾಡಿದ ಆಕೆಯ ನಿಜ ಬಣ್ಣ ಪ್ರಪಂಚದೆದುರು ಬಿತ್ತರವಾದಾಗ ಆಕೆ ಮರು ಮಾತಾಡದೆ ನಡೆದುಬಿಡುತ್ತಾಳೆ!. ಕಾದಂಬರಿ ಸುಖಾಂತ್ಯವಾಗುತ್ತದೆ.

ಪ್ರಕೃತಿಯನ್ನು ದಿಕ್ಕರಿಸಿ ತತ್ವಗಳಿಗೆ ಮಾರುಹೋಗಿ ಬದುಕಬೇಕಾದರೆ ಪ್ರಬಲ ಮನೋಶಕ್ತಿ ಅವಶ್ಯವಾಗುತ್ತದೆ, ಇಲ್ಲಿನ ಕಾದಂಬರಿಯಲ್ಲೂ ಇಳೆ, ಮಂಗಳೆಯರು ಅನುಸರಿಸಿದ ತತ್ವ ಪಾಲನೆಗೆ ಭಯಂಕರವೆನಿಸುವಂತಹ ಮನೋ ನಿಗ್ರಹವಿರಬೇಕಾಗಿತ್ತು. ಆದರೆ ಅದು ಹಾಗಿರದೆ ಹೋದುದಕ್ಕೆ ಅವರ ತತ್ತ್ವ ಪಾಲನೆ ವಿಫಲವಾಯಿತೆನ್ನಬಹುದು. ತಮ್ಮ ತತ್ವಗಳು ವಿಫಲ ದಾರಿಯನ್ನಿಡಿದಾಗ ಮತ್ತೊಬ್ಬರನ್ನು ಕಾಡಿದ ಅವರೀರ್ವರ ಬಗೆಯಂತೂ ಅನುಕರಣಾರ್ಹವಲ್ಲ. ಅಲ್ಲಿ ಬಿದ್ದು ನರಳಿದ ಜೀವಗಳು ಓದುಗರಿಗೆ ದಾಟಿಸುವ ಪಾಠಗಳಂತೂ ಅನೇಕ.

-o-

ಭಾನುವಾರ, ಆಗಸ್ಟ್ 15, 2021

ಭರ್ಜಿ ಬೀಸಿ ಬಂಗಾರ ಗೆದ್ದರು

2021ರ ಆಗಸ್ಟ್ ತಿಂಗಳು ಆರಂಭದಿಂದಲೂ ಭಾರತಕ್ಕೆ ಕೆಲವು ಧನಾತ್ಮಕ ಕೆಲವು ಋಣಾತ್ಮಕ ಅನುಭವಗಳಾಗುವುದಕ್ಕೆ ತೊಡಗಿತು. ತಿಂಗಳ ಮೊದ ಮೊದಲೇ ಪೆಗಾಸಿಸ್, ರೈತ ಕಾಯ್ದೆ ಕುರಿತ ಹೋರಾಟಗಳನ್ನು ಹಿಡಿದುಕೊಂಡು ವಿಪಕ್ಷಗಳು ಸಂಸತ್ ನಲ್ಲಿ ಗದ್ದಲವೆಬ್ಬಿಸಿದವು. ಅಷ್ಟಲ್ಲದೇ ಕೇರಳ, ಮಹಾರಾಷ್ಟ್ರಗಳಲ್ಲಿ ಕೋವಿಡ್ ನ ಡೆಲ್ಟಾ ಮಾದರಿಯ ವೈರಾಣು ಭಾರಿ ಸದ್ದು ಮಾಡಹತ್ತಿತು. ಅತ್ತ ಭಾರತದ ಹೊರಗೆ ಮಿತ್ರ ರಾಷ್ಟ್ರ ಆಫ್ಘಾನಿಸ್ತಾನ ತಾಲಿಬಾನಿಗಳ ವಶವಾಗುವುದಕ್ಕೆ ತೊಡಗಿತು. ಇಷ್ಟೆಲ್ಲಾ ಇರುಸು ಮುರುಸುಗಳ ನಡುವೆ ಭಾರತಕ್ಕೆ ಆಗಾಗ್ಗೆ ಜಪಾನಿನ ಟೋಕಿಯೋದಿಂದ ಪದಕ ಗೆದ್ದ ಸುದ್ದಿ ಬರುತ್ತಲೇ ಇತ್ತು. ಭಾರತ ಈ ಹಿಂದೆ ಎಂದೂ ಪಡೆದಿಲ್ಲದಷ್ಟು ಪದಕಗಳನ್ನು ಪಡೆದು ಬೀಗಿತು.

ಆಗಸ್ಟ್ 7ರಂದು ಅಂತೂ ಭಾರತ ಕುಣಿದು ಕುಪ್ಪಳಿಸಿಬಿಟ್ಟಿತು. ಭಾರತಕ್ಕೆ ಟ್ರಾಕ್ ಅಂಡ್ ಫೀಲ್ಡ್ ವಿಭಾಗದಲ್ಲಿ ಮೊಟ್ಟ ಮೊದಲ ಬಂಗಾರದ ಪದಕ ಲಭಿಸಿತು. ಈ ಹಿಂದೆ ಒಂಭತ್ತು ಬಂಗಾರದ ಪದಕಗಳು ಬಂದಿದ್ದರೂ ಅವುಗಳಲ್ಲಿ ಬರೋಬ್ಬರಿ ಎಂಟು ಬಂಗಾರದ ಪದಕಗಳು ಹಾಕಿ ಆಟದಿಂದ ಬಂದವುಗಳು ಹಾಗು ವಯ್ಯಕ್ತಿಕವಾಗಿಲ್ಲದ್ದಾಗಿದ್ದವು. 2008ರಲ್ಲಿ ಬೀಜಿಂಗ್ ನಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಶೂಟಿಂಗ್ ವಿಭಾಗದಲ್ಲಿ ಭಾರತಕ್ಕೆ ಮೊಟ್ಟ ಮೊದಲ ವಯ್ಯಕ್ತಿಕ ಮಟ್ಟದ ಬಂಗಾರದ ಪದಕ ಲಭಿಸಿತು. ಅದರ ನಂತರ ಭರ್ಜಿ ಎಸೆತದಲ್ಲಿ ಭಾರತಕ್ಕೆ ಈ ಬಾರಿಯ ಬಂಗಾರದ ಪದಕ ಲಭಿಸಿದೆ. ಭಾರತ ಖುಷಿಯಾಗಿದೆ. ಆ ಖುಷಿಯ ನಡುನಡುವೆ ಭಾರತೀಯರನೇಕರ ಕ್ರೀಡೆಯ ಬಗೆಗಿನ ಮನೋಧೋರಣೆಯೂ ಬದಲಾಗುವ ಕಾಲ ಸನ್ನಿಹಿತವಾಗಿದೆ, ಅದು ವ್ಯಕ್ತವಾಗುತ್ತಿದೆ ಕೂಡ.

ಟೋಕಿಯೋದ ಕ್ರೀಡಾ ಭೂಮಿಕೆಯಲ್ಲಿ ಭಾರತದ 23ರ ಹರಯದ ನೀರಜ್ ಚೋಪ್ರಾ ಬಂಗಾರದ ಪದಕಕ್ಕೆ ಮುತ್ತಿಕ್ಕಿದ್ದೆ ತಡ ಭಾರತದ ಮಾಧ್ಯಮಗಳು, ಜಾಲತಾಣಗಳು ನೀರಜ್ ಚೋಪ್ರಾರ ವಯ್ಯಕ್ತಿಕ ಮಾಹಿತಿಗಳನ್ನು ಕೆದಕಿ ತೆಗೆಯಲು ಮೊದಲಾದರು. ಭರ್ಜಿ ಎಸೆತ ಎಂಬ ಕ್ರೀಡೆಯೊಂದಿದೆ ಎಂಬುದು ಗೊತ್ತಿಲ್ಲದವರೂ ತಮ್ಮ ವಾಟ್ಸಾಪಿನ, ಫೇಸ್ ಬುಕ್ಕಿನ ಸ್ಟೇಟುಸ್ಸುಗಳಲ್ಲಿ ಆ ಕುರಿತು ಬರೆದುಕೊಂಡರು, ಸಂತಸ ಹಂಚಿಕೊಂಡರು. ಕ್ರಿಕೆಟ್ಟಿಗಾಗಿ ತಲೆ ಹುಯಿಸಿಕೊಂಡು ಟಿವಿ ಮುಂದೆ ಕೂರುವ, ರಾಷ್ಟ್ರೀಯ-ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳು ನಡೆಯುವಾಗ ಕೈ ಕೈ ಹಿಚುಕಿಕೊಳ್ಳುತ್ತಾ ಕಾತುರದಿಂದ ಫಲಿತಾಂಶಕ್ಕಾಗಿ ಕಾಯುವ ಭಾರತ ಮೊಟ್ಟ ಮೊದಲಿಗೆ ಕ್ರಿಕೆಟ್ಟೇತರ ಕ್ರೀಡೆಯನ್ನು ಸೂಕ್ಷ್ಮವಾಗಿ ಗಮನಿಸತೊಡಗಿತ್ತು. ಅದೂ ಒಲಿಂಪಿಕ್ಸ್ ಅಲ್ಲಿ ಆ ಕ್ರೀಡೆ ಮುಗಿದು ಭಾರತಕ್ಕೆ ಬಂಗಾರ ಎಂಬ ಫಲಿತಾಂಶ ಅಲ್ಲಿನ ಬೋರ್ಡುಗಳಲ್ಲಿ ಅನುರಣಿಸಿದಾಗಲೇ!

ಈಗ್ಗೆ ಕೆಲವು ವರ್ಷಗಳವರೆಗೂ ಭಾರತದ ಜನಗಳನ್ನು ಬಿಡಿ, ಸರ್ಕಾರವೇ ಕ್ರೀಡೆಗಳ ಕಡೆಗೆ ಗಮನ ಕೊಡಲು ತಯಾರಿರಲಿಲ್ಲ. ಅದು ಸರ್ಕಾರದ ತಪ್ಪು ಎಂದುಬಿಡಲಾಗುವುದಿಲ್ಲ, ಕ್ರೀಡೆಗೂ ಮೀರಿದ ಅನೇಕ ಆದ್ಯತೆಗಳು ಸರ್ಕಾರದ ಮುಂದಿದ್ದವು. ಆದಾಗ್ಯೂ ಕ್ರೀಡೆಗೊಂದು ಪ್ರಾಧಿಕಾರ ಮಾಡಿ, ಯುವಜನ, ಕ್ರೀಡಾ ಸಚಿವಾಲಯವನ್ನು ಸ್ಥಾಪಿಸಿ ಅದಕ್ಕೆಂತಲೇ ಮಂತ್ರಿಯೊಬ್ಬರನ್ನು ಕುಳ್ಳಿರಿಸಿದ್ದರೂ ಆ ಕುರಿತಾದ ಕರಾರುವಕ್ಕಾದ ನಿಲುವು ಯಾರಲ್ಲೂ ಇರಲಿಲ್ಲ. ಮುಂದುವರೆದ ದೇಶಗಳ ರೀತಿ ವೃತ್ತಿಪರ ಕ್ರೀಡೆ ಭಾರತದಲ್ಲಿ ಕನಸಿನ ಮಾತಾಗಿದೆ. ನಮ್ಮ ಶಾಲೆ, ಕಾಲೇಜು, ವಿಶ್ವ ವಿದ್ಯಾಲಯಗಳ ಆಟದ ಬಯಲುಗಳು ಓದುವ ವಿದ್ಯಾರ್ಥಿಗಳಿಗಷ್ಟೇ ಸೀಮಿತ ಎಂಬಂತಾಗಿವೆ. ಓದಿದ ನಂತರ ಉತ್ತಮ ಆದಾಯದ ನೌಕರಿ ಹಿಡಿಯುವುದು ಎಲ್ಲರ ಕನಸೂ ಹೌದು. ನಮ್ಮ ಸುತ್ತಲೂ ಶಾಲೆ, ಕಾಲೇಜು ಓದುತ್ತಿದ್ದಾಗ ಅನೇಕ ಕ್ರೀಡೆಗಳಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಆಡಿ ಬಂದವರು ಓದು ಮುಗಿದ ನಂತರ ದೊಡ್ಡ ಮೊತ್ತದ ಪಗಾರ ಬರುವ ನೌಕರಿ ಹಿಡಿದಿಲ್ಲವೇನು!. ಹೀಗಾದರೆ ಆ ವಿದ್ಯಾ ಸಂಸ್ಥೆಗಳು ವಿದ್ಯಾರ್ಥಿಗಳ ಅಭ್ಯುದಯಕ್ಕೆಂದು ಮೀಸಲಿಟ್ಟಿದ್ದ ಆಟದ ಬಯಲುಗಳ ನಿಜವಾದ ಉಪಯೋಗವಾದರೂ ಏನು? ಉಪಯೋಗವಿದ್ದರೂ ಅದು ದೇಶಿಯ ಮಟ್ಟದಲ್ಲಿ ಪ್ರಕಟಗೊಳ್ಳುತ್ತಿಲ್ಲವಲ್ಲ!. ಇದು ಸ್ವಲ್ಪ ಯೋಚಿಸಬೇಕಾದ ವಿಚಾರ ಅಲ್ಲವೇನು?.

ನೀರಜ್ ಚೋಪ್ರಾ ಬಂಗಾರದ ಪದಕವನ್ನು ಕೊರಳಿಗೆ ಪೇರಿಸಿಕೊಂಡಿದ್ದೆ ತಡ ಮೊದಲೇ ಹೇಳಿದಂತೆ ಭಾರತದ ಯುವಜನತೆ ಭರ್ಜಿ ಎಸೆತದ ಗುಂಗಿನಲ್ಲಿ ತೇಲಿತು. ಇನ್ನೊಂದೆರಡು ಮೂರು ವರ್ಷಗಳ ಕಾಲ ಭರ್ಜಿ ಎಸೆತಕ್ಕೆಂದು ಭರ್ಜಿಗಳನ್ನು ಕೊಳ್ಳುವವರ ಸಂಖ್ಯೆ ನೂರಿನ್ನೂರು ಪ್ರತಿಶತ ಹೆಚ್ಚಾದರೂ ಆಗಬಹುದು, ಭಾರತದಲ್ಲಿ ಭರ್ಜಿಗಳಿಗೆ ಇನ್ನಿಲ್ಲದ ಬೇಡಿಕೆ ಉಂಟಾಗಬಹುದು. ಭಾರತದ ಯುವಜನತೆಯನ್ನು ನಿಜವಾಗಲೂ ಸೆಳೆದದ್ದು ಬಂಗಾರದ ಪದಕವಲ್ಲ, ಬದಲಾಗಿ ಬಂಗಾರದ ಪದಕ ಗೆದ್ದ ತರುವಾಯೂ ಆ ವ್ಯಕ್ತಿಗೆ ಸಂದ ಗೌರವ, ಜಾಲತಾಣಗಳು, ಮಾಧ್ಯಮಗಳು ಆತನನ್ನು ಮೆರೆಸಿದ ರೀತಿ, ಸರ್ಕಾರದ ಹಾಗು ಸರ್ಕಾರೇತರ ಸಂಸ್ಥೆಗಳಿಂದ ಘೋಷಿಸಲ್ಪಟ್ಟ ಪ್ರಶಸ್ತಿಗಳು. ಸೆಳೆತ ಯಾವುದಾದರೂ ಇರಲಿ ಕ್ರಿಕೆಟ್ಟೇತರ ಕ್ರೀಡೆಯತ್ತ ಜನರ ಗಮನವನ್ನು ಆ ವ್ಯಕ್ತಿ ಸೆಳೆದದ್ದು ಮಾತ್ರ ಅನೂಹ್ಯವಾದದ್ದು. ಸದಾ ಕಾಲ ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವ ತಮ್ಮ ಮಕ್ಕಳನ್ನು ಕಂಡರೆ ಮೂಗು ಮುರಿಯುವ, ಓದಿನ ಕಡೆಗೆ ಮಾತ್ರ ಗಮನವೀಯಬೇಕೆಂದು ಬಡಬಡಿಸುವ ಪೋಷಕ ವರ್ಗವೂ ಕಣ್ತೆರೆದು ಟೋಕಿಯೋದತ್ತ ನೋಡಿದ್ದಂತೂ ಸಾಮಾಜಿಕ ಬದಲಾವಣೆಗೆ ನಾಂದಿಯಾಗುವದರಲ್ಲಿ ಯಾವುದೇ ಸಂಶಯವಿಲ್ಲದಂತಾಗಿತ್ತು.ಆಗಸ್ಟ್ 7ರ ನಂತರ ಭಾರತೀಯ ಪೋಷಕರನೇಕರಲ್ಲಿ ವಿಚಾರಿಸಿದಾಗ ಸುಮಾರು 70 ಪ್ರತಿಶತಕ್ಕೂ ಹೆಚ್ಚು ಜನ ಕ್ರಿಕೆಟ್ಟಲ್ಲದ ಕ್ರೀಡಾ ಕ್ಷೇತ್ರವನ್ನು ನಮ್ಮ ಮಗ/ಮಗಳು ಆಯ್ದುಕೊಳ್ಳುವುದಾದರೆ ನಮ್ಮದೇನು ಅಭ್ಯಂತರವಿಲ್ಲ ಎಂದಿದ್ದಾರಂತೆ. ಭಾರತದ ಸ್ವಾತಂತ್ರ್ಯಕ್ಕೆ 74 ತುಂಬಿದ ಹೊತ್ತಿನಲ್ಲಾದರೂ ಭಾರತ ಹೊಸ ಯೋಚನೆಯೊಂದರೆಡೆಗೆ ಹೊರಳಿಕೊಳ್ಳುತ್ತಿರುವುದು ಸ್ವಾಗತಾರ್ಹ ಸಂಗತಿ.

ಒಲಿಂಪಿಕ್ಸ್ ನಲ್ಲಿ ಭಾರತ ಪ್ರತೀ ಬಾರಿಯೂ ಕಳಪೆ ಸಾಧನೆ ತೋರುವುದೇಕೆ ಎಂಬುದಕ್ಕೆ ಹಲವಾರು ಕಾರಣಗಳಿವೆ. ದೇಶಿಯ ಆರ್ಥಿಕ ಪರಿಸ್ಥಿತಿ, ಕ್ರೀಡೆಯಲ್ಲಿ ತೊಡಗಿಸಿಕೊಂಡ ಮಕ್ಕಳು ವಯ್ಯಕ್ತಿಕ ಜೀವನದ ಆರ್ಥಿಕ ವಿಚಾರಗಳಲ್ಲಿ ಕುಂಟಿತರಾಗುತ್ತಾರೆ ಎಂಬ ಪೋಷಕರ ಭಾವನೆ, ಸರ್ಕಾರದಿಂದ ತೀರಾ ಅಲಕ್ಷ್ಯಕ್ಕೆ ಒಳಗಾದ ಕ್ಷೇತ್ರ ಕ್ರೀಡಾ ಕ್ಷೇತ್ರ, ನಿರುದ್ಯೋಗಿಗಳಾಗಿದ್ದರೂ ಕ್ರೀಡಾ ಕ್ಷೇತ್ರವನ್ನು ವೃತ್ತಿಪರ ಕ್ಷೇತ್ರವಾಗಿ ತೆಗೆದುಕೊಳ್ಳಲು ಹಿಂಜರಿಯುವ ಯುವಜನತೆ, ಕ್ರೀಡೆಗೆ ಬೇಕಾದ ಜ್ಞಾನ, ಸವಲತ್ತುಗಳು ಇಲ್ಲದಿರುವುದು. ಹೀಗೆ ಕಾರಣಗಳ ಪಟ್ಟಿ ಬೆಳೆಯುತ್ತಾ ಸಾಗುತ್ತದೆ. 'ದಂಡಿಗೆ ಹೆದರದ, ದಾಳಿಗೆ ಹೆದರದ' ಭಾರತಕ್ಕೆ ಈ ಕಾರಣಗಳ ಪಟ್ಟಿ ಯಾವ ಮಹಾ ತಡೆಯೂ ಅಲ್ಲ. ಭಾರತ ದೇಶ ಮೈಕೊಡವಿಕೊಂಡು ನಿಲ್ಲ ಬೇಕಿದೆ ಅಷ್ಟೇ. ದೇಶ ನಿಲ್ಲಬೇಕಿದೆ ಎಂದರೆ ಅರ್ಥ ಇಲ್ಲಿನ ಜನರಲ್ಲಿ ಆ ಕುರಿತಾದ ಸ್ಪಷ್ಟವಾದ ಅರಿವು ಉಂಟಾಗಬೇಕಿದೆ. ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಭರ್ಜಿ ಬೀಸಿ ಬಂಗಾರ ಸೆಳೆದ ನೀರಜ್ ಚೋಪ್ರಾ ಆ ಸ್ಪಷ್ಟವಾದ ಅರಿವಿಗೆ ದಾರಿ ದೀವಿಗೆಯಂತೆ ನಿಲ್ಲಲಿದ್ದಾರೆ. ಕ್ರೀಡೆಯೊಂದೇ ಅಲ್ಲ ಕುಂಟುತ್ತಿರುವ ಇನ್ನಿತರ ಕ್ಷೇತ್ರಗಳತ್ತ ಭಾರತದ ಯುವಜನತೆ ಮನಸ್ಸು ಮಾಡಬೇಕಿದೆ. ಹಣಕಾಸಿನ ವಿಚಾರದಲ್ಲಿ ಸಬಲಗೊಂಡಿರುವ ನಮ್ಮ ದೇಶದ ನಾಗರೀಕರು ತಮ್ಮ ಮಕ್ಕಳನ್ನು ಆದಾಯ ಗಳಿಸುವ ಕ್ಷೇತ್ರಗಳನ್ನು ಬಿಟ್ಟು ಕ್ರೀಡೆ, ಸೇನೆ, ವೈಜ್ಞಾನಿಕ ಸಂಶೋಧನೆಗಳಂತಹ ಸ್ವಂತ ಆದಾಯಕ್ಕೆ ಆದ್ಯತೆಯಿಲ್ಲದ, ದೇಶದ ಭವಿಷ್ಯದಲ್ಲಿ ಯತ್ಕಿಂಚಿತ್ತಾದರೂ ಸಹಾಯವಾಗುವ ಕ್ಷೇತ್ರಗಳೆಡೆಗೆ ಹೊರಡಿಸಬೇಕು. "ನಾವಂತೂ ಓದಲಿಲ್ಲ, ನಮ್ಮ ಮಕ್ಕಳಾದರೂ ಓದಲಿ ಅಂತಾ ಓದಿಸಿದ್ವಿ" ಎನ್ನುವಂತಹ ಭಾವನಾತ್ಮಕ ಮಾತುಗಳಿಂದ ದೂರ ಬಂದು ವರ್ತಮಾನದ ಸತ್ಯಗಳನ್ನು ಅರಿತುಕೊಳ್ಳುತ್ತಾ ಸಾಗುವುದು ಸೂಕ್ತವೆನಿಸುತ್ತದೆ.

-o-

ಶನಿವಾರ, ಜುಲೈ 17, 2021

ಅಭಿಮಾನವನ್ನೂ ಜಮಾಯ್ಸಿಬಿಡೋದೆ!

ಕೆಲವರ ಮೇಲೆ ಅಭಿಮಾನ ವ್ಯಕ್ತ ಪಡಿಸಿದರೆ ಕೆಲವರಿಗೆ ಅದು ಅಂಧ ಭಕ್ತಿಯಂತೆ ಕಾಣುತ್ತದೆ, ಇನ್ನು ಕೆಲವರಿಗೆ ಜಾಣ ಕುರುಡುತನದಂತೆ ಕಾಣುತ್ತದೆ. ಈಗೀಗ ಸಾಮಾಜಿಕ ಜಾಲ ತಾಣದಲ್ಲಿ ನಡೆಯುತ್ತಿರುವ ದಿನ ಬೆಳೆಗಿನ ರಾಜಕೀಯ ಗಲಾಟೆಗಳಲ್ಲಂತೂ ಇದು ಮೇರೆ ಮೀರಿದೆ ಎನ್ನಬೇಕೇನೋ!. ದೇಶದ ಬಲಪಂಥೀಯ ರಾಜಕಾರಣ ಅನುಯಾಯಿಗಳನ್ನು ಭಕ್ತರೆಂತಲೂ, ಎಡ ಪಂಥೀಯ ರಾಜಕೀಯ ಅನುಯಾಯಿಗಳನ್ನು ಗುಲಾಮರೆಂತಲೂ ಒಬ್ಬರ ಮೇಲೆ ಒಬ್ಬರು ಕೆಸರು ಎರಚಾಡಿಕೊಳ್ಳುತ್ತಿರುವುದು ಮಾಮೂಲಿನ ಸಂಗತಿಯಾಗಿದೆ. ಸದ್ಯ ಎಡವೂ ಅಲ್ಲದ, ಬಲವೂ ಅಲ್ಲದ ಮಧ್ಯ ಪಂಥದವರಿಗೆ ಹಾಗು ಪಂಥಾತೀತ ಜನರಿಗೆ ಇನ್ನೂ ಯಾವ ಬಿರುದುಗಳೂ ಪ್ರಾಪ್ತವಾಗಿಲ್ಲವಷ್ಟೆ. ಆ ಗುಂಪಿನೊಳಗೆ ಆಗೊಮ್ಮೆ ಈಗೊಮ್ಮೆ ರಚ್ಚೆ ಹಿಡಿದು ಅನಂತರ ಮಲಗಿ ನಿದ್ರಿಸುವಂತಿರುವ ತೃತೀಯ ರಂಗವೂ ಸೇರಿಕೊಂಡಿದೆ. ಅವರನ್ನೂ ಲೇವಡಿ ಮಾಡಲು ಪದಗಳನ್ನು ಇನ್ನು ಮುಂದಷ್ಟೇ ಕಂಡು ಹಿಡಿಯಬೇಕಿದೆ.

ಕ್ಷಮಿಸಿ ಬಿಡಿ, ರಾಜಕೀಯ, ಪಂಥಗಳಿಗೆ ಅತೀತವಾಗಿ ಬದುಕಿದ ಸಾರ್ವಜನಿಕ ವ್ಯಕ್ತಿಯೊಬ್ಬರ ಕುರಿತು ನಾನು ಮಾತನಾಡಹೊರಟೆ. ಅವರ ಒಳ್ಳೆಯ ಅಭಿಮಾನಿ ಬಳಗದಲ್ಲಿ ನಾನೊಬ್ಬನು. ಅವರನ್ನು ನೋಡುತ್ತಲೇ ಅವರೊಳಗಿದ್ದ ಅನೇಕ ಒಳ್ಳೆಯ ಗುಣಗಳನ್ನು ನಾನು ಅಳವಡಿಸಿಕೊಂಡು ಬಂದೆ. ಈಗಲೂ ಎಷ್ಟೋ ವಿಚಾರಗಳಲ್ಲಿ ನನ್ನ ಮಾನಸ ಗುರು ಅವರೇ.ಇಷ್ಟೊಂದೆಲ್ಲಾ ಪ್ರವರ್ತಿಸುವಾಗ ನನ್ನ ಗೆಳೆಯರ ಬಳಗದಲ್ಲಿ ಅನೇಕರು ನನ್ನನ್ನು ಅಂಧಾಭಿಮಾನಿ ಎನ್ನಲೂ ಮರೆಯುವುದಿಲ್ಲ. ಆದರೆ ನಾನು ಅದ್ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ, ಕೆಡಿಸಿಕೊಳ್ಳುವುದೂ ಇಲ್ಲ. ಅವರನ್ನು ನೆನೆಯದ ದಿನವೇ ನನ್ನ ಜೀವನದಲ್ಲಿಲ್ಲ. ಅವರ ಜೀವನದಲ್ಲಿನ ಎಷ್ಟೋ ಘಟನೆಗಳು, ಒಂದೊಂದು ಸಲ ಅವರಿಗೇ ಗೊತ್ತಿಲ್ಲದಷ್ಟು ನನಗೆ ಅವರ ಬಗ್ಗೆ ಗೊತ್ತು ಎನಿಸುತ್ತಿರುತ್ತದೆ. ನನ್ನ ಗೆಳೆಯರ ಬಳಗವೂ ಅವರ ವಿಚಾರ ಬಂದಾಗ ಗೂಗಲ್ಲಿಸುವ ಬದಲು ನನಗೆ ಫೋನಾಯಿಸಿ ಕೇಳುತ್ತಾರೆ. ಅವರ ವಿಚಾರಕ್ಕೆ ಬಂದಾಗ ಎಷ್ಟೋ ಬಾರಿ ಗೂಗಲ್ ನನ್ನ ಮುಂದೆ ಸೋಲೊಪ್ಪಿಕೊಂಡಿರುವುದೂ ಅದಕ್ಕೆ ಕಾರಣವಿರಬೇಕು. ಇನ್ನೂ ಎಳೆಯದೇ ನೇರವಾಗಿ ವಿಚಾರಕ್ಕೆ ಬಂದುಬಿಡುತ್ತೇನೆ. ನಾನು ಇದುವರೆವಿಗೂ ಬಣ್ಣಿಸಿದ ಆ ವ್ಯಕ್ತಿ ಕನ್ನಡಿಗರೆಷ್ಟೋ ಜನರಿಗೆ ಆರಾಧ್ಯ ದೈವರಾದ ವರನಟ ಡಾ.ರಾಜ್ ಕುಮಾರ್.

ಅಂದ ಹಾಗೆ ನೀವು ಈ ಚಿತ್ರವನ್ನು ಗಮನಿಸಿದ್ದೀರಿ ತಾನೇ!. ಹಸನ್ಮುಖಿಯಾಗಿ ಹೊಳೆಯುವ ಕಣ್ಣುಗಳಿಂದ ಕ್ಯಾಮೆರಾಗೆ ಫೋಸು ಕೊಟ್ಟ ಅಣ್ಣಾವ್ರ ಈ ಫೋಟೋ ಅವರ ಜೀವಮಾನದಲ್ಲೇ ಅತ್ಯಂತ ಉತ್ತಮ ಫೋಟೋ ಎನಿಸಿಕೊಂಡಿತು. ಅವರ ಮನೆಯಲ್ಲಿ, ಅಭಿಮಾನಿಗಳು ಕೆಲವರ ಮನೆಯಲ್ಲಿ, ಅವರ ಸಮಾಧಿಯ ಮೇಲೂ ರಾರಾಜಿಸುತ್ತಿರುವುದು ಇದೇ ಚಿತ್ರ. ನಿಷ್ಕಲ್ಮಶವಾದ, ನಿರಪೇಕ್ಷವಾದ ಆ ದೃಷ್ಟಿ ನಟನೆಯ ಪಟ್ಟಲ್ಲ, ರಸಭಾವಗಳ ಸಮಾಗಮವಲ್ಲ. ಅದರ ಹಿಂದಿನದು ಅಣ್ಣಾವ್ರ ಸಾಮಾನ್ಯ ಚಹರೆ ಎನ್ನುವುದು ಅಣ್ಣಾವ್ರನ್ನು ತೀರಾ ಹತ್ತಿರದಿಂದ ನೋಡಿದವರಿಗೆ ಮಾತ್ರ ತಿಳಿಯುತ್ತದೇನೋ.

ಫೋಟೋಗ್ರಫಿಗೆಂದೇ ತಯಾರಾಗಿ ಸ್ಟುಡಿಯೋಗೆ ಹೋಗಿ ತೆಗೆಸಿದ ಚಿತ್ರವಿದು ಅನ್ನುವಂತೆ ಕಂಡರೂ ಅದರ ಹಿಂದಿರುವ ಕಥಾನಕ ಬೇರೆಯದ್ದೇ. ರಾತ್ರಿಯ ಊಟ ಮುಗಿಸಿ ಹಳೆ ಬೆಂಗಳೂರಿನ ಗಲ್ಲಿಗಳಲ್ಲಿ ವಾಕಿಂಗ್ ಮಾಡುತ್ತಿದ್ದ ಅಣ್ಣಾವ್ರನ್ನು ಕರೆದು ಯಾವ ಮೇಕಪ್ಪು ಇಲ್ಲದೆ ತೆಗೆಸಿದ ಚಿತ್ರವಿದು ಎಂದರೆ ನಿಮಗೆ ಆಶ್ಚರ್ಯವಾಗದೆ ಇರಲಾರದು. ಇದುವರೆಗೂ ಸುಮಾರು ಹತ್ತು ಲಕ್ಷಗಳಷ್ಟು ಮುದ್ರಣವನ್ನು ಈ ಚಿತ್ರಪಟ ಕಂಡಿದೆ ಎಂದರೆ ನಿಮಗೆ ಆಶ್ಚರ್ಯವಾಗದೆ ಇರಲಾರದೇನೋ. ಈ ಮಾಹಿತಿಯನ್ನು ಆ ಫೋಟೋ ತೆಗೆದ ವ್ಯಕ್ತಿಯೇ ಹಂಚಿಕೊಳ್ಳುತ್ತಾ ಸಾಗುತ್ತಾರೆ.

ಈ ಚಿತ್ರ ತೆಗೆದವರು ಎಂಪೈರ್ ರಾಮಣ್ಣ ಎಂಬ ಒಬ್ಬ ವೃತ್ತಿಪರ ಛಾಯಾಗ್ರಾಹಕ. 1972 ರ ಮಾರ್ಚಿ ತಿಂಗಳ ಯಾವುದೋ ಒಂದು ದಿನ ಬೆಂಗಳೂರಿನ ಹೈಲಾಂಡ್ಸ್ ಹೋಟೆಲ್ ನಲ್ಲಿ ಇಳಿದುಕೊಂಡಿದ್ದ ಡಾ.ರಾಜ್ ರಾತ್ರಿಯ ಊಟವಾದ ಮೇಲೆ ವಾಕಿಂಗ್ ಮಾಡುವ ಉದ್ದೇಶದಿಂದ ಅವೆನ್ಯೂ ರಸ್ತೆಯ ಕಡೆಗೆ ಧಾವಿಸುತ್ತಾರೆ. ಜನರು ಗುರುತು ಹಿಡಿಯಬಹುದೆಂದು ತಲೆಗೆ ಶಾಲು ಸುತ್ತಿಕೊಂಡು ಬರುತ್ತಾರೆ. ಅಲ್ಲಿಯೇ ಇದ್ದ ಎಂಪೈರ್ ಸ್ಟುಡಿಯೋ ಅವರಿಗೆ ಜ್ಞಾಪಕಕ್ಕೆ ಬರುತ್ತದೆ. ಎಂಪೈರ್ ಸ್ಟುಡಿಯೋ ನಡೆಸುತ್ತಿದ್ದ ಎಂಪೈರ್ ರಾಮಣ್ಣನವರ ಅಣ್ಣ ಮುನಿಯಪ್ಪ ಮೇಷ್ಟ್ರು ಡಾ.ರಾಜ್ ಅವರು ಗುಬ್ಬಿ ಕಂಪನಿಯಲ್ಲಿದ್ದಾಗ ಸಂಗೀತಾಭ್ಯಾಸ ಮಾಡಿಸಿದ್ದ ಗುರುಗಳು. ಅವರನ್ನು ಭೇಟಿ ಮಾಡುವ ಮನಸ್ಸಾಗಿ ಅಣ್ಣಾವ್ರು ಆ ಸ್ಟುಡಿಯೋದತ್ತ ತೆರಳುತ್ತಾರೆ. ಅಲ್ಲಿದ್ದ ಎಂಪೈರ್ ರಾಮಣ್ಣನವರು ಅವರ ಅಣ್ಣ ಮುನಿಯಪ್ಪ ಮಾಸ್ಟರು ಕೆಲವೇ ನಿಮಿಷಗಳ ಹಿಂದೆ ಮನೆಗೆ ಹೋಗಿದ್ದಾಗಿ ತಿಳಿಸುತ್ತಾರೆ. ಡಾ.ರಾಜ್ ರವರನ್ನು ಆ ರಾತ್ರಿ ತಮ್ಮ ಸ್ಟುಡಿಯೋದಲ್ಲಿ ನೋಡಿ ಆನಂದ ತುಂದಿಲರಾದ ಎಂಪೈರ್ ರಾಮಣ್ಣವರು ಆಗಷ್ಟೇ ಅಮೆರಿಕಾದಿಂದ ತರಿಸಿದ್ದ ಹೊಸ ಮಾದರಿಯ 'ಕೋನಿ ಒಮೇಗಾ' ಎನ್ನುವ ಕ್ಯಾಮೆರಾವನ್ನು ಅಣ್ಣಾವ್ರಿಗೆ ತೋರಿಸುತ್ತಾರೆ, ಅಷ್ಟೇ ಅಲ್ಲದೆ ಅದರಲ್ಲಿ ಅಣ್ಣಾವ್ರ ಒಂದೆರಡು ಫೋಟೋಗಳನ್ನು ತೆಗೆಯುವ ಇಚ್ಛೆ ವ್ಯಕ್ತಪಡಿಸುತ್ತಾರೆ.ಮಾಮೂಲಿನಂತೆ ಅಣ್ಣಾವ್ರು 'ಸರಿ, ಬನ್ನಿ ಜಮಾಯ್ಸಿಬಿಡೋಣ' ಎನ್ನುತ್ತಾ ಸ್ಕ್ರೀನಿನ ಹಿನ್ನೆಲೆಯಿದ್ದ ಚೇರಿನೆಡೆಗೆ ನಡೆಯುತ್ತಾರೆ.ಯಾವ ಮೇಕಪ್ಪು ಇಲ್ಲದೆ ಅಣ್ಣಾವ್ರು ತಲೆಗೆ ಸುತ್ತಿಕೊಂಡಿದ್ದ ಶಾಲನ್ನು ತೆಗೆದು ಮುಖದ ಮೇಲೆ ಮೂಡಿದ್ದ ಬೆವರ ಹನಿಗಳನ್ನು ಒರೆಸಿಕೊಂಡು, ಕೆದರಿದ್ದ ಕೂದಲನ್ನು ಬಾಚಿಕೊಂಡು, ಅದೇ ಶಾಲನ್ನು ಹೆಗಲ ಮೇಲೆ ಹೊದ್ದುಕೊಂಡು ಕ್ಯಾಮೆರಾಗೆ ತಿರುಗಿ ನಿಂತರಂತೆ.

ಮೂರ್ನಾಲ್ಕು ಭಂಗಿಗಳಲ್ಲಿ ನಿಲ್ಲಿಸಿ ಎರಡೇ ನಿಮಿಷದಲ್ಲಿ ಫೋಟೋ ಸೆಷನ್ ಮಾಡಿ ಮುಗಿಸಿದರಂತೆ ಎಂಪೈರ್ ಸ್ಟುಡಿಯೋದ ರಾಮಣ್ಣನವರು. ಆ ಚಿತ್ರ ಈವತ್ತು ಅದೆಷ್ಟು ಪ್ರಚಲಿತದಲ್ಲಿದೆ ಎನ್ನುವುದನ್ನು ನಾನು ಬಿಡಿಸಿ ಬೇರೆ ಹೇಳಬೇಕಾಗಿಲ್ಲ. ಅಣ್ಣಾವ್ರನ್ನು ಕೂರಿಸಿ ವಿವಿಧ ಧಿರಿಸುಗಳನ್ನು ಪೇರಿಸಿ ಗಂಟೆಗಟ್ಟಲೆ ಫೋಟೋಶೂಟ್ ಮಾಡಿದ ಎಷ್ಟೋ ಫೋಟೋಗಳಿವೆ. ಆದರೆ ಈ ಫೋಟೋವಷ್ಟು ಮತ್ಯಾವುದು ಜನಮನ್ನಣೆ ಪಡೆಯಲೇ ಇಲ್ಲ. ಅಲ್ಲಿ ನಡೆಯುವ ಫೋಟೋ ಶೂಟುಗಳ ಹಿಂದೆ ಇದ್ದದ್ದು ವ್ಯವಹಾರ, ಎಂಪೈರ್ ರಾಮಣ್ಣನವರ ಫೋಟೋ ಶೂಟಿನ ಹಿಂದೆ ಇದ್ದದ್ದು ಅಪ್ಪಟ ಅಭಿಮಾನ ಮಾತ್ರ. ಅದಕ್ಕೆ ಇರಬೇಕು ಆ ಮಂದಸ್ಮಿತ ವದನ ಕನ್ನಡಿಗರ ಸ್ಮೃತಿಪಟಲದಲ್ಲಿ ಅಚ್ಚಳಿಯದೆ ಉಳಿದುಕೊಂಡಿದೆ, ಉಳಿದುಕೊಳ್ಳುತ್ತದೆ ಕೂಡಾ.
-o-

ಶುಕ್ರವಾರ, ಜೂನ್ 18, 2021

ಧರ್ಮಶ್ರೀ - ಧರ್ಮ ಸಮನ್ವಯ

'ಧರ್ಮ' ಎನ್ನುವ ಪದ ಈಗ್ಗೆ ಕೆಲವು ವರ್ಷಗಳವರೆಗೂ ಆಧ್ಯಾತ್ಮಿಕ ಪದವಾಗಿತ್ತು. ದಾನಿಗಳಿರುವ, ಮಾನವೀಯತೆಯ ಪರವಿರುವ ವ್ಯಕ್ತಿಗಳ ಸುತ್ತ ಮುತ್ತ ಈ ಪದ ದಿನನಿತ್ಯ ಎಂಬಂತೆ ಕೇಳಿ ಬರುತ್ತಿತ್ತು. ಆದರೆ ತೀರಾ ಇತ್ತೀಚಿಗೆ ಅದು ಸಂಪೂರ್ಣವಾಗಿ ರಾಜಕೀಯ ಸರಕಾಗಿ ಹೋಗಿದೆ. ಧರ್ಮದ ವಿಚಾರವೆತ್ತಿದ ಯಾವನೇ ಆದರೂ ಅವನು ರಾಜಕೀಯ ಲಾಭಕ್ಕಾಗಿ ಮಾತಾಡುತ್ತಿದ್ದಾನೆ ಎನ್ನುವ ಪರಿಸ್ಥಿತಿ ಭಾರತ ದೇಶದೊಳಗೆ ನಿರ್ಮಾಣವಾಗಿದೆ. ದೇಶೀಯವಾಗಿ ಆ ಪದ ಕೇಳಿದಾಕ್ಷಣ ಮೂಗು ಮುರಿಯುವ ಇಲ್ಲವೇ ವಹಿಸಿಕೊಂಡು ಕೆಲವು ಪಂಥಗಳಿಗೆ ಅಂಟಿಕೊಳ್ಳುವ ಜಾಢ್ಯ ಬಹುತೇಕರಿಗೆ ಬಂದೊದಗಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ನನ್ನ ಕೈಗೆ ಸೇರಿಕೊಂಡದ್ದು ಎಸ್.ಎಲ್.ಭೈರಪ್ಪನವರ 'ಧರ್ಮಶ್ರೀ' ಎನ್ನುವ ಕಾದಂಬರಿ. ಶ್ರೀಲಂಕಾ ಸಂಜಾತ ಆನಂದ ಕುಮಾರಸ್ವಾಮಿಯವರ ಪರಿಚಯ ಮಾಡಿಕೊಡುತ್ತಾ ಕಥೆಯೆಡೆಗೆ ತೆರೆದುಕೊಳ್ಳುವ ಧರ್ಮಶ್ರೀ ಹಿಂದೂ ಧರ್ಮದಲ್ಲಿರುವ ಕೆಲವು ಹುಳುಕುಗಳನ್ನು ತೆರೆದಿಡುತ್ತಲೇ ಭಾರತ ದೇಶದಲ್ಲಿ ಉಂಟಾಗುತ್ತಿದ್ದ ಮತಾಂತರ ಹಾಗೂ ಮತಾಂತರಗೊಂಡ ವ್ಯಕ್ತಿಗಳಲ್ಲಿ ಏರ್ಪಡುತ್ತಿದ್ದ ಸಾಂಸ್ಕೃತಿಕ, ಮಾನಸಿಕ ಸಂಘರ್ಷ - ಅದಕ್ಕೆ ಆಗಿನ ಸಮಾಜ ಪ್ರತಿಕ್ರಿಯಿಸುತ್ತಿದ್ದ ರೀತಿ, ಹಿಂದೂ ಧರ್ಮದಲ್ಲಿ ಚಳುವಳಿಗಳು ರೂಪುಗೊಂಡು ಹಿಂದೆ ಆಗದಿದ್ದ ಕೆಲವು ಕಾರ್ಯ ಯೋಜನೆಗಳನ್ನು ಜಾರಿ ಮಾಡುವ ಪ್ರಕರಣಗಳ ಜೊತೆಗೆ ಇಡೀ ಕಾದಂಬರಿ ಹರಿಯುತ್ತದೆ.
ನಮ್ಮ ಹಾಸನದ ಚನ್ನರಾಯಪಟ್ಟಣದ ಸಮೀಪದ ಹಳ್ಳಿಯೊಂದರ ಹುಡುಗ ಧರ್ಮಶ್ರೀಯ ಕಥಾ ನಾಯಕ ಸತ್ಯ ಅಲಿಯಾಸ್ ಸತ್ಯನಾರಾಯಣ. ಭೌದ್ಧಿಕವಾಗಿ, ಶಾರೀರಿಕವಾಗಿ ಸಬಲನಾಗಿ ಬೆಳೆಯುತ್ತಿದ್ದ ಹುಡುಗನಿಗೆ ಊರಿನ ಹುಡುಗರೊಂದಿಗೆ ಸೇರಿ ಗುಂಪುಗಾರಿಕೆ ಮಾಡುತ್ತಾ ರಾಜ, ಸೇನಾಧಿಪತಿಯೆಂದು ವಿಂಗಡಿಸಿಕೊಂಡು ಇನ್ನೊಂದು ಗುಂಪಿನೆದುರು ತನ್ನ ಪರಾಕ್ರಮವನ್ನು ತೋರಿಸಿಕೊಳ್ಳುವ ಖಯಾಲಿರುತ್ತದೆ. ಹುಡುಗಾಟಿಕೆ ಆತನ ವಿದ್ಯೆಗೆಲ್ಲಿ ತೊಂದರೆ ಮಾಡುತ್ತದೋ ಎನ್ನುವ ಭಯದಿಂದ ಹುಡುಗನ ತಾಯಿ ತನ್ನ ಮಗನನ್ನು ಸ್ವಲ್ಪ ಕಟುವಾಗಿದ್ದ ತನ್ನ ಅಣ್ಣನ ಮನೆಗೆ ಓದುವ ಸಲುವಾಗಿ ಕಳುಹಿಸುತ್ತಾಳೆ. ಆತ ತನ್ನ ಸೋದರ ಮಾವನ ಮನೆಯಲ್ಲಿ ಉಳಿದುಕೊಂಡು ಓದುವುದಕ್ಕೆ ಶುರುವಿಟ್ಟುಕೊಂಡ ಮಧ್ಯೆಯೇ ಆತನ ತಾಯಿ ಪ್ಲೇಗ್ ವ್ಯಾಧಿಗೆ ಬಲಿಯಾಗುತ್ತಾಳೆ. ಪ್ಲೇಗ್ ಎನ್ನುವುದು ಅಂಟುಜಾಢ್ಯವಾದ್ದರಿಂದ ಆತನ ತಾಯಿಯ ಅಂತ್ಯ ಸಂಸ್ಕಾರಕ್ಕೆ ಹೋಗುವುದಕ್ಕೂ ಆತನಿಗೆ ತಡೆ ಬೀಳುತ್ತದೆ. ಅನಂತರ ಕ್ರಮೇಣವಾಗಿ ಆತ ತನ್ನ ಹುಟ್ಟೂರನ್ನೇ ಮರೆಯುತ್ತಾ ಓದುವುದರಲ್ಲಿ, ಆಟೋಟಗಳಲ್ಲಿ ಮೈ ಮರೆಯುತ್ತಾನೆ. ಆತನ ಸೋದರ ಮಾವ ಬರೀ ಕಠಿಣ ವ್ಯಕ್ತಿಯಾಗಿ ಮಾತ್ರವಿರಲಿಲ್ಲ, ತನ್ನದೇ ಊರಿನಲ್ಲಿ ಸಣ್ಣ ಸಣ್ಣ ಕಳ್ಳತನಗಳನ್ನು ಮಾಡುವ, ಜನರನ್ನು ಯಾಮಾರಿಸುವ, ಕಾರಣವಿಲ್ಲದೆ ಸತ್ಯನನ್ನು ತಾರಾಮಾರು ಬಡಿಯುವ ವ್ಯಗ್ರನೂ ಆಗಿರುತ್ತಾನೆ.

ಕುಂತರೊಂದು-ನಿಂತರೊಂದು ವದರುವ ಸೋದರ ಮಾವನ ಹೆಂಡತಿಯ ಅವತಾರವೂ ಸತ್ಯನಿಗೆ ಕ್ರಮೇಣ ಇರಿಸು ಮುರಿಸು ತರಿಸುತ್ತದೆ. ಅನಿಷ್ಟಕ್ಕೆಲ್ಲಾ ಶನೇಶ್ವರನೇ ಹೊಣೆ ಎನ್ನುವ ಆಕೆಯ ಧೋರಣೆ ಸತ್ಯನಿಗೆ ಸ್ವಲ್ಪವೂ ಹಿಡಿಸುವುದಿಲ್ಲ. ದಿನ ಗಳೆಯುತ್ತಿದಂತೆಯೇ ಸತ್ಯ ತನ್ನ ಸೋದರ ಮಾವನ ಏಟಿಗೆ ಮಾಮೂಲಿನ ವ್ಯಕ್ತಿಯಾಗಿ ಹೋಗಿದ್ದ. ಆತನ ಮೈ ಮೇಲೆ ಸೋದರಮಾವನಿಂದ ಮೂಡುತ್ತಿದ್ದ ಏಟಿನ ಬಾಸುಂಡೆಗಳು ಅವನನ್ನು ಬಾಧಿಸುವುದಕ್ಕಿಂತಲೂ ಅವನ ಮೇಷ್ಟರೊಬ್ಬರನ್ನು ಬಾಧಿಸಿಬಿಟ್ಟವು. ಹುಡುಗ ಆ ಕೂಪದಿಂದ ಪಾರಾದರೆ ಸಾಕೆಂಬ ಧೋರಣೆಯಿಂದ ಆ ಮೇಷ್ಟರು ಹುಡುಗನನ್ನು ತನ್ನ ಪರಿಚಯದ ಬೇರೆ ಊರಿನ ಮತ್ತೊಬ್ಬ ಮೇಷ್ಟರ ಮನೆಗೆ ಸಾಗಹಾಕಿ ಬಿಟ್ಟರು. ಹುಡುಗ ಸೋದರ ಮಾವನ ವ್ಯಗ್ರತೆಯಿಂದ ನುಣುಚಿಕೊಂಡಿದ್ದ. ಆ ನಡುವೆ ತನ್ನ ಹುಟ್ಟೂರಿನ ಬಗೆಗಿನ ಯೋಚನೆಗಳು ಬಂದರೂ ಅತ್ತ ತಲೆ ಹಾಕಲಿಲ್ಲ. ಕೆಲಸವಿಲ್ಲದೇ, ತನ್ನ ಹೆಂಡತಿ ಮಕ್ಕಳನ್ನು ನೋಡಿಕೊಳ್ಳದೆ ವಿರಾಗಿಯಂತೆ ಊರೂರು ಅಲೆಯುತ್ತಿದ್ದ ತಂದೆಯ ಬಗೆಗೆ ಜ್ಞಾಪಕವಾದಾಗೆಲ್ಲ ಇರಿಸು ಮುರಿಸು ಉಂಟಾಗುತ್ತಿದ್ದ ಆತನ ತಂಗಿ ಹಾಗು ಅಜ್ಜಿ ಊರಿನಲ್ಲಿ ಇರುವ ಚಿಕ್ಕ ಹೊಲದ ಆದಾಯ ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದರು. ತಾಯಿ ಸತ್ತ ನಂತರ ಕೆಲವು ಒಡವೆಗಳ ಸಮೇತ ಕಣ್ಮರೆಯಾದ ತಂದೆ ಎತ್ತ ಹೋದರೆಂದೂ ತಿಳಿಯದೆ ಸತ್ಯ ತನ್ನ ಓದಿನ ಕಡೆಗೆ ಗಮನ ಕೊಡುತ್ತಾನೆ. ಓದು-ಆಟೋಟಗಳು ಅವನ ವಯ್ಯಕ್ತಿಕ ಜೀವನದ ನೋವುಗಳನ್ನು ಅಷ್ಟು ಮರೆಸುತ್ತವೆ.

ಸೋದರಮಾವನ ಊರು ತೊರೆದು ಪರವೂರಿಗೆ ಹೋಗಿ ನೆಲೆ ನಿಂತ ಸತ್ಯನಿಗೆ ಅಲ್ಲಿನ ಅನ್ಯ ಜಾತಿಯ ಮೇಷ್ಟರ ಸಂಪೂರ್ಣ ಸಹಕಾರವಿರುತ್ತದೆ. ನೆಲೆ ನಿಲ್ಲಲು ಬಾಡಿಗೆಯ ರೂಮು, ಊಟಕ್ಕೆ ವಾರಾನ್ನ ಸಹಕಾರಿಯಾಗುತ್ತವೆ. ಉಪನಯನವೇ ಆಗದೆ ವಾರಾನ್ನ ಮಾಡುವುದು ಬ್ರಾಹ್ಮಣರಲ್ಲಿ ಕೂಡದೆಂತಲೂ, ಅದು ಅಧಾರ್ಮಿಕವೆಂತಲೂ ಆತನಿಗೆ ಆಹಾರವನ್ನು ನಿರಾಕರಿಸಲಾಗುತ್ತದೆ. ಸದಾ ಕಾಲ ತನ್ನ ಒಳಿತನ್ನೇ ಬಯಸುತ್ತಿದ್ದ ಅನ್ಯ ಜಾತಿಯ ಮೇಷ್ಟರ ಮನೆಯಲ್ಲಿ ಊಟ ಮಾಡುವ ಪ್ರಸಂಗ ಎದುರಾದಾಗ ಸತ್ಯನ ಮನಸ್ಸು ಮೊಟ್ಟ ಮೊದಲಿಗೆ ತಾಕಲಾಟಕ್ಕಿಳಿಯುತ್ತದೆ. ಅಂದು ಆರಂಭಗೊಂಡ ತಾಕಲಾಟ, ತುಮುಲಗಳು ಕಾದಂಬರಿಯ ಅಂತ್ಯದವರೆಗೂ ಒಂದಿಲ್ಲೊಂದು ವಿಚಾರಗಳಿಗೆ ಸತ್ಯನಿಗೆ ಬಂದು ತಾಗಿಕೊಳ್ಳುತ್ತವೆ. ಸಾಂಸ್ಕೃತಿಕ, ಮಾನಸಿಕ, ಧಾರ್ಮಿಕ ಘರ್ಷಣೆಯ ಆರಂಭವದು ಸತ್ಯನಿಗೆ. ಅಲ್ಲಿಯೇ ಅವನಿಗೆ ಕ್ರೈಸ್ತ ಹುಡುಗಿ ರಾಚಮ್ಮ ಪರಿಚಿತಳಾಗುತ್ತಾಳೆ ಆದರೆ ಜೊತೆಗೆ ಆ ಸುತ್ತಮುತ್ತಲ ಊರಿನಲ್ಲಿ ನಡೆಯುತ್ತಿದ್ದ ಕ್ರೈಸ್ತ ಮಿಷಿನರಿಗಳ ಕಾರ್ಯಗಳು ಸತ್ಯನ ಅರಿವಿಗೆ ಬರುವುದಕ್ಕೆ ತೊಡಗುತ್ತವೆ. ತನ್ನ ಮನದಲ್ಲೇ ಸತ್ಯನ ಅಭಿಮಾನಿಯಾಗಿದ್ದ ರಾಚಮ್ಮ ಆತನ ಮೈಕಟ್ಟು, ಬುದ್ಧಿವಂತಿಕೆ, ತರ್ಕ ಶೈಲಿ, ಹವ್ಯಾಸಗಳಿಂದ ಪ್ರಭಾವಿತಳಾಗಿರುತ್ತಾಳೆ. ದುರಾದೃಷ್ಟ, ಆ ಊರಿನಲ್ಲಿಯೂ ಸತ್ಯನಿಗೆ ಅನ್ನಕ್ಕೆ ತಾತ್ವಾರವಾಗುತ್ತದೆ. ಆತ ಮುಂದಿನ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಬಂದಿಳಿಯುತ್ತಾನೆ.
ಮೈಸೂರಿಗೆ ಬಂದಿಳಿದು ಅನಾಥಾಲಯದಲ್ಲಿ ಊಟದ ವ್ಯವಸ್ಥೆಯಾಗಿ ಅನ್ನದ ಬರ ಸತ್ಯನಿಗೆ ತೀರುತ್ತದೆ, ಆದರೆ ಅನಾಥಾಲಯದಲ್ಲಿ ಪರಿಚಿತರಾದ ಕೆಲವು ರಾಷ್ಟ್ರ, ಧರ್ಮ ಪ್ರೇಮಿ ವ್ಯಕ್ತಿಗಳಿಂದ ವಿಚಾರವಂತಿಕೆಯ ಹಸಿವು ಶುರುವಾಗುತ್ತದೆ. ತನ್ನ ಶಿಕ್ಷಣದ ನಡುವೆಯೇ ಗ್ರಂಥ ಭಂಡಾರದಿಂದ ಅನೇಕ ಪುಸ್ತಿಕೆಗಳನ್ನು ತಂದು ಓದಿ ಹಿಂದೂ ಧರ್ಮದ ಬಗೆಗಿನ ತನ್ನ ದೃಷ್ಟಿಕೋನವನ್ನು ಇನ್ನಷ್ಟು ತೀಕ್ಷ್ಣಗೊಳಿಸಿಕೊಳ್ಳಲು ನಿಷ್ಕಲ್ಮಶ ಪ್ರಯತ್ನವನ್ನು ಸತ್ಯ ಮಾಡುತ್ತಾನೆ. ಸತ್ಯನಿಗೆ ಅನಾಥಾಲಯದಲ್ಲಿ ಪರಿಚಿತರಾದ ಆರ್.ಎಸ್.ಎಸ್. ವಿಚಾರ ಧಾರೆಗಳಿಂದ ಪ್ರಭಾವಿತರಾದ ಶಂಕರ ಒಂದು ರೀತಿಯಲ್ಲಿ ಸತ್ಯನ ಮಾನಸ ಗುರುವಾಗಿ ನಿಲ್ಲುತ್ತಾನೆ. ಆರ್.ಎಸ್.ಎಸ್ ನ ಪ್ರತಿಯೊಂದು ನೀತಿ ನಿಲುವುಗಳನ್ನು ಪ್ರಶ್ನೆ ಮಾಡುತ್ತಾ ಸತ್ಯ ಅದರ ವಿಚಾರಧಾರೆಗಳು ಶಂಕರನಲ್ಲಿ ಅತ್ಯಂತ ಬಲವಾಗಿ ಬೇರೂರಿರುವುದನ್ನು ಅರಿತುಕೊಳ್ಳುವ ಜೊತೆಗೆ ಆತನನ್ನು ಮಹಾ ಯಜ್ಞಕ್ಕೆ ತಯಾರಾದ ಒಬ್ಬ ಋಷಿಯಂತೆ ಕಾಣುತ್ತಾನೆ. ಶಂಕರನ ಹಾಗು ಆತನ ಅಣ್ಣ ರಾಮಣ್ಣನ ಸಹವಾಸ ಸತ್ಯನ ಹಿಂದೂ ಧರ್ಮ, ಸಂಸ್ಕೃತಿ ಅಧ್ಯಯನಕ್ಕೆ ಮತ್ತಷ್ಟು ಹುರುಪು ತುಂಬುತ್ತವೆ. ಅದು ಎಲ್ಲಿಯವರೆಗೂ ಎಂದರೆ ಮೈಸೂರಿನ ಪ್ರಮುಖ ಗಲ್ಲಿಯ ಕ್ರೈಸ್ತ ಮಿಷಿನರಿಯ ಸಭೆಗೆ ಹೋಗಿ ಅಲ್ಲಿನ ಸಭೆಯನ್ನು ಹತ್ತಿಕ್ಕುವವರೆಗೂ. ಮುಂದೆ ಅದೇ ಹಳ್ಳಿಯ ರಾಚಮ್ಮನ ಭೇಟಿ ಅನಿರೀಕ್ಷಿತವಾಗುತ್ತದೆ, ಆಕೆಯ ಗಂಡ ಸತ್ಯನಿಗೆ ಕಾಲೇಜಿನಲ್ಲಿ ಪಾಠ ಹೇಳುವ ಉಪಾಧ್ಯಾಯರಾಗಿರುತ್ತಾರೆ.ಬಾಲ್ಯದ ಗೆಳೆಯನೆಂಬ ಕಾರಣಕ್ಕೆ ರಾಚಮ್ಮನ ಮನೆಗೆ ಹೋಗಿ ಬರುತ್ತಲಿದ್ದ ಸತ್ಯನ ಕಡೆಗೆ ಅವರ ಮನೆಯಲ್ಲಿಯೇ ಆಗೊಮ್ಮೆ ಈಗೊಮ್ಮೆ ಸುಳಿದಾಡುತ್ತಿದ್ದ ಲಿಲ್ಲಿಯ ಕಣ್ಣು ಬೀಳುತ್ತದೆ. ಆರಂಭದಲ್ಲಿ ಹಿಂದೂ-ಕ್ರೈಸ್ತ ವಿಚಾರಧಾರೆಯ ವಾದಗಳಿಂದ ಅವರ ಮಾತು ಕಥೆಗಳು ಮುಗಿಯುತ್ತಿದ್ದರೂ ಬರ-ಬರುತ್ತಾ ಕ್ರೈಸ್ತಳಾದ ಲಿಲ್ಲಿಯ ಮನಃಪರಿವರ್ತನೆ ಶುರುವಾಗುತ್ತದೆ. ಹಿಂದೂ ಧರ್ಮವೆನ್ನುವುದು ಈ ನೆಲದ ಸಂಸ್ಕೃತಿಯೆನ್ನುವುದನ್ನು ಆಕೆ ಅರ್ಥ ಮಾಡಿಕೊಳ್ಳುವ ಮೊದಲೇ ಅವರ ಸ್ನೇಹ ಸಲುಗೆಗೆ ತಿರುಗಿ ಅದು ಪ್ರೀತಿಯೂ ಆಗಿ ಮೊಳೆತಿರುತ್ತದೆ.

ಒಬ್ಬರನ್ನು ಬಿಟ್ಟು ಒಬ್ಬರಿರಲಾರದ ಪ್ರೇಮ ಪಾಶಕ್ಕೆ ಸಿಲುಕುವ ಅವರಿಬ್ಬರೂ ಮದುವೆಯಾಗುವ ನಿರ್ವಾಹಕ್ಕೆ ಬರುತ್ತಾರೆ. ಹುಡುಗಿಯ ತಂದೆ ಶ್ರೀಮಂತ ವರ್ಗದವನಾದ್ದರಿಂದ ಹುಡುಗನೇ ಕ್ರಿಸ್ತಮತಕ್ಕೆ ಸೇರಿ ಹುಡುಗಿಯನ್ನು ಚರ್ಚಿನಲ್ಲಿ ಮದುವೆಯಾಗುತ್ತಾನೆ. ಆದರೆ ಹುಡುಗಿಯಾದ ಲಿಲ್ಲಿ ತನ್ನ ಸೌಭಾಗ್ಯದ ಖಣಿಯನ್ನೆಲ್ಲಾ ಸತ್ಯನಲ್ಲೇ ಕಾಣುತ್ತಾಳೆ. ಆತನಿಗಾಗಿ ಯಾವ್ಯಾವ ಮಹಾ ತ್ಯಾಗಕ್ಕೂ ಆಕೆ ಸಿದ್ದ.ಹಿಂದೂ ಯುವಕನಾಗಿದ್ದವನು ಕ್ರಿಸ್ತ ಮತಕ್ಕೆ ಬಂದು ಕ್ರೈಸ್ತ ಹುಡುಗಿಯನ್ನು ಮದುವೆಯಾದನೆಂದು ಕ್ರೈಸ್ತ ಮತದ ಶಾಲೆಯೊಂದರಲ್ಲಿ ಹೆಡ್ ಮೇಷ್ಟರ ವೃತ್ತಿ ಆ ಮತದ ಬಳುವಳಿಯಾಗಿ ಬರುತ್ತದೆ. ಒಲ್ಲದ ಮನಸ್ಸಿನಿಂದ ಕ್ರೈಸ್ತ ಧರ್ಮಕ್ಕೆ ಸೇರಿಕೊಂಡಿದ್ದ, ಹೃದಯದಲ್ಲೇ ಹಿಂದೂ ಸಂಸ್ಕೃತಿಯ ಜ್ವಲಂತವನ್ನು ಹೊತ್ತಿಸಿಕೊಂಡ ಸತ್ಯ ವಿಪರೀತ ಮಾನಸಿಕ ತೊಳಲಾಟಕ್ಕೆ ಬೀಳುತ್ತಾನೆ. ಚರ್ಚಿನ ಬಿಷಪ್ಪರು ಹೊರಡಿಸುವ ಕಟ್ಟಪ್ಪಣೆಗಳಿಗೂ, ಸಮಾಜ ಆತನನ್ನು ನೋಡುವ ರೀತಿಯೂ ಬದಲಾದ ಮೇಲೆ ಪದೇ ಪದೇ ಖಿನ್ನತೆಗೊಳಗಾಗಿ ಅನಾರೋಗ್ಯದ ಪಶುವಾಗುತ್ತಾನೆ ಸತ್ಯ.ಸತ್ಯನ ಒಳ ಮನಸ್ಸಿನ ತುಮುಲಗಳನ್ನು ವಿಕ್ರಾಂತವಾಗಿ ಪತ್ತೆ ಮಾಡಿಬಿಡುತ್ತಿದ್ದ ಲಿಲ್ಲಿ ಸದಾ ಕಾಲ ಸತ್ಯನ ಮಾನಸ ಗುರುವಾದ ಶಂಕರನಿಗೆ ಪತ್ರ ಬರೆಯುತ್ತಾಳೆ. ಕ್ರೈಸ್ತ ಮತದಲ್ಲಿದ್ದುಕೊಂಡು ಸಾಂಸ್ಕೃತಿಕ ಘರ್ಷಣೆಗೆ ತನ್ನ ಮನಸ್ಸನ್ನು ಈಡು ಮಾಡಿಕೊಂಡು ದಿನೇ ದಿನೇ ಕೃಶವಾಗುತ್ತಿರುವ ಸತ್ಯ ಉಳಿಯಬೇಕಾದರೆ ಏನು ಮಾಡಬೇಕೆನ್ನುವುದನ್ನು ಅವಳೇ ಸೂಚ್ಯವಾಗಿ ಶಂಕರನಿಗೆ ಬರೆಯುತ್ತಾಳೆ. ಶಂಕರನ ಸಲಹೆಯ ಹಾಗು ತನ್ನ ಮನೋ ಇಚ್ಛೆಯ ಮೇರೆಗೆ ತನ್ನ ಸೌಭಾಗ್ಯದ ನಿಧಿಯನ್ನು ಉಳಿಸಿಕೊಳ್ಳಲು ಲಿಲ್ಲಿ ಸತ್ಯನ ಸಮೇತ ಆರ್ಯ ಸಮಾಜದ ಹೊಸ ಪದ್ಧತಿಯಂತೆ ಹಿಂದೂ ಧರ್ಮಕ್ಕೆ ಮರಳುತ್ತಾರೆ. ಕ್ಸೆವಿಯರ್ ಸತ್ಯದಾಸ ಆಗಿದ್ದ ಸತ್ಯ ಮೊದಲಿನ ಹಾಗೆ ಸತ್ಯನಾರಾಯಣನಾಗಿಯೂ, ಲಿಲ್ಲಿಯಾಗಿದ್ದ ಕ್ರೈಸ್ತ ಹುಡುಗಿ 'ಧರ್ಮಶ್ರೀ' ಯಾಗಿಯೂ ಹಿಂದೂ ಧರ್ಮಕ್ಕೆ ಮರಳಿ ಬರುತ್ತಾರೆ. ಅಲ್ಲಿಗೆ ಸತ್ಯನ ಮತಾಂತರ ಹಾಗು ಅದರ ನಂತರದ ಉಂಟಾದ ಸಾಂಸ್ಕೃತಿಕ ಸಂಘರ್ಷಗಳಿಗೆ ಪೂರ್ಣ ವಿರಾಮ ಬೀಳುತ್ತದೆ. ಕ್ರೈಸ್ತ ಶಾಲೆಯ ಹೆಡ್ ಮಾಸ್ಟರ್ ವೃತ್ತಿಗೆ ರಾಜಿನಾಮೆಯನ್ನು ಧರ್ಮಶ್ರೀಯೇ ಬರೆದು ಸಹಿಗಾಗಿ ಸತ್ಯನ ಮುಂದಿಟ್ಟಾಗ ಸತ್ಯನ ಹೊಸ ಬಾಳಿನ ಬಾಗಿಲು ತೆರೆಯುತ್ತದೆ. ಮುಂದಣ ಜೀವನದ ಸ್ಪಷ್ಟ ಪರಿಕಲ್ಪನೆ ಉಂಟಾಗಿ ಬಾಳನ್ನು ಬಾನೆತ್ತರಕ್ಕೆ ಕೊಂಡೊಯ್ಯಲು ಅಣಿಯಾಗುತ್ತಾನೆ.

ನಮ್ಮ ದೇಶದ ಸಕಲ ಸಂಪತ್ತನ್ನು ಲೂಟಿ ಹೊಡೆದು ನಮ್ಮನ್ನು ಕೃಶರನ್ನಾಗಿಸಿದ ವರ್ಗವೇ ಮನುಕುಲದ ಸೇವೆಯೆಂದು, ದೇವರ ರಾಜ್ಯ ದರ್ಶನ ಮಾಡಿಸುತ್ತೇವೆಂದು ಹೇಳುತ್ತಾ ನಮ್ಮ ಸಣ್ಣ ಸಣ್ಣ ಅಸಹಾಯಕತೆಗಳನ್ನೂ ಬಳಸಿಕೊಂಡು ಮತಾಂತರ ಮಾಡಿದ್ದು ಈ ದೇಶದ ದುರ್ವಿಧಿ.ಅದರೊಳಗೆ ಅವರದು ಮಾತ್ರವೇ ಪಾತ್ರವಿದೆ, ನಮ್ಮದೇನು ಇಲ್ಲ ಎನ್ನುವ ಹಾಗೂ ಇಲ್ಲ. ನಮ್ಮಲ್ಲಿಯೂ ಅನೇಕ ಹುಳುಕುಗಳಿದ್ದವು/ಇವೆ ಕೂಡ. ಅವುಗಳನ್ನು ಅವರು ಅನುಕೂಲ ಸಿಂಧು ಎನ್ನುವಂತೆ ಬಳಸಿಕೊಂಡು ಈ ನೆಲದ್ದಲ್ಲದ್ದ ಸಂಸ್ಕೃತಿಯನ್ನು, ನಡೆ ನುಡಿಯನ್ನು ಇತ್ತ ತಂದೆಸೆದರು ಅಷ್ಟೇ. ಆ ಮತಾತಂತರ ಸುಳಿಯೊಳಗೆ ಯಾವುದೋ ಕಾರಣಕ್ಕೆ ಸಿಲುಕಿಕೊಂಡ ಜೀವಗಳು ಪಡುವ ಪಡಿಪಾಟಲುಗಳು ಈ ಕಾದಂಬರಿಯ ಆದ್ಯಂತ ಹರಿಯುತ್ತವೆ. ಜೊತೆ ಜೊತೆಗೆ ಹಿಂದೂ ಧರ್ಮದಲ್ಲಿನ ಹುಳುಕುಗಳು, ಹಿಂದೂ ಜನರು ಜಾಗೃತರಾಗಬೇಕಾದ ಅಂಶ ಯಾವುದು ಎನ್ನುವತ್ತಲೂ ಕೆಲವೊಮ್ಮೆ ಪ್ರತ್ಯಕ್ಷವಾಗಿ, ಕೆಲವೊಮ್ಮೆ ಪರೋಕ್ಷವಾಗಿ ಬೆಳಕು ಹರಿಯುತ್ತದೆ. ಮನುಷ್ಯನಲ್ಲಿ ಯಾವುದಕ್ಕೂ ಕೊರತೆ ಇರದಿದ್ದರೂ ಸಾಂಸ್ಕೃತಿಕ ಸಂಘರ್ಷವೊಂದು ಆತನನ್ನು ಕೃಶನನ್ನಾಗಿಸುತ್ತದೆ ಎನ್ನುವುದು ಮನುಷ್ಯ ತಾನು ಬೆಳೆದು ಬಂದ ದಾರಿಯಲ್ಲಿ ಸಂಸ್ಕೃತಿಯನ್ನು ಅದೆಷ್ಟರ ಮಟ್ಟಿಗೆ ಬಿಗಿಯಾಗಿ ತಬ್ಬಿ ಹಿಡಿದಿದ್ದನೆನ್ನುವುದನ್ನು ಸೂಚಿಸುತ್ತದೆ.ಆ ಹಿಡಿತ ಸ್ವಲ್ಪ ತಾಳ-ಮೇಳ ತಪ್ಪಿದರೂ ಮರಣ ಸದೃಶ ಜೀವನವೊಂದಕ್ಕೆ ತಾನು ಸಾಕ್ಷಿಯಾಗುತ್ತಾನೆ ಎನ್ನುವುದು 'ಧರ್ಮಶ್ರೀ' ನಮಗೆ ಪ್ರವಹಿಸುವ ಸಂದೇಶ.

-o-

ಭಾನುವಾರ, ಜೂನ್ 6, 2021

ಕಂಪನಿಯದೇ ಕಂಪನ

ಮೊನ್ನೆ ಮೊನ್ನೆ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಕಥೆಯನ್ನೋದುತ್ತಿದ್ದೆ. ೧೯೫೮ರಲ್ಲಿ ಉಂಟಾದ ಸಂಗ್ರಾಮಕ್ಕೆ ಬ್ರಿಟೀಷ್ ಅರಸೊತ್ತಿಗೆ ತಲೆಬಾಗದಿದ್ದರೂ ಸ್ವಲ್ಪ ಬೆದರಿಕೊಂಡಿದ್ದು ನಿಜ. ಆ ಕಾರಣಕ್ಕೆ ಸಂಗ್ರಾಮವನ್ನು ತಣ್ಣಗಾಗಿಸಲು 'ಕಂಪನಿ ಸರ್ಕಾರ'ದಿಂದ 'ಬ್ರಿಟೀಷ್ ರಾಜ್' ಸರ್ಕಾರದೆಡೆಗೆ ನಮ್ಮ ಪಯಣ ಎಂದು ಬ್ರಿಟೀಷ್ ದೊರೆಗಳು ಭಾರತದಲ್ಲಿ ಸಾರಬೇಕಾಯ್ತು. ಇದರಿಂದ ಭಾರತದ ಜನಾಂಗ ತೃಪ್ತಿಯನ್ನೇನು ಹೊಂದಲಿಲ್ಲವಾದರೂ ಹೊಸ ವ್ಯವಸ್ಥೆಯೊಂದರ ಪರಿಚಯವಾಗಲು ಆ ಘಟನೆ ನಾಂದಿಯಾಯಿತು. ಕಂಪನಿಯಿಂದಲೇ ಸಕಲ ಯುದ್ಧಗಳಾಗಿ ಭಾರತದ ಸಕಲ ಸಂಸ್ಥಾನಗಳು ಕಂಪನಿಯ ಪಾಲಾದ ತರುವಾಯು ಇಂಗ್ಲೆಂಡಿನ ಬ್ರಿಟೀಷ್ ದೊರೆಗಳು ನೇರವಾಗಿಯೇ ಈಸ್ಟ್ ಇಂಡಿಯಾ ಕಂಪನಿಗೆ ಲಗಾಮು ಬಿಗಿದು ಸರ್ಕಾರದ ಚುಕ್ಕಾಣಿಯನ್ನು ತಮ್ಮ ಕೈಗೆ ತೆಗೆದುಕೊಂಡರು. ಅಂದಿನಿಂದ ಇಂದಿನವರೆಗೂ ವಿವಿಧ ಕಂಪನಿಗಳು ಭಾರತದಲ್ಲಿ ಬಂದು ಹೋಗಿವೆ, ಕೆಲವು ಈಗಲೂ ಇವೆ. 'ಕಂಪನಿ' ಎನ್ನುವ ಪದ ಇಂಗ್ಲೀಷಿನವರ ಜೊತೆ ಭಾರತಕ್ಕೆ ಬಂತೆಂಬುದು ಮೇಲ್ನೋಟಕ್ಕೆ ನಮಗೆ ಅರಿವಿದ್ದೇ ಇದೆ. ಆದರೆ ಕಂಪನಿಯ ಸಂಸ್ಕೃತಿ ನಮ್ಮ ನಮ್ಮಲ್ಲಿ ಬದಲಾವಣೆ ತಂದೊಡ್ಡಿದ್ದು ಹೇಗೆ? ಅದು ಭಾರತದ ಸಕಲ ಸೊಡರುಗಳ ತುತ್ತಿನ ಚೀಲಕ್ಕೆ ಜೀವ ಸೆಲೆಯಾಗಿದ್ದು ಹೇಗೆ? ಎನ್ನುವ ವಿಚಾರಗಳೆಲ್ಲಾ ಸಂಶೋಧನಾ ಪ್ರಬಂಧಗಳಾಗಬೇಕಾಗಬಹುದು. ತೀರಾ ಚಿಕ್ಕದೆನ್ನಿಸುವ ಈ ವಿಚಾರ ಅಷ್ಟೊಂದು ಧೀರ್ಘ ಹಾಗು ಅದರ ಪರಿಣಾಮಗಳು ದೇಶಿಯ ಹಣಕಾಸು ವ್ಯವಸ್ಥೆಯ ಮೇಲೆ ನೇರಾ ನೇರವಾಗಿಯೇ ಉಂಟಾಗುತ್ತಾ ಸಾಗುತ್ತವೆ.

ವ್ಯಾಪಾರದ ಕಂಪನಿಯಾಗಿ ಪಶ್ಚಿಮದೇಶಗಳಿಂದ ಭಾರತಕ್ಕೆ ಬಂದಿಳಿದ ಕಂಪನಿಗಳು ತಮ್ಮೊಡನೆ ಸಂಸ್ಕೃತಿಯೊಂದನ್ನು, ವ್ಯವಹಾರ ಸಿದ್ಧಾಂತವೊಂದನ್ನೂ ಹೊತ್ತುಕೊಂಡು ಬಂದವು. ಅಲ್ಲಿಯವರೆಗೂ ಭಾರತದಲ್ಲಿ ತಂಡ ತಂಡ ವಾಗಿ ಒಂದಿಲ್ಲೊಂದು ಊರಿಗೆ ಹೋಗಿ ಮಾಡುವ ಯುದ್ಧಗಳು, ಕಲಾ ಸೇವೆಗಳು, ಸಂತೆ-ಮಾರುಕಟ್ಟೆಗಳು ಇದ್ದವೇ ಹೊರತು ನಿಯಮಗಳನ್ನು ಮೈಗೂಡಿಸಿಕೊಂಡು ಶಿಸ್ತುಬದ್ಧವಾದ, ಕ್ರಮವಾದ ವ್ಯವಹಾರ ಸಿದ್ಧಾಂತಗಳನ್ನು ಹೊಂದಿ ಒಂದು ತಂಡವಾಗಿ ಕೆಲಸ ಮಾಡುವ ವ್ಯಾವಹಾರಿಕ ಸಂಸ್ಥೆಗಳು ಇಲ್ಲವೆಂದು ತೋರುತ್ತದೆ. ಬಹುಶಃ ಇದ್ದರೂ ಭಾರತ ಉಪಖಂಡದಾದ್ಯಂತ ಹಾಗೆ ಇದ್ದಿತು ಎನ್ನುವುದಕ್ಕೆ ಪ್ರಬಲ ಸಾಕ್ಷಿ ಪುರಾವೆಗಳು ಇಲ್ಲವಷ್ಟೆ. ಭಾರತೀಯ ಆಡಳಿತೆಯಲ್ಲಿ ಸಿರಿವಂತಿಕೆ ನೋಡಿ ಮಣೆ ಹಾಕುವ ಕಾಲ ದೂರಾಗಿ, ನೇಮಿತ ಅಧಿಕಾರಿಗಳ ಮೂಲಕ ರಾಜ ಪ್ರಭುತ್ವವನ್ನು ಸ್ಥಾಪಿಸುವ ಹಾಗು ರಾಜಸ್ವಕ್ಕಾಗಿ ಅಧಿಕಾರಿಗಳನ್ನೇ ಬಳಸಿಕೊಳ್ಳುವ ರಿವಾಜು ಮೊಘಲರ ಕಾಲದಲ್ಲೇ ಬೇರೂರಲು ಆರಂಭವಾಗಿದ್ದು ಭಾರತೀಯರಿಗೆ ಕಂಪನಿ ಸಂಸ್ಕೃತಿಗೆ ಒಗ್ಗಿಕೊಳ್ಳಲು ವರದಾನವಾಗಿರಬೇಕು.

ಬ್ರಿಟೀಷರು ದಕ್ಷಿಣ ಭಾರತದ ಮೂಲಕ ಒಳ ನುಗ್ಗಲು ಸಮರ್ಥರಾದರೂ ಉತ್ತರದ ಗಂಗಾ ಮುಖಜ ಭೂಮಿ ಅವರಿಗೆ ಹೆಚ್ಚು ಮಾನವ ಸಂಪನ್ಮೂಲ ಹಾಗು ಪ್ರಾಕೃತಿಕ ಸಂಪನ್ಮೂಲಗಳನ್ನು ಒದಗಿಸಿಕೊಟ್ಟಿತು. ಅದೇ ಕಾರಣಕ್ಕೆ ಬಂಗಾಳ ಬ್ರಿಟೀಷರ ಆರಂಭಿಕ ಕಾರ್ಯ ಸ್ಥಾನವಾಯಿತು. ಈಸ್ಟ್ ಇಂಡಿಯಾ ಕಂಪನಿಯ ಕಾರ್ಯ ಸುಸೂತ್ರವಾಗಿ ನಡೆಯುತ್ತಿದ್ದರೂ ಕಂಪನಿಯ ಕೆಲವು ದುರಾಲೋಚನೆ ಮಾಡುವ ವ್ಯಕ್ತಿಗಳಿಂದ ವ್ಯತಿರಿಕ್ತವಾಯಿತು. ಕಂಪನಿಯು ಸ್ಥಳೀಯ ಸರ್ಕಾರಕ್ಕೆ(ಬಂಗಾಳದ ನವಾಬನ ಸರ್ಕಾರಕ್ಕೆ) ಕೊಡುವ ಸುಂಕದಲ್ಲಿ ವಿನಾಯಿತಿ ಕೇಳಿತು, ವಿನಾಯಿತಿ ಕೊಡಲು ನೀವೇನು ನಮ್ಮ ಸೋದರ ಮಾವನ ಮಕ್ಕಳೇ?, ಬಾಯ್ಮುಚ್ಚಿಕೊಂಡು ಸುಂಕ ಕಟ್ಟಿ ಎನ್ನುವಂತಹ ಬಂಗಾಳದ ನವಾಬನ ವರ್ತನೆಗೆ ಕ್ರುದ್ಧರಾಗಿ ಇಂಗ್ಲೀಷರು ಸೇಡು ತೀರಿಸಕೊಳ್ಳಲು ನಿಲ್ಲುತ್ತಾರೆ. ಸ್ಥಳೀಯ ರಾಜಕೀಯ ಸನ್ನಿವೇಶಗಳನ್ನು ಬಳಸಿಕೊಂಡು ಬಂಗಾಳದ ನವಾಬನಿಗೂ ಆತನ ಸೇನಾಧಿಪತಿಗೂ ಕಿತಾಪತಿ ತಂದಿಟ್ಟು ಅಲ್ಲಿನ ಸರ್ಕಾರವನ್ನು ಕೆಡವಿ ತಾವೇ ಅಧಿಕಾರ ಗದ್ದುಗೆಗೇರುತ್ತಾರೆ. ವಿಧಿಯಿಲ್ಲದೇ ಅಂದಿನ ದೆಹಲಿಯ ಮೊಘಲ್ ಆಡಳಿತ ಉತ್ತರಾಧಿಕಾರಿಗಳಿಲ್ಲದ ಬಂಗಾಳಕ್ಕೆ ಕಂಪನಿಯೇ ಉತ್ತರಾಧಿಕಾರಿ ಎಂದು ಘೋಷಿಸುತ್ತದೆ. ತಮ್ಮದೇ ಅಧಿಕಾರದಲ್ಲಿ ಸುಂಕರಹಿತ ವ್ಯಾಪಾರ-ವ್ಯವಹಾರ ನಡೆಸಲು ಮೊದಲಾಗುವ ಕಂಪನಿ ಅಲ್ಲಿನ ಜನರ ಭೂ-ತೆರಿಗೆ ಸೇರಿ ಇನ್ನಿತರ ತೆರಿಗೆಯ ರುಚಿಯನ್ನು ನೋಡುತ್ತದೆ. ನಾಯಿಯೊಂದಕ್ಕೆ ಮನುಷ್ಯ ಮಾಂಸದ ರುಚಿ ಸಿಕ್ಕರೆ ಪದೇ ಪದೇ ಅದನ್ನೇ ಬಯಸುತ್ತದಂತೆ, ಅದಕ್ಕಾಗಿ ನೂರಾರು ಜನರನ್ನು ಕಡಿಯುತ್ತದಂತೆ ಆ ನಾಯಿ. ಅಂತಹುದೇ ಚಾಳಿಗೆ ಒಳಗಾದ ಈಸ್ಟ್ ಇಂಡಿಯಾ ಕಂಪನಿ ಸುತ್ತ ಮುತ್ತಲ ರಾಜ್ಯಗಳನ್ನು ನೊಣವಿಕೊಂಡಿದ್ದಲ್ಲದೆ ದೆಹಲಿಯ ಮೊಘಲ್ ಗದ್ದುಗೆಗೆ ಗುದ್ದು ಕೊಟ್ಟಿತು. ಅದಾದ ನಂತರ ಇಡೀ ಭಾರತ ಉಪಖಂಡದ ಸಂಸ್ಥಾನಗಳು ಪ್ರತ್ಯಕ್ಷವಾಗಿ, ಅಥವಾ ಪರೋಕ್ಷವಾಗಿ ಕಂಪನಿಯ ವ್ಯವಹಾರದಡಿಗೆ ಬಂದಿದ್ದು ಅನಂತರ ಮೊದಲ ಸಿಪಾಯಿ ದಂಗೆಯ ಫಲವಾಗಿ ಕಂಪನಿಯ ಲಂಡನ್ನಿನ ರಾಜ ಪ್ರಭುತ್ವ ನೇರವಾಗಿ ಭಾರತದ ಆಡಳಿತವನ್ನು ತನ್ನ ಕೈಗೆ ತೆಗೆದುಕೊಂಡಿದ್ದು ಇದೀಗ ಇತಿಹಾಸ. ಬಹುಷಃ ಭಾರತದಷ್ಟು ಸಂಪನ್ಮೂಲಗಳನ್ನು ಬ್ರಿಟೀಷರ ದೇಶಕ್ಕೆ ವರ್ಗಾಯಿಸಿದಷ್ಟು ಇನ್ಯಾವ ವಸಾಹತು ದೇಶವೂ ವರ್ಗಾಯಿಸಿಲ್ಲ.

ಬ್ರಿಟೀಷ್ ಸರ್ಕಾರ ಭಾರತದಲ್ಲಿ ಅನುಷ್ಠಾನವಾದ ೧೯೫೮ರ ನಂತರ ಕಂಪನಿ ಎನ್ನುವುದು ಭಾರತದ ಸ್ಮೃತಿ ಪಟಲದಿಂದ ದೂರವೇನು ಉಳಿಯಲಿಲ್ಲ. ಉತ್ಪನ್ನಗಳನ್ನು ಉತ್ಪಾದಿಸುವ ಕಂಪನಿಗಳು ಹುಟ್ಟಕೊಂಡವು. ಭಾರತೀಯರ ಅಧಿಪತ್ಯದಲ್ಲೇ ನಡೆಯುವ ಕೈಗಾರಿಕೆ, ಮುದ್ರಣ ಮಾಧ್ಯಮ ಕಂಪನಿಗಳು ಹುಟ್ಟಿಕೊಂಡು ಅನೇಕರ ತುತ್ತಿನ ಚೀಲಕ್ಕೆ ಕಾರಣವಾದವು. ಅದಕ್ಕಿರುವ ಅತ್ಯಂತ ಉತ್ತಮ ಉದಾಹರಣೆ ಎಂದರೆ ಅದು ನಮ್ಮ ದೇಶದ 'ಟಾಟಾ' ಸಂಸ್ಥೆ. ಸಿಪಾಯಿ ದಂಗೆ ಮುಗಿದ ಒಂದೇ ದಶಕದಲ್ಲಿ ಕಂಪನಿ ಆರಂಭವಾಗಿ ದೇಶದಾದ್ಯಂತ ಈವತ್ತಿನ ಮಟ್ಟಿಗೆ ಬೆಳೆದು ನಿಂತಿರುವುದು ನೀವು ನಾವೆಲ್ಲಾ ಸಾಕ್ಷೀಕರಿಸಿಕೊಂಡಿರುವ ಸತ್ಯ.

ಸಂಗೀತ ವಿಚಾರದಲ್ಲಿ ಘರಾಣಗಳನ್ನು ಮಾಡಿಕೊಂಡು ಊರೂರು ತಿರುಗಿ ಕಚೇರಿಗಳನ್ನು ನೀಡುತ್ತಿದ್ದ ಸಂಗೀತ ತಂಡಗಳೂ ತಮ್ಮ ಹೆಸರನ್ನು ಕಂಪನಿಯಾಗಿ ಬದಲಿಸಿಕೊಂಡವು. ಇವೆಲ್ಲಕ್ಕಿಂತ ಹತ್ತೊಂಭತ್ತನೇ ಶತಮಾನದ ಉತ್ತರಾರ್ಧದಿಂದ ಇಪ್ಪತ್ತನೇ ಶತಮಾನದ ಬಹುಪಾಲು ಸುಮಾರು ೧೦೦-೧೨೦ ವರ್ಷಗಳ ಕಾಲ ಕನ್ನಡ ಸೀಮೆಯಲ್ಲಿ ಮೆರೆದದ್ದು ನಾಟಕದ ಕಂಪನಿಗಳು. ನಾಟಕದ ಕಂಪನಿಗಳು ಕನ್ನಡ ಸೀಮೆಯಲ್ಲಿ ಸಿನೆಮಾ ಪ್ರಪಂಚಕ್ಕಿಂತ ಮೊದಲು ನೆಚ್ಚಿಕೊಂಡಿದ್ದ ಮನೋರಂಜನಾ ಮಾಧ್ಯಮ. ಅಲ್ಲಿನ ಜೀವನ ಶೈಲಿ, ಕಷ್ಟ-ನಷ್ಟಗಳನ್ನು ಇಂದು ನಾವು ಹಲವರ ಜೀವನ ಚರಿತ್ರೆಗಳಿಂದ ತಿಳಿದುಕೊಳ್ಳಬಹುದು. ಕನ್ನಡ ವರನಟ ಡಾ.ರಾಜ್ ಕುಮಾರ್, ಗುಬ್ಬಿ ವೀರಣ್ಣನವರು, ಸುಬ್ಬಯ್ಯ ನಾಯ್ಡು, ಗುಡಿಗೇರಿ ಬಸವರಾಜರ ಜೀವನ ಚರಿತ್ರೆಗಳನ್ನೊಮ್ಮೆ ನೀವು ತಿಳಿದುಕೊಂಡರೆ ನಾಟಕ ಕಂಪನಿಯ ಸಂಸ್ಕೃತಿ ಆಗ್ಗೆ ಅನೇಕ ಕಲಾವಿದರಿಗೆ ಜೀವ ಸೆಲೆಯಾಗಿದ್ದು ಹೇಗೆ ಎನ್ನುವುದು ತಿಳಿದುಬರುತ್ತದೆ. ಪುಟ್ಟಣ್ಣ ಕಣಗಾಲರ ನಿರ್ದೇಶನದ 'ರಂಗನಾಯಕಿ' ಸಿನೆಮಾ ಕೂಡ ಇದೇ ಕಥಾ ಹಂದರದ್ದು. ಅದೊಂದು ಸಿನೆಮಾ ನಿಮಗೆ ನಾಟಕ ಕಂಪನಿಯ ಹಿಂದಿನ ನೋವು-ನಲಿವುಗಳನ್ನು ಕಟ್ಟಿಕೊಡುವಷ್ಟು ಸುಲಭವಾಗಿ ನಾನು ಇಲ್ಲಿ ಕಟ್ಟಿಕೊಡಲಾರೆನೇನೋ!. ಅವಶ್ಯವಾಗಿ ಆ ಸಿನೆಮಾವನ್ನು ನೋಡಿ, ನಾನಿಲ್ಲಿ ಬರೆಯುವುದಕ್ಕಿಂತ ಹೆಚ್ಚಿನ ವಿಚಾರ ವಿಶೇಷತೆ ನಿಮ್ಮೊಳಗೆ ಹರಿಯುತ್ತದೆ.

ಇನ್ನು ಸ್ವಾತಂತ್ರ್ಯ ಕಂಡು ಸ್ವಾಯತ್ತತೆಯೆಡೆಗೆ ನುಗ್ಗಿದ ಭಾರತ ೧೯೯೧ರಲ್ಲಿ ತನ್ನ ಆರ್ಥಿಕ ನೀತಿಯಲ್ಲಿ ಸ್ವಲ್ಪ ಸಡಿಲಿಕೆ ಮಾಡಿಕೊಂಡು ಮುಕ್ತ ಮಾರುಕಟ್ಟೆಯೆಡೆಗೆ ನಡೆಯಿತು. ವಿದೇಶದ ಕಂಪನಿಗಳು ಭಾರತಕ್ಕೆ ದಾಂಗುಡಿಯಿಡಲು ಅದು ಕಾರಣವಾಯಿತಷ್ಟೆ. ಭಾರತದಲ್ಲಿ ಮಿತಿ ಮೀರಿ ಬೆಳೆಯುತ್ತಿದ್ದ ಜನಸಂಖ್ಯೆಗೆ ವಿಪರೀತ ಉದ್ಯೋಗದ ಅವಕಾಶಗಳನ್ನು ವಿದೇಶಿ ಕಂಪನಿಗಳು ಭಾರತದ ನೆಲದಲ್ಲೇ ಸೃಷ್ಟಿಸಿಕೊಟ್ಟವು. ಭಾರತೇತರ ದೇಶಗಳಲ್ಲಿ ಮಾನವ ಸಂಪನ್ಮೂಲ ಕೊರತೆ ಇಂದಿಗೂ ಇದೆ, ಒಂದಷ್ಟು ದೇಶಗಳು ಇದಕ್ಕೆ ಹೊರತಾಗಿರಬಹುದು, ಆದರೆ ಇಂದು ಭಾರತ ವಿಶ್ವದ ಅನೇಕ ರಾಷ್ಟ್ರಗಳಿಗೆ ತನ್ನ ನೆಲದಿಂದ ಮಾನವ ಸಂಪನ್ಮೂಲ ಒದಗಿಸುತ್ತಿರುವುದು ಸಾರುವುದೇನನ್ನು? ಕೆಲವೇ ದಶಕಗಳ ಹಿಂದೆ ಭಾರತಕ್ಕೆ ತಲೆ ನೋವಾಗಿದ್ದ ಜನಸಂಖ್ಯಾ ಏರಿಕೆ ಇದೀಗ ಭಾರತಕ್ಕೆ ವರದಾನವಾಗಿದ್ದು ಹೇಗೆ?

ವಿದೇಶಿ ಕಂಪನಿಗಳು ಭಾರತದ ಸರ್ಕಾರಿ ಸ್ವಾಮ್ಯವನ್ನು ಮೀರಿಸಿದಷ್ಟು ಜನರಿಗೆ ಭಾರತದ ಗಡಿಯ ಒಳಗೂ, ಹೊರಗೂ ಉದ್ಯೋಗ ಕೊಟ್ಟಿವೆ. ಆ ಮೂಲಕ ಭಾರತದ ಜನಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದ್ದರೂ ಅದು ತಲೆ ನೋವಾಗದಂತೆ, ಬದಲಾಗಿ ಅದೇ ವರದಾನವಾಗುವಂತೆ ಬದಲಿಸಲಾಗಿದೆ. ಭಾರತ ಇಂದು ಪ್ರಪಂಚಕ್ಕೆ ಮಾನವ ಸಂಪನ್ಮೂಲ ಸರಬರಾಜು ಮಾಡುವ ಪ್ರಮುಖ ದೇಶವಾಗಿದೆ. ಕೆಲವು ಪೂರ್ವ ದೇಶಗಳೂ ಈಗೀಗ ಭಾರತದ ನಡೆ ಅನುಸರಿಸಿ ತನ್ನ ನೆಲದ ಮಾನವ ಸಂಪನ್ಮೂಲವನ್ನು ಬೌದ್ಧಿಕವಾಗಿ ಅಣಿಗೊಳಿಸಿ ಪಶ್ಚಿಮ ದೇಶಗಳೆಡೆಗೆ ಹೊರಡಿಸುತ್ತಿರುವುದು ನಾವಿಲ್ಲಿ ಗಮನಿಸಬೇಕಾದ ಅಂಶ.ಅದಷ್ಟೇ ಅಲ್ಲ, ನಮ್ಮ ಹಿಂದಿನ ತಲೆಮಾರಿನವರು ಯಾರು ಕಂಡಿರದಂತಹ ವಿಪರೀತ ಉದ್ಯೋಗಗಳು ಸೃಷ್ಟಿಯಾಗಿವೆ. ಹಿಂದೆಲ್ಲಾ ದಶಕಗಳ ಗಟ್ಟಲೆ ಒಂದೇ ಕಂಪನಿಯಲ್ಲಿ ದುಡಿದು ನಿವೃತ್ತರಾಗುತ್ತಲೋ ಅಥವಾ ತಮ್ಮ ಉದ್ಯೋಗ ಜೀವನದಲ್ಲಿ ಎರಡೋ ಮೂರು ಬಾರಿಯೋ ಉದ್ಯೋಗ ಬದಲಿಸುತ್ತಿದ್ದ ಕಾಲವೀಗ ಹೋಗಿ ವರ್ಷಕ್ಕೊಂದರಂತೆ ಉದ್ಯೋಗ ಬದಲಿಸುವ ಅವಕಾಶ ನಮಗೆಲ್ಲ ದಕ್ಕಿರುವುದು ಕಂಪನಿಗಳ ಕೃಪಾಶೀರ್ವಾದದಿಂದಲೇ. ಈ ಅವಕಾಶ ಮಾನವನ ಇತಿಹಾಸದಲ್ಲಿ ಇದೇ ಮೊದಲು ಎಂಬುದು ನಮಗೆ ಇನ್ನೂ ಖುಷಿ ಉಂಟು ಮಾಡಬಹುದು.ದೇಶದ ಒಳಗೂ ಹೊರಗೂ ಈ ಪರಿ ಉದ್ಯೋಗಗಳು ಸೃಷ್ಟಿಯಾಗಿರುವುದರಿಂದ ದೇಶಿಯ ಆರ್ಥಿಕ ವ್ಯವಸ್ಥೆ ಮೊದಲಿಗಿಂತಲೂ ಸುಧಾರಿಸಿಕೊಂಡಿದೆ. ಭಾರತ ಸರ್ಕಾರವೂ ೨೦ ಲಕ್ಷ ಕೋಟಿಗಿಂತಲೂ ಹೆಚ್ಚಿನ ಬಜೆಟ್ ಮಂಡನೆ ಮಾಡುವದಕ್ಕೆ ಹಿಡಿದು ಅದಾಗಲೇ ದಶಕ ಉರುಳಿರಬೇಕು!.

ಕಂಪನಿ ಸಂಸ್ಕೃತಿ ಭಾರತಕ್ಕೆ ಕಾಲಿಟ್ಟಾಗಿನಿಂದ ಒಂದಿಲ್ಲೊಂದು ರೀತಿಯಲ್ಲಿ ಈ ದೇಶದ ಜನರ ತುತ್ತಿನ ಚೀಲಕ್ಕೆ ಆಧಾರವಾಗಿವೆ. ಅವುಗಳ ಮಧ್ಯೆ ಮಧ್ಯೆ ಕೆಲವು ಅಹಿತಕರಗಳು ನಡೆದರೂ ಈ ದೇಶದ ಅನ್ನದ ಹಸಿವನ್ನು ತೀರಿಸಲು ಕಂಪನಿಗಳ ಪಾತ್ರವಿರುವುದನ್ನು ನಾವು ಮರೆಯುವಂತಿಲ್ಲ.ವರ್ತಮಾನ ಕಾಲದಲ್ಲೂ ಕೂಡ ಅತೀ ಹೆಚ್ಚು ಪಧವೀಧರರನ್ನು ಪ್ರತೀ ವರ್ಷ ಉತ್ಪಾದಿಸುತ್ತಿರುವ ಭಾರತಕ್ಕೆ ಉದ್ಯೋಗ ವಿಚಾರದಲ್ಲಿ ನಿಟ್ಟುಸಿರು ಬಿಡುವಂತೆ ಮಾಡಿರುವುದು ಕಂಪನಿಗಳ ಅಸ್ತಿತ್ವವೇ.ಕಂಪನಿಗಳ ಈ ಕಂಪನ ಚಾಲ್ತಿಯಲ್ಲಿರುವವರೆವಿಗೂ ಮೊದಲಿನ ಹಾಗೆ ಅನ್ನಕ್ಕೇನು ಕೊರತೆಯಾಗಲಾರದು ಬಿಡಿ.

-o-

ಭಾನುವಾರ, ಮೇ 30, 2021

ತತ್ವ ಸಿದ್ಧಾಂತಗಳೆಲ್ಲೆ ಮೀರಿ

ನಮ್ಮ ದೇಶ ಅನೇಕ ಭಾಷೆ, ಸಂಸೃತಿ, ವಿಚಾರ, ಧರ್ಮ, ಜಾತಿಗಳ ಆಗರ. ಇಲ್ಲಿನಷ್ಟು ವೈವಿಧ್ಯತೆಯನ್ನೂ ಪ್ರಪಂಚದ ಬೇರಾವ ಭಾಗದಲ್ಲೂ ಕಾಣುವುದು ಸಾಧ್ಯವೇ ಇಲ್ಲ. ಪ್ರಪಂಚದ ಎಲ್ಲ ದೇಶಗಳು ತಮ್ಮ ಭಾಷೆಯೋ, ಧರ್ಮವೋ, ರಾಜಕೀಯ ಕಾರಣಕ್ಕೋ ಒಂದಾಗಿ ದೇಶವೆನಿಸಿಕೊಂಡರೆ ಭಾರತ ಮಾತ್ರ ಇವುಗಳೆಲ್ಲವನ್ನೂ ಮೀರಿ ನಿಂತಿರುವುದು ಆಶ್ಚರ್ಯವೇ. ಸ್ವಾತಂತ್ರ್ಯಾನಂತರ ದೇಶ ವಿಭಜನೆಗೊಂಡು ಧರ್ಮಾಧಾರಿತ ವಿಭಜನೆಗೆ ಮೊದಲಾದಾಗ ಭಾರತವು ಧರ್ಮಾತೀತ ವಿಚಾರವನ್ನಪ್ಪಿಕೊಂಡಿತು. ಕಾರಣ, ಭಾರತ ಕಳೆದ ಮೂರು ಸಹಸ್ತ್ರಮಾನಗಳಲ್ಲಿ ತನ್ನ ನೆಲದಲ್ಲೇ ಇನ್ನಿತರ ಧರ್ಮಗಳಿಗೆ ಜನ್ಮವಿತ್ತಿದೆ, ಅಷ್ಟಲ್ಲದೇ ಹೊರಗಿನಿಂದ ಬಂದ ಧರ್ಮಗಳಿಗೂ ಜಾಗ ಕೊಟ್ಟಿದೆ.

ಧರ್ಮದ ವಿಚಾರಕ್ಕೆ ದೇಶವನ್ನೇ ತುಂಡರಿಸಿಕೊಂಡರೂ ನಮ್ಮಲ್ಲಿ ಹಲವರಿಗೆ ಬುದ್ಧಿ ಬಾರದಿರುವುದು ವಿಚಿತ್ರವೆನಿಸುತ್ತದೆ. ದೇಶಕ್ಕಿಂತ ಧರ್ಮವೇ ದೊಡ್ಡದೆಂದು ಧರ್ಮದ ಪರದೆಯೊಳಗೆ ಭಾರತ ವಿರೋಧಿ ದೇಶಗಳಿಗೂ ಬೆಂಬಲವೀಯುವರೂ, ತಮ್ಮ ಧರ್ಮಗಳೊಳಗೇ ಅನೇಕ ಒಡಕು ಸೃಷ್ಟಿಸಿಕೊಂಡು ತತ್ವ-ಸಿದ್ಧಾಂತಗಳಿಗೆ ಬಡಿದಾಡಿಕೊಳ್ಳುವವರೂ, ಒಂದೇ ಧರ್ಮದೊಳಗೂ ಬಡಿದಾಡಿಕೊಳ್ಳುವವರೂ, ಧರ್ಮದೊಳಗೂ ಪಂಥ ಮಾಡಿಕೊಂಡು ಧಾರ್ಮಿಕ ಆಚರಣೆ-ಅನುಷ್ಠಾನಗಳ ಹೆಸರಲ್ಲೇ ತಮ್ಮ ಜೀವನವನ್ನು ಬರಡು ಮಾಡಿಕೊಂಡವರೂ ಅಸಂಖ್ಯವಾಗಿದ್ದಾರೆ. ಧರ್ಮ, ದೇವರು. ಆಚರಣೆ, ಅನುಷ್ಠಾನ ಅಂತ ಯಾವುದ್ಯಾವುದನ್ನು ಎಷ್ಟೆಷ್ಟು ಮಾಡಿದರು ಕೊನೆಗೆ ನಾವು ಮಾಡುವ ಕೆಲಸವೊಂದೇ ನಮ್ಮ ಕೈ ಹಿಡಿಯುವುದು ಎನ್ನುವ ಬುದ್ಧಿ ತಿಳಿದವರೂ ಮತ್ತೆ ಅದೇ ಹೊಲೆಗೆಸರಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ದೇಶದ ಬುದ್ಧಿವಂತ ನಾಗರೀಕರು ಈ ಪರಿ ಮೌಢ್ಯಕ್ಕೊಳಗಾದರೆ, ಅದೂ ಈ ವೈಜ್ಞಾನಿಕ ಯುಗದಲ್ಲಿ! ದೇಶ ಪ್ರಗತಿ ಸಾಧಿಸುತ್ತದೆ ಎನ್ನುವುದು ಕಲ್ಪನೆಯಾಗಿಯೇ ಉಳಿಯುತ್ತದೆ ಹೊರತು ಕಾರ್ಯ ರೂಪಕ್ಕೆ ಬರುವುದಿಲ್ಲ.

ಹಾಗೆಂದು ದೇವರಿದ್ದಾನೋ, ಇಲ್ಲವೋ? ಎಂಬ ಜಿಜ್ಞಾಸೆಗೆ ನಾನು ನಾಂದಿಯಾಗುತ್ತಿಲ್ಲ. ದೇವರಿದ್ದರೆ, ಅವನು ಸರ್ವಶಕ್ತ, ಸರ್ವಾಂತರ್ಯಾಮಿ. ನಿಮ್ಮ ಎಲ್ಲ ಬೇಕು ಬೇಡಗಳನ್ನು ತಿಳಿದವನು ಆತ. ಆತನನ್ನು ನೀವು ಬೇಡಿಕೊಳ್ಳುವ ಅವಶ್ಯಕತೆಯಾದರೂ ಏನು?. ವಿವಿಧ ಮಂತ್ರ, ಆರಾಧನೆಗಳಿಂದ ಆತನಿಗೆ ಭಕ್ತಿ ಸಮರ್ಪಣೆ ಮಾಡುವ ಜರೂರತ್ತಾದರೂ ಏನು? ಅವನ ಕಟಾಕ್ಷದಿಂದಲೇ ಇಲ್ಲಿಗೆ ಬಂದು ಬಾಳುತ್ತಿರುವ ನೀವು ಅವನನ್ನೇ ಬೇಡುವುದೇನನ್ನು?. ನಿಮಗೇನು ಬೇಕು? ಏನು ಬೇಡವೆಂದು ಆತನಿಗೆ ತಿಳಿದಿಲ್ಲದಿರುವಷ್ಟು ಆತ ದಡ್ಡನೆಂದುಕೊಂಡಿರಾ?. ಖಂಡಿತಾ ಇಲ್ಲ. ಒಂದು ಪಕ್ಷ ದೇವರಿಲ್ಲ ಎಂದಿಟ್ಟುಕೊಳ್ಳಿ. ಆಗ ನಿಮಗ್ಯಾರು ಇಲ್ಲ. ನಿಮ್ಮನ್ನು ಹೆತ್ತವರು, ಬಂಧು ಬಳಗ, ನಿಮ್ಮನ್ನು ಪ್ರೀತಿಸುವ ಜನ ಅಷ್ಟರ ಹೊರತು ಪ್ರಪಂಚದಲ್ಲಿನ್ಯಾರು ಇಲ್ಲ. ಹಾಗೆಂದಮೇಲೆ ನಿಮ್ಮ ಸ್ವಂತ ಬಲ ನಂಬಿಕೊಂಡು ನೀವು ಬದುಕಬೇಕು, ಬಾಳಬೇಕು. ಸ್ವಂತ ಬಲವ ನಂಬಿ ಬದುಕಿದವನಿಗೆ ಇಲ್ಲಿ ಸೋಲಾಗಿದೆಯೇ?. ಇಲ್ಲವಲ್ಲ. ಸ್ವಬಲವ ನಂಬಿ ಬದುಕಿದವರೂ ಅಮೋಘವಾದವುಗಳನ್ನು ಇಲ್ಲಿ ಸೃಷ್ಟಿಸಿದ್ದಾರಲ್ಲ!

ಬಿಡಿ, ಈ ವಾದ ಪ್ರತಿವಾದ ಮುಗಿಯದ ಕಥೆ. ಅದೂ ಭಾರತದಲ್ಲಿ. ದೇವರನ್ನು ಭೋಗ್ಯ ಹಾಕಿಸಿಕೊಂಡವರಂತೆ, ದತ್ತು ಪಡೆದುಕೊಂಡವರಂತೆ ಕೆಲವರಾಡುವುದು ನೋಡಿದರೆ ಅವರೆಂದೂ ನಿಜ ಸ್ಥಿತಿಯ ಅರಿವು ಮಾಡಿಕೊಂಡವರಲ್ಲ ಎನಿಸುತ್ತದೆ. ತಾವು ಓದಿರುವ ತಮ್ಮ ಧಾರ್ಮಿಕ ಗ್ರಂಥಗಳಲ್ಲಿರುವುದೇ ಸರಿ ಎಂದು ಹೊಡೆದಾಟಕ್ಕೆ ನಿಲ್ಲುವ ಪ್ರವೃತ್ತಿ ಅನೇಕರಲ್ಲಿದೆ. ಧರ್ಮ, ಜಾತಿ, ಪಂಗಡಗಳ ಮೇಲಿನ ಅತೀವ ನಿಷ್ಠೆ ಮಾನವತೆಗೆ ವಿರುದ್ಧವೇ ಹೊರತು ಮಾನವತೆಯ ಪರವೆಂದೂ ಅಲ್ಲ. ನಿಮ್ಮನ್ನು ನೀವು ಪಂಗಡವೊಂದರೊಳಗೆ ಗುರುತಿಸಿಕೊಂಡಾಗಲೇ ನಿಮ್ಮಲ್ಲಿನ ಮಾನವೀಯತೆಗೆ ಗಡಿ ಬಂದು ಅದರ ವಿಸ್ತಾರತೆಯನ್ನು ಕಿರಿದಾಗಿಸುತ್ತಾ ಸಾಗುತ್ತದೆ ಅಷ್ಟೇ.

ಈ ಚರ್ಚೆ, ವಾದಗಳಿಗೆಲ್ಲಾ ಹೊರತಾಗಿ ಕಾಯಕವ ನಂಬಿ ಬದುಕಿ, ಮೈ ಮುರಿದು ದುಡಿಯಿರಿ. ಮಾಡುವ ಕಾಯಕದಲ್ಲಿ ನಿಷ್ಠೆಯಿರಿಸಿ ದುಡಿದರೆ ಫಲಾಫಲ ಬಂದೇ ತೀರುತ್ತದೆ ಎನ್ನುವುದನ್ನೇ ಹನ್ನೆರಡನೇ ಶತಮಾನದ ಬಸವಾದಿ ಶರಣರು ಸಾರಿದರು, ಅಷ್ಟೇ ಅಲ್ಲ ಹಾಗೆ ಬಾಳಿ ತೋರಿಸಿದರೂ ಕೂಡ. ಕೆಲವು ದಶಕಗಳ ಹಿಂದೆ ಚೀನಾ ದೇಶ ಇದೇ ಕಾಯಕ ತತ್ವವನ್ನು ಜನರ ಮೇಲೆ ಬಲ ಪ್ರಯೋಗ ಮಾಡಿ ಹೇರಿತಾದರೂ ತನ್ನ ಬೆಳವಣಿಗೆಯಲ್ಲಿ ಆಶ್ಚರ್ಯಕರ ವೇಗವನ್ನು ತೋರಿತು. ಅಲ್ಲಿಂದ ಆ ದೇಶದ ನಸೀಬು ಬದಲಾದದ್ದು ಈಗ ಇತಿಹಾಸ. ಹಿಂದೂ ಧರ್ಮ ಭಕ್ತಿಯಿಂದ ಅನುಸರಿಸುವ ಭಗವದ್ಗೀತೆಯಲ್ಲಿಯೂ ಶ್ರೀ ಕೃಷ್ಣ "ಕರ್ಮಣ್ಯೇ ವಾಧಿಕಾರಸ್ತೇ......" ಎನ್ನುವಾಗ ಕಾರ್ಯ ನಿಷ್ಠರಾಗಿ, ಇನ್ನುಳಿದವುಗಳ ಕುರಿತು ಯೋಚಿಸದಿರಿ ಎಂದಿದ್ದಾನೆ. ಫಲಾಫಲಗಳ ಅಪೇಕ್ಷೆಗೆ ನಮಗಿರುವುದು ಸೀಮಿತ ಅಧಿಕಾರವಷ್ಟೇ ಎಂದು ಶ್ರೀ ಕೃಷ್ಣ ನೇರಾನೇರವಾಗಿಯೇ ಹೇಳಿದ್ದಾನೆ. ಆದರೂ ಗೀತೆಯ ವಿವಿಧ ಎಳೆಗಳನ್ನು ತಮ್ಮ ತಮ್ಮ ಬುದ್ಧಿಯಂತೆಯೇ ಅರ್ಥೈಸಿಕೊಳ್ಳುತ್ತ ಒಂದೇ ಭಗವದ್ಗೀತೆಗೆ ನೂರೆಂಟು ವ್ಯಾಖ್ಯಾನಗಳನ್ನು ನೂರೆಂಟು ರೀತಿಯಲ್ಲಿ ವರ್ಣಿಸಿ ಸಮಾಜವನ್ನು ದಿಕ್ಕೆಡಿಸಿದವರು ಅನೇಕರಿದ್ದಾರೆ.

ಈ ತತ್ವ, ಸಿದ್ಧಾಂತಗಳೆಲ್ಲೆ ಮೀರಿ ಸಮಾಜದ ಹನ್ನೆರಡನೇ ಶತಮಾನದ ಆಸುಪಾಸಿನ ಭಾರತೀಯ ಸಾಮಾಜಿಕ ಸನ್ನಿವೇಶಗಳಲ್ಲಿ ಕ್ಲಿಷ್ಟ ಸತ್ಯವನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅರ್ಥ ಮಾಡಿಸುವುದನ್ನು ಸಾಮಾಜಿಕ ಜವಾಬ್ದಾರಿಯ ರೀತಿಯಲ್ಲಿ ತೆಗೆದುಕೊಂಡು ಹೊರಟವರು ಅತೀ ಕಡಿಮೆ ಜನ, ಕೆಲವು ಪ್ರದೇಶಗಳಲ್ಲಿ ಇಲ್ಲವೆಂದೇ ಹೇಳಬಹುದು. ಅದರೊಳಗೆ ಬಸವಾದಿ ಶರಣರದು ಮರೆಯಲಾರದಂತಹ ಕೊಡುಗೆ. ಭಾರತೀಯ ಸಾಮಾಜಿಕ ಸಂರಚನೆಯಲ್ಲಿ ಮಂಚೂಣಿಯಲ್ಲಿ ನಿಲ್ಲುವ ಹೊಸ ವಿಚಾರಗಳನ್ನು ಜನರೊಳಗೆ ಬಿತ್ತಿದ ಕನ್ನಡ ಸೀಮೆಯ ಹೆಮ್ಮೆಯ ಶರಣ ಸಂಕುಲ ಧಾರ್ಮಿಕ, ಸಾಂಪ್ರದಾಯಿಕ ಆಚರಣೆಗಳನ್ನು ಮೀರಿ ನಿಂತು ಕಾಯಕ ತತ್ವಕ್ಕೆ ಸಂಪೂರ್ಣ ಬೆಂಬಲವಿತ್ತಿದ್ದು ಆಗಿನ ಅತಿ ದೊಡ್ಡ ಕ್ರಾಂತಿ. ಜಾತಕ, ಗ್ರಹಚಾರ ಫಲ, ಪುನರ್ಜನ್ಮ-ಮರುಜನ್ಮ ಸಿದ್ಧಾಂತಗಳನ್ನೆಲ್ಲವನ್ನು ಬದಿಗೆ ಸರಿಸಿ ಕಾಯಕ, ದೈಹಿಕ ಶ್ರಮಾಧಾರಿತ ತತ್ವ ಆಗಿನ ಭಾರತೀಯ ಸನ್ನಿವೇಶಗಳಿಗೆ ಅತ್ಯಾವಶ್ಯಕವಾಗಿದ್ದ ವಿಚಾರ.
ಕಾಯಕ ತತ್ವದ ಜೊತೆ ಜೊತೆಗೆ ಕಂದಾಚಾರಗಳಿಗೆ ತಿಲ ತರ್ಪಣವನಿತ್ತು ಧರ್ಮ, ಜಾತಿ, ಪಂಗಡಗಳೆಲ್ಲವನ್ನೂ ಮೀರಿ ಎಲ್ಲ ಜನಾಂಗಗಳವರನ್ನೂ ಕೂಡಿಕೊಳ್ಳುತ್ತಾ ಹೊಸ ವಿಚಾರದೆಡೆಗೆ ನಡೆದದ್ದು ಭಾರತದ ಧೀರ್ಘ ಇತಿಹಾಸದಲ್ಲಿ ಎದ್ದು ಕಾಣುವ ವಿಚಾರ. ಸರ್ವರನ್ನೂ ಸಮಭಾವದೊಳಗೆ ಕಾಣುತ್ತಾ, ಹಂಚಿ ತಿನ್ನುತ್ತಾ ಸತ್ಯ ನಿಷ್ಠೆಯ ಕಾಯಕ ಜೀವನ ಮಾಡುವುದೇ ಬಸವಾದಿ ಶರಣರ ಪ್ರಮುಖ ಧರ್ಮ ಸಾರ. ಸಾಮಾನ್ಯರು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದ, ಕ್ಲಿಷ್ಟ ಪದಗಳನ್ನುಪಯೋಗಿಸಿ ವಾಕ್ಪಟುಗಳಿಗೆ, ವಿದ್ವಾಂಸರಿಗೆ ಮಾತ್ರವೇ ಅರ್ಥವಾಗುವಂತಹ ಪರಿಭಾಷೆಯಲ್ಲಿ ಬರೆದಿರುವ ಅನೇಕ ಧರ್ಮಸಾರಗಳು ಹಳ್ಳ ಹಿಡಿದು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದಾದ ಧರ್ಮ ಆಚರಣೆಗಳೆಡೆಗೆ ಇಂದಿನ ಅನೇಕರು ನಡೆಯುತ್ತಿರುವುದಕ್ಕೆ ಕಾರಣವೇನೆಂದು ನಾನು ವಿಶೇಷವಾಗಿ ಇಲ್ಲಿ ವಿವರಿಸುವ ಅಗತ್ಯವಿಲ್ಲವಷ್ಟೆ. ಒಟ್ಟಿನಲ್ಲಿ ನಮ್ಮ ದೇಶದ ಯುವಜನತೆ ಧರ್ಮದ ಅಮಲಿಗೆ ಬಿದ್ದು ತಮ್ಮ ತಮ್ಮಲ್ಲೇ ಯಾರು ಶ್ರೇಷ್ಠರೆಂದು ಬಡಿದಾಡಿಕೊಳ್ಳದೇ ಕಾಯಕ ತತ್ವವನ್ನಳವಡಿಸಿಕೊಂಡು ಅದರೊಳಗೆ ನಿಷ್ಠರಾಗಿ ಬಾಳಿದರೆ ಭಾರತ ಬದುಕಬಹುದು. ಇಲ್ಲದಿದ್ದರೆ ಧರ್ಮದ ಅಮಲಿನಲ್ಲಿ ಸಿಲುಕಿ ನರಕವಾದ ಎಷ್ಟೋ ದೇಶಗಳೊಳಗೆ ಭಾರತವೂ ಒಂದಾಗಿಬಿಡುವುದರಲ್ಲಿ ಅನುಮಾನವಿಲ್ಲ.

-o-

ಶುಕ್ರವಾರ, ಏಪ್ರಿಲ್ 30, 2021

ಮರೆಯಲ್ಲೇ ಮೂರನೇ ಮಹಾ ಯುದ್ಧ?

ನಮ್ಮ ಜಗತ್ತಿನ ಮೊದಲ ಎರಡು ಮಹಾ ಯುದ್ಧಗಳು ಆರಂಭವಾದಾಗಲಾಗಲಿ, ಅಥವಾ ನಡೆಯುವಾಗಲಾಗಲಿ ಅದು ಮಹಾ ಯುದ್ಧವೆಂಬ ಅರಿವು ಯುದ್ಧರಂಗದಲ್ಲಿ ನೇರವಾಗಿ ಪಾಲ್ಗೊಂಡವರಿಗೇ ಇರಲಿಲ್ಲ. ಸಮರದ ಅಂತ್ಯ ಕಾಲಕ್ಕೆ ಗಾಯಗೊಂಡವರ, ಸತ್ತವರ ಸಂಖ್ಯೆಗಳ ಆಧಾರಗಳನ್ನು ಪಡೆದುಕೊಳ್ಳುತ್ತಾ ಪಾಲ್ಗೊಂಡ ದೇಶಗಳು ಒಹ್ ನಮ್ಮಿಂದ ಎಂತ ದುರಂತವಾಯಿತು ಎಂದು ಪೇಚಾಡಿಕೊಳ್ಳುತ್ತಾ ಇದು ವಿಶ್ವ ಯುದ್ಧ ಎಂದು ಪೆಚ್ಚು ಮೊರೆಯಲ್ಲೇ ಘೋಷಿಸಿಕೊಳ್ಳುತ್ತಿದ್ದುದನ್ನು ನಾವಾಗಲೇ ಎರಡು ಬಾರಿ ಕಂಡಿದ್ದೇವೆ. ಒಬ್ಬರ ಮೇಲೊಬ್ಬರು ಬಿದ್ದು, ದೇಶದ ಗಡಿಗಳೊಳಕ್ಕೆ ನುಗ್ಗಿ ಆಯಾ ದೇಶಗಳ ಸಾರ್ವಭೌಮತೆಗೆ ಸವಾಲೆಸೆದು ಯುದ್ಧಕ್ಕೆ ಪಂಥಾಹ್ವಾನ ಕೊಡುತ್ತಿದ್ದುದು ನಾವಿದುವರೆಗೂ ನೋಡಿಕೊಂಡು ಬಂದಿದ್ದ ಯುದ್ಧಗಳ ರೀತಿ.

ರಾಜಕುಮಾರನೊಬ್ಬನ ಕೊಲೆಯನ್ನೇ ಮುಂದು ಮಾಡಿಕೊಂಡು 1914ರಲ್ಲಿ ಭುಗಿಲೆದ್ದ ಸಣ್ಣ ಹಿಂಸಾಚಾರ ಮಹಾ ಯುದ್ಧವಾಗಿ ಮಾರ್ಪಟ್ಟಿತ್ತು. ನೋಡ ನೋಡುತ್ತಿದ್ದಂತೆ ಯುರೋಪ್ ಖಂಡದ ಪ್ರಬಲ ದೇಶಗಳೆಲ್ಲಾ ಗುಂಪುಗೂಡಿಕೊಂಡು ಯುದ್ಧವನ್ನು ರೌದ್ರಾವತಾರ ತಳೆಯುವಂತೆ ಮಾಡಲಾಯ್ತು. ಅಷ್ಟರಲ್ಲಾಗಲೇ ಪ್ರಪಂಚದ ಭೂಭಾಗದ ಪೈಕಿ 50% ಕ್ಕೂ ಹೆಚ್ಚಿನ ಪ್ರದೇಶಗಳನ್ನು ತಮ್ಮ ನಿಯಂತ್ರಣದಲ್ಲಿರಿಸಿಕೊಂಡಿದ್ದ ಯುರೋಪಿಯನ್ ದೇಶಗಳಿಗೆ ಸಂಪನ್ಮೂಲಗಳಿಗೆ, ಯುದ್ಧಾಳುಗಳಿಗೆ ಕೊರತೆಯೇನು ಆಗಲಿಲ್ಲ. ಹೀಗೆ ನಾಲ್ಕು ವರ್ಷಗಳ ಮೇಲೆ ಕೆಲವು ದಿವಸಗಳು ನಡೆದ ಯುದ್ಧ ಪರ್ಯಾವಸಾನವಾದಾಗ ಪ್ರಪಂಚದ ಸೇನೆ ಮತ್ತು ಸಾಮಾನ್ಯ ನಾಗರೀಕರು ಸೇರಿ ಒಂದು ಮುಕ್ಕಾಲು ಕೋಟಿ ಜನ ಯುದ್ಧದಿಂದ ಸಾವನ್ನಪ್ಪಿದರು ಎಂಬ ಅಧೀಕೃತ ವರದಿ ಹೊರ ಬಿತ್ತು. ವರದಿ ಅಧೀಕೃತವಷ್ಟೇ, ಸಾವು ನೋವುಗಳ ಸಂಖ್ಯೆ ಇನ್ನೂ ಹೆಚ್ಚಿದ್ದರೂ ಇರಬಹುದು. ಆ ಯುದ್ಧದಲ್ಲಿ ಪಾಲ್ಗೊಂಡಿದ್ದ ಹಾಗು ನಂತರ ಉಳಿದುಕೊಂಡ ರಾಷ್ಟ್ರಗಳು ಯುದ್ಧೋನ್ಮಾದ ಇಳಿಸಿಕೊಂಡು ಪ್ರಪಂಚದೆದುರು ಬಂದು ತಾವು ಮಾಡಿದ ಕೆಲಸ ನಿರ್ಲಜ್ಜವೆಂತಲೂ, ಈ ಹಿಂದೆ ಎಂದೂ ನಡೆದಿರದಿದ್ದ ಆ ಪರಿಯ ಮಾನವ ವಿನಾಶಕ್ಕೆ ನಾಂದಿಯಾದೆವೆಂದೂ ಪೇಚಾಡಿಕೊಳ್ಳುತ್ತ 'ರಾಷ್ಟ್ರ್ರಗಳ ಒಕ್ಕೂಟ'ವೆಂಬ ಮುಳುಗುವ ಹಡಗಿನ ರೀತಿಯ ಹೊಸ ಸಂಸ್ಥೆಯನ್ನು ತೆರೆದು ಎಲ್ಲಾ ದೇಶಗಳು ಈ ಸಂಸ್ಥೆಯ ಆಜ್ಞಾರಾಧಕಾರಗಬೇಕು ಎಂದವು. ಮೂಲತಃ ಈ ಒಕ್ಕೂಟ ರಚನೆಗೆ ಜಾಗತೀಕ ವಿರೋಧ ವ್ಯಕ್ತವಾಗಿದ್ದು ಆರಂಭದಲ್ಲೇ ಅಪಶಕುನವೆಂಬಂತಾಗಿತ್ತು.

ಆ ಸಂಸ್ಥೆ ಆರಂಭವಾದ ಹದಿನೈದು-ಹದಿನಾರು ವರ್ಷಗಳಿಗೆ ಅದಕ್ಕೆ ಕವಡೆ ಕಾಸಿನ ಕಿಮ್ಮತ್ತು ಕೊಡುವವರು ಯಾರೂ ಇಲ್ಲವಾದರು. ನಾನಾ ಕಾರಣಗಳಿಂದ ಕಳೆಗುಂದಿದ ಆ ಸಂಸ್ಥೆ ಯಾವುದಕ್ಕೆ ನಿರ್ಮಾಣವಾಗಿತ್ತೋ ಆ ಮೂಲ ಧ್ಯೇಯವನ್ನೇ ನಡೆಸಿಕೊಳ್ಳಲಾರದಷ್ಟು ಅಶಕ್ತವಾಯಿತು. ಕೊನೆಗೆ ಎರಡನೇ ವಿಶ್ವ ಯುದ್ಧ ಆರಂಭವಾಗಿಯೇ ಹೋಯಿತು.ಬಹುತೇಕ ಏಷ್ಯಾ ಹಾಗು ಯುರೋಪ್ ಖಂಡಗಳಲ್ಲಿ ನಡೆದ ಈ ಯುದ್ಧ ಜಪಾನಿನ ಅನಿರೀಕ್ಷಿತ ದಾಳಿಯಿಂದಲೂ, ಅಮೆರಿಕಾದ ಆತುರದ ನಿರ್ಣಯದಿಂದಲೂ ಲಕ್ಷಾಂತರ ನಾಗರೀಕರನ್ನು ಬಲಿ ಕೊಡುವದರ ಜೊತೆಗೆ ಪರ್ಯವಸಾನವಾಯಿತು. ವಿಜ್ಞಾನ-ತಂತ್ರಜ್ಞಾನದಲ್ಲಿ ದಾಪುಗಾಲಿಡುತ್ತಿದ್ದ ಅಮೆರಿಕಾ ತಾನು ಹೊಸದಾಗಿ ಕಂಡು ಹಿಡಿದಿದ್ದ ಸಮೂಹ ನಾಶಕ ಅಸ್ತ್ರವನ್ನು ಜಪಾನಿನ ಹಿರೋಷಿಮಾ, ನಾಗಾಸಾಕಿಗಳ ಮೇಲೆ ಪ್ರಯೋಗ ಮಾಡಿ ಲಕ್ಷಾಂತರ ಮಂದಿಯ ಮಾರಣ ಹೋಮ ನಡೆಸಿದ ನಂತರವೇ ಅದಕ್ಕೆ ಜ್ಞಾನೋದಯವಾಯಿತು ತಾನೆಂತಹ ಪ್ರಮಾದವೆಸಗಿದೆ ಎನ್ನುವುದು. ಸುಮಾರು ಏಳು ವರ್ಷಗಳ ಕಾಲ ನಡೆದ ಎರಡನೇ ಮಹಾ ಯುದ್ಧದಲ್ಲಿ ಸೇನೆ ಹಾಗು ನಾಗರೀಕರೂ ಸೇರಿ ಸುಮಾರು ಆರು ಕೋಟಿ ಜನ ಪ್ರಾಣಕಳೆದುಕೊಂಡರು.

ಮೊದಲನೇ ವಿಶ್ವ ಯುದ್ಧದ ತರುವಾಯು ಯುರೋಪ್ ಖಂಡಗಳ ದೇಶಗಳ ಮೇಲೆ ಪ್ರಜಾತಂತ್ರದ ಮಿಂಚು ಹಾದು ಹೋಗಿ ಅಲ್ಲಿನ ಬಹುತೇಕ ದೇಶಗಳು ತಮ್ಮ ಭಾಗ್ಯವಿಧಾತರನ್ನು ತಾವೇ ಆರಿಸಿಕೊಳ್ಳುವ ರೀತಿಗೆ ಉಘೇ ಎಂದವು. ಎರಡನೇ ವಿಶ್ವ ಯುದ್ಧದ ತರುವಾಯು ಪ್ರಾಬಲ್ಯ ಕಳೆದುಕೊಂಡ ಯುರೋಪ್ ದೇಶಗಳು ನಿಧಾನಕ್ಕೆ ತಮ್ಮ ಹಿಡಿತದಲ್ಲಿದ್ದ ದೇಶಗಳನ್ನು ಬಿಟ್ಟುಬಿಡತೊಡಗಿದವು, ಆಗಲೇ ನಮ್ಮ ಭಾರತವೂ ಸೇರಿದಂತೆ ಅಸಂಖ್ಯ ದೇಶಗಳು ಸ್ವಾತಂತ್ರ್ಯ ಸಾಧಿಸಿದವು. ಮೊದಲ ಹಾಗು ಎರಡನೇ ವಿಶ್ವ ಯುದ್ಧಗಳು ದೊಡ್ಡ ಪ್ರಮಾಣದಲ್ಲಿ ಮನುಕುಲದ ವಿನಾಶ ಉಂಟು ಮಾಡಿದರೂ ಅವುಗಳ ಫಲಿತಾಂಶ ಪ್ರಪಂಚದ ಪಾಲಿಗೆ ಉತ್ತಮ ಬಗೆಯಲ್ಲಿ ಒದಗಿಕೊಂಡಿದ್ದು ಕಾಕತಾಳೀಯವಲ್ಲ. ಮೊದಲ ಹಾಗು ಎರಡನೇ ವಿಶ್ವ ಯುದ್ಧಗಳ ನಡುವಿನ ವ್ಯತ್ಯಾಸವನ್ನು ನಾವು ಗಮನಿಸ ಹೊರಟರೆ ಮೊದಲನೇ ವಿಶ್ವಯುದ್ಧದ ತಯಾರಿ ಸಂಪೂರ್ಣವಾಗಿ ಶೂನ್ಯವಾಗಿತ್ತು. ಯುದ್ಧಕ್ಕೆ ತಂತ್ರಜ್ಞಾನ, ವಿಜ್ಞಾನ ಯಾವ ರೀತಿ ಪರಿಣಾಮಕಾರಿಯಾಗಬಲ್ಲುದು ಎಂಬ ಯೋಚನೆಯನ್ನು ಮಾಡಿಕೊಂಡು ಕೂತಿದ್ದವರು ಯಾರು ಇರಲಿಲ್ಲ. ಆದರೆ ಅದರ ತರುವಾಯು ಎರಡನೇ ವಿಶ್ವ ಯುದ್ಧಕ್ಕೂ ಮೊದಲು ಅನೇಕ ವೈಜ್ಞಾನಿಕ ಪ್ರಯೋಗಗಳು ನಡೆದು ಕಡಿಮೆ ಸಮಯದಲ್ಲಿ ಅತಿ ಹೆಚ್ಚು ವಿನಾಶ ಉಂಟು ಮಾಡುವಂತಹ ಸಮೂಹ ನಾಶಕಗಳೂ ಮೊದಲಾಗಿ ಅನೇಕ ತಂತ್ರಜ್ಞಾನ ಆಧಾರಿತ ಯಂತ್ರಗಳು ಸೇನಾ ವಲಯದಲ್ಲಿ ಸೇರಿಕೊಂಡವು. ಅದರಿಂದಾಗಿ ಮನುಷ್ಯ ಹೆಚ್ಚಿನ ಪ್ರಯಾಸವಿಲ್ಲದೆ ಹೆಚ್ಚು ಜನರನ್ನು ಕೊಲ್ಲಲು, ದೇಶವೊಂದರ ಭೌತಿಕ ಆಸ್ತಿ-ಪಾಸ್ತಿಗಳನ್ನು ನಾಶ ಮಾಡಲು ಅತ್ಯಂತ ಸಮರ್ಥನಾದ. ರಾಷ್ಟ್ರಗಳು ಪೈಪೋಟಿಗೆ ಬಿದ್ದು ಅಸ್ತ್ರಗಳನ್ನು, ಸೇನಾ ಬಲವನ್ನು ಹೆಚ್ಚು ಮಾಡಿಕೊಳ್ಳುತ್ತಿದ್ದಾಗ್ಯೂ ಎರಡನೇ ವಿಶ್ವ ಯುದ್ಧದ ಫಲವಾಗಿ ಉದಿಸಿದ ವಿಶ್ವ ಸಂಸ್ಥೆಯ ಅಂಕೆಯಲ್ಲೇ ಬಹುತೇಕ ರಾಷ್ಟ್ರಗಳು ಇವೆ. ಹಾಗಂತ ವಿಶ್ವ ಸಂಸ್ಥೆಯ ಕಟ್ಟಪ್ಪಣೆಯನ್ನು ಅನೂಚಾನುವಾಗಿ ಎಲ್ಲ ರಾಷ್ಟ್ರಗಳು ಪಾಲಿಸುತ್ತಿಲ್ಲ. ಉತ್ತರ ಕೊರಿಯಾದಂತಹ ದೇಶಗಳು ಆಗಾಗ್ಗೆ ಸೆಟೆದು ಕೊಂಡು ನಿಲ್ಲುತ್ತಿರುವುದು ಇಲ್ಲಿ ಗಮನಿಸಬೇಕಾದ ಅಂಶ.

ಮೂರನೇ ವಿಶ್ವ ಯುದ್ಧಕ್ಕೆ ವೇದಿಕೆ ತಯಾರಾಗಿದೆಯೇ? ಅದು ನಡೆದರೆ ಯಾರೆಲ್ಲರ ನಡುವೆ ನಡೆಯಬಹುದು? ಅದರ ಪರಿಣಾಮ ಏನೇನಾಗಬಹುದು? ಎನ್ನುವ ನಮ್ಮ ಮಾಧ್ಯಮಗಳ ಊಹಾತ್ಮಕ ಕಾರ್ಯಕ್ರಮಗಳಿಗೂ ಸೆಡ್ಡು ಹೊಡೆದು ಮೂರನೇ ವಿಶ್ವ ಯುದ್ಧ ಈಗಾಗಲೇ ಆರಂಭವಾಗಿ ಸದ್ದರಿಯದೇ ನಡೆಯುತ್ತಿದೆಯೇ? ಎನ್ನುವ ಯೋಚನೆ ಒಂದು ಕ್ಷಣ ಉಂಟಾಗುತ್ತದೆ. ಕರೋನಾ ವೈರಸ್ ಅನ್ನು ಚೀನಾ ದೇಶದ ವುಹಾನ್ ನಗರದ ವೈರಸ್ ಅಧ್ಯಯನ ಕೇಂದ್ರದಲ್ಲಿ ಸೃಷ್ಟಿ ಮಾಡಲಾಯಿತು, ಅನ್ಯ ದೇಶಗಳ ಮೇಲೆ ಹಿಂಬಾಗಿಲಿನ ಮೂಲಕ ಯುದ್ಧಗೈದು ಸಾರ್ವಭೌಮನಾಗಿ ಮೆರೆಯಬೇಕೆಂಬ ಚೀನಾದ ಹಪಾಹಪಿಗೆ ಬೆಲೆಕೊಟ್ಟು ಸೃಷ್ಟಿ ಮಾಡಿದ ಈ ವೈರಸ್ ಅಲ್ಲಿನ ವಿಜ್ಞಾನಿಗಳ ಕಣ್ತಪ್ಪಿನಿಂದ ಹೊರ ಜಗತ್ತಿಗೆ ಹರಿದುಬಿಟ್ಟಿತು ಎಂಬ ಸುದ್ದಿ ಬಯಲಾಗುತ್ತಿದ್ದಂತೆ ಅಮೆರಿಕಾದ ಟ್ರಂಪ್ ರ ಆಡಳಿತ ಚೀನಾದ ವಿರುದ್ಧ ತೀಕ್ಷಣವಾಗಿ ಪ್ರತಿಕ್ರಿಯಿಸಿತು. ಆದರೆ ಅಲ್ಲಿನ ಚುನಾವಣೆಗಳು ಸಮೀಪವಿದ್ದುದರಿಂದ 'ಕೈಲಾಗದವನು ಮೈ ಪರಚಿಕೊಂಡ' ಎನ್ನುವಂತೆ ಟ್ರಂಪ್ ತನ್ನ ದೇಶದೊಳಗಿನ ಪರಿಸ್ಥಿತಿ ನಿಭಾಯಿಸಲು ಅಸಮರ್ಥರಾಗಿ ಚುನಾವಣೆ ಗೆಲ್ಲುವ ಉದ್ದೇಶವೊಂದರಿಂದಲೇ ಚೀನಾದ ಕಡೆಗೆ ಕೈ ತೋರುತ್ತಿದ್ದಾರೆ ಎಂದು ಅಮೆರಿಕೆಯ ಪ್ರಜೆಗಳೇ ಹಾಸ್ಯ ಮಾಡಿ ನಕ್ಕುಬಿಟ್ಟರು. ನಂತರ ಆ ವಿವಾದದೊಳಗೆ ಅಮೆರಿಕಾದ ಪೂರ್ವ ಅಧ್ಯಕ್ಷ ಬರಾಕ್ ಒಬಾಮ ಹೆಸರು ಕೇಳಿ ಬಂದ ಮೇಲಂತೂ, ವಿರೋಧ ಪಕ್ಷವನ್ನು ಹಳಿಯುವುದಕ್ಕಾಗಿ ಟ್ರಂಪ್ ಇದನ್ನೆಲ್ಲಾ ಹಣ ಕೊಟ್ಟು ಮಾಡಿಸುತ್ತಿದ್ದಾರೆ, ಇದೊಂದು ಚುನಾವಣೆಯ ಗಿಮಿಕ್ ಇರಬಹುದು ಎಂತಲೇ ಅಮೆರಿಕಾದ ಅನೇಕರು ಬಗೆದರು.

ಕರೋನಾ ಎರಡನೇ ಅಲೆಗೆ ಮತ್ತೆ ಲಾಕ್ ಡೌನ್ ಆದ ಭಾರತದ ಐಟಿ ರಾಜಧಾನಿ
ಅದರ ಕುರಿತು ಕೂಲಂಕುಷವಾದ ಯೋಚನೆ ಮಾಡಿ ತೀರ್ಮಾನ ತೆಗೆದುಕೊಳ್ಳಲು ಯಾವ ದೇಶಗಳ ಹತ್ತಿರವೂ ಸಮಯವಿರಲಿಲ್ಲ, ಸಮಯವಿದ್ದವರಿಗೆ ಚೀನಾವನ್ನು ಎದುರಿಸುವ ಸ್ಥೈರ್ಯವೇ ಇರಲಿಲ್ಲ. ತಮ್ಮ ತಮ್ಮ ದೇಶದ ನಾಗರೀಕರ ಪ್ರಾಣ ಉಳಿಸಿಕೊಳ್ಳುವುದೇ ಆಯಾ ದೇಶಗಳ ವಕ್ತಾರರಿಗೆ ಪ್ರಮುಖವಾದ್ದರಿಂದ ಟೀಕೆ ಟಿಪ್ಪಣಿಗಳಿಗೆ ಅವಕಾಶವಿಲ್ಲದೆ ಅವರೆಲ್ಲರೂ ಕಾರ್ಯ ಪ್ರವೃತ್ತರಾದರು. ಪರಿಣಾಮ 2020ರ ಬಹುತೇಕ ಅರ್ಧ ವರ್ಷದಷ್ಟು ಕಾಲ ಪ್ರಪಂಚವೇ ಲಾಕ್ ಡೌನ್ ಆಗಬೇಕಾಯಿತು. ಜಾಗತೀಕ ಉತ್ಪಾದನಾ ರಂಗಕ್ಕೆ ಹಿಂದೆಂದೂ ಕಂಡಿರದಂತಹ ಹೊಡೆತ ಬಿತ್ತು, ಅಗತ್ಯ ವಸ್ತುಗಳ ಬೆಲೆ ಗಗನ ಮುಖಿಯಾಯ್ತು. ವುಹಾನ್ ನಗರದಲ್ಲಿ ಜನಿಸಿ ಸರ್ವ ದೇಶಗಳಿಗೂ ಪದಾರ್ಪಣೆ ಮಾಡಿದ ವೈರಸ್ ಯುರೋಪ್ ಖಂಡದ 2020ರ ಚಳಿಗಾಲದಲ್ಲಿ ಹೊಸ ಅವತಾರ ತಳೆಯಿತು. ಉಗ್ರಾವತಾರ ತಾಳಿದ ವೈರಸ್ ಯುರೋಪ್ ಖಂಡವನ್ನು ಇನ್ನಿಲ್ಲದಂತೆ ಕಾಡಿ ಭಾರತಕ್ಕೂ ವಕ್ಕರಿಸಿತು.

ಇಷ್ಟೆಲ್ಲಾ ಘಟನೆಗಳಾಗುವಾಗ ನಮ್ಮನ್ನು ಆಶ್ಚರ್ಯಕ್ಕೆ ದೂಡುವುದು ಕರೋನಾ ವೈರಸ್ ನ ಜನ್ಮ ಸ್ಥಾನವಾದ ಚೀನಾದ ನಡವಳಿಕೆ. ದೇಶಗಳು ಲಾಕ್ ಡೌನ್ ಜಾರಿಗೊಳಿಸುತ್ತಿದಂತೆ ಸುತ್ತಲಿನ ದೇಶಗಳೊಂದಿಗೆ ತಗಾದೆ ತೆಗೆದು ಸಿಕ್ಕ ಸಿಕ್ಕ ಕಡೆಗಳಲ್ಲಿ ಠಳಾಯಿಸುವುದಕ್ಕೆ ಯತ್ನಿಸಿತು. ಭಾರತ, ಮಯನ್ಮಾರ್, ನೇಪಾಳ, ವಿಯೆಟ್ನಾಮ್, ಆಸ್ಟ್ರೇಲಿಯಾಗಳ ಮೇಲೆ ಹಲ್ಲು ಮಸೆದು ಜಗಳಕ್ಕಿಳಿಯಿತು. ಅದೃಷ್ಟವಶಾತ್ ಆ ಪೈಕಿ ಕೆಲವು ದೇಶಗಳು ತಮ್ಮನ್ನು ತಾವು ರಕ್ಷಿಸಿಕೊಂಡರೂ ಮಯನ್ಮಾರ್ ನಂತಹ ದೇಶಗಳು ಸೋತು ಹೋದವು. ಸದ್ಯಕ್ಕೆ ಚೀನಾದ ಕೆಂಗಣ್ಣಿಗೆ ಸಿಲುಕಿರುವುದು ತೈವಾನ್. ಇವೆಲ್ಲವುಗಳ ನಡುವೆ ಬಂದ ಹೊಸ ಸುದ್ದಿಯೆಂದರೆ ಇಡೀ ಪ್ರಪಂಚದಲ್ಲಿನ ಎಲ್ಲ ದೇಶಗಳು ನಷ್ಟದಲ್ಲಿದ್ದರೆ ಚೀನಾದ ಜಿಡಿಪಿ ಹಿಂದೆಂದೂ ಕಾಣದಂತೆ ಪುಟಿದೆದ್ದು ನಿಂತಿರುವುದು. ಇಷ್ಟೆಲ್ಲಾ ಕಂಡ ಮೇಲೆ ಇದು ಚೀನಾದ ಚಿತಾವಣೆ ಒಂದು ಭಾಗ ಎನಿಸದೆ?. ಕರೋನಾ ವ್ಯಾಧಿ ಪ್ರಪಂಚಕ್ಕೆ ಅಪ್ಪಳಿಸಿ ಒಂದು ವರ್ಷದ ಮೇಲೆ 2-3 ತಿಂಗಳಾಗಿದೆ ಅಷ್ಟೇ, ಅಷ್ಟರಲ್ಲಿ ಇಂದಿನವರೆಗೂ 32 ಲಕ್ಷದಷ್ಟು ಜನರನ್ನು ಬಲಿ ಪಡೆದುಕೊಂಡಿದೆ, ಅದರಲ್ಲೂ ಚೀನಾ, ಉತ್ತರ ಕೊರಿಯಾಗಳ ಲೆಕ್ಕ ಇದುವರೆವಿಗೂ ಸರಿಯಾಗಿ ಸಿಕ್ಕಿಲ್ಲ. ಒಂದು ವರ್ಷಕ್ಕೆ ಇಷ್ಟು ಅವಾಂತರವಾದರೆ, ವಿಶ್ವ ಯುದ್ಧಗಳ ರೀತಿ ನಾಲ್ಕಾರು ವರ್ಷ ಇದೆ ರೀತಿ ದೂಡಿದರೆ ಸಾವಿನ ಸಂಖ್ಯೆ ಕೋಟಿ ದಾಟುವುದರಲ್ಲಿ ಯಾವ ಸಂಶಯವೂ ಇಲ್ಲ.

ಹಿಂದೆ ಬರುತ್ತಿದ್ದ ಪ್ಲೇಗ್, ಕಾಲರಾಗಳು ಹೀಗೆ ಭಾಯಾನಕ ಸನ್ನಿವೇಶ ಸೃಷ್ಟಿಸಿದ್ದರೂ ಆಗ್ಗೆ ಜಗತ್ತಿನ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಪ್ರಯಾಣ ಈಗಿನಷ್ಟು ಸುಲಭವಾಗಿರಲಿಲ್ಲ. ಈಗ ಲಾಜಿಸ್ಟಿಕ್ ಕ್ಷೇತ್ರ ಹಿಂದೆಂದಿಗಿಂತಲೂ ಸಬಲವಾಗಿದೆ, ಅದು ಕರೋನ ರೋಗವಾಹಕದಲ್ಲೂ ಸಬಲವಾಗಿದ್ದು ದುರಂತವೇ ಸರಿ. ಈ ಕಾರಣವೊಂದರಿಂದಲೇ ಕರೋನಾ ಪ್ಲೇಗ್, ಕಾಲರಾ ಹೆಮ್ಮಾರಿಗಳಂತೆ ಮಿಂಚಿ ಮರೆಯಾಗುತ್ತದೆ ಎನ್ನಲಾಗುವುದಿಲ್ಲ. ಅದಕ್ಕಾಗಿಯೇ ಚಿಕಿತ್ಸೆ ಬರುವವರೆಗೂ ಇಲ್ಲೇನಾಗುತ್ತದೆ ಎನ್ನುವ ಧೈರ್ಯ ವಿಶ್ವ ಸಂಸ್ಥೆಯ ಅರೋಗ್ಯ ಇಲಾಖೆಯೂ ಸೇರಿದಂತೆ ಸೇರಿ ಯಾರಿಗೂ ಇದ್ದಂತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವಿಶ್ವದ ಸಕಲ ಸರ್ವತ್ರರೂ ಕೈ ಚೆಲ್ಲಿರುವಾಗ ಚೀನಾದ ಲಘುಬಗೆಯ ನಡೆ ಆಶ್ಚರ್ಯ ಉಂಟು ಮಾಡುವಂತಹುದು. ಅಲ್ಲಿ ಕರೋನ ಮೊದಮೊದಲಿಗೆ ದಾಂಗುಡಿಯಿಟ್ಟಾಗ ಬಲ ಪ್ರಯೋಗದ ಮೂಲಕ ಜನರನ್ನು ಹತೋಟಿಗೆ ತಂದು ಕೇವಲ ಆರೇ ತಿಂಗಳಲ್ಲಿ ಸಂಪೂರ್ಣ ಗುಣ ಮುಖನಾದೆ ಎಂದಿತು ಚೀನಾ, ಆದರೆ ಅಲ್ಲಿನ ದೇಶದೊಳಗಣ ಪರಿಸ್ಥಿತಿಯೇನೋ ಹೊರಗಿನವರಿಗೆ ಗೊತ್ತಿದ್ದಂತಿಲ್ಲ.

ಜಗತ್ತನ್ನೆಲ್ಲಾ ಸೊರಗುವಂತೆ ಮಾಡಿ, ತಾನು ಪಟ ಪಟನೇ ಪುಟಿಯುತ್ತಿರುವ ಚೀನಾ ಮರೆಯಲ್ಲಿ ಮೂರನೇ ವಿಶ್ವ ಯುದ್ಧಕ್ಕೆ ಕಾರಣವಾಯಿತೆ?. ಯುದ್ಧ ರಂಗದಲ್ಲಿ ನಿಂತು ಹೋರಾಡದೆ ಹಿಂಬಾಗಿಲಲ್ಲಿ ವೈರಸ್ ಮೂಲಕ ಜಗತ್ತನ್ನು ಸೋಲಿಸಿ ತಾನು ವಿಶ್ವ ನಾಯಕನ ಪಟ್ಟಕ್ಕೆ ಅಣಿಯಾಯಿತೇ?. ಕಳೆದೆರಡು ಮಹಾ ಯುದ್ಧಗಳ ಸಮಯದಲ್ಲಿ ಆದಂತೆಯೇ ಇದೆಲ್ಲಾ ಮುಗಿದ ಮೇಲೆ ಇದು ಮಹಾ ಯುದ್ಧವೆಂಬ ಅರಿಕೆ ನಮ್ಮಲ್ಲಾಗುವುದೇ?. ಅಷ್ಟರಲ್ಲಿ ನಾವು ಜೀವಂತ ಬದುಕಿರುವೆವೇ?. ಯಾವುದಕ್ಕೂ ಸದ್ಯಕ್ಕೆ ಉತ್ತರವಿಲ್ಲ. ಈ ವೈರಸ್ ಹಗರಣ ಜಗತ್ತಿನಿಂದ ಮರೆಯಾದ ಮೇಲೆ ಜಗತ್ತು ವಿನಾಶವಾಗದೆ ಉಳಿದರಷ್ಟೇ ಚಿಂತಿಸಬಹುದು. ಇಲ್ಲದಿದ್ದರೆ ಈಗ ನಾವು ಹರಪ್ಪ-ಮೆಹೆಂಜೋದಾರೊ ನಾಗರೀಕತೆಗಳನ್ನು ನೋಡುತ್ತಿರುವಂತೆಯೇ ಮುಂದಿನ ಯಾವುದೋ ಪೀಳಿಗೆ ನಮ್ಮ ಮನೆಗಳಿಗೆ ಬಂದು ನಮ್ಮ ಪಾತ್ರೆ ಪಗಡಗಳನ್ನು ಅಧ್ಯಯನ ವಸ್ತುಗಳನ್ನಾಗಿ ಮಾಡಿಕೊಳ್ಳಲೂಬಹುದು. ಪರಿಣಾಮ ಭಿನ್ನವಾಗಿರಲೂಬಹುದು.

-0-

ಮಂಗಳವಾರ, ಮಾರ್ಚ್ 9, 2021

ಸಾಂವಿಧಾನಿಕ ಮರೆವು

ಚೀಚಿಗೆ ಕನ್ನಡದ ಹೆಸರಾಂತ ನಾಟಕಕಾರರೊಬ್ಬರು ತೀರಿಕೊಂಡರು. ರಂಗದ ಮೇಲೆ ಅವರು ಮಾಡಿದ ಪ್ರಯೋಗಗಳು ಸಾಮಾಜಿಕ ಬದಲಾವಣೆಗಳನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದವು. ಅದರಲ್ಲೂ ಭಾರತದ ಅತಿ ದೊಡ್ಡ ಸಾಮಾಜಿಕ ಪಿಡುಗುಗಳ ಕುರಿತು ಅವರ ಕಠೋರ ನಿಲುವು, ಅವು ಅವರ ನಾಟಕಗಳಲ್ಲೂ ಅಭಿವ್ಯಕತವಾಗುತ್ತಿದ್ದ ರೀತಿ ಅನೇಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಆ ಕಾರಣದಿಂದಲೇ ನಾಟಕವಲ್ಲದ ಇತರ ಚರ್ಚಾ ವೇದಿಕೆಗಳಲ್ಲಿ ಅವರು ಭಾಗವಹಿಸಿ ಮಾತನಾಡುತ್ತಿದ್ದರೆ ಜನ ಓಗೊಟ್ಟು ಕೇಳುತ್ತಿದ್ದರು. ಜನ ತಮ್ಮ ಮಾತುಗಳನ್ನು ತದೇಕಚಿತ್ತದಿಂದ ಆಲಿಸುತ್ತಿದ್ದಾರೆ ಎಂಬ ಅರಿವು ಉಂಟಾದ ತಕ್ಷಣ ಅನೇಕರು ಉಬ್ಬಿಹೋಗಿ ವಿವಾದಿತ ಹೇಳಿಕೆಗಳನ್ನು ಕೊಟ್ಟು ಅವಮಾನಕ್ಕೀಡಾಗಿರುವುದನ್ನು ನಾವೆಲ್ಲಾ ನೋಡುತ್ತಲೇ ಇದ್ದೇವೆ. ಇವರ ವಿಚಾರದಲ್ಲೂ ಹಾಗೆಯೇ ನಡೆಯಿತೆನ್ನಿ. ಆರಂಭದಲ್ಲಿ ರಾಜಕಾರಣಿಗಳನ್ನು, ಸಿನೆಮಾ ನಟರನ್ನು ಏಕವಚನದಲ್ಲಿ ಸಂಭೋದಿಸುತ್ತಾ ಹರಟುತ್ತಿದ್ದ ಇವರು ಮಧ್ಯೆ ಮಧ್ಯೆ  ..ಳೆ ಮಗ, ಮುಂ.. ಮಗ ಎನ್ನುವುದಕ್ಕೆ ಎಂದೂ ಮರೆಯುತ್ತಿರಲಿಲ್ಲ. ಹೀಗೆ ವಿಚಾರ ವೇದಿಕೆಯೊಂದರಲ್ಲಿ ಅವರು ಮಾತನಾಡುತ್ತಿದ್ದ ಭರದಲ್ಲಿ ಜಾತಿಯ ಬಗ್ಗೆ ಮಾತೊಂದು ಬಂತು, ಜಾತಿಯನ್ನು ದೂಷಿಸುವ ಭರದಲ್ಲಿ 'ನಮ್ಮ ಕರ್ನಾಟಕದಲ್ಲೊಂದು ಜಾತಿಯಿದೆ ಅದರಲ್ಲಿ ದನ ಕಾಯುತ್ತಿದ್ದವರೆಲ್ಲ ಪಾಠ ಮಾಡಲು ಬರುತ್ತಾರೆ' ಎಂದು ಲೇವಡಿ ಮಾಡಿಬಿಟ್ಟರು. ನೇರಾ ನೇರವಾಗಿ ಅಲ್ಲದಿದ್ದರೂ ವಚನಕಾರರಿಗೆ ಅದನ್ನು ಹೇಳಿದ್ದು ಎನ್ನುವುದು ಅತ್ಯಂತ ಗೌಪ್ಯವಾಗಿ ಏನಿರಲಿಲ್ಲ. ಅಲ್ಲಿದ್ದವರಿಗೆ ಆಗ್ಗೆ ಇದು ಅರ್ಥವಾಯಿತೋ, ಇಲ್ಲವೋ ಗೊತ್ತಿಲ್ಲ. ಆದರೆ ಆ ವಿಡಿಯೋ ತುಣುಕು ಕರ್ನಾಟಕದಾದ್ಯಂತ ಹರಿದಾಡಿತು, ಯಾರೇನು ಅದರ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳಲಿಲ್ಲ, ಕ್ರಮೇಣ ಅದು ಜನರ ಸ್ಮೃತಿಪಟಲದಿಂದ ಮಾಯವಾಯ್ತು.

ಸನಾತನ ಧರ್ಮ ತತ್ವ, ಧಾರ್ಮಿಕ ಆಚಾರ ವಿಚಾರಗಳು ಸಂಸ್ಕೃತದಲ್ಲಿ ಮಾತ್ರ ದೊರಕುತ್ತಿದ್ದ ಕಾಲದಲ್ಲಿ ಸ್ಥಳೀಯ ಜನರ ಭಾಷೆಯಾದ ಕನ್ನಡದಲ್ಲೇ ಜೀವನ ಸಾರವನ್ನು, ಜೀವನದಲ್ಲಿ ಕಾಣಬೇಕಾದ ಶಿವಪಥವನ್ನು ಪ್ರಪಂಚದ ಇನ್ಯಾವ ಸಾಹಿತ್ಯವೂ ಹಿಂದೆ ಸಾರಿರದಿದ್ದ ರೀತಿಯಲ್ಲಿ ಸಾರಿ ಹೇಳಿದವರು ಕರ್ನಾಟಕದ ಶರಣರು. ವಚನ ಸಾಹಿತ್ಯ, ದಾಸ ಸಾಹಿತ್ಯ ಕನ್ನಡ ಭಾಷೆಗೆ ಇಂದಿಗೂ ವಿಶೇಷ ಮೆರುಗು ನೀಡುತ್ತಿರುವುದು ನಾವೆಲ್ಲಾ ಕಾಣುತ್ತಿರುವ ವಿದ್ಯಮಾನವೇ. ಆದರೂ ನಮ್ಮ ಆ ನಾಟಕಕಾರರಿಗೆ ಬುದ್ಧಿ ಜೀವಿ ಎಂದು ಕರೆಸಿಕೊಳ್ಳುವ ಹಂಬಲದಿಂದಲೋ, ಇಲ್ಲ ಅವರಿಗೆ ಒಂದು ಜಾತಿಯ ಕುರಿತಾಗಿ ಇರುವ ಪೂರ್ವಾಗ್ರಹಪೀಡಿತ ವಿಚಾರಧಾರೆಗಳಿಂದಲೋ ಅವರನ್ನು ದನ ಕಾಯುವವರೆಂದೂ, ಆ ಇಡೀ ಜಾತಿಯೇ ಅಂತಹ ಬುದ್ಧಿಯುಳ್ಳದೆಂದೂ ಸಾರಾಸಗಟಾಗಿ ಹೇಳಿ ಮುಗಿಸಿದ್ದರು.

ನನ್ನ ನಿಲುವಿಷ್ಟೇ, ಜಾತಿ,ಧರ್ಮ, ಪಂಥ, ವರ್ಣಗಳು ನಮ್ಮಲ್ಲಿರುವುದು ನಿಜವಷ್ಟೇ. ಆದರೆ ಒಂದು ಅತ್ಯಂತ ಉತ್ಕೃಷ್ಠವೆಂತಲೂ, ಮತ್ತೊಂದು ಹಿಂದುಳಿದದ್ದು ಎಂತಲೂ ಬಿಂಬಿಸುವುದೇಕೆ? ಅದರಿಂದಾಗಿ ಸಮಾಜದೊಳಗೆ ಕಂದಕಗಳನ್ನು ಸೃಷ್ಟಿಸುವುದೇಕೆ?. ಜಾತಿ, ಪಂಗಡಗಳ ಕುರಿತು ಹೀಯಾಳಿಕೆಗಿಳಿಯುವವರು ಬರೀ ಆರ್ಥಿಕತೆಯನ್ನು ಮಾತ್ರ ಗುರಿಯಾಗಿಸಿಕೊಳ್ಳದೆ ಅವರ ಕಾಯಕವನ್ನು ಗುರಿಯಾಗಿಸಿಕೊಂಡು ಹಳಿಯುವುದು ತರವೇ?. ಸಂವಿಧಾನದ ಉಳಿವಿಗಾಗಿ ಹೋರಾಟ ಮಾಡುವ, ಗಂಟೆಗಟ್ಟಲೆ ಭಾಷಣ ಕುಟ್ಟುವ ಈ ಬುದ್ಧಿ ಜೀವಿಗಳು ಯಾವ ಕೋಮಿನವರಿಗೂ ನೋವಾಗದಂತೆ ಬದುಕಬೇಕು ಎನ್ನುವ ನಮ್ಮ ಸಂವಿಧಾನದ ಮೂಲ ಆಶಯದಂತೇಕೆ ಬದುಕುವುದಿಲ್ಲ?, ಅದು ಅವರಿಗೆ ಮರೆತು ಹೋಗಿರಬಹುದೇ? ಹಾಗಾದರೆ ನಾವಿದನ್ನು ಸಾಂವಿಧಾನಿಕ ಮರೆವೆನ್ನಬಹುದೇ?. ಗೊತ್ತಿಲ್ಲ!

ಈ  ಜಾತಿಯ ಆಧಾರದ ಮೇಲೆ ಹಳಿಯುವವರನ್ನು ನೀವು ಗಮನಿಸಿ ನೋಡಿ ಅವರ ಕಣ್ಣಲ್ಲಿ ಬ್ರಾಹ್ಮಣ ತಟ್ಟೆ ಕಾಸಿಗಾಗಿ ಬಾಯಿ ಬಿಟ್ಟು ಕಾದು ಕುಳಿತುಕೊಳ್ಳುವನು, ಒಕ್ಕಲಿಗ ಹಳ್ಳಿಯಲ್ಲಿ ಬದುಕಲು ಮಾತ್ರವೇ ಲಾಯಕ್ಕಾದವನು, ಲಿಂಗಾಯಿತ ಕಲ್ಲು ಕಟ್ಟಿದವನು, ಕುರುಬ ಕುರಿ ಕಾಯಲು ಮಾತ್ರವೇ ಯೋಗ್ಯನಾದವನಾಗಿ ಕಾಣ ಹತ್ತುತ್ತಾನೆ. ಸಾಂವಿಧಾನಿಕ ನೆಲೆಗಟ್ಟಿನಲ್ಲಿ, ನೈತಿಕ ನೆಲೆಗಟ್ಟಿನಲ್ಲಿ ಹೇಗೆ ಹೇಗೆ ನೋಡಿಕೊಂಡರು ಹೀಗೆ ಯೋಚಿಸುವುದು, ಅದನ್ನು ಜನ ಸಭೆಗಳಲ್ಲಿ ಒದರುವುದು ಅತ್ಯಂತ ತಪ್ಪಲ್ಲವೇ?. ಬರೀ ಪ್ರಶ್ನಾರ್ಥಕ ಚಿಹ್ನೆಗಳೇ ಹೆಚ್ಚಾದವು!. ಈಚೀಚಿಗೆ ನನ್ನ ಬುದ್ಧಿವಂತ ಮಿತ್ರನೊಬ್ಬ 'ಇದು ಒಡೆದಾಳುವ ನೀತಿಯಲ್ಲೊಂದು, ಇಲ್ಲದಿದ್ದರೆ ಇಷ್ಟು ದೊಡ್ಡ ದೇಶವನ್ನು ನಿಭಾಯಿಸುವುದು ಬಲು ಕಷ್ಟವೇ' ಎಂದಿದ್ದ, ಇಲ್ಲಿ ಅದು ಜ್ಞಾಪಕವಾಯ್ತಷ್ಟೆ.  

ಎಲ್ಲ ಕಡೆಯೂ ಇದು ಹೀಗೆಯೇ ಎಂದುಕೊಂಡಾಗ ಮಹಾರಾಷ್ಟ್ರದ ಭಕ್ತಿ ಪರಂಪರೆಯಲ್ಲಿ ಮಹೋನ್ನತ ಸ್ಥಾನ ಅಲಂಕರಿಸಿರುವ ಕುಂಬಾರ ಗೋರ, ಸಕ್ಕು ಬಾಯಿ, ನಾಮದೇವ, ತುಕಾರಾಮ, ಜ್ಞಾನದೇವ ಇವರುಗಳ ಬೋಧನೆಗಳನ್ನು ತೀವ್ರವಾಗಿ ಸ್ವೀಕರಿಸುತ್ತಾರೆಯೇ ಹೊರತು ಅವರ ಜಾತಿಗಳನ್ನು, ಪಂಥಗಳನ್ನು ಅಳೆಯಲು ಯಾರೂ ಮುಂದಾಗುವುದಿಲ್ಲ. ಆದರೆ ಕರ್ನಾಟಕದಲ್ಲಿ ಬಸವಣ್ಣ ಲಿಂಗಾಯಿತನಾಗಿಯೂ, ಕನಕದಾಸ ಕುರುಬನಾಗಿಯೂ, ರಾಘವೇಂದ್ರ ಸ್ವಾಮಿಗಳು ಬ್ರಾಹ್ಮಣರಾಗಿಯೂ ಮಾತ್ರ ಕಾಣಿಸುತ್ತಾರೆ. ಜಾತಿ ಪಂಥದ ಸೀಮಾ ರೇಖೆಗಳನ್ನು ಮೀರಿ ಅವರು ಬದುಕಿದ ರೀತಿಯೇ ಅವರನ್ನು ಸ್ವೀಕರಿಸಲು ಜನ ಇನ್ನೂ ತಯಾರಿಲ್ಲ. ಈಗೀಗ ಅವರೆಲ್ಲಾ ರಾಜಕೀಯ ಸರಕಾಗಿದ್ದು ಇನ್ನೂ ದುರಂತದ ವಿಚಾರ. 
 
ಇರಲಿ ಮೇಲೆ ತಿಳಿಸಿದ ಬುದ್ಧಿಜೀವಿ ನಾಟಕಕಾರರು ಯಾವ ದೃಷ್ಟಿ ಕೋನದಿಂದ ದಾನ ಕಾಯುವವರು ಬೋಧನೆಗಿಳಿಯುತ್ತಾರೆ ಎಂದರೋ ತಿಳಿಯದು, ಆದರೆ ಅವರು ಬೊಟ್ಟು ಮಾಡಿ ತೋರಿಸಿದ ಶರಣರು ತಮ್ಮ ತತ್ವಗಳನ್ನು ಯಾರಲ್ಲಿಯೂ ಹೋಗಿ  ನೀವು ಪಾಲಿಸಲೇಬೇಕು ಎಂದು ಶಿರದ ಮೇಲೆ ಕತ್ತಿಯಿಟ್ಟು ಝಳಪಿಸಲಿಲ್ಲ, ಎಲ್ಲರೂ ಪಾಲನೆ ಮಾಡುವಂತಾಗಲು ಆಳುವ ಅರಸನಿಂದ ಸುಗ್ರೀವಾಜ್ಞೆಯನ್ನೂ ಅವರು ಹೊರಡಿಸಿರಲಿಲ್ಲ. ಆದರೂ ಅವರ ಮೇಲೆ ಈ ಮಹಾಶಯರಿಗೆ ಅಸಹನೀಯತೆ ಏಕೆ ಉಂಟಾಯಿತೋ ಅರ್ಥವಾಗಲಿಲ್ಲ.

ಅಂದಹಾಗೆ ಇವರು ಬಳಸಿದ ದನಕಾಯುವವರು ಎಂಬ ಪದ ಇತ್ತೀಚಿಗೆ ಜ್ಞಾಪಕಕ್ಕೆ ಬರಲು ಕಾರಣವಿಷ್ಟೇ, ವಚನ ಕ್ರಾಂತಿಯ ಸಂದರ್ಭದಲ್ಲಿ ರಾಮಣ್ಣ ಎಂಬ ಶರಣನೊಬ್ಬ ಬದುಕಿದ್ದನಂತೆ. ಆತನ ಕಾಯಕ ದನಕಾಯುವುದು, ತಮ್ಮ ಕಾಯಕವನ್ನು ಹೆಸರಿನ ಮುಂದೆ ಸೇರಿಸಿಕೊಳ್ಳುತ್ತಿದ್ದ ಶರಣರ ರಿವಾಜಿನಂತೆಯೇ ಆತನು ತನ್ನ ಹೆಸರಿನ ಮುಂದೆ 'ತುರುಗಾಯಿ' ಎಂದು ಸೇರಿಸಿಕೊಂಡಿದ್ದ. 'ತುರುಗಾಯಿ ರಾಮಣ್ಣ' ನೆಂಬ ಶರಣನೊಬ್ಬನಿದ್ದ ಎನ್ನುವ ವಿಚಾರ ನನಗೂ ಇತ್ತೀಚಿಗೆ  ಚಿತ್ರದುರ್ಗದ ಮುರುಘಾಮಠದ ಶಿವಶರಣರ ಥೀಮ್ ಪಾರ್ಕ್ ಗೆ ಭೇಟಿ ಕೊಟ್ಟಾಗಲೇ ತಿಳಿಯಿತು. 'ತುರುಗಾಯಿ' ಎನ್ನುವ ಅಪ್ಪಟ ಕನ್ನಡ ಪದ ಸಂಸ್ಕೃತದಲ್ಲಿ 'ಗೋಪಾಲ' ಆಗುತ್ತದೆ. ಅದು ಸಂಸ್ಕೃತದಲ್ಲಿದ್ದರೆ ಕೆಲವರು ಭಕ್ತಿ ಪರವಶರಾಗುತ್ತಿದ್ದರು, ಅಷ್ಟೇ ಏಕೆ ಆ ಹೆಸರಿಗೆ ಅವಮಾನವುಂಟಾದರೆ ಅದು ಹಿಂದೂ ಧರ್ಮಕ್ಕೆ ಮಾಡಿದ ಅಪಚಾರವೆಂಬಂತೆ ಹಾರಾಡುತ್ತಿದ್ದರು. ಆದರೆ ಬುದ್ಧಿ ಜೀವಿ ನಾಟಕಕಾರರು ಕನ್ನಡಲ್ಲಿ ದನಕಾಯುವವರು ಎಂದು ಮೂದಲಿಸಿದ್ದರಿಂದ ಯಾರೂ ಅದನ್ನು ಅಷ್ಟಾಗಿ ತಲೆಗೆ ಹಚ್ಚಿಕೊಳ್ಳಲಿಲ್ಲ.

ಕುರುಕ್ಷೇತ್ರದ ಮಹಾಜಿರಂಗದಲ್ಲಿ ಅರ್ಜುನನಿಗೆ ಬೋಧನೆ
ಕುರುಕ್ಷೇತ್ರದ ಮಹಾಜಿರಂಗದಲ್ಲಿ ಅರ್ಜುನನಿಗೆ ಬೋಧನೆ


ಅಂದ ಹಾಗೆ ಅದೇ ದನ ಕಾಯುತ್ತಿದ್ದ ಹುಡುಗನನ್ನೇ ಕುರುಕ್ಷೇತ್ರದ ಮಹಾಜಿರಂಗದಲ್ಲಿ ಅರ್ಜುನನನಿಗೆ ಸಾರಥಿಯನ್ನಾಗಿಸಿ, ಅವನುಸುರಿದ ಗೀತೆಯನ್ನು ಭಗವದ್ಗೀತೆಯೆಂದು ಕಣ್ಗೊತ್ತಿಕೊಂಡು ಪಾಲಿಸುತ್ತೇವಲ್ಲ! ಕೃಷ್ಣನ ಕಾಯಕವನ್ನಾಗಲಿ, ಜಾತಿಯನ್ನಾಗಲಿ ನೋಡದೆ ಐತಿಹಾಸಿಕ ಭಾರತದಿಂದ ಹಿಡಿದು ಇಂದಿನ ಡಿಜಿಟಲ್ ಭಾರತವೂ ಆತನನ್ನು ಬಿಗಿದಪ್ಪಿಕೊಳ್ಳುತ್ತದಲ್ಲಾ ಏಕೆ?. ಅದರರ್ಥ ನಮ್ಮೀ ದೇಶದಲ್ಲಿ ವೃತ್ತಿ ಯಾವುದಾಗಿದ್ದರು ಅವರ ನುಡಿಗಳಲ್ಲಿ ಮೌಲ್ಯವಿದೆಯೆಂದರೆ ಅದನ್ನು ಸರ್ವಥಾ ಅನುಸರಿಸಬಹುದು ಎನ್ನುವುದೇ ಆಗಿದೆ. ಇದು ಬುದ್ಧಿ ಜೀವಿ ನಾಟಕಕಾರರಿಗೆ ಅರ್ಥವಾಗದೆ ಹೋದದ್ದು ಖೇದಕರ.


-o-

ಸೋಮವಾರ, ಫೆಬ್ರವರಿ 8, 2021

ತಥಾಕಥಿಕ ಅಮೇರಿಕಾ

ಹೊರದೇಶಗಳನ್ನು ಓಡಾಡಿ ಕಂಡವರು ನಮ್ಮ ದೇಶದಲ್ಲಿ ಬಹಳಷ್ಟು ಜನರೇನು ಇಲ್ಲ. ನಮ್ಮ ದೇಶದ ಅಷ್ಟೂ ಜನ ಸಂಖ್ಯೆಯಲ್ಲಿ ಶೇ.1 ರಷ್ಟು ಜನ ನಮ್ಮ ದೇಶದಿಂದ ಕಾಲ್ಕಿತ್ತು ಹೋಗಿ ಪರದೇಶಗಳನ್ನು ಕಂಡವರಿರುವುದೂ ಅನುಮಾನವೇ ಎನಿಸುತ್ತದೆ. ಆದರೂ ಅಸಂಖ್ಯ ಭಾರತೀಯರೆದುರಿಗೆ ಪರದೇಶದ ಪ್ರಸ್ತಾವವಾದರೆ ಅವರ ದೃಷ್ಟಿಗೆ ಮೊದಲು ನಿಲುಕುವುದೇ ಅಮೇರಿಕಾ. 

ಪೂರಾ ಅಮೇರಿಕಾ ಖಂಡಗಳು ಇಷ್ಟವಾಗದಿದ್ದರೂ ಅಮೇರಿಕಾ ಸಂಯುಕ್ತ ಸಂಸ್ಥಾನ ಎಲ್ಲರಿಗೂ ಉಚ್ಚ ಮಟ್ಟದ ಜೀವನಶೈಲಿಯನ್ನೀಯುವ ದೇಶ ಎಂಬಂತ ಕಲ್ಪನೆಯೂ ಭಾರತೀಯರು ಅನೇಕರಲ್ಲಿ ಇದೆ. ಅದಕ್ಕೆ ಕಾರಣ ಒಂದಲ್ಲ, ಹಲವಾರಿವೆ. ಅಮೇರಿಕಾದ ಡಾಲರು ಭಾರತದ ರೂಪಾಯಿಗಿಂತ ಯಾವಾಗಲೂ ಮುಂದೆ ಇರುವುದು ಒಂದಾದರೆ ಭಾಷೆಯ ವಿಚಾರದಲ್ಲಿ ಇನ್ನಿತರ ದೇಶಗಳಲ್ಲಿ ಉಂಟಾಗಬಹುದಾದ ತೊಂದರೆ ಅಲ್ಲಿ ತೀರಾ ಕನಿಷ್ಟವೆನ್ನಬಹುದು. ಇಂಗ್ಲಿಷಿನ ಮೇಲಿನ ಅಲ್ಪ ಸ್ವಲ್ಪ ಹಿಡಿತವಿದ್ದವರೂ ಅಮೆರಿಕೆಯಲ್ಲಿ ದಶಕಗಳನ್ನು ದೂಡಿರುವುದು ಆ ದೇಶ ಭಾಷೆಯ ವಿಚಾರದಲ್ಲಿ ತುಂಬಾ ಸಲೀಸು ಎನಿಸುವಂತೆ ಮಾಡುತ್ತದೆ. ಪ್ರಜಾಪ್ರಭುತ್ವ ತತ್ವದ ಅಡಿಯಲ್ಲಿ ನೋಡುವುದಾದರೆ ಭಾರತೀಯರಿಗೆ ಪರಮಾಪ್ತ ದೇಶ ಅಮೇರಿಕಾವೇ, ಆದರೆ ಅಮೇರಿಕೆಯ ಬಂಡವಾಳಶಾಹಿ ಧೋರಣೆ ಭಾರತದಲ್ಲಿ ನಡೆಯಲಾರದು ಎಂಬ ಅರಿವು ಅಮೇರಿಕಾ ಭಾರತಗಳೆರಡನ್ನೂ ಕಂಡವರಿಗೆ ಈಗಾಗಲೇ ಮನವರಿಕೆಯಾಗಿಯೂ ಇದೆ.

ಅಮೇರಿಕಾ ಭಾರತಕ್ಕೆ ಹೆಚ್ಚು ಹೆಚ್ಚು ಹತ್ತಿರವಾಗುತ್ತಿರುವುದಕ್ಕೆ ಜಾಗತೀಕ, ಸಾಮರೀಕ ನೆಲೆಗಟ್ಟಿನಲ್ಲಿ ನೋಡುವುದಾದರೆ ಅಮೇರಿಕಾ ತನ್ನ ಎದುರಾಳಿಯಾಗಿದ್ದ ಸೋವಿಯತ್ ರಷ್ಯಾ ಸಂಯುಕ್ತ ಸಂಸ್ಥಾನವನ್ನು ಯಶಸ್ವಿಯಾಗಿ ಛಿದ್ರ ಮಾಡಿದೆ, ಇನ್ನು ಅದಕ್ಕೆ ಭೌಗೋಳಿಕವಾಗಿ ಸೋವಿಯತ್ ರಷ್ಯಾಗೆ ಸಮೀಪವಾಗಿರುವ ಹಾಗು ಆರ್ಥಿಕವಾಗಿ ಸಬಲವಾಗಿಲ್ಲದ ಪಾಕಿಸ್ತಾನ, ಅಫ್ಘಾನಿಸ್ತಾನಗಳ ಅವಶ್ಯಕತೆ ಏನೇನು ಇಲ್ಲ. ಆದರೆ ಅದರ ಹೊಸ ಎದುರಾಳಿ ಚೀನಾವನ್ನು ಹಣಿಯಲು ಮೂರನೇ ರಾಷ್ಟ್ರವೊಂದರ ಅದರಲ್ಲೂ ಬಲಶಾಲಿಯಾದ ರಾಷ್ಟ್ರವೊಂದರ ಸಹಾಯ ಅಮೇರಿಕಾಗೆ ಬೇಕೇ ಬೇಕು. ಅದು ಚೀನಾ ಸುತ್ತಲಿನ ರಾಷ್ಟ್ರವೇ ಆಗಿರಬೇಕು, ಅಂದರೆ ಅದು ಜಪಾನ್, ರಷ್ಯಾ, ಭಾರತದ ಪೈಕಿ ಯಾವುದಾದರೂ ಒಂದು ರಾಷ್ಟ್ರವಾಗಿರಬೇಕು. ರಷ್ಯಾ-ಅಮೇರಿಕಾಗಳು ಕೂಡಿ ಚೀನಾವನ್ನು ಹಣಿಯುವುದು ಭಾರತದಲ್ಲಿ ಬಿಜೆಪಿ-ಕಾಂಗ್ರೆಸುಗಳು ಮೈತ್ರಿಮಾಡಿಕೊಂಡು ಕೇಂದ್ರದಲ್ಲಿ ಸರ್ಕಾರ ರಚಿಸಿದಷ್ಟೇ ಸತ್ಯ. ಇನ್ನು ಅಮೇರಿಕಾ ತಾನಾಗೇ ಮೇಲೆ ಬಿದ್ದು ಜಪಾನಿಗೆ ಹೋದರು ಟೋಕಿಯೋ ಅವರನ್ನೇನು ಬಿಗಿದಪ್ಪಿಕೊಳ್ಳುವುದಿಲ್ಲ, ಜಪಾನಿಗೆ ಅಮೇರಿಕಾ ಮಾಡಿದ ಗಾಯ ಇನ್ನು ಒಣಗಿಲ್ಲ, ಅವರು ಅದನ್ನು ಮರೆತೂ ಇಲ್ಲ. ಇನ್ನು ಅಮೇರಿಕಾಗೆ ಉಳಿದುಕೊಂಡಿದ್ದು ಭಾರತ ಮಾತ್ರ. ಆದ ಕಾರಣವೇ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಹಾಗು ಡೆಮಾಕ್ರಟ್ ಪಕ್ಷದ ಜೋ ಬಿಡೆನ್ ಇಬ್ಬರೂ ಅಮೇರಿಕಾ ದೇಶದ ಆಂತರಿಕ ಆಡಳಿತ ವಿಚಾರಗಳಲ್ಲಿ ವಿರೋಧ ನೀತಿಗಳನ್ನು ಹೊಂದಿದ್ದಾಗ್ಯೂ ತಂತಮ್ಮ ಕಾಲಾವಧಿಗಳಲ್ಲಿ ಭಾರತಕ್ಕೆ ಸೇನಾ ವಿಚಾರದಲ್ಲಿ ಅಪಾರ ಸಹಾಯ ಒದಗಿಸುತ್ತಿರುವುದು.

ಇನ್ನು ಆರ್ಥಿಕ ನೆಲೆಗಟ್ಟಿನಿನಿಂದ ನೋಡುವುದಾದರೆ ಅಮೇರಿಕಾ ಭಾರತಕ್ಕಿಂತ ಸುಮಾರು ಮೂರು ಪಟ್ಟು ದೊಡ್ಡ ದೇಶ ಆದರೂ ಅಲ್ಲಿನ ಜನ ಸಂಖ್ಯೆ 35 ಕೋಟಿ ಮಾತ್ರ, ಅಂದರೆ ಭಾರತಕ್ಕಿಂತ ನೂರು ಕೋಟಿ ಕಡಿಮೆ ಜನಸಂಖ್ಯೆಯನ್ನುಳ್ಳ ದೇಶ ಅದು. ಅಲ್ಲಿನ ಬೃಹತ್ ಆರ್ಥಿಕತೆಯನ್ನು ಸಂಭಾಳಿಸಲು ಅಷ್ಟು ಜನ ಸಂಖ್ಯೆ ಕಡಿಮೆಯೇ, ಅದಕ್ಕೆ ಬದಲಿಯಾಗಿ ತಂತ್ರಜ್ಞಾನದ ಮೊರೆ ಹೋಗಲಾದರೂ ಆ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಮಾನವ ಸಂಪನ್ಮೂಲ ಬೇಕೇ ಬೇಕಲ್ಲವೇ?. ಅದಕ್ಕಾಗಿ ಅಮೇರಿಕಾ ತನಗಿಂತ ಕಡಿಮೆ ಬೆಲೆಗೆ ದಕ್ಕುವ ಹಾಗು ತಾಂತ್ರಿಕವಾಗಿ ನಿಷ್ಣಾತರಿರುವ ಭಾರತವನ್ನು ಆಯ್ದುಕೊಂಡಿರುವುದು ಸೂಕ್ತವೂ, ಸಮಯಕ್ಕನುಗುಣವೂ ಆಗಿದೆ. ಈಗೀಗ ಪೂರ್ವ ದೇಶಗಳಾದ ಮಲೇಷಿಯಾ, ಇಂಡೋನೇಷ್ಯಾ, ವಿಯೆಟ್ನಾಂ ತರಹದ ದೇಶಗಳು ಭಾರತದ ನಡೆಯನ್ನೇ ಅನುಸರಿಸಿ ತಮ್ಮ ನೆಲದಲ್ಲಿ ತಾಂತ್ರಿಕ ಶಿಕ್ಷಣ ದೊರೆಯುವಂತೆ ಮಾಡಿ ಆ ಮೂಲಕ ಮಾನವ ಸಂಪನ್ಮೂಲವನ್ನು ಪಶ್ಚಿಮ ದೇಶಗಳೊಂದಿಗೆ ಹಂಚಿಕೊಂಡು ತಮ್ಮ ಆದಾಯ ವೃದ್ಧಿ ಮಾಡಿಕೊಳ್ಳುವ ಯೋಜನೆ ಹೂಡಿಕೊಂಡು ಅಮೇರಿಕಾದ ಕಂಪನಿಗಳನ್ನು ತಮ್ಮತ್ತ ಆಕರ್ಷಿಸಲು ಮೊದಲಾಗಿರುವುದೂ ವರ್ತಮಾನದ ವಿದ್ಯಮಾನ.


ಅಮೇರಿಕಾ ರಾಜಕೀಯ ರಂಗದಲ್ಲಿ ಆ ದೇಶವನ್ನು 'ಹೊರಗಿನಿಂದ ಬಂದವರು ಕಟ್ಟಿದ್ದು' ಎಂಬ ಮಾತು ಆಗಾಗ ಕೇಳಿ ಬರುತ್ತಲೇ ಇರುತ್ತದೆ. ಅಮೇರಿಕಾ ದೇಶದ ವಲಸಿಗರ ಪಾಲು ಎಷ್ಟರ ಮಟ್ಟಿಗೆ ಇದೆ ಎಂದರೆ ಈವತ್ತು ಆ ದೇಶದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದಲ್ಲಿರುವ ಇಬ್ಬರೂ ವಲಸಿಗರ ಮಕ್ಕಳೇ!. ಜೋ ಬಿಡೆನ್ ವಂಶಸ್ಥರು ಐರ್ಲೆಂಡ್ ಮೂಲದವರಾದರೆ, ಕಮಲಾ ಹ್ಯಾರಿಸ್ ಆಫ್ರಿಕಾ-ಭಾರತ ಮೂಲದವರು. ಡೆಮಾಕ್ರಟ್ ಪಕ್ಷ ವಲಸಿಗ ಕೇಂದ್ರೀತ ನೀತಿಗಳನ್ನಿಟ್ಟುಕೊಂಡೇ ಹಲವಾರು ಬಾರಿ ಗೆದ್ದು ಸರ್ಕಾರ ರಚಿಸಿರುವುದು ಇದಕ್ಕೆಲ್ಲಾ ಪುಷ್ಟಿ ಕೊಡುವಂತಹುದ್ದೇ. ವಲಸಿಗರಿಗೆ ಕೆಂಪು ಹಾಸು ಹಾಸಿ, ಅವರೇ 'ಈ ದೇಶದ ನಿರ್ಮಾಣಕಾರರೆಂದು' ಎಷ್ಟು ದೇಶಗಳು ಹೊಗಳುತ್ತವೆ ಹೇಳಿ?. ನಮ್ಮ ಭಾರತವೇ ಅಂತಹ ದೇಶವಲ್ಲ, ಬಾಂಗ್ಲಾ, ಮಯನ್ಮಾರ್ಗಳ ಅಕ್ರಮ ವಲಸೆ ನಮಗೆ ತಲೆನೋವಾಗಿ ಪರಿಣಮಿಸಿದ್ದು ನೆನಪಿದೆ ತಾನೇ!. ಈ ಕಾರಣಕ್ಕೆ ವಲಸಿಗರಿಗೆ ಅಮೇರಿಕಾ ಸ್ವರ್ಗದಂತೆ ಕಾಣಹತ್ತುತ್ತದೆ. ಭಾರತೀಯರಿಗೆ ಅಮೇರಿಕಾ ಏಷ್ಟೆಷ್ಟೇ ಸ್ವರ್ಗವಾಗಿ ಗೋಚರಿಸಿದರೂ ಅಲ್ಲಿನ ಮೌಲ್ಯಗಳು, ಅದರಲ್ಲೂ ಕೌಟುಂಬಿಕ ಮೌಲ್ಯಗಳು ತೀರಾ ದೂರವಾಗಿಯೇ ತೋರುತ್ತವೆ. ನಮ್ಮವರು ಆ ಕೌಟುಂಬಿಕ ಮೌಲ್ಯಗಳಿಗೆ ಒಗ್ಗಿಕೊಳ್ಳುವುದಿರಲಿ, ಯೋಚನೆ ಮಾಡುವುದಕ್ಕೂ ಸಾಧ್ಯವಿಲ್ಲ. 

ಮದುವೆಯಾಗಿ ಮಕ್ಕಳನ್ನು ಹಡೆದ ಹೆಣ್ಣು ಗಂಡ ತನಗೊಪ್ಪದಿದ್ದಂತೆ ತೋರಿದರೆ ವಿಚ್ಚೇಧನ ಪಡೆದುಕೊಳ್ಳುತ್ತಾಳೆ. ಕೋರ್ಟಿನ ತೀರ್ಪಿನ ಮೇರೆಗೆ ಮಕ್ಕಳು ತಂದೆಯ ಬಳಿಯೋ, ತಾಯಿಯ ಬಳಿಯೋ ಬೆಳೆಯುತ್ತವೆ. ವಿಚ್ಛೇಧನಗೊಂಡ ತಂದೆ ತಾಯಿ ಇಬ್ಬರೂ ಮತ್ತೊಂದು ಮದುವೆ ಮಾಡಿಕೊಳ್ಳುತ್ತಾರೆ. ಮಲ-ತಾಯಿಯ ಬಗ್ಗೆ ಕೇಳಿರುವ ನಾವು ಅಲ್ಲಿ ಮಲ-ತಂದೆಯನ್ನೂ ನೋಡಬಹುದು. ಅದು ಸರ್ವೇ ಸಾಮಾನ್ಯವೂ ಹೌದು. ಬಿಸಿನೆಸ್ ನಲ್ಲಿ ಒಳ್ಳೆಯ ಬೆಳವಣಿಗೆ ಕಾಣಬೇಕೆಂದರೆ ಅಮೇರಿಕಾ ಮೂಲದ 'ರಿಚ್ ಡ್ಯಾಡ್ - ಪೂರ್ ಡ್ಯಾಡ್' ಪುಸ್ತಕವನ್ನೋದಿ ಎಂದು ಅನೇಕ ಮಿತ್ರರು ಆಗಾಗ ಹೇಳುವುದನ್ನು ಕೇಳಿದ್ದೇವೆ. ಆ ಪುಸ್ತಕದಲ್ಲಿರುವ ಸಾರ ಬೇರೆಯದೇನೋ, ಆದರೆ ಆ ಹೆಸರಿನಲ್ಲೇ ಬಡವ ತಂದೆ, ಸಿರಿವಂತ ತಂದೆ ಎಂಬ ಎರಡು ತಂದೆಯ ತತ್ವವನ್ನು ಹೇಳಲಾಗಿದೆ. ಭಾರತೀಯರಿಗೆ ಇಬ್ಬರು ತಂದೆಯರನ್ನು ಕನಸಿನಲ್ಲಿಯೂ ಕಲ್ಪಿಸಿಕೊಳ್ಳುವುದು ಸಾಧ್ಯವಿಲ್ಲ. 

ಮೂರ್ನಾಲ್ಕು ವರ್ಷಗಳ ಹಿಂದೆ ಮಿತ್ರರೊಬ್ಬರು ಅಮೇರಿಕಾಗೆ ಹೋಗಿದ್ದರು. ಅಲ್ಲಿ ಅವರು ಉಳಿದಿದ್ದ ಹೋಟೆಲ್ ಗೂ ಕೆಲಸದ ಸ್ಥಳಕ್ಕೂ ಸುಮಾರು ನಲವತ್ತು ಕಿಲೋಮೀಟರ್ ಆಗುತ್ತಿತ್ತಂತೆ. ಹೋಗಿ ಬರುವಾಗ ಸ್ಥಳೀಯ ಸಹೋದ್ಯೋಗಿಯೊಡನೆ ಅವನದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದರಂತೆ. ಒಂದು ದಿನ ಆತ ಹೇಳಿದನಂತೆ, ನಾನು ಈಗ ನನ್ನ ಮನೆಯಲ್ಲಿಲ್ಲ ನಾನಿರುವುದು ನನ್ನ ತಂದೆಯ ಮನೆಯಲ್ಲಿ. ನನ್ನ ಮನೆ ಇಲ್ಲಿಂದ ಎಂಬತ್ತೈದು ಕಿಮೀ ದೂರವಾಗುತ್ತದೆ ಎಂದನಂತೆ. ಭಾರತದಲ್ಲಿ ತಂದೆಯ ಮನೆಯಲ್ಲಿಯೇ ಉಳಿದು ನಮ್ಮ ಮನೆಯೆಂದು ಹೇಳಿಕೊಳ್ಳುತ್ತೇವಲ್ಲ, ಅಲ್ಲಿ ಹಾಗಿಲ್ಲ. ಹದಿನೆಂಟು ತುಂಬುವುದಕ್ಕೂ ಮೊದಲೇ ಕೆಲಸ, ಉದ್ಯೋಗ ಎಂದೆಲ್ಲಾ ತಿರುಗಿ ಮಕ್ಕಳು ಪೋಷಕರಿಂದ ದೂರ ಉಳಿದುಬಿಡಬೇಕು. ಆದ ಕಾರಣಕ್ಕೆ ಅಲ್ಲಿನ ಹುಡುಗಿಯರು ಭದ್ರತೆಯ ಕಾರಣಕ್ಕಾಗಿ ಹದಿನಾರು-ಹದಿನೇಳು ತುಂಬುವುದರಲ್ಲಿ ಬಾಯ್ ಫ್ರೆಂಡ್ ಹೊಂದುತ್ತಾರೆ. ಸಾಮಾಜಿಕವಾಗಿ, ಆರ್ಥಿಕವಾಗಿ ಅವರಿಗೆ ಭದ್ರತೆ ಅವನು. ಅವರಿಬ್ಬರೂ ತಂತಮ್ಮ ಜೀವನವನ್ನು ಸಾಗಿಸಿಕೊಂಡು, ವಿದ್ಯಾಭ್ಯಾಸವನ್ನೂ ಮಾಡುವುದರೊಳಗೆ ಹೈರಾಣಾಗಿ ಹೋಗುತ್ತಾರೆ. ಆದರೆ ಅದರ ಜೊತೆ ಜೊತೆಗೆ ಅಪಾರ ಅನುಭವವೂ, ಜೀವನದ ಏಳು ಬೀಳುಗಳ ಅರಿವೂ ಅವರಿಗಾಗಿರುತ್ತದೆ. ತಮ್ಮ ಆರ್ಥಿಕ ವ್ಯವಸ್ಥೆಯನ್ನು ಸರಿದೂಗಿಸುವ ನಡುವೆ ನಡುವೆಯೇ ತಮ್ಮ ಭವಿಷ್ಯ ನಿರ್ಮಾಣ, ಸಂಗಾತಿಯ ಆಯ್ಕೆ ಎಲ್ಲವೂ ಅವರದೇ ಹೆಗಲೇರುತ್ತದೆ. ಈ ಹಂತದಲ್ಲಿ ಎಡವಿ ಮುಗ್ಗರಿಸುವವರೂ ಅಪಾರವಾಗಿದ್ದಾರಂತೆ. ಆದ ಕಾರಣದಿಂದಲೇ ಅಮೇರಿಕಾದ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಪದವಿ ವ್ಯಾಸಂಗದಲ್ಲಿ ಭಾರತೀಯರು, ಪಾಕಿಸ್ತಾನಿಗಳು, ಚೀನಿಯರೇ ಮೇಲುಗೈ ಸಾಧಿಸುತ್ತಾರಂತೆ. ಮಕ್ಕಳು ಓದಿ ಕೆಲಸಕ್ಕೆ ಸೇರಿ ಹಣ ಮಾಡುವುದನ್ನು ಕಲಿಯುವವರೆಗೂ ಅವರ ಬೆಂಗಾವಲು ಪೋಷಕರೇ ಎನ್ನುವ ಏಷಿಯನ್ ತತ್ವ ಅಮೇರಿಕಾದಲ್ಲಿ ಅಧ್ಯಯನ ಮಾಡುತ್ತಿರುವ ಏಷ್ಯನ್ ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಅಲ್ಲಿನ ಬಾಯ್ ಫ್ರೆಂಡ್, ಗರ್ಲ್ ಫ್ರೆಂಡ್ ಗಳ ಸಂಸ್ಕೃತಿ ನಮ್ಮ ದೇಶಕ್ಕೂ ಕಾಲಿಟ್ಟು ಈಗೀಗ ಚಿತ್ರಣ ಬದಲಾಗುತ್ತಿರುವುದನ್ನು ನಾವೆಲ್ಲಾ ಕಾಣುತ್ತಲೇ ಇದ್ದೇವೆ. 

ಭಾರತದಲ್ಲಿ ಐಟಿ ರಂಗ ಇನ್ನೂ ಅರಳದಿದ್ದ ಕಾಲದಲ್ಲಿ, ಬಹಳಷ್ಟು ಜನ ವಿದೇಶ ಸುತ್ತುವ ಖಯಾಲು ಹೊಂದದೇ ಇದ್ದ ಕಾಲದಲ್ಲೂ ಕನ್ನಡಿಗರಿಗೆ ಅಮೇರಿಕಾದ ದರ್ಶನ ಮಾಡಿಸಿದ್ದು ನಾಗತಿಹಳ್ಳಿ ಚಂದ್ರಶೇಖರರ 'ಅಮೇರಿಕಾ ಅಮೇರಿಕಾ' ಸಿನೆಮಾ. ಕೆಲಸದ ನಿಮಿತ್ತು ಅಮೇರಿಕಾ ದೇಶಕ್ಕೆ ಲಗ್ಗೆ ಇಡುವ ಭಾರತೀಯ ಹಳ್ಳಿಯ ಪ್ರತಿಭೆಯೊಂದು ಅಲ್ಲಿನ ವಿಲಾಸಕ್ಕೆ ಮಾರುಹೋಗಿ ನಿಂತರೂ, ಕುಂತರೂ ಭಾರತವನ್ನು ದೂಷಿಸುವ ಪರಿಪಾಠ ಬೆಳೆಸಿಕೊಳ್ಳುತ್ತಾನೆ. ಅಮೇರಿಕೆಯ ಮೇಲಿನ ಪ್ರೀತಿ ಆತನಲ್ಲಿ ತುಂಬಿ ಹರಿಯುತ್ತಿದ್ದ ಕಾಲದಲ್ಲಿಯೇ ಆತನಿಗೆ ವಕ್ಕರಿಸುವ ಆರ್ಥಿಕ ಮುಗ್ಗಟ್ಟುಗಳು, ಉದ್ಯೋಗನಷ್ಟ ವಿಪರೀತ ಎನ್ನುವಂತಹ ಕಾಲದಲ್ಲಿ ಬುದ್ಧಿ ಕಲಿಸುತ್ತವೆ. ಇದರ ನಡುವೆಯೇ ನಾಯಕಿ ಅಮೇರಿಕೆಯ ನಿಜ ಬಣ್ಣ ಅರಿತುಕೊಳ್ಳುತ್ತಾ ಸಾಗುತ್ತಾಳೆ. ಸಕಲ ಸಂಪತ್ತನ್ನು ಸಾಲವಾಗಿ ಕೊಟ್ಟು ಸಾಲದ ಕೂಪದಲ್ಲಿ ಬೀಳಿಸಿಕೊಳ್ಳುವ ಆ ದೇಶ ಆ ಸಾಲಕ್ಕಾಗಿ ಅನೇಕ ವರ್ಷಗಳ ಕಾಲ ತನ್ನ ನೆಲದಲ್ಲೇ ದುಡಿಯುವಂತೆ ಮಾಡಿಕೊಳ್ಳುತ್ತದೆ. ಸಾಲದಿಂದ ಸಂಪಾದಿಸಿದ ಐಭೋಗವನ್ನು ತಾನೇ ಸಂಪಾದಿಸಿದೆ ಎನ್ನುವ ಭ್ರಮೆಗೆ ಬೀಳುತ್ತಾರೆ ಅಲ್ಲಿನವರು. ಆದರೆ ಅದು ತನ್ನ ದಾಕ್ಷಿಣ್ಯದಲ್ಲಿಟ್ಟುಕೊಳ್ಳಲು ಆ ದೇಶವೇ ತಯಾರು ಮಾಡಿದ ವ್ಯವಸ್ಥಿತ ಜಾಲ ಎನ್ನುವುದು ಅವರ ಅರಿವಿಗೆ ಬರುವುದೇ ಇಲ್ಲ. ಇದು ಒಂದು ಕಡೆ ಸಿನೆಮಾ ಸಂಭಾಷಣೆಯೊಳಗೂ ಕಾಣಿಸಿಕೊಳ್ಳುತ್ತದೆ. ಅಮೇರಿಕಾದಲ್ಲಿ ಕೆಲ ಕಾಲ ಇದ್ದು ಅಲ್ಲಿನ ಭಾರತೀಯ ವಲಸಿಗರ ಬದುಕನ್ನು ಅಧ್ಯಯನ  ಮಾಡಿಯೇ ಕಥೆ ಬರೆದರಂತೆ ನಾಗತಿಹಳ್ಳಿ ಚಂದ್ರಶೇಖರರು. 

ಈಚೀಚಿಗೆ ನಾನು ಅಮೇರಿಕೆಯ ಒಂದು ವಿಮಾ ಕಂಪನಿಗೆ ಬೆಂಗಳೂರಿನಿಂದಲೇ ಕೆಲಸ ಮಾಡುತ್ತಿದ್ದೆ. ಆ ಕಂಪನಿಗೆ  ಬೇಕಾದ ಜಾಲ ತಾಣ ಅಭಿವೃದ್ಧಿಪಡಿಸುವ ತಂಡದಡಲ್ಲಿ ನಾನಿದ್ದೆ. ಆ ತಾಣ ಅಭಿವೃದ್ಧಿ ಪಡಿಸುವುದಕ್ಕೂ ಮುನ್ನ ಅದಕ್ಕೆ ಬೇಕಾದ ಸೈದ್ಧಾಂತಿಕ, ಪ್ರಾಯೋಗಿಕ ವಿಚಾರಗಳನ್ನೆಲ್ಲಾ ನಮಗೆ ತಿಳಿಯಪಡಿಸಲು ಅಲ್ಲಿನ ಉದ್ಯೋಗಿಯೊಬ್ಬರು ಬೆಂಗಳೂರಿಗೆ ಬಂದಿಳಿದರು. ಅವರೂ ಭಾರತೀಯ ಮೂಲದವರೇ. ನಮ್ಮ ಕಾರ್ಯ ಯೋಜನೆಗೆ ಬೇಕಾಗುವಷ್ಟು ಜ್ಞಾನವನ್ನೂ, ಅದು ನಿಜ ಜೀವನದಲ್ಲಿ ಕೆಲಸ ಮಾಡುವ ಬಗೆಯನ್ನೂ, ಗ್ರಾಹಕರು ಅದನ್ನು ಬಳಸಿಕೊಳ್ಳುವ ರೀತಿಯನ್ನೂ, ಸರ್ಕಾರ ಅದರ ಮೇಲೆ ಕಣ್ಗಾವಲು ಇರಿಸುವ ಯೋಜನೆಯನ್ನು ಎಲ್ಲವನ್ನು ಸವಿವರವಾಗಿ ತಿಳಿಸಿಕೊಟ್ಟರು. ಕೊನೆಯ ದಿನ ರಾತ್ರಿ ಆಯೋಜಿಸಿದ್ದ ಭೋಜನ ಕೂಟದಲ್ಲಿ ಪಾಲ್ಗೊಂಡ ಅವರು ನಮ್ಮನ್ನೆಲ್ಲ ಉತ್ತಮ ನಿರ್ವಹಣೆ ತೋರುವಂತೆ ಪ್ರೋತ್ಸಾಹಿಸುತ್ತಾ ಅಮೇರಿಕೆಯ ಕುರಿತು ಕೆಲ ಮಾತುಗಳನ್ನಾಡಿದರು. 'ಅದೊಂದು ಶುದ್ಧ ಆಸೆಬುರುಕ ದೇಶ, ವಿಮೆ ಎನ್ನುವುದು ಆ ದೇಶದಲ್ಲಿ ದೊಡ್ಡ ದಂಧೆ. ಕಷ್ಟ ಪಟ್ಟು ದುಡಿಯುವ ಕಾರ್ಮಿಕ ವರ್ಗವನ್ನು ಹಿಂಡಿ ವಿಮೆಯ ಹಣ ಕಕ್ಕಿಸಲಾಗುತ್ತದೆ. ಅವುಗಳಿಂದಲೇ ವಿಮೆಯ ಕಂಪನಿಗಳು ಅಪಾರ ಹಣ ಸಂಪಾದನೆ ಮಾಡುತ್ತವೆ. ವಿಮೆಯೇ ಅಮೇರಿಕೆಯ ಅತಿ ದೊಡ್ಡ ಬಾಬತ್ತಿನ ವ್ಯವಹಾರ' ಎಂದರು. ಕಾರ್ಮಿಕರನ್ನು, ದುಡಿಯುವ ವರ್ಗದ ಜನರನ್ನು ಶೋಷಣೆ ಮಾಡಿದ ಆ ಹಣದಿಂದಲೇ ಭಾರತಕ್ಕೆ ಅಮೇರಿಕಾದ ಹೊರಗುತ್ತಿಗೆಯ ಕೆಲಸಗಳು ಹರಿದುಬರುತ್ತಿರುವುದು, ನಾವು ದುಡಿಯುತ್ತಿರುವುದು. ಅರ್ಥಾತ್ ನಾವು ಗಳಿಸಿದ್ದು ಅವರ ಶ್ರಮದ ಹಣವನ್ನು. ಒಬ್ಬರನ್ನು ತುಳಿದೋ, ಅಳಿದೋ ಮತ್ತೊಬ್ಬರು ಬದುಕಬೇಕು ಎನ್ನುವುದು ಅಲ್ಲಿಗೆ ಶತಸಿದ್ಧವಾಯ್ತಲ್ಲ!. ಬಂಡವಾಳಶಾಹಿ ಧೋರಣೆಯ ದೇಶಗಳಲ್ಲಿ, ಸಂಸ್ಥೆಗಳಲ್ಲಿ ಇತಿಹಾಸ ಪರ್ಯಂತ ನಡೆದಿರುವುದೇ ಹಾಗೆ.

ಇಷ್ಟಾದರೂ ಅಮೇರಿಕಾ ವಿಶ್ವದ ದೊಡ್ಡಣ್ಣನೆಂದು ಗುರುತಿಸಿಕೊಳ್ಳುತ್ತದೆ. ಭಾರತದ ಯುವಜನಾಂಗ ಅಮೆರಿಕಾದಲ್ಲೇನು ಹೊಸದಾಗಿ ಬಂದರೂ ತಾವು ಅದನ್ನು ಅನುಸರಿಸುತ್ತಾರೆ. ಅಲ್ಲಿ ಬದುಕುವುದು, ಬಾಳುವುದು, ಅಲ್ಲಿಗೆ ಹೋಗಿ ಬರುವುದೂ ಘನತೆಯ ವಿಚಾರವೆನ್ನುವುದು ಎಲ್ಲಾ ಭಾರತೀಯರಲ್ಲೂ ಬಲವಾಗಿ ಕುಳಿತಿರುವ ವಿಚಾರ. ಭಾರತ ಅಮೇರಿಕೆಯೊಂದಿಗೆ ಅಪ್ಯಾಯಮಾನವಾದಷ್ಟು ತನ್ನ ನೆರೆ ರಾಷ್ಟ್ರಗಳೊಂದಿಗೂ ಆದರೆ ತನ್ನ ಆರ್ಥಿಕ, ಸಾಂಸ್ಕೃತಿಕ ವ್ಯವಸ್ಥೆಯಲ್ಲಿ ಬದಲಾವಣೆಯ ಅಲೆಯೊಂದನ್ನು ಕಾಣುವುದು ನಿಶ್ಚಿತ. 

-o-

ಬುಧವಾರ, ಜನವರಿ 6, 2021

ಪ್ರೇಮ ಪಲ್ಲಟ

ಐನ್ಸ್ಟೀನ್ ನಮ್ಮ ಪ್ರಪಂಚ ಕಂಡ ಅತಿ ದೊಡ್ಡ ವಿಜ್ಞಾನಿ. ಆತ ಶಕ್ತಿಯ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಿ ಕಟ್ಟ ಕಡೆಗೆ 'ಶಕ್ತಿಯನ್ನು ಸೃಷ್ಟಿಸುವುದಕ್ಕಾಗಲಿ, ನಾಶಪಡಿಸುವುದಕ್ಕಾಗಲಿ ಸಾಧ್ಯವಿಲ್ಲ' (ಎನರ್ಜಿ ಕ್ಯಾನ್ ನೈದರ್ ಬಿ ಕ್ರಿಯೇಟೆಡ್, ನಾರ್ ಡೆಸ್ಟ್ರಾಯೆಡ್ - Energy can neither be created nor destroyed) ಎಂದು ಉಧ್ಘರಿಸಿದ. ಅದು ವೈಜ್ಞಾನಿಕ ರಂಗದಲ್ಲಿ ಮಹಾ ಸತ್ಯವಾಗಿ ಗೋಚರಿಸಿತು, ಅಷ್ಟೇ ಅಲ್ಲ ಅದನ್ನು ಸುಳ್ಳೆಂದು ಸಾಬೀತುಮಾಡಲು ಯತ್ನಿಸಿದ  ಇನ್ನಿತರರ ಪ್ರಯೋಗಗಳು ಫಲ ಕೊಡಲಿಲ್ಲ. ಹೇಗೆ ಶಕ್ತಿಯನ್ನು ಉತ್ಪತ್ತಿ ಮಾಡಲಾಗಲಿ, ನಾಶ ಮಾಡುವುದಕ್ಕಾಗಲಿ ಸಾಧ್ಯವಿಲ್ಲವೋ ಥೇಟ್ ಹಾಗೆಯೇ ನಿಮ್ಮಲ್ಲಿ ಅಂತರ್ಗತವಾಗಿರುವ ಪ್ರೀತಿಯನ್ನು ನಾಶ ಮಾಡುವುದಕ್ಕಾಗಲಿ ಅಥವಾ ಮತ್ತಷ್ಟು ಹೆಚ್ಚು ಮಾಡುವುದಕ್ಕಾಗಲಿ ಸಾಧ್ಯವಿಲ್ಲ. ನಿಮ್ಮಲ್ಲಿ ಈಗಾಗಲೇ ಇರುವಷ್ಟೇ ಪ್ರೀತಿಯನ್ನು ನೀವು ನಿಮ್ಮ ಜೀವನದ ವಿವಿಧ ಕಾಲ ಘಟ್ಟಗಳಲ್ಲಿ ಬೇರೆ ಬೇರೆಯವರಿಗೆ ಹಂಚುತ್ತಾ ಸಾಗುತ್ತೀರಿ ಅಷ್ಟೇ. ಅರ್ಥಾತ್ ನಿಮ್ಮಲ್ಲಿರುವ ಪ್ರೇಮ ಪಲ್ಲಟಗೊಳ್ಳುತ್ತಾ ಸಾಗುತ್ತದೆಯೇ ಹೊರತು ಹೆಚ್ಚು-ಕಡಿಮೆಗಳಾಗುತ್ತಾ ಸಾಗಲಾರದು ಎನ್ನುವುದೇ ನನ್ನ ಬಲವಾದ ನಂಬುಗೆ.




ಮಗುವೊಂದು ಜನಿಸಿದಾಗ ತನ್ನ ತಾಯಿಯ ಪ್ರೇಮದೊಳಗೆ ಸಿಲುಕಿಕೊಳ್ಳುತ್ತದೆ, ಅದು ಎಷ್ಟರ ಮಟ್ಟಿಗೆ ಎಂದರೆ ಜನಿಸಿದಂದಿನಿಂದ ಕೆಲವು ತಿಂಗಳುಗಳ ಕಾಲ ಆಕೆಯನ್ನು ಬಿಟ್ಟು ಕ್ಷಣಕಾಲವೂ ಇರಲಾರದಷ್ಟು, ಅಂದರೆ ತನ್ನ ಹೃದಯದಲ್ಲಿದ್ದ ಅಷ್ಟೂ ಪ್ರೀತಿಯನ್ನು ಅದು ತಾಯಿಯೊಡನೆ ಹಂಚಿಕೊಳ್ಳುತ್ತದೆ. ಕೆಲವು ತಿಂಗಳುಗಳುರುಳಿದ ತರುವಾಯೂ ತಂದೆಯನ್ನು, ತಾನು ದಿನ ನಿತ್ಯ ಕಾಣುವವರನ್ನು ಹಚ್ಚಿಕೊಳ್ಳುವ ಮಗು ತನ್ನಲ್ಲಿದ್ದ ಪ್ರೀತಿಯಷ್ಟರಲ್ಲೇ ಒಂದು ಪಾಲನ್ನು ಅವರಿಗೂ ಕೊಡುತ್ತಾ ಸಾಗುತ್ತದೆ, ಆಗ ತಾಯಿಯ ಮೇಲಿನ ಸೆಳೆತ ಕಡಿಮೆಯಾಗಿ ಇನ್ನಿತರೆಡೆಗೂ ಸೇರಿಕೊಳ್ಳುವುದನ್ನು ಕಲಿಯುತ್ತದೆ. ಅದೇ ಮಗು ಬೆಳೆದು ಶಾಲೆ ಸೇರಿಕೊಂಡಾಗ ಈಗಾಗಲೇ ತಾನು ಹಂಚಿದ್ದ ಪ್ರೀತಿಯಲ್ಲಿ ಒಂದೊಂದು ಪಾಲು ತೆಗೆದು ತನ್ನ ಗೆಳೆಯರ ಬಳಗಕ್ಕೂ ಹಂಚುತ್ತಾ ಸಾಗುತ್ತದೆ. ಮುಂದೆ ಪ್ರೀತಿ-ಪ್ರೇಮ, ಮದುವೆ, ಮಕ್ಕಳು ಎಲ್ಲರೊಂದಿಗೂ ಹಂಚಿಕೊಳ್ಳುವುದು ಅಷ್ಟೇ ಪ್ರೀತಿಯನ್ನೇ. ಅಂದರೆ ಒಂದು ಕಡೆ ಇರುವ ಪ್ರೀತಿಯನ್ನು ಕಿತ್ತು ಮತ್ತಿನ್ನೊಂದು ಕಡೆ ಬಂಡವಾಳವನ್ನಾಗಿ ಮಾಡಿಕೊಳ್ಳುತ್ತಾ ಸಾಗುವುದು ನಮ್ಮ ಜೀವನದ ಒಂದು ರಿವಾಜು. 

ಮಕ್ಕಳಾದ ಮೇಲೆ ತಮ್ಮ ಮೇಲೆ ಪ್ರೀತಿ ಕಡಿಮೆ ಯಾಯಿತು ಎನ್ನುವ ಗಂಡ-ಹೆಂಡತಿಯರು, ಮದುವೆಯಾದ ಮೇಲೆ ಮಗನಿಗೆ ನಮ್ಮ ಮೇಲೆ ಪ್ರೀತಿ ಕಡಿಮೆಯಾಯಿತು ಎನ್ನುವ ತಂದೆ-ತಾಯಿಗಳನ್ನು ನಾವು ನೋಡುವಾಗ ನಾವು ಪರೋಕ್ಷವಾಗಿ ನೋಡುವುದು ಈ ಪ್ರೇಮ ಪಲ್ಲಟವನ್ನೇ. 

ಪ್ರೇಮ ಮಧುರ ನಿಜ, ಅಮರವೂ ನಿಜ. ಆದರೆ ಒಬ್ಬ ವ್ಯಕ್ತಿಯೊಂದಿಗೆ ಅಲ್ಲ. ಮದುವೆಯಾದ ಹೊಸದರಲ್ಲಿ ಅತ್ಯಂತ ಆಪ್ತತೆಯಿಂದ ಇರುವ ಗಂಡ ಹೆಂಡತಿಯರು ದಿನ ಕಳೆದಂತೆ ಸಾಮಾನ್ಯವಾಗಿರುವುದಿಲ್ಲವೇ?. ಪ್ರೀತಿಯೇನೋ ಅಮರ ಅದು ಒಬ್ಬ ವ್ಯಕ್ತಿಯ ಜೊತೆಗೆ ಮಾತ್ರವಲ್ಲ, ಬದಲಾಗಿ ವಸ್ತುತಃ ಪ್ರೀತಿ ಅಮರ ಎನ್ನುವ ಸತ್ಯ ನಮ್ಮಲ್ಲಿ ಅನೇಕರಿಗೆ ರುಚಿಸದಾಗದೇನೋ!.

-o-


ಭಾನುವಾರ, ಜನವರಿ 3, 2021

ವಿವೇಕ ವಾಣಿ

  • ಆಗಿ ಹೋದುದರ ಕುರಿತು ಚಿಂತಿಸಿ ಫಲವೂ, ಪ್ರಯೋಜನವೂ ಏನೂ ಇಲ್ಲ.
  • ನಮ್ಮ ಈವತ್ತಿನ ಪರಿಸ್ಥಿತಿಗೆ ನಾವು ಮಾತ್ರ ಕಾರಣರೇ ಹೊರತು ಮತ್ತಿನ್ನಾರು ಅಲ್ಲ.
  • ನಾವು ಸೇರಬೇಕಾದ ಗಮ್ಯ ನಮ್ಮ ತಾಕತ್ತಿನ ಮೇಲೆ ನಿರ್ಧರಿಸಿಕೊಳ್ಳಬೇಕೇ ಹೊರತು ಬೇರೆಯವರನ್ನು ನೋಡಿಕೊಂಡಲ್ಲ.
  • ನಿನ್ನನ್ನು ನೀನು ಹೋಲಿಸಿ ನೋಡಿಕೊಳ್ಳುವುದು ನೀನು ಭಗವಂತನಿಗೆ ಮಾಡಬಹುದಾದ ಅತೀ ದೊಡ್ಡ ಅವಮಾನ.
  • ಗೋಳಾಡುವುದಕ್ಕೆ ಕಾಲವಿದಲ್ಲ. ಆಗಬೇಕಾದ ಕಾರ್ಯವನ್ನು ಮಾಡಿ ಮುಗಿಸು, ಉನ್ನತಿಯೆಡೆಗೆ ನೋಡು.
  • ದೊಡ್ಡ ದೊಡ್ಡ ಕನಸುಗಳನ್ನಿಟ್ಟುಕೊಳ್ಳುವುದು ಉತ್ತಮ, ಆದರೆ ಅವುಗಳೆಡೆಗೆ ಕಾರ್ಯ ಸಾಧಿಸದಿದ್ದರೆ ಅದೇ ಮಾರಕ.
  • ಗುರಿ ಹಾಕಿಕೊಂಡು ಅದನ್ನು ಸಾಧಿಸದೇ ಒಮ್ಮೆ ಬಿಟ್ಟರೆ ಗುರಿ ಬಿಟ್ಟು ಬಿಡುವುದೇ ಚಟವಾಗಿ ಪರಿಣಮಿಸಿಬಿಡುತ್ತದೆ. 
  • ಸಕಲ ಜವಾಬ್ದಾರಿಯೆಲ್ಲ ನಿನ್ನ ಮೇಲೆಯೇ ಬಿದ್ದಿದೆಯೇನೋ ಎನ್ನುವಂತೆ ದುಡಿ. ಗೆಲುವು ನಿಶ್ಚಿತವಾಗಿ ನಿನ್ನದೇ.
  • ಜೀವನ ಭಗವಂತನ ಪ್ರಶ್ನೆ ಪತ್ರಿಕೆ, ಇಲ್ಲಿ ಒಬ್ಬೊಬ್ಬರಿಗೂ ಬೇರೆ ಬೇರೆ ಪ್ರಶ್ನೆಗಳಿರುವ ಪತ್ರಿಕೆ. ಪಕ್ಕದವನ ಉತ್ತರ ಕಾಪಿ ಹೊಡೆದರೆ ಗುರಿ ಮುಟ್ಟುವುದು ಅಸಾಧ್ಯ.
  • ಕಾರ್ಯಶ್ರದ್ಧೆ ಇದ್ದರೆ ನೀನು ಗುರಿಯನ್ನಲ್ಲ, ಗುರಿಯೇ ನಿನ್ನನ್ನು ಅನ್ವೇಷಿಸುತ್ತದೆ.
  • ಒಳ್ಳೆಯ ಆಲೋಚನೆ ಇರುವೆಡೆ ಸಕಾರ್ಯ ತನ್ನಿಂತಾನೇ ಜರುಗುತ್ತದೆ.
  • ಪ್ರಯತ್ನದಿಂದ ಏನಾದರೂ ಸಾಧನೆ ಸಾಧ್ಯ.

-o-

ಶುಕ್ರವಾರ, ಜನವರಿ 1, 2021

ಹೊಸವರ್ಷದ ಹೊಸ ಅನುಸಂಧಾನ

2020 ಜಗತ್ತನ್ನು ಹಣ್ಣುಗಾಯಿ ನೀರುಗಾಯಿ ಮಾಡಿಬಿಟ್ಟಿದೆ. ಸಕಲರಿಗೂ ಸರ್ವತ್ರ ಜೀವನ ಪಾಠವೊಂದನ್ನು ವರ್ಷಾರಂಭದಲ್ಲೇ ವಕ್ಕರಿಸಿದ ವ್ಯಾಧಿ ಕಲಿಸಿದೆ. ಅವೆಲ್ಲದರ ನಡುವೆ ಹೊಸ ಆಸೆಗಳನ್ನು, ಜೀವನ ವಿಧಾನವನ್ನು ಹೊತ್ತುಕೊಂಡು 2021 ಮನೆಯ ಬಾಗಿಲು ಬಡಿದಿದೆ. ನೀವು ಒಪ್ಪಿ ಬಿಡಿ ಕಾಲ ಉರುಳುತ್ತಿದೆ, ಅದರೊಟ್ಟಿಗೆ ನಾವು ಉರುಳುತ್ತಿದ್ದೇವೆ. 

ಹೊಸ ವರುಷದ ಹರ್ಷದಲಿ ಹೊಸ ಯೋಜನೆಗಳು ಸಾಕಾರಗೊಳ್ಳಲು ಮನದಂಗಳದಲ್ಲಿ ಬಂದು ಲಾಟು ಬಿದ್ದಿವೆ. ಹಳೆ ವರ್ಷದ ಹಲವು ಸೂತಕಗಳ ತೊಳೆದು ಹೊಸ ವರ್ಷದ ಮನೆ ಕೊಡವಿ ಆದರಿಸಿ ಹೊಸ ಧಿರಿಸ ತೊಟ್ಟು ಹರಸಿ ಅಪ್ಪಿಕೊಳ್ಳಬನ್ನಿ ಹೊಸ ವರ್ಷವನು.

ಹೊಸವರ್ಷದ ಹೊಸ ಅನುಸಂಧಾನಕೆ ಶುಭ ಹಾರೈಕೆಗಳು.


-o-

ಸೋಮವಾರ, ಡಿಸೆಂಬರ್ 21, 2020

ಪಶುಗಳೇಕೆ ನೆಮ್ಮದಿಹೀನವಾಗಿಲ್ಲ

 ಪಶುಗಳು ದಿನ ಬೆಳಗಾದರೆ 

ಮಾನವನ ಮುಖದರ್ಶನ 

ಮಾಡುತ್ತವೆ, ಆದರೆ 

ಅವೆಂದಿಗೂ ನಮ್ಮಂತೆ 

ಮಾತನಾಡಲು ಹರಸಾಹಸ

ಮಾಡಿಲ್ಲ, ಮಾತನಾಡುವ 

ಶಕ್ತಿ ಕೊಡೆಂದು ಯಾವ 

ದೇವರಿಗೂ ಅಡ್ಡಬಿದ್ದಿಲ್ಲ

ಹರಕೆಯನಂತೂ ಕಟ್ಟೇ ಇಲ್ಲ.


ಅವು ತಮ್ಮೊಳಗೆ ಒಂದನು 

ಮೀರಿಸಿ ಮತ್ತೊಂದು ಎಂಬ 

ಭಾವನೆಯನ್ನು ತಳೆದಿಲ್ಲ, 

ತನಗಿಂತ ತನ್ನ ಜೊತೆಗಾರ 

ಹೆಚ್ಚು ದುಡಿದರೆ ಅದಕ್ಕೆ 

ಹೊಟ್ಟೆ ಕಿಚ್ಚು ಪಟ್ಟುಕೊಂಡಿಲ್ಲ

ಕಾಲೆಳೆಯುವ ಪ್ರಯತ್ನವನಂತೂ 

ಮಾಡಿಲ್ಲ, ಮಾಡುವುದೂ ಇಲ್ಲ 


ಯಾವೊಂದೂ ಇನ್ನೊಂದನು

ಪೂಜ್ಯ ಭಾವನೆಯಿಂದಾಗಲಿ 

ಕೀಳು ಭಾವನೆಯಿಂದಾಗಲಿ 

ಕಂಡಿಲ್ಲ, ತಮಗಿಂತ 

ಹಿರಿಯವನೆಂದು ಇನ್ನಾವಕೂ 

ಗೌರವವನಂತು ಕೊಟ್ಟಿಲ್ಲ

ಹೊಗಳಿ-ತೆಗಳುವುದಂತೂ ಇಲ್ಲ 


ತಮ್ಮ ಸ್ಥಾನದಲ್ಲಿ ಅಸಾಧ್ಯವಾದ 

ಏನನೋ ಒಂದನು ಸಾಧಿಸಿ 

ಮತ್ತೊಂದು ಸ್ಥಾನಕ್ಕೆ ಜಿಗಿಯುವ 

ಸನ್ನಾಹ ಅವಕಿಲ್ಲ, ತಮ್ಮ 

ಜೀವಮಾನ ಪರ್ಯಂತ ತಾವು 

ಸೇರಬೇಕಿರುವ ಗಮ್ಯ ಸ್ಥಾನವನೇ 

ಅವು ಗುರುತಿಸಿಕೊಂಡಿಲ್ಲ.


ಯಾವೊಂದೂ ಇಲ್ಲ ಎನ್ನುವ 

ಕೊರತೆ ಅವಕಿಲ್ಲ,

ಎಲ್ಲವೂ ಇದೆಯೆಂಬ ತೃಪ್ತ 

ಭಾವವೂ ಅವಕಿಲ್ಲ,

ಭಾವ, ನಿರ್ಭಾವಗಳ 

ಗೊಡವೆಗೇ ಅವು ಹೋಗಿಲ್ಲ 

ಅದೇ ಕಾರಣಕೆ ಅವು 

ನೆಮ್ಮದಿಹೀನವಾಗಿಲ್ಲ.


-o-

ಭಾನುವಾರ, ನವೆಂಬರ್ 15, 2020

ಸಕ್ಕತ್ತಾಗಿ ಬರೀತಿದ್ದ ಬಡ್ಡಿಮಗ

ಭೂಗತ ಲೋಕದ ಬಗ್ಗೆ ನನಗೆ ಅಷ್ಟಾಗಿ ಗೊತ್ತಿರಲಿಲ್ಲ. ನಾವು ಬೆಂಗಳೂರಿಗೆ ಬಂದ ಎರಡು-ಮೂರು ತಿಂಗಳಿಗೆ ನಾಗರಭಾವಿಯ ರಸ್ತೆಯಲ್ಲಿರುವ ಮೂಡಲಪಾಳ್ಯದಲ್ಲಿ ವಾಸವಿದ್ದೆವು. ನಮ್ಮ ಮನೆಯ ಸಮೀಪವೇ ಇದ್ದ ಸಲೂನ್ ಒಂದರಲ್ಲಿ ಮಾತಾನಾಡುತ್ತಿದ್ದ ಕೂತಿದ್ದ ಪುಡಿ ರೌಡಿಯೊಬ್ಬನ್ನನ್ನು ಯಾವುದೋ ಒಂದು ರೌಡಿ ಪಡೆ ಲಾಂಗ್ ನಿಂದ ಕೊಚ್ಚಿ ಹತ್ಯೆ ಮಾಡಿತ್ತು. ಅದಾಗಿ ಒಂದೆರಡು ನಿಮಿಷಗಳಲ್ಲೇ ಅಲ್ಲಿಗೆ ಹೋಗಿ ಆ ಘೋರವನ್ನು ನಾನು ಕಂಡಿದ್ದೆ. ಪೊಲೀಸರು ಬಂದು ಅಲ್ಲಿನ ಸ್ಥಳ ಮಹಜರು ಮಾಡುವವರೆಗೂ ನಾನು ಅಲ್ಲೇ ನಿಂತು ಎಲ್ಲವನ್ನು ಕುತೂಹಲದ ಕಣ್ಣಿಂದ ಗಮನಿಸಿದ್ದೆ. ಅದಾದ ಮೇಲೆ ಸತ್ತವನ ಮನೆಯವರ ಗೋಳಾಟವನ್ನೂ ಕಂಡಿದ್ದೆ. ಭೂಗತ ಲೋಕ ಎನ್ನುವುದು ಮನುಷತ್ವದ ಎಳೆಯೇ ಸುಳಿಯದ ಅತ್ಯಂತ ಘೋರ ಲೋಕ, ಅಲ್ಲಿಗೆ ಕಾಲಿಟ್ಟವರಿಗೆ ಮರಣವೆನ್ನುವುದು ಎದೆಗೆ ಎದೆ ತಾಗಿಸಿಕೊಂಡೇ ನಿಂತಿರುತ್ತದೆ ಎನ್ನುವುದನ್ನು ಮೊಟ್ಟ ಮೊದಲ ಬಾರಿಗೆ ಅರಿತುಕೊಂಡಿದ್ದೆ.

ಆ ಘಟನೆ ನಡೆದ ನಾಲ್ಕೈದು ವರ್ಷಗಳ ತರುವಾಯೂ ಅದೇ ರಸ್ತೆಯಲ್ಲಿ ಹಾಡ ಹಗಲೇ ಕಾರಿನಿಂದಿಳಿದ ನಾಲ್ಕೈದು ಆಘಂತುಕರು ರಸ್ತೆ ಬದಿಯಲ್ಲಿ ನಿಂತಿದ್ದ ರಿಯಲ್ ಎಸ್ಟೇಟ್ ದಲ್ಲಾಳಿಯೊಬ್ಬನನ್ನು ಗುಂಡಿಕ್ಕಿ ಕೊಂದರು. ಕೊಂದವರು ನನಗಿಂತ ಬಹಳ ಮುಂದೆಯಿದ್ದರೂ ಗುಂಡಿನ ಶಬ್ದ ಮಾತ್ರ ನನಗೆ ಕೇಳಿಸಿತ್ತು. ಗುಂಡು ಹಾರಿಸಿ ಮಿಂಚಿನಂತೆ ಮಾಯವಾಗಿದ್ದರು, ಗುಂಡು ಬಿದ್ದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದ. ಆ ಘಟನೆಯೂ ಕೂಡ ಬೆಂಗಳೂರಿನ ವೃತ್ತ ಪತ್ರಿಕೆಗಳಿಗೆ ಒಂದೆರಡು ದಿನ ಭಾರಿ ಸುದ್ದಿಯೂಟ ನೀಡಿತು. ಆಮೇಲೆ ಒಂದೆರಡು ಆತ್ಮಹತ್ಯೆ ಕೇಸುಗಳನ್ನೂ, ಅಲ್ಲಿಗೆ ಬಂದು ಪೊಲೀಸರು ಮಹಜರು ಮಾಡುವ ಪ್ರಕ್ರಿಯೆಗಳನ್ನೆಲ್ಲಾ ಹತ್ತಿರದಿಂದ ಗಮನಿಸಿದ್ದೆ. ನನಗೂ ಈ ಘಟನೆಗಳಿಗೂ ಯಾವುದೇ ಸಂಬಂಧವಿಲ್ಲದಿದ್ದರೂ ಇವು ನನ್ನ ಮೇಲೆ ತಮ್ಮದೇ ಆದ ಪರಿಣಾಮ ಬೀರುತ್ತಾ ಹೋದವು. ಇಂತಹ ಅನೇಕ ಘಟನೆಗಳು ನನ್ನನ್ನು ಮಾನಸಿಕವಾಗಿ ಗಟ್ಟಿಗೊಳಿಸುತ್ತಾ ಹೋದವು. ಕೆಲವರು ಇಂತಹುದೇ ಘಟನೆಗಳು ಅವರ ಮುಂದೆ ನಡೆದಾಗ ಆರ್ದ್ರರಾಗುವುದೂ ಉಂಟಂತೆ, ಅದು ಅವರವರ ಹಿನ್ನೆಲೆಗೆ, ಮನಸ್ಥಿತಿಗೆ ಬಿಟ್ಟ ವಿಚಾರ. 

ಅನಂತರ ಪ್ರತೀ ಭಾನುವಾರ 'ಪ್ರಜಾವಾಣಿ' ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಅವರ 'ಪೊಲೀಸ್ ಕಂಡ ಕಥೆಗಳು' ಅಂಕಣವನ್ನು ಓದುತ್ತಿದ್ದ ನನಗೆ ನಿಧಾನವಾಗಿ ಭೂಗತ ಲೋಕದ ಒಂದೊಂದೇ ಅವ್ಯಾಹತಗಳು ಗೋಚರವಾಗುತ್ತಾ ಹೋದವು. ಭೂಗತ ಲೋಕದ ಭಯಂಕರ ರಕ್ತಸಿಕ್ತ ಅಧ್ಯಾಯವನ್ನು ತಿಳಿದುಕೊಳ್ಳುವ ಉದ್ದೇಶದಿಂದ ಪುಸ್ತಕಗಳನ್ನು ತಡಕಿದ ನನಗೆ ಕನ್ನಡದಲ್ಲಿ ಸಿಕ್ಕಿದ ಪುಸ್ತಕವೇ ರವಿ ಬೆಳಗೆರೆಯವರದು. ಆ ವಿಚಾರದಲ್ಲಿ ನನಗೊಬ್ಬನಿಗಲ್ಲ, ನಿಮಗೂ ಸಿಗುವ ಮೊದಲ ಪುಸ್ತಕ ಬೆಳಗೆರೆಯವರದ್ದೇ. ಅವರನ್ನು ಹೊರತು ಪಡಿಸಿದರೆ ಕೆಲವು ಪೊಲೀಸ್ ಇಲಾಖೆಗೆ, ಸರ್ಕಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಬರೆದಿರುವ ಕೆಲವು ಲೇಖನಗಳು, ಪುಸ್ತಕಗಳು ದೊರೆತರೂ ಅವು ಭೂಗತ ಲೋಕವನ್ನು ಒಳಗೊಳಗೇ ಪೊರೆದ ಮುಗ್ದರ ಮುಖವಾಡ ಹೊದ್ದ ನಮ್ಮದೇ ಕೆಲವು ನಾಯಕರ ಬಗ್ಗೆಯೋ, ಭೂಗತ ಲೋಕವನ್ನು ಹೆಡೆಮುರಿ ಕಟ್ಟಲು ನಿರಂತರ ಶ್ರಮಿಸಿದ ಅನೇಕರ ಬಗ್ಗೆಯೂ ಕೇಂದ್ರೀಕೃತವಾಗಿರುತ್ತದೆ. ಆ ಲೋಕದಲ್ಲಿ ಭಾರಿ ಸದ್ದು ಮಾಡಿದವರು ಅಲ್ಲಿಗೇಕೆ ಬಂದರು? ಅವರು ಆ ಮಟ್ಟಕ್ಕೆ ಹೇಗೆ ಏರಿದರು? ಅವರ ಬೆನ್ನಿಗೆ ನಿಂತವರಾರು ಎನ್ನುವ ಕೆಲವು ಪ್ರಮುಖ ವಿಚಾರಗಳನ್ನು ಕೆಲವರು ಬರೆಯುವುದಿಲ್ಲ, ಅಕಸ್ಮಾತ್ ಬರೆದರೆ ಅದು ವಿವಾದಕ್ಕೆ ಕಾರಣವಾಗುತ್ತದೆ ಎನ್ನುವ ಭಯ ಅನೇಕರಲ್ಲಿರುವುದು ಸುಳ್ಳಲ್ಲ. ಬೆಳಗೆರೆಯವರು ಅದಕ್ಕಪವಾದವಾದಂತಿದ್ದವರು, ಆದ ಕಾರಣಕ್ಕೆ ಅವರು ಅನೇಕ ಬಾರಿ ವಿವಾದಗಳಿಗೀಡಾಗಿದ್ದು.

ಯಾವುದೇ ಸಮಾಜದಲ್ಲಿ ಎಲ್ಲ ವರ್ಗದ, ಎಲ್ಲ ಮನೋಧೋರಣೆಯ ಜನರಿರುವುದು ಸಹಜ. ಕ್ರೂರ ಮನೋಧೋರಣೆಯಿರುವ ವ್ಯಕ್ತಿಗಳಿಂದ ಕ್ರೂರತನ ನಡೆಯುವುದೂ ಅತಿ ಸಹಜವೇ, ಆದರೆ ಅದಕ್ಕೆಂತಲೇ ಕಾನೂನು ಕಟ್ಟಳೆಗಳಿರುವಾಗ ನಮ್ಮಂತಹ ಸಾಮಾನ್ಯರು ಹೆದರಿಕೊಳ್ಳುವುದು ಬೇಡವೇ ಬೇಡ ಅಂತ ಸಾರ್ವಜನಿಕರಿಗೆ ಟಿವಿ ಮಾಧ್ಯಮಗಳಲ್ಲಿ ಕಾಣಿಸಿಕೊಂಡು ಧೈರ್ಯ ತುಂಬುತ್ತಿದ್ದವರು ರವಿ ಬೆಳಗೆರೆಯವರು. ಅವರ ಟಿವಿ ಕಾರ್ಯಕ್ರಮ 'ಕ್ರೈಂ ಡೈರಿ' ಹಾಗು ಅವರ ಪತ್ರಿಕೆ 'ಹಾಯ್ ಬೆಂಗಳೂರ್' ಅವರಿಗೆ ತಂದುಕೊಟ್ಟ ಜನಮನ್ನಣೆಯನ್ನು ನಾನು ವಿಶೇಷವಾಗಿ ಹೇಳುವ ಅಗತ್ಯವಿಲ್ಲವಷ್ಟೇ.

ಇತ್ತೀಚಿಗೆ ಯೂಟ್ಯೂಬ್ ಮುಖಾಂತರ ನಡೆಸಿಕೊಡುತ್ತಿದ್ದ 'ಬೆಳ್ ಬೆಳಗ್ಗೆ ಬೆಳಗೆರೆ' ಎನ್ನುವ  ಕಾರ್ಯಕ್ರಮ, ವಿಜಯವಾಣಿ ಪತ್ರಿಕೆಯಲ್ಲಿ ಪ್ರತೀ ಭಾನುವಾರ ಪ್ರಕಟವಾಗುತ್ತಿದ್ದ ಲೇಖನ ಸರಣಿ 'ನಮ್ಮ ನಮ್ಮಲ್ಲಿ' ಯನ್ನು ನಾನೆಂದೂ ಮಿಸ್ ಮಾಡಿಕೊಂಡವನಲ್ಲ. ಅವರ ಪುಸ್ತಕಗಳನ್ನೋದುವಾಗ, ಟಿವಿ ಶೋಗಳನ್ನು ನೋಡುವಾಗ, ಲೇಖನಗಳನ್ನು ಓದುವಾಗ, ಅವರ ಟೀಕೆ-ಟಿಪ್ಪಣಿ, ಚರ್ಚೆಗಳನ್ನು ನೋಡುವಾಗ ನಾವೆಲ್ಲಾ ಯೋಚನೆ ಮಾಡದ ಯಾವುದೋ ಒಂದು ದೃಷ್ಟಿ ಕೋನದಲ್ಲಿ ಅವರು ಯೋಚನೆ ಮಾಡುತ್ತಾರೆ ಎನ್ನುವ ಭಾವನೆ ನನ್ನಲ್ಲಿ ಬಲವಾಗಿ ಬೇರೂರಿದೆ, ಆದ್ದರಿಂದಲೇ ಅವರ ಕಡೆಗೆ ಸಾಹಿತ್ಯಿಕ ಸೆಳೆತ ನನ್ನಲ್ಲಿ ಉಂಟಾಗಿದೆ.

ಬೆಂಗಳೂರಿನ ಪುಡಿ ರೌಡಿಗಳಿಂದ ಹಿಡಿದು ಘಟಾನುಘಟಿ ಭೂಗತ ಲೋಕದ ದೊರೆಗಳ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ್ದ ಬೆಳಗೆರೆ ಅವರ ಕುರಿತು ತಮ್ಮ ಪತ್ರಿಕೆಯಲ್ಲಿ ಲೇಖನಗಳನ್ನು ಬರೆದು ಸಾಕಷ್ಟು ವಿವಾದಕ್ಕೀಡಾಗಿದ್ದರು ಅಷ್ಟೇ ಅಲ್ಲದೆ ಕೋರ್ಟು-ಕಟಕಟೆಯ ಮೆಟ್ಟಿಲು ಹತ್ತಿಳಿದಿದ್ದರು, ತಮ್ಮ ಅನುಯಾಯಿಗಳಷ್ಟೇ ಪ್ರಮಾಣದ ವಿರೋಧಿಗಳನ್ನೂ ಹೊಂದಿರುವುದಾಗಿ ಅನೇಕ ಕಡೆ ತಾವೇ ಹೇಳಿಕೊಂಡಿದ್ದಾರೆ.  ರಾಜಕೀಯ ಪಕ್ಷಗಳ ಕುರಿತು ಮಾತನಾಡಿ ಅನೇಕರ ವಿರೋಧ ಕಟ್ಟಿಕೊಂಡಿದ್ದರು. ಮಾಜಿ ಪ್ರಧಾನಿಯೊಬ್ಬರ ಕುರಿತ ಹೇಳಿಕೆಯಿಂದ ಮಾನ ನಷ್ಟ ಮೊಕದ್ದಮೆಯನ್ನೂ ಎದುರಿಸಿದ್ದರು ಬೆಳಗೆರೆ. ತೀರಾ ಇತ್ತೀಚಿಗೆ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಮನೆ ಮೇಲಿನ ಆದಾಯ ತೆರಿಗೆ ಇಲಾಖೆಯ ದಾಳಿಯನ್ನು ಸಮರ್ಥಿಸಿಕೊಂಡು ಅನೇಕರಿಂದ ಪ್ರಶಂಸೆಗೂ-ಟೀಕೆಗೂ ಒಳಗಾಗಿದ್ದರು. ಟೀಕೆ, ಕಂಪ್ಲೇಂಟ್-ಕೋರ್ಟು-ಕೇಸು ಎಲ್ಲವೂ ಎದುರಾದರೂ ಅವುಗಳನ್ನು ಪಕ್ಕಕ್ಕೆ ತಳ್ಳುತ್ತಾ ತಮ್ಮ ಕಾರ್ಯವನ್ನು ಎಂದಿನಂತೆ ನಿಭಾಯಿಸುತ್ತಿದ್ದವರು ಅವರು. 

ಸಾಮಾನ್ಯವಾಗಿ ಭೂಗತ ಲೋಕದ ಸಂಪರ್ಕಕ್ಕೆ ಬಂದ ಯಾರಿಗಾದರೂ ಅನುಭವಕ್ಕೆ ಬರುವ ವಿಚಾರವೆಂದರೆ ಅವರ ಭಾವುಕತೆ ಕಣ್ಮರೆಯಾಗಿಬಿಡುವುದು. ಭೂಗತ ಲೋಕದಲ್ಲಿ ಮಾತ್ರ ಅಲ್ಲ ಪೊಲೀಸ್ ಇಲಾಖೆಗೆ ನೌಕರಿಗೆ ಸೇರಿದ ಅನೇಕರಲ್ಲೂ ಈ ಬದಲಾವಣೆ ಕಂಡುಬರುವುದು ಸಹಜವೇ. ಆದರೆ ಆ ವಿಚಾರದಲ್ಲಿ ಬೆಳಗೆರೆ ಸೋತಿರಲಿಲ್ಲ. ರೌಡಿಗಳ ಬಗ್ಗೆ ಬರೆಯುತ್ತಲೂ, ದೇಶ ಭಕ್ತಿಯ ಮಾತುಗಳನ್ನಾಡುತ್ತಾ, ಬೇಂದ್ರೆಯವರ ಬಗ್ಗೆ ಅಪಾರ ಪ್ರೇಮವನ್ನಿರಿಸಿಕೊಂಡು, ಕನ್ನಡೇತರ ಕವಿಗಳ ಘಜಲ್ಲುಗಳನ್ನು ಕೇಳುತ್ತಾ ಯುವಕರಿಗೆ ಕನ್ನಡದಲ್ಲಿ ಸ್ಪೂರ್ತಿದಾಯಕ ಲೇಖನಗಳನ್ನು ಬರೆಯುವುದರಲ್ಲಿ ಎತ್ತಿದ ಕೈ ಅವರದ್ದು. ಕೊತ್ವಾಲ ರಾಮಚಂದ್ರ, ಜಯರಾಜನ ಬಗ್ಗೆ ನಿರರ್ಗಳವಾಗಿ ಮಾತನಾಡುತ್ತಿದ್ದ ಅವರು ಶಿವರಾಮ ಕಾರಂತರ ಬಗೆಗೂ, ದ.ರಾ.ಬೇಂದ್ರೆಯವರ ಬಗೆಗೂ ಅಷ್ಟೇ ನಿರರ್ಗಳವಾಗಿ ಮಾತನಾಡುವಷ್ಟು ಅರಿತುಕೊಂಡಿದ್ದರು. ಕನ್ನಡ ಚಿತ್ರರಂಗದ ಧ್ರುವತಾರೆ ಡಾ.ರಾಜ್ ಕುಮಾರ್ ನಿಧನರಾದಾಗ ಬೆಳೆಗೆರೆಯವರು ತಮ್ಮ ಕ್ರೈಂ ಡೈರಿಯಲ್ಲಿ ಮೂರ್ನಾಲ್ಕು ಎಪಿಸೋಡುಗಳನ್ನು ಮಾಡಿದ್ದರು, ಅಲ್ಲಿ ಅವರು ಅತ್ಯಂತ ಭಾವುಕರಾಗಿ ಮಾತನಾಡಿದ್ದ ರೀತಿ ಇಂದಿಗೂ ಅನೇಕರ ಸ್ಮೃತಿಪಟಲದಲ್ಲಿದೆ. ಅದರ ಜೊತೆಗೆ ಇತ್ತೀಚಿಗೆ 'ರಾಜ್ ಲೀಲಾ ವಿನೋದ' ಎಂಬ ಪುಸ್ತಕ ಬರೆದು ರಾಜ್ ಕುಮಾರ್ ಅಭಿಮಾನಿಗಳ ಕೆಂಗಣ್ಣಿಗೂ ಗುರಿಯಾಗಿದ್ದರು ಅವರು. ವಿವಾದವೆನ್ನುವುದು ಬೆಳಗೆರೆಯವರ ಜೊತೆ ಜೊತೆಗೆ ಬೆಳೆದುಕೊಂಡು ಬಂದಿದ್ದ ಅವರ ಅತ್ಯಾಪ್ತ ಮಿತ್ರ ಎನ್ನುವುದು ಹಲವರ ಅನಾಲಿಸಿಸ್.


ಉಗ್ರಪೀಡಿತ ಕಾಶ್ಮೀರದ ಕಣಿವೆಯಲ್ಲಿ ಭಾರತೀಯ ಸೇನಾಳುಗಳೊಂದಿಗೆ ರವಿಬೆಳಗೆರೆ ಸಂವಾದ

ರವಿಬೆಳಗೆರೆ ರೌಡಿಗಳ ಬಗ್ಗೆ ಬರೆಯುತ್ತಾರೆ ಅಂದರೆ ಅವರು ಬೆಂಗಳೂರು-ಮುಂಬೈಗಳಂತಹ ರೌಡಿಸಂ ಉತ್ತುಂಗದಲ್ಲಿದ್ದ ಕೆಲವೇ ಕೆಲವು ನಗರಗಳ ಬಗ್ಗೆ ತಿಳಿದುಕೊಂಡಿರಬಹುದು ಎಂದುಕೊಳ್ಳಬೇಡಿ. ಕಾಶ್ಮೀರ ಕೊಳ್ಳದಲ್ಲಿ ಒಳ ನುಸುಳುವ ಪಾಕಿಸ್ತಾನದ ಉಗ್ರರ ಮೂಲದ ಜಾಡು ಹಿಡಿದುಕೊಳ್ಳಲು ಪಾಕಿಸ್ತಾನಕ್ಕೆ ವೇಷ ಮರೆಸಿಕೊಂಡು ಹೋಗಿ ಬಂದ ಧೈರ್ಯಶಾಲಿ ಪತ್ರಕರ್ತ ಅವರು. ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ ನಲ್ಲಿ ಚೀನಾ ಸೈನಿಕರು ಒಳನುಸುಳಲು, ಗಡಿ ಒತ್ತುವರಿ ಮಾಡಿಕೊಳ್ಳಲು ಯಾವ ತಂತ್ರ ಬಳಸಿಕೊಳ್ಳುತ್ತಾರೆನ್ನುವುದು, ಕಾಶ್ಮೀರದ ಹಂದ್ವಾರ, ಬಾರಾಮುಲ್ಲಾ ಸೆಕ್ಟರ್ ಗಳಲ್ಲಿ ಕಾರ್ಗಿಲ್ ಕದನ ನಡೆಯುವಾಗ ಪಾಕಿಸ್ತಾನದ ಸೈನಿಕರು ಯಾವ ಯಾವ ಮಾರ್ಗ ಬಳಸಿಕೊಂಡರು ಎನ್ನುವೆಲ್ಲ ವಿಚಾರಗಳ ಬಗ್ಗೆ ಅಮೂಲಾಗ್ರವಾಗಿ ಅಧ್ಯಯನ ಮಾಡಿ ಪುಸ್ತಕ ಬರೆದವರು ಅವರು. ಕಾರ್ಗಿಲ್ ಯುದ್ಧ ಸಮಯದಲ್ಲಿ ಯುದ್ಧ ಭೂಮಿಯಲ್ಲಿ ನಿಂತೇ ವರದಿ ಬರೆದ ಕನ್ನಡದ ಮೊದಲ ಪತ್ರಕರ್ತ ಅವರು. ಪಾಕಿಸ್ತಾನದ ಗಡಿಯೊಳಗೆ ಅಲ್ಲಿನ ಸರ್ಕಾರ ಹೇಗೆ ವ್ಯವಸ್ಥಿತವಾಗಿ ಭಾರತೀಯ ವಿರೋಧಿ ಮನಸ್ಥಿತಿಯನ್ನು ಬಲಪಡಿಸುತ್ತಿದೆ ಎನ್ನುವುದನ್ನು ಬರೆಯುತ್ತಾ ಜಿಹಾದಿ ಜಗತ್ತಿನ ರಕ್ತಸಿಕ್ತ ಅಧ್ಯಾಯಗಳನ್ನು ಜಗಜ್ಜಾಹೀರು ಮಾಡಿದ್ದು ಕರ್ನಾಟಕದ ಪಾಲಿಗೆ ಮಾತ್ರವಲ್ಲ ಭಾರತದ ಪತ್ರಿಕಾ ರಂಗದಲ್ಲೇ ಹೇಳಿಕೊಳ್ಳಬಹುದಾದ ಸಾಧನೆ.

1962ರ ಚೀನಾ ಅತಿಕ್ರಮಣದ ಕುರಿತಾದ ಬ್ರಿಗೇಡಿಯರ್ ಜಾನ್ ಪಿ ದಳವಿಯವರ 'ದಿ ಹಿಮಾಲಯನ್ ಬ್ಲಂಡರ್' ಪುಸ್ತಕವನ್ನು ಕನ್ನಡಕ್ಕೆ ಅನುವಾದವನ್ನು ಅವರು ಮಾಡಿದ್ದರು. ಬೇರೆ ಅನುವಾದಿತ ಪುಸ್ತಕಗಳಂತೆಯೇ ಇದೂ ಒಂದು ಎಂದು ನೀವಂದುಕೊಂಡರೆ ಅದು ದೊಡ್ಡ ತಪ್ಪು. ಆ ಕೃತಿಯ ಅನುವಾದಕ್ಕೂ ಮುಂಚೆ ಬೆಳಗೆರೆಯವರ ಹೋಂ ವರ್ಕ್ ಪುಸ್ತಕ ಓದುವ ಪರ್ಯಂತ ನಮ್ಮ ಕಣ್ಣಿಗೆ ಬಡಿಯುತ್ತದೆ. ದಳವಿಯವರ ಮೂಲ ಪುಸ್ತಕದಲ್ಲಿಲ್ಲದ ಎಷ್ಟೋ ಮಾಹಿತಿಗಳು ಬೆಳಗೆರೆಯವರ ಹೋಂ ವರ್ಕ್ ಪರಿಣಾಮ ಕನ್ನಡ ಅವತರಣಿಕೆಯ 'ಹಿಮಾಲಯನ್ ಬ್ಲಂಡರ್'ನಲ್ಲಿ ವಿರಾಜಮಾನವಾಗಿವೆ. ಹೀಗೆ ತಾವಾಯ್ದುಕೊಂಡ ಪತ್ರಿಕಾ ರಂಗದಲ್ಲಿ ಹಿಂದೆ ಯಾರು ಮಾಡಲಾರದಂತಹದ್ದನ್ನು ಮಾಡಿ ಮುಂದಿನ ತಲೆಮಾರಿಗೆ ಮೇಲ್ಪಂಕ್ತಿಯೊಂದನ್ನು ಹಾಕಿಕೊಟ್ಟವರು ಅವರು. ಇದೆಲ್ಲಾ ಪತ್ರಿಕಾ ರಂಗಕ್ಕೆ ಅವರು ಕೊಟ್ಟ ಕೊಡುಗೆ ಎನ್ನುವಾಗ ಅದರಿಂದ ಅನೇಕಗಳನ್ನು ಅರಿತುಕೊಂಡ ಶ್ರೀಸಾಮಾನ್ಯನಿಗೂ ಅವರು ಅನೇಕವನ್ನು ಕೊಟ್ಟಿದ್ದಾರೆ ಅಂತಲೇ ಅರ್ಥ. 

ಅವರ ಕುರಿತು ನಾನು ಇಷ್ಟೆಲ್ಲಾ ಬರೆಯುತ್ತಿರುವಾಗಲೇ ಅವರ ಕಡು ವಿರೋಧಿಗಳು 'ಎಷ್ಟೋ ಸಂಸಾರಗಳನ್ನು ಬೀದಿಗೆ ತಂದ ಇವನು', 'ಹಲವರಿಗೆ ಬ್ಲಾಕ್ ಮೇಲ್ ಮಾಡಿ ಹಣ ಸಂಪಾದಿಸಿದ' ಎಂದೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಹಾರಾಡುತ್ತಿದ್ದಾರೆ. ಅವುಗಳಿಗೆ ಪ್ರಬಲವಾದ ಪುರಾವೆಗಳಾವುವು ನನಗಂತೂ ಇದುವರೆಗೆ ಲಭ್ಯವಾಗಿಲ್ಲ. ಪ್ರಬಲ ಪುರಾವೆ ಸಿಕ್ಕ ಅವರ ಅಪರಾಧಗಳಿಗೆ ಅವರಿಗೆ ಕೋರ್ಟಿನಲ್ಲೇ ಶಿಕ್ಷೆಯಾಗಿರುವುದನ್ನು ನಾವು ಯಾರು ಮರೆಯುವ ಹಾಗಿಲ್ಲ. ಅವರ 'ಹಾಯ್ ಬೆಂಗಳೂರು' ಪತ್ರಿಕೆಯ ಮೂಲಕ ಅವರಿಗಿದ್ದ ಆದಾಯ, ಮತ್ತು ಅದಕ್ಕೆ ಸಮರ್ಪಕವಾಗಿ ಅವರು ತೆರಿಗೆ ಸಲ್ಲಿಸುತ್ತಿದ್ದುದನ್ನು ಸುದ್ದಿ ಸಂಸ್ಥೆಯೊಂದು ಇತ್ತೀಚಿಗೆ ಬಯಲು ಮಾಡಿದೆ. ವಾರ್ಷಿಕ ಎಪ್ಪತ್ತು ಲಕ್ಷ ತೆರಿಗೆ ಕಟ್ಟುವುದಾಗಿ ಅವರೇ ಅನೇಕ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.

ಕಟ್ಟ ಕಡೆಗೆ ಅವರೇ ಇಷ್ಟ ಪಟ್ಟುಕೊಂಡಿದ್ದ, ಅವರ ಸಮಸ್ತ ಓದುಗರೂ ಅವರಿಗೆ ಆತ್ಮೀಯತೆಯಿಂದ ನೀಡಿದ್ದ ಬಿರುದು 'ಸಕ್ಕತ್ತಾಗಿ ಬರೀತಾನೆ ಬಡ್ಡಿಮಗ' ಇಂದ ಬಡ್ತಿ ಪಡೆದು 'ಸಕ್ಕತ್ತಾಗಿ ಬರೀತಿದ್ದ ಬಡ್ಡಿಮಗ' ಆಗಿ ಪರಲೋಕಕ್ಕೆ ಪ್ರಯಾಣ ಬೆಳೆಸಿದ, ನಮ್ಮಲ್ಲಿ ಹಲವರಿಗೆ ಪುಸ್ತಕ ಪ್ರೀತಿ ಎಂಬ ಚಟ ಹತ್ತಿಸಿದ ರವಿ ಬೆಳಗೆರೆಯವರಿಗೆ ಗೌರವಪೂರ್ವಕ ಶ್ರದ್ಧಾಂಜಲಿ. 

-o-


ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...