ಇತ್ತೀಚೆಗೆ ಕರ್ನಾಟಕದ ಖ್ಯಾತ ವಾಸ್ತು ತಜ್ಞರೊಬ್ಬರು ಕೊಲೆಗೀಡಾದ ವಿಚಾರ ನಿಮಗೆಲ್ಲ ಗೊತ್ತಿದೆ. ಸರಳ ವಾಸ್ತು ಹೆಸರಿನ ಖ್ಯಾತಿಯ ಅವರು ದಾರುಣವಾಗಿ ಕೊಲೆಗೀಡಾದರು. ಅದರ ಹಿಂದಿದ್ದದ್ದು ಯಾವುದೋ ಒಂದು ಬೇನಾಮಿ ಹೆಸರಲ್ಲಿತ್ತು ಎನ್ನುವ ಆಸ್ತಿಯ ವಿವಾದ. ಅದನ್ನು ಮೀರಿಯೂ ಅವರು ಭಯಂಕರವೆನಿಸುವಷ್ಟು ಆಸ್ತಿ-ಪಾಸ್ತಿಗಳನ್ನು ಸಂಪಾದಿಸಿದ್ದರು ಎನ್ನುವುದು ಈಗ ಎಲ್ಲರಿಗೂ ತಿಳಿದಿರುವ ವಿಚಾರ. ಅವರು ಕೊಲೆಗೀಡಾದ ದಿನ ಒಂದು ಬಹಳ ಅರ್ಥ ಪೂರ್ಣವಾದ ಮೀಮ್ ಹರಿದಾಡಿತು. 'ಮನುಷ್ಯ ತನಗೆಷ್ಟು ಬೇಕೋ ಅಷ್ಟೇ ಆಸ್ತಿ ಸಂಪಾದಿಸಿಕೊಂಡರೆ ಒಳ್ಳೆಯದು, ತನ್ನನ್ನೇ ಕೊಲೆಗೀಡು ಮಾಡುವಷ್ಟು ಆಸ್ತಿ ಸಂಪಾದಿಸಿಕೊಳ್ಳಬಾರದು, ಇದೇ ಜೀವನದ ಸರಳ ವಾಸ್ತು' ಎನ್ನುವ ಅರ್ಥದ ಮೀಮ್ ಅದು. ಇದು ಬರೀ ಆ ಗುರೂಜಿಯ ವಿಚಾರದಲ್ಲಷ್ಟೇ ಅಲ್ಲ, ನಮ್ಮ-ನಿಮ್ಮ ವೈಯಕ್ತಿಕ ವಿಚಾರದಲ್ಲಿಯೂ, ನಮ್ಮ ರಾಜ್ಯದ ವಿಚಾರದಲ್ಲಿಯೂ, ದೇಶದ ವಿಚಾರದಲ್ಲಿಯೂ ಇದು ನಿಜ. ನಮ್ಮ ಅವಶ್ಯಕತೆಯನ್ನು ಮೀರಿಸಿದ ಯಾವುದನ್ನೇ ನಾವು ಸಂಪಾದಿಸಿಕೊಂಡರು ಅನ್ಯರ ಕಣ್ಣು ಅದರ ಮೇಲೆ ಹರಿಯುತ್ತದೆ. ಇದೇ ಕಾರಣಕ್ಕಾಗಿಯೇ ಮಾನವ ಕುಲದಲ್ಲಿ ಅಸಂಖ್ಯ ಯುದ್ಧಗಳು, ಜಟಾಪಟಿಗಳು ನಡೆದುಹೋಗಿವೆ. ಯುಎಸ್ಎ ಭಯಂಕರ ಅಕ್ರಮ ವಲಸಿಗರಿಂದ ನಲುಗುತ್ತಿದೆ, ಯುರೋಪಿಯನ್ ದೇಶಗಳು ವಲಸಿಗರಿಂದ ಸಮಸ್ಯೆಗೆ ತುತ್ತಾಗುತ್ತಿವೆ ಎನ್ನುವ ವರದಿಗಳನ್ನು ನಾವು ನೋಡುತ್ತಿದ್ದೇವಲ್ಲ, ಅವುಗಳ ಹಿಂದಿರುವ ಒಂದು ಮುಖ್ಯ ಕಾರಣವೂ ಅವರ ಅವಶ್ಯಕತೆಗೆ ಮೀರಿದ ಅಭಿವೃದ್ಧಿಯೇ. ಇದೊಂದೇ ಕಾರಣವೆಂದು ನಾನು ಹೇಳುವುದಿಲ್ಲ, ಆದರೆ ಅದೊಂದು ಮುಖ್ಯ ಕಾರಣವೆನ್ನುವುದು ತೆಗೆದು ಹಾಕಲಾಗದಂತಹ ಮಾತು.
ಈಗ ಕರ್ನಾಟಕ-ಕನ್ನಡ ನಾಡಿನ ವಿಷಯಕ್ಕೆ ಬರೋಣ. ಇಲ್ಲಿನ ಉದ್ಯೋಗಗಳ ವಿಚಾರದಲ್ಲಿ ನಿಜವಾಗಿಯೂ ಇಲ್ಲಿನ ಉದ್ಯೋಗಗಳು ಇಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಸೃಷ್ಟಿಯಾದವೇ. ಯೋಚಿಸಿ ನೋಡಿ. ಆರು ಕೋಟಿ ಜನಸಂಖ್ಯೆ ಇದ್ದ ಕರ್ನಾಟಕ ರಾಜ್ಯದಲ್ಲಿ ಉದ್ಯೋಗಸ್ಥರಾಗುವ ಅರ್ಹತೆಯಿದ್ದವರ ಸಂಖ್ಯೆ ಲಕ್ಷಗಳನ್ನು ದಾಟಿರಲಿಲ್ಲ, ಆದರೂ ಬೆಂಗಳೂರಿನಲ್ಲಿ ಲಕ್ಷಗಳನ್ನು ಮೀರಿಸಿ ಕೋಟಿಯನ್ನು ಮುಟ್ಟುವಷ್ಟು ಉದ್ಯೋಗಸೃಷ್ಟಿಯಾದವು. ಮೈಸೂರು, ಹುಬ್ಬಳ್ಳಿ, ಬೆಳಗಾವಿಗಳಂತಹ ಎರಡನೇ ಪ್ರಮುಖ ನಗರಗಳಲ್ಲಿ ಹೇಳಿಕೊಳ್ಳುವಷ್ಟು ಉದ್ಯೋಗಸೃಷ್ಟಿಯಾಗಲಿಲ್ಲ. ಉದ್ಯೋಗಕ್ಕೆ, ನಿಗಮ ಮಂಡಳಿಗಳ ಕಾರ್ಯಸ್ಥಾನಕ್ಕೆ, ಚಲನಚಿತ್ರ ನಿರ್ಮಾಣಕ್ಕೆ, ಸಗಟು ವ್ಯಾಪಾರದ ಕೇಂದ್ರಗಳಿಗೆ, ಕೃಷಿ ಆಧಾರಿತ ಉತ್ಪನ್ನಗಳ ಮಾರುಕಟ್ಟೆಗಳು ಎಲ್ಲವೂ ಬೆಂಗಳೂರು ನಗರ ಒಂದರಲ್ಲೇ ತಲೆ ಎತ್ತಿ ನಿಂತುಕೊಂಡವು. ಇತ್ತೀಚಿಗೆ ಕನ್ನಡ ಚಿತ್ರ ರಂಗದ ಹೆಸರಾಂತ ನಟರೊಬ್ಬರು ಕನ್ನಡ ಚಿತ್ರ ರಂಗದ ಕಾರ್ಯಸ್ಥಾನವನ್ನು ಸಾಂಸ್ಕೃತಿಕ ನಗರಿ ಮೈಸೂರಿಗೆ ಸ್ಥಳಾಂತರಿಸಬೇಕೆಂದು ಕೈಮುಗಿದು ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಆದರೆ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ಕೈಮುಗಿದು, ಮುಗುಳ್ನಕ್ಕು ಅನಂತರ ಬೆಂಗಳೂರು ಹೊರವಲಯದಲ್ಲೇ ಫಿಲಂ ಸಿಟಿ ನಿರ್ಮಾಣಕ್ಕೆ ಜಮೀನು ಘೋಷಿಸಿದರು. ಕೇಂದ್ರ ಸರ್ಕಾರಿ ಕಂಪನಿಗಳಾದ ಹೆಚ್ ಎ ಎಲ್, ಬಿ ಈ ಎಲ್, ಬಿ ಹೆಚ್ ಈ ಎಲ್, ರೈಲುಗಾಲಿ ಕಾರ್ಖಾನೆಗಳಂತಹ ಹೆಚ್ಚು ತಾಂತ್ರಿಕ ಪರಿಣತಿ ಹೊಂದಿದ, ಅಪಾರ ಉದ್ಯೋಗ ಸೃಷ್ಟಿಸಿದ ಕಂಪನಿಗಳು ಅನೇಕ ತಾಂತ್ರಿಕ ಕಾರಣಗಳಿಂದ ಬೆಂಗಳೂರಿನಲ್ಲೇ ಆರಂಭಗೊಂಡವು. ದೇಶದ ಎಲ್ಲ ನಗರಗಳಿಗಿಂತ ಮೊದಲು ಬೆಂಗಳೂರಿನಲ್ಲಿ ಕೈಗಾರಿಕೆಗಳಿಗೆ ವಿದ್ಯುತ್ ದೊರೆತಿದ್ದು ಅದರೊಳಗೊಂದು ಪ್ರಮುಖ ಕಾರಣ ವಾದರೆ, ಬೆಂಗಳೂರಿನ ಹಿತಕರ ವಾತಾವರಣ ಮತ್ತೊಂದು ಕಾರಣ. ಎಷ್ಟೋ ದಶಕಗಳ ಹಿಂದಿದ್ದ ಯಾವುದೋ ಒಂದು ಪರಿಸ್ಥಿತಿಯಿಂದ ಬೆಂಗಳೂರಿನಲ್ಲಿ ಬೃಹತ್ ಕೈಗಾರಿಕೆಗಳು ತಲೆ ಎತ್ತಿದವು, ಉದ್ಯೋಗ ಸೃಷ್ಟಿಯಾದವು ಸರಿ, ಆದರೆ ಇಂದೂ ಅದೇ ಪರಿಸ್ಥಿತಿ ಇಲ್ಲ.
ಬೆಂಗಳೂರು ಅತಿ ಹೆಚ್ಚು ಉತ್ಪಾದಕ ಜಾಲವನ್ನು, ಬಳಕೆದಾರರ ಜಾಲವನ್ನು ಹೊಂದಿದೆ. ಆದರೆ ಉತ್ಪಾದನಾ ವಲಯದಲ್ಲಿ ದುಡಿಯುವ ವರ್ಗವನ್ನು ಬೆಂಗಳೂರು ಮೂಲತಃ ಹೊಂದಿರಲಿಲ್ಲ. ಈ ದುಡಿಯುವ ವರ್ಗವನ್ನು ಬೆಂಗಳೂರು ಹೊರಗಿನಿಂದ ಸೆಳೆಯಿತು. ಬೆಂಗಳೂರೊಂದೇ ಅಲ್ಲ, ಪ್ರಪಂಚದ ಉತ್ಪಾದನಾ ರಂಗದಲ್ಲಿ ಅಸ್ತಿತ್ವದಲ್ಲಿರುವ ನಗರ ಪ್ರದೇಶಗಳ ಕಥೆಯೆಲ್ಲ ಇದೆಯೇ. ಆದರೆ ಭಾರತದ ನಗರಗಳ ಕಥೆ ಸ್ವಲ್ಪ ಭಿನ್ನ. ಹೀಗೆ ವಲಸೆ ಬಂದ ದುಡಿಯುವ ವರ್ಗ ಒಂದು ಭಾಷೆಗೋ, ಕೋಮಿಗೋ, ಸಂಸ್ಕೃತಿಗೋ ಸೇರಿದ್ದಾಗೇ ಇರುತ್ತದೆ. ಆ ಭಾಷೆ, ಕೋಮು, ಸಂಸ್ಕೃತಿ ಸ್ಥಳೀಯವಾಗಿ ಹೊಂದಿಕೊಳ್ಳದೇ ತಮ್ಮತನದಲ್ಲೇ ಮುಂದುವರಿಯುವುದು ಸ್ಥಳೀಯರಿಗೆ ಹಿಡಿಸುವುದಿಲ್ಲ. ಇದಕ್ಕೆ ಅತ್ಯಂತ ಉತ್ತಮ ಉದಾಹರಣೆ ಬೆಂಗಳೂರು. ಇಲ್ಲಿಗೆ ಉದ್ಯೋಗ ಅರಸಿ ಬರುವ ವಲಸಿಗರು ಕರ್ನಾಟಕದ ಬೇರೆ ಜಿಲ್ಲೆಗಳವರೂ ಇದ್ದಾರೆ, ಹಾಗೆಯೇ ಅನ್ಯ ರಾಜ್ಯಗಳವರೂ ಇದ್ದಾರೆ. ಕರ್ನಾಟಕದವರೇ ಆದ ಬೇರೆ ಜಿಲ್ಲೆಯವರಿಗೆ ಬೆಂಗಳೂರಿನ ಜೀವನ ಮಾಮೂಲಿನ ಹಾಗೆ, ಆದರೆ ಬೇರೆ ರಾಜ್ಯಗಳಿಂದ ಇಲ್ಲಿಗೆ ವಲಸೆ ಬರುವಂತಹ ತಮಿಳು, ತೆಲುಗು, ಮಲಯಾಳಿ, ಮರಾಠಿ ಮಂದಿ ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿದ್ದಾರೆ. ಉತ್ತರ ಪ್ರದೇಶ, ಬಿಹಾರಗಳ ಕಡೆಯಿಂದ ಬರುವ ಹಿಂದಿ ಭಾಷಿಕರ ವಲಸೆಯು ದೊಡ್ಡ ಪ್ರಮಾಣದಲ್ಲಿದೆ. ಇವರು ಇಲ್ಲಿನ ಭಾಷೆಯನ್ನು ಕಲಿಯದೇ ದಶಕಗಟ್ಟಲೆ ಬೆಂಗಳೂರಿನಲ್ಲಿ ದೂಡುತ್ತಿರುವುದು ಒಂದು ರೀತಿ ದುರಂತದಂತೆ ಭಾಸವಾಗುತ್ತದೆ. ಕನ್ನಡವನ್ನು ಕಲಿಯದೇ ಬೆಂಗಳೂರಿನಲ್ಲೇ ಶಾಶ್ವತವಾಗಿ ಇರಲು ಯೋಜಿಸುವ ಜನಗಳನ್ನು ಖುದ್ದು ನಾನು ಕಂಡಿದ್ದೇನೆ. 'ನೀವು ಕನ್ನಡವನ್ನು ಕಲಿಯುವುದಿಲ್ಲವೇ? ಎಂದರೆ ಕನ್ನಡ ಕಲಿಯದೆಯೂ ಬೆಂಗಳೂರಿನಲ್ಲಿ ಇರಬಹುದು' ಎಂಬಂತಹ ಉದ್ಧಟತನದ ಮಾತುಗಳನ್ನಾಡುತ್ತಾರೆ. ಇಂತಹುದೇ ಅಹಂಕಾರಿ ಮನೋಭಾವನೆಯ ಕೆಲವರನ್ನು ನಾನು ಮುಂಬೈ ಮತ್ತು ಹೈದರಾಬಾದುಗಳಲ್ಲಿ ಅಲ್ಲಿನ ಸ್ಥಳೀಯ ಭಾಷೆಗಳನ್ನು ಕಲಿಯುವ ವಿಚಾರದಲ್ಲಿ ನೋಡಿದ್ದೇನೆ.
ಅದೇ ನೀವು ವಿದೇಶಗಳಿಗೆ ವಲಸೆ ಹೋಗುವ ಬಹುತೇಕರನ್ನು ನೋಡಿ, ಯುಎಸ್ಎ,ಕೆನಡಾ ಗಳಿಗೆ ಹೋಗುವವರು ಇಂಗ್ಲೀಷ್ ಅನ್ನು, ಜಪಾನಿಗೆ ಹೋಗುವವರು ಜಪಾನೀಸ್ ಅನ್ನು, ಯೂರೋಪಿಯನ್ ದೇಶಗಳಿಗೆ ಹೋಗುವವರು ಜೆರ್ಮನ್, ಫ್ರೆಂಚ್, ಡಚ್, ಸ್ಪ್ಯಾನಿಷ್ ಭಾಷೆಗಳನ್ನು ಕಲಿತು ಹೋಗುತ್ತಾರೆ. ಆದರೆ ದೇಶದೊಳಗೆ?. ಅನ್ಯ ನಗರಗಳಿಗೆ ಹೋದಾಗಲೂ ಅಲ್ಲಿನ ಸಂಸ್ಕೃತಿ, ಭಾಷೆಗೆ ಗೌರವ ಕೊಡದೆ ಉದ್ಧಟತನ ತೋರುವುದು ಭಯಂಕರ ಸಿಟ್ಟು ತರಿಸುತ್ತದೆ. ಇಂಥದ್ದಕ್ಕೆಲ್ಲ ನೀರೆರೆಯುವಂತೆ ಅಂಚೆ ಕಚೇರಿ, ಬ್ಯಾಂಕ್, ವಿಮೆ ಕಚೇರಿಗಳಲ್ಲಿ ಕೇಂದ್ರ ಸರ್ಕಾರ ಸ್ಥಳೀಯ ಭಾಷೆಗಳಲ್ಲದವರನ್ನು ತಂದು ಕೂರಿಸುತ್ತಿದೆ. ಇದು ದಕ್ಷಿಣ ಭಾರತದಲ್ಲಿ ಇದರ ಉಪಟಳ ಭಯಂಕರವೆನಿಸುವಷ್ಟು ಮಟ್ಟಕ್ಕೆ ಹೋಗಿದೆ. ನೀಟ್ ಎಂಬ ಪರೀಕ್ಷೆಯನ್ನು ವೈದ್ಯಕೀಯ ಪದವಿಗೆ ಮಾನದಂಡವನ್ನಾಗಿ ಮಾಡಿರುವುದು ಇನ್ನೂ ಹೆಚ್ಚು ಭಯಂಕರವಾಗಿದೆ. ದೇಶಕ್ಕೊಂದೇ ಪರೀಕ್ಷೆಯಲ್ಲಿ ಹಿಂದಿ ನಾಡಿನ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ತೇರ್ಗಡೆಯಾಗಿ ವೈದ್ಯಕೀಯ ಪದವಿ ಪಡೆದುಕೊಳ್ಳುತ್ತಿದ್ದಾರಲ್ಲ ಅದರ ಪರಿಣಾಮವೇನು ಗೊತ್ತೇ?. ಇನ್ನು 20-30 ವರ್ಷಗಳಲ್ಲಿ ನಾವು ನೀವು ಆಸ್ಪತ್ರೆಗೆ ಹೋದರೆ ಹಿಂದಿಯಲ್ಲಿ ನಮ್ಮ ಅನಾರೋಗ್ಯದ ಸಂಕಟವನ್ನು ವೈದ್ಯರಲ್ಲಿ ತೋಡಿಕೊಳ್ಳಬೇಕು. ಅಕಸ್ಮಾತ್ ನಿಮಗೆ ಹಿಂದಿ ಬರದಿದ್ದರೆ ನಿಶ್ಯಬ್ದವಾಗಿ ಯಾರ ಅರಿವಿಗೂ ಬಾರದಂತೆ ನಿಮ್ಮ ಚಿಕಿತ್ಸೆಯ ಹಕ್ಕನ್ನು ತಿರಸ್ಕರಿಸಿಬಿಡಬಹುದು. ಹಾಗಂತ ಇಲ್ಲಿಗೆ ಬಂದ ವೈದ್ಯರಿಗೆ ಸ್ಥಳೀಯ ಭಾಷೆಗಳನ್ನು ಕಲಿಸುವ ರೀತಿಯ ವ್ಯವಸ್ಥೆಗಳನ್ನು ಮಾಡಬಹುದು, ಆದರೆ ಸರ್ಕಾರದಿಂದ ಕಟ್ಟು ನಿಟ್ಟಿನ ಆಜ್ಞೆಗಳು ಆ ನಿಟ್ಟಿನಲ್ಲಿ ಬಾರದ ಹೊರತು ವೈದ್ಯರು ತಾವಾಗೇ ಸ್ಥಳೀಯ ಭಾಷೆ ಕಲಿಯುವುದು ಅಸಂಭವ ಎನಿಸುತ್ತದೆ. ಎಲ್ಲೋ ಸಾವಿರದಲ್ಲಿ ನಾಲ್ಕೈದು ಜನ ಇದಕ್ಕೆ ಅಪವಾದವಾದರೂ ಬಹುತೇಕರು ಸ್ಥಳೀಯ ಭಾಷೆ ಸಂಸ್ಕೃತಿಗೆ ಗೌರವ ಕೊಡುತ್ತಾರೆ ಎನ್ನುವ ನಂಬಿಕೆ ಈಗ ಕನ್ನಡ ನಾಡಿನ ಬಹುತೇಕ ಜನರಲ್ಲಿ ಇಲ್ಲವೇ ಇಲ್ಲ. ಅದಕ್ಕೆ ಕಾರಣ ಕೇಂದ್ರ ಸರ್ಕಾರ ಈಗ ಬ್ಯಾಂಕುಗಳಲ್ಲಿ ತಂದು ಕೂರಿಸಿರುವ ಅನ್ಯಭಾಷಿಕರು ಇದುವರೆಗೂ ಬ್ಯಾಂಕಿಗೆ ಹೋದ ಗ್ರಾಹಕರಿಗೆ ತೋರಿರುವ ದರ್ಪ-ದುಮ್ಮಾನಗಳನ್ನು ಕನ್ನಡಿಗರು ಇನ್ನೂ ಮರೆತಿಲ್ಲ.
ಸರಿ,ಇವೆಲ್ಲ ಸಮಸ್ಯೆಗಳು ಮತ್ತು ಅವುಗಳ ಮೂಲಗಳು ಅಷ್ಟೇ. ಇದಕ್ಕೆ ಉತ್ತರ ಕಂಡುಹಿಡಿದುಕೊಳ್ಳಬೇಕಾದ್ದು ಈಗ ಕನ್ನಡಿಗರ ಆದ್ಯ ಕರ್ತವ್ಯವೇ ಹೊರತು ಆಗಿಹೋದ ಕಾರ್ಯಗಳಿಗೆ ಮರುಗುತ್ತಾ ಕೂರುವುದಲ್ಲ. ಸಾಮಾನ್ಯ ನಾಗರೀಕ ಕನ್ನಡಿಗರು ಮೊದಲು ಅರ್ಥ ಮಾಡಿಕೊಳ್ಳಬೇಕಾದ್ದೇನು ಎಂದರೆ ಬೆಂಗಳೂರಿಗೆ, ಕರ್ನಾಟಕಕ್ಕೆ ಹೆಚ್ಚೆಚ್ಚು ಜನ ವಲಸೆ ಬಂದರೆಂದರೆ ಅರ್ಥ ಕನ್ನಡ ನುಡಿ, ಸಂಸ್ಕೃತಿ ಅವಸಾನದ ಹಾದಿ ಹಿಡಿಯಿತು ಎನ್ನುವುದು ಅರ್ಥವಲ್ಲ. ಎಷ್ಟೇ ವಲಸೆ ಹೆಚ್ಚಿದರೂ ಮೂಲ ಕನ್ನಡಿಗರು ಕನ್ನಡವನ್ನು ಬಿಟ್ಟು ವಲಸಿಗರ ಭಾಷೆ, ಸಂಸ್ಕೃತಿಗಳತ್ತ ವಾಲಬಾರದು, ಬದಲಾಗಿ ಇಲ್ಲಿನ ಭಾಷೆ ಸಂಸ್ಕೃತಿಗಳ ಪರಿಚಯವನ್ನು ವಲಸಿಗರಿಗೆ ತಿಳಿಯುವಂತೆ ಮಾಡಬೇಕು. ಈಗೀಗ ಕನ್ನಡಿಗರ ಮಕ್ಕಳು ದೀಪಾವಳಿಯನ್ನು ದಿವಾಳಿ ಎನ್ನುವುದು, ದೋಸೆಗೆ ಡೋಸಾ ಎನ್ನುವುದೆಲ್ಲ ಸೂಚ್ಯವಾಗಿ ಹೇಳುತ್ತಿರುವುದೇನಂದರೆ ಕನ್ನಡಿಗರು ಭಾಷಾ ಅಲ್ಪಾಭಿಮಾನಿಗಳು ಹಾಗು ಅವರು ಸುಲಭವಾಗಿ ಅನ್ಯ ಭಾಷೆಗಳತ್ತ ಜಾರಿಕೊಳ್ಳುವವರು ಎನ್ನುವುದು. ಈ ಅಪವಾದದಿಂದ ಕನ್ನಡಿಗರು ಕಾಲ್ಕಿತ್ತು ಹೊರಬರಲೇ ಬೇಕು. ಮುಂದುವರಿದು ಕನ್ನಡಿಗರು ರಾಜ್ಯದ ಯಾವ ಮೂಲೆಯಲ್ಲಾದರೂ ಸರಿ ಕನ್ನಡದಲ್ಲೇ ಗರಿಷ್ಟ ವ್ಯವಹರಿಸಬೇಕು, ಕನ್ನಡಕ್ಕೆ ಮೊದಲ ಆದ್ಯತೆ ಇರುವಂತೆ ನೋಡಿಕೊಳ್ಳಬೇಕು. ಎರಡನೆಯದಾಗಿ ನಮ್ಮ ಮಕ್ಕಳಿಗೆ ಕನ್ನಡ ನಾಡು-ನುಡಿ-ಸಂಸ್ಕೃತಿಯ ಕುರಿತಾಗಿ ಕಲಿಸಬೇಕು, ತಿಳಿ ಹೇಳಬೇಕು. ನಾವಲ್ಲದಿದ್ದರೆ ಕನ್ನಡಕ್ಕೆ ಕಾವಲಾಗುವವರು ಯಾರು? ಪಕ್ಕದರಾಜ್ಯದವರೇ? ಕೇಂದ್ರ ಸರ್ಕಾರವೇ? ಹಿಂದಿ ರಾಜ್ಯಗಳೇ?. ಖಂಡಿತಾ ಅಲ್ಲ. ಕನ್ನಡಕ್ಕೆ ಕನ್ನಡಿಗರು ಮಾತ್ರ ಕಾವಲುಗಾರರು. ನಮ್ಮ ನಾಡು-ನುಡಿ-ಸಂಸ್ಕೃತಿಯನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಗುರುತರ ಜವಾಬ್ದಾರಿ ನಮ್ಮ ಮೇಲೆಯೇ ಇದೆ. ನಾವಾದ ಮೇಲೆ ನಮ್ಮ ಮುಂದಿನ ತಲೆಮಾರಿಗೆ ಇದನ್ನೆಲ್ಲಾ ಕಾಪಿಟ್ಟುಕೊಂಡು ಕೊಡುಗೆಯಾಗಿ ಕೊಡಬೇಕಾದ್ದು ಈ ತಲೆಮಾರಿನ ಕನ್ನಡಿಗರ ಆದ್ಯ ಕರ್ತವ್ಯ. ಆಧುನಿಕತೆಯ ಮತ್ತಿನಲ್ಲಿ ಈ ರಾಜ್ಯದ ಭಾಷೆ-ಸಂಸ್ಕೃತಿಗಳನ್ನು ಗಾಳಿಗೆ ತೂರಿ ಇನ್ಯಾವುದೋ ರಿವಾಜಿಗೆ ನೇತು ಹಾಕಿಕೊಳ್ಳುವುದು ಅಕ್ಷಮ್ಯ. ನಮ್ಮ ಮನೆಯ ಮಕ್ಕಳಲ್ಲಿ ಅಂತಹ ಗುಣಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಅದನ್ನು ಚಿವುಟುವ ಪ್ರಯತ್ನ ಮಾಡಬೇಕು. ನಮ್ಮತನವೆನ್ನುವುದು ನಮ್ಮ ಮನೆಯ ಕುಡಿ-ಕೊನರುಗಳಿಗೆ ತಿಳಿದಿರಬೇಕು. ಅದಾದ ಮೇಲೆ ಬೇರೆಲ್ಲ ಭಾಷೆ ಸಂಸ್ಕೃತಿಗಳ ಕಲಿಯುವಿಕೆ ಇದ್ದದ್ದೇ. ಮೂರನೆಯದ್ದಾಗಿ ಕೇಂದ್ರದ್ದೋ ರಾಜ್ಯದ್ದೋ ಯಾವುದೋ ಒಂದು ಸರ್ಕಾರದ ಕೆಲವು ನೀತಿ, ನಿಯಮಾವಳಿ, ಕಾಯಿದೆಗಳು ಸ್ಥಳೀಯ ಭಾಷೆ-ಸಂಸ್ಕೃತಿಗೆ ಕಂಟಕಪ್ರಾಯವಾಗಿರುವುದು ಕಂಡುಬಂದರೆ ಕೂಡಲೇ ಅದನ್ನು ಬಲವಾಗಿ ಆಕ್ಷೇಪಿಸುವುದು, ಸಾಧ್ಯವಾದರೆ ಮತ ಕೇಳಲು ಮನೆ ಬಾಗಿಲಿಗೆ ಬರುವ ಜನಪ್ರತಿನಿಧಿಗಳಿಗೂ ಅದನ್ನು ಮುಟ್ಟಿಸುವುದು. ಈ ಮೂಲಕ ಕನ್ನಡದ ಅಸ್ಮಿತೆಯೂ ಒಂದು ಚುನಾವಾಣಾ ವಿಷಯವೇ ಎನ್ನುವುದು ಆ ಜನ ನಾಯಕರ ಎದೆಗೆ ತಟ್ಟುತ್ತದೆ. ಸ್ಥಳೀಯ ಭಾಷೆಗಳನ್ನು ಲೆಕ್ಕಿಸದ ಸರ್ಕಾರದ ನಿಯಮಾವಳಿಗಳನ್ನು ಸಾಂವಿಧಾನಿಕ ಚೌಕಟ್ಟಿನಲ್ಲಿ ವಿರೋಧಿಸುವುದು, ಆ ಮೂಲಕ ಸರ್ಕಾರವಾಗಲಿ, ಖಾಸಗಿ ಸಂಸ್ಥೆಗಳಾಗಲಿ ಜನಸೇವೆಯಲ್ಲಿ ತೊಡಗಿಸಿಕೊಳ್ಳುವಾಗ ಸ್ಥಳೀಯ ಭಾಷೆಗಳೊಂದಿಗೆ ಜನರೆದುರಿಗೆ ಬರುವುದು ರೂಢಿಗೆ ಬರುತ್ತದೆ.
ಇವುಗಳು ಬಹುಮಟ್ಟಿಗೆ ಜಾರಿಗೆ ಬಂದರೆ ಕನ್ನಡಕ್ಕೆ ಯಾವ ತೊಂದರೆಯೂ ಎದುರಾಗಲಾರದು. ಕಾವೇರಿ ವಿಷಯದಲ್ಲಿ ನಮ್ಮ ಸಂಸದರು ಸಂಸತ್ತಿನ ಮುಂದೆ ಕವಾಯತು ಮಾಡುವಂತೆ ಕನ್ನಡಿಗರು ಕನ್ನಡದ ಉಳಿವಿಗಾಗಿ ಎಲ್ಲಿಯೂ ಕವಾಯತು ಮಾಡುವ ಪರಿಸ್ಥಿತಿ ಬರದೇ ಉಳಿಯುತ್ತದೆ. ಆ ಮೂಲಕ ವಿವಿಧತೆಯಲ್ಲಿ ಏಕತೆಯನ್ನು ಕಂಡುಕೊಂಡು ಸಧೃಡ ದೇಶವಾಗಿ ನಿಂತ ಭಾರತ ಮತ್ತೆ ತನ್ನ ವಿವಿಧತೆಯಿಂದಲೇ ವಿಶ್ವಕ್ಕೆ ಕಳಶಪ್ರಾಯವಾಗುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ