ಹೊಸ ವರುಷದ
ಹೊಸ ಮನ್ವಂತರದ
ಹೊಸ ಅನುಸಂಧಾನದ
ಹೊಸದಿನಕೆ ಕಾದಿದೆ ಲೋಕ
ಹೊಸದೊಂದು ಹರದಾರಿಯಲಿ
ಬದುಕಿನ ಬಂಡಿ ಎಳೆಯಲು
ಹೊಸ ಯೋಜನೆಗಳೊಳಗೆ ಬದುಕ
ಯೋಜಿಸಲು ಎದ್ದು ನಿಂತಿದೆ ಜಗ
ತಡರಾತ್ರಿಯ ನಡುಗಳಿಗೆಯ
ಮತ್ತೇರುವ ರಂಗೇರುವ
ಹತ್ತರ ಮೇಲೆರಡಕೆ
ಕಾದಿದೆ ಯುವಸಮೂಹ
ಈ ಅಂಚಲಿ, ಆ ಬೀದಿಯಲಿ
ಇನ್ನಾವುದೋ ಬೈಗಿನಲಿ,
ಬಯಲಿನಲಿ, ಉಸಿರುಗಟ್ಟಿಸುವ
ತಕ್ಕಯಿಸಿಕೊಂಡ ಬೀದಿ ಜಾಡುಗಳಲಿ
ಕೇಳುವ, ನೋಡುವ ಮಾಧ್ಯಮಗಳಲಿ
ಓದುವ ಪತ್ರಿಕೆ ಪುಸ್ತಕಗಳಲಿ
ಶುಭಾಶಯ ಪತ್ರಿಕೆಗಳಲಿ
ಹೀಗೆ ಎಲ್ಲೆಲ್ಲಿ ಕಂಡರೆ ಅಲ್ಲಲ್ಲಿ
ಹೊಸವರ್ಷದ ಹೊಸ ಉತ್ಸಾಹದ
ಹೊಸ ಉನ್ಮಾದದ ಹೊಸತನವೇ
ಬಿದ್ದೆದ್ದು ಮೆರೆಯುತಿದೆ
ಜಾಗತೀಕತೆಯ ಈ ಇಳೆಯಲಿ
ಅಲ್ಲೆಲ್ಲೋ ಧರ್ಮಗಾವಿಲರು
ಕೂಗುತಿಹರು ಇದು ನಮ್ಮ
ರಿವಾಜಲ್ಲವೆಂದು, ಈ ಮಣ್ಣ
ಗುಣಾಚಾರವಲ್ಲವೆಂದು
ಇನ್ನೆಲ್ಲೋ ಕೂಗುತಿಹರು
ಹೊಸತನವನೆಳೆದಪ್ಪಿಕೊಂಡವರು
ಹೊಸತನಕೆ, ನಗುವುದಕೆ
ಶಾಸ್ತ್ರಗಳ ಗೊರೆಯಬೇಕೇನೆಂದು
ಪರವೋ, ವಿರೋಧವು
ಶಾಸ್ತ್ರದ ಕಟ್ಟೋ, ವೈಚಾರಿಕತೆಯ
ವೈಜ್ಞಾನಿಕ ನೆಲೆಗಟ್ಟೋ,
ಕಾಲರಾಯನಿಗದು ಅಡ್ಡಿಯೇ ಅಲ್ಲ
ಅನೇಕ ಬುದ್ಧಿಮತ್ತೆಯ
ಅನೇಕ ನಡಾವಳಿಗಳ
ಸಮಾಗಮದಲ್ಲಿ ಕಾಲರಾಯನೇ
ಉತ್ತರವಾಗಿ ಬಂದಿದ್ದಾನೆ
ಹೊಸ ಧೋತ್ರ ಹೊದ್ದುಕೊಂಡು
ಹಳೆಯ ಕಾಲಪಟವನ್ನು
ಧೂಳಿಪಟ ಮಾಡಿಕೊಂಡು
ಹೊಸವರ್ಷವಾಗಿ, ಹೊಸ ಹರ್ಷವಾಗಿ.