ಭಾನುವಾರ, ಮಾರ್ಚ್ 5, 2017

ಗ್ರೆಗೋರಿಯನ್ ಕ್ಯಾಲೆಂಡರ್ ಹಾಗು ಹಿಂದೂ ಪಂಚಾಗ ಪದ್ಧತಿ

ಹಿಂದೂ ಧರ್ಮ ಕಾಲ ಗಣನೆಯಲ್ಲಿ 'ಹೋರಾ' ಎನ್ನುವ ಪದ ಬಹಳ ಮುಖ್ಯವಾಗಿರುವುದು ಇದೀಗಾಗಲೇ ಗೊತ್ತಿರುವ ವಿಚಾರ.ಹೋರಾ ಎಂಬ ಪದವನ್ನು ಸಂಸ್ಕೃತದ 'ಅಹೋರಾತ್ರಿ' ಎಂಬ ಪದದಿಂದ ಪಡೆಯಲಾಗಿದೆ.  ದಿನದ ಒಂದು ಘಂಟೆಯ ಅವಧಿಯನ್ನು ಹೋರಾ ಎಂದು ಪರಿಗಣಿಸಲಾಗುತ್ತದೆ. ಪ್ರತೀ ಹೋರಾದ ಮೇಲೂ ಏಳು ಗ್ರಹಗಳ ಪೈಕಿ ಒಂದಿಲ್ಲೊಂದು ಗ್ರಹದ ನಿಗ್ರಹವಿರುತ್ತದೆ. ದಿನದಲ್ಲಿ ಇಪ್ಪತ್ತನಾಲ್ಕು ಗಂಟೆಯೂ ಒಂದಿಲ್ಲೊಂದು ಗ್ರಹ ನಿಗ್ರಹದಲ್ಲಿ ತೊಡಗಿರುತ್ತವೆ ಎನ್ನುವುದು ಹಿಂದೂ ಪಂಚಾಗ ಪದ್ಧತಿಯ ಅಭಿಪ್ರಾಯ. ಯಾವ ಹೋರಾದಲ್ಲಿ ಯಾವ ಕೆಲಸ ಮಾಡಿದರೆ ಶ್ರೇಯಸ್ಸು ಎಂಬುದರ ಬಗ್ಗೆಯೂ ಹಿಂದೂ ಪಂಚಾಗ ಪದ್ಧತಿಯಲ್ಲಿ ಹಲವಾರು ಮಾಹಿತಿ ದೊರೆಯುತ್ತವೆ. ಇವೆಲ್ಲವೂ ಹಿಂದೂ ಧರ್ಮದೊಳಗಿನ ವಿಚಾರಗಳು ಎಂದುಕೊಳ್ಳುವಷ್ಟರಲ್ಲಿಯೇ ಇಂಗ್ಲೀಷ್ ನಲ್ಲೂ ಒಂದು ಘಂಟೆಯ ಅವಧಿಗೆ 'ಹವರ್' ಎಂದು ಕರೆಯುವುದಕ್ಕೂ ಹಿಂದೂ ಕಾಲಗಣನೆಯ ಹೋರಾ ಉಚ್ಛಾರದಲ್ಲಷ್ಟೇ ಅಲ್ಲದೆ ಅದನ್ನು ಮೀರಿದ ಯಾವುದೋ ಒಂದು  ಸಂಬಂಧವಿರುವುದು ಖಾತ್ರಿಯಾಗುತ್ತದೆ.

ಇದುವರೆವಿಗೂ ಕಂಡಿರುವ ಪ್ರಾಗಿತಿಹಾಸಗಳಲ್ಲಿ ಹಿಂದೂ ಹಾಗು ಗ್ರೀಕ್ ಕಾಲಗಣನೆಗೆ ಸರಿಸಾಟಿಯಾಗಿ ನಿಲ್ಲುವಂತಹ ಬೇರೆ ಯಾವ ಕಾಲ ಮಾಪಕಗಳು ಚಾಲ್ತಿಯಲ್ಲಿದ್ದ ಕುರುಹೇ ಇಲ್ಲ. ಅದೇ ಕಾಲದಲ್ಲಿಯೇ ಸುಮೇರಿಯನ್ನರು ಹಾಗು ಮೆಸಪೊಟೋಮಿಯನ್ನರು ಕಾಲ ಮಾಪನಕ್ಕೆ ಗ್ರೀಕ್ ಶೈಲಿ ಅಥವಾ ಭಾರತದ ಶೈಲಿಯನ್ನು ಅನುಸರಿಸುತ್ತಿದ್ದುದು ಜ್ಞಾಪದಲ್ಲಿಟ್ಟುಕೊಳ್ಳಬೇಕಾದ ವಿಷಯ. ಭಾರತದೊಂದಿಗೆ ಪಾಶ್ಚಿಮಾತ್ಯ ಹಾಗು ಮಧ್ಯ ಪ್ರಾಚ್ಯ ರಾಷ್ಟ್ರಗಳು ಸಂಬಂಧ ಕುದುರಿಸಿಕೊಂಡಿದ್ದೆ ಕಾಲ ಗಣನೆ, ಖಭೌತ ವಿಜ್ಞಾನ ಹಾಗು ಗಣಿತ ಶಾಸ್ತ್ರಗಳ ಮುಖಾಂತರ. ಈಗಿನ ಯುರೋಪಿಯನ್ ಹಾಗು ಅಮೆರಿಕೆಯ ಸ್ಥಳಗಳಲ್ಲಿ ಮನುಷ್ಯನು ಇನ್ನು ನಾಗರೀಕತೆಯನ್ನೇ ಕಲಿಯದೇ ಇರುತ್ತಿದ್ದಾಗ ಭಾರತದಲ್ಲಿ ಖಭೌತ ಶಾಸ್ತ್ರ ಪ್ರೌಢ ಸ್ಥಿತಿಯಲ್ಲಿತ್ತು ಎನ್ನುವಾಗ ಅದಕ್ಕೆ ಮೂಲಾಧಾರವಾದ ಗಣಿತ ಶಾಸ್ತ್ರ ಯಾವ ಮಟ್ಟದಲ್ಲಿತ್ತು ಎನ್ನುವುದನ್ನು ಪ್ರತ್ಯೇಕವಾಗಿ ಬಿಡಿಸಿ ಹೇಳುವ ಅವಶ್ಯಕತೆಯಿಲ್ಲವೇ ಇಲ್ಲ.

ಇದೇ ಸಂಬಂಧ ಗಣಿತ ಶಾಸ್ತ್ರ ಹಾಗು ವಿಜ್ಞಾನಗಳಲ್ಲಿ ಭಾರತ ಉಪಖಂಡ ತನ್ನ  ಸೀಮಾ ರೇಖೆಯನ್ನು ದಾಟಿ ಬೇರೆ ರಾಷ್ಟ್ರಗಳೊಂದಿಗೆ ವ್ಯವಹರಿಸಲು ನಾಂದಿಯಾಯಿತು ಹಾಗು ಸಂಖ್ಯಾ ಶಾಸ್ತ್ರದಲ್ಲಿನ ಕೊಳು ಕೊಡುಗೆ ವ್ಯವಹಾರವನ್ನು ಶುರು ಮಾಡಲು ಅವಕಾಶವಾಯಿತು. ಇಷ್ಟಾದರೂ ಕೆಲವೊಂದು ಭಾರತದಿಂದ ರಫ್ತಾದ ಅಂಶಗಳು ಇನ್ನು ಗ್ರೆಗೋರಿಯನ್ ಕ್ಯಾಲಂಡರ್ ನಲ್ಲಿ ಉಳಿದುಕೊಂಡಿವೆ ಹಾಗು ಅದು ಗ್ರೀಕ್-ಭಾರತ ಕಾಲಮಾನ ಪದ್ಧತಿಯಲ್ಲಿದ್ದ ಹೋಲಿಕೆಯನ್ನು ತೋರ್ಪಡಿಸುತ್ತದೆ. ಉದಾಹರಣೆಗೆ ಗ್ರೀಕ್ ಭಾಷೆಯಲ್ಲಿ ಸಂಖ್ಯೆ ೭ ಕ್ಕೆ ಸೆಪ್ಟಾ, ೮ಕ್ಕೆ ಅಕ್ಟಾ, ೯ಕ್ಕೆ ಸಂಸ್ಕೃತದ ನವ, ೧೦ಕ್ಕೆ ಸಂಸ್ಕೃತದ ದಶ ಹಾಗು ಗ್ರೀಕ್ ನ ಡೆಕಾ ಹೋಲಿಕೆಯನ್ನು ಅವಗಣನೆಗೆ ತೆಗೆದುಕೊಂಡರೆ, ವರ್ಷದ ಸೆಪ್ಟೆಂಬರ್ ತಿಂಗಳು ಎಂದರೆ ಏಳನೇ ತಿಂಗಳು ಎಂದಾಗುತ್ತದೆ. ಅಕ್ಟೋಬರ್ ಎಂಟನೇ ತಿಂಗಳು, ನವೆಂಬರ್ ಒಂಬತ್ತನೇ ತಿಂಗಳು ಆಗುತ್ತದೆ. ಹೀಗಿದ್ದರೂ ಇದೀಗ ಪ್ರಚಲಿತ ಕಾಲ ಮಾಪನದಲ್ಲಿ ಡಿಸೆಂಬರ್ ಹನ್ನೆರಡನೇ ತಿಂಗಳಿಗೆ ಸರಿದು ಹೋಗಿರುವುದನ್ನು ಗಮನಿಸಬಹುದು. ನವೆಂಬರ್ ಎನ್ನುವ ಹೆಸರು ಸಂಸ್ಕೃತದಲ್ಲೂ ಹಾಗು ಗ್ರೀಕ್ ನಲ್ಲೂ ಒಂಬತ್ತನೆಯ ತಿಂಗಳು ಎಂದೇ ಗುರುತಿಸಿಕೊಳ್ಳುತ್ತದೆ. ಆದರೆ ಆಧುನಿಕ ಜಾಗತಿಕ ಕ್ಯಾಲೆಂಡರ್ ನವೆಂಬರ್ ಅನ್ನು ಹನ್ನೊಂದನೇ ತಿಂಗಳಾಗಿಸಿದೆ. ಆದರೆ ನವೆಂಬರ್ ಅನ್ನುವ ಪದ ಹುಟ್ಟಿದ್ದು ಒಂಬತ್ತನೇ ತಿಂಗಳನ್ನು ತನ್ಮೂಲಕ ತಿಳಿಯಪಡಿಸಲು ಎನ್ನುವ ಅರಿವು ಈಗಿನ ಜನಾಂಗಕ್ಕೆ ಇದ್ದಂತಿಲ್ಲ. ಬೇರೆ ಜನಾಂಗಕ್ಕೆ ಇಲ್ಲದಿದ್ದರೂ ಭಾರತೀಯರಲ್ಲೂ ಹಾಗು ಗ್ರೀಕರಲ್ಲೂ ಅಂತಹ ಭಾವ ಮೇಳೈಸಿ ಇವುಗಳನ್ನು ತಿಳಿದುಕೊಳ್ಳುವ ಮನಸ್ಸು ಮಾಡಬೇಕಿತ್ತು, ಆದರೆ ನಿಜ ಸ್ಥಿತಿಯಲ್ಲಿ ಹಾಗಾಗಿಲ್ಲ ಎನ್ನುವುದು ಖೇದಕರ ಸಂಗತಿ.

ಹಿಂದೂ ಕಾಲ ಗಣನೆಯ ಪದ್ಧತಿ ಅಥವಾ ಭಾರತ ಉಪಖಂಡದ ಪುರಾತನ ಕಾಲ ಮಾಪನದಲ್ಲಿಯೂ ಯುಗಾದಿಯನ್ನು ವರ್ಷದ ಆದಿಯೆಂದು ಪರಿಗಣಿಸಿ ಯುಗಾದಿ ವರ್ಷದ ಮೊದಲ ದಿನವಾಗಿ ಆಚರಿಸಲ್ಪಡುತ್ತದೆ. ಸರ್ವೇ ಸಾಮಾನ್ಯ ಯುಗಾದಿ ಹಬ್ಬ ಈಗಿನ ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಮಾರ್ಚ್ ತಿಂಗಳಲ್ಲಿ ಅಂದರೆ ಮೂರನೇ ತಿಂಗಳಲ್ಲಿ ಬರುತ್ತದೆ. ಯಥಾವತ್ ಯುಗಾದಿಯಿಂದ ಪರಿಗಣಿಸಿದಾಗ ಈಗಿನ ಡಿಸೆಂಬರ್ ಹತ್ತನೇ ತಿಂಗಳೇ ಆಗುತ್ತದೆ. ಆದ್ದರಿಂದ ಸೆಪ್ಟೆಂಬರ್ ನಿಂದ ಡಿಸೆಂಬರ್ ವರೆಗಿನ ತಿಂಗಳುಗಳು ಇಂಗ್ಲೀಷ್ ಉಡುಪು ಧರಿಸಿ ಜಾಗತೀಕರಣ ಹೆಸರಿನಲ್ಲಿ ಅಂತಾರಾಷ್ಟೀಯ ಕಾಲ ಮಾಪನದಲ್ಲಿ ಸೇರಿಕೊಂಡರೂ ತಮ್ಮ ಹಳೆಯ ಗ್ರೀಕ್ ಹಾಗು ಸಂಸ್ಕೃತ ಉಚ್ಚಾರಣೆಗಳನ್ನು ಬದಲಿಸಿಕೊಳ್ಳಲು ಇಲ್ಲ ಹಾಗು ಬದಲಿಸಿ ಕೊಳ್ಳುವುದು ಇಲ್ಲ. ಮದ್ಯದಲ್ಲಿ ಪಶ್ಚಿಮದಲ್ಲಿ ಆಳಿ ಅಜರಾಮರರಾದ ಜೂಲಿಯಸ್ ಸೀಸರ್ ನಂತವರ ಹೆಸರು ಜುಲೈ ಎಂಬಂತಹ ತಿಂಗಳುಗಳೊಳಗೆ ಸಮ್ಮಿಳಿತವಾಗಿ ಹೊಸ ಬಗೆಯ ತಿಂಗಳುಗಳು ಬಂದು ಅಲ್ಲೂ ವರ್ಷದಲ್ಲಿ ಹನ್ನೆರಡೇ ತಿಂಗಳು ಬರುವಂತೆ ಆಯಿತು.

ಕಂಡ ಕಂಡ ಭಾಷೆಗಳಿಂದ ಸಾಲ ಪಡೆದು  ತನ್ನ ಅಗಾಧತೆಯನ್ನು, ಪ್ರಾಬಲ್ಯವನ್ನು ವಿಸ್ತರಿಸಿಕೊಳ್ಳುತ್ತಿರುವ ಇಂಗ್ಲೀಷ್ ಭಾಷೆ ಗ್ರೀಕ್ ಹಾಗು ಸಂಸ್ಕೃತದಿಂದ ತಿಂಗಳುಗಳ ಹೆಸರುಗಳನ್ನೂ ಎರವಲಾಗಿ ಪಡೆಯಿತು ಆದರೆ ಅದರ ಅರ್ಥವನ್ನು ಜೀರ್ಣಿಸಿಕೊಳ್ಳಲು ಸಮಯವಿಲ್ಲದೆ  ಹೋಯಿತೋ ಏನು ಕಥೆಯೋ ಬಲ್ಲವರು ಯಾರು ?. ಅಂತೂ ಪಡೆದ ಪದಗಳಿಗೆ ಇನ್ನೊಂದು ರೂಪು ಕೊಡದೆ ಯಥಾವತ್ತಾಗಿ ಇಂಗ್ಲಿಷ್ ಗೆ ಭಟ್ಟಿ ಇಳಿಸಿ ಬಳಸಲು ಆರಂಭ ಮಾಡಿಯೇ ಬಿಟ್ಟಿತು. ಪ್ರಜ್ಞಾವಂತ ಪ್ರಭುಗಳು ಅದೇನೆಂದು ವಿಶ್ಲೇಷಿಸದೆ ಇರುವುದನ್ನೇ ಬಿಗಿದಪ್ಪಿಕೊಂಡರು. ನಮ್ಮದು ತಮ್ಮದು ಎನ್ನುವ ಅಭಿಮಾನವಿದ್ದವರು ಅಲ್ಲಿ ಇಲ್ಲಿ ಸ್ವಲ್ಪ ಓದಿ, ಆಲೋಚಿಸಿ ತಿಳಿದುಕೊಂಡರು. ಇನ್ನುಳಿದವರು ಜಾಣ ಮೌನ ಪ್ರದರ್ಶಿಸಿದರು.ಸದ್ಯಕ್ಕೆ ಈ ವಿಚಾರವಾಗಿ ನನ್ನ ಕಣ್ಣಿಗೆ ಬೀಳುತ್ತಿರುವ ಎಲ್ಲರೂ ಜಾಣ ಮೌನಿಗಳೇ. ನಾನು ಅದೇ ಆಗಿದ್ದೆ, ಆದರೆ ಈಗ ಹಾಗಿಲ್ಲವಷ್ಟೆ!!

ಭಾನುವಾರ, ಫೆಬ್ರವರಿ 12, 2017

ಕನ್ನಡತಿ - ನನ್ನೊಡತಿ

ಭುವಿಗೆ ಸೂರ್ಯ ಮುತ್ತಿಕ್ಕಿ
ಬೆಳಕು ಚೆಲ್ಲಿದಾಗ ಹಿಡಿದು
ಪಡುವಣದಲ್ಲಿ ತಾನು ಮರೆಯಾಗಿ
ಲೋಕ ನಿದ್ರೆಗೆ ಜಾರುವ ವರೆಗೂ
ಕಾವೇರಿಯಿಂದ ಗೋದಾವರಿ ವರಮಿರುವ
ಕನ್ನಡ ನಾಡೊಳ್ ಎಲ್ಲರ ನಾಲಿಗೆಯೊಳ್
ರಾರಾಜಿಸುವ ಕನ್ನಡದೇವಿಯ
ನಾನ್ ನಡುರಾತ್ರಿಯಲ್ಲಿ ಆರಾಧಿಸುವೆ

ಕನ್ನಡದ ಮಕ್ಕಳ್ ನಿದ್ರೆಯಾನಂದ ಸವಿಯುತಿರೆ
ಕನ್ನಡ ತಾಯಿ ನನ್ನೊಡನಾಟದಿ ಆನಂದದಿ
ವಿಹರಿಸುವಳು, ನಲಿಯುವಳು, ನಲಿಸುವಳು
ಮಾತೃಹೃದಯಿ ನನ್ನ ಆಯಿ
ಪಂಪ ರನ್ನ ಜನ್ನ ಪೊನ್ನರೊಡಗೂಡಿ
ತಾನ್ ಮೆರೆದ ಕನ್ನಡದೇವಿ
ನನ್ನೊಡನೂ ಬರುವಳೂ ನಲಿವಳು

ಬೆಳಗ್ಗಿನಿಂದ ಪ್ರಪಂಚವನಪ್ಪಲು
ನನಗೆ ಒಗ್ಗದ ಬಿಳಿಯರ ಭಾಷೆಯನರೆದು
ಕುಡಿದು ಚಪ್ಪರಿಸಿ ಕುಣಿದಾಡಿ
ರಾತ್ರಿಯಲಿ ನನ್ನೊಡತಿ ಕನ್ನಡತಿಯ
ಪ್ರೀತಿಯಾಲಿಂಗನದಲ್ಲಿ ಚಣೊತ್ತು
ವಿರಮಿಸಿ ನಂತರವೇ ನಿದ್ರಾದೇವಿಗೆ ಶರಣು

ಇದು ಬರಿಯ ಭಾಷೆಯಲ್ಲ ನನಗೆ
ಬದುಕು ಭಾವ ಬಣ್ಣ ಬಯಲು
ಅಷ್ಟೇಕೆ ಕುಂತರು ನಿಂತರು ಮಲಗಿದರು
ನನ್ನಂತರಂಗವ ಪ್ರಪಂಚಕ್ಕೆ ತಿಳಿಸಲು
ಪ್ರಪಂಚದಂತರಂಗವ ನಾನ್ ಬಗೆಯಲು
ನನಗಾನಿಸುವ ಭಾವವೊಂದೇ
ಅದು  ಕನ್ನಡ !!!

ಭಾನುವಾರ, ಜನವರಿ 29, 2017

ಆತ್ಮ ನಾನು

ತನುವಲ್ಲ ನಾನ್,
ಮನವಲ್ಲ ನಾನ್,
ದೇಹಿಯಲ್ಲ ನಾನ್,
ಮೋಹಿಯಲ್ಲ ನಾನ್,
ಆಕಾರಿಯಲ್ಲನೆಂಬರ್ ಎನ್ನ
ನಿನ್ನೊಡ ಮಿಡಿಯುವರೆಗೂ ನೀ ಜೀವಿ
ತೊರೆದ ಮರುಘಳಿಗೆ ನೀನ್ ನಿರ್ಜೀವಿ
ಬೆಲೆಯಿಹುದು ನಿನಗೋ ಎನಗೋ
ಯಾರ್ ಬಲ್ಲೆಯೆಂ  ನೀಂ?.

ಬದುಕ್ ತಾನ್ ಸಂಭವಿಪುದೆಲ್ಲಿ
ಕಾಣ್ವ ನಿನ್ನ ಕಣ್ಣೊಳ್
ಅಘ್ರಾಣಿಪ ನಿನ್ನ ನಾಸಿಕದೊಳ್
ಕೇಳ್ವ ಕರ್ಣದೊಳ್
ರುಚಿಸುವ ನಾಲಿಗೆಯೊಳೆ ಪರಂತು
ಅಲ್ಲ ನಿನ್ನಿಂದ ಪರದಲಿ

ಗುರುವಾರ, ಜನವರಿ 26, 2017

ಬದುಕು ತಾನ್ ಕಲಿಸುವ ಪರಿ

ಬದುಕು ತಾನ್ ಕಲಿಸುವ ಪರಿ ನೋಡಾ
ಬದುಕು ತಾನ್ ನಲಿಸುವ ಪರಿ ನೋಡಾ
ಕಷ್ಟದೊಳದ್ದಿ , ಇಷ್ಟದೊಳಗೆಳಹಿ
ಕಾಮಿಸಿದುದನೀಯದೆ ಮನುಜನ ಕಣ್ಣೊಳ್
ಭ್ರಷ್ಟವಾಗಿರ್ಪುದು ಒಮ್ಮೊಮ್ಮೆ
ಆದರೇನ್ ನಿನ್ನತನವ ಅಳೆಸಿ ತೂಗಿಸಿ
ತಾನ್ ಮುಂದಿನಿತು ನಿನ್ನ ತನ್ನ ಕೂಸಂತೆ ಸಲಹುವುದು
ನಿರ್ಬಿಡೆಯಿಂ ಬದುಕ ತಾನ್ ಕಲಿಸುವ ಪರಿಯಿದು.

ಕಬ್ಬಿಗರಿಂ ಬರೆಸಿ, ಪಾಠಕರಿಂ ವಾಚಿಸಿ
ಗಾಯಕರಿಂ ಹಾಡಿಸಿ, ಗಮಕಿಗಳಿಂ ಗಮನಿಸಿದೆಡೆಗೂ
ಬದುಕು ನಿಲುಕದೀ ದಿಟ್ಟಿಯೊಳ್,
ಕಣ್ಣೊಳ್ ನೋಡಿ ಕೈಲಿ ಗೆಯ್ಯಲು
ತಂತ್ರವೇನ್, ಮಂತ್ರವೇನ್, ವೇದವೇನ್, ವಿದ್ಯೆಯೇನ್
ಈ ಬದುಕು, ಅದಲ್ಲ ಕಾಣಾ
ನಿನ್ನ ದಿಟ್ಟಿಗೂ ಮೀರಿ ನಿಂತ ಹರಿಗೋಲು ತಿಳಿಯೊಲ್
ಸುಲಲಿತವೇ ಈ ಬದುಕು
ವಂತಕಾರಿಯ ಕೃಪೆಯಲ್ಲವೇ ಈ ಬದುಕು

ಏನ್ ಗಳಿಸಿಹೆ ನೀನಿಲ್ಲಿ, ಏನ್ ಬೆಳೆಸಿದೆ ನೀನಿಲ್ಲಿ
ಬದುಕು ತಾನ್ ಮುಂದಿನಿತು ಗಳಿಸಿತೋ ಎಳೆಸಿತೋ
ನೀನಾರು ಬದುಕಾರು
ನಿನ್ನಡಿಯರಿಯದೆ ಬದುಕೇ? ಬದುಕಡಿಯರಿಯದೆ ನೀನೆ?
ಗೆಲ್ಲುವಾರ್ಯಾರ್ ಈ ಮಾಯೆಯೊಳಗೆ
ಬದುಕದಕೆ ತನ್ನಿಷ್ಟದಂತೆ ಆಡಿಸುತಿರ್ಪುದು ನಿನ್ನ
ನಿನ್ನ ದಿಟ್ಟಿಯೊಳ್ ನೀನ್ ದೇವಂ
ಅದರ ದಿಟ್ಟಿಯೊಳ್ ನೀನೋರ್ವ ಆಟಕಾರ

ದೇಶ ಸೇವೆಯ ಹೂವು ಬೆಳೆಯುವುದೆಲ್ಲಿ?

ಅದು 2009ನೇ ಇಸವಿ ಸೆಪ್ಟೆಂಬರ್ 8ನೆ ತಾರೀಕು, ನಾನು ಡಿಗ್ರಿ ಕಾಲೇಜ್ ನ ತರಗತಿಗಳಿಗೆ ಹಾಜರಾದ ಎರಡನೇ ದಿನ ಅದು. ಮುನ್ನೆಲೆಗೆ ಕಪ್ಪನೆ ಮಿಂಚುವ ಫೈಬರ್ ಹೊದಿಕೆ ಹೊದ್ದುಕೊಂಡು ನಿಂತಿದ್ದ, ಇನ್ಫ್ರಾಸ್ಟ್ರಕ್ಚರ್ ವಿಚಾರದಲ್ಲಿ ಕರ್ನಾಟಕದಲ್ಲೇ ಹೆಸರು ಮಾಡಿದ್ದ ಕಾಲೇಜು ಅದು. ಮೊದಲೇ ತಾಂತ್ರಿಕ ಶಿಕ್ಷಣ, ಅಲ್ಲೆಲ್ಲ ಇಂಗ್ಲೀಷ್ ಭಾಷೆಯದ್ದೇ ಕಾರು ಬಾರೆನೋ ಎನ್ನುವುದೇ ನನ್ನ ಯೋಚನೆಯಾಗಿತ್ತು. ಪಾಠ ಪ್ರವಚನಗಳನ್ನೆಲ್ಲ ಇಂಗ್ಲಿಷ್ನಲ್ಲೇ ಕೇಳಿ ಬರೆದು ಕಲಿತಿದ್ದ ನಾನು ನೀರು ಕುಡಿದಂತೆ ಇಂಗ್ಲಿಷ್ ಮಾತನಾಡುವುದಕ್ಕೆ ತಡವರಿಸುತ್ತಿದ್ದ ಕಾಲವದು, ಅಂತೂ ಇಂತೂ ಯಾರಾದರೂ ಎದುರು ಬಂದು ಇಂಗ್ಲಿಷ್ನಲ್ಲಿ ಮಾತಾಡಿದರೆ 'ಬಟ್ಲರ್' ಇಂಗ್ಲಿಷ್ ಎಂದು ಕರೆಸಿಕೊಳ್ಳುವ ಇಂಗ್ಲಿಷ್ ಭಾಷೆಯೊಳಗಿನ ದಲಿತ ಭಾಷೆಯನ್ನು ಉಪಯೋಗಿಸಿ ನಾಲ್ಕಾರು ಮಾತಾಡಿ ಬಂದವರನ್ನು ಗೌರವಾದರದಿಂದ ಸಾಗಹಾಕುವುದೇ ನಡೆದಿತ್ತು.

ಮೊದಲೇ ಹೇಳಿದಂತೆ ಆ ಎಂಟನೇ ತಾರೀಕು ಮಂಗಳವಾರ ಬೆಳ್ಳಂಬೆಳಿಗ್ಗೆ ಎದ್ದು ಹೊಸ ಕಾಲೇಜು ಅನ್ನುವ ಭರಾಟೆಯಲ್ಲಿ ಅಣಿಯಾಗಿ ಊರಿಗೆ ಮುಂಚಿತವಾಗಿ ಹೋಗಿ ಕ್ಲಾಸಿನಲ್ಲಿ ಕೂತುಕೊಂಡಿದ್ದೆ. ಸಮಯ ಸರಿದಂತೆಲ್ಲಾ ಹುಡುಗರು ಬಂದು ತರಗತಿ ಅನ್ನಿಸಿಕೊಂಡಿತಾದರೂ ಅದರೊಳಗಿಷ್ಟು ಹೊಸಬರು ಬಂದು ಸೇರಿಕೊಳ್ಳುತ್ತಿದ್ದರು. ತರಗತಿ ಎಂದ ಮೇಲೆ ಅಲ್ಲೊಂದಿಷ್ಟು ಹರಟೆ, ಗೊತ್ತಿಲ್ಲದವರ ಪರಿಚಯ ಮತ್ತು ಮುಂತಾಗಿ ಏನೇನೆಲ್ಲವೋ ತೆರೆದುಕೊಂಡು ಎಲ್ಲರ ದನಿಗಳೂ ಸೇರಿಕೊಂಡು ಗಲಾಟೆ ಜೋರಾಗಿ ಕೇಳುವಂತೆ ಆಯಿತು. ಈ ಗಲಾಟೆ ಗದ್ದಲಗಳೂ ಸ್ಕೂಲು ಜೀವನದಿಂದ ಕಂಡಿದ್ದು ಹಾಗು ನಾವೂ ಅದನ್ನು ಅನೂಚಾನುವಾಗಿ ನಡೆಸಿಕೊಂಡು ಬಂದಿದ್ದರ ಪರಿಯಿಂದ ನಮಗೆ ಅದೇನು ಕಿರಿಕಿರಿ ಎನ್ನಿಸುತ್ತಿರಲಿಲ್ಲ, ಆದರೆ ನಮ್ಮ ತರಗತಿಗಳ ಮುಂದೆ ಹಾದು ಹೋಗುವ ಯಾರ ಕಿವಿಯಾದರು ಒಮ್ಮೆ ಕಂಪಿಸಿ ತಣ್ಣಗಾಗುತ್ತಿತ್ತು.

ಇಂತಹ ಗದ್ದಲಕ್ಕೆ ಇತಿಶ್ರೀ ಹಾಡುವರು ಯಾರೆಂಬುದನ್ನು ವಿಶೇಷವಾಗಿ ಹೇಳಬೇಕೆನಿಲ್ಲ ಅಲ್ಲವೇ, ಹಾಗೆ ಆಯಿತು. ತರಗತಿಯಲ್ಲಿ ಗಲಾಟೆಯೆಂದರೆ ಲೆಕ್ಚರರ್ ನೀರೀಕ್ಷೆಯಲ್ಲಿದ್ದೇವೆ ಎಂದು ಇಡೀ ಕಾಲೇಜಿಗೆ ನಮ್ಮ ಗಲಾಟೆಯಿಂದಲೇ ಸಂದೇಶ ಪ್ರವಹಿಸುತ್ತಿದ್ದ ಮಾಮೂಲಿ ಮಕ್ಕಳು ನಾವು. ಅದು ಹಂಗೆ ಆಯಿತು. ನೀರಿಕ್ಷಿಸಿದಂತೆ ಒಬ್ಬ ಲೆಕ್ಚರರ್ ಬಂದರು , ಆದರೆ ಅವರನ್ನು ಲೆಕ್ಚರರ್ ಎಂದು ಒಪ್ಪಲು ನಾವು ಮಾನಸಿಕವಾಗಿ ಸಿದ್ಧರೇ ಇರಲಿಲ್ಲ. ಅದಕ್ಕೆ ಕಾರಣವಿಷ್ಟೇ, ಲೆಕ್ಚರರ್ ಎನಿಸಿಕೊಂಡು ಬಂದವರ ವಯಸ್ಸು ನಮಗಿಂತ ಹೆಚ್ಚೆಚ್ಚು ಎಂದರೂ ಸುಮಾರು 3-4 ವರ್ಷ ಹೆಚ್ಚಿರಬಹುದು. ಆಗಷ್ಟೇ ಪದವಿ ಮುಗಿಸಿ ನೇರ ಲೆಕ್ಚರರ್ ವೃತ್ತಿ ನಂಬಿ ಬಂದಂತೆ ತೋರುತ್ತಿತ್ತು. ಸಾಲದ್ದಕ್ಕೆ ದಪ್ಪ ಕನ್ನಡಕವೊಂದು ಅವರು ಭಾರಿ ಓದುವ ಕುಳವೆಂದು ಎತ್ತಿ ಹೇಳುತ್ತಿತ್ತು. ಕೆಲವರಿಗೆ ಕನ್ನಡಕ ಹಾಸ್ಯದ ವಸ್ತುವೂ ಆಯಿತು. ಆರಂಭದಲ್ಲಿ ಅವರು ನಮ್ಮ ತರಗತಿಯೊಳಗೆ ಬಂದಾಗ ‘ಇವನೂ ನಮ್ಮಂತೆ ಯಾರೋ ವಿದ್ಯಾರ್ಥಿ’ ಎಂದುಕೊಳ್ಳುತ್ತಿದ್ದ ನಾವೆಲ್ಲಾ ಕ್ಲಾಸಿನ ಒಳಗೆ ಬಂದ ಅವರು ಬೆಂಚಿಗೆ ಸುಳಿಯದೆ ಡಯಾಸ್ ಹತ್ತಿದ್ದು ನೋಡಿಯಷ್ಟೇ ಅರ್ಥವಾಯಿತು ಇವರೂ ಲೆಕ್ಚರರ್ ಎಂದು. ಅವರು ಬಂದದ್ದೇ ಬಂದದ್ದು ನಡೆಯುತ್ತಿದ್ದ ಗಲಾಟೆ ಎಳ್ಳಷ್ಟೂ ಕಡಿಮೆಯಾಗಲಿಲ್ಲ, ಬದಲಾಗಿ ಇನ್ನು ಸುಮಾರಾಗಿ ಜಾಸ್ತಿಯಾಯಿತು ಅಂತಲೇ ಅನ್ನಬಹುದು.

ಬೇರೆಯವರು ಯಾಕೆ ನಾನೇ ನನ್ನ ಪಕ್ಕದಲ್ಲಿದ್ದವನನ್ನು ಚುಚ್ಚಿ ಹಾಗಂದೆಬಿಟ್ಟೆ. 'ಏನಪ್ಪಾ ಸಮಾಚಾರ ಇದು, ಈ ಹುಡುಗ  ನಮಗಿಂತ ಒಂಡೆರಡೊ ಮೂರೋ ವರ್ಷ ದೊಡ್ಡವನು. ಇವರನ್ನೆಲ್ಲ ಲೆಕ್ಚರ್ ಅಂದರೆ ಏನ್ ಕಥೆ'. ಎಲ್ಲರ ಬಾಯಲ್ಲೂ ಏನೇನೋ ಮಾತು ಬರುತ್ತಿದ್ದರು ಅದೆಕ್ಕೆಲ್ಲ ಸೊಪ್ಪು ಹಾಕದಂತೆ ನಮ್ಮ ಕಡೆಗೆ ತಿರುಗಿ 'Hi' ಎಂದರು.
ನಾವು ಅವರ ಪ್ರತೀ ಮಾತುಗಳಿಗೂ ಎಷ್ಟೆಷ್ಟೋ ಪ್ರತಿರೋಧ ತೋರುತ್ತಾ, ಅವರ ಪ್ರತಿ ಮಾತಿಗೂ ಹಾಸ್ಯ ಚಟಾಕಿಗಳನ್ನು ಹಾರಿಸುತ್ತ ಅವರನ್ನು ರೇಜಿಗೆ ಸಿಲುಕಿಸಲು ಯತ್ನಿಸುತ್ತಿದ್ದರು, ಅವರು ಅಷ್ಟೇ ಸಾವಧಾನವಾಗಿ ತಮ್ಮ ಮಾತು ಮುಂದುವರಿಸುತ್ತಾ
“Hi Everybody, I am here to handle your EC classes”
ಎಂದಾಗ 'ಮೈ ಕಟ್ಟು ಹೋದರೆ ಹೋಗಲಿ ಧ್ವನಿಯಾದರೂ ಗಟ್ಟಿಯಾಗಿ ಜೋರಾಗಿರಬಾರದಿತ್ತೇ' ಅಂತ ನಮಗೆಲ್ಲ ಅನಿಸಿತು. ತಮ್ಮ ಸುಮಾರು ಮಧ್ಯಮ ದನಿಯಲ್ಲೇ ಮಾತು ಮುಂದುವರೆಸಿ ಹೇಳುತ್ತಿದ್ದರು,ಅವತ್ತು ಅವರು ಅಲ್ಲಿ ಆಡಿದ
 ಎಲ್ಲ ಮಾತುಗಳೂ ಜ್ಞಾಪಕಕಿಲ್ಲ ಆದರೂ ಅವರ ಪೂರ್ಣ ಮಾತುಕತೆಯಲ್ಲಿ ಹೈಲೈಟ್ ಎನ್ನಬಹುದಾದಂತಹ ವಿಷಯಗಳಷ್ಟೇ ತಲೆಯಲ್ಲಿವೆ.

ಅವರು ಓದಿದ್ದು ಬೆಂಗಳೂರಿನ ಪಿ ಇ ಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ. ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ವಿಭಾಗದಲ್ಲಿ ಚೆನ್ನಾಗಿ ಓದುವ ಪೈಕಿ ಗುರುತಿಸಿಕೊಂಡಿದ್ದವರು ಅವರು. ಅವರ ತಂದೆ ಸರ್ಕಾರಿ ಅಧಿಕಾರಿ. ಅವರೂ ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆ ಬರೆದು ಅಧಿಕಾರಿಯಾಗಿದ್ದವರು.ಇವರು ತಾಂತ್ರಿಕ ಶಿಕ್ಷಣದಲ್ಲಿದ್ದರೂ ತಂದೆಯಂತೆ ತಾನೂ ಸರ್ಕಾರಿ ಅಧಿಕಾರಿಯಾಗಬೇಕು, ದೇಶದ ಬದಲಾವಣೆಯಲ್ಲಿ ತನ್ನ ಪಾತ್ರವೂ ಮಹತ್ತರವಾಗಿರಬೇಕು ಎಂದು ಕಣ್ಣಲ್ಲಿ ಕನಸು ಕಟ್ಟಿಕೊಂಡಿದ್ದ ಯುವಕ.

ಸರ್ಕಾರಿ ಅಧಿಕಾರಿಗಳ ಮಕ್ಕಳು ತಮ್ಮ ತಂದೆ ತಾಯಿ ಮಾಡಿದ್ದೆಲ್ಲವನ್ನೂ ಜೀವನವಿರುವವರೆಗೂ ಕೂತು ತಿಂದು ಮಜಾ ಉಡಾಯಿಸಿ ಜೀವನ ಸವೆಸುತ್ತಾರೆ ಎಂಬ ನನ್ನ ಭಾವನೆಗೆ ವಿರುದ್ಧವಾಗಿ ಆ ಸಮಯಕ್ಕೆ ನನಗೆ ಅರಿವು ಮೂಡಿಸಲೆಂದೇ ಎದುರಾದವರೇ ಇರಬೇಕು ಇವರು ನಮ್ಮ ಲೆಕ್ಚರರ್.

ನಮ್ಮೊಡನೆ ಮಾತನಾಡುತ್ತ ತಾನೂ ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆ ತೆಗೆದುಕೊಳ್ಳುವ ಯೋಚನೆ ಮಾಡಿರುವುದಾಗಿ ಹೇಳಿದರೂ ನಮಗ್ಯಾರಿಗೂ ಆಗ ಆ ವಿಚಾರ ಬೇಡವಾಗಿದ್ದರಿಂದ ಅದನ್ನು ಏನೋ ಕೇಳಬೇಕಲ್ಲ ಎಂದು ಕೇಳಿದ್ದೆವೆ ಹೊರತು, ಸೀರಿಯಸ್ ಆಗಿ  ಕೇಳಿಸಿಕೊಂಡಿರಲಿಲ್ಲ. ಇವರೂ ಲೋಕಸೇವಾ ಆಯೋಗದ ಪರೀಕ್ಷೆ ಬರೆಯಬಲ್ಲರೇ ? ಎನ್ನುವ ಪ್ರಶ್ನೆಯೊಂದು ನನ್ನಲ್ಲಿ ಬಂದಿತ್ತು. ಯಾವ ಅದೃಷ್ಟವೋ ಏನೋ ತಂದೆ ಅಂತಹ ಕಠಿಣ ಪರೀಕ್ಷೆ ಬರೆದು ಪಾಸಾಗಿದ್ದಾರೆ ಎಂದರೆ ಮಗನೂ ಹಾಗಾಗಲು ಸಾಧ್ಯವೇ ಎಂದು ಕೊಳ್ಳುತ್ತಾ ಆ ಮಾತುಗಳನ್ನು ಅಷ್ಟಕ್ಕಷ್ಟೇ ಮಾಡಿಕೊಂಡು ಕ್ಲಾಸು ಮುಗಿಸಿ ಹೊರಗೆ ಬಂದಿದ್ದೆ.  ಅದಾದ ಮೇಲೆ ಸುಮಾರು ಒಂದೋ ಎರಡು ಕ್ಲಾಸುಗಳನ್ನು ಅವರು ತೆಗೆದುಕೊಂಡರೂ ಅದು ನಮ್ಮ ಯಾರ ಮನಸ್ಸಿನಲ್ಲಿಯೂ ಚಿರಸ್ಥಾಯಿಯಾಗಿ ಉಳಿಯಲಿಲ್ಲ. ಸರಿ ಸುಮಾರು ನಾವು ಆ ಕಾಲೇಜಿಗೆ ಹೋಗಲು ಶುರು ಮಾಡಿದ ಒಂದು ವಾರದ ನಂತರ ಅವರು ಕಾಲೇಜಿಗೆ ಬರುವುದನ್ನು ಬಿಟ್ಟಿರಬಹುದೇನೋ, ಅವರು ಇನ್ನೆಂದೂ ಆ ಕ್ಯಾಂಪಸ್ ನಲ್ಲಿ ನಮಗೆ ಕಾಣ ಸಿಗಲೇ ಇಲ್ಲ.

ದಿನಗಳು ಉರುಳಿದಂತೆ ಕಾಲ ಕ್ರಮೇಣ ಅವರನ್ನು ಎಲ್ಲರೂ ಮರೆತು ಬಿಟ್ಟರು, ನಮಗೆ ಪಾಠ ಮಾಡುತ್ತಿದ್ದ ಲೆಕ್ಚರ್ ಗಳೂ ಕೂಡ.  ನೋಡ ನೋಡುತ್ತಿದ್ದಂತೆ ದಿನಗಳುರುಳಿ ವರ್ಷಗಳಾಗಿ ನಮ್ಮೆಲ್ಲರ ಸ್ಥಿತಿ ಗತಿಗಳು ಬದಲಾದವು. ಗತಿಯಿಲ್ಲದವರೆಲ್ಲ ಸ್ಥಿತಿವಂತರಾದರು, ಕಾಲೇಜಿನ ಚೆಲ್ಲಾಟದಲ್ಲಿದ್ದವರೆಲ್ಲ ತಮ್ಮ ಹೆಸರಿನ ಮುಂದೆ ತಮ್ಮ ತಮ್ಮ ಪದವಿಗಳನ್ನು ಕೂಡಿಸಿಕೊಂಡರು, ತಮಗಿಷ್ಟ ಬಂದಾಗ ಕಾಲೇಜಿನ ಕಡೆಗೆ ತಲೆಯಿಡುತ್ತಿದ್ದ ಮಂದಿ ಬಹು ರಾಷ್ಟ್ರೀಯ ಕಂಪೆನಿಗಳಲ್ಲಿ ಕೆಲಸ ಹಿಡಿದು ಅಲ್ಲಿ ತಮ್ಮ ಶ್ರದ್ಧೆಯನ್ನು ಪಣಕ್ಕಿಟ್ಟು ಹೋರಾಟಕ್ಕಿಳಿದರು, ಕೆಲವರು ವೇಗದ ಜೀವನಕ್ಕೆ ಹೊಂದಿಕೊಂಡವರಂತೆ ಪದವಿ ಮುಗಿದೊಡನೆ ಗೃಹಸ್ಥಾಶ್ರಮ ಸ್ವೀಕರಿಸಿದರು, ಇನ್ನು ಕೆಲವರು ಮುಖ್ಯವಾಗಿ ಹೆಣ್ಣು ಮಕ್ಕಳು ವಯಸ್ಸಿನ ಓಟಕ್ಕೆ ಹೆದರಿ ಮದುವೆಯಾಗಿ ಗಂಡನ ಮನೆ ಪಾಲಾದರು ಹೀಗೆ ಒಬ್ಬೊಬ್ಬರೂ ಒಂದೊಂದು ಬಗೆಯಾಗಿ ನಾವೆಲ್ಲಾ ಸೇರಿಕೊಂಡಿದ್ದ ತರಗತಿ ಹರಿದು ಹಂಚಿಹೋಗಿ ನಾವು ಕಂಡು ಕೇಳರಿಯದ ಕ್ಷೇತ್ರಗಳಲ್ಲೆಲ್ಲಾ ತನ್ನ ಶಿಷ್ಯ ಬಳಗದ ಮೂಲಕ ತನ್ನ ತಾ ತೊಡಗಿಸಿಕೊಂಡಿತು. ಕಾಲದ ಹೊಡೆತಕ್ಕೆ ಸಿಕ್ಕಿ ನಾನೂ ಬಹುರಾಷ್ಟ್ರೀಯ ಕಂಪನಿಯೊಂದರ ಪಾಲಾಗಬೇಕಾಯಿತು. ಸರಿ ಎಲ್ಲವೂ ಅಂದುಕೊಂಡಂತೆಯೇ ನಡೆಯುತ್ತಿತ್ತು, ನಾನು ಅದಾಗಲೇ ವೃತ್ತಿಪರನಾಗಿ ಸುಮಾರು ಒಂದುವರ್ಷವಷ್ಟೇ ಆಗ. ನಮ್ಮ ಐ ಟಿ ಸಂಸ್ಥೆಗಳಲ್ಲಿ ಬೆಂಚಿನ ಮಹಿಮೆ ತಿಳಿಯದವರ್ಯಾರು?. ನಾನು ಆಗೊಮ್ಮೆ ಈಗೊಮ್ಮೆ ಬೆಂಚಿಗೆ ಬಂದು ತಿಂಗಳಾನುಗಟ್ಟಲೆಯನ್ನು ಬೆಂಚಿನಲ್ಲಿ ಕಳೆದು ಮತ್ತೆ ಪ್ರಾಜೆಕ್ಟುಗಳಿಗೆ ತಗುಲಿಕೊಂಡು ಕರೆದರೂ ತಿರುಗದಷ್ಟು ಬ್ಯುಸಿ ಆಗಿಹೋಗುತ್ತಿದ್ದು ಸೋಜಿಗವೇನಲ್ಲ. ಹೀಗೆ ಒಮ್ಮೆ ಬೆಂಚಿನಲ್ಲಿದ್ದೆ. ಆಗೆಲ್ಲ ಬೆಂಚು ಮಾಡಲು ಕೆಲಸವೇನಿಲ್ಲ, ನಮ್ಮ ವಿಚಾರಿಸಿಕೊಳ್ಳುವರಂತೂ ಇಲ್ಲವೇ ಇಲ್ಲ. ನಾಮಕಾವಸ್ಥೆಗೆ ರಿಸೋರ್ಸ್ ಮ್ಯಾನೇಜರ್ ಅಂತ ಇದ್ದರೂ ನೂರಾರು ಜನ ಅವರ ಕೈಕೆಳಗಿರುತ್ತಿದ್ದರಿಂದ ಒಬ್ಬೊಬ್ಬರನ್ನೇ ಕೂಲಂಕುಷವಾಗಿ ಪರೀಕ್ಷಿಸಲು ಅವರಿಗೆ ಸಾಧ್ಯವೇ ಇರಲಿಲ್ಲ. ಅಂತಹ ಸಮಯದಲ್ಲಿ ನಮ್ಮ ಬೇಕು ಬೇಡಗಳನ್ನೆಲ್ಲ ಗೂಗಲ್ ನಲ್ಲಿ ಕುಕ್ಕಿದರೆ ಅತಳ ವಿತಳ ಪಾತಾಳಗಳನ್ನೂ ಹುಡುಕಿ ನಮಗೆ ಸಹಾಯಿಸುತ್ತಿದ್ದ ಗೂಗಲ್ ನಮ್ಮ ಅಚ್ಚುಮೆಚ್ಚಿನ ಮಿತ್ರನೇ ಆಗಿಹೋಗುತ್ತಿತ್ತು.

 ಹೀಗೆ ಒಂದು ಶುಕ್ರವಾರ ಮಧ್ಯಾಹ್ನ ಊಟವಾಗಿತ್ತು, ಸುತ್ತ ಮುತ್ತ ನೋಡಿದರೆ ನಮ್ಮ ಆಫೀಸಿನಲ್ಲಿ ಎಲ್ಲರೂ ಮಂಗ ಮಾಯವಾಗಿದ್ದರು, ಕೆಲವರು ಡಾರ್ಮಿಟರಿಗಳಲ್ಲಿ ಸವಿನಿದ್ದೆಯಲ್ಲಿದ್ದರು. ನಾನು ನಿದ್ದೆ ತಡೆಯುವುದು ಹೆಂಗೆ ಅಂತ ಯೋಚಿಸುತ್ತಲೇ ನನ್ನ ಪ್ರಿಯ ಮಿತ್ರನಾಗಿದ್ದ ಗೂಗಲ್ ಗೆ ಎದುರಾದೆ. ಇದೀಗ ಜ್ಞಾಪಕಕ್ಕೆ ಬಂದರು ನಮ್ಮ ಹಳೆಯ ಎರಡು ದಿನಗಳ ಲೆಕ್ಚರ್. ತಡ ಮಾಡದೆ ಅವರ ಹೆಸರನ್ನೇ ಗೂಗಲ್ ನಲ್ಲಿ ಟೈಪಿಸಿ ಉತ್ತರಕ್ಕಾಗಿ ಕಾಯುತ್ತ ಕುಂತೆ.  ಮನಸ್ಸಿನ ಹಳೆಯ ಪುಟಗಳ ಮೇಲೆ ಎಲ್ಲ ಚಿತ್ರಗಳೂ ಕೆಲವು ಕಾಲ ಮೂಡಿ ಮಾಯವಾಗುತ್ತಿದ್ದವು. ನಾನು ಯೋಚನೆ ಮಾಡುತ್ತಲೇ ಕೂತೆ ಏನಾಗಿರಬಹುದು ಈ ಮನುಷ್ಯ? ಎಲ್ಲರಂತೆ ಕನಸು ಹೊತ್ತು ಬಂದು ಸಾಧಿಸುವ ಮಾರ್ಗ ಮಧ್ಯದಲ್ಲೇ ಸೋಲೊಪ್ಪಿಕೊಂಡಿರಬಹುದೇ?, ಇಲ್ಲ ನಿಜವಾಗಿಯೂ ತಾನಂದು ಕೊಂಡಂತೆ ಬದುಕಿ ಬಾಳುತ್ತಿರಬಹುದೇ? ಇಲ್ಲ ಹೇಗೂ ಓದುವ ಕುಳ ಅದೇ ಮರೆಯಲ್ಲಿ ಬೇರೆಲ್ಲಾದರೂ ದೊಡ್ಡ ಮೊತ್ತದ ಸಂಬಳ ಗಿಟ್ಟುವ ಕೆಲಸ ಹಿಡಿರಬಹುದೇ? ಹೀಗೆ ಇನ್ನು ಏನೇನೋ ಮನಸ್ಸಿಗೆ ಬಂದು ಮುದ್ರೆಯೊತ್ತಿ ಹೋಗುತ್ತಿರುವಷ್ಟರಲ್ಲಿ ಗೂಗಲ್ ತನ್ನ ಉತ್ತರದೊಂದಿಗೆ ಸರ್ವ ಸನ್ನದ್ಧವಾಗೇ ನಿಂತುಬಿಟ್ಟಿತ್ತು.

ಏನಾಶ್ಚರ್ಯ!!.... ನಾನು ಬಯಸಿದ್ದಕ್ಕಿಂತ ಹೆಚ್ಚಿನದೇ ಅಲ್ಲಿ ಸಿಕ್ಕಿತ್ತು. ಕೇರಳದ ಪ್ರಮುಖ ಜಿಲ್ಲೆಯೊಂದಕ್ಕೆ ಸಬ್-ಕಲೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಅವರಿಗೆ ಅದಾಗಲೇ ವೈದ್ಯೆ ಯಾಗಿರುವ ಒಬ್ಬ ಗೆಳತಿ ಇರುವುದಾಗಿಯೂ , ಅವರ ವಿವಾಹಕ್ಕೆ ಉಭಯ ಮನೆಯವರೂ ಒಪ್ಪಿರುವುದಾಗಿಯೂ ವರದಿ ಪ್ರಕಟವಾಗಿದ್ದ ದಿನ ಪತ್ರಿಕೆಯ ತುಣುಕೊಂದು ಅಲ್ಲಿ ಸಿಕ್ಕಿತು. ಅದರೊಳಗೆ ಹಸನ್ಮುಖಿಗಳಾಗಿ ಭಾವಿ ದಂಪತಿಗಳು ಒಟ್ಟಾಗಿ ನಿಂತಿರುವ ಚಿತ್ರವೂ ಕಾಣಸಿಕ್ಕಿತು. ಅಂತೂ ಇಂತೂ ಹಿಡಿದ ಕೆಲಸವನ್ನು ಸಾಧಿಸುವ ಛಲದಂಕನೊಬ್ಬನನ್ನು ಕಂಡೆ!!. ಅವರು ಸಾಧನೆಯ ದಾರಿಯಲ್ಲಿ ಎದುರಿಸಿದ ಪ್ರಸಂಗಗಳೇನು ಕಷ್ಟಗಳೇನು ಎಂದು ತಿಳಿದುಕೊಳ್ಳುವ ಅವಕಾಶ ಸಂಪೂರ್ಣವಾಗಿ ಇದ್ದರೂ ಅದನ್ನೇನು ಅಷ್ಟಾಗಿ ನಾನು ಬಳಸಿಕೊಳ್ಳಲಿಲ್ಲವೇನೋ. ಇದೀಗ ನಮ್ಮ ಸುತ್ತಲೇ ಓಡಾಡಿಕೊಂಡಿದ್ದವರು ಇಂದು ಉನ್ನತ ಅಧಿಕಾರಿಗಳಾಗಿ ಆಡಳಿತ ಯಂತ್ರ ನಡೆಸುವಲ್ಲಿ ಮಾರ್ಗದರ್ಶಕರಾಗಿ ನಿಂತುಕೊಂಡಿದ್ದರೆಂದರೆ ಅದಕ್ಕಿಂತ ಹೆಮ್ಮೆ ಪಡುವ ವಿಚಾರ ಇನ್ನೇನೂ ಇಲ್ಲ.

ಅವರ ಪೂರ್ವಾಪರ ತಿಳಿಸುವ ಇನ್ನೊಂದೆರಡು ಪತ್ರಿಕೆಯ ಲೇಖನಗಳು ಹಾಗು ಅವರೇ ನಡೆಸುತ್ತಿರುವ ಬ್ಲಾಗ್ ಒಂದರ ವಿಳಾಸ ದೊರೆತಿದ್ದು ನನ್ನ ಪಾಲಿಗೆ ಖುಷಿಯೇ ಖುಷಿ. ಅವರ ಬ್ಲಾಗ್ ಮೇಲೆ ಕಣ್ಣಾಡಿಸುತ್ತಿದ್ದೆ. ತಾನು ಆಡಳಿತ ನಡೆಸುವ ಜಿಲ್ಲೆಯ ವ್ಯಾಪ್ತಿಯ ಇತಿಹಾಸ, ಅರಣ್ಯ ಸಂಪತ್ತು, ಪ್ರವಾಸಿ ತಾಣಗಳ ಬಗ್ಗೆ ಸ್ಥಳ ಭೇಟಿಯ ಅನುಭವದ ಜೊತೆಗೆ ಇತರ ಆಡಳಿತಾತ್ಮಕ ವಿಚಾರಗಳನ್ನು ಗಮನಿಸಿ ವಿಸ್ಮೃತವಾಗಿ ಲೇಖನ ಬರೆದಿದ್ದರು.ಅದನ್ನೆಲ್ಲ ಓದುವಾಗ ಜನರ ಕಣ್ಣಿಗೆ ಮಣ್ಣೆರಚಿ ಹಣ ಪೀಕುವ ಅಧಿಕಾರಿಗಳಲ್ಲ ನನ್ನ ಕಣ್ಣ ಮುಂದೆ ಸುಳಿದಿದ್ದು, ಬದಲಾಗಿ ನಿದ್ರೆಯಲ್ಲೂ ತನ್ನ ಕ್ಷೇತ್ರದ ಬಗ್ಗೆಯೇ ಚಿಂತಿಸುವ ಒಬ್ಬ ಜವಾಬ್ದಾರಿಯುತ ಅಧಿಕಾರಿ. ಅಂದು  ಅವರು ನಮ್ಮ ಬಳಿ ಮಾತಾಡುವಾಗ ಹೇಳಿದ ಮಾತು ಜ್ಞಾಪಕವಾಗುತ್ತದೆ. "ನಿಮಗೆ ಬದಲಾವಣೆ ಬೇಕೆಂದರೆ ಬೇರೆಯವರು ಯಾರೋ ಬದಲಾವಣೆ ಮಾಡಲಿ ಆಮೇಲೆ ನಾವು ಶುರು ಮಾಡೋಣ ಎಂದು ಕಾಯಬೇಡಿ, ಮುನ್ನಡೆಯಿರಿ ನಿಮ್ಮಿಂದಲೇ ಅದು ಆರಂಭವಾಗಲಿ" . ನುಡಿದ ಮಾತಿನನಂತೆ ಇಂದು ಅವರೇ ಬದಲಾವಣೆಯ ಆರಂಭ ಬಿಂದುವಾಗಿ ಬಿಗಿಯಾಯಾಗಿ ನಿಂತುಬಿಟ್ಟಿದ್ದಾರೆ ಎನಿಸಿತು.

ಒಬ್ಬ ವ್ಯಕ್ತಿ ಐ ಎ ಎಸ್ ಅಧಿಕಾರಿಯಾಗಿದ್ದಕ್ಕೆ ಇವನದು ಈ ಲೆವೆಲ್ ಗೆ ಬಿಲ್ಡ್ ಅಪ್ ಹಾ? ಅಂದುಕೊಳ್ಳಬೇಡಿ. ಅದಕ್ಕೆ ಕಾರಣವಿಷ್ಟೇ ಕರ್ನಾಟಕದ ಐ  ಎ ಎಸ್ ಅಧಿಕಾರಿ ಡಿ ಕೆ ರವಿಯವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಮೇಲೆ ಅವರ ಕುರಿತಾಗಿ ಟಿ ವಿ ವಾಹಿನಿಗಳಲ್ಲಿ ವಿಶೇಷ ವರದಿಗಳು ಪ್ರಸಾರವಾಗುತ್ತಿದ್ದವು. ಅವರ ಹಿನ್ನೆಲೆಯ ಮೇಲೆ ವಿಶೇಷವಾಗಿ ಬೆಳಕು ಚೆಲ್ಲಲಾಗಿತ್ತು. ಅದಕ್ಕೆ ಕಾರಣ ಬಡತನದಲ್ಲಿಯೂ ಛಲದಿಂದ ಓದಿ ಸರ್ಕಾರಿ ಅಧಿಕಾರಿಯಾದ ಅವರ ದಾರಿ ಸುಲಭದ್ದಾಗಿರಲಿಲ್ಲ. ಕೇಂದ್ರ ಲೋಕ  ಸೇವಾ ಆಯೋಗದ ಪರೀಕ್ಷೆಯ ದೃಷ್ಟಿಯಿಂದ ಅಭ್ಯರ್ಥಿಯ ಹಿನ್ನೆಲೆ ಯಾವುದೇ ಆಗಿದ್ದರೂ ಪರೀಕ್ಷೆಯ ತಯಾರಿ ಸಾಮಾನ್ಯವಾದುದಂತೂ ಅಲ್ಲ. ಇಡೀ ಪ್ರಪಂಚದಲ್ಲಿಯೇ ಇರುವ ಕೆಲವು ಕಠಿಣ ಪರೀಕ್ಷೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಗಳು ದೇಶದ ಎಲ್ಲಾ ಪ್ರತಿಭೆಗಳನ್ನು ಸಮಾನವಾಗಿ ಪಣಕ್ಕಿಟ್ಟು ಅಳೆಯುವ ಮಾರ್ಗವಾಗಿವೆ. ಡಿ ಕೆ ರವಿಯವರ ಬಗ್ಗೆ ತಿಳಿದುಕೊಂಡಂತೆಲ್ಲಾ ಅವರ ಮೇಲಿನ ಹಾಗು ಆ ಹುದ್ದೆಯ ಮೇಲಿನ ಗೌರವ ನೂರು ಪಾಲು ಹೆಚ್ಚಾಯಿತು. ಅದಕ್ಕೆಂತಲೇ ತಯಾರಿ ಮಾಡುತ್ತಿರುವ  ದೇಶದ ಲಕ್ಷಾಂತರ ಯುವ ಜನರ ಮೇಲಿನ ಗೌರವವೂ ಹೆಚ್ಚಾಗಿದೆ. ನೊಂದವರ ರಕ್ತ ಹೀರಿ ಬಾರೀ ಕುಳಗಳಾಗಿ ಮೆರೆಯುವ ಅಧಿಕಾರಿ ವರ್ಗದವರ ನಡುವೆ ದೇಶ ಸೇವೆಗೆ ಮುಂದಾಗುವ ಬಡ ಜನರ ಮಕ್ಕಳೂ ಸಾಧನೆಗೈದು ಅಧಿಕಾರ ಪಡೆದುಕೊಂಡಾಗ ದೇಶದ ಬುಡಮಟ್ಟದಿಂದ  ಬೆಳವಣಿಗೆ ಸಾಧ್ಯವಿದೆ .

ಅಂದು ನನಗೆತಿಳಿಯಿತು ದೇಶ ಸೇವೆಗೆ ಸಮರ್ಪಣೆಯಾಗುವ ಹೂವುಗಳು ನಮ್ಮ ನಡುವೆಯೇ ಬೆಳೆಯುತ್ತವೆ ಹೊರತು ಆಕಾಶದಿಂದ ಧುಮುಕುವುದಿಲ್ಲವೆಂದು!.

ಶನಿವಾರ, ಜನವರಿ 21, 2017

ಕರ್ನಾಟಕ ರಾಜ್ಯ ಬಿ ಜೆ ಪಿ ಅವಸಾನದ ಹಾದಿಯಲ್ಲಿ

ಕರ್ನಾಟಕದಲ್ಲಿ ಹಿಂದಿನ ಸರ್ಕಾರ ಬಿ ಜೆ ಪಿ ಕೈಯಲ್ಲಿದ್ದಾಗ ರೆಸಾರ್ಟ್ ರಾಜಕೀಯ ದಿಂದ ಆರಂಭವಾಗಿ ಸಾಲು ಸಾಲು ಮಂತ್ರಿಗಳು ಜೈಲು ಕಂಡು ಹಿಂದಿರುಗಿ ಬರುವಾಗ ಕರ್ನಾಟಕ ರಾಜ್ಯ ಕಾಂಗ್ರೆಸ್ ಮೌನ ತಳೆದಿತ್ತು. ಕಾರಣ ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಅದಕ್ಕೆಲ್ಲ ತಕ್ಕ ಪಾಠ ಎನ್ನುವಂತೆ ೨೦೧೩ ರ ವಿಧಾನಸಭಾ ಚುನಾವಣೆಯಲ್ಲಿ ಬಿ ಜೆ ಪಿ ಯಿಂದ ಸರ್ಕಾರ ಕಾಂಗ್ರೆಸ್ ಪಾಲಾಯಿತು. ಇದೀಗ ರಾಜ್ಯ ಕಾಂಗ್ರೆಸ್  ಸರ್ಕಾರದಲ್ಲಿ ಹಲವಾರು ಋಣಾತ್ಮಕ ವಿದ್ಯಮಾನಗಳು ಜರುಗುತ್ತಿದ್ದರೂ(ವಯಕ್ತಿಕವಾಗಿ ನನಗೆ ಆಘಾತ ಉಂಟು ಮಾಡಿದ್ದು ಲೋಕಾಯುಕ್ತವನ್ನು ಇಲ್ಲದಂತೆ ಮಾಡಿದ್ದು) ಬಿ ಜೆ ಪಿ ಮೌನ ತಳೆದಿದೆ. ಕಳೆದ ಚುನಾವಣೆಯಂತೆ ಕರ್ನಾಟಕದ ಜನ ಮೌನವಾಗಿರುವ ಪಕ್ಷದ ಜನರಿಗೆ ವೋಟಿನ ಬಟ್ಟನ್ನೊತ್ತಿ ತಮ್ಮನ್ನೇ ಚುನಾಯಿಸಿ ಬಿಡುತ್ತಾರೆ ಎಂಬ ಭ್ರಮಾ ಲೋಕ ಸೃಷ್ಟಿಸಿಕೊಂಡು ಕೂತಿದ್ದಾರೆ ಕರ್ನಾಟಕ ರಾಜ್ಯ ಬಿ ಜೆ ಪಿ ವರಿಷ್ಠರು. ಅತ್ತ ಕೇಂದ್ರದಲ್ಲಿ ನರೇಂದ್ರ ಮೋದಿ ಕಾಲಿಗೆ ಚಕ್ರ ಕಟ್ಟಿಕೊಂಡು ದೇಶದ ಒಳಗೂ ಹೊರಗೂ ಸುತ್ತಿ ದೇಶಕ್ಕಾಗಿ ದಿನಕ್ಕೆ ೧೮ ಗಂಟೆ ದುಡಿಯುತ್ತಿದ್ದಾರೆ, ಇತ್ತ ರಾಜ್ಯದಲ್ಲಿ ಕಾವೇರಿ ವಿವಾದ ಭುಗಿಲೆದ್ದಾಗ ಮುಖ್ಯಮಂತ್ರಿಗಳು ಕರೆದ ಸರ್ವ ಪಕ್ಷ ಸಭೆಯನ್ನು ಬಹಿಷ್ಕರಿಸಿ ಬಿ ಜೆ ಪಿ ಜಾಣ ಮೌನ ಪ್ರದರ್ಶಿಸಿತು. ಅಂತಹ ಸಮಯದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ನಡೆದುಕೊಂಡ ರೀತಿ ಸ್ತುತ್ಯಾರ್ಹ. ಅದು ಬರೀ ನಡೆಯಲ್ಲಿ ಮುತ್ಸದ್ದಿತನ, ನಿಜವಾದ ರೈತ ಕಾಳಜಿ. ಅದಕ್ಕೆ ಧನಾತ್ಮಕವಾಗಿ ಪತಿಕ್ರಿಯಿಸಿದ ನರೇಂದ್ರ ಮೋದಿಯವರ ನಡೆಯು ಕನ್ನಡ ನಾಡಿನ ಪಾಲಿಗೆ ಆಶಾದಾಯಕ. ಕರ್ನಾಟಕದ ರೈತರ ದೃಷ್ಟಿಯಿಂದ ದೇವೇಗೌಡರಿಗೆ ಇನ್ನಿಲ್ಲದ ಗೌರವ ಸಲ್ಲಬೇಕು, ಅಂತೆಯೇ ದೇಶದ ಸರ್ವಾಂಗೀಣ ಬೆಳವಣಿಗೆಗೆ ಪಣ ತೊಟ್ಟಿರುವ ನರೇಂದ್ರ ಮೋದಿಯವರಿಗೂ ಕನ್ನಡಿಗರ ಬಲ ಗೌರವ ಸಂದಬೇಕು. ಆದರೆ ತಮ್ಮ ತಮ್ಮಲ್ಲೇ ಕಚ್ಚಾಡಿಕೊಂಡು ಈಗಲೂ ಬಡಿದಾಡುತ್ತಿರುವ ರಾಜ್ಯ ಬಿ ಜೆ ಪಿ ಯನ್ನು ದಾರಿಗೆ ತರುವರ್ಯಾರು?......ಇಂತಹ ಸನ್ನಿವೇಶದಲ್ಲಿ ಕನ್ನಡ ನಾಡಿಗೆ   ವರವಾಗಿ ನಿಲ್ಲಬಲ್ಲ ರಾಜಕೀಯ ಪಕ್ಷವಾವುದು?....ಎಲ್ಲ ನಿಮ್ಮಿಚ್ಛೆಗೆ ಬಿಟ್ಟಿದ್ದು. ಈಗ ಮುಂದಿನ ಚುನಾವಣೆಯಲ್ಲಿ ಬುದ್ಧಿವಂತರಾಗುವ ಸರದಿ ನಿಮ್ಮದು.

ಶನಿವಾರ, ಡಿಸೆಂಬರ್ 31, 2016

ಮಿನುಗು ತಾರೆಯ ಮರಣ ಪತ್ರ

ಕನ್ನಡ ನಾಡಿನಲ್ಲಿ  ಈವತ್ತು ಮಿನುಗು ತಾರೆ ಎಂದರೂ ನೆನಪಾಗುವುದು ನಟಿ ಕಲ್ಪನಾ ಮಾತ್ರ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾದ ಕಲ್ಪನಾ ಹೆಸರಿಗೆ ತಕ್ಕಂತೆ ಕನ್ನಡ ಚಿತ್ರ ಜಗತ್ತಿನಲ್ಲಿ ಕೆಲವೇ ಕೆಲವು ಕಾಲ ಮಿನುಗಿ ಮರೆಯಾಗಿ ಹೋದವರು.  ಕಲ್ಪನಾ ನಮ್ಮಿಂದ ಮರೆಯಾಗಿ ಇನ್ನೆರಡು-ಮೂರು ವರ್ಷಗಳಲ್ಲಿ ನಾಲ್ಕು ದಶಕ ಸಂದುಬಿಡಲಿದೆ. ಚಿತ್ರಗಳಲ್ಲಿ ಜನರೆಲ್ಲರೂ ತೆರೆಯ ಮೇಲೆ ಕಾಣುವಂತೆ ನಟಿಯ ನಿಜ ಜೀವನದಲ್ಲಿಯೂ ಹಲವು ಸಿನಿಮೀಯ ಘಟನೆಗಳು ನಡೆದು ಆಕೆಯನ್ನು ಮಾನಸಿಕವಾಗಿ ಝರ್ಜರಿತಳನ್ನಾಗಿ ಮಾಡಿ ಕೊನೆಗೊಂದು ದಿನ ಸಾವಿನ ಮನೆಯ ಅತಿಥಿಯಾಗಿದ್ದು ಇದೀಗ ದುರಂತ ಇತಿಹಾಸ. 

ಸಿನಿಮಾ ಹಾಗು ನಾಟಕ ರಂಗ ಎರಡನ್ನು ತೀರಾ ಹತ್ತಿರದಿಂದ ಬಲ್ಲ ಕಲ್ಪನಾರಿಗೆ ಮೇಲ್ನೋಟಕ್ಕೆ ಆರ್ಥಿಕ ತೊಂದರೆಗಳು ಭಾದಿಸಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಇನ್ನಿತರ ವಯಕ್ತಿಕ ತೊಂದರೆಗಳಿದ್ದರೂ ಅವುಗಳೆಲ್ಲವನ್ನೂ ನಿಭಾಯಿಸಿ ಅಭಿಮಾನಿಗಳೆದುರಲ್ಲಿ ಗಟ್ಟಿಗಿತ್ತಿ ಎನ್ನಿಸಿಕೊಳ್ಳಬಹುದಿತ್ತು. ಆ ಮೂಲಕ ತಮ್ಮ ಎಷ್ಟೋ ಅಭಿಮಾನಿಗಳ ಜೀವನದಲ್ಲೂ ಒಂದು ಮಾದರಿಯಾಗಿ ನಿಲ್ಲಬಹುದಿತ್ತು. ಆದರೆ ನಡೆದಿದ್ದು ಒಂದೂ ಹೀಗಿಲ್ಲವಲ್ಲ!!. ಬೆಳಗಾವಿಯ ಸಂಕೇಶ್ವರದ ಬಳಿಯ ಗೋಟೂರು ಪ್ರವಾಸಿ ಮಂದಿರದಲ್ಲಿ ನಾಟಕ ಪ್ರದರ್ಶನಗಳ ನಿಮಿತ್ತ ಉಳಿದುಕೊಂಡಿದ್ದ ಕಲ್ಪನಾ ಅಲ್ಲಿಯೇ ಆತ್ಮಹತ್ಯೆ ಮಾಡಿಕೊಂಡು ನಿಜ ಜೀವನದಲ್ಲಿಯೂ ದುರಂತ ನಾಯಕಿಯಾಗಿದ್ದರು. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಕಲ್ಪನಾ ತಮ್ಮ ಕೈಲಿದ್ದ ವಜ್ರದ ಉಂಗುರ ವನ್ನು ಸುತ್ತಿಗೆಯಿಂದ ಕುಟ್ಟಿ ಪುಡಿ ಮಾಡಿ ಸೇವಿಸಿದ್ದು ಸಾವಿಗೆ ಕಾರಣ ಎಂದು ಉಲ್ಲೇಖಿತವಾಗಿದೆ. ಮರಣೋತ್ತರ ಪರೀಕ್ಷೆಯಲ್ಲೂ ಅದೇ ದೃಢ ಪಟ್ಟಿದೆ. ಆದರೆ ಕಲ್ಪನಾ ಚಿಕ್ಕಮ್ಮ ಪ್ರಕಾರ ಕಲ್ಪನಾ ರು ಸೇವಿಸಿದ್ದರೆನ್ನಲಾದ ವಜ್ರದುಂಗುರ ಅವರದೇ ಅಲ್ಲವಂತೆ.  ಮುಖದ ಮೇಲೆ ಆಗಿದ್ದ ಗಾಯವೂ ಅನುಮಾನಾಸ್ಪದವಾಗಿದ್ದು ಆ ಬಗ್ಗೆ ಇನ್ನೂ ಹೆಚ್ಚಿನ ತನಿಖೆಯಾಗಬೇಕು ಎನ್ನುವುದು ಕುಟುಂಬ ಸದಸ್ಯರ ಆಗ್ಗಿನ ಬೇಡಿಕೆಯಾಗಿತ್ತಂತೆ. 

ಬೇಡಿಕೆಗಳು, ಹೇಳಿಕೆಗಳು, ಕೇಳಿಕೆಗಳು, ಮನವಿಗಳೂ ಏನೇ ಆದರೂ ಒಳ್ಳೆಯ ಹೆಂಡತಿಯಾಗಿ, ಪ್ರೀತಿಯ ಪತ್ನಿಯಾಗಿ, ಮಾನಸಿಕ ಅಸ್ವಸ್ಥೆಯಾಗಿ, ದೇವರೇ ಕೊಟ್ಟಂತಹ ತಂಗಿಯಾಗಿ, ಪೌರಾಣಿಕ ಪಾತ್ರಗಳಲ್ಲಿ ಐತಿಹಾಸಿಕ ಪಾತ್ರಗಳಲ್ಲಿ ಗತ ಕಾಲದ ಹೆಣ್ಣಾಗಿ ನಟಿಸಿ ಕನ್ನಡಿಗರ ಮನಸಿನೊಳಗೆ ಇಳಿದು ಆಯಾ ಪಾತ್ರಗಳ ಮೂಲಕವೇ ಜ್ಞಾಪಕದಲ್ಲಿದ್ದ ಕಲ್ಪನಾ ಅದಾಗಲೇ ಜೀವನ ರಂಗದಿಂದಲೂ ತೆರೆ ಮರೆಗೆ ಸರಿದು ಹೋಗಿಯಾಗಿತ್ತು. ಅಲ್ಲಿಗೆ ಕನ್ನಡಿಗರ ಕಲಾ ಪ್ರಚಾರಕಿಯೊಬ್ಬಳು ಕಲಾ ಪ್ರಪಂಚದಿಂದ ಬಹು ದೂರ ಪಯಣಿಸಿಬಿಟ್ಟಿದ್ದಳು. ಅಂದು ಕಲ್ಪನಾ ಜೀವನದಲ್ಲಿ ನಡೆದ ದುರಂತ ಬರೀ ಆಕೆಯ ಪಾಲಿಗೆ ದುರಂತವಾಗದೆ ಕನ್ನಡ ಚಿತ್ರರಂಗದ ಪಾಲಿಗೆ ದುರಂತವಾಗಿ ಹೋಗಿದ್ದು ಸುಳ್ಳಲ್ಲ.  

ಇಂತಹ ಮಿನುಗು  ತಾರೆ ತಮ್ಮ ಇಹಲೋಕ ಯಾತ್ರೆ ಮುಗಿಸುವ ಮೊದಲು ತಮ್ಮ ಕುಟುಂಬ ಸದಸ್ಯರಿಗೂ, ಪೊಲೀಸ್ ಅಧಿಕಾರಿಗಳಿಗೂ ಬರೆದ ಪತ್ರ ಎಲ್ಲೋ ಸಿಕ್ಕಿತು. ಅದನ್ನೇ ಯಥಾವತ್ತಾಗಿ ಸಾದರಿಸಿದ್ದೇನೆ.
                                                              ***  
ಅಮ್ಮ,
ನಿನ್ನೆನಿಮಗೆ 1,200 ರೂಪಾಯಿಗಳನ್ನು ಮನಿಯಾರ್ಡರ್ ಕಳುಹಿಸಿದ್ದೇನೆ.ಈವತ್ತು  300 ರೂಪಾಯಿಗಳ ಡ್ರಾಫ್ಟ್ ಅನ್ನು ಕಳುಹಿಸುತ್ತಿದ್ದೇನೆ. ನನ್ನ ಗಂಟಲು ನೋವಿನಿಂದ ಆಗಾಗ ನಾಟಕಗಳು ನಿಲ್ಲುತ್ತಾ ಇವೆ. ದೇವರೇ ನನ್ನ ಕಾಪಾಡಬೇಕು. ಬಾಬನಿಗೂ ಈವತ್ತು  400 ರೂಪಾಯಿಗಳನ್ನು ಕಳುಹಿಸುತ್ತಿದ್ದೇನೆ. ಮಿಕ್ಕ ಹಣವನ್ನು ಅವನಿಗೆ ಇನ್ನೆರಡುದಿನಗಳಲ್ಲಿ ಕಳುಹಿಸುತ್ತೇನೆ.

ನೀವೂ ಚಿಕ್ಕಮ್ಮ ಆರೋಗ್ಯವೆಂದು ನಂಬಿದ್ದೇನೆ. ಗಂಟಲಿನ ತೊಂದರೆ ಇಲ್ಲದಿದ್ದರೆ ಬೇರೆ ಎಲ್ಲ ವಿಚಾರಗಳಲ್ಲೂ ನಾನೂ ಆರೋಗ್ಯವಾಗಿದ್ದೇನೆ. ತಿಂಗಳ ಕೊನೆಯಲ್ಲಿ ಊರಿಗೆ ಬರುತ್ತೇನೆ. ಇಲ್ಲಿಂದ ಮುಂದೆ ಬಿಜಾಪುರ ಅಥವಾ ಜಮಖಂಡಿಗೆ ಹೋಗುತ್ತಿದ್ದೇವೆ. ಊರು ಸೇರಿದ ಮೇಲೆ ಪತ್ರ ಬರೆಯುತ್ತೇನೆ. ನಿಮ್ಮ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ.

                                                                                                     ಇಂತಿ ನಿಮ್ಮ ಮಗಳಾದ
                                                                                                                  ಕಲ್ಪನಾ.

                                                              ***
ಮಾನ್ಯ ಪೊಲೀಸ್ ಅಧಿಕಾರಿಗಳಿಗೆ,
ನಿಮಗೆ ನನ್ನ ಕೊನೆಯ ನಮಸ್ಕಾರಗಳು. ನನಗೆ ಹೋದಲ್ಲಿ ಬಂದಲ್ಲಿ ತಕ್ಕ ಕಾವಲು ಕೊಟ್ಟು ನನ್ನ ಗೌರವಕ್ಕೆ ತುಸು ಧಕ್ಕೆ ಬಾರದಂತೆ ಕಾಪಾಡಿದ ನಿಮಗೆ ಇದೋ ನನ್ನ ಅನಂತ ಕೃತಜ್ಞತೆಗಳು.

ನನ್ನ ಮುಖದ ಮೇಲಿರುವ ಗಾಯಗಳನ್ನು ನೋಡಿ ನೀವು ಆಶ್ಚರ್ಯ ಪಡಬಹುದು ಅಲ್ಲವೇ?. ನಿನ್ನೆ ನಾಟಕಕ್ಕೆ ಹೋಗುವಾಗ ಆಕಸ್ಮಿಕವಾಗಿ ಕಾರಿಗೆ ಅಡ್ಡ ಬಂದ ಹಸು ಕಾಪಾಡುವುದಕ್ಕಾಗಿ ಹಾಕಿದ ಸಡನ್ ಬ್ರೇಕ್ ನಿಂದಾಗಿ ನನ್ನ ಮುಖ ಎದುರಿನ ಸೀಟಿಗೆ ಬಡಿದು ಮುಖದಲ್ಲಿ ಗಾಯಗಳಾಗಿವೆ.

ಸಾವು, ನಿಜ. ಇದು ನಾನು ಸಂತೋಷದಿಂದ ಬರಮಾಡಿಕೊಂಡ ಸಾವು. ಇದಕ್ಕೆ ಯಾರೂ ಕಾರಣರಲ್ಲ.ಬದುಕು ಸಾಕೆನಿಸಿತು. ತೀರದ ನಿದ್ರೆಯಲ್ಲಿ ಮುಳುಗಿರಬೇಕೆನಿಸಿತು. ಇದು ನನ್ನ ಮನಸ್ಸಿಗೆ ಎಷ್ಟೋ ಆನಂದ, ನೆಮ್ಮದಿ, ಸುಖ ಸಂತೋಷಗಳನ್ನು ತಂದಿದೆ. ನಾನಿಂದು ಪರಮ ಸುಖಿ.

ನನ್ನ ಅಭಿಮಾನಿಗಳೆಲ್ಲರಿಗೂ, ಅಭಿಮಾನಿಗಳಲ್ಲದವರಿಗೂ ಇದೋ ನನ್ನ ಕೊನೆಯ ನಮಸ್ಕಾರ. ಜೀವನದಲ್ಲಿ ಏನೇನು ಮಾಡಿ ಮುಗಿಸಬೇಕೆಂದಿದ್ದೇನೋ ಅದನ್ನೆಲ್ಲ ದೇವರ ದಯದಿಂದ ಮಾಡಿ ಮುಗಿಸಿದ್ದೇನೆ. ಒಳ್ಳೆಯ ಉತ್ತಮವಾದ ಕನ್ನಡ ಚಿತ್ರವೊಂದನ್ನು ನಿರ್ಮಾಣ ಮಾಡುವ ಆಸೆ ಈವತ್ತು ನನ್ನ ಜೊತೆಯಲ್ಲಿಯೇ ಸಾಯುತ್ತಿದೆ. ದೈವೇಚ್ಛೆ !!!

ಬದುಕು ಜಟಕಾ ಬಂಡಿ
ವಿಧಿ ಅದರ ಸಾಹೇಬ
ಮದುವೆಗೋ ಮಸಣಕೋ
ಹೋಗೆಂದ ಕಡೆ ಹೋಗು
ಮಂಕುತಿಮ್ಮ.

                                                                                                                             -ಇತಿ

                                                                                                                                  ಕಲ್ಪನಾ

ಭಾನುವಾರ, ಡಿಸೆಂಬರ್ 18, 2016

ಅವರೂ ನಮ್ಮೊಳಗೊಬ್ಬರಾದರು

ಹತ್ತನೇ ಶತಮಾನದ ಆಸುಪಾಸಿಗೆ ಈಗಿನ ಇರಾನ್ ತನ್ನನ್ನು ಪರ್ಷಿಯಾ ಎಂದು ಕರೆಸಿಕೊಳ್ಳುತ್ತಿತ್ತು. ಝೋರೆಸ್ಟ್ರಿಯನ್ ಗಳು ಅಲ್ಲಿನ ಮುಖ್ಯ ಜನಾಂಗವಾಗಿ ಗುರುತಿಸಿಕೊಂಡಿದ್ದರು. ಮುಸ್ಲಿಂ ದೊರೆಗಳು ಕ್ರಮೇಣ ಪರ್ಷಿಯಾ ದೇಶವನ್ನು ಆಕ್ರಮಿಸಿಕೊಳ್ಳತೊಡಗಿದಾಗ, ಝೋರೆಸ್ಟ್ರಿಯನ್ನರು ಅವರ ಆಟಾಟೋಪಗಳನ್ನು ತಡೆಯದಾದರು. ಪ್ರಪಂಚದಲ್ಲಿ ಅಸ್ತಿತ್ವದಲ್ಲಿರುವ ಧರ್ಮಗಳಲ್ಲಿ ಮುಸ್ಲಿಂ ಧರ್ಮವೊಂದೇ ಅತಿ ಶ್ರೇಷ್ಠ, ಕಂಡ ಕಂಡವರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡುವುದು ಯಾರಾದರೂ ಅದಕ್ಕೆ ನಿರಾಕರಿಸಿದರೆ ಅವರನ್ನು ಮುಗಿಸಿಬಿಡುವಂತಹ ಪಕ್ಕಾ ಸಂಪ್ರದಾಯವಾದಿ ಮುಸ್ಲಿಂ ಜನಾಂಗ(ಎಲ್ಲ ಮುಸ್ಲಿಂ ಜನಾಂಗ ಹೀಗಿಲ್ಲ, ಈ ಹೇಳಿಕೆ ಕೇವಲ ಧರ್ಮಾಂದ ದೊರೆಗಳು ಹಾಗು ಅವರ ಅನುಯಾಯಿಗಳಿಗೆ  ಮಾತ್ರ ಅನ್ವಯಿಸುತ್ತದೆ.) ನಿಧಾನಕ್ಕೆ ಪರ್ಷಿಯಾ ದೇಶದಲ್ಲಿ ಬೀಡು ಬಿಡಲು ಆರಂಭಿಸಿತು.
ಅರಬ್ ದೊರೆಗಳ ಹಲವಾರು ದಾಳಿಗೆ ಮೂಲ ಪರ್ಷಿಯನ್ನರು ಪ್ರತಿರೋಧ ಒಡ್ಡಿದರೂ ಅದು ಮುಗಿಯದ ಕಥೆಯಾಗಿ ಹೋಯಿತು. ಈಗಿನಂತೆ ಆಗ ವಿಶ್ವಸಂಸ್ಥೆಯಿಲ್ಲ. ಸಹಾಯಕ್ಕಾಗಿ ಕೂಗಿದರೆ ಬಂದವರು ಮುಂದೊಂದು ದಿನ ಅವರೇ ವೈರಿಗಳಾಗಿ ಆ ದೇಶವನ್ನು ನುಂಗಿ ನೀರು ಕುಡಿಯುವ ಭಯವಂತೂ ಇದ್ದೇ ಇತ್ತು. ತಮ್ಮ ಗಡಿ ಉಲ್ಲಂಘಿಸಿ ಒಳನುಗ್ಗಲು ಯತ್ನಿಸುತ್ತಿದ್ದ ಅರಬ್ ದೊರೆಗಳನ್ನು ಝೋರೆಸ್ಟ್ರಿಯನ್ನರು ತಡೆದಿದ್ದು ಬರೋಬ್ಬರಿ 200 ವರ್ಷಗಳ ಕಾಲ.  ಈ ಸಮಯವನ್ನು 'ಪರ್ಷಿಯನ್ ಸಾಮ್ರಾಜ್ಯದ ಎರಡು ಶತಮಾನಗಳ ನಿಶ್ಯಬ್ದತೆ' ಎಂದೇ ವರ್ಣಿಸಲಾಗಿದೆ.
                                           ಕ್ರಿ.ಪೂ ೫೦೦ ರಲ್ಲಿ ಪರ್ಷಿಯಾ ಸಾಮ್ರಾಜ್ಯ

ಧರ್ಮಬದ್ಧರಾದ ಅಲ್ಲಿನ ಮುಸ್ಲಿಮರಿಂದ ವಿಪರೀತ ಹಾನಿಗೊಳಗಾದ ಝೋರೆಸ್ಟ್ರಿಯನ್ನರು ಕೆಲವಾರು ಜನ ಪ್ರಾಣಕ್ಕೆ ಹೆದರಿ ಮತಾಂತರವಾದರೂ, ಕೆಲವರು ದೇಶ ತೊರೆದು ಪೂರ್ವ ದೇಶಗಳತ್ತ ವಲಸೆ ಹೊರಟು ಹೋದರು. ಬರಗಾಲ, ದಾಳಿ, ಅಂಟುರೋಗಗಳಿಗೆ ಹೆದರಿ ಊರು ಬಿಡುತ್ತಿದ್ದ ಪ್ರಕರಣಗಳನ್ನು ಕೇಳಿದ್ದೇವೆ, ಆದರೆ ಧರ್ಮವೊಂದರ ಕಟ್ಟುಬದ್ಧತೆಗೆ ಬಲಿಯಾಗಿ ದೇಶ ಬಿಡುವ ಧೌರ್ಬಾಗ್ಯ ಝೋರೆಸ್ಟ್ರಿಯನ್ನರದ್ದಾಯಿತು. ಹಾಗಲ್ಲದಿದ್ದರೆ ಧರ್ಮಾಂತರವಾಗುವುದು, ಅದೂ ಇಲ್ಲದಿದ್ದರೆ ಪ್ರಾಣ ಬಿಡುವುದೊಂದೇ ಝೋರೆಸ್ಟ್ರಿಯನ್ ಸಮುದಾಯಕ್ಕೆ ಉಳಿದುಕೊಂಡ ಆಯ್ಕೆಗಳಾದವು. ಪರ್ಷಿಯಾ ದಿಂದ ಕಾಲ್ಕಿತ್ತು ಪೂರ್ವಕ್ಕೆ ಗುಳೇ ಹೊರಟ ಝೋರೆಸ್ಟ್ರಿಯನ್ನರಿಗೆ ಕಂಡಿದ್ದು ಸಿಂಧೂ  ನದಿಯಿಂದಾಚೆಗೆ ಹಿಂದೂ ಮಹಾ ಸಾಗರದ ವರೆವಿಗೂ ವಿಸ್ತಾರವಾಗಿ ಹರಡಿಕೊಂಡಿದ್ದ ಭಾರತ, ಕ್ಷಮಿಸಿ ಬರೀ ಭಾರತವಲ್ಲ 'ಅಖಂಡ ಭಾರತ'.

ಎಲ್ಲೆಲ್ಲೂ ಹಿಂದೂ ಮಹಾ ಸಂಸ್ಥಾನಗಳು, ರಾಜ್ಯಗಳು, ಪ್ರಜೆಗಳನ್ನು ಮಕ್ಕಳೆಂದುಕೊಂಡು ರಾಜೋಚಿತ ಜವಾಬ್ದಾರಿ ಮೆರೆದಿದ್ದ ಸಂಸ್ಥಾನಿಕ ರಾಜರು. ಎಲ್ಲೆಲ್ಲೂ ಸುಭೀಕ್ಷ ಆಡಳಿತ. ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಹಿಂದೂ ಧರ್ಮದ ಹೆಮ್ಮೆಯ ಸ್ಥಳಗಳು, ನೀರು ಕೇಳಿದರೆ ಮಜ್ಜಿಗೆಯನ್ನೇ ಕುಡಿದು ಊಟ ಮಾಡಿಕೊಂಡು ಹೋಗಿ ಎನ್ನುವಷ್ಟು ಸುಶಿಕ್ಷಿತ ಅತಿಥಿ ಸತ್ಕಾರ, ಅತಿಥಿಗಳೆಂದರೆ ಇನ್ನಿಲ್ಲದ ಭಕ್ತಿ. ತಮಗೆ ತೊಂದರೆ ಮಾಡಿಕೊಂಡು ಅತಿಥಿಗಳನ್ನು ಪೊರೆದ ಅದೆಷ್ಟೋ ಕಥೆಗಳು, ಶರಣು ಬಂದವರನ್ನು ರಕ್ಷಿಸದಿರುವುದು ಹೇಡಿತನದ ಸಂಕೇತವೆನ್ನುವುದು ರಾಮಾಯಣ ಕಾಲದಿಂದಲೇ ಎಲ್ಲಾ ಭಾರತೀಯ ತಂದೆ ತಾಯಿಗಳು ತಮ್ಮ ಮಕ್ಕಳಿಗೆ ಹೇಳಿಕೊಟ್ಟಿದ್ದ ಬುದ್ಧಿ. ಇಂತಹವೆಲ್ಲ ಇನ್ನು ಎಷ್ಟೆಷ್ಟೋ ಭಾರತೀಯತೆಯ ಆಂತರ್ಯದಲ್ಲಿ ಅಡಗಿಕೊಂಡು ಕುಳಿತುಬಿಟ್ಟಿವೆ. ಅಂತೂ ಅವನ್ನೆಲ್ಲ ಕಂಡು ಝೋರೆಸ್ಟ್ರಿಯನ್ನರು ಹಿಗ್ಗಿ ಹೋದರು. ಕಷ್ಟ ಕಾಲದಲ್ಲಿ ಭಾರತೀಯರು ಆಗಬಹುದೇನೋ ಎಂದು ಬಗೆದು ಬಂದಿದ್ದ ಅವರ ಅನಿಸಿಕೆ ಸುಳ್ಳಾಗಲಿಲ್ಲ. ಸಿಂಧೂ ನದಿ ದಾಟಿದ ಝೋರೆಸ್ಟ್ರಿಯನ್ನರು ಸಿಂಧೂ ಗೆ ಹೊಂದಿಕೊಂಡಂತೆಯೇ ಇದ್ದ ಈಗಿನ ಪಾಕಿಸ್ತಾನದ ಸಿಂಧ್ ಹಾಗು ಭಾರತದ ಗುಜರಾತ್ ಪ್ರಾಂತ್ಯಗಳಲ್ಲಿ ಬೀಡು ಬಿಡಲು ಆರಂಭಿಸಿದರು.

ಪರ್ಷಿಯಾ ದೇಶದಿಂದ ಬಂದಿದ್ದರಿಂದ ಇವರನ್ನು ಪರ್ಷಿಯನ್ನರು / ಪಾರ್ಸಿಗಳು ಎಂದು ಕರೆಯಲಾಯಿತು. ಅಂದಿನಿಂದ ಝೋರೆಸ್ಟ್ರಿಯನ್ ಎಂಬ ಹೆಸರಿಗೆ ಬದಲಾಗಿ ಪಾರಸೀ ಎಂಬ ಹೆಸರೇ ಈ ಜನಾಂಗಕ್ಕೆ ಅಂಟಿ ಹೋಯಿತು.

ಗುಜರಾತ್ ಪ್ರಾಂತದ ಆಗಿನ ಅರಸ ಜಾದಿ ರಾಣಾ ಪಾರ್ಸಿಗಳನ್ನು ಬರಮಾಡಿಕೊಂಡ ರೀತಿಯೇ ವಿಭಿನ್ನ. ರಾಣಾ ತನ್ನ ರಾಯಭಾರಿಯನ್ನು ಕರೆದು ಅವನಲ್ಲಿ ಒಂದು ಹಂಡೆಗೆ ಕಂಠ ಪೂರ್ತಿ ಹಾಲು ತುಂಬಿಸಿ ಅದನ್ನು ಆಗಷ್ಟೇ ಪ್ರಾಂತಕ್ಕೆ ಬಂದು ಬೀಡು ಬಿಡುತ್ತಿದ್ದ ಪಾರ್ಸಿಗಳಿಗೆ ಕಳುಹಿಸುತ್ತಾನೆ. ಸಾಂಕೇತಿಕವಾಗಿ ಅದರ ಅರ್ಥ ಇಲ್ಲಿ ನಮಗೆ ಜಾಗವಿಲ್ಲ ತುಂಬಿಕೊಂಡಿದ್ದೇವೆ ಇನ್ನು ನಿಮ್ಮನ್ನೆಲ್ಲಿ ಪೋಷಿಸಲು ಸಾಧ್ಯ ಎಂದು. ಆದರೆ ಬುದ್ಧಿವಂತಿಕೆಯಲ್ಲಿ ತೀಕ್ಷ್ಣಮತಿಗಳಾಗಿರುವ ಪಾರ್ಸಿಗಳು ತುಂಬಿದ ಹಂಡೆ ಹಾಲಿಗೆ ಮಣಗಟ್ಟಲೆ ಸಕ್ಕರೆ ಸುರಿದು 'ನಾವೂ ನಿಮ್ಮ ನಡುವೆ ಹೀಗೆ ಅಂದರೆ ಹಾಲಿನಲ್ಲಿ ಸಕ್ಕರೆ ಬೆರೆತಂತೆ ಬೆರೆಯುತ್ತೇವೆ' ಎಂಬ ಸಂದೇಶವನ್ನು ಕೊಟ್ಟು ಕಳುಹಿಸಿದರು. ನಡೆಯಿಂದ ಸಂತೋಷಭರಿತನಾದ ರಾಣಾ ಕೂಡಲೇ ತ್ವರೆ ಮಾಡಿ ಪಾರಸೀ ಪ್ರಮುಖರನ್ನು ಭೇಟಿಯಾಗಿ ಆತನ ಪ್ರಾಂತದಲ್ಲಿ ಇರಲು ಕೆಲವು ಷರತ್ತುಗಳನ್ನು ಹಾಕಿದನು. ಪಾರ್ಸಿಗಳು ಹಿಂದೂ ಮುಂದೂ ನೋಡದೆ  ಅವುಗಳನ್ನು ಒಪ್ಪಿಕೊಂಡರೂ ಕೂಡ
ಷರತ್ತುಗಳೆಂದರೆ,
1. ಅವರ ಧರಿಸಿನ ಶೈಲಿ ಮೂಲ ಪಾರಸೀ ಶೈಲಿಯನ್ನು ಹೋಲದೆ ಸ್ಥಳೀಯ ಶೈಲಿಯಿಂದ ಕೂಡಿರಬೇಕು.
2. ವ್ಯಾಪಾರವೇ ಪಾರಸೀಗಳ ಮುಖ್ಯ ಕಸುಬಾದ್ದರಿಂದ ಸ್ಥಳೀಯ ಭಾಷೆಯಾದ ಗುಜರಾತಿಯನ್ನು ಖಡ್ಡಾಯವಾಗಿ ಕಲಿತು ಅದರಲ್ಲೇ ವ್ಯವಹರಿಸಬೇಕು.
3.ಆಹಾರ ಪದ್ಧತಿ ಸ್ಥಳೀಯರಂತೆಯೇ ಇರಬೇಕು, ಗೋಮಾಂಸ ಮತ್ತಿರ ಆಹಾರ ವಿಧಗಳನ್ನು ವರ್ಜಿಸಬೇಕು.

ಅವನು ಹಾಕಿದ ಷರತ್ತುಗಳಿಗೆಲ್ಲ ಮುಕ್ತ ಮನಸ್ಸಿನಿಂದ ಒಪ್ಪಿಕೊಂಡ ಪಾರ್ಸಿಗಳು ಇಂದಿಗೂ ದನದ ಮಾಂಸ ಮುಟ್ಟುವುದಿಲ್ಲ. ಕೆಲವಾರು ಜನರು ಅಭ್ಯಾಸ ರೂಢಿಸಿಕೊಂಡಿದ್ದರು ಧರ್ಮಬದ್ಧರಾದ ಗುಜರಾತ್ ಪ್ರಾಂತದ ಪಾರ್ಸಿಗಳು ದನದ ಮಾಂಸ ವರ್ಜಿಸಿದ್ದಾರೆ. ಅವರ ಉಡುಗೆ ಶೈಲಿ ಈಗಲೂ ಭಾರತೀಯರಂತೆ ಇದ್ದು ಹೊರಗಿನಿಂದ ಬಂದರೂ ನಮ್ಮೊಳಗೆ ಸೇರಿಕೊಂಡು ನಮ್ಮವರೇ ಆಗಿ ಹೋದ ಪಾರಸೀ ಜನಾಂಗದ ಒಂದು ಉತ್ತಮ ಅತ್ಯುತ್ತಮ ನಡೆ.

ಬಿ ಜೆ ಪಿ ವರಿಷ್ಠ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಭಾರತೀಯರ ಸಹಿಷ್ಣುತಾ ವಿಚಾರವಾಗಿ ಪದೇ ಪದೇ ಇಸ್ರೇಲ್ ದೇಶದ ನಡೆಯೊಂದನ್ನು ಪುನರುಚ್ಚರಿಸುತ್ತಿರುತ್ತಾರೆ. ಇಸ್ರೇಲ್ ದೇಶವು ತನ್ನ ಸಾಂವಿಧಾನಿಕ ಮೊದಲ ಅಧಿವೇಶನದಲ್ಲೇ ತನ್ನ ನೆಲದಿಂದ ಗುಳೆ ಹೊರಟ ಜನರನ್ನು ಅತ್ಯಾದರದಿಂದ ಬರ ಮಾಡಿಕೊಂಡು ಸಹಬಾಳ್ವೆಗೆ ಮಾದರಿಯಾಗಿ ನಿಂತ ಭಾರತೀಯರನ್ನು ಅಭಿನಂದಿಸಿದ ವಿಷಯ ಪ್ರಸ್ತಾಪ ಮಾಡುತ್ತಲೇ ಇರುತ್ತಾರೆಧಾರ್ಮಿಕ ಹಿನ್ನೆಲೆಯಲ್ಲಿ ಒಂದು ಧರ್ಮದ ಹೊಡೆತವನ್ನು ತಾಳಲಾಗದೆ ಅಲ್ಲಿಂದ ಕಾಲ್ಕಿತ್ತ ಜ್ಯುಯೂ ಜನಾಂಗವನ್ನು ಎಲ್ಲರೂ ತಿರಸ್ಕಾರ ಮನೋಭಾವದಿಂದಲೇ ಕಾಣುತ್ತ ಹೋದರು, ಆದರೆ ಬಿಗಿದಪ್ಪಿಕೊಂಡಿದ್ದು ಭಾರತ ಮಾತ್ರ. ಅದಕ್ಕೆ ಕಾರಣ ನಮ್ಮ ಉಪನಿಷತ್ತು, ಧರ್ಮಗ್ರಂಥ ಗಳಿಂದ ನಾವು ಕಲಿತ 'ಅತಿಥಿ ದೇವೋಭವ' ಎನ್ನುವ ಸಾಲು.

ಮಾತನ್ನು ಇಲ್ಲಿ ಪ್ರಸ್ತಾಪಿಸಲು ಕಾರಣವಿಷ್ಟೇ, ಮಧ್ಯ ಪ್ರಾಚ್ಯ ರಾಷ್ಟ್ರಗಳ ಮುಖಾಂತರ ಕೈಬರ್ ಕಣಿವೆ ದಾಟಿ ಭಾರತಕ್ಕೆ ಲಗ್ಗೆ ಇಟ್ಟ ಮುಸ್ಲಿಂ ದೊರೆಗಳು ಬಲವಂತದಿಂದ ಇಲ್ಲಿನ ರಾಜರುಗಳ ಮೇಲೆ ಅಧಿಕಾರ ಚಲಾಯಿಸಿ ಇಡೀ ದೇಶವನ್ನೇ ತಮ್ಮ ತೆಕ್ಕೆಗೆ ತೆಗೆದುಕೊಂಡು ಆಡಳಿತ ನಡೆಸಿದರೂ ಇಲ್ಲಿನ ಜನರಿಗೆ ಅಂದರೆ ಮೂಲ ಭಾರತೀಯರಿಗೆ ಅವರೂ ನಮ್ಮಂತೆಯೇ ಅನ್ನಿಸಲಿಲ್ಲ, ಅನ್ನಿಸುವಂತೆ ಅವರು ನಡೆದುಕೊಳ್ಳಲೂ ಇಲ್ಲ. ಹೆಜ್ಜೆ ಹೆಜ್ಜೆಗೂ  ಇಲ್ಲಿನ ಸಂಸ್ಕೃತಿ, ಆಚಾರ, ವಿಚಾರಗಳ ದಮನವಾಯಿತು. ಕೆಲವರು ಅವುಗಳನ್ನು ದಮನ ಮಾಡಲು ಬೇಕಾದ ಎಲ್ಲ ಕ್ರಮಗಳನ್ನು ಕೈಗೊಂಡರೂ ಕೂಡ. ಇಲ್ಲಿನ ಸಂಸ್ಕೃತಿಯ ಸಮಾಧಿಯ ಮೇಲೆ ತಮ್ಮ ಬೇಳೆ ಬೇಯಿಸಿಕೊಂಡು ಬಿಡುವ ಚಪಲವೂ ಕೆಲವರಿಗೆ ಉಂಟಾಗಿ ಅವುಗಳ ಪ್ರಯೋಗಕ್ಕೂ ಭಾರತದ ನೆಲ ವೇದಿಕೆಯಾಗಿ ಹೋಯಿತು.

ಇನ್ನು ಯೂರೋಪಿಯನ್ನರ ಭಾರತದ ದಾಳಿ ವಿಚಾರವು ಸರಿ ಸುಮಾರು ಅದೇ ಮುಳ್ಳಿಗೆ ತಗುಲಿಕೊಳ್ಳುವಂತದ್ದೇ. ಅವರು ಭಾರತದೆಡೆಗೆ ದೃಷ್ಟಿ ನೆಡುವುದಕ್ಕೆ ಮುಖ್ಯ ಕಾರಣ ಇಲ್ಲಿನ ಸಿರಿ ಸಂಪತ್ತು ಬಿಟ್ಟರೆ ಮತ್ತೇನೂ ಅಲ್ಲ. ಇಲ್ಲಿನ ಐಶ್ವರ್ಯದ ಮೇಲೆ ಮಾತ್ತ್ರ ಕಣ್ಣಿಟ್ಟು ದೇಶದ ಒಳ ಹೊಕ್ಕ ಐರೋಪ್ಯರು ಇಲ್ಲಿನ ಮತ್ತಷ್ಟು ಕೆಡುಕುಗಳನ್ನು ತಮ್ಮ ಅನುಕೂಲಕ್ಕೆ ಬಳಸಿ ಕೊಂಡರು. ವಿಚಾರದಲ್ಲಿ ನಮ್ಮದೂ ತಪ್ಪಿದೆ, ಆದರೂ ಸಮಯಕ್ಕೆ ತಕ್ಕಂತೆ ಎಲ್ಲವನ್ನು ಉಪಯೋಗಿಸಿಕೊಂಡ ಅವರು ಭಾರತದೊಳಗೆ ಭದ್ರ ಬುನಾದಿಯೊಂದನ್ನು ಕಟ್ಟಿಕೊಂಡರು ಹಾಗು ತಾವು  ಬೆಳೆದರು. ಇಷ್ಟಾದರೂ ಭಾರತದ ಜನಗಳಿಗೆ ಅವರು ನಮ್ಮವರು ಎನಿಸಲಿಲ್ಲ.


ಅಷ್ಟೇ ಏಕೆ ಸ್ವಾತಂತ್ರ್ಯ ದಕ್ಕಿ ಪ್ರಜೆಗಳೇ ಪ್ರಭುಗಳನ್ನು ಸಿಂಹಾಸನದಲ್ಲಿ ಪ್ರತಿಷ್ಠಾಪಿಸುವಂತಾದರೂ ಪ್ರಭುಗಳು ನಮ್ಮ ಪ್ರಜೆಗಳಿಗೆ ನಮ್ಮವರೆನಿಸುತ್ತಿಲ್ಲ. ಕಾರಣ ಸಿಂಹಾಸನಾಧೀಶ್ವರರಾದವರೆಲ್ಲ ತಮ್ಮ ಮನೆ ಮನವನ್ನು ಭ್ರಷ್ಟಾಚಾರದ ಮೂಲಕ ಬೆಳಗಿಕೊಳ್ಳುತ್ತಿದ್ದಾರೆ. ನನಗೆ ಒಮ್ಮೊಮ್ಮೆ ಅನಿಸುತ್ತಿರುತ್ತದೆ ಭಾರತೀಯರದು ಅದೆಂತಹ ದೌರ್ಭಾಗ್ಯ. ಎಂದು ಭಾರತೀಯರಿಗೆ ನಮ್ಮವರು, ನಮ್ಮ ಮಣ್ಣಿನವರು ಎನಿಸುವ ಆಡಳಿತ ಸಿಗುವುದು. ಅದಕ್ಕೆ ಇವರೆಲ್ಲರನ್ನು ನೋಡಿ ನನಗನ್ನಿಸಿತು ನಮ್ಮ ಇಷ್ಟಕ್ಕೆ ಒಗ್ಗಿಕೊಂಡು ಬಾಳು ಕಟ್ಟಿಕೊಂಡ ಏಕೈಕ ಭಾರತೀಯೇತರ ಜನಾಂಗ ಪಾರಸೀ ಜನಾಂಗ, ಅದಕ್ಕೆ ತಲೆ ಬರಹ ಕೊಟ್ಟಿದ್ದು 'ಅವರೂ ನಮ್ಮೊಳಗೊಬ್ಬರಾದರು'.

ಶನಿವಾರ, ಡಿಸೆಂಬರ್ 17, 2016

ಬಂದು ಬಿಡು ಚಿನ್ನಾ

ಮಾತೆಲ್ಲ ಮರೆತು, ದೃಷ್ಟಿ ಮಸುಕಾಗಿ
ಬೆನ್ನು ಬಾಗಿ, ಕಣ್ಣು ಮಂಜಾಗಿ
ಮಾತು ತೊದಲಿ ಕೈ ನಡುಗಿ ನಾ
ಹೊರಟು ಹೋಗುವ  ಮುನ್ನ
ಒಮ್ಮೆ ನೋಡಲೇಬೇಕು ನಿನ್ನ
ಯಾರಿಗೂ ಕಾಯದೆ ಬಂದುಬಿಡು ಚಿನ್ನಾ.

ಮನಸು ಎಂಬ ಮಂಟಪ ಬೆಳಗಿ
ಕನಸು ಎಂಬ ಕೂಸಿಗೆ ಮರುಗಿ
ಬಿಟ್ಟು ಹೋಗಲೇ ಬೇಡ ನನ್ನ
ನಿನಗಾಗಿಯೇ ಕಾಯುತಿರುವೆ ನೀ ಬಂದುಬಿಡು ಚಿನ್ನಾ.

ವಾಟ್ಸಾಪ್ ಫೇಸ್ ಬುಕ್ಕು ಗಳಿಗಿಂತ
ನಿನ್ನೊಡನಾಟವೇ ಚೆನ್ನ
ನಿರ್ಜೀವ ತಂತ್ರಗಳವು ಇಂದಿಗೂ ಬೇಡ ಇನ್ನಾ
ಬೇಸರಿಸದೆ ನೀ ಮತ್ತೆ ನನ್ನೊಡನೆ ಬಂದು ಬಿಡು ಚಿನ್ನಾ.

ಒಮ್ಮೊಮ್ಮೆ ಮರುಗಿ
ಒಮ್ಮೊಮ್ಮೆ ಸೊರಗಿ
ಒಮ್ಮೊಮ್ಮೆ ಕೊರಗಿ
ಏನೇನೋ ನಡೆಯುತ್ತಿದೆ ಇನ್ನಾ
ನನ್ನ ಪರಿಸ್ಥಿತಿ ಇನ್ನೂ ಭಿನ್ನ
ಅದನ್ನೆಲ್ಲ ಕೇಳಲಾದರೂ ನೀ ಬರುವೆಯಾ ಚಿನ್ನಾ
ನಿನ್ನ ದಾರಿಯನ್ನೇ ಕಾಯುತಿರುವೆ ಇನ್ನಾ.

ಗುರುವಾರ, ಡಿಸೆಂಬರ್ 15, 2016

ಐಟಿ ಬಿಟಿ ಪ್ರೀತಿ

ಫೇಸ್ಬುಕ್ ನಲ್ಲಿ ಹುಟ್ಟಿ 
ವಾಟ್ಸಾಪ್ ನಲ್ಲಿ ಬೆಳೆದು 
ಸಲ್ಲದ ಕಾರಣಕ್ಕೆ ಮುರಿದು 
ಬೀಳುವುದು ಪ್ರೀತಿಯೇನೆ? 

ದುಡ್ಡು, ಧರ್ಮ, ಜಾತಿ 
ಎಲ್ಲಕ್ಕೂ ತಿಲ ತರ್ಪಣವಿಟ್ಟು
ನೀನಿಲ್ಲದೆ ನಾನಿಲ್ಲ 
ನಾನಿಲ್ಲದೇ ನೀನಿಲ್ಲ 
ನಿನ್ನಬಿಟ್ಟರೆ ಬದುಕೇ ಇಲ್ಲ 
ಎಂದುಕೊಳ್ಳುವುದು ನಿಜವಾದ 
ಪ್ರೀತಿ, ಚಿರ ಪ್ರೀತಿ ಎಂದಷ್ಟೇ ತಿಳಿದಿದ್ದೆ 
ಕಾಲ ಬದಲಾದಂತೆ ಪ್ರೀತಿಯೂ
ಬದಲಾಗಲಿದೆ, ಆಗುತ್ತಲೂ ಇದೆಯಲ್ಲ! 

ಪ್ರೀತಿಗೆ ರಾಯಭಾರಿ ನಾನೀಗ 
ಪ್ರೀತಿ ಬಯಸಿ ಹಿಂದೆ ಮುಂದೆ ಸುಳಿದು
ಕಾಡಿ ಬೇಡಿ ಮಾಡುವ ಪ್ರೀತಿ ಶೂನ್ಯ 
ಕಾಡುವ ಬೇಡುವ ಪ್ರಮೇಯ ನಿಜ ಪ್ರೀತಿಯ 
ಪಾಲಲ್ಲ. ಇನ್ಯಾರಿಂದಲೂ 
ಪ್ರೀತಿ ಬಯಸಲಾರೆ, ಆದರೆ ಬಳಿ ಸುಳಿದವರಿಗೆ 
ಪ್ರೀತಿ ಮೊಗೆ ಮೊಗೆದು ಕೊಡಲು ಮರೆಯಲಾರೆ 

                                           ಇಂತಿ ನೊಂದ ಪ್ರೇಮಿ :( 


ಶನಿವಾರ, ಡಿಸೆಂಬರ್ 3, 2016

ಬಿದ್ದರೇನು

ಬಿದ್ದರಿಲ್ಲಿ ಮುಗಿಯಿತು, ಎತ್ತುವರು ಎಳೆಸುವರ್ಯಾರು ಇಲ್ಲ 
ಬಿದ್ದರೇಳುವ ಛಾತಿಯೊಂದೇ ಅವರವರ ಬೆನ್ನಿಗೆ 
ಬಿದ್ದರೆತ್ತುವ ಜನರ ಕಾಣುತಿದ್ದರೆ ಮುಗಿಯಿತಲ್ಲಿಗೆ 
ಇದೇ ದೇವರು ಕೊಟ್ಟ ಭವ ಸಮುದ್ರದ ಬಾಳ್

ಬುದ್ಧನೆದ್ದ

ಭಗವಾನ್ ಬುದ್ಧ ಒಮ್ಮೆ ತನ್ನ ಶಿಷ್ಯರ ಒಡಗೂಡಿ ಲೋಕ ಸಂಚಾರ ಮಾಡುತ್ತಾ ಹಳ್ಳಿಯೊಂದಕ್ಕೆ ಬಂದ. ಆ ಹಳ್ಳಿಯಲ್ಲಿ ಇದ್ದ ಶ್ರೀಮಂತನೊಬ್ಬನಿಗೆ ಬುದ್ಧನ ಯಾವ ಭೋಧನೆಗಳಲ್ಲೂ ನಂಬಿಕೆಯಿರಲಿಲ್ಲ. ಹೀಗಾಗಿ ಬುದ್ಧನಿಗೆ ಸರಿಯಾಗಿ ಬುದ್ಧಿ ಕಲಿಸಬೇಕೆಂದು ತೀರ್ಮಾನ ಮಾಡಿಕೊಂಡು ರೋಷಾವೇಶದಿಂದ ಕುದಿಯುತ್ತಾ ಬುದ್ಧನ ಬಳಿಗೆ ಬಂದು ಕಿರುಚಾಡಲು ಶುರು ಮಾಡಿದ. "ನೀನೇನು ಮಹಾ ದೇವ ಮಾನವನೋ?.....ನೀನು ಹೇಳುವ ಮಾತುಗಳೆಲ್ಲಾ ತಲೆ ಬುಡವಿಲ್ಲದೆ ನಿರಾಧಾರ ವಾಗಿರುವಂತಹವು, ಇಷ್ಟಕ್ಕೂ ಇನ್ನೊಬ್ಬರಿಗೆ ಭೋಧನೆ  ಮಾಡಲು ನಿನಗೆ ಅಧಿಕಾರ ಕೊಟ್ಟವರ್ಯಾರು" ಎಂದೆಲ್ಲಾ ಆವೇಶದ ಮಾತುಗಳನ್ನಾಡುತ್ತಾನೆ.

ಎಲ್ಲವನ್ನೂ ಸಮಾಧಾನದಿಂದಲೇ ಕೇಳಿಸಿಕೊಂಡ ಬುದ್ಧ  ಶ್ರೀಮಂತನಿಗೆ ಪ್ರಶ್ನೆಯೊಂದನ್ನು ಕೇಳುತ್ತಾನೆ "ಮಗೂ ನಾನು ಯಾರಿಗೋ ಕೊಡಲೆಂದು ಉಡುಗೊರೆಯೊಂದನ್ನು ತಂದಿದ್ದೇನೆ, ಆದರೆ ನಾನು ಕೊಟ್ಟ ಉಡುಗೊರೆಯನ್ನು ಯಾರು ಸ್ವೀಕರಿಸಲಿಲ್ಲವೆಂದಾಗ ಆ ಉಡುಗೊರೆ ಯಾರ ಪಾಲಾಗುತ್ತದೆ?".

ಅನಿರೀಕ್ಷಿತ ಪ್ರಶ್ನೆಯಿಂದ ಶ್ರೀಮಂತ ಅಚ್ಚರಿಗೊಳಗಾದರೂ ಉತ್ತರಿಸುತ್ತಾನೆ. "ಆ ಉಡುಗೊರೆ ಕೊಂಡು ತಂದವರದ್ದೇ ಆಗುತ್ತದೆ".

ಬುದ್ಧ ಅದಕ್ಕೆ ಪ್ರತಿಕ್ರಿಯಿಸುತ್ತಾನೆ , "ಅಂತೆಯೇ ನೀನು ನನ್ನ ಮೇಲೆ ವಿನಾ ಕಾರಣ ಕೋಪಗೊಂಡರೆ ನಾನು ಅದನ್ನು ಸ್ವೀಕರಿಸುವುದಿಲ್ಲ, ಹಾಗೆಂದ ಮೇಲೆ ನಿನ್ನ ಕೋಪ ನಿನಗೆ ಹಿಂದಿರುಗಿ ಬಂತು ಎಂದಲ್ಲವೇ".ಶ್ರೀಮಂತನು ಹೌದು ಎನ್ನುತ್ತಾನೆ.

ನೀನು ಪರರನ್ನು ದ್ವೇಷಿಸಿದರೆ ಆ ದ್ವೇಷವನ್ನು ಯಾರು ಸ್ವೀಕರಿಸುವುದಿಲ್ಲ, ಅಂದ ಮೇಲೆ ಆ ದ್ವೇಷ ನಿನಗೆ ಹಿಂತಿರುಗಿ ಬರುತ್ತದೆ. ದ್ವೇಷವೇ ಹಿಂದಿರುಗಿ ಬಂದಾಗ ಸಂತೋಷ, ನೆಮ್ಮದಿಗಳು ಕನಸಾಗಿಯೇ ಉಳಿಯುತ್ತವೆ. ಹಾಗಾಗಿ ದ್ವೇಷ, ಅಸೂಯೆಗಳನ್ನು ಶಮನ ಮಾಡಿ ಪ್ರೀತಿಯನ್ನು ಕೊಟ್ಟಾಗ ಮಾತ್ರ ಜೀವನ ಸುಖಮಯವಾಗುತ್ತದೆಂದು ಬುದ್ಧ ತನ್ನ ಮಾತು ಮುಗಿಸುತ್ತಾನೆ.

ಸೋಮವಾರ, ನವೆಂಬರ್ 21, 2016

ಮೋದಿ - ಮಂತ್ರವಾದಿ

ಪಿಶಾಚಿ ಮೆಟ್ಟಿ ಕುಣಿಯುವರ ಬಾಯ್ಬಿಡಿಸಬಹುದು
ಗರ ಬಡಿದವರ ಬಾಯ್ಬಿಡಿಸಬಹುದು
ಸಿರಿಗರ ಬಡಿದವರ ಬಾಯ್ಬಿಡಿಸಲು ಬಡವನೆಂಬ ಮಂತ್ರವಾದಿಯೊಬ್ಬನಿಗೆ
ಸುಲಭ ಸಾಧ್ಯ ಅಂದೊಪ್ಪಿದರು ವಚನ ಮಾರ್ಗದವರು.
ಶತಮಾನದ ಸಾಲು ಸಾಲುಗಳು ಕಳೆದರು ಸಿರಿಗರ ಬಿಡಿಸುವರ
ಮಂತ್ರವಾದಿಯ ಪಟ್ಟವ ಬಡತನ ತನ್ನದಾಗಿಸಿಕೊಂಡಿತ್ತು.
ನೋಡೀಗ ಇಲ್ಲಿ, ನಮ್ಮದೇ ಭಾರತದೊಳಗೆ ಮೋದಿಯೆಂಬ
ಮಂತ್ರವಾದಿ ಬೇವಿನ ಸೊಪ್ಪು, ಮೆಣಸಿನ ಘಾಟು ಏನೇನೂ ಇಲ್ಲದೆ ಸಿರಿಗರ
ಬಡಿದವರ ಬಾಯ್ಬಿಡಿಸಿದ್ದಾರೆ, ಮನೆಯಿಂದ ಓಡೋಡಿ ಬ್ಯಾಂಕಿನ ಸರದಿಯಲ್ಲಿರುವಂತೆ
ಮಾಡಿದ್ದಾರೆ, ಬ್ಯಾಂಕಿನ ಮಿತಿಯನ್ನೂ ಮೀರಿಸಿ ಹಣದ ಹೊಳೆಗೆ ಒಡ್ಡುಗಟ್ಟಿ
ತಮ್ಮ ಮನೆಯೊಳಗೆ ತಿರುವಿಕೊಂಡವೆರೆಲ್ಲಾ ಇದೀಗ ಮೋದಿಯೆಂಬ ಮಂತ್ರವಾದಿಗೆ
ಶಾಪ ಹಾಕುತ್ತ ತಮ್ಮ ಮನೆಯ ಮಹಾಲಕ್ಷ್ಮಿಯನ್ನು ಗೌರವಾದರದಿಂದ ಕಳುಹಿಸಿಕೊಡುತ್ತಿದ್ದಾರೆ.
ದೇಶದೊಳಗಣ ದೊಡ್ಡ ಲಕ್ಷ್ಮಿಯರು ತಮ್ಮ ಬೆಲೆ ಕಳೆದುಕೊಂಡು ಬ್ಯಾಂಕಿಗೆ ಸೇರುವ
ಬದಲು ಗಂಗೆಗೂ, ಸಮುದ್ರಕ್ಕೂ, ರೋಡಿಗೂ, ಕಾಡಿಗೂ ಸೇರಿಕೊಂಡು ಇಲ್ಲದವರ
ಪಾಲಾಗಿ ಮತ್ತೆ ಮೋದಿಯೆಡೆಗೆ ದಾರಿ ಹಿಡಿದಿದ್ದಾರೆ.
ಅಂತೂ ಇಂತೂ ಮೋದಿಯಣ್ಣ ಸಿರಿಗರ ಬಡಿದವರ ನುಡಿಸಿದರು, ಏನೆಂದು ಗೊತ್ತೇ
'ಮುಂದಿನ ಲೋಕಸಭೆಯೊಳಗೆ ನಾವು ಕೇಸರಿಗೆ ವಿರೋಧ'ವೆಂದು.




ಗುರುವಾರ, ನವೆಂಬರ್ 10, 2016

ಭಾವ-ತೀವ್ರತೆ

ದುಃಖದೊರತೆಯೊಡೆದು ಭೂಮಿಗಿಳಿಯುತಿಹುದು ತನು ಮನ
ದೂಡುಗೋಲಿಗೆ, ಆಸರೆ ಕೈಯಿಗೆ ಯಾರ ಬೇಡಲಿ ನಾ,
ಎಲ್ಲಿಗಲೆಯಲಿ ನಾ,ಎಲ್ಲಕ್ಕೂ ಮುಂಚಾಗಿ ಏನೀ ಜಗದ ನಿಲುವು, ದ್ವಂದ್ವ 

ಬುಧವಾರ, ನವೆಂಬರ್ 2, 2016

ನಾನು ನನ್ನ ಸುತ್ತ

(ಅದು 2014ರ ಭಾರತದ ಲೋಕಸಭಾ ಚುನಾವಣೆ ಸಮಯ. ದೇಶದ ಸರ್ವ ಪಕ್ಷಗಳೂ ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ ಬಿಡಾರ ಹೂಡಿ ತಮ್ಮ ತಮ್ಮ ಪಕ್ಷಗಳ ಪರ ಪ್ರಚಾರ ಮಾಡಿಕೊಂಡು ತಿರುಗುತ್ತಿದ್ದ ಬಿರು ಬೇಸಿಗೆಯ ನಡು ಮಧ್ಯ ಕಾಲ. ಬಿಸಿಲೆಂದರೆ ಸಾಮಾನ್ಯವಲ್ಲ, ಹೊರಗಡಿಯಿಟ್ಟರೆ ಮೈಯೆಲ್ಲಾ ಗಂಧೆ ಏಳುವಷ್ಟು. ಪುಣೆಯ ಶಿವಾಜಿನಗರದ ಎಲ್ ಅಂಡ್ ಟಿ ಕಛೇರಿಯೇ ಆಗ್ಗೆ ನನ್ನ ಕಾರ್ಯಸ್ಥಾನ. ಅದೊಂದು ಶುಕ್ರವಾರ ಮಧ್ಯಾಹ್ನದ ಊಟವಾಗಿಹೋಗಿತ್ತು. ಅದೇಕೋ ಏನೋ ಇದ್ದಕಿದ್ದಂತೆ ಇಡೀ ಆಫೀಸ್ ಖಾಲಿಯಾಗಿಹೋದಂತೆ ಕಂಡಿತು. ಸುತ್ತಲೂ ಒಮ್ಮೆ ನೋಡಿದೆ ಆಗ ನನ್ನ ಕಣ್ಣಿಗೇನೇನೂ ಕಂಡಿತೋ ಅದನ್ನೆಲ್ಲ ಹಾಗೆ ಗೀಚಿದ್ದೇನೆ).

ದೇಶವೆಲ್ಲ ಬಿಸಿಲಿನಲ್ಲಿ ಬೇಯುತ್ತಿದೆ..........ದೇಶದ ರಾಜಕಾರಣದಲ್ಲಿ ಮಹಾಯಜ್ಞ ಕುಂಡವೇ ತಯಾರಾಗುತ್ತಿದೆ…… ರಾಜಕಾರಣಿಗಳು ಎದುರಾಳಿಗಳ ಪಕ್ಷದ ತಪ್ಪು ಕಂಡು ಹಿಡಿಯುವುದರಲ್ಲಿ ನಿರತರಾಗಿದ್ದಾರೆ ….. ಸುತ್ತಲೂ "ಬಿಸಿಲು ಮಳೆಗೆ ಬಿರುಗಾಳಿ ಚಳಿಗೆ ನಾವು ಅಳುಕಾಲಾರೆವು" ಅಂತ ಪಣ ತೊಟ್ಟು ಬೇಯುವ ಬಿಸಿಲಿನಲ್ಲೂ ಮರಗಳು ಹಾಗೆ ನಿಂತಿವೆ.........ಇವನ್ನೆಲ್ಲ ನೋಡುತ್ತಿರುವ ಸೂರ್ಯದೇವನು ತನ್ನ ಪ್ರಖರತೆಯನ್ನು ದಿನೇ ದಿನೇ ಹೆಚ್ಚಿಸಿಕೊಳ್ಳುವ ಉತ್ಸಾಹದಲ್ಲಿದ್ದಾನೆ.......ಭೂಮಿಯೆಲ್ಲ ಕಾದೂ ಕಾದು ಆಮ್ಲೆಟ್ಟು, ದೋಸೆ, ಚಪಾತಿಗಳಿಗೆ ಬೇರೆ ಹೆಂಚುಗಳ ಅವಶ್ಯಕತೆಯನ್ನು ಕಡಿಮೆ ಮಾಡಲು ಉತ್ಸುಕವಾದಂತಿದೆ...........… ಎಲ್ ಅಂಡ್ ಟಿ ಯ ಅರ್ಧದಷ್ಟು ಜನಗಳು ಡಾರ್ಮಿಟರಿ ಯಲ್ಲಿ ಈ ಲೋಕ ಮರೆತಿದ್ದಾರೆ, ರೈಲ್ವೆ ಸ್ಟೇಷನ್ ಮುಂದಿನ ರಸ್ತೆಯಲ್ಲಿ ಆಡುತ್ತಿರುವ ಮಕ್ಕಳು ಕ್ರಿಕೆಟ್ ಬ್ಯಾಟನ್ನಿಡಿದು ಅಬ್ಬರಿಸುತ್ತಿದ್ದಾರೆ, ಶಿವಾಜಿನಗರದ ರೈಲುಗಳು ಇವಕ್ಕೆಲ್ಲ ಸಂಬಂಧವೇ ಇಲ್ಲದಂತೆ ತಮ್ಮಷ್ಟಕ್ಕೆ ತಾವು ಹೊರಟು ಹೋಗುತ್ತಿವೆ, ಇನ್ನು ನನ್ನ ಸುತ್ತಲು ಲಾಲ್ ಬಾಗ್, ಕಬ್ಬನ್ ಪಾರ್ಕುಗಳೇ ತಯಾರಾಗಿವೆ..........ಅಲ್ಲಿ ನೋಡಬೇಕಾದ ದೃಶ್ಯಾವಳಿಗಳು ಇಲ್ಲಿಯೇ ಸಿಗುತ್ತಿವೆ ಆದರೂ ನಾನತ್ತ ಗಮನ ಕೊಡುತ್ತಿಲ್ಲ..... ಇಲ್ಲಿನ ಹುಡುಗಿಯರು ತಮ್ಮಷ್ಟಕ್ಕೆ ತಾವು ಗುಂಪು ಕಟ್ಟಿಕೊಂಡು ಹರಟುತ್ತಿದ್ದಾರೆ, ಹೊರಗಿನ ಹುಡುಗಿಯರು ಮುಖಕ್ಕೆ ಬಟ್ಟೆ ಸುತ್ತಿಕೊಂಡು ಈ ಲೋಕದಿಂದ ತಮ್ಮ ಅಮೋಘ ಸೌಂದರ್ಯವನ್ನು ಮರೆ ಮಾಚುವ ಪ್ರಯತ್ನದಲ್ಲಿದ್ದಾರೆ, ವಾಹನ ಸವಾರರು ದರಿದ್ರ ಟ್ರಾಫಿಕ್ ಜಾಮ್ ಗೆ ರೋಸಿ ಹೋಗಿ ರಸ್ತೆ ಮಗ್ಗುಲಲ್ಲೇ ಇರುವ ರಸವಂತಿ ಗೃಹಗಳಿಗೆ ಲಗ್ಗೆ ಇಟ್ಟಿದ್ದಾರೆ.......ಸಿ ಓ ಇ ಪಿ ಮುಂದೆ ನಿಂತ ಹುಡುಗರು ಕೆಲವರು ತಮ್ಮ ಇಂಟರ್ನಲ್ ಗಳ ಅಂಕಗಳನ್ನು ಲೆಕ್ಕ ಹಾಕುತ್ತಿದ್ದರೆ ಮತ್ತೆ ಕೆಲವರು ಸೊಗಸಾದ ಯಾವುದಾದರು ಸಿಕ್ಕ ಸೌಂದರ್ಯ ರಾಶಿಯನ್ನು ಸೆರೆ ಹಿಡಿಯುವ ಧಾವಂತದಲ್ಲಿದ್ದಾರೆ....... ರಸ್ತೆಗೆ ಕಣ್ಣಾಡಿಸಿದರೆ ಕೆಲವರು ಬಸ್ ಸ್ಟಾಪಿನಲ್ಲಿ ನಿಂತು ಬಸ್ ಹಿಡಿಯುವ ಆತುರದಲ್ಲಿದ್ದಾರೆ............ಅತ್ತ ರೈಲಿಗಾಗಿ ಕಾದ ಜನಗಳು ನಿಲ್ದಾಣದಲ್ಲಿ ಸಣ್ಣಗೆ ತೂಕಡಿಸುತ್ತಿದ್ದಾರೆ.............ಇತ್ತ ಕೆಲವು ಹುಡುಗರು ಕಬ್ಬು ಅರೆಯುವುದರಲ್ಲಿಯೂ, ಹಣ್ಣುಗಳ ರುಬ್ಬುವುದರಲ್ಲಿಯೂ ತೊಡಗಿಕೊಂಡು ತಮ್ಮನ್ನು ತಾವು ಮರೆತಿದ್ದಾರೆ...... ಶಾಪರ್ ಸ್ಟಾಪ್ ನಲ್ಲಿ ಕೆಲಸ ಮಾಡುವ ಹುಡುಗರು ಗಿರಾಕಿಗಳಿಲ್ಲದೆ ಬಾಗಿಲಲ್ಲಿ ಕುಂತು ಕಾಡು ಹರಟೆಯಲ್ಲಿ ನಿರತರಾಗಿದ್ದಾರೆ.............ಇನ್ನು ಕೆಲವರು ಭಾರಿ ಸುಸ್ತಾದವರಂತೆ ಹೋಗಿ ಬಿರು ಬಿಸಿಲಿನಲ್ಲಿಯೂ ಸಿಗರೇಟು ಸೇದುತ್ತಿದ್ದಾರೆ ಸಾಲದ್ದಕ್ಕೆ ಉಳಿದ ಇನ್ನೊಂದು ಕೈಯಲ್ಲಿ ಚಹಾ ಲೋಟ ಹಿಡಿದು ಅದನ್ನು ಆಗಿಂದಾಗ್ಗೆ ಹೀರುತ್ತಿದ್ದಾರೆ, ಇತ್ತ ಕಂಪನಿಯ ಒಳಗೆ  ಸೆಕ್ಯೂರಿಟಿ ಗಾರ್ಡ್ ಗಳು ತಮ್ಮ ಬದಲಾದ ಶಿಫ್ಟ್ ನ ಲೆಕ್ಕಾಚಾರದಲ್ಲಿದ್ದಾರೆ........ಕ್ಯಾಂಟೀನ್ ಜನಗಳು ಈಗಾಗಲೇ ಮುಗಿದ ಊಟದ ಪದಾರ್ಥಗಳನೆಲ್ಲ ಖಾಲಿ ಮಾಡಿ ಸಾಯಂಕಾಲದ ಸ್ನಾಕ್ಕ್ಸ್ ಟೈಮಿಗೆ ಸನ್ನದ್ಧರಾಗುತ್ತಿದ್ದಾರೆ........... ಈತ್ತ ಕೆಲವರು ಕಂಪ್ಯೂಟರ್ ಮುಂದೆ ಕೂತು ಕೂತು ಸಾಕಾಗಿ ತಲೆ ಓಡದೆ ಬ್ರೇಕ್ ಔಟ್ ಏರಿಯ ದಲ್ಲಿ ಕಾಫಿ ಹೀರಲು ಸಜ್ಜಾಗಿ ನಿಂತಿದ್ದಾರೆ....ಇನ್ನು ಕೆಲವರು ಹೊರಗಿನ ಜಗತ್ತನ್ನು ಮರೆತು ತಮ್ಮ ಕೆಲಸದಲ್ಲಿ ತಲ್ಲೀನರಾಗಿಬಿಟ್ಟಿದ್ದಾರೆ......ಬೆಂಚಿನಲ್ಲಿರುವ ಹುಡುಗರು ಈಗ ಹೇಗೆ ಸಮಯ ಕಳೆಯುವುದು ಅನ್ನುವ ಲೆಕ್ಕಾಚಾರದಲ್ಲಿದ್ದಾರೆ.....ಮತ್ತೆ ಕೆಲವರು ಜ್ಞಾನ ಸಂಪಾದನೆಗಾಗಿ ಓದುತ್ತಿದ್ದಾರೆ ....ಅಲ್ಲೆಲ್ಲೋ ದೂರದಲ್ಲಿರುವ ಕ್ಯಾಬಿನ್ ಒಳಗಿನ ಮ್ಯಾನೇಜರ್ ಸಾಹೇಬರು ಯಾರಿಗೆ ಏನು ಕೆಲಸ ಕೊಡಲಿ......ಯಾರ ರಜೆ ಗಳನ್ನೂ ಅಪ್ರೂವ್  ಮಾಡಲಿ ಅಂತ ತಲೆ ಕೆಡಿಸಿ ಕೊಂಡಿದ್ದಾರೆ.....ಈ ಕಡೆ 7ನೆ ಫ್ಲೋರ್ ಇಂದ ಈ ಫ್ಲೋರ್ ಗೆ ಲಗ್ಗೆಯಿಟ್ಟ ಹುಡುಗರು ಇಲ್ಲಿ ಇರೋವ್ರನ್ನೆಲ್ಲ ಮಾತಾಡಿಸ ಹತ್ತಿದ್ದಾರೆ.......ಕೆಲವರು ಮೌನವಾಗಿಯು, ಕೆಲವರು ವಿಷಣ್ಣ ವದನದವರಾಗಿಯು, ಕೆಲವರು ಮಾತನಾಡುತ್ತಾಲೂ, ಕೆಲವರು ಗಲಾಟೆ ಮಾಡುತ್ತಲೂ ಮತ್ತೆ ಕೆಲವರು ಜೋರಾಗಿ ನಗುತ್ತಲೂ  ಇರುವ ಈ ಪರಿಸರದಲ್ಲಿ ನನ್ನ ಕಿವಿಯಲ್ಲಿ ಮಾತ್ರ ಡಾ||ರಾಜ್ ಕುಮಾರರು ಇಂಪಾಗಿ ಹಾಡುತ್ತಿದ್ದಾರೆ.....ಅದನ್ನು ಕೇಳುತ್ತಾ ನನ್ನನ್ನು ನಾನು ಮರೆಯುತ್ತೇನೆಯೋ ಅನಿಸುತ್ತಿದೆ .............ನಾನೋಬ್ಬನೀಗ ಅದರಲ್ಲೇ ಲೀನ......

ಗುರುವಾರ, ಅಕ್ಟೋಬರ್ 27, 2016

ದಾರು ದೈವ-ಜೀವಿ ?

ಜ್ಞಾನವಿದ್ದವಂಗೆ, ಸ್ಥಿತಿಗತಿ ಅರಿತವಂಗೆ, ವಿಡಂಬನೆ ಇಲ್ಲದವಂಗೆ, ಪರರನ್ನು ಕಂಡರೆ ಕನಿಕರ, ಅಸಹ್ಯ, ಆವೇಶ, ಯಾವೊಂದು ಪದದವಂಗೆ, ಪರರಿಗೆ ಕೇಡು ಬಗೆಯದವಂಗೆ, ತನ್ನತನದೊಳೆ ತಾನಿದ್ದು ತನಗಾಗಿ ತಾ ಬದುಕಿ, ಬದುಕಿನುದ್ದುದ್ದಕ್ಕೂ ಎಷ್ಟೆಷ್ಟೋ ಗೋಜಲು ಕಂಡರೂ ತನ್ನ ದಾರಿಯಿದು ಎಂದು ತಾ ಗುರುತಿಸಿ ಅದರೊಳಗೆ ವ್ರತನಿಷ್ಠನಂತೆ ನಡೆದವಂಗೆ ದೇವರೇ ನೆರವು, ಜಗವೇ ದೇವರು, ಅದೇ ಜಗದೊಳಗವನೂ ಲೀನ.

ಎಡೆಯೂರು ಸಿದ್ಧಲಿಂಗೇಶ್ವರರ ವಚನ

ಮುಂದಳ ಮುಖ ಸಾಲೆಯೊಳಗೆ
ಉದ್ದಂಡ ಮೂರ್ತಿಯ ಕಂಡೆನಯ್ಯಾ
ಲಂಡರ ಪುಂಡರ ಭಂಡರ ದಂಡಿಸುತ್ತಿದ್ದಾನೆ ನೋಡ
ಮುಂದಣ ಮುಖಸಾಲೆಯ ಮುರಿದು
ಉದ್ದಂಡಮೂರ್ತಿ ಉಳಿದ ಪ್ರಚಂಡೆತೆಯನೇನೆಂಬೆನಯ್ಯಾ
ಮಹಾಲಿಂಗಗುರು ಶಿವಸಿದ್ದೇಶ್ವರ ಪ್ರಭುವೇ


ಕೊನೆಯ ಬರಹ

ಉಟ್ಟ ಬಟ್ಟೆಯಲ್ಲಿ ಊರು ಬಿಟ್ಟವರ ಸಾಹಸಗಾಥೆ

ಬಹಳ ದಿನಗಳಿಂದ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ, ಸ್ವಾತಂತ್ರ್ಯಾನಂತರ ದೇಶದೊಳಗೆ ಭುಗಿಲೆದ್ದ ಕೋಮು ಹಿಂಸಾಚಾರದ ಬಗ್ಗೆ ಬರೆಯಬೇಕು ಎಂದುಕೊಳ್ಳುತ್ತಿದೆ. ಸ್ವಾತಂತ್...